ನಜ಼ರುದ್ದೀನ್‌ನ ಕತೆಗಳು, ೧೦೧-೧೫೦

೧೦೧. ಛತ್ರಿ

ನಜ಼ರುದ್ದೀನ್‌ ತನ್ನ ಗೆಳೆಯನೊಬ್ಬನ ಜೊತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದಾಗ ಇದಕ್ಕಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ನಜ಼ರುದ್ದೀನ್‌ನ ಕೈನಲ್ಲಿ ಛತ್ರಿಯೊಂದು ಇದ್ದದ್ದನ್ನು ಗಮನಿಸಿದ ಗೆಳೆಯ ಹೇಳಿದ, “ಬೇಗನೆ ಛತ್ರಿ ಬಿಡಿಸು, ಇಲ್ಲದೇ ಇದ್ದರೆ ಸಂಪೂರ್ಣವಾಗಿ ಒದ್ದೆಯಾಗುತ್ತೇವೆ.”

ನಜ಼ರುದ್ದೀನ್‌ ಹೇಳಿದ, “ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಛತ್ರಿಯಲ್ಲಿ ತುಂಬಾ ತೂತುಗಳಿವೆ.”

ಆಶ್ಚರ್ಯಚಕಿತನಾದ ಗೆಳೆಯ ಕೇಳಿದ, “ಅಂಥ ಛತ್ರಿಯನ್ನು ತಂದದ್ದಾದರೂ ಏಕೆ?”

ನಜ಼ರುದ್ದೀನ್‌ ವಿವರಿಸಿದ, “ಏಕೆಂದರೆ, ಈ ದಿನ ನಿಜವಾಗಿ ಮಳೆ ಬರುತ್ತದೆ ಎಂಬುದಾಗಿ ನಾನು ಅಂದುಕೊಂಡೇ ಇರಲಿಲ್ಲ!”

೧೦೨. ಸುದ್ದಿ ರವಾನೆ

ನಗರಾಧ್ಯಕ್ಷರು ಹೇಳಿದರು, “ನಜ಼ರುದ್ದೀನ್‌, ಶ್ರೀಮತಿ ಶಾಹ್ರ್ಜಾದ್‌ ರಹಮಾನ್‌ ಅವರ ಪತಿ ವಿಧಿವಶರಾಗಿದ್ದಾರೆ. ನೀನಿಗಲೇ ಹೋಗಿ ಅವರಿಗೆ ಸುದ್ದಿ ತಲುಪಿಸು. ಆಕೆ ಬಹಳ ಸೂಕ್ಷ್ಮ ಪ್ರಕೃತಿಯವಳಾಗಿರುವುದರಿಂದ ಈ ಸುದ್ದಿಯನ್ನು ಆಕೆಗೆ ತೀವ್ರ ಆಘಾತವಾಗದ ರೀತಿಯಲ್ಲಿ ಮಿದುವಾಗಿ ತಿಳಿಸು.”

ನಜ಼ರುದ್ದೀನ್‌ ಆಕೆಯ ಮನೆಗೆ ಹೋಗಿ ಬಾಗಿಲು ತಟ್ಟಿದ. ಒಬ್ಬ ಬಡಕಲು ಹೆಂಗಸು ಬಾಗಿಲು ತೆಗೆದಳು.

ನಜ಼ರುದ್ದೀನ್‌ ಕೇಳಿದ, “ಇದು ವಿಧವೆ ಶಾಹ್ರ್ಜಾದ್‌ ರಹಮಾನ್ ಅವರ ಮನೆಯಷ್ಟೆ?”

ಆಕೆ ಉತ್ತರಿಸಿದಳು, “ನನ್ನ ಹೆಸರು ಶಾಹ್ರ್ಜಾದ್‌ ರಹಮಾನ್. ನಾನು ಈ ಮನೆಯಲ್ಲಿ ವಾಸಿಸುತ್ತಿದ್ದೇನೆ. ಆದರೆ ನಾನು ವಿಧವೆಯಲ್ಲ.”

ನಜ಼ರುದ್ದೀನ್‌ ಹೇಳಿದ, “ಹಂ. ನೀವೀಗ ವಿಧವೆಯಾಗಿರುವಿರಿ ಎಂಬುದಾಗಿ ನಾನೀಗ ೧೦೦ ದಿನಾರ್‌ ಬಾಜಿ ಕಟ್ಟಲು ಸಿದ್ಧನಿದ್ದೇನೆ.”

೧೦೩. ಅವನಾರು?

ಮೋಚಿಯೊಬ್ಬ ನಜ಼ರುದ್ದೀನ್‌ನಿಗೆ ಒಗಟೊಂದನ್ನು ಹೇಳಿದ: “ಒಬ್ಬ ವ್ಯಕ್ತಿ ಇದ್ದಾನೆ. ಅವನು ನನ್ನ ಅಪ್ಪನ ಮಗ, ಆದರೂ ನನ್ನ ಸಹೋದರನಲ್ಲ. ಹಾಗಾದರೆ ಅವನು ಯಾರು?”

ನಜ಼ರುದ್ದೀನ್‌ ತುಸು ಆಲೋಚಿಸಿ ಹೇಳಿದ, “ನನಗೆ ಗೊತ್ತಾಗುತ್ತಿಲ್ಲ. ಅವನು ಯಾರು?”

ಮೋಚಿ ಉತ್ತರಿಸಿದ, “ನಾನು!”

ಈ ಒಗಟು ನಜ಼ರುದ್ದೀನ್‌ನನ್ನು ಬಹುವಾಗಿ ರಂಜಿಸಿತು. ತತ್ಪರಿಣಾಮವಾಗಿ ಅವನು ಮಾರನೆಯ ದಿನ ತನ್ನ ಮಿತ್ರವೃಂದವನ್ನು ಕೇಳಿದ, “ಒಬ್ಬ ವ್ಯಕ್ತಿ ಇದ್ದಾನೆ. ಅವನು ನನ್ನ ಅಪ್ಪನ ಮಗ, ಆದರೂ ನನ್ನ ಸಹೋದರನಲ್ಲ. ಹಾಗಾದರೆ ಅವನು ಯಾರು?”

ಅವರು‌ ತುಸು ಆಲೋಚಿಸಿ ಹೇಳಿದರು, “ನಮಗೆ ಗೊತ್ತಾಗುತ್ತಿಲ್ಲ. ಅವನು ಯಾರು?”

ನಜ಼ರುದ್ದೀನ್‌ ಬಲು ಉತ್ಸಾಹದಿಂದ ಹೇಳಿದ, “ನೀವು ನಂಬಿದರೆ ನಂಬಿ, ಇಲ್ಲವಾದರೆ ಬಿಡಿ. ಪಕ್ಕದ ಬೀದಿಯಲ್ಲಿ ಕೆಲಸ ಮಾಡುವ ಮೋಚಿಯೇ ಅವನು!”

೧೦೪. ನಿನ್ನ ಬೆಕ್ಕು ಸತ್ತಿದೆ

ನಜ಼ರುದ್ದೀನ್‌ನ ಸೋದರಸಂಬಂಧಿಯೊಬ್ಬ ತನ್ನ ಕೆಲವು ಸ್ವತ್ತನ್ನು ನಜ಼ರುದ್ದೀನ್‌ನ ಸುಪರ್ದಿಗೆ ಕೊಟ್ಟು ಬಲು ದೂರದ ನಾಡಿಗೆ ವಲಸೆ ಹೋದ.

ಆ ಸೋದರಸಂಬಂಧಿಯ ಬೆಕ್ಕು ಒಂದು ದಿನ ಸತ್ತು ಹೋಯಿತು. ಆ ಕೂಡಲೆ ನಜ಼ರುದ್ದೀನ್‌ ಅವನಿಗೆ “ನಿನ್ನ ಬೆಕ್ಕು ಸತ್ತು ಹೋಯಿತು” ಎಂಬ ಸಂದೇಶ ರವಾನಿಸಿದ.

ಈ ಸುದ್ದಿ ಸೋದರಸಂಬಂಧಿಯಲ್ಲಿ ಮನಃಕ್ಷೋಭೆಯನ್ನು ಉಂಟುಮಾಡಿತು. ಅವನು ನಜ಼ರುದ್ದೀನ್‌ನಿಗೆ ಒಂದು ಸಂದೇಶ ಕಳುಹಿಸಿದ: “ನಾನು ವಾಸಿಸುವ ಸ್ಥಳದಲ್ಲಿ ಆಘಾತಕಾರಿ ಸುದ್ದಿಗಳನ್ನು ನೇರವಾಗಿ ತಿಳಿಸುವುದಕ್ಕೆ ಬದಲಾಗಿ ಜಾಣತನದಿಂದ ತಿಳಿಸುತ್ತಾರೆ. ಉದಾಹರಣೆಗೆ, ನೀನು ನನಗೆ ‘ನಿನ್ನ ಬೆಕ್ಕು ಸತ್ತು ಹೋಯಿತು’ ಎಂಬುದಾಗಿ ನೇರವಾಗಿ ತಿಳಿಸುವ ಬದಲು ಮೊದಲಿಗೆ ‘ನಿನ್ನ ಬೆಕ್ಕು ವಿಚಿತ್ರವಾಗಿ ವರ್ತಿಸುತ್ತಿದೆ’ ಎಂಬುದಾಗಿ, ತದನಂತರ ‘ನಿನ್ನ ಬೆಕ್ಕು ಅಡ್ಡಾದಿಡ್ಡಿ ಹಾರಾಡುತ್ತಿದೆ’ ಎಂಬುದಾಗಿಯೂ, ಆನಂತರ ‘ನಿನ್ನ ಬೆಕ್ಕು ಎಲ್ಲಿಗೋ ಹೋಗಿದೆ’ ಎಂಬುದಾಗಿಯೂ ತಿಳಿಸಿ ಕೊನೆಯಲ್ಲಿ ಅದು ಸತ್ತ ಸುದ್ದಿ ರವಾನಿಸಬಹುದಿತ್ತು.”

ಒಂದು ತಿಂಗಳ ನಂತರ ಸೋದರಸಂಬಂಧಿಗೆ ನಜ಼ರುದ್ದೀನ್‌ನಿಂದ ಸಂದೇಶವೊಂದು ಬಂದಿತು: “ನಿನ್ನ ತಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.”

 ೧೦೫. ಜ್ಞಾನೋದಯವಾಗುವಿಕೆ

ಒಂದು ದಿನ ನಜ಼ರುದ್ದೀನ್‌ ತನ್ನ ಅನುಯಾಯಿಗಳೊಂದಿಗೆ ಪೇಟೆಬೀದಿಯಲ್ಲಿ ಹೋಗುತ್ತಿದ್ದ. ನಜ಼ರುದ್ದೀನ್‌ ಮಾಡುತ್ತಿದ್ದದ್ದನ್ನೆಲ್ಲ ಅನುಯಾಯಿಗಳು ಅಂತೆಯೇ ನಕಲು ಮಾಡುತ್ತಿದ್ದರು. ತುಸು ದೂರ ನಡೆದ ನಂತರ ನಜ಼ರುದ್ದೀನ್ ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಿದ್ದ, ತದನಂತರ ತನ್ನ ಪಾದಗಳನ್ನು ಮುಟ್ಟಿ “ಹು ಹು ಹು” ಎಂಬುದಾಗಿ ಕಿರುಚುತ್ತಾ ಮೇಲಕ್ಕೆ ಹಾರುತ್ತಿದ್ದ. ತಕ್ಷಣ ಅನುಯಾಯಿಗಳೂ ಅಂತೆಯೇ ಮಾಡುತ್ತಿದ್ದರು.

ಇದನ್ನು ಕುತೂಹಲದಿಂದ ನೋಡಿದ ಒಬ್ಬ ವ್ಯಾಪಾರಿ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ ಮಿತ್ರಾ? ಇವರೆಲ್ಲರೂ ನಿನ್ನನ್ನು ಏಕೆ ಅನುಕರಿಸುತ್ತಿದ್ದಾರೆ?”

ನಜ಼ರುದ್ದೀನ್‌ ಉತ್ತರಿಸಿದ, “ನಾನೀಗ ಒಬ್ಬ ಸೂಫಿ ಷೇಕ್‌ ಆಗಿದ್ದೇನೆ. ಇವರೆಲ್ಲ ನನ್ನ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿರುವ ಆಧ್ಯಾತ್ಮಿಕ ಸಾಧಕರು. ಅವರಿಗೆ ಜ್ಞಾನೋದಯವಾಗಲು ನಾನು ನೆರವು ನೀಡುತ್ತಿದ್ದೇನೆ.”

ವ್ಯಾಪರಿ ಕೇಳಿದ, “ಅವರಿಗೆ ಜ್ಞಾನೋದಯವಾದದ್ದು ನಿನಗೆ ಹೇಗೆ ತಿಳಿಯುತ್ತದೆ?”

ನಜ಼ರುದ್ದೀನ್‌ ವಿವರಿಸಿದ, “ಅದು ಬಲು ಸುಲಭ. ಪ್ರತೀದಿನ ಬೆಳಿಗ್ಗೆ ನಾನು ಅವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಎಣಿಸುತ್ತೇನೆ. ಹಿಂದಿನ ದಿನ ಇದ್ದವರ ಪೈಕಿ ಯಾರು ರಾತ್ರೋರಾತ್ರಿ ಹೊರಟುಹೋಗಿರುತ್ತಾರೋ ಅವರಿಗೆ ಜ್ಞಾನೋದಯವಾಗಿರುತ್ತದೆ!”

೧೦೬. ಒಲೆ

ನಜ಼ರುದ್ದೀನ್‌ ತನ್ನ ಮನೆಯ ಅಂಗಳದಲ್ಲಿ ಒಲೆಯೊಂದನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಉತ್ತರಾಭಿಮುಖವಾಗಿರುವುದರಿಂದ ಚಳಿಗಾಲದಲ್ಲಿ ಬೀಸುವ ಶೀತಗಾಳಿಗೆ ಬೆಂಕಿ ಬೇಗನೆ ನಂದಿ ಹೋಗುತ್ತದೆ.”

ನಜ಼ರುದ್ದೀನ್‌ ಆ ಒಲೆಯನ್ನು ಕಿತ್ತುಹಾಕಿ ದಕ್ಷಿಣಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಗಟ್ಟಿಮುಟ್ಟಾಗಿ ಬಲು ಚೆನ್ನಾಗಿದೆ. ಆದರೂ ದಕ್ಷಿಣಾಭಿಮುಖವಾಗಿರುವುದರಿಂದ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ ಬೀಸಿದಾಗ ಅಡುಗೆ ಮಾಡುವುದು ಕಷ್ಟವಾಗಬಹುದು.” ನಜ಼ರುದ್ದೀನ್‌ ಆ ಒಲೆಯನ್ನು ಕಿತ್ತುಹಾಕಿ ಪೂರ್ವಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಆದರೂ ವರ್ಷದ ಕೆಲವು ಸಮಯಗಳಲ್ಲಿ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ ಬೀಸಿದಾಗ ಹೊಗೆ ನಿನ್ನ ಮನೆಯತ್ತ ಬರುತ್ತದೆ ಎಂಬುದು ನಿನಗೆ ತಿಳಿದಿದೆಯಷ್ಟೆ.” ಹತಾಶನಾದ ನಜ಼ರುದ್ದೀನ್ ಆ ಒಲೆಯನ್ನೂ ಕೆಡವಿ ಹಾಕಿ ಮತ್ತೊಮ್ಮೆ ಒಲೆಯನ್ನು ನಿರ್ಮಿಸಿದ. ಈ ಸಲ ಅವನ ಒಲೆಯ ಅಡಿಪಾಯಕ್ಕೆ ಚಕ್ರಗಳಿದ್ದವು! ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರೆಲ್ಲರೂ ಅದನ್ನು ಪರೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಬ್ಬ ಅವನನ್ನು ಅದ್ಭುತ ಹೊಸ ಒಲೆಗಾಗಿ ಅಭಿನಂದಿಸಿದ. ಒಬ್ಬ ಗೆಳೆಯ ಕೇಳಿದ, “ನಿನ್ನಿಂದ ನನಗೊಂದು ಉಪಕಾರವಾಗಬೇಕು. ಈ ಒಲೆಯನ್ನು ಈ ಒಂದು ದಿನದ ಮಟ್ಟಿಗೆ ನನಗೆ ಎರವಲು ಕೊಡುವೆಯಾ? ಈ ದಿನ ನನ್ನ ಮನೆಗೆ ಅನೇಕ ಬಂಧುಗಳು ಬರುವವರಿದ್ದಾರೆ. ಇದರಿಂದ ಅವರಿಗೆಲ್ಲ ಭೋಜನ ತಯಾರಿಸುವುದು ಸುಲಭವಾಗುತ್ತದೆ.” ನಜ಼ರುದ್ದೀನ್‌ ಸಮ್ಮತಿಸಿದ್ದರಿಂದ ಆತ ಒಲೆಯನ್ನು ತಳ್ಳಿಕೊಂಡು ಹೋದ. ಆತ ಒಲೆ ಹಿಂದಕ್ಕೆ ತಂದುಕೊಟ್ಟ ನಂತರ ತಯಾರಿಸಬಹುದಾದ ಖಾದ್ಯಗಳ ಗುಂಗಿನಲ್ಲಿಯೇ ಆ ದಿನ ಕಳೆದ ನಜ್ರುದ್ದೀನ್. ಮಾರನೆಯ ದಿನ ಬೆಳಗ್ಗೆ ಆ ಗೆಳೆಯ ಒಲೆಯನ್ನು ಹಿಂದಿರುಗಿಸಿದನಾದರೂ ಕಾರ್ಯನಿಮಿತ್ತ ನಜ಼ರುದ್ದೀನ್‌ ಹೊರಹೋಗಬೇಕಾಗಿದ್ದದ್ದರಿಂದ ಒಲೆಯನ್ನು ಉಪಯೋಗಿಸಲಾಗಲಿಲ್ಲ. ಸಂಜೆಯ ವೇಳೆಗೆ ಅವನು ಮನೆಗೆ ಹಿಂದಿರುಗಿದಾಗ ಅವನ ಹೆಂಡತಿ ಹಿಯ್ಯಾಳಿಸಿದಳು, “ನೀನೋ ನಿನ್ನ ಮೂರ್ಖ ಆಲೋಚನೆಗಳೋ. ಚಕ್ರವಿರುವ ಒಲೆಯಂತೆ ಚಕ್ರವಿರುವ ಒಲೆ.”

