ನಜ಼ರುದ್ದೀನ್‌ನ ಕತೆಗಳು, ೧-೫೦

[ಸೂಫಿ ಕತೆಗಳ ಒಂದು ಉಪವರ್ಗ ಎಂಬುದಾಗಿ ಪರಿಗಣಿಸಬಹುದಾದ ಮುಲ್ಲಾ ನಜ಼ರುದ್ದೀನ್‌ ಹೋಜನ ಕತೆಗಳನ್ನು ‘ನಜ಼ರುದ್ದೀನ್‌ನ ಕತೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುಸುತ್ತಿದ್ದೇನೆ. ೧೩ ನೆಯ ಶತಮಾನದಲ್ಲಿ ಇಂದಿನ ಟರ್ಕಿ ಪ್ರದೇಶದಲ್ಲಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶವೊಂದರಲ್ಲಿ ಜೀವಿಸಿದ್ದ ಸೂಫಿ ಈತ ಎಂಬ ನಂಬಿಕೆ ಇದೆ. ಶ್ರೀಸಾಮಾನ್ಯನ ದಾರ್ಶನಿಕ, ವಿವೇಕಿ ಎಂಬುದಾಗಿ ಈತನನ್ನು ಉಲ್ಲೇಖಿಸುವುದೂ ಉಂಟು. ಈತ ಪ್ರಧಾನ ಪಾತ್ರಧಾರಿಯಾಗಿರುವ ಕತೆಗಳು ಸಾವಿರಾರು ಇವೆಯೆಂದು ಹೇಳಲಾಗುತ್ತಿದೆ. ವಿಡಂಬನಕಾರ, ಹಾಸ್ಯಗಾರ, ಚಾಣಾಕ್ಷ, ಮುಗ್ಧ, ಮೂರ್ಖ, ದಾರ್ಶನಿಕ, ವಿವೇಕಿ, ವಂಚಕ, ಕಳ್ಳ ಇವೇ ಮೊದಲಾದ ವಿಭಿನ್ನ ಪಾತ್ರಗಳಲ್ಲಿ ನಜ಼ರುದ್ದೀನ್‌ ಈ ಕತೆಗಳಲ್ಲಿ ಗೋಚರಿಸುತ್ತಾನೆ. ಈತನ ಬಹುತೇಕ ಕತೆಗಳು ವಿಡಂಬನಾತ್ಮಕವಾದವು, ಕೆಲವು ನವಿರಾದ ಹಾಸ್ಯಪ್ರಧಾನವಾದವು, ಕೆಲವು ‌ಅವನನ್ನೇ ಮೂರ್ಖನಂತೆ ಬಿಂಬಿಸುವ ಕತೆಗಳು, ಕೆಲವು ಜಾಣ್ಮೆಯನ್ನು ಬಿಂಬಿಸುವ ಕತೆಗಳು, ಕೆಲವು ಆಧ್ಯಾತ್ಮಿಕ ಸಂದೇಶವುಳ್ಳವು. ತುಸು ಆಲೋಚಿಸಿದರೆ ಎಲ್ಲವೂ ಶ್ರೀಸಾಮಾನ್ಯನಿಗೆ ಏನನ್ನೋ ಬೋಧಿಸುವ ಉದ್ದೇಶ ಉಳ್ಳವು ಎಂಬದು ನಿಮಗೇ ತಿಳಿಯುತ್ತದೆ.]

೧. ಕಳೆದು ಹೋದ ಬೀಗದಕೈ

ತನ್ನ ಕೈತೋಟದಲ್ಲಿ ಮುಲ್ಲಾ ನಜ಼ರುದ್ದೀನ್‌ ಏನನ್ನೋ ಹುಡುಕುತ್ತಿದ್ದ. ಏನನ್ನು ಹುಡುಕುತ್ತಿರುವುದು ಎಂಬುದನ್ನು ಪಕ್ಕದ ಮನೆಯಾತ ವಿಚಾರಿಸಿದಾಗ ತನ್ನ ಮನೆಯ ಬೀಗದಕೈಯನ್ನು ಹುಡುಕುತ್ತಿರುವುದಾಗಿ ತಿಳಿಸಿದ.

ಪಕ್ಕದ ಮನೆಯಾತ ಕೇಳಿದ, “ಅದನ್ನು ಎಲ್ಲಿ ಬೀಳಿಸಿದೆ ಎಂಬುದೇನಾದರೂ ನೆನಪಿದೆಯೇ?”

ಮುಲ್ಲಾ ಉತ್ತರಿಸಿದ, “ಖಂಡಿತಾ ನೆನಪಿದೆ. ಅದನ್ನು ಬೀಳಿಸಿದ್ದು ನನ್ನ ಮನೆಯಲ್ಲಿಯೇ.”

ಗೊಂದಲಕ್ಕೀಡಾದ ಪಕ್ಕದ ಮನೆಯಾತ ವಿಚಾರಿಸಿದ, “ಅಂದ ಮೇಲೆ ಅದನ್ನು ಇಲ್ಲಿ ಹುಡುಕುತ್ತಿರುವುದೇಕೆ?”

ಮುಲ್ಲಾ ನಜ಼ರುದ್ದೀನ್ ಉತ್ತರಿಸಿದ, “ಏಕೆಂದರೆ ಇಲ್ಲಿ ಅಲ್ಲಿಗಿಂತ ಹೆಚ್ಚು ಬೆಳಕಿದೆ.”

*****

೨. ಕತ್ತೆಯ ಬಂಧುಗಳು

ಒಂದು ಬುಟ್ಟಿ ತುಂಬ ತರಕಾರಿಯನ್ನು ಕತ್ತೆಯ ಮೇಲೆ ಹೇರಿಕೊಂಡು ಮುಲ್ಲಾ ನಜ಼ರುದ್ದೀನ್ ಹೋಜ‌ ಮಾರುಕಟ್ಟೆಗೆ ಹೋಗುತ್ತಿದ್ದ. ಅರ್ಧ ದಾರಿಯಲ್ಲಿ

ಕತ್ತೆ ಇದ್ದಕ್ಕಿದ್ದಂತೆ ನಿಂತುಬಿಟ್ಟಿತು. ಪುನಃ ಮುಂದಕ್ಕೆ ಚಲಿಸುವಂತೆ ಅದನ್ನು ಒಲಿಸಲು ಹೋಜ ಎಷ್ಟು ಪ್ರಯತ್ನಿಸಿದರೂ ಅದು ಅಲುಗಾಡಲಿಲ್ಲ. ಇದರಿಂದ ಹತಾಶನಾದ ಹೋಜನಿಗೆ ವಿಪರೀತ ಸಿಟ್ಟು ಬಂದಿತು. ಅವನು ಒಂದು ದೊಣ್ಣೆಯಿಂದ ಅದಕ್ಕೆ ಬಲವಾಗಿ ಹೊಡೆಯಲಾರಂಭಿಸಿದ. ಅದನ್ನು ನೋಡಲು ಅಲ್ಲಿ ಜನ ಒಟ್ಟು ಸೇರಿದರು.

ಅವರ ಪೈಕಿ ಒಬ್ಬ ಕೇಳಿದ, “ಆ ಬಡಪ್ರಾಣಿಗೇಕೆ ಹೊಡೆಯುತ್ತಿರುವೆ?”

“ಅದಕ್ಕೆ ಹೊಡೆಯುವುದನ್ನು ತಕ್ಷಣ ನಿಲ್ಲಿದು,” ಆಜ್ಞಾಪಿಸಿದ ಇನ್ನೊಬ್ಬ.

“ನೀನೆಷ್ಟು ಕ್ರೂರಿ,” ಅಂದ ಮಗದೊಬ್ಬ.

ಹೋಜ ಹೊಡೆಯುವುದನ್ನು ನಿಲ್ಲಿಸಿ ಮೆಚ್ಚುಗೆಯ ದೃಷ್ಟಿಯಿಂದ ಕತ್ತೆಯನ್ನು ನೋಡುತ್ತ ಹೇಳಿದ, “ನಿನ್ನ ರಕ್ಷಣಗೆ ಧಾವಿಸಿ ಬರಲು ಇಷ್ಟೊಂದು ಬಂಧುಗಳು ನಿನಗಿದ್ದಾರೆ ಎಂಬುದು ಮೊದಲೇ ತಿಳಿದಿದ್ದಿದ್ದರೆ ನಾನು ನಿನಗೆ ಹೊಡೆಯುತ್ತಲೇ ಇರಲಿಲ್ಲ. ‘ದೊಡ್ಡಬಾಯಿ’ಯ ಅನೇಕರಿರುವ ದೊಡ್ಡ ಕುಟುಂಬದಿಂದ ನೀನು ಬಂದಿರುವೆ ಎಂಬುದು ಈಗ ನನಗೆ ತಿಳಿಯಿತು.”

ಇದರಿಂದ ಕುಪಿತರಾದ ಟೀಕೆ ಮಾಡಿದವರು ಅಲ್ಲಿಂದ ಹೊರಟು ಹೋದರು, ಹೋಜ ತನಗೆ ತಿಳಿದಂತೆ ತನ್ನ ಕತ್ತೆಯನ್ನು ನಿಭಾಯಿಸಿಕೊಳ್ಳಲಿ ಎಂಬುದಾಗಿ ಮನಸ್ಸಿನಲ್ಲಿ ಅಂದುಕೊಂಡು ಉಳಿದವರೂ ತೆರಳಿದರು.

*****

೩. ಮೌಲಾನಿಗೆ ಹಾಲು

ಅದೊಂದು ದಿನ ಮುಲ್ಲಾ ನಜ಼ರುದ್ದೀನ್ ಎಲ್ಲಿಗೋ ಹೋಗುತ್ತಿದ್ದಾಗ ಹಾಲಿನ ಒಂದು ದೊಡ್ಡ ಕ್ಯಾನನ್ನು ಹೊತ್ತುಕೊಂಡ ಒಬ್ಬಾತನನ್ನು ಸಂಧಿಸಿದ. ಆತ ಮುಲ್ಲಾನಿಗೆ ನಮಸ್ಕರಿಸಿ ಹೇಳಿದ, “ಮುಲ್ಲಾಜೀ, ನನಗೊಂದು ಸಮಸ್ಯೆ ಇದೆ. ಅದಕ್ಕೊಂದು ಪರಿಹಾರ ಸೂಚಿಸುವಿರಾ?” ಹಾಲಿನ ಕ್ಯಾನನ್ನೇ ನೋಡುತ್ತಿದ್ದ ಮುಲ್ಲಾ ಬಲು ಸಂತೋಷದಿಂದಲೇ ಆತನ ಸಮಸ್ಯೆಯನ್ನು ಕೇಳಲು ಸಮ್ಮತಿಸಿದ.

ಆತ ಹೇಳಿದ, “ಬೆಳಗ್ಗೆ ನಿದ್ದೆಯಿಂದ ಎದ್ದಾಗ ಅಮಲೇರಿದ ಭಾವನೆ ಉಂಟಾಗುತ್ತದೆ. ತಲೆಸುತ್ತಿನ ಜೊತೆಗೆ ಮದ್ಯಪಾನದ ಪರಿಣಾಮದ ಶೇಷ ಉಳಿದಂತೆಯೂ ಭಾಸವಾಗುತ್ತದೆ. ಇಂತೇಕೆ ಆಗುತ್ತದೆ ಎಂಬುದೇ ತಿಳಿಯುತ್ತಿಲ್ಲ.”

ಮುಲ್ಲಾ ಪ್ರತಿಕ್ರಿಯಿಸಿದ, “ಹಂ…! ನಿಜವಾಗಿಯೂ ಇದೊಂದು ಗಂಭೀರ ಸಮಸ್ಯೆ. ಆಲೋಚಿಸಬೇಕಾದ ವಿಷಯ. ರಾತ್ರಿ ಮಲಗುವ ಮುನ್ನ ಸಾಮಾನ್ಯವಾಗಿ ನೀನು ಏನನ್ನು ತಿನ್ನುವೆ ಅಥವ ಕುಡಿಯುವೆ?”

“ಒಂದು ದೊಡ್ಡ ಲೋಟದಲ್ಲಿ ಹಾಲು ಕುಡಿಯುತ್ತೇನೆ.”

“ಹಾಂ! ನಿನ್ನ ಸಮಸ್ಯೆಯ ಮೂಲ ತಿಳಿಯಿತು. ನೀನು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲು ಮತ್ತು ಬರಿಸುತ್ತಿದೆ.”

ಸುಲಭವಾಗಿ ನಂಬಿ ಮೋಸಹೋಗುವ ಆತ ಕೇಳಿದ, “ಅದು ಹೇಗೆ ಮುಲ್ಲಾಜಿ?”

ಮುಲ್ಲಾ ವಿವರಿಸಿದ, “ನೀನು ನಿದ್ದೆ ಮಾಡುವ ಮುನ್ನ ಹಾಲು ಕುಡಿಯುತ್ತಿರುವೆ. ನಿದ್ದೆ ಮಾಡುವಾಗ ನೀನು ಹಾಸಿಗೆಯಲ್ಲಿ ಹೊರಳಾಡುತ್ತೀಯ. ಆಗ ಹಾಲು ಕಡೆಯಲ್ಪಟ್ಟು ಬೆಣ್ಣೆಯಾಗುತ್ತದೆ. ಆ ಬೆಣ್ಣೆ ಪುನಃ ಕಡೆಯಲ್ಪಟ್ಟು ಕೊಬ್ಬು ಆಗುತ್ತದೆ. ಕೊಬ್ಬನ್ನು ಕಡೆದಾಗ ಸಕ್ಕರೆ ಆಗುತ್ತದೆ. ಆ ಸಕ್ಕರೆ ಕಡೆಯಲ್ಪಟ್ಟು ಮದ್ಯವಾಗುತ್ತದೆ. ಇಂತು ನೀನು ಬೆಳಗ್ಗೆ ಏಳುವ ವೇಳೆಗೆ ಅಂತಿಮವಾಗಿ ನಿನ್ನ ಹೊಟ್ಟೆಯಲ್ಲಿ ಮದ್ಯ ಇರುತ್ತದೆ. ಆದ್ದರಿಂದ ನಿನಗೆ ಈ ಎಲ್ಲ ತೊಂದರೆಗಳು ಆಗುತ್ತಿವೆ.”

ಚತುರ ಮುಲ್ಲಾ ಹೇಳಿದ, “ನಿನ್ನ ಸಮಸ್ಯೆಯನ್ನು ಪರಿಹರಿಸುವುದು ಬಲು ಸುಲಭ. ಹಾಲು ಕುಡಿಯಬೇಡ! ಅದನ್ನು ನನಗೆ ಕೊಡು.” ಇಂತು ಹೇಳಿದ ಮುಲ್ಲಾ ಅವನಿಂದ ಹಾಲಿನ ಕ್ಯಾನನ್ನು ತೆಗೆದುಕೊಂಡು ಅಲ್ಲಿಂದ ಹೊರಟುಹೋದ.

ಆ ಬಡಪಾಯಿ ಅಲ್ಲಿಯೇ ದಿಗ್ಭ್ರಾಂತನಾಗಿ ನಿಂತೇ ಇದ್ದ.

*****

೪. ಕಿಕ್ಕಿರಿದ ಮನೆ

ಒಂದು ದಿನ ಮುಲ್ಲಾ ನಜ಼ರುದ್ದೀನ್ ನೆರೆಮನೆಯವನೊಂದಿಗೆ ಮಾತನಾಡುತ್ತಿರುವಾಗ ಆತ ಬಲು ಸಂಕಟ ಪಡುತ್ತಿರುವವನಂತೆ ಕಾಣುತ್ತಿದ್ದ. ಅವನಿಗೇನು ತೊಂದರೆ ಇದೆ ಎಂಬುದನ್ನು ಮುಲ್ಲಾ ವಿಚಾರಿಸಿದ. ತನ್ನ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಆತ ವಿವರಿಸುತ್ತಾ ಹೇಳಿದ, “ನನ್ನದು ಬಲು ಚಿಕ್ಕ ಮನೆ, ಮುಲ್ಲಾ. ನಾನು, ನನ್ನ ಹೆಂಡತಿ, ನನ್ನ ಮೂರು ಮಕ್ಕಳು, ನನ್ನ ಅತ್ತೆ ಎಲ್ಲರೂ ಇಷ್ಟು ಚಿಕ್ಕ ಮನೆಯಲ್ಲಿ ಒಟ್ಟಿಗೇ ವಾಸ ಮಾಡಬೇಕಾಗಿದೆ. ಸ್ಥಳ ಕಮ್ಮಿ ಇರುವುದರಿಂದ ಓಡಾಡಲು ಸ್ಥಳವೇ ಇಲ್ಲ.” ಆ ಪರಿಸ್ಥಿತಿ ನಿಭಾಯಿಸಲು ಏನಾದರೂ ಉಪಾಯ ತಿಳಿಸುವಂತೆ ಮುಲ್ಲಾನನ್ನು ಆತ ವಿನಂತಿಸಿದ.

