ನಜ಼ರುದ್ದೀನ್‌ನ ಕತೆಗಳು, ೨೦೧-೨೫೦

೨೦೧. ಪೀಚ್‌ ಬಟವಾಡೆ

ನಜ಼ರುದ್ದೀನ್‌ ಹೊಸ ಪಟ್ಟಣವೊಂದಕ್ಕೆ ವಲಸೆ ಹೋದ. ಅಲ್ಲಿ ಅವನಿಗೆ ಹಣದ ಆವಶ್ಯಕತೆ ಬಹಳವಾಗಿ ಕಾಡಲಾರಂಭಿಸಿತು. ಬಹುಕಾಲದ ಹುಡುಕಾಟದ ನಂತರ ಸ್ಥಳೀಯನೊಬ್ಬನ ಹಣ್ಣಿನತೋಟದಲ್ಲಿ ದಿನವೊಂದಕ್ಕೆ ೫೦ ದಿನಾರ್‌ ಸಂಬಳಕ್ಕೆ ಪೀಚ್‌ ಹಣ್ಣುಗಳನ್ನು ಕೊಯ್ಯುವ ಕೆಲಸ ಸಿಕ್ಕಿತು. ಮೊದಲನೇ ದಿನದ ಕೆಲಸ ಮುಗಿಸಿ ಅಂದಿನ ಸಂಬಳ ಪಡೆಯಲು ಹೋದಾಗ ಮಾಲಿಕ ತನ್ನ ಹತ್ತಿರ ಒಂದಿನಿತೂ ಹಣವಿಲ್ಲವೆಂಬ ವಿಷಯ ತಿಳಿಸಿದ ನಂತರ ಹೇಳಿದ, “ಇಲ್ಲಿ ಕೇಳು, ನಾಳೆ ಮಧ್ಯಾಹ್ನ ಊಟದ ಸಮಯಕ್ಕೆ ಇಲ್ಲಿಗೆ ಬಾ. ನಿನಗೆಷ್ಟು ಬೇಕೋ ಅಷ್ಟು ಪೀಚ್‌ ಹಣ್ಣುಗಳನ್ನು ತಿನ್ನಲು ನಾನು ಅನುಮತಿಸುತ್ತೇನೆ!”

ನಿರಾಶನಾದ ನಜ಼ರುದ್ದೀನ್‌ ಮನಸ್ಸಿಲ್ಲದಿದ್ದರೂ ಬೇರೆ ದಾರಿ ಕಾಣದೇ ಇದ್ದದ್ದರಿಂದ ಅದಕ್ಕೆ ಒಪ್ಪಿ ಮಾರನೇ ದಿನ ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ತೋಟದಲ್ಲಿ ಹಾಜರಾದ.

ಹಣ್ಣುಗಳನ್ನು ತಿನ್ನಲು ಮಾಲಿಕನ ಅನುಮತಿ ಪಡೆದ ತಕ್ಷಣ  ಏಣಿಯ ನೆರವಿನಿಂದ ಮರವೊಂದರ ತುಟ್ಟತುದಿಗೆ ಹತ್ತಿ ಒಂದು ಪೀಚ್‌ಹಣ್ಣು ಕೊಯ್ದು ಗಬಗಬನೆ ತಿನ್ನಲಾರಂಭಿಸಿದ.

ಈ ವಿಚಿತ್ರ ವರ್ತನೆಯನ್ನು ನೋಡುತ್ತಿದ್ದ ತೋಟದ ಮಾಲಿಕ ಆಶ್ಚರ್ಯದಿಂದ ನಜ಼ರುದ್ದೀನ್‌ನನ್ನು ಕೇಳಿದ, “ಮುಲ್ಲಾ, ಮರದ ಮೇಲಿನ ತುದಿಯಿಂದ ಹಣ್ಣುಗಳನ್ನು ತಿನ್ನಲು ಆರಂಭಿಸಿದ್ದೇಕೆ? ನೆಲಕ್ಕೆ ಸಮೀಪದಲ್ಲಿರುವ ಹಣ್ಣುಗಳನ್ನು ಕೊಯ್ದು ತಿನ್ನುವುದು ಸುಲಭವಲ್ಲವೇ?”

ನಜ಼ರುದ್ದೀನ್‌ ಉತ್ತರಿಸಿದ, “ಅದರಿಂದೇನೂ ಪ್ರಯೋಜನವಿಲ್ಲ.”

ಕುತೂಹದಿಂದ ಮಾಲಿಕ ಕೇಳಿದ, “ಏಕೆ ಪ್ರಯೋಜನವಾಗುವುದಿಲ್ಲ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಪಾವಟಿಗೆಯ ಅತ್ಯಂತ ಮೇಲಿನ ಮೆಟ್ಟಿಲಿನಿಂದ ಗುಡಿಸಲು ಆರಂಭಿಸು ಎಂಬ ಹೇಳಿಕೆ ನಿಮಗೆ ಗೊತ್ತಿಲ್ಲವೇ?”

ಮಾಲಿಕ ಕೇಳಿದ, “ಅದಕ್ಕೂ ನೀನು ಮಾಡುತ್ತಿರುವುದಕ್ಕೂ ಏನು ಸಂಬಂಧ?”

ನಜ಼ರುದ್ದೀನ್‌ ವಿವರಿಸಿದ, “ಅದು ಬಹಳ ಸರಳವಾದದ್ದು. ಇಂದು ಸಂಜೆಯ ಒಳಗೆ ಈ ತೋಟದಲ್ಲಿರು ಎಲ್ಲ ಪೀಚ್‌ಹಣ್ಣುಗಳನ್ನು ತಿಂದು ಮುಗಿಸಬೇಕಾದರೆ ನಾನು ಸುವ್ಯವಸ್ಥಿತವಾಗಿ ಕಾರ್ಯ ನಿಭಾಯಿಸಬೇಕು. ಪ್ರತೀ ಮರದ ತುದಿಯಿಂದ ನಾನು ತಿನ್ನಲು ಆರಂಭಿಸದೇ ಇದ್ದರೆ ಅದು ಸಾಧ್ಯವಾಗುವುದಾದರೂ ಹೇಗೆ?”

೨೦೨. ನೀವು ನಾನೋ? ಅಥವ ನಾನು ನೀವೋ?

ಒಂದು ದಿನ ನಜ಼ರುದ್ದೀನ್‌ ಎದುರಿನಿಂದ ಬರುತ್ತಿದ್ದ ಒಬ್ಬ ಅಪರಿಚಿತನಿಗೆ ಢಿಕ್ಕಿ ಹೊಡೆದ. ತತ್ಪರಿಣಾಮವಾಗಿ ಇಬ್ಬರೂ ಬಿದ್ದರು.

ನಜ಼ರುದ್ದೀನ್‌ ಹೇಳಿದ, “ಓ ಕ್ಷಮಿಸಿ. ನೀವು ನಾನೋ? ಅಥವ ನಾನು ನೀವೋ?”

ಅಪರಿಚಿತ ಉತ್ತರಿಸಿದ, “ನಾನು ನಾನೇ. ನಿನ್ನ ಕುರಿತು ಹೇಳುವುದಾದರೆ ಇಂಥ ಪ್ರಶ್ನೆ ಕೇಳಬೇಕಾದರೆ ನೀನೊಬ್ಬ ಮನೋರೋಗಿ ಇರಬೇಕು.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನಾನು ಮನೋರೋಗಿಯಲ್ಲ. ನಾವಿಬ್ಬರೂ ನೋಡಲು ಒಂದೇ ರೀತಿ ಇದ್ದೇವೆ. ನಾನು ನಿಮಗೆ ಢಿಕ್ಕಿ ಹೊಡೆದು ಕೆಳಬೀಳುವಾಗ ಅದಲುಬದಲಾದವೇನೋ ಎಂಬ ಸಂಶಯ ಉಂಟಾಯಿತು, ಅಷ್ಟೆ!”

೨೦೩. ನಾನೇನು ಮಾಡಬೇಕು?

ನಜ಼ರುದ್ದೀನ್‌ನ ಮಿತ್ರನೊಬ್ಬ ಎಲ್ಲದರ ಕುರಿತು ಸದಾ ಚಿಂತೆ ಮಾಡುತ್ತಾ ಸಂಕಟ ಪಡುವ ಸ್ವಭಾವದವನಾಗಿದ್ದ.

ಒಂದು ದಿನ ಅವನು ನಜ಼ರುದ್ದೀನ್‌ನನ್ನು ಕೇಳಿದ, “ನಾನೇದರೂ ಬೆಳಗ್ಗೆ ಬಲು ಬೇಗನೆ ಇನ್ನೂ ಕತ್ತಲಾಗಿರುವಾಗಲೇ ಎದ್ದರೆ ಏನಕ್ಕಾದರೂ ಢಿಕ್ಕಿ ಹೊಡೆದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂತಾಗದಂತೆ ಎಚ್ಚರಿಕೆ ವಹಿಸಲು ನಾನೇನು ಮಾಡಬೇಕು?”

ನಜ಼ರುದ್ದೀನ್‌ ಬಲು ಗಂಭೀರವಾಗಿ ಸಲಹೆ ನೀಡಿದ, “ಬೆಳಗ್ಗೆ ತಡವಾಗಿ ಏಳು!”

೨೦೪. ಶ್ರೀಮಾನ್‌ ಸರ್ವಜ್ಞ

ತನ್ನ ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಿರುವಾಗ ನಜ಼ರುದ್ದೀನ್‌ನ ಹೆಂಡತಿ ಹೇಳಿದಳು, “ತನಗೆ ಎಲ್ಲವೂ ತಿಳಿದಿದೆ ಎಂಬಂತೆ ನನ್ನ ಗಂಡ ಯಾವಾಗಲೂ ನಟಿಸುತ್ತಿರುತ್ತಾನೆ.”

ಈ ಕುರಿತು ಗೆಳತಿಯರೆಲ್ಲರೂ ಚರ್ಚಿಸುತ್ತಿರುವಾಗ ನಜ಼ರುದ್ದೀನ್‌ ಎಲ್ಲಿಂದಲೋ ಬಂದು ಅವರೇನು ಚರ್ಚಿಸುತ್ತಿರವುದೆಂಬುದನ್ನು ವಿಚಾರಿಸಿದ.

ಅವನ ಹೆಂಡತಿ, “ನಾವು ಬ್ರೆಡ್‌ ಮಾಡುವುದರ ಕುರಿತು ಮಾತಾಡುತ್ತಿದ್ದೆವು.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಬಹಳ ಒಳ್ಳೆಯದಾಯಿತು. ಚರ್ಚೆಯಲ್ಲಿ ಭಾಗವಹಿಸಲು ನಾನು ಸರಿಯಾದ ಸಮಯಕ್ಕೇ ಬಂದಿದ್ದೇನೆ. ಏಕೆಂದರೆ ಜಗತ್ತಿನಲ್ಲಿ ಅತ್ಯುತ್ತಮವಾದ ಬ್ರೆಡ್‌ ತಯಾರಿಸುವವರ ಪೈಕಿ ನಾನೂ ಒಬ್ಬ.”

ತನ್ನ ಗೆಳತಿಯರನ್ನು ಅರ್ಥಗರ್ಭಿತವಾಗಿ ನೋಡುತ್ತಾ ಅವನ ಹೆಂಡತಿ ಉದ್ಗರಿಸಿದಳು, “ನಿಜವಾಗಿಯೂ? ನಿನ್ನ ಹೇಳಿಕೆಯನ್ನು ನಾನು ನಂಬುತ್ತೇನೆ. ಆದರೂ ನಾನೊಂದು ಪ್ರಶ್ನೆ ಕೇಳುತ್ತೇನೆ. ನಿನ್ನ ಹೇಳಿಕೆಯ ಕುರಿತು ನನಗೆ ಸಂಶಯವಿದೆ ಎಂಬುದಾಗಿ ನೀನು ಭಾವಿಸಬಾರದು.”

ನಜ಼ರುದ್ದೀನ್ ಕೇಳಿದ, “ಏನು ಪ್ರಶ್ನೆ?”

ಅವನ ಹೆಂಡತಿ ಕೇಳಿದಳು, “ನಾವು ಮದುವೆಯಾಗಿ ಅನೇಕ ವರ್ಷಗಳಾಗಿದ್ದರೂ ಒಂದೇ ಒಂದು ದಿನ ನೀನು ಒಂದು ತುಣುಕು ಬ್ರೆಡ್‌ ಮಾಡಿದ್ದನ್ನು ನಾನು ನೋಡಿಯೇ ಇಲ್ಲವಲ್ಲ, ಏಕೆ?”

ನಜ಼ರುದ್ದೀನ್‌ ವಿವರಿಸಿದ, “ಅದರ ಕಾರಣ ಬಹಳ ಸರಳವಾಗಿದೆ. ಬ್ರೆಡ್‌ ಮಾಡಲು ಬೇಕಾದ ಸಾಮಗ್ರಿಗಳೆಲ್ಲವೂ ಏಕಕಾಲದಲ್ಲಿ ನಮ್ಮ ಮನೆಯಲ್ಲಿ ಯಾವತ್ತೂ ಇರಲೇ ಇಲ್ಲ. ಗೋಧಿಹಿಟ್ಟು ಇದ್ದಾಗ ಯೀಸ್ಟ್‌ ಇರುತ್ತಿರಲಿಲ್ಲ, ಯೀಸ್ಟ್‌ ಇದ್ದಾಗ ಗೋಧಿಹಿಟ್ಟು ಇರುತ್ತಿರಲಿಲ್ಲ, ಅವೆರಡೂ ಇದ್ದಾಗ ನಾನೇ ಇರುತ್ತಿರಲಿಲ್ಲ!”

೨೦೫. ವಾಸ್ತವಿಕತೆ ಏನೆಂದರೆ—-

ಒಮ್ಮೆ ನಜ಼ರುದ್ದೀನ್‌ ತನ್ನ ಕೆಲವು ಹತ್ಯಾರುಗಳನ್ನು ದುರಸ್ತಿ ಮಾಡಲೋಸುಗ ಹತ್ಯಾರು ದುರಸ್ತಿ ಮಾಡುವವನಿಗೆ ಕೊಟ್ಟಿದ್ದ. ಮರುದಿನ ಅವನ್ನು ಮರಳಿ ಪಡೆಯುವ ಸಲುವಾಗಿ ಅಂಗಡಿಗೆ ಹೋದಾಗ ದುರಸ್ತಿ ಮಾಡುವವ ಹೇಳಿದ, “ದುರದೃಷ್ಟವಶಾತ್‌ ಅವು ಕಳುವಾಗಿವೆ.”

ಈ ವಿಷಯವನ್ನು ಮಾರನೆಯ ದಿನ ನಜ಼ರುದ್ದೀನ್‌ ತನ್ನ ಮಿತ್ರನೊಬ್ಬನಿಗೆ ತಿಳಿಸಿದಾಗ ಅವನು ಹೇಳಿದ, “ದುರಸ್ತಿ ಮಾಡುವವನೇ ನಿನ್ನ ಹತ್ಯಾರುಗಳನ್ನು ಲಪಟಾಯಿಸಿದ್ದಾನೆ ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಈಗಲೆ ಅವಮ ಹತ್ತಿರ ಹೋಗಿ ಅವನ್ನು ಕೊಡುವಂತೆ ಗಲಾಟೆ ಮಾಡು,”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನೀನು ಹೇಳಿದಂತೆ ನಾನು ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ನಾನು ಅವನ ಕಣ್ಣಿಗೆ ಬೀಳದಂತೆ ಜಾಗರೂಕತೆಯಿಂದ ಓಡಾಡುತ್ತಿದ್ದೇನೆ.”

“ಏಕೆ?”

“ಹತ್ಯಾರುಗಳನ್ನು ದುರಸ್ತಿ ಮಾಡಿದ ಬಾಬ್ತಿನ ಮಜೂರಿಯನ್ನು ನಾನು ಅವನಿಗೆ ಕೊಟ್ಟಿಲ್ಲ!”