ನಜ಼ರುದ್ದೀನ್‌ ಕೇಳಿದ, “ಏಕೆ ಏನಾಯಿತು?”

ಅವಳು ವಿವರಿಸಿದಳು, “ಹೊಸ ಒಲೆಯಲ್ಲಿ ಸ್ವಾದಿಷ್ಟ ತಿನಿಸು ತಯಾರಿಸೋಣ ಅಂದುಕೊಂಡು ಮಾಂಸ ತರಲೋಸುಗ ನಾನು ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ನಮ್ಮ ಅಂಗಳದಲ್ಲಿದ್ದ ನಿನ್ನ ಚಕ್ರದ ಒಲೆಯನ್ನು ಕಳ್ಳರು ಕದ್ದೊಯ್ದಿದ್ದಾರೆ!”

೧೦೭. ನಜ಼ರುದ್ದೀನ್‌ ಗೋಧಿ ಕದ್ದದ್ದು

ಸ್ಥಳೀಯ ಗಿರಣಿಯಲ್ಲಿ ಗೋಧಿ ಹಿಟ್ಟು ಮಾಡಿಸಲೋಸುಗ ನಜ಼ರುದ್ದೀನ್‌ ಇನ್ನೂ ಅನೇಕರೊಂದಿಗೆ ತನ್ನ ಸರದಿಗಾಗಿ ಕಾಯುತ್ತಿದ್ದ. ಇಂತು ಕಾಯುತ್ತಿದ್ದಾಗ ನಜ಼ರುದ್ದೀನ್ ಇತರರ ಚೀಲದಿಂದ ಒಂದೊಂದು ಮುಷ್ಟಿಯಷ್ಟು ಗೋಧಿಯನ್ನು ತೆಗೆದು ತನ್ನ ಚೀಲಕ್ಕೆ ಸೇರಿಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಗಿರಣಿ ಮಾಲಿಕ ನಜ಼ರುದ್ದೀನ್ನಿಗೆ ಮುಖಾಮುಖಿಯಾಗಿ ಕೇಳಿದ, “ನೀನೇನು ಮಾಡುತ್ತಿರುವೆ?”

ನಜ಼ರುದ್ದೀನ್‌ ಹೇಳಿದ, “ ನನ್ನನ್ನು ನಿರ್ಲಕ್ಷಿಸು. ನಾನೊಬ್ಬ ಪೆದ್ದ, ಅರೆಬುದ್ಧಿಯವ. ನನಗೇನು ತೋಚುತ್ತದೋ ಅದನ್ನು ಮಾಡುತ್ತೇನೆ.”

ಮಾಲಿಕ ಪ್ರತಿಕ್ರಿಯಿಸಿದ, “ಓ ಹಾಗೋ? ನಿನ್ನ ಚೀಲದಿಂದ ಗೋಧಿಯನ್ನು ತೆಗೆದು ಇತರರ ಚೀಲಕ್ಕೆ ಸೇರಿಸಬೇಕೆಂಬುದಾಗಿ ನಿನಗೇಕೆ ತೋಚುತ್ತಿಲ್ಲ?”

ನಜ಼ರುದ್ದೀನ್‌ ವಿವರಿಸಿದ, “ಏಯ್‌, ನಾನೊಬ್ಬ ಅರೆಬುದ್ಧಿಯವ ಎಂಬುದಾಗಿ ಹೇಳಿದ್ದೆನೇ ವಿನಾ ಸಂಪೂರ್ಣ ಮಂದಬುದ್ಧಿಯವ ಎಂಬುದಾಗಿ ಅಲ್ಲ!”

೧೦೮. ಭೋಜನದ ಬೆಲೆ ಪಾವತಿಸುವಿಕೆ

ನಜ಼ರುದ್ದೀನ್‌ ಉಪಾಹಾರ ಗೃಹವೊಂದರಲ್ಲಿ ಭೋಜನ ಮಾಡಿ ಪಾವತಿಸಬೇಕಾಗಿದ್ದ ನಿಗದಿತ ಮೊತ್ತದ ಹಣವನ್ನು ಪಾವತಿಸದೆಯೇ ಹೊರಟ. ಮಾಲಿಕ ಓಡಿ ಬಂದು ನಜ಼ರುದ್ದೀನ್‌ನನ್ನು ಅಡ್ಡಗಟ್ಟಿ ಕೇಳಿದ, “ನೀವು ಭೋಜನ ಮಾಡಿದ್ದರ ಬಾಬ್ತು ಕೊಡಬೇಕಾದ ಹಣ ಕೊಟ್ಟಿಲ್ಲ.”

ನಜ಼ರುದ್ದೀನ್‌ ಮಾಲಿಕನನ್ನು ಕೇಳಿದ, “ನಿಜ, ನಾನು ನಿಮ್ಮನ್ನೊಂದು ಪ್ರಶ್ನೆ ಕೇಳುತ್ತೇನೆ: ಈ ಭೋಜನ ತಯಾರಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ನೀವು ಅವುಗಳ ಬೆಲೆ ಪಾವತಿಸಿದ್ದೀರೋ?”

ಮಾಲಿಕ ಉತ್ತರಿಸಿದ, “ಖಂಡಿತವಾಗಿಯೂ ಪಾವತಿಸಿದ್ದೇನೆ.”

ನಜ಼ರುದ್ದೀನ್‌ ವಿವರಿಸಿದ, “ಅಂದ ಮೇಲೆ ಈ ಆಹಾರದ ಬೆಲೆಯನ್ನು ಈಗಾಗಲೇ ಒಮ್ಮೆ ಪಾವತಿಸಿ ಆಗಿದೆ. ಪುನಃ ಎರಡನೇ ಸಲ ಅದಕ್ಕೇಕೆ ಹಣ ಪಾವತಿಸಬೇಕು?”

೧೦೯. ನಾನು ಹೋಗುವುದು ಸ್ವರ್ಗಕ್ಕೋ ನರಕಕ್ಕೋ?

ಒಂದು ದಿನ ನಜ಼ರುದ್ದೀನ್‌ನನ್ನು ರಾಜ ಕೇಳಿದ, “ಮುಲ್ಲಾ, ನಾನು ಸತ್ತ ನಂತರ ಹೋಗುವುದು ಸ್ವರ್ಗಕ್ಕೋ ನರಕಕ್ಕೋ?”

ನಜ಼ರುದ್ದೀನ್‌ ಉತ್ತರಿಸಿದ, “ನರಕಕ್ಕೆ.”

ತಕ್ಷಣವೇ ರಾಜ ಕೋಪೋದ್ರಿಕ್ತನಾಗಿ ಕೇಳಿದ, “ಅದೇಕೆ?”

ನಜ಼ರುದ್ದೀನ್‌ ವಿವರಿಸಿದ, “ನೀವು ನಿಮ್ಮ ಆಡಳಿತಾವಧಿಯಲ್ಲಿ ಗಲ್ಲಿಗೇರಿಸಿದ ಅಮಾಯಕರಿಂದ ಸ್ವರ್ಗ ತುಂಬಿತುಳುಕುತ್ತಿದೆ. ಆದ್ದರಿಂದ ಅಲ್ಲಿ ಸ್ಥಳವಿಲ್ಲ. ಆದರೂ ತಾವು ಚಿಂತೆ ಮಾಡಬೇಡಿ. ನಿಮ್ಮ ಗೌರವಾರ್ಥ ಈಗಾಗಲೇ ಅವರೊಂದು ಸ್ಥಳವನ್ನು ನರಕದಲ್ಲಿ ನಿಮಗಾಗಿ ಕಾಯ್ದಿರಿಸಿದ್ದಾರೆ!”

೧೧೦. ಮನೆಯ ಹಾದಿ

ನಜ಼ರುದ್ದೀನ್‌ನ ಊರಿನಲ್ಲಿಯೇ ವಾಸಿಸುತ್ತಿದ್ದ ಮತೀಯ ಮುಖಂಡನಿಗೆ ನಜ಼ರುದ್ದೀನ್‌ ಪ್ರಿಯನಾದವನೇನೂ ಆಗಿರಲಿಲ್ಲ.

ಆದರೂ ಒಂದು ರಾತ್ರಿ ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗಲು ಇಷ್ಟವಿಲ್ಲದಿದ್ದ ಕಾರಣ ಅವನು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ನಜ಼ರುದ್ದೀನ್‌ನೊಂದಿಗೆ ಹೋಗಲು ನಿರ್ಧರಿಸಿದ. ಇಬ್ಬರೂ ಜತೆಗೂಡಿ ನಡೆಯಲಾರಂಭಿಸಿದರು.  ಕಡಿದಾದ ಏರು ಚಡಾವನ್ನು ಕ್ರಮಿಸಬೇಕಾಗಿ ಬಂದಾಗ ಮತೀಯ ಮುಖಂಡ ಒಮ್ಮೆ ಚಡಾವನ್ನು ನೋಡಿ ಹೇಳಿದ, “ಓ ದೇವರೇ, ನನ್ನ ಜೊತೆಗಾರನ ಅಷ್ಟೇನೂ ಅನುಕರಣಯೋಗ್ಯವಲ್ಲದ ವರ್ತನೆಗಾಗಿ ಅವನನ್ನು ಶಿಕ್ಷಿಸಲೋಸುಗ ಈ ಚಡಾವು ಅತೀ ಕಡಿದಾಗಿರುವಂತೆ ನೀನು ಮಾಡಿರಬೇಕು.”

ಮಜ಼ರುದ್ದೀನ್ ಪ್ರತಿಕ್ರಿಯಿಸಿದ, “ಓ ಮಿತ್ರನೇ, ಸನ್ನಿವೇಶವನ್ನು ನೀನು ತಪ್ಪಾಗಿ ಅರ್ಥೈಸಿರುವೆ. ಇಂದು ಬೆಳಗ್ಗೆ ನಾನು ಈ ಮಾರ್ಗವಾಗಿ ಬಂದಾಗ ಇದು ಇಳಿಜಾರು ಆಗಿದ್ದು ನಡೆಯಲು ಬಲು ಸುಲಭವಾದುದಾಗಿತ್ತು. ಆದರೆ ಈಗ ನೀನು ನನ್ನ ಜೊತೆಯಲ್ಲಿ ಇರುವುದರಿಂದಲೋ ಏನೋ ಹಾದಿ ಈ ರೀತಿಯಲ್ಲಿ ಏರುಮುಖವಾಗಿದೆ!”

೧೧೧. ನಜ಼ರುದ್ದೀನ್‌ ಒಂದು ಹೊತ್ತಿನ ಊಟ ತಯಾರಿಸಲು ಸಹಾಯ ಮಾಡುವುದು

ಮಾಂಸ, ಅಕ್ಕಿ ಹಾಗು ತರಕಾರಿ ಉಪಯೋಗಿಸಿ ಒಂದು ಹೊತ್ತಿನ ಊಟ ತಯಾರಿಸಲು ಅಗತ್ಯವಾದ ಸಾಮಗ್ರಿಗಳನ್ನು ನಜ಼ರುದ್ದೀನ್‌ ಹಾಗು ಅವನ ಗೆಳೆಯ ಕೊಂಡುತಂದರು.

ಗೆಳೆಯ: “ನಜ಼ರುದ್ದೀನ್‌ ನೀನು ಅನ್ನ ಮಾಡು ನಾನು ತರಕಾರಿಗಳನ್ನು ಬೇಯಿಸುತ್ತೇನೆ.”

ನಜ಼ರುದ್ದೀನ್‌: “ನಿಜ ಹೇಳುವುದಾದರೆ ಅನ್ನ ಮಾಡುವುದು ಹೇಗೆಂಬುದರ ಕುರಿತು ನನಗೇನೂ ಗೊತ್ತಿಲ್ಲ.”

ಗೆಳೆಯ: “ಸರಿ ಹಾಗಾದರೆ, ನೀನು ತರಕಾರಿ ಕತ್ತರಿಸು ನಾನು ಅನ್ನ ಮಾಡುತ್ತೇನೆ.”

ನಜ಼ರುದ್ದೀನ್‌: “ನಿಜ ಹೇಳುವುದಾದರೆ ನನಗೆ ತರಕಾರಿ ಹೇಗೆ ಕತ್ತರಿಸಬೇಕೆಂಬುದು ತಿಳಿದಿಲ್ಲ.”

ಗೆಳೆಯ: “ಸರಿ ಹಾಗಾದರೆ, ಒಲೆಯಲ್ಲಿ ಬೇಯಿಸಲೋಸುಗ ಮಾಂಸವನ್ನು ಸಿದ್ಧಪಡಿಸು.”

ನಜ಼ರುದ್ದೀನ್‌: “ಸಿದ್ಧಪಡಿಸುವ ಇಚ್ಛೆ ಇದೆಯಾದರೂ ಹಸಿ ಮಾಂಸ ನೋಡಿದರೆ ಅದೇಕೋ ಅಸಹ್ಯವಾಗುತ್ತದೆ.”

ಗೆಳೆಯ: “ಕೊನೆಯ ಪಕ್ಷ ಒಲೆ ಉರಿಸು ಮಹಾರಾಯ.”

ನಜ಼ರುದ್ದೀನ್‌: “ಅಯ್ಯಯ್ಯೋ, ಅದು ನನ್ನಿಂದಾಗದು. ನಾನು ಬೆಂಕಿಗೆ ಹೆದರುತ್ತೇನೆ.”

ಕೆಲಸಮಾಡದೇ ಇರುವುದಕ್ಕೆ ನಜ಼ರುದ್ದೀನ್‌ ನೀಡುತ್ತಿದ್ದ ಸಬೂಬುಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಆ ಗೆಳೆಯ ತಾನೋಬ್ಬನೇ ಉಣಿಸು ತಯಾರಿಸಿದ. ಎಲ್ಲವನ್ನೂ ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿ ನಜ಼ರುದ್ದೀನ್‌ನಿಗೆ ಹೇಳಿದ, “ನಿನಗೆ ಬೇಯಿಸಿದ ಮಾಂಸ, ತರಕಾರಿ, ಅನ್ನ ತಿನ್ನಲೂ ಆಗುವುದಿಲ್ಲ ಅಲ್ಲವೇ?”

ನಜ಼ರುದ್ದೀನ್‌: “ಅದೊಂದು ಕೆಲಸ ನಾನು ಮಾಡಬಲ್ಲೆ. ಈ ಊಟಕ್ಕೆ ಬೇಕಾದ ಉಣಿಸನ್ನು ನೀನೊಬ್ಬನೇ ಬಲು ಕಷ್ಟಪಟ್ಟು ತಯಾರಿಸಿರುವೆ. ಆದ್ದರಿಂದ ಅದನ್ನು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ನಾನು ಪ್ರಯತ್ನಿಸುತ್ತೇನೆ!”

೧೧೨. ಗಿರಾಕಿಗಳು ಹಣ ವಾಪಸಾತಿ ಕೇಳುತ್ತಿದ್ದಾರೆ

ನಜ಼ರುದ್ದೀನ್‌ನಿಗೆ ತುರ್ತಾಗಿ ಸ್ವಲ್ಪ ಹಣ ಬೇಕಾಗಿತ್ತು. ಎಂದೇ ಆತ ಮರಳನ್ನು ಪುಟ್ಟಪುಟ್ಟ ಚೀಲಗಳಲ್ಲಿ ಹಾಕಿ ಅವನ್ನು ಇಲಿ ಪಾಷಾಣ ಎಂಬುದಾಗಿ ಹೇಳಿ ಮಾರಾಟ ಮಾಡಲು ನಿರ್ಧರಿಸಿದ. ಮೊದಲನೇ ದಿನ ಕೆಲವನ್ನು ಯಶಸ್ವಿಯಾಗಿ ಮಾರಾಟ ಮಾಡಿದ. ಅವನ್ನು ಕೊಂಡುಕೊಂಡ ಗಿರಾಕಿಗಳ ಪೈಕಿ ಸಿಟ್ಟಾದ ಕೆಲವರು ಮಾರನೆಯ ದಿನ ಹಣ ವಾಪಾಸು ಮಾಡುವಂತೆ ನಜ಼ರುದ್ದೀನ್‌ನನ್ನು ಕೇಳಿದರು.

ಅವರು ಹೇಳಿದರು, “ನೀನು ಕೊಟ್ಟ ಇಲಿಪಾಷಾಣವನ್ನು ನಮ್ಮ ಮನೆಗಳಲ್ಲಿ ಉಪಯೋಗಿಸಿದೆವು. ಅದು ಒಂದೇ ಒಂದು ಇಲಿಯನ್ನೂ ಕೊಲ್ಲಲಿಲ್ಲ.”

ನಜ಼ರುದ್ದೀನ್‌ ವಿಚಾರಿಸಿದ, “ಹಾಗೇನು? ಅಂದ ಹಾಗೆ ನಮ್ಮ ಮನೆಗಳಲ್ಲಿ ಅದನ್ನು ಎರಚಿದೆವು ಎಂಬುದಾಗಿ ಹೇಳುತ್ತಿರುವಿರಾ?”

ಅವರು ಪ್ರತಿಕ್ರಿಯಿಸಿದರು, “ಹೌದು.”

ನಜ಼ರುದ್ದೀನ್‌ ಹೇಳಿದ, “ಅಂದ ಮೇಲೆ ನೀವು ನಾನು ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿಲ್ಲ. ಆದ್ದರಿಂದ ನಿಮಗೆ ಸಿಕ್ಕಿದ ಫಲಿತಾಂಶಕ್ಕೆ ನಾನು ಜವಾಬ್ದಾರಿಯಲ್ಲ.”

ಅವರು ವಿಚಾರಿಸಿದರು, “ಅದನ್ನು ಹೇಗೆ ಉಪಯೋಗಿಸಬೇಕಿತ್ತು?”