ನಜ಼ರುದ್ದೀನ್ ಕೇಳಿದ, “ನಿನ್ನ ಹತ್ತಿರ ಕೋಳಿಗಳು ಇವೆಯೇ?”

“ಓಹೋ, ಹತ್ತು ಕೋಳಿಗಳಿವೆ.”

“ಬಹಳ ಒಳ್ಳೆಯದಾಯಿತು. ಆ ಹತ್ತೂ ಕೋಳಿಗಳನ್ನು ಮನೆಯೊಳಕ್ಕೆ ಒಯ್ದು ಅಲ್ಲಿಯೇ ಇರಿಸಿಕೊ.”

“ಅಯ್ಯೋ ಮುಲ್ಲಾ, ಈಗಾಗಲೇ ನನ್ನ ಮನೆಯೊಳಗೆ ಅತೀ ಹೆಚ್ಚು ಮಂದಿ ಇದ್ದಾರೆ.”

“ಮರು ಮಾತನಾಡದೆ ನಾನು ಹೇಳಿದಷ್ಟು ಮಾಡು,” ಆಜ್ಞಾಪಿಸಿದ ಮುಲ್ಲಾ.

ನೆರೆಮನೆಯಾತನನ್ನು ಸ್ಥಳಾವಕಾಶದ ಸಮಸ್ಯೆ ಬಹುವಾಗಿ ಕಾಡುತ್ತಿದ್ದದ್ದರಿಂದ ಮುಲ್ಲಾನ ಸಲಹೆಯಂತೆ ಮಾಡಲು ತೀರ್ಮಾನಿಸಿದ. ಮನೆಗೆ ಹೋದ ತಕ್ಷಣ ಹೊರಗಿದ್ದ ಕೋಳಿಗಳನ್ನು ಮನೆಯೊಳಕ್ಕೆ ಸಾಗಿಸಿದ. ಮಾರನೆಯ ದಿನ ಅವನು ನಜ಼ರುದ್ದೀನನ್ನು ಭೇಟಿ ಮಾಡಿ ಹೇಳಿದ, “ಮುಲ್ಲಾ, ನಿನ್ನ ಸಲಹೆಯಂತೆ ಕೋಳಿಗಳನ್ನು ಮನೆಯೊಳಕ್ಕೆ ಸಾಗಿಸಿದೆ. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ವಾಸ್ತವವಾಗಿ ಅದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಮನೆಯೊಳಗೆ ಸ್ಥಳಾವಕಾಶ ಇನ್ನು ಕಮ್ಮಿ ಆಯಿತು.”

ನಜ಼ರುದ್ದೀನ್‌ ಹೇಳಿದ, “ಓ ಹಾಗಾಗಿದೆಯೋ! ಈಗ ನಿನ್ನ ಕತ್ತೆಯನ್ನೂ ಮನೆಯೊಳಕ್ಕೆ ಒಯ್ದು ಅಲ್ಲಿಯೇ ಇಟ್ಟುಕೊ.”

ಈ ಸಲಹೆ ನೆರೆಮನೆಯಾತನಿಗೆ ಪಥ್ಯವಾಗದೇ ಇದ್ದರೂ ನಜ಼ರುದ್ದೀನ್ ಅವನನ್ನು ಒಪ್ಪಿಸುವುದರಲ್ಲಿ ಯಶಸ್ವಿಯಾದ.

ಮಾರನೆಯ ದಿನ ಅವನು ನಜ಼ರುದ್ದೀನನ್ನು ಭೇಟಿ ಮಾಡಿ ಬಲು ಬಳಲಿಕೆಯಿಂದ ಹೇಳಿದ, “ಈಗ ಆರು ಮನುಷ್ಯರು, ಹತ್ತು ಕೋಳಿಗಳು ಹಾಗೂ ಒಂದು ಕತ್ತೆ ಮನೆಯೊಳಗೆ. ಅಲುಗಾಡುವುದೇ ಕಷ್ಟವಾಗುತ್ತಿದೆ.”

ನಜ಼ರುದ್ದೀನ್ ಕೇಳಿದ, “ನಿನ್ನ ಹತ್ತಿರ ಆಡು ಇದೆಯೇ?”

“ಇದೆ.”

“ಬಹಳ ಒಳ್ಳೆಯದಾಯಿತು. ಅದನ್ನೂ ಮನೆಯೊಳಗೆ ಸಾಗಿಸು.”

“ಅದರಿಂದ ಸಮಸ್ಯೆ ಹೇಗೆ ಪರಿಹಾರವಾಗುತ್ತದೆ,” ಸಿಟ್ಟಿನಿಂದ ಕೇಳಿದ ನೆರೆಮನೆಯಾತ. ಏನೇನೋ ಹೇಳಿ ಮುಲ್ಲಾ ಅವನನ್ನು ಒಪ್ಪಿಸಿದ.

ಮಾರನೆಯ ದಿನ ಕೋಪೋದ್ರಿಕ್ತನಾಗಿದ್ದ ನೆರೆಮನೆಯಾತ ನಜ಼ರುದ್ದೀನನನ್ನು ಭೇಟಿ ಮಾಡಿ ಹೇಳಿದ, “ನಿನ್ನ ಯೋಜನೆಯ ಅನುಷ್ಠಾನದಿಂದ ನಾವು ಮನೆಯೊಳಗೆ ಜೀವಿಸುವುದೇ ಕಷ್ಟವಾಗಿದೆ. ಪರಿಸ್ಥಿತಿ ಏನಾಗಿದೆಯೆಂದರೆ ಉಸಿರಾಡುವುದೇ ಕಷ್ಟವಾಗಿದೆ. ನನ್ನ ಕುಟುಂಬದ ಎಲ್ಲ ಸದಸ್ಯರೂ ಸ್ಥಳವೇ ಇಲ್ಲದಿರುವುದಕ್ಕೆ ಗೊಣಗಲಾರಂಭಿಸಿದ್ದಾರೆ.”

“ಮನಃಕ್ಷೋಭೆಗೊಳಗಾಗ ಬೇಡ ಗೆಳೆಯ! ಈಗ ಮನೆಗೆ ಹೋಗಿ ಎಲ್ಲ ಪ್ರಾಣಿಗಳನ್ನೂ ಹೊರಕ್ಕೆ ತಾ.”

ಆತ ಅಂತೆಯೇ ಮಾಡಿದ.

ಮಾರನೆಯ ದಿನ ನಜ಼ರುದ್ದೀನನನ್ನು ಭೇಟಿ ಮಾಡಿ ಬಲು ಆನಂದದಿಂದ ಹೇಳಿದ, “ಧನ್ಯವಾದಗಳು ಮುಲ್ಲಾ. ನಿನ್ನ ಸಲಹೆ ಪವಾಡವನ್ನೇ ಮಾಡಿದೆ. ಪ್ರಾಣಿಗಳನ್ನು ಹೊರಕ್ಕೆ ಸಾಗಿಸಿದ ಮೇಲೆ ಕುಟುಂಬದ ಎಲ್ಲ ಸದಸ್ಯರಿಗೂ ಸಾಕಾಗುವಷ್ಟು ಸ್ಥಳಾವಕಾಶ ಸಿಕ್ಕಿದೆ. ಎಲ್ಲರಿಗೂ ಸಂತೋಷವಾಗಿದೆ. ಎಲ್ಲರೂ ಮನೆಯಲ್ಲಿ ಲಭ್ಯವಿರುವ ಸ್ಥಳಾವಕಾಶದ ಕುರಿತು ಈಗ ತೃಪ್ತರಾಗಿದ್ದಾರೆ.”

*****

. ಖಾತರಿ ಕೊಡುವಿಕೆ.

ರಾಜನ ಆಸ್ಥಾನಕ್ಕೆ ‌ಒಮ್ಮೆ ನಜ಼ರುದ್ದೀನ್ ಹೋಗಿದ್ದಾಗ ರಾಜ ಅವನನ್ನು ಕೇಳಿದ, “ಮುಲ್ಲಾ ನಜ಼ರುದ್ದೀನ್‌, ನೀನು ಯಾವಾಗಲೂ ನಿನ್ನ ವಿವೇಕ ಹಾಗೂ ಚಾಣಾಕ್ಷತನದ ಕುರಿತು ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತೀಯಲ್ಲ, ನಿನ್ನ ಕತ್ತೆಗೆ ಓದಲು ಕಲಿಸಲು ನಿನ್ನಿಂದ ಸಾಧ್ಯವೇ ಹೇಳು ನೋಡೋಣ.”

“ಓಹೋ, ಖಂಡಿತ ಮಹಾಪ್ರಭು, ಅದು ಬಲು ಸುಲಭದ ಕಾರ್ಯ,” ಉತ್ತರಿಸಿದ ನಜ಼ರುದ್ದೀನ್.

“ನಂಬಲಸಾಧ್ಯ,” ರಾಜ ಪ್ರತಿಕ್ರಿಯಿಸಿದ.

ನಜ಼ರುದ್ದೀನ್ ಹೇಳಿದ, “ನಾನು ನಿಜ ಹೇಳುತ್ತಿದ್ದೇನೆ ಮಹಾಪ್ರಭು. ನಾನು ಅದನ್ನು ಸಾಬೀತು ಪಡಿಸಬಲ್ಲೆ.”

“ಹಾಗಿದ್ದರೆ ಈ ಕಾರ್ಯವನ್ನು ಪಂಥಾಹ್ವಾನವಾಗಿ ಸ್ವೀಕರಿಸಲು ನೀನು ಸಿದ್ಧನಿರುವೆಯಾ?” ಕೇಳಿದ ರಾಜ.

“ಸಿದ್ಧನಿದ್ದೇನೆ ಮಹಾಪ್ರಭು, ನೀವು ಈ ಕ್ಷಣದಲ್ಲಿ ನನಗೆ ೫೦ ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟರೆ ಇನ್ನು ಎಂಟು ವರ್ಷಗಳು ಕಳೆಯುವಷ್ಟರಲ್ಲಿ ನನ್ನ ಕತ್ತೆಗೆ ಓದಲು ಕಲಿಸುವ ಭರವಸೆ ಕೊಡುತ್ತೇನೆ,” ಎಂಬುದಾಗಿ ಉತರಿಸಿದ ನಜ಼ರುದ್ದೀನ್.

ರಾಜ ಹೇಳಿದ, “ಬಹಳ ಒಳ್ಳೆಯದು, ನಿನ್ನ ಷರತ್ತಿಗೆ ನನ್ನ ಒಪ್ಪಿಗೆ ಇದೆ. ಆದರೆ, ನನ್ನದೂ ಒಂದು ಷರತ್ತು ಇದೆ. ಎಂಟು ವರ್ಷಗಳ ನಂತರ ನಿನ್ನ ಕತ್ತೆ ಓದಲು ಅಸಮರ್ಥವಾಗಿದ್ದರೆ ನಿನ್ನನ್ನು ಸೆರೆಮನೆಗೆ ಹಾಕಿ ಪ್ರತೀದಿನ ಚಿತ್ರಹಿಂಸೆ ಮಾಡಲಾಗುತ್ತದೆ.”

ಇಬ್ಬರೂ ಈ ಷರತ್ತುಗಳನ್ನು ಉಲ್ಲೇಖಿಸಿ ಯುಕ್ತ ಒಪ್ಪಂದ ಮಾಡಿಕೊಂಡ ನಂತರ ನಜ಼ರುದ್ದೀನ್ ತನ್ನ ಮನೆಗೆ ಹಿಂದಿರುಗಿದ.

ರಾಜನ ಆಸ್ಥಾನದಲ್ಲಿ ಏನು ನಡೆಯಿತೆಂಬುದನ್ನು ನಜ಼ರುದ್ದೀನ್‌ ತನ್ನ ಮಿತ್ರನಿಗೆ ಮಾರನೆಯ ದಿನ ವಿವರಿಸಿದ.

“ಮುಲ್ಲಾ, ಇಂಥದ್ದೊಂದು ಅಸಾಧನೀಯ ಕಾರ್ಯವನ್ನು ಮಾಡುತ್ತೇನೆಂದು ಹೇಗೆ ಒಪ್ಪಿಕೊಂಡೆ? ನಿನ್ನ ಕತ್ತೆ ಅಲುಗಾಡದಂತೆ ನಿಲ್ಲುವಂತೆ ಮಾಡುವುದೂ ನಿನ್ನಿಂದ ಸಾಧ್ಯವಿಲ್ಲ. ಅಂದ ಮೇಲೆ ಎಂಟು ವರ್ಷಗಳಲ್ಲಿ ಅದಕ್ಕೆ ಓದಲು ಕಲಿಸುತ್ತೇನೆಂದು ಹೇಗೆ ಭರವಸೆ ಕೊಟ್ಟೆ? ಸೆರೆಮನೆ ವಾಸವನ್ನು ನೀನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ.

ಶಾಂತಚಿತ್ತನಾಗಿ ನಜ಼ರುದ್ದೀನ್ ಉತ್ತರಿಸಿದ, “ನಿಶ್ಚಿಂತನಾಗಿರು ಮಿತ್ರ! ಆ ವೇಳೆಗೆ ಬಹುಶಃ ನಮ್ಮ ರಾಜನೇ ಸತ್ತು ಹೋಗಿರುತ್ತಾನೆ ಅಥವ ಅವನು ರಾಜನಾಗಿ ಉಳಿದಿರುವುದಿಲ್ಲ. ಎಂಟು ವರ್ಷಗಳ ನಂತರವೂ ಅವನು ರಾಜನಾಗಿ ಉಳಿದಿದ್ದರೆ, ಬಹುಶಃ ನನ್ನ ಕತ್ತೆಯೇ ಸತ್ತು ಹೋಗಿರುತ್ತದೆ. ಏಳು ವರ್ಷಗಳು ಕಳೆಯುವುದರೊಳಗೆ ಇವು ಯಾವುದೂ ಸಂಭವಿಸದೇ ಇದ್ದರೆ ಉಳಿದ ಒಂದು ವರ್ಷದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ಯೋಜನೆಯೊಂದನ್ನು ರೂಪಿಸುತ್ತೇನೆ.”

*****

೬. ಮರದ ಮೇಲಿನ ಮನುಷ್ಯ

ಒಬ್ಬ ಒಂದು ಎತ್ತರವಾಗಿದ್ದ ಮರವನ್ನು ಹತ್ತಿದ. ಹತ್ತುವಾಗ ಅದು ಎಷ್ಟು ಎತ್ತರ ಇರಬಹುದೆಂಬುದು ಆತನಿಗೆ ಹೊಳೆದಿರಲಿಲ್ಲ. ತುದಿಯನ್ನು ತಲುಪಿ ಕೆಳಗೆ ನೋಡಿದಾಗ ಇಳಿಯುವುದು ಏರಿದಷ್ಟು ಸುಲಭವಲ್ಲ ಎಂಬುದು ಅವನಿಗೆ ಹೊಳೆಯಿತು. ತೀವ್ರವಾದ ಗಾಯವಾಗದೇ ಇಳಿಯುವುದು ಹೇಗೆಂಬುದು ಅವನಿಗೆ ತಿಳಿಯಲಿಲ್ಲ. ಆ ಮರದ ಸಮೀಪದಲ್ಲಿ ಹೋಗುತ್ತಿದ್ದವರನ್ನು ತನಗೆ ಸಹಾಯ ಮಾಡುವಂತೆ ವಿನಂತಿಸಿದ. ಆದರೆ ಸುರಕ್ಷಿತವಾಗಿ ಅವನನ್ನು ಕೆಳಕ್ಕೆ ಇಳಿಸುವುದು ಹೇಗೆಂಬುದು ಯಾರಿಗೂ ತಿಳಿದಿರಲಿಲ್ಲ. ಅವನಿಗೆ ಸಹಾಯ ಮಾಡಲು ಇಚ್ಛಿಸುವವರ ಒಂದು ಗುಂಪು ಮರದ ಸುತ್ತಲೂ ಸೇರಿತಾದರೂ ಯಾರಿಗೂ ಏನು ಮಾಡಬೇಕೆಂಬುದು ಗೊತ್ತಿರಲಿಲ್ಲ. ಆ ಮನುಷ್ಯ ಮರದ ತುದಿಯಲ್ಲಿಯೇ ಇದ್ದ. ಆ ಸಮಯಕ್ಕೆ ಸರಿಯಾಗಿ ‌ಆ ಮಾರ್ಗವಾಗಿ ಹೋಗುತ್ತಿದ್ದ ನಜ಼ರುದ್ದೀನ್ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಅಲ್ಲಿಗೆ ಬಂದ. ವಿಷಯ ಏನೆಂಬುದನ್ನು ತಿಳಿದ ನಜ಼ರುದ್ದೀನ್‌ ಹೇಳಿದ, “ಅಷ್ಟೇನಾ? ಕ್ಷಣ ಮಾತ್ರದಲ್ಲಿ ನಾನು ಅವನನ್ನು ಕೆಳಕ್ಕೆ ಇಳಿಸುತ್ತೇನೆ.” ಒಂದು ಉದ್ದನೆಯ ಹಗ್ಗವನ್ನು ಎಲ್ಲಿಂದಲೋ ತರಿಸಿದ ಆತ ಅದರ ಒಂದು ತುದಿಯನ್ನು ಮೇಲಕ್ಕೆಸೆಯುವುದಾಗಿಯೂ ಅದನ್ನು ಹಿಡಿದು ತನ್ನ ಸೊಂಟಕ್ಕೆ ಭದ್ರವಾಗಿ ಕಟ್ಟಿಕೊಳ್ಳುವಂತೆಯೂ ಮರದ ಮೇಲಿದ್ದಾತನಿಗೆ ಹೇಳಿದ.

