ಮೆಲುಕು ಹಾಕಬೇಕಾದ ಕತೆಗಳು ೫೧-೧೦೦

೫೧. ಎಲ್ಲರಿಗೂ ಬೇಕಲ್ಲವೇ?

 ಏನೋ ಸಾಮಾನು ಖರೀದಿಸಲೋಸುಗ ಅಂಗಡಿಯೊಂದರ ಒಳಕ್ಕೆ ಹೋಗಿದ್ದ ನನ್ನ ಹೆಂಡತಿಯ ಬರುವಿಕೆಗಾಗಿ ಕಾಯುತ್ತಾ ನಾನು ಹೊರಗಡೆ ನನ್ನ ಕಾರ್‌ನ ಹತ್ತಿರ ನಿಂತಿದ್ದೆ. ಮಾಡಲು ಬೇರೆ ಏನೂ ಕೆಲಸವಿಲ್ಲದ್ದರಿಂದ ಕಾರ್‌ನ ಗಾಜುಗಳನ್ನು ಒರೆಸುತ್ತಿದ್ದೆ. ರಸ್ತೆಯ ಆಚಿನ ಬದಿಯಿಂದ ಭಿಕ್ಷುಕನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ನನ್ನತ್ತ ಬರುತ್ತಿದ್ದದ್ದನ್ನು ನೋಡಿದೆ. “ಅವ ನನ್ನನ್ನು ತುಸು ಹಣ ನೀಡುವಂತೆ ಪೀಡಿಸದೇ ಇದ್ದರೆ ಸಾಕು” ಎಂಬುದಾಗಿ ಗೊಣಗಿಕೊಂಡು ಅವನನ್ನು ನೋಡದೇ ಇದ್ದವನಂತೆ ನಟಿಸುತ್ತಾ ಗಾಜನ್ನು ಬಲು ಶ್ರದ್ಧೆಯಿಂದ ಒರೆಸತೊಡಗಿದೆ. ಅವನು ನನ್ನ ಹತ್ತಿರ ಹಣ ಕೇಳಲೇ ಇಲ್ಲ. ನಾನು ಕಾರು ನಿಲ್ಲಿಸಿದ್ದ ತಾಣದ ಹತ್ತಿರವಿದ್ದ ರಸ್ತೆ ಬದಿಯ ತಡೆಗೋಡೆಯ ಮೇಲೆ ಕುಳಿತು ಅತ್ತಿತ್ತ ನೋಡುತ್ತಿದ್ದ. ತುಸು ಸಮಯದ ನಂತರ ಹೇಳಿದ, “ನಿಮ್ಮ ಕಾರು ನೋಡಲು ಬಲು ಸುಂದರವಾಗಿದೆ.” “ಓಹ್‌, ಧನ್ಯವಾದಗಳು,” ಎಂಬುದಾಗಿ ಹೇಳಿ ಅವನತ್ತ ನೋಡಿದೆ. ಆತ ಧರಿಸಿದ್ದ ಉಡುಪು ಅವನ ಬಡತನವನ್ನು ಪ್ರತಿನಿಧಿಸುತ್ತಿದ್ದರೂ ಅವನ ಮುಖದಲ್ಲಿ ನಡೆನುಡಿಯಲ್ಲಿ ಅವರ್ಣನೀಯ ಗಾಂಭೀರ್ಯವಿತ್ತು. ಅವನು ಮೌನವಾಗಿ ಕುಳಿತು ನಾನು ಗಾಜು ಒರೆಸುವುದನ್ನೇ ನೋಡುತ್ತಿದ್ದ. ಕೊನೆಗೆ ತಡೆಯಲಾರದೇ ನಾನೇ ಕೇಳಿದೆ, “ನಿಮಗೇನಾದರೂ ಸಹಾಯ ಮಾಡಬೇಕೇ?”

ಅವನ ಉತ್ತರ ನನಗೆ ಎಂದೂ ಮರೆಯಲು ಸಾಧ್ಯವಿಲ್ಲದ ಆಘಾತ ನೀಡಿತು. – “ಸಹಾಯ ನಮಗೆಲ್ಲರಿಗೂ ಬೇಕಲ್ಲವೇ?”

೫೨. ಅಲೆಕ್ಸಾಂಡರ್‌ನೂ ಡಯೊಜಿನಿಸ್‌ನೂ

ಅಲೆಕ್ಸಾಂಡರ್‌ನನ್ನು ಕಂಡಾಗಲೆಲ್ಲ ಒಬ್ಬನನ್ನು ಹೊರತುಪಡಿಸಿ ಗ್ರೀಸ್‌ನ ಎಲ್ಲ ಪ್ರಮುಖ ವ್ಯಕ್ತಿಗಳೂ, ಅವನಿಗೆ ವಿಶೇಷ ಗೌರವ ಸಲ್ಲಿಸುತ್ತಿದ್ದರು ಹಾಗು ಅವನ ಸಾಧನೆಗಳನ್ನು ಬಲು ಶ್ಲಾಘಿಸುತ್ತಿದ್ದರು. ಬುದ್ಧನ ಚಿಂತನಗಳನ್ನು ಹೋಲುತ್ತಿದ್ದ ಚಿಂತನಗಳು ಇದ್ದ ದಾರ್ಶನಿಕ ಡಯೊಜಿನಿಸ್‌ ಎಂಬಾತನೇ ಆ ಒಬ್ಬ ವ್ಯಕ್ತಿ. ಅವನ ಪ್ರಕಾರ ನಮಗೆ ಅಗತ್ಯವಾದವು ಎಂಬುದಾಗಿ ನಾವು ತಿಳಿದಿರುವ ವಸ್ತುಗಳೆಲ್ಲವೂ ನಮ್ಮ ಗಮನವನ್ನು ಬೇರೆಡೆ ಸೆಳೆದು ಜೀವನ ಸೌಂದರ್ಯವನ್ನು ಆಸ್ವಾದಿಸಲು ಬಿಡುವುದಿಲ್ಲ. ಎಂದೇ ಆತ ತನ್ನ ಸಮಸ್ತ ಸ್ವತ್ತನ್ನೂ ದಾನವಾಗಿ ಕೊಟ್ಟು, ಮಾರುಕಟ್ಟೆ ಚೌಕಿಯಲ್ಲಿ ದಿನದ ಬಹುಭಾಗವನ್ನು ಒಂದು ಪೀಪಾಯಿಯ ಒಳಗೆ ಹೆಚ್ಚುಕಮ್ಮಿ ಬತ್ತಲೆಯಾಗಿಯೇ ಕುಳಿತು ಕಳೆಯುತ್ತಿದ್ದ,

ಈ ವಿಚಿತ್ರ ವ್ಯಕ್ತಿಯನ್ನು ಭೇಟಿ ಮಾಡಲೋಸುಗ ಅಲೆಕ್ಸಾಂಡರ್‌ ತನ್ನ ಸೈನಿಕ ದಿರಿಸಿನಲ್ಲಿ ಡಯೊಜಿನಿಸ್‌ ಕುಳಿತಿದ್ದ ಪೀಪಾಯಿಯ ಹತ್ತಿರ ಹೋಗಿ  ಹೇಳಿದ, “ನಿನ್ನ ನಡೆನುಡಿ ನನಗೆ ಇಷ್ಟವಾಯಿತು. ನಿನಗೇನಾದರೂ ಬೇಕೆಂಬ ಆಸೆಯಿದ್ದರೆ ಹೇಳು. ಅದನ್ನು ನಾನೀಗಲೇ ಪೂರೈಸುತ್ತೇನೆ.”

“ನಿಜವಾಗಿಯೂ ನನಗೊಂದು ಆಸೆ ಇದೆ ಮಹಾಶಯ,” ಪ್ರತಿಕ್ರಿಯಿಸಿದ ಡಯೊಜಿನಿಸ್‌.

“ಏನದು?” ವಿಚಾರಿಸಿದ ಅಲೆಕ್ಸಾಂಡರ್‌

ಡಯೊಜಿನಿಸ್‌ ತನ್ನ ಆಸೆಯನ್ನು ತಿಳಿಸಿದ, “ನಿಮ್ಮ ನೆರಳು ನನ್ನ ಮೇಲೆ ಬೀಳುತ್ತಿದೆ. ನೀವು ನನಗೂ ಸೂರ್ಯನಿಗೂ ನಡುವೆ ನಿಲ್ಲದೆ ತುಸು ಪಕ್ಕಕ್ಕೆ ಸರಿಯಿರಿ.”

ಈ ಕೋರಿಕೆಯಿಂದ ಆಶ್ಚರ್ಯಚಕಿತನಾದ ಅಲೆಕ್ಸಾಂಡರ್‌ ಉದ್ಗರಿಸಿದ, “ನಾನು ಅಲೆಕ್ಸಾಂಡರ್‌ ಆಗಿಲ್ಲದೇ ಇದ್ದಿದ್ದರೆ ಈ ಡಯೊಜಿನಿಸ್‌ ಆಗಿರಲು ಬಯಸುತ್ತಿದ್ದೆ!”

೫೩. ಪ್ರತಿಯೊಬ್ಬರೂ ಮುಖ್ಯ

ಪ್ರಾಧ್ಯಾಪಕರೊಬ್ಬರು ಒಂದು ತಿಂಗಳ ಕಾಲ ಬೋಧಿಸಿದ ನಂತರ ಆ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆ ಸಂಘಟಿಸಿದರು. ಅಧ್ಯಯನದಲ್ಲಿ ತರಗತಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿದ್ಯಾರ್ಥಿ ಮಾರ್ಕ್‌ ಪ್ರಶ್ನೆಪತ್ರಿಕೆಯ ಮೊದಲನೆ ಪ್ರಶ್ನೆಯಿಂದ ಆರಂಭಿಸಿ ಬಲು ವೇಗವಾಗಿ ಉತ್ತರ ಬರೆಯುತ್ತಾ ಮುಂದುವರಿದು ಬಲು ಬೇಗನೆ ಕೊನೆಯ ಪ್ರಶ್ನೆಯನ್ನು ತಲುಪಿದ.

ಆ ಪ್ರಶ್ನೆ ಇಂತಿತ್ತು: “ಶಾಲಾ ಆವರಣದಲ್ಲಿ ಕಸ ಗುಡಿಸುವ ಹೆಂಗಸಿನ ಹೆಸರೇನು?”

ಪ್ರಾಧ್ಯಾಪಕರು ತಮಾಷೆಗಾಗಿ ಈ ಪ್ರಶ್ನೆ ಕೇಳಿರಬೇಕು ಎಂಬುದಾಗಿ ಅವನು ಭಾವಿಸಿದ. ಅವನು ಆ ಹೆಂಗಸನ್ನು ನೋಡಿದ್ದನಾದರೂ ಆಕೆಯ ಹೆಸರನ್ನು ತಿಳಿಯುವ ಆವಶ್ಯಕತೆ ಉಂಟಾಗಿರಲಿಲ್ಲ. ಎಂದೇ ಅವನು ಆ ಪ್ರಶ್ನೆಗೆ ಉತ್ತರ ಬರೆಯದೇ ಉತ್ತರಪತ್ರಿಕೆ ಹಿಂದಿರುಗಿಸಿದ. ಕೊನೆಯ ಪ್ರಶ್ನೆಯ ಉತ್ತರಕ್ಕೂ ಅಂಕಗಳಿವೆಯೇ ಎಂಬುದನ್ನು ಅವಧಿ ಮುಗಿಯುವ ಮುನ್ನ ಒಬ್ಬ ವಿದ್ಯಾರ್ಥಿ ತಿಳಿಯಲು ಇಚ್ಛಿಸಿದ.

ಪ್ರಾಧ್ಯಾಪಕರು ಇಂತೆಂದರು: “ಖಂಡಿತವಾಗಿ ಆ ಪ್ರಶ್ನೆಯೂ ರಸಪ್ರಶ್ನೆಯ ಭಾಗವೇ ಆಗಿದೆ. ಅದಕ್ಕೂ ಅಂಕವಿದೆ. ಮುಂದೆ ನಿಮ್ಮ ಜೀವನದಲ್ಲಿ ನೀವು ಅನೇಕರನ್ನು ಸಂಧಿಸುತ್ತೀರಿ. ಅವರೆಲ್ಲರೂ ಗಮನಾರ್ಹರೇ ಆಗಿರುತ್ತಾರೆ. ಅವರ ಹೆಸರು ಕೇಳಿ ತಿಳಿದುಕೊಂಡು ಪ್ರತೀದಿನ ಮೊದಲ ಸಲ ಸಂಧಿಸಿದಾಗ ನೋಡಿ ಮುಗುಳ್ನಕ್ಕು ಒಂದು ‘ಹಲೋ’ ಹೇಳುವಷ್ಟು ವ್ಯವಧಾನ ನಿಮಗಿರಬೇಕು. ಆ ಗೌರವಕ್ಕೆ ಪಾತ್ರರಾಗುವಷ್ಟು ಅರ್ಹತೆ ಅವರೆಲ್ಲರಿಗೂ ಇರುತ್ತದೆ.”

ಈ ಪಾಠವನ್ನು ಮಾರ್ಕ್‌ ಮುಂದೆಂದೂ ಮರೆಯಲಿಲ್ಲ. ಅಂದ ಹಾಗೆ ಆ ಹೆಂಗಸಿನ ಹೆಸರು ಡೊರೋತಿ ಎಂಬುದನ್ನು ಅವನು ನಂತರ ಕೇಳಿ ತಿಳಿದುಕೊಂಡ.

೫೪.ಸತ್ಯಾನ್ವೇಷಕ

ಅನೇಕ ವರ್ಷಗಳ ಕಾಲ ಸತ್ಯವನ್ನು ಹುಡುಕುವುದರಲ್ಲಿಯೇ ಕಳೆದ ಒಬ್ಬನಿಗೆ ಪ್ರಾಜ್ಞರೊಬ್ಬರು ಇಂತು ಹೇಳಿದರು: “ನಾನು ಹೇಳುವ ಸ್ಥಳದಲ್ಲಿ ಇರುವ ಗುಹೆಯೊಂದರ ಒಳಕ್ಕೆ ಹೋಗು. ಅಲ್ಲಿ ನಿನಗೊಂದು ಬಾವಿ ಗೋಚರಿಸುತ್ತದೆ. ಸತ್ಯ ಎಂದರೇನು ಎಂಬ ಪ್ರಶ್ನೆಯನ್ನು ಆ ಬಾವಿಯ ಹತ್ತಿರ ಕೇಳು. ಆ ಬಾವಿ ನಿನಗೆ ಅದನ್ನು ತೋರಿಸುತ್ತದೆ.”

ಬಾವಿಯನ್ನು ಪತ್ತೆಹಚ್ಚಿ ಆ ಮೂಲಭೂತ ಪ್ರಶ್ನೆಯನ್ನು ಕೇಳಿದಾಗ ಆದರ ಆಳದಿಂದ ಉತ್ತರ ಬಂದಿತು, “ಹಳ್ಳಿಯ ಕೂಡುರಸ್ತೆಗೆ ಹೋಗು. ಅಲ್ಲಿ ನಿನಗೆ ನೀನು ಹುಡುಕುತ್ತಿರುವುದು ಸಿಗುತ್ತದೆ.”

ಆತ ಬಲು ಉತ್ಸಾಹದಿಂದ ಅಲ್ಲಿಗೆ ಓಡಿದ. ಅಲ್ಲಿ ಅವನಿಗೆ ಗೋಚರಿಸಿತು ನೀರಸವಾದ ಮೂರು ಅಂಗಡಿಗಳು – ಲೋಹದ ಚೂರುಗಳನ್ನು ಮಾರುವ ಅಂಗಡಿ, ಮರದ ಹಲಗೆ, ಪಟ್ಟಿ ಮುಂತಾದವುಗಳ ಅಂಗಡಿ, ಸಪುರ ತಂತಿಗಳ ಅಂಗಡಿ. ಅಲ್ಲಿರುವವರು ಯಾರೂ ಸತ್ಯವನ್ನು ಅವನಿಗೆ ತೋರಿಸುವ ಸಾಮರ್ಥ್ಯ ಇರುವವರಂತೆ ಕಾಣಲಿಲ್ಲ.

ಇದರಿಂದ ಬಲು ನಿರಾಶನಾದ ಆತ ವಿವರಣೆ ಕೇಳಲೋಸುಗ ಪುನಃ ಬಾವಿಯ ಹತ್ತಿರ ಹೋದ. “ಮುಂದೆ ನಿನಗೇ ತಿಳಿಯುತ್ತದೆ” ಎಂಬ ಉತ್ತರ ದೊರೆಯಿತೇ ವಿನಾ ಬೇರೆ ಯಾವ ವಿವರಣೆಯೂ ಸಿಗಲಿಲ್ಲ. ಕೋಪದಿಂದ ಆತ ಎಷ್ಟೇ ಕಿರುಚಾಡಿದರೂ ಬಾವಿ ಮೌನವಾಗಿತ್ತು. ಅವನ ಕಿರುಚಾಟದ ಪ್ರತಿಧ್ವನಿಯ ಹೊರತಾಗಿ ಬೇರೇನೂ ಕೇಳಿಸಲಿಲ್ಲ. ತಾನು ಮೋಸ ಹೋದುದಾಗಿ ಭಾವಿಸಿದ ಆತ ತನ್ನ ಹುಡುಕಾಟವನ್ನು ಮುಂದುವರಿಸಿದ. ಇಂತು ಅನೇಕ ವರ್ಷಗಳು ಉರುಳಿದವು. ಬಾವಿಯ ಅನುಭವವೂ ನೆನಪೂ ಕ್ರಮೇಣ ಮಸುಕಾಯಿತು. ಇಂತಿರುವಾಗ ಒಂದು ಸುಂದರ ಬೆಳದಿಂಗಳ ರಾತ್ರಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಸಿತಾರ್ ನುಡಿಸುತ್ತಿದ್ದದ್ದು ಅವನ ಗಮನವನ್ನು ಸೆಳೆಯಿತು. ಆ ಸಂಗೀತದಲ್ಲಿ ಅನೀರ್ವಚನೀಯ ಸಮ್ಮೋಹನ ಶಕ್ತಿ ಇದ್ದಂತಿತ್ತು. ಆತ ತನಗರಿವಿಲ್ಲದೆಯೇ ಸಿತಾರ್‌ ವಾದಕನತ್ತ ಹೆಜ್ಜೆ ಹಾಕಿದ. ಸಿತಾರ್‌ ವಾದಕನ ಬೆರಳುಗಳು ತಂತಿಗಳ ಮೇಲೆ ನರ್ತಿಸುತ್ತಿದ್ದದ್ದನ್ನು ಆತ ನೋಡಿದ. ಹಠಾತ್ತನೆ ಅವನ ಗಮನ ಸಿತಾರ್‌ನತ್ತ ಹೋಯಿತು. ಆ ಕ್ಷಣದಲ್ಲಿ ಅವನು ಹಿಂದೆಂದೋ ನೋಡಿದ್ದ ಮೂರು ಅಂಗಡಿಗಳು ಮನಃಪಟಲದಲ್ಲಿ ಮೂಡಿದವು. ಇದ್ದಕ್ಕಿದ್ದಂತೆ ಅವನ ಮನಸ್ಸಿನಲ್ಲಿ ಆಲೋಚನೆಯೊಂದು ಮೂಡಿತು: “ನಮಗೆ ಬೇಕಾದದ್ದೆಲ್ಲವೂ ಈಗಾಗಲೇ ನಮಗೆ ನೀಡಲ್ಪಟ್ಟಿವೆ. ಯುಕ್ತ ರೀತಿಯಲ್ಲಿ ಅವನ್ನು ಜೋಡಿಸಿ ಉಪಯೋಗಿಸುವುದಷ್ಟೇ ನಾವು ಮಾಡಬೇಕಾದ ಕೆಲಸ. ಬಿಡಿ ಭಾಗಗಳನ್ನು ಅವಿರುವಂತೆಯೇ ನೋಡಿದಾಗ ಏನೂ ಹೊಳೆಯುವುದಿಲ್ಲ. ಅವುಗಳನ್ನು ಯುಕ್ತ ರೀತಿಯಲ್ಲಿ ಸಂಯೋಜಿಸಿದರೆ ದೊರೆಯುತ್ತದೆ ಬಿಡಿಭಾಗಗಳಿಂದ ಭಿನ್ನವಾದ ನಮಗೆ ಬೇಕಾದದ್ದು.” ಅವನು ಸತ್ಯಾನ್ವೇಷಣೆಯನ್ನು ಅಂದೇ ನಿಲ್ಲಿಸಿದ!!!

೫೫. ಸ್ವರ್ಗ ನರಕಗಳ ನಡುವಿನ ವ್ಯತ್ಯಾಸ

ಜೀವಮಾನವಿಡೀ ಸತ್ಕಾರ್ಯಗಳನ್ನೇ ಮಾಡುತ್ತಿದ್ದ ಮಹಿಳೆಯೊಬ್ಬಳಿಗೆ ಅವಳ ಅಂತಿಮ ಆಸೆಯನ್ನು ಈಡೇರಿಸಿಕೊಳ್ಳಲು ಅನುಮತಿ ನೀಡುವುದಾಗಿ ದೇವರಿಂದ ಭರವಸೆ ದೊರೆಯಿತು. ಅವಳ ಅಂತಿಮ ಆಸೆ ಇಂತಿತ್ತು: “ಸಾಯುವ ಮುನ್ನವೇ ಸ್ವರ್ಗವನ್ನೂ ನರಕವನ್ನೂ ಒಮ್ಮೆ ಖುದ್ದಾಗಿ ನೋಡಬೇಕು.” ಆಸೆ ಈಡೇರಿಸಿಕೊಳ್ಳಲು ಅವಳಿಗೆ ಅನುಮತಿ ದೊರೆಯಿತು.

ದೇವತೆಯೊಬ್ಬಳು ತಕ್ಷಣವೇ ಅವಳನ್ನು ಬಲು ದೊಡ್ಡ ಭೋಜನಾಲಯಕ್ಕೆ ಕರೆದೊಯ್ದಳು. ಅಲ್ಲಿ ಸ್ವಾದಿಷ್ಟ ತಿನಿಸುಗಳೂ ರುಚಿಕರ ಪಾನೀಯಗಳೂ ಹೇರಳವಾಗಿ ಮೇಜುಗಳ ಮೇಲೆ ಇದ್ದವು. ಆದರೂ ಆ ಮೇಜುಗಳ ಸುತ್ತ ಬಲು ದುಃಖಿತರೂ ಹಸಿವಿನಿಂದ ನರಳುತ್ತಿದ್ದವರೂ ಕುಳಿತು ಗೋಳಾಡುತ್ತಿದ್ದರು. “ಇವರೇಕೆ ಇಂತಿದ್ದಾರೆ?” ವಿಚಾರಿಸಿದಳು ಆಕೆ. ಅವರ ಕೈಗಳನ್ನು ಸೂಕ್ಷಮವಾಗಿ ಗಮನಿಸುವಂತೆ ಅವಳಿಗೆ ದೇವತೆ ಹೇಳಿದಳು. ಮೊಣಕೈ ಬಾಗಿಸಲು ಸಾಧ್ಯವಾಗದಂತೆ ಉದ್ದನೆಯ ಹಿಡಿ ಇರುವ ಚಮಚೆಯನ್ನು ಒಂದು ಕೈಗೂ ಉದ್ದನೆಯ ಹಿಡಿ ಇರುವ ಮುಳ್ಳುಚಮಚೆಯನ್ನು ಇನ್ನೊಂದು ಕೈಗೂ ಕಟ್ಟಲಾಗಿತ್ತು. ತತ್ಪರಿಣಾಮವಾಗಿ ಅವರು ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. “ಇದು ನಿಜವಾಗಿಯೂ ನರಕ. ಬೇಗನೆ ನನ್ನನ್ನು ಇಲ್ಲಿಂದ ಸ್ವರ್ಗಕ್ಕೆ ಕರೆದೊಯ್ಯಿರಿ,” ಕಿರುಚಿದಳು ಆಕೆ.

ತಕ್ಷಣವೇ ಆಕೆಯನ್ನು ದೇವತೆ ಮತ್ತೊಂದು ಬಲು ದೊಡ್ಡ ಭೋಜನಾಲಯಕ್ಕೆ ಕರೆದೊಯ್ದಳು. ಅಲ್ಲಿ ಸ್ವಾದಿಷ್ಟ ತಿನಿಸುಗಳೂ ರುಚಿಕರ ಪಾನೀಯಗಳೂ ಹೇರಳವಾಗಿ ಮೇಜುಗಳ ಮೇಲೆ ಇದ್ದವು. ಆ ಮೇಜುಗಳ ಸುತ್ತಲೂ ನಗುತ್ತಾ ಹರಟುತ್ತಾ ಬಲು ಸಂತೋಷದಿಂದ ಇದ್ದ  ತೃಪ್ತ ಜನರನ್ನು ಆಕೆ ನೋಡಿದಳು. “ನರಕದಲ್ಲಿ ಇದ್ದಂತೆ ಮೊಣಕೈಗಳನ್ನು ಬಾಗಿಸಲು ಸಾಧ್ಯವಾಗದಂತೆ ಏನನ್ನೂ ಕಟ್ಟಿಲ್ಲ ಎಂಬುದಾಗಿ ಭಾವಿಸುತ್ತೇನೆ,” ಅಂದಳಾಕೆ. ದೇವತೆ ಹೇಳಿದಳು, “ಸರಿಯಾಗಿ ನೋಡು, ಇಲ್ಲಿಯೂ ಅಂಥದ್ದೇ ಚಮಚೆ ಹಾಗು ಮುಳ್ಳುಚಮಚೆಗಳನ್ನು ಅದೇ ರೀತಿ ಕೈಗಳಿಗೆ ಕಟ್ಟಿದೆ. ಆದಾಗ್ಯೂ ಇಲ್ಲಿನವರು ಒಬ್ಬರು ಇನ್ನೊಬ್ಬರಿಗೆ ಉಣಿಸುವುದು ಹೇಗೆಂಬುದನ್ನು ಕಲಿತಿದ್ದಾರೆ. ಆದ್ದರಿಂದ ………..”

೫೬. ಕಾಡು ಸೇವಂತಿಗೆಯ ಸಮಸ್ಯೆ

ತನ್ನ ಮನೆಯ ಮುಂದಿನ ಅಂಗಳದಲ್ಲಿ ಹುಲ್ಲುಹಾಸೊಂದನ್ನು ಬೆಳೆಸಿ ಅದನ್ನು ಬಲು ಚೆನ್ನಾಗಿ ಕಾಪಾಡಿಕೊಂಡು ಬೀಗುತ್ತಿದ್ದವನೊಬ್ಬನಿಗೆ ಇದ್ದಕಿದ್ದಂತೆ ಒಂದು ಸಮಸ್ಯೆ ಎದುರಾಯಿತು. ಹುಲ್ಲುಹಾಸಿನ ಮೇಲೆ ಬೇಕಾಬಿಟ್ಟಿಯಾಗಿ ಕಾಡುಸೇವಂತಿಗೆ ಗಿಡಗಳು ಬೆಳೆಯಲಾರಂಭಿಸಿದವು. ಅವನ್ನು ತೊಲಗಿಸಲು ಆತ ತನಗೆ ತಿಳಿದಿದ್ದ ಎಲ್ಲ ವಿಧಾನಗಳನ್ನು ಅನುಸರಿಸಿದರೂ ಪ್ರಯೋಜನವಾಗಲಿಲ್ಲ.

ಇದರಿಂದ ಬೇಸತ್ತ ಆತ ಕೊನೆಗೆ ಕೃಷಿ ಇಲಾಖೆಗೆ ಪತ್ರವೊಂದನ್ನು ಬರೆದ. ಅದರಲ್ಲಿ ತನ್ನ ಸಮಸ್ಯೆಯನ್ನೂ ಅದನ್ನು ಪರಿಹರಿಸಲು ತಾನು ಕೈಗೊಂಡ ಎಲ್ಲ ನಿಷ್ಪ್ರಯೋಜಕ ಕ್ರಮಗಳನ್ನೂ ವಿವರಿಸಿ, “ಸಮಸ್ಯೆ ಪರಿಹರಿಸಲು ಏನು ಮಾಡಬೇಕು?” ಎಂಬ ಪ್ರಶ್ನೆ ಕೇಳಿದ.

ಕೆಲವೇ ದಿನಗಳಲ್ಲಿ ಉತ್ತರ ಬಂದಿತು: “ಅವುಗಳನ್ನು ಪ್ರೀತಿಸುವುದನ್ನು ಕಲಿಯಿರಿ ಎಂಬುದೇ ನಮ್ಮ ಸಲಹೆ.”

೫೭. ನಿಮಗೇನೂ ತೊಂದರೆ ಆಗುವುದಿಲ್ಲ!

ಇಬ್ಬರು ಒಂದೇ ದೋಣಿಯಲ್ಲಿ ಸಮುದ್ರದಲ್ಲಿ ಪಯಣಿಸುತ್ತಿದ್ದರು.

ಅವರ ಪೈಕಿ ಒಬ್ಬ ದೋಣಿಯ ತಳದಲ್ಲಿ ಒಂದು ರಂಧ್ರ ಕೊರೆಯಲಾರಂಭಿಸಿದ. ಗಾಬರಿಗೊಂಡ ಇನ್ನೊಬ್ಬ ಕಿರುಚಿದ, “ನೀನೇನು ಮಾಡುತ್ತಿರುವೆ ಎಂಬುದರ ಅರಿವಿದೆಯೇ? ತೂತು ಕೊರೆಯುವುದನ್ನು ತಕ್ಷಣ ನಿಲ್ಲಿಸು.”

ರಂಧ್ರ ಕೊರೆಯತ್ತಿದ್ದಾತ ಉತ್ತರಿಸಿದ, “ನಿನಗೇನೂ ತೊಂದರೆ ಆಗುವುದಿಲ್ಲ. ನಾನು ಕೊರೆಯುತ್ತಿರುವುದು ನಾನಿರುವ ತಾಣದಲ್ಲಿ.”

೫೮. ಅಂತಾರಾಷ್ಟ್ರೀಯ ಆಹಾರ ಕೊರತೆ – ಹೀಗೊಂದು ಕತೆ

ಇತ್ತೀಚೆಗೆ, ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ಒಂದು ಸರ್ವೇಕ್ಷಣೆ ಮಾಡಲಾಯಿತಂತೆ. ಸರ್ವೇಕ್ಷಣೆಯಲ್ಲಿ ಭಾಗವಹಿಸಿದ್ದವರಿಗೆ ಕೇಳಿದ್ದು ಒಂದೇ ಒಂದು ಪ್ರಶ್ನೆ: “ಜಗತ್ತಿನ ಉಳಿದ ಭಾಗವನ್ನು ಕಾಡುತ್ತಿರುವ ಆಹಾರದ ಕೊರತೆಯ ಸಮಸ್ಯೆಯ ಪರಿಹಾರದ ಕುರಿತು ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಏನು ಎಂಬುದನ್ನು ದಯವಿಟ್ಟು ತಿಳಿಸಿ.”

ಸರ್ವೇಕ್ಷಣೆ ಜನಭಿಪ್ರಾಯ ಸಂಗ್ರಹಿಸುವುದರಲ್ಲಿ ಸಂಪೂರ್ಣವಾಗಿ ಸೋತಿತು. ಏಕೆಂಬುದನ್ನು ತಿಳಿಯಬೇಕೆ? ಲಭಿಸಿದ ಉತ್ತರಗಳ ಈ ಮುಂದಿನ ವಿಶ್ಲೇಷಣೆ ಓದಿ:-

ಆಫ್ರಿಕಾದವರಿಗೆ “ಆಹಾರ” ಅಂದರೇನು ಎಂಬುದೇ ತಿಳಿದಿರಲಿಲ್ಲ!

ಪೂರ್ವ ಯುರೋಪ್‌ನವರಿಗೆ “ಪ್ರಾಮಾಣಿಕ” ಅಂದರೇನು ಎಂಬುದೇ ತಿಳಿದಿರಲಿಲ್ಲ!

ಪಶ್ಚಿಮ ಯುರೋಪ್‌ನವರಿಗೆ “ಕೊರತೆ” ಅಂದರೇನು ಎಂಬುದೇ ತಿಳಿದಿರಲಿಲ್ಲ!

ಚೀನಾದವರಿಗೆ “ಅಭಿಪ್ರಾಯ” ಅಂದರೇನು ಎಂಬುದೇ ತಿಳಿದಿರಲಿಲ್ಲ!

ಮಧ್ಯಪ್ರಾಚ್ಯದವರಿಗೆ “ಪರಿಹಾರ” ಅಂದರೇನು ಎಂಬುದೇ ತಿಳಿದಿರಲಿಲ್ಲ!

ದಕ್ಷಿಣ ಅಮೇರಿಕದವರಿಗೆ “ದಯವಿಟ್ಟು” ಅಂದರೇನು ಎಂಬುದೇ ತಿಳಿದಿರಲಿಲ್ಲ!

ಅಮೇರಿಕ ಸಂಯುಕ್ತ ಸಂಸ್ಥಾನದವರಿಗೆ “ಜಗತ್ತಿನ ಉಳಿದ ಭಾಗ” ಅಂದರೇನು ಎಂಬುದೇ ತಿಳಿದಿರಲಿಲ್ಲ!

೫೯. ವರ್ತಕನೂ ಅವನ ಪತ್ನಿಯರೂ

ಒಂದಾನೊಂದು ಕಾಲದಲ್ಲಿ ನಾಲ್ಕು ಪತ್ನಿಯರು ಇದ್ದ ಶ್ರೀಮಂತ ವರ್ತಕನೊಬ್ಬನಿದ್ದ.

ತನ್ನ ನಾಲ್ಕನೆಯ ಪತ್ನಿಯನ್ನು ಅವನು ಅತೀ ಹೆಚ್ಚು ಪ್ರೀತಿಸುತ್ತಿದ್ದ. ಎಂದೇ ಅವಳಿಗೆ ಅತ್ಯುತ್ತಮವಾದ ಬೆಲೆಬಾಳುವ ದಿರಿಸುಗಳು, ರಸಭಕ್ಷ್ಯಗಳು ಇವೇ ಮೊದಲಾದವನ್ನು ತಂದು ಕೊಡುತ್ತಿದ್ದ.

ಅವನು ತನ್ನ ಮೂರನೆಯ ಪತ್ನಿಯನ್ನೂ ತುಂಬಾ ಪ್ರೀತಿಸುತ್ತಿದ್ದ. ಅವಳ ಕುರಿತು ಅವನು ತುಂಬ ಹೆಮ್ಮೆ ಪಡುತ್ತಿದ್ದ. ಯಾವಾಗಲೂ ತನ್ನ ಮಿತ್ರರಿಗೆ ಅವಳನ್ನು ಪ್ರದರ್ಶಿಸಲು ಇಷ್ಟಪಡುತ್ತಿದ್ದ. ಆದರೂ ಅವಳು ಬೇರೆ ಯಾರೊಂದಿಗಾದರೂ ಓಡಿಹೋದಾಳು ಎಂಬ ಭಯ ಅವನನ್ನು ಸದಾ ಕಾಡುತ್ತಿತ್ತು.

ತನ್ನ ಎರಡನೆಯ ಪತ್ನಿಯನ್ನೂ ಆತ ಪ್ರೀತಿಸುತ್ತಿದ್ದ. ಅವಳು ವಿಚಾರಪರಳೂ ತುಂಬ ತಾಳ್ಮೆಯುಳ್ಳವಳೂ ಆಗಿದ್ದಳು. ವಾಸ್ತವವಾಗಿ ಅವಳು ಅವನ ಆಪ್ತಸಮಾಲೋಚಕಿಯೂ ಆಗಿದ್ದಳು. ಸಮಸ್ಯೆಗಳು ಎದುರಾಗಲೆಲ್ಲ ಆತ ಯಾವಾಗಲೂ ಅವಳ ಸಲಹೆ ಕೇಳುತ್ತಿದ್ದ. ಅವಳೂ ಅಂಥ ಸನ್ನಿವೇಶಗಳಲ್ಲಿ ಅವನ ನೆರವಿಗೆ ಬರುತ್ತಿದ್ದಳು.

ವರ್ತಕನ ಮೊದಲನೆಯ ಪತ್ನಿಯಾದರೋ ಅವನ ನಿಷ್ಠಾವಂತ ಸಂಗಾತಿಯಾಗಿದ್ದಳು. ಅವನ ಸಂಪತ್ತನ್ನೂ ವ್ಯಾಪಾರವಹಿವಾಟುಗಳನ್ನು ಸಂರಕ್ಷಿಸುವುದರಲ್ಲಿ, ಮನೆಯ ಆಡಳಿತವನ್ನು ನಿಭಾಯಿಸುವುದರಲ್ಲಿ ಆಕೆಯ ಕೊಡುಗೆ ಅಪಾರವಾಗಿತ್ತು. ಆಕೆ ಅವನನ್ನು ಗಾಢವಾಗಿ ಪ್ರೀತಿಸುತ್ತಿದ್ದಳಾದರೂ ಅವನು ಅವಳನ್ನು ಅಷ್ಟಾಗಿ ಪ್ರೀತಿಸುತ್ತಿರಲಿಲ್ಲ. ವಾಸ್ತವವಾಗಿ ಅವನ್ನು ಅವಳನ್ನು ನಿರ್ಲಕ್ಷಿಸುತ್ತಿದ್ದ.