“ನೀವು ಇಲಿಯ ತಲೆಯ ಮೇಲೆ ಬಲವಾಗಿ ಹೊಡೆದು ತದನಂತರ ಈ ಪುಡಿಯನ್ನು ಅದರ ಬಾಯೊಳಕ್ಕೆ ತುರುಕಬೇಕಿತ್ತು!”

೧೧೩. ಶಪಿಸಿದ್ದಕ್ಕೆ ದಂಡ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಜ಼ರುದ್ದೀನ್‌ ಮಾರ್ಗಮಧ್ಯದಲ್ಲಿ ಯಾರೋ ಇಟ್ಟಿದ್ದ ಕಲ್ಲೊಂದನ್ನು ಗಮನಿಸದೇ ಎಡವಿದ. ತಕ್ಷಣವೇ ಕೋಪದಿಂದ ಕಿರುಚಿದ, “ಸೂಳೆಮಗ.”

ದುರದೃಷ್ಟವಶಾತ್ ಅಲ್ಲಿಯೇ ನಿಂತಿದ್ದವನೊಬ್ಬ ನಜ಼ರುದ್ದೀನ್‌ ತನ್ನನ್ನು ಉದ್ದೇಶಿಸಿ ಅಂತು ಹೇಳಿದ್ದಾನೆಂದು ತಿಳಿದು ಕೋಪೋದ್ರಿಕ್ತನಾಗಿ ನಜ಼ರುದ್ದೀನ್‌ನನ್ನು ನ್ಯಾಯಾಲಯಕ್ಕೆ ಎಳೆದೊಯ್ದ.

ಪ್ರಕರಣದ ವಿವರವನ್ನು ಕೇಳಿ ತಿಳಿದ ನ್ಯಾಯಾಧೀಶರು ನಜ಼ರುದ್ದೀನ್‌ನಿಗೆ ಐದು ದಿನಾರ್‌ ದಂಡ ವಿಧಿಸಿದರು.

ನಜ್ರುದ್ದೀನ್‌ ಮರುಮಾತನಾಡದೆ ೧೦ ದಿನಾರ್‌ ನಾಣ್ಯವೊಂದನ್ನು ನ್ಯಾಯಾಧೀಶರಿಗೆ ಕೊಟ್ಟನು. ನ್ಯಾಯಾಧೀಶರು ಐದು ದಿನಾರ್‌ ಹಿಂದಿರುಗಿಸುವ ಸಲುವಾಗಿ ಚಿಲ್ಲರೆಗಾಗಿ ಹುಡುಕಾಡುತ್ತಿರುವಾಗ ನಜ಼ರುದ್ದೀನ್‌ ಅವರನ್ನು ಕೇಳಿದ, “ಹಾಗಾದರೆ ಯಾರನ್ನಾದರೂ ಈ ರೀತಿ ಬೈದರೆ ಐದು ದಿನಾರ್‌ ದಂಡ ತೆರಬೇಕಾಗುತ್ತದೆ ಅಲ್ಲವೇ?”

ನ್ಯಾಯಾಧೀಶ: “ಹೌದು.”

ತಕ್ಷಣವೇ ನಜ಼ರುದ್ದೀನ್‌ ನ್ಯಾಯಾಧೀಶರನ್ನು ಉದ್ದೇಶಿಸಿ ಹೇಳಿದ, “ಸರಿ ಹಾಗಾದರೆ ಚಿಲ್ಲರೆಯನ್ನು ನೀನೇ ಇಟ್ಟುಕೊ ಸೂಳೆಮಗನೇ!”

೧೧೪. ಮೂರು ತಿಂಗಳು

ಮದುವೆಯಾಗಿ ಮೂರು ತಿಂಗಳಾದ ನಂತರ ನಜ಼ರುದ್ದೀನ್‌ನ ಹೊಸ ಹೆಂಡತಿ ಹೆಣ್ಣು ಮಗುವಿಗೆ ಜನ್ಮವಿತ್ತಳು.

ನಜ಼ರುದ್ದೀನ್‌ ಹೆಂಡತಿಯನ್ನು ಕೇಳಿದ, “ನಾನು ಈ ವಿಷಯಗಳಲ್ಲಿ ತಜ್ಞನಲ್ಲ. ಆದ್ದರಿಂದ ಈಗ ನಾನು ಕೇಳುವ ಪ್ರಶ್ನೆಯನ್ನು ತಪ್ಪಾಗಿ ತಿಳೀಯಬೇಡ. ಸಾಮಾನ್ಯವಾಗಿ ಒಬ್ಬಳು ಹೆಂಗಸಿಗೆ ಗರ್ಭಧಾರಣೆಗೂ ಶಿಶುವಿಗೆ ಜನ್ಮವೀಯುವುದಕ್ಕೂ ನಡುವೆ ೯ ತಿಂಗಳು ಅಂತರ ಇರಬೇಕಲ್ಲವೇ?”

ಅವಳು ಉತ್ತರಿಸಿದಳು, “ನೀವು ಗಂಡಸರುಗಳೆಲ್ಲ ಒಂದೇ ತರದವರು, ಹೆಣ್ಣಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಜ್ಞಾನಿಗಳು. ಈಗ ನೀನೇ ನನಗೆ ಹೇಳು: ನಾನು ನಿನ್ನನ್ನು ಮದುವೆಯಾಗಿ ಎಷ್ಟು ಸಮಯವಾಯಿತು?”

ನಜ಼ರುದ್ದೀನ್‌: “ಮೂರು ತಿಂಗಳು.”

ಹೆಂಡತಿ: “ನೀನು ನನ್ನನ್ನು ಮದುವೆಯಾಗಿ ಎಷ್ಟು ಸಮಯವಾಯಿತು?”

ನಜ಼ರುದ್ದೀನ್‌: “ಮೂರು ತಿಂಗಳು.”

ಹೆಂಡತಿ: “ನಾನು ಗರ್ಭಿಣಿಯಾಗಿ ಎಷ್ಟು ಸಮಯವಾಯಿತು?”

ನಜ಼ರುದ್ದೀನ್‌: “ಮೂರು ತಿಂಗಳು.”

ಹೆಂಡತಿ: “ಅಲ್ಲಿಗೆ ಒಟ್ಟು ಎಷ್ಡಾಯಿತು? ೩+೩+೩ = ೯ ಅಲ್ಲವೇ? ಈಗ ನಿನಗೆ ಸಮಾಧಾನವಾಯಿತೇ?”

ನಜ಼ರುದ್ದೀನ್‌: “ಆಗಿದೆ. ಈ ವಿಷಯವನ್ನು ಚರ್ಚಿಸಲು ಕಾರಣನಾದದ್ದಕ್ಕಾಗಿ ನನ್ನನ್ನು ದಯವಿಟ್ಟು ಕ್ಷಮಿಸು.”

೧೧೫. ಹೊಸ ರಾಜನ ಪಂಥಾಹ್ವಾನ

ಪಟ್ಟಣವನ್ನು ಹೊಸದಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದವನೊಬ್ಬ ಒಂದು ದಿನ ನಜ಼ರುದ್ದೀನ್‌ನಿಗೆ ಹೇಳಿದ, “ಮುಲ್ಲಾ, ನಿನಗೊಂದು ಸವಾಲು. ನೀನು ಮಾಡಿದ ಅಪರಾಧಕ್ಕಿಂತ ಹೆಚ್ಚಾಗಿ ಅದಕ್ಕೆ ನೀನು ನೀಡುವ ವಿವರಣೆ ನನ್ನ ಮನಸ್ಸನ್ನು ನೋಯಿಸಬೇಕು. ಅಂಥದ್ದು ಏನನ್ನಾದರೂ ಮಾಡು ನೋಡೋಣ!”

ಮಾರನೆಯ ದಿನ ನಜ಼ರುದ್ದೀನ್ ‌ಆಸ್ಥಾನಕ್ಕೆ ಬಂದ ತಕ್ಷಣ ರಾಜನ ಹತ್ತಿರ ಹೋಗಿ ಅವನ ತುಟ್ಟಿಗಳಿಗೆ ಮುತ್ತು ಕೊಟ್ಟ.

ಆಶ್ಚರ್ಯಚಕಿತನಾದ ರಾಜ ಉದ್ಗರಿಸಿದ,  “ಏನಿದು?”

“ಕ್ಷಮಿಸಿ ಮಹಾಪ್ರಭು. ನಿಮ್ಮನ್ನು ನಿಮ್ಮ ಹೆಂಡತಿ ಎಂಬುದಾಗಿ ತಪ್ಪಾಗಿ ತಿಳಿದಿದ್ದರಿಂದ ಇಂತಾಯಿತು!”

೧೧೬. ಭೇಷ್‌

ಹಳ್ಳಿಯ ಮುಖ್ಯಸ್ಥನೂ ನಜ಼ರುದ್ದೀನನೂ ಬೇಟೆಯಾಡಲೋಸುಗ ಕಾಡಿಗೆ ಹೋದರು. ಎದುರಾದ ಒಂದು ಟರ್ಕಿಕೋಳಿಗೆ ಗುರಿಯಿಟ್ಟು ಮುಖ್ಯಸ್ಥ ಬಿಟ್ಟ ಬಾಣ ಗುರಿ ತಪ್ಪಿತು.

ನಜ಼ರುದ್ದೀನ್‌ ಗಟ್ಟಿಯಾಗಿ ಬೊಬ್ಬೆಹಾಕಿದ, “ಭೇಷ್!”

ಇದರಿಂದ ಕೋಪಗೊಂಡ ಮುಖ್ಯಸ್ಥ ನಜ಼ರುದ್ದೀನನತ್ತ ತಿರುಗಿ ಕೇಳಿದ, “ನನ್ನನ್ನು ತಮಾಷೆ ಮಾಡಲು ನಿನಗೆಷ್ಟು ಧೈರ್ಯ?”

“ನಾನು ನಿಮ್ಮನ್ನು ತಮಾಷೆ ಮಾಡಲಿಲ್ಲ. ನಾನು ಭೇಷ್‌ ಅಂದದ್ದು ಟರ್ಕಿಗೆ!”

೧೧೭. ನಜ಼ರುದ್ದೀನ್‌ ಹಣ್ಣುಗಳನ್ನು ಮಾರಿದ್ದು

ಬೇಸಿಗೆಯಲ್ಲಿ ವಿಪರೀತ ಸೆಕೆ ಇದ್ದ ಒಂದು ದಿನ ನಜ಼ರುದ್ದೀನ್‌ ಹಣ್ಣುಗಳನ್ನು ಮಾರುತ್ತಿದ್ದ.

ಗಿರಾಕಿ: “ಒಂದು ಮಿಣಿಕೆ ಹಣ್ಣಿನ ಬೆಲೆ ಎಷ್ಟು?”

ನಜ಼ರುದ್ದೀನ್‌: “ನಾಲ್ಕು ದಿನಾರ್‌ಗಳು.”

ಗಿರಾಕಿ: “ಮಿತಿಮೀರಿದ ಬೆಲೆ ಹೇಳುತ್ತಿರುವೆ. ಅಷ್ಟು ಹೆಚ್ಚು ಬೆಲೆ ಹೇಗೆ ಕೇಳುತ್ತಿರುವೆ? ನಿನಗೇನು ನ್ಯಾಯ ನೀತಿ ಎಂಬುದೇ ಇಲ್ಲವೇ?”

ನಜ಼ರುದ್ದೀನ್‌: “ಇಲ್ಲ. ನೀವು ಹೇಳುತ್ತಿರುವ ಯಾವ ಸರಕುಗಳೂ ನನ್ನ ಹತ್ತಿರ ದಾಸ್ತಾನು ಇಲ್ಲ!”

೧೧೮. ನಜ಼ರುದ್ದೀನ್‌ನ ರೋಗಪೀಡಿತ ಕತ್ತೆ

ತನ್ನ ರೋಗಪೀಡಿತ ಕತ್ತೆಯ ಹತ್ತಿರ ಕುಳಿತುಕೊಂಡು ನಜ಼ರುದ್ದೀನ್‌ ಗೋಳಾಡುತ್ತಿದ್ದದ್ದನ್ನು ಅವನ ಗೆಳೆಯನೊಬ್ಬ ನೋಡಿದ.

ಗೆಳೆಯ: “ನೀನೇಕೆ ಅಳುತ್ತಿರುವೆ? ನಿನ್ನ ಕತ್ತೆ ಈಗಲೂ ಜೀವಂತವಾಗಿದೆಯಲ್ಲ.”

ನಜ಼ರುದ್ದೀನ್‌: “ನಿಜ. ಆದರೂ ಒಂದು ಸಮಯ ಅದು ಸತ್ತು ಹೋದರೆ ನಾನು ಅದನ್ನು ಹೂಳಬೇಕಾಗುತ್ತದೆ, ತದನಂತರ ಹೋಗಿ ಹೊಸ ಕತ್ತೆಯೊಂದನ್ನು ಖರೀದಿಸಬೇಕಾಗುತ್ತದೆ, ತದನಂತರ ನಾನು ಹೇಳುವ ಕೆಲಸಗಳನ್ನು ಮಾಡಲು ಅದಕ್ಕೆ ತರಬೇತಿ ನೀಡಬೇಕಾಗುತ್ತದೆ. ಆಗ ನನಗೆ ಅಳಲು ಪುರಸತ್ತು ಇರುವುದೇ ಇಲ್ಲ!”

೧೧೯. ನಜ಼ರುದ್ದೀನ್‌ ತೆರಿಗೆ ಪಾವತಿಸಿದ್ದು

ಹಿಂದಿನ ತೆರಿಗೆ ಬಾಕಿ ೫೦೦೦ ದಿನಾರ್‌ ಕಟ್ಟುವಂತೆ ನಜ಼ರುದ್ದೀನ್‌ನಿಗೆ ಸ್ಥಳೀಯ ಸರ್ಕಾರ ಸೂಚನಪತ್ರ ರವಾನಿಸಿತು.

ನಜ಼ರುದ್ದೀನ್‌ ತನ್ನ ಎಲ್ಲ ಆಸ್ತಿಯನ್ನು ಮಾರಿ ಬಂದ ಎಲ್ಲ ಹಣವನ್ನು ಕಟ್ಟಿದ ನಂತರವೂ ೨೦೦೦ ದಿನಾರ್‌ ಬಾಕಿ ಉಳಿಯಿತು. ನಗರಾಧ್ಯಕ್ಷರು ನಜ಼ರುದ್ದೀನ್‌ನನ್ನು ತನ್ನ ಸಮ್ಮುಖಕ್ಕೆ ಕರೆಯಿಸಿ ಬಾಕಿ ಹಣವನ್ನು ಕೂಡಲೇ ಕಟ್ಟುವಂತೆ ತಾಕೀತು ಮಾಡಿದರು.

ನಜ಼ರುದ್ದೀನ್‌ ಹೇಳಿದ, “ನನ್ನ ಹತ್ತಿರ ಹಣ ಸ್ವಲ್ಪವೂ ಉಳಿದಿಲ್ಲ. ನನ್ನ ಹೆಂಡತಿ ಹಾಗು ನನ್ನ ಹತ್ತಿರ ಈಗ ಉಳಿದಿರುವುದು ೩೦೦೦ ದಿನಾರ್‌ಗಳು ಮಾತ್ರ. ಆ ಹಣ ನನ್ನ ಹೆಂಡತಿಯದ್ದು, ನನ್ನದಲ್ಲ.”

ನಗರಾಧ್ಯಕ್ಷರು ಪ್ರತಿಕ್ರಿಯಿಸಿದರು, “ನಮ್ಮ ಕಾನೂನಿನ ಪ್ರಕಾರ ಆಸ್ತಿ ಹಾಗು ಸಾಲ ಈ ಎರಡರಲ್ಲಿಯೂ ಪತಿ ಪತ್ನಿಯರದ್ದು ಸಮಪಾಲು. ಆದ್ದರಿಂದ ನೀನು ನಿನ್ನ ಪತ್ನಿಯ ೩೦೦೦ ದಿನಾರ್‌ಗಳನ್ನು ನಿನ್ನ ತೆರಿಗೆ ಬಾಕಿ ಪಾವತಿಸಲು ಉಪಯೋಗಿಸಬಹುದು.”

“ಹಾಗೆ ನಾನು ಮಾಡಲು ಸಾಧ್ಯವಿಲ್ಲ.”

“ಏಕೆ ಸಾಧ್ಯವಿಲ್ಲ?”

“ಏಕೆಂದರೆ ಅದು ನಾನು ಮದುವೆಯ ಸಮಯದಲ್ಲಿ ಅವಳಿಗೆ ಕೊಡಬೇಕಾಗಿದ್ದ, ಇನ್ನೂ ಕೊಡಲು ಬಾಕಿ ಇರುವ ಸ್ತ್ರೀಧನ!”

೧೨೦. ನಗರಾಧ್ಯಕ್ಷನ ಅಂತಿಮಯಾತ್ರೆ

ನಜ಼ರುದ್ದೀನ್‌ನ ಹೆಂಡತಿ: “ಬೇಗಬೇಗ ಹೊರಡಿ. ನೀವಿನ್ನೂ ಸರಿಯಾಗಿ ಉಡುಪು ಧರಿಸಿಯೇ ಇಲ್ಲವಲ್ಲ. ನಗರಾಧ್ಯಕ್ಷರ ಅಂತಿಮಯಾತ್ರೆಗೆ ನಾವು ಆಗಲೇ ಹೋಗಬೇಕಾಗಿತ್ತು.”

ನಜ಼ರುದ್ದೀನ್‌: “ಅವನ ಅಂತಿಮಯಾತ್ರೆಗೆ ಹೋಗಲು ನಾನೇಕೆ ಅವಸರಿಸಬೇಕು? ಹೇಗಿದ್ದರೂ ನನ್ನದಕ್ಕೆ ಬರುವ ತೊಂದರೆಯನ್ನು ಅವನು ಖಂಡಿತ ತೆಗೆದುಕೊಳ್ಳವುದಿಲ್ಲ!”