ನಜ಼ರುದ್ದೀನನ ಯೋಜನೆ ಏನೆಂಬುದು ಯಾರಿಗೂ ಅರ್ಥವಾಗಲಿಲ್ಲ. ಎಂದೇ ಒಬ್ಬ ‌ಅದೇನೆಂದು ವಿಚಾರಿಸಿದಾಗ ನಜ಼ರುದ್ದೀನ್ ಹೇಳಿದ, “ಸುಮ್ಮನೆ ಈ ಕೆಲಸವನ್ನು ನನಗೆ ಬಿಟ್ಟುಬಿಡಿ. ನನ್ನ ಯೋಜನೆ ಯಶಸ್ವಿಯಾಗುವುದು ಖಾತರಿ.”

ಮರದ ಮೇಲಿದ್ದಾತ ಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡ ನಂತರ ನಜ಼ರುದ್ದೀನ್‌ ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಹಗ್ಗವನ್ನು ಜೋರಾಗಿ ಎಳೆದ. ತತ್ಪರಿಣಾಮವಾಗಿ ಮರದ ಮೇಲಿದ್ದಾತ ದೊಪ್ಪನೆ ಕೆಳಕ್ಕೆ ಬಿದ್ದು ಅವನ ಮೂಳೆ ಮುರಿಯಿತು. ನೋಡುತ್ತಿದ್ದವರಿಗೆ ಆಘಾತವಾಯಿತು. ಅವರ ಪೈಕಿ ಒಬ್ಬಾತ ಕೇಳಿದ, “ಏನಾಗುತ್ತದೆಂದು ನೀನು ಊಹಿಸಿದ್ದೆ? ಇದೆಂಥ ಮೂರ್ಖ ವಿಧಾನ?”

ನಜರುದ್ದೀನ್‌ ಉತ್ತರಿಸಿದ, “ಹಿಂದೊಮ್ಮೆ ಇದೇ ವಿಧಾನದಿಂದ ನಾನೊಬ್ಬನ ಪ್ರಾಣ ಉಳಿಸಿದ್ದೆ.”

ಇನ್ನೊಬ್ಬ ಕೇಳಿದ, “ನಿಜವಾಗಿಯೂ?”

“ನಿಜವಾಗಿಯೂ. ಒಂದೇ ಒಂದು ವಿಷಯವೆಂದರೆ ನಾನು ಅವನನ್ನು ಬಾವಿಯೊಳಗಿದ್ದಾಗ ರಕ್ಷಿಸಿದೆನೋ ಅಥವ ಮರದ ಮೇಲಿದ್ದಾಗಲೋ ಎಂಬುದು ನೆನಪಾಗುತ್ತಿಲ್ಲ.”

*****

೭. ನಿದ್ದೆ ಮಾಡುತ್ತಿರುವೆಯೇನು?

ಒಮ್ಮೆ ಮುಲ್ಲಾ ನಜ಼ರುದ್ದೀನ್‌ ಹಾಸಿಗೆಯಲ್ಲಿ ಕಣ್ಣುಮುಚ್ಚಿ ಮಲಗಿದ್ದಾಗ ಅವನ ಭಾವ ಒಳಬಂದು ಕೇಳಿದ. “ನಿದ್ದೆ ಮಾಡುತ್ತಿರುವೆಯೇನು?” ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಏಕೆ? ಏನು ವಿಷಯ?”

ಭಾವ ಹೇಳಿದ, “ನನಗೆ ೩೦೦ ಚಿನ್ನದ ನಾಣ್ಯಗಳ ಸಾಲ ಬೇಕಾಗಿತ್ತು. ನೀನು ಅಷ್ಟು ಹಣ ಸಾಲ ನೀಡಬಲ್ಲೆಯಾ ಎಂಬುದಾಗಿ ಆಲೋಚಿಸುತ್ತಿದ್ದೆ.”

ಮುಲ್ಲಾ ಉತ್ತರಿಸಿದ, “ಓ, ಅದೋ ವಿಷಯ. ಹಾಗಾದರೆ ಈಗ ನಿನ್ನ ಮೊದಲನೇ ಪ್ರಶ್ನೆ ‘ನಿದ್ದೆ ಮಾಡುತ್ತಿರುವೆಯೇನು?’ ಅನ್ನು ಈಗ ಗಮನಿಸೋಣ. ಅದಕ್ಕೆ ನನ್ನ ಉತ್ತರ ‘ಹೌದು, ನಾನು ನಿದ್ದೆ ಮಾಡುತ್ತಿದ್ದೇನೆ’. ಆದ್ದರಿಂದ ಈಗ ಇಲ್ಲಿಂದ ಹೊರಡು, ಪುನಃ ಬಂದು ನನಗೆ ತೊಂದರೆ ಕೊಡಬೇಡ.”

*****

೮. ಯಾವಾಗ ಅನ್ನುವುದು ಪ್ರಶ್ನೆ

ನಜ಼ರುದ್ದೀನ್ ಹೋಜ ತನ್ನ ಜಮೀನನ್ನು ಉಳುತ್ತಿದ್ದಾಗ ಒಬ್ಬ ಬೇಟೆಗಾರ ಕುದುರೆ ಸವಾರಿ ಮಾಡುತ್ತಾ ಅಲ್ಲಿಗೆ ಬಂದ.

ಬೇಟೆಗಾರ ಕೇಳಿದ, “ಏಯ್‌ ನೀನು! ಗಂಡು ಹಂದಿಯೊಂದು ಈ ಸ್ಥಳದ ಮೂಲಕ ಓಡಿದ್ದನ್ನು ನೋಡಿದೆಯಾ?”

“ನೋಡಿದೆ,” ಉತ್ತರಿಸಿದ ಹೋಜ.

“ಅದು ಯಾವ ಕಡೆಗೆ ಹೋಯಿತು,” ವಿಚಾರಿಸಿದ ಬೇಟೆಗಾರ.

ಅದು ಹೋದ ದಿಕ್ಕನ್ನು ತೋರಿಸಿದ ಹೋಜ.

ಧನ್ಯವಾದಗಳನ್ನೂ ಹೇಳದೆ ಬೇಟೆಗಾರನು ಹೋಜ ತೋರಿಸಿದ ದಿಕ್ಕಿನತ್ತ ದೌಡಾಯಿಸಿದ, ಕೆಲವೇ ನಿಮಿಷಗಳಲ್ಲಿ ಹಿಂದಕ್ಕೆ ಬಂದ.

“ಎಲ್ಲಿಯೂ ಅದರ ಸುಳಿವೇ ಇಲ್ಲ. ಆ ದಿಕ್ಕಿಗೇ ಅದು ಹೋದದ್ದು ನಿಜವಷ್ಟೆ?” ಪ್ರಶ್ನಿಸಿದ ಬೇಟೆಗಾರ.

ಹೋಜ ಉತ್ತರಿಸಿದ, “ಸಂಶಯವೇ ಇಲ್ಲ. ಅದು ಆ ದಿಕ್ಕಿಗೇ ಹೋಯಿತು, ಎರಡು ವರ್ಷಗಳ ಹಿಂದೆ.”

*****

. ಹೋಜನ ಕತ್ತೆ

ನಜ಼ರುದ್ದೀನ್‌ ಹೋಜ ತನ್ನ ಕತ್ತೆಯನ್ನು ಮಾರುಕಟ್ಟೆಗೆ ಒಯ್ದು ೩೦ ದಿನಾರ್‌ಗಳಿಗೆ ಮಾರಿದ.

ಅದನ್ನು ಕೊಂಡುಕೊಂಡವನು ತಕ್ಷಣವೇ ಕತ್ತೆಯನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ.

“ಅತ್ಯುತ್ತಮ ಗುಣಮಟ್ಟದ ಈ ಪ್ರಾಣಿಯನ್ನು ನೋಡಿ!” ದಾರಿಹೋಕರನ್ನು ತನ್ನತ್ತ ಆಕರ್ಷಿಸಲೋಸುಗ ಅವನು ಬೊಬ್ಬೆಹಾಕಲಾರಂಭಿಸಿದ. “ಇದಕ್ಕಿಂತ ಉತ್ತಮವಾದ ಕತ್ತೆಯನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿ, ಇದು ಎಷ್ಟು ಸ್ವಚ್ಛವಾಗಿದೆ, ಎಷ್ಟು ಬಲವಾಗಿದೆ.”

ಆ ಕತ್ತೆಯ ಇನ್ನೂ ಅನೇಕ ಒಳ್ಳೆಯ ಗುಣಗಳನ್ನು ಪಟ್ಟಿಮಾಡಿದ. ಇದನ್ನೆಲ್ಲ ಕೇಳಿದ ಒಬ್ಬಾತ ಅದಕ್ಕೆ ೪೦ ದಿನಾರ್‌ ಕೊಡುವುದಾಗಿ ಹೇಳಿದ. ಇನ್ನೊಬ್ಬ ೫೦ ಮತ್ತೊಬ್ಬ ೫೫ ದಿನಾರ್ ಕೊಡುವುದಾಗಿ ಹೇಳಿದರು.

ಇದನ್ನು ಗಮನಿಸುತ್ತಿದ್ದ ಹೋಜನಿಗೆ ಇಷ್ಟೊಂದು ಜನ ಆ ಕತ್ತೆಯನ್ನು ಪಡೆಯಲು ಹವಣಿಸುತ್ತಿದ್ದದ್ದನ್ನು ಕಂಡು ಆಶ್ಚರ್ಯವಾಯಿತು.

ಹೋಜ ಆಲೋಚಿಸಿದ, ‘ಅದೊಂದು ಸಾಧಾರಣ ಕತ್ತೆ ಎಂಬುದಾಗಿ ತಿಳಿದಿದ್ದ ನಾನೆಂಥ ಮೂರ್ಖ. ಅದು ಅದ್ವಿತೀಯವಾದದ್ದು, ಕೋಟಿಗೊಂದು ಇರುವಂಥ ಅಪರೂಪದ್ದು –”

ಕತ್ತೆಯನ್ನು ಹರಾಜಿಗಿಟ್ಟವ ವ್ಯಾಪಾರವನ್ನು ಕುದರಿಸಲು ತಯಾರಾಗಿ ಬೊಬ್ಬೆಹಾಕಿದ, “೭೫ ದಿನಾರ್‌ ಒಂದು ಸಲ —-, ೭೫ ದಿನಾರ್ ಎರಡು ಸಲ ——”

ಹೋಜ ಕಿರುಚಿದ, “೮೦ ದಿನಾರ್‌ಗಳು!”

*****

೧೦. ಬೆಂಕಿಯೂ ಹೆದರುತ್ತದೆ!

ಒಲೆಯಲ್ಲಿ ಇದ್ದ ಕೆಂಡಕ್ಕೆ ಗಾಳಿಯೂದಿ ಬೆಂಕಿ ಹೊತ್ತಿಸಲು ನಜ಼ರುದ್ದೀನ್ ಹೋಜ ಪ್ರಯತ್ನಿಸುತ್ತಿದ್ದ. ಬೆಂಕಿಯ ಬದಲು ಕಣ್ಣುರಿಸುವಷ್ಟು ದಟ್ಟವಾದ ಕಪ್ಪು ಹೊಗೆ ಉತ್ಪಾದಿಸುವುದರಲ್ಲಿ ಅವನು ಯಶಸ್ವಿಯಾದ. ಕಣ್ಣಿಗೆ ಹೊಗೆ ತಗಲುವುದನ್ನು ತಡೆಗಟ್ಟಲೋಸುಗ ಅವನು ತನ್ನ ಹೆಂಡತಿಯ ಟೊಪ್ಪಿಯೊಂದನ್ನು ಹಾಕಿಕೊಂಡು ಪುನಃ ಗಾಳಿಯೂದಲಾರಂಭಿಸಿದ. ಈ ಸಲ ಬೆಂಕಿ ಹೊತ್ತಿಕೊಂಡಿತು.

“ಆಹಾ! ನೀನೂ ಸಹ ನನ್ನ ಹೆಂಡತಿಗೆ ಹೆದರುವೆ ಎಂಬುದು ಈಗ ತಿಳಿಯಿತು,” ಉದ್ಗರಿಸಿದ ಹೋಜ.

 *****

 ೧೧. ಹೋಜನೂ ಪಂಡಿತನೂ

ಒಬ್ಬ ಪಂಡಿತನನ್ನು ನಜ಼ರುದ್ದೀನ್ ಹೋಜ ದೋಣಿಯ ನೆರವಿನಿಂದ ನದಿ ದಾಟಿಸುತ್ತಿದ್ದಾಗ ವ್ಯಾಕರಣಬದ್ಧವಾಗಿಲ್ಲದ ವಾಕ್ಯವೊಂದನ್ನು ಹೇಳಿದ.

ತಕ್ಷಣ ಆ ಪಂಡಿತ ಕೇಳಿದ, “ನೀನು ಎಂದೂ ವ್ಯಾಕರಣ ಕಲಿಯಲೇ ಇಲ್ಲವೇ?”

“ಇಲ್ಲ,” ಉತ್ತರಿಸಿದ ಹೋಜ.

“ಹಾಗಿದ್ದರೆ ನಿನ್ನ ಅರ್ಧ ಆಯುಷ್ಯ ವ್ಯರ್ಥವಾದಂತೆ,” ಉದ್ಗರಿಸಿದ ಪಂಡಿತ.

ತುಸು ಸಮಯದ ನಂತರ ಹೋಜ ಪಂಡಿತನತ್ತ ತಿರುಗಿ ಕೇಳಿದ, “ನೀವು ಎಂದಾದರೂ ಈಜು ಕಲಿತಿದ್ದಿರಾ?”

“ಇಲ್ಲ,” ಉತ್ತರಿಸಿದ ಪಂಡಿತ.

“ಹಾಗಿದ್ದರೆ ನಿಮ್ಮ ಪೂರ್ಣ ಆಯುಷ್ಯ ವ್ಯರ್ಥವಾದಂತೆ, ಏಕೆಂದರೆ ನಮ್ಮ ದೋಣಿ ಮುಳುಗುತ್ತಿದೆ,” ಉದ್ಗರಿಸಿದ ಹೋಜ.

*****

೧೨. ಹೋಜ ದರ್ಜಿಯ ಹತ್ತಿರ ಹೋದದ್ದು

ಹೋಜ ಒಬ್ಬ ದರ್ಜಿಯ ಹತ್ತಿರ ಹೋಗಿ ಅವನಿಗೊಂದು ಬಟ್ಟೆಯ ತುಂಡನ್ನು ಕೊಟ್ಟು ಅದರಲ್ಲಿ ತನಗೊಂದು ಅಂಗಿ ಹೊಲಿದು ಕೊಡುವಂತೆ ಹೇಳಿದ. ಅಂಗಿ ಹೊಲಿಯಲು ಅಗತ್ಯವಾದ ಅಳತೆಗಳನ್ನು ದರ್ಜಿ ಗುರುತು ಹಾಕಿಕೊಂಡ.

“ಅಂಗಿ ಯಾವಾಗ ಸಿಕ್ಕುತ್ತದೆ?” ಕೇಳಿದ ಹೋಜ.

“ದೈವೇಚ್ಛೆಯಾದರೆ ಒಂದು ವಾರದ ಅವಧಿಯಲ್ಲಿ ಅಂಗಿ ತಯಾರಾಗುತ್ತದೆ,” ಉತ್ತರಿಸಿದ ದರ್ಜಿ.

ಒಂದು ವಾರ ಕಳೆಯುವುದನ್ನು ಬಲು ಕಾತರದಿಂದ ಕಾಯುತ್ತಿದ್ದ ಹೋಜ ಏಳನೆಯ ದಿನ ಬೆಳಗ್ಗೆ ದರ್ಜಿಯ ಅಂಗಡಿಗೆ ಓಡಿದ. ಅಂಗಿ ಇನ್ನೂ ಹೊಲಿದು ಆಗಿಲ್ಲವೆಂಬುದನ್ನು ತಿಳಿದು ಅವನಿಗೆ ಬಲು ನಿರಾಸೆಯಾಯಿತು. “ದೈವೇಚ್ಛೆಯಾದರೆ ನಾಡಿದ್ದು ಅಂಗಿ ತಯಾರಾಗಿರುತ್ತದೆ,” ಹೇಳಿದ ದರ್ಜಿ.