ಇಂತಿರುವಾಗ ಒಂದು ದಿನ ವರ್ತಕ ರೋಗಗ್ರಸ್ಥನಾದ. ತಾನು ಇನ್ನು ಹೆಚ್ಚು ದಿನ ಬದುಕಿರಲಾರೆ ಎಂಬ ಕಟುಸತ್ಯ ಅವನಿಗೆ ಹೊಳೆಯಿತು. ಆಗ ಅವನು ಇಂತು ಯೋಚಿಸಿದ: “ನನಗೆ ಈಗ ನಾಲ್ವರು ಪತ್ನಿಯರು ಇದ್ದರೂ ಒಬ್ಬಂಟಿಯಾಗಿ ಪರಲೋಕ ಯಾತ್ರೆ ಮಾಡಬೇಕಾಗುತ್ತದೆ.”

ಅವನು ತನ್ನ ನಾಲ್ಕನೆಯ ಪತ್ನಿಯನ್ನು ಕೇಳಿದ, “ನಿನ್ನನ್ನು ನಾನು ಅತೀ ಹೆಚ್ಚು ಪ್ರೀತಿಸುತ್ತಿದ್ದ ವಿಷಯ ನಿನಗೆ ತಿಳಿದೇ ಇದೆ. ಲಭ್ಯವಿದ್ದದ್ದರಲ್ಲಿ ಅತ್ಯುತ್ತಮವಾದದ್ದನ್ನೇ ನಿನಗೆ ಸದಾ ಕೊಡುತ್ತಿದ್ದೆ. ನಿನ್ನ ಕುರಿತು ತೆಗೆದುಕೊಂಡಷ್ಟು ಕಾಳಜಿ ಬೇರೆ ಯಾರ ಕುರಿತೂ ತೆಗೆದುಕೊಂಡಿಲ್ಲ. ನಾನೀಗ ಸಾಯುತ್ತಿದ್ದೇನೆ. ನೀನೂ ನನ್ನನ್ನು ಅನುಸರಿಸಿ ನನ್ನೊಡನೆ ಬರುವೆಯಾ?”

“ಸಾಧ್ಯವೇ ಇಲ್ಲ,” ಎಂಬುದಾಗಿ ಖಡಾಖಂಡಿತವಾಗಿ ಹೇಳಿದ ಆಕೆ ಬೇರೇನೂ ಮಾತನಾಡದೆ ಅಲ್ಲಿಂದ  ತೆರಳಿದಳು.

ತನ್ನ ಮೂರನೆಯ ಪತ್ನಿಯನ್ನು ಕರೆದು ವರ್ತಕ ಕೇಳಿದ, “ಜೀವಮಾನವಿಡೀ ನಾನು ನಿನ್ನ ನ್ನು ಆರಾಧಿಸಿದ್ದೇನೆ. ನಾನೀಗ ಸಾಯುತ್ತಿದ್ದೇನೆ. ನೀನೂ ನನ್ನನ್ನು ಅನುಸರಿಸಿ ನನ್ನೊಡನೆ ಬರುವೆಯಾ?”

“ಸಾಧ್ಯವಿಲ್ಲ. ಇಲ್ಲಿಯವರ ಒಡನಾಟ ನನಗೆ ಸಂತೋಷವನ್ನುಂಟು ಮಾಡಿದೆ. ನೀನು ಸತ್ತ ನಂತರ ನಾನು ಮರುಮದುವೆ ಆಗುತ್ತೇನೆ,” ಉಲಿದಳು ಆಕೆ.

ತನ್ನ ಎರಡನೆಯ ಪತ್ನಿಯನ್ನು ಕರೆದು ವರ್ತಕ ಕೇಳಿದ, “ಕಷ್ಟಕಾಲದಲ್ಲಿ ನನ್ನ ನೆರವಿಗೆ ಬರುತ್ತಿದ್ದವಳು ನೀನು. ಸಮಸ್ಯೆಗಳು ಎದುರಾದಾಗಲೆಲ್ಲ ಸಹಾಯಕ್ಕಾಗಿ ನಾನು ನಿನ್ನ ಹತ್ತಿರ ಬರುತ್ತಿದ್ದೆ. ನಾನೀಗ ಸಾಯುತ್ತಿದ್ದೇನೆ. ನೀನೂ ನನ್ನನ್ನು ಅನುಸರಿಸಿ ನನ್ನೊಡನೆ ಬರುವೆಯಾ?”

“ಕ್ಷಮಿಸು. ಈ ವಿಷಯದಲ್ಲಿ ನಾನು ನಿನಗೆ ಸಹಾಯ ಮಾಡಲಾರೆ. ಹೆಚ್ಚೆಂದರೆ ನಿನ್ನನ್ನು ಸಮಾಧಿಸ್ಥಾನದ ತನಕ ತಲುಪಿಸಲು ನೆರವು ನೀಡಬಲ್ಲೆ,” ಎಂಬುದಾಗಿ ಹೇಳಿದಳಾಕೆ.

ಈ ಎಲ್ಲ ಉತ್ತರಗಳನ್ನು ಕೇಳಿ ತೀವ್ರ ಆಘಾತವಾಗಿ ಅತೀ ಸಂಕಟ ಪಡುತ್ತಿದ್ದ ಆತನಿಗೆ ಕ್ಷೀಣವಾಗಿದ್ದ ಧ್ವನಿಯೊಂದು ಕೇಳಿಸಿತು, “ಚಿಂತೆ ಮಾಡಬೇಡ. ನಾನು ನಿನ್ನೊಂದಿಗೇ ಬರುತ್ತೇನೆ. ನೀನು ಎಲ್ಲಿಗೆ ಹೋದರೂ ನಾನು ಇದ್ದೇ ಇರುತ್ತೇನೆ.” ವರ್ತಕ ತಲೆ ಎತ್ತಿ ನೋಡಿದ. ಅವನಿಗೆ ಕಾಣಿಸಿದ್ದು ಯುಕ್ತ ಆರೈಕೆ ಇಲ್ಲದೆ ಸೊರಗಿ ಹೋಗಿದ್ದ ಅವನ ಮೊದಲನೆಯ ಪತ್ನಿ.

[ವಿ ಸೂ: ೪ನೆಯ ಪತ್ನಿ – ದೇಹ, ೩ನೆಯ ಪತ್ನಿ – ಸಿರಿ ಸಂಪತ್ತು, ೨ನೆಯ ಪತ್ನಿ – ಬಂಧುಮಿತ್ರರು, ೧ನೆಯ ಪತ್ನಿ – ಆತ್ಮ ಎಂಬುದಾಗಿ ಓದುಗರು ಕಲ್ಪಿಸಿಕೊಳ್ಳಿ]

೬೦.  ಸ್ಪರ್ಶಮಣಿ

ಮೆಡಿಟರೇನಿಯನ್‌ ಸಮುದ್ರದ ನಿರ್ದಿಷ್ಟ ಭಾಗದ ತಟದಲ್ಲಿ ಇರುವ ಸಹಸ್ರಾರು ಸಣ್ಣ ಉರುಟುಕಲ್ಲುಗಳ ನಡುವೆ ಅವುಗಳಂತೆಯೇ ಗೋಚರಿಸುವ ಸ್ಪರ್ಶಮಣಿ ಇದೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲವೊಂದರಿಂದ ಅಲೆಕ್ಸಾಂಡ್ರಿಯಾದ ಬಡವನೊಬ್ಬನಿಗೆ ಲಭಿಸಿತು. ನಿಜವಾದ ಸ್ಪರ್ಶಮಣಿಯು ಮುಟ್ಟಿದಾಗ ಉಳಿದ ಕಲ್ಲುಗಳಿಗಿಂತ ತುಸು ಹೆಚ್ಚು ಬಿಸಿಯಾಗಿರುತ್ತದೆಂಬ ಮಾಹಿತಿಯೂ ಅವನಿಗೆ ಸಿಕ್ಕಿತು. ತಕ್ಷಣವೇ ಆತ ತನ್ನ ಅಲ್ಪಸ್ವಲ್ಪ ಸ್ವತ್ತನ್ನು ಮಾರಿ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಿ ಸ್ಪರ್ಶಮಣಿ ಇದೆಯೆಂದು ಹೇಳಲಾದ ತಾಣಕ್ಕೆ ಹೋಗಿ ಅಲ್ಲಿ ಗುಡಿಸಲೊಂದನ್ನು ಕಟ್ಟಿ ವಾಸ್ತವ್ಯ ಹೂಡಿದನು. ಅಲ್ಲಿದ್ದ ಸಣ್ಣ ಉರಟುಕಲ್ಲುಗಳನ್ನು ಪರೀಕ್ಷಿಸಲು ಆರಂಭಿಸಿದನು. ಒಮ್ಮೆ ಪರೀಕ್ಷಿಸಿದ ಉರುಟುಕಲ್ಲನ್ನು ಅಲ್ಲಯೇ ಬಿಸಾಡಿದರೆ ಮುಂದೆ ಪುನಃ ಅದನ್ನು ಪರೀಕ್ಷಿಸಲು ಎತ್ತಿಕೊಳ್ಳುವ ಸಾಧ್ಯತೆ ಇರುವುದು ಅವನಿಗೆ ಹೊಳೆಯಿತು. ಆದ್ದರಿಂದ ಆತ ಒಮ್ಮೆ ಪರೀಕ್ಷಿಸಿದ ದಣ್ಣ ಉರುಟುಕಲ್ಲು ಸಾಮಾನ್ಯ ಕಲ್ಲು ಆಗಿದ್ದಲ್ಲಿ ಸಮುದ್ರಕ್ಕೆ ಎಸೆಯಲು ನಿರ್ಧರಿಸಿದ. ಅಂತೆಯೇ ಅಲ್ಲಿದ್ದ ಸಣ್ಣ ಉರುಟುಕಲ್ಲುಗಳನ್ನು ಒಂದೊಂದಾಗಿ ಎತ್ತಿಕೊಂಡು ಪರೀಕ್ಷಿಸಿ ಅದು ತಣ್ಣಗಿದ್ದರೆ ಸಮುದ್ರಕ್ಕೆ ಎಸೆಯಲಾರಂಭಿಸಿದ. ಈ ರೀತಿ ಇಡೀ ದಿನ ಹುಡುಕಿದರೂ ಅವನಿಗೆ ಸ್ಪರ್ಶಮಣಿ ಸಿಗಲಿಲ್ಲ. ಆದರೂ ಅವನು ನಿರಾಶನಾಗದೆ ಮರುದಿನ ಹುಡುಕಾಟ ಮುಂದುವರಿಸಿದ. ವಾರಗಳು ಉರುಳಿದವು, ಸ್ಪರ್ಶಮಣಿ ಸಿಗಲಿಲ್ಲ. ತಿಂಗಳುಗಳು ಉರುಳಿದವು ಸ್ಪರ್ಶಮಣಿ ಸಿಗಲಿಲ್ಲ. ತತ್ಪರಿಣಾಮವಾಗಿ ಕಲ್ಲನ್ನು ಎತ್ತಿಕೊಳ್ಳುವುದು, ಅದು ತಣ್ಣಗಿದೆ ಎಂಬುದಾಗಿ ಸಮುದ್ರಕ್ಕೆ ಎಸೆಯುವುದು ಒಂದು ಯಾಂತ್ರಿಕ ಕ್ರಿಯೆ ಆಯಿತು. ಇಂತಿರುವಾಗ ಒಂದು ದಿನ ಅವನು ಎತ್ತಿಕೊಂಡ ಒಂದು ಸಣ್ಣ ಉರುಟುಕಲ್ಲು ತುಸು ಬೆಚ್ಚಗೆ ಇತ್ತು. ಆದಾಗ್ಯೂ ಅವನು ಅದನ್ನು ಅಭ್ಯಾಸಬಲದಿಂದ ಸಮುದ್ರಕ್ಕೆ ಎಸೆದನು. ಅಂತು ಎಸೆದ ತಕ್ಷಣ ತಾನು ಎಸೆದದ್ದು ಸ್ಪರ್ಶಮಣಿ ಆಗಿತ್ತು ಎಂಬ ತಥ್ಯ ಅವನಿಗೆ ಹೊಳೆಯಿತು. ಆದರೂ ಅವನೇನೂ ಮಾಡುವಂತಿರಲಿಲ್ಲ, ಸಿಕ್ಕಿದ ಸ್ಪರ್ಶಮಣಿ ಸಮುದ್ರದ ಒಡಲು ಸೇರಿತ್ತು. ಅಭ್ಯಾಸಬಲದಿಂದಾಗಿ ದೊರೆತದ್ದು ಕಳೆದುಹೋಯಿತು!

೬೧. ಕುತೂಹಲಕಾರಿ ಶವಸಂಸ್ಕಾರ

ಅಸಾಮಾನ್ಯ ಸಂಸ್ಥೆಯೊಂದರ ನೌಕರರರು ಒಂದು ದಿನ ಬೆಳಿಗ್ಗೆ ಎಂದಿನಂತೆ ಕಾರ್ಯಾಲಯಕ್ಕೆ ಹೋದಾಗ ಹೆಬ್ಬಾಗಿಲ ಹತ್ತಿರ ಒಂದು ದೊಡ್ಡದಾಗಿ ಬರೆದಿದ್ದ ಸೂಚನೆ ಇದ್ದ ಫಲಕವನ್ನು ನೋಡಿದರು. ಅದರಲ್ಲಿ ಇಂತು ಬರೆದಿತ್ತು: ‘ಈ ಸಂಸ್ಥೆಯಲ್ಲಿ ನಿಮ್ಮ ಬೆಳೆವಣಿಗೆಗೆ ಅಡ್ಡಿಯಾಗಿದ್ದ ವ್ಯಕ್ತಿ  ನಿನ್ನೆ ವಿಧಿವಶನಾದನು. ಅವನ ಶವಸಂಸ್ಕಾರಕ್ಕೆ ಸಂಬಂಧಿಸಿದ ಮತೀಯ ವಿಧಿವಿಧಾನಗಳನ್ನು ವ್ಯಾಯಾಮಶಾಲೆಯಲ್ಲಿ ನೆರವೇರಿಸಲಾಗುತ್ತದೆ. ನೀವು ಅದರಲ್ಲಿ ತಪ್ಪದೆ ಭಾಗವಹಿಸಬೇಕೆಂದು ವಿನಂತಿ.’

ಅದನ್ನು ಓದಿದ ತಕ್ಷಣ ತಮ್ಮ ಸಹೋದ್ಯೋಗಿಯೊಬ್ಬ ತೀರಿಕೊಂಡ ಎಂಬುದನ್ನು ತಿಳಿದು ನೌಕರರರು ದುಃಖಿತರಾದರು. ಸ್ವಲ್ಪ ಕಾಲ ಕಳೆದ ನಂತರ ತಮ್ಮ ಬೆಳೆವಣಿಗೆಗೆ ಅಡ್ಡಿಯಾಗಿದ್ದ ವ್ಯಕ್ತಿ ಯಾರಾಗಿದ್ದಿರಬಹುದೆಂಬುದನ್ನು ತಿಳಿಯುವ ಕುತೂಹಲ ಅವರನ್ನು ಕಾಡಲಾರಂಭಿಸಿತು. ಎಲ್ಲರೂ ನಿಗದಿತ ಸಮಯಕ್ಕೆ ಸರಿಯಾಗಿ ವ್ಯಾಯಾಮಶಾಲೆಗೆ ಧಾವಿಸಿದರು.

“ನನ್ನ ಬೆಳೆವಣಿಗೆಗೆ ಅಡ್ಡಿಯಾಗಿದ್ದ ವ್ಯಕ್ತಿ ಯಾರು?” ಎಂಬುದನ್ನು ತಿಳಿಯುವ ಕುತೂಹವನ್ನು ಹತ್ತಿಕ್ಕಲಾಗದೆ ಶವಪೆಟ್ಟಿಗೆಯೊಳಕ್ಕೆ ಒಬ್ಬೊಬ್ಬರಾಗಿ ಇಣುಕಿ ನೋಡಿದರು. ಅಲ್ಲಿ ಇದ್ದದ್ದು ಅವರನ್ನು ಮೂಕವಿಸ್ಮಿತರನ್ನಾಗಿಸಿತು.

ಶವಪೆಟ್ಟಿಗೆಯೊಳಗೆ ಇದ್ದದ್ದು ಒಂದು ದೊಡ್ಡ ಕನ್ನಡಿ. ಶವಪೆಟ್ಟಿಗೆಯೊಳಗೆ ಇಣುಕಿದವರಿಗೆ ಕಾಣುತ್ತಿದ್ದದ್ದು ಅವರದೇ ಮುಖ!!

ಕನ್ನಡಿಯ ಪಕ್ಕದಲ್ಲಿ ಇಂತು ಬರೆದಿತ್ತು: ‘ನಿಮ್ಮ ಬೆಳೆವಣಿಗೆಯ ಮೇಲ್ಮಿತಿ ನಿರ್ಧರಿಸಬಲ್ಲ ಏಕೈಕ ವ್ಯಕ್ತಿ ನೀವೇ ಆಗಿದ್ದೀರಿ.’

೬೨. ನಿನ್ನ ಸಮಯ ನನ್ನೊಂದಿಗೆ ಹಂಚಿಕೊ

ವ್ಯಕ್ತಿಯೊಬ್ಬ ತನ್ನ ಕಾರ್ಯಾಲಯದಿಂದ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಎಂದಿನಂತೆ ಸುಸ್ತಾಗಿ, ಸಿಡುಕು ಮುಖದೊಂದಿಗೆ ಬಲು ತಡವಾಗಿ ಮನೆಗೆ ಹಿಂದಿರುಗಿದ.

ಮುಂಬಾಗಿಲಿನ ಹತ್ತಿರವೇ ನಿಂತುಕೊಂಡು ಅವನಿಗಾಗಿ ಕಾಯುತ್ತಿದ್ದ ಅವನ ೫ ವರ್ಷ ವಯಸ್ಸಿನ ಮಗ ಕೇಳಿದ, “ಅಪ್ಪಾ, ನಾನು ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೇ?”

“ಖಂಡಿತ ಕೇಳಬಹುದು. ಏನದು?” ಪ್ರತಿಕ್ರಿಯಿಸಿದ ತಂದೆ.

“ಅಪ್ಪಾ, ಒಂದು ಗಂಟೆ ಕೆಲಸ ಮಾಡಿ ನೀನು ಎಷ್ಟು ಹಣ ಸಂಪಾದಿಸುವೆ?” ವಿಚಾರಿಸಿದ ಮಗ.

“ಅದು ನಿನಗೆ ಸಂಬಂಧಿಸದ ವಿಷಯ. ಇಂಥ ಆಲೋಚನೆಗಳು ನಿನಗೆ ಬರುವುದಾದರೂ ಹೇಗೆ?” ಕೋಪದಿಂದ ಕಿರುಚಿದ ತಂದೆ.

“ಸುಮ್ಮನೆ ತಿಳಿಯಲೋಸುಗ ಕೇಳಿದೆ ಅಷ್ಟೆ. ಒಂದು ಗಂಟೆಯಲ್ಲಿ ನೀನು ಎಷ್ಟು ಹಣ ಸಂಪಾದಿಸಬಲ್ಲೆ ಎಂಬುದನ್ನು ದಯವಿಟ್ಟು ತಿಳಿಸು,” ಕೇಳಿಕೊಂಡ ಮಗ.

“ತಿಳಿಯಲೇ ಬೇಕೆಂದಿದ್ದರೆ ಕೇಳು. ಒಂದು ಗಂಟೆಯಲ್ಲಿ ನಾನು $೨೦ ಸಂಪಾದುತ್ತೇನೆ,” ಹೇಳಿದ ತಂದೆ.

“ಓಹ್‌,” ಉದ್ಗರಿಸಿದ ಮಗ, ತಲೆ ಬಗ್ಗಿಸಿ. ಪುನಃ ತಲೆ ಮೇಲೆತ್ತಿ ತಂದೆಯನ್ನು ಕೇಳಿದ, “ಅಪ್ಪಾ, ದಯವಿಟ್ಟು ನನಗೆ $೧೦ ಸಾಲ ಕೊಡಲು ಸಾಧ್ಯವೇ?”

ಕೋಪೋದ್ರಿಕ್ತನಾದ ತಂದೆ ಗಟ್ಟಯಾಗಿ ಹೇಳಿದ, “ಎನೋ ಒಂದು ಆಟಿಕೆಯನ್ನೋ ಅಥವ ಕೆಲಸಕ್ಕೆ ಬಾರದ ಇನ್ನೇನನ್ನೋ ಕೊಂಡುಕೊಳ್ಳಲೋಸುಗ ನನ್ನಿಂದ ಸಾಲ ಪಡೆಯುವ ಸಲುವಾಗಿ ನನ್ನ ಸಂಪಾದನೆ ಎಷ್ಟೆಂಬುದನ್ನು ತಿಳಿಯಬಯಸಿದೆಯೋ? ಮೂರ್ಖ ಹುಡುಗ. ನಾನು ಕಷ್ಟಪಟ್ಟು ದುಡಿಯುತ್ತೇನೆ, ಮನೆಗೆ ಬರುವಾಗ ಎಷ್ಟು ದಣಿದಿರುತ್ತೇನೆ ಎಂಬುದು ನಿನಗೇನಾದರೂ ತಿಳಿದಿದೆಯೇ? ಇಂಥ ಕ್ಷುಲ್ಲಕ ವಿಷಯಗಳಿಗೆ ಗಮನ ಕೊಡುವಷ್ಟು ಸಮಯ ನನ್ನ ಹತ್ತಿರ ಇಲ್ಲ. ನೀನೀಗ ಸದ್ದು ಮಾಡದೆ ನಿನ್ನ ಕೋಣೆಗೆ ಹೋಗಿ ಮಲಗು,”

ಮರುಮಾತನಾಡದೆ ಮಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ.

ತುಸು ಸಮಯ ಕಳೆದ ಬಳಿಕ ಮಗನೊಂದಿಗೆ ಅಷ್ಟು ಕಠಿಣವಾಗಿ ನಡೆದುಕೊಳ್ಳಬಾರದಿತ್ತು ಅನ್ನಿಸಿತು ತಂದೆಗೆ. ಮಗನ ಕೋನೆಗೆ ಹೋಗಿ ಬಾಗಿಲು ತೆರೆದು ಮೆಲುದನಿಯಲ್ಲಿ ಮಗನನ್ನು ಕೇಳಿದ, “ನಿದ್ದೆ ಬಂದಿದೆಯೇ ಮಗಾ?”

“ಇಲ್ಲ ಅಪ್ಪಾ, ಎಚ್ಚರವಾಗಿದ್ದೇನೆ.”

“ನಾನು ನಿನ್ನೋದಿಗೆ ಅಷ್ಟು ಕಠಿಣವಾಗಿ ನಡೆದುಕೊಳ್ಳಬಾರದಿತ್ತು ಅನ್ನಿಸುತ್ತಿದೆ. ನನಗೆ ತುಂಬಾ ದಣಿವಾಗಿದ್ದದ್ದರಿಂದ ಅಂತಾಯಿತು. ಇಗೋ, ನಿನಗೆ $೧೦ ಸಾಲ ಕೊಡುತ್ತಿದ್ದೇನೆ.”

ಮಗ ಬಲು ಆನಂದದಿಂದ ಹಾಸಿಗೆಯಿಂದ ಪುಟಿದೆದ್ದ. ತಲೆದಿಂಬಿನ ಅಡಿಯಿಂದ ತುಸು ಹಣವನ್ನು ತೆಗೆಸುಕೊಂಡು ಎಣಿಸಿದ. ಬಲು ಆನಂದದಿಂದ ಅದನ್ನು ತಂದೆಗೆ ಕೊಟ್ಟು ಹೇಳಿದ, “ಈ ಹಣವನ್ನು ನೀನು ಸಾಲ ಕೊಡುವ ಹಣಕ್ಕೆ ಸೇರಿಸಿದರೆ $೨೦ ಆಗುತ್ತದೆ. ಇದನ್ನು ತೆಗೆದುಕೊ. ಈಗ ನಿನ್ನ ಒಂದು ಗಂಟೆ ಸಮಯವನ್ನು ನನಗಾಗಿ ಮೀಸಲಿಡು!”

೬೩. ವಿಶ್ವಾಸಾರ್ಹತೆ

ಒಬ್ಬ ಬ್ರೆಡ್‌ ತಯಾರಕನಿಗೂ ಒಬ್ಬ ರೈತನಿಗೂ ನಡುವೆ ವ್ಯಾಪಾರ ಸಂಬಂಧಿತ ಒಪ್ಪಂದವಾಗಿತ್ತು. ಅದರ ಪ್ರಕಾರ ರೈತನು ಬ್ರೆಡ್‌ ತಯಾರಕನಿಗೆ ಬೆಣ್ಣೆಯನ್ನೂ ಬ್ರೆಡ್‌ ತಯಾರಕನು ರೈತನಿಗೆ ಬ್ರೆಡ್‌ಅನ್ನೂ ಕೊಡಬೇಕಿತ್ತು. ಕೆಲ ಕಾಲಾನಂತರ ರೈತ ಪೂರೈಸುತ್ತಿದ್ದ ೩ ಪೌಂಡ್‌ ತೂಕದ ಬೆಣ್ಣೆ ಇರಬೇಕಾದ್ದಕ್ಕಿಂತ ಹಗುರವಾಗಿದೆ ಎಂಬುದಾಗಿ ಬ್ರೆಡ್‌ ತಯಾರಕನಿಗೆ ಅನ್ನಿಸಲಾರಂಭಿಸಿತು. ತುಲಾಯಂತ್ರದ ನೆರವಿನಿಂದ ಪರೀಕ್ಷಿಸಿದಾಗ ಅವನ ಅನಿಸಿಕೆ ನಿಜವೆಂಬುದಾಗಿ ಸಾಬೀತಾಯಿತು. ಕೋಪೋದ್ರಿಕ್ತನಾದ ಆತ ರೈತನನ್ನು ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ನಿಲ್ಲಿಸಿದ. ನ್ಯಾಯಾಧೀಶರು ರೈತನನ್ನು ಕೇಳಿದರು, “ಏನಪ್ಪಾ, ನೀನು ಮೂರು ಪೌಂಡ್‌ ಬೆಣ್ಣೆ ಕೊಡುತ್ತಿರುವುದಾಗಿ ಹೇಳಿ ಅದಕ್ಕಿಂತ ಕಮ್ಮಿ ಕೊಡುತ್ತಿರುವೆ, ಏಕೆ?”

ರೈತ ಹೇಳಿದ, “ಅಂತಾಗಲು ಸಾಧ್ಯವೇ ಇಲ್ಲ ಮಹಾಸ್ವಾಮಿ. ಪ್ರತೀ ಬಾರಿಯೂ ನಾನು ತೂಕವನ್ನು ಪರೀಕ್ಷಿಸಿಯೇ ಬೆಣ್ಣೆಯನ್ನು ಕೊಡುತ್ತಿದ್ದೇನೆ”

“ನೀನು ಹೇಳುತ್ತಿರುವುದು ನಿಜವಾಗಿದ್ದರೆ ನೀನು ಉಪಯೋಗಿಸುತ್ತಿರುವ ತೂಕದ ಕಲ್ಲು ಸರಿಯಾಗಿಲ್ಲದೇ ಇರಬೇಕು,” ಪ್ರತಿಕ್ರಿಯಿಸಿದರು ನ್ಯಾಯಾಧೀಶರು. “ತೂಕದ ಕಲ್ಲುಗಳೇ? ಅವು ನನ್ನ ಹತ್ತಿರ ಇಲ್ಲವಲ್ಲ,” ಉದ್ಗರಿಸಿದ ರೈತ.

ಆಶ್ಚರ್ಯಚಕಿತರಾದ ನ್ಯಾಯಾಧೀಶರು ವಿಚಾರಿಸಿದರು, “ತೂಕದಕಲ್ಲು ಇಲ್ಲದೇ ಇರುವಾಗ ನೀನು ಪ್ರತೀ ಬಾರಿ ಬೆಣ್ಣೆಯ ತೂಕ ಪರೀಕ್ಷಿಸುತ್ತಿರುವುದಾದರೂ ಹೇಗೆ?”

ರೈತ ವಿವರಿಸಿದ, “ಅದು ಬಲು ಸುಲಭ ಮಹಾಸ್ವಾಮಿ. ನಾನು ಕೊಡುವ ೩ ಪೌಂಡ್‌ ಬೆಣ್ಣೆಗೆ ಬದಲಾಗಿ ೩ ಪೌಂಡ್‌ ಬ್ರೆಡ್‌ ಅವನು ನನಗೆ ಕೊಡಬೇಕೆಂಬುದು ನಮ್ಮೊಳಗಿನ ಒಪ್ಪಂದ. ಆದ್ದರಿಂದ ಪ್ರತೀ ದಿನ ಬೆಣ್ಣೆ ಕೊಡುವ ಮೊದಲು ನಾನು ಅದನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಯೂ ಅವನು ಕೊಟ್ಟಿದ್ದ ಬ್ರೆಡ್‌ ಅನ್ನು ಇನ್ನೊಂದು ತಟ್ಟೆಯಲ್ಲಿಯೂ ಇಟ್ಟು ಎರಡರ ತೂಕಗಳೂ ಸಮವಾಗಿರುವುದನ್ನು ಖಾತರಿ ಪಡಿಸಿಕೊಳ್ಳುತ್ತೇನೆ!”

೬೪. ಪ್ರಯತ್ನಿಸುವಿಕೆ

ಪ್ರತೀ ದಿನ ಮೂರು ಬಾರಿ ಧ್ಯಾನ ಮಾಡುವಂತೆ ಗುರುಗಳು ತನ್ನ ಶಿಷ್ಯರಿಗೆ ಆದೇಶಿಸಿದರು. ಮೂರು ಬಾರಿ ಧ್ಯಾನ ಮಾಡುವುದು ಒಂದು ಹೊರೆ ಎಂಬುದಾಗಿ ಶಿಷ್ಯರು ಭಾವಿಸಿದಂತಿತ್ತು. ಎಲ್ಲರೂ ಹೆಚ್ಚುಕಮ್ಮಿ ಒಂದೇ ತೆರನಾದ ಉತ್ತರ ಕೊಟ್ಟರು: “ಪ್ರಯತ್ನಿಸುತ್ತೇನೆ.”

ಗುರುಗಳು ನಸುನಕ್ಕು ತಮ್ಮ ಆಸನದಲ್ಲಿ ಆಸೀನರಾದರು. ತುಸು ದೂರದಲ್ಲಿ ನೆಲದ ಮೇಲೆ ಪುಸ್ತಕವೊಂದು ಬಿದ್ದಿತ್ತು. ಗುರುಗಳು ಅದರತ್ತ ಬಾಗಿ ಕೈಚಾಚಿ ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು, ಅದು ಸಿಗಲಿಲ್ಲ. ಅವರು ಪುನಃಪುನಃ ಪ್ರಯತ್ನಿಸಿದರೂ ಯಶಸ್ವಿಗಳಾಗಲಿಲ್ಲ. ಅವರು ಒಬ್ಬ ಶಿಷ್ಯನಿಗೆ ಇಂತೆದರು: “ಈಗ ಆ ಪುಸ್ತಕವನ್ನು ತೆಗೆದುಕೊಳ್ಳಲು ನೀನು ಪ್ರಯತ್ನಿಸು.” ಆ ಶಿಷ್ಯ ತಾನು ಕುಳಿತಲ್ಲಿಂದ ಎದ್ದು ಹೋಗಿ ಆ ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡು ಗುರುಗಳ ಹತ್ತಿರ ಹೋಗಿ ಅವರಿಗೆ ಕೊಟ್ಟನು. ಅವರಾದರೋ ಅದನ್ನು ತೆಗೆದುಕೊಳ್ಳುವದಕ್ಕೆ ಬದಲಾಗಿ ಅವನ ಕೈಗೆ ಒಂದು ಪೆಟ್ಟುಕೊಟ್ಟು ಅದನ್ನು ಕೆಳಕ್ಕೆ ಬೀಳಿಸಿ ಇಂತೆಂದರು: “ನನ್ನ ಆದೇಶವನ್ನು ಪಾಲಿಸದೇ ಇರುವಷ್ಟು ಧೈರ್ಯ ಬಂದಿತೇ ನಿನಗೆ! ಪುಸ್ತಕ ತೆಗೆದುಕೊಳ್ಳಲು ಪ್ರಯತ್ನಿಸು ಎಂಬುದಾಗಿ ನಾನು ಹೇಳಿದ್ದೆನೇ ವಿನಾ ತೆಗೆದುಕೊಳ್ಳಲು ಹೇಳಿದ್ದೆನೆ?”

೬೫. ನಿರಾಶನಾಗಿ ಪ್ರಯತ್ನಿಸುವುದನ್ನು ನಿಲ್ಲಿಸುವುದು

ದಾರಿಯಲ್ಲಿ ಎದುರಾದ ಖ್ಯಾತ ಗುರುವನ್ನು ಒಬ್ಬಾತ ಕೇಳಿದ, “ಯಶಸ್ಸಿನ ದಾರಿ ಯಾವುದು?”

ಅರೆನಗ್ನ ಗಡ್ಡಧಾರಿ ಗುರು ಮಾತನಾಡಲಿಲ್ಲವಾದರೂ ಬಲು ದೂರದ ಸ್ಥಳವೊಂದನ್ನು ತೋರುಬೆರಳಿನಂದ ತೋರಿಸಿದ. ಬಲು ಬೇಗನೆ ಅತಿ ಸುಲಭವಾಗಿ ಯಶಸ್ಸು ಗಳಿಸುವ ನಂಬಿಕೆಯಿಂದ ಆತ ಗುರು ತೋರಿಸಿದ ದಿಕ್ಕಿನಲ್ಲಿ ಓಡಿದ. ಹಠಾತ್ತನೆ ಯಾರೋ ಜೋರಾಗಿ ಹೊಡೆದಾಗ ಆಗುವ “ಸ್ಪ್ಲಾಟ್” ಶಬ್ದ ಕೇಳಿಸಿತು. ಪರಿಣಾಮವಾಗಿ ಹರಿದ ಬಟ್ಟೆಯೊಂದಿಗೆ ಬಹಳ ಹೆದರಿದ್ದ ಆ ಮನುಷ್ಯ ಹಿಂದಕ್ಕೆ ಬಂದ, ಗುರು ನೀಡಿದ್ದ ಸೂಚನೆಯನ್ನು ತಾನು ತಪ್ಪಾಗಿ ಅರ್ಥೈಸಿರಬೇಕು ಎಂಬ ನಂಬಿಕೆಯೊಂದಿಗೆ.‌ ಆತ ಗುರುವನ್ನು ಪುನಃ ಅದೇ ಪ್ರಶ್ನೆ ಕೇಳಿದ, ಗುರು ಉತ್ತರವನ್ನು ಮೊದಲು ನೀಡಿದಂತೆಯೇ ಈ ಬಾರಿಯೂ ನೀಡಿದರು. ಆತ ಸೂಚನೆಯಂತೆ ಪುನಃ ಅದೇ ದಿಕ್ಕಿನಲ್ಲಿ ನಡೆಯಲಾರಂಭಿಸಿದ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಮೊದಲಿನ ಸಲದ್ದಕ್ಕಿಂತ ಜೋರಾದ “ಸ್ಪ್ಲಾಟ್” ಶಬ್ದ ಕೇಳಿಸಿತು. ಈ ಬಾರಿ ರಕ್ತಸಿಕ್ತನಾಗಿದ್ದ ಆ ಮನುಷ್ಯ ಹಿಂದಿರುಗಿ ಬಂದು ಕಿರುಚಿದ, “ನೀವು ಸೂಚಿಸಿದ ದಿಕ್ಕಿನಲ್ಲಿಯೇ ನಾನು ಹೋದೆನಾದರೂ ನನಗೆ ದೊರೆತದ್ದು ಬಲವಾದ ಪೆಟ್ಟುಗಳು ಮಾತ್ರ. ಈ ಬಾರಿ ಬೆರಳು ತೋರಿಸುವುದು ಬೇಡ. ಮೌಖಿಕ ಸೂಚನೆಯನ್ನೇ ನೀಡಿ!” ಗುರು ತಾಳ್ಮೆಯಿಂದ ಉತ್ತರಿಸಿದರು, “ಪೆಟ್ಟು ತಿಂದ ಸ್ಥಳದಿಂದ ತುಸು ಮುಂದೆ ಇದೆ ಯಶಸ್ಸು!”