೧೨೧. ನಜ಼ರುದ್ದೀನ್‌ನ ತರಾತುರಿ ಪ್ರಾರ್ಥನೆ

ಒಂದು ದಿನ ನಜ಼ರುದ್ದೀನ್‌ ತುರ್ತು ಕಾರ್ಯನಿಮಿತ್ತ ಎಲ್ಲಿಗೋ ಹೋಗಬೇಕಾಗಿದ್ದದ್ದರಿಂದ ಮಸೀದಿಗೆ ಹೋಗಿ ಸಂಜೆಯ ಪ್ರಾರ್ಥನೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಿದ. ಇದನ್ನು ನೋಡಿದ ಮತೀಯ ನಾಯಕನೊಬ್ಬ ಕೋಪದಿಂದ ಹೇಳಿದ, “ಇಂತು ತರಾತುರಿಯಲ್ಲಿ ಪ್ರಾರ್ಥನೆ ಮಾಡುವುದು ಸರಿಯಲ್ಲ. ಇನ್ನೊಮ್ಮೆ ಸರಿಯಾಗಿ ಪ್ರಾರ್ಥನೆ ಮಾಡು.”

ನಜ಼ರುದ್ದೀನ್‌ ಮರು ಮಾತನಾಡದೆ ಅಂತೆಯೇ ಮಾಡಿದ. ಮತೀಯ ನಾಯಕ ಕೇಳಿದ, “ಮೊದಲು ತರಾತುರಿಯಲ್ಲಿ ಮಾಡಿದ ಪ್ರಾರ್ಥನೆಗಿಂತ ಎರಡನೆಯ ಸಲ ಮಾಡಿದ್ದನ್ನು ದೇವರು ಮೆಚ್ಚಿದ್ದಾನೆ ಎಂಬುದಾಗಿ ನಿನಗನ್ನಿಸುತ್ತಿಲ್ಲವೇ?”

ನಜ಼ರುದ್ದೀನ್‌ ಉತ್ತರಿಸಿದ, “ಇಲ್ಲ. ಏಕೆಂದರೆ ಮೊದಲನೆಯ ಸಲ ಪ್ರಾರ್ಥನೆಯನ್ನು ತರಾತುರಿಯಾಗಿ ಮಾಡಿದ್ದರೂ ಅದನ್ನು ಮಾಡಿದ್ದು ದೇವರಿಗಾಗಿ. ಎರಡನೇ ಸಲ ಮಾಡಿದ್ದು ನಿನಗಾಗಿ!”

೧೨೨. ಕ್ಷೌರ

ನಜ಼ರುದ್ದೀನ್‌ನ ದಾಡಿಯನ್ನು ನೋಡುತ್ತಾ ಒಬ್ಬ ಕೇಳಿದ, “ನೀನು ಆಗಾಗ ಕ್ಷೌರ ಮಾಡುವುದಿಲ್ಲ, ನಿಜವಷ್ಟೆ?”

ನಜ಼ರುದ್ದೀನ್‌ ಉತ್ತರಿಸಿದ, “ನೀನು ಹೇಳಿದ್ದಕ್ಕೆ ಸಂಪೂರ್ಣ ವಿರುದ್ಧವಾದದ್ದು ನನ್ನ ವರ್ತನೆ. ದಿನವೊಂದಕ್ಕೆ ಸುಮಾರಿ ೪೫ ಸಲ ಕ್ಷೌರ ಮಾಡುತ್ತೇನೆ!”

“ನೀನೊಬ್ಬ ಮನೋರೋಗಿಯಾಗಿರ ಬೇಕು ಅಥವ ವೃಕಮಾನವನಾಗಿರ ಬೇಕು!”

“ಅಲ್ಲ, ನಾನೊಬ್ಬ ಕ್ಷೌರಿಕ!”

೧೨೩. ಅತಿಯಾದ ಸೆಕೆ, ಅತಿಯಾದ ಚಳಿ

ಕೆಲವು ಮಂದಿ ಪ್ರಾಜ್ಞರು ಮಾಡುತ್ತಿದ್ದ ವಿದ್ವತ್ಪೂರ್ಣ ಚರ್ಚೆಯನ್ನು ನಜ಼ರುದ್ದೀನ್‌ ಕೇಳುತ್ತಿದ್ದ.

ಒಬ್ಬ ಹೇಳಿದ, “ಜನ ಎಷ್ಟು ವಿವೇಕಹೀನರಾಗಿರುತ್ತಾರೆ ಅಂದರೆ ಚಳಿಗಾಲದಲ್ಲಿ ಚಳಿಯ ಕುರಿತೂ ಬೇಸಿಗೆಯಲ್ಲಿ ಸೆಕೆಯ ಕುರಿತೂ ದೂರುತ್ತಿರುತ್ತಾರೆ. ಜನರನ್ನು ತೃಪ್ತಿಪಡಿಸುವಂಥದ್ದು ಯಾವದೂ ಇಲ್ಲವೇ?”

ನಜ಼ರುದ್ದೀನ್ ಪ್ರತಿಕ್ರಿಯಿಸಿದ, “ವಸಂತ ಋತು ಹಾಗು ಶರದೃತುಗಳಲ್ಲಿ?”

೧೨೪. ನಿನ್ನ ಕತ್ತೆಯನ್ನು ನಾನು ಎರವಲು ಪಡೆಯಬಹುದೇ?

ನೆರೆಮನೆಯಾತ: “ನಿನ್ನ ಕತ್ತೆಯನ್ನು ನಾನು ಎರವಲು ಪಡೆಯಬಹುದ?”

ನಜ಼ರುದ್ದೀನ್‌: “ಸಂತೋದಿಂದ ಕೊಡುತ್ತಿದ್ದೆ. ಆದರೇನು ಮಾಡಲಿ? ಅದನ್ನು ಈಗಾಗಲೇ ಬೇರೆಯವರಿಗೆ ಕೊಟ್ಟಿದ್ದೇನೆ.”

ಆ ವೇಳೆಗೆ ಸರಿಯಾಗಿ ನಜ಼ರುದ್ದೀನ್‌ನ ಮನೆಯ ಹಿತ್ತಲಿನಿಂದ ಕತ್ತೆಯ ‘ಹೀ-ಹಾ’ ಕೇಳಿಸಿತು.

ನೆರೆಮನೆಯಾತ: “ಏಯ್‌, ಈಗಷ್ಟೇ ನಿನ್ನ ಮನೆಯ ಹಿತ್ತಿಲಿನಿಂದ ಕತ್ತೆಯ ಅರಚುವಿಕೆ ಕೇಳಿಸಿತು.”

ನಜ಼ರುದ್ದೀನ್‌ : “ಇದೊಳ್ಳೇ ಕತೆಯಾಯಿತಲ್ಲ. ನನ್ನ ಮಾತಿಗಿಂತ ಕತ್ತೆಯ ಮಾತಿಗೆ ಹೆಚ್ಚು ಮಾನ್ಯತೆ ಕೊಡುವೆಯೇನು?”

೧೨೫. ಉಪಾಹಾರ ಗೃಹದಲ್ಲಿ ತಿಂದದ್ದರ ಹಣ

ನಜ಼ರುದ್ದೀನ್‌ ನ್ಯಾಯಧೀಶನ ಸ್ಥಾನದಲ್ಲಿ ಕುಳಿತು ಮೊಕದ್ದಮೆಯೊಂದರಲ್ಲಿ ವಾದ ಪ್ರತಿವಾದಗಳನ್ನು ಆಲಿಸುತ್ತಿದ್ದ.

ಫಿರ್ಯಾದಿ ಮೊದಲು ಎದ್ದುನಿಂತು ತನ್ನ ಆಪಾದನೆಯನ್ನು ನ್ಯಾಯಾಲಯಕ್ಕೆ ತಿಳಿಸಿದ, “ಪ್ರತಿವಾದಿ ನನ್ನ ಉಪಾಹಾರ ಗೃಹದಲ್ಲಿ ತಿಂದದ್ದರ ಬಾಬ್ತಿನ ಹಣ ಪಾವತಿಸಲು ನಿರಾಕರಿಸುತ್ತಿದ್ದಾನೆ.”

ಪ್ರತಿವಾದಿ ಆಪಾದನೆಯನ್ನು ಅಲ್ಲಗಳೆದ, “ಮೂರು ಬೇಯಿಸಿದ ಮೊಟ್ಟೆಗಳಿಗೆ ಆತ ೨೦೦ ದಿನಾರ್  ಕೇಳುತ್ತಿದ್ದಾನೆ. ಇದು ಅತಿಯಾಯಿತು.”

“ಇದು ನಿಜವೇ?” ನಜ಼ರುದ್ದೀನ್‌ ಫಿರ್ಯಾದಿಯನ್ನು ಕೇಳಿದ.

ಫಿರ್ಯಾದಿ ಉತ್ತರಿಸಿದ, “ಹೌದು. ಅದಕ್ಕೆ ಕಾರಣವನ್ನೂ ಅವನಿಗೆ ವಿವರಿಸಿದ್ದೆ. ನನ್ನ ಪ್ರಕಾರ ಆ ಮೊಟ್ಟೆಗಳನ್ನು ಸಂರಕ್ಷಿಸಿದ್ದಿದ್ದರೆ ಅವು ಒಡೆದು ಕೋಳಿಮರಿಗಳು ಹೊರಬರುತ್ತಿದ್ದವು. ಅವು ಬೆಳೆದು ತಾವೇ ಮೊಟ್ಟೆಗಳನ್ನು ಇಡುತ್ತಿದ್ದವು. ಅವು ಒಡೆದು ಕೋಳಿಮರಿಗಳು ಹೊರ ಬರುತ್ತಿದ್ದವು — ಇಂತು ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಿತ್ತು. ನನ್ನ ಅಂದಾಜಿನ ಪ್ರಕಾರ ಅವನು ತಿಂದ ಮೂರು ಮೊಟ್ಟೆಗಳಿಂದ ನೂರಾರು ದಿನಾರ್‌ ಮೌಲ್ಯದ ಕೋಳಿಗಳೂ ಮೊಟ್ಟೆಗಳೂ ಲಭಿಸುತ್ತಿದ್ದವು.”

“ಓ ಹಾಗೋ. ಸರಿ ಹಾಗಾದರೆ. ನಾನು ಹೋಗಿ ನನ್ನ ತೋಟದಲ್ಲಿ ಬೇಯಿಸಿದ ಬಟಾಣಿಗಳ ಬಿತ್ತನೆ ಮಾಡಿ ಬರುತ್ತೇನೆ. ಅಲ್ಲಿಯ ವರೆಗೆ ಕಾಯುತ್ತಿರಿ.”

ಫಿರ್ಯಾದಿ ಹೇಳಿದ, “ಆದರೆ ಮಹಾಸ್ವಾಮಿ, ಬೇಯಿಸಿದ ಬಟಾಣಿ ಬಿತ್ತಿ ಬೆಳೆ ತೆಗೆಯಲು ಸಾಧ್ಯವಿಲ್ಲವಲ್ಲ.”

ನಜ಼ರುದ್ದೀನ್ ತೀರ್ಪು ನೀಡಿದ, “ಅಂತಾದರೆ ಈ ಮೊಕದ್ದಮೆಯನ್ನು ವಜಾ ಮಾಡಿದ್ದೇನೆ!”

೧೨೬. ಸ್ಥಳ ನಿಶ್ಚಯ

ನಜ಼ರುದ್ದೀನ್‌ ಒಂದು ಗುಂಡಿ ತೋಡುತ್ತಿರುವುದನ್ನು ನೋಡಿದ ಪರಿಚತನೊಬ್ಬ ಕಾರಣ ಕೇಳಿದ.

“ಕಳೆದ ತಿಂಗಳು ನಾನು ಈ ಹೊಲದಲ್ಲಿ ಏನನ್ನೋ ಹೂತಿಟ್ಟಿದ್ದೆ. ಅದನ್ನು ಹುಡುಕಿ ತೆಗೆಯಲು ಬೆಳಗಿನಿಂದ ಪ್ರಯತ್ನಿಸುತ್ತಿದ್ದೇನೆ,” ಎಂಬುದಾಗಿ ಹೇಳಿದ ನಜ಼ರುದ್ದೀನ್‌.

ಆತ ಪುನಃ ಕೇಳಿದ, “ಹೂತಿಟ್ಟ ಸ್ಥಳ ನಿಶ್ಚಯಿಸಲು ಗುರುತು ಹಾಕಿ ಸೂಚಿಸುವ ಯಾವ ವ್ಯವಸ್ಥೆಯನ್ನೂ ಮಾಡಿಕೊಂಡಿರಲಿಲ್ಲವೇ?”

“ಖಂಡಿತ ಮಾಡಿಕೊಂಡಿದ್ದೆ. ಕಳೆದ ತಿಂಗಳು ಹೂಳುವಾಗ ಆ ಸ್ಥಳದ ನೇರ ಮೇಲೆ ಮೋಡವೊಂದಿತ್ತು, ಅಷ್ಟೇ ಅಲ್ಲ, ಆ ಸ್ಥಳದ ಮೇಲೆ ಅದರ ನೆರಳೂ ಬಿದ್ದಿತ್ತು – ಈಗ ಆ ಮೋಡವೂ ಗೋಚರಿಸುತ್ತಿಲ್ಲ!” ವಿವರಿಸಿದ ನಜ಼ರುದ್ದೀನ್‌.

೧೨೭. ಕತ್ತೆ ಮಾರುವವ

ನಜ಼ರುದ್ದೀನ್ ತನ್ನ ಕತ್ತೆಯನ್ನು ಮಾರಲೋಸುಗ ಅಂಗಡಿಬೀದಿಗೆ ಕರೆತಂದ. ಆ ಕತ್ತೆಯಾದರೋ ಒಂದಿನಿತೂ ಸಹಕರಿಸದೆ ತಪಾಸಣೆ ಮಾಡಬಂದ ಪ್ರತಿಯೊಬ್ಬನನ್ನೂ ಕಚ್ಚಿತು.

ಅದನ್ನು ನೋಡಿದ ಇನ್ನೊಬ್ಬ ವ್ಯಾಪಾರಿ ಕೇಳಿದ, “ಈ ರೀತಿ ವರ್ತಿಸುವ ಕತ್ತೆಯನ್ನು ಮಾರಲು ಸಾಧ್ಯ ಎಂಬ ನಂಬಿಕೆ ನಿನಗಿದೆಯೇ?”

ನಜ಼ರುದ್ದೀನ್‌ ಉತ್ತರಿಸಿದ, “ಖಂಡಿತ ಇಲ್ಲ. ಪ್ರತೀ ದಿನ ನಾನು ಅನುಭವಿಸುವ ಕಷ್ಟ ಏನೆಂಬುದು ಎಲ್ಲರಿಗೂ ತಿಳಿಯಲಿ ಎಂಬ ಕಾರಣಕ್ಕೋಸ್ಕರ ಅದನ್ನು ಇಲ್ಲಿಗೆ ತಂದಿದ್ದೇನೆ!”

೧೨೮. ಕಳೆದುಹೋದ ಕತ್ತೆ

ನಜ಼ರುದ್ದೀನ್‌ನ ಕತ್ತೆ ಕಾಣೆಯಾಯಿತು. ಆತ ದೇವರನ್ನು ಪ್ರಾರ್ಥಿಸಲಾರಂಭಿಸಿದ, “ಓ ದೇವರೇ, ನೀನೇನಾದರೂ ನನ್ನ ಕತ್ತೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ನೆರವು ನೀಡಿದರೆ ೧೦೦೦ ದಿನಾರ್‌ಗಳನ್ನು ದಾನ ಮಾಡುತ್ತೇನೆ.”

ಪ್ರಾರ್ಥಿಸಿದ ಒಂದು ಗಂಟೆಯ ನಂತರ ಕಳೆದುಹೋಗಿದ್ದ ಕತ್ತೆ ಸಿಕ್ಕಿತು. ನಜ಼ರುದ್ದೀನ್‌ ಪುನಃ ದೇವರನ್ನು ಪ್ರಾರ್ಥಿಸಲಾರಂಭಿಸಿದ, “ಓ ದೇವರೇ, ನೆರವು ನೀಡಿದ್ದಕ್ಕೆ ಧನ್ಯವಾದಗಳು. ಈಗಾಗಲೇ ದಾನ ಮಾಡುತ್ತೇನೆಂಬುದಾಗಿ ಹೇಳಿದ್ದ ೧೦೦೦ ದಿನಾರ್‌ಗಳಿಗೆ ಇನ್ನೂ ೧೦೦೦ ದಿನಾರ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಿಯೇ ದಾನ ಮಾಡುವ ಭರವಸೆ ನೀಡುತ್ತೇನೆ, ೧೦೦೦೦ ದಿನಾರ್‌ಗಳನ್ನು ಸುಲಭವಾಗಿ ಗಳಿಸಲು ನೀನು ನೆರವು ನೀಡಿದರೆ!”

೧೨೯. ಓಡುತ್ತಾ ಹಾಡುವುದು

ಒಂದು ದಿನ ನಜ಼ರುದ್ದೀನ್ ಏಕಕಾಲದಲ್ಲಿ ಹಾಡುತ್ತಲೂ ಓಡುತ್ತಲೂ ಇದ್ದ. ಅನೇಕ ಮಂದಿಯನ್ನು ಇದೇ ರೀತಿ ಹಾಡುತ್ತಾ ಓಡುತ್ತಾ ನಜ಼ರುದ್ದೀನ್‌ ದಾಟಿದಾಗ ಅವರಿಗೆ ಈ ವಿಲಕ್ಷಣ ವರ್ತನೆಯ ಕುರಿತು ಕುತೂಹಲ ಮೂಡಿತು. ಅವರ ಪೈಕಿ ಒಬ್ಬ ಓಡಿಹೋಗಿ ನಜ಼ರುದ್ದೀನನನ್ನು ಈ ಕುರಿತು ಕೇಳಲು ನಿರ್ಧರಿಸಿದ.