ಎರಡು ದಿನಗಳು ಕಳೆದ ಬಳಿಕ ಹೋಜ ದರ್ಜಿಯ ಅಂಗಡಿಗೆ ಪುನಃ ಹೋದ, ಅಂಗಿ ಸಿದ್ಧವಾಗಿರಲಿಲ್ಲ. “ದೈವೇಚ್ಛೆಯಾದರೆ ಶನಿವಾರದ ಹೊತ್ತಿಗೆ ಅಂಗಿ ತಯಾರಾಗುತ್ತದೆ,” ಹೇಳಿದ ದರ್ಜಿ. ಶನಿವಾರವೂ ಅಂಗಿ ಸಿದ್ಧವಾಗಿರಲಿಲ್ಲ. “ದೈವೇಚ್ಛೆಯಾದರೆ —–” ಈ ಹಿಂದಿನಂತೆ ಹೇಳಲಾರಂಭಿಸಿದ ದರ್ಜಿ. “ನಿಲ್ಲು, ನಿಲ್ಲು. ದೇವರನ್ನು ಈ ವ್ಯವಹಾರದಿಂದ ದೂರವಿಟ್ಟರೆ ಅಂಗಿ ಯಾವಾಗ ಹೊಲಿದಾಗುತ್ತದೆ ಎಂಬುದನ್ನು ಹೇಳು,” ಕಿರುಚಿದ ದರ್ಜಿಯ ಅಂಗಡಿಗೆ ಅಲೆದಲೆದು ಸುಸ್ತಾಗಿದ್ದ ನಜ಼ರುದ್ದೀನ್ ಹೋಜ.

*****

೧೩. ಹೋಜನ ಪವಿತ್ರ ಮನೆ

ಒಂದು ಕಾಲದಲ್ಲಿ ಹೋಜ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅದು ಬಹಳ ಹಳೆಯದಾದ ಮನೆಯಾಗಿತ್ತು. ಜೋರಾಗಿ ಗಾಳಿ ಬೀಸಿದಾಗಲೆಲ್ಲ ಮನೆಯ ದೂಲಗಳು ಕಿರುಗುಟ್ಟುತ್ತಿದ್ದವು. ಮನೆಯ ಮಾಲಿಕ ಬಾಡಿಗೆ ತೆಗೆದುಕೊಳ್ಳಲು ಬಂದಾಗ ಮನೆ ಮಾಡುತ್ತಿದ್ದ ಗಾಬರಿ ಹುಟ್ಟಿಸುವ ಶಬ್ದಗಳ ಕುರಿತು ವಿವರಿಸಿದ. ಮಾಲಿಕ ಲಘು ಮನೋಭಾವದಿಂದ ಹೇಳಿದ, “ಅದರಿಂದ ನೀವು ಗಾಬರಿಯಾಗ ಬೇಕಾದ ಅಗತ್ಯವಿಲ್ಲ. ಆ ಶಬ್ದಗಳು ಹಳೆಯ ಕಟ್ಟಡ ಉಲಿಯುತ್ತಿರುವ ಸರ್ವಶಕ್ತನ ಕುರಿತಾದ ಹೊಗಳಿಕೆಯ ಹಾಡುಗಳು!”

 *****

೧೪. ಧೂಳಿನಲ್ಲಿ ಹೋಜ

ನಜ಼ರುದ್ದೀನ್‌ ಹೋಜನ ಹತ್ತಿರ ಒಂದು ಎಮ್ಮೆ ಇತ್ತು. ಅದರ ಕೊಂಬುಗಳ ನಡುವಿನ ಅಂತರ ಗಮನಾರ್ಹವಾಗಿ ದೊಡ್ಡದಾಗಿತ್ತು. ಆ ಕೊಂಬುಗಳ ನಡುವೆ ಕುಳಿತುಕೊಳ್ಳಬೇಕೆಂಬ ಪ್ರಬಲ ಅಪೇಕ್ಷೆ ಹೋಜನಿಗೆ ಆಗಾಗ್ಗೆ ಉಂಟಾಗುತ್ತಿದ್ದರೂ ಅಂತು ಮಾಡಲು ಧೈರ್ಯವಾಗುತ್ತಿರಲಿಲ್ಲ. ಒಂದು ದಿನ ಹೋಜ ಮನೆಯ ಅಂಗಳದಲ್ಲಿ ಏನೋ ಮಾಡುತ್ತಿದ್ದಾಗ ಆ ಎಮ್ಮೆ ಬಂದು ಅವನ ಹತ್ತಿರವೇ ಮಲಗಿತು. ಆದದ್ದಾಗಲಿ ಎಂಬ ಮೊಂಡ ಧೈರ್ಯದಿಂದ ಹೋಜ ಅದರ ಕೊಂಬುಗಳ ನಡುವೆ ಕುಳಿತು ಸಂಭ್ರಮದಿಂದ ಹೆಂಡತಿಗೆ ಹೇಳಿದ, “ನನಗೀಗ ಸಿಂಹಾಸನದ ಮೇಲೆ ಕುಳಿತ ರಾಜನಂತೆ ಭಾಸವಾಗುತ್ತಿದೆ.”

ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಬೆದರಿದ ಎಮ್ಮೆ ಒಮ್ಮೆಲೇ ಎದ್ದು ನಿಂತು ತಲೆಯನ್ನು ಜೋರಾಗಿ ಕೊಡವಿತು. ತತ್ಪರಿಣಾಮವಾಗಿ ಹೋಜ ಅಲ್ಲಿಯೇ ಮುಂದಿದ್ದ ಒಂದು ಚರಂಡಿಯೊಳಕ್ಕೆ ಬಿದ್ದನು. ಅವನಿಗೆ ಸಹಾಯ ಮಾಡಲೋಸುಗ ಓಡಿ ಬಂದ ಹೆಂಡತಿಗೆ ಹೇಳಿದ, “ಪರವಾಗಿಲ್ಲ. ರಾಜನೊಬ್ಬ ತನ್ನ ಸಿಂಹಾಸನವನ್ನು ಕಳೆದುಕೊಂಡದ್ದು ಇದೇ ಮೊದಲೇನಲ್ಲ.”

*****

೧೫. ಹೋಜ ಬಚಾವಾದ

ಒಂದು ದಿನ ಒಬ್ಬಾತ ಹೋಜನ ಮನೆಗೆ ಓಡಿ ಬಂದ.

“ಏನು ವಿಷಯ,” ಕೇಳಿದ ಹೋಜ.

“ಮಾರುಕಟ್ಟೆಯಲ್ಲಿ ನಿನ್ನನ್ನೇ ಹೋಲುತ್ತಿದ್ದ ಮನುಷ್ಯನೊಬ್ಬನಿಗೆ ಗಾಡಿಯೊಂದು ಢಿಕ್ಕಿ ಹೊಡೆದು ಆತ ಕೆಳಗೆ ಬಿದ್ದದ್ದನ್ನು ನೋಡಿದೆ. ಅದು ನೀನೆಂದು ಭಾವಿಸಿ ನಿನ್ನ ಹೆಂಡತಿಗೆ ಸುದ್ದಿ ತಿಳಿಸಲೋಸುಗ ಓಡೋಡಿ ಬಂದೆ,” ಅಂದನಾತ.

“ಅವನು ನನ್ನಷ್ಟೇ ಎತ್ತರದವನಾಗಿದ್ದನೋ?”

“ಹೌದು.”

“ಅವನು ನನ್ನಂತೆಯೇ ದಾಡಿ ಬಿಟ್ಟಿದ್ದನೋ?”

“ಹೌದು.”

“ಅವನು ಯಾವ ಬಣ್ಣದ ಅಂಗಿ ಧರಿಸಿದ್ದ?”

“ನಸುಗೆಂಪು.”

“ನಸುಗೆಂಪಿನದಾ?” ಬೊಬ್ಬೆಹಾಕಿದ ಹೋಜ, “ಸಧ್ಯ ಬಚಾವಾದೆ, ನನ್ನ ಹತ್ತಿರ ನಸುಗೆಂಪು ಬಣ್ಣದ ಅಂಗಿಯೇ ಇಲ್ಲ!”

*****

೧೬. ಸಾಲ ಹಿಂದಿರುಗಿಸುವಿಕೆಯನ್ನು ಹೋಜ ಮುಂದೂಡಿದ್ದು

ಒಂದು ಸಂಜೆ ಹೋಜ ತನ್ನ ಮನೆಯ ಮುಂದಿನ ಮೊಗಸಾಲೆಯಲ್ಲಿ ಉದ್ವಿಗ್ನತೆಯಿಂದ ಹಿಂದಕ್ಕೂ ಮುಂದಕ್ಕೂ ಓಡಾಡುತ್ತಿದ್ದದ್ದನ್ನು ಅವನ ಹೆಂಡತಿ ನೋಡಿದಳು. “ಏನು ವಿಷಯ?” ಕೇಳಿದಳು ಅವಳು. “ನಾನು ನಮ್ಮ ನೆರೆಮನೆಯಾತನಿಂದ ಕಳೆದ ತಿಂಗಳು ನೂರು ದಿನಾರ್‌ಗಳನ್ನು ಸಾಲವಾಗಿ ತೆಗೆದುಕೊಂಡಿದ್ದೆ. ಈ ತಿಂಗಳ ಕೊನೆಯ ದಿನದಂದು ಅದನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದೆ. ನಾಳೆ ತಿಂಗಳ ಕೊನೆಯ ದಿನ. ನನ್ನ ಹತ್ತಿರ ಹಣವಿಲ್ಲ, ಏನು ಮಾಡುವುದೆಂಬುದು ತೋಚುತ್ತಿಲ್ಲ,” ವಿವರಿಸಿದ ಹೋಜ. ಅವನ ಹೆಂಡತಿ ಹೇಳಿದಳು, “ಮಾಡಲೇನಿದೆ? ಅವನ ಹತ್ತಿರ ಹೋಗಿ ಹಣ ಹಿಂದಿರುಗಿಸಲು ಸಾಧ್ಯವಿಲ್ಲವೆಂದು ಹೇಳಿ.” ಹೋಜ ಹೆಂಡತಿಯ ಸಲಹೆಯನ್ನು ಸ್ವೀಕರಿಸಿದ. ಅವನು ನೆರೆಮನೆಗೆ ಹೋಗಿ ಪ್ರಸನ್ನವದನನಾಗಿ ಶಾಂತಚಿತ್ತನಾಗಿ ಹಿಂದಿರುಗಿದಾಗ ಹೆಂಡತಿ ಕೇಳಿದಳು, “ಹೋದ ಕೆಲಸ ಹೇಗಾಯಿತು?”

ಹೋಜ ಉತ್ತರಿಸಿದ, “ಚೆನ್ನಾಗಿಯೇ ನಡೆಯಿತು. ಈಗ ತನ್ನ ಮನೆಯ ಮುಂದಿನ ಮೊಗಸಾಲೆಯಲ್ಲಿ ಅವನು ಉದ್ವಿಗ್ನತೆಯಿಂದ ಹಿಂದಕ್ಕೂ ಮುಂದಕ್ಕೂ ಓಡಾಡುತ್ತಿದ್ದಾನೆ.”

*****

೧೭. ಹೋಜ ಪತ್ರ ಬರೆಯಲು ನಿರಾಕರಿಸಿದ್ದು

ಒಂದು ದಿನ ಹೋಜನ ನೆರೆಮನೆಯಾತ ತನ್ನ ಪರವಾಗಿ ಪತ್ರವೊಂದನ್ನು ಬರೆಯುವಂತೆ ವಿನಂತಿಸಿದ.

“ಪತ್ರ ಬರೆಯಬೇಕಾದದ್ದು ಯಾರಿಗೆ?” ವಿಚಾರಿಸಿದ ಹೋಜ.

“ಬಾಗ್ದಾದ್‌ನಲ್ಲಿರುವ ನನ್ನ ಮಿತ್ರನಿಗೆ.”

“ಕ್ಷಮಿಸು, ನನಗೆ ಬಾಗ್ದಾದ್‌ಗೆ ಹೋಗಲು ಪುರಸತ್ತಿಲ್ಲ.”

“ಬಾಗ್ದಾದ್‌ಗೆ ಹೋಗು ಎಂಬುದಾಗಿ ನಿನಗೆ ಯಾರು ಹೇಳಿದರು? ಅಲ್ಲಿರುವ ನನ್ನ ಮಿತ್ರನಿಗೊಂದು ಪತ್ರ ಬರೆದು ಕೊಡು ಎಂದಷ್ಟೇ ಹೇಳಿದೆ.”

“ಅದೇನೋ ನಿಜ. ಆದರೆ ನನ್ನ ಕೈಬರೆಹ ಎಷ್ಟು ಕೆಟ್ಟದಾಗಿದೆಯೆಂದರೆ, ಅಲ್ಲಿ ಯಾರಿಗೂ ಅದನ್ನು ಓದಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಓದಲೋಸುಗ ನನ್ನನ್ನೇ ಅಲ್ಲಿಗೆ ಬರಲು ಹೇಳುತ್ತಾರೆ. ಆದರೆ ನಾನು ಆಗಲೇ ಹೇಳಿದಂತೆ ಬಾಗ್ದಾದ್‌ಗೆ ಹೋಗಲು ನನಗೆ ಪುರಸತ್ತಿಲ್ಲ.”

*****

೧೮. ಹೋಜನ ಶ್ರೀಮಂತ ಕನಸು

ಹೋಜ ಒಂದು ಕನಸು ಕಂಡ:

ಒಬ್ಬಾತ ಹೋಜನ ಮನೆಯ ಮುಂಬಾಗಿಲು ತಟ್ಟಿ ತಾನು ಆ ರಾತ್ರಿಯನ್ನು ಅಲ್ಲಿ ತಂಗಬಹುದೇ ಎಂಬುದಾಗಿ ಕೇಳಿದ. ಆ ಸೌಲಭ್ಯಕ್ಕಾಗಿ ೧೦ ಚಿನ್ನದ ನಾಣ್ಯಗಳನ್ನು ಕೊಡುವುದಾಗಿಯೂ ತಿಳಿಸಿದ.

ಹೋಜ ಸಮ್ಮತಿಸಿ ಆಗಂತುಕನಿಗೆ ಅವನು ತಂಗಬಹುದಾದ ಕೋಣೆ ತೋರಿಸಿದ.

ಮಾರನೆಯ ದಿನ ಬೆಳಗ್ಗೆ ಆತ ಹೋಜನಿಗೆ ಧನ್ಯವಾದಗಳನ್ನರ್ಪಿಸಿ ತನ್ನ ಹಣದ ಥೈಲಿಯಿಂದ ಚಿನ್ನದ ನಾಣ್ಯಗಳನ್ನು ಎಣಿಸಿ ತೆಗೆಯಲಾರಂಭಿಸಿದ.

ಆತ ೯ ನಾಣ್ಯಗಳನ್ನು ತೆಗೆದು ನಿಲ್ಲಿಸಿದ.

“ನೀನು ೧೦ ನಾಣ್ಯಗಳನ್ನು ಕೊಡುವುದಾಗಿ ಹೇಳಿದ್ದೆ,” ಎಂಬುದಾಗಿ ಕಿರುಚಿದ ಹೋಜ ನಿದ್ದೆಯಿಂದೆದ್ದ.

ಸುತ್ತಮುತ್ತ ನೋಡಿದಾಗ ಯಾರೂ ಕಾಣಿಸಲಿಲ್ಲ.

ಹೋಜ ಪುನಃ ಕಣ್ಣುಗಳನ್ನು ಮುಚ್ಚಿ ಹೇಳಿದ, “ಆಯಿತಪ್ಪಾ, ೯ ನಾಣ್ಯಗಳನ್ನೇ ನನಗೆ ಕೊಡು!”

*****

೧೯. ಸಮಸ್ಯೆಗೆ ಹೋಜ ಸೂಚಿಸಿದ ಪರಿಹಾರ

ಒಂದು ದಿನ ಹೋಜ ತನ್ನ ಪರಿಚಯದವನೊಬ್ಬನನ್ನು ರಸ್ತೆಯಲ್ಲಿ ಸಂಧಿಸಿದ.

ಆ ಮನುಷ್ಯ ಚಿಂತಾಕ್ರಾಂತನಾಗಿದ್ದಂತೆ ಗೋಚರಿಸುತ್ತಿದ್ದದ್ದರಿಂದ ಹೋಜ ಅವನನ್ನು ಕಾರಣ ವಿಚಾರಿಸಿದ.

“ನನಗೊಂದು ಭಯಾನಕ ಕನಸು ಬೀಳುತ್ತಿದೆ,” ವಿವರಿಸಿದ ಆತ, “ನನ್ನ ಮಂಚದ ಕೆಳಗೆ ಒಂದು ಪೆಡಂಭೂತವೊಂದು ಅಡಗಿ ಕುಳಿತಿರುವಂತೆ ಪ್ರತೀ ದಿನ ರಾತ್ರಿ ಕನಸು ಬೀಳುತ್ತಿದೆ. ಎದ್ದು ನೋಡಿದರೆ ಅಲ್ಲೇನೂ ಇರುವುದಿಲ್ಲ. ಎಂದೇ ನಾನೀಗ ವೈದ್ಯರ ಹತ್ತಿರ ಹೋಗುತ್ತಿದ್ದೇನೆ. ೧೦೦ ದಿನಾರ್‌ ಶುಲ್ಕ ಕೊಟ್ಟರೆ ಇದಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.”