೨೦೬. ಕೀಟಲೆ-ಪ್ರತಿಕೀಟಲೆ

ಗೆಳೆಯನೊಬ್ಬ ತನ್ನ ಮನೆಯಲ್ಲಿ ಏರ್ಪಡಿಸಿದ್ದ ರಾತ್ರಿಯ ಭೋಜನಕೂಟದಲ್ಲಿ ನಜ಼ರುದ್ದೀನ್‌ ಭಾಗವಹಿಸಿದ್ದ. ಕೋಳಿಸಾರು ಮತ್ತು ಅನ್ನ ಅಂದಿನ ವಿಶೇಷ ಖಾದ್ಯವಾಗಿದ್ದವು. ಭೋಜನಕೂಟದಲ್ಲಿ ಭಾಗವಹಿಸಿದ್ದವನೊಬ್ಬ ಕೀಟಲೆ ಮಾಡುವ ಸಲುವಾಗಿ ತಾನು ತಿಂದಿದ್ದ ಕೋಳಿ ಮಾಂಸದಲ್ಲಿ ಇದ್ದ ಎಲುಬಿನ ಚೂರುಗಳನ್ನು ಯಾರಿಗೂ ತಿಳಿಯದಂತೆ ನಜ಼ರುದ್ದೀನ್‌ನ ತಟ್ಟೆಗೆ ಹಾಕಿದ. ಭೋಜನಾನಂತರ ಆತ ಹೇಳಿದ, “ಏನಪ್ಪಾ ನಜ಼ರುದ್ದೀನ್‌ ನಿಜವಾಗಯೂ ನೀನೊಂದು ಹಂದಿಯಾಗಿರುವೆ! ನಿನ್ನ ತಟ್ಟೆಯಲ್ಲಿ ಇರುವ ಎಲುಬಿನ ಚೂರುಗಳನ್ನು ನೋಡಿದರೆ ಇಬ್ಬರು ತಿನ್ನುವಷ್ಟನ್ನು ನೀನೊಬ್ಬನೇ ತಿಂದಿರಬೇಕು ಅನ್ನಿಸುತ್ತಿದೆ.”

ತಕ್ಷಣವೇ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನಾನು ಅತಿಯಾಗಿ ಭಕ್ಷಿಸುವವನು ಎಂಬುದಾದರೆ ನೀನೂ ನನಗಿಂತ ಕಮ್ಮಿಯವನೇನಲ್ಲ. ಎಷ್ಟೋ ದಿನಗಳಿಂದ ಆಹಾರವನ್ನೇ ಕಾಣದವನಂತೆ ನೀನು ಇಂದು ತಿಂದಿರಬೇಕು. ಏಕೆಂದರೆ ನೀನು ನಿನ್ನ ತಟ್ಟೆಯಲ್ಲಿ ಎಲುಬಿನ ತುಂಡುಗಳನ್ನೂ ಬಿಡದೆ ಎಲ್ಲವನ್ನೂ ತಿಂದು ಮುಗಿಸಿರುವೆ!”

೨೦೭. ಮನುಷ್ಯನೋ? ಒಂಟೆಯೋ?

ಮಿತ್ರ: “ನಜ಼ರುದ್ದೀನ್‌, ಯಾರೂ ವಿವೇಕಿ? ಒಂಟೆಯೋ? ಮನುಷ್ಯನೋ?

ನಜ಼ರುದ್ದೀನ್‌: “ಒಂಟೆ.”

“ಏಕೆ?”

“ಒಂಟೆಯು ಹೊರೆಯೊಂದನ್ನು ಹೊತ್ತೊಯ್ಯುತ್ತಿರುವಾಗ ಇನ್ನೂ ಹೆಚ್ಚು ಹೊರೆ ಹೊರಿಸಿ ಎಂದು ಕೇಳುವುದಿಲ್ಲ. ಮನುಷ್ಯ ಅಂತಲ್ಲ. ಹೊರಲಾಗದಷ್ಟು ಜವಾಬ್ದಾರಿ ಹೊತ್ತುಕೊಂಡಿದ್ದರೂ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರಲು ಸಿದ್ಧನಾಗಿರುತ್ತಾನೆ!”

೨೦೮. ಹೆರಿಗೆ ಮಾಡಿಸುವ ನೂತನ ವಿಧಾನ

ನಜ಼ರುದ್ದೀನ್‌ನ ಗರ್ಭಿಣಿ ಪತ್ನಿ ಗಂಟೆಗಟ್ಟಳೆ ಕಾಲ ಹೆರಿಗೆ ನೋವನ್ನು ಅನುಭವಿಸಿದರೂ ಮಗುವಿಗೆ ಜನ್ಮ ನೀಡಲಿಲ್ಲ. ಇದರಿಂದ ಆತಂಕಗೊಂಡಿದ್ದ ಸೂಲಗಿತ್ತಿ ನಜ಼ರುದ್ದೀನ್‌ನಿಗೆ ಹೇಳಿದಳು, “ಮುಲ್ಲಾ, ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ. ನಿನಗೇನಾದರೂ ಉಪಾಯ ಗೊತ್ತಿದೆಯೇ?”

ಸ್ವಲ್ಪ ಸಮಯ ಆಲೋಚಿಸಿದ ನಂತರ ನಜ಼ರುದ್ದೀನ್‌ ನೆರೆಮನೆಗೆ ಓಡಿಹೋಗಿ ಆಟಿಕೆಯೊಂದನ್ನು ಹಿಡಿದುಕೊಂಡು ಬಂದನು. ಸೂಲಗಿತ್ತಿಯೂ ಅವನ ಹೆಂಡತಿಯೂ ಬಲು ಕುತೂಹಲದಿಂದ ನೋಡುತ್ತಿರುವಾಗಲೇ ಹೆಂಡತಿಯ ಎದುರು ಕುಳಿತ ನಜ಼ರುದ್ದೀನ್‌ ಅಟಿಕೆಯನ್ನು ಉಪಯೋಗಿಸಿಕೊಂಡು ಆಟವಾಡಲಾರಂಭಿಸಿದನು.

ನಜ಼ರುದ್ದೀನ್‌ನ ಈ ವರ್ತನೆಯಿಂದ ಆಶ್ಚರ್ಯಚಕಿತಳಾದ ಸೂಲಗಿತ್ತಿ ಕೇಳಿದಳು, “ನೀನೇನು ಮಾಡುತ್ತಿರುವೆ?”

ನಜರುದ್ದೀನ್‌ ಉತ್ತರಿಸಿದ, “ಶಾಂತವಾಗಿರು. ಎಲ್ಲವೂ ನನ್ನ ನಿಯಂತ್ರಣದಲ್ಲಿದೆ.”

ಸೂಲಗಿತ್ತಿ ಉದ್ಗರಿಸಿದಳು, “ನೀನು ಯಾವುದರ ಕುರಿತು ಮಾತನಾಡುತ್ತಿರುವೆ?”

“ನನಗೆ ಮಕ್ಕಳ ಕುರಿತು ಸ್ವಲ್ಪ ತಿಳಿದಿದೆ. ಒಮ್ಮೆ ಮಗು ಈ ಆಟಿಕೆಯನ್ನು ನೋಡಿದರೆ ಸಾಕು, ಅದು ಹೊರಕ್ಕೆ ಹಾರಿ ಬಂದು ಈ ಆಟಿಕೆಯೊಂದಿಗೆ ಆಟವಾಡಲಾರಂಭಿಸುತ್ತದೆ!”

೨೦೯. ನಜರುದ್ದೀನ್‌ನ ಆಯುಧ

ನಜ಼ರುದ್ದೀನ್‌ ವಾಸವಾಗಿದ್ದ ನಗರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದ ರಾಜನೊಬ್ಬ ತನ್ನ ಆಳ್ವಿಕೆಗೆ ಒಳಪಟ್ಟಿದ್ದ ಪಕ್ಕದ ಪಟ್ಟಣವೊಂದರಲ್ಲಿ ಎದ್ದಿದ್ದ ದಂಗೆಯನ್ನು ಶಮನಗೊಳಿಸುವ ವಿಧಾನಗಳ ಕುರಿತು ಆಲೋಚಿಸುತ್ತಿದ್ದ.

ಅಧಿಕಾರಿಗಳ ಪೈಕಿ ಒಬ್ಬ ವಿವರಿಸಿದ, “ಜನ ಪ್ರಾಂತಾಧಿಪತಿಯ ವಿರುದ್ಧ ಸಿಡಿದೆದ್ದಿದ್ದಾರೆ. ಆತನ ದಬ್ಬಾಳಿಕೆ ಅಸಹನೀಯವಾಗಿದೆ ಎಂಬುದು ಅವರ ಅಂಬೋಣ.”

ಸೇನಾಧಿಪತಿ ಹೇಳಿದ, “ನಮ್ಮ ಸೈನ್ಯವನ್ನು ಕಳುಹಿಸಿ ದಂಗೆಕೋರರನ್ನು ನಾಶಮಾಡೋಣ. ಪ್ರಭುಗಳು ಇಂಥದ್ದನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ಜನರಿಗೆ ಅರ್ಥವಾದಾಗ ಎಲ್ಲವೂ ಸರಿಯಾಗುತ್ತದೆ.”

ಈ ಚರ್ಚೆಯನ್ನು ಆಸಕ್ತಿಯಿಂದ ಕೇಳುತ್ತಿದ್ದ ನಜ಼ರುದ್ದೀನ್‌ ಹೇಳಿದ, “ಇವೆಲ್ಲ ಅನಗತ್ಯ ಮಹಾಪ್ರಭು. ದಂಗೆಯನ್ನು ಶಮನಗೊಳಿಸುವ ವಿಶಿಷ್ಟ ಆಯುಧವೊಂದು ನನಗೆ ಗೊತ್ತಿದೆ.”

ರಾಜ ಕುತೂಹಲದಿಂದ ಕೇಳಿದ, “ಏನದು?”

ನಜ಼ರುದ್ದೀನ್‌ ವಿವರಿಸಿದ, “ದಬ್ಬಾಳಿಕೆ ಮಾಡುತ್ತಿರುವ ಪ್ರಾಂತಾಧಿಪತಿಯನ್ನು ಹಿಂದಕ್ಕೆ ಕರೆಯಿಸಿ ಆ ಸ್ಥಾನದಲ್ಲಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಅಡಳಿತಗಾರನೊಬ್ಬನನ್ನು ಪ್ರತಿಷ್ಠಾಪಿಸಿ!”

೨೧೦ ಕಳ್ಳರಿಗೆ ಪಂಗನಾಮ

ಒಂದು ರಾತ್ರಿ ಮಲಗಿ ನಿದ್ರಿಸುತ್ತಿದ್ದ ನಜ಼ರುದ್ದೀನ್‌ನನ್ನು ಅವನ ಹೆಂಡತಿ ಎಬ್ಬಿಸಿ ಹೇಳಿದಳು, “ನಮ್ಮ ಮನೆಗೆ ಕಳ್ಳರು ನುಗ್ಗಿದ್ದಾರೆ.”

ನಜ಼ರುದ್ದೀನ್‌ ಗೊಣಗಿದ, “ನಿಜವಾಗಿಯೂ?”

ಅವಳು ಉತ್ತರಿಸಿದಳು, “ಖಂಡಿತವಾಗಿಯೂ. ಬೇರೆ ಮನೆಗಳಿಂದ ಕದ್ದ ಮಾಲುಗಳಿರುವ ಚೀಲಗಳನ್ನು ಮನೆಯ ಹೊರಗೆ ಬಾಗಿಲ ಬಳಿ ಇಟ್ಟು ನಮ್ಮ ಮನೆಗೆ ನುಗ್ಗಿದ್ದಾರೆ. ಈಗ ಅವರು ನಮ್ಮ ಮನೆಯ ಸಾಮಾನುಗಳನ್ನು ಕದಿಯುತ್ತಿದ್ದಾರೆ.”

 “ಸರಿ, ಹಾಗಾದರೆ ನಾನು ಇದನ್ನು ನಿಭಾಯಿಸುತ್ತೇನೆ,” ಎಂಬುದಾಗಿ ಹೇಳಿದ ನಜರುದ್ದೀನ್‌ ಹಾಸಿಗೆ ಬಿಟ್ಟೆದ್ದು ಕಿಟಕಿಯಿಂದ ಹೊರಹೋಗಲು ಸಿದ್ಧನಾದ.

“ಕಾವಲು ದಳದವರನ್ನು ಸಂಪರ್ಕಿಸುವಿರೇನು?” ಕೇಲಿದಳು ಅವಳು.

“ಇಲ್ಲ. ಅವರು ನಮ್ಮ ಮನೆಯಲ್ಲಿರುವ ಹಾಳಾದ ಹಳೇ ಸಾಮಾನುಗಳನ್ನು ಕದ್ದು ಚೀಲಕ್ಕೆ ತುಂಬುತ್ತಿರುವಾಗ ನಾನು ಹೊರ ಹೋಗಿ ಅವರು ನಮ್ಮ ಬಾಗಿಲ ಬಳಿ ಇಟ್ಟಿರುವ ಚೀಲಗಳನ್ನು ಕದಿಯುತ್ತೇನೆ!”

೨೧೧. ನಜ಼ರುದ್ದೀನ್‌ ಸಾಲ ಹಿಂದಿರುಗಿಸಿದ್ದು

ತನ್ನ ಸೋದರಸಂಬಂಧಿಯೊಬ್ಬನಿಂದ ನಜ಼ರುದ್ದೀನ್ ಸಾಲ ತೆಗೆದುಕೊಂಡಿದ್ದ ‌. ಅದನ್ನು ತೀರಿಸಲು ಸಾಧ್ಯವಾಗದ್ದರಿಂದ ವಾರಗಟ್ಟಳೆ ಕಾಲ ಅವನ ಕಣ್ಣಿಗೆ ಬೀಳದೆ ನಜ಼ರುದ್ದೀನ್ ತಪ್ಪಿಸಿಕೊಂಡು ಓಡಾಡುತ್ತಿದ್ದ. ಕೊನೆಗೊಂದು ದಿನ ಆಕಸ್ಮಿಕವಾಗಿ ಅವರೀರ್ವರು ಮುಖಾಮುಖಿಯಾದರು.

ಸೋದರಸಂಬಂಧಿ ಹೇಳಿದ, “ನೀನು ನನ್ನ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಓಡಾಡುತ್ತಿರುವ ವಿಷಯ ನನಗೆ ತಿಳಿದಿದೆ. ಆದರೂ ಈಗ ಮುಖಾಮುಖಿಯಾಗಿದ್ದೇವೆ. ಈಗ ಹೇಳು, ನನಗೆ ನೀನು ಕೊಡಬೇಕಾದ ೨೦೦ ದಿನಾರ್‌ಗಳ ಕುರಿತು.”

ಸೋದರಸಂಬಂಧಿ ಮಹಾ ಸೋಮಾರಿ ಎಂಬುದನ್ನು ತಿಳಿದಿದ್ದ ನಜ಼ರುದ್ದೀನ್‌ ಹೇಳಿದ, “ಖಂಡಿತ ಕೊಡುತ್ತೇನೆ. ಆ ದಿಕ್ಕಿನಲ್ಲಿ ಸುಮಾರು ೨ ಕಿಮೀ ದೂರದಲ್ಲಿರುವ ನನ್ನ ಮನೆಗೆ ನನ್ನೊಂದಿಗೆ ಬಂದರೆ ನಿನ್ನ ಹಣವನ್ನು ಸಂತೋಷದಿಂದ ಹಿಂದಿರುಗಿಸುತ್ತೇನೆ.”

ಸೋದರಸಂಬಂಧಿ ಹೇಳಿದ, “ನಿಜ ಹೇಳಬೇಕೆಂದರೆ ನಾನೀಗ ತುರ್ತಾಗಿ ಎಲ್ಲಿಗೋ ಹೋಗಬೇಕಾಗಿದೆ. ಆದ್ದರಿಂದ ಈಗ ನೀನು ದಯವಿಟ್ಟು ನನ್ನನ್ನು ಬಿಟ್ಟು ಹೋಗು!”