ಆತ ನಜ಼ರುದ್ದೀನ್ ಅನ್ನು ಸಮೀಪಿಸಿದಾಗಲೂ ನಜ಼ರುದ್ದೀನ್‌ ಅವನನ್ನು ಗಮನಿಸಿದೆ ಹಾಡುತ್ತಾ ಓಡುತ್ತಲೇ ಇದ್ದ. ಅವನನ್ನು ಸಮೀಪಿಸಿದಾತ ಅವನೊಂದಿಗೆ ಓಡುತ್ತಲೇ ಇದ್ದ. ಪಟ್ಟಣದ ಬೇರೆ ಒಂದು ಭಾಗವನ್ನು ಅವರು ತಲುಪಿದಾಗ ಇನ್ನೊಬ್ಬ ಇವರನ್ನು ನೋಡಿದ. ಕುತೂಹಲದಿಂದ ಅವನೂ ಓಡಿ ಇವರ ಜೊತೆ ಸೇರಿಕೊಂಡ.

ಒಂದು ನಿಮಿಷದ ನಂತರ ನಜ಼ರುದ್ದೀನ್ ಓಡುವುದನ್ನೂ ಹಾಡುವುದನ್ನೂ ನಿಲ್ಲಿಸಿ ಒಂದೆಡೆ ನಿಂತುಕೊಂಡ. ಅವನನ್ನು ಅನುಕರಿಸಿ ಉಳಿದ ಇಬ್ಬರೂ ನಿಂತರು. ಕೆಲವು ಕ್ಷಣಕಾಲ ಮೌನವಾಗಿದ್ದ ಇಬ್ಬರ ಪೈಕಿ ಒಬ್ಬ ಕೇಳಿದ, “ಮುಲ್ಲಾ ನಜ಼ರುದ್ದೀನ್‌ ನೀನೇಕೆ ಓಡಿಕೊಂಡು ಹಾಡುತ್ತಲಿದ್ದೆ?”

“ದೂರದಲ್ಲಿ ಇರುವವರಿಗೆ ನನ್ನ ಧ್ವನಿ ಬಲು ಇಂಪಾಗಿ ಕೇಳಿಸುತ್ತದಂತೆ. ಆ ಇಂಪಾದ ಧ್ವನಿಯನ್ನು ನನಗೂ ಕೇಳಬೇಕು ಅನ್ನಿಸಿತು!” ಕಾರಣ ತಿಳಿಸಿದ ನಜ಼ರುದ್ದೀನ್‌.

೧೩೦. ಬಟ್ಟೆ ಖರೀದಿಸುವುದು

ಬಟ್ಟೆ ಖರೀದಿಸಲೋಸುಗ ನಜ಼ರುದ್ದೀನ್‌ ಅಂಗಡಿಗೆ ಹೋದ. ಒಂದು ಮೇಲಂಗಿಯನ್ನು ಹಾಕಿ ನೋಡಿ ಬಿಚ್ಚಿ ಅಂಗಡಿಯವನಿಗೆ ಅದನ್ನು ಕೊಟ್ಟು ಹೇಳಿದ, “ವಾಸ್ತವವಾಗಿ ನನಗೆ ಅದರ ಆವಶ್ಯಕತೆಯೇ ಇಲ್ಲ. ಅದನ್ನು ಹಿಂದಕ್ಕೆ ತೆಗೆದುಕೊಂಡು ಅದಕ್ಕೆ ಬದಲಾಗಿ ಒಂದು ಷರಾಯಿಯನ್ನು ಕೊಡು.”

ಅಂಗಡಿಯವ ಅಂತೆಯೇ ಮಾಡಿದ. ನಜ಼ರುದ್ದೀನ್‌ ಆ ಷರಾಯಿಯನ್ನು ಧರಿಸಿ ಅಂಗಡಿಯಿಂದ ಹೊರನಡೆಯಲಾರಂಭಿಸಿದ. ಅಂಗಡಿಯವ ಅವನನ್ನು ತಡೆದು ಹೇಳಿದ, “ಸ್ವಾಮೀ ತಾವು ಆ ಷರಾಯಿಯ ಬಾಬ್ತು ನನಗೆ ಹಣ ಕೊಡುವುದನ್ನು ಮರೆತಿದ್ದೀರಿ.”

ನಜ಼ರುದ್ದೀನ್ ಉತ್ತರಿಸಿದ, “ಮೇಲಂಗಿಯನ್ನು ಕೊಟ್ಟು ಅದಕ್ಕೆ ಬದಲಾಗಿ ಈ ಷರಾಯಿಯನ್ನು ತೆಗೆದುಕೊಂಡೆನಲ್ಲವೇ?”

ಅಂಗಡಿಯವ ಪ್ರತಿಕ್ರಿಯಿಸಿದ, “ನೀವು ಆ ಮೇಲಂಗಿಗೂ ಹಣ ಕೊಟ್ಟಿರಲಿಲ್ಲ ಸ್ವಾಮೀ.”

“ಅದು ಸ್ವಾಭಾವಿಕ, ಕೊಂಡುಕೊಳ್ಳದೇ ಇದ್ದ ವಸ್ತುವಿಗೇಕೆ ನಾನು ಹಣ ಕೊಡಬೇಕು?” ಮರುಪ್ರಶ್ನೆ ಹಾಕಿದ ನಜ಼ರುದ್ದೀನ್‌.

೧೩೧. ನಜ಼ರುದ್ದೀನ್‌ನ ಚೆರಿಹಣ್ಣಿನ ತರ್ಕ

ಪೇಟೆಯಲ್ಲಿ ಮಾರುವ ಉದ್ದೇಶದಿಂದ ಒಂದು ಚೀಲ ತುಂಬ ಚೆರಿಹಣ್ಣನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ನಜರುದ್ದೀನ್ ಪಟ್ಟಣಕ್ಕೆ ಹೋಗುತ್ತಿದ್ದ. ದಾರಿಯಲ್ಲಿ ಒಂದು ಡಜನ್‌ ಮಕ್ಕಳು ಅವನನ್ನೂ ಅವನು ಒಯ್ಯುತ್ತಿದ್ದ ಚೆರಿಹಣ್ಣುಗಳನ್ನೂ ನೋಡಿದರು. ಕೆಲವು ಚೆರಿಹಣ್ಣುಗಳು ತಿನ್ನಲು ಸಿಕ್ಕುತ್ತವೆಂಬ ಸಂತೋಷದಿಂದ ಅವರು ನಜ಼ರುದ್ದೀನ್‌ನ ಸುತ್ತಲೂ ಹಾಡುತ್ತಾ ಕುಣಿಯತೊಡಗಿದರು.

ಅವರು ಕೇಳಿದರು, “ಮುಲ್ಲಾ, ನಮಗೆ ಕೆಲವು ಹಣ್ಣುಗಳನ್ನು ಕೊಡು.”

ನಜ಼ರುದ್ದೀನ್‌ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ. ಅವನಿಗೆ ಮಕ್ಕಳ ಮೇಲೆ ಬಲು ಪ್ರೀತಿ ಇತ್ತು, ಎಂದೇ ಅವರಿಗೆ ನಿರಾಸೆ ಉಂಟುಮಾಡಲು ಅವನಿಗೆ ಇಷ್ಟವಿರಲಿಲ್ಲ; ಹಣ್ಣುಗಳನ್ನು ಅವರಿಗೆ ಕೊಟ್ಟು ಮಾರಿದರೆ ಬರಬಹುದಾದ ಲಾಭವನ್ನು ಕಳೆದುಕೊಳ್ಳಲೂ ಅವನಿಗೆ ಇಷ್ಟವಿರಲಿಲ್ಲ.

ಸ್ವಲ್ಪ ಕಾಲ ಆ ಕುರಿತು ಆಲೋಚಿಸಿದ ನಂತರ ಚೀಲದಿಂದ ಆರು ಹಣ್ಣುಗಳನ್ನು ತೆಗೆದು ಅವರಿಗೆ ಕೊಟ್ಟನು.

“ಇನ್ನೂ ಕೆಲವು ಹಣ್ಣುಗಳನ್ನು ಕೊಡುವೆಯಾ?” ಆಸೆಯಿಂದ ಕೇಳಿದರು ಮಕ್ಕಳು.

ನಜ಼ರುದ್ದೀನ್‌ ಹೇಳಿದ, “ಇಲ್ಲಿ ಕೇಳಿ ಮಕ್ಕಳೇ. ಈ ಚೀಲದಲ್ಲಿ ಇರುವ ಎಲ್ಲ ಚೆರಿಹಣ್ಣುಗಳ ರುಚಿಯೂ ಒಂದೇ ಆಗಿದೆ. ನೀವು ಪ್ರತಿಯೊಬ್ಬರೂ ಅರ್ಧ ಹಣ್ಣು ತಿಂದರೂ ಐವತ್ತು ಹಣ್ಣುಗಳನ್ನು ತಿಂದರೂ ರುಚಿಯಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ!”

೧೩೨. ನಜ಼ರುದ್ದೀನ್‌ನ ಆವಿಷ್ಕಾರ

ತನ್ನ ಕೋಣೆಯಲ್ಲಿ ವರ್ಣಚಿತ್ರವೊಂದನ್ನು ಗೋಡೆಯಲ್ಲಿ ತೂಗುಹಾಕುವ ಸಿದ್ಧತೆ ಮಾಡುತ್ತಿದ್ದ ನಜ಼ರುದ್ದೀನ್‌. ಗೋಡೆಗೆ ಮೊಳೆ ಹೊಡೆಯುವಾಗ ಬಲು ಜೋರಾಗಿ ಹೊಡೆದದ್ದರ ಪರಿಣಾಮವಾಗಿ ಗೋಡೆಯಲ್ಲಿ ದೊಡ್ಡ ತೂತು ಆಯಿತು. ಆ ತೂತಿನ ಮೂಲಕ ನೋಡಿದಾಗ ಇನ್ನೊಂದು ಪಾರ್ಶ್ವದಲ್ಲಿ ಆಡುಗಳನ್ನು ಕಂಡವು. ತಾನು ತೂತಿನ ಮೂಲಕ ನೆರೆಮನೆಯವನ ಅಂಗಳವನ್ನು ನೋಡುತ್ತಿದ್ದೇನೆ ಎಂಬುದು ಅವನಿಗೆ ತಿಳಿಯಲೇ ಇಲ್ಲ.

ನಜ಼ರುದ್ದೀನ್‌ ಹೆಂಡತಿಯ ಹತ್ತಿರಕ್ಕೆ ಓಡಿಹೋಗಿ ಆಶ್ಚರ್ಯ ಸೂಚಕ ಧ್ವನಿಯಲ್ಲಿ ಹೇಳಿದ. “ನಾನೀಗ ಹೇಳುವುದನ್ನು ಬಹುಶಃ ನೀನು ನಂಬುವುದಿಲ್ಲ! ಅದೇನೆಂದು ಊಹಿಸಬಲ್ಲೆಯಾ?”

“ಏನದು?”

“ನಾನೊಂದು ವರ್ಣಚಿತ್ರವನ್ನು ನನ್ನ ಕೋಣೆಯಲ್ಲಿ ಗೋಡೆಗೆ ನೇತುಹಾಕುತ್ತಿದ್ದೆ. ಆಗ ——– ನೀನಿದನ್ನು ನಂಬುವುದಿಲ್ಲ!”

“ಏನನ್ನು?”

“ನನ್ನ ಸುತ್ತಿಗೆ ಗೋಡೆಯ ಮೂಲಕ ಹೊರಟುಹೋಯಿತು. ಆಗ ——– ನೀನಿದನ್ನು ನಂಬುವುದಿಲ್ಲ!”

“ಏನನ್ನು?”

“ನಾನು ಆಕಸ್ಮಿಕವಾಗಿ ನನ್ನ ಕೋಣೆಯಲ್ಲಿಯೇ ಇರುವ ಇನ್ನೊಂದು ವಿಶ್ವವನ್ನು, ಆಡುಗಳ ವಿಶ್ವವನ್ನು, ಆವಿಷ್ಕರಿಸಿದೆ!”

೧೩೩. ಮೋಸಹೋಗುವಿಕೆ

ಸ್ಥಳೀಯನೊಬ್ಬ ತನಗೆ ಮೋಸಮಾಡಲು ಯಾರಿಗೂ ಸಾಧ್ಯವಿಲ್ಲ ಎಂಬುದಾಗಿ ಪದೇಪದೇ ಘೋಷಿಸುತ್ತಿದ್ದ. ಒಮ್ಮೆ ಇದನ್ನು ಕೇಳಿದ ನಜ಼ರುದ್ದೀನ್‌ ಹೇಳಿದ, “ಇಲ್ಲಿಯೇ ಸ್ವಲ್ಪ ಕಾಲ ಕಾಯುತ್ತಿರಿ. ನಾನು ಮನೆಗೆ ಹೋಗಿ ನಿಮಗೆ ಮೋಸಮಾಡುವ ಒಂದು ವಿಧಾನವನ್ನು ರೂಪಿಸಿಕೊಂಡು ಬರುತ್ತೇನೆ.”

ಆ ಸ್ಥಳೀಯ ಕಾಯುತ್ತಿದ್ದ, ಕಾಯುತ್ತಿದ್ದ, ಕಾಯುತ್ತಲೇ ಇದ್ದ. ಅವನು ಕಾಯುತ್ತಿದ್ದದ್ದನ್ನು ಗಮನಿಸಿದ ಅಲ್ಲಿನ ವ್ಯಾಪಾರಿಯೊಬ್ಬ ಕೇಳಿದ, “ನೀವು ಇಲ್ಲಿ ಯಾರಿಗಾಗಿ ಕಾಯುತ್ತಿದ್ದೀರಿ?”

“ನನಗೆ ಮೋಸಮಾಡಲು ನಜ಼ರುದ್ದೀನ್‌ನಿಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ತಿಳಿಯಲೋಸುಗ ನಾನು ಒಂದು ಗಂಟೆಯಿಂದ ಇಲ್ಲಿ ಕಾಯುತ್ತಿದ್ದೇನೆ. ಇಲ್ಲಿಯೇ ಸ್ವಲ್ಪ ಕಾಲ ಕಾಯುತ್ತಿರಿ, ಮನೆಗೆ ಹೋಗಿ ನಿಮಗೆ ಮೋಸಮಾಡುವ ಒಂದು ವಿಧಾನವನ್ನು ರೂಪಿಸಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿ ಹೋದವ ಇಷ್ಟು ಹೊತ್ತಾದರೂ ಬರಲೇ ಇಲ್ಲ.”

“ಓ ಸರಿ ಹಾಗಾದರೆ. ಇನ್ನು ನೀವು ಕಾಯುವ ಅಗತ್ಯವಿಲ್ಲ. ಏಕೆಂದರೆ ನೀವು ಈಗಾಗಲೇ ಮೋಸಹೋಗಿದ್ದೀರಿ!”

೧೩೪. ಬಲ ಪರೀಕ್ಷೆ

ಒಂದು ದಿನ ನಜ಼ರುದ್ದೀನನೂ ಕೆಲ ಮಂದಿ ಸ್ಥಳೀಯರೂ ಪಟ್ಟಣದ ಮುಖ್ಯಚೌಕದಲ್ಲಿ ಹರಟುತ್ತಿದ್ದರು. ಚರ್ಚೆ ಬಲು ಬೇಗನೆ ಚಿಕ್ಕ ವಯಸ್ಸಿನವರಾಗಿದ್ದಾಗಕ್ಕಿಂತ ತಾವೆಷ್ಟು ಬದಲಾಗಿದ್ದೇವೆ ಎಂಬ ವಿಷಯಕ್ಕೆ ತಿರುಗಿತು. ಕೆಲವರು ಈಗ ತಾವೆಷ್ಟು ವಿವೇಕಿಗಳಾಗಿದ್ದೇವೆ ಎಂಬುದನ್ನು, ಕೆಲವರು ತಾವೆಷ್ಟು ನಿಶ್ಶಕ್ತರಾಗಿದ್ದೇವೆ ಎಂಬುದನ್ನು ವಿವರಿಸಿದರು.

ನಜ಼ರುದ್ದೀನ್‌ ಹೇಳಿದ, “ಈಗ ನಾನು ಅಂದಿಗಿಂತ ಹೆಚ್ಚು ವಿವೇಕಿಯಾಗಿರುವುದಷ್ಟೇ ಅಲ್ಲದೆ ಅಂದಿನಷ್ಟೇ ಬಲಶಾಲಿಯಾಗಿ ಉಳಿದಿದ್ದೇನೆ.”

ಅಲ್ಲಿದ್ದವರ ಪೈಕಿ ಒಬ್ಬ ಕೇಳಿದ, “ನಿಜವಾಗಿಯೂ?”

“ನಿಜವಾಗಿಯೂ ಹೌದು. ನಾನಿದನ್ನು ಪರೀಕ್ಷಿಸಿದ್ದೇನೆ.”

“ಪರೀಕ್ಷಿಸಿದ್ದು ಹೇಗೆ?”

“ನನ್ನ ಮನೆಯ ಪಕ್ಕ ಒಂದು ಬಂಡೆಕಲ್ಲು ಇದೆಯಲ್ಲವೇ? ಚಿಕ್ಕ ವಯಸ್ಸಿನವನಾಗಿದ್ದಾಗ ಅದನ್ನು ಎತ್ತಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಈಗಲೂ ನನಗೆ ಸಾಧ್ಯವಾಗುತ್ತಿಲ್ಲ!”

೧೩೫. ಭಾರ ಎತ್ತುವ ಸ್ಪರ್ಧೆ

ಒಂದು ದಿನ ನಜ಼ರುದ್ದೀನನೂ ಕೆಲ ಮಂದಿ ಸ್ಥಳೀಯರೂ ಪಟ್ಟಣದ ಮುಖ್ಯಚೌಕದಲ್ಲಿ ಹರಟುತ್ತಿದ್ದರು. ಆ ಹರಟೆ ಬಲು ಬೇಗನೆ ಬಡಾಯಿಕೊಚ್ಚಿಕೊಳ್ಳುವ ಸ್ಪರ್ಧೆಯಾಗಿ ಮಾರ್ಪಟ್ಟಿತು. ಒಬ್ಬರಾದ ನಂತರ ಒಬ್ಬರು ತಮ್ಮ ತಮ್ಮ ಅದ್ಭುತ ಸಾಧನೆಗಳನ್ನು ವರ್ಣಿಸಿದರು. ಪ್ರತೀ ಕತೆಯೂ ಹಿಂದಿನದ್ದಕ್ಕಿಂತ ಬಹಳ ವಿಲಕ್ಷಣವಾಗಿರುತ್ತಿತ್ತು.