“೧೦೦ ದಿನಾರ್‌ಗಳೇ? ೫ ದಿನಾರ್‌ಗಳಿಗೇ ಆ ಸಮಸ್ಯೆಯನ್ನು ನಾನು ನಿವಾರಿಸುತ್ತೇನೆ,” ಹೇಳಿದ ಹೋಜ.

ಆತ ತಕ್ಷಣವೇ ೫ ದಿನಾರ್‌ಗಳನ್ನು ಹೋಜನಿಗೆ ಕೊಟ್ಟು ಪರಿಹಾರ ಸೂಚಿಸುವಂತೆ ಕೋರಿದ.

“ಪರಿಹಾರ ಬಲು ಸುಲಭ. ನಿನ್ನ ಮಂಚದ ಕಾಲುಗಳನ್ನು ಕತ್ತರಿಸಿ ಹಾಕು. ಪೆಡಂಭೂತಕ್ಕೆ ಮಂಚದ ಕೆಳಗೆ ಅಡಗಲು ಸಾಧ್ಯವಾಗುವುದಿಲ್ಲ,” ಕಿಸೆಗೆ ದುಡ್ಡು ಹಾಕಿ ಹೇಳಿದ ಹೋಜ.

*****

೨೦. ರಾಜ ಹೋಜ

ಯಾವುದೋ ಆಲೋಚನೆಯಲ್ಲಿ ಮುಳುಗಿದ್ದ ಹೋಜ ಅರಮನೆಯ ಸಮೀಪದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಮನುಷ್ಯನೊಬ್ಬನಿಗೆ ಢಿಕ್ಕಿ ಹೊಡೆದ. ಆತನಿಗೆ ವಿಪರೀತ ಸಿಟ್ಟು ಬಂದು ಕೂಗಾಡತೊಡಗಿದ, ಹೋಜನಿಗೆ ಶಾಪ ಹಾಕತೊಡಗಿದ.

“ನಾನು ಯಾರೆಂಬುದು ನಿನಗೆ ಗೊತ್ತಿದೆಯೇ?” ಆತ ಕಿರುಚಿದ. “ನಾನು ರಾಜನ ಆಪ್ತ ಸಲಹೆಗಾರ!”

“ಬಹಳ ಸಂತೋಷ,” ಹೇಳಿದ ಹೋಜ. “ನಾನಾದರೋ, ಒಬ್ಬರಾಜ.”

“ಒಬ್ಬ ರಾಜ?” ಕೇಳಿದ ಆತ. “ನೀವು ಯಾವ ರಾಜ್ಯವನ್ನು ಆಳುತ್ತಿದ್ದೀರಿ?”

“ನಾನು ನನ್ನನ್ನೇ ಆಳುತ್ತೇನೆ. ನನ್ನ ಭಾವೋದ್ವೇಗಗಳನ್ನು ನಾನು ಸಂಪೂರ್ಣವಾಗಿ ನಿಯಂತ್ರಿಸುತ್ತೇನೆ. ನೀನು ಈಗ ತಾಳ್ಮೆ ಕಳೆದುಕೊಂಡಂತೆ ನಾನು ತಾಳ್ಮೆ ಕಳೆದುಕೊಳ್ಳುವುದನ್ನು ನೀನು ಎಂದೆಂದಿಗೂ ನೋಡುವುದಿಲ್ಲ.”

ಆ ಸಲಹೆಗಾರ ಹೋಜನ ಕ್ಷಮೆ ಕೇಳಿ ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಹೊರಟುಹೋದ.

*****

ನಜ಼ರುದ್ದೀನ್‌ನ ಕತೆಗಳು ೨೧. ಹುಳಿ ಉತ್ತರ!

ಒಂದು ದಿನ ಪರಿಚಿತನೊಬ್ಬ ನಜ಼ರುದ್ದೀನನ್ನು ಕೇಳಿದ, “ನಿನ್ನ ಹತ್ತಿರ ೪೦ ವರ್ಷಗಳಷ್ಟು ಹಳೆಯದಾದ ವಿನಿಗರ್‌ ಇದೆಯೆಂಬುದು ತಿಳಿಯಿತು, ನಿಜವೇ?”

“ನಿಜ.”

“ಸ್ವಲ್ಪ ನನಗೆ ಕೊಡುವೆಯಾ?”

“ಕೇಳಿದವರಿಗೆಲ್ಲ ನಾನು ವಿನಿಗರ್‌ ಕೊಟ್ಟಿದ್ದಿದ್ದರೆ ಅದು ೪೦ ವರ್ಷ ಹಳೆಯದಾಗುವಷ್ಟು ಕಾಲ ಉಳಿಯುತ್ತಲೇ ಇರಲಿಲ್ಲ!”

*****

೨೨. ಹೋಜನ ಎತ್ತು

ಕುದುರೆಗಳ ಓಟದ ಸ್ಪರ್ಧೆಯೊಂದಕ್ಕೆ ನೋಂದಾಯಿಸಲು ಸ್ಪರ್ಧಿಗಳು ಸಾಲಾಗಿ ನಿಂತಿದ್ದರು.

ಅಲ್ಲಿಗೆ ಮುಲ್ಲಾ ನಜ಼ರುದ್ದೀನ್‌ ಹೋಜ ಒಂದು ಎತ್ತಿನೊಂದಿಗೆ ಬಂದು ಅದನ್ನು ಸ್ಪರ್ಧೆಗೆ ಸೇರಿಸಿಕೊಳ್ಳಬೇಕೆಂದು ಹೇಳಿದ.

ಸಂಘಟಕರು ಪ್ರತಿಕ್ರಿಯಿಸಿದರು, “ನಿನಗೇನು ಹುಚ್ಚು ಹಿಡಿದಿದೆಯೇ? ಕುದುರೆಗಳ ಜೊತೆ ಅದು ಸ್ಪರ್ಧಿಸಿ ಗೆಲ್ಲಲು ಸಾಧ್ಯವೇ?”

ಹೋಜ ಪ್ರತಿಕ್ರಿಯಿಸಿದ, “ನಿಮಗೆ ನನ್ನ ಎತ್ತಿನ ಕುರಿತು ಏನೇನೂ ತಿಳಿದಿಲ್ಲವಾದ್ದರಿಂದ ನೀವಿಂತು ಹೇಳುತ್ತಿದ್ದೀರಿ. ಅದು ಕರುವಾಗಿದ್ದಾಗ ಹೆಚ್ಚುಕಮ್ಮಿ ಕುದುರೆಮರಿಯಷ್ಟೇ ವೇಗವಾಗಿ ಓಡುತ್ತಿತ್ತು. ಈಗ ಅದು ಬೆಳೆದು ದೊಡ್ಡದಾಗಿದೆ, ಅಂದ ಮೇಲೆ ಅದು ಈಗ ಇನ್ನೂ ವೇಗವಾಗಿ ಓಡಬೇಕಲ್ಲವೇ?”

*****

ನಜ಼ರುದ್ದೀನ್‌ನ ಕತೆಗಳು ೨೩. ಅಧಿಮಾರಾಟಗಾರ

ನಜ಼ರುದ್ದೀನ್‌ ಹೋಜ ತನ್ನ ಮನೆಯನ್ನು ಮಾರಲು ಎಷ್ಟು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಒಂದು ದಿನ ಅವನು ಮನೆಯ ಗೋಡೆಯೊಂದರಿಂದ ಒಂದು ಇಟ್ಟಿಗೆಯನ್ನು ಕಿತ್ತು ತೆಗೆದ. ಗೋಡೆ ಬಿದ್ದೀತೆಂದು ಭಯಭೀತಳಾದ ಅವನ ಹೆಂಡತಿ ಕೇಳಿದಳು, “ಅದನ್ನೇಕೆ ಕಿತ್ತು ತೆಗೆದೆ?”

ನಜ಼ರುದ್ದೀನ್ ವಿವರಿಸಿದ, “ಓ ಮೂರ್ಖ ಹೆಂಗಸೇ, ನಿನಗೇನು ತಿಳಿದಿದೆ. ಏನನ್ನಾದರೂ ಮಾರಾಟ ಮಾಡಬೇಕಾದರೆ ಅದರ ಸಣ್ಣಭಾಗವನ್ನು ನಮೂನೆಯಾಗಿ ತೋರಿಸಬೇಕಾಗುತ್ತದೆ. ಇದನ್ನು ನಾನು ನಮ್ಮ ಮನೆಯ ನಮೂನೆಯಾಗಿ ತೋರಿಸುವವನಿದ್ದೇನೆ!”

*****

೨೪. ಸಿಹಿ ಜಗಳಗಳು

ಒಂದು ದಿನ ಮುಲ್ಲಾ ನಜ಼ರುದ್ದೀನ್‌ ತನ್ನ ಹೆಂಡತಿಯೊಂದಿಗೆ ಜಗಳವಾಡಿದ. ಅವನ ಕಿರುಚಾಟ ಕೇಳಲಾಗದೆ ಅವನ ಹೆಂಡತಿ ನೆರೆಮನೆಗೆ ಓಡಿಹೋದಳು. ಮುಲ್ಲಾ ಅವಳ ಹಿಂದೆಯೇ ಅಲ್ಲಿಗೂ ಹೋದ.

ನೆರೆಮನೆಯವರು ಬಲು ಕಷ್ಟದಿಂದ ಇಬ್ಬರನ್ನೂ ಸಮಾಧಾನಪಡಿಸಿ ಚಹಾ ಹಾಗು ಮಿಠಾಯಿಗಳನ್ನು ಕೊಟ್ಟರು.

ತಮ್ಮ ಮನೆಗೆ ಹಿಂದಿರುಗಿದ ನಂತರ ಪುನಃ ಮುಲ್ಲಾ ಜಗಳವಾಡಲಾರಂಭಿಸಿದ. ಹೊರಗೋಡಲೋಸುಗ ಅವನ ಹೆಂಡತಿ ಬಾಗಿಲು ತೆಗೆದೊಡನೆ ಮುಲ್ಲಾ ಸಲಹೆ ನೀಡಿದ, “ಈ ಸಲ ಬೇಕರಿಯವನ ಮನೆಗೆ ಹೋಗು. ಅವನು ಸ್ವಾದಿಷ್ಟವಾದ ಕೇಕ್‌ಗಳನ್ನು ತಯಾರಿಸುತ್ತಾನೆ!”

*****

೨೫. ಅಪೂರ್ಣ ಶವಪೆಟ್ಟಿಗೆ

ಶ್ರೀಮಂತನೊಬ್ಬ ತನಗಾಗಿ ಮಾಡಿಸಿದ್ದ ಶವಪೆಟ್ಟಿಗೆಯನ್ನು ನಜ಼ರುದ್ದೀನ್ ಹೋಜನಿಗೆ ತೋರಿಸಿದ.

ಮರದ ಗುಣಮಟ್ಟದ ಕುರಿತು ಹೋಜ ಮೆಚ್ಚುಗೆ ವ್ಯಕ್ತಪಡಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.

“ನಾಲ್ಕೂ ಬದಿಗಳ ಹಲಗೆಗಳಲ್ಲಿ ಕೆತ್ತನೆಗಳ ಕುರಿತು ನಿನ್ನ ಅನಿಸಿಕೆ ಏನು? ಅವು ಅದ್ಭುತವಾಗಿಲ್ಲವೇ?” ಕೇಳಿದ ಆತ.

ಹೋಜ ತಲೆಯಾಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ.

“ಹಲಗೆಯ ಒಳಬಾಗದಲ್ಲಿ ಒಳಪದರವಾಗಿ ದಪ್ಪ ಉಣ್ಣೆಯನ್ನೇ, ಅದೂ ಅತ್ಯುತ್ತಮವಾದ ಉಣ್ಣೆಯನ್ನೇ ಉಪಯೋಗಿಸಬೇಕೆಂದು ನಾನು ಪಟ್ಟುಹಿಡಿದಿದ್ದೆ.” ಜಂಭಕೊಚ್ಚಿದ ಶ್ರೀಮಂತ.

“ಒಳ್ಳೆಯದನ್ನೇ ಮಾಡಿದಿರಿ,” ಪ್ರತಿಕ್ರಿಯಿಸಿದ ಹೋಜ.

ಶ್ರೀಮಂತ ಮುದುವರಿಸಿದ, “ಅದರಲ್ಲಿ ಎಳ್ಳಷ್ಟೂ ನ್ಯೂನತೆ ಇರಬಾರದು ಎಂಬುದು ನನ್ನ ಇಚ್ಛೆಯಾಗಿತ್ತು. ನಿನಗೇನಾದರೂ ಕೊರತೆ ಕಾಣಿಸುತ್ತಿದೆಯಾ?”

ಹೋಜಾ ಹೇಳಿದ, “ಕಾಣಿಸುತ್ತಿದೆ. ಅದರ ಒಳಗಿರಬೇಕಾದವ ಇಲ್ಲದಿರುವ ಕೊರತೆ!”

*****

೨೬. ಮನಸ್ಸನ್ನು ಓದುವವ

ರಸ್ತೆಯಲ್ಲಿ ಒಮ್ಮೆ ಒಬ್ಬ ಸ್ಥೂಲಕಾಯದ ಶ್ರೀಮಂತನೊಬ್ಬ ಕುದುರೆ ಸವಾರಿ ಮಾಡುತ್ತಾ ತನ್ನತ್ತ ಬರುತ್ತಿದ್ದದ್ದನ್ನು ನಜ಼ರುದ್ದೀನ್‌ ನೋಡಿದ.

“ಓ ಮುಲ್ಲಾ, ಅರಮನೆಗೆ ಹೋಗುವ ದಾರಿ ಯಾವುದು?” ಕೇಳಿದ ಆ ಶ್ರೀಮಂತ.

ಮುಲ್ಲಾ ಕೇಳಿದ, “ನಾನೊಬ್ಬ ಮುಲ್ಲಾ ಎಂಬುದು ನಿಮಗೆ ಹೇಗೆ ಗೊತ್ತಾಯಿತು?”

ವಾಸ್ತವವಾಗಿ ವಿದ್ವಾಂಸರಂತೆ ಕಾಣುವ ಎಲ್ಲರನ್ನೂ ‘ಮುಲ್ಲಾ’ ಎಂಬುದಾಗಿ ಕರೆಯುವುದು ಆ ಶ್ರೀಮಂತನ ಅಭ್ಯಾಸವಾಗಿತ್ತು. ಆದರೆ ಈ ಸತ್ಯವನ್ನು ಹೋಜನಿಗೆ ಹೇಳಲು ಅವನಿಗೆ ಇಷ್ಟವಿರಲಿಲ್ಲ.

“ನನಗೆ ಹೇಗೆ ತಿಳಿಯಿತು?” ಜಂಬಕೊಚ್ಚಿಕೊಂಡ ಆತ. “ನಾನು ಇತರರ ಮನಸ್ಸನ್ನು ಓದಬಲ್ಲೆ, ಆದ್ದರಿಂದ ತಿಳಿಯಿತು.”

ಹೋಜ ಪ್ರತಿಕ್ರಿಯಿಸಿದ, “ನಿಮ್ಮನ್ನು ಭೇಟಿಯಾಗಿ ಬಲು ಸಂತೋಷವಾಯಿತು. ನಿಮ್ಮ ಪ್ರಶ್ನಗೆ ಉತ್ತರ ನನ್ನ ಮನಸ್ಸಿನಲ್ಲಿದೆ. ಓದಿ, ಮುಂದುವರಿಯಿರಿ.”

*****

೨೭. ಗೊಂದಲದಲ್ಲಿ ಮುಲ್ಲಾ

ಸುಲ್ತಾನನ ಆನೆಯೊಂದು ಮುಲ್ಲಾ ನಜ಼ರುದ್ದೀನ್ ಹೋಜನ ಹಳ್ಳಿಗೆ ದಾರಿತಪ್ಪಿ ಬಂದು ಅಲ್ಲಿನ ಹೊಲಗದ್ದೆಗಳಲ್ಲಿ ವ್ಯಾಪಕ ಹಾನಿ ಮಾಡುತ್ತಿತ್ತು.

ಆನೆಯನ್ನು ಹಿಂದಕ್ಕೆ ಕರೆದುಕೊಂಡು ಹೋಗುವಂತೆ ಸುಲ್ತಾನನಿಗೆ ಮನವಿ ಸಲ್ಲಿಸಲೋಸುಗ ನಿಯೋಗವೊಂದನ್ನು ಕಳುಹಿಸುವುದೆಂಬುದಾಗಿ ಹಳ್ಳಿಗರು ಕೊನೆಗೆ ತೀರ್ಮಾನಿಸಿದರು. ಮುಲ್ಲಾ ನಜ಼ರುದ್ದೀನನಿಗೆ ಸುಲ್ತಾನನ ಪರಿಚಯ ಇದ್ದದ್ದರಿಂದ ನಿಯೋಗದ ಮುಖಂಡನಾಗುವಂತೆ ಅವನನ್ನು ಕೋರಿದರು.

