ನಜ಼ರುದ್ದೀನ್‌ನ ಕತೆಗಳು, ೧೫೧-೨೦೦

೧೫೧. ಒಂದು ಹಸು ಇನ್ನೊಂದನ್ನು ತಿವಿದು ಕೊಂದಾಗ

ನ್ಯಾಯಾಧೀಶ ನಜ಼ರುದ್ದೀನ್‌ನ ನ್ಯಾಯಾಲಯಕ್ಕೆ ಅವನ ನೆರೆಮನೆಯಾತ ಓಡಿ ಬಂದು ಕೇಳಿದ, “ಒಬ್ಬನ ಹಸುವನ್ನು ಇನ್ನೊಬ್ಬನ ಹಸುವನ್ನು ತಿವಿದು ಕೊಂದರೆ ಕೊಲೆಗೆ ಉತ್ತರದಾಯಿತ್ವ ಮೊದಲನೇ ಹಸುವಿನ ಮಾಲೀಕನದ್ದು ಆಗುತ್ತದೆಯೇ?

ನಜ಼ರುದ್ದೀನ್‌ ಬಲು ಎಚ್ಚರಿಕೆಯಿಂದ ಉತ್ತರಿಸಿದ, “ಅದು ಇತರ ಕೆಲವು ಅಂಶಗಳನ್ನು ಅವಲಂಬಿಸಿದೆ.”

ನೆರೆಮನೆಯವ ಹೇಳಿದ, “ನಿಮ್ಮ ಹಸು ನನ್ನ ಹಸುವನ್ನು ಕೊಂದು ಹಾಕಿದೆ.”

ನಜ಼ರುದ್ದೀನ್‌ ಹೇಳಿದ, “ಓಹ್‌, ಹಾಗೇನು? ಮನುಷ್ಯರಂತೆ ಹಸು ಆಲೋಚಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅಂದ ಮೇಲೆ ಹಸುವನ್ನು ಕೊಲೆಗಾರ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದೂ ಸುಸ್ಪಷ್ಟ. ಆದ್ದರಿಂದ ಕೊಲೆಯ ಉತ್ತರದಾಯಿತ್ವ ಅದರ ಮಾಲೀಕನದ್ದೂ ಆಗುವುದಿಲ್ಲ.”

ನೆರೆಮನೆಯವ ಮಧ್ಯಪ್ರವೇಶಿಸಿ ಹೇಳಿದ, “ಕ್ಷಮಿಸಿ ನ್ಯಾಯಾಧೀಶರೇ ನಾನು ಹೇಳುವಾಗ ತಪ್ಪಾಗಿದೆ. ನನ್ನ ಹಸು ನಿಮ್ಮ ಹಸುವನ್ನು ಕೊಂದು ಹಾಕಿದೆ ಎಂಬುದಾಗಿ ಹೇಳುವ ಉದ್ದೇಶ ನನ್ನದಾಗಿತ್ತು.”

ನ್ಯಾಯಾಧೀಶ ನಜ಼ರುದ್ದೀನ್‌ ಕೆಲವು ನಿಮಿಷಗಳ ಕಾಲ ಅಂತರ್ಮುಖಿಯಾದರು. ತದನಂತರ ಇಂತು ಘೋಷಿಸಿದರು, “ ಈ ಪ್ರಕರಣದ ಕುರಿತು ಆಳವಾಗಿ ಆಲೋಚಿಸಿದಾಗ ಈ ಪ್ರಕರಣ ನಾನು ಮೊದಲು ಆಲೋಚಿಸಿದ್ದಕ್ಕಿಂತ ಸಂಕೀರ್ಣವಾಗಿದೆ ಎಂಬುದಾಗಿ ನನಗನ್ನಿಸುತ್ತಿದೆ.” ತದನಂತರ ತನ್ನ ಸಹಾಯಕನತ್ತ ತಿರುಗಿ ಹೇಳಿದ, “ನಿನ್ನ ಹಿಂದೆ ಇರುವ ಕಪಾಟಿನಲ್ಲಿ ಒಂದು ದೊಡ್ಡ ನೀಲಿ ಪುಸ್ತಕ ಇದೆ. ಅದರಲ್ಲಿ ಇಂಥ ಸಂಕೀರ್ಣ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅಗತ್ಯವಾದ —————!”

೧೫೨. ನೀನು ಹೇಳಿದ್ದು ಸರಿ

ನ್ಯಾಯಾಧೀಶ ನಜ಼ರುದ್ದೀನ್‌ ಮೊಕದ್ದಮೆಯೊಂದರ ವಾದ ಪ್ರತಿವಾದಗಳನ್ನು ಆಲಿಸುತ್ತಿದ್ದ. ವಾದಿ ತನ್ನ ವಾದವನ್ನು ಮಂಡಿಸಿದ ನಂತರ “ನೀನು ಹೇಳಿದ್ದು ಸರಿ” ಎಂಬುದಾಗಿ ನಜ಼ರುದ್ದೀನ್‌ ಉದ್ಗರಿಸಿದ. ತದನಂತರ ಪ್ರತಿವಾದಿ  ಮಂಡಿಸಿದ್ದನ್ನು ಆಲಿಸಿ “ಹೌದು, ನೀನು ಹೇಳಿದ್ದು ಸರಿ” ಎಂಬುದಾಗಿ ಪ್ರತಿಕ್ರಿಯಿಸಿದ. ವಾದ ಪ್ರತಿವಾದಗಳನ್ನು ಕೇಳುತ್ತಿದ್ದ ನಜ಼ರುದ್ದೀನ್‌ನ ಹೆಂಡತಿ ಹೇಳಿದಳು, “ಇವು ನನಗೆ ಅರ್ಥವಿಹೀನ ಪ್ರತಿಕ್ರಿಯೆಗಳು ಅನ್ನಿಸುತ್ತಿದೆ. ವಾದಿ ಪ್ರತಿವಾದಿಗಳಿಬ್ಬರೂ ಹೇಳಿದ್ದು ಸರಿಯಾಗಿರುವುದು ಹೇಗೆ ಸಾಧ್ಯ?”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನಿನಗೊಂದು ವಿಷಯ ಗೊತ್ತೇ? ನೀನು ಹೇಳಿದ್ದೂ ಸರಿಯಾಗಿದೆ!”

 ೧೫೨. ಪಕ್ಷಿಯೊಂದು ನಜ಼ರುದ್ದೀನ್‌ನ ಪ್ರಾಣ ಉಳಿಸಿತು

ಒಂದು ದಿನ ನಜ಼ರುದ್ದೀನ್‌ ಮರುಭೂಮಿಯಲ್ಲಿ ಹೋಗುತ್ತಿದ್ದಾಗ ವಿದೇಶೀ ಜ್ಞಾನಿಯೊಬ್ಬನನ್ನು ಸಂಧಿಸಿದ. ನಜ಼ರುದ್ದೀನ್‌ ಅವನಿಗೆ ತನ್ನನ್ನು ತಾನೇ ಪರಿಚಯಿಸಿಕೊಂಡಾಗ ಅವನು ಹೇಳಿದ, “ನಾನೊಬ್ಬ ಎಲ್ಲ ಜೀವಿ ಪ್ರಭೇದಗಳನ್ನೂ, ವಿಶೇಷವಾಗಿ ಪಕ್ಷಿಗಳನ್ನು, ಮೆಚ್ಚುವ ಮೋಕ್ಷಾಕಾಂಕ್ಷಿ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಅದ್ಭುತ. ನಾನೊಬ್ಬ ಮುಲ್ಲಾ. ನಾವಿಬ್ಬರೂ ನಮ್ಮ ನಮ್ಮ ಧಾರ್ಮಿಕ ಬೋಧನೆಗಳನ್ನು ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂಬುದಕ್ಕೋಸ್ಕರ ನಿಮ್ಮೊಂದಿಗೆ ಸ್ವಲ್ಪ ಕಾಲ ಇರಲು ಇಚ್ಛಿಸುತ್ತೇನೆ. ಅಂದ ಹಾಗೆ, ಒಂದು ಸಲ ಪಕ್ಷಿಯೊಂದು ನನ್ನ ಪ್ರಾಣ ಉಳಿಸಿತ್ತು.”

ಇದನ್ನು ಕೇಳಿ ಸಂತುಷ್ಟನಾದ ಮೋಕ್ಷಾಕಾಂಕ್ಷಿ ನಜ಼ರುದ್ದಿನ್‌ನೊಂದಿಗೆ ಇರಲು ಸಮ್ಮತಿಸಿದ. ತಮ್ಮ ತಮ್ಮ ಧಾರ್ಮಿಕ ಬೋಧನೆಗಳನ್ನು ಅವರು ವಿನಿಮಯ ಮಾಡಿಕೊಳ್ಳುತ್ತಿದ್ದಾಗಲೆಲ್ಲ ಪಕ್ಷಿಯೊಂದು ನಜ಼ರುದ್ದೀನ್‌ನ ಪ್ರಾಣ ಉಳಿಸಿದ ಕತೆಯನ್ನು ಹೇಳುವಂತೆ ಮೋಕ್ಷಾಕಾಂಕ್ಷಿ ಒತ್ತಾಯಿಸುತ್ತಿದ್ದರೂ ನಜ಼ರುದ್ದೀನ್‌ ಅದನ್ನು ಹೇಳಲು ನಿರಾಕರಿಸುತ್ತಿದ್ದ. ಕೊನೆಗೊಂದು ದಿನ ಮೋಕ್ಷಾಕಾಂಕ್ಷಿ ಪರಿಪರಿಯಾಗಿ ವಿನಂತಿಸಿಕೊಂಡದ್ದರಿಂದ ಆ ಕತೆಯನ್ನು ಹೇಳಲು ನಜ಼ರುದ್ದೀನ್‌ ಒಪ್ಪಿಕೊಂಡ.

“ಅದೊಂದು ದಿನ,” ನಜ಼ರುದ್ದೀನ್‌ ವಿವರಿಸಲು ಆರಂಭಿಸಿದ, ಮೋಕ್ಷಾಕಂಕ್ಷಿ ಬಲು ಏಕಾಗ್ರತೆಯಿಂದ ಆಲಿಸತೊಡಗಿದ> “ಆರು ವರ್ಷಗಳ ಹಿಂದೆ ಒಂದು ದಿನ ತಿನ್ನಲು ಏನೂ ಸಿಕ್ಕದೇ ಇದ್ದದ್ದರಿಂದ ಹಸಿವಿನಿಂದ ಸಾಯುವವನಿದ್ದೆ. ಆಗ ಒಂದು ಪಕ್ಷಿ ಹಾರಿ ಬಂದು ನನ್ನ ಹತ್ತಿರ ಕುಳಿತಿತು. ನಾನು ಅದನ್ನು ಹಿಡಿದು ತಿಂದೆ, ನನ್ನ ಪ್ರಾಣ ಉಳಿಯಿತು!”

 ೧೫೩. ಕತ್ತೆ ಪ್ರಯೋಗ

ತನ್ನ ಕತ್ತೆ ತಿನ್ನುತ್ತಿರುವ ಒಟ್ಟು ಆಹಾರದ ಪರಿಮಾಣವನ್ನು ಕಮ್ಮಿ ಮಾಡಲೋಸುಗ ನಜ಼ರುದ್ದೀನ್‌ ಅದಕ್ಕೆ ನೀಡುತ್ತಿರುವ ಆಹಾರದ ಪರಿಮಾಣವನ್ನು ದಿನದಿಂದ ದಿನಕ್ಕೆ ಕಮ್ಮಿ ಮಾಡಲಾರಂಭಿಸಿದ. ತತ್ಪರಿಣಾಮವಾಗಿ ಕತ್ತೆ ದಿನದಿಂದ ದಿನಕ್ಕೆ ಬಡಕಲಾಗುತ್ತಾ ಹೋಗಿ ಮೂವತ್ತನೆಯ ದಿನ ಸತ್ತು ಬಿದ್ದಿತು.

“ಹಾಳಾದದ್ದು,” ಪ್ರಲಾಪಿಸಿದ ನಜ಼ರುದ್ದೀನ್, “ಇನ್ನು ಕೆಲವೇ ದಿನಗಳಲ್ಲಿ ಏನನ್ನೂ ತಿನ್ನದೇ ಬದುಕುವುದನ್ನು ಕಲಿಸುವುದರಲ್ಲಿದ್ದೆ!”

 ೧೫೪. ಸರ್ಕಾರದ ಸಹಾಯಧನ

ಒಬ್ಬ ರೈತ ನಜ಼ರುದ್ದೀನ್‌ನಿಗೆ ಹೇಳಿದ, “ಇಲ್ಲಿನ ಸರ್ಕಾರ ನಿಜವಾಗಿಯೂ ರೈತಪರ ಮನೋಧರ್ಮ ಉಳ್ಳದ್ದು. ಕಳೆದ ವರ್ಷ ನಾನು ಬಾರ್ಲಿ ಬೆಳೆ ಬೆಳೆದಿದ್ದೆ. ದುರದೃಷ್ಟವಶಾತ್‌ ಮಳೆ ಹಾಗು ಪ್ರವಾಹದಿಂದ ನಾನು ಬೆಳೆದದ್ದು ಸಂಪೂರ್ಣವಾಗಿ ನಾಶವಾಯಿತು. ಆಗ ಈ ಸರ್ಕಾರ ನನಗೆ ಆದ ನಷ್ಟಕ್ಕೆ ತಕ್ಕುದಾದ ಪರಿಹಾರ ಧನ ನೀಡಿತು.”

“ಓ ಹಾಗೋ? ಅದು ನಿಜವಾಗಿಯೂ ಧಾರಾಳ ಸ್ವಭಾವದ ವರ್ತನೆ,” ಉದ್ಗರಿಸಿದ ನಜ಼ರುದ್ದೀನ್‌.

ಆನಂತರ ಕೆಲವು ಕ್ಷಣಗಳ ಕಾಲ ಆಲೋಚಿಸಿ ನಜ಼ರುದ್ದೀನ್‌ ಸಂಭಾಷಣೆ ಮುಂದುವರಿಸುತ್ತಾ ಕೇಳಿದ, “ಪ್ರವಾಹ ಬರುವಂತೆ ಮಾಡುವ ಉಪಾಯವೇನಾದರೂ ನಿನಗೆ ಗೊತ್ತಿದೆಯೇ?”

 ೧೫೫. ಮುಂಡಾಸು ಮಾರುವುದು

ಒಂದು ದಿನ ನಜ಼ರುದ್ದೀನ್‌ ಮೋಹಕ ಮುಂಡಾಸೊದನ್ನು ಧರಿಸಿಕೊಂಡು ನಗರಾಧ್ಯಕ್ಷರ ಅರಮನೆಗೆ ಹೋದ.

“ವಾವ್‌!” ಮೆಚ್ಚುಗೆ ವ್ಯಕ್ತ ಪಡಿಸಿದರು ನಗರಾಧ್ಯಕ್ಷರು, “ಎಂಥ ಅದ್ಭುತ ಮುಂಡಾಸು! ಇಂಥ ಮುಂಡಾಸನ್ನು ನಾನು ಈ ವರೆಗೆ ನೋಡಿಯೇ ಇರಲಿಲ್ಲ. ಇದನ್ನು ನನಗೆ ಎಷ್ಟಕ್ಕೆ ಮಾರಾಟ ಮಾಡುವೆ?”

“ಒಂದು ಸಾವಿರ ದಿನಾರ್‌ಗಳಿಗೆ,” ಶಾಂತಚಿತ್ತದಿಂದ ಉತ್ತರಿಸಿದ ನಜ಼ರುದ್ದೀನ್‌.

ಅಲ್ಲಿಯೇ ಇದ್ದ ಸ್ಥಳೀಯ ವ್ಯಾಪಾರಿಯೊಬ್ಬ ನಗರಾಧ್ಯಕ್ಷರಿಗೆ ಹೇಳಿದ, “ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ರೀತಿಯ ಮುಂಡಾಸುಗಳ ಹಾಲಿ ಬೆಲೆಗಿಂತ ಈತ ಹೇಳಿದ್ದು ಅನೇಕ ಪಟ್ಟು ಹೆಚ್ಚಾಗಿದೆ.”