೨೧೨. ನಜ಼ರುದ್ದೀನ್‌ ಪೀಚ್‌ ಹಣ್ಣು ಕದಿಯಲು ಪ್ರಯತ್ನಿಸಿದ್ದು

 ಒಂದು ದಿನ ನಜ಼ರುದ್ದೀನ್‌ ತನ್ನ ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಯಾರದೋ ಹಣ್ಣಿನ ತೋಟದ ಮರವೊಂದರಲ್ಲಿ ಚೆನ್ನಾಗಿ ಮಾಗಿದ್ದ ಪೀಚ್‌ಹಣ್ಣೊಂದು ನೇತಾಡುತ್ತಿದ್ದ ಕೊಂಬೆ ರಸ್ತೆಯ ಮೇಲೆ ಬಾಗಿದ್ದದ್ದನ್ನು ನೋಡಿದ. ಕತ್ತೆಯನ್ನು ಅದರ ಕೆಳಗೆ ನಿಲ್ಲಿಸಿ ತಾನು ಕತ್ತೆಯ ಮೇಲೆ ನಿಂತುಕೊಂಡು ಒಂದು ಕೈನಿಂದ ಕೊಂಬೆಯನ್ನು ಹಿಡಿದು ಇನ್ನೂ ಬಾಗಿಸಿ ಇನ್ನೊಂದು ಕೈನಿಂದ ಪೀಚ್‌ಹಣ್ಣನ್ನು ಕೀಳಲು ಸಿದ್ಧನಾದ. ಆ ಸಮಯಕ್ಕೆ ಸರಿಯಾಗಿ ಬೇರೆಲ್ಲೋ ಆದ ಶಬ್ದಕ್ಕೆ ಗಾಬರಿಯಾದ ಕತ್ತೆ ಓಡಿ ಹೋಯಿತು. ತತ್ಪರಿಣಾಮವಾಗಿ ನಜ಼ರುದ್ದೀನ್‌ ಎರಡೂ ಕೈಗಳಿಂದ ಕೊಂಬೆಯನ್ನು ಹಿಡಿದುಕೊಂಡು ನೇತಾಡಬೇಕಾಯಿತು. ಕೆಲವೇ ಕ್ಷಣಗಳ ನಂತರ ತೋಟದ ಮಾಲಿಕ ನಜ಼ರುದ್ದೀನ್‌ನನ್ನು ನೋಡಿ ಬೊಬ್ಬೆ ಹಾಕಿದ, “ಕಳ್ಳ, ಕಳ್ಳ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನೀನೇನು ಹೇಳಿತ್ತಿರುವೆ? ನಾನಿಲ್ಲಿ ಏನನ್ನೂ ಕದಿಯುತ್ತಿಲ್ಲ. ನಾನಿಲ್ಲಿ ನೇತಾಡುತ್ತಿರುವ ರೀತಿಯನ್ನು ನೋಡಿ ನಾನು ಕತ್ತೆಯಿಂದ ಬಿದ್ದಿರಬೇಕೆಂಬುದು ಏಕೆ ನಿನಗೆ ಹೊಳೆಯುತ್ತಿಲ್ಲ?”

೨೧೩ ಸಮಾಧಾನ ಪಡಿಸಿಕೊಳ್ಳುವಿಕೆ

ಒಂದು ದಿನ ನಜ಼ರುದ್ದೀನ್‌ ವಾಸವಿದ್ದ ಪ್ರಾಂತ್ಯದ ಅಧಿಪತಿ ತನ್ನ ಅನೇಕ ಅನುಚರರೊಂದಿಗೆ ಬೇಟೆಯಾಡುತ್ತಿದ್ದ. ಆ ಸಂದರ್ಭದಲ್ಲಿ ಅವನು ಬಾತುಕೋಳಿಯೊಂದಕ್ಕೆ ಗುರಿಯಿಟ್ಟು ಬಿಟ್ಟ ಬಾಣ ಗುರಿ ತಪ್ಪಿದ್ದರಿಂದ ಬಾತುಕೋಳಿ ತಪ್ಪಿಸಿಕೊಂಡಿತು.

ಒಬ್ಬ ಅನುಚರ ಹೇಳಿದ, “ಅದೃಷ್ಟ ಚೆನ್ನಾಗಿರಲಿಲ್ಲ, ಎಂದೇ ಗುರಿ ತಪ್ಪಿತು.”

ಮತ್ತೊಬ್ಬ ಹೇಳಿದ, “ನಿಮ್ಮ ಬಿಲ್ಲಿನ ಹೆದೆ ಸವೆದು ಹೋಗಿರಬೇಕು.”

ಮಗದೊಬ್ಬ ಹೇಳಿದ, “ಬಾಣ ಬಿಡುವ ಸಮಯಕ್ಕೆ ಸರಿಯಾಗಿ ಕುದುರೆ ಅಲುಗಾಡಿತು.”

ಎಲ್ಲರೂ ನಜ಼ರುದ್ದೀನ್‌ನತ್ತ ನೋಡಿದರು.

ನಜ಼ರುದ್ದೀನ್‌ ಹೇಳಿದ, “ಈಗ ನಿಮ್ಮ ಗುರಿ ತಪ್ಪಿದರೂ ಈ ಹಿಂದೆ ಅನೇಕ ಯುದ್ಧಗಳಲ್ಲಿ ಅನೇಕ ಅಮಾಯಕರಿಗೆ ಗುರಿಯಿಟ್ಟು ಬಿಟ್ಟ ಬಾಣಗಳು ಗುರಿ ಮುಟ್ಟಿ ಅವರೆಲ್ಲ ಸತ್ತು ಹೋದರಲ್ಲ ಎಂಬುದಾಗಿ ನಿಮ್ಮನ್ನು ನೀವೇ ಸಮಾಧಾನ ಪಡಿಸಿಕೊಳ್ಳಿ!”

ಒಮ್ಮೆ ನಜ಼ರುದ್ದೀನ್‌ ತನ್ನ ಕೆಲವು ಹತ್ಯಾರುಗಳನ್ನು ದುರಸ್ತಿ ಮಾಡಲೋಸುಗ ಹತ್ಯಾರು ದುರಸ್ತಿ ಮಾಡುವವನಿಗೆ ಕೊಟ್ಟಿದ್ದ. ಮರುದಿನ ಅವನ್ನು ಮರಳಿ ಪಡೆಯುವ ಸಲುವಾಗಿ ಅಂಗಡಿಗೆ ಹೋದಾಗ ದುರಸ್ತಿ ಮಾಡುವವ ಹೇಳಿದ, “ದುರದೃಷ್ಟವಶಾತ್‌ ಅವು ಕಳುವಾಗಿವೆ.”

ಈ ವಿಷಯವನ್ನು ಮಾರನೆಯ ದಿನ ನಜ಼ರುದ್ದೀನ್‌ ತನ್ನ ಮಿತ್ರನೊಬ್ಬನಿಗೆ ತಿಳಿಸಿದಾಗ ಅವನು ಹೇಳಿದ, “ದುರಸ್ತಿ ಮಾಡುವವನೇ ನಿನ್ನ ಹತ್ಯಾರುಗಳನ್ನು ಲಪಟಾಯಿಸಿದ್ದಾನೆ ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ಈಗಲೆ ಅವಮ ಹತ್ತಿರ ಹೋಗಿ ಅವನ್ನು ಕೊಡುವಂತೆ ಗಲಾಟೆ ಮಾಡು,”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನೀನು ಹೇಳಿದಂತೆ ನಾನು ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ನಾನು ಅವನ ಕಣ್ಣಿಗೆ ಬೀಳದಂತೆ ಜಾಗರೂಕತೆಯಿಂದ ಓಡಾಡುತ್ತಿದ್ದೇನೆ.”

“ಏಕೆ?”

“ಹತ್ಯಾರುಗಳನ್ನು ದುರಸ್ತಿ ಮಾಡಿದ ಬಾಬ್ತಿನ ಮಜೂರಿಯನ್ನು ನಾನು ಅವನಿಗೆ ಕೊಟ್ಟಿಲ್ಲ!”

೨೧೪. ರಾಜನ ಕೋರಿಕೆ

ಒಂದು ದಿನ ನಜ಼ರುದ್ದೀನ್‌ನನ್ನು ತನ್ನ ಸಮ್ಮುಖಕ್ಕೆ ಕರೆಯಿಸಿ ರಾಜ ಹೇಳಿ, “ಮುಲ್ಲಾ, ನಿನಗೆ ವಿಶೇಷವಾದ ಅತೀಂದ್ರಿಯ ಶಕ್ತಿ ಇರುವುದಾಗಿ ಹೇಳಿಕೊಳ್ಳುತ್ತಿರುವೆಯಲ್ಲವೇ? ಅದನ್ನು ಉಪಯೋಗಿಸಿ ನಮ್ಮ ರಾಜ್ಯದಲ್ಲಿ ಹಸಿವಿನಿಂದ ನರಳುತ್ತಿರುವವರಿಗೋಸ್ಕರ ಮೀನುಗಳನ್ನು ಹಿಡಿದುಕೊಡು ನೋಡೋಣ.”

ನಜ಼ರುದ್ದೀನ್‌ ಉತ್ತರಿಸಿದ, ಮಹಾಪ್ರಭು, ನೀವು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದೀರಿ. ನನಗೆ ವಿಶೇಷವಾದ ಅತೀಂದ್ರಿಯ ಶಕ್ತಿ ಇರುವುದಾಗಿ ಹೇಳಿದ್ದೆನೇ ವಿನಾ ನಾನೊಬ್ಬ ಬೆಸ್ತ ಎಂಬುದಾಗಿ ಹೇಳಿರಲಿಲ್ಲ.”

೨೧೫. ಒಂದು ಪಾಠ

ನಜ಼ರುದ್ದೀನ್‌ ತನ್ನ ಮಗನಿಗೆ ಜೀವನ ಕೌಶಲಗಳ ಪಾಠಗಳನ್ನು ಬೋಧಿಸುತ್ತಿದ್ದ.

ಅವನು ಹೇಳಿದ, “ಯಾರಿಗೂ ಏನನ್ನೂ ಕೇಳಿದ ತಕ್ಷಣ ಕೊಡಬೇಡ. ಕೆಲವು ದಿನಗಳು ಕಳೆಯುವ ವರೆಗೆ ಸುಮ್ಮನಿರು.”

“ಏಕೆ?” ಮಗ ವಿಚಾರಿಸಿದ.

ನಜ಼ರುದ್ದೀನ್‌ ವಿವರಿಸಿದ, “ತಾವು ಕೇಳಿದ್ದು ಸಿಕ್ಕುತ್ತದೋ ಇಲ್ಲವೋ ಎಂಬ ಸಂಶಯ ಹುಟ್ಟಿದ ನಂತರ ಏನಾದರೂ ಸಿಕ್ಕಿದರೆ ಅದನ್ನು ಕೊಟ್ಟವರನ್ನೂ ಅದನ್ನೂ ಅವರು ಬಹುವಾಗಿ ಶ್ಲಾಘಿಸುತ್ತಾರೆ!”

೨೧೬. ಹಠಮಾರಿ

ತಮ್ಮ ಜಮೀನಿನಲ್ಲಿ ತಮ್ಮಿಬ್ಬರ ಪೈಕಿ ಗೋಧಿ ಬಿತ್ತನೆ ಯಾರು ಮಾಡಬೇಕೆಂಬುದರ ಕುರಿತು ನಜ಼ರುದ್ದೀನ್‌ನಿಗೂ ಅವನ ಹೆಂಡತಿಗೂ ಜಗಳವಾಯಿತು. ಅಂತಿಮ ತೀರ್ಮಾನ ಕೈಗೊಳ್ಳವ ಸಲುವಾಗಿ ಇಬ್ಬರೂ ಒಂದು ಒಪ್ಪಂದ ಮಾಡಿಕೊಂಡರು: ‘ಆ ಕ್ಷಣದಿಂದ ಮುಂದಕ್ಕೆ ಯಾರು ಮೊದಲು ಮಾತನಾಡುವರೋ ಅವರೇ ಬಿತ್ತನೆ ಮಾಡತಕ್ಕದ್ದು.’

ನಜ಼ರುದ್ದೀನ್‌ನ ಹೆಂಡತಿ ಗೋಧಿ ತರಲೋಸುಗ ಅಂಗಡಿಗೆ ಹೋದಳು. ನಜ಼ರುದ್ದೀನ್‌ ಮನೆಯಲ್ಲಿಯೇ ಕಾಯುತ್ತಿದ್ದಾಗ ಕಳ್ಳನೊಬ್ಬ ಒಳನುಗ್ಗಿ ಎಲ್ಲವನ್ನೂ ದೋಚಿದ. ಪಂದ್ಯದಲ್ಲಿ ತಾನು ಸೋಲಬಾರದೆಂಬ ಏಕೈಕ ಉದ್ದೇಶದಿಂದ ಅವನು ಮಾತನಾಡದೆಯೇ ಸುಮ್ಮನಿದ್ದ.

ನಜ಼ರುದ್ದೀನ್‌ನ ಹೆಂಡತಿ ಹಿಂದಿರುಗಿ ಬರುವ ಸಮಯಕ್ಕೆ ಸರಿಯಾಗಿ ಕಳ್ಳ ಕದ್ದ ಮಾಲಿನೊಂದಿಗೆ ಮನೆಯಿಂದ ಹೋಗುವುದರಲ್ಲಿದ್ದ. ಅವನನನ್ನು ನೋಡಿದ ಆಕೆ ಪಕ್ಕದಲ್ಲಿಯೇ ಇದ್ದ ಖಾಲಿ ಮನೆಯೊಳಕ್ಕೆ ಹೋಗಿ ನಜ಼ರುದ್ದೀನ್‌ನನ್ನು ಉದ್ದೇಶಿಸಿ ಬೊಬ್ಬೆಹಾಕಲಾರಂಭಿಸಿದಳು, “ನೀನೊಬ್ಬ ಮೂರ್ಖ——–”

ನಜ಼ರುದ್ದೀನ್ ಮಧ್ಯದಲ್ಲಿಯೇ ಅವಳನ್ನು ತೆದು ಹೇಳಿದ, “ಪಂದ್ಯದಲ್ಲಿ ನೀನು ಸೋತೆ. ಆದ್ದರಿಂದ ಹೋಗಿ ಗೋಧಿ ಬಿತ್ತನೆ ಮಾಡು. ಅಂತು ಮಾಡುತ್ತಿರುವಾಗ ನಿನ್ನ ಹಠಮಾರಿತನದ ಪರಿಣಾಮವಾಗಿ ಏನೇನಾಯಿತು ಎಂಬುದರ ಕುರಿತು ಅರಿವು ಮೂಡಿಸಿಕೊ!”

೨೧೭. ಸಾಲಕ್ಕಾಗಿ ಮನವಿ

ಮಿತ್ರನೊಬ್ಬ ಕೇಳಿದ, “ನಜ಼ರುದ್ದೀನ್‌, ನನಗೆ ನಿಜವಾಗಿಯೂ ಮೂರು ತಿಂಗಳ ಮಟ್ಟಿಗೆ ೧೦೦೦ ದಿನಾರ್‌ ಸಾಲ ಬೇಕಿತ್ತು. ನೀನು ಸಹಾಯ ಮಾಡಬಲ್ಲೆಯಾ?”

“ಸಾಲಕ್ಕಾಗಿ ನೀನು ಸಲ್ಲಿಸಿದ ಮನವಿಯ ಅರ್ಧಭಾಗವನ್ನು ಒಪ್ಪಿಕೊಳ್ಳುತ್ತೇನೆ,” ಉತ್ತರಿಸಿದ ನಜ಼ರುದ್ದೀನ್‌.

ಮಿತ್ರ ಪ್ರತಿಕ್ರಿಯಿಸಿದ, “ಸರಿ, ತೊಂದರೆ ಇಲ್ಲ. ಉಳಿದ ೫೦೦ ದಿನಾರ್‌ಗಳನ್ನು ನಾನು ಬೇರೆ ಯಾರಿಂದಲಾದರೂ ಪಡೆಯುತ್ತೇನೆ.”