೬೬. ದೇವರು ಇದ್ದಾನೆಯೇ?

ಒಬ್ಬ ಕ್ಷೌರಿಕನ ಅಂಗಡಿಗೆ ತಲೆಗೂದಲು ಕತ್ತರಿಸಿಕೊಳ್ಳಲೋಸುಗ ಹೋದ. ಕ್ಷೌರಿಕ ತನ್ನ ಕೆಲಸ ಮಾಡುತ್ತಿರುವಾಗ ಅವನೂ ಕ್ಷೌರಿಕನೂ ವಿವಿಧ ವಿಷಯಗಳ ಕುರಿತು ಹರಟಲಾರಂಭಿಸಿದರು. ಮಾತು ದೇವರ ಅಸ್ತಿತ್ವದತ್ತ ಹೊರಳಿತು.

ಕ್ಷೌರಿಕ ಹೇಳಿದ, “ದೇವರ ಅಸ್ತಿತ್ವದಲ್ಲಿ ನನಗೆ ನಂಬಿಕೆ ಇಲ್ಲ.”

ಕ್ಷೌರ ಮಾಡಿಸಿಕೊಳ್ಳಲು ಬಂದ ಗಿರಾಕಿ ಕೇಳಿದ, “ನೀನು ಹಾಗೆ ಹೇಳಲು ಕಾರಣವೇನು?”

“ದೇವರು ಇಲ್ಲ ಎಂಬ ಅರಿವು ನಿನಗೆ ಆಗಬೇಕಾದರೆ ರಸ್ತೆಗೆ ಹೋದರೆ ಸಾಕು. ನೀವೇ ಹೇಳಿ, ದೇವರು ಇರುವುದು ನಿಜವಾದರೆ, ಇಷ್ಟೊಂದು ರೋಗಿಗಳು ಇರಲು ಹೇಗೆ ಸಾಧ್ಯ? ಇಷ್ಟೊಂದು ಅನಾಥ ಮಕ್ಕಳು ಇರಲು ಹೇಗೆ ಸಾಧ್ಯ? ದೇವರು ನಿಜವಾಗಿಯೂ ಇದ್ದಿದ್ದರೆ ನರಳುವಿಕೆಯೂ ನೋವೂ ಇರುತ್ತಿರಲಿಲ್ಲ.  ಈ ಎಲ್ಲವೂ ಇರಲು ಪ್ರೇಮಮಯೀ ದೇವರು ಅವಕಾಶ ನೀಡುತ್ತಾನೆ ಎಂಬುದನ್ನು ನನ್ನಿಂದ ನಂಬಲಾಗುತ್ತಿಲ್ಲ.”

ಗಿರಾಕಿ ಕ್ಷಣಕಾಲ ಆಲೋಚಿಸಿದನಾದರೂ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಈ ಕುರಿತಾದ ವಾದ-ವಿವಾದದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ. ಕ್ಷೌರಿಕ ತನ್ನ ಕೆಲಸ ಮುಗಿಸಿದ, ಗಿರಾಕಿ ಹಣ ಪಾವತಿಸಿ ಅಲ್ಲಿಂದ ಎದ್ದು ಹೋದ. ಆ ವೇಳೆಗೆ ಸರಿಯಾಗಿ ತಲೆ ಹಾಗು ಮುಖದಲ್ಲಿ ಯದ್ವಾತದ್ವಾ ಉದ್ದನೆಯ ಕೂದಲು ಬೆಳೆದಿದ್ದ ಹರಕು ಬಟ್ಟೆ ಧರಿಸಿದವನೊಬ್ಬ ಬೀದಿಯಲ್ಲಿ ಕ್ಷೌರಿಕನ ಅಂಗಡಿಯ ಮುಂದಿನಿಂದ ಹಾದು ಹೋಗುತ್ತಿದ್ದ. ಅವನ್ನು ಕಂಡ ತಕ್ಷಣವೇ ಹೊರಹೋಗಿದ್ದ ಗಿರಾಕಿ ಒಳಕ್ಕೆ ಧಾವಿಸಿ ಬಂದು ಗಟ್ಟಿಯಾಗಿ ಹೇಳಿದ, “ನಿನಗೆ ಗೊತ್ತಿದೆಯೇ? ಈ ಊರಿನಲ್ಲಿ ಕ್ಷೌರಿಕರು ಅಸ್ತಿತ್ವದಲ್ಲಿಯೇ ಇಲ್ಲ!”

“ನೀವು ಹಾಗೇಕೆ ಹೇಳುತ್ತಿರುವಿರಿ. ನಾನು ಇಲ್ಲಿಲ್ಲವೇ? ಈಗಷ್ಟೇ ನಾನು ನಿಮಗೆ ಕ್ಷೌರ ಮಾಡಲಿಲ್ಲವೇ?” ಕೇಳಿದ ಕ್ಷೌರಿಕ.

“ಇಲ್ಲ,” ತಾನು ಹೇಳುತ್ತಿದ್ದದ್ದನ್ನು ಗಿರಾಕಿ ಮುಂದುವರಿಸಿದ, “ಕ್ಷೌರಿಕರು ಅಸ್ತಿತ್ವದಲ್ಲಿ ಇಲ್ಲ. ಇದ್ದಿದ್ದರೆ ರಸ್ತೆಯಲ್ಲಿ ಹೋಗುತ್ತಿದ್ದಾನೆ ನೋಡು, ಆ ರೀತಿ ಕೂದಲು ಬೆಳೆದವರು ಇರುತ್ತಲೇ ಇರಲಿಲ್ಲ!”

ಆಶ್ಚರ್ಯಚಕಿತನಾದ ಕ್ಷೌರಿಕ ಉದ್ಗರಿಸಿದ, “ಹಾ, ಕ್ಷೌರಿಕರು ಇದ್ದಾರೆ. ವಾಸ್ತವವಾಗಿ ಏನಾಗುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡಿಲ್ಲ. ಕ್ಷೌರ ಮಾಡಿಸಿಕೊಳ್ಳಲು ಜನ ನನ್ನ ಹತ್ತಿರ ಬರದೇ ಹೋದರೆ ನಾನೇನು ಮಾಡಲು ಸಾಧ್ಯ?”

ಗಿರಾಕಿ ಅದನ್ನು ದೃಢೀಕರಿಸಿದ, “ಖಂಡಿತ. ಅದೇ ರೀತಿ ದೇವರೂ ಇದ್ದಾನೆ. ನಿಜವಾಗಿ ಏನಾಗುತ್ತಿದೆ ಅಂದರೆ, ಜನ ದೇವರನ್ನು ಹುಡುಕಿಕೊಂಡು ಹೋಗಿ ನೋಡುವ ಪ್ರಯತ್ನವನ್ನೇ ಮಾಡುತ್ತಿಲ್ಲ!”

೬೭. ದೇವರ ಹೆಂಡತಿ!

ನ್ಯೂಯಾರ್ಕ್‌ ನಗರದಲ್ಲಿ ಡಿಸೆಂಬರ್‌ ತಿಂಗಳ ಬಲು ಚಳಿ ಇದ್ದ ಒಂದು ದಿನ. ಚಳಿಯಿಂದ ಗಡಗಡನೆ ನಡುಗುತ್ತಿದ್ದ ೧೦ ವರ್ಷ ವಯಸ್ಸಿನ ಬಡ ಬಾಲಕನೊಬ್ಬ ಪಾದರಕ್ಷೆಗಳ ಅಂಗಡಿಯೊಂದರ ಮುಂದೆ ಬರಿಗಾಲಿನಲ್ಲಿ ನಿಂತುಕೊಂಡು ಕಿಟಕಿಯ ಮೂಲಕವಾಗಿ ಕೆಲವು ಪಾದರಕ್ಷೆಗಳನ್ನು ದಿಟ್ಟಿಸಿ ನೋಡುತ್ತಿದ್ದ.

ಇದನ್ನು ಗಮನಿಸಿದ ಮಹಿಳೆಯೊಬ್ಬಳು ಬಾಲಕನನ್ನು ಸಮೀಪಿಸಿ ಕೇಳಿದಳು, “ಮಗೂ, ಆ ಕಿಟಕಿಯ ಮೂಲಕ ಅದೇನನ್ನು ಹಾಗೆ ದಿಟ್ಟಿಸಿ ನೋಡುತ್ತಿರುವೆ?”

ಬಾಲಕ ಉತ್ತರಿಸಿದ, “ನನಗೊಂದು ಜೊತೆ ಪಾದರಕ್ಷೆಗಳನ್ನು ಕೊಡುವಂತೆ ದೇವರನ್ನು ಕೇಳುತ್ತಿದ್ದೆ!”

ಆ ಮಹಿಳೆ ನಸುನಕ್ಕು ಅವನನ್ನು ಅಂಗಡಿಯ ಒಳಕ್ಕೆ ಕರೆದೊಯ್ದು ಅಂಗಡಿಯವನ ಅನುಮತಿ ಪಡೆದು ಶೌಚಾಲಯ ವ್ಯವಸ್ಥೆ ಇದ್ದ ಪುಟ್ಟ ಕೋಣೆಯಲ್ಲಿ ಅವನ ಕೈಕಾಲುಗಳನ್ನು ತೊಳೆಯಿಸಿ ಅವು ಒಣಗಿದ ನಂತರ ಅವನ ಪಾದಗಳ ಅಳತೆಗೆ ಹೊಂದಾಣಿಕೆ ಆಗುವಂಥ ಉಣ್ಣೆಯ ಬೆಚ್ಚನೆಯ ಕಾಲುಚೀಲ ಹಾಗೂ ಶೂ ತೊಡಿಸಿ ಕೇಳಿದಳು, “ಈಗ ಹಿಂದಿಗಿಂತ ಬೆಚ್ಚಗಾಗಿ ಹಿತಕರವಾಗಿದೆಯಲ್ಲವೇ?”

ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದ ಆತ ಅವಳ ಮುಖವನ್ನೇ ನೋಡುತ್ತಾ ಮರುಪ್ರಶ್ನೆ ಹಾಕಿದ, “ನೀವು ದೇವರ ಹೆಂಡತಿಯೇ?”

೬೮. ಪ್ರೀತಿಯ ಕಣ್ಣುಗಳು

 ಮುಖದಲ್ಲಿ ತುಂಬ ಹೊಳೆಯುವ ಕೆಂಪು ಕಲೆಗಳು ಇದ್ದ ಪುಟ್ಟ ಬಾಲಕಿಯೊಬ್ಬಳು ತನ್ನ ಅಜ್ಜಿಯೊಡನೆ ಮೃಗಾಲಯದಲ್ಲಿ ಸುತ್ತಾಡುತ್ತಿದ್ದಳು. ಅಲ್ಲಿದ್ದ ಸ್ಥಳೀಯ ಕಲಾವಿದನೊಬ್ಬನ ಕೈನಿಂದ ಹುಲಿಯ ಪಂಜದ ಗುರುತುಗಳನ್ನು ಹೋಲುವ ಚಿತ್ರಗಳನ್ನು ತಮ್ಮ ಮುಖದಲ್ಲಿ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಬರೆಯಿಸಿಕೊಳ್ಳುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕಿ ತಾನೂ ಚಿತ್ರಗಳನ್ನು ಮುಖದಲ್ಲಿ ಬರೆಯಿಸಿಕೊಳ್ಳಲೋಸುಗ ಸರತಿ ಸಾಲಿನಲ್ಲಿ ನಿಂತುಕೊಂಡಳು. ಅವಳನ್ನು ನೋಡಿದ ಹುಡುಗನೊಬ್ಬ ಗಟ್ಟಿಯಾಗಿ ಹೇಳಿದ, “ನಿನ್ನ ಮುಖದಲ್ಲಿ ಚಿತ್ರ ಬರೆಯಲು ಜಾಗವೇ ಇಲ್ಲದಷ್ಟು ಕಲೆಗಳು ಇವೆಯಲ್ಲ!” ಮುಜುಗರಕ್ಕೀಡಾದ ಪುಟ್ಟ ಬಾಲಕಿ ತಲೆ ತಗ್ಗಿಸಿ ನಿಂತುಕೊಢಳು. ಅವಳ ಅಜ್ಜಿ ಅವಳ ಬಳಿ ಮಂಡಿಯೂರಿ ಕುಳಿತು ಹೇಳಿದಳು, “ನಾನು ನಿನ್ನ ಮುಖದಲ್ಲಿರುವ ಕಲೆಗಳನ್ನು ಪ್ರೀತಿಸುತ್ತೇನೆ.” ಬಾಲಕಿ ಪ್ರತಿಕ್ರಿಯಸಿದಳು. “ನಾನು ಪ್ರೀತಿಸುವುದಿಲ್ಲ.”

ಅಜ್ಜಿ ತನ್ನ ಮಾತನ್ನು ಮುಂದುವರಿದಳು: “ನಾನು ಚಿಕ್ಕವಳಿದ್ದಾಗ ನನ್ನ ಮುಖದಲ್ಲಿ ಕಲೆಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ಅಂದುಕೊಳ್ಳುತ್ತಿದ್ದೆ. ಏಕೆಂದರೆ ಕಲೆಗಳು ಸುಂದರವಾಗಿರುತ್ತವೆ.”

“ನಿಜವಾಗಿಯೂ?” ಕೇಳಿದಳು ಬಾಲಕಿ.

“ಖಂಡಿತ. ಇಂಥ ಕಲೆಗಳಿಗಿಂತ ಸುಂದರವಾಗಿರುವ ಬೇರೆ ಒಂದನ್ನು ಹೆಸರಿಸು ನೋಡೋಣ,” ಅಂದಳು ಅಜ್ಜಿ.

ನಸುನಗುತ್ತಿದ್ದ ಅಜ್ಜಿಯ ಮುಖವನ್ನೇ ದಿಟ್ಟಿಸಿ ನೋಡುತ್ತಾ ಬಾಲಕಿ ಮಿದುವಾಗಿ ಉತ್ತರಿಸಿದಳು, “ಮುಖದ ಚರ್ಮದಲ್ಲಿನ ಸುಕ್ಕುಗಳು.”

೬೯. ಆಚೆ ಕಡೆ

ರೋಗಿಯೊಬ್ಬ ತಪಾಸಣಾ ಕೊಠಡಿಯಿಂದ ಹೊರಹೋಗಲು ಸಿದ್ಧತೆ ಮಾಡಿಕೊಳ್ಳುತ್ತಾ ವೈದ್ಯರತ್ತ ತಿರುಗಿ ಹೇಳಿದ, “ಡಾಕ್ಟ್ರೇ, ನಾನು ಸಾಯುವುದಕ್ಕೆ ಹೆದರುತ್ತಿದ್ದೇನೆ. ಆಚೆ ಕಡೆ ಏನಿದೆ ಎಂಬುದನ್ನು ಹೇಳುವಿರಾ?”

ವೈದ್ಯರು ಮಿದುವಾಗಿ ಉತ್ತರಿಸಿದರು, “ನನಗೆ ಗೊತ್ತಿಲ್ಲ ….”

“ನಿಮಗೆ ಗೊತ್ತಿಲ್ಲವೇ? ನೀವು ಒಬ್ಬ ಕ್ರಿಶ್ಚಿಯನ್‌, ಆದರೂ ನಿಮಗೆ ಆಚೆ ಕಡೆ ಏನಿದೆ ಎಂಬುದು ಗೊತ್ತಿಲ್ಲವೇ?”

ವೈದ್ಯರು ರೋಗಿಯನ್ನು ಹೊರಕ್ಕೆ ಕಳುಹಿಸಲು ಬಾಗಿಲು ತೆರೆಯಲೋಸುಗ ಅದರ ಹಿಡಿಕೆಯನ್ನು ಹಿಡಿದುಕೊಂಡ ತಕ್ಷಣ ಆಚೆ ಕಡೆಯಿಂದ ಬಾಗಿಲು ಕೆರೆಯುವ ಹಾಗು ಕುಂಯ್‌ಗುಟ್ಟುವ ಧ್ವನಿ ಕೇಳಿಸಿತು. ಬಾಗಿಲು ತೆರೆದ ತಕ್ಷಣ ನಾಯಿಯೊಂದು ಒಳಕ್ಕೆ ಹಾರಿ ಆನಂದದಿಂದ ವೈದ್ಯರ ಸುತ್ತ ಕುಣಿಯಲಾರಂಭಿಸಿತು.

ವೈದ್ಯರು ಹೇಳಿದರು, “ಇದು ನನ್ನ ನಾಯಿ. ಅದು ಈ ಕೋಣೆಯೊಳಕ್ಕೆ ಇದಕ್ಕೆ ಮೊದಲು ಬಂದೇ ಇರಲಿಲ್ಲ. ಈ ಕೋಣೆಯೊಳಗೆ ತನ್ನ ಯಜಮಾನನ ಹೊರತಾಗಿ ಬೇರೆ ಏನಿದೆ ಎಂಬುದು ಅದಕ್ಕೆ ಗೊತ್ತಿರಲಿಲ್ಲ. ಆದ್ದರಿಂದ ಬಾಗಿಲು ತೆರೆದ ತಕ್ಷಣ ಯಾವ ಭಯವೂ ಇಲ್ಲದೆ ಅದು ಒಳಕ್ಕೆ ಹಾರಿ ಬಂದಿತು. ಸಾವಿನ ಆಚೆ ಬದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೂ ಒಂದು ವಿಷಯ ತಿಳಿದಿದೆ….

ಆಚೆ ಕಡೆ ನನ್ನ ಪ್ರಭು ಇದ್ದಾರೆ ಎಂಬುದು ನನಗೆ ತಿಳಿದಿದೆ. ನನಗೆ ಅಷ್ಟೇ ಸಾಕು!”

೭೦. ಪ್ರೋತ್ಸಾಹದ ಶಕ್ತಿ

ವಯಸ್ಸಾದ ವ್ಯಕ್ತಿಯೊಬ್ಬ ೧೯ ನೆಯ ಶತಮಾನದ ಖ್ಯಾತ ಕವಿ ಹಾಗು ಚಿತ್ರಕಾರ ಡಾಂಟಿ ಗೇಬ್ರಿಯಾಲ್‌ ರೋಸೆಟಿ ಅನ್ನು ಸಮೀಪಿಸಿದ. ತಾನು ತಂದಿದ್ದ ಕೆಲವು ಚಿತ್ರಗಳನ್ನೂ ರೇಖಾಚಿತ್ರಗಳನ್ನೂ ಅವನಿಗೆ ಕೊಟ್ಟು ಅವನ್ನು ನೋಡಿ ಚೆನ್ನಾಗಿವೆಯೇ ಇಲ್ಲವೇ ಎಂಬುದನ್ನು ಅಥವ ಅದನ್ನು ಬರೆದಾತನಲ್ಲಿ ಮುಂದೆ ಉತ್ತಮ ಚಿತ್ರಕಾರನಾಗುವ ಸಾಮರ್ಥ್ಯ ಇದೆಯೇ ಎಂಬುದನ್ನು ತಿಳಿಸುವಂತೆ ವಿನಂತಿಸಿದ. ರೋಸೆಟಿ ಅವನ್ನು ಬಲು ಎಚ್ಚರಿಕೆಯಿಂದ ಪರಿಶೀಲಿಸಿ ಅವು ಚೆನ್ನಾಗಿಲ್ಲವೆಂಬುದಾಗಿಯೂ ಅವನ್ನು ರಚಿಸಿದವ ಮುಂದೆ ಚಿತ್ರಕಾರನಾಗುವ ಲಕ್ಷಣಗಳು ಕಿಂಚಿತ್ತೂ ಗೋಚರಿಸುತ್ತಿಲ್ಲವೆಂಬುದಾಗಿಯೂ ಆ ಹಿರಿಯನ ಮನಸ್ಸಿಗೆ ನೋವಾಗದ ರೀತಿಯಲ್ಲಿ ಬಲು ನಾಜೂಕಾಗಿ ತಿಳಿಸಿದ. ಅದನ್ನು ಕೇಳಿ ಆ ಹಿರಿಯನಿಗೆ ತುಸು ಬೇಸರವಾದರೂ ರೋಸೆಟಿಯ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆ ಕೋರಿ ಇನ್ನೊಂದಷ್ಟು ಚತ್ರಗಳನ್ನು ಕೊಟ್ಟು ಹೇಳಿದ, “ಇವನ್ನೂ ಒಮ್ಮೆ ಪರಿಶೀಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಇವು ಬೇರೆ ಒಬ್ಬ ಯುವ ಚಿತ್ರಕಲಾ ವಿದ್ಯಾರ್ಥಿಯ ಕಲಾಕೃತಿಗಳು.”

ರೋಸೆಟಿ ಅವನ್ನು ಪರಿಶೀಲಿಸಿ ತಕ್ಷಣ ಹೇಳಿದ, “ಇವು ಚೆನ್ನಾಗಿವೆ. ಶ್ರದ್ಧೆಯಿಂದ ಕಲಿಯುವಿಕೆಯನ್ನು ಮುಂದುವರಿಸಿದರೆ ಇವುಗಳನ್ನು ಬರೆದವನಿಗೆ ಉಜ್ವಲ ಭವಿಷ್ಯವಿದೆ. ಇವನನ್ನು ಪ್ರೋತ್ಸಾಹಿಸುವುದಷ್ಟೇ ಅಲ್ಲದೆ ಅವಶ್ಯವಿದ್ದರೆ ಆರ್ಥಿಕ ನೆರವನ್ನೂ ಕೊಡಿಸುವುದು ಒಳ್ಳೆಯದು. ಅಂದ ಹಾಗೆ, ಯಾರು ಈ ಯುವ ಕಲಾವಿದ? ನಿಮ್ಮ ಮಗನೇ?”

ಹಿರಿಯ ಹೇಳಿದ, “ಅಲ್ಲ. ಅವನ್ನು ನಾನೇ ರಚಿಸಿದ್ದು, ೪೦ ವರ್ಷಗಳ ಹಿಂದೆ. ಅಂದು ಯಾರಾದರೂ ಈಗ ನೀವು ಹೇಳಿದಂತೆ ಹೇಳಿದ್ದಿದ್ದರೆ ನಾನೊಬ್ಬ ಮಹಾನ್‌ ಕಲಾವಿದನಾಗುತ್ತಿದ್ದೆನೋ ಏನೋ? ಆಗ ಯಾರೂ ನನ್ನನ್ನು ಪ್ರೋತ್ಸಾಹಿಸಲಿಲ್ಲ. ತತ್ಪರಿಣಾಮವಾಗಿ ನಾನು ಕಲಿಯುವುದನ್ನು ಬಿಟ್ಟುಬಿಟ್ಟೆ. ನೀವು ಮೊದಲು ನೋಡಿ ಚೆನ್ನಾಗಿಲ್ಲವೆಂಬುದಾಗಿ ಹೇಳಿದ ಚಿತ್ರಗಳನ್ನೂ ನಾನೇ ರಚಿಸಿದ್ದು, ಇತ್ತೀಚೆಗೆ!”

೭೧. ಮಿತ್ರನಿಗೆ ಯಾವಾಗಲೂ ಜಾಗವಿದೆ

ಪ್ರಾಧ್ಯಾಪಕರೊಬ್ಬರು ಬೋಧಿಸಲು ಆರಂಭಿಸಿದರು. ಮೊದಲು ಅವರು ಗಾಜಿನ ಒಂದು ದೊಡ್ಡ ಖಾಲಿ ಜಾಡಿಯನ್ನು ತೆಗೆದುಕೊಂಡು ಅದರೊಳಕ್ಕೆ ಗಾಲ್ಫ್‌ ಚೆಂಡುಗಳನ್ನು ತುಂಬಿಸಿದರು. ಜಾಡಿ ತುಂಬಿದೆಯೇ ಎಂಬುದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಎಲ್ಲರೂ ತುಂಬಿದೆ ಎಂಬುದಾಗಿ ಉತ್ತರಿಸಿದರು.

ತದನಂತರ ಪ್ರಾಧ್ಯಾಪಕರು ಸಣ್ಣ ಹರಳು ಕಲ್ಲುಗಳನ್ನು ತೆಗೆದುಕೊಂಡು ಅವನ್ನು ಜಾಡಿಯೊಳಕ್ಕೆ ಹಾಕಿ ಅಲುಗಾಡಿಸಿದಾಗ ಅವು ಚೆಂಡುಗಳ ಮಧ್ಯೆ ಇದ್ದ ಖಾಲಿ ಸ್ಥಳಗಳಲ್ಲಿ ಸೇರಿಕೊಂಡವು. ಪುನಃ ಜಾಡಿ ತುಂಬಿದೆಯೇ ಎಂಬುದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಎಲ್ಲರೂ ತುಂಬಿದೆ ಎಂಬುದಾಗಿ ಉತ್ತರಿಸಿದರು.

ಪ್ರಾಧ್ಯಪಕರು ಸ್ವಲ್ಪ ಮರಳನ್ನು ತೆಗೆದುಕೊಂಡು ಜಾಡಿಯೊಳಕ್ಕೆ ಹಾಕಿ ಅಲುಗಾಡಿಸಿದಾಗ ಅವು ಚೆಂಡುಗಳ ಹಾಗು ಕಲ್ಲುಗಳ ಮಧ್ಯೆ ಇದ್ದ ಖಾಲಿ ಸ್ಥಳಗಳಲ್ಲಿ ಸೇರಿಕೊಂಡವು. ಪುನಃ ಜಾಡಿ ತುಂಬಿದೆಯೇ ಎಂಬುದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಎಲ್ಲರೂ ತುಂಬಿದೆ ಎಂಬುದಾಗಿ ಉತ್ತರಿಸಿದರು.

ಆನಂತರ ಪ್ರಾಧ್ಯಾಪಕರು ಒಂದು ದೊಡ್ಡ ಲೋಟದ ತುಂಬ ನೀರನ್ನು ಜಾಡಿಯೊಳಕ್ಕೆ ಸುರಿದರು. ಮರಳುಗಳ ಕಣಗಳ ಎಡೆಯಲ್ಲಿ ನೀರು ಸೇರಿಕೊಂಡಿತು. ವಿದ್ಯಾರ್ಥಿಗಳೆಲ್ಲರೂ ಗಟ್ಟಿಯಾಗಿ ನಕ್ಕರು.

ತರಗತಿ ಶಾಂತ ಸ್ಥಿತಿಗೆ ಮರಳಿದ ನಂತರ ಪ್ರಾಧ್ಯಾಪಕರು ತಾನು ಮಾಡಿದ ಪ್ರಯೋಗವನ್ನು ಇಂತು ವಿವರಿಸಿದರು: “ಜಾಡಿಯು ನಿಮ್ಮ ಜೀವನ ಎಂಬುದಾಗಿ ಕಲ್ಪಿಸಿಕೊಳ್ಳಿ. ಗಾಲ್ಫ್‌ ಚೆಂಡುಗಳು ನಿಮ್ಮ ಜೀವನದ ಬಹು ಮುಖ್ಯ ಅಂಶಗಳು: ನಿಮ್ಮ ತಂದೆ ತಾಯಿ, ನಿಮ್ಮ ಹೆಂಡತಿ, ನಿಮ್ಮ ಮಕ್ಕಳು, ನಿಮ್ಮ ಆರೋಗ್ಯ, ನಿಮ್ಮ ಸ್ನೇಹಿತರು, ಹಾಗು ನಿಮಗೆ ಬಲು ಪ್ರಿಯವಾದ ಹವ್ಯಾಸಗಳು. ಬೇರೆ ಎಲ್ಲವೂ ನಷ್ಟವಾಗಿ ಇವು ಮಾತ್ರ ಉಳಿದುಕೊಂಡಿದ್ದರೂ ನಿಮ್ಮ ಜೀವನಕ್ಕೇನೂ ಕುಂದುಂಟಾಗುವುದಿಲ್ಲ. ಚಿಕ್ಕ ಹರಳು ಕಲ್ಲುಗಳೇ ನಿಮ್ಮ ಉದ್ಯೋಗ, ನಿಮ್ಮ ಮನೆ, ನಿಮ್ಮ ಕಾರ್‌ ಮುಂತಾದ ಅನಿವಾರ್ಯ ‘ಬೇಕು’ಗಳು. ಉಳಿದೆಲ್ಲವೂ ಮರಳಿನಂತೆ – ಸಣ್ಣಪುಟ್ಟ ಅಂಶಗಳು, ಇಲ್ಲದಿದ್ದರೂ ತೊಂದರೆ ಇಲ್ಲ. ಜಾಡಿಯೊಳಕ್ಕೆ ಮೊದಲೇ ಮರಳನ್ನು ತುಂಬಿದರೆ ಗಾಲ್ಫ್‌ ಚೆಂಡುಗಳಿಗೂ ಹರಳು ಕಲ್ಲುಗಳಿಗೂ ಸ್ಥಾಳಾವಕಾಶವೇ ಇಲ್ಲದಂತಾಗುತ್ತದೆ. ಜೀವನ ದುರ್ಭರವಾಗುತ್ತದೆ. ಈ ಸಣ್ಣಪುಟ್ಟ ಅಂಶಗಳಿಗಾಗಿ ನೀವು ನಿಮ್ಮೆಲ್ಲ ಸಮಯವನ್ನೂ ಶಕ್ತಿಯನ್ನೂ ವ್ಯಯಿಸಿದರೆ ಮುಖ್ಯವಾದವಕ್ಕೆ ಜಾಗವೇ ಇರುವುದಿಲ್ಲ. ನಿಮ್ಮ ಜೀವನದ ಪ್ರಮುಖ ಅಂಶಗಳಿಗೆ ಹೆಚ್ಚು ಗಮನ ಕೊಡಿ. ನಿಮ್ಮ ತಂದೆತಾಯಿಯರಿಗಾಗಿ, ನಿಮ್ಮ ಹೆಂಡತಿ ಮಕ್ಕಳಿಗಾಗಿ ತುಸು ಸಮಯ ಮೀಸಲಿಡಿ. ಮನೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮಾಡಲೇ ಬೇಕಾದ ಕೆಲಸಗಳಿಗೆ ಯಾವಾಗಲೂ ಸಮಯ ಮೀಸಲಾಗಿಟ್ಟುಕೊಳ್ಳಲೇ ಬೇಕು. ಮೊದಲು ಗಾಲ್ಫ್‌ ಚೆಂಡುಗಳು ತದನಂತರ ಹರಳು ಕಲ್ಲುಗಳನ್ನು  ಸಂರಕ್ಷಿಸಿ. ನಿಮ್ಮ ಆದ್ಯತೆಗಳನ್ನು ಜಾಗರೂಕತೆಯಿಂದ ನಿರ್ಧರಿಸಿ. ಮಿಕ್ಕವೆಲ್ಲವೂ ಮರಳು, ಇಲ್ಲದೇ ಇದ್ದರೂ ತೊಂದರೆ ಇಲ್ಲ.”

ಒಬ್ಬ ವಿದ್ಯಾರ್ಥಿ ಕೈಎತ್ತಿದ ಹಾಗು ನೀರು ಏನನ್ನು ಪ್ರತಿನಿಧಿಸುತ್ತದೆ ಎಂಬುದನ್ನು ವಿಚಾರಿಸಿದ. ಪ್ರಾಧ್ಯಾಪಕರು ನಸುನಕ್ಕು ಹೇಳಿದರು, “ನೀನು ಕೇಳಿದ್ದು ಒಳ್ಳೆಯದೇ ಆಯಿತು. ನಿನ್ನ ಜೀವನ ಎಷ್ಟು ಸಂಪೂರ್ಣವಾಗಿದ್ದರೂ ಸರಿಯೇ, ಆತ್ಮೀಯ ಮಿತ್ರನೊಂದಿಗೆ ಪಾನೀಯ ಸೇವಿಸಲು ಸಮಯವಿದ್ದೇ ಇರುತ್ತದೆ.”

೭೨. ನಿಮ್ಮ ಮೌಲ್ಯ

ಸುಪರಿಚಿತ ವಿದ್ವಾಂಸರೊಬ್ಬರು ವಿಚಾರಗೋಷ್ಟಿಯೊಂದರಲ್ಲಿ ತಾವು ಹೇಳಬೇಕೆಂದುಕೊಂಡಿದ್ದನ್ನು ಇಂತು ಹೇಳಲು ಆರಂಭಿಸಿದರು:

ಸುಮಾರು ೨೦೦ ಮಂದಿ ಶ್ರೋತೃಗಳ ಮುಂದೆ $೨೦ ನೋಟ್‌ ಅನ್ನು ಪ್ರದರ್ಶಿಸಿ ಕೇಳಿದರು, “ಇದನ್ನು ತೆಗೆದುಕೊಳ್ಳಲು ಯಾರು ಸಿದ್ಧರಿದ್ದೀರಿ?”

ಹೆಚ್ಚುಕಮ್ಮಿ ಎಲ್ಲ ಕೈಗಳೂ ಮೇಲಕ್ಕೆ ಹೋದವು.

ವಿದ್ವಾಂಸರು ಹೇಳಿದರು, “ನಿಮ್ಮ ಪೈಕಿ ಒಬ್ಬರಿಗೆ ಇದನ್ನು ಕೊಡುತ್ತೇನೆ. ಅದಕ್ಕೂ ಮೊದಲು ಹೀಗೆ ಮಾಡುತ್ತೇನೆ.”

ಅವರು ಆ ನೋಟ್‌ಅನ್ನು ಚೆನ್ನಾಗಿ ಹಿಸುಕಿ ಮುದ್ದೆ ಮಾಡಿದರು.

ತದನಂತರ ಕೇಳಿದರು, “ಈಗ ಇದನ್ನು ತೆಗೆದುಕೊಳ್ಳಲು ಯಾರು ಸಿದ್ಧರಿದ್ದೀರಿ?”

ಈಗಲೂ ಹೆಚ್ಚುಕಮ್ಮಿ ಎಲ್ಲ ಕೈಗಳೂ ಮೇಲಕ್ಕೆ ಹೋದವು.

ವಿದ್ವಾಂಸರು ನೋಟ್‌ನ ಮುದ್ದೆಯನ್ನು ನೆಲಕ್ಕೆ ಹಾಕಿ ಪಾದರಕ್ಷೆಯಿಂದ ಅದನ್ನು ತುಳಿದು ಚೆನ್ನಾಗಿ ಅತ್ತಿತ್ತ ಉಜ್ಜಿದರು. ತದನಂತರ ಅದನ್ನು ತೆಗೆದುಕೊಂಡು ಬಿಡಿಸಿ ಸುಕ್ಕುಸುಕ್ಕಾಗಿಯೂ ಮಣ್ಣು ಮೆತ್ತಿಕೊಂಡು ತುಂಬ ಕೊಳಕಾಗಿಯೂ ಇದ್ದ ನೋಟ್‌ಅನ್ನು ತೋರಿಸಿ ಕೇಳಿದರು, “ಈಗ ಇದನ್ನು ತೆಗೆದುಕೊಳ್ಳಲು ಯಾರು ಸಿದ್ಧರಿದ್ದೀರಿ?”

ಈಗಲೂ ಹೆಚ್ಚುಕಮ್ಮಿ ಎಲ್ಲ ಕೈಗಳೂ ಮೇಲಕ್ಕೆ ಹೋದವು.

ಅವರು ತಮ್ಮ ಭಾಷಣ ಮುಂದುವರಿಸಿದರು: “ಮಿತ್ರರೇ, ನೋಟ್‌ಅನ್ನು ನಾನು ಏನೇ ಮಾಡಿದರೂ ನೀವು ಅದನ್ನು ಸ್ವೀಕರಿಸಲು ಸಿದ್ದಾವಾಗಿದ್ದಿರಿ. ಏಕೆಂದರೆ ನಾನು ಏನೇ ಮಾಡಿದರೂ ಅದರ ಮೌಲ್ಯ ಕಿಂಚಿತ್ತೂ ಕಮ್ಮಿ ಆಗಲಿಲ್ಲ ಎಂಬುದು ನಿಮಗೆ ತಿಳಿದಿತ್ತು. ನಮ್ಮ ಜೀವನದಲ್ಲಿಯೂ ಇಂತೆಯೇ, ನಮಗೆ ಏನೇನೋ ಆಗುತ್ತದಾದರೂ ಕೆಲವೊಮ್ಮೆ ನಮಗೆ ಬೆಲೆಯೇ ಇಲ್ಲ ಎಂಬುದಾಗಿ ಅನ್ನಿಸಿದರೂ ನಾವು ನಿಷ್ಪ್ರಯೋಜಕರು ಎಂಬುದಾಗಿ ನಮಗನ್ನಿಸಿದರೂ ನಿಮ್ಮ ಪ್ರೀತಿಪಾತ್ರರ ಹಾಗು ಆತ್ಮೀಯರ ದೃಷ್ಟಿಯಲ್ಲಿ ನಿಮ್ಮ ಮೌಲ್ಯ ಕಮ್ಮಿ ಆಗುವುದಿಲ್ಲ. ನಮ್ಮ ಮೌಲ್ಯ ನಿರ್ಧರಿಸಲ್ಪಡುವುದು ನಾವು ಎಂಥವರು ಎಂಬುದನ್ನು ಆಧರಿಸಿಯೇ ವಿನಾ ನಮ್ಮ ಹತ್ತಿರ ಏನಿದೆ, ನಮಗೆ ಏನು ಗೊತ್ತಿದೆ, ನಮಗೆ ಯಾರನ್ನು ಗೊತ್ತಿದೆ ಎಂಬುದನ್ನು ಆಧರಿಸಿ ಅಲ್ಲ. ನೀವೊಬ್ಬರು ಅದ್ವಿತೀಯ ವಿಶೇಷ ವ್ಯಕ್ತಿ. ಇದನ್ನು ಎಂದಿಗೂ ಮರೆಯದಿರಿ.”