“ನೀನು ಬಲು ಹೆಚ್ಚು ಬೆಲೆ ಹೇಳುತ್ತಿರುವಂತಿದೆ,” ನಜ಼ರುದ್ದೀನನನ್ನು ಉದ್ದೇಶಿಸಿ ಉದ್ಗರಿಸಿದರು ನಗರಾಧ್ಯಕ್ಷರು.

“ಹಾಗೇನಿಲ್ಲ,” ವಿವರಿಸಿದ ನಜ಼ರುದ್ದೀನ್‌, “ನಾನು ಹೇಳಿದ ಬೆಲೆ ನಾನು ಇದಕ್ಕೆ ಕೊಟ್ಟ ಬೆಲೆಯನ್ನು ಆಧರಿಸಿದೆ. ಈ ಮುಂಡಾಸಿಗೆ ನಾನು ಬಹಳ ಹಣ ಕೊಟ್ಟು ಕೊಂಡುಕೊಂಡಿದ್ದೇನೆ. ಏಕೆಂದರೆ ಇಂಥ ಅದ್ಭುತ ಮುಂಡಾಸನ್ನು ಮೆಚ್ಚಿ ಕೊಂಡುಕೊಳ್ಳಲು ಅಗತ್ಯವಾದ ಅಭಿರುಚಿ ಇರುವ ನಗರಾಧ್ಯಕ್ಷರು ಇಡೀ ವಿಶ್ವದಲ್ಲಿಯೇ ಇರುವುದು ನೀವು ಒಬ್ಬರು ಮಾತ್ರ ಎಂಬುದು ನನಗೆ ಗೊತ್ತಿತ್ತು!”

ಈ ಹೊಗಳಿಕೆಯ ಮಾತುಗಳನ್ನು ಕೇಳಿದ ತಕ್ಷಣವೇ ನಗರಾಧ್ಯಕ್ಷರು ನಜ಼ರುದ್ದೀನ್‌ ಹೇಳಿದ ಬೆಲೆಗೆ ಆ ಮುಂಡಾಸನ್ನು ಕೊಂಡುಕೊಂಡರು.

ತದನಂತರ ನಜ಼ರುದ್ದೀನ್‌ ಆ ವ್ಯಾಪಾರಿಯ ಹತ್ತಿರ ಹೋಗಿ ಅವನಿಗೆ ಮಾತ್ರ ಕೇಳಿಸುವಂತೆ ಮೆಲುಧ್ವನಿಯಲ್ಲಿ ಹೇಳಿದ, “ನಿನಗೆ ವಸ್ತುಗಳ ಮಾರುಕಟ್ಟೆ ಬೆಲೆಗಳ ಸಂಪೂರ್ಣ ಜ್ಞಾನ ಇರಬಹುದು. ನನಗಾದರೋ, ನಗರಾಧ್ಯಕ್ಷರನ್ನು ಹೊಗಳುವುದರ ಮಾರುಕಟ್ಟೆ ಬೆಲೆಯ ಸಂಪೂರ್ಣ ಜ್ಞಾನ ಇದೆ!”

 ೧೫೬. ಕಾರ್ಯಪಟುತ್ವ?

ನಜರುದ್ದೀನ್‌ ಒಮ್ಮೆ ಉದ್ಯೋಗಸ್ಥನಾಗಬೇಕಾಗಿತ್ತು. ಆ ಸಂದರ್ಭದಲ್ಲಿ ಅವನ ಉದ್ಯೋಗದಾತ ಒಮ್ಮೆ ದೂರಿದ, “ನೀನು ಎಲ್ಲ ಕೆಲಸವನ್ನೂ ಬಲು ನಿಧಾನವಾಗಿ ಮಾಡುತ್ತಿರುವೆ. ಸಾಮಗ್ರಿಗಳನ್ನು ಕೊಂಡುಕೊಳ್ಳಲೋಸುಗ ನೀನು ಪೇಟೆಬೀದಿಗೆ ಮೂರು ಸಲ ಹೋಗಬೇಕಾಗಿರಲಿಲ್ಲ – ಅಗತ್ಯವಾದ ಎಲ್ಲ ಸಾಮಗ್ರಿಗಳನ್ನೂ ಮೊದಲನೇ ಸಲ ಹೋದಾಗಲೇ ಕೊಂಡುಕೊಳ್ಳಬಹುದಿತ್ತು.”

ಇದಾದ ಕೆಲವು ದಿನಗಳ ನಂತರ ನಜ಼ರುದ್ದೀನ್‌ನಿಗೆ ಆತನ ಉದ್ಯೋಗದಾತ ಹೇಳಿದ, “ನನ್ನ ಆರೋಗ್ಯ ಕೆಟ್ಟಿದೆ. ಒಬ್ಬ ವೈದ್ಯರನ್ನು ಕರೆದುಕೊಂಡು ಬಾ.”

ನಜ಼ರುದ್ದೀನ್‌ ವೈದ್ಯರೊಂದಿಗೆ ಇನ್ನೂ ಇಬ್ಬರನ್ನು ಕರೆತಂದಿದ್ದ. ಉದ್ಯೋಗದಾತ ಕೇಳಿದ, “ಇವರಿಬ್ಬರು ಯಾರು?”

ನಜ಼ರುದ್ದೀನ್‌ ವಿವರಿಸಿದ, “ಹೆಚ್ಚು ಸಲ ಹೋಗಬೇಕಾಗುವುದನ್ನು ತಪ್ಪಿಸಿ ಸಮಯ ಉಳಿಸಲೋಸುಗ ನೀವು ಪುನಃ ಆರೋಗ್ಯವಂತರಾಗಲಿ ಎಂಬುದಾಗಿ ಪ್ರಾರ್ಥಿಸಬೇಕಾದ ಅಗತ್ಯ ಉಂಟಾದರೆ ಎಂಬುದಕ್ಕಾಗಿ  ಇಮಾಮ್‌ರನ್ನೂ ನೀವು ಮರಣಿಸಿದರೆ ಇರಲಿ ಎಂಬುದಕ್ಕಾಗಿ ಶವಸಂಸ್ಕಾರ ನಿರ್ವಾಹಕನನ್ನೂ ಕರೆತಂದಿದ್ದೇನೆ!”

 ೧೫೭. ನನ್ನ ಕಿಸೆಯಲ್ಲಿ ಏನಿದೆ ಎಂಬುದನ್ನು ಊಹಿಸು

ನಜ಼ರುದ್ದೀನ್‌ನ ಮಿತ್ರನೊಬ್ಬ ತನ್ನ ಕಿಸೆಯಲ್ಲಿ ಕೋಳಿಮೊಟ್ಟೆಯೊಂದನ್ನು ಇಟ್ಟುಕೊಂಡು ನಜ಼ರುದ್ದೀನ್‌ನ ಹತ್ತಿರ ಹೋಗಿ ಹೇಳಿದ, “ನನ್ನ ಕಿಸೆಯಲ್ಲಿ ಏನಿದೆ ಎಂಬುದನ್ನು ನೀನು ಸರಿಯಾಗಿ ಊಹಿಸಿದರೆ ನಾಳೆ ಬೆಳಗ್ಗಿನ ಉಪಾಹಾರವನ್ನು ನಾನು ಕೊಡಿಸುತ್ತೇನೆ. ನೀನು ಸರಿಯಾಗಿ ಊಹಿಸಲು ಅನುಕೂಲವಾಗಲಿ ಎಂಬುದಕ್ಕೋಸ್ಕರ ಮೂರು ಸುಳಿವುಗಳನ್ನೂ ಕೊಡುತ್ತೇನೆ.”

“ಸರಿ. ಮೂರು ಸುಳಿವುಗಳನ್ನು ಕೊಡು ನೋಡೋಣ,” ಪ್ರತಿಕ್ರಿಯಿಸಿದ ನಜ಼ರುದ್ದೀನ್‌.

ಮಿತ್ರ ಹೇಳಿದ, “ಅದು ಮಧ್ಯದಲ್ಲಿ ಹಳದಿ ಆಗಿದೆ. ಮಿಕ್ಕುಳಿದ ಬಾಗ ಬಿಳಿಯಾಗಿದೆ. ಅದು ಕೋಳಿಮೊಟ್ಟೆಯ ಆಕಾರದ್ದಾಗಿದೆ.”

ನಜ಼ರುದ್ದೀನ್‌ ಉತ್ತರಿಸಿದ, “ಅದು ಒಂದು ನಮೂನೆಯ ಪಿಷ್ಟ ಭಕ್ಷ್ಯವೋ?”

 ೧೫೮. ಬಟ್ಟೆ ಒಣಹಾಕುವ ಹಗ್ಗ

ನೆರೆಮನೆಯಾತ: “ನಜ಼ರುದ್ದೀನ್ ನಿಮ್ಮ ಮನೆಯಲ್ಲಿ ಇರುವ ಬಟ್ಟೆ ಒಣ ಹಾಕುವ ಹಗ್ಗವನ್ನು ನಾನು ಎರವಲು ಪಡೆಯಬಹುದೇ?”

ನಜ಼ರುದ್ದೀನ್‌: “ಸಾಧ್ಯವಿಲ್ಲ. ಏಕೆಂದರೆ ಅದು ನನಗೆ ಈಗಲೇ ಬೇಕು. ಅದರಲ್ಲಿ ನಾನು ಗೋಧಿಹಿಟ್ಟು ನೇತು ಹಾಕಬೇಕೆಂದಿದ್ದೇನೆ.”

ನೆರೆಮನೆಯಾತ: “ಏನು? ಇದೊಂದು ಹಾಸ್ಯಾಸ್ಪದ ಹೇಳಿಕೆ. ಬಟ್ಟೆ ಒಣ ಹಾಕುವ ಹಗ್ಗದಿಂದ ಗೋಧಿಹಿಟ್ಟನ್ನು ನೇತು ಹಾಕುವ ವಿಷಯ ಯಾರೊಬ್ಬರೂ ಕೇಳಿರಲಾರರು.”

ನಜ಼ರುದ್ದೀನ್‌: “ಖಂಡಿತ ಕೇಳಿರುತ್ತಾರೆ! ಯಾರಿಗೆ ಅದನ್ನು ಎರವಲು ಕೊಡಲು ನನಗೆ ಇಷ್ಟವಿಲ್ಲವೋ ಅವರೆಲ್ಲರೂ ಕೇಳಿರುತ್ತಾರೆ!”

 ೧೫೯. ನೆರೆಮನೆಯವನ ತೋಟ.

ನೆರೆಮನೆಯವನ ತೋಟದಲ್ಲಿ ಚೆನ್ನಾಗಿ ಹಣ್ಣಾಗಿದ್ದ ಕಿತ್ತಲೆ ಹಣ್ಣುಗಳಿರುವುದನ್ನು ನಜ಼ರುದ್ದೀನ್‌ ಗಮನಿಸಿದ. ಒಂದು ಹಣ್ಣನ್ನು ಕದಿಯಲು ನಿರ್ಧರಿಸಿದ. ಅವನು ತನ್ನ ಮನೆಯಲ್ಲಿ ಇದ್ದ ಏಣಿಯ ನೆರವಿನಿಂದ ತಮ್ಮಿಬ್ಬರ ತೋಟಗಳ ನಡುವಣ ಸೀಮಾರೇಖೆಯಗುಂಟ ಇದ್ದ ಗೋಡೆಯ ಮೇಲಕ್ಕೆ ಹತ್ತಿದ. ಏಣಿಯನ್ನು ಮೇಲಕ್ಕೆಳೆದುಕೊಂಡು ಗೋಡೆಯ ಇನ್ನೊಂದು ಪಾರ್ಶ್ವಕ್ಕೆ ಒರಗಿಸಿ ನೆರೆಮನೆಯಾತನ ತೋಟದೊಳಕ್ಕೆ ಇಳಿಯಲಾರಂಭಿಸಿದ.

ಆಗ ಅವನಿಗೆ ಇದ್ದಕಿದ್ದಂತೆ ತೋಟದ ಮಾಲಿಕನ ಧ್ವನಿ ಕೇಳಿಸಿತು. “ನಜ಼ರುದ್ದೀನ್‌, ನೀನು ಇಲ್ಲಿ ಏನು ಮಾಡುತ್ತಿರುವೆ?”

ನಜ಼ರುದ್ದೀನ್‌ ಉತ್ತರಿಸಿದ, “ನಾನು ಏಣಿಗಳನ್ನು ಮಾರುತ್ತಿದ್ದೇನೆ.”

ನೆರೆಮನೆಯಾತ ಕೇಳಿದ, “ಈ ಸ್ಥಳ ಏಣಿಗಳನ್ನು ಮಾರಲು ಇರುವ ಸ್ಥಳದಂತೆ ನಿನಗೆ ಕಾಣಿಸುತ್ತಿದೆಯೇ?”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಏಣಿಗಳನ್ನು ಮಾರಲೋಸುಗ ಮೀಸಲಾಗಿರುವ ಒಂದೇ ಒಂದು ಸ್ಥಳ ಈ ಊರಿನಲ್ಲಿ ಇದೆ ಎಂಬುದು ನಿನ್ನ ಆಲೋಚನೆಯೇ?”

೧೬೦. ಗಾಯಕ ನಜ಼ರುದ್ದೀನ್‌

ಒಂದು ದಿನ ನಜ಼ರುದ್ದೀನ್‌ ಸ್ನಾನಗೃಹದಲ್ಲಿ ಹಾಡುತ್ತಾ ಸ್ನಾನ ಮಾಡಿದ. ಸ್ನಾನಗೃಹದ ರಚನೆಯ ವೈಶಿಷ್ಟ್ಯದಿಂದಾಗಿ ಅವನ ಧ್ವನಿ ಅವನಿಗೆ ಅದ್ಭುತವಾಗಿರುವಂತೆ ಅನ್ನಿಸಿತು. ಇದರಿಂದ ಅವನಿಗೆ ಬಲು ಸಂತೋಷವೂ ಆಯಿತು.

ಸ್ನಾನ ಮುಗಿಸಿ ಸ್ನಾನಗೃಹದಿಂದ ನೇರವಾಗಿ ಪಟ್ಟಣದ ಕೇಂದ್ರ ಸ್ಥಳಕ್ಕೆ ಹೋಗಿ ಹಾಡಲಾರಂಭಿಸಿದ ನಜ಼ರುದ್ದೀನ್‌. ಅಲ್ಲಿದ್ದವರು ಆಶ್ಚರ್ಯದಿಂದ ಅವನನ್ನೇ ನೋಡಲಾರಂಭಿಸಿದರು. ಅವರ ಪೈಕಿ ಒಬ್ಬ ಕೂಗಿ ಕೇಳಿದ, “ನೀನೇನು ಮಾಡುತ್ತಿರುವೆ? ನೀನೊಬ್ಬ ಗಾಯಕನಲ್ಲ, ನಿನ್ನ ಧ್ವನಿ ಏನೂ ಚೆನ್ನಾಗಿಲ್ಲ!”

ನಜ಼ರುದ್ದೀನ್‌ ಮಾರುತ್ತರ ನೀಡಿದ, “ಓ ಹಾಗೇನು? ಇಲ್ಲಿಯೇ ಒಂದು ಸ್ನಾನಗೃಹ ಕಟ್ಟಿಸಿ. ಆಗ ನಿಮಗೆ ತಿಳಿಯುತ್ತದೆ ನನ್ನ ಧ್ವನಿ ಎಷ್ಟು ಅದ್ಭುತವಾಗಿದೆ ಎಂಬುದು!”

 ೧೬೧. ಉಡುಗೊರೆ

ಒಂದು ಚೀಲ ಬಟಾಟೆಯನ್ನು ಹೊತ್ತುಕೊಂಡು ನಜ಼ರುದ್ದೀನ್‌ ಅರಮನೆಗೆ ಹೋಗುತ್ತಿದ್ದ.

ಮಾರ್ಗ ಮಧ್ಯದಲ್ಲಿ ಸ್ಥಳೀಯನೊಬ್ಬ ಅವನನ್ನು ಕೇಳಿದ, “ನೀನು ಎಲ್ಲಿಗೆ ಹೋಗುತ್ತಿರುವೆ?”

“ಹೊಸ ರಾಜನಿಗೆ ಈ ಬಟಾಟೆಯನ್ನು ಉಡುಗೊರೆಯಾಗಿ ನೀಡಲು ಹೋಗುತ್ತಿದ್ದೇನೆ,” ಉತ್ತರಿಸಿದ ನಜ಼ರುದ್ದೀನ್‌.