ನಜ಼ರುದ್ದೀನ್‌ ತಕ್ಷಣ ವಿವರಿಸಿದ, “ನೀನು ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿರುವೆ. ನಿನ್ನ ಮನವಿಯಲ್ಲಿ ಇದ್ದ ಕಾಲಾವಕಾಶದ ಭಾಗವನ್ನು, ಅರ್ಥಾತ್‌ ಮೂರು ತಿಂಗಳ ಮಟ್ಟಿಗೆ ಎಂಬ ಭಾಗವನ್ನು ಮಾತ್ರ ನಾನು ಒಪ್ಪಿಕೊಂಡದ್ದು. ೧೦೦೦ ದಿನಾರ್‌ ಸಾಲಕ್ಕೆ ಸಂಬಂಧಿಸಿದಂತೆ – ನಾನು ನಿನಗೆ ಕೊಡಲು ಸಾಧ್ಯವಿಲ್ಲ.”

೨೧೮. ಗ್ರಾಮ ಮುಖ್ಯಸ್ಥನ ಕವಿತೆಗಳು

ಗ್ರಾಮದ ಮುಖ್ಯಸ್ಥ ಕವಿತೆಯೊಂದನ್ನು ಬರೆದು ಅದನ್ನು ನಜ಼ರುದ್ದೀನ್‌ನಿಗೆ ಓದಿ ಹೇಳಿದ.

ತದನಂತರ ಅವನು ಕೇಳಿದ, “ನಿನಗೆ ಈ ಕವಿತೆ ಇಷ್ಟವಾಯಿತೇ?”

ನಜ಼ರುದ್ದೀನ್‌ ಉತ್ತರಿಸಿದ, “ಇಲ್ಲ, ನಿಜವಾಗಿಯೂ ಇಷ್ಟವಾಗಲಿಲ್ಲ. ಅದು ಅಷ್ಟೇನೂ ಚೆನ್ನಾಗಿಲ್ಲ.”

ಕೋಪಗೊಂಡ ಗ್ರಾಮದ ಮುಖ್ಯಸ್ಥ ನಜ಼ರುದ್ದೀನನ್ನು ಮೂರು ದಿನಗಳ ಕಾಲ ಸೆರೆಮನೆಯೊಳಗಿಟ್ಟ. ಮುಂದಿನ ವಾರ ಗ್ರಾಮದ ಮುಖ್ಯಸ್ಥ ನಜ಼ರುದ್ದೀನ್‌ನನ್ನು ತನ್ನ ಸಮ್ಮುಖಕ್ಕೆ ಕರೆಯಿಸಿ ತಾನು ಬರೆದಿದ್ದ ಹೊಸದೊಂದು ಕವಿತೆಯನ್ನು ವಾಚಿಸಿದ. ತದನಂತರ ನಜ಼ರುದ್ದೀನ್‌ನತ್ತ ತಿರುಗಿ ಕೇಳಿದ, “ಈ ಕವಿತೆಯ ಕುರಿತು ನಿನ್ನ ಅಭಿಪ್ರಾಯವೇನು?”

ನಜ಼ರುದ್ದೀನ್‌ ಏನೂ ಮಾತನಾಡದೆ ತಕ್ಷಣವೇ ಅಲ್ಲಿಂದ ಹೊರಟ. “ಏನೂ ಹೇಳದೆಯೇ ಎಲ್ಲಿಗೆ ಹೋಗುತ್ತ್ತಿರುವೆ?” ವಿಚಾರಿಸಿದ ಮುಖ್ಯಸ್ಥ.

“ಸೆರೆಮನೆಗೆ!” ಉತ್ತರಿಸಿದ ನಜ಼ರುದ್ದೀನ್‌.

೨೧೯. ತಪ್ಪಿದ ಭೇಟಿ ಕಾರ್ಯಕ್ರಮ

ಒಬ್ಬ ತತ್ವಸಾಸ್ತ್ರಜ್ಞ ನಜರುದ್ದೀನ್‌ನ ಜೊತೆ ವಿದ್ವತ್ಪೂರ್ಣ ಚರ್ಚೆ ಮಾಡಲೋಸುಗ ಬೇಟಿ ಮಾಡಲು ಮೊದಲೇ ಸಮಯ ನಿಗದಿಪಡಿಸಿದ್ದ. ನಿಗದಿತ ದಿನದಂದು ನಿಗದಿತ ಸಮಯಕ್ಕೆ ಸರಿಯಾಗಿ ಆತ ನಜ಼ರುದ್ದೀನ್‌ನ ಮನೆ ತಲುಪಿದ. ಹಾಗಿದ್ದರೂ ನಜ಼ರುದ್ದೀನ್‌ ಮನೆಯಲ್ಲಿ ಇರಲಿಲ್ಲ. ಕೋಪಗೊಂಡ ತತ್ವಶಾಸ್ತ್ರಜ್ಞ ಕಿಸೆಯಿಂದ ಬಣ್ಣದ ಪೆನ್ಸಿಲ್‌ ಹೊರತೆಗೆದು ಮುಂಬಾಗಿಲ ಮೇಲೆ ಅವಾಚ್ಯ ಪದವೊಂದನ್ನು ಬರೆದು ಹೊರಟುಹೋದ.

ನಜ಼ರುದ್ದೀನ್‌ ಮನೆಗೆ ಹಿಂದಿರುಗಿ ಬಂದು ಬಾಗಿಲ ಮೇಲೆ ಬರೆದಿದ್ದನ್ನು ನೋಡಿದಾಗ ಪೂರ್ವನಿಗದಿತ ಭೇಟಿ ಕಾರ್ಯಕ್ರಮಕ್ಕೆ ತಾನು ಗೈರುಹಾಜರಾದದ್ದರ ಅರಿವು ಉಂಟಾಯಿತು. ಆತಕ್ಷಣವೇ ಅವನು ತತ್ವಶಾಸ್ತ್ರಜ್ಞನ ಮನೆಗೆ ಓಡಿ ಹೋಗಿ ಕ್ಷಮೆ ಯಾಚಿಸಿದ:

“ನನ್ನ ತಪ್ಪನ್ನು ಕ್ಷಮಿಸಿ. ಇಂದು ಭೇಟಿಗೆ ಮೊದಲೇ ಸಮಯ ನಿಗದಿ ಪಡಿಸಿದ್ದು ನನಗೆ ಮರೆತೇ ಹೋಗಿತ್ತು. ನಾನು ಮನೆಗೆ ಹಿಂದಿರುಗಿದಾಗ ಬಾಗಿಲ ಮೇಲೆ ನೀವು ಬರೆದಿದ್ದ ನಿಮ್ಮ ಹೆಸರನ್ನು ನೋಡಿದಾಗ ಅದು ನೆನಪಿಗೆ ಬಂತು. ಆ ತಕ್ಷಣವೇ ಅಲ್ಲಿಂದ ಹೊರಟು ಸಾಧ್ಯವಿರುವಷ್ಟು ವೇಗವಾಗಿ ಇಲ್ಲಿಗೆ ಕ್ಷಮೆ ಯಾಚಿಸಲೋಸುಗ ಓಡೋಡಿ ಬಂದೆ.”

೨೨೦. ನಿನ್ನ ವಯಸ್ಸೆಷ್ಟು?

ಗೆಳೆಯ: “ನಿನಗೀಗ ಎಷ್ಟು ವಯಸ್ಸು, ಮುಲ್ಲಾ?”

ನಜ಼ರುದ್ದೀನ್‌: “ನಲವತ್ತೈದು.”

ಗೆಳೆಯ: “ಹತ್ತು ವರ್ಷಗಳ ಹಿಂದೆ ಕೇಳಿದಾಗಲೂ ನಲವತ್ತೈದು ಎಂಬುದಾಗಿಯೇ ಹೇಳಿದ್ದೆಯಲ್ಲಾ?”

ನಜ಼ರುದ್ದೀನ್: “ನಿಜ. ನಾನೊಮ್ಮೆ ಹೇಳಿದ ಮಾತನ್ನು ಎಂದಿಗೂ ಬದಲಾಯಿಸುವುದಿಲ್ಲ!”

೨೨೧. ಕಳ್ಳ ಸಾಗಾಣಿಕೆ ಮಾಡುತ್ತಿರುವುದೇನು?

ಹಿಂದೊಮ್ಮೆ ನಜ಼ರುದ್ದೀನ್‌ ಕಳ್ಳಸಾಗಣೆದಾರನಾಗಿದ್ದ! ದೇಶದ ಗಡಿಯನ್ನು ಆತ ಒಂದು ಕತ್ತೆಯ ಮೇಲೆ ಒಣಹುಲ್ಲು ಹೇರಿಕೊಂಡು ದಾಟುತ್ತಿರುವಾಗ ಅನುಭವೀ ತಪಾಸಣಾಧಿಕಾರಿಯೊಬ್ಬ ಅವನನನ್ನು ನೋಡಿದ.

ತಪಾಸಣಾಧಿಕಾರಿ ಕೇಳಿದ, “ನಿಲ್ಲು. ಇಲ್ಲಿ ನೀನೇನು ವ್ಯವಹಾರ ಮಾಡುತ್ತಿರುವೆ?”

“ನಾನೊಬ್ಬ ಪ್ರಾಮಾಣಿಕ ಕಳ್ಳಸಾಗಣೆದಾರ!” ಉತ್ತರಿಸಿದ ನಜ಼ರುದ್ದೀನ್‌.

“ಓ ಹಾಗೇನು?” ಹೇಳಿದ ತಪಾಸಣಾಧಿಕಾರಿ. “ಸರಿ ಹಾಗಾದರೆ. ನಾನೀಗ ಆ ಹುಲ್ಲಿನ ಹೊರೆಗಳನ್ನು ತಪಾಸಣೆ ಮಾಡುತ್ತೇನೆ. ಅದರಲ್ಲಿ ಬೇರೇನಾದರೂ ಸಿಕ್ಕಿದರೆ ನೀನು ಗಡಿಶುಲ್ಕವನ್ನು ಕೊಡಬೇಕಾಗುತ್ತದೆ!”

ನಜ಼ರುದ್ದೀನ್‌ ಉತ್ತರಿಸಿದ, “ನಿಮಗೆ ಸರಿ ಕಂಡಂತೆ ಮಾಡಿ. ಆದರೆ ಈ ಹುಲ್ಲು ಹೊರೆಗಳಲ್ಲಿ ನಿಮಗೆ ಬೇರೇನೂ ಸಿಕ್ಕುವುದಿಲ್ಲ.”

ತಪಾಸಣಾಧಿಕಾರಿ ಹುಲ್ಲಿನ ಹೊರೆಗಳಲ್ಲಿ ಎಷ್ಟು ಹೊತ್ತು ಹುಡುಕಿದರೂ ಏನೂ ಸಿಕ್ಕಲಿಲ್ಲ. ಕೊನೆಗೆ ಅವನು ನಜ಼ರುದ್ದೀನನತ್ತ ತಿರುಗಿ ಹೇಳಿದ, “ಈ ಸಲ ನೀನು ಹೇಗೋ ತಪ್ಪಿಸಿಕೊಂಡಿರುವೆ. ನೀನೀಗ ಗಡಿ ದಾಟಬಹುದು.”

ಸಿಡುಕುತ್ತಿದ್ದ ತಪಾಸಣಾಧಿಕಾರಿ ನೋಡುತ್ತಿದ್ದಂತೆಯೇ ನಜ಼ರುದ್ದೀನ್‌ ತನ್ನ ಕತ್ತೆ ಹಾಗೂ ಹುಲ್ಲಿನ ಹೊರೆಗಳೊಂದಿಗೆ ಗಡಿಯನ್ನು ದಾಟಿದ.

ಮಾರನೆಯ ದಿನ ಪುನಃ ನಜ಼ರುದ್ದೀನ್ ಹುಲ್ಲಿನ ಹೊರೆಗಳನ್ನು ಹೊತ್ತಿದ್ದ ತನ್ನ ಕತ್ತೆಯೊಡನೆ ಗಡಿ ದಾಟಲು ಬಂದ. “ಈ ಸಲ ಇವನೇನು ಸಾಗಿಸುತ್ತಿದ್ದಾನೆಂಬುದನ್ನು ಖಂಡಿತ ಪತ್ತೆಹಚ್ಚುತ್ತೇನೆ,” ಎಂಬುದಾಗಿ ಗೊಣಗಿದ ತಪಾಸಣಾಧಿಕಾರಿ ಹುಲ್ಲಿನ ಹೊರೆಗಳನ್ನೂ ನಝರುದ್ದೀನ್‌ ಧರಿಸಿದ್ದ ಬಟ್ಟೆಗಳನ್ನೂ ಕತ್ತೆಯ ಮೇಲಿದ್ದ ಜೀನು ಮೊದಲಾದ ಸಜ್ಜನ್ನೂ ಕೂಲಂಕಶವಾಗಿ ತಪಾಸಣೆ ಮಾಡಿದರೂ ಏನೂ ಸಿಕ್ಕಲಿಲ್ಲ. ಎಂದೇ ಗಡಿ ದಾಟಲು ಅವನಿಗೆ ಅನುಮತಿಸಲೇ ಬೇಕಾಯಿತು. ಈ ವಿದ್ಯಮಾನ ಕೆಲವು ವರ್ಷಗಳ ಕಾಲ ಪ್ರತೀದಿನ ನಡೆಯಿತು. ಆ ಅವಧಿಯಲ್ಲಿ ನಜ಼ರುದ್ದೀನ್‌ನ ಸಂಪತ್ತು ಗಮನಾರ್ಹವಾಗಿ ಹೆಚ್ಚುತ್ತಿದ್ದದ್ದೂ ಅವನ ಉಡುಗೆತೊಡುಗೆಗಳಿಂದ ಗೊತ್ತಾಗುತ್ತಿತ್ತು. ಕೊನೆಗೊಂದು ದಿನ ಆ ತಪಾಸಣಾಧಿಕಾರಿ ಸೇವೆಯಿಂದ ನಿವೃತ್ತನಾದ.

ಆನಂತರ ಒಂದು ದಿನ ನಿವೃತ್ತ ತಪಾಸಣಾಧಿಕಾರಿಗೆ ಪಟ್ಟಣದಲ್ಲಿ ನಜ಼ರುದ್ದೀನ್‌ ಕಾಣಲು ಸಿಕ್ಕಿದ. ತಪಾಸಣಾಧಿಕಾರಿ ಅವನನ್ನು ತಡೆದು ನಿಲ್ಲಿಸಿ ಕೇಳಿದ, “ಏಯ್‌, ನಿನ್ನನ್ನು ನಾನು ಹುಲ್ಲಿನ ಹೊರೆ ಹೊತ್ತ ಕತ್ತೆಯೊಂದಿಗೆ ಗಡಿ ದಾಟುತ್ತಿರುವುದನ್ನು ನೋಡಿದ್ದೇನೆ. ಈಗ ನಾನು ನಿವೃತ್ತನಾಗಿರುವುದರಿಂದ ನನಗೆ ನಿಜ ಹೇಳಬೇಕು. ಅಂದಿನ ದಿನಗಳಲ್ಲಿ ನೀನು ಕಳ್ಳಸಾಗಣೆ ಮಾಡುತ್ತಿದ್ದದ್ದು ಏನನ್ನು?”

ನಜ಼ರುದ್ದೀನ್ ಬಲು ಗಂಭೀರ ಧ್ವನಿಯಲ್ಲಿ ಉತ್ತರಿಸಿದ, “ಕತ್ತೆಗಳನ್ನು!”

೨೨೨. ಅಪರಿಚಿತನ ವಿನಂತಿ

ಒಂದು ದಿನ ನಜ಼ರುದ್ದೀನ್‌ ತನ್ನ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡುತ್ತಿದ್ದಾಗ ಅಪರಿಚಿತನೊಬ್ಬ ಅವನ ಮನೆಯ ಬಾಗಿಲು ತಟ್ಟಿದ.

“ನಿನಗೇನು ಬೇಕು?” ಮೇಲ್ಛಾವಣಿಯಿಂದಲೇ ಕೂಗಿ ಕೇಳಿದ ನಜ಼ರುದ್ದೀನ್‌.