ಅರಮನೆಯನ್ನು ತಲುಪಿದಾಗ ಅದರ ಭವ್ಯತೆಯಿಂದ ಬೆರಗಾದ ಹಳ್ಳಿಗರು ಸುಲ್ತಾನನನ್ನು ಮುಖತಃ ಭೇಟಿಯಾಗುವ ಧೈರ್ಯವನ್ನು ಕಳೆದುಕೊಂಡರು. ಒಬ್ಬೊಬ್ಬರಾಗಿ ನಿಯೋಗದಿಂದ ಕಳಚಿಕೊಂಡು ಮಾಯವಾದರು. ನಿಯೋಗ ಅಂತಿಮವಾಗಿ ಸುಲ್ತಾನನ ಸಮ್ಮುಖಕ್ಕೆ ಬಂದು ನಿಂತಾಗ ಇದ್ದದ್ದು ಹೋಜ ಒಬ್ಬ ಮಾತ್ರ.

ಅಂದೇಕೋ ವಿನಾ ಕಾರಣ ಸಿಡುಕುತ್ತಿದ್ದ ಸುಲ್ತಾನ ಒರಟಾಗಿ ಕೇಳಿದ, “ನಜ಼ರುದ್ದೀನ್‌ ನಿನಗೇನು ಬೇಕು?”

“ನಿಮ್ಮ ಆನೆ ನಮ್ಮ ಹಳ್ಳಿಯಲ್ಲಿದೆ ಮಹಾಪ್ರಭು,” ಉತ್ತರಿಸಿದ ಮುಲ್ಲಾ.

“ಹಾಗಾದರೆ?” ಸುಲ್ತಾನ ಗುರುಗುಟ್ಟಿದ.

ಧೈರ್ಯ ಕಳೆದುಕೊಂಡ ಮುಲ್ಲಾ ತಡವರಿಸುತ್ತಾ ಹೇಳಿದ, “ಆದ್ದರಿಂದ—ಆದ್ದರಿಂದ, ಅಂದರೆ ನಾವು ಬಂದದ್ದು ಏಕೆಂದರೆ, ಆ ಆನೆಯನ್ನು ಒಂಟಿತನ ಬಹುವಾಗಿ ಕಾಡುತ್ತಿದೆಯಾದ್ದರಿಂದ ಅದಕ್ಕೆ ಜೊತೆಗಾರನಾಗಿರಲು ಇನ್ನೊಂದು ಆನೆಯನ್ನು ಕಳುಹಿಸಿ ಎಂಬುದನ್ನು ಹೇಳಲು!”

*****

೨೮. ಮುಲ್ಲಾನ ಬಡತನ

ಸಮಯಕ್ಕೆ ಸರಿಯಾಗಿ ಮುಲ್ಲಾ ತಾನು ತೆಗೆದುಕೊಂಡಿದ್ದ ಸಾಲವನ್ನು ಸಮಯಕ್ಕೆ ಸರಿಯಾಗಿ ಹಿಂದಿರುಗಿಸದೇ ಇದ್ದದ್ದರಿಂದ ಸಾಲ ಕೊಟ್ಟವ ಅವನನ್ನು ಎಳೆದೊಯ್ದು ನ್ಯಾಯಾಧೀಶರ ಎದುರು ನಿಲ್ಲಿಸಿದ.

ಸಾಲ ಕೊಟ್ಟವ ಹೇಳಿದ, “ಈ ಮನುಷ್ಯ ನನಗೆ ೫೦೦ ದಿನಾರ್‌ಗಳನ್ನು ಕೊಡಬೇಕು. ಸಾಲ ತೀರಿಸಲು ಇದ್ದ ವಾಯಿದೆ ಎಂದೋ ಮುಗಿದು ಹೋಗಿದೆ. ಇನ್ನೂ ತಡಮಾಡದೆ ನನ್ನ ಹಣವನ್ನು ಹಿಂದಿರುಗಿಸುವಂತೆ ಅವನಿಗೆ ಆಜ್ಞಾಪಿಸಬೇಕಾಗಿ ಕೋರುತ್ತೇನೆ ಮಹಾಸ್ವಾಮಿ.”

ಮುಲ್ಲಾ ಹೇಳಿದ, “ನಾನು ಅವನಿಗೆ ಹಣ ಕೊಡಬೇಕಾದದ್ದು ನಿಜ. ಅಗತ್ಯವಾದರೆ ನನ್ನ ಹಸು ಹಾಗು ಕುದುರೆಯನ್ನು ಮಾರಿಯಾದರೂ ಅವನ ಹಣ ಪಾವತಿಸುತ್ತೇನೆ. ಆದರೆ ಅದಕ್ಕೆ ತುಸು ಕಾಲಾವಕಾಶ ಬೇಕು.”

ಸಾಲಕೊಟ್ಟವ ಹೇಳಿದ, “ಇವನು ಸುಳ್ಳು ಹೇಳುತ್ತಿದ್ದಾನೆ ಮಹಾಸ್ವಾಮಿ. ಅವನ ಹತ್ತಿರ ಹಸುವೂ ಇಲ್ಲ ಕುದುರೆಯೂ ಇಲ್ಲ. ವಾಸ್ತವವಾಗಿ ಬೆಲೆಬಾಳುವಂಥದ್ದು ಏನೂ ಇಲ್ಲ. ಅವನ ಮನೆಯಲ್ಲಿ ತಿನ್ನಲು ಆಹಾರವೂ ಇಲ್ಲ ಎಂಬುದಾಗಿಯೂ ಎಲ್ಲರೂ ಹೇಳುತ್ತಿದ್ದಾರೆ!”

ಮುಲ್ಲಾ ತಕ್ಷಣವೇ ಪ್ರತಿಕ್ರಿಯಿಸಿದ, “ನಾನು ಅಷ್ಟೊಂದು ಬಡವ ಎಂಬುದು ತಿಳಿದಿದ್ದ ನಂತರವೂ ತಕ್ಷಣವೇ ಹಣ ನೀಡುವಂತೆ ಒತ್ತಾಯಿಸುವುದು ಸರಿಯೇ ಎಂಬುದನ್ನು ಕೇಳಿ ಮಹಾಸ್ವಾಮಿ.”

ನ್ಯಾಯಾಧೀಶರು ಮೊಕದ್ದಮೆಯನ್ನು ವಜಾ ಮಾಡಿದರು!

*****

೨೯. ವಿದ್ವಾಂಸ ಸಾರಥಿ

ಮುಲ್ಲಾ ನಜ಼ರುದ್ದೀನ್‌ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು.

ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.”

ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?”

“ಒಬ್ಬ ವ್ಯಕ್ತಿ ಕುಳಿತಲ್ಲಿಂದ ಎದ್ದರೆ ಅವನ ಮಡಿಲು ಏನಾಗುತ್ತದೆ ಎಂಬುದನ್ನು ಆಲೋಚಿಸುತ್ತಾ ಇಲ್ಲಿ ಕುಳಿತಿದ್ದೇನೆ,” ಕೂಗಿಹೇಳಿದ ಮುಲ್ಲಾ.

ತುಸು ಸಮಯ ಕಳೆದ ನಂತರ ಮಾಲಿಕ ಪುನಃ ಕೇಳಿದ, “ಈಗ ನೀನೇನು ಮಾಡುತ್ತಿರುವೆ?”

“ಮುಷ್ಟಿಯ ಬೆರಳುಗಳನ್ನು ಬಿಡಿಸಿದರೆ ಏನಾಗುತ್ತದೆ ಎಂಬುದನ್ನು ಆಲೋಚಿಸುತ್ತಾ ಇಲ್ಲಿ ಕುಳಿತಿದ್ದೇನೆ,” ಕೂಗಿಹೇಳಿದ ನಜ಼ರುದ್ದೀನ್‌.

ಈ ಉತ್ತರಗಳಿಂದ ಬಲು ಪ್ರಭಾವಿತನಾದ ಮಾಲಿಕ ಅತಿಥೇಯರೊಂದಿಗೆ ಕೊಚ್ಚಿಕೊಂಡ, “ನನ್ನ ಸಾರಥಿ ಸಾಮಾನ್ಯನಲ್ಲ, ಅವನೊಬ್ಬ ತತ್ವಶಾಸ್ತ್ರಜ್ಞ.”

ಅರ್ಧ ತಾಸು ಕಳೆದ ಬಳಿಕ ಮಾಲಿಕ ಪುನಃ ಕೇಳಿದ, “ಈಗ ನೀನೇನು ಮಾಡುತ್ತಿರುವೆ?”

ಮುಲ್ಲಾ ಉತ್ತರಿಸಿದ, “ಕುದುರೆಗಳನ್ನು ಕದ್ದವರು ಯಾರು ಎಂಬುದನ್ನು ಆಲೋಚಿಸುತ್ತಿದ್ದೇನೆ.”

*****

೩೦. ನಾನು ಹೇಳಲಿಲ್ಲವೇ?

ಮುಲ್ಲಾ ನಜ಼ರುದ್ದೀನ್ ಒಮ್ಮೆ ಆಹಾರದ ತುಣುಕುಗಳನ್ನು ತನ್ನ ಮನೆಯ ಸುತ್ತಲೂ ಎಸೆಯುತ್ತಿದ್ದ. ಯಾರೋ ಕೇಳಿದರು, “ನೀನೇನು ಮಾಡುತ್ತಿರುವೆ?”

ಮುಲ್ಲಾ ಉತ್ತರಿಸಿದ, “ಹುಲಿಗಳು ನನ್ನ ಮನೆಯ ಹತ್ತಿರ ಬರದಂತೆ ಮಾಡುತ್ತಿದ್ದೇನೆ.”

“ಆದರೆ ಇಲ್ಲಿ ಆಸುಪಾಸಿನಲ್ಲೆಲ್ಲೂ ಹುಲಿಗಳೇ ಇಲ್ಲವಲ್ಲಾ?”

“ನಿಜ. ನನ್ನ ವಿಧಾನ ಬಲು ಪರಿಣಾಮಕಾರಿಯಾಗಿದೆಯಲ್ಲವೇ?”

*****

 ೩೧. ಪಾತ್ರೆಗಳು ಮರಿ ಹಾಕುವುದಾದರೆ!

ನಜ಼ರುದ್ದೀನನ ನೆರೆಮನೆಯಾತ ಒಂದು ದಿನ ಔತಣಕೂಟವನ್ನು ಆಯೋಜಿಸಿದ್ದರಿಂದ ನಜ಼ರುದ್ದೀನ್ ಅವನಿಗೆ ಕೆಲವು ಅಡುಗೆ ಪಾತ್ರೆಗಳನ್ನು ಎರವಲು ನೀಡಿದ್ದ. ನೆರೆಮನೆಯಾತ ಮರುದಿನ ಅವನ್ನು ಹಿಂದಿರುಗಿಸುವಾಗ ಒಂದು ಪುಟಾಣಿ ಪಾತ್ರೆ ಹೆಚ್ಚುವರಿಯಾಗಿ ಸೇರಿಸಿ ಕೊಟ್ಟನು. ಅದೇನೆಂದು ನಜ಼ರುದ್ದೀನ್‌ ಕೇಳಿದಾಗ ಆತ ಹೇಳಿದ, “ನಿನ್ನ ಪಾತ್ರೆಗಳು ನನ್ನ ಉಸ್ತುವಾರಿಯಲ್ಲಿ ಇದ್ದಾಗ ಅವು ಮರಿಹಾಕಿದ ಈ ಪಾತ್ರೆಯನ್ನು ಕಾನೂನಿನ ಪ್ರಕಾರ ನಿನಗೆ ಒಪ್ಪಿಸುತ್ತಿದ್ದೇನೆ.”

ಕೆಲವು ದಿನಗಳ ನಂತರ ನರೆಮನೆಯಾತನಿಂದ ಕೆಲವು ಪಾತ್ರೆಗಳನ್ನು ನಜ಼ರುದ್ದೀನ್ ಎರವಲು ಪಡೆದನಾದರೂ ಅವನ್ನು ಹಿಂದಿರುಗಿಸಲಿಲ್ಲ. ನೆರೆಮನೆಯಾತ ತನ್ನ ಪಾತ್ರೆಗಳನ್ನು ವಾಪಾಸು ಪಡೆಯಲು ಬಂದಾಗ ನಜ಼ರುದ್ದೀನ್ ಹೇಳಿದ, “ಅಯ್ಯೋ, ಅವು ಸತ್ತು ಹೋಗಿವೆ! ಪಾತ್ರೆಗಳೂ ಮನುಷ್ಯರಂತೆ ಹುಟ್ಟು ಸಾವುಗಳಿರುವಂಥವು ಎಂಬುದನ್ನು ನಾವು ಈಗಾಗಲೇ ಸಾಬೀತು ಪಡಿಸಿದ್ದೇವೆ, ಅಲ್ಲವೇ?”

*****

೩೨. ನಾನು ಅವಳನ್ನು ಬಲು ಚೆನ್ನಾಗಿ ತಿಳಿದಿದ್ದೇನೆ

ಮುಲ್ಲಾನ ಅತ್ತೆ ನದಿಗೆ ಬಿದ್ದ ಸುದ್ದಿಯನ್ನು ಜನ ಓಡಿ ಬಂದು ಅವನಿಗೆ ತಿಳಿಸಿದರು. “ಅವಳು ಬಿದ್ದ ಸ್ಥಳದಲ್ಲಿ ನೀರಿನ ಹರಿವಿನ ವೇಗ ಬಹಳ ಹೆಚ್ಚಿದೆಯಾದ್ದರಿಂದ ಅವಳು ಸಮುದ್ರಕ್ಕೆ ಒಯ್ಯಲ್ಪಡುತ್ತಾಳೆ,” ಬೊಬ್ಬೆಹಾಕಿದರು ಜನ. ಒಂದಿನಿತೂ ಅಳುಕದೆ ಮುಲ್ಲಾ ನದಿಗೆ ಹಾರಿ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ಈಜಲಾರಂಭಿಸಿದ. “ಅತ್ತ ಕಡೆಗಲ್ಲ! ನೀರಿನ ಹರಿವಿನ ದಿಕ್ಕಿನಲ್ಲಿ ಹೋಗು. ಇಲ್ಲಿ ಬಿದ್ದ ಯಾರನ್ನೇ ಆಗಲಿ ನೀರು ಒಯ್ಯುವ ದಿಕ್ಕು ಅದೊಂದೇ,” ಬೊಬ್ಬೆಹಾಕಿದರು ಮಂದಿ. “ನಾನು ಹೇಳುವುದನ್ನು ಕೇಳಿ!” ಏದುಸಿರು ಬಿಡುತ್ತಾ ಹೇಳಿದ ಮುಲ್ಲಾ, “ನನ್ನ ಹೆಂಡತಿಯ ತಾಯಿಯನ್ನು ನಾನು ಬಲು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಎಲ್ಲರನ್ನೂ ನೀರು ಆ ದಿಕ್ಕಿನಲ್ಲಿ ಒಯ್ಯುತ್ತದೆಂದಾದರೆ ನನ್ನ ಅತ್ತೆಯನ್ನು ಹುಡುಕಬೇಕಾದದ್ದು ಖಂಡಿತವಾಗಿಯೂ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ.”

*****

೩೩. ಹೋಜನ ತರ್ಕ

ಚಿಕ್ಕವನಾಗಿದ್ದಾಗ:-

“ನಜ಼ರುದ್ದೀನ್‌, ನನ್ನ ಮಗನೇ, ಬೆಳಗ್ಗೆ ಬೇಗನೆ ಏಳು.”

“ಅಪ್ಪಾ ಏಕೆ?”

“ಅದೊಂದು ಒಳ್ಳೆಯ ಅಭ್ಯಾಸ. ಒಮ್ಮೆ ನಾನು ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮಕ್ಕಾಗಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಚಿನ್ನದ ನಾಣ್ಯಗಳಿದ್ದ ಚೀಲವೊಂದನ್ನು ಕಂಡೆ.”

“ಅದು ಹಿಂದಿನ ರಾತ್ರಿ ಯಾರೋ ಕಳೆದುಕೊಂಡಿದ್ದ ಚೀಲ ಅಲ್ಲ ಎಂಬುದು ನಿನಗೆ ಹೇಗೆ ಗೊತ್ತಾಯಿತು?”

“ನಾನು ಹೇಳುತ್ತಿರುವ ವಿಷಯಕ್ಕೆ ಸಂಬಂಧಿಸಿದ ಅಂಶ ಅದಲ್ಲ. ಆದರೂ ಹೇಳುತೇನೆ.  ಗೊತ್ತಾದದ್ದು ಹೇಗೆಂದರೆ ಅದು ಹಿಂದಿನ ರಾತ್ರಿ ಅಲ್ಲಿರಲಿಲ್ಲ, ನಾನು ನೋಡಿದ್ದೆ.”