“ಏನು? ಅದು ಒಬ್ಬ ರಾಜನಿಗೆ ತಕ್ಕುದಾದ ಉಡುಗೊರೆಯಲ್ಲ. ಅವನಿಗೆ ಇನ್ನೂ ಒಳ್ಳೆಯದು ಏನನ್ನಾದರೂ ಕೊಡು. ಉದಾಹರಣೆಗೆ ನೆಲಮುಳ್ಳಿ ಹಣ್ಣು.”

ಆ ಸಲಹೆಯನ್ನು ಸ್ವೀಕರಿಸಿದ ನಜ಼ರುದ್ದೀನ್‌ ಮನೆಗೆ ಹೋಗಿ ನೆಲಮುಳ್ಳಿ ಹಣ್ಣುಗಳನ್ನು ತೆಗೆದುಕೊಂಡು ಅರಮನೆಗೆ ಹೋದ.

ಬೆಲೆಬಾಳುವ ಉಡುಗೊರೆಗಳನ್ನು ಸ್ವೀಕರಿಸುವುದು ಅಭ್ಯಾಸವಾಗಿ ಹೋಗಿದ್ದ ರಾಜನು ಇಂಥ ಅತ್ಯಲ್ಪ ಬೆಲೆಯ ಉಡುಗೊರೆ ತಂದ ತಪ್ಪಿಗಾಗಿ ಆ ಹಣ್ಣುಗಳನ್ನು ನಜ಼ರುದ್ದೀನ್‌ನ ಮುಖಕ್ಕೆ ಎಸೆಯುವಂತೆ ಸೇವಕರಿಗೆ ಆಜ್ಞಾಪಿಸಿದ.

ನೆಲಮುಳ್ಳಿ ಹಣ್ಣುಗಳು ಮುಖಕ್ಕೆ ತಗುಲಿದಾಗಲೆಲ್ಲ ನಜ಼ರುದ್ದೀನ್‌ ಬೊಬ್ಬೆಹಾಕುತ್ತಿದ್ದ, “ದೇವರೇ ನಿನ್ನ ಕೃಪೆ ಅಪಾರ.”

ಇದನ್ನು ಕೇಳಿ ಅಶ್ಚರ್ಯಚಕಿತನಾದ ರಾಜ ಹಣ್ಣಿನಿಂದ ಹೊಡೆಯುವುದನ್ನು ನಿಲ್ಲಿಸುವಂತೆ ಸೇವಕರಿಗೆ ಹೇಳಿ ಕುತೂಹಲದಿಂದ ಕೇಳಿದ, “ನೀನು ಉಡುಗೊರೆಯಾಗಿ ತಂದ ಹಣ್ಣುಗಳಿಂದಲೇ ನಿನ್ನನ್ನು ಹೊಡೆಯುತ್ತಿದ್ದರೂ ದೇವರನ್ನು ಹೊಗಳುತ್ತಿರುವೆಯಲ್ಲಾ? ಏಕೆ ಎಂಬುದನ್ನು ವಿವರಿಸು.”

ನಜ಼ರುದ್ದೀನ್‌ ಉತ್ತರಿಸಿದ, “ಬಟಾಟೆಗಳನ್ನು ಉಡುಗೊರೆಯಾಗಿ ಕೊಡಬೇಕೆಂದುಕೊಂಡಿದ್ದ ನಾನು ಮನಸ್ಸು ಬದಲಿಸಿ ನೆಲಮುಳ್ಳಿ ಹಣ್ಣುಗಳನ್ನು ಕೊಡುವಂತೆ ಮಾಡಿದ್ದಕ್ಕಾಗಿ ದೇವರನ್ನು ಶ್ಲಾಘಿಸುತ್ತಿದ್ದೇನೆ!”

೧೬೨. ಯೋಧನ ಬಡಾಯಿ

ಪಟ್ಟಣದ ನೇಕ ಮಂದಿ ಯೋಧರು ಇತ್ತೀಚಿನ ಯುದ್ಧವೊಂದಕ್ಕೆ ಸಂಬಂಧಿಸಿದಂತೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.

ಒಬ್ಬ ಉದ್ಗರಿಸಿದ, “ಯುದ್ಧದ ಮಧ್ಯದಲ್ಲಿ ನನ್ನ ಕೈ ಕಾಲುಗಳಿಗೆ ಅನೇಕ ಕಠಾರಿಗಳು ಚುಚ್ಚಿಕೊಂಡಿದ್ದರೂ ನಾನು ಹೋರಾಡುವುದನ್ನು ಮುಂದುವರಿಸಿ ಐವರು ಶತ್ರುಗಳನ್ನು ಕೊಂದುಹಾಕಿದೆ.”

ಇನ್ನೊಬ್ಬ ಹೇಳಿದ, “ನನ್ನ ಕಾಲಿಗೆ ಒಂದು ಕೊಡಲಿಯೂ ಕೈಗಳಿಗೆ ಅನೇಕ ಕಠಾರಿಗಳೂ ನಾಟಿಕೊಂಡಿದ್ದವು. ಆದರೂ ನಾನು ಛಲ ಬಿಡದೆ ಹೋರಾಟ ಮುಂದುವರಿಸಿ ನನ್ನ ಮೇಲೆ ಹೊಂಚುದಾಳಿ ನಡೆಸಿದ್ದ ಹನ್ನೆರಡಕ್ಕೂ ಹೆಚ್ಚು ಮಂದಿಯನ್ನು ಸೋಲಿಸಿದೆ. ನಿಜ ಹೇಳಬೇಕೆಂದರೆ ಅವರನ್ನೆಲ್ಲ ಕೊಂದು ಹಾಕಿದೆ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಅವೆಲ್ಲ ಬಲು ಸಾಧಾರಣವಾದ ಕೆಲಸಗಳು.

ಬಲು ಹಿಂದೆ ನಾನು ಯುದ್ಧ ಮಾಡುತ್ತಿದ್ದಾಗ ಹತ್ತು ಅಡಿ ಎತ್ತರದ ದೈತ್ಯನೊಬ್ಬ ನನ್ನ ತಲೆಯನ್ನು ಸರಿಯಾಗಿ ಮಧ್ಯದಲ್ಲಿ ಸೀಳಿಹಾಕಿದ್ದ. ನಾನಾದರೋ ಅದನ್ನು ಲೆಕ್ಕಿಸದೆ ಬಿದ್ದಿದ್ದ ತುಂಡುಗಳನ್ನು ಎತ್ತಿ ಜೋಡಿಸಿ ಮೊದಲಿದ್ದ ಜಾಗದಲ್ಲಿಯೇ ಇಟ್ಟು ಏನೂ ಆಗಲಿಲ್ಲವೇನೋ ಎಂಬಂತೆ ಹೋರಾಟ ಮುಂದುವರಿಸಿದೆ!”

೧೬೩. ಅರಮನೆಗಳ ತುಲನೆ

ನಜ಼ರುದ್ದೀನ್‌ ವಾಸಿಸುತ್ತಿದ್ದ ಪಟ್ಟಣಕ್ಕೆ ಹೋಗಿದ್ದ ಭಾರತೀಯನೊಬ್ಬ ಭಾರತೀಯ ವಾಸ್ತುಶಿಲ್ಪದ ಶ್ರೇಷ್ಠತೆಯ ಕುರಿತು ನಜ಼ರುದ್ದೀನ್‌ನ ಹತ್ತಿರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ:

“ಭಾರತದಲ್ಲಿ ಧಾರಾಳವಾಗಿ ಚಿನ್ನದ ಲೇಪನ ಮಾಡಿದ ನೂರಾರು ಕೋಣೆಗಳಿರುವ ಅಳತೆ ಮಾಡಲು ಬಲು ಕಷ್ಟವಾಗುವಷ್ಟು ಬೃಹತ್ತಾದ ಅರಮನೆಗಳಿವೆ.”

“ಅದೊಂದು ದೊಡ್ಡ ಸಂಗತಿ ಎಂಬುದಾಗಿ ನನಗನ್ನಿಸುತ್ತಿಲ್ಲ,” ಉದ್ಗರಿಸಿದ ನಜ಼ರುದ್ದೀನ್‌. “ಏಕೆಂದರೆ, ನಮ್ಮ ದೇಶದ ರಾಜಧಾನಿಯಲ್ಲಿ ೫೦೦೦ ಮೀಟರ್‌ಗಳಿಗೂ ಮೀರಿದ ಉದ್ದದ ಹಾಗು —-” ನಜ಼ರುದ್ದೀನ್‌ ಇಂತು ಹೇಳುತ್ತಿರುವಾಗ ಇನ್ನೊಬ್ಬ ಭಾರತೀಯ ಅಲ್ಲಿಗೆ ಬಂದು ಅವನು ಹೇಳುತ್ತಿರುವುದನ್ನು ಕೇಳಲು ಆರಂಭಿಸಿದ. “——- ಹಾಗು ೨೦೦ ಮೀಟರ್‌ಗಳಷ್ಟು ಅಗಲದ ಅರಮನೆಗಳು ಇವೆ,”  ಎಂಬುದಾಗಿ ಹೇಳಿ ತನ್ನ ಮಾತು ಮುಗಿಸಿದ ನಜ಼ರುದ್ದೀನ್‌.”

ಮೊದಲನೆಯ ಭಾರತೀಯ ಪ್ರತಿಕ್ರಿಯಿಸಿದ, “ಇದು ನಿಜವಾಗಿಯೂ ವಿಚಿತ್ರವಾದ ಸಂಗತಿ. ಏಕೆಂದರೆ ಈವರೆಗೆ ನಾನು ಈ ರೀತಿಯ ಅಳತೆಗಳು ಉಳ್ಳ ಕಟ್ಟಡದ ವಿಷಯ ಕೇಳಿಯೇ ಇರಲಿಲ್ಲ.”

“ನಿನ್ನೊಂದಿಗೆ ಮಾತನಾಡುವ ಮುನ್ನ ನನ್ನೊಂದಿಗೆ ಮಾತನಾಡುತ್ತಿದ್ದ ನಿನ್ನ ಇನ್ನೊಬ್ಬ ಮಿತ್ರ ನಮ್ಮ ಮಾತುಕತೆಯ ಮಧ್ಯದಲ್ಲಿ ಬರದೇ ಇರುತ್ತಿದ್ದರೆ ನಾನು ವರ್ಣಿಸುತ್ತಿದ್ದ ಅರಮನೆಗಳ ಅಗಲ ಇನ್ನೂ ಬಹಳ ಹೆಚ್ಚಾಗಿರುತ್ತಿತ್ತು!” ವಿವರಿಸಿದ ನಜ಼ರುದ್ದೀನ್‌.

 ೧೬೪. ಹೇಗಿದೆ, ನಿನ್ನ ಹೊಸ ಮನೆ?

ನಜ಼ರುದ್ದೀನ್‌: “ಹೇಗಿದೆ? ನಿನ್ನ ಹೊಸ ಮನೆ?”

ಮಿತ್ರ: “ಬಹಳ ಚೆನ್ನಾಗಿದೆ, ಮನೆಯ ಮೇಲೆ ಸೂರ್ಯನ ಬೆಳಕು ಸ್ವಲ್ಪ ಕಮ್ಮಿ ಬೀಳುತ್ತದೆ ಅನ್ನುವುದನ್ನು ನಿರ್ಲಕ್ಷಿಸಿದರೆ.”

ನಜ಼ರುದ್ದೀನ್‌: “ಮನೆಯ ಹೊರಗಿನ ತೋಟದಲ್ಲಿ ಸೂರ್ಯನ ಬೆಳಕು ಹೇಗಿದೆ?”

ಮಿತ್ರ: “ಧಾರಾಳವಾಗಿದೆ.”

ನಜ಼ರುದ್ದೀನ್‌: “ಅಂದ ಮೇಲೆ ನಿನ್ನ ಮನೆಯನ್ನು ತೋಟಕ್ಕೆ ಸ್ಥಳಾಂತರಿಸು!”

೧೬೫. ನಿಪುಣ ಸಂಧಾನಕಾರ, ನಜ಼ರುದ್ದೀನ್‌

ಹಳ್ಳಿಯ ಮಾರುಕಟ್ಟೆಯಲ್ಲಿ ಚೆರಿ ಹಣ್ಣುಗಳು ಬಲು ಕಮ್ಮಿ ಬೆಲೆಗೆ ಮಾರಾಟವಾಗುತ್ತಿದ್ದವು.

ನಿಪುಣ ಸಂಧಾನಕಾರ ಎಂಬುದಾಗಿ ಖ್ಯಾತನಾಗಿದ್ದ ನಜ಼ರುದ್ದೀನ್‌ನನ್ನು ಹಾಲಿ ಮಾರುಕಟ್ಟೆ ಬೆಲೆಗಿಂತ ಕಮ್ಮಿ ಬೆಲೆಗೆ ಚೆರಿ ಹಣ್ಣುಗಳನ್ನು ಕೊಂಡುಕೊಳ್ಳಲು ನೆರವು ನೀಡುವಂತೆ ಅವನ ಮಿತ್ರನೊಬ್ಬ ವಿನಂತಿಸಿದ.

ಅವನಿಂದ ಹಣ ಪಡೆದ ನಜ಼ರುದ್ದೀನ್‌ ಮಾರುಕಟ್ಟೆಗೆ ಹೋದ. ಸುಮಾರು ೧೫ ನಿಮಿಷಗಳಿಗಿಂತಲೂ ಹೆಚ್ಚು ಕಾಲ ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿದ ನಜ಼ರುದ್ದೀನ್‌ ಹಾಸ್ಯಾಸ್ಪದ ಅನ್ನಬಹುದಾದಷ್ಟು ಕಮ್ಮಿ ಬೆಲೆಗೆ ಚೆರಿ ಹಣ್ಣುಗಳನ್ನು ಕೊಂಡುಕೊಳ್ಳುವುದರಲ್ಲಿ ಸಫಲನಾದ.

ಮಾರುಕಟ್ಟೆಯಿಂದ ನೇರವಾಗಿ ಅವನು ತನ್ನ ಮಿತ್ರನ ಮನೆಗೆ ಹೋದ. ಹೋದ ಕಾರ್ಯ ಹೇಗಾಯಿತೆಂದು ಮಿತ್ರ ಅವನನ್ನು ಕೇಳಿದ.

“ಅದ್ಭುತವಾಗಿ ಜರಗಿತು,” ಉತ್ತರಿಸಿದ ನಜ಼ರುದ್ದೀನ್‌. “ನಾನು ಅದ್ಭುತವಾಗಿ ಚೌಕಸಿ ಮಾಡಿದೆ. ಮೊದಲು ನಾನು ವ್ಯಾಪಾರಿಯನ್ನು ಬಹುವಾಗಿ ಹೊಗಳಿದೆ. ಆಮೇಲೆ ನನ್ನ ಕೋರಿಕೆ ಸಲ್ಲಿಸಿದೆ. ಬೇಡಿಕೆ ಹಾಗು ಪೂರೈಕೆ ಹಾಗು ಸರಕುಗಳ ತುಲನಾತ್ಮಕ ಮೌಲ್ಯ ನಿರ್ಧಾರ ಆಧಾರಿತ  ತರ್ಕಸರಣಿಯನ್ನೇ ಅವನ ಮುಂದಿಟ್ಟೆ. ಅವನು ಕರುಣೆ ಮತ್ತು ದಯೆ ಆಧರಿಸಿ ವ್ಯಾಪಾರ ಮಾಡುವ ವಿಧಾನವನ್ನು ಕೊಂಡಾಡಿದೆ. ನಿಜವಾಗಿಯೂ ನಾನು ಅದ್ಭುತವಾಗಿ ವಾದ ಮಂಡಿಸಿದೆ. ನೀನು ನಂಬಿದರೆ ನಂಬು, ಇಲ್ಲವಾದರೆ ಬಿಡು, ನೀನು ನನ್ನ ಹತ್ತಿರ ಕೊಟ್ಟಿದ್ದ ಹಣಕ್ಕೆ ೩೦ ಪೌಂಡುಗಳಷ್ಟು ಚೆರಿ ಹಣ್ಣುಗಳನ್ನು ನನಗೆ ಮಾರಾಟ ಮಾಡುವಂತೆ ಅವನನ್ನು ಒಪ್ಪಿಸುವುದರಲ್ಲಿ ಸಫಲನಾದೆ.”