“ಕೆಳಗಿಳಿದು ಬಾ ಹೇಳುತ್ತೇನೆ,” ಉತ್ತರಿಸಿದ ಅಪರಿಚಿತ.

ನಜ಼ರುದ್ದೀನ್‌ ಕೋಪದಿಂದಲೇ ಏಣಿಯ ನೆರವಿನಿಂದ ಕೆಳಗಿಳಿದು ಬಂದ. “ಬಂದಿದ್ದೇನೆ, ಈಗ ಹೇಳು ಏನಂಥಾ ಮುಖ್ಯ ವಿಷಯ?”

“ಈ ಬಡವನಿಗೆ ಸ್ವಲ್ಪ ಹಣ ಕೊಡಲು ಸಾಧ್ಯವೇ? ಕೇಳಿದ ಅಪರಿಚಿತ.

ನಜ಼ರುದ್ದೀನ್‌ ಏಣಿಯ ನೆರವಿನಿಂದ ಪುನಃ ಮೇಲಕ್ಕೆ ಹತ್ತುತ್ತಾ ಹೇಳಿದ, “ನನ್ನನ್ನು ಹಿಂಬಾಲಿಸು.”

ಅಪರಿಚಿತ ಅಂತೆಯೇ ಮಾಡಿದ. ಇಬ್ಬರೂ ಮೇಲ್ಛಾವಣಿಯ ಮೇಲಕ್ಕೆ ತಲುಪಿದ ನಂತರ ನಜ಼ರುದ್ದೀನ್ ಅಪರಿಚಿತನತ್ತ ತಿರುಗಿ ಹೇಳಿದ, “ಇಲ್ಲ, ನಿನಗೆ ಹಣ ಕೊಡುವುದಿಲ್ಲ. ಈಗ ನನ್ನ ಮೇಲ್ಛಾವಣಿಯಿಂದ ತೊಲಗು!”

೨೨೩. ಹೆಮ್ಮೆಪಡಬೇಕಾದ ತಂದೆ, ನಜ಼ರುದ್ದೀನ್‌

ನಜ಼ರುದ್ದೀನ್‌ನೂ ಅವನ ಒಬ್ಬ ಗೆಳೆಯನೂ ನಜ಼ರುದ್ದೀನನ ಮಕ್ಕಳು ಆಟವಾಡುತ್ತಿದ್ದದ್ದನ್ನು ನೋಡುತ್ತಿದ್ದರು.

ನಜ಼ರುದ್ದೀನ್‌ನ ಕಿರಿಯ ಮಗನನ್ನು ಗೆಳೆಯ ಕೇಳಿದ, “ಹವ್ಯಾಸಿ ಅಂದರೇನು?”

ಕಿರಿಯ ಮಗ ಉತ್ತರಿಸಿದ, “ಒಗ್ಗರಣೆ ಹಾಕಲು ಉಪಯೋಗಿಸುವ ಒಂದು ಮೂಲಿಕೆ ಅದು!”

ನಜ಼ರುದ್ದೀನ್ ಬಲು ಸಂತೋಷದಿಂದ ಗೆಳೆಯನತ್ತ ತಿರುಗಿ ಹೇಳಿದ, “ಕೇಳಿದೆಯಾ ಅವನು ಹೇಳಿದ್ದನ್ನು? ನನಗೆ ಎಷ್ಟು ಒಳ್ಳೆಯ ಮಗನಿದ್ದಾನೆ! ಅವನ ತಂದೆಯಂತೆಯೇ ಇದ್ದಾನೆ! ಅವನದ್ದೇ ಆದ ಉತ್ತರವನ್ನು ಅವನೇ ಸೃಷ್ಟಿ ಮಾಡಿದ ನೋಡಿದೆಯಾ?”

೨೨೪. ಭೂಮಿಯ ಸಮಸ್ಥಿತಿ

ಗೆಳೆಯ: “ನಜ಼ರುದ್ದೀನ್‌, ಪ್ರತೀದಿನ ಬೆಳಗ್ಗೆ ಕೆಲವರು ಒಂದು ದಿಕ್ಕಿನತ್ತ ಹೋದರೆ ಇನ್ನು ಕೆಲವರು ಬೇರೆ ಬೇರೆ ದಿಕ್ಕುಗಳತ್ತ ಹೋಗುತ್ತಾರೆ, ಏಕೆ?”

ನಜ಼ರುದ್ದೀನ್‌: “ಎಲ್ಲರೂ ಒಂದೇ ದಿಕ್ಕಿನತ್ತ ಹೋದರೆ ಭೂಮಿಯು ಆಯತಪ್ಪಿ ಮಗುಚಿ ಬೀಳುತ್ತದೆ!”

೨೨೫. ಪಟ್ಟಣದ ಹರಟೆಮಲ್ಲ

ಪಟ್ಟಣದ ಹರಟೆಮಲ್ಲ: “ನಜ಼ರುದ್ದೀನ್‌ ಕೆಲವು ಮಂದಿ ಒಂದು ದೊಡ್ಡ ಪಾತ್ರೆ ತುಂಬ ಮಾಂಸದ ಭಕ್ಷ್ಯವನ್ನು ಬಟವಾಡೆ ಮಾಡುತ್ತಿದ್ದದ್ದನ್ನು ಈಗಷ್ಟೇ ನೋಡಿದೆ.”

ನಜ಼ರುದ್ದೀನ್‌: “ಆ ಸುದ್ದಿ ನನಗೇಕೆ?”

ಪಟ್ಟಣದ ಹರಟೆಮಲ್ಲ: “ಅವರು ಅದನ್ನು ಬಟವಾಡೆ ಮಾಡಿದ್ದು ನಿನ್ನ ಮನೆಗೆ.”

ನಜ಼ರುದ್ದೀನ್‌: “ಅಂತಾದರೆ ಆ ಸುದ್ದಿ ನಿನಗೇಕೆ?”

೨೨೬. ಕಿತ್ತಲೆಹಣ್ಣುಗಳನ್ನು ಒಯ್ಯುವುದು

ನಜ಼ರುದ್ದೀನ್‌ ಒಂದು ಚೀಲ ಕಿತ್ತಲೆ ಹಣ್ಣುಗಳನ್ನು ಹೆಗಲಿನ ಮೇಲೆ ಹೊತ್ತುಕೊಂಡು ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ. ಇದನ್ನು ನೋಡಿದ ಅವನ ಸ್ನೇಹಿತನೊಬ್ಬ ಕೇಳಿದ, “ಕಿತ್ತಲೆ ಹಣ್ಣಿನ ಚೀಲವನ್ನು ಹೆಗಲಿನ ಮೇಲೇಕೆ ಹೊತ್ತುಕೊಂಡಿರುವೆ? ಅದನ್ನೂ ಕತ್ತೆಯ ಮೇಲೆಯೇ ಇಟ್ಟುಕೊಳ್ಳಬಹುದಲ್ಲವೇ?”

ನಜ಼ರುದ್ದೀನ್‌ ಉತ್ತರಿಸಿದ, “ಕತ್ತೆಯ ಶೋಷಣೆ ಮಾಡುವಾತ ನಾನಲ್ಲ. ನನ್ನ ಕತ್ತೆ ಈಗಾಗಲೇ ನನ್ನನ್ನು ಹೊತ್ತುಕೊಂಡಿದೆ. ಇಂತಿರುವಾಗ ಕಿತ್ತಲೆ ಹಣ್ಣಿನ ಚೀಲದ ಭಾರವನ್ನೂ ಅದರ ಮೇಲೆ ಹಾಕುವುದು ನ್ಯಾಯಸಮ್ಮತವೇ?”

ನಜ಼ರುದ್ದೀನ್‌ನ ಕತೆಗಳು ೨೨೭. ವೈದ್ಯರನ್ನು ಮನೆಗೆ ಕರೆತರುವಿಕೆ

ಒಂದು ಬೆಳಗ್ಗೆ ನಜ಼ರುದ್ದೀನ್‌ನ ಹೆಂಡತಿ ಅಸ್ವಸ್ಥಳಾದ್ದರಿಂದ ವೈದ್ಯರನ್ನು ಕರೆತರುವಂತೆ ಹೇಳಿದಳು. ಅವನು ಹೊರಹೋಗುವಾಗಿನ ಉಡುಪು ಧರಿಸಿ ಮನೆಯಿಂದ ಹೊರಕ್ಕೋಡಿದನು. ಆ ಸಮಯಕ್ಕೆ ಸರಿಯಾಗಿ ಅವನ ಹೆಂಡತಿ ಕೂಗಿ ಹೇಳಿದಳು, “ಇದ್ದಕ್ಕಿದ್ದಂತೆಯೇ ನಾನು ಗುಣಮುಖಳಾಗಿದ್ದೇನೆ, ವೈದ್ಯರ ಆವಶ್ಯಕತೆ ನನಗೀಗ ಇಲ್ಲ.”

ಆದರೂ ನಜ಼ರುದ್ದೀನ್ ವೈದ್ಯರ ಮನೆಗೆ ಓಡಿಹೋಗಿ ಬಾಗಿಲು ತಟ್ಟಿದ. ವೈದ್ಯರು ಬಾಗಿಲು ತೆರೆದ ತಕ್ಷಣ ನಜ಼ರುದ್ದೀನ್‌ ವಿವರಿಸಲಾರಂಭಿಸಿದ, “ಸ್ವಾಮೀ ವೈದ್ಯರೇ, ಇಂದು ಬೆಳಗ್ಗೆ ನನ್ನ ಹೆಂಡತಿ ಅಸ್ವಸ್ಥಳಾದಳು. ವೈದ್ಯರನ್ನು ಕರೆತರಲು ನನಗೆ ಹೇಳಿದಳು. ನಾನು ಮನೆಯಿಂದ ಹೊರಬರುತ್ತಿರುವಾಗ ಇದ್ದಕ್ಕಿದ್ದಂತೆ ಆಕೆ ಹುಷಾರಾದಳು. ಅಷ್ಟೇ ಅಲ್ಲ, ವೈದ್ಯರನ್ನು ಕರೆತರುವ ಆವಶ್ಯಕತೆ ಇಲ್ಲವೆಂದೂ ಹೇಳಿದಳು. ಎಂದೇ, ನೀವೀಗ ನಮ್ಮ ಮನೆಗೆ ಬರುವ ಆವಶ್ಯಕತೆ ಇಲ್ಲವೆಂಬುದನ್ನು ತಿಳಿಸಲು ಓಡಿಬಂದೆ!”

ನಜ಼ರುದ್ದೀನ್‌ನ ಕತೆಗಳು ೨೨೮. ಮೌನಿ ಪತ್ನಿ ಸಿಕ್ಕುವುದು ಕಷ್ಟ

“ನಾನು ಪತ್ನಿಯಿಂದ ವಿಚ್ಛೇದನ ಪಡೆಯುತ್ತೇನೆ, ಏಕೆಂದರೆ ಕಳೆದ ಮೂರು ತಿಂಗಳುಗಳಲ್ಲಿ ನನ್ನ ಹೆಂಡತಿ ನನ್ನೊಂದಿಗೆ ಮಾತೇ ಆಡಿಲ್ಲ,” ಎಂಬುದಾಗಿ ಹೇಳಿದ ಮುಲ್ಲಾನ ಸ್ನೇಹಿತನೊಬ್ಬ. ಮುಲ್ಲಾ ಸಲಹೆ ನೀಡಿದ, “ನಾನು ನಿನ್ನ ಸ್ಥಾನದಲ್ಲಿದ್ದಿದ್ದರೆ ಈ ತೀರ್ಮಾನ ಕೈಗೊಳ್ಳುವ ಮುನ್ನ ಅದರ ಯುಕ್ತಾಯುಕ್ತತೆಯ ಕುರಿತು ಎರಡೆರಡು ಸಲ ಆಲೋಚಿಸುತ್ತಿದ್ದೆ. ಏಕೆಂದರೆ ಅಂಥ ಹೆಂಡತಿಯರು ಸಿಕ್ಕುವುದು ಬಲು ಕಷ್ಟ!”

೨೨೯. ಕತ್ತೆಯೊಡನೆ ಹಳೇ ಹಗೆತನ

ಒಂದು ದಿನ ನಜ಼ರುದ್ದೀನ್‌ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಒಂದು ಕತ್ತೆ ಹಿಂದಿನಿಂದ ಸದ್ದಿಲ್ಲದೆ ಬಂದು ಒದೆಯಿತು. ತತ್ಪರಿಣಾಮವಾಗಿ ನಜ಼ರುದ್ದೀನ್‌ ನೆಲದ ಮೇಲೆ ಕವುಚಿ ಬಿದ್ದನು.

ಅನೇಕ ದಿನಗಳ ನಂತರ ನಜ಼ರುದ್ದೀನ್‌ ಆ ಕತ್ತೆಯನ್ನು ಪುನಃ ನೋಡಿದನು. ಅದರ ಮಾಲಿಕ ಅದನ್ನು ಒಂದು ಮರಕ್ಕೆ ಕಟ್ಟಿ ಹಾಕಿದ್ದನು. ನಜ಼ರುದ್ದೀನ್ ತಕ್ಷಣವೇ ಒಂದು ಕೋಲನ್ನು ತೆಗೆದುಕೊಂಡು ಕತ್ತೆಗೆ ಹೊಡೆಯಲಾರಂಭಿಸಿದ.

ಇದನ್ನು ನೋಡಿದ ಕತ್ತೆಯ ಮಾಲಿಕ ಬೊಬ್ಬೆಹೊಡೆದ, “ಏಯ್‌, ನನ್ನ ಕತ್ತೆಗೆ ನೀನೇಕೆ ಹೊಡೆಯುತ್ತಿರುವೆ? ತಕ್ಷಣವೇ ಹೊಡೆಯುವುದನ್ನು ನಿಲ್ಲಿಸು.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನಾನೀಗ ಮಾಡುತ್ತಿರುವುದಕ್ಕೂ ನಿನಗೂ ಏನೂ ಸಂಬಂಧವಿಲ್ಲ. ಇದು ನನ್ನ ಮತ್ತು ಕತ್ತೆಯ ನಡುವಿನ ವ್ಯವಹಾರ. ನಾನೇಕೆ ಹೊಡೆಯುತ್ತಿರುವೆನೆಂಬುದು ಅದಕ್ಕೆ ನಿಖರವಾಗಿ ತಿಳಿದಿದೆ.”

೨೩೦. ಚರ್ಚೆ-೨

ಒಂದು ದಿನ ಯಾರೋ ಒಬ್ಬ ನಜ಼ರುದ್ದೀನ್‌ನ ಹತ್ತಿರ ಬಂದು ಕುಳಿತ. ಕೆಲವೇ ಕ್ಷಣಗಳ ನಂತರ ಅವರು ಸ್ಥಳೀಯ ಗಾಳಿಸುದ್ದಿಗಳು, ವೈಯಕ್ತಿಕ ವಿಷಯಗಳು, ರಾಜಕೀಯ ವಿಷಯಗಳು, ತಮ್ಮ ಕುಟುಂಬಗಳು, ವ್ಯವಹಾರಗಳು, ತತ್ವಶಾಸ್ತ್ರೀಯ ಆಲೋಚನೆಗಳು ಇವೇ ಮೊದಲಾದ ವಿಭಿನ್ನ ವಿಷಯಗಳ ಕುರಿತು ಚರ್ಚಿಸಿದರು.

ಸುಮಾರು ೨೦ ನಿಮಿಷಗಳು ಕಳೆದ ನಂತರ ಬಂದಾತ ಹೇಳಿದ, “ಕ್ಷಮಿಸಿ, ನಾನೀಗ ಹೋಗಬೇಕು.”

ನಜ಼ರುದ್ದೀನ್‌ ಕೇಳಿದ, “ಕ್ಷಮಿಸು ಗೆಳೆಯ, ನೀವು ಯಾರು?”

“ನಿಮಗೆ ನಾನು ಯಾರೆಂಬುದು ಗೊತ್ತಿಲ್ಲವೇ?”

“ಇಲ್ಲ.”