“ಅಂದ ಮೇಲೆ ಬೆಳಗ್ಗೆ ಬೇಗನೆ ಏಳುವುದು ಎಲ್ಲರಿಗೂ ಒಳ್ಳೆಯದನ್ನು ಉಂಟುಮಾಡುವುದಿಲ್ಲ. ಆ ಚಿನ್ನವನ್ನು ಕಳೆದುಕೊಂಡಾತ ಬೆಳಗ್ಗೆ ನಿನಗಿಂತ ಬೇಗನೆ ಎದ್ದಿರಬೇಕು.”

ಪ್ರೌಢನಾಗಿದ್ದಾಗ:-

ವಿದ್ವಾಂಸನೊಬ್ಬ ಹೋಜನನ್ನು ಕೇಳಿದ, “ವಿಧಿ ಅಂದರೇನು?”

“ಒಂದನ್ನೊಂದು ಪ್ರಭಾವಿಸುವ ಪರಸ್ಪರ ಹೆಣೆದುಕೊಂಡಿರುವ ಘಟನೆಗಳ ಅಂತ್ಯವಿಲ್ಲದ ಸರಣಿ!”

“ಅದು ಬಲು ಅಸಮರ್ಪಕ ಉತ್ತರ. ನಾನು ಕಾರ್ಯ-ಕಾರಣ ಸಂಬಂಧ ಎಂಬುದಾಗಿ ನಂಬಿದ್ದೇನೆ.”

‘ಬಹಳ ಒಳ್ಳೆಯದು,” ಹೇಳಿದ ಮುಲ್ಲಾ, “ಅದನ್ನು ನೋಡಿ.” ಆ ಬೀದಿಯಲ್ಲಿ ಹೋಗುತ್ತಿದ್ದ ಮೆರವಣಿಗೆಯೊಂದನ್ನು ತೋರಿಸಿದ ಹೋಜ.

“ಅವನನ್ನು ಗಲ್ಲಿಗೇರಿಸಲು ಕರೆದೊಯ್ಯುತ್ತಿದ್ದಾರೆ. ಏಕೆ ಗೊತ್ತೆ? ಯಾರೋ ಒಬ್ಬರು ಅವನಿಗೊಂದು ಬೆಳ್ಳಿ ನಾಣ್ಯವನ್ನು ಕೊಟ್ಟರು, ಅದರಿಂದಾತ ಚಾಕುವೊಂದನ್ನು ಕೊಂಡುಕೊಂಡ, ಯಾರೂ ನೋಡುತ್ತಿಲ್ಲದೇ ಇದ್ದದ್ದರಿಂದಲೋ ಯಾರೂ ತಡೆಯದೇ ಇದ್ದದ್ದರಿಂದಲೋ ಆ ಚಾಕುವಿನಿಂದ ಒಬ್ಬನನ್ನು ಇರಿದು ಕೊಂದ!”

*****

೩೪. ನೀನೇಕೆ ಇಲ್ಲಿರುವೆ?

ಒಂದು ದಿನ ನಜ಼ರುದ್ದೀನ್‌ ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಕತ್ತಲಾಗುತ್ತಿದ್ದಾಗ ಕುದುರೆ ಸವಾರರ ತಂಡವೊಂದು ಅವನತ್ತ ಬರುತ್ತಿದ್ದದ್ದನ್ನು ನೋಡಿದ. ಅವನ ಕಲ್ಪನಾಶಕ್ತಿ ಬಲು ಚುರುಕಾಗಿ ಕಾರ್ಯೋನ್ಮುಖವಾಯಿತು. ಅವರು ತನ್ನನ್ನು ದರೋಡೆ ಮಾಡಲೋ ಅಥವ ತನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲೋ ಬರುತ್ತಿದ್ದಾರೆಂದು ಅವನು ಊಹಿಸಿಕೊಂಡು ಭಯಭೀತನಾದ. ಭಯ ಎಷ್ಟು ತೀವ್ರವಾಗಿತ್ತೆಂದರೆ ಅವರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಛಲ ಮೂಡಿ ಪಕ್ಕದಲ್ಲಿದ್ದ ಎತ್ತರದ ಗೋಡೆಯೊಂದನ್ನು ಹೇಗೋ ಹತ್ತಿ ಇನ್ನೊಂದು ಪಕ್ಕಕ್ಕೆ ಹಾರಿದ. ಅದೊಂದು ಸ್ಮಶಾನ ಎಂಬುದು ಅವನಿಗೆ ಆಗ ತಿಳಿಯಿತು. ನಜ಼ರುದ್ದೀನ್‌ ಕಲ್ಪಿಸಿಕೊಂಡಿದ್ದ ಉದ್ದೇಶಗಳು ಕುದುರೆ ಸವಾರರ ತಂಡದವರದ್ದು ಆಗಿರಲಿಲ್ಲ. ಎಂದೇ, ನಜ಼ರುದ್ದೀನನ ವರ್ತನೆ ಅವರ ಕುತೂಹಲವನ್ನು ಕೆರಳಿಸಿತು. ಅವರೂ ಸ್ಮಶಾನದೊಳಕ್ಕೆ ಬಂದರು.

ಅಲ್ಲಿ ಮೌನವಾಗಿ ಮಲಗಿದ್ದ ನಜ಼ರುದ್ದೀನನನ್ನು ಪತ್ತೆಹಚ್ಚಿ “ನಿನಗೇನಾದರೂ ಸಹಾಯ ಮಾಡಬೇಕೇ? ನೀನೇಕೆ ಇಂತು ಇಲ್ಲಿ ಮಲಗಿರುವೆ?” ಎಂಬುದಾಗಿ ಕೇಳಿದರು. ತನ್ನ ತಪ್ಪಿನ ಅರಿವಾದ ನಜ಼ರುದ್ದೀನ್ ಉತ್ತರಿಸಿದ, “ಇದಕ್ಕೆ ಕಾರಣ ನೀವು ಊಹಿಸಿದ್ದಕ್ಕಿಂತ ಸಂಕೀರ್ಣವಾಗಿದೆ. ನೋಡಿ, ನಾನು ಇಂತಿರಲು ಕಾರಣ ನೀವು, ನೀವು ಇಲ್ಲಿಗೆ ಬರಲು ಕಾರಣ ನಾನು!”

*****

೩೫. ವರ್ಣಾಂಧತೆ

ರಾಜನ ಕ್ಷೌರಿಕ ಒಂದು ದಿನ ರಾಜನ ದಾಡಿಯನ್ನು ಒಪ್ಪ ಮಾಡತ್ತಾ ಹೇಳಿದ, “ಮಹಾಪ್ರಭುಗಳ ದಾಡಿ ಬಿಳಿಯಾಗಲಾರಂಭಿಸಿದೆ.”

ಈ ಹೇಳಿಕೆಯನ್ನು ಕೇಳಿ ಕೋಪೋದ್ರಿಕ್ತನಾದ ರಾಜ ಕ್ಷೌರಿಕನನ್ನು ಎರಡು ವರ್ಷ ಕಾಲ ಸೆರೆಮನೆಯಲ್ಲಿ ಬಂಧಿಯಾಗಿರಿಸುವಂತೆ ಆಜ್ಞಾಪಿಸಿದ.

“ನನ್ನ ದಾಡಿಯಲ್ಲಿ ನಿನಗೇನಾದರೂ ಬಿಳಿ ಕೂದಲು ಕಾಣಿಸುತ್ತಿದೆಯೇ?” ಆಸ್ಥಾನಿಕನೊಬ್ಬನನ್ನು ರಾಜ ಕೇಳಿದ.

“ಹೆಚ್ಚುಕಮ್ಮಿ ಒಂದೂ ಇಲ್ಲವೇ ಇಲ್ಲ,” ಎಂಬುದಾಗಿ ಆ ಆಸ್ಥಾನಿಕ ತುಸು ಹಿಂಜರಿಯುತ್ತಾ ಉತ್ತರಿಸಿದ.

“ಹೆಚ್ಚುಕಮ್ಮಿ ಅಂದರೇನರ್ಥ?” ಎಂಬುದಾಗಿ ಅರಚಿದ ರಾಜ ಅವನನ್ನು ಮೂರು ವರ್ಷಕಾಲ ಸೆರೆಮನೆಯಲ್ಲಿ ಬಂಧಿಯಾಗಿರಿಸುವಂತೆ ಆಜ್ಞಾಪಿಸಿದ. ಇದರಿಂದಾಗಿ ಅರಮನೆಯ ಪ್ರತೀ ನಿವಾಸಿಯೂ ಹೆದರುವಂತಾಯಿತು.

ಹತ್ತಿರದಲ್ಲಿ ನಿಂತಿದ್ದ ಸೇವಕನೊಬ್ಬನಯ್ತ ತಿರುಗಿ ರಾಜ ಕೇಳಿದ, “ನೀನೇನು ಹೇಳುವೆ?”

“ಬಿಳಿಗೂದಲು?” ಉದ್ಗರಿಸಿದ ಆ ಸೇವಕ. “ಖಂಡಿತ ಇಲ್ಲ ಮಹಾಪ್ರಭು, ಖಂಡಿತ ಇಲ್ಲ. ಕಗ್ಗತ್ತಲ ರಾತ್ರಿಗಿಂತ ಕಪ್ಪಾಗಿದೆ ನಿಮ್ಮ ಅತ್ಯಂತ ಸುಂದರವಾದ ದಾಡಿ.”

“ನೀನೊಬ್ಬ ಮಹಾ ಸುಳ್ಳುಗಾರ!” ಕಿರುಚಿದ ರಾಜ. “ಇವನಿಗೆ ೧೦ ಛಡಿಏಟು ಕೊಡಿ. ನಂತರ ನಾಲ್ಕು ವರ್ಷ ಕಾಲ ಸೆರೆಮನೆ ವಾಸ ಅನುಭವಿಸಿಲಿ.” ಆಜ್ಞಾಪಿಸಿದ ರಾಜ.

ಕೊನೆಯಲ್ಲಿ ನಜ಼ರುದ್ದೀನನ ಕಡೆಗೆ ರಾಜ ತಿರುಗಿ ಕೇಳಿದ, “ಮುಲ್ಲಾ, ನನ್ನ ದಾಡಿಯ ಬಣ್ಣವೇನು?”

ನಜ಼ರುದ್ದೀನ್‌ ಉತ್ತರಿಸಿದ, “ ಮಹಾಪ್ರಭು, ನಾನು ವರ್ಣಾಂಧನಾದ್ದರಿಂದ ಆ ಪ್ರಶ್ನಗೆ ಉತ್ತರ ಹೇಳಲು ಸಾಧ್ಯವಿಲ್ಲ!”

*****

೩೬. ಸಾಲ ಮರುಪಾವತಿ

ಹೋಜ ಮಾರುಕಟ್ಟೆಯಲ್ಲಿ ಆಲಿವ್‌ಗಳನ್ನು ಮಾರುತ್ತಿದ್ದ. ವ್ಯಾಪಾರ ಹೇಳಿಕೊಳ್ಳುವಷ್ಟು ಚೆನ್ನಾಗಿ ಆಗುತ್ತಿರಲಿಲ್ಲ. ಸಮೀಪದಲ್ಲಿ ಹೋಗುತ್ತಿದ್ದ ಹೆಂಗಸೊಬ್ಬಳನ್ನು ಕರೆದು ಆಲಿವ್‌ ಕೊಳ್ಳುವಂತೆ ಅವಳ ಮನವೊಲಿಸಲು ಪ್ರಯತ್ನಿಸಿದ. ಅವಳು ಬೇಡವೆಂದು ತಲೆಯಾಡಿಸುತ್ತ ತನ್ನ ಹತ್ತಿರ ಹಣವಿಲ್ಲವೆಂಬುದಾಗಿ ಹೇಳಿದಳು.

“ಅದೊಂದು ಸಮಸ್ಯೆಯೇ ಅಲ್ಲ,” ಹಲ್ಲುಕಿರಿದ ಹೋಜ. “ನೀನು ನನಗೆ ಆಮೆಲೆ ಹಣ ಕೊಟ್ಟರೆ ಸಾಕು.” ಆಗಲೂ ಅವಳು ಆಲಿವ್‌ ಕೊಳ್ಳಲು ಉತ್ಸಾಹ ತೋರಿಸಲಿಲ್ಲ. ರುಚಿ ನೋಡಲು ಒಂದು ಆಲಿವ್‌ಅನ್ನು ಹೋಜ ಅವಳಿಗೆ ಕೊಡಲು ಮುಂದಾದ.

“ಬೇಡ ಬೇಡ. ನಾನೀಗ ಉಪವಾಸ ಮಾಡುತ್ತಿದ್ದೇನೆ,” ಅವಳು ಪ್ರತಿಕ್ರಿಯಿಸಿದಳು.

“ಉಪವಾಸವೇ? ರಾಮದಾನ ಹಬ್ಬ ಆರು ತಿಂಗಳ ಹಿಂದೆಯೇ ಆಯಿತಲ್ಲ?”

“ಅದು ನಿಜ. ಆಗ ನಾನು ಒಂದು ದಿನ ಉಪವಾಸ ಮಾಡಲು ಸಾಧ್ಯವಾಗಲಿಲ್ಲ, ಅದಕ್ಕೆ ಬದಲಾಗಿ ಈಗ ಮಾಡುತ್ತಿದ್ದೇನೆ. ಸರಿ ಹಾಗಾದರೆ ಒಂದು ಕಿಲೋ ಕಪ್ಪು ಆಲಿವ್‌ಗಳನ್ನು ಕೊಡು.”

“ಆಲಿವ್‌ಗಳನ್ನು ಮರೆತುಬಿಡು!” ಬೊಬ್ಬೆಹಾಕಿದ ಹೋಜ. “ಅಲ್ಲಾನ ಸಾಲ ಮರುಪಾವತಿಸಲು ನಿನಗೆ ೬ ತಿಂಗಳು ಬೇಕಾಯಿತು ಅನ್ನುವುದಾದರೆ ನನ್ನ ಸಾಲ ಯಾವಾಗ ಮರುಪಾವತಿಸುವೆ ಎಂಬುದನ್ನು ಹೇಗೆ ಹೇಳಲು ಸಾಧ್ಯ?”

*****

೩೭. ಸೋಮಾರಿಯ ಹೊರೆ

ಸದಾ ಅಧಿಕ ಕೆಲಸದೊತ್ತಡವಿರುತ್ತಿದ್ದ ಧಾನ್ಯಾಗಾರವೊಂದರಲ್ಲಿ ಧಾನ್ಯಗಳನ್ನು ಮಾರುಕಟ್ಟೆಗೆ ಒಯ್ಯುವ ಬಂಡಿಗಳಿಗೆ ಧಾನ್ಯದ ಮೂಟೆಗಳನ್ನು ತುಂಬುವ ಕೆಲಸವೊಂದು ನಜ಼ರುದ್ದೀನನಿಗೆ ಸಿಕ್ಕಿತು. ಸದಾ ಕೆಲಸದವರನ್ನು ವೀಕ್ಷಿಸುತ್ತಲೇ ಇರುತ್ತಿದ್ದ ಮೇಲ್ವಿಚಾರಕ ಅವನೊಂದಿಗೆ ಮಾತನಾಡಲೋಸುಗವೇ ಅವನ ಹತ್ತಿರಕ್ಕೆ ಬಂದ.ಆತ ಕೇಳಿದ, “ಎಲ್ಲರೂ ಒಂದು ಬಾರಿಗೆ ಎರಡು ಮೂಟೆಗಳನ್ನು ಹೊರುತ್ತಿದ್ದಾರೆ. ಆದರೆ ನೀನು ಮಾತ್ರ ಒಂದೇ ಮೂಟೆ ಹೊರುತ್ತಿರುವುದೇಕೆ?” ನಜ಼ರುದ್ದೀನ್ ಸುತ್ತಲೂ ಒಮ್ಮೆ ನೋಡಿ ಹೇಳಿದ, “ನಾನು ಮಾಡುತ್ತಿರುವಂತೆ ಎರಡು ಬಾರಿ ಬಂದು ಹೋಗಲಾರದಷ್ಟು ಸೋಮಾರಿಗಳು ಅವರಾಗಿರಬೇಕು!”

*****

೩೮. ಮೊದಲು ಬಲಗಾಲು

ಒಂದು ದಿನ ನಜ಼ರುದ್ದೀನ್‌ ಉಡುಪು ಧರಿಸುತ್ತಿರುವಾಗ ಅವನ ಹೆಂಡತಿ ಕೇಳಿದಳು, “ಮುಲ್ಲಾ ನೀವು ಯಾವಾಗಲೂ ಮೊದಲು ಬಲಗಾಲಿಗೆ ಅದರ ಪಾದರಕ್ಷೆ ಧರಿಸುತ್ತೀರಿ, ಏಕೆ?”ನಜ಼ರುದ್ದೀನ್‌ ಉತ್ತರಿಸಿದ, “ಬಲಗಾಲಿಗೆ ಇನ್ನೊಂದು ಕಾಲಿನ ಪಾದರಕ್ಷೆ ಮೊದಲು ಧರಿಸುವುದು ಮೂರ್ಖತನವಾಗುವುದಿಲ್ಲವೇ?”