“ವಾಹ್‌, ಅದ್ಭುತ, ಅತ್ಯದ್ಭುತ,” ಉದ್ಗರಿಸಿದ ಆ ಮಿತ್ರ.

“ಅದು ಅದ್ಭುತ ಅನ್ನುವುದು ನನಗೆ ಗೊತ್ತು,” ಹೇಳುವುದನ್ನು ಮುಂದುವರಿಸಿದ ನಜ಼ರುದ್ದೀನ್‌. “ನೀನು ಹೇಳಿದಂತೆಯೇ ಮಾಡಿದ್ದೇನೆ. ಇಷ್ಟೆಲ್ಲ ಸಾಧನೆ ಮಾಡಿದ ನನಗೆ ಯುಕ್ತ ಬಹುಮಾನ ಪಡೆಯುವ ಹಕ್ಕು ಇದೆ ಎಂಬುದನ್ನು ನೀನು ಒಪ್ಪುವಿಯಷ್ಟೆ?”

“ಖಂಡಿತ,” ಉತ್ತರಿಸಿದ ಮಿತ್ರ.

“ಸರಿ ಹಾಗಾದರೆ. ಈ ಸಂಬಂಧದ ಎಲ್ಲ ಕೆಲಸವನ್ನು ನಾನೊಬ್ಬನೇ ಮಾಡಿದ್ದರಿಂದ ಈ ಎಲ್ಲ ಚೆರಿ ಹಣ್ಣುಗಳೂ ನನಗೇ ಬಹುಮಾನವಾಗಿ ಸಿಕ್ಕಬೇಕು!” ಘೋಷಿಸಿದ ನಜ಼ರುದ್ದೀನ್.

 ೧೬೬. ಸೂರ್ಯನೋ ಚಂದ್ರನೋ?

ಒಬ್ಬ ವ್ಯಕ್ತಿ: “ನಜ಼ರುದ್ದೀನ್‌, ನಮಗೆ ಯಾವುದು ಹೆಚ್ಚು ಉಪಯುಕ್ತ – ಸೂರ್ಯನೋ, ಚಂದ್ರನೋ?”

ನಜ಼ರುದ್ದೀನ್‌: “ಸೂರ್ಯನಿರುವುದು ಹಗಲು ಹೊತ್ತು ಬೆಳಕು ಇದ್ದಾಗ, ಚಂದ್ರನಾದರೋ ರಾತ್ರಿ ಕತ್ತಲಾಗಿದ್ದಾಗ ಬೆಳಕು ನೀಡುತ್ತಾನೆ. ಆದ್ದರಿಂದ ನಿಸ್ಸಂಶಯವಾಗಿ ಚಂದ್ರನೇ ಹೆಚ್ಚು ಉಪಯುಕ್ತ!”

 ೧೬೭. ಕಳೆದುಹೋದ ಕತ್ತೆ

ದೇವರಿಗೆ ಧಾರಾಳವಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ ನಜ಼ರುದ್ದೀನ್ ತನ್ನ ಕಳೆದುಹೋದ ಕತ್ತೆಯನ್ನು ‌ ಹುಡುಕುತ್ತಿದ್ದ.

ಇದನ್ನು ನೋಡಿದವನೊಬ್ಬ ಕೇಳಿದ, “ನೀನೇಕೆ ಇಷ್ಟು ಸಂತೋಷದಿಂದ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರುವೆ? ಅದೂ ನೀನು ನಿನ್ನ ಕತ್ತೆಯನ್ನು ಕಳೆದುಕೊಂಡಿರುವಾಗ?”

“ಕತ್ತೆ ಕಳೆದು ಹೋದಾಗ ನಾನು ಅದರ ಮೇಲೆ ಸವಾರಿ ಮಾಡುತ್ತಿರಲಿಲ್ಲವಲ್ಲ ಎಂಬುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.. ಒಂದು ವೇಳೆ ನಾನು ಸವಾರಿ ಮಾಡುತ್ತಿದ್ದಿದ್ದರೆ ನಾನೂ ಕಳೆದುಹೋಗುತ್ತಿದ್ದೆನಲ್ಲ!”

 ೧೬೮. ಅದು ನಿನ್ನ ಎಡಪಕ್ಕದಲ್ಲಿದೆ

ನಜ಼ರುದ್ದೀನ್‌ನ ಹೆಂದತಿ ಒಂದು ಮಧ್ಯರಾತ್ರಿ ಅವನನ್ನು ಎಬ್ಬಿಸಿ ಹೇಳಿದಳು, “ನಾನು ಮೂತ್ರ ವಿಸರ್ಜನೆ ಮಾಡಲು ಹೊರ ಹೋಗಬೇಕಾಗಿದೆ. ನಿನ್ನ ಎಡಪಕ್ಕದಲ್ಲಿ ನಾನು ಇಟ್ಟಿರುವ ಮೋಂಬತ್ತಿಯನ್ನು ಕೊಡು.”

ನಿದ್ರಾಭಂಗವಾದದ್ದಕ್ಕಾಗಿ ಬೇಸರಿಸಿಕೊಂಡಿದ್ದ ನಜ಼ರುದ್ದೀನ್‌ ಉತ್ತರಿಸಿದ, “ಈ ಕಗತ್ತಲಿನಲ್ಲಿ ನನ್ನ ಎಡಪಕ್ಕ ಯಾವುದು ಬಲಪಕ್ಕ ಯಾವುದು ಎಂಬುದನ್ನು ಹೇಗೆ ನಿರ್ಧರಿಸಲಿ!”

೧೬೯. ಮರಿ ಹಸುವನ್ನು ಏನೆಂದು ಉಲ್ಲೇಖಿಸಬೇಕು?

ನಜ಼ರುದ್ದೀನ್‌ ಬೇರೊಂದು ಪಟ್ಟಣಕ್ಕೆ ಹೋಗಿದ್ದಾಗ ಅಲ್ಲಿನ ನಿವಾಸಿಯೊಬ್ಬ ಕೇಳಿದ, “ನಿಮ್ಮ ಊರಿನಲ್ಲಿ ಹಸುವಿನ ಮರಿಯನ್ನು ಏನೆಂದು ಉಲ್ಲೇಖಿಸುತ್ತಾರೆ?”

ನಜ಼ರುದ್ದೀನ್ ಗಂಭೀರವಾಗಿ ಉತ್ತರಿಸಿದ, “ನನ್ನ ಊರಿನಲ್ಲಿ ನಾವು ಹಸುವಿನ ಮರಿಯನ್ನು ಯಾವ ಹೆಸರಿನಿಂದಲೂ ಉಲ್ಲೇಖಿಸುವುದಿಲ್ಲ. ಅದು ಬೆಳೆದು ದೊಡ್ಡದಾಗುವ ವರೆಗೆ ಸುಮ್ಮನಿದ್ದು ತದನಂತರವೇ ಅದನ್ನು ಹಸು ಎಂದು ಉಲ್ಲೇಖಿಸುತ್ತೇವೆ!”

 ೧೭೦. ನಗುತ್ತಿದವ ಇದ್ದಕ್ಕಿದ್ದಂತೆ ಅಳುವುದು

ಒಬ್ಬಾತ ನಜ಼ರುದ್ದೀನ್‌ನಿಗೆ ದಿಕ್ಸೂಚಿಯೊಂದನ್ನು ತೋರಿಸಿ ಅದೇನೆಂಬುದಾಗಿ ಕೇಳಿದ. ತಕ್ಷಣವೇ ನಜ಼ರುದ್ದೀನ್‌ ನಗಲಾರಂಭಿಸಿದ. ಕೆಲವೇ ಕ್ಷಣಗಳ ನಂತರ ಅವನು ಅಳಲಾರಂಭಿಸಿದ.

ಪ್ರಶ್ನೆ ಕೇಳಿದವ ಈ ವಿಚಿತ್ರ ವರ್ತನೆಯನ್ನು ಗಮನಿಸಿ ಕೇಳಿದ, “ಇದೇನಿದು? ಮೊದಲು ನಗಲಾರಂಭಿಸಿದ್ದೇಕೆ? ತದನಂತರ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ಅಳಲಾರಂಭಿಸಿದ್ದೇಕೆ?”

ನಜ಼ರುದ್ದೀನ್‌ ವಿವರಿಸಿದ, “ನಿನ್ನ ಹತ್ತಿರ ಇದ್ದ ವಸ್ತು ಏನೆಂಬುದು ನಿನಗೇ ಗೊತ್ತಿಲ್ಲವಲ್ಲ ಎಂಬುದಕ್ಕಾಗಿ ನಿನ್ನನ್ನು ನೋಡಿ ನಗಲಾರಂಭಿಸಿದೆ. ಅಷ್ಟರಲ್ಲಿಯೇ ಅದೇನೆಂಬುದು ನನಗೂ ತಿಳಿದಿಲ್ಲ ಎಂಬ ಅರಿವು ಉಂಟಾದದ್ದರಿಂದ ಅಳಲಾರಂಭಿಸಿದೆ!”

೧೭೧. ಮೊಸರಿನ ವಿಶ್ಲೇಷಣೆ

ಒಂದು ದಿನ ನಜ಼ರುದ್ದೀನ್‌ ತನ್ನ ಹೆಂಡತಿಗೆ ಹೇಳಿದ, “ನನ್ನ ಪ್ರೀತಿಯ ಪತ್ನಿಯೇ, ತಿನ್ನಲು ಸ್ವಲ್ಪ ಮೊಸರನ್ನು ದಯವಿಟ್ಟು ನನಗೆ ಕೊಡು. ಮೊಸರು ಸ್ವಾದಿಷ್ಟವೂ ಪುಷ್ಟಿದಾಯಕವೂ ಆಗಿರುವುದಲ್ಲದೆ ನಾವು ಕೃಶಕಾಯದವರಾಗಿರಲೂ ನೆರವಾಗುತ್ತದೆ, ಅಪಾರ ಶಕ್ತಿಯನ್ನೂ ಪೂರೈಸುತ್ತದೆ.”

ಅವನ ಹೆಂಡತಿ ಹೇಳಿದಳು, “ಈಗ ನಮ್ಮ ಹತ್ತಿರ ಒಂದಿನಿತೂ ಮೊಸರು ಇಲ್ಲ.”

ನಜರುದ್ದೀನ್‌ ಪ್ರತಿಕ್ರಿಯಿಸಿದ, “ನಮ್ಮ ಹತ್ತಿರ ಮೊಸರು ಇಲ್ಲದಿರುವುದರಿಂದ ಒಳ್ಳೆಯದೇ ಆಯಿತು. ಏಕೆಂದರೆ ಅದು ಚಪ್ಪೆಯಾಗಿರುತ್ತದೆ, ಅದಕ್ಕೆ ಪೋಷಣ ಮೌಲ್ಯವೇ ಇಲ್ಲ, ಅದು ವ್ಯಕ್ತಿ ಅತೀ ದಪ್ಪವಾಗುವಂತೆಯೂ ಆಲಸಿಯಾಗುವಂತೆಯೂ ಮಾಡುತ್ತದೆ.”

“ಒಂದು ನಿಮಿಷ ನಿಲ್ಲು. ಈಗ ನೀನು ಹೇಳುತ್ತಿರುವುದು ಮೊದಲು ಹೇಳಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇವೆರಡರ ಪೈಕಿ ನಾನು ಯಾವುದನ್ನು ನಂಬಬೇಕು?” ಕೇಳಿದಳು ಅವನ ಹೆಂಡತಿ.

ನಜ಼ರುದ್ದೀನ್ ಉತ್ತರಿಸಿದ, “ನಮ್ಮ ಮನೆಯಲ್ಲಿ ಮೊಸರು ಇದ್ದಿದ್ದರೆ ನನ್ನ ಮೊದಲನೆಯ ಹೇಳಿಕೆಯನ್ನು ನೀನು ನಂಬಬೇಕಿತ್ತು. ನಮ್ಮ ಮನೆಯಲ್ಲಿ ಈಗ ಮೊಸರು ಇಲ್ಲವಾದ್ದರಿಂದ ನನ್ನ ಎರಡನೆಯ ಹೇಳಿಕೆಯನ್ನು ನೀನು ನಂಬಬೇಕು!”

 ೧೭೨. ಮೂಢನಂಬಿಕೆಗಳು

ನಜ಼ರುದ್ದೀನ್‌ ವಾಸಿಸುತ್ತಿದ್ದ ಗ್ರಾಮದ ಗ್ರಾಮಾಧ್ಯಕ್ಷ ಬಹಳ ಗೊಡ್ಡುನಂಬಿಕೆಗಳುಳ್ಳವನಾಗಿದ್ದ. ಒಂದು ದಿನ ಬೇಟೆಯಾಡಲು ಹೋಗುತ್ತಿದ್ದ ಅವನಿಗೆ ನಜ಼ರುದ್ದೀನ್‌ನ ದರ್ಶನವಾಯಿತು. ಆ ಕೂಡಲೇ ಅವನು ತನ್ನ ಜೊತೆಯಲ್ಲಿದ್ದವರಿಗೆ ಗಟ್ಟಿಯಾಗಿ ಕೂಗಿ ಹೇಳಿದ, “ಮಂಗಳವಾರ ಮುಲ್ಲಾಗಳ ದರ್ಶನವಾಗುವುದು ಒಂದು ಅಪಶಕುನ. ಅವನನ್ನು ಹಿಡಿದು ದೂರಕ್ಕೆ ಓಡಿಸಿ!”

ಅವರು ಅಂತೆಯೇ ಮಾಡಿದರು. ಆ ದಿನ ಅವರ ಬೇಟೆ ಬಲು ಯಶಸ್ವಿಯಾಯಿತು. ಮಾರನೆಯ ದಿನ ನಜ಼ರುದ್ದೀನ್‌ನ್ನು ಸಂಧಿಸಿದಾಗ ಗ್ರಾಮಾಧ್ಯಕ್ಷ ಹೇಳಿದ, “ನಿನ್ನೆ ನನ್ನಿಂದ ತಪ್ಪಾಗಿದೆ, ಅದಕ್ಕಾಗಿ ಕ್ಷಮೆ ಇರಲಿ. ನೀನು ದುರದೃಷ್ಟದ ಸೂಚಕ ಎಂಬುದಾಗಿ ನಾನು ತಿಳಿದಿದ್ದರಿಂದ ಹಾಗಾಯಿತು.”

“ನಾನು ದುರದೃಷ್ಟವಂತನೆನ್ನುವುದು ನಿಜ. ನೀನು ನನ್ನನ್ನು ನೋಡಿದೆ, ನಿನ್ನ ಬೇಟೆ ಯಶಸ್ವಿಯಾಯಿತು. ನಾನು ನಿನ್ನನ್ನು ನೋಡಿದೆ, ಒದೆ ತಿಂದೆ!”

 ೧೭೩. ನನ್ನ ಕೈಚೀಲ ಕಳೆದುಹೋಗಿದೆ

ಒಂದು ದಿನ ನಜ಼ರುದ್ದೀನ್‌ ಹಳ್ಳಿಯ ಮಧ್ಯಭಾಗಕ್ಕೆ ಹೋಗಿ ಬೆದರಿಸುವ ಧ್ವನಿಯಲ್ಲಿ ಘೋಷಿಸಿದ, “ನನ್ನ ಕೈಚೀಲ ಕಳೆದುಹೋಗಿದೆ. ನೀವು ಅದನ್ನು ಪತ್ತೆಹಚ್ಚಿ ಕೊಡದೇ ಇದ್ದರೆ ಕಳೆದ ಸಲ ನನ್ನ ಕೈಚೀಲ ಕಳೆದುಹೋದಾಗ ಏನಾಯಿತು ಎಂಬುದನ್ನು ತಿಳಿಯುವಿರಿ!”

ಹೆದರಿದ ಹಳ್ಳಿಗರು ತರಾತುರಿಯಿಂದ ಕೈಚೀಲ ಹುಡುಕಲಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಒಬ್ಬನಿಗೆ ಅದು ಸಿಕ್ಕಿತು.

ಕುತೂಹಲದಿಂದ ಅಲ್ಲಿದ್ದವರ ಪೈಕಿ ಒಬ್ಬ ಕೇಳಿದ, “ಒಂದು ವೇಳೆ ಕೈಚೀಲ ಸಿಕ್ಕದೇ ಇದ್ದಿದ್ದರೆ ನೀನೇನು ಮಾಡುತ್ತಿದ್ದೆ ಎಂಬುದನ್ನು ತಿಳಿಯಲಿಚ್ಛಿಸುತ್ತೇನೆ.”