“ಹಾಗಾದರೆ ಸುಮಾರು ೨೦ ನಿಮಿಷಗಳ ಕಾಲ ನನ್ನೊಂದಿಗೆ ಎಲ್ಲ ರೀತಿಯ ಖಾಸಗಿ ವಿಷಯಗಳ ಕುರಿತು ಮಾತನಾಡಿದ್ದು ಏಕೆ?”

“ಅದು ಏಕೆಂದರೆ, ನಿಮ್ಮ ಉಡುಪು, ಗಡ್ಡ, ಮುಂಡಾಸು ನೋಡಿ ನಿಮ್ಮನ್ನು ಬೇರೆ ಯಾರೋ ಎಂಬುದಾಗಿ ತಪ್ಪಾಗಿ ಭಾವಿಸಿದ್ದೆ.”

“ನನ್ನನ್ನು ಯಾರೆಂಬುದಾಗಿ ತಿಳಿದಿದ್ದಿರಿ?”

“ನಾನು ಎಂಬುದಾಗಿ!”

೨೩೧. ನನಗೊಂದು ಪೆನ್ಸಿಲ್‌ ಹಾಗು ಒಂದು ಕಾಗದ ಕೊಡು

ಒಂದು ರಾತ್ರಿ ನಜ಼ರುದ್ದೀನ್‌ ಇದ್ದಕ್ಕಿದ್ದಂತೆ ಎದ್ದು ಹೆಂಡತಿಗೆ ಹೇಳಿದ, “ಏಳು, ಏಳು, ಬೇಗ ಏಳು! ನನಗೆ ಈಗಷ್ಟೇ ದೈವೀ ಪ್ರೇರಣೆ ಆಗಿದೆ! ಬೇಗನೆ ಒಂದು ಪೆನ್ಸಿಲ್‌ ಹಾಗು ಕಾಗದ ತಂದುಕೊಡು!”

ಅವನ ಹೆಂಡತಿ ದಡಬಡನೆ ಎದ್ದು ಮೋಂಬತ್ತಿ ಉರಿಸಿ ಕಾಗದ ಪೆನ್ಸಿಲ್‌ ತಂದು ನಜ಼ರುದ್ದೀನ್‌ನಿಗೆ ಕೊಟ್ಟಳು.

ನಜ಼ರುದ್ದೀನ್‌ ವೇಗವಾಗಿ ಬರೆದು ಮುಗಿಸಿ ಮೋಂಬತ್ತಿಯನ್ನು ನಂದಿಸಿ ಮಲಗುವ ತಯಾರಿ ನಡೆಸುತ್ತಿದ್ದಾಗ ಅವನ ಹೆಂಡತಿ ಉದ್ಗರಿಸಿದಳು, “ನಿಲ್ಲು, ನಿಲ್ಲು. ನೀನೇನು ಬರೆದಿದ್ದೀಯೋ ಅದನ್ನು ನನಗೆ ದಯವಿಟ್ಟು ಓದಿ ಹೇಳು.”

ನಜ಼ರುದ್ದೀನ್‌ ಕಾಗದ ತೆಗೆದುಕೊಂಡು ಬರೆದದ್ದನ್ನು ಓದಿದ, “ನೀನು ಎಲ್ಲೆಲ್ಲಿ ಹೋಗುತ್ತಿಯೋ ಅಲ್ಲೆಲ್ಲ ನೀನೇ ಇರುವೆ!”

೨೩೨. ಅತಿಥಿ

ಒಂದು ರಾತ್ರಿ  ಮನೆಯ ಮುಂಬಾಗಿಲನ್ನು ಯಾರೋ ತಟ್ಟುತ್ತಿರುವುದು ನಜ಼ರುದ್ದೀನ್‌ನಿಗೆ ಕೇಳಿಸಿತು. ಅವನು ಬಾಗಿಲನ್ನು ತೆರೆದಾಗ ಹೊರಗೆ ನಿಂತಿದ್ದವ ಹೇಳಿದ, “ಮುಲ್ಲಾ, ರಾತ್ರಿ ತಂಗಲು ಅವಕಾಶ ನೀಡುವುದರ ಮುಖೇನ ನೀನು ಒಬ್ಬ ಸಹೋದರನಿಗೆ ಸಹಾಯ ಮಾಡುವೆಯಾ? ದೇವರ ತಮ್ಮನ ಮಗ ನಾನು.”

“ಓ ಹೌದೇ?”

“ಖಂಡಿತಾ ಹೌದು.”

“ಹಾಗಾದರೆ ತಮ್ಮಂಥ ಘನತೆವೆತ್ತ ಅತಿಥಿಗಳು ರಾತ್ರಿಯನ್ನು ಕಳೆಯಲು ಅತ್ಯತ್ತಮವಾದ ಸ್ಥಳವನ್ನೇ ನಾನು ಒದಗಿಸಬೇಕು.” ಉದ್ಗರಿಸಿದ ನಜ಼ರುದ್ದೀನ್‌.

ನಜ಼ರುದ್ದೀನ್‌ ಮನೆಯಿಂದ ಹೊರಬಂದು ಬಾಗಿಲನ್ನು ಮುಚ್ಚಿದ. ಆನಂತರ ಬಂದವನತ್ತ ತಿರುಗಿ “ನನ್ನನ್ನು ಹಿಂಬಾಲಿಸಿ” ಎಂಬುದಾಗಿ ಹೇಳಿದ.

ಕುತೂಹಲದಿಂದ ಬಂದಾತ ಹಿಂಬಾಲಿಸಿದ. ಸುಮಾರು ೧೦೦ ಮೀಟರ್‌ ದೂರ ಕ್ರಮಿಸಿ ಅವರು ಸ್ಥಳೀಯ ಮಸೀದಿಯನ್ನು ತಲುಪಿದರು.

ನಜ಼ರುದ್ದೀನ್‌ ಬಂದವನಿಗೆ ಹೇಳಿದ, “ರಾತ್ರಿ ಕಳೆಯಲು ನಿಮ್ಮ ದೊಡ್ಡಪ್ಪನ ನಿವಾಸಕ್ಕಿಂತ ಉತ್ತಮವಾದ ಬೇರೆ ಸ್ಥಳ ಇರಲು ಸಾಧ್ಯವೇ?”

೨೩೩. ದೀಪ

ಒಂದು ರಾತ್ರಿ ನಜ಼ರುದ್ದೀನನೂ ಅವನ ಹೆಂಡತಿಯೂ ನಿದ್ರಿಸುತ್ತಿದ್ದರು. ಆ ಸಮಯದಲ್ಲಿ ಹೊರಗೆ ರಸ್ತೆಯಲ್ಲಿ ಯಾರೋ ಇಬ್ಬರು ಜಗಳವಾಡಲಾರಂಭಿಸಿದರು. ಅವರ ಬೊಬ್ಬೆಗೆ ಮಲಗಿದ್ದ ದಂಪತಿಗಳಿಗೆ ಎಚ್ಚರವಾಯಿತು.

ನಜ಼ರುದ್ದೀನ್‌ ಹೆಂಡತಿಗೆ ಹೇಳಿದ, “ಅವರೇಕೆ ಜಗಳವಾಡುತ್ತಿದ್ದಾರೆ ಎಂಬುದನ್ನು ತಿಳಿದು ಬರುತ್ತೇನೆ.”

“ಅದಕ್ಕೂ ನಿಮಗೂ ಏನೇನೂ ಸಂಬಂಧವಿಲ್ಲ. ಸುಮ್ಮನೆ ನಿದ್ದೆ ಮಾಡಿ,” ಉದ್ಗರಿಸಿದಳು ಹೆಂಡತಿ.

“ಸರಿ.”

ಎಷ್ಟು ಕಾಲ ಕಳೆದರೂ ಹೊರಗಿನ ಜಗಳ ನಿಲ್ಲುವ ಲಕ್ಷಣ ಕಾಣಲಿಲ್ಲ. ಎಂದೇ ನಜ಼ರುದ್ದೀನ್‌ ಅದೇನು ವಿಷಯ ಎಂಬುದನ್ನು ತಿಳಿಯಲೋಸುಗ ದೀಪವೊಂದನ್ನು ತೆಗೆದುಕೊಂಡು ಹೊರಕ್ಕೆ ಹೋದ. ಅವನು ಹೊರಬಂದ ತಕ್ಷಣ ಜಗಳವಾಡುತ್ತಿದ್ದವರ ಪೈಕಿ ಒಬ್ಬ ದೀಪವನ್ನು ಕಿತ್ತುಕೊಂಡು ಓಡಿಹೋದ.

ನಜ಼ರುದ್ದೀನ್‌ ಪುನಃ ಒಳಬಂದು ಮಲಗಿದ.

ಅವನ ಹೆಂಡತಿ ಕೇಳಿದಳು, “ಅವರು ಏನಕ್ಕಾಗಿ ಜಗಳವಾಡುತ್ತಿದ್ದರು?”

ನಜ಼ರುದ್ದೀನ್ ಉತ್ತರಿಸಿದ, “ಅವರು ಜಗಳವಾಡುತ್ತಿದ್ದದ್ದು ನನ್ನ ದೀಪಕ್ಕಾಗಿ. ಅದು ದೊರೆತೊಡನೆ ಜಗಳವಾಡುವುದನ್ನು ನಿಲ್ಲಿಸಿದರು!”

೨೩೪. ಗುಂಡಿ

ನಜ಼ರುದ್ದೀನ್‌ ಮನೆಯ ಹೊರಗಿನ ಅಂಗಳದಲ್ಲಿ ಅಗೆಯುತ್ತಿದ್ದ.

ನೆರೆಮನೆಯಾತ ಕೇಳಿದ, “ಏನಕ್ಕಾಗಿ ಅಗೆಯುತ್ತಿರುವೆ?”

“ರಸ್ತೆಯಲ್ಲಿ ವಿಪರೀತ ಕಸ ಇದೆ. ಅದನ್ನು ಹೂಳಲೋಸುಗ ಒಂದು ಗುಂಡಿ ತೋಡುತ್ತಿದ್ದೇನೆ.”

“ಅದು ಸರಿ. ಆದರೆ ಗುಂಡಿತೋಡಿ ಹೊರಹಾಕಿರುವ ಮಣ್ಣನ್ನು ಏನು ಮಾಡುವೆ?”

“ಪ್ರತಿಯೊಂದೂ ಸಣ್ಣಪುಟ್ಟ ವಿವರಗಳನ್ನು ಗಮನಿಸಲು ನನ್ನಿಂದಾಗುವುದಿಲ್ಲ!”

೨೩೫. ಹುರಿದ ಮಾಂಸದ ದೊಡ್ಡ ತುಂಡು

ದೇಶ ಪರ್ಯಟನೆ ಮಾಡುತ್ತಿದ್ದ ವಿದ್ವಾಂಸನೊಬ್ಬ ಸ್ಥಳೀಯ ಉಪಾಹಾರ ಗೃಹದಲ್ಲಿ ನಜ಼ರುದ್ದೀನ್‌ನನ್ನು ಭೋಜನಕ್ಕೆ ಕರೆದೊಯ್ದ. ಕುರಿಯ ಹುರಿದ ಮಾಂಸದ ಎರಡು ತುಂಡುಗಳನ್ನು ಮೊದಲು ಕೊಡುವಂತೆ ಅಲ್ಲಿನ ಮಾಣಿಗೆ ಹೇಳಿದ. ಸ್ವಲ್ಪ ಸಮಯಾನಂತರ ಮಾಣಿ ಒಂದು ಬಡಿಸುವ ತಟ್ಟೆಯಲ್ಲಿ ಮಾಂಸದ ಒಂದು ದೊಡ್ಡ ತುಂಡನ್ನೂ ಇನ್ನೊಂದು ತಟ್ಟೆಯಲ್ಲಿ ಒಂದು ಮಧ್ಯಮ ಗಾತ್ರದ ತುಂಡನ್ನೂ ಹಾಕಿ ತಂದಿಟ್ಟ. ನಜ಼ರುದ್ದೀನ್‌ ತಕ್ಷಣ ದೊಡ್ಡ ತುಂಡನ್ನು ತೆಗೆದುಕೊಂಡು ತನ್ನ ಊಟದ ತಟ್ಟೆಗೆ ಹಾಕಿಕೊಂಡ. ನಜ಼ರುದ್ದೀನ್‌ನ ಈ ವರ್ತನೆಯನ್ನು ನೋಡಿ ಆಘಾತಕ್ಕೊಳಗಾದ ವಿದ್ವಾಂಸ ಹೇಳಿದ, “ನೀನೀಗ ಮಾಡಿದ್ದು ಎಲ್ಲ ಮತೀಯ, ಸಭ್ಯತೆಯ, ನೈತಿಕತೆಯ, ಶಿಷ್ಟಾಚಾರದ ರೀತಿನೀತಿಗಳ ಉಲ್ಲಂಘನೆಯಾಗಿದೆ.” ಈ ಕುರಿತು ಅವನು ಸುದೀರ್ಘವಾದೊಂದು ಭಾಷಣವನ್ನೇ ಮಾಡಿದ.

ಅವನ ಮಾತು ಮುಗಿದ ನಂತರ ನಜ಼ರುದ್ದೀನ್‌ ಕೇಳಿದ, “ಒಂದು ವೇಳೆ ನನ್ನ ಸ್ಥಾನದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಕೇಳಬಹುದೇ?”

ವಿದ್ವಾಂಸ ಉತ್ತರಿಸಿದ, “ಖಂಡಿತ, ನಾನು ನನಗಾಗಿ ಎರಡು ತುಂಡುಗಳ ಪೈಕಿ ಸಣ್ಣದಾದದ್ದನ್ನು ತೆಗೆದುಕೊಳ್ಳುತ್ತಿದೆ.”

ನಜ಼ರುದ್ದೀನ್ ತಕ್ಷಣ ವಿದ್ವಾಂಸನ ತಟ್ಟೆಗೆ ಉಳಿದಿದ್ದ ಸಣ್ಣ ತುಂಡನ್ನು ಹಾಕಿ ಹೇಳಿದ, “ನಿಮ್ಮ ಇಷ್ಟದಂತೆಯೇ ಈಗ ಆಗಿದೆಯಲ್ಲವೇ?”

೨೩೬. ನಿನಗೆ ಈ ಸುದ್ದಿ ಗೊತ್ತೇ?

ನಜ಼ರುದ್ದೀನ್‌ನ ಹತ್ತಿರ ದಷ್ಟಪುಷ್ಟವಾಗಿ ಬೆಳೆದ ಒಂದು ಆಡು ಇತ್ತು. ಹೇಗಾದರೂ ಮಾಡಿ ಅದನ್ನು ನಜ಼ರುದ್ದೀನ್ ಕೊಂದು ಭೋಜನಕ್ಕೆ ತಮ್ಮನ್ನು ಆಹ್ವಾನಿಸುವಂತೆ ಮಾಡಬೇಕೆಂಬುದು ಅವನ ಕೆಲವು ಮಿತ್ರರ ಬಯಕೆಯಾಗಿತ್ತು.

ಒಂದು ದಿನ ಅವರು ಅವನನ್ನು ಕೇಳಿದರು, “ನಿನಗೆ ಸುದ್ದಿ ತಿಳಿಯಿತೇ?”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಇಲ್ಲವಲ್ಲ, ಏನದು ಸುದ್ದಿ?”

ಒಬ್ಬ ಹೇಳಿದ, “ನಾಳೆ ಜಗತ್ತಿನ ಅಂತ್ಯವಾಗಲಿದೆ!”

ಆ ಸುದ್ದಿ ಕೇಳಿದ ನಜ಼ರುದ್ದೀನ್‌ ಅಂದು ರಾತ್ರಿ ತನ್ನ ಮನೆಗೆ ಬಂದು ಆಡಿನ ಮಾಂಸದ ಔತಣದೂಟ ಮಾಡವಂತೆ ಅವರನ್ನು ಆಹ್ವಾನಿಸಿದ. ಎಲ್ಲರೂ ಬಂದರು, ಆಡಿನ ಮಾಂಸದ ಭಕ್ಷ್ಯ ಸಹಿತವಾದ ಭರ್ಜರಿ ಭೋಜನ ಮಾಡಿದರು. ಭೋಜನಾನಂತರ ಅವರಿಗೆ ತಿಳಿಯಿತು – ನಜ಼ರುದ್ದೀನ್‌ ತಮ್ಮೆಲ್ಲರ ಮೇಲಂಗಿಗಳನ್ನು ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಸಲು ಉಪಯೋಗಿಸಿದ ವಿಷಯ.