‌ಇತರ ಎಲ್ಲರ ಮಾತುಗಳನ್ನೂ ಕೇಳಿದ ನಂತರ ನಜ಼ರುದ್ದೀನ್ ಕೊನೆಯಲ್ಲಿ ಎದ್ದು ನಿಂತು ಹೇಳಿದ, “ನಾನು ಹೇಳುವ ವಿದ್ಯಮಾನ ಜರಗಿ ಬಹಳ ಕಾಲ ಕಳೆದಿದೆ. ಈ ಪಟ್ಟಣದ ಎಲ್ಲ ಬಲಾಢ್ಯರು ತಮ್ಮ ಪೈಕಿ ಯಾರು ಅತ್ಯಂತ ಬಲಶಾಲಿ ಎಂಬುದನ್ನು ಪತ್ತೆಹಚ್ಚಲು ನಿರ್ಧರಿಸಿದರು. ದಿನಸಿ ಅಂಗಡಿಯ ಸಮೀಪದಲ್ಲಿ ಭಾರಿ ತೂಕದ ಕಲ್ಲಿನ ಕಂಬವೊಂದು ಬಿದ್ದುಕೊಂಡಿತ್ತು. ಬಲಾಢ್ಯರ ಪೈಕಿ ಯಾರು ಅದನ್ನು ಎತ್ತಬಲ್ಲರು ಎಂಬುದನ್ನು ಅವರು ತಿಳಿಯಲಿಚ್ಛಿಸಿದರು. ಒಬ್ಬರಾದ ನಂತರ ಒಬ್ಬರಂತೆ ಅದನ್ನು ಎತ್ತಲು ಪ್ರಯತ್ನಿಸಿದರು. ಯಾರಿಂದಲೂ ಅದನ್ನು ಎತ್ತಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಕಟ್ಟುಮಸ್ತಾದ ಬೃಹತ್‌ದೇಹಿಗಳಾಗಿದ್ದರು ಎಂಬುದು ನಿಮ್ಮ ಗಮನದಲ್ಲಿರಲಿ. ಎಲ್ಲರೂ ಸೋಲೊಪ್ಪಿಕೊಂಡ ನಂತರ ನಾನು ಕಂಬದ ಹತ್ತಿರ ಹೋದೆ. ಕೈಗಳನ್ನು ಜೋರಾಗಿ ಉಜ್ಜಿಕೊಂಡೆ. ಕಂಬವನ್ನು ಎರಡೂ ಕೈಗಳಿಂದ ಹಿಡಿದುಕೊಂಡೆ. ಎಲ್ಲರೂ ಏಕಾಗ್ರತೆಯಿಂದ ನನ್ನನ್ನೇ ನೋಡುತ್ತಿದ್ದರು.” ಇಷ್ಟು ಹೇಳಿ ನಜ಼ರುದ್ದೀನ್‌ ನಿಟ್ಟುಸಿರು ಬಿಡುತ್ತಾ ಎಲ್ಲರನ್ನೂ ಒಮ್ಮೆ ನೋಡಿದ.

“ಹೇಳು, ಹೇಳು. ಮುಂದೇನಾಯಿತು ಬೇಗ ಹೇಳು,” ಎಲ್ಲರೂ ಕುತೂಹಲದಿಂದ ಕಿರುಚಿದರು.

“ಅದನ್ನು ಎತ್ತಲು ನನ್ನಿಂದಲೂ ಸಾಧ್ಯವಿಲ್ಲ ಎಂಬುದು ಆಗ ತಿಳಿಯಿತು!”

೧೩೬. ಟೀಕೆಯಿಂದ ತಪ್ಪಿಸಿಕೊಳ್ಳುವುದು

ನಜ಼ರುದ್ದೀನನೂ ಅವನ ಮಗನೂ ತಮ್ಮ ಕತ್ತೆಯೊಂದಿಗೆ ಪಯಣಿಸುತ್ತಿದ್ದರು. ನಜ಼ರುದ್ದೀನ್‌ ತಾನಾಗಿಯೇ ಇಷ್ಟಪಟ್ಟು ನಡೆಯುತ್ತಿದ್ದ, ಅವನ ಮಗ ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದ.

ಅವರು ಹೋಗುತ್ತಿದ್ದ ಮಾರ್ಗದ ಬದಿಯಲ್ಲಿ ನಿಂತಿದ್ದ ಜನರ ಪುಟ್ಟಗುಂಪಿನಲ್ಲಿದ್ದವರ ಪೈಕಿ ಒಬ್ಬ ಹೀಯಾಳಿಸಿದ, “ನೋಡಿ, ನೋಡಿ. ಸ್ವಾರ್ಥಿ ಮಗ ತನ್ನ ತಂದೆಯನ್ನು ನಡೆಯಲು ಹೇಳಿ ತಾನು ಕತ್ತೆಯ ಮೇಲೆ ಸವಾರಿ ಮಾಡುತ್ತಿದ್ದಾನೆ. ಮಗ ತಂದೆಗೆ ತೋರಿಸಬೇಕಾದ ಗೌರವ ಒಂದಿನಿತೂ ತೋರುತ್ತಿಲ್ಲ. ಇವನನ್ನು ಅತಿ ಮುದ್ದಿನಿಂದ ಬೆಳೆಸಿರಬೇಕು, ಎಂದೇ ಅಸಹನೀಯ ವರ್ತನೆಯನ್ನು ಮೈಗೂಡಿಸಿಕೊಂಡಿದ್ದಾನೆ.”

ಇದನ್ನು ಕೇಳಿದ ನಜ಼ರುದ್ದೀನ್‌ನಿಗೂ ಅವನ ಮಗನಿಗೂ ಬಲು ಮುಜುಗರವಾಯಿತು. ಕೂಡಲೇ ಅವರು ತಮ್ಮ ಸ್ಥಾನಗಳನ್ನು ಅದಲುಬದಲು ಮಾಡಿಕೊಂಡರು – ಅರ್ಥಾತ್‌ ನಜ಼ರುದ್ದೀನ್‌ ಕತ್ತೆಯ ಮೇಲೆ ಸವಾರಿ ಮಾಡಲೂ ಅವನ ಮಗ ಪಕ್ಕದಲ್ಲಿ ನಡೆಯಲೂ ಆರಂಭಿಸಿದರು.

ಸ್ವಲ್ಪ ದೂರ ಹೋದ ನಂತರ ದಾರಿಯಲ್ಲಿ ಸಿಕ್ಕಿದ ಇನ್ನೊಂದು ಗುಂಪಿನವನೊಬ್ಬ ಮೂದಲಿಸಿದ, “ಎಂಥ ಅನ್ಯಾಯ, ಪಾಪ ಅಷ್ಟು ಚಿಕ್ಕ ಪ್ರಾಯದ ಮಗ ನಡೆಯುತ್ತಿದ್ದಾನೆ ತಂದೆಯಾದರೋ ಆರಾಮವಾಗಿ ಕತ್ತೆ ಸವಾರಿ ಮಾಡುತ್ತಿದ್ದಾನೆ! ನಿಜವಾಗಿಯೂ ನಿರ್ಲಜ್ಜ ಹೃದಯಹೀನ ತಂದೆ ಆತ!”

ಇದನ್ನು ಕೇಳಿ ಅಸಂತುಷ್ಟನಾದ ನಜ಼ರುದ್ದೀನ್‌ ಮುಂದೆ ಅವಹೇಳನಕ್ಕೀಡಾಗ ಬಾರದೆಂದು ನಿಶ್ಚಯಿಸಿ ಇಬ್ಬರೂ ಕತ್ತೆಯ ಮೇಲೆಯೇ ಸವಾರಿ ಮಾಡಿಕೊಂಡು ಹೋಗುವುದೆಂದು ತೀರ್ಮಾನಿಸಿದ.

ಇಂತು ಇಬ್ಬರೂ ಕತ್ತೆಸವಾರಿ ಮಾಡಿಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಎದುರಾದ ಇನ್ನೊಂದು ಗುಂಪಿನವನೊಬ್ಬ ಉದ್ಗರಿಸಿದ, “ನೋಡಿ, ನೋಡಿ. ಅಪ್ಪ ಮಗ ಇಬ್ಬರೂ ಎಷ್ಟು ಕ್ರೂರಿಗಳು ಎಂಬುದನ್ನು. ಆ ಬಡಪಾಯಿ ಕತ್ತೆ ಇಬ್ಬರ ಭಾರವನ್ನೂ ಹೊರುವಂತೆ ಮಾಡಿದ್ದಾರೆ. ಇಂಥ ಹೇಯ ಕೃತ್ಯವೆಸಗಿದ್ದಕ್ಕಾಗಿ ಇಬ್ಬರನ್ನೂ ಜೈಲಿಗೆ ಹಾಕಬೇಕು!”

ಇದನ್ನು ಕೇಳಿದ ನಜ಼ರುದ್ದೀನ್‌ ಮಗನಿಗೆ ಹೇಳಿದ, “ಇಂಥ ಅಪಹಾಸ್ಯದ ಮಾತುಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಾವಿಬ್ಬರೂ ನಡೆಯಬೇಕು.” ಇದಕ್ಕೆ ಮಗನೂ ಸಮ್ಮತಿಸಿದ. ಇಬ್ಬರೂ ಕತ್ತೆಯ ಪಕ್ಕದಲ್ಲಿ ನಡೆಯಲಾರಂಭಿಸಿದರು.

ಇಂತು ಸ್ವಲ್ಪ ದೂರ ಹೋದ ನಂತರ ಎದುರಾದ ಗುಂಪಿನವನೊಬ್ಬ ಗೇಲಿ ಮಾಡಿದ, “ಹ್ಹ ಹ್ಹ ಹ್ಹ ಎಂಥ ಮೂರ್ಖರಿವರು. ಕತ್ತೆ ಇದ್ದಾಗ್ಯೂ ಒಬ್ಬರಾದರೂ ಸವಾರಿ ಮಾಡುವುದು ಬಿಟ್ಟು ಈ ಸುಡುಬಿಸಿಲಿನಲ್ಲಿ ಇಬ್ಬರೂ ನಡೆಯುತ್ತಿದ್ದಾರಲ್ಲಾ! ನಿಜವಾಗಿಯೂ ಬಲು ಮಂದಬುದ್ಧಿಯವರಾಗಿರಬೇಕು!”

೧೩೭ ಬಿದ್ದದ್ದು ನನ್ನ ಬಟ್ಟೆಗಳು

ನಜ಼ರುದ್ದೀನ್‌ನ ಹೆಂಡತಿಗೆ ಪಕ್ಕದ ಕೋಣೆಯಿಂದ ಜೋರಾದ ಸಪ್ಪಳ ಕೇಳಿಸಿತು. ಅದೇನೆಂದು ಪರಿಶೀಲಿಸಲು ಅವಳು ಅಲ್ಲಿಗೆ ಹೋದಳು. ನಜ಼ರುದ್ದೀನ್‌ ನೆಲದಲ್ಲಿ ಕುಳಿತಿದ್ದ.

ಹೆಂಡತಿ ಕೇಳಿದಳು, “ಏನದು ಅಷ್ಟು ಜೋರಾಗಿ ಸಪ್ಪಳ ಮಾಡಿದ್ದು?”

“ಅದೋ. ಅದು ನನ್ನ ಬಟ್ಟೆಯಿಂದಾದದ್ದು. ಬಟ್ಟೆಗಳು ಕೆಳಕ್ಕೆ ಬಿದ್ದವು,” ಉತ್ತರಿಸಿದ ನಜ಼ರುದ್ದೀನ್‌.

ಅವಳು ಕೇಳಿದಳು, “ಬಟ್ಟೆಗಳು ಕೆಳಕ್ಕೆ ಬಿದ್ದರೆ ಅಷ್ಟು ಜೋರಾಗಿ ಸಪ್ಪಳವಾಗುತ್ತದೆಯೇ?”

“ಬಟ್ಟೆಯೊಳಗೆ ನಾನಿದ್ದೆ,” ಉತ್ತರಿಸಿದ ನಜ಼ರುದ್ದೀನ್‌.

೧೩೮. ಬಾಗಿಲು

ಗೆಳೆಯ: “ಮುಲ್ಲಾ, ಸದಾ ನಿನ್ನೊಡನೆ ಒಂದು ಬಾಗಿಲನ್ನು ಕೊಂಡೊಯ್ಯುವಿಯಲ್ಲಾ, ಏಕೆ?”

ನಜ಼ರುದ್ದೀನ್‌: “ಓ ಅದೋ. ಅದೊಂದು ರಕ್ಷಣೋಪಾಯ. ಈ ಬಾಗಿಲಿನ ಮೂಲಕ ಮಾತ್ರ ನನ್ನ ಮನೆಯೊಳಕ್ಕೆ ಹೋಗಲು ಸಾಧ್ಯ. ನಾನು ಮನೆಯಲ್ಲಿ ಇಲ್ಲದಾಗ ಯಾರೂ ಮನೆಯೊಳಕ್ಕೆ ಹೋಗದಿರಲಿ ಎಂಬುದಕ್ಕಾಗಿ ಈ ಮುನ್ನೆಚರಿಕೆಯ ಕ್ರಮ!”

೧೩೯. ತಿನ್ನಲು ಸರಿಯಾದ ಸಮಯ

ಒಬ್ಬ ವ್ಯಕ್ತಿ: “ನಜ಼ರುದ್ದೀನ್‌, ಆಹಾರ ತಿನ್ನಲು ಸರಿಯಾದ ಸಮಯ ಯಾವುದು?”

ನಜ಼ರುದ್ದೀನ್‌: “ಅದೋ. ಶ್ರೀಮಂತರಿಗಾದರೆ ಎಲ್ಲ ಸಮಯವೂ ಒಳ್ಳೆಯ ಸಮಯವೇ. ಬಡವರಿಗಾದರೆ ಅಹಾರ ಸಿಕ್ಕಿದ ಸಮಯವೇ ಸರಿಯಾದ ಸಮಯ!”

೧೪೦. ಇದು ಚೆಂದದ ಮನೆಯೇ?

ನಜ಼ರುದ್ದೀನ್‌ ತಾನು ಕೊಂಡುಕೊಳ್ಳಬೇಕೆಂದಿದ್ದ ಮನೆಯನ್ನು ಎಚ್ಚರದಿಂದ ಪರಿಶೀಲಿಸುತ್ತಿದ್ದ. ಅದನ್ನು ಗಮನಿಸಿದ ಆ ಮನೆಯ ನೆರೆಮಮನೆಯ ನಿವಾಸಿ ಅಲ್ಲಿಗೆ ಬಂದು ಅದು ಎಷ್ಟು ಚೆಂದದ ಮನೆ ಎಂಬುದನ್ನು ವರ್ಣಿಸಲಾರಂಭಿಸಿದ.

ಅವನು ಮಾತು ನಿಲ್ಲಿಸಿದ ನಂತರ ನಜ಼ರುದ್ದೀನ್‌ ಹೇಳಿದ, “ನೀನು ಹೇಳುತ್ತಿರುವುದು ಬಹುಮಟ್ಟಿಗೆ ನಿಜವಿರಬಹುದಾದರೂ ನನಗೊಂದು ನ್ಯೂನತೆ ಕಾಣಿಸುತ್ತಿದೆ.”

“ಏನದು?”

“ಈ ಮನೆಯಲ್ಲಿ ವಾಸಿಸಲಿಚ್ಛಿಸುವವರ ವಿಷಯದಲ್ಲಿ ಅನಾವಶ್ಯಕವಾಗಿ ಮೂಗುತೂರಿಸುವ ನೆರೆಯವನು!”

೧೪೧. ಹುಲಿ ಪುಡಿ

ತನ್ನ ಮನೆಯ ಸುತ್ತಲಿನ ಜಾಗದಲ್ಲಿ ರೊಟ್ಟಿಯ ಚೂರುಗಳನ್ನು ಎರಚುವುದರಲ್ಲಿ ನಜ಼ರುದ್ದೀನ್ ಮಗ್ನನಾಗಿದ್ದದನ್ನು

ನೋಡಿದ ನೆರೆಮನೆಯಾತ ಕೇಳಿದ, “ನಜ಼ರುದ್ದೀನ್‌, ಏನು ಮಾಡುತ್ತಿರುವೆ?”

ನಜ಼ರುದ್ದೀನ್‌ ಉತ್ತರಿಸಿದ, “ಹುಲಿಗಳು ಇಲ್ಲಿಗೆ ಬರದಂತೆ ಮಾಡಲಿಚ್ಛಿಸುತ್ತೇನೆ.”

ನೆರೆಮನೆಯಾತ ಪ್ರತಿಕ್ರಿಯಿಸಿದ, “ಇಲ್ಲಿಂದ ಸುಮಾರು ೫೦ ಕಿಲೋಮೀಟರ್‌ ಸುತ್ತಳತೆಯೊಳಗೆ ಹುಲಿಗಳೇ ಇಲ್ಲವಲ್ಲ!”

“ಹೌದು, ನೋಡಿದೆಯಾ ನನ್ನ ತಂತ್ರದ ಪರಿಣಾಮ!”

೧೪೨. ಪ್ರಶ್ನೆಗೆ ಉತ್ತರ?

ಪರಿಚಿತ: “ಮುಲ್ಲಾ, ನೀನು ಪ್ರಶ್ನೆಗೆ ಕೊಡುವ ಉತ್ತರ ಯಾವಾಗಲೂ ಇನ್ನೊಂದು ಪ್ರಶ್ನೆಯೇ ಆಗಿರುತ್ತದೆ. ಏಕೆ?”

ನಜ಼ರುದ್ದೀನ್‌: “ಏಕೆ ಆಗಿರಬಾರದು?”