“ಹೊಸ ಕೈಚೀಲ ಕೊಂಡುಕೊಳ್ಳುತ್ತದ್ದೆ!” ಪ್ರತಿಕ್ರಿಯಿಸಿದ ನಜ಼ರುದ್ದೀನ್‌

೧೭೪. ಒಂದು ಲೀಟರ್‌ ಹಾಲು

ಒಂದು ಪುಟ್ಟ ಧಾರಕದೊಂದಿಗೆ ನಜ಼ರುದ್ದೀನ್‌ ಹಾಲುಮಾರುವವನ ಹತ್ತಿರ ಹೋಗಿ ಹೇಳಿದ, “ನನಗೆ ಒಂದು ಲೀಟರ್‌ ಹಸುವಿನಹಾಲು ಕೊಡು.”

ಹಾಲುಮಾರುವವ ನಜ಼ರುದ್ದೀನ್‌ನ ಕೈನಲ್ಲಿ ಇದ್ದ ಧಾರಕವನ್ನು ನೋಡಿ ಹೇಳಿದ, “ನಿನ್ನ ಪಾತ್ರೆಯಲ್ಲಿ ಒಂದು ಲೀಟರ್‌ ಹಸುವಿನಹಾಲು ಹಿಡಿಸುವುದಿಲ್ಲ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಹಾಗೋ, ಸರಿ ಹಾಗಾದರೆ ಒಂದು ಲೀಟರ್‌ ಮೇಕೆಹಾಲು ಕೊಡು!”

೧೭೫. ಪರಮಾಪ್ತ ಮಿತ್ರ

ಪರಿಚಿತ: “ನಜ಼ರುದ್ದೀನ್‌, ನಿನ್ನ ಪರಮಾಪ್ತ ಮಿತ್ರ ಯಾರು?”

ನಜ಼ರುದ್ದೀನ್‌: “ನನಗೆ ಯಾರು ಚೆನ್ನಾಗಿ ಉಣಬಡಿಸುತ್ತಾನೋ ಅವನೇ ನನ್ನ ಪರಮಾಪ್ತ ಮಿತ್ರ.”

ಪರಿಚಿತ: “ನಾನು ನಿನಗೆ ಚೆನ್ನಾಗಿ ಉಣಬಡಿಸುತ್ತೇನೆ. ಈಗ ನೀನು ನನ್ನ ಪರಮಾಪ್ತ ಮಿತ್ರನೋ?”

ನಜ಼ರುದ್ದೀನ್‌: “ಮಿತ್ರತ್ವವನ್ನು ಮುಂಗಡವಾಗಿ ಕೊಡಲಾಗುವುದಿಲ್ಲ!”

 ೧೭೬. ಶಿಕ್ಷೆ

ಬಾವಿಯಿಂದ ನೀರು ಸೇದಿ ತರುವಂತೆ ನಜ಼ರುದ್ದೀನ್‌ ತನ್ನ ಮಗನಿಗೆ ಹೇಳಿದ. ಅವನು ಹೋಗುವ ಮುನ್ನವೇ ಅವನ ಕಪಾಲಕ್ಕೆ ಹೊಡೆದು ಹೇಳಿದ, “ಬಿಂದಿಗೆ ಒಡೆಯದಂತೆ ಜಾಗರೂಕತೆಯಿಂದ ನೀರು ತಾ!”

ಹುಡುಗ ಅಳಲಾರಂಭಿಸಿದ. ಇದನ್ನು ನೋಡಿದ ದಾರಿಹೋಕನೊಬ್ಬ ಕೇಳಿದ, “ಅವನಿಗೇಕೆ ಹೊಡೆದೆ? ಅವನು ಯಾವ ತಪ್ಪನ್ನೂ ಮಾಡಲೇ ಇಲ್ಲವಲ್ಲಾ?”

ನಜ಼ರುದ್ದೀನ್‌ ಉತ್ತರಿಸಿದ, “ಅವನು ಬಿಂದಿಗೆ ಒಡೆದು ಹಾಕಿದ ನಂತರ ಹೊಡೆಯುವುದಕ್ಕಿಂತ ಮುನ್ನವೇ ಹೊಡೆಯುವುದು ಉತ್ತಮ. ಏಕೆಂದರೆ ಬಿಂದಿಗೆ ಒಡೆದ ನಂತರ ಹೊಡೆದು ಪ್ರಯೋಜನವಿಲ್ಲ!”

೧೭೭. ಇದನ್ನು ನನ್ನ ಮನೆಗೆ ತೆಗೆದುಕೊಂಡು ಹೋಗು

ಬಲು ಭಾರವಾಗಿದ್ದ ವಸ್ತುವೊಂದನ್ನು ನಜ಼ರುದ್ದೀನ್‌ ಪೇಟೆಬೀದಿಯಲ್ಲಿ ಖರೀದಿಸಿದ. ತದನಂತರ ಹಮಾಲಿಯೊಬ್ಬನನ್ನು ಕರೆದು ಹೇಳಿದ, “ಇದನ್ನು ನನ್ನ ಮನಗೆ ತೆಗೆದುಕೊಂಡು ಹೋಗಿ ಕೊಡು.”

ಹಮಾಲಿ ಸಮ್ಮತಿಸಿದ, “ಆಗಲಿ, ನಿಮ್ಮ ಮನೆ ಎಲ್ಲಿದೆ?”

ನಜ಼ರುದ್ದೀನ್‌ ಉತ್ತರಿಸಿದ, “ನಿನಗೇನು ಹುಚ್ಚು ಹಿಡಿದಿದೆಯೇ? ನೀನು ಯಾರೆಂಬುದೇ ನನಗೆ ಗೊತ್ತಿಲ್ಲ. ನೀನೊಬ್ಬ ಕಳ್ಳನೂ ಆಗಿರಬಹುದು. ನನ್ನ ಮನೆ ಎಲ್ಲಿದೆ ಎಂಬುದನ್ನು ನಿನಗೆ ಹೇಳುವಷ್ಟು ಮೂರ್ಖನಲ್ಲ ನಾನು!”

 ೧೭೮. ಬೆಲೆಪಟ್ಟಿ

ನಜ಼ರುದ್ದೀನ್‌ ನಡೆಸುತ್ತಿದ್ದ ಉಪಾಹಾರ ಗೃಹಕ್ಕೆ ಆ ಊರಿಗೆ ಭೇಟಿ ನೀಡಿದ ಚಕ್ರವರ್ತಿಯೊಬ್ಬ ಬಂದು ಕುರಿಮಾಂಸದ ಭೋಜನವನ್ನು ಆಸ್ವಾದಿಸಿದ. ಭೋಜನಾನಂತರ ಅವನು ಭೊಜನ ಮಾಡಿದ್ದಕ್ಕೆ ಎಷ್ಟು ಹಣ ಕೊಡಬೇಕೆಂಬುದಾಗಿ ಮಾಲಿಕ ನಜ಼ರುದ್ದೀನ್‌ನನ್ನು ಕೇಳಿದ.

ನಜ಼ರುದ್ದೀನ್‌ ಬಲು ದಿಟ್ಟತನದಿಂದ ಉತ್ತರಿಸಿದ, “೫೦ ದಿನಾರ್‌ಗಳು.”

ಆ ದೊಡ್ಡ ಮೊತ್ತವನ್ನು ಕೇಳಿ ಆಶ್ಚರ್ಯಚಕಿತನಾದ ಚಕ್ರವರ್ತಿ ಕೇಳಿದ, “ವಾ, ಇದು ಬಲು ದುಬಾರಿ ಭೋಜನ, ಏಕೆ? ಈ ಊರಿನಲ್ಲಿ ಕುರಿಗಳ ಕೊರತೆ ಇದೆಯೇನು?”

ನಜ಼ರುದ್ದೀನ್‌ ಉತ್ತರಿಸಿದ, “ಹಾಗೇನಿಲ್ಲ. ಇಲ್ಲಿ ಕೊರತೆ ಇರುವುದು ಕುರಿಗಳದ್ದಲ್ಲ, ಪರದೇಶದಿಂದ ಬರುವ ಚಕ್ರವರ್ತಿಗಳದ್ದು!”

 ೧೭೯. ಒಂದು ಊಟದ ಹಂಚಿಕೆ

ನಜ಼ರುದ್ದೀನನೂ ಅವನ ಮಿತ್ರನೂ ಒಂದು ಊಟವನ್ನು ಹಂಚಿಕೊಳ್ಳುವ ಇರಾದೆಯಿಂದ ಉಪಾಹಾರಗೃಹವೊಂದಕ್ಕೆ ಹೋದರು. ಮೀನಿನ ಭಕ್ಷ್ಯ ತಿನ್ನುವುದೋ ಮೇಕೆಮಾಂಸದ್ದೋ ಎಂಬುದನ್ನು ತೀರ್ಮಾನಿಸಲಾಗದೆ ಬಹಳ ಸಮಯ ಚರ್ಚಿಸಿದರು. ಅಂತಿಮವಾಗಿ ನಜ಼ರುದ್ದೀನ್‌ನ ಮಿತ್ರನ ಆಶಯದಂತೆ ಮೀನಿನ ಭಕ್ಷ್ಯ ತಿನ್ನಲು ನಿರ್ಧರಿಸಿ ಭೋಜನ ಬಡಿಸುವವನಿಗೆ ಅದನ್ನು ತಿಳಿಸಿದರು.

ತಾನು ಹೊರಗೆ ಕಟ್ಟಿದ್ದ ಕತ್ತೆಯನ್ನು ತದನಂತರ ಕೆಲವೇ ನಿಮಿಷಗಳಲ್ಲಿ ಯಾರೋ ಕದಿಯುತ್ತಿರುವುದನ್ನು ಮಿತ್ರ ಗಮನಿಸಿ ಅವನನ್ನು ಹಿಡಿಯಲು ಹೊರಗೆ ಓಡಿದ. ತಕ್ಷಣ ಬಲು ಚಿಂತಾಕ್ರಾಂತ ಮುಖಮುದ್ರೆಯೊಂದಿಗೆ ನಜ಼ರುದ್ದೀನ್ ಎದ್ದುನಿಂತದ್ದನ್ನು ನೋಡಿದವನೊಬ್ಬ ಕೇಳಿದ, “ಕಳುವಿನ ವರದಿಯನ್ನು ನೀವು ಅಧಿಕೃತವಾಗಿ ದಾಖಲಿಸುವಿರೇನು?”

ನಜರುದ್ದೀನ್‌ ಉತ್ತರಿಸಿದ, “ಇಲ್ಲ. ಬಹಳ ತಡವಾಗುವದರೊಳಗೆ ಭೋಜನಕ್ಕೆ ತಯಾರು ಮಾಡಲು ಹೇಳಿದ್ದ ಭಕ್ಷ್ಯವನ್ನು ಬದಲಾಯಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದೇನೆ!”

 ೧೮೦. ಭಾರತದಲ್ಲೊಂದು ಸಾಹಸಕಾರ್ಯ

ವ್ಯಾಪರ ಸಂಬಂಧಿತ ಕಾರ್ಯ ನಿಮಿತ್ತ ಒಮ್ಮೆ ನಜ಼ರುದ್ದೀನ್‌ ಭಾರತಕ್ಕೆ ಪಯಣಿಸಿದ. ಅಲ್ಲಿ ಒಂದು ದಿನ ವಿಪರೀತ ಹಸಿವಾಗಿದ್ದಾಗ ಹಣ್ಣುಗಳಂತೆ ಕಾಣುತ್ತಿದ್ದವುಗಳನ್ನು ಮಾರುತ್ತಿದ್ದವನೊಬ್ಬನನ್ನು ಪತ್ತೆಹಚ್ಚಿ ಅವನು ಮಾರುತ್ತಿದ್ದದ್ದನ್ನು ಒಂದು ಬುಟ್ಟಿಯಷ್ಟು ಕೊಂಡುಕೊಂಡ.

ತದನಂತರ ಒಂದು ‘ಹಣ್ಣನ್ನು’ ತೆಗೆದುಕೊಂಡು ಬಾಯಿಗೆ ಹಾಕಿ ಜಗಿಯಲಾರಂಭಿಸಿದ. ಅದನ್ನು ಜಗಿಯುವಾಗ ಆತ ಬೆವರಲಾರಂಭಿಸಿದ, ಆತನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯಲಾರಂಭಿಸಿತು, ಅವನ ಮುಖ ಕೆಂಪಾಯಿತು; ಆದರೂ ಆತ ತಿನ್ನುತ್ತಲೇ ಇದ್ದ.

ಇಂತು ತಿನ್ನುತ್ತಿರುವಾಗ ಅ ಮಾರ್ಗವಾಗಿ ಹೋಗುತ್ತಿದ್ದ ಇರಾನಿ ಒಬ್ಬನನ್ನು ಗುರುತಿಸಿ ಅವನಿಗೆ ಹೇಳಿದ, “ಮಿತ್ರಾ, ಇವು ಭಾರತದಲ್ಲಿ ದೊರೆಯುವ ವಿಚಿತ್ರ ಹಣ್ಣುಗಳು.”

ಇರಾನಿನವ ಪ್ರತಿಕ್ರಿಯಿಸಿದ, “ಏನು? ಅವು ಹಣ್ಣುಗಳಲ್ಲವೇ ಅಲ್ಲ. ಅವು ಇಲ್ಲಿನ ಬಲು ಕಾರವಾದ ಮೆಣಸಿನಕಾಯಿಗಳು. ಅವನ್ನು ನೀನು ಇದೇ ರೀತಿ ತಿನ್ನುತ್ತಿದ್ದರೆ ನಾಳೆ ಮಲ ವಿಸರ್ಜಿಸುವಾಗ ಬೆಂಕಿ ಹೊತ್ತಿಕೊಂಡಂತೆ ಗುದದ್ವಾರ ಉರಿಯುತ್ತದೆ. ಅವನ್ನು ಅತ್ಯಲ್ಪ ಪ್ರಮಾಣದಲ್ಲಿ ವ್ಯಂಜನಗಳನ್ನು ತಯಾರಿಸುವಾಗ ಹಾಕುತ್ತಾರೆಯೇ ವಿನಾ ಹಣ್ನುಗಳಂತೆ ತಿನ್ನುವುದಿಲ್ಲ. ಅವನ್ನು ತಿನ್ನು ವುದನ್ನು ನಿಲ್ಲಿಸಿ ಬುಟ್ಟಿಯಲ್ಲಿ ಉಳಿದಿರುವುದನ್ನು ಎಸೆದುಬಿಡು!”

“ಅಸಾಧ್ಯ. ನಾನು ಅವನ್ನು ತಿನ್ನುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ,” ಉತ್ತರಿಸಿದ ನಜ಼ರುದ್ದೀನ್‌.

ಇರಾನಿನವ ಕೇಳಿದ, “ಇದೆಂಥ ವಿಚಿತ್ರ! ತಿನ್ನುವುದನ್ನು ನಿಲ್ಲಿಸಲು ಏಕೆ ಸಾಧ್ಯವಿಲ್ಲ?”

ನಜ಼ರುದ್ದೀನ್‌ ಉತ್ತರಿಸಿದ, “ನನಗೆ ಬೇರೆ ದಾರಿಯೇ ಇಲ್ಲ – ಅವಕ್ಕೆ ನಾನು ಈಗಾಗಲೇ ಪೂರ್ತಿ ಹಣ ಕೊಟ್ಟಾಗಿದೆ. ಆದ್ದರಿಂದ ನಾನೀಗ ತಿನ್ನುತ್ತಿರುವುದು ಆಹಾರವನ್ನಲ್ಲ. ನಾನೀಗ ತಿನ್ನುತ್ತಿರುವುದು ನನ್ನ ಹಣವನ್ನು!”