ಎಲ್ಲರೂ ಸಿಟ್ಟಿನಿಂದ ಕೂಗಾಡತೊಡಗಿದಾಗ ಅವರನ್ನು ಸುಮ್ಮನಾಗಿಸಿ ನಜ಼ರುದ್ದೀನ್‌ ಹೇಳಿದ, “ನಾಳೆ ಜಗತ್ತಿನ ಅಂತ್ಯವಾಗುವ ವಿಷಯ ಮರೆತು ಹೋಯಿತೇ? ನಿಮ್ಮ ಹತ್ತಿರ ಮೇಲಂಗಿ ಇದ್ದರೂ ಇಲ್ಲದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲವಲ್ಲಾ?”

೨೩೭. ೪೦೦೦ ವರ್ಷ ವಯಸ್ಸಾದ ಮರ

ವಿಜ್ಞಾನಿ: “ನಮ್ಮ ಲೆಕ್ಕಾಚಾರದ ಪ್ರಕಾರ ಈ ಮರ ೪೦೦೦ ವರ್ಷಗಳಷ್ಟು ಹಳೆಯದು.”

ನಜ಼ರುದ್ದೀನ್‌: “ಇಲ್ಲ, ಇದರ ವಯಸ್ಸು ೪೦೦೨ ವರ್ಷಗಳು.”

ವಿಜ್ಞಾನಿ: “ಏ, ತಮಾಷೆ ಮಾಡಬೇಡ, ನೀನು ಹಾಗೆ ಹೇಳಲು ಕಾರಣವೇನು?”

ನಜ಼ರುದ್ದೀನ್‌: “ಏಕೆಂದರೆ ಈಗ್ಗೆ ಎರಡು ವರ್ಷಗಳ ಹಿಂದೆ ನಿಮ್ಮೊಂದಿಗೆ ಇಲ್ಲಿಗೆ ಬಂದಿದ್ದಾಗ ಈ ಮರದ ವಯಸ್ಸು ೪೦೦೦ ವರ್ಷಗಳು ಎಂಬುದಾಗಿ ಹೇಳಿದ್ದಿರಿ!”

೨೩೮. ಒಂದು ರಾತ್ರಿ

 ಒಂದು ಮಧ್ಯರಾತ್ರಿಯ ಆಸುಪಾಸಿನಲ್ಲಿ ತಾನು ಮಲಗುವ ಕೋಣೆಯ ಕಿಟಕಿಯನ್ನು ಹೊರಗಿನಿಂದ ಬಲವಂತವಾಗಿ ತೆರೆಯಲು ಪ್ರಯತ್ನಿಸುತ್ತಿದ್ದ ನಜ಼ರುದ್ದೀನ್‌. ಅದನ್ನು ನೋಡಿದ ಕಾವಲುಗಾರ ಕೇಳಿದ, “ಏನು ಮಾಡುತ್ತಿರುವೆ ನಜ಼ರುದ್ದೀನ್? ಮನೆಯ ಮುಂಬಾಗಿಲಿನ ಬೀಗದ ಕೈ ಕಳೆದು ಹೋಗಿ ಹೊರಗೇ ಸಿಕ್ಕಿಹಾಕಿಕೊಂಡಿರುವೆಯೇನು?”

ನಜ಼ರುದ್ದೀನ್‌ ಉತ್ತರಿಸಿದ, “ಶ್…. ಶಬ್ದ ಮಾಡಬೇಡ ಸುಮ್ಮನಿರು. ನಾನು ನಿದ್ದೆಯಲ್ಲಿ ಮಾತನಾಡುತ್ತೇನೆ ಎಂಬುದಾಗಿ ಹೇಳುತ್ತಾರೆ. ಏನು ಮಾತನಾಡುತ್ತೇನೆ ಎಂಬುದನ್ನು ಪತ್ತೆಹಚ್ಚಲೋಸುಗ ನಾನು ಮಲಗಿರುವಲ್ಲಿಗೆ ಸದ್ದಿಲ್ಲದೇ ಹೋಗಲು ಪ್ರಯತ್ನಿಸುತ್ತಿದ್ದೇನೆ!”

೨೩೯. ಕೋಳಿ ಮಾರಾಟಗಾರ ನಜ಼ರುದ್ದೀನ್‌

ಒಂದು ದಿನ ನಜ಼ರುದ್ದೀನ್‌ ಪೇಟೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ ೨೦೦ ದಿನಾರ್‌ಗಳಂತೆ ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ. ಅವನು ಆಲೋಚಿಸಿದ: ‘ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ ೨೦೦ ದಿನಾರ್‌ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ ೨೦೦ ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು.’

ಮಾರನೆಯ ದಿನ ನಜ಼ರುದ್ದೀನ್‌ ಪೇಟೆಬೀದಿಗೆ ತನ್ನ ಕೋಳಿಯಡನೆ ಬಂದ, ದೊಡ್ಡ ಮೊತ್ತದ ಹಣಕ್ಕೆ ಅದನ್ನು ಮಾರುವ ನಿರೀಕ್ಷೆಯೊಂದಿಗೆ. ಆದರೆ ಯಾರೊಬ್ಬರೂ ಅದಕ್ಕೆ ೫ ದಿನಾರ್‌ಗಳಿಗಿಂತ ಹೆಚ್ಚು ಹಣ ಕೊಡಲು ತಯಾರಿಲ್ಲದೇ ಇರುವುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಬೇಸರದಿಂದ ಆತ ಎಲ್ಲರಿಗೂ ಕೇಳುವಂತೆ ಕೂಗಿ ಹೇಳಿದ, “ಇದು ನನಗೆ ಅರ್ಥವಾಗುತ್ತಿಲ್ಲ. ನಿನ್ನೆ ಇದಕ್ಕಿಂತ ಅನೇಕ ಪಟ್ಟು ಚಿಕ್ಕದಾಗಿದ್ದ ಪಕ್ಷಿಗಳಿಗೆ ಇದಕ್ಕೆ ಕೊಡಲು ಸಿದ್ಧರಾಗಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಹಣ ಕೊಡಲು ಜನ ಸಿದ್ಧರಿದ್ದರು!”

ಇದನ್ನು ಕೇಳಿದ ಒಬ್ಬಾತ ಪ್ರತಿಕ್ರಿಯಿಸಿದ, “ಮುಲ್ಲಾ, ಆವು ಗಿಳಿಗಳು. ಅವು ಮನುಷ್ಯರಂತೆ ಮಾತನಾಡುತ್ತವೆ ಎಂಬ ಕಾರಣಕ್ಕಾಗಿ ನಿನ್ನ ಕೋಳಿಗಿಂತ ಹೆಚ್ಚು ಬೆಲೆಬಾಳುತ್ತವೆ.”

ನಜ಼ರುದ್ದೀನ್ ಉದ್ಗರಿಸಿದ, “ಶುದ್ಧ ಅವಿವೇಕ. ಅವು ಮಾತನಾಡುತ್ತವೆ ಎಂಬ ಕಾರಣಕ್ಕಾಗಿ ಹೆಚ್ಚು ಬೆಲೆಯೇ? ಈ ನನ್ನ ಪಕ್ಷಿ ಅದಕ್ಕಿಂತ ಎಷ್ಟೋ ಉತ್ತಮವಾದದ್ದು.”

“ಅದು ಹೇಗೆ?” ಆತ ಕೇಳಿದ.

“ಏಕೆಂದರೆ ಇದರ ತಲೆಯಲ್ಲಿ ಎಷ್ಟೋ ಅದ್ಭುತವಾದ ಆಲೋಚನೆಗಳಿವೆ, ಮನುಷ್ಯರ ತಲೆಯೊಳಗೆ ಇರುವಂತೆ. ಅಷ್ಟೇ ಅಲ್ಲ, ಇದು ಸದಾ ವಟವವಟ ಅನ್ನುತ್ತಿದ್ದು ಇತರರ ತಲೆ ತಿನ್ನುವುದಿಲ್ಲ!”

೨೪೦. ನಾನು ಎಲ್ಲಿರಬೇಕು?

ಮುಲ್ಲಾ ನಜ಼ರುದ್ದೀನ್‌ನ ಮಿತ್ರನೊಬ್ಬ ಶವಸಂಸ್ಕಾರವೊಂದರಲ್ಲಿ ಭಾಗವಹಿಸಬೇಕಿತ್ತು. ಅದು ಅವನು ತನ್ನ ಜೀವಮಾನದಲ್ಲಿ ಭಾಗವಹಿಸುತ್ತಿದ್ದ ಮೊದಲನೇ ಶವಸಂಸ್ಕಾರವಾಗಿದ್ದದ್ದರಿಂದ ಮುಲ್ಲಾನ ಸಲಹೆ ಕೇಳಿದ: “ಮುಲ್ಲಾ, ನಾನು ಶವಸಂಸ್ಕಾರದ ಮೆರವಣಿಗೆಯಲ್ಲಿ ಎಲ್ಲಿರಬೇಕು? ಮುಂಭಾಗದಲ್ಲಿಯೋ, ಹಿಂಭಾಗದಲ್ಲಿಯೋ ಅಥವ ಮಧ್ಯದಲ್ಲಿಯೋ?” ಮುಲ್ಲಾ ಹೇಳಿದ, “ಅಯ್ಯಾ ಮಿತ್ರನೇ ನೀನು ಮೆರವಣಿಗೆಯ ಯಾವ ಭಾಗದಲ್ಲಿ ಇದ್ದರೂ ಪರವಾಗಿಲ್ಲ, ಶವಪೆಟ್ಟಿಗೆಯ ಒಳಗೆ ಮಾತ್ರ ಇರಕೂಡದು.”

೨೪೧. ನಿನಗೊಬ್ಬಳು ೫೦ ವರ್ಷ ವಯಸ್ಸಿನ ಅವಿವಾಹಿತ ಮಗಳಿದ್ದಾಳೆಯೇ?

ಶ್ರೀಮಂತ ರೈತನೊಬ್ಬ ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಬಲು ಪರದಾಡುತ್ತಿದ್ದ. ಒಂದು ದಿನ ಆತ ಮುಲ್ಲಾ ನಜ಼ರುದ್ದೀನ್‌ನನ್ನು ಭೇಟಿ ಮಾಡಿದಾಗ ಹೇಳಿದ, “ಮುಲ್ಲಾ ನನಗೆ ಅನೇಕ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಯೋಗ್ಯರಾದ ವರಾನ್ವೇಷಣೆ ಮಾಡುತ್ತಿದ್ದೇನೆ. ಅಂದ ಹಾಗೆ ಅವರು ಬರಿಗೈನಲ್ಲಿ ಗಂಡನ ಮನೆಗೆ ಹೋಗುವುದಿಲ್ಲ. ಅತ್ಯಂತ ಕಿರಿಯವಳ ವಯಸ್ಸು ೨೩ ವರ್ಷ, ಅವಳು ತನ್ನೊಂದಿಗೆ ೨೫೦೦೦ ದಿನಾರ್‌ ಒಯ್ಯುತ್ತಾಳೆ. ಅವಳಿಗಿಂತ ತುಸು ದೊಡ್ಡವಳ ವಯಸ್ಸು ೩೨ ವರ್ಷ, ಅವಳು ತನ್ನೊಂದಿಗೆ ೫೦೦೦೦ದಿನಾರ್‌ ಒಯ್ಯುತ್ತಾಳೆ. ಅವಳಿಗಿಂತ ದೊಡ್ಡವಳ ವಯಸ್ಸು ೪೩ ವರ್ಷ, ಅವಳು ತನ್ನೊಂದಿಗೆ ೭೫೦೦೦ ದಿನಾರ್‌ ಒಯ್ಯುತ್ತಾಳೆ.” ಮುಲ್ಲಾ ಮಧ್ಯಪ್ರವೇಶಿಸಿ ಬಲು ಆಸಕ್ತಿಯಿಂದ ಕೇಳಿದ, “ನಿನಗೊಬ್ಬಳು ೫೦ ವರ್ಷ ವಯಸ್ಸಿನ ಅವಿವಾಹಿತ ಮಗಳಿದ್ದಾಳೆಯೇ?”

೨೪೨. ಮುಲ್ಲಾನ ಭಾಷಣ

ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣ ಮಾಡುವ ಅಭ್ಯಾಸವಿಲ್ಲದ ನಜ಼ರುದ್ದೀನ್‌ ಭೋಜನಕೂಟವೊಂದರಲ್ಲಿ ಭಾಷಣ ಮಾಡಲೇಬೇಕಾದ ಪರಿಸ್ಥಿತಿ ಒಮ್ಮೆ ಉದ್ಭವಿಸಿತು. ಏನು ಮಾತನಾಡಬೇಕೆಂಬುದರ ಕಲ್ಪನೆ ಇಲ್ಲದ ನಜ಼ರುದ್ದೀನ್‌ ಎದ್ದುನಿಂತು ಮೆಲುದನಿಯಲ್ಲಿ ಗೊಣಗಿದ, “ನನ್ನ — ನನ್ನ ಸ್ನೇಹಿತರೇ, ನಾನು ಇಲ್ಲಿಗೆ ಬರುವ ಮುನ್ನ ದೇವರಿಗೆ ಹಾಗು ನನಗೆ ಮಾತ್ರ ಇಲ್ಲಿ ಏನು ಹೇಳಬೇಕೆಂಬುದು ತಿಳಿದಿತ್ತು. ಈಗ ಆ ವಿಷಯ ದೇವರಿಗೆ ಮಾತ್ರ ತಿಳಿದಿದೆ.”

೨೪೩. ಮುಲ್ಲಾ ಮದುವೆ ಆಗಬೇಕೆಂದುಕೊಂಡಿದ್ದವಳು ಸನ್ಯಾಸಿನಿ ಆದದ್ದು.

ಮುಲ್ಲಾ ನಜ಼ರುದ್ದೀನ್‌ ಮದುವೆ ಆಗಬೇಕೆಂದುಕೊಂಡಿದ್ದವಳು ಒಬ್ಬ ನಾಸ್ತಿಕ ಸ್ರೀ ಆಗಿದ್ದಳು ಎಂಬ ಕಾರಣಕ್ಕಾಗಿ ಅವನ ತಾಯಿ ಆ ಮದುವೆಯನ್ನು ವಿರೋಧಿಸುತ್ತಿದ್ದಳು. “ನಾನು ಅವಳನ್ನು ಬಹಳ ಪ್ರೀತಿಸುತ್ತಿದ್ದೇನೆ,” ಗೋಗರೆದ ನಜ಼ರುದ್ದೀನ್. “ಹಾಗಾದರೆ, ಆಸ್ತಿಕರಾಗಿದ್ದರೆ ಆಗುವ ಲಾಭಗಳನ್ನು ಅವಳಿಗೆ ಮೊದಲು ಮನವರಿಕೆ ಮಾಡಿಕೊಡು. ಅವಳ ಮನಃಪರಿವರ್ತನೆ ಮಾಡು. ನೀನು ಪ್ರಯತ್ನಿಸಿದರೆ ಈ ಕಾರ್ಯದಲ್ಲಿ ನೀನು ಖಂಡಿತವಾಗಿಯೂ ಯಶಸ್ವಿಯಾಗುವೆ ಎಂಬ ನಂಬಿಕೆ ನನಗಿದೆ,” ಸಲಹೆ ನೀಡಿದಳು ಅವನ ತಾಯಿ. ಮುಂದೊಂದು ದಿನ ನಜ಼ರುದ್ದೀನ್‌ ಬಲು ದುಃಖದಿಂದ ಕುಳಿತದ್ದನ್ನು ನೋಡಿದ ಅವನ ತಾಯಿ ಕೇಳಿದಳು, “ಏನಾಯಿತು, ನೀನು ಪ್ರೀತಿಸುತ್ತಿದ್ದ ಹುಡುಗಿಯ ಮನಃಪರಿವರ್ತನೆಯ ಕಾರ್ಯದಲ್ಲಿ ನೀನು ಯಶಸ್ವಿಯಾಗುತ್ತಿರುವಂತೆ ಗೋಚರಿಸುತ್ತಿತ್ತು.” ನಜ಼ರುದ್ದೀನ್‌ ಹಲುಬಿದ, “ತೊಂದರೆ ಆದದ್ದೇ ಅಲ್ಲಿ. ನನ್ನ ಮಾತುಗಳಿಂದ  ಪ್ರಭಾವಿತಳಾದ ಆಕೆ ಸಂನ್ಯಾಸಿನಿ ಆಗಲು ನಿರ್ಧರಿಸಿದ್ದಾಳೆ!”