೭೩. ಇನ್ನೂ ಐದು ನಿಮಿಷ …..

ಉದ್ಯಾನವನದಲ್ಲಿ ಇದ್ದ ಮಕ್ಕಳ ಆಟದ ತಾಣದ ಅಂಚಿನಲ್ಲಿ ಇದ್ದ ಬೆಂಚೊಂದರಲ್ಲಿ ಕುಳಿತ್ತಿದ್ದ ಒಬ್ಬ ಪುರುಷನ ಸಮೀಪದಲ್ಲಿ ಮಹಿಳೆಯೊಬ್ಬಳು ಬಂದು ಕುಳಿತಳು. “ಅಲ್ಲಿ ಆಡುತ್ತಿರುವುದು ನನ್ನ ಮಗ,” ಅವನಿಗೆ ಜಾರುಗುಪ್ಪೆಯಲ್ಲಿ ಜಾರುತ್ತಿದ್ದ ಉಣ್ಣೆಯ ಕೆಂಪು ಅಂಗಿ ಧರಿಸಿದ್ದ ಬಾಲಕನನ್ನು ತೋರಿಸಿ ಹೇಳಿದಳು ಆಕೆ. “ಓ, ಹೌದೇನು? ಹುಡುಗ ಲಕ್ಷಣವಾಗಿದ್ದಾನೆ,” ಪ್ರತಿಕ್ರಿಯಿಸಿ ಪುರುಷ ಹೇಳಿದ, “ಉಣ್ಣೆಯ ನೀಲಿ ಅಂಗಿ ಧರಿಸಿ ಅಲ್ಲಿ ಉಯ್ಯಾಲೆಯಲ್ಲಿ ಆಡುತ್ತಿರುವುದು ನನ್ನ ಮಗ.” ತದನಂತರ ತನ್ನ ಕೈಗಡಿಯಾರ ನೋಡಿ ಮಗನನ್ನು ಕರೆದು ಹೇಳಿದ, “ಟಾಡ್‌, ನಾವು ಮನೆಗೆ ಹೋಗೋಣವೇ?”

“ಇನ್ನೈದು ನಿಮಿಷ ಅಪ್ಪಾ. ದಯವಿಟ್ಟು ಇನ್ನು ಐದು ನಿಮಿಷಗಳು ಮಾತ್ರ,” ಗೋಗರೆದ ಆ ಬಾಲಕ. ಪುರುಷ ಸಮ್ಮತಿಸಿದ, ಬಾಲಕ ಆಟವಾಡುವುದನ್ನು ಮುಂದುವರಿಸಿದ. ನಿಮಿಷಗಳು ಉರುಳಿದವು. ಪುರುಷ ಎದ್ದು ನಿಂತು ಮಗನನ್ನು ಕರದು ಕೇಳಿದ. “ಈಗ ಹೋಗೋಣವೇ?” ಪುನಃ “ಇನ್ನೈದು ನಿಮಿಷ ಅಪ್ಪಾ. ದಯವಿಟ್ಟು ಇನ್ನು ಐದು ನಿಮಿಷಗಳು ಮಾತ್ರ,” ಗೋಗರೆದ ಆ ಬಾಲಕ. ಪುರುಷ ನಸುನಕ್ಕು ಸಮ್ಮತಿಸಿದ, ಬಾಲಕ ಆಟವಾಡುವುದನ್ನು ಮುಂದುವರಿಸಿದ. ಇವೆಲ್ಲವನ್ನೂ ಗಮನಿಸುತ್ತಿದ್ದ ಮಹಿಳೆ ಪ್ರತಿಕ್ರಿಯಿಸಿದಳು, “ನೀವು ನಿಜವಾಗಿಯೂ ಒಬ್ಬ ಅಪಾರ ತಾಳ್ಮೆ ಉಳ್ಳ ಅಪ್ಪ!” ಅವನು ನಸುನಕ್ಕು ಹೇಳಿದ, “ಕಳೆದ ವರ್ಷ ಇಲ್ಲಿಂದ ತುಸು ದೂರದಲ್ಲಿ ಸೈಕಲ್‌ ಸವಾರಿ ಮಾಡುತ್ತಿದ್ದ ನನ್ನ ಹಿರಿಯ ಮಗ ಟಾಮ್ಮಿಗೆ ಕುಡುಕ ಚಾಲಕನೊಬ್ಬ ಢಿಕ್ಕಿ ಹೊಡೆದದ್ದರಿಂದ ಅವನು ಸತ್ತು ಹೋದ. ಅವನೊಂದಿಗೆ ನಾನು ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಅವನೊಂದಿಗೆ ಪ್ರತೀದಿನ ಒಂದೈದು ನಿಮಿಷವಾದರೂ ಕಳೆದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ಈಗ ಅನ್ನಿಸುತ್ತಿದೆ. ಅದೇ ತಪ್ಪನ್ನು ಟಾಡ್‌ನೊಂದಿಗೂ ಮಾಡಬಾರದೆಂಬುದಾಗಿ ಪ್ರತಿಜ್ಞೆ ಮಾಡಿದ್ದೇನೆ. ಇನ್ನೂ ಐದು ನಿಮಿಷ ಹೆಚ್ಚು ಕಾಲವನ್ನು ಉಯ್ಯಾಲೆಯಲ್ಲಿ ಆಡಬಹುದು ಎಂಬುದಾಗಿ ಅವನು ಖುಷಿ ಪಡುತ್ತಿದ್ದಾನೆ. ನಿಜ ಹೇಳುವುದಾದರೆ, ಇನ್ನೂ ಐದು ನಿಮಿಷ ಹೆಚ್ಚು ಕಾಲ ಅವನು ಆಟವಾಡುವುದನ್ನು ನೋಡಿ ನಾನು ಆನಂದಿಸುತ್ತಿದ್ದೇನೆ!”

೭೪. ಒಂದು ಸುಂದರ ನಿಜವಾದ ಪ್ರೇಮದ ಕತೆ

ಒಂದು ದಿನ ಒಬ್ಬ ಯುವಕ ಹಾಗು ಒಬ್ಬಳು ಯುವತಿ ಪರಸ್ಪರ ಪ್ರೀತಿಸಲಾರಂಭಿಸಿದರು. ಯುವಕ ಬಲು ಬಡ ಕುಟುಂಬದವನಾದದ್ದರಿಂದ ಯುವತಿಯ ತಂದೆ ತಾಯಿಯರಿಗೆ ಅವರೀರ್ವರು ವಿವಾಹವಾಗುವುದು ಇಷ್ಟವಿರಲಿಲ್ಲ. ಆದ್ದರಿಂದ ಆ ಯುವಕ ಅವರ ಮನವೊಲಿಸಲು ಬಹಳ ಪ್ರಯತ್ನಿಸಿದ ಹಾಗೂ ಯಶಸ್ವಿಯೂ ಆದ. ಅಷ್ಟರಲ್ಲಿಯೇ ಇನ್ನೊಂದು ಸಮಸ್ಯೆ ಎದುರಾಯಿತು. ಆ ಯುವಕ ಒಬ್ಬ ಸೈನಿಕನಾಗಿದ್ದ. ಒಂದು ವರ್ಷದ ಮಟ್ಟಿಗೆ ಅವನು ಯುದ್ಧನಡೆಯುತ್ತಿದ್ದ ಪರರಾಷ್ಟ್ರವೊಂದಕ್ಕೆ ಹೋಗಲೇಬೇಕಾಯಿತು. ಹೋಗುವುದಕ್ಕೆ ಮೊದಲು ಆತ ಯುವತಿಯ ಎದುರು ಮಂಡಿಯೂರಿ ಕುಳಿತು ಕೇಳಿದ, “ನೀನು ನನ್ನನ್ನು ಮದುವೆ ಆಗುವೆಯಾ?” ಅವಳು ಅವನ ಪ್ರಸ್ತಾವನೆಯನ್ನು ಒಪ್ಪಿಕೊಂಡಳು. ಪರರಾಷ್ಟ್ರದಲ್ಲಿ ಒಂದು ವರ್ಷ ಕರ್ತವ್ಯ ನಿರ್ವಹಿಸಿ ಅವನು ಹಿಂದಿರುಗಿ ಬಂದ ನಂತರ ಮದುವೆ ಆಗಲು ಈರ್ವರೂ ನಿರ್ಧರಿಸಿದರು. ಅವನು ಪರರಾಷ್ಟ್ರಕ್ಕೆ ಹೋಗಿ ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಯುವತಿ ಚಲಾಯಿಸುತ್ತಿದ್ದ ವಾಹನ ಮತ್ತೊಂದಕ್ಕೆ ನೇರವಾಗಿ ಢಿಕ್ಕಿಹೊಡೆದು ಆಕೆಯ ಮಿದುಳಿಗೆ ಘಾಸಿ ಆಯಿತು. ತತ್ಪರಿಣಾಮವಾಗಿ ಅವಳ ಮುಖದ ಸ್ನಾಯುಗಳ ಮೇಲಿನ ನಿಯಂತ್ರಣ ಇಲ್ಲವಾಗಿ ಮುಖ ವಿರೂಪಗೊಂಡಿತು. ದೇಹದ ಮೇಲೂ ಆದ ಗಾಯಗಳ ಕಲೆಗಳು ಉಳಿದುಕೊಂಡವು. ತನ್ನ ಯುವ ಪ್ರೇಮಿ ತನ್ನನ್ನು ನೋಡಿದರೆ ಖಂಡಿತವಾಗಿಯೂ ಮದುವೆ ಆಗಲು ನಿರಾಕರಿಸುತ್ತಾನೆ ಎಂಬುದಾಗಿ ಆಕೆ ಕಲ್ಪಿಸಿಕೊಳ್ಳುತ್ತಾಳೆ.  ವಿವಾಹವಾಗಲು ಮಾಡಿಕೋಡ ಒಪ್ಪಂದದಿಂದ ಆತನನ್ನು ಬಿಡುಗಡೆ ಮಾಡಲು ನಿರ್ಧರಿಸಿದ ಆಕೆ ಅವನು ಬರೆದ ಯಾವುದೇ ಪತ್ರಕ್ಕೆ ಉತ್ತರ ಕೊಡುವ ಗೋಜಿಗೇ ಹೋಗುವುದಿಲ್ಲ. ಅಷ್ಟೇ ಅಲ್ಲದೆ ಆತನ ದೂರವಾಣಿ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಆತ ಇದರಿಂದ ಬೇಸತ್ತು ತನ್ನನ್ನು ಮರೆತುಬಿಡುತ್ತಾನೆ ಎಂಬುದು ಅವಳ ನಂಬಿಕೆಯಾಗಿತ್ತು. ಇಂತು ಒಂದು ವರ್ಷ ಕಳೆಯಿತು.

ಒಂದು ದಿನ ಆ ಯುವತಿಯ ತಾಯಿ ಅವಳ ಕೋಣೆಯೊಳಕ್ಕೆ ಬಂದು ಘೋಷಿಸಿದಳು, “ಪರದೇಶದಲ್ಲಿ ಕರ್ತವ್ಯ ಮುಗಿಸಿ ಅವನು ಹಿಂದಕ್ಕೆ ಬಂದಿದ್ದಾನೆ. ಈಗ ನಿನ್ನನ್ನು ನೋಡಲೋಸುಗ ಇಲ್ಲಿಗೆ ಬಂದಿದ್ದಾನೆ.”

“ನಾನು ಈ ಊರಿನಲ್ಲಿ ಈಗ ಇಲ್ಲ ಎಂಬುದಾಗಿ ಹೇಳಿ ಅವನನ್ನು ಕಳುಹಿಸಿಬಿಡು,” ಪ್ರತಿಕ್ರಿಯಿಸಿದಳು ಯುವತಿ.

“ಅವನು ತನ್ನ ಮದುವೆಯ ಆಮಂತ್ರಣ ಪತ್ರವನ್ನು ನಿನಗೆ ಕೊಡಲೋಸುಗ ಬಂದಿದ್ದಾನೆ,” ಎಂಬುದಾಗಿ ಅವಳ ತಾಯಿ ಹೇಳಿ ಆಮಂತ್ರಣ ಪತ್ರವನ್ನು ಅವಳಿಗೆ ಕೊಟ್ಟಳು. ಇದರಿಂದ ಆ ಯುವತಿಗೆ ಬೇಸರವಾದರೂ ಆತ ಬೇರೆಯವಳನ್ನು ಮದುವೆಯಾಗುವುದೇ ಸರಿ ಎಂಬುದಾಗಿ ತೀರ್ಮಾನಿಸಿ ಆಮಂತ್ರಣ ಪತ್ರವನ್ನು ಬಿಡಿಸಿ ಓದಲಾರಂಭಿಸುತ್ತಾಳೆ. ಅದರಲ್ಲಿದ್ದ ಆತ ವಿವಾಹವಾಗುವವಳ ಹೆಸರು ಅವಳದೇ ಆಗಿರುತ್ತದೆ. ಗೊಂದಲಕ್ಕೀಡಾದ ಆಕೆ ಕೇಳುತ್ತಾಳೆ, “ಏನಿದು?”  ಆ ವೇಳಗೆ ಸರಿಯಾಗಿ ಕೋಣೆಯೊಳಕ್ಕೆ ಪುಷ್ಪಗುಚ್ಛ ಸಮೇತ ಬಂದ ಆತ ಆಕೆಯ ಎದುರು ಮಂಡಿಯೂರಿ ಕುಳಿತು ಕೇಳಿದ, “ನೀನು ನನ್ನನ್ನು ಮದುವೆ ಆಗುವೆಯಾ?”

‘ನಾನೀಗ ಕುರೂಪಿಯಾಗಿದ್ದೇನೆ,” ಉದ್ಗರಿಸಿದಳು ಆಕೆ.

ಆತ ಹೇಳಿದ, “ ಅಪಘಾತವಾದ ನಂತರ ನಿನ್ನ ಅನುಮತಿ ಇಲ್ಲದೆ ನಿನ್ನ ಫೋಟೋಗಳನ್ನು ನಿನ್ನ ತಾಯಿ ನನಗೆ ಕಳುಹಿಸಿದ್ದಳು. ನಾನು ನಿನ್ನನ್ನು ನಿಜವಾಗಿ ಪ್ರೀತಿಸುತ್ತಿದ್ದದ್ದರಿಂದ ನಿನ್ನಲ್ಲಿ ಬದಲಾವಣೆ ಆಗಿದೆ ಎಂಬುದಾಗಿ ನನಗೆ ಅನ್ನಿಸಲೇ ಇಲ್ಲ. ನೀನು ಈಗಲೂ ನಾನು ಪ್ರೀತಿಸುತ್ತಿದ್ದ ಹುಡುಗಿಯೇ ಆಗಿರುವೆ.”

೭೫. ಕುರುಡಿಯೊಬ್ಬಳ ಕತೆ

ಕುರುಡಿಯಾಗಿದ್ದದ್ದರಿಂದ ತನ್ನ ಅದೃಷ್ಟವನ್ನು ದೂಷಿಸುತ್ತಿದ್ದ ಕುರುಡಿಯೊಬ್ಬಳಿದ್ದಳು. ಅವಳು ತನ್ನ ಪ್ರಿಯತಮನನ್ನು ಹೊರತುಪಡಿಸಿ ಬೇರೆ ಎಲ್ಲರನ್ನೂ ದ್ವೇಷಿಸುತ್ತಿದ್ದಳು. ಹೆಚ್ಚುಕಮ್ಮಿ ಸದಾಕಾಲ ಅವನು ಅವಳೊಂದಿಗೆ ಇರುತ್ತಿದ್ದ. ತಾನು ಜಗತ್ತನ್ನು ನೋಡುವಂತೆ ಇದ್ದಿದ್ದರೆ ಅವನನ್ನು ಮದುವೆ ಆಗುತ್ತಿದ್ದದ್ದಾಗಿ ಅವಳು ಆಗಾಗ್ಗೆ ಹೇಳುತ್ತಿದ್ದಳು. ಯಾರೋ ನೇತ್ರದಾನಿಗಳು ತಮ್ಮ ಕಣ್ಣುಗಳನ್ನು ಅವಳಿಗೆ ದಾನ ಮಾಡಿದ್ದರಿಂದ ಅವಳು ಜಗತ್ತನ್ನು ನೋಡುವಂತಾಯಿತು. ಆವಳ ಪ್ರಿಯತಮ ಕೇಳಿದ, “ಈಗ ನೀನು ಜಗತ್ತನ್ನು ನೋಡುವಂತೆ ಆಗಿದೆಯಾದ್ದರಿಂದ ನನ್ನನ್ನು ಮದುವೆ ಆಗುವೆಯಾ?”

ಅವಳು ಅವನನ್ನು ಮೊದಲ ಸಲ ಸರಿಯಾಗಿ ನೋಡಿದಳು. ಅವನೂ ಒಬ್ಬ ಕುರುಡ ಎಂಬುದನ್ನು ತಿಳಿದು ಅವಳಿಗೆ ವಿಪರೀತ ಆಘಾತವಾಯಿತು. ಒಬ್ಬ ಕುರುಡನನ್ನು ಮದುವೆ ಆಗಲು ಅವಳು ನಿರಾಕರಿಸಿದಳು.

ಬಲು ದುಃಖದಿಂದ ಅವಳಿಗೆ ವಿದಾಯ ಹೇಳಿ ಹೋದ ಆತ ಅವಳಿಗೊಂದು ಪತ್ರ ಬರೆದ.

ಅದರಲ್ಲಿ ಇಂತು ಬರೆದಿತ್ತು: “ನನ್ನ ಕಣ್ಣುಗಳನ್ನು ಜೋಪಾನವಾಗಿ ಇಟ್ಟುಕೋ ಪ್ರಿಯ ಗೆಳತಿ!”

೭೬. ನನ್ನ ಒಂದು ಕಣ್ಣಿನ ಅಮ್ಮ .

ನನ್ನ ಅಮ್ಮನಿಗೆ ಒಂದೇ ಕಣ್ಣು. ನಾನು ಅವಳನ್ನು ದ್ವೇಷಿಸುತ್ತಿದ್ದೆ. ಅವಳಿಂದಾಗಿ ನಾನು ಆಗಾಗ್ಗೆ ಮುಜುಗರಕ್ಕೀಡಾಗುತ್ತಿದ್ದೆ. ಕುಟುಂಬ ನಿರ್ವಹಣೆಗಾಗಿ ಅವಳು ಶಾಲಾ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಅಡುಗೆ ಮಾಡುತ್ತಿದ್ದಳು.

ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಒಂದು ದಿನ ಆಕೆ ನನ್ನನ್ನು ನೋಡಲೋಸುಗ ಶಾಲೆಗೆ ಬಂದಿದ್ದಳು. ನನಗೆ ಆಗ ಬಲು ಮುಜುಗರವಾಗಿತ್ತು. ಅವಳನ್ನು ನಿರ್ಲಕ್ಷಿಸಿ ದ್ವೇಷಯುತ ನೋಟವನ್ನು ಅವಳೆಡೆಗೆ ಬೀರಿ ಓಡಿಹೋಗಿದ್ದೆ. ಮಾರನೆಯ ದಿನ ಒಬ್ಬ ಸಹಪಾಠಿ, “ಅಯ್ಯೋ, ನಿನ್ನ ಅಮ್ಮನಿಗೆ ಇರುವುದು ಒಂದೇ ಕಣ್ಣು,” ಎಂಬುದಾಗಿ ಇತರ ಸಹಪಾಠಿಗಳ ಎದುರು ಹಂಗಿಸಿದ. ನಾನು ಅವಮಾನದಿಂದ ಕುಗ್ಗಿ ಹೋಗಿದ್ದೆ, ಆ ದಿನ ಮನಗೆ ಹೋದ ಕೂಡಲೇ ಅವಳ ಎದುರು ನಿಂತು ಬೊಬ್ಬೆ ಹಾಕಿದ್ದೆ, “ನನ್ನನ್ನು ನಗೆಪಾಟಲು ಮಾಡುವುದೇ ನಿನ್ನ ಕೆಲಸವಾಗಿದೆ. ನೀನೇಕೆ ಸತ್ತು ಹೋಗಬಾರದು?” ಅವಳು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಒಂದು ವೇಳೆ ಅವಳು ಪ್ರತಿಕ್ರಿಯಿಸಿದ್ದರೂ ನಾನದನ್ನು ನಿರ್ಲಕ್ಷಿಸುತ್ತಿದ್ದೆ. ಈ ಮನೆ ಬಿಟ್ಟು ದೂರ ಹೋದರೆ ಸಾಕು ಎಂಬುದಾಗಿ ನನಗನ್ನಿಸಿತ್ತು. ಎಂದೇ, ಬಲು ಮುತುವರ್ಜಿಯಿಂದ ಕಷ್ಟಪಟ್ಟು ವ್ಯಾಸಂಗ ಮಾಡಿದೆ. ತತ್ಪರಿಣಾಮವಾಗಿ ಪರದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶವೂ ನನಗೆ ಲಭಿಸಿತು. ಒಳ್ಳೆಯ ಉದ್ಯೋಗವೂ ಸಿಕ್ಕಿತು. ನಾನು ಮೆಚ್ಚಿದವಳನ್ನೇ ಮದುವೆಯಾದೆ. ಸುಂದರವಾದ ಮನೆಯ ಒಡೆಯನೂ ಆದೆ. ಇಬ್ಬರು ಮಕ್ಕಳೂ ಆದವು. ಸುಖೀ ಸಂಸಾರವಾಗಿತ್ತು ನನ್ನದು. ಅಂದಹಾಗೆ ನನ್ನ ಅಮ್ಮನಾದರೋ ಎಂದಿನಂತೆ ತನ್ನ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಳು. ದೇವರ ದಯೆಯಿಂದ ಅವಳ ಕಾಟ ನನಗಿರಲಿಲ್ಲ. ಅವಳನ್ನು ನೋಡಲು ನಾನು ಹೋಗುತ್ತಲೂ ಇರಲಿಲ್ಲ. ನಿಜ ಹೇಳಬೇಕೆಂದರೆ ಅವಳು ನನ್ನ ಮನೆಯನ್ನೇ ಆಗಲಿ ಹೆಂಡತಿ ಮಕ್ಕಳನ್ನೇ ಆಗಲಿ ನೋಡಿಯೇ ಇರಲಿಲ್ಲ.

ಇಂತಿರುವಾಗ ಒಂದು ದಿನ ಆಕೆ ಇದ್ದಕ್ಕಿದ್ದಂತೆ ಯಾವ ಮುನ್ಸೂಚನೆಯನ್ನೂ ನೀಡದೆ ನನ್ನ ಮನೆಗೆ ಬಂದಳು. ಬಾಗಿಲಿನಲ್ಲಿ ನಿಂತಿದ್ದ ಈ ಒಂದು ಕಣ್ಣಿನ ಹೆಂಗಸನ್ನು ಮಕ್ಕಳು ನೋಡಿ ನಕ್ಕರು. ನಾನು ಕೋಪದಿಂದ ಕಿರುಚಿದೆ, “ಹೀಗೆ ಹೇಳದೆಕೇಳದೆ ನನ್ನ ಮನೆಗೆ ಬಂದು ಮಕ್ಕಳನ್ನು ಹೆದರಿಸುವಷ್ಟು  ಧೈರ್ಯ ಬಂದಿತೇ ನಿನಗೆ? ಇಲ್ಲಿ ನಿಲ್ಲಬೇಡ. ಈ ಕ್ಷಣವೇ ತೊಲಗಾಚೆ.” ಇದಕ್ಕೆ ಪ್ರತಿಕ್ರಿಯೆಯಾಗಿ ಆಕೆ ಗೊಣಗಿದಳು, “ಓಹ್‌, ಕ್ಷಮಿಸಿ. ನಾನು ತಪ್ಪು ವಿಳಾಸಕ್ಕೆ ಬಂದಿರುವ ಹಾಗಿದೆ.” ತದನಂತರ ಆಕೆ ಹೊರಟುಹೋದಳು.

ಇಂತಿರುವಾಗ ನಾನು ಹಿಂದೆ ಓದಿದ್ದ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ವ್ಯವಹಾರ ನಿಮಿತ್ತ ಬೇರೆ ಊರಿಗೆ ಹೋಗುತ್ತಿರುವುದಾಗಿ ಹೆಂಡತಿ ಮಕ್ಕಳಿಗೆ ಸುಳ್ಳು ಹೇಳಿ ನಾನು ನನ್ನ ಊರಿಗೆ ಹೋದೆ. ಅಲ್ಲಿಗೆ ತಲುಪಿದ ತಕ್ಷಣ ನನಗೆ ತಿಳಿದು ಬಂದ ಸುದ್ದಿ: ಆಗಷ್ಟೇ ನನ್ನ ತಾಯಿ ತೀರಿಕೊಂಡಿದ್ದರು. ಇದನ್ನು ಕೇಳಿ ನನಗೆ ದುಃಖವೇನೂ ಆಗಲಿಲ್ಲ. ಪಕ್ಕದ ಮನೆಯವರು ಆಕೆ ನನಗೆ ಬರೆದಿದ್ದ ಪತ್ರವೊಂದನ್ನು ಕೊಟ್ಟರು. ಅದರಲ್ಲಿ ಇಂತು ಬರೆದಿತ್ತು:

ಪ್ರೀತಿಯ ಮಗನೇ,

ಸದಾ ನಿನ್ನ ಒಳಿತಿನ ಕುರಿತೇ ನಾನು ಆಲೋಚಿಸುತ್ತಿದ್ದೆ. ಅಂದು ನಿನ್ನ ಮನೆಗೆ ಬಂದು ಮಕ್ಕಳನ್ನು ಹೆದರಿಸಿದ್ದಕ್ಕೆ ಕ್ಷಮೆ ಇರಲಿ. ಶಾಲೆಯಲ್ಲಿ ಜರಗುವ ಪುನರ್ಮಿಲನ ಕಾರ್ಯಕ್ರಮಕ್ಕೆ ನೀನು ಬರುವ ಸುದ್ದಿ ತಿಳಿದು ಸಂತೋಷವಾಯಿತು. ನೀನು ಬರುವ ವರೆಗೆ ನಾನು ಬದುಕಿರುತ್ತೇನೋ ಇಲ್ಲವೋ ತಿಳಿಯದು. ಅಂದ ಹಾಗೆ ನೀನು ಬೆಳೆಯುತ್ತಿರುವಾಗ ಸದಾ ನಿನಗೆ ಮುಜುಗರ ಉಂಟು ಮಾಡುತ್ತಿದ್ದದ್ದಕ್ಕೆ ಕ್ಷಮೆ ಇರಲಿ.

ಬಹುಶಃ ನಿನಗಿದು ಗೊತ್ತಿರಲಿಕ್ಕಿಲ್ಲ. ಬಲು ಚಿಕ್ಕವನಾಗಿದ್ದಾಗ ಅಪಘಾತವೊಂದರಲ್ಲಿ ನೀನು ನಿನ್ನ ಒಂದು ಕಣ್ಣನ್ನು ಕಳೆದುಕೊಂಡೆ. ಒಂದು ಕಣ್ಣಿಲ್ಲದ ನಿನ್ನನ್ನು ನೋಡಲಾಗದೆ ನಾನು ನನ್ನ ಒಂದು ಕಣ್ಣನ್ನು ನಿನಗೆ ದಾನ ಮಾಡಿದೆ.

ಆ ಕಣ್ಣಿನಿಂದ ನನ್ನ ಮಗ ನನ್ನ ಪರವಾಗಿ ಈ ಜಗತ್ತನ್ನು ನೋಡಿ ಸುಖಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ.

ಇಂತು,

ನಿನ್ನನ್ನು ಸದಾ ಪ್ರೀತಿಸುವ

ಅಮ್ಮ.

೭೭. ಬೇಷರತ್ತಾದ ಪ್ರೀತಿ

ವಿಯೆಟ್ನಾಮ್‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೇರಿಕನ್‌ ಸೈನಿಕನೊಬ್ಬ ಸೇವೆಯಿಂದ ನಿವೃತ್ತನಾಗಿ ತನ್ನ ಮನೆಗೆ ಹಿಂದಿರುಗುವ ಮುನ್ನ ದೂರವಾಣಿ ಕರೆ ಮಾಡಿ ತಿಳಿಸಿದ, “ಅಮ್ಮಾ, ಅಪ್ಪಾ, ನಾನು ಮನೆಗೆ ಹಿಂದಿರುಗುತ್ತಿದ್ದೇನೆ. ಆ ಸಂದರ್ಭದಲ್ಲಿ ನಿಮ್ಮಿಂದ ಒಂದು ಉಪಕಾರ ಆಗಬೇಕಿದೆ. ನನ್ನೊಂದಿಗೆ ನನ್ನೊಬ್ಬ ಮಿತ್ರನನ್ನೂ ಮನೆಗೆ ಕರೆದುಕೊಂಡು ಬರಬೇಕೆಂದಿದ್ದೇನೆ.”

“ಖಂಡಿತ ಕರೆದುಕೊಂಡು ಬಾ. ನಾವು ಅವನನ್ನು ಸಂತೋಷದಿಂದ ಸ್ವಾಗತಿಸುತ್ತೇವೆ,” ಪ್ರತಿಕ್ರಿಯಿಸಿದರು ಅವರು.

ಮಗ ತನ್ನ ಮಾತು ಮುಂದುವರಿಸಿದ, “ಅವನ ಕುರಿತು ನಿಮಗೆ ಹೇಳಲೇಬೇಕಾದ ಸಂಗತಿ ಒಂದಿದೆ. ಯುದ್ಧದಲ್ಲಿ ಅವನಿಗೆ ಬಹಳ ಗಾಯವಾಗಿದೆ. ಅವನೊಂದು ಭೂಸ್ಫೋಟಕದ ಮೇಲೆ ಕಾಲು ಇಟ್ಟದ್ದರ ಪರಿಣಾಮವಾಗಿ ತನ್ನ ಒಂದು ಕಾಲು ಹಾಗು ಒಂದು ಕೈಯನ್ನು ಕಳೆದುಕೊಂಡಿದ್ದಾನೆ. ಅವನಿಗೆ ಬೇಕಾದವರು ಬೇರೆ ಯಾರೂ ಇಲ್ಲವಾದ್ದರಿಂದ ನಾನು ಅವನನ್ನು ನಮ್ಮ ಮನೆಯಲ್ಲಿಯೇ ವಾಸಿಸಲು ಹೇಳೋಣ ಅಂದುಕೊಂಡಿದ್ದೇನೆ.”

“ಅದು ನಿಜವಾಗಲೂ ಬಲು ದುಃಖದ ಸಂಗತಿ. ಅವನು ಮುಂದೆ ವಾಸಿಸಲು ತಕ್ಕುದಾದ ಸ್ಥಳವೊಂದನ್ನು ಹುಡುಕಲು ಸಹಾಯ ಮಾಡಬಹುದು,” ಅಂದರು ಅವರು.

“ಹಾಗಲ್ಲ, ಅಮ್ಮಾ ಅಪ್ಪಾ. ಅವನು ಶಾಶ್ವತವಾಗಿ ನಮ್ಮೊದಿಗೇ ಇರಬೇಕೆಂಬುದು ನನ್ನ ಅಪೇಕ್ಷೆ,” ಎಂಬುದಾಗಿ ಹೇಳಿದ ಮಗ.

“ಮಗನೇ, ನೀನೇನು ಕೇಳುತ್ತಿರುವೆ ಎಂಬುದರ ಪೂರ್ಣ ಅರಿವು ನಿನಗೆ ಇದ್ದಂತೆ ತೋರುತ್ತಿಲ್ಲ. ನೀನು ಹೇಳುವಷ್ಟು ಅಂಗವಿಕಲತೆ ಇರುವಾತ ನಮಗೊಂದು ಹೊರೆಯಾಗುವುದು ಖಂಡಿತ. ನಾವು ನಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯಬೇಕಲ್ಲವೇ? ಇಂಥದ್ದೊಂದು ಅಂಶ ನಮ್ಮ ಜೀವನಕ್ರಮದಲ್ಲಿ ಮಧ್ಯಪ್ರವೇಶ ಮಾಡಲು ಬಿಡದೇ ಇರುವುದೇ ಒಳ್ಳೆಯದು. ಅವನನ್ನು ಮರೆತು ಮನೆಗೆ ಹಿಂದಿರುಗು. ಅವನು ಬದುಕಲೋಸುಗ ಏನಾದರೊಂದು ಮಾರ್ಗ ಕಂಡುಕೊಳ್ಳುತ್ತಾನೆ,” ಅಂದರು ಅವರು.

ಅವರ ಮಾತನ್ನು ಕೇಳಿದ ಮಗ ದೂರವಾಣಿ ಸಂಪರ್ಕವನ್ನು ನಿಷ್ಕ್ರಿಯಗೊಳಿಸಿದ. ಕೆಲವು ದಿನಗಳು ಕಳೆದ ನಂತರ ಸ್ಯಾನ್‌ ಪ್ರಾನ್ಸಿಸ್ಕೋ ನಗರದ ಪೋಲೀಸ್‌ಠಾಣೆಯಿಂದ ಅವರಿಗೊಂದು ದೂರವಾಣಿ ಕರೆ ಬಂದಿತು. ಅವರ ಮಗ ಬಹುಮಹಡಿ ಕಟ್ಟಡದ ಮೇಲಿನಿಂದ ಬಿದ್ದು ಸತ್ತುಹೋಗಿದ್ದ. ಅವರು ಬಂದು ಶವವನ್ನು ಗುರುತಿಸಿ ಮುಂದಿನ ವಿಧಿವಿಧಾನಗಳಿಗೆ ಸಹಕರಿಸಬೇಕೆಂಬ ಕೋರಿಕೆ ಅವರದಾಗಿತ್ತು. ಬಲು ದುಃಖಿತರಾದ ಅವರು ತಕ್ಷಣವೇ ಸ್ಯಾನ್‌ ಪ್ರಾನ್ಸಿಸ್ಕೋ ನಗರಕ್ಕೆ ವಿಮಾನದಲ್ಲಿ ಪಯಣಿಸಿ ಶವಾಗಾರಕ್ಕೆ ಹೋಗಿ ಶವವನ್ನು ತಮ್ಮ ಮಗನದ್ದು ಎಂಬುದಾಗಿ ಗುರುತಿಸಿದರು. ಆ ಸನ್ನಿವೇಶದಲ್ಲಿ ಇನ್ನೊಂದು ಆಘಾತಕಾರೀ ಸಂಗತಿಯೊದನ್ನು ಅವರು ಗಮನಿಸಿದರು: ಅವರ ಮಗ ತನ್ನ ಒಂದು ಕಾಲು ಹಾಗು ಒಂದು ಕೈಯನ್ನು ಕಳೆದುಕೊಂಡಿದ್ದ.

೭೮. ಅದು ಯಾರೂ ಮಾಡಿದ್ದಲ್ಲ!

ಹಿಂದೊಮ್ಮೆ ಸರ್‌ ಐಸ್ಯಾಕ್‌ ನ್ಯೂಟನ್‌ ಅವರ ಹತ್ತಿರ ನಮ್ಮ ಸೌರವ್ಯೂಹದ ಕರಾರುವಾಕ್ಕಾದ ಚಿಕ್ಕ ಪ್ರತಿಕೃತಿಯೊಂದು ಇದ್ದಿತಂತೆ. ಅದರ ಕೇಂದ್ರದಲ್ಲಿ ಇದ್ದ ಚಿನ್ನದ ಬಣ್ಣದ ದೊಡ್ಡ ಗೋಲವೊಂದು ಸೂರ್ಯನನ್ನು ಪ್ರತಿನಿಧಿಸುತ್ತಿತ್ತು. ವಿಭಿನ್ನ ಉದ್ದದ ಸಲಾಕೆಗಳ ತುದಿಯಲ್ಲಿ ಇದ್ದ ವಿಭಿನ್ನ ಗಾತ್ರದ ಪುಟ್ಟ ಗೋಲಗಳು ಬುಧ, ಶುಕ್ರ, ಭೂಮಿ, ಕುಜ, ಇವೇ ಮೊದಲಾದ ಗ್ರಹಗಳನ್ನು ಪ್ರತಿನಿಧಿಸುತ್ತಿದ್ದವು. ಯುಕ್ತ ಗಿಯರುಗಳು, ಹಲ್ಲುಚಕ್ರಗಳು ಹಾಗು ಬೆಲ್ಟ್‌ಗಳ ಯುಕ್ತ ಜೋಡಣೆಯ ನರವಿನಿಂದ “ಸೂರ್ಯ”ನ ಸುತ್ತಲೂ ಅವು ದೋಷರಹಿತವಾಗಿ ಸುತ್ತುತ್ತಿದ್ದವು.