 ೧೮೧. ಕುಂಬಳಕಾಯಿಯ ಕಂಠಹಾರ

ಕುಂಬಳಕಾಯಿಯ ಸಿಪ್ಪೆಯಿಂದ ಮಾಡಿದ ಕಂಠಹಾರವನ್ನು ಧರಿಸುವ ವಿಚಿತ್ರ ಅಭ್ಯಾಸ ನಜ಼ರುದ್ದೀನನಿಗಿತ್ತು. ಒಂದು ದಿನ ಅವನು ಪ್ರಯಾಣಿಕರ ಗುಂಪೊಂದರ ಜೊತೆ ಸೇರಿಕೊಂಡು ಪ್ರವಾಸ ಹೊರಟ. ದಾರಿಯಲ್ಲಿ ಒಂದೆಡೆ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ನಜ಼ರುದ್ದೀನ್‌ ಮಲಗಿ ನಿದ್ದೆ ಮಾಡಿದ. ಆ ಸಮಯದಲ್ಲಿ ಸಹಪ್ರಯಾಣಿಕನೊಬ್ಬ ಕೀಟಲೆ ಮಾಡಲೋಸುಗ ನಜ಼ರುದ್ದೀನ್‌ನ ಕುಂಬಳಕಾಯಿಯ ಕಂಠಹಾರ ತೆಗದುಕೊಂಡು ತಾನೇ ಧರಿಸಿದ.

ನಜ಼ರುದ್ದೀನ್‌ ನಿದ್ದೆಯಿಂದ ಎಚ್ಚತ್ತು ಸಹಪ್ರಯಾಣಿಕನ ಕುತ್ತಿಗೆಯಲ್ಲಿ ತನ್ನ ಕಂಠಹಾರ ನೋಡಿ ಇಂತು ಆಲೋಚಿಸಿದ: “ಕುಂಬಳಕಾಯಿಯ ಕಂಠಹಾರ ಧರಿಸಿರುವ ಮನುಷ್ಯ ನಾನು ಎಂಬುದು ನನಗೆ ಗೊತ್ತಿದೆ. ಅಂದ ಮೇಲೆ ಇಲ್ಲಿರುವ ನಾನು ಯಾರು?”

 ೧೮೨. ನನಗಾಗಿ ಕುಡಿಯುವುದು, ನಿನಗಾಗಿ ಕುಡಿಯುವುದು

ಮಿತ್ರನೊಂದಿಗೆ ಮಾತನಾಡುತ್ತಾ ಕುಳಿತಿದ್ದ ನಜ಼ರುದ್ದೀನ್‌ ಹೇಳಿದ, “ಸಮೀಪದಲ್ಲಿ ಕುಡಿಯಲು ನೀರು ಸಿಕ್ಕುತ್ತದೆಯೇ ಎಂಬುದನ್ನು ಹೋಗಿ ನೋಡಿ ಬರುತ್ತೇನೆ.”

ಮಿತ್ರ ಹೇಳಿದ, “ಸರಿ. ನನಗೂ ನೀರು ಬೇಕು.”

ತುಸು ಸಮಯಾನಂತರ ಹಿಂದಿರುಗಿ ಬಂದ ನಜ಼ರುದ್ದೀನ್‌ ಉದ್ಗರಿಸಿದ, “ನಾನು ನೀರು ಕುಡಿದಾದ ನಂತರ ನಿನ್ನ ಪರವಾಗಿಯೂ ಕುಡಿಯಲು ಪ್ರಯತ್ನಿಸಿದೆ. ಆದರೆ ನನ್ನ ಹೊಟ್ಟೆ ಮೊದಲೇ ಭರ್ತಿಯಾಗಿದ್ದದ್ದರಿಂದ ಸಾಧ್ಯವಾಗಲಿಲ್ಲ!”

 ೧೮೩. ನಜ಼ರುದ್ದೀನ್‌ ಸ್ಮಶಾನಕ್ಕೆ ಭೇಟಿ ನೀಡಿದ್ದು

ನಜ಼ರುದ್ದೀನ್‌ ಸ್ಮಶಾನದಲ್ಲಿ ಸಮಾಧಿಯೊಂದರ ಹತ್ತಿರ ಕುಳಿತುಕೊಂಡು ಪ್ರಲಾಪಿಸುತ್ತಿದ್ದ, “ಅಯ್ಯೋ, ಏಕೆ? ಇಷ್ಟು ಬೇಗನೆ ಅವನೇಕೆ ನನ್ನನ್ನು ಬಿಟ್ಟು ಹೋದ?”

ಇದನ್ನು ಗಮನಿಸಿದ ಪರಿಚಿತನೊಬ್ಬ ನಜ಼ರುದ್ದೀನನನ್ನು ಸಮಾಧಾನ ಪಡಿಸಲೋಸುಗ ಹೇಳಿದ, “ಈ ಸಮಾಧಿ ಯಾರದ್ದು? ನಿನ್ನ ಮಗನದ್ದೋ?”

ನಜ಼ರುದ್ದೀನ್‌ ಉತ್ತರಿಸಿದ, “ಅಲ್ಲ. ಇದು ನನ್ನ ಹೆಂಡತಿಯ ಮೊದಲನೇ ಗಂಡನದ್ದು. ಅವನು ಸತ್ತು ಹೋದ, ನನ್ನ ಜೀವನವನ್ನು ಇಷ್ಟು ದುಃಖಕರವನ್ನಾಗಿ ಮಾಡಿದ ಹೆಂಗಸನ್ನು ನನಗೆ ಬಿಟ್ಟುಹೋದ!”

 ೧೮೪. ಸರಿಯಾದ ಭಾಷೆ

ನದಿಯ ನೀರಿನ ಹರಿವಿನ ಸೆಳತಕ್ಕೆ ಸಿಕ್ಕಿಹಾಕಿಕೊಂಡಿದ್ದ ಅಪರಿಚಿತನೊಬ್ಬ ಕೊಚ್ಚಿಹೋಗುವುದರಿಂದ ತಪ್ಪಿಸಿಕೊಳ್ಳಲೋಸುಗ ಒಂದು ಬಂಡೆಯನ್ನು ಹಿಡಿದುಕೊಂಡು ಪರದಾಡುತ್ತಿದ್ದ.

ಆ ಮಾರ್ಗವಾಗಿ ಹೋಗುತ್ತಿದ್ದ ನಜ಼ರುದ್ದೀನ್‌ ಹಾಗು ಅವನ ಮಿತ್ರ ಅಪರಿಚಿತನ ಅವಸ್ಥೆಯನ್ನು ಗಮನಿಸಿದರು. ಅಪರಿಚಿತನನ್ನು ರಕ್ಷಿಸುವ ಸಲುವಾಗಿ ನಜ಼ರುದ್ದೀನ್‌ ಸಾಧ್ಯವಿರುವಷ್ಟು ಅವನ ಹತ್ತಿರ ಹೋಗಿ ಕೈಚಾಚಿ ಹೇಳಿದ, “ನಿನ್ನ ಕೈಯನ್ನು ಕೊಡು, ನಾನು ಅದನ್ನು ಹಿಡಿದುಕೊಂಡು ನೀನು ನೀರಿನಿಂದ ಹೊರಬರಲು ಸಹಾಯ ಮಾಡುತ್ತೇನೆ.”

ಆ ಅಪರಿಚಿತ ನಜ಼ರುದ್ದೀನ್‌ ಹೇಳಿದಂತೆ ಮಾಡಲಿಲ್ಲ.

ಅವನ ವೃತ್ತಿ ಏನೆಂಬುದನ್ನು ಬಜ಼ರುದ್ದೀನ್‌ ವಿಚಾರಿಸಿದ.

“ತೆರಿಗೆ ಸಂಗ್ರಹಿಸುವುದು,” ಎಂಬುದಾಗಿ ಉತ್ತರಿಸಿದ ಅಪರಿಚಿತ.

“ಓ, ಹಾಗಾದರೆ ನನ್ನ ಕೈಯನ್ನು ತೆಗೆದುಕೋ,” ಎಂಬುದಾಗಿ ನಜ಼ರುದ್ದೀನ್‌ ಹೇಳಿದ. ಅಪರಿಚಿತ ಅಂತೆಯೇ ಮಾಡಿದ.

ನಜ಼ರುದ್ದೀನ್‌ ತನ್ನ ಮಿತ್ರನತ್ತ ತಿರುಗಿ ಹೇಳಿದ, “ತೆರಿಗೆ ಸಂಗ್ರಹಿಸುವವರಿಗೆ ‘ಕೊಡು’ ಎಂಬ ಪದ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ‘ತೆಗೆದುಕೋ’ ಎಂಬ ಪದ ಮಾತ್ರ!”

 ೧೮೫. ನಜ಼ರುದ್ದೀನ್‌ನಿಗೆ ಶಿಕ್ಷೆ

ಕಲ್ಲಂಗಡಿ ಹಣ್ಣು ಕಳವು ಮಾಡಿದ್ದಕ್ಕಾಗಿ ನಜ಼ರುದ್ದೀನ್‌ ನ್ಯಾಯಾಲಯದ ಕಟಕಟೆಯೊಳಗೆ ನಿಲ್ಲಬೇಕಾಯಿತು. ನ್ಯಾಯಾಧೀಶರು ಉದ್ಗರಿಸಿದರು, “ನಜ಼ರುದ್ದೀನ್‌, ನೀನು ಮಾಡಿದ ತಪ್ಪಿಗಾಗಿ ನಿನಗೆ ನಾನು ದಂಡ ವಿಧಿಸಲೇ ಬೇಕಾಗಿದೆ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಹಾಗೆ ಮಾಡಬೇಕಾದ ಆವಶ್ಯಕತೆಯೇ ಇಲ್ಲ. ಕದಿಯುವ ಅವಕಾಶವಿರುವ ಸಂದರ್ಭಗಳಲ್ಲಿಯೂ ನಾನು ಕದಿಯದೇ ಇದ್ದದ್ದಕ್ಕಾಗಿ ನನಗೆ ದೊರೆಯಬೇಕಾಗಿರುವ ಮೆಚ್ಚುಗೆಗಳಿಗೆ ಪ್ರತಿಯಾಗಿ ಈ ಸಲ ನೀವು ವಿಧಿಸಿಬೇಕಾದ ಶಿಕ್ಷೆಯನ್ನು ಮನ್ನಾ ಮಾಡಿ!”

೧೮೬. ನಜ಼ರುದ್ದೀನ್‌ ಜ್ಞಾಪಕಶಕ್ತಿ ಕಳೆದುಕೊಳ್ಳುತ್ತಾನೆ

ನಜ಼ರುದ್ದೀನ್‌: “ವೈದ್ಯರೇ, ನನಗೆ ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.”

ವೈದ್ಯ: “ಇದು ಶುರುವಾದದ್ದು ಯಾವಾಗಿನಿಂದ?”

ನಜ಼ರುದ್ದೀನ್‌: “ಯಾವಾಗಿನಿಂದ ಏನು ಶುರುವಾದದ್ದು?”

(ಮುಂದಿನ ವಾರ)

ವೈದ್ಯ: “ನಿನ್ನ ಜ್ಞಾಪಕ ಶಕ್ತಿ ಸುಧಾರಿಸಿದೆಯೋ?”

ನಜ಼ರುದ್ದೀನ್‌: “ಹೌದು ಸುಧಾರಿಸಿದೆ. ನಾನು ಏನನ್ನೋ ಮರೆತಿದ್ದೇನೆ ಎಂಬುದನ್ನು ಈಗ ಸುಲಭವಾಗಿ ಜ್ಞಾಪಿಸಿಕೊಳ್ಳುತ್ತೇನೆ!”

  ೧೮೭. ನಜ಼ರುದ್ದೀನ್‌ನ ಗುರುತಿನ ಚೀಟಿ

ನಜ಼ರುದ್ದೀನ್‌ ಪರದೇಶದ ಪಟ್ಟಣವೊಂದನ್ನು ಪ್ರವೇಶಿಸಿದಾಗ ಗಡಿ ಕಾವಲುಗಾರನೊಬ್ಬ ಅವನನ್ನು ತಡೆದು ಹೇಳಿದ, “ನೀನು ಯಾರೆಂಬುದನ್ನು ಗುರುತಿಸಿ ಪಟ್ಟಣದ ಒಳಕ್ಕೆ ಬಿಡಲು ನೆರವಾಗಬಲ್ಲ ಏನಾದರೊಂದು ನಿನ್ನ ಹತ್ತಿರ ಇರಲೇಬೇಕಲ್ಲವೇ?”

ನಜ಼ರುದ್ದೀನ್‌ ತನ್ನ ಕಿಸೆಯಿಂದ ಪುಟ್ಟ ಕನ್ನಡಿಯೊಂದನ್ನು ತೆಗೆದು ಅದರಲ್ಲಿ ತನ್ನನ್ನು ತಾನು ನೋಡಿಕೊಂಡ ನಂತರ ಹೇಳಿದ, “ಹೌದು, ಇದು ನಜ಼ರುದ್ದೀನ್ ಎಂಬುದುರಲ್ಲಿ ಯಾವ ಸಂಶಯವೂ ಇಲ್ಲ!”

೧೮೮. ನಜ಼ರುದ್ದೀನ್‌ನ ರಜಾದಿನಗಳು

ನಜ಼ರುದ್ದೀನ್‌ ಯಾವುದೋ ಒಂದು ಕಾರ್ಖಾನೆಯ ಉದ್ಯೋಗಿಯಾಗಿದ್ದ. ಒಮ್ಮೆ ಸುಮಾರು ಒಂದು ವಾರ ಕಾಲ ಆತ ಕೆಲಸಕ್ಕೆ ಗೈರುಹಾಜರಾದ.

ಆತ ಪುನಃ ಕೆಲಸಕ್ಕೆ ಬಂದಾಗ ಮಾಲಿಕ ಕೇಳಿದ, “ಕಳೆದ ವಾರ ಎಲ್ಲಿಗೆ ಹೋಗಿದ್ದೆ?”

ನಜ಼ರುದ್ದೀನ್‌ ಉತ್ತರಿಸಿದ, “ನನಗೆ ನೀಡಿದ್ದ ಆದೇಶದಂತೆ ನಾನು ನಡೆದುಕೊಂಡೆ.”

“ಏನದು?” ವಿಚಾರಿಸಿದ ಮಾಲಿಕ

ನಜ಼ರುದ್ದೀನ್‌ ವಿವರಿಸಿದ, “ಬೇಸರ ಕಳೆಯಲು ವಿಹಾರಾರ್ಥ ಎಲ್ಲಿಗಾದರೂ ಹೋಗುವ ಸಲುವಾಗಿ ಕಳೆದ ವಾರ ನಿಮ್ಮನ್ನು ಒಂದು ವಾರ ರಜಾ ಬೇಕೆಂದು ಕೇಳುವವನಿದ್ದೆ. ಅಷ್ಟರಲ್ಲಿ ನಮ್ಮ ಕಾರ್ಖಾನೆಯ ಧ್ಯೇಯ ವಾಕ್ಯ -‘ಮಾಡಬೇಕೆಂದಿರುವುದನ್ನು ತಕ್ಷಣವೇ ಮಾಡು’ – ನೆನಪಿಗೆ ಬಂದಿತು.”

ಮಾಲಿಕ ಮಧ್ಯ ಪ್ರವೇಶಿಸಿದ, “ಆದ್ದರಿಂದ?”

“ನಾನು ತಕ್ಷಣವೇ ವಿಹಾರಾರ್ಥ ಪ್ರವಾಸೀ ತಾಣವೊಂದಕ್ಕೆ ಹೋದೆ.”

೧೮೯. ವಿಜೇತನಿಗೊಂದು ಬಿರುದು ಬೇಕಿದೆ

ಪರದೇಶದ ರಾಜನೊಬ್ಬ ನಜ಼ರುದ್ದೀನ್‌ ವಾಸಿಸುತ್ತಿದ್ದ ನಗರದ ಮೇಲೆ ಧಾಳಿ ಮಾಡಿ ಅದನ್ನು ವಶಪಡಿಸಿಕೊಂಡ. ನಜ಼ರುದ್ದೀನ್‌ನನ್ನು ನೋಡಿದ ಆತ ಕೇಳಿದ, “ಏ ಮುಲ್ಲಾ, ನನಗೊಂದು ಗೌರವಸೂಚಕ ಸಂಬೋಧನ ಬಿರುದು ಬೇಕಾಗಿದೆ. ಅದರಲ್ಲಿ ‘ದೇವರು’ ಅನ್ನುವ ಪದ ಇರಬೇಕೆಂಬುದು ನನ್ನ ಆಸೆ. ಉದಾಹರಣೆಗೆ – ದೇವನ ಸೈನಿಕ, ದೈವಸಮಾನ, ದೈವಾಂಶಸಂಭೂತ – ಇಂಥವು. ನೀನೇನಾದರೂ ಸಲಹೆ ಮಾಡಬಲ್ಲೆಯಾ?”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ ‘ಅಯ್ಯೋ ನನ್ನ ದೇವರೇ’ ಎಂಬುದಾಗಿ ಸಂಬೋಧಿಸಿದರೆ ಹೇಗೆ?”