೨೪೪. ನನ್ನ ತಂದೆಗೆ ಅದು ಇಷ್ಟವಾಗುವುದಿಲ್ಲ.

ಮುಲ್ಲಾ ನಜ಼ರುದ್ದೀನ್‌ ತನ್ನ ಮನೆಗೆ ಒಯ್ಯುತ್ತಿದ್ದ ಒಣಹುಲ್ಲು ಇದ್ದ ಗಾಡಿ ರಸ್ತೆಯಲ್ಲಿ ಮಗುಚಿ ಬಿದ್ದಿತು.

ಏನು ಮಾಡುವುದೆಂಬುದು ತಿಳಿಯದ ನಜ಼ರುದ್ದೀನ್‌ನಿಗೆ ಆ ಹಾದಿಯಲ್ಲಿ ಹೋಗುತ್ತಿದ್ದ ರೈತನೊಬ್ಬ ಹೇಳಿದ, “ಅಷ್ಟೊದು ಯೋಚನೆ ಮಾಡಬೇಡ ಮಿತ್ರಾ. ಸಮೀಪದಲ್ಲಿ ಇರುವ ನನ್ನ ಮನೆಗೆ ಬಾ. ಅಲ್ಲಿ ಊಟ ಮಾಡಬಹುದು. ಆ ನಂತರ ಬಂದು ಗಾಡಿಯನ್ನು ನೆಟ್ಟಗೆ ನಿಲ್ಲಿಸೋಣ.”

“ಅದು ನನ್ನ ತಂದೆಗೆ ಇಷ್ಟವಾಗುತ್ತದೆ ಎಂಬುದಾಗಿ ನನಗನ್ನಿಸುತ್ತಿಲ್ಲ,” ಹೇಳಿದ ನಜ಼ರುದ್ದೀನ್‌.

“ಆ ಕುರಿತು ನೀನು ಚಿಂತಿಸಬೇಕಾದ ಅಗತ್ಯವೇ ಇಲ್ಲ. ಎಲ್ಲವೂ ಸರಿಯಾಗುತ್ತದೆ. ಬಾ ಈಗ ಮನೆಗೆ ಹೋಗೋಣ,” ಒತ್ತಾಯ ಮಾಡಿದ ಆ ರೈತ.

ಅವನ ಒತ್ತಾಯಕ್ಕೆ ಮಣಿದು ನಜ಼ರುದ್ದೀನ್‌ ಅವನೊಂದಿಗೆ ಹೋಗಿ ಭೋಜನ ಮಾಡಿ ಹಿಂದಿರುಗಿ ಬಂದು ಪುನಃ ಹೇಳಿದ, “ಭೋಜನ ಬಲು ರುಚಿಯಾಗಿತ್ತು,ಧನ್ಯವಾದಗಳು ಮಿತ್ರಾ. ಆದರೆ ನನ್ನ ತಂದೆಗೆ ಈಗ ನಾನು ಮಾಡಿದ್ದು ಇಷ್ಟವಾಗುತ್ತದೆ ಎಂಬುದಾಗಿ ನನಗೆ ಈಗಲೂ ಅನ್ನಿಸುತ್ತಿಲ್ಲ.”

ರೈತ ಮಿತ್ರ ಕೇಳಿದ, “ಆ ಕುರಿತು ನೀನು ಚಿಂತಿಸಬೇಕಾದ ಅಗತ್ಯವೇ ಇಲ್ಲ. ಎಲ್ಲವೂ ಸರಿಯಾಗುತ್ತದೆ. ಅಂದ ಹಾಗೆ ಈಗ ನಿನ್ನ ತಂದೆ ಎಲ್ಲಿದ್ದಾರೆ?”

“ಮಗುಚಿದ ಗಾಡಿಯ ಹುಲ್ಲಿನ ರಾಶಿಯ ಕೆಳಗೆ,” ಗೊಣಗಿದ ನಜ಼ರುದ್ದೀನ್‌.

೨೪೫. ನಿದ್ದೆಯೂ ಒಂದು ಅಭಿಪ್ರಾಯ

ತನ್ನ ಹೊಸ ನಾಟಕವೊಂದನ್ನು ನೋಡುವಂತೆ ಮುಲ್ಲಾ ನಜ಼ರುದ್ದೀನ್‌ನನ್ನು ಒಬ್ಬ ಯುವ ನಾಟಕಕರ್ತೃ ಆಹ್ವಾನಿಸಿದ. ನಾಟಕ ನೋಡಲು ಬಂದ ಮುಲ್ಲಾ ಪ್ರದರ್ಶನಾವಧಿಯ ಆದ್ಯಂತ ಚೆನ್ನಾಗಿ ನಿದ್ದೆ ಮಾಡಿದ. ಇದರಿಂದ ಕುಪಿತನಾದ ನಾಟಕಕರ್ತೃ ಕೇಳಿದ, “ನಾಟಕದ ಕುರಿತು ನಿನ್ನ ಅಭಿಪ್ರಾಯ ತಿಳಿಯಲು ನಾನು ಕಾತರನಾಗಿದ್ದೆ ಎಂಬುದು ನಿನಗೆ ತಿಳಿದಿದ್ದರೂ ನಿದ್ದೆ ಮಾಡಿದ್ದು ಸರಿಯೇ?”

“ಅಯ್ಯಾ ಯುವ ಮಿತ್ರನೇ, ನಿದ್ದೆಯೂ ಒಂದು ಅಭಿಪ್ರಾಯವೇ ಆಗಿದೆ,” ಹೇಳಿದ ನಜ಼ರುದ್ದೀನ್‌.

೨೪೬. ವಿವೇಕಿಯಾಗುವುದು ಹೇಗೆ?

ಮಿತ್ರ: “ಒಬ್ಬ ವಿವೇಕಿಯಾಗುವುದು ಹೇಗೆ ನಜ಼ರುದ್ದೀನ್‌?”

ನಜ಼ರುದ್ದೀನ್‌: “ವಿವೇಕಿಗಳು ಮಾತನಾಡುತ್ತಿರುವಾಗ ಅದನ್ನು ಗಮನವಿಟ್ಟು ಕೇಳು. ನೀನು ಮಾತನಾಡುವುದನ್ನು ಬೇರೊಬ್ಬರು ಕೇಳುತ್ತಿರುವಾಗ ನೀನೇನು ಹೇಳುತ್ತಿರುವೆಯೋ ಅದನ್ನೂ ಗಮನವಿಟ್ಟು ಕೇಳು!”

೨೪೭. ಮಾತೃಭಾಷೆಯ ಅಪಾನವಾಯು

ಪರದೇಶವೊಂದರ ಮುಖ್ಯಸ್ಥನೊಂದಿಗೆ ನಜ಼ರುದ್ದೀನ್‌ ಭೋಜನ ಮಾಡಬೇಕಾದ ಸನ್ನಿವೇಶ ಉಂಟಾಗಿತ್ತು. ನಜ಼ರುದ್ದೀನ್‌ನ ಮಾತೃಭಾಷೆಯನ್ನು ತಿಳಿದಿದ್ದ ಆ ದೇಶವಾಸಿಯೊಬ್ಬ ದುಭಾಷಿಯಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದ.

ಭೋಜನಕ್ಕೆ ಹೋಗುವ ಮುನ್ನವೇ ದುಭಾಷಿ ಎಚ್ಚರಿಸಿದ, “ಮುಖ್ಯಸ್ಥನ ಸಮ್ಮುಖದಲ್ಲಿ ಅಪಾನವಾಯು ಸಡಲಿಸಕೂಡದು ಎಂಬುದನ್ನು ನೆನಪಿನಲ್ಲಿಡು. ನಮ್ಮ ದೇಶವಾಸಿಗಳು ಅದನ್ನು ತಮ್ಮನ್ನು ಅಪಮಾನಿಸಿದಂತೆ ಎಂಬುದಾಗಿ ಪರಿಗಣಿಸುತ್ತಾರೆ.”

ನಜ಼ರುದ್ದೀನ್ ಅದಕ್ಕೆ ಸಮ್ಮತಿಸಿ ಭೋಜನಶಾಲೆಯನ್ನು ಪ್ರವೇಶಿಸಿದ. ಊಟಮಾಡಲು ಆರಂಭಿಸಿದ ನಂತರ ಸ್ವಲ್ಪ ಸಮಯವಾಗುವಷ್ಟರಲ್ಲಿಯೇ ನಜ಼ರುದ್ದೀನ್‌ ಸಶಬ್ದವಾಗಿಯೇ ಅಪಾನವಾಯು ಸಡಲಿಸಿದ. ದುಭಾಷಿಯ ಮುಖ ಕೋಪದಿಂದ ಕೆಂಪಾಯಿತು. ನಜ಼ರುದ್ದೀನ್‌ ಶಾಂತಚಿತ್ತನಾಗಿಯೇ ಅವನಿಗೆ ಹೇಳಿದ, “ಚಿಂತಿಸಬೇಡ. ಅಪಾನವಾಯು ಸಡಲಿಸಿದಾಗ ಆದ ಶಬ್ಬ ನನ್ನ ಮಾತೃಭಾಷೆಯಲ್ಲಿಯೇ ಇತ್ತು. ಎಂದೇ ಅದೇನೆಂಬುದು ಮುಖ್ಯಸ್ಥನಿಗೆ ಖಂಡಿತ ಅರ್ಥವಾಗಿರುವುದಿಲ್ಲ!”

೨೪೮. ಭವಿಷ್ಯದ ಚಿಂತೆ

“ತುಂಬಾ ಎದೆಗುಂದಿದವನಂತೆ ಕಾಣುತ್ತಿರುವೆ, ಏನು ವಿಷಯ ಮುಲ್ಲಾ?” ಕೇಳಿದ ನಜ಼ರುದ್ದೀನ್‌ನ ಮಿತ್ರನೊಬ್ಬ.

“ನಾನು ನನ್ನ ಭವಿಷ್ಯದ ಕುರಿತು ಚಿಂತಿತನಾಗಿದ್ದೇನೆ,” ಉತ್ತರಿಸಿದ ಮುಲ್ಲಾ.

“ಭವಿಷ್ಯ ಚೆನ್ನಾಗಿಲ್ಲ ಅನ್ನಿಸಲು ಕಾರಣವೇನು? ವಿಚಾರಿಸಿದ ಮಿತ್ರ.

“ನನ್ನ ಕಳೆದುಹೋದ ಕಾಲ,” ಹಲುಬಿದ ನಜ಼ರುದ್ದೀನ್‌.

೨೪೯. ಶಾಂತಿಪ್ರಿಯ ಮುಲ್ಲಾ

ಮುಲ್ಲಾ ನಜ಼ರುದ್ದೀನ್‌ ಹಾಗು ಅವನ ಮಿತ್ರನೊಬ್ಬ ಸೈನ್ಯಕ್ಕೆ ಸೇರುವ ಕುರಿತು ಒಂದು ದಿನ ಚರ್ಚಿಸುತ್ತಿದ್ದರು.

“ನೀನು ಸೈನ್ಯಕ್ಕೆ ಸೇರಬಯಸಲು ಕಾರಣವೇನು?” ಕೇಳಿದ ಮುಲ್ಲಾ.

ಮಿತ್ರ ಪ್ರತಿಕ್ರಿಯಿಸಿದ, “ನನಗಿನ್ನೂ ಮದುವೆ ಆಗಿಲ್ಲ. ಅಷ್ಟೇ ಅಲ್ಲದೆ ನಾನು ಯುದ್ಧ ಮಾಡುವುದನ್ನು ಪ್ರೀತಿಸುತ್ತೇನೆ. ನೀನೇಕೆ ಸೈನ್ಯ ಸೇರುವ ಆಲೋಚನೆ ಮಾಡುತ್ತಿರುವೆ?”

ಮುಲ್ಲಾ ಉತ್ತರಿಸಿದ, “ನನಗೆ ಮದುವೆ ಆಗಿ ಹೆಂಡತಿಯೊಬ್ಬಳಿದ್ದಾಳೆ  ಹಾಗು ನಾನು ಶಾಂತಿಯಿಂದಿರುವುದನ್ನು ಪ್ರೀತಿಸುತ್ತೇನೆ.”

೨೫೦. ನಜ಼ರುದ್ದೀನ್‌ನ ಸಾವು

ವೃದ್ಧ ನಜ಼ರುದ್ದೀನ್‌ ಹಾಸಿಗೆಯಲ್ಲಿ ಮಲಗಿಕೊಂಡು ಸಾವಿನ ನಿರೀಕ್ಷೆಯಲ್ಲಿದ್ದ. ಅವನು ತನ್ನ ಹೆಂಡತಿಗೆ ಹೇಳಿದ, “ನೀನೇಕೆ ಕಪ್ಪು ಉಡುಪು ಧರಿಸಿ ಶೋಕತಪ್ತಳಾಗಿ ಕಾಣುತ್ತಿರುವೆ? ಹೋಗು, ನಿನ್ನ ಹತ್ತಿರ ಇರುವ ಅತ್ಯಂತ ಸುಂದರವಿರುವ ಉಡುಪನ್ನು ಧರಿಸಿ ತಲೆಗೂದಲನ್ನು ಒಪ್ಪ ಮಾಡಿಕೊಂಡು ಮುಗುಳ್ನಗೆಯೊಂದಿಗೆ ಬಾ.”

ಅವನ ಹೆಂಡತಿ ಅಳುತ್ತಾ ಪ್ರತಿಕ್ರಿಯಿಸಿದಳು, “ಅಂತು ಮಾಡುವಂತೆ ಹೇಳಲು ನಿನಗೆ ಹೇಗೆ ಮನಸ್ಸಾಯಿತು? ನೀನು ರೋಗಪೀಡಿತನಾಗಿರುವೆ. ನಿನಗೆ ಗೌರವ ಸಲ್ಲಿಸಲೋಸುಗ ನಾನು ಈ ಉಡುಪನ್ನು ಧರಿಸಿದ್ದೇನೆ.”

ನಜ಼ರುದ್ದೀನ್‌ ಹೇಳಿದ, “ನಾನು ರೋಗಪೀಡಿತನಾಗಿರುವುದು ನಿಜ. ಆದ್ದರಿಂದಲೇ ಅಂತು ಮನವಿ ಮಾಡಿದೆ. ಸಾವಿನ ದೂತರು ಬಲು ಬೇಗನೆ ಇಲ್ಲಿಗೆ ಬರುತ್ತಾರೆ. ಅವರಿಗೆ ನೀನು ಸುಂದರವಾಗಿ ಗೋಚರಿಸಿದರೆ ನನ್ನನ್ನು ಇಲ್ಲಿಯೇ ಬಿಟ್ಟು ನಿನ್ನನ್ನು ಕರೆದೊಯ್ಯುವ ಸಾಧ್ಯತೆ ಇದೆ!”

ಇಷ್ಟನ್ನು ಹೇಳಿದ ನಜ಼ರುದ್ದೀನ್‌ ಮೆಲ್ಲಗೆ ನಕ್ಕು ಕೊನೆಯುಸಿರೆಳೆದನು.

Advertisements
This entry was posted in ನಜ಼ರುದ್ದೀನ್‌ ಕತೆಗಳು and tagged , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s