ಒಮ್ಮೆ ಆ ಪ್ರತಿಕೃತಿಯನ್ನು ನ್ಯೂಟನ್‌ ಅಧ್ಯಯಿಸುತ್ತಿದ್ದಾಗ ಮಿತ್ರನೊಬ್ಬ ಅವನನ್ನು ಸಂಧಿಸಲೋಸುಗ ಬಂದನು. ಆ ಮಿತ್ರನಿಗೆ ವಿಶ್ವದ ಹುಟ್ಟಿನ ಕುರಿತಾಗಿ ಬೈಬಲ್‌ನಲ್ಲಿ ಇದ್ದ ವಿವರಣೆಯಲ್ಲಿ ನಂಬಿಕೆ ಇರಲಿಲ್ಲ. ಆ ಪ್ರತಿಕೃತಿಯಲ್ಲಿ ಸೂರ್ಯ ಹಾಗು ಅದರ ಗ್ರಹಗಳ ಚಲನೆಯನ್ನು ಆಶ್ಚರ್ಯದಿಂದ ನೋಡಿದ ನಂತರ ಆತ ಕೇಳಿದ, “ಮಿತ್ರ ನ್ಯೂಟನ್‌, ಎಷ್ಟು ಸುಂದರವಾಗಿದೆ ಈ ಪ್ರತಿಕೃತಿ. ನಿಮಗೆ ಇದನ್ನು ತಯಾರಿಸಿ ಕೊಟ್ಟವರು ಯಾರು?”

ಪ್ರತಿಕೃತಿಯನ್ನೇ ನೋಡುತ್ತಿದ್ದ ನ್ಯೂಟನ್‌ ತಲೆ ಮೇಲಕೆತ್ತದೆ ಉತ್ತರಿಸದರು, “ಯಾರೂ ಅಲ್ಲ.”

“ಯಾರೂ ಅಲ್ಲ?” ಕೇಳಿದ ಆ ಮಿತ್ರ.

“ಹೌದು, ಅದು ಯಾರೂ ತಯಾರಿಸಿದ್ದಲ್ಲ ಎಂಬುದಾಗಿಯೇ ನಾನು ಹೇಳಿದ್ದು! ಈ ಗಿಯರುಗಳು, ಹಲ್ಲುಚಕ್ರಗಳು, ಬೆಲ್ಟ್‌ಗಳು ಮೊದಲಾದ ಎಲ್ಲ ಬಿಡಿ ಭಾಗಗಳೂ ತಂತಾವೇ ಆಕಸ್ಮಿಕವಾಗಿ ಒಗ್ಗೂಡಿ,  ಆಕಸ್ಮಿಕವಾಗಿ ತಮ್ಮ ನಿಗದಿತ ಪಥಗಳಲ್ಲಿ ಆಕಸ್ಮಿಕವಾಗಿ ಅಗತ್ಯವಾದ ಕರಾರುವಾಕ್ಕಾದ ವೇಗದಲ್ಲಿ ಗಿರಕಿ ಹೊಡೆಯಲೂ ಪರಿಭ್ರಮಿಸಲೂ ಆರಂಭಿಸಿದವು. ಇದು ಆಶ್ಚರ್ಯಗಳ ಪೈಕಿ ಅತ್ಯಾಶ್ಚರ್ಯವಾದ ಸಂಗತಿ ಅಲ್ಲವೇ?”  ಮರುಪ್ರಶ್ನೆ ಹಾಕಿದ ನ್ಯೂಟನ್‌.

೭೯. ದೈವ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಒಂದು ಉದ್ದೇಶವಿದೆ

ವೃತ್ತಿಯಿಂದ ಮರ ಕಡಿಯವವನೊಬ್ಬ ಒಂದು ದಿನ ತನ್ನ ಮೊಮ್ಮಗನಿಗೆ ಯಾವ ಉದ್ದೇಶಕ್ಕಾಗಿ ಓಕ್‌ ಮರ ಕಡಿಯಬೇಕೆಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕಾಡಿನಲ್ಲಿ ಮರವನ್ನು ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಅನುಭವ ಮುಖೇನ ಕಲಿಸಲೋಸುಗ ತನ್ನೊಂದಿಗೆ ಕಾಡಿಗೆ ಕರೆದುಕೊಂಡು ಹೋದನು. ಯಾವ ಮರ ಯಾವುದಕ್ಕೆ ಉಪಯುಕ್ತ ಎಂಬುದು ಅದರ ಸ್ವಾಭಾವಿಕ ಆಕಾರದಲ್ಲಿ ಅಂತಸ್ಥವಾಗಿರುತ್ತದೆ ಎಂಬುದನ್ನು ಆತ ಅಲ್ಲಿರುವ ಮರಗಳನ್ನು ತೋರಿಸುತ್ತಾ ವಿವರಿಸಿದ. ನೇರ ಕಾಂಡಗಳು ಇರುವ ಮರಗಳು ಹಲಗೆಗಳನ್ನು ತಯಾರಿಸಲು, ಯೋಗ್ಯ ರೀತಿಯಲ್ಲಿ ಬಾಗಿದ ಕಾಂಡಗಳು ಅಥವ ಕೊಂಬೆಗಳು ಇರುವ ಮರಗಳು ದೋಣಿಗಳ ಅಡ್ಡಪಟ್ಟಿಗಳನ್ನು ತಯಾರಿಸಲು, ಸಾಪೇಕ್ಷವಾಗಿ ಸಪುರವಾಗಿಯೂ ನೇರವಾಗಿಯೂ ಎತ್ತರವಾಗಿಯೂ ಬೆಳೆದಿರುವ ಮರಗಳು ಕಂಬಗಳನ್ನು ತಯಾರಿಸಲು ಉಪಯುಕ್ತ ಎಂಬುದನ್ನು ತಿಳಿಸಿದ. ಮರದ ಸ್ವಾಭಾವಿಕ ಲಕ್ಷಣಗಳನ್ನು ಗಮನವಿಟ್ಟು ಅವಲೋಕಿಸುವುದನ್ನು ಕಲಿತರೆ ಮುಂದೊಂದು ದಿನ ತನ್ನಂತೆ ಒಬ್ಬ ಉದ್ದೇಶಕ್ಕೆ ತಕ್ಕುದಾದ ಮರವನ್ನು ಆಯ್ಕೆ ಮಾಡಿ ಕಡಿಯುವ ಅನುಭವೀ ತಜ್ಞನಾಗಲೂ ಬಹುದು  ಎಂಬುದಾಗಿಯೂ ಮೊಮ್ಮಗನಿಗೆ ಆತ ಹೇಳಿದ.

ಮರಗಳನ್ನು ವೀಕ್ಷಿಸುತ್ತ ಕಾಡಿನಲ್ಲಿ ಮುಂದುವರಿದಾಗ ಯಾರೂ ಕಡಿಯದೆಯೇ ಉಳಿಸಿದ್ದ ಬಲು ಹಳೆಯ ಓಕ್‌ ಮರವೊಂದನ್ನು ಮೊಮ್ಮಗ ನೋಡಿದ. ಮನೆ ಕಟ್ಟಲು ಅಥವ ಪೀಠೋಪಕರಣಗಳನ್ನು ತಯಾರಿಸಲು ಅಥವ ಕಂಬಗಳನ್ನು ಮಾಡಲು ಅಥವ ದೋಣಿ ನಿರ್ಮಿಸಲು ಅಗತ್ಯವಾದ ಭಾಗವೇ ಇಲ್ಲದ ವಕ್ರ ವಕ್ರವಾಗಿ ಬೆಳೆದ ಕುಬ್ಜ ಮರ ಅದಾಗಿತ್ತು. ಅದನ್ನು ನೋಡಿದ ಮೊಮ್ಮಗ ಹೇಳಿದ, “ಅಜ್ಜಾ, ಈ ಮರ ಕಡಿದರೆ ಸೌದೆಯಾಗಿ ಉಪಯೋಗಿಸಬಹುದು. ಏಕೆಂದರೆ ಬೇರೆ ಯಾವುದಕ್ಕೂ ಈ ಮರವನ್ನು ಉಪಯೋಗಿಸಲು ಸಾಧ್ಯವಿಲ್ಲ.” ಅಜ್ಜ ಪ್ರತಿಕ್ರಿಯಿಸಿದ, “ಈಗ ನಾವು ದೋಣಿ ನಿರ್ಮಿಸಲು ಅಗತ್ಯವಾದ  ಮರ ಪೂರೈಸಬೇಕಾಗಿರುವುದರಿಂದ ಮೊದಲು ಆ ಉದ್ದೇಶಕ್ಕೆ ತಕ್ಕುದಾದ ಮರ ಆಯ್ಕೆ ಮಾಡಿ ಕಡಿಯೋಣ. ಅಗತ್ಯವಾದರೆ ಮುಂದೊಂದು ದಿನ ಈ ಮರದ ಹತ್ತಿರ ಪುನಃ ಬರೋಣ.”

ಅವರ ಉದ್ದೇಶಕ್ಕೆ ತಕ್ಕುದಾದ ದೊಡ್ಡ ಮರಗಳನ್ನು ಆಯ್ಕೆ ಮಾಡಿ ಕಡಿಯಲಾರಂಭಿಸಿದರು. ಇದು ಮೊದಲನೆಯ ಅನುಭವವಾದ್ದರಿಂದ ಒಂದೆರಡು ತಾಸುಗಳ ಕಾಲ ಕಡಿಯುವಷ್ಟರಲ್ಲಿ ಮೊಮ್ಮಗನಿಗೆ ಬಲು ಆಯಾಸವಾಯಿತು. ಆದ್ದರಿಂದ ತುಸು ಕಾಲ ವಿರಮಿಸಿ ತದನಂತರ ಕಡಿಯುವುದನ್ನು ಮುಂದುವರಿಸಲು ಅಜ್ಜನ ಅನುಮತಿ ಕೇಳಿದ.

ಮೊಮ್ಮಗನ ವಿನಂತಿಗೆ ಒಪ್ಪಿಗೆ ಸೂಚಿಸಿದ ಅಜ್ಜ ಅವನನ್ನು ಹಳೆಯ ಓಕ್‌ ಮರದ ಹತ್ತಿರಕ್ಕೆ ಕರೆದೊಯ್ದ. ವಕ್ರ ವಕ್ರವಾಗಿ ಬೆಳೆದ ಕುಬ್ಜ ಮರ ಅದಾಗಿದ್ದರೂ ಇತರ ಮರಗಳಿಗಿಂತ ಹೆಚ್ಚು ನೆರಳನ್ನು ಉಂಟುಮಾಡುತ್ತಿದ್ದದ್ದರಿಂದ ಇಬ್ಬರೂ ಆ ಮರದ ಅಡಿಯಲ್ಲಿ ವಿರಮಿಸಿದರು. ಅಜ್ಜ ಮೊಮ್ಮಗನಿಗೆ ಇಂತೆಂದ: “ಕಾಡಿನಲ್ಲಿ ಇರುವ ಯಾವ ಮರವೇ ಆಗಲಿ, ನಿಸರ್ಗದಲ್ಲಿರುವ ಯಾವ ವಸ್ತುವೇ ಆಗಲಿ ನಿಷ್ಪ್ರಯೋಜಕವಾದುದಲ್ಲ. ಪ್ರತಿಯೊಂದಕ್ಕೂ ಅದರ ಲಕ್ಷಣಕ್ಕೆ ತಕ್ಕುದಾದ ಉಪಯೋಗವೊಂದು ಇದ್ದೇ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ಮೇಲ್ನೋಟಕ್ಕೆ ಉಪಯೋಗ ಸ್ಪಷ್ಟವಾಗಿ ತಿಳಿಯದೇ ಇರಬಹುದು. ಲಕ್ಷಣಗಳನ್ನು ಬಲು ಸೂಕ್ಷ್ಮವಾಗಿ ಗಮನಿಸಿ ನಿಸರ್ಗ ನಿರ್ಧಾರಿತ ಉಪಯೋಗವನ್ನು ಗುರುತಿಸುವ ಚಾಕಚಕ್ಯತೆ ನಮಗಿರಬೇಕು. ಉದಾಹರಣೆಗೆ, ನಿಷ್ಪ್ರಯೋಜಕ, ಸೌದೆಯಾಗುವುದಕ್ಕೇ ಲಾಯಕ್ಕು ಎಂಬುದಾಗಿ ನೀನು ತೀರ್ಮಾನಿಸಿದ್ದ ಈ ಮರ ನಮಗೆ ಈಗ ನೆರಳನ್ನು ನೀಡಿ ದಣಿವಾರಿಸಿಕೊಳ್ಳಲು ಸಹಾಯ ಮಾಡುತ್ತಿದೆ.”

೮೦. ಮರಳುಪೆಟ್ಟಿಗೆಯಲ್ಲಿನ ಕಲ್ಲು

ಪುಟ್ಟ ಬಾಲಕನೊಬ್ಬ ತನ್ನ ಮನೆಯ ಅಂಗಳದಲ್ಲಿ ಮರಳುಪೆಟ್ಟಿಗೆಯಲ್ಲಿ ಆಟವಾಡುತ್ತಿದ್ದ. ರಸ್ತೆಗಳು, ಸುರಂಗ ಮಾರ್ಗಗಳು ಇವೇ ಮೊದಲಾದವನ್ನು ರಚಿಸುತ್ತಿದ್ದಾಗ ಮರಳು ಪೆಟ್ಟಿಗೆಯ ಮಧ್ಯದಲ್ಲಿ ಒಂದು ದೊಡ್ಡ ಕಲ್ಲು ಗೋಚರಿಸಿತು. ತನ್ನ ಹತ್ತಿರವಿದ್ದ ಆಟದ ಸಲಕರಣೆಗಳ ನೆರವಿನಿಂದ ಬಲು ಕಷ್ಟದಿಂದ ಅದನ್ನು ಮರಳುಪೆಟ್ಟಿಗೆಯ ಅಂಚಿಗೆ ತಳ್ಳಿದನಾದರೂ ಮರಳುಪೆಟ್ಟಿಗೆಯಿಂದ ಅದನ್ನು ಹೊರಹಾಕಲು ಅವನಿಗೆ ಸಾಧ್ಯವಾಗಲಿಲ್ಲ. ತನ್ನ ಶ್ರಮ ವ್ಯರ್ಥವಾಗಿದ್ದರಿಂದ ದುಃಖಿತನಾದ ಬಾಲಕ ಅಳಲಾರಂಭಿಸಿದ.

ಆಗ ಅಲ್ಲಿಗೆ ಬಂದ ಅವನ ತಂದೆ ಕೇಳಿದರು, “ಮಗನೇ, ಲಭ್ಯವಿದ್ದ ಎಲ್ಲ ತಾಕತ್ತನ್ನೂ ನೀನು ಪ್ರಯೋಗಿಸಲಿಲ್ಲ, ಏಕೆ?”

ಅಳುತ್ತಾ ಬಾಲಕ ಉತ್ತರಿಸಿದ, “ನಾನು ನನ್ನೆಲ್ಲಾ ತಾಕತ್ತನ್ನೂ ಉಪಯೋಗಿಸಿದರೂ ಪ್ರಯೋಜನವಾಗಲಿಲ್ಲ, ಅಪ್ಪಾ”

ಅಪ್ಪ ಮಿದುವಾಗಿ ಪ್ರತಿಕ್ರಿಯಿಸಿದ, “ಇಲ್ಲ ಮಗನೇ, ನಿನಗೆ ಲಭ್ಯವಿದ್ದ ಎಲ್ಲ ತಾಕತ್ತನ್ನೂ ನೀನು ಉಪಯೋಗಿಸಲಿಲ್ಲ. ನೀನು ನನ್ನ ಸಹಾಯ ಕೇಳಲೇ ಇಲ್ಲ!”

ಅಷ್ಟು ಹೇಳಿದ ತಂದೆ ಒಂದು ಸಲಕರಣೆಯ ನೆರವಿನಿಂದ ಕಲ್ಲನ್ನು ಮರಳುಪೆಟ್ಟಿಗೆಯಿಂದ ಹೊರತಳ್ಳಿದ.

೮೧. ಜೀವನಕ್ಕೆ ತಿರುವು ನೀಡಿದ ವಿದ್ಯಮಾನ

ನಾನು ಪ್ರೌಢಶಾಲೆಯ ಮೊದಲನೆಯ ವರ್ಷದ ವಿದ್ಯಾರ್ಥಿಯಾಗಿದ್ದಾಗ ಜರಗಿದ ವಿದ್ಯಮಾನ ಇದು. ಒಂದು ಶುಕ್ರವಾರ ಸಂಜೆ ನಾನು ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದೆ. ನನಗಿಂತ ತುಸು ಮುಂದೆ ಕೈಲ್‌ ಎಂಬ ನನ್ನ ಸಹಪಾಠಿಯೊಬ್ಬ ಹೋಗುತ್ತಿದ್ದ. ತನ್ನ ಎಲ್ಲ ಪುಸ್ತಕಗಳನ್ನೂ ಆತ ಮನೆಗೆ ಹೊತ್ತೊಯ್ಯುತ್ತಿದ್ದಂತಿತ್ತು. “ಈತನೊಬ್ಬ ನೀರಸ ಪುಸ್ತಕದ ಹುಳು ಆಗಿರಬೇಕು. ಶುಕ್ರವಾರ ದಿನ ಯಾರಾದರೂ ತನ್ನ ಎಲ್ಲ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುವುದುಂಟೆ,” ಎಂಬುದಾಗಿ ನಾನು ಮನಸ್ಸಿನಲ್ಲಿಯೇ ಆಲೋಚಿಸುತ್ತಿದ್ದೆ. ಆ ವೇಳೆಗೆ ಸರಿಯಾಗಿ ಒಂದಷ್ಟು ಸಹಪಾಠಿಗಳು ಓಡಿಬಂದು ಬೇಕೆಂದೇ ಅವನಿಗೆ ಢಿಕ್ಕಿ ಹೊಡೆದು ನಗುತ್ತಾ ಓಡಿಹೋದರು. ಅವನ ಕೈನಲ್ಲಿದ್ದ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಮಣ್ಣಿನಲ್ಲಿ ಬಿದ್ದದ್ದು ಮಾತ್ರವಲ್ಲದೆ ಅವನೂ ಕೆಳಕ್ಕೆ ಬಿದ್ದ ಹಾಗು ಅವನ ಕನ್ನಡಕ ಹಾರಿಹೋಗಿ ಪಕ್ಕದಲ್ಲಿದ್ದ ಹುಲ್ಲುಹಾಸಿನ ಮೇಲೆ ಬಿದ್ದಿತು. ಬೇಸರ ಹಾಗು ದುಃಖದಿಂದ ಅವನ ಕಣ್ಣುಗಳಲ್ಲಿ ಕಣ್ಣೀರು ಜಿನುಗಿತು. ಕನ್ನಡಕಕ್ಕಾಗಿ ಅವನು ತಡಕಾಡಲಾರಂಭಿಸಿದ. ಅವನ ದುಸ್ಥಿತಿಯನ್ನು ಕಂಡು ನನಗೆ ‘ಅಯ್ಯೋ ಪಾಪ’ ಅನ್ನಿಸಿದ್ದರಿಂದ ಓಡಿ ಹೋಗಿ ಕನ್ನಡಕವನ್ನು ಅವನ ಕೈನಲ್ಲಿಟ್ಟು ಹೇಳಿದೆ, “ನೀನೇನೂ ಬೇಸರಿಸಬೇಡ, ಆ ಹುಡುಗರು ಯಾವಾಗಲೂ ಇತರರಿಗೆ ಉಪದ್ರವ ಕೊಡುತ್ತಲೇ ಇರುತ್ತಾರೆ. ಒಂದು ದಿನ ಅದಕ್ಕಾಗಿ ಅವರು ಪರಿತಪಿಸುವುದು ಖಚಿತ.”

ನಿಜವಾದ ಕೃತಜ್ಞತೆ ಸೂಚಿಸುವ ದೊಡ್ಡ ಮುಗುಳ್ನಗೆಯೊಂದಿಗೆ ಅವನು ಧನ್ಯವಾದಗಳನ್ನು ಅರ್ಪಿಸಿದ. ನನ್ನ ಮನೆಯ ಸಮೀಪದಲ್ಲಿಯೇ ಅವನ ಮನೆಯೂ ಇದೆ ಎಂಬುದು ನನಗೆ ಅವನಿಂದ ತಿಳಿಯಿತು. ನಂತರ ಪುಸ್ತಕಗಳನ್ನು ಹೊತ್ತೊಯ್ಯಲು ನಾನು ಅವನಿಗೆ ನೆರವಾದೆ. ಅವನೊಬ್ಬ ಬಲು ಒಳ್ಳೆಯ ಹುಡುಗ ಎಂಬುದು ಬೇಗನೆ ನನಗೆ ತಿಳಿಯಿತು. ಎಂದೇ, ನಾವೀರ್ವರೂ ಒಳ್ಳೆಯ ಸ್ನೇಹಿತರಾದೆವು. ಆ ಶನಿವಾರ ನಾನೂ ನನ್ನ ಮಿತ್ರರೂ ಆಯೋಜಿಸಿದ್ದ ಕಾಲ್ಚೆಂಡು ಆಟದಲ್ಲಿ ಭಾಗವಹಿಸಲು ಅವನನ್ನು ಆಹ್ವಾನಿಸಿದೆ. ಆತನೊಬ್ಬ ಶ್ರಮವಹಿಸಿ ಪಾಠಗಳನ್ನು ಅಭ್ಯಾಸ ಮಾಡುವವನಾಗಿದ್ದರೂ ಎಲ್ಲರೊಂದಿಗೂ ಸಂತೋಷದಿಂದ ಬೆರೆಯುವ ಸ್ವಭಾವದವನಾಗಿದ್ದದ್ದರಿಂದ ಎಲ್ಲರ ಪ್ರೀತಿವಿಶ್ವಾಸಗಳನ್ನು ಆತ ಗಳಿಸಿದ. ಯಾರೂ ಅವನ ಓದುವಿಕೆಯನ್ನು ಅಪಹಾಸ್ಯ ಮಾಡುತ್ತಿರಲಿಲ್ಲ.

ದಿನಗಳು ಉರುಳಿದವು. ಪ್ರೌಢಶಾಲೆಯ ಅಂತಿಮ ವರ್ಷವೂ ಕಳೆಯಿತು. ಪ್ರೌಢಶಾಲಾ ಪದವಿ ಪ್ರಾಪ್ತಿಯಾಗುವ ದಿನವೂ ಬಂದಿತು. ಅಂದಿನ ಸಮಾರಂಭದಲ್ಲಿ ಪದವಿ ಸ್ವೀಕರಿಸಿದ ನಂತರ ಕೃತಜ್ಞತಾ ಭಾಷಣ ಮಾಡಲು ಆಯ್ಕೆಯಾಗಿದ್ದದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ಕೈಲ್‌.

ಗಂಟಲನ್ನೊಮ್ಮೆ ಸರಿಪಡಿಸಿಕೊಂಡು ಆತ ತನ್ನ ಭಾಷಣ ಆರಂಭಿಸಿದ. ಒಮ್ಮೊಮ್ಮೆನಾವು ಮಾಡುವ ಒಂದು ಪುಟ್ಟ ಸಹಾಯ ಇನ್ನೊಬ್ಬರ ಜೀವನದ ಗತಿಯನ್ನೇ ಬದಲಿಸಬಲ್ಲುದು ಎಂಬ ಅರಿವು ನನಗೆ ಮೂಡಿದ್ದು ಅವನ ಭಾಷಣ ಕೇಳಿದ ನಂತರವೇ.

“ಹಿಂದಿನ ಕ್ಲಿಷ್ಟ ಸಮಯವನ್ನು ಸುಲಲಿತವಾಗಿ ದಾಟಲು ನಮಗೆ ನೆರವು ನೀಡಿದ ಎಲ್ಲರಿಗೂ ನಾವು ಕೃತಜ್ಞತಾಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಬೇಕಾದ ದಿನ ಪದವಿ ಪ್ರದಾನ ಸಮಾರಂಭ. ನಿಮ್ಮ ತಂದೆತಾಯಿಯರು, ನಿಮ್ಮ ಅಧ್ಯಾಪಕರು, ನಿಮ್ಮ ಸಹೋದರ ಸಹೋದರಿಯರು’ ಕೆಲವು ಸಂದರ್ಭಗಳಲ್ಲಿ ನಿಮ್ಮ ಖಾಸಗಿ ತರಬೇತುದಾರರು …. ಬಲು ಮುಖ್ಯವಾಗಿ ನಿಮ್ಮ ಗೆಳೆಯರು. ಯಾರೋ ಒಬ್ಬರಿಗೆ ಒಳ್ಳೆಯ ಸ್ನೇಹಿತರಾಗಿ ಇರುವುದೇ ನೀವು ಅವರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆ. ಏಕೆ ಎಂಬುದನ್ನು ನಾನು ಇಂದು ನಿಮ್ಮೆಲ್ಲರಿಗೂ ಹೇಳುವವನಿದ್ದೇನೆ. ಇಂದು ನಾನು ನಿಮಗೊಂದು ಪುಟ್ಟ ಕತೆ ಹೇಳುತ್ತೇನೆ. ಅದು ಕಾಲ್ಪನಿಕವಾದದ್ದಲ್ಲ, ನಿಜವಾಗಿ ನಡೆದದ್ದು.” ಮುಂದೆ ಅವನು ಹೇಳಿದ್ದು ನಾನು ಹಾಗು ಅವನು ಮೊದಲ ಸಲ ಸಂಧಿಸಿದ ಸಂದರ್ಭದ ವರ್ಣನೆಯಾಗಿತ್ತು. ಎಲ್ಲರ ಅಪಹಾಸ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದನಂತೆ ಆತ. ಎಂದೇ, ಶಾಲೆಯಲ್ಲಿ ಅವನ ಭದ್ರಕಪಾಟಿನಲ್ಲಿ ಇದ್ದ ಎಲ್ಲ ಪುಸ್ತಕಗಳನ್ನೂ ಶುಕ್ರವಾರ ಮನೆಗೆ ಹೊತ್ತೊಯ್ಯುತ್ತಿದ್ದನಂತೆ. ಆಗ ಜರಗಿದ್ದನ್ನು ವರ್ಣಿಸಿದ ಆತ ನನ್ನನ್ನೊಮ್ಮೆ ದಿಟ್ಟಿಸಿ ನೋಡಿ ಹೇಳಿದ, “ಅದೃಷ್ಟವಶಾತ್‌, ನನಗೆ ಅಂದು ದೊರೆತ ಮಿತ್ರನೊಬ್ಬ ನನ್ನನ್ನು ಉಳಿಸಿದ. ತನ್ನ ಒಂದು ಪುಟ್ಟ ಕ್ರಿಯೆಯಿಂದ ನನ್ನಲ್ಲಿ ಬದುಕುವ ಆಸೆ ಪುನಃ ಪ್ರಜ್ವಲಿಸುವಂತೆ ಮಾಡಿದ.” ನಾನು ಮೂಕವಿಸ್ಮಿತನಾಗಿ ನೋಡುತ್ತಲೇ ಇದ್ದೆ. ಅವನ ತಂದೆತಾಯಿಯರೂ ನನ್ನತ್ತ ಕೃತಜ್ಞತಾ ನೋಟ ಬೀರುತ್ತಿದ್ದರು. ನಾನು ಅಂದು ಮಾಡಿದ ಪುಟ್ಟ ಕ್ರಿಯೆಯ ಪರಿಣಾಮದ ಅಗಾಧತೆ ಜೀವನದ ಕುರಿತಾದ ನನ್ನ ದೃಷ್ಟಿಕೋನವನ್ನೇ ಬದಲಿಸಿತು.

೮೨. ಪ್ರೀತಿ, ಸಂಪತ್ತು ಹಾಗು ಯಶಸ್ಸು

ಒಂದು ದಿನ ಗೃಹಿಣಿಯೊಬ್ಬಳು ತನ್ನ ಮನೆಯಿಂದ ಹೊರಬಂದಾಗ ಮುಂದಿನ ಜಗುಲಿಯಲ್ಲಿ ಮೂವರು ಅಪರಿಚಿತ ಉದ್ದನೆಯ ಬಿಳಿ ಗಡ್ಡಧಾರಿಗಳು ಕುಳಿತಿರುವುದನ್ನು ಕಂಡಳು. ಆದಾಗ್ಯೂ ಅವಳು “ನನಗೆ ನಿಮ್ಮ ಪರಿಚಯವಿಲ್ಲ. ನಿಮ್ಮನ್ನು ನೋಡಿದರೆ ತುಂಬ ಹಸಿದಿರುವಂತೆ ಕಾಣುತ್ತಿರುವಿರಿ. ದಯವಿಟ್ಟು ಒಳಬಂದು ನಾನು ಕೊಡುವ ಆಹಾರ ಸ್ವೀಕರಿಸಿ” ಎಂಬುದಾಗಿ ಹೇಳಿದಳು.

ಅವರು ಕೇಳಿದರು, “ಒಳಗೆ ಮನೆಯ ಯಜಮಾನ ಇಲ್ಲವೇ?”

“ಇಲ್ಲ, ಅವರು ಕಾರ್ಯ ನಿಮಿತ್ತ ಹೊರಗೆ ಹೋಗಿದ್ದಾರೆ.”

“ಮನೆಯೊಡೆಯನಿಲ್ಲದೇ ಇರುವಾಗ ನಾವು ಒಳಕ್ಕೆ ಬರುವುದಿಲ್ಲ.”

ಸಂಜೆಯ ವೇಳೆಗೆ ಮನೆಯ ಒಡೆಯ ಹಿಂದಿರುಗಿ ಬಂದ ಕೂಡಲೆ ಹೆಂಡತಿ ಏನು ನಡೆಯಿತೆಂಬುದನ್ನು ತಿಳಿಸಿದಳು. ಆವನು ಹೇಳಿದ, “ ಈಗ ಅವರಿಗೆ ನಾನು ಬಂದಿರುವುದನ್ನು ತಿಳಿಸಿ ಒಳಕ್ಕೆ ಬರುವಂತೆ ವಿನಂತಿಸು.”

ಅವಳು ಅಂತೆಯೇ ಮಾಡಿದಾಗ ಅವರು ಹೇಳಿದರು, “ನಾವು ಮೂವರೂ ಒಟ್ಟಾಗಿ ಯಾವ ಮನೆಯೊಳಕ್ಕೂ ಹೋಗುವುದಿಲ್ಲ.”

“ಅದೇಕೆ?”

ಮೂವರ ಪೈಕಿ ಒಬ್ಬ ವಿವರಿಸಿ ಹೇಳಿದ, “ಅವನ ಹೆಸರು ಸಂಪತ್ತು, ಆ ಇನ್ನೊಬ್ಬನ ಹೆಸರು ಯಶಸ್ಸು. ನನ್ನ ಹೆಸರು ಪ್ರೀತಿ. ನಾವು ಮೂವರ ಪೈಕಿ ಯಾರು ಒಳಬರಬೇಕೆಂಬುದನ್ನು ಮನೆಯೊಡಯನೊಡನೆ ಚರ್ಚಿಸಿ ಬಂದು ತಿಳಿಸು.”

ವಿಷಯ ತಿಳಿದು ಮನೆಯೊಡೆಯ ಖುಷಿಯಿಂದ ಹೇಳಿದ, “ಸಂಪತ್ತನ್ನು ಒಳಕ್ಕೆ ಆಮಂತ್ರಿಸು. ನಮ್ಮ ಮನೆ ಸಂಪತ್ತಿನಿಂದ ತುಂಬಿ ತುಳುಕುವಂತಾಗಲಿ.”

ಅವನ ಹೆಂಡತಿ ಅದಕ್ಕೆ ಸಮ್ಮತಿಸಲಿಲ್ಲ, “ನಾವು ಯಶಸ್ಸನ್ನು ಆಮಂತ್ರಿಸೋಣ.”

ಈ ಚರ್ಚೆಯನ್ನು ಕೇಳುತ್ತಿದ್ದ ಆ ಮನೆಯ ಸೊಸೆ ಹೇಳಿದಳು, “ಅವರಿಬ್ಬರೂ ಬೇಡ. ನಾವು ಪ್ರೀತಿಯನ್ನು ಆಮಂತ್ರಿಸೋಣ. ಆಗ ನಮ್ಮ ಮನೆಯಲ್ಲಿ ಪ್ರೀತಿ ವಿಶ್ವಾಸಗಳು ನೆಲಸಿ ಎಲ್ಲರೂ ಆನಂದದಿಂದ ಒಬ್ಬರಿಗೊಬ್ಬರು ಹೊಂದಿಕೊಂಡು ಇರುವಂತಾಗುತ್ತದೆ.”

ಮನೆಯ ಒಡೆಯನಿಗೂ ಒಡತಿಗೂ ಅದು ಸರಿ ಅನ್ನಿಸಿದ್ದರಿಂದ ಆ ಸಲಹೆಯನ್ನು ಸ್ವೀಕರಿಸಿದರು. ಮನೆಯೊಡತಿ ಹೊರಹೋಗಿ ಹೇಳಿದಳು, “ನಿಮ್ಮ ಪೈಕಿ ಪ್ರೀತಿ ಅನ್ನುವವರು ಯಾರು? ನಾವು ಅವರನ್ನು ನಮ್ಮ ಮನೆಯೊಳಕ್ಕೆ ಬರುವಂತೆ ಆಮಂತ್ರಿಸುತ್ತಿದ್ದೇವೆ.”

ಅದನ್ನು ಕೇಳಿದ ತಕ್ಷಣವೇ ಮೂವರೂ ಮೇಲೆದ್ದು ಒಳಕ್ಕೆ ಹೊರಟರು.

ತಕ್ಷಣವೇ ಮನೆಯೊಡತಿ ಆಶ್ಚರ್ಯದಿಂದ ಕೇಳಿದಳು, “ನಾನು ಆಮಂತ್ರಿಸಿದ್ದು ಪ್ರೀತಿಯನ್ನು ಮಾತ್ರ. ಆದಾಗ್ಯೂ ನೀವು ಮೂವರೂ ಏಕೆ ಒಳಬರುತ್ತಿದ್ದೀರಿ?”

“ನೀನು ಸಂಪತ್ತು ಅಥವ ಯಶಸ್ಸನ್ನು ಮಾತ್ರ ಆಮಂತ್ರಿಸಿದ್ದಿದ್ದರೆ ಉಳಿದವರಿಬ್ಬರೂ ಹೊರಗೇ ಇರುತ್ತಿದ್ದೆವು. ಆದರೆ ನೀನಾದರೋ ಪ್ರೀತಿಯನ್ನು ಆಮಂತ್ರಿಸಿರುವೆ. ಎಲ್ಲಿ ಪ್ರೀತಿ ಇರುತ್ತಾನೋ ಅಲ್ಲಿ ನಾವಿರ್ವರೂ ಅರ್ಥಾತ್ ಸಂಪತ್ತು ಹಾಗು ಯಶಸ್ಸು ಇದ್ದೇ ಇರುತ್ತೇವೆ!” ಎಂಬುದಾಗಿ ಮೂವರೂ ಒಕ್ಕೊರಲಿನಿಂದ ವಿವರಿಸಿದರು.

೮೩. ನೀರಿನ ಪಂಪ್‌

ಒಬ್ಬ ನೀರಿನ ಪಂಪ್‌ ಒಂದನ್ನು ಖರೀದಿಸಿ ಆತ್ಮೀಯ ಮಿತ್ರನಿಗೆ ಅದನ್ನು ಉಡುಗೊರೆಯಾಗಿ ಕೊಟ್ಟು ಹೇಳಿದ, “ಈ ಪಂಪ್‌ ಅನ್ನು ನಿನಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ. ನಿನ್ನ ನೀರಿನ ಆವಶ್ಯಕತೆಯನ್ನು ಇದು ಪೂರೈಸುತ್ತದೆ. ಗೆಳೆಯ ಅದನ್ನು ಬಲು ಸಂತೋಷದಿಂದ ಸ್ವೀಕರಿಸಿದ. ಅವನ ಕೈತೋಟ ನೀರಿಲ್ಲದೆ ಸೊರಗುತ್ತಿತ್ತು.

ಮಾರನೆಯ ದಿನ ಅವನು ಓಡಿ ಬಂದು ಪಂಪ್‌ಅನ್ನು ಕೊಟ್ಟ ಮಿತ್ರನಿಗೆ ಹೇಳಿದ, “ನೀನು ನನಗೆ ಸುಳ್ಳು ಹೇಳಿದೆ. ನಿನ್ನ ಪಂಪ್‌ ಒಂದಿನಿತೂ ನೀರು ಪೂರೈಸುತ್ತಿಲ್ಲ.”