 ೧೯೦. ಹಸಿದಿದ್ದ ನಜ಼ರುದ್ದೀನ್‌

ನಜ಼ರುದ್ದೀನ್‌ ತನ್ನ ದೈನಂದಿನ ಕಾಯಕ ಮುಗಿಸಿ ಮನೆಗೆ ಬಂದಾಗ ಆತನಿಗೆ ತುಂಬಾ ಹಸಿವಾಗಿತ್ತು. ಒಂದು ತಟ್ಟೆ ತುಂಬ ತಿನಿಸನ್ನು ಎದುರಿಗೆ ಇಟ್ಟುಕೊಂಡು ಕುಳಿತ. ಎರಡೂ ಕೈಗಳಿಂದ ತಿನಿಸನ್ನು ಬಾಯೊಳಕ್ಕೆ ತುರುಕಲಾರಂಭಿಸಿದ.

ಅವನ ಹೆಂಡತಿ ಕೇಳಿದಳು, “ಎರಡೂ ಕೈಗಳಿಂದ ಏಕೆ ತಿನ್ನುತ್ತಿರುವೆ?”

ನಜ಼ರುದ್ದೀನ್‌ ಉತ್ತರಿಸಿದ, “ನನಗೆ ಮೂರು ಕೈಗಳು ಇಲ್ಲದೇ ಇರುವುದರಿಂದ!”

 ೧೯೧. ಈ ಹಳ್ಳಿಯನ್ನು ಬಿಟ್ಟು ಹೋಗು

ಗ್ರಾಮಾಧ್ಯಕ್ಷ ನಜ಼ರುದ್ದೀನ್‌ನ ಹತ್ತಿರ ಹೋಗಿ ಹೇಳಿದ, “ಈ ಕೆಟ್ಟ ಸುದ್ದಿಯನ್ನು ನಿನಗೆ ನೀಡುವ ಕೆಲಸವನ್ನು ನಾನು ದ್ವೇಷಿಸುತ್ತೇನೆ. ಆದರೂ ವಿಧಿಯಿಲ್ಲದೇ ಅದನ್ನು ಮಾಡಲೇ ಬೇಕಾಗಿದೆ. ನಜ಼ರುದ್ದೀನ್‌ ನೀನು ಈ ಹಳ್ಳಿಯನ್ನು ಬಿಟ್ಟು ಬೇರೆ ಎಲ್ಲಿಗಾದರೂ ಹೋಗಲೇಬೇಕು. ನಿನ್ನ ಅಸಂಬದ್ಧ ಉಪದೇಶಗಳಿಂದ ಇಲ್ಲಿನ ಜನರು ಬಹಳ ಬೇಸತ್ತಿದ್ದಾರೆ. ನೀನು ಈ ತಕ್ಷಣವೇ ಈ ಹಳ್ಳಿಯನ್ನು ಬಿಟ್ಟು ಹೋಗಬೇಕೆಂಬುದು ಎಲ್ಲರ ಒಕ್ಕೊರಲಿನ ಬೇಡಿಕೆಯಾಗಿದೆ.”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಓ ಹಾಗೋ ವಿಷಯ. ನನ್ನನ್ನು ಊರು ಬಿಟ್ಟು ಹೋಗುವಂತೆ ಅವರು ಹೇಳುತ್ತಿರುವುದು ಸರಿಯಲ್ಲ. ವಾಸ್ತವವಾಗಿ ನಾನೇ ಅವರನ್ನು ಊರು ಬಿಟ್ಟು ಹೋಗುವಂತೆ ಹೇಳುವುದು ನ್ಯಾಯಸಮ್ಮತವಾಗುತ್ತದೆ.”

ಗ್ರಾಮಾಧ್ಯಕ್ಷ ವಿಚಾರಿಸಿದ, “ಅದೇಕೆ?”

ಮುಲ್ಲಾ ಉತ್ತರಿಸಿದ, “ಯಾರೂ ಇಲ್ಲದ ಸ್ಥಳದಲ್ಲಿ ನಾನೊಬ್ಬನೇ ಒಂಟಿಯಾಗಿ ಮನೆಕಟ್ಟಿ, ಕೃಷಿ ಮಾಡಲೋಸುಗ ಹೊಸದಾಗಿ ಜಮೀನು ಹದಮಾಡಿ ವಾಸಿಸಬೇಕು ಎಂಬುದಾಗಿ ನಿರೀಕ್ಷಿಸುವುದು ಅಸಮರ್ಥನೀಯ. ಇದಕ್ಕೆ ಬದಲಾಗಿ ಈ ಊರಿನ ಜನರೇ ಒಟ್ಟಾಗಿಯೇ ಈ ಊರುಬಿಟ್ಟು ಹೋಗಿ ಹೊಸದೊಂದು ಊರನ್ನೇ ಸೃಷ್ಟಿಸುವುದು ಬಲು ಸುಲಭ!”

 ೧೯೨. ಹುಚ್ಚ

 ಸ್ಥಳೀಯ ಮನೋರೋಗ ಚಿಕಿತ್ಸಾಲಯದ ಮುಖ್ಯಸ್ಥರನ್ನು ಮುಲ್ಲಾ ನಜ಼ರುದ್ದೀನ್‌ ಭೇಟಿ ಮಾಡಿ ಕೇಳಿದ, “ಇತ್ತೀಚೆಗೆ ಇಲ್ಲಿಂದ ಯಾರಾದರೂ ತಪ್ಪಿಸಿಕೊಂಡು ಓಡಿಹೋಗಿದ್ದಾರೋ?”

ಮುಖ್ಯಸ್ಥರು ವಿಚಾರಿಸಿದರು, “ನೀನೇಕೆ ಕೇಳುತ್ತಿರುವೆ?”

ಮುಲ್ಲಾ ಉತ್ತರಿಸಿದ, “ನನ್ನ ಹೆಂಡತಿಯೊಂದಿಗೆ ಯಾರೋ ಒಬ್ಬ ಓಡಿಹೋಗಿದ್ದಾನೆ!”

 ೧೯೩. ಕತ್ತೆಗಳ ಸರಬರಾಜು ಮಾಡುವವ

ಪಕ್ಕದ ಪಟ್ಟಣಕ್ಕೆ ಏಳು ಕತ್ತೆಗಳನ್ನು ಸರಬರಾಜು ಮಾಡುವ ಕೆಲಸಕ್ಕೆ ನಜ಼ರುದ್ದೀನ್‌ನನ್ನು ನೇಮಿಸಿಕೊಳ್ಳಲಾಯಿತು.

ಕತ್ತೆಗಳೊಂದಿಗೆ ಪಯಣಿಸುತ್ತಿದ್ದಾಗ ಅವನು ಮನಸ್ಸಿನಲ್ಲಿ ಏನೇನೋ ಆಲೋಚನೆ ಮಾಡುತ್ತಾ ಸಾಗುತ್ತಿದ್ದದ್ದರಿಂದ ಕತ್ತೆಗಳ ಮೇಲೆ ಪೂರ್ಣ ಗಮನವಿಡಲು ಸಾಧ್ಯವಾಗಲಿಲ್ಲ.. ಆ ರೀತಿ ತುಸು ದೂರ ಹೋದ ನಂತರ ಎಲ್ಲ ಕತ್ತೆಗಳೂ ಇವೆಯೇ ಎಂಬುದನ್ನು ಪರೀಕ್ಷಿಸಲೋಸುಗ ಎಣಿಸಿದ, “ಒಂದು, ಎರಡು, ಮೂರು, ನಾಲ್ಕು, ಐದು, ಆರು.” ಲೆಕ್ಕ ಸರಿಯಾಗದ್ದರಿಂದ ಮತ್ತೊಮ್ಮೆ ಎಣಿಸಿದ, “ಒಂದು, ಎರಡು, ಮೂರು, ನಾಲ್ಕು, ಐದು, ಆರು.” ಇನ್ನೂ ಹೆಚ್ಚು ಗೊಂದಲಕ್ಕೀಡಾದ ಆತ ತಾನು ಸವಾರಿ ಮಾಡುತ್ತಿದ್ದ ಕತ್ತೆಯಿಂದ ಕೆಳಕ್ಕಿಳಿದು ಪುನಃ ಎಣಿಸಿದ, “ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು!” ತೀವ್ರವಾಗಿ ಗೊಂದಲಕ್ಕೀಡಾದ ನಜ಼ರುದ್ದೀನ್‌ ತಾನು ಸವಾರಿ ಮಾಡುತ್ತಿದ್ದ ಕತ್ತೆಯ ಮೇಲೇರಿ ಮತ್ತೊಮ್ಮೆ ಎಣಿಸಿದ, “ಒಂದು, ಎರಡು, ಮೂರು, ನಾಲ್ಕು, ಐದು, ಆರು.” ಕತ್ತೆಯಿಂದ ಕೆಳಕ್ಕಿಳಿದು ಮಗದೊಮ್ಮೆ ಎಣಿಸಿದ, “ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು!” ಇಂತೇಕೆ ಆಗುತ್ತಿದೆ ಎಂಬುದರ ಕುರಿತು ನಜ಼ರುದ್ದೀನ್‌ ತುಸು ಸಮಯ ಆಲೋಚಿಸಿದ.

ಕೊನೆಗೆ ಏನು ನಡೆಯುತ್ತಿದೆ ಎಂಬ ಅರಿವು ಮೂಡಿ ಅವನು ಉದ್ಗರಿಸಿದ, “ತಮ್ಮ ಮೇಲೆ ನಾನು ಸವಾರಿ ಮಾಡದೇ ಇರಲಿ ಎಂಬುದಕ್ಕಾಗಿ ಅವು ಏನೋ ತಂತ್ರ ಹೂಡಿವೆ. ನಾನು ಅವುಗಳ ಪೈಕಿ ಒಂದರ ಮೇಲೆ ಕುಳಿತ ಕೂಡಲೆ ಏನೋ ಒಂದು ನಮೂನೆಯ ಭ್ರಮೆಯನ್ನು ಹೇಗೋ ನನ್ನಲ್ಲಿ ಉಂಟುಮಾಡುತ್ತಿವೆ. ಅದರ ಪರಿಣಾಮವಾಗಿ ಅವುಗಳ ಪೈಕಿ ಒಂದು ಮಾಯವಾದಂತೆ ಕಾಣುತ್ತದೆ. ಆದರೆ ನಾನು ಅವುಗಳ ಹಿಂದೆ ನಿಂತಾಗ ನನ್ನೊಂದಿಗೆ ಇಂಥ ಕಿತಾಪತಿ ಮಾಡಲು ಅವಕ್ಕೆ ಸಾಧ್ಯವಾಗುತ್ತಿಲ್ಲ.”

 ೧೯೪. ನಾನು ಕತ್ತಲೆಯಲ್ಲಿ ನೋಡಬಲ್ಲೆ

ಯೋಗಿಗಳ ಒಂದು ಗುಂಪು ತಮ್ಮ ಸಾಮರ್ಥ್ಯಗಳ ಕುರಿತಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿತ್ತು.

“ಪ್ರತೀ ದಿನ ರಾತ್ರಿ ನಾನು ನನ್ನ ದೇಹವನ್ನು ಗಾಳಿಯಲ್ಲಿ ಮೇಲೇರಿ ತೇಲುವಂತೆ ಮಾಡಿ ಗಾಳಿಯಲ್ಲಿಯೇ ಮಲಗಿ ನಿದ್ರಿಸುತ್ತೇನೆ,” ಒಬ್ಬ ಹೇಳಿದ.

“ನಾನಾದರೋ,” ಇನ್ನೊಬ್ಬ ತನ್ನ ಸಾಮರ್ಥ್ಯ ವರ್ಣಿಸಲಾರಂಭಿಸಿದ. ———–

ಅವರು ಹೇಳುವುದನ್ನೆಲ್ಲ ಕೇಳಿದ ನಂತರ ನಜ಼ರುದ್ದೀನ್‌ ತನ್ನದೂ ಒಂದು ಕೊಡುಗೆ ಇರಲೆಂದು ಹೇಳಿದ, “ನಾನು ಕತ್ತಲೆಯಲ್ಲಿ ನೋಡಬಲ್ಲೆ.”

“ಓಹೋ, ಹಾಗದರೆ ರಾತ್ರಿಯ ವೇಳೆ ನೀನು ಹೊರಹೋಗುವಾಗಲೆಲ್ಲ ಕೈದೀಪ ಹಿಡಿದುಕೊಳ್ಳುವುದೇಕೆ?” ಒಬ್ಬ ಚುಚ್ಚುಮಾತಾಡಿದ.

ನಜರುದ್ದೀನ್‌ ಉತ್ತರಿಸಿದ, “ಕಾರಣ ಬಹಳ ಸರಳವಾದದ್ದು, ಹಾಗೆ ಹಿಡಿದುಕೊಂಡರೆ ಇತರರು ನನಗೆ ಢಿಕ್ಕಿ ಹೊಡೆಯುವುದಿಲ್ಲ.”

೧೯೫. ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಯೋಧರು

ಇತ್ತೀಚೆಗೆ ನಡೆದ ಯುದ್ಧವೊಂದರಲ್ಲಿ ತಮ್ಮ ಸಾಧನೆಗಳ ಕುರಿತು ಯೋಧರ ಗುಂಪೊಂದು ಹಳ್ಳಿಯ ಕೇಂದ್ರಭಾಗದಲ್ಲಿ ಕುಳಿತು ಬಡಾಯಿ ಕೊಚ್ಚಿಕೊಳ್ಳುತ್ತಿತ್ತು.

“ನಾವು ಅವರ ಹುಟ್ಟಡಗಿಸಿದೆವು,” ಒಬ್ಬ ಹೇಳಿದ. “ನಾವು ಅಜೇಯರಾಗಿದ್ದೆವು. ಅವರ ಸುಮಾರು ೧೨ ಮಂದಿ ಅತ್ಯತ್ತಮ ಯೋಧರನ್ನು ನಾನೇ ಕೊಂದುಹಾಕಿದೆ.”

ಇನ್ನೊಬ್ಬ ಹೇಳಿದ, “ನಾನು, ನನ್ನತ್ತ ಬರುತ್ತಿದ್ದ ಬಾಣವೊಂದನ್ನು ಹಿಡಿದು ಬಾಣ ಬಿಟ್ಟವನತ್ತವೇ ಎಸೆದೆ. ಅದು ಅವನ ಹೃದಯಕ್ಕೆ ನಾಟಿಕೊಂಡಿತು!”

ಮೂರನೆಯವ ಘೋಷಿಸಿದ, “ನಮ್ಮಂಥ ಮಹಾನ್‌ ಯೋಧರನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಕ್ಕಿಲ್ಲ, ಕೇಳಿಯೂ ಇರಲಿಕ್ಕಿಲ್ಲ.”

ಇಂತು ಅವರು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಪಟ್ಟಣದ ಕೆಲ ಮಂದಿ ಸುತ್ತಲೂ ನಿಂತು ಮೆಚ್ಚುಗೆಯ, ಅಚ್ಚರಿಯ ಪದಗಳನ್ನು ಉಚ್ಚರಿಸುತ್ತಿದ್ದರು. ಆ ಸನ್ನಿವೇಶದಲ್ಲಿ ನಜ಼ರುದ್ದೀನ್‌ ಎದ್ದು ನಿಂತು ಉದ್ಘೋಷಿಸಿದ, “ಬಲು ಹಿಂದೆ ನನ್ನ ಯೌವನದಲ್ಲಿ ನಾನು ಯುದ್ಧ ಮಾಡುತ್ತಿದ್ದಾಗ ಒಮ್ಮೆ ಖಡ್ಗದಿಂದ ನನ್ನ ಎದುರಾಳಿಯ ಕೈಯನ್ನು ಕತ್ತರಿಸಿ ಹಾಕಿದೆ!”

ಅಲ್ಲಿದ್ದ ಯೋಧರ ಪೈಕಿ ಒಬ್ಬ ಹೇಳಿದ, “ನಾನಾಗಿದ್ದಿದ್ದರೆ ಅದಕ್ಕೆ ಬದಲಾಗಿ ನಾನು ಅವನ ತಲೆಯನ್ನೇ ಕತ್ತರಿಸಿ ಹಾಕುತ್ತಿದ್ದೆ!”

ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನೀನು ಹಾಗೆ ಮಾಡುತ್ತಿದ್ದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆ ಸನ್ನಿವೇಶದಲ್ಲಿ ಅದು ನಿನ್ನಿಂದ ಸಾಧ್ಯವಾಗುತ್ತಿರಲಿಲ್ಲ.”

“ಏಕೆ ಸಾಧ್ಯವಾಗುತ್ತಿರಲಿಲ್ಲ,” ವಿಚಾರಿಸಿದ ಆ ಯೋಧ.

“ಏಕೆಂದರೆ ನಾನು ಅವನ ಕೈಯನ್ನು ಕತ್ತರಿಸುವುದಕ್ಕಿಂತ ಮೊದಲೇ ಬೇರೆ ಯಾರೋ ಅವನ ತಲೆಯನ್ನು ಕತ್ತರಿಸಿ ಹಾಕಿದ್ದರು!” ಉತ್ತರಿಸಿದ ನಜ಼ರುದ್ದೀನ್‌.

೧೯೬. ನೆನಪಿಡು ಆಟ

ನಜ಼ರುದ್ದೀನ್‌ ಹಾಗೂ ಅವನ ಹೆಂಡತಿ – ಇಬ್ಬರೂ ಸ್ಪರ್ಧಾಮನೊಭಾವದವರು. ಎಂದೇ, ಒಮ್ಮೆ ಅವರು ‘ನೆನಪಿಡು’ ಆಟ ಆಡಲು ನಿರ್ಧರಿಸಿದರು. (ಈ ಆಟದಲ್ಲಿ ಇನ್ನೊಬ್ಬರು ತಮಗೆ ಯಾವುದೇ ವಸ್ತುವನ್ನು ಕೊಟ್ಟಾಗಲೆಲ್ಲ ‘ನೆನಪಿಡು’ ಎಂಬುದಾಗಿ ಹೇಳಬೇಕು)

ಅನೇಕ ತಿಂಗಳುಗಳ ಕಾಲ ಈ ಆಟ ಆಡಿದ ನಂತರ ನಜ಼ರುದ್ದೀನ್‌ ಸುದೀರ್ಘ ಅವಧಿಯ ಯಾತ್ರೆ ಹೋಗಲು ತೀರ್ಮಾನಿಸಿದ. ಹಿಂದಿರುಗಿ ಬರುವಾಗ ಹೆಂಡತಿಗೊಂದು ಉಡುಗೊರೆ ತರಲೂ ನಿರ್ಧರಿಸಿದ. ಅದನ್ನು ಸ್ವೀಕರಿಸುವಾಗ ಆಕೆ ‘ನೆನಪಿಡು’ ಎಂಬುದಾಗಿ ಹೇಳಬೇಕಾದ ಷರತ್ತನ್ನು ಮರೆತಿರುತ್ತಾಳೆ ಎಂಬುದು ಅವನ ನಂಬಿಕೆಯಾಗಿತ್ತು.

ತನ್ನ ತಾಳ್ಮೆ ಮತ್ತು ಯೋಜನೆಯ ಫಲವಾಗಿ ‘ನೆನಪಿಡು’ ಆಟದಲ್ಲಿ ತಾನು ಗೆಲ್ಲುವುದು ಖಚಿತ ಎಂಬ ನಂಬಿಕೆಯೊಂದಿಗೆ ಒಂದು ವರ್ಷದ ನಂತರ ಉಡುಗೊರೆಯೊಂದಿಗೆ ಆತ ಹಿಂದಿರುಗಿದ.

ಮನೆಯ ಬಾಗಿಲು ತಟ್ಟಿದಾಗ ಅವನ ಹೆಂಡತಿ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಬಾಗಿಲು ತೆರೆದು ಹೇಳಿದಳು, “ಇವನೇ ನೋಡು ನಿನ್ನ ಹೊಸ ಮಗ!”

ಇದನ್ನು ಕೇಳಿ ಆಶ್ಚರ್ಯಚಕಿತನಾದ ನಜ಼ರುದ್ದೀನ್ ಕೂಡಲೇ ಆ ಮಗುವನ್ನು ಎತ್ತಿಕೊಂಡು ಮುದ್ದಾಡಲಾರಂಭಿಸಿದ. ಅವನ ಹೆಂಡತಿ ತಕ್ಷಣ ಉದ್ಗರಿಸಿದಳು, “ನಿನಗೆ ಮರೆತುಹೋಗಿದೆ!”‌

೧೯೭. ದನದ ಮಾಂಸ ಹಾಗು ಬೆಕ್ಕು

ಒಂದು ದಿನ ನಜ಼ರುದ್ದೀನ್‌ ಮನೆಗೆ ಎರಡು ಕಿಲೋಗ್ರಾಮ್‌ ದನದ ಮಾಂಸ ತಂದು ಕೊಟ್ಟು ಹೆಂಡತಿಗೆ ಹೇಳಿದ, “ಇಂದು ರಾತ್ರಿ ಇದರಿಂದ ಕಬಾಬ್‌ ಮಾಡು.”

ತದನಂತರ ನಜ಼ರುದ್ದೀನ್ ಹೊರಹೋಗಿದ್ದಾಗ ತನಗೂ ತನ್ನ ಸ್ನೇಹಿತೆಯರಿಗೂ ಮಧ್ಯಾಹ್ನದ ಭೊಜನ ತಯಾರಿಸಲು ಅವಳು ಅದನ್ನು ಉಪಯೋಗಿಸಿದಳು.

ಸಂಜೆಯ ವೇಳೆಗೆ ಮನೆಗೆ ಹಿಂದಿರುಗಿದ ನಜ಼ರುದ್ದೀನ್‌ ಕಬಾಬ್‌ಗಳು ಸಿದ್ಧವಾಗಿವೆಯೇ ಎಂಬುದನ್ನು ವಿಚಾರಿಸಿದ.

ಅವನ ಹೆಂಡತಿ ಉತ್ತರಿಸಿದಳು, “ಕ್ಷಮಿಸು. ನಾನು ದೈನಂದಿನ ಕೆಲಸಗಳನ್ನು ಮಾಡುತ್ತಿದ್ದಾಗ  ನನಗೆ ತಿಳಿಯದಂತೆ ನಮ್ಮ ಬೆಕ್ಕು ಮಾಂಸವನ್ನೆಲ್ಲ ತಿಂದು ಹಾಕಿತು.”

ನಜ಼ರುದ್ದೀನ್‌ ತಕ್ಷಣ ಬೆಕ್ಕನ್ನು ಹಿಡಿದು ಒಂದು ತಕ್ಕಡಿಯ ನೆರವಿನಿಂದ ಅದರ ತೂಕ ಕಂಡುಹಿಡಿದು ಹೇಳಿದ, “ಈಗ ಈ ಬೆಕ್ಕಿನ ತೂಕ ಎರಡು ಕಿಲೋಗ್ರಾಮ್‌. ಅಂದಮೇಲೆ ಬೆಕ್ಕು ತಿಂದ ಮಾಂಸ ಎಲ್ಲಿಗೆ ಹೋಯಿತು. ಇದು ಮಾಂಸದ ತೂಕ ಅನ್ನುವುದಾದರೆ ಬೆಕ್ಕು ಎಲ್ಲಿದೆ?”

 ೧೯೮. ಬಕ್ಷೀಸು

ತುಂಬ ಹಳೆಯದಾಗಿದ್ದ ದಿರಿಸು ಧರಿಸಿ ನಜ಼ರುದ್ದೀನ್‌ ಸ್ನಾನಗೃಹಕ್ಕೆ ಹೋದ.

ಅವನೊಬ್ಬ ಬಲು ಬಡವನಾಗಿರಬೇಕು ಎಂಬುದಾಗಿ ಊಹಿಸಿಕೊಂಡ ಅಲ್ಲಿನ ಸೇವಕ ಮೈ ಒರೆಸಿಕೊಳ್ಳಲು ಒಂದು ಹಳೆಯ ಬಟ್ಟೆಯನ್ನು ನಜ಼ರುದ್ದೀನ್‌ನತ್ತ ಎಸೆದು ತದನಂತರ ಅವನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ. ಸ್ನಾನ ಮಾಡಿದ ನಂತರ ಅಲ್ಲಿಂದ ಹೊರಡುವಾಗ ನಜ಼ರುದ್ದೀನ್‌ ಆ ಸೇವಕನಿಗೆ ಬಲು ದೊಡ್ಡ ಮೊತ್ತವನ್ನು ಭಕ್ಷೀಸಾಗಿ ಕೊಟ್ಟ.

ಮುಂದಿನ ವಾರ ಪುನಃ ಸ್ನಾನಗೃಹಕ್ಕೆ ನಜ಼ರುದ್ದೀನ್‌ ಹೋದಾಗ ಸೇವಕ ಅವನಿಗೆ ರಾಜರಿಗೆ ನೀಡುವಂಥ ಸೇವೆಯನ್ನು ಸಲ್ಲಿಸಿದ, ಹಿಂದಿನ ಸಲದ್ದಕ್ಕಿಂತ ಹೆಚ್ಚಿನ ಮೊತ್ತದ ಭಕ್ಷೀಸನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ!

ಈ ಸಲ ನಜ಼ರುದ್ದೀನ್‌ ಸ್ನಾಹಗೃಹದಿಂದ ಹೊರಬರುವಾಗ ಒಂದು ಅತ್ಯಲ್ಪ ಮೌಲ್ಯದ ನಾಣ್ಯವನ್ನು ಸಿಡುಕು ಮೋರೆ ಪ್ರದರ್ಶಿಸುತ್ತಾ ಸೇವಕನತ್ತ ಎಸೆದನು.

ಇದರಿಂದ ಬಲು ಹತಾಶನಾದಂತೆ ಕಾಣುತ್ತಿದ್ದ ಸೇವಕನತ್ತ ತಿರುಗಿ ನಜ಼ರುದ್ದೀನ್‌ ಹೇಳಿದ, “ಈ ಭಕ್ಷೀಸು ನೀನು ಹಿಂದಿನ ಸಲ ಮಾಡಿದ ಸೇವೆಗಾಗಿ, ಹಿಂದಿನ ಸಲ ಕೊಟ್ಟ ಭಕ್ಷೀಸು ಈ ವಾರ ನೀನು ಮಾಡಿದ ಸೇವೆಗಾಗಿ!”

೧೯೯. ಕಪಾಳಮೋಕ್ಷ

ಒಂದು ದಿನ ನಜ಼ರುದ್ದೀನ್‌ ಕಾರ್ಯನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಅವನಿಗೆ ಕಪಾಳಮೋಕ್ಷ ಮಾಡಿದನು.

ಆಶ್ಚರ್ಯಚಕಿತನಾದ ನಜ಼ರುದ್ದೀನ್‌ ಅಪರಿಚಿತನನ್ನು ದುರುಗುಟ್ಟಿ ನೋಡಿದನು. ಅವನೂ ನಜ಼ರುದ್ದೀನ್‌ನನ್ನು ಗಮನವಿಟ್ಟು ನೋಡಿದ. ಆಗ ಅವನಿಗೆ ತಿಳಿಯಿತು ತಾನು ಯಾರಿಗೆ ಹೊಡೆಯಬೇಕು ಅಂದುಕೊಂಡಿದ್ದನೋ ಆ ವ್ಯಕ್ತಿ ಇವನಲ್ಲ ಎಂಬ ಸತ್ಯ. ತೀರಾ ಮುಜುಗರಕ್ಕೀಡಾದ ಆತ ಆ ತಕ್ಷಣವೇ ಕ್ಷಮೆ ಯಾಚಿಸಿದ.

ಆದಾಗ್ಯೂ ನಜ಼ರುದ್ದೀನ್‌ ಅವನನ್ನು ನ್ಯಾಯಾಲಯಕ್ಕೆ ಎಳೆದೊಯ್ದ.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪು ನೀಡಿದರು: “ಫಿರ್ಯಾದಿಯು ಆಪಾದಿತನಿಗೆ ಕಪಾಳಮೋಕ್ಷ ಮಾಡುವಂತೆ ಆಜ್ಞಾಪಿಸುತ್ತಿದ್ದೇನೆ.”

ನಜ಼ರುದ್ದೀನ್‌ ಈ ತೀರ್ಪನ್ನು ಒಪ್ಪಿಕೊಳ್ಳಲಿಲ್ಲ. ನಜ಼ರುದ್ದೀನ್‌ನ ಈ ಕ್ರಮದಿಂದ ತಾಳ್ಮೆ ಕಳೆದುಕೊಳ್ಳುವದರಲ್ಲಿದ್ದ ನ್ಯಾಯಾಧೀಶರು ತೀರ್ಪನ್ನು ಬದಲಿಸಿದರು: “ಆಪಾದಿತನು ಫಿರ್ಯಾದಿಗೆ ೨೦ ದಿನಾರ್‌ ಹಣವನ್ನು ಕೊಡಬೇಕೆಂದು ಆದೇಶಿಸುತ್ತಿದ್ದೇನೆ.”

ಈ ತೀರ್ಪನ್ನು ನಜ಼ರುದ್ದೀನ್‌ ಒಪ್ಪಿಕೊಂಡ. ಆದರೆ ಆ ಅಪರಿಚಿತ ತಾನು ಮನೆಗೆ ಹೋಗಿ ಹಣ ತರಬೇಕೆಂಬುದಾಗಿ ಹೇಳಿ ನ್ಯಾಯಾಧೀಶರ ಅನುಮತಿ ಪಡೆದು ಓಡಿದ.

ಅರ್ಧ ಘಂಟೆಯಾದರೂ ಆತ ಹಿಂದಿರುಗಲಿಲ್ಲ. ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲವೆಂದು ಘೋಷಿಸಿದ ನಜ಼ರುದ್ದೀನ್‌ ನ್ಯಾಯಾಧೀಶರ ಹತ್ತಿರ ಹೋಗಿ ಅವರಿಗೆ ಕಪಾಳಮೋಕ್ಷ ಮಾಡಿ ಹೇಳಿದ, “ನನಗೆ ತಡವಾಗುತ್ತಿದೆಯಾದ್ದರಿಂದ ಇನ್ನು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ಆತ ಹಿಂದಿರುಗಿ ಬಂದಾಗ ಆ ಇಪ್ಪತ್ತು ದಿನಾರ್ ಹಣವನ್ನು ತಾವು ನನ್ನ ಪರವಾಗಿ ದಯವಿಟ್ಟು ಸ್ವೀಕರಿಸಿ!”

೨೦೦. ಧರ್ಮಶ್ರದ್ಧೆಯ ಗಡ್ಡ

ಪಟ್ಟಣದ ಮತೀಯ ಮುಖಂಡ ಒಂದು ದಿನ ಪಟ್ಟಣವಾಸಿಗಳಿಗೆ ಉಪದೇಶ ಮಾಡುತ್ತಾ ಹೇಳಿದ, “ಧರ್ಮಶ್ರದ್ಧೆ ಉಳ್ಳವರು ಗಡ್ಡ ಬಿಡುತ್ತಾರೆ. ದಪ್ಪನೆಯ ಗಡ್ಡ ಪಾವಿತ್ರ್ಯದ ಬಾಹ್ಯ ಅಭಿವ್ಯಕ್ತಿ ಆಗಿರುತ್ತದೆ.”

ನಜ಼ರುದ್ದೀನ್‌ ಕೇಳಿದ, “ಈ ಪಟ್ಟಣವಾಸಿಗಳ ಪೈಕಿ ಯಾರೊಬ್ಬರಿಗೂ ಇಲ್ಲದಷ್ಟು ದಟ್ಟವಾದ ಗಡ್ಡ ನನ್ನ ಹೋತನಿಗಿದೆ. ನಮ್ಮೆಲ್ಲರಿಗಿಂತಲೂ ಆ ಹೋತ ಹೆಚ್ಚು ಧರ್ಮಶ್ರದ್ಧೆ ಉಳ್ಳದ್ದು ಎಂಬುದು ನಿಮ್ಮ ಅಭಿಪ್ರಾಯವೇ?”

Advertisements
This entry was posted in ನಜ಼ರುದ್ದೀನ್‌ ಕತೆಗಳು and tagged , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s