೧೪೩. ಸಂಧಾನಕಾರ

ಹತ್ತು ನಾಣ್ಯಗಳನ್ನು ಕೊಡುವಂತೆ ಕೇಳಿದ್ದರೂ ಒಬ್ಬಾತ ತನಗೆ ಒಂಭತ್ತು ನಾಣ್ಯಗಳನ್ನು ಕೊಡುತ್ತಿರುವಂತೆ ಕನಸೊಂದು ನಜ಼ರುದ್ದೀನ್‌ನಿಗೆ ಬಿದ್ದಿತು. ದಢಕ್ಕನೆ ನಜ಼ರುದ್ದೀನ್‌ನಿಗೆ ಎಚ್ಚರವಾಯಿತು. ತನ್ನ ಕೈಗಳನ್ನು ನೋಡಿದಾಗ ಅವು ಖಾಲಿ ಇದ್ದವು. ನಜ಼ರುದ್ದೀನ್ ತಕ್ಷಣ ಕಣ್ಣುಗಳನ್ನು ಮುಚ್ಚಿ ಅಂಗೈಗಳನ್ನು ಮುಂದಕ್ಕೆ ಚಾಚಿ ಹೇಳಿದ,”ಆಯಿತು, ನೀನೇ ಗೆದ್ದಿರುವೆ. ಒಂಭತ್ತು ನಾಣ್ಯಗಳೇ ಸಾಕು, ಕೊಡು!”

೧೪೪. ಅತಿಥಿಗಳನ್ನು ಉಪಚರಿಸುವ ಸ್ವಭಾವದವ

ಗಳನ್ನು ಸತ್ಕರಿಸುವುದರಲ್ಲಿ ತಾನೊಬ್ಬ ಅಸಾಧಾರಣ ವ್ಯಕ್ತಿ ಎಂಬುದಾಗಿ ಕೆಲವರೊಂದಿಗೆ ನಜ಼ರುದ್ದೀನ್‌ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಅವರ ಪೈಕಿ ಒಬ್ಬ ನಜ಼ರುದ್ದೀನ್‌ನ ಹೇಳಿಕೆಯನ್ನು ಒರೆಹಚ್ಚಲೋಸುಗ ಕೇಳಿದ, “ಸರಿ ಹಾಗಿದ್ದರೆ, ನಮ್ಮನ್ನೆಲ್ಲ ಭೊಜನಕ್ಕೆ ನಿನ್ನ ಮನೆಗೆ ಆಹ್ವಾನಿಸಿ ಸತ್ಕರಿಸುವೆಯಾ?”

ಅದಕ್ಕೆ ಸಮ್ಮತಿಸಿದ ನಜ಼ರುದ್ದೀನ್‌ ಅವರನ್ನೆಲ್ಲ ತನ್ನ ಮನೆಗೆ ಕರೆದೊಯ್ದ. ಮನೆಗೆ ತಲುಪಿದ ನಂತರ ಅವರಿಗೆ ಹೇಳಿದ, “ಇಲ್ಲಿ ಹೊರಗೇ ಕಾಯುತ್ತಿರಿ. ವಿಷಯ ಏನೆಂಬುದನ್ನು ನನ್ನ ಹೆಂಡತಿಗೆ ಹೇಳಿ ಬರುತ್ತೇನೆ.”

ಮನೆಯೊಳಕ್ಕೆ ಹೋಗಿ ಹೆಂಡತಿಗೆ ವಿಷಯ ತಿಳಿಸಿದಾಗ ಅವಳು ಹೇಳಿದಳು, “ನಮ್ಮ ಹತ್ತಿರ ಒಂದಿನಿತೂ ಆಹಾರ ಉಳಿದಿಲ್ಲ. ಅವರನ್ನು ಅಂತೆಯೇ ಹೋಗಲು ಹೇಳಬೇಕು.”

“ಹಾಗೆ ಮಾಡಲು ಸಾಧ್ಯವೇ ಇಲ್ಲ!” ಗಾಬರಿಯಿಂದ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ. “ಅತಿಥಿ ಸತ್ಕಾರಕ್ಕೆ ಸಂಬಂಧಿಸಿದಂತೆ ಇದು ನನ್ನ ಪ್ರತಿಷ್ಠೆಯ ಪ್ರಶ್ನೆ!”

ಅದಕ್ಕೆ ಅವನ ಹೆಂಡತಿ ಹೇಲಿದಳು, “ಸರಿ, ಬಹಳ ಒಳ್ಳೆಯದು. ನೀನು ಮಹಡಿಯ ಮೇಲೆ ಹೋಗಿ ಅಡಗಿ ಕುಳಿತುಕೊ. ಅವರು ನಿನ್ನನ್ನು ಕರೆಯಲಾರಂಭಿಸಿದರೆ ನೀನು ಮನೆಯಲ್ಲಿ ಇಲ್ಲವೆಂಬುದಾಗಿ ಹೇಳುತ್ತೇನೆ.”

ನಜ಼ರುದ್ದೀನ್‌ ಅಂತೆಯೇ ಮಾಡಿದ, ಬಂದವರು ಹೊರಗೆ ಕಾಯುತ್ತಲೇ ಇದ್ದರು.

ಸ್ವಲ್ಪ ಸಮಯ ಕಳೆದ ನಂತರ ತಾಳ್ಮೆ ಕಳೆದುಕೊಂಡ ಅವರು ಅತಿಥೇಯನನ್ನು ಕರೆಯುತ್ತಾ ಬಾಗಿಲು ಬಡಿಯಲಾರಂಭಿಸಿದರು.

“ನಜ಼ರುದ್ದೀನ್, ಏ ನಜ಼ರುದ್ದೀನ್‌!” ಬೊಬ್ಬೆಹೊಡೆದರು ಅವರು.

“ನಜ಼ರುದ್ದೀನ್‌ ಮನೆಯಲ್ಲಿ ಇಲ್ಲ,” ಬಾಗಿಲು ತೆರೆದು ನಜ಼ರುದ್ದೀನ್‌ನ ಹೆಂಡತಿ ಹೇಳಿದಳು.

“ಅದು ಹೇಗೆ ಸಾಧ್ಯ? ಅವನು ಈ ಬಾಗಿಲಿನ ಮೂಲಕ ಮನೆಯೊಳಕ್ಕೆ ಹೋದದ್ದನ್ನು ನಾವೇ ನೋಡಿದ್ದೇವೆ. ಆಗಿನಿಂದ ನಾವು ಈ ಬಾಗಿಲನ್ನು ನೋಡುತ್ತಾ ಇಲ್ಲಿಯೇ ನಿಂತಿದ್ದೇವೆ,” ಉದ್ಗರಿಸಿದ ಅವರ ಪೈಕಿ ಒಬ್ಬ.

ಮಹಡಿಯ ಮೇಲೆ ಅಡಗಿ ಕುಳಿತಿದ್ದ ನಜ಼ರುದ್ದೀನ್‌ ತಡೆಯಲಾಗದೆ ಕಿಟಕಿ ತೆರೆದು ಮಾರುತ್ತರ ನೀಡಿದ, “ನೀನೇನು ಮಾತನಾಡುತ್ತಿರುವೆ ಎಂಬುದು ನಿನಗೇ ಗೊತ್ತಿಲ್ಲ! ನಾನು ಹಿಂಬಾಗಿಲಿನಿಂದ ಹೊರಹೋಗಿರಬಹುದಲ್ಲವೇ?”

೧೪೫. ನಜ಼ರುದ್ದೀನ್‌ನ ಅತಿಥಿ ಸತ್ಕಾರ

ಒಂದು ದಿನ ನಜ಼ರುದ್ದೀನ್‌ ಕೆಲವರನ್ನು ರಾತ್ರಿಯ ಭೋಜನಕ್ಕೆ ತನ್ನ ಮನೆಗೆ ಆಹ್ವಾನಿಸಿದನು. ಆಹ್ವಾನಿತರು ಭೋಜನಕ್ಕೆ ಬರುವ ಸುದ್ದಿಯನ್ನು ಮುಂದಾಗಿಯೇ ಹೆಂಡತಿಗೆ ತಿಳಿಸುವ ಸಲುವಾಗಿ ಮನೆಗೆ ಹೋದನು. ಅನ್ನ ಮತ್ತು ಕಬಾಬ್‌ಗಳನ್ನು ಸಿದ್ಧಪಡಿಸುವಂತೆ ಅವಳಿಗೆ ಹೇಳಿದನು.

“ಅಯ್ಯೋ, ಮನೆಯಲ್ಲಿ ಅಕ್ಕಿಯೂ ಇಲ್ಲ, ಕಬಾಬ್‌ಗಳನ್ನು ತಯಾರಿಸಲು ಅಗತ್ಯವಾದ ಸಾಮಗ್ರಿಗಳೂ ಇಲ್ಲವಲ್ಲ. ನೀವು ಅವನ್ನು ತರುವುದನ್ನೇ ಮರೆತಿದ್ದೀರಿ,” ಉದ್ಗರಿಸಿದಳು ಅವನ ಹೆಂಡತಿ.

“ಪರವಾಗಿಲ್ಲ. ಕನಿಷ್ಠ ಪಕ್ಷ ಕೆಲವು ತಟ್ಟೆಗಳನ್ನಾದರೂ ಕೊಡಬಲ್ಲೆಯಾ?” ಕೇಳಿದ ನಜ಼ರುದ್ದೀನ್‌.

ಅವಳು ತಟ್ಟೆಗಳನ್ನು ತಂದು ಕೊಟ್ಟಳು. ಸುಮಾರು ಒಂದು ಗಂಟೆಯ ನಂತರ ಆಹ್ವಾನಿತರು ಬಂದರು. ನಜ಼ರುದ್ದೀನ್‌ ಅವರಿಗೆಲ್ಲ ಒಂದೊಂದು ತಟ್ಟೆಯನ್ನು ಕೊಟ್ಟು ಹೆಮ್ಮೆಯಿಂದ ಘೋಷಿಸಿದ, “ನನ್ನ ಪ್ರೀತಿಯ ಅತಿಥಿಗಳೇ, ಅಕ್ಕಿಯನ್ನೂ ಕಬಾಬ್‌ಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳನ್ನೂ ನಾನು ಮಾರುಕಟ್ಟೆಯಿಂದ ಮೊದಲೇ ಕೊಂಡುತರುವುದನ್ನು ಮರೆಯದೇ ಇದ್ದಿದ್ದರೆ ಈ ತಟ್ಟೆಗಳಲ್ಲಿ ಈಗ ಅತ್ಯತ್ಕೃಷ್ಟವಾದ ಭೋಜನವಿರುತ್ತಿತ್ತು!”

೧೪೬. ನಜ಼ರುದ್ದೀನ್‌ನ ಮೇಲೆ ದಾವಾ ಹಾಕಿದ್ದು

“ಈ ಪಟ್ಟಣದ ಯಾರೊಬ್ಬ ವಿವೇಕಿಗೂ ಮಲ ಅಂದರೇನು ಎಂಬುದೇ ಗೊತ್ತಿಲ್ಲ,” ಎಂಬುದಾಗಿ ಹೇಳಿಕೊಂಡು ಪಟ್ಟಣದಲ್ಲಿ ಸುತ್ತಾಡುತ್ತಿದ್ದ ನಜ಼ರುದ್ದೀನ್.

ಒಂದು ದಿನ ಆ ಪಟ್ಟಣದ ವಿವೇಕಿಗಳ ಗುಂಪೊಂದು ನಜ಼ರುದ್ದೀನ್‌ನ ಮೇಲೆ ನ್ಯಾಯಾಲಯದಲ್ಲಿ ದಾವಾ ಹಾಕಿತು. ತನ್ನ ಹೇಳಿಕೆಯನ್ನು ನಜ಼ರುದ್ದೀನ್‌ ನಮರ್ಥಿಸಲು ಅಗತ್ಯವಾದ ಪುರಾವೆಗಳನ್ನು ಹಾಜರು ಪಡಿಸಬೇಕೆಂಬುದಾಗಿಯೂ ಸಾಧ್ಯವಾಗದಿದ್ದರೆ ಆತನಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂಬುದಾಗಿಯೂ ಅವರ ಅಹವಾಲಾಗಿತ್ತು.

“ಸರಿ, ಅಂತೆಯೇ ಆಗಲಿ,” ಸಮ್ಮತಿಸಿದ ನಜ಼ರುದ್ದೀನ್‌.

ಪ್ರತಿಯೊಬ್ಬ ಫಿರ್ಯಾದಿಗೂ ಒಂದು ಕಾಗದ ಹಾಗು ಪೆನ್ಸಿಲ್‌ ಕೊಟ್ಟು ಹೇಳಿದ, “ಆ ಕಾಗದದಲ್ಲಿ ‘ಮಲ ಅಂದರೇನು?’ ಎಂಬ ಪ್ರಶ್ನೆಗೆ ಉತ್ತರ ಬರೆಯಿರಿ.”

ಎಲ್ಲರೂ ಉತ್ತರ ಬರೆದು ನ್ಯಾಯಾಧೀಶರಿಗೆ ಒಪ್ಪಿಸಿದರು. ನ್ಯಾಯಾಧೀಶರು ಪ್ರತಿಯೊಬ್ಬರ ಉತ್ತರವನ್ನು ಗಟ್ಟಿಯಾಗಿ ಓದಿದರು.

ವಿಜ್ಞಾನಿ: ನೀರು ಮತ್ತು ಆಹಾರತ್ಯಾಜ್ಯಗಳ ಸಂಯೋಜನೆಯೇ ಮಲ

ತತ್ವಶಾಸ್ತ್ರಜ್ಞ: ಅದು ಜೀವಿಗಳು ಅಭಿವ್ಯಕ್ತಿಸುವ ವಿಶ್ವದಲ್ಲಿ ಚಾಲ್ತಿಯಲ್ಲಿರುವ ವಿಷಯಾಧಾರಿತ ಆವರ್ತಗಳು ಹಾಗು ಬದಲಾವಣೆಗಳು

ವೈದ್ಯ: ಉತ್ತಮ ಆರೋಗ್ಯದ ಸೂಚಕವಾಗಿ ಕರುಳಿನ ಮೂಲಕ ಕ್ರಮಬದ್ಧವಾಗಿ ಹಾದುಹೋಗಬೇಕಾದ ದ್ರವ್ಯ ಅದು

ಮತಾಚಾರ್ಯ: ನಮ್ಮ ದೇಹದ ಮೂಲಕ ಹಾದುಹೋಗುತ್ತಿರುವ ನಮ್ಮ ಪಾಪಗಳ ಪ್ರತೀಕ ಅದು.

ಜ್ಯೋತಿಷಿ: ನಮ್ಮ ಭವಿಷ್ಯವನ್ನು ಹೇಳಲು ಉಪಯೋಗಿಸಬಹುದಾದ ಸಾಮಗ್ರಿ ಅದು

ಈ ಎಲ್ಲ ಉತ್ತರಗಳನ್ನು ಕೇಳಿದ ನಂತರ ನಜ಼ರುದ್ದೀನ್‌ ಉದ್ಗರಿಸಿದ, “ನನ್ನ ಮನಸ್ಸಿನಲ್ಲಿ ಇದ್ದದ್ದು ಏನೆಂಬುದು ತಿಳಿಯಿತಲ್ಲವೇ ಮಹಾಸ್ವಾಮಿ. ಇವರ ಪೈಕಿ ಯಾರೊಬ್ಬರಿಗೂ ಮಲ ಅಂದರೇನು ಎಂಬುದೇ ಗೊತ್ತಿಲ್ಲ.”

೧೪೭. ಜೂಜುಕೋರ ನಜ಼ರುದ್ದೀನ್‌

ಚಪ್ಪಲ್‌, ಚಡ್ಡಿ ಹಾಗು ಅಂಗಿ ಧರಿಸಿ ಪರ್ವತಗಳ ಸಮೀಪದಲ್ಲಿ ಚಳಿಗಾಲದ ಅತೀ ಚಳಿಯ ರಾತ್ರಿಯನ್ನು ತಾನು ಕಳೆಯಬಲ್ಲೆ ಎಂಬುದಾಗಿ ನಜ಼ರುದ್ದೀನ್‌ ತನ್ನ ಮಿತ್ರರೊಂದಿಗೆ ಬಾಜಿ ಕಟ್ಟಿದ.

ಅಂತೆಯೇ ಒಂದು ರಾತ್ರಿಯನ್ನು ಪರ್ವತಗಳ ಸಮೀಪದಲ್ಲಿ ಕಳೆದು ಮಾರನೇ ದಿನ ಹಣ ಪಡೆಯಲೋಸುಗ ನಜ಼ರುದ್ದೀನ್‌ ಮಿತ್ರರ ಹತ್ತಿರ ಹೋದ.

ಒಪ್ಪಂದದ ಪ್ರಕಾರವೇ ಅವನು ರಾತ್ರಿಯನ್ನು ಕಳೆದಿದ್ದಾನೆಂಬುದನ್ನು ಖಾತರಿ ಮಾಡಿಕೊಳ್ಳಲೋಸುಗ ರಾತ್ರಿ ಕಳೆದದ್ದು ಹೇಗೆಂಬುದರ ವಿವರಗಳನ್ನು ಅವರು ತಿಳಿಯಲಿಚ್ಛಿಸಿದರು.

ನಜ಼ರುದ್ದೀನ್‌ ಹೇಳಿದ, “ಖಂಡಿತವಾಗಿಯೂ ನಾನು ಒಪ್ಪಂದದ ಪ್ರಕಾರವೇ ರಾತ್ರಿಯನ್ನು ಕಳೆದಿದ್ದೇನೆ. ನನ್ನಿಂದ ಸುಮಾರು ೧೦೦ ಮೀಟರ್‌ಗಳಷ್ಟು ದೂರದಲ್ಲಿ ಕೆಲವು ಮಂದಿ ಒಂದು ಬೆಂಕಿ ಹಾಕಿ ಕುಳಿತಿದ್ದದ್ದು ಮಾತ್ರ ನನಗೆ ಅತ್ಯಂತ ಸಮೀಪದಲ್ಲಿ ಇದ್ದ ವಿಶೇಷ.”