“ಪಂಪ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದೆಯೋ?”

“ಇಲ್ಲ”

“ಮೊದಲು ಆ ಕೆಲಸ ಮಾಡು ಹೋಗು. ನಿನಗೆಷ್ಟು ನೀರು ಬೇಕೋ ಅಷ್ಟು ನೀರು ದೊರೆಯುತ್ತದೆ.”

ಮಾರನೆಯ ದಿನ ಅವನು ಓಡಿ ಬಂದು ಪಂಪ್‌ಅನ್ನು ಕೊಟ್ಟ ಮಿತ್ರನಿಗೆ ಹೇಳಿದ, “ನೀನು ನನಗೆ ಸುಳ್ಳು ಹೇಳಿದೆ. ನೀನು ಹೇಳಿದಂತೆ ಮಾಡಿದರೂ ನಿನ್ನ ಪಂಪ್‌ ಒಂದಿನಿತೂ ನೀರು ಪೂರೈಸುತ್ತಿಲ್ಲ.”

“ಬಾವಿಯಿಂದ ನೀರನ್ನು ಮೇಲೆತ್ತಲು ಅಗತ್ಯವಾದ ಕೊಳವೆಯನ್ನು ಪಂಪ್‌ಗೆ ಜೋಡಿಸಿದೆಯೋ?”

“ಇಲ್ಲ.”

“ಆ ಕೆಲಸ ಮಾಡಿ ನೋಡು”

ಮಾರನೆಯ ದಿನ ಅವನು ಪುನಃ ಓಡಿ ಬಂದು ಪಂಪ್‌ಅನ್ನು ಕೊಟ್ಟ ಮಿತ್ರನಿಗೆ ಹೇಳಿದ, “ನೀನು ನನಗೆ ಸುಳ್ಳು ಹೇಳಿದೆ. ನೀನು ಹೇಳಿದಂತೆ ಮಾಡಿದರೂ ನಿನ್ನ ಪಂಪ್‌ ಒಂದಿನಿತೂ ನೀರು ಪೂರೈಸುತ್ತಿಲ್ಲ.”

“ಪಂಪ್‌ನಲ್ಲಿ ಅದಕ್ಕೆಂದೇ ಮೀಸಲಿರುವ ಕವಾಟದ ಮೂಲಕ ತುಸು ನೀರು ತುಂಬಿ ನಂತರ ಪಂಪ್‌ ಚಾಲೂ ಮಾಡಿದೆಯೋ?”

“ಇಲ್ಲ”

“ಅಂತು ಮಾಡುವುದಕ್ಕೆ ಪಂಪ್‌ಅನ್ನು ಪ್ರೈಮ್‌ ಮಾಡುವುದು ಎಂಬುದಾಗಿ ಹೇಳುತ್ತಾರೆ. ಪಂಪ್‌ಅನ್ನು ಪ್ರೈಮ್‌ ಮಾಡಿ ತದನಂತರ ಚಾಲೂ ಮಾಡಿ ನೋಡು.”

ಮಾರನೆಯ ದಿನ ಅವನು ಸಂತೋಷದಿಂದ ಓಡಿ ಬಂದು ಹೇಳಿದ, “ಈಗ ಪಂಪ್‌ ನನಗೆ ಬೇಕದಷ್ಟು ನೀರನ್ನು ಪೂರೈಸುತ್ತಿದೆ. ಧನ್ಯವಾದಗಳು.”

“ನಾನು ನಿನಗೆ ಸತ್ಯವನ್ನೇ ಹೇಳಿರಲಿಲ್ಲವೇ?”

“ಹೌದು. ನೀನು ಹೇಳಿದ್ದು ಸತ್ಯವಾಗಿತ್ತು.”

“ಮತ್ತೇಕೆ ನನ್ನನ್ನು ಸುಳ್ಳುಗಾರ ಎಂಬುದಾಗಿ ಹೇಳಿದೆ?”

“ಕ್ಷಮಿಸು. ನನ್ನ ಅಜ್ಞಾನದ ಪರಿಣಾಮವಾಗಿ ನೀನು ಹೇಳಿದ್ದು ಸುಳ್ಳು ಎಂಬುದಾಗಿ ನಿರ್ಧರಿಸಿದ್ದೆ.”

೮೪. ಮುಳುಗುತ್ತಿರುವ ಮನುಷ್ಯ

ದೊಡ್ಡ ದೋಣಿಯೊಂದು ಸಮುದ್ರದಲ್ಲಿ ಅಲೆಗಳ ಅಬ್ಬರದ ಪರಿಣಾಮವಾಗಿ ಅನಿರೀಕ್ಷಿತವಾಗಿ ಮುಳುಗಿಹೋಯಿತು. ಅದರಲ್ಲಿ ಇದ್ದವರ ಪೈಕಿ ಒಬ್ಬ ಮಾತ್ರ ಸಮುದ್ರದಲ್ಲಿ ತೇಲುತ್ತಿದ್ದ ಹಲಗೆಯೊಂದು ಅದೃಷ್ಟವಶಾತ್‌ ಕೈಗೆ ಸಿಕ್ಕಿದ್ದರಿಂದ ಬದುಕಿ ಉಳಿದಿದ್ದ. ತಾನೊಬ್ಬ ಮಹಾನ್‌ ದೈವಭಕ್ತ ಎಂಬುದಾಗಿ ಅವನು ಭಾವಿಸಿದ್ದ. ತನ್ನನ್ನು ರಕ್ಷಿಸುವಂತೆ ಅವನು ದೇವರಿಗೆ ಪ್ರಾರ್ಥನೆ ಸಲ್ಲಿಸಲಾರಂಭಿಸಿದ. ತಕ್ಷಣವೇ ದೋಣಿಯಂದು ಅವನ ಹತ್ತಿರ ಬಂದಿತು. ಅದರಲ್ಲಿದ್ದವರು ಅವನನನ್ನು ರಕ್ಷಿಸಲು ಮುಂದಾದಾಗ ಅವನು ಹೇಳಿದ, “ನೀವು ರಕ್ಷಿಸುವುದು ಬೇಡ, ಧನ್ಯವಾದಗಳು. ನಾನೊಬ್ಬ ದೈವಭಕ್ತ. ದೇವರು ನನ್ನನ್ನು ಕಾಪಾಡುತ್ತಾನೆ, ನಾನು ಅದಕ್ಕಾಗಿ ಕಾಯುತ್ತೇನೆ.”

ದೋಣಿಯಲ್ಲಿದ್ದವರು ಅಚ್ಚರಿಯಿಂದ ಅವನನ್ನು ನೋಡಿ ಅಲ್ಲಿಂದ ತೆರಳಿದರು. ದೈವಭಕ್ತ ಪುನಃ ದೇವರಿಗೆ ಪ್ರಾರ್ಥನೆ ಸಲ್ಲಿಸಲಾರಂಭಿಸಿದ. ಸ್ವಲ್ಪ ಸಮಯಾನಂತರ ಇನ್ನೊಂದು ದೋಣಿ ಅವನ ಹತ್ತಿರ ಬಂದಿತು. ಅದರಲ್ಲಿದ್ದವರು ಅವನನನ್ನು ರಕ್ಷಿಸಲು ಮುಂದಾದಾಗ ಅವನು ಹೇಳಿದ, “ನೀವು ರಕ್ಷಿಸುವುದು ಬೇಡ, ಧನ್ಯವಾದಗಳು. ನಾನೊಬ್ಬ ದೈವಭಕ್ತ. ದೇವರು ನನ್ನನ್ನು ಕಾಪಾಡುತ್ತಾನೆ, ನಾನು ಅದಕ್ಕಾಗಿ ಕಾಯುತ್ತೇನೆ.”

ದೋಣಿಯಲ್ಲಿದ್ದವರು ಅಚ್ಚರಿಯಿಂದ ಅವನನ್ನು ನೋಡಿ ಅಲ್ಲಿಂದ ತೆರಳಿದರು. ದೈವಭಕ್ತ ಪುನಃ ದೇವರಿಗೆ ಪ್ರಾರ್ಥನೆ ಸಲ್ಲಿಸಲಾರಂಭಿಸಿದ.

ಅವನು ಸುದೀರ್ಘ ಕಾಲ ಪ್ರಾರ್ಥನೆ ಸಲ್ಲಿಸಿದರೂ ದೇವರು ಬರಲಿಲ್ಲ. ಕೊನೆಗೊಮ್ಮೆ ಅವನು ಅಲ್ಲಿಯೇ ಮುಳುಗಿ ಸತ್ತುಹೋದ. ಸಾವಿನ ನಂತರ ಅವನ ಆತ್ಮಕ್ಕೆ ದೇವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ದೊರೆಯಿತು. ಅವನು ದೇವರನ್ನು ಕೇಳಿದ, “ನಾನೊಬ್ಬ ನಿನ್ನ ಮಹಾನ್‌ ಭಕ್ತ. ಆದಾಗ್ಯೂ ಸಮುದ್ರದಲ್ಲಿ ಮುಳುಗುತ್ತಿದ್ದ ನನ್ನನ್ನು ರಕ್ಷಿಸುವಂತೆ ಪ್ರಾರ್ಥಿಸಿದಾಗ ನೀನೇಕೆ ನನ್ನನ್ನು ರಕ್ಷಿಸಲಿಲ್ಲ?”

“ಮೂರ್ಖ, ನಾನು ನಿನ್ನ ಹತ್ತಿರಕ್ಕೆ ಎರಡು ಸಲ ದೋಣಿಗಳನ್ನು ಕಳುಹಿಸಲಿಲ್ಲವೇ?”

೮೫. ಒಬ್ಬ ವ್ಯಕ್ತಿ ಹಾಗು ಅವನ ನಾಯಿ

ಒಬ್ಬಾತ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುತ್ತಾ ತನ್ನ ನಾಯಿಯೊಂದಿಗೆ ರಸ್ತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದ. ಹಠಾತ್ತನೆ ಅವನಿಗೆ ತಾನು ಸತ್ತು ಹೋಗಿದ್ದೇನೆ ಎಂಬ ಅರಿವು ಉಂಟಾಯಿತು. ಬಹಳ ವರ್ಷಗಳ ಹಿಂದೆ ನಾಯಿಯೊಂದಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ತಾನು ಮತ್ತು ತನ್ನ ನಾಯಿ ಅಪಘಾತಕ್ಕೆ ತುತ್ತಾಗಿ ಸತ್ತದ್ದು ಅವನಿಗೆ ನೆನಪಾಯಿತು. ಎಷ್ಟು ಸಮಯದಿಂದ ಇಂತು ನಡೆಯುತ್ತಿದ್ದೇನೆ ಎಂಬುದೂ ಈಗ ನಡೆಯುತ್ತಿರುವ ರಸ್ತೆ ಎಲ್ಲಿಗೆ ಹೋಗುತ್ತದೆ ಎಂಬುದೂ ಅವನಿಗೆ ಗೊತ್ತಿರಲಿಲ್ಲ.

ತುಸು ಸಮಯಾನಂತರ ರಸ್ತೆ ಕವಲೊಡೆಯುವ ಒಂದು ತಾಣಕ್ಕೆ ಅವರು ಬಂದು ಸೇರಿಸರು. ಒಂದು ಕವಲು ರಸ್ತೆಯ ಒಂದು ಬದಿಯಗುಂಟ ಅಮೃತಶಿಲೆಯಂತೆ ತೋರುತ್ತಿದ್ದ ಬಿಳಿಯ ಕಲ್ಲಿನ ಬಲು ಎತ್ತರವಾದ ಗೋಡೆ ಇದ್ದಿತು. ಮುಂದೆ ಬಲು ಎತ್ತರವಾದ ಬೆಟ್ಟದ ಶಿಖರದ ತುದಿಯಲ್ಲಿದ್ದ ಕಮಾನುದ್ವಾರದತ್ತ ಆ ರಸ್ತೆ ಹೋಗುತ್ತಿತ್ತು. ಆ ಕಮಾನುದ್ವಾರ ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿತ್ತು. ಆ ರಸ್ತೆಯಲ್ಲಿಯೇ ಅವನು ಮುಂದೆ ಸಾಗಲು ನಿರ್ಧರಿಸಿದ.

ಮುಂದೆ ಸಾಗುತ್ತಿದ್ದಂತೆ ತಾನು ನಡೆಯುತ್ತಿದ್ದ ರಸ್ತೆ ಅಪ್ಪಟ ಚಿನ್ನದಂತೆ ಹೊಳೆಯಲಾರಂಭಿಸಿದ್ದನ್ನೂ ಕಮಾನುದ್ವಾರ ವಜ್ರದಂತೆ  ಪ್ರಜ್ವಲಿಸುತ್ತಿರುವುದನ್ನೂ ಆತ ಗಮನಿಸಿದ.

ಅವನು ಹಾಗು ಅವನ ನಾಯಿ ಕಮಾನುದ್ವಾರವನ್ನು ಸಮೀಪಿಸುತ್ತಿರುವಾಗ ದ್ವಾರದ ಪಕ್ಕದಲ್ಲಿ ಒಂದು ಕುರ್ಚಿ ಹಾಗು ಮೇಜು ಇರುವುದೂ ಒಬ್ಬಾತ ಅಲ್ಲಿ ಕುಳಿತುಕೊಂಡು ಏನನ್ನೋ ಓದುತ್ತಿರುವುದೂ ಗೋಚರಿಸಿತು. ಅವನನ್ನು ಸಮೀಪಿಸಿದ ವ್ಯಕ್ತಿ ಕೇಳಿದ, “ಕ್ಷಮಿಸಿ, ನಾವು ಈಗ ಎಲ್ಲಿ ಇದ್ದೇವೆ?”

“ಇದು ಸ್ವರ್ಗ”

“ವಾವ್‌. ಅಂದ ಹಾಗೆ ನಿಮ್ಮ ಹತ್ತಿರ ಕುಡಿಯುವ ನೀರು ಇದೆಯೇ?”

“ಖಂಡಿತ ಇದೆ. ನಿಮಗಾಗಿ ಬಲು ತಣ್ಣನೆಯ ಕುಡಿಯುವ ನೀರು ತರಿಸುವ ವ್ಯವಸ್ಥೆ ಮಾಡುತ್ತೇನೆ. ದಯವಿಟ್ಟು ಒಳಗೆ ಬನ್ನಿ.”

ಕಮಾನುದ್ವಾರದ ಬಾಗಿಲುಗಳು ತೆರೆದುಕೊಳ್ಳಲು ಆರಂಭಿಸಿದವು.

ವ್ಯಕ್ತಿ ತನ್ನೊಂದಿಗಿದ್ದ ನಾಯಿಯನ್ನು ತೋರಿಸುತ್ತ ಪುನಃ ಕೇಳಿದ, “ನನ್ನೊಂದಿಗೆ ನನ್ನ ಈ ಮಿತ್ರನೂ ಒಳಕ್ಕೆ ಬರಬಹುದೇ?”

“ಕ್ಷಮಿಸಿ. ನಾವು ಸಾಕುಪ್ರಾಣಿಗಳನ್ನು ಒಳಕ್ಕೆ ಸೇರಿಸಿಕೊಳ್ಳುವುದಿಲ್ಲ.”

ವ್ಯಕ್ತಿ ಸುದೀರ್ಘ ಕಾಲ ಆಲೋಚಿಸಿದ ಬಳಿ ಏನೂ ಮಾತನಾಡದೆಯೇ ರಸ್ತೆ ಕವಲೊಡೆದ ತಾಣಕ್ಕೆ ಹಿಂದಿರುಗಿ ಇನ್ನೊಂದು ಕವಲು ರಸ್ತೆಯಲ್ಲಿ ಮುಂದಕ್ಕೆ ಸಾಗಿದ. ಪುನಃ ಎತ್ತರವಾದ ಬೆಟ್ಟವೊಂದನ್ನು ಅವರು ಮಣ್ಣಿನ ದಾರಿಯಲ್ಲಿ ಹತ್ತಬೇಕಾಯಿತು. ಬೆಟ್ಟದ ಶಿಖರವನ್ನು ತಲುಪಿದಾಗ ಅಲ್ಲೊಂದು ಎಂದೂ ಮುಚ್ಚದೇ ಇದ್ದಂತಿದ್ದ ಮುರುಕಲು ಬಾಗಿಲು ಒಂದಿತ್ತಾದರೂ ಅದರ ಎರಡೂ ಪಾರ್ಶ್ವಗಳಲ್ಲಿ ಬೇಲಿಯೂ ಇರಲಿಲ್ಲ. ಬಾಗಿಲಿನಿಂದ ತುಸುದೂರದಲ್ಲಿ ಮರದ ನೆರಳಿನಲ್ಲಿ ಕುಳಿತುಕೊಂಡು ಒಬ್ಬ ಏನನ್ನೋ ಓದುತ್ತಿದ್ದ.

ವ್ಯಕ್ತಿ ಅವನನ್ನು ಕೇಳಿದ, “ಕ್ಷಮಿಸಿ, ಇಲ್ಲಿ ಕುಡಿಯಲು ಸ್ವಲ್ಪ ನೀರು ಸಿಕ್ಕಬಹುದೇ?”

“ಖಂಡಿತ, ಅದೋ ಅಲ್ಲಿ ಒಂದು ಕೈಪಂಪ್‌ ಇದೆ. ಎಷ್ಟು ಬೇಕಾದರೂ ನೀರು ಕುಡಿಯಿರಿ.”

“ನನ್ನ ಈ ಮಿತ್ರನಿಗೆ….”

“ಪಂಪ್‌ನ ಪಕ್ಕದಲ್ಲಿ ಒಂದು ಪುಟ್ಟ ಬೋಗುಣಿ ಇದೆ. ನಿಮ್ಮ ಮಿತ್ರನಿಗೂ ಕುಡಿಸಿ.”

ವ್ಯಕ್ತಿ ಹಾಗು ನಾಯಿ ದಾಹ ಇಂಗುವಷ್ಟು ನೀರು ಕುಡಿದರು.

ತದನಂತರ ಮರದ ನೆರಳಿನಲ್ಲಿ ಕುಳಿತಿದ್ದವನನ್ನು ವ್ಯಕ್ತಿ ಕೇಳಿದ, “ಕ್ಷಮಿಸಿ, ಈ ಸ್ಥಳದ ಹೆಸರೇನು?”

“ಸ್ವರ್ಗ!”

“ಇಲ್ಲಿಗೆ ಬರುವ ಮೊದಲು ಸಿಕ್ಕಿದ ಸ್ಥಳದ ಹೆಸರೂ ಸ್ವರ್ಗ ಎಂಬುದಾಗಿ ಅಲ್ಲಿದ್ದವರು ಹೇಳಿದರು!”

“ಓ ಅದೋ, ಅದು ನಿಜವಾಗಿಯೂ ನರಕ. ಅಗತ್ಯವಿದ್ದಾಗ ಮಿತ್ರರನ್ನು ತ್ಯಜಿಸುವವರನ್ನು ಶೋಧಿಸಿ ಒಳಕ್ಕೆ ಸೇರಿಸಿಕೊಳ್ಳಲು ಮಾಡಿರುವ ವ್ಯವಸ್ಥೆ ಅದು!!!”

೮೬. ಗಮನ ಸೆಳೆಯಲು ಇಟ್ಟಿಗೆ ಎಸೆಯಬೇಕಾಯಿತು!

ಯಶಸ್ವೀ ಯುವ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬ ಹೊಸ ಜಗ್ವಾರ್‌ ಕಾರಿನಲ್ಲಿ ತುಸು ಹೆಚ್ಚು ವೇಗವಾಗಿಯೇ ತನ್ನ ನೆರೆಹೊರೆಯ ಬೀದಿಯಲ್ಲಿ ಹೋಗುತ್ತಿದ್ದ. ರಸ್ತೆ ಬದಿಯಲ್ಲಿ ನಿಂತಿದ್ದ ಕಾರುಗಳ ಸಂದಿನಿಂದ ಪುಟ್ಟ ಮಕ್ಕಳು ಇದ್ದಕ್ಕಿದ್ದಂತೆ ರಸ್ತೆಗೆ ಹಾರುವ ಸಾಧ್ಯತೆ ಇದ್ದದ್ದರಿಂದ ಆ ಕುರಿತು ಅವನು ಹೆಚ್ಚು ನಿಗಾ ವಹಿಸಿದ್ದ. ಇದ್ದಕ್ಕಿದ್ದಂತೆ ಮಕ್ಕಳ ಬದಲಾಗಿ ಯಾರೋ ಎಸೆದ ಇಟ್ಟಿಗೆಯೊಂದು ಬಂದು ಕಾರಿನ ಬಾಗಿಲಿಗೆ ಅಪ್ಪಳಿಸಿತು.

ತಕ್ಷಣವೇ ಕಾರನ್ನು ನಿಲ್ಲಿಸಿದ ಅಧಿಕಾರಿ ಇಟ್ಟಿಗೆ ಬಂದ ದಿಕ್ಕಿನತ್ತ ಓಡಿದ. ಅಲ್ಲಿ ಕೈಗೆ ಸಿಕ್ಕಿದ ಹುಡುಗನೊಬ್ಬನನ್ನು ಹಿಡಿದು ಅಬ್ಬರಿಸಿದ, “ಯಾರು ನೀನು? ನೀನೇನು ಮಾಡುತ್ತಿರುವೆ ಎಂಬುದರ ಅರಿವು ನಿನಗಿದೆಯೇ? ಅದು ಹೊಸ ಕಾರು. ಅದರ ಬಾಗಿಲನ್ನು ಹಾಳುಮಾಡಿರುವೆ. ಅದನ್ನು ದುರಸ್ತಿ ಮಾಡಬೇಕಾದರೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದು ನಿನಗೆ ಗೊತ್ತಿದೆಯೇ? ಯಾರು ಕೊಡುತ್ತಾರೆ ಆ ಹಣವನ್ನು? ಹೀಗೇಕೆ ಮಾಡಿದೆ?”

ಆ ಹುಡುಗ ಅಳುತ್ತಾ ಗೋಗರೆದ, “ಕ್ಷಮಿಸಿ ಸರ್‌, ದಯವಿಟ್ಟು ಕ್ಷಮಿಸಿ. ಬೇರೇನು ಮಾಡಬೇಕೆಂಬುದು ನನಗೆ ಹೊಳೆಯಲಿಲ್ಲ. ಬಹಳ ಸಮಯದಿಂದ ಇಲ್ಲಿ ಹಾದುಹೋಗುತ್ತಿರುವ ಕಾರುಗಳನ್ನು ನಿಲ್ಲಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಯಾರೂ ನಿಲ್ಲಿಸಲಿಲ್ಲ. ಅಲ್ಲಿ ನೋಡಿ, ಅಲ್ಲಿ ಬಿದ್ದಿರುವುದು ನನ್ನ ಸಹೋದರ. ಅವನ ಗಾಲಿಕುರ್ಚಿ ರಸ್ತೆ ಬದಿಯ ದಿಂಡಿಗೆ ಅಕಸ್ಮಾತ್ತಾಗಿ ಢಿಕ್ಕಿಹೊಡೆದು ಮಗುಚಿದ್ದರಿಂದ ಕೆಳಕ್ಕೆ ಬಿದ್ದಿದ್ದಾನೆ. ಅವನನ್ನು ಎತ್ತಿ ಗಾಲಿಕುರ್ಚಿಯ ಮೇಲೆ ಕುಳ್ಳಿರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವನಿಗೆ ತರಚುಗಾಯಗಳೂ ಆಗಿವೆ, ರಕ್ತ ಜಿನುಗುತ್ತಿದೆ. ನೀವು ನನಗೆ ಸಹಾಯ ಮಾಡುವಿರಾ?”

ಇದಕ್ಕೆ ಎಂತು ಪ್ರತಿಕ್ರಿಯಿಸಬೇಕೆಂಬುದೇ ಅಧಿಕಾರಿಗೆ ತೋಚಲಿಲ್ಲ. ಮೌನವಾಗಿಯೇ ಅವನು ಬಿದ್ದಿದ್ದ ಬಾಲಕನತ್ತ ಹೋಗಿ ಅವನನ್ನು ಎತ್ತಿ ಗಾಲಿಕುರ್ಚಿಯ ಮೇಲೆ ಕುಳ್ಳಿರಿಸಿ ತನ್ನ ಕರವಸ್ತ್ರದಿಂದ ಜಿನುಗಿದ್ದ ರಕ್ತವನ್ನು ಒರೆಸಿದ.

“ಧನ್ಯವಾದಗಳು ಸರ್‌, ತುಂಬಾ ಧನ್ಯವಾದಗಳು. ನಿಮ್ಮಿಂದ ಬಹಳ ಉಪಕಾರವಾಯಿತು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ,” ಎಂಬುದಾಗಿ ಧನ್ಯವಾದಗಳನ್ನು ಅರ್ಪಿಸಿದ ಇಟ್ಟಿಗೆ ಎಸೆದ ಬಾಲಕ.

ಅಧಿಕಾರಿ ಆ ಬಾಗಿಲನ್ನು ದುರಸ್ತಿ ಮಾಡಿಸಲಿಲ್ಲ, ಸಹಾಯದ ಆವಶ್ಯಕತೆ ಇದ್ದವನೊಬ್ಬ ಇಟ್ಟಿಗೆ ಎಸೆದು ತನ್ನ ಗಮನ ಸೆಳೆಯಬೇಕಾದ ಸನ್ನಿವೇಶ ಏರ್ಪಟ್ಟದ್ದನ್ನು ಎಂದೆಂದಿಗೂ ಮರೆಯದಿರಲೋಸುಗ.

೮೭. ಕೊಡತಿ ಕೀಟ

ಒಂದು ಪುಟ್ಟ ಕೊಳದಲ್ಲಿ ಬೆಳೆದಿದ್ದ ನೈದಿಲೆ ಎಲೆಗಳ ಅಡಿಯಲ್ಲಿ ಇದ್ದ ಕೆಸರು ನೀರಿನಲ್ಲಿ ಅಪ್ಸರೆ ಕೀಟಗಳ ಒಂದು ಸಮುದಾಯ ವಾಸಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ಆಗುತ್ತಿದ್ದ ಸಣ್ಣಪುಟ್ಟ ತೊಂದರೆಗಳನ್ನು ಹೊರತುಪಡಿಸಿದರೆ ಅವುಗಳ ಜೀವನ ಹಿತಕರವಾಗಿ ಸಾಗುತ್ತಿತ್ತು. ಒಮ್ಮೊಮ್ಮೆ ಆ ಸಮುದಾಯದ ಸದಸ್ಯ ಅಪ್ಸರೆ ಕೀಟವೊಂದು ನೈದಿಲೆಯ ಕಾಂಡದಗುಂಟ ಮೇಲೇರುತ್ತಿತ್ತು ಹಾಗು ಅದು ಮುಂದೆಂದೂ ಯಾರಿಗೂ ಕಾಣದಂತೆ ಮಾಯವಾಗುತ್ತಿತ್ತು. ಇಂಥ ಸಂದರ್ಭಗಳಲ್ಲಿ ಸಮುದಾಯದ ಉಳಿದ ಎಲ್ಲ ಸದಸ್ಯರಿಗೂ ಬಹಳ ದುಃಖವಾಗುತ್ತಿತ್ತು. ಮೇಲೇರಿ ಹೋದ ತಮ್ಮ ಸಮುದಾಯದ ಸದಸ್ಯರು ಹಿಂದಕ್ಕೆ ಬರಲಾಗದ ಲೋಕಕ್ಕೆ ಹೋಗುತ್ತಿದ್ದಿರಬೇಕೆಂದು, ಅರ್ಥಾತ್‌ ಸತ್ತು ಹೋಗುತ್ತಿರಬೇಕೆಂದು ಅವು ತಿಳಿದಿದ್ದವು.

ಇಂತಿರುವಾಗ ಒಂದು ದಿನ ಒಂದು ಅಪ್ಸರೆ ಕೀಟಕ್ಕೆ ನೈದಿಲೆ ಕಾಂಡವನ್ನೇರಿ ಮೇಲೆ ಹೋಗಲೇ ಬೇಕೆಂಬ ಅದಮ್ಯ ಬಯಕೆ ಉಂಟಾಯಿತು. ತಾನು ಕಾಂಡದಗುಂಟ ಮೇಲೇರಿ ಯಾರಿಗೂ ಕಾಣದಂತೆ ಮಾಯವಾಗುವ ಬದಲು ಪುನಃ ಹಿಂದಿರುಗಿ ಬಂದು ಮೇಲೆ ನೋಡಿದ್ದನ್ನು ತನ್ನ ಮಿತ್ರರಿಗೆ ತಿಳಿಸಲೇಬೇಕೆಂದು ನಿರ್ಧರಿಸಿತು.

ಅದು ಕಾಂಡದ ಮೇಲ್ತುದಿಯನ್ನು ತಲುಪಿ ನೀರಿನಿಂದ ಹೊರಬಂದು ನೈದಿಲೆ ಎಲೆಯ ಮೇಲ್ಮೈಗೆ ಹತ್ತಿತು. ವಿಪರೀತ ದಣಿವಾಗಿದ್ದರಿಂದಲೂ ಸೂರ್ಯನ ಬಿಸಿಲಿನಿಂದಾಗಿ ಮೈ ತುಸು ಬೆಚ್ಚಗಾದದ್ದರಿಂದಲೂ ಸ್ವಲ್ಪ ಕಾಲ ಹಗುರವಾಗಿ ನಿದ್ದೆ ಮಾಡಲು ನಿರ್ಧರಿಸಿತು. ನಿದ್ದೆ ಮಾಡುತ್ತಿದ್ದಾಗ ಅದರ ದೇಹದಲ್ಲಿ ಬದಲಾವಣೆಗಳು ಆದವು. ನಿದ್ದೆಯಿಂದ ಎದ್ದಾಗ ಹಾರಲು ತಕ್ಕುದಾದ ಮೈಕಟ್ಟೂ ಸುಂದರವಾದ ರೆಕ್ಕೆಗಳೂ ತನ್ನದಾಗಿರುವುದು ಅದಕ್ಕೆ ತಿಳಿಯಿತು. ವಾಸ್ತವವಾಗಿ ಅದೊಂದು ಸುಂದರ ಕೊಡತಿ ಕೀಟವಾಗಿತ್ತು.

ಅದು ತನ್ನ ರೆಕ್ಕೆಗಳ ನೆರವಿನಿಂದ ಹಾರಿಯೇ ಬಿಟ್ಟಿತು, ಜಗತ್ತಿನ ಸೌಂದರ್ಯವನ್ನು ಆಸ್ವಾದಿಸಿತು, ಇಂಥದ್ದೊಂದು ಉನ್ನತ ಮಟ್ಟದ ಜೀವನ ಸಾಗಿಸುವ ಅವಕಾಶ ದೊರೆತದ್ದಕ್ಕಾಗಿ ಸಂತೋಷಪಟ್ಟಿತು.

ತಕ್ಷಣವೇ ಕೊಳದ ತಳಕ್ಕೆ ಹೋಗಿ ತನ್ನ ಸಮುದಾಯದ ಇತರ ಸದಸ್ಯರಿಗೆ ಇಂಥ ಒಳ್ಳೆಯ ಸತ್ಯಸಂಗತಿಯನ್ನು ತಿಳಿಸಲು ಇಚ್ಛಿಸಿತು. ತನ್ನ ಹಾಲಿ ದೇಹದಲ್ಲಿ ಅಂತು ಮಾಡಲು ಸಾಧ್ಯವಿಲ್ಲ ಎಂಬುದರ ಅರಿವೂ ಅದಕ್ಕಾಯಿತು. ತನ್ನ ಸಮುದಾಯದ ಪ್ರತೀ ಸದಸ್ಯನಿಗೂ ತನಗೆ ಒದಗಿ ಬಂದಂತೆ ಅದರದ್ದೇ ಆದ ಸಮಯ ಒದಗಿ ಬಂದು ತನಗಾದ ಅನುಭವವೇ ಆಗುತ್ತದೆ ಎಂಬ ಅರಿವೂ ಉಂಟಾಯಿತು.

ಎಂದೇ ತನ್ನ ಹೊಸ ಜೀವನವನ್ನು ಸಂತೋಷದಿಂದ ಕಳೆಯುವ ಇರಾದೆಯಿಂದ ಅದು ಹಾರಲಾರಂಭಿಸಿತು.

೮೮. ಆತ್ಮವಿಶ್ವಾಸದ ಮಹಿಮೆ!

ವ್ಯಾಪಾರ ಕಾರ್ಯನಿರ್ವಾಹಕನೊಬ್ಬ ವಿಪರೀತ ಸಾಲ ಮಾಡಿ ನಷ್ಟ ಅನುಭವಿಸಿದ. ಸಾಲಕೊಟ್ಟವರು ಸಾಲ ಹಿಂದಿರುಗಿಸುವಂತೆಯೂ, ಸರಕು ಪೂರೈಸಿದವರು ಅದರ ಬಾಬಿನ ಹಣ ಪಾವತಿಸುವಂತೆಯೂ ಪೀಡಿಸಲಾರಂಭಿಸಿದ್ದರು. ನಗರದ ಉದ್ಯಾನವನದ ಕಲ್ಲುಬೆಂಚಿನ ಮೇಲೆ ಆತ ನಿರಾಶನಾಗಿ ಕುಳಿತುಕೊಂಡು ತನ್ನ ವ್ಯಾಪಾರವಹಿವಾಟಿನ ಸಂಸ್ಥೆ ದಿವಾಳಿ ಆಗುವುದನ್ನು ತಪ್ಪಿಸುವುದು ಹೇಗೆ ಎಂಬುದರ ಕುರಿತು ಆಲೋಚಿಸುತ್ತಿದ್ದ.

ಹಠಾತ್ತನೆ ಅವನ ಎದುರು ಬಂದು ನಿಂತ ವೃದ್ಧನೊಬ್ಬ ಹೇಳಿದ, “ನಿಮ್ಮನ್ನು ಏನೋ ಬಾಧಿಸುತ್ತಿರುವಂತಿದೆ.” ಕಾರ್ಯನಿರ್ವಾಹಕ ತನ್ನೆಲ್ಲ ಸಮಸ್ಯೆಗಳನ್ನು ಆ ವೃದ್ಧನಿಗೆ ತಿಳಿಸಿದ. ಅದನ್ನೆಲ್ಲ ಮೌನವಾಗಿ ಕೇಳಿದ ವೃದ್ಧ ಹೇಳಿದ, “ನಾನು ನಿನಗೆ ಸಹಾಯ ಮಾಡಬಲ್ಲೆ.”

ತದನಂತರ ಆತ ಕಾರ್ಯನಿರ್ವಾಹಕನ ಹೆಸರನ್ನು ಕೇಳಿ ತಿಳಿದುಕೊಂಡು ಅವನ ಹೆಸರಿಗೆ ಒಂದು ಚೆಕ್‌ ಬರೆದ. ಅದನ್ನು ಕಾರ್ಯನಿರ್ವಾಹಕನ ಕೈಗೆ ತುರುಕುತ್ತಾ ಹೇಳಿದ, “ಈ ಹಣ ತೆಗೆದುಕೊ. ಇಂದಿನಿಂದ ಸರಿಯಾಗಿ ಒಂದು ವರ್ಷ ಕಳೆದ ನಂತರ ಇದೇ ಸ್ಥಳದಲ್ಲಿ ನನ್ನನ್ನು ಭೇಟಿಯಾಗು. ಅಂದು ನೀನು ನನ್ನ ಹಣವನ್ನು ಹಿಂದಿರುಗಿಸುವ ಸ್ಥಿತಿಯಲ್ಲಿ ಇರುವುದು ಖಚಿತ.” ಬಂದಷ್ಟೇ ವೇಗವಾಗಿ ಆ ವೃದ್ಧ ಅಲ್ಲಿಂದ ಹೊರಟುಹೋದ.

ಕಾರ್ಯನಿರ್ವಾಹಕ ಆ ಚೆಕ್‌ ನೋಡಿ ಮೂಕವಿಸ್ಮಿತನಾದ. ಅದರಲ್ಲಿ $೫೦,೦೦೦ ನಗದು ನಮೂದಾಗಿತ್ತು. ಚೆಕ್‌ ಸಹಿಮಾಡಿದಾತ ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿ ಒಬ್ಬನಾಗಿದ್ದ ರಾಕ್‌ಫೆಲ್ಲರ್‌.