ತಕ್ಷಣವೇ ಮಿತ್ರರು ಪ್ರತಿಕ್ರಿಯಿಸಿದರು, “ಬೆಂಕಿ ಇತ್ತೇ? ಅಂದ ಮೇಲೆ ನಮ್ಮ ನಡುವಿನ ಒಪ್ಪಂದದ ಉಲ್ಲಂಘನೆಯಾಗಿದೆ, ಏಕೆಂದರೆ ನಾವು ಬೆಂಕಿಯ ಇರುವಿಕೆಯನ್ನು ಪ್ರಸ್ತಾಪಿಸಿರಲಿಲ್ಲ. ಅಂದ ಮೇಲೆ ಗೆದ್ದದ್ದು ನಾವೇ ವಿನಾ ನೀನಲ್ಲ.”

ಈ ರೀತಿ ಸೋತ ನಜ಼ರುದ್ದೀನ್‌ ಬಾಜಿ ಸೋತದ್ದರ ಸ್ಮರಣಾರ್ಥ ಒಂದು ರಾತ್ರಿ ಭೋಜನಕೂಟಕ್ಕೆ ಅವರನ್ನೆಲ್ಲ ತನ್ನ ಮನೆಗೆ ಬರುವಂತೆ ಆಹ್ವಾನಿಸಿದ.

ನಿಗದಿತ ದಿನದ ರಾತ್ರಿಯ ಭೋಜನಕ್ಕೆ ಆಹ್ವಾನಿತರೆಲ್ಲರೂ ಬಂದರು. ಕೆಲವು ತಾಸುಗಳು ಕಳೆದರೂ ಅವರು ತಿನ್ನಲು ಏನನ್ನೂ ನಜ಼ರುದ್ದೀನ್‌ ಕೊಡಲೇ ಇಲ್ಲ.

ಕೊನೆಗೊಮ್ಮೆ ಅವರೇ ಹೇಳಿದರು, “ನಮಗೆ ಹಸಿವಾಗಿದೆ. ಭೋಜನ ಯಾವಾಗ ಸಿದ್ಧವಾಗುತ್ತದೆ?”

ನಜ಼ರುದ್ದೀನ್‌ ಉತ್ತರಿಸಿದ, “ಗೊತ್ತಿಲ್ಲ. ಗೊತ್ತಿಲ್ಲ ಹೋಗಿ ನೋಡೋಣ ಬನ್ನಿ.”

ಅವರೆಲ್ಲರನ್ನೂ ನಜ಼ರುದ್ದೀನ್‌ ಅಡುಗೆ ಕೋಣೆಗೆ ಕರೆದೊಯ್ದು ತೋರಿಸಿದ: ಒಂದು ಮೇಜಿನ ಮೇಲೆ ಬೇಯಿಸದೇ ಇದ್ದ ಮಾಂಸದ ಭಕ್ಷ್ಯ ಇದ್ದ ದೊಡ್ಡ ಪಾತ್ರೆ ಇತ್ತು, ಅದರಿಂದ ಕೆಲವು ಅಂಗುಲಗಳಷ್ಟು ದೂರದಲ್ಲಿ ಮೋಂಬತ್ತಿಯೊಂದು ಉರಿಯುತ್ತಿತ್ತು.

“ಬಲು ಕುತೂಹಲಕಾರೀ ವಿದ್ಯಮಾನ ಇದು. ನಿನ್ನೆ ರಾತ್ರಿಯಿಂದ ನಾನು ಇದನ್ನು ಈ ರೀತಿ ಬೇಯಿಸುತ್ತಿದ್ದೇನೆ. ಅದೇಕೋ ಇನ್ನೂ ಬೆಂದೇ ಇಲ್ಲ!”

 ೧೪೮. ಅರಮನೆಯ ಭೋಜನ ಕೂಟ

ಒಮ್ಮೆ ನಜ಼ರುದ್ದೀನ್‌ ಅರಮನೆಲ್ಲಿನ ಭೋಜನ ಕೂಟಕ್ಕೆ ಹೋದ. ಅವನು ಧರಿಸಿದ್ದ ಹರಿದು ಚಿಂದಿಯಾಗಿದ್ದ ದಿರಿಸನ್ನು ನೋಡಿದ ಸೇವಕರು ಅವನನ್ನು ಗಮನಿಸಲೂ ಇಲ್ಲ, ಅವನಿಗೆ ಆಹಾರವನ್ನೂ ಕೊಡಲಿಲ್ಲ.

ಆದ್ದರಿಂದ ನಜ಼ರುದ್ದೀನ್‌ ತನ್ನ ಮನೆಗೆ ಹಿಂದಿರುಗಿ ಬಲು ದುಬಾರಿ ಬೆಲೆಯ ದಿರಿಸನ್ನು ಧರಿಸಿ ಪುನಃ ಅರಮನೆಗೆ ಬಂದ. ಸೇವಕರು ಅವನನ್ನು ಅತೀ ಗೌರವದಿಂದ ಸ್ವಾಗತಿಸಿದರು. ಅವನು ಸುಖಾಸೀನನಾದ ನಂತರ ಅನೇಕ ವಿಧವಾದ ಸ್ವಾದಿಷ್ಟ ಭಕ್ಷ್ಯಭೋಜ್ಯಗಳು ಇರುವ ಪಾತ್ರೆಗಳನ್ನು ಅವನ ಮುಂದೆ ತಂದಿಟ್ಟರು.

ನಜ಼ರುದ್ದೀನ್‌ ಒಂದಾದ ನಂತರ ಒಂದರಂತೆ ಆ ಭಕ್ಷ್ಯಗಳಲ್ಲಿ ಸ್ವಲ್ಪವನ್ನು ಕೈನಲ್ಲಿ ತೆಗೆದುಕೊಂಡು ಧರಿಸಿದ್ದ ಬಟ್ಟೆಗೆ ಉಜ್ಜಲಾರಂಭಿಸಿದ. ಅದನ್ನು ನೋಡಿದ ಅತಿಥಿಯೊಬ್ಬ ಕೇಳಿದ. “ನೀವೇನು ಮಾಡುತ್ತಿರುವಿರಿ?”

“ಓ ನಾನೇ? ನಾನು ನನ್ನ ಬಟ್ಟೆಗಳಿಗೆ ಮೊದಲು ಉಣಿಸುತ್ತಿದ್ದೇನೆ. ಏಕೆಂದರೆ ಇಷ್ಟೆಲ್ಲ ಭಕ್ಷ್ಯಗಳು ನನಗೆ ಸಿಕ್ಕಿರುವುದೇ ಅವುಗಳಿಂದಾಗಿ!” ಉದ್ಗರಿಸಿದ ನಜ಼ರುದ್ದೀನ್‌

 ೧೪೯. ನಿಮಗೆ ಗೊತ್ತಿದೆಯೇ ಅಥವ ಗೊತ್ತಿಲ್ಲವೇ?

ತನ್ನ ಕರ್ತವ್ಯಗಳ ಒಂದು ಭಾಗವಾಗಿ ಮುಲ್ಲಾ ನಜ಼ರುದ್ದೀನ್‌ ತನ್ನ ಸಮುದಾಯದವರಿಗೆ ಉಪನ್ಯಾಸಗಳನ್ನು ಮಾಡಬೇಕಿತ್ತು. ಈ ನಿಯತ ಕಾರ್ಯಕ್ರಮದಿಂದ ಬೇಸತ್ತು ಹೋಗಿದ್ದ ನಜ಼ರುದ್ದೀನ್‌ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆಂಬುದನ್ನು ಆಲೋಚಿಸುತ್ತಿದ್ದ. ಒಂದು ದಿನ ಉಪನ್ಯಾಸ ವೇದಿಕೆಯನ್ನೇರಿದ ನಜ಼ರುದ್ದೀನ್‌ ಉಪನ್ಯಾಸ ಆರಂಭಿಸುವ ಮುನ್ನ ನೆರೆದಿದ್ದ ಶ್ರೋತೃಗಳನ್ನು ಕೇಳಿದ, “ಇಂದು ನಾನೇನನ್ನು ಬೋಧಿಸಲಿದ್ದೇನೆ ಎಂಬುದು ಇಲ್ಲಿ ಎಷ್ಟು ಮಂದಿಗೆ ಗೊತ್ತಿದೆ?”

“ಇಲ್ಲ,” ಎಂಬುದಾಗಿ ಎಲ್ಲರೂ ಹೇಳಿದರು.

“ಸರಿ, ಹಾಗಾದರೆ ಇಲ್ಲಿ ಯಾರಿಗೂ ನಾನು ಇಂದು ತಿಳಿಸಬೇಕೆಂದಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವಶ್ಯವಾದ ಹಿನ್ನೆಲೆ ಮಾಹಿತಿ ಇಲ್ಲದೇ ಇರುವುದರಿಂದ ಅದನ್ನು ನಿಮಗೆ ಬೋಧಿಸಲು ಪ್ರಯತ್ನಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ,” ಎಂಬುದಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದ ನಜ಼ರುದ್ದೀನ್‌.

ಮರುದಿನವೂ ಉಪನ್ಯಾಸ ವೇದಿಕೆಯನ್ನೇರಿದ ನಜ಼ರುದ್ದೀನ್‌ ಉಪನ್ಯಾಸ ಆರಂಭಿಸುವ ಮುನ್ನ ನೆರೆದಿದ್ದ ಶ್ರೋತೃಗಳನ್ನು ಕೇಳಿದ, “ಇಂದು ನಾನೇನನ್ನು ಬೋಧಿಸಲಿದ್ದೇನೆ ಎಂಬುದು ಇಲ್ಲಿ ಎಷ್ಟು ಮಂದಿಗೆ ಗೊತ್ತಿದೆ?”

ಹಿಂದಿನ ದಿನ ಮಾಡಿದಂತೆ ನಜ಼ರುದ್ದೀನ್‌ ಪುನಃ ಮಡುತ್ತಾನೆ ಎಂಬ ನಂಬಿಕೆಯಿಂದ ನೆರೆದಿದ್ದವರು ಘೋಷಿಸಿದರು, “ಹೌದು, ನಮಗೆ ಗೊತ್ತಿದೆ.”

“ಸರಿ, ಹಾಗಾದರೆ ಇಲ್ಲಿ ಎಲ್ಲರಿಗೂ ನಾನು ಇಂದು ತಿಳಿಸಬೇಕೆಂದಿದ್ದ ವಿಷಯ ಈಗಾಗಲೇ ತಿಳಿದಿರುವುದರಿಂದ ಅದನ್ನು ಪುನಃ ಬೋಧಿಸುವುದರಲ್ಲಿ ಅರ್ಥವಿಲ್ಲ,” ಎಂಬುದಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದ ನಜ಼ರುದ್ದೀನ್‌.

ಮರುದಿನವೂ ಉಪನ್ಯಾಸ ವೇದಿಕೆಯನ್ನೇರಿದ ನಜ಼ರುದ್ದೀನ್‌ ಉಪನ್ಯಾಸ ಆರಂಭಿಸುವ ಮುನ್ನ ನೆರೆದಿದ್ದ ಶ್ರೋತೃಗಳನ್ನು ಕೇಳಿದ, “ಇಂದು ನಾನೇನನ್ನು ಬೋಧಿಸಲಿದ್ದೇನೆ ಎಂಬುದು ಇಲ್ಲಿ ಎಷ್ಟು ಮಂದಿಗೆ ಗೊತ್ತಿದೆ?”

ಹಿಂದಿನ ದಿನ ಮಾಡಿದಂತೆ ನಜ಼ರುದ್ದೀನ್‌ ಪುನಃ ಮಡುತ್ತಾನೆ ಎಂಬ ನಂಬಿಕೆಯಿಂದ ನೆರೆದಿದ್ದವರ ಪೈಕಿ ಅರ್ಧದಷ್ಟು ಮಂದಿ ‘ನಮಗೆ ಗೊತ್ತಿಲ್ಲ’ ಎಂಬುದಾಗಿಯೂ ಉಳಿದರ್ಧ ಮಂದಿ ‘ನಮಗೆ ಗೊತ್ತಿದೆ’ ಎಂಬುದಾಗಿಯೂ ಘೋಷಿಸಿದರು.

“ಓ, ಅದ್ಭುತ, ನಿಮ್ಮ ಪೈಕಿ ಗೊತ್ತಿರುವವರು ಗೊತ್ತಿಲ್ಲದವರಿಗೆ ಅದನ್ನು ಹೇಳಿ!” ಎಂಬುದಾಗಿ ಸೂಚನೆ ನೀಡಿ ಅಲ್ಲಿಂದ ನಿರ್ಗಮಿಸಿದ ನಜ಼ರುದ್ದೀನ್‌.

 ೧೫೦. ಮುಂಡಾಸು ನನ್ನದು

ನಜ಼ರುದ್ದೀನ್‌ನನ್ನು ಭೇಟಿ ಮಾಡಲು ಅವನ ಬಹಳ ಹಳೆಯ ಮಿತ್ರ ಏಯ್‌ನೊಲ್ಲಾ ಬಲು ದೂರದೂರಿನಿಂದ ಒಮ್ಮೆ ಬಂದನು.

“ಇಲ್ಲಿನ ಕೆಲವು ಮಂದಿಗೆ ನಿನ್ನನ್ನು ಪರಿಚಯಿಸಬೇಕೆಂದು ಅಂದುಕೊಂಡಿದ್ದೇನೆ,” ಎಂಬುದಾಗಿ ಅವನಿಗೆ ಹೇಳಿದ ನಜ಼ರುದ್ದೀನ್‌.

ಏಯ್‌ನೊಲ್ಲಾ ಉತ್ತರಿಸಿದ, “ಆಗಬಹುದು. ಆದರೆ ನಾನು ಧರಿಸಿದ ಬಟ್ಟೆ ಸಮರ್ಪಕವಾಗಿಲ್ಲ. ಎಂದೇ ನನಗೊಂದು ಮುಂಡಾಸು ಎರವಲು ಕೊಡು.”

ನಜ಼ರುದ್ದೀನ್‌ ತನ್ನ ಮುಂಡಾಸನ್ನು ಅವನಿಗೆ ಕೊಟ್ಟ. ಅವನು ಅದನ್ನು ಧರಿಸಿಕೊಂಡು ನಜ಼ರುದ್ದೀನ್‌ನ ಜೊತೆಯಲ್ಲಿ ಅವನ ಒಬ್ಬ ಮಿತ್ರನ ಮನೆಗೆ ಹೋದ.

ನಜ಼ರುದ್ದೀನ್‌ ಏಯ್‌ನೊಲ್ಲಾನನ್ನು ಇಂತು ಪರಿಚಯಿಸಿದ, “ಇವನು ನನ್ನ ಮಿತ್ರ ಏಯ್‌ನೊಲ್ಲಾ. ಆದರೆ ಅವನು ಧರಿಸಿರುವ ಮುಂಡಾಸು ನನ್ನದು.”

ಇದನ್ನು ಕೇಳಿದ ಏಯ್‌ನೊಲ್ಲಾನಿಗೆ ಕೋಪ ಬಂದರೂ ಆ ಮನೆಯಿಂದ ಹೊರಬರುವ ವರೆಗೆ ಸುಮ್ಮನಿದ್ದ. ತದನಂತರ ಅವನು ನಜ಼ರುದ್ದೀನ್‌ನಿಗೆ ಹೇಳಿದ, “ನಾನು ಧರಿಸಿರುವ ಮುಂಡಾಸು ನಿನ್ನದೆಂದು ಹೇಳಿದ್ದೇಕೆ? ನಮ್ಮ ಮುಂದಿನ ಭೇಟಿಯ ವೇಳೆ ಹಾಗೆ ಹೇಳಬೇಡ.”

ಮುಂದಿನ ಭೇಟಿಯ ವೇಳೆ ನಜ಼ರುದ್ದೀನ್‌ ಅವನನ್ನು ಇಂತು ಪರಿಚಯಿಸಿದ, “ಇವನು ನನ್ನ ಮಿತ್ರ ಏಯ್‌ನೊಲ್ಲಾ. ಆದರೆ ಅವನು ಧರಿಸಿರುವ ಮುಂಡಾಸು ಅವನದ್ದೇ ಆಗಿದೆ, ನನ್ನದಲ್ಲ.”

ಇದನ್ನು ಕೇಳಿದ ಏಯ್‌ನೊಲ್ಲಾನಿಗೆ ಕೋಪ ಬಂದರೂ ಆ ಮನೆಯಿಂದ ಹೊರಬರುವ ವರೆಗೆ ಸುಮ್ಮನಿದ್ದ. ತದನಂತರ ಅವನು ನಜ಼ರುದ್ದೀನ್‌ನಿಗೆ ಹೇಳಿದ, “ನಾನು ಧರಿಸಿರುವ ಮುಂಡಾಸು ನನ್ನದೇ ಆಗಿದೆ ನಿನ್ನದಲ್ಲ ಎಂಬುದನ್ನೆಲ್ಲ ವಿವರಿಸುವ ಅಗತ್ಯವೇನಿತ್ತು? ನಮ್ಮ ಮುಂದಿನ ಭೇಟಿಯ ವೇಳೆ ಹಾಗೆ ಹೇಳಬೇಡ.”

ಮುಂದಿನ ಭೇಟಿಯ ವೇಳೆ ನಜ಼ರುದ್ದೀನ್‌ ಅವನನ್ನು ಇಂತು ಪರಿಚಯಿಸಿದ, “ಇವನು ನನ್ನ ಮಿತ್ರ ಏಯ್‌ನೊಲ್ಲಾ. ಆದರೆ ಅವನು ಧರಿಸಿರುವ ಮುಂಡಾಸು ಅವನದ್ದೋ ಅಥವ ನನ್ನದೋ ಎಂಬುದರ ಕುರಿತು ನಾನೇನೂ ಹೇಳುವುದಿಲ್ಲ!”

Advertisements
This entry was posted in ನಜ಼ರುದ್ದೀನ್‌ ಕತೆಗಳು and tagged , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s