ಈ ಹಣದಿಂದ ತನ್ನೆಲ್ಲ ಚಿಂತೆಗಳನ್ನೂ ಒಂದೇ ಬಾರಿಗೆ ತೊಡೆದುಹಾಕಬಹುದು ಎಂಬ ಅರಿವು ಆ ಕಾರ್ಯನಿರ್ವಾಹಕನಿಗೆ ಆದರೂ ಆತ ಆ ಹಣವನ್ನು ಉಪಯೋಗಿಸುವುದಕ್ಕೆ ಬದಲಾಗಿ ನವ ಚೈತನ್ಯದಿಂದ ತನ್ನ ವ್ಯಾಪಾರವಹಿವಾಟುಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕೆಲವೇ ತಿಂಗಳುಗಳಲ್ಲಿ ಸಾಲದ ಸುಳಿಯಿಂದ ಹೊರಬಂದು ಲಾಭ ಗಳಿಸಲಾರಂಭಿಸಿದ.

ಸರಿಯಾಗಿ ಒಂದು ವರ್ಷವಾದ ನಂತರ ಆತ ಆ ವೃದ್ಧನನ್ನು ಭೇಟಿಯಾಗಿದ್ದ ಉದ್ಯಾನವನಕ್ಕೆ ಆ ಚೆಕ್‌ ಸಹಿತ ಹೋಗಿ ಕಾಯುತ್ತಿದ್ದ. ನಿಗದಿತ ವೇಳೆಗೆ ಸರಿಯಾಗಿ ಆ ವೃದ್ಧ ಬರುತ್ತಿದ್ದದ್ದು ಕಾಣಿಸಿತು. ಕಾರ್ಯನಿರ್ವಾಹಕನ ಸಮೀಪಕ್ಕೆ ಅವನು ಬರುವ ವೇಳೆಗೆ ಸರಿಯಾಗಿ ಯಾವುದೋ ಆಸ್ಪತ್ರೆಯ ದಾದಿಯೊಬ್ಬಳು ಓಡುತ್ತಾ ಬಂದು ಆ ವೃದ್ಧನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ತದನಂತರ ಕಾರ್ಯನಿರ್ವಾಹಕನನ್ನು ಕೇಳಿದಳು, “ಕ್ಷಮಿಸಿ ಸರ್‌. ಈತ ನಿಮಗೇನೂ ತೊಂದರೆ ಮಾಡಲಿಲ್ಲ ಎಂಬುದಾಗಿ ಭಾವಿಸುತ್ತೇನೆ. ಈತ ಯಾವಾಗಲೂ ಅದು ಹೇಗೋ ನಮ್ಮ ಮನೋರೋಗಿಗಳ ಚಿಕಿತ್ಸಾಲಯದಿಂದ ತಪ್ಪಿಸಿಕೊಂಡು ಇಲ್ಲಿಗೆ ಬರುತ್ತಾನೆ. ಈತ ತನ್ನನ್ನು ತಾನು ಜಾನ್‌ ಡಿ ರಾಕ್‌ಫೆಲ್ಲರ್‌ ಎಂಬುದಾಗಿ ಪರಿಚಯಿಸಿಕೊಳ್ಳುತ್ತಾನೆ!”

ಈ ಬಾರಿ ಮತ್ತೊಮ್ಮೆ ಮೂಕವಿಸ್ಮಿತನಾದ ಕಾರ್ಯನಿರ್ವಾಹಕ ಮನೋರೋಗಿ ಕೊಟ್ಟಿದ್ದ ಆ ನಿರುಪಯುಕ್ತ ಚೆಕ್‌ಅನ್ನುದಿಟ್ಟಿಸಿ ನೋಡಿದ!

೮೯. ನಾಯಿ ಮರಿಗಳು ಮಾರಾಟಕ್ಕಿವೆ

ತನ್ನ ಹತ್ತಿರ ಇದ್ದ ಕೆಲವು ನಾಯಿ ಮರಿಗಳನ್ನು ಮಾರುವ ಆವಶ್ಯಕತೆ ರೈತನೊಬ್ಬನಿಗೆ ಉಂಟಾಯಿತು. ‘ನಾಲ್ಕು ನಾಯಿ ಮರಿಗಳು ಮಾರಾಟಕ್ಕಿವೆ’ ಎಂಬುದಾಗಿ ಬರೆದಿದ್ದ ರಟ್ಟಿನ ಫಲಕವೊಂದನ್ನು ಆತ ತನ್ನ ಮನೆಯ ಮುಂಭಾಗದಲ್ಲಿದ್ದ ಬೇಲಿಯ ಕಂಬಕ್ಕೆ ಮೊಳೆ ಹೊಡೆದು ನೇತು ಹಾಕುತ್ತಿದ್ದಾಗ ಅವನಿಗೆ ತನ್ನ ನಿಲುವಂಗಿಯನ್ನು ಯಾರೋ ಎಳೆದಂತಾಯಿತು. ತಿರುಗಿ ನೋಡಿದಾಗ ಅಲ್ಲೊಬ್ಬ ಪುಟ್ಟ ಬಾಲಕ ನಿಂತಿದ್ದ.

ಬಾಲಕ: “ಮಿಸ್ಟರ್‌, ನಿಮ್ಮ ಹತ್ತಿರವಿರುವ ನಾಯಿ ಮರಿಗಳ ಪೈಕಿ ಒಂದನ್ನು ನಾನು ಕೊಂಡುಕೊಳ್ಳುತ್ತೇನೆ.”

ರೈತ: “ಇವು ಒಳ್ಳೆಯ ತಳಿಯ ಮರಿಗಳು. ಆದ್ದರಿಂದ ಇವುಗಳ ಬೆಲೆಯೂ ಹೆಚ್ಚು.”

ಬಾಲಕ ತಲೆ ತಗ್ಗಿಸಿ ಕೆಲವು ಕ್ಷಣಗಳ ಕಾಲ ಏನನ್ನೋ ಆಲೋಚಿಸಿದ. ತದನಂತರ ತನ್ನ ಷರಾಯಿಯ ಜೇಬಿನೊಳಕ್ಕೆ ಕೈ ತೂರಿಸಿ ಮುಷ್ಟಿಯಲ್ಲಿ ಕೆಲವು ನಾಣ್ಯಗಳನ್ನು ಹೊರತೆಗೆದು ತೋರಿಸುತ್ತಾ ಹೇಳಿದ: “ನನ್ನ ಹತ್ತಿರ ಮೂವತ್ತೊಂಬತ್ತು  ಸೆಂಟ್ಸ್‌ ಇದೆ. ನಾಯಿ ಮರಿಗಳನ್ನು ನೋಡಲು ಇದು ಸಾಕಾಗಬಹುದೇ?”

ರೈತ: “ಖಂಡಿತ ಸಾಕು.”

ರೈತ ಡಾಲಿ ಡಾಲಿ ಎಂಬುದಾಗಿ ಕರೆಯುತ್ತಾ ಶಿಳ್ಳು ಹೊಡೆದ. ಕೊಟ್ಟಿಗೆಯೊಳಗಿನಿಂದ ನಾಲ್ಕು ಹತ್ತಿಯ ಉಂಡೆಯಂತಿದ್ದ ನಾಲ್ಕು ಮುದ್ದಾದ ಮರಿಗಳೊಂದಿಗೆ ತಾಯಿ ನಾಯಿ ಡಾಲಿ ಹೊರಬಂದಿತು. ಅವನ್ನು ನೋಡುವಾಗ ಬಾಲಕನ ಕಣ್ಣುಗಳು ಬಲು ಆನಂದದಿಂದ ಹೊಳೆಯುತ್ತಿದ್ದವು. ಕೆಲವು ಕ್ಷಣಗಳ ನಂತರ ಕೊಟ್ಟಿಗೆಯೊಳಗಿನಿಂದ ನಿಧಾನವಾಗಿ ಇನ್ನೊಂದು ಮರಿ ಹೊರಬಂದಿತು. ಅದು ಕುಂಟುತ್ತಾ ಉಳಿದ ಮರಿಗಳ ಜೊತೆ ಸೇರಲು ಕಷ್ಟಪಡುತ್ತಿತ್ತು.

ಬಾಲಕ ಅದನ್ನು ನೋಡಿದ ತಕ್ಷಣವೇ ಖುಷಿಯಿಂದ ಹೇಳಿದ, “ನನಗೆ ಆ ಮರಿ ಬೇಕು.”

ರೈತ: “ಮಗೂ ಅದರ ಕಾಲು ಸರಿ ಇಲ್ಲದ್ದರಿಂದ ಕುಂಟುತ್ತಿದೆ. ನಿನ್ನೊಂದಿಗೆ ಮೈದಾನದಲ್ಲಿ ಓಡಾಡುತ್ತಾ ಆಟವಾಡಲು ಅದರಿಂದ ಸಾಧ್ಯವಿಲ್ಲ.

ಬಾಲಕ ತನ್ನ ಷರಾಯಿಯ ಒಂದು ಕಾಲನ್ನು ಮೇಲಕೆತ್ತಿ ತೋರಿಸುತ್ತಾ ಹೇಳಿದ, “ಇಲ್ಲಿ ನೋಡಿ, ನಾನೊಬ್ಬ ಕುಂಟ, ವಿಶೇಷವಾದ ಪಾದರಕ್ಷೆ ಧರಿಸಿದ್ದೇನೆ. ಆದ್ದರಿಂದ ನಾನೂ ವೇಗವಾಗಿ ಇತರರಂತೆ ಓಡಲಾರೆ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೊತೆಯಾಗಿರುವುದು ಸುಲಭವಾಗುತ್ತದೆ.”

ಮರುಮಾತನಾಡದೆ ರೈತ ಆ ನಾಯಿಮರಿಯನ್ನು ಜೋಪಾನವಾಗಿ ಎತ್ತಿ ಬಾಲಕನ ಕೈಗೆ ಕೊಟ್ಟನು.

ಬಾಲಕ: “ಈ ಮರಿಗೆ ನಾನು ಎಷ್ಟು ಹಣ ಕೊಡಬೇಕು?”

ರೈತ: “ಏನೂ ಕೊಡಬೇಕಾಗಿಲ್ಲ, ಏಕೆಂದರೆ ಅರ್ಥಪೂರ್ಣ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.”

೯೦. ಮುತ್ತಿನ ಹಾರ

ಹಾರಾಡುವ ಹೊಂಬಣ್ಣದ ಗುಂಗುರು ಕೂದಲಿನ ನಗುಮೊಗದ ೫ ವರ್ಷ ವಯಸ್ಸಿನ ಪುಟ್ಟ ಬಾಲಕಿ ಜೆನ್ನಿ ತನ್ನ ತಾಯಿಯೊಂದಿಗೆ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗೆ ಬಂದಿದ್ದಳು. ಬೆರಗುಗಣ್ಣುಗಳಿಂದ ಎಲ್ಲವನ್ನೂ ನೋಡುತ್ತಿದ್ದ ಆಕೆಗೆ ಇದ್ದಕ್ಕಿದ್ದಂತೆ ಗೋಚರಿಸಿತು: ಗುಲಾಬಿ ಬಣ್ಣದ ಪುಟ್ಟ ಪೆಟ್ಟಿಗೆಯಲ್ಲಿ ಇದ್ದ ಹೊಳೆಯುತ್ತಿರುವ ಬಿಳಿ ಮುತ್ತುಗಳ ಕಂಠಹಾರ.

“ಓಹ್‌, ಅಮ್ಮ ದಯವಿಟ್ಟು ಅದನ್ನು ಕೊಡಿಸಮ್ಮ, ಪ್ಲೀಸ್‌, ಪ್ಲೀಸ್, ಪ್ಲೀಸ್‌,” ಗೋಗರೆಯುತ್ತಾ ತಾಯಿಯ ಸುತ್ತಲೂ ಕುಣಿದಳು ಅವಳು.

ಆ ಡಬ್ಬಿಯನ್ನು ತೆಗೆದುಕೊಂಡು ಅದಕ್ಕೆ ಅಂಟಿಸಿದ್ದ ಬೆಲೆಚೀಟಿಯನ್ನು ಓದಿದ ನಂತರ ತನ್ನನ್ನೇ ಆಸೆಯ ಕಣ್ಣುಗಳಿಂದ ನೋಡುತ್ತಿದ್ದ ಮಗಳಿಗೆ ತಾಯಿ ಹೇಳಿದಳು, “ಒಂದು ಡಾಲರ್‌ ತೊಂಬತ್ತೈದು ಸೆಂಟ್ಸ್‌. ಅಂದರೆ, ಹೆಚ್ಚುಕಮ್ಮಿ ಎರಡು ಡಾಲರ್‌. ನಿನಗೆ ಅದು ನಿಜವಾಗಿಯೂ ಬೇಕು ಅನ್ನುವುದಾದರೆ ಅಗತ್ಯವಾದ ಹಣ ನೀನೇ ಸಂಪಾದಿಸಲು ನೆರವಾಗಬಲ್ಲ ಕೆಲವು ಹೆಚ್ಚುವರಿ ಮನೆಗೆಲಸಗಳನ್ನು ಸೂಚಿಸುತ್ತೇನೆ. ಇನ್ನೂ ಒಂದು ವಾರದ ನಂತರ ಬರುತ್ತದೆ ನಿನ್ನ ಹುಟ್ಟುಹಬ್ಬ. ಆಗ ನಿನ್ನ ಅಜ್ಜಿಯೂ ಒಂದು ಡಾಲರ್‌ ಕೊಡುತ್ತಾಳೆ.”

ಮನೆಗೆ ತಲುಪಿದ ತಕ್ಷಣ ತನ್ನ ದುಡ್ಡಿನ ಗೋಲಕದಲ್ಲಿ ಇದ್ದ ಹಣವನ್ನು ಮೇಜಿನ ಮೇಲೆ ಸುರಿದು ಎಣಿಸಿ ನೋಡಿದಳು, ೧೭ ಪೆನ್ನಿಗಳು ಇದ್ದವು. ಮುತ್ತಿನ ಹಾರ ಕೊಳ್ಳಲು ಅಗತ್ಯವಿದ್ದ ಬಾಕಿ ಹಣ ಸಂಪಾದಿಸಲೋಸುಗ ಮನೆಯಲ್ಲಿ ಮಾಮೂಲಾಗಿ ಮಾಡುತ್ತಿದ್ದದ್ದಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡುವುದರೊಂದಿಗೆ ತಾನು ಮಾಡಬಹುದಾದ ನೆರೆಹೊರೆಯವರ ಕೆಲಸಗಳನ್ನೂ ಮಾಡಲಾರಂಭಿಸಿದಳು.

ತನ್ನ ಸಂಪಾದನೆಯ ಹಣಕ್ಕೆ ಹುಟ್ಟುಹಬ್ಬದಂದು ಅಜ್ಜಿ ಕೊಟ್ಟ ಒಂದು ಡಾಲರ್‌ ಸೇರಿಸಿ ಒಂದು ಡಾಲರ್‌ ತೊಂಬತ್ತೈದು ಸೆಂಟ್ಸ್‌ ಹಣ ಸಂಗ್ರಹವಾದ ತಕ್ಷಣ ತನ್ನ ಮೆಚ್ಚಿನ ಹಾರ ಖರೀದಿಸಿದಳು. ಅವು ಒದ್ದೆಯಾದರೆ ಅವಳ ಕುತ್ತಿಗೆ ಗುಲಾಬಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ ಎಂಬುದಾಗಿ ಅವಳ ಅಮ್ಮ ಹೇಳಿದ್ದರಿಂದ ಸ್ನಾನ ಮಾಡುವಾಗ ಹಾಗು ಈಜುವಾಗ ಹೊರತುಪಡಿಸಿ ಅದನ್ನು ಜೆನ್ನಿ ಸದಾ ಧರಿಸಿಕೊಂಡೇ ಇರುತ್ತಿದ್ದಳು.

ಜೆನ್ನಿಯ ತಂದೆ ಅವಳನ್ನು ಬಹುವಾಗಿ ಪ್ರೀತಿಸುತ್ತಿದ್ದ. ಪ್ರತೀ ದಿನ ರಾತ್ರಿ ಆಕೆ ಮಲಗುವ ವೇಳೆಗೆ ಆತ ತಾನು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿ ಅವಳ ಕೋಣೆಗೆ ಬಂದು ಒಂದು ಕತೆ ಓದಿ ಹೇಳುತ್ತಿದ್ದ. ಒಂದು ದಿನ ಕತೆ ಓದಿ ಆದ ನಂತರ ಅವನು ಕೇಳಿದ, “ನೀನು ನನ್ನನ್ನು ಪ್ರೀತಿಸುತ್ತಿರುವೆಯಾ?”

“ಹೌದು. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವಿಷಯ ನಿಮಗೆ ಗೊತ್ತಿದೆ,” ಉತ್ತರಿಸಿದಳು ಜೆನ್ನಿ.

“ಹಾಗಿದ್ದರೆ ನಿನ್ನ ಮುತ್ತಿನ ಹಾರವನ್ನು ನನಗೆ ಕೊಡು,” ಕೇಳಿದ ಜೆನ್ನಿಯ ತಂದೆ.

“ಓಹ್‌, ಅಪ್ಪ, ನನ್ನ ಮುತ್ತಿನ ಹಾರವನ್ನು ಮಾತ್ರ ಕೇಳಬೇಡ. ಅದಕ್ಕೆ ಬದಲಾಗಿ ನೀನು ನನಗೆ ಕೊಟ್ಟಿದ್ದ ಬಿಳಿ ಕುದುರೆಯ ಬೊಂಬೆಯನ್ನು ಕೊಡುತ್ತೇನೆ. ಅದೂ ಕೂಡ ನನಗೆ ತುಂಬ ಇಷ್ಟವಾದ ಬೊಂಬೆ,” ಅಂದಳು ಜೆನ್ನಿ.

“ಪರವಾಗಿಲ್ಲ ಬಿಡು. ನೀನು ನನ್ನ ಮುದ್ದಿನ ಮಗಳು. ಶುಭರಾತ್ರಿ,” ಎಂಬುದಾಗಿ ಹೇಳಿದ ಅವಳ ತಂದೆ ಅವಳ ಹಣೆಗೆ ಮುತ್ತು ಕೊಟ್ಟು ಅಲ್ಲಿಂದ ತನ್ನ ಕೋಣೆಗೆ ಹೋದನು.

ಒಂದು ವಾರದ ನಂತರ ಒಂದು ದಿನ ಕತೆ ಓದಿ ಆದ ನಂತರ ಅವನು ಕೇಳಿದ, “ನೀನು ನನ್ನನ್ನು ಪ್ರೀತಿಸುತ್ತಿರುವೆಯಾ?”

“ಹೌದು. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವಿಷಯ ನಿಮಗೆ ಗೊತ್ತಿದೆ,” ಉತ್ತರಿಸಿದಳು ಜೆನ್ನಿ.

“ಹಾಗಿದ್ದರೆ ನಿನ್ನ ಮುತ್ತಿನ ಹಾರವನ್ನು ನನಗೆ ಕೊಡು,” ಕೇಳಿದ ಜೆನ್ನಿಯ ತಂದೆ.

“ಓಹ್‌, ಅಪ್ಪ, ನನ್ನ ಮುತ್ತಿನ ಹಾರವನ್ನು ಮಾತ್ರ ಕೇಳಬೇಡ. ಅದಕ್ಕೆ ಬದಲಾಗಿ ನನ್ನ ಹತ್ತಿರ ಇರುವ ಮುದ್ದು ಮಗುವಿನ ಬೊಂಬೆಯನ್ನು ಕೊಡುತ್ತೇನೆ. ನನ್ನ ಹುಟ್ಟುಹಬ್ಬದಂದು ಉಡುಗೊರೆಯಾಗಿ ಬಂದ ಬೊಂಬೆ ಅದು. ಅದರೊಂದಿಗೆ ಅದನ್ನು ಮಲಗಿಸಲು ಹೊಂದಾಣಿಕೆ ಆಗುವ ಹಳದಿ ಕಂಬಳಿಯನ್ನೂ ಕೊಡುತ್ತೇನೆ.ಅದೂ ಕೂಡ ನನಗೆ ತುಂಬ ಇಷ್ಟವಾದ ಬೊಂಬೆ,” ಅಂದಳು ಜೆನ್ನಿ.

“ಪರವಾಗಿಲ್ಲ ಬಿಡು. ನೀನು ನನ್ನ ಮುದ್ದಿನ ಮಗಳು. ಶುಭರಾತ್ರಿ,” ಎಂಬುದಾಗಿ ಹೇಳಿದ ಅವಳ ತಂದೆ ಅವಳ ಹಣೆಗೆ ಮುತ್ತು ಕೊಟ್ಟು ಅಲ್ಲಿಂದ ತನ್ನ ಕೋಣೆಗೆ ಹೋದನು.

ಕೆಲವು ದಿನಗಳ ನಂತರ  ಒಂದು ದಿನ ರಾತ್ರಿ  ಕತೆ ಓದಿ ಹೇಳಲೋಸುಗ  ಜೆನ್ನಿಯ ಕೋಣೆಗೆ ಅವಳ ತಂದೆ ಬಂದಾಗ ಆಕೆ ಹಾಸಿಗೆಯ ಮೇಲೆ ಮೌನವಾಗಿ ಏನನ್ನೋ ಆಲೋಚಿಸುತ್ತಾ ಅವಳು ಕುಳಿತಿದ್ದಳು. ಅವಳ ಕೆನ್ನೆಯ ಮೇಲೆ ಕಣ್ಣೀರು ಹರಿದಿದ್ದದ್ದು ಕಾಣಿಸುತ್ತಿತ್ತು.
ಆತ ಕೇಳಿದ, “ಜೆನ್ನಿ ಏನು ವಿಷಯ? ಏಕೆ ಅಳುತ್ತಿರುವೆ?”

ಆಕೆ ಮೌನವಾಗಿ ತನ್ನ ಕೈಯನ್ನು ಅವನತ್ತ ಚಾಚಿ ನಡುಗುವ ಧ್ವನಿಯಲ್ಲಿ ಹೇಳಿದಳು, “ಅಪ್ಪಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಇದು ನಿನಗೆ.” ಅವಳ ಕೈನಲ್ಲಿ ಅವಳ ಪ್ರೀತಿಯ ಮುತ್ತಿನ ಹಾರವಿತ್ತು.

ಜೆನ್ನಿಯ ತಂದೆ ಒಂದು ಕೈನಿಂದ ಆ ನಕಲಿ ಮುತ್ತಿನ ಹಾರವನ್ನು ತೆಗೆದುಕೊಂಡು ಇನ್ನೊಂದು ಕೈಯನ್ನು ತನ್ನ ನಿಲುವಂಗಿಯ ಜೇಬಿಗೆ ಹಾಕಿ ಒಂದು ನೀಲಿ ಬಣ್ಣದ ಮಕಮಲ್ಲಿನ ಹೊದಿಕೆ ಇದ್ದ ಪೆಟ್ಟಿಗೆಯೊಂದನ್ನು ಹೊರತೆಗೆದು ಅವಳಿಗೆ ಕೊಟ್ಟನು. ಅದರೊಳಗಿತ್ತು ಬಲು ಸುಂದರವಾದ ನಿಜವಾದ ಮುತ್ತುಗಳ ಕಂಠಹಾರ.

ಅದು ಬಹಳ ದಿನಗಳಿಂದ ಅವನ ಕಿಸೆಯಲ್ಲಿ ಇತ್ತು. ನಕಲಿ ಸಂಪತ್ತನ್ನು ಪರಿತ್ಯಜಿಸಿದಾಗ ಆಕೆಗೆ ಸಿಕ್ಕಿತು ಅಸಲಿ ಸಂಪತ್ತು!

೯೧. “ವರ್ಣಮಾಲಾ ಪ್ರಾರ್ಥನೆ”

ಕುರಿಕಾಯುತ್ತಿದ್ದ ಹುಡುಗನೊಬ್ಬನಿಗೆ ಒಂದು ಭಾನುವಾರ ದೂರದಲ್ಲಿ ಚರ್ಚ್‌ನ ಘಂಟೆ ಬಾರಿಸುತ್ತಿದ್ದದ್ದು ಕೇಳಿಸಿತು. ತಾನು ಕುರಿಮಂದೆ ಮೇಯಿಸುತ್ತಿದ್ದ ಹುಲ್ಲುಗಾವಲಿನ ಮೂಲಕ ಚರ್ಚ್‌ನತ್ತ ಜನ ಹೋಗುತ್ತಿದ್ದದ್ದನ್ನು ನೋಡಿದ ಅವನು ತನಗೆ ತಾನೇ ಹೇಳಿಕೊಂಡ, “ನಾನು ದೇವರೊಂದಿಗೆ ಮಾತನಾಡಬೇಕು ಅಂದುಕೊಂಡಿದ್ದೇನೆ. ಆದರೆ, ದೇವರಿಗೆ ನಾನು ಏನನ್ನು ಹೇಗೆ ಹೇಳಲಿ?”

ಅವನಿಗೆ ಯಾವ ಪ್ರಾರ್ಥನೆಯೂ ಬರುತ್ತಿರಲಿಲ್ಲ. ಆದ್ದರಿಂದ ಆತ ಮಂಡಿಯೂರಿ ಕುಳಿತು ವರ್ಣಮಾಲೆಯನ್ನು ಪುನಃ ಪುನಃ ಹೇಳಲಾರಂಭಿಸಿದ. ಆ ಸ್ಥಳದ ಮೂಲಕ ಚರ್ಚ್‌ಗೆ ಹೋಗುತ್ತಿದ್ದ ಒಬ್ಬಾತ ಅದನ್ನು ನೋಡಿ ಕೇಳಿದ, “ಮಗೂ ನೀನೇನು ಮಾಡುತ್ತಿರುವೆ?”

ಹುಡುಗ ಹೇಳಿದ, “ಸರ್‌, ನಾನು ಪ್ರಾರ್ಥನೆ ಮಾಡುತ್ತಿದ್ದೇನೆ.”

“ಆದರೆ, ನೀನು ವರ್ಣಮಾಲೆಯನ್ನು ಹೇಳುತ್ತಿರುವೆ, ಏಕೆ?”

ಹುಡುಗ ವಿವರಿಸಿದ, “ಸರ್‌, ನಾನು ಯಾವ ಪ್ರಾರ್ಥನೆಯನ್ನೂ ಕಲಿತಿಲ್ಲ. ಆದಾಗ್ಯೂ, ನನ್ನನ್ನೂ ನನ್ನ ಕುರಿಗಳನ್ನೂ ದೇವರು ಕಾಪಾಡಬೇಕು ಎಂಬುದು ನನ್ನ ಬಯಕೆ. ನನಗೆ ಗೊತ್ತಿರುವುದೆಲ್ಲವನ್ನೂ ಹೇಳಿದರೆ ದೇವರೇ ಅವನ್ನು ನನ್ನ ಮನಸ್ಸಿನಲ್ಲಿ ಇರುವ ಪದಗಳಾಗಿ ಪೋಣಿಸಿಕೊಂಡು ನಾನು ಹೇಳಬೇಕು ಅಂದುಕೊಂಡಿರುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬುದಾಗಿ ಭಾವಿಸಿದ್ದೇನೆ.”

ಆತ ನಸುನಕ್ಕು ಹೇಳಿದ, “ದೇವರು ಖಂಡಿತವಾಗಿಯೂ ನೀನಂದುಕೊಂಡಂತೆ ಮಾಡುತ್ತಾನೆ.”

ತದನಂತರ ಅವನು ಚರ್ಚ್‌ಗೆ ಹೋಗುತ್ತಾ ಆಲೋಚಿಸಿದ: “ಇಂದು ನಾನು ಒಂದು ಅತ್ಯುತ್ತಮವಾದ ಧರ್ಮಪ್ರವಚನ ಕೇಳಿದೆ.”

೯೨. ಹೀಗೂ ಆಗಬಹುದು

ಒಂದು ದಿನ ಸೂರ್ಯಾಸ್ತವಾದ ನಂತರ ಮಂದಪ್ರಕಾಶದ ಬೆಳಕು ಇದ್ದ ನಿರ್ಜನ ರಸ್ತೆಯಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದೆ. ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಪೊದೆಯೊಂದರ ಹಿಂದಿನಿಂದ ಕ್ಷೀಣಧ್ವನಿಯ ಚೀರಾಟ ಕೇಳಿಸಿತು. ಗಾಬರಿಯಾಗಿ, ಅಲ್ಲಿಯೇ ನಿಂತು ಗಮನವಿಟ್ಟು ಕೇಳಿದೆ. ನಿಸ್ಸಂದೇಹವಾಗಿ ಒಂದು ಹೆಣ್ಣು ಒಂದು ಗಂಡಿನ ಕೈನಿಂದ ಬಿಡಿಸಿಕೊಳ್ಳಲು ತೀವ್ರವಾಗಿ ಕೊಸರಾಡುತ್ತಿರುವಾಗ ಹೊಮ್ಮುತ್ತಿದ್ದ ಶಬ್ದಗಳು ಅವಾಗಿದ್ದವು. ನಾನು ನಿಂತಿದ್ದಲ್ಲಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿ ಯಾರೋ ಒಬ್ಬ ಹೆಣ್ಣಿನ ಮೇಲೆ ಬಲಾತ್ಕಾರದ ಪ್ರಯತ್ನ ನಡೆಯುತ್ತಿತ್ತು. ‘ಅದನ್ನು ತಡೆಯಲು ನಾನು ಪ್ರಯತ್ನಿಸಬೇಕೇ ಬೇಡವೇ, ನನ್ನ ಜೀವಕ್ಕೇ ಅಪಾಯವಾದರೆ? ಯಾಕಾದರೂ ಈ ರಸ್ತೆಯಲ್ಲಿ ಬಂದೆನೋ? ಸದ್ದುಮಾಡದೇ ಓಡಿಹೋಗಲೋ? ಅತ್ಯಂತ ಸಮೀಪದ ಫೋನ್‌ಬೂತ್‌ಗೆ ಹೋಗಿ ಪೋಲಿಸರಿಗೆ ಸುದ್ದಿ ತಿಳಿಸಿದರೆ ಆದೀತೇ?’ ಇವೇ ಮೊದಲಾದ ಆಲೋಚನೆಗಳು ಕ್ಷಣಮಾತ್ರದಲ್ಲಿ ಬಂದುಹೋದವು. ಕ್ಷಣದಿಂದ ಕ್ಷಣಕ್ಕೆ ಹೆಣ್ಣಿನ ಕೊಸರಾಟ ದುರ್ಬಲವಾಗುತ್ತಿರುವಂತೆ ತೋರುತ್ತಿತ್ತು. ಅವಳನ್ನು ರಕ್ಷಿಸಲೋಸುಗ ಬೇಗನೆ ಏನಾದರೂ ಮಾಡಲೇ ಬೇಕಿತ್ತು. ಏನೂ ಮಾಡದೆಯೇ ಅಲ್ಲಿಂದ ಹೋಗಲು  ಮನಸ್ಸಾಗಲಿಲ್ಲ. ನಾನೊಬ್ಬ ಬಲಶಾಲೀ ಗಂಡಸೂ ಅಲ್ಲ, ಕ್ರಿಡಾಪಟುವೂ ಅಲ್ಲ, ಮಹಾ ಧೈರ್ಯಶಾಲಿಯೂ ಅಲ್ಲವಾದರೂ ಅದೆಲ್ಲಿಂದಲೋ ಹಠಾತ್ತನೆ ನೈತಿಕ ಧೈರ್ಯ ಹಾಗು ದೈಹಿಕ ಬಲ ನನ್ನೊಳಗಿನಿಂದ ಉಕ್ಕಿ ಬಂದಂತೆ ಭಾಸವಾಯಿತು. ಆದದ್ದಾಗಲಿ ಅಂದುಕೊಂಡು ಪೊದೆಯ ಹಿಂದಕ್ಕೆ ಓಡಿಹೋಗಿ ಅಲ್ಲಿದ್ದ ಗಂಡಸನ್ನು ರಸ್ತೆಗೆ ಎಳೆದು ತಂದು ಕೆಳಕ್ಕೆ ಕೆಡವಿದೆ. ಕೆಲವು ನಿಮಿಷಗಳ ಕಾಲ ನನ್ನೊಂದಿಗೆ ಸೆಣಸಾಡಿದ ಆತ ಇದ್ದಕ್ಕಿದ್ದಂತೆ ನನ್ನ ಹಿಡಿತದಿಂದ ತಪ್ಪಿಸಿಕೊಂಡು ಮೇಲೆದ್ದು ಓಡಿ ಹೋದ.

ಏದುಸಿರು ಬಿಡುತ್ತಾ ನಾನು ಮೇಲೆದ್ದು ಪೊದೆಯ ಹಿಂದೆ ಭಯದಿಂದ ನಡುಗುತ್ತಾ ಮುದುಡಿ ಕುಳಿತಿದ್ದ ಆ ಹೆಣ್ಣಿನತ್ತ ಹೋದೆ. ಆ ಮಂದಪ್ರಕಾಶದಲ್ಲಿ ಅವಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಅವಳಿಂದ ತುಸು ದೂರದಲ್ಲಿಯೇ ನಿಂತು ಅವಳನ್ನು ಸಮಾಧಾನ ಪಡಿಸುವ ಧ್ವನಿಯಲ್ಲಿ ಹೇಳಿದೆ, “ಈಗ ಎಲ್ಲವೂ ಸರಿಹೋಗಿದೆ. ಹೆದರುವ ಆವಶ್ಯಕತೆ ಇಲ್ಲ. ಅವನು ತಪ್ಪಿಸಿಕೊಂಡು ಓಡಿ ಹೋದ.”

ಅಸಹಜ ಅನ್ನಿಸುವಷ್ಟು ದೀರ್ಘಕಾಲ ಮೌನವಾಗಿದ್ದ ಆಕೆ ಆಶ್ಚರ್ಯಭರಿತ ಧ್ವನಿಯಲ್ಲಿ ಕೇಳಿದಳು, “ಅಪ್ಪಾ, ನೀನಾ ನನ್ನನ್ನು ಕಾಪಾಡಿದ್ದು?” ಪೊದೆಯ ಹಿಂದಿನಿಂದ ಓಡಿಬಂದು ನನ್ನನ್ನು ಅಪ್ಪಿಕೊಂಡಳು ನನ್ನ ಕೊನೆಯ ಮಗಳು ಕ್ಯಾಥರೀನ್‌.

ಹೀಗೂ ಆಗುವುದುಂಟೇ ಅಂದುಕೊಂಡೆ ನಾನು.

೯೩. ಕಿಟಕಿ

ಇಬ್ಬರು ರೋಗಿಗಳು ಆಸ್ಪತ್ರೆಯ ವಾರ್ಡಿನಲ್ಲಿ ಒಂದೇ ಕೊಠಡಿಯಲ್ಲಿ ಇದ್ದರು. ಅವರ ಪೈಕಿ ಒಬ್ಬ ದಿನದಲ್ಲಿ ಒಂದು ಗಂಟೆ ಕಾಲ ಹಾಸಿಗೆಯಲ್ಲಿಯೇ ಬೆನ್ನಿನ ಭಾಗಕ್ಕೆ ಆಸರೆ ಇಟ್ಟುಕೊಂಡು ಕುಳಿತಿರಬೇಕಿತ್ತು. ಅವನ ಹಾಸಿಗೆ ಕೋಣೆಯ ಕಿಟಕಿಯ ಪಕ್ಕದಲ್ಲಿಯೇ ಇತ್ತು. ಇನ್ನೊಬ್ಬ ಇಡೀ ದಿನ ಮಲಗಿಕೊಂಡೇ ಇರಬೇಕಿತ್ತು.

ಸಮಯ ಕಳೆಯಲೋಸುಗ ಎಚ್ಚರವಾಗಿದ್ದಾಗಲೆಲ್ಲ ಅವರೀರ್ವರೂ ಹರಟುತ್ತಲೇ ಇರುತ್ತಿದ್ದರು. ಕಿಟಕಿಯ ಪಕ್ಕದ ಹಾಸಿಗೆಯಲ್ಲಿದ್ದವ ಎದ್ದು ಕುಳಿತಾಗ ಕಿಟಕಿಯಿಂದ ಕಾಣುತ್ತಿದ್ದ ಹೊರಜಗತ್ತಿನ ದೃಶ್ಯಾವಳಿಗಳನ್ನೂ ತನಗೆ ಗೋಚರಿಸುತ್ತಿದ್ದ ಚಟುವಟಿಕೆಗಳನ್ನೂ ಬಲು ವಿವರವಾಗಿಯೂ ರಸವತ್ತಾಗಿಯೂ ವರ್ಣಿಸುತ್ತಿದ್ದ. ಅದನ್ನು ಕೇಳುತ್ತಿದ್ದ ಮಲಗಿಕೊಂಡೇ ಇರಬೇಕಾದವ ಆ ದೃಶ್ಯಾವಳಿಗಳನ್ನು ನೋಡಲಾಗದ ತನ್ನ ದುರದೃಷ್ಟವನ್ನು ನಿಂದಿಸುತ್ತಿದ್ದನಲ್ಲದೆ ಇನ್ನೊಬ್ಬನ ಅದೃಷ್ಟಕ್ಕಾಗಿ ಹೊಟ್ಟಕಿಚ್ಚು ಪಟ್ಟುಕೊಳ್ಳುತ್ತಿದ್ದ.

ಇಂತಿರುವಾಗ ಒಂದು ದಿನ ರಾತ್ರಿ ಕಿಟಕಿಯ ಪಕ್ಕದಲ್ಲಿದ್ದವ ರೋಗ ಉಲ್ಬಣಿಸಿ ಕೆಮ್ಮಲಾರಂಭಿಸಿದ. ಕರೆಗಂಟೆಯನ್ನು ಒತ್ತಿದರೆ ದಾದಿ ಓಡಿ ಬರುತ್ತಾಳೆಂಬ ವಿಷಯ ತಿಳಿದಿದ್ದರೂ ಅಂತು ಮಾಡದೆ  ಇನ್ನೊಬ್ಬ ಸುಮ್ಮನಿದ್ದ. ಕಿಟಕಿ ಪಕ್ಕದ ಹಾಸಿಗೆಯವ ಕೆಮ್ಮುತ್ತಲೇ ತೀರಿಕೊಂಡ. ಮಾರನೆಯ ದಿನ ಬೆಳಿಗ್ಗೆ ದಾದಿ ಬಂದು ಅವನು ಸತ್ತುಹೋಗಿರುವುದನ್ನು ಗಮನಿಸಿ ಸದ್ದು ಮಾಡದೆಯೇ ಅವನ ಶವವನ್ನು ಅಲ್ಲಿಂದ ಸಾಗಿಸಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಿದಳು. ಮಲಗಿಕೊಂಡೇ ಇರಬೇಕಾದವ ಏನೂ ತಿಳಿಯದವರಂತೆ ಸುಮ್ಮನಿದ್ದ.

ತದನಂತರ ಸಾಕಷ್ಟು ಸಮಯ ಕಳೆದ ನಂತರ ಮಲಗಿಕೊಂಡೇ ಇರಬೇಕಾದವ ತನ್ನನ್ನು ಕಿಟಕಿಯ ಪಕ್ಕದ ಹಾಸಿಗೆಗೆ ವರ್ಗಾಯಿಸುವಂತೆ ವಿನಂತಿಸಿಕೊಂಡ. ಅವನ ಕೋರಿಕೆಯನ್ನು ಮನ್ನಿಸಿ ದಾದಿ ಅವನನ್ನು ಆ ಹಾಸಿಗೆಗೆ ವರ್ಗಾಯಿಸಿದಳು. ಅವಳು ಅಲ್ಲಿಂದ ಹೋಗಿ ತುಸು ಸಮಯವಾದ ನಂತರ ಆಗುತ್ತಿರುವ ನೋವನ್ನು ಸಹಿಸಿಕೊಂಡು ಬಲು ಕಷ್ಟದಿಂದ ಮೊಣಕೈನ ಆಸರೆಯಿಂದ ತುಸು ಮೇಲೆದ್ದು ಕಿಟಕಿಯಿಂದ ಹೊರಜಗತ್ತನ್ನು ಕುತೂಹಲದಿಂದ ನೋಡಿದ. ಕಿಟಕಿಯ ಎದುರು ಇದ್ದದ್ದು ಒಂದು ಬಲು ದೊಡ್ಡದಾಗಿದ್ದ ಖಾಲಿ ಗೋಡೆ!

೯೪. ತಾಯಿ-ಮಗು

ಒಂದು ಮಗು ಕುತೂಹಲದಿಂದ ತನ್ನ ತಾಯಿಯನ್ನು ಕೇಳಿತು, “ಅಮ್ಮ, ನಿನ್ನ ತಲೆಯಲ್ಲಿ ಕೂದಲುಗಳು ಬಿಳಿಯಾಗುತ್ತಿರುವುದು ಏಕೆ?”

ಈ ಸಂದರ್ಭವನ್ನು ಮಗುವಿಗೆ ನೀತಿಪಾಠ ಹೇಳುವುದಕ್ಕಾಗಿ ಉಪಯೋಗಿಸಿಕೊಳ್ಳಲೋಸುಗ ತಾಯಿ ಹೇಳಿದಳು, “ಅದು ನಿನ್ನಿಂದಾಗಿ ಮಗು. ನೀನು ಮಾಡುವ ಪ್ರತಿಯೊಂದು ತಪ್ಪು ಕೆಲಸಕ್ಕೆ ನನ್ನ ತಲೆಯ ಒಂದೊಂದು ಕೂದಲು ಬೆಳ್ಳಗಾಗುತ್ತದೆ.”

ಮುಗ್ಧ ಮಗು ತಕ್ಷಣ ಹೇಳಿತು, “ಅಜ್ಜಿಯ ತಲೆಯಲ್ಲಿ ಬರೀ ಬಿಳಿಯ ಕೂದಲುಗಳೇ ಇರುವುದು ಏಕೆಂಬುದು ಈಗ ತಿಳಿಯಿತು.”

೯೫. ತಂದೆಯ ಆಶೀರ್ವಾದಗಳು

ಯುವಕನೊಬ್ಬ ಉನ್ನತ ಶಿಕ್ಷಣ ಪಡೆದು ಪದವೀಧರನಾಗುವವನಿದ್ದ. ಪದವೀಧರನಾದದ್ದಕ್ಕಾಗಿ ತಂದೆ ತನಗೊಂದು ಸುಂದರ ಸ್ಪೋರ್ಟ್ಸ್‌ ಕಾರನ್ನು ಉಡುಗೊರೆಯಾಗಿ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. ತಂದೆಗೆ ಅದನ್ನು ಕೊಡುವಷ್ಟು ಆರ್ಥಿಕ ಸಾಮರ್ಥ್ಯ ಇದೆ ಎಂಬುದನ್ನು ತಿಳಿದಿದ್ದ ಆತ ತಂದೆಗೆ ತನ್ನ ಅಪೇಕ್ಷೆಯನ್ನು ತಿಳಿಸಿಯೂ ಇದ್ದ.

ಪದವಿಪ್ರದಾನ ಸಮಾರಂಭದ ದಿನ ಬೆಳಿಗ್ಗೆ ತಂದೆ ಅವನನ್ನು ತನ್ನ ಖಾಸಗಿ ಕೋಣೆಗೆ ಕರೆದು ಅವನನ್ನು ಅಭಿನಂದಿಸಿದ್ದಲ್ಲದೆ ಅವನಂಥ ಒಳ್ಳೆಯ ಮಗ ತನಗಿರುವುದಕ್ಕಾಗಿ ಹೆಮ್ಮೆ ಆಗುತ್ತಿದೆ ಎಂಬುದಾಗಿಯೂ ಹೇಳಿದ. ತದನಂತರ ಉಡುಗೊರೆ ಇರುವ ಬಲು ಸುಂದರವಾದ ಪೆಟ್ಟಿಗೆಯೊಂದನ್ನು ಅವನಿಗೆ ನೀಡಿದ. ಪುಟ್ಟ ಪೆಟ್ಟಿಗೆಯನ್ನು ನೋಡಿ ನಿರಾಶನಾದರೂ ಅದನ್ನು ತೋರ್ಪಡಿಸಿಕೊಳ್ಳದೆ ಪೆಟ್ಟಿಗೆಗೆ ಹೊದಿಸಿದ್ದ ಹೊದಿಕೆಯನ್ನು ಬಿಚ್ಚಿ ಕುತೂಹಲದಿಂದ ಪೆಟ್ಟಿಗೆ ತೆರೆದು ನೋಡಿದ. ಅದರೊಳಗಿದ್ದಿತು ಚರ್ಮದ ಹೊದಿಕೆಯುಳ್ಳ ಹಾಗು ಅವನ ಹೆಸರನ್ನು ಹೊಂಬಣ್ಣದ ಉಬ್ಬು ಅಕ್ಷರಗಳಲ್ಲಿ ಮುದ್ರಿಸಿದ್ದ ಸುಂದರವಾದ ಬೈಬಲ್‌ ಗ್ರಂಥ. ಆ ಯುವಕ ಬಲು ಕೋಪದಿಂದ ಕಿರುಚಿದ, “ಕೊಳೆಯುವಷ್ಟು ಹಣ ನಿನ್ನ ಹತ್ತಿರವಿದ್ದರೂ ನೀನು ನನಗೆ ಕೊಟ್ಟಿರುವುದು ಒಂದ ಬೈಬಲ್‌?” ಆ ಬೈಬಲ್‌ ಅನ್ನು ಅಲ್ಲಿಯೇ ಇಟ್ಟು ಹೋದವ ಹಿಂದಿರುಗಿ ಬರಲೇ ಇಲ್ಲ.

ಅನೇಕ ವರ್ಷಗಳು ಉರುಳಿದವು. ಆ ಯುವಕ ಒಬ್ಬ ಯಶಸ್ವೀ ಉದ್ಯಮಿಯಾಗಿ ವಿಕಸಿಸಿದ. ಸುಂದರ ಮನೆ, ಚಿಕ್ಕ ಚೊಕ್ಕ ಕುಟುಂಬ ಎಲ್ಲವೂ ಅವನದಾಯಿತು. ಆ ಅವಧಿಯಲ್ಲಿ ಅವನು ತನ್ನ ತಂದೆಯನ್ನು ಸಂಪರ್ಕಿಸಲೇ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆ ತಂದೆಯೊಡನೆ ತಾನು ಅತೀ ಕಠಿಣವಾಗಿ ನಡೆದುಕೊಂಡೆ ಎಂಬುದಾಗಿ ಅವನಿಗನ್ನಿಸಿತು. ಒಮ್ಮೆ ಕುಟುಂಬಸಮೇತನಾಗಿ ಹೋಗಿ ವೃದ್ಧ ತಂದೆಯನ್ನು ಕಾಣಬೇಕು ಎಂಬುದಾಗಿ ಅವನು ಆಲೋಚಿಸಿದ. ಅಷ್ಟರಲ್ಲಿ, ಅವನ ತಂದೆ ಆ ದಿನ ತೀರಿಕೊಂಡನೆಂಬುದಾಗಿಯೂ ಅವನು ತಕ್ಷಣವೇ ಬಂದು ಮುಂದಿನ ವ್ಯವಸ್ಥೆಯನ್ನು ಮಾಡಬೇಕೆಂಬುದಾಗಿಯೂ ಅವನ ತಂದೆಯ ನೆರೆಹೊರೆಯವರು ಸುದ್ದಿ ತಲುಪಿಸಿದರು.

ಬಲು ದುಃಖದಿಂದ ಆತ ತಕ್ಷಣವೇ ತಂದೆಯ ಮನೆಗೆ ಹೋಗಿ ಶವಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದನು. ತದನಂತರ ತಂದೆಯ ಖಾಸಗಿ ಕೋಣೆಗೆ ಕಾಗದಪತ್ರಗಳನ್ನು ಪರಿಶೀಲಿಸಲೋಸುಗ ಹೋದಾಗ ಮೊದಲು ಕಂಡದ್ದು: ಮೇಜಿನ ಮೇಲಿದ್ದ, ಅನೇಕ ವರ್ಷಗಳ ಹಿಂದೆ ತನಗೆ ಉಡುಗೊರೆಯಾಗಿ ಕೊಟ್ಟಿದ್ದ ಬೈಬಲ್. ಅದನ್ನು ನೋಡಿ ಕಣ್ಣಿರು ಸುರಿಸುತ್ತಾ ಅದನ್ನು ತೆಗದುಕೊಂಡು ಪಟಗಳನ್ನು ತಿರುವಿ ಹಾಕುವಾಗ ಕೆಳಕ್ಕೆ ಬಿದ್ದಿತು ಒಂದು ಸುಂದರ ಲಕೋಟೆ. ಆ ಲಕೋಟೆಯೊಳಗಿತ್ತು ಅವನಿಗಾಗಿ ಪೂರ್ಣ ಹಣ ತೆತ್ತು ಖರೀದಿಸಿದ್ದ ಸ್ಪೋರ್ಟ್ಸ್ ಕಾರ್‌ನ ದಾಖಲೆಗಳು ಹಾಗು ನನ್ನ ಆಶೀರ್ವಾದಗಳೊಂದಿಗೆ ಎಂದು ಬರೆದಿದ್ದ ಕಾಗದ!

೯೬. ಸರಳ ಸತ್ಯ

ಪ್ರಖ್ಯಾತ ಗುರುವೊಬ್ಬರು ಸಮುದ್ರ ಕಿನಾರೆಯಲ್ಲಿ ಕುಳಿತಿದ್ದರು. ಸತ್ಯಾನ್ವೇಶಕನೊಬ್ಬ ಅವರನ್ನು ಸಮೀಪಿಸಿ, ವಂದಿಸಿ ಕೇಳಿದ, “ಕ್ಷಮಿಸಿ. ನಾನು ನಿಮಗೆ ತೊಂದರೆ ಕೊಡುತ್ತಿಲ್ಲ ಎಂಬುದಾಗಿ ಭಾವಿಸುತ್ತೇನೆ. ಸತ್ಯವನ್ನು ಕಂಡು ಹಿಡಿಯಲೋಸುಗ ನೀವು ಸೂಚಿಸಿದಂತೆ, ಅದು ಏನಾದರೂ ಆಗಿರಲಿ, ಮಾಡಲು ನಾನು ಸಿದ್ಧನಿದ್ದೇನೆ.”

ಅವನ ಮಾತನ್ನು ಗಮನವಿಟ್ಟು ಕೇಳಿದ ನಂತರ ಗುರುಗಳು ಏನನ್ನೂ ಹೇಳದೆ ಮೌನವಾಗಿ ಕಣ್ಣು ಮುಚ್ಚಿ ಸ್ಥಿರವಾಗಿ ಕುಳಿತರು. ಸತ್ಯಾನ್ವೇಶಕ ತಲೆ ಕೊಡಹುತ್ತಾ ತನ್ನ ಮನಸ್ಸಿನಲ್ಲಿಯೇ ಇಂತು ಆಲೋಚಿಸಿದ: “ಇವನೊಬ್ಬ ಹುಚ್ಚನಿರಬೇಕು. ನಾನು ಅವನನ್ನು ಪ್ರಶ್ನಿಸಿದರೆ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾನೆ.”

ತದನಂತರ, ಗುರುಗಳನ್ನು ಹಿಡಿದು ಅಲುಗಾಡಿಸಿ ಕೇಳಿದ, “ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಲಿಲ್ಲ. ಅದಕ್ಕೆ ನಿಮ್ಮ ಉತ್ತರ ಏನು?”

ಗುರುಗಳು ಹೇಳಿದರು, “ಅದಕ್ಕೆ ಉತ್ತರ ಕೊಟ್ಟೀದ್ದೇನೆ. ನೀನು ಅದನ್ನು ಗ್ರಹಿಸಲಿಲ್ಲ. ಮೌನವಾಗಿ ಕುಳಿತುಕೊ, ಏನನ್ನೂ ಮಾಡಬೇಡ, ಹುಲ್ಲು ತನ್ನಷ್ಟಕ್ಕೆ ತಾನೆ ಬೆಳೆಯುತ್ತದೆ. ನೀನು ಅದರ ಕುರಿತು ಆಲೋಚಿಸಲೇ ಬೇಡ — ಎಲ್ಲವೂ ತನ್ನಷ್ಟಕ್ಕೆ ತಾನೆ ಆಗುತ್ತದೆ. ನೀನು ಮೌನವಾಗಿ ಕುಳಿತುಕೊ, ಮೌನದ ಸೌಂದರ್ಯವನ್ನು ಆಸ್ವಾದಿಸು.”

ಸತ್ಯಾನ್ವೇಶಕ ಪುನಃ ಪ್ರಶ್ನಿಸಿದ, “ಈ ವಿಧಾನದ ಹೆಸರೇನು ಎಂಬುದನ್ನು ತಿಳಿಸುವಿರಾ? ನೀನೇನು ಮಾಡುತ್ತಿರುವೆ ಎಂಬುದಾಗಿ ನೋಡಿದವರು ಕೇಳಿದಾಗ ನಾನು ಉತ್ತರ ಹೇಳಬೇಕಾಗುತ್ತದೆ.”

ಗುರುಗಳು ಮರಳಿನಲ್ಲಿ ತಮ್ಮ ಬೆರಳಿನಿಂದ ಬರೆದರು: ಧ್ಯಾನ

ಸತ್ಯಾನ್ವೇಶಕ ಪ್ರತಿಕ್ರಿಯಿಸಿದ, “ಅದು ಬಹಳ ಚಿಕ್ಕ ಉತ್ತರವಾಯಿತು. ತುಸು ವಿಸ್ತರಿಸಿ ಹೇಳುವಿರಾ?”

ಗುರುಗಳು ಮರಳಿನಲ್ಲಿ ತಮ್ಮ ಬೆರಳಿನಿಂದ ಪುನಃ ಬರೆದರು: ಧ್ಯಾನ

ಸತ್ಯಾನ್ವೇಶಕ ಹೇಳಿದ, “ಮೊದಲು ಬರೆದದ್ದನ್ನೇ ಪುನಃ ದೊಡ್ಡದಾಗಿ ಬರೆದಿದ್ದೀರಿ.”

ಗುರುಗಳು ಹೇಳಿದರು, “ಈಗ ನಾನು ಹೇಳಿದ್ದಕ್ಕಿಂತ ಹೆಚ್ಚಿಗೇನಾದರೂ ಹೇಳಿದರೆ ಅದು ತಪ್ಪಾಗುತ್ತದೆ. ನಾನು ಹೇಳಿದ್ದು ನಿನಗೆ ಅರ್ಥವಾಗಿದ್ದರೆ ಚಾಚೂ ತಪ್ಪದೆ ಅದನ್ನು ಮಾಡು. ನಿನಗೆ ಎಲ್ಲವೂ ಗೊತ್ತಾಗುತ್ತದೆ.”

೯೭. ತಂದೆಯೊಂದಿಗೆ ರಾತ್ರಿಯ ಭೋಜನ

ಒಂದು ಭೋಜನ ಮಂದಿರಕ್ಕೆ ಒಬ್ಬಾತ ತನ್ನ ಮುದಿ ತಂದೆಯನ್ನು ರಾತ್ರಿಯ ಭೋಜನಕ್ಕೆ ಕರೆದೊಯ್ದ. ತಂದೆ ಬಲು ದುರ್ಬಲನಾಗಿದ್ದದ್ದರಿಂದ ಊಟ ಮಾಡುವಾಗ ಆಹಾರ ಅವನ ಅಂಗಿ ಹಾಗು ಷರಾಯಿಯ ಮೇಲೆ ಬೀಳುತ್ತಿತ್ತು. ಅಲ್ಲಿ ಭೋಜನ ಮಾಡುತ್ತಿದ್ದ ಇತರರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದರಾದರೂ ಮಗ ಶಾಂತನಾಗಿದ್ದ.

ಭೋಜನಾನಂತರ ಮಗ ಒಂದಿನಿತೂ ಮುಜುಗರ ಪಟ್ಟುಕೊಳ್ಳದೇ ತಂದೆಯನ್ನು ಶೌಚಾಲಯ ವ್ಯವಸ್ಥೆ ಇರುವ ಮುಖ ತೊಳೆಯುವ ಕೋಣೆಗೆ ಕರೆದೊಯ್ದು ಆಹಾರ ಬಿದ್ದು ಆಗಿದ್ದ ಕಲೆಗಳನ್ನು ಒದ್ದೆ ಕರವಸ್ತ್ರದಿಂದ ಉಜ್ಜಿ ತೆಗೆದು ತಲೆಗೂದಲನ್ನು ಸರಿಪಡಿಸಿ ಕನ್ನಡಕವನ್ನು ಸರಿಯಾಗಿ ಹಾಕಿಸಿ ಹೊರಕ್ಕೆ ಕರೆತಂದ. ಭೋಜನ ಮಂದಿರದಲ್ಲಿದ್ದವರೆಲ್ಲರೂ ಮುಜುಗರ ಪಟ್ಟುಕೊಳ್ಳದೇ ಮಗ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದರು. ಮಗ ಭೋಜನದ ಹಣ ಪಾವತಿಸಿ ತಂದೆಯನ್ನು ಕೈಹಿಡಿದು ಮುಂಬಾಗಿಲಿನ ಹತ್ತಿರ ತಲುಪಿದಾಗ ಭೋಜನ ಮಾಡುತ್ತಿದ್ದ ಹಿರಿಯನೊಬ್ಬ ಮಗನನ್ನು ಕರೆದು ಕೇಳಿದ, “ಇಲ್ಲಿ ನೀನು ಏನನ್ನೋ ಬಿಟ್ಟು ಹೋಗುತ್ತಿದ್ದೇನೆ ಎಂಬುದಾಗಿ ನಿನಗನ್ನಿಸುತ್ತಿಲ್ಲವೇ?”

“ಇಲ್ಲ, ಖಂಡಿತವಾಗಿಯೂ ನಾನು ಏನನ್ನೂ ಮರೆತಿಲ್ಲ,” ಹೇಳಿದ ಮಗ.

ಹಿರಿಯ ಎದುರುತ್ತರ ಕೊಟ್ಟ, “ಹೌದು, ನೀನು ಏನನ್ನೋ ಬಿಟ್ಟು ಹೋಗುತ್ತಿರುವೆ. ಇಲ್ಲಿರುವ ಪ್ರತಿಯೊಬ್ಬ ಮಗನಿಗೂ ತನ್ನ ವೃದ್ಧ ತಂದೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪಾಠವನ್ನೂ ತಂದೆಯಂದಿರ ಮನಸ್ಸಿನಲ್ಲಿ ತಮ್ಮ ಮಗಂದಿರ ಕುರಿತಾದ ಆಶಾಭಾವನೆಯನ್ನೂ ಬಿಟ್ಟು ಹೋಗುತ್ತಿರುವೆ.”

ಇಡೀ ಭೋಜನ ಮಂದಿರವನ್ನು ಪರಿಪೂರ್ಣ ನಿಶ್ಶಬ್ದತೆ ಆವರಿಸಿತು.

೯೮. ಪುಟ್ಟ ಬಾಲಕನೊಬ್ಬ ದೇವರನ್ನು ಭೇಟಿ ಮಾಡಿದ್ದು

ದೇವರನ್ನು ಭೇಟಿ ಮಾಡಿ ಅವನೊಂದಿಗೆ ಮಾತನಾಡಬೇಕೆಂಬ ಆಸೆ ಇದ್ದ ಪುಟ್ಟ ಬಾಲಕನೊಬ್ಬನಿದ್ದ. ದೇವರ ವಾಸಸ್ಥಳ ಬಲು ದೂರದಲ್ಲಿ ಇದೆ ಎಂಬ ವಿಷಯ ಅವನಿಗೆ ತಿಳಿದಿತ್ತು. ಎಂದೇ, ಸುದೀರ್ಘ ಪ್ರಯಾಣಕ್ಕೆ ಬೇಕಾಗುವಷ್ಟು ಲಘು ತಿನಿಸುಗಳನ್ನೂ ರೂಟ್‌ ಬಿಯರ್‌ ಅನ್ನೂ ತನ್ನ ಕೈಚೀಲದಲ್ಲಿ ತುಂಬಿಸಿಕೊಂಡು ಪ್ರಯಾಣ ಆರಂಭಿಸಿದ. ತುಸು ದೂರ ಹೋಗುವಷ್ಟರಲ್ಲಿ ಒಂದು ಉದ್ಯಾನವನದಲ್ಲಿ ಕುಳಿತುಕೊಂಡು ಪಾರಿವಾಳಗಳನ್ನು ದಿಟ್ಟಸಿ ನೋಡುತ್ತಿದ್ದ ಒಬ್ಬ ಮುದುಕಿಯನ್ನು ನೋಡಿದ.

ಬಾಲಕ ಅವಳ ಸಮೀಪದಲ್ಲಿ ಕುಳಿತು ಕುಡಿಯಲೋಸುಗ ತನ್ನ ಕೈಚೀಲದಿಂದ ರೂಟ್‌ ಬಿಯರ್‌ ಸೀಸೆಯೊಂದನ್ನು ಹೊರತೆಗೆದ. ಆಗ ಆತ ತನ್ನ ಪಕ್ಕದಲ್ಲಿದ್ದ ಮುದುಕಿ ತುಂಬಾ ಹಸಿವಾಗಿದ್ದವಳಂತೆ ಕಾಣುತ್ತಿದ್ದದ್ದನ್ನು ಗಮನಿಸಿದ. ತನ್ನ ಕೈಚೀಲದಿಂದ ತಿನಿಸೊಂದನ್ನು ತೆಗೆದು ಅವಳಿಗೆ ಕೊಟ್ಟನು. ಅವಳು ಮುಗುಳ್ನಕ್ಕು ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದಳು. ಅವಳ ಮುಗುಳ್ನಗು ಬಾಲಕನನ್ನು ಬಲು ಆಕರ್ಷಿಸಿತು. ಎಂದೇ, ಅವನಿಗೆ ಅದನ್ನು ಮತ್ತೊಮ್ಮೆ ನೋಡಬೇಕು ಅನ್ನಿಸಿತು. ಅದಕ್ಕಾಗಿ ಅವನು ಅವಳಿಗೆ ರೂಟ್‌ ಬಿಯರ್‌ನ ಸೀಸೆಯೊಂದನ್ನು ಕೊಟ್ಟನು. ಅವಳು ಮುಗುಳ್ನಕ್ಕು ಅದನ್ನೂ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದಳು. ಅದನ್ನು ನೋಡಿದ ಬಾಲಕನಿಗೆ ಮಹದಾನಂದವಾಯಿತು! ಅವರಿಬ್ಬರೂ ಅಲ್ಲಿಯೇ ಕುಳಿತು ತಿನ್ನುತ್ತಾ ಕುಡಿಯುತ್ತಾ ನಸುನಗು ಬೀರುತ್ತಾ ಇಡೀ ಅಪರಾಹ್ನವನ್ನು ಕಳೆದರು. ಈ ಅವಧಿಯಲ್ಲಿ ಇಬ್ಬರೂ ಒಂದೇ ಒಂದು ಪದವನ್ನೂ ವಿನಿಮಯ ಮಾಡಿಕೊಳ್ಳಲಿಲ್ಲ!

ಸಂಜೆಯಾಗುತ್ತಿದ್ದಂತೆ ಬಾಲಕನಿಗೆ ನಿದ್ದೆ ಬರುವಂತಾಯಿತು. ಆತ ಅಲ್ಲಿಂದೆದ್ದು ಹೊರಟನಾದರೂ ಒಂದೆರಡು ಹೆಜ್ಜೆಯಿಟ್ಟೊಡನೆ ಹಿಂದಿರುಗಿ ಬಂದು ಆ ಮುದುಕಿಯನ್ನು ಒಮ್ಮೆ ಅಪ್ಪಿಕೊಂಡನು. ಆ ಮುದುಕಿಗೆ ಬಲು ಸಂತೋಷವಾಗಿ ದೊಡ್ಡದಾದೊಂದು ಮುಗಳ್ನಗು ಬೀರಿದಳು.

ತಸು ಸಮಯದ ನಂತರ ತನ್ನ ಮನೆಗೆ ಬಾಲಕ ಹಿಂದಿರುಗಿದ. ಅವನ ಮುಖದಲ್ಲಿ ಮಹದಾನಂದದ ಭಾವ ಇದ್ದದ್ದನ್ನು ಗಮನಿಸಿದ ಅವನ ತಾಯಿ ಕೇಳಿದಳು, “ಇಂದು ನೀನು ಇಷ್ಟೊಂದು ಸಂತೋಷವಾಗಿರಲು ಕಾರಣವೇನು?”

“ನಾನು ಇಂದು ಮಧ್ಯಾಹ್ನ ದೇವರೊಂದಿಗೆ ಕುಳಿತುಕೊಂಡು ತಿನಿಸುಗಳನ್ನು ತಿಂದೆ,” ಉತ್ತರಿಸಿದ ಆ ಬಾಲಕ. ತಾಯಿ ಪುನಃ ಪ್ರಶ್ನಿಸುವ ಮುನ್ನವೇ ಹೇಳಿದ, “ನಿನಗೊಂದು ವಿಷಯ ಗೊತ್ತಿದೆಯೇ? ನಾನು ನೋಡಿದ ಮುಗುಳ್ನಗೆಗಳ ಪೈಕಿ ಅತ್ಯಂತ ಸುಂದರವಾದ ಮುಗುಳ್ನಗೆ ಇರುವುದು ನಾನು ಭೇಟಿ ಮಾಡಿದ ದೇವರಿಗೆ!”

ಉದ್ಯಾನವನದಲ್ಲಿ ಇದ್ದ ಮುದುಕಿಯೂ ತನ್ನ ಮನೆಗೆ ಹಿಂದಿರುಗಿದಳು. ಆನಂದದಿಂದ ಹೋಳೆಯುತ್ತಿದ್ದ ಆಕೆಯ ಮುಖವನ್ನು ನೋಡಿದ ಅವಳ ಮಗ ಕೇಳಿದ, “ಇಂದು ನೀನು ಇಷ್ಟೊಂದು ಸಂತೋಷವಾಗಿರಲು ಕಾರಣವೇನು?”

“ನಾನು ಇಂದು ಮಧ್ಯಾಹ್ನ ದೇವರೊಂದಿಗೆ ಕುಳಿತುಕೊಂಡು ತಿನಿಸುಗಳನ್ನು ತಿಂದೆ,” ಉತ್ತರಿಸಿದಳು ಆ ಮುದುಕಿ. ಮಗ ಪುನಃ ಪ್ರಶ್ನಿಸುವ ಮುನ್ನವೇ ಹೇಳಿದಳು, “ನಿನಗೊಂದು ವಿಷಯ ಗೊತ್ತಿದೆಯೇ? ದೇವರು ನಾನು ಯೋಚಿಸಿದ್ದಕ್ಕಿಂತ ಚಿಕ್ಕವನು!”

೯೯. ಮೌನದ ಮಹತ್ವ

ಒಮ್ಮೆ ಮೂರು ಆತ್ಮಗಳು ಅವನ್ನು ಸ್ವರ್ಗಕ್ಕೆ ಒಯ್ಯಲು ಬಂದಿದ್ದ ದಿವ್ಯವಾಹನದಲ್ಲಿ ಸ್ವರ್ಗಕ್ಕೆ ಪಯಣಿಸುತ್ತಿದ್ದವು. ಹಾದಿಯಲ್ಲಿ ಆಕಸ್ಮಿಕವಾಗಿ ಕಪ್ಪೆಯೊಂದನ್ನು ನುಂಗಲು ಸಿದ್ಧವಾಗಿದ್ದ ಹಾವನ್ನು ನೋಡಿದವು.

“ಓ ಹಾವೇ, ನೀನು ಬಲು ನಿರ್ದಯಿ. ಕಪ್ಪೆಗೆ ನೀನು ದಯೆ ತೋರಬಾರದೇಕೆ? ದೇವರ ಮೇಲಾಣೆ, ಅದನ್ನು ಬಿಟ್ಟುಬಿಡು,” ಉದ್ಗರಿಸಿತು ಒಂದನೇ ಆತ್ಮ.

ಕೋಪಗೊಂಡ ಹಾವು ಶಪಿಸಿತು, “ನನ್ನ ಸ್ವಾಭಾವಿಕ ಆಹಾರವನ್ನು ನಾನು ಸೇವಿಸದಂತೆ ತಡೆಯುಷ್ಟು ಧೈರ್ಯ ಬಂದಿತೇ ನಿನಗೆ. ನೀನು ನರಕಕ್ಕೆ ಹೋಗು.” ತಕ್ಷಣ ಆ ಆತ್ಮ ನರಕಕ್ಕೆ ಹೋಗಿ ಬಿದ್ದಿತು.

ಇದನ್ನು ನೋಡುತ್ತಿದ್ದ ಎರಡನೆಯ ಆತ್ಮಕ್ಕೆ ದಿಗ್ಭ್ರಮೆ ಆಯಿತು. “ಓ ಹಾವೇ, ಕಪ್ಪೆ ನಿನ್ನ ಸ್ವಾಭಾವಿಕ ಆಹಾರ. ಆದ್ದರಿಂದ ನೀನು ಅದನ್ನು ಖಂಡಿತವಾಗಿಯೂ ತಿನ್ನಬಹುದು,” ಎಂಬುದಾಗಿ ಹೇಳಿತು ಎರಡನೇ ಆತ್ಮ. ಇದನ್ನು ಕೇಳಿದ ಕಪ್ಪೆಗೆ ವಿಪರೀತ ಸಿಟ್ಟು ಬಂದಿತು. “ನನ್ನನ್ನು ತಿನ್ನು ಎಂಬ ಸಲಹೆ ನೀಡುವಷ್ಟು ಧೈರ್ಯ ಬಂದಿತೇ ನಿನಗೆ. ನಿನ್ನಲ್ಲಿ ಲವಲೇಶವಾದರೂ ಕರುಣೆ ಇದ್ದಂತಿಲ್ಲ. “ನೀನು ನರಕದಲ್ಲಿ ಚಿತ್ರಹಿಂಸೆ ಅನುಭವಿಸು,” ಶಪಿಸಿತು ಕಪ್ಪೆ. ಎರಡನೇ ಆತ್ಮವೂ ತಕ್ಷಣವೇ ನರಕಕ್ಕೆ ಹೋಗಿ ಬಿದ್ದಿತು. ಇದನ್ನೆಲ್ಲ ಮೂರನೇ ಆತ್ಮ ಮೌನವಾಗಿಯೇ ವೀಕ್ಷಿಸುತ್ತಿತ್ತು. ತದನಂತರವೂ ಮೌನವಾಗಿಯೇ ಇತ್ತು. ತತ್ಪರಿಣಾಮವಾಗಿ ಅದು ಸ್ವರ್ಗವನ್ನು ತಲುಪಿತು!

೧೦೦. ಶಕ್ತ್ಯಾನುಸಾರ…?

ಬಡವನೊಬ್ಬ ಖ್ಯಾತ  ಗುರುಗಳನ್ನು ಕೇಳಿದ, “ಮುಂದಿನ ಜನ್ಮದಲ್ಲಿಯಾದರೂ ನಾನು ಅನುಕೂಲಸ್ಥನಾಗಲು ಏನು ಮಾಡಬೇಕು?”

ಗುರುಗಳು ಉಪದೇಶಿಸಿದರು, “ನಿನ್ನ ಕೈಲಾದಷ್ಟು ದಾನ ಮಾಡುವುದನ್ನು ರೂಢಿಸಿಕೊ.”

ಬಡವ ಕೇಳಿದ, “ನಾನೊಬ್ಬ ಬಡ ತರಕಾರಿ ವ್ಯಾಪಾರಿ. ರೈತರಿಂದ ಪ್ರತೀದಿನ ಸ್ವಲ್ಪ ತರಕಾರಿ ಕೊಂಡುತಂದು ಕುಕ್ಕೆಯಲ್ಲಿಟ್ಟುಕೊಂಡು ಬೀದಿಬೀದಿ ಸುತ್ತಿ ತುಸು ಲಾಭಕ್ಕೆ ಮಾರಿ ಕಷ್ಟದಿಂದ ಆ ದಿನದ ಖರ್ಚಿಗಾಗುವಷ್ಟು ಸಂಪಾದಿಸುತ್ತೇನೆ. ನಾನೇನು ದಾನ ಮಾಡಲು ಸಾಧ್ಯ?”

ಗುರುಗಳು ಸಲಹೆ ನೀಡಿದರು, “ಪ್ರತೀ ದಿನ ಒಂದು ತರಕಾರಿಯನ್ನು ಅರ್ಹರಿಗೆ ದಾನ ಮಾಡು.”

ಬಡವ ಅಂತೆಯೇ ಮಾಡಿದ. ಸತ್ತ ನಂತರ ಮುಂದಿನ ಜನ್ಮದಲ್ಲಿ ಆತ ಒಂದು ರಾಜಕುಟುಂಬದಲ್ಲಿ ರಾಜಕುಮಾರನಾಗಿ ಜನಿಸಿದ. ಮುಂದೆ ರಾಜನೂ ಆದ. ವಿಚಿತ್ರವೆಂದರೆ ಆತನಿಗೆ ತಾನು ಹಿಂದಿನ ಜನ್ಮದಲ್ಲಿ ಏನು ಮಾಡಿ ಈ ಜನ್ಮ ಪಡೆದೆನೆಂಬುದು ನೆನಪಿನಲ್ಲಿತ್ತು. ಮುಂದೆಯೂ ತನಗೆ ಒಳ್ಳೆಯದಾಗಬೇಕೆಂದು ಆತ ಪ್ರತೀ ದಿನ ಒಂದು ತರಕಾರಿ ದಾನ ಮಾಡುವುದನ್ನು ಮುಂದುವರಿಸಿದ. ಸತ್ತ ನಂತರ ಆತ ಭಿಕ್ಷುಕನಾಗಿ ಮರುಜನ್ಮ ಪಡೆದ!!!

Advertisements
This entry was posted in ಮೆಲುಕು ಹಾಕಬೇಕಾದ ಕತೆಗಳು and tagged . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s