*****

೩೯.ವೇಗ ಹೆಚ್ಚಿದಷ್ಟೂ —

ಮುಲ್ಲಾ ನಜ಼ರುದ್ದೀನ್‌ ತನ್ನ ತೋಟದಲ್ಲಿ ಯಾವುದೋ ಬೀಜ ಬಿತ್ತನೆ ಮಾಡುತ್ತಿದ್ದ. ಬಿತ್ತನೆ ಮಾಡುತ್ತಾ ಮುಂದೆಮುಂದೆ ಹೋದಂತೆ ಬಿತ್ತನೆ ಮಾಡುವ ವೇಗ ಹೆಚ್ಚುತ್ತಿದ್ದದ್ದನ್ನು ಅವನ ಹೆಂಡತಿ ನೋಡಿ ಹೇಳಿದಳು, “ಮುಲ್ಲಾ, ಅದೇಕೆ ಅಷ್ಟು ವೇಗವಾಗಿ ಬೀಜಗಳನ್ನು ಎರಚುತ್ತಿರುವೆ? ನಿಧಾನವಾಗಿ ಜಾಗರೂಕತೆಯಿಂದ ಬೀಜ ಬಿತ್ತುವುದು ಒಳ್ಳೆಯದಲ್ಲವೇ?”ನಜ಼ರುದ್ದೀನ್‌ ಹೇಳಿದ, “ಸಾಧ್ಯವಿಲ್ಲ. ಏಕೆಂದರೆ ಇನ್ನು ಹೆಚ್ಚು ಬೀಜ ಉಳಿದಿಲ್ಲ. ಅದು ಮುಗಿಯುವುದರೊಳಗಾಗಿ ಬಿತ್ತನೆ ಕೆಲಸ ಮುಗಿಸಬೇಕಾಗಿದೆ!”

*****

೪೦. ಅಂದುಕೊಳ್ಳುವಿಕೆಗಳು

ಖ್ಯಾತ ಮುಲ್ಲಾ ನಜ಼ರುದ್ದೀನನನ್ನು ಒಬ್ಬಾತ ಕೇಳಿದ, “ವಿಧಿ ಅಂದರೇನು?”

“ಅಂದುಕೊಳ್ಳುವಿಕೆಗಳು”

“ಅದು ಹೇಗೆ?”

ಮುಲ್ಲಾ ಅವನನ್ನು ನೋಡಿ ಹೇಳಿದ, “ಎಲ್ಲವೂ ಚೆನ್ನಾಗಿ ಜರಗುತ್ತದೆ ಎಂಬುದಾಗಿ ನೀನು ಅಂದುಕೊಂಡಾಗ ಅಂತಾಗದಿದ್ದರೆ ಅದು ದುರದೃಷ್ಟ ಅನ್ನುವೆ. ಯಾವುದೂ ಅನುಕೂಲಕರವಾಗಿರುವುದಿಲ್ಲ ಎಂಬುದಾಗಿ ನೀನು ಅಂದುಕೊಂಡಾಗ ಅನುಕೂಲಕರವಾದರೆ ಅದು ಒಳ್ಳೆಯ ಅದೃಷ್ಟ ಅನ್ನುವೆ. ಕೆಲವು ಇಂತೆಯೇ ಆಗುತ್ತವೆ ಅಥವ ಆಗುವುದಿಲ್ಲ ಎಂಬುದಾಗಿ ನೀನು ಅಂದುಕೊಳ್ಳುವೆ, ಆದರೆ ನಿಜವಾಗಿ ಏನಾಗುತ್ತದೆ ಎಂಬುದು ನಿನಗೆ ತಿಳಿದಿರುವುದಿಲ್ಲ. ಭವಿಷ್ಯ ಅಜ್ಞಾತವಾದದ್ದು ಎಂಬುದಾಗಿ ನೀನು ಅಂದುಕೊಳ್ಳುವೆ. ನೀನು ಅಂದುಕೊಂಡಂತೆ ಆಗದಿದ್ದಾಗ ಅದನ್ನು ವಿಧಿಯ ಆಟ ಅನ್ನುವೆ.”

*****

೪೧. ನಾವು ಹೇಗೆ ಜೀವಿಸಬೇಕು?

ಒಂದು ದಿನ ತನ್ನ ಹಳ್ಳಿಯಲ್ಲಿ ನಜ಼ರುದ್ದೀನ್ ನಡೆದುಕೊಂಡು ಹೋಗುತ್ತಿದ್ದಾಗ ಅವನ ನೆರೆಹೊರೆಯವರು ಅನೇಕ ಮಂದಿ ಅವನ ಹತ್ತಿರ ಬಂದು ಕೇಳಿದರು, “ನಜ಼ರುದ್ದೀನ್‌ ಹೋಜ ನೀನೊಬ್ಬ ವಿವೇಕೀ ಪವಿತ್ರ ಮನುಷ್ಯ. ನಮ್ಮನ್ನು ನಿನ್ನ ಶಿಷ್ಯರನ್ನಾಗಿ ದಯಮಾಡಿ ಸ್ವೀಕರಿಸು. ನಮ್ಮ ಜೀವನ ಹೇಗೆ ನಡೆಸಬೇಕು? ನಾವೇನು ಮಾಡಬೇಕು? ಮುಂತಾದವುಗಳ ಕುರಿತಾಗಿ ನಮಗೆ ಬೋಧಿಸು.”ನಜ಼ರುದ್ದೀನ್‌ ಕ್ಷಣಕಾಲ ಆಲೋಚಿಸಿ ಹೇಳಿದ, “ಆಯಿತು. ಮೊದಲನೇ ಪಾಠವನ್ನು ನಾನೀಗಲೇ ಹೇಳಿಕೊಡುತ್ತೇನೆ. ಅತ್ಯಂತ ಮುಖ್ಯವಾದ ವಿಷಯ ಅಂದರೆ ನಿಮ್ಮ ಪಾದಗಳ ಹಾಗು ಪಾದರಕ್ಷೆಗಳ ಕುರಿತು ಕಾಳಜಿ ವಹಿಸಿ. ಅವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.”ನೆರೆಹೊರೆಯವರು ಗಮನವಿಟ್ಟು ನಜ಼ರುದ್ದೀನ್‌ ಹೇಳಿದ್ದನ್ನು ಕೇಳುತ್ತಿದ್ದರು, ಅವನ ಪಾದಗಳನ್ನೂ ಪಾದರಕ್ಷೆಗಳನ್ನೂ ನೋಡುವ ವರೆಗೆ. ಅವು ಗಲೀಜಾಗಿದ್ದದ್ದು ಮಾತ್ರವಲ್ಲ ಚಪ್ಪಲಿಗಳ ಪಟ್ಟಿಗಳು ಕಳಚಿ ಬೀಳುವಂತಿದ್ದವು. ಅವರ ಪೈಕಿ ಒಬ್ಬಾತ ಕೇಳಿದ, “ಆದರೆ ಹೋಜ, ನಿನ್ನ ಕಾಲುಗಳು ಗಲೀಜಾಗಿವೆ, ನಿನ್ನ ಚಪ್ಪಲಿಗಳ ಸ್ಥಿತಿ ಚಿಂತಾಜನಕವಾಗಿವೆ. ನೀನೇ ಪಾಲಿಸದೇ ಇರುವ ಬೋಧನೆಗಳನ್ನು ನಾವು ಪಾಲಿಸಬೇಕೆಂದು ನಿರೀಕ್ಷಿಸುವುದು ಸರಿಯೇ?”ನಜ಼ರುದ್ದೀನ್‌ ಉತ್ತರಿಸಿದ, “ನಿಜ, ಆದರೆ ನಾನು ನನ್ನ ಜೀವನವನ್ನು ಹೇಗೆ ನಡೆಸಬೇಕೆಂದು ಜನಗಳನ್ನು ಕೇಳುತ್ತಾ ಸುತ್ತಾಡುವುದಿಲ್ಲ, ಅಲ್ಲವೇ?”

*****

೪೨. ನಜ಼ರುದ್ದೀನ್ ಸಂಧಿಸಿದ ಪ್ರವಾಸಿ

ನಜ಼ರುದ್ದೀನ್‌ ಹೋಜ ಮೆದೀನದ ಮೂಲಕ ಮೆಕ್ಕಾಗೆ ತೀರ್ಥಯಾತ್ರೆ ಹೋದ. ಮೆದೀನದಲ್ಲಿ ಪ್ರಧಾನ ಮಸೀದಿಯ ಸಮೀಪದಲ್ಲಿ ಹೋಗುತ್ತಿದ್ದಾಗ ತುಸು ಗೊಂದಲದಲ್ಲಿದ್ದಂತೆ ಗೋಚರಿಸುತ್ತಿದ್ದ ಪ್ರವಾಸಿಯೊಬ್ಬ ಆತನನ್ನು ಸಮೀಪಿಸಿ ಕೇಳಿದ, “ದಯವಿಟ್ಟು ಕ್ಷಮಿಸಿ. ನೀವು ಈ ಪ್ರದೇಶದ ನಿವಾಸಿಯಂತೆ ಕಾಣುತ್ತಿದ್ದೀರಿ. ಈ ಮಸೀದಿಯ ಕುರಿತು ಏನಾದರೂ ಮಾಹಿತಿ ಕೊಡಬಲ್ಲಿರಾ? ಇದು ಬಹಳ ಹಳೆಯದಾದರೂ ಬಲು ಮುಖ್ಯವಾದ ಮಸೀದಿಯಂತೆ ಕಾಣುತ್ತಿದೆ.”ತನಗೆ ಆ ಕುರಿತು ಏನೂ ತಿಳಿದಿಲ್ಲವೆಂಬುದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ನಜ಼ರುದ್ದೀನ್ ತಕ್ಷಣವೇ ಬಲು ಉತ್ಸಾಹದಿಂದ ವಿವರಣೆ ನೀಡಲಾರಂಭಿಸಿದ, “ಇದು ನಿಜವಾಗಿಯೂ ಪುರಾತನವಾದ ಮುಖ್ಯ ಮಸೀದಿ. ಅರೇಬಿಯಾವನ್ನು ಜಯಿಸಿದ್ದರ ನೆನಪಿನ ಕುರುಹಾಗಿ ಅಸಾಮಾನ್ಯನಾಗಿದ್ದ ಅಲೆಕ್ಸಾಂಡರ್ ಇದನ್ನು ಕಟ್ಟಿಸಿದ.”ಪ್ರವಾಸಿ ಈ ವಿವರಣೆಯಿಂದ ಮೊದಲು ಪ್ರಭಾವಿತನಾದರೂ ನಂತರ ಒಂದು ಸಂಶಯ ಅವನನ್ನು ಕಾಡಿತು, “ಅದು ಹೇಗೆ ಸಾಧ್ಯ? ನನಗೆ ತಿಳಿದ ಮಟ್ಟಿಗೆ ಅಲೆಕ್ಸಾಂಡರ್‌ ಒಬ್ಬ ಗ್ರೀಕನಾಗಿದ್ದ, ಮುಸಲ್ಮಾನನಲ್ಲ —- ಸರಿ ತಾನೆ?”“ಈ ವಿಷಯದ ಕುರಿತು ನಿಮಗೆ ತುಸು ತಿಳಿದಿರುವಂತಿದೆ,” ಅಪಮಾನದಿಂದ ಸಂಕಟಕ್ಕೀಡಾದ ನಜ಼ರುದ್ದೀನ್‌ ಉತ್ತರಿಸಿದ. “ನಿಜ ಹೇಳಬೇಕೆಂದರೆ ಯದ್ಧದ ಫಲಿತಾಂಶದಿಂದ ಪ್ರಭಾವಿತನಾದ ಅಲೆಕ್ಸಾಂಡರ್‌ ದೇವರಿಗೆ ತನ್ನ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ಇಸ್ಲಾಂಗೆ ಮಾತಾಂತರಗೊಂಡನು.”“ಓ ಹಾಗೋ.  ಹಂ— ಆದರೆ ಅಲೆಕ್ಸಾಂಡರ್‌ನ ಕಾಲದಲಲ್ಲಿ ಇಸ್ಲಾಂ ಮತವೇ ಅಸ್ತಿತ್ವದಲ್ಲಿ ಇರಲಿಲ್ಲವಲ್ಲ?”“ಒಂದು ಒಳ್ಳೆಯ ಅಂಶ! ನಮ್ಮ ಇತಿಹಾಸವನ್ನು ಇಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಅಮೇರಿಕದ ಪ್ರಜೆಯನ್ನು ನೋಡಿ ನನಗೆ ನಿಜವಾಗಿಯೂ ಬಲು ಆನಂದವಾಗುತ್ತಿದೆ. ವಾಸ್ತವವಾಗಿ ನಡೆದದ್ದು ಏನೆಂದರೆ ದೇವರು ತೋರಿದ ಔದಾರ್ಯದಿಂದ ಭಾವಪರವಶನಾದ ಅಲೆಕ್ಸಾಂಡರ್‌ ಯುದ್ಧ ಮುಗಿದ ನಂತರ ಹೊಸ ಮತವೊಂದನ್ನು ಹುಟ್ಟುಹಾಕಿ ಇಸ್ಲಾಂನ ಸಂಸ್ಥಾಪಕ ಅನ್ನಿಸಿಕೊಂಡ.”ಪ್ರವಾಸಿ ಮಸೀದಿಯನ್ನು ವಿಶೇಷ ಗೌರವದೃಷ್ಟಿಯಿಂದ ನೋಡಲಾರಂಭಿಸಿದ. ಏತನ್ಮಧ್ಯೆ ಸದ್ದಿಲ್ಲದೆ ನಜ಼ರುದ್ದಿಣ್‌ ಜನಸಂದಣಿಯಲ್ಲಿ ಸೇರಿ ತಪ್ಪಸಿಕೊಳ್ಳಲು ಹವಣಿಸುತ್ತಿದ್ದಾಗ ಪ್ರವಾಸಿ ಅವನನ್ನು ತಡೆದು ಪುನಃ ಕೇಳಿದ, “ಇಸ್ಲಾಂ ಮತದ ಸಂಸ್ಥಾಪಕ ಮೊಹಮ್ಮದ್‌ ಅಲ್ಲವೇ? ಹಾಗೆಂದು ಓದಿದ ನೆನಪು. ಇಸ್ಲಾಂನ ಸಂಸ್ಥಾಪಕ ಅಲೆಕ್ಸಾಂಡರ್‌ ಅಲ್ಲ ಎಂಬುದು ಖಚಿತ.”ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ನೀವೊಬ್ಬ ವಿದ್ವಾಂಸರು ಎಂಬುದಾಗಿ ನನಗನ್ನಿಸುತ್ತಿದೆ. ನಾನು ಆ ಕುರಿತೇ ಈಗ ಹೇಳುವವನಿದ್ದೆ. ಪ್ರವಾದಿಯ ಜೀವನಶೈಲಿಗ ಹೊಂದಿಕೊಳ್ಳಬೇಕಾದರೆ ಹೊಸತೊಂದು ಅನನ್ಯ ವ್ಯಕ್ತಿತ್ವದ ಆವಶ್ಯಕತೆಯನ್ನು ಮನಗಂಡ ಅಲೆಕ್ಸಾಂಡರ್‌  ತನ್ನ ಹಳೆಯ ಹೆಸರನ್ನು ಪರಿತ್ಯಜಿಸಿ ಮುಂದೆ ಜೀವನದುದ್ದಕ್ಕೂ ಮೊಹಮ್ಮದ್‌ ಎಂಬ ಹೆಸರಿನಿಂದಲೇ ಗುರುತಿಸಲ್ಪಟ್ಟನು.”“ನಿಜವಾಗಿಯೂ! ಇದು ಅತ್ಯಾಶ್ಚರ್ಯದ ವಿಷಯ. ಅಲೆಕ್ಸಾಂಡರ್‌ ಮೊಹಮ್ಮದ್‌ನಿಗಿಂತ ಎಷ್ಟೋ ಕಾಲ ಹಿಂದೆ ಬದುಕಿದ್ದ ಎಂಬುದಾಗಿ ನಾನು ತಿಳಿದಿದ್ದೆ. ನನ್ನ ತಿಳಿವಳಿಕೆ ನಿಜವಲ್ಲವೇ?”“ಖಂಡಿತವಾಗಿಯೂ ನಿಜವಲ್ಲ,” ಉತ್ತರಿಸಿದ ಹೋಜ. “ನೀನು ಆಲೋಚಿಸುತ್ತಿರುವುದು ಬೇರೊಬ್ಬ ಅಲೆಕ್ಸಾಂಡರ್‌ನ ಕುರಿತು. ನಾನು ಹೇಳುತ್ತಿರುವುದು ಮೊಹಮ್ಮದ್ ಎಂಬ ಹೆಸರಿದ್ದವನ ಕುರಿತು!”

*****

೪೩. ನಜ಼ರುದ್ದೀನ್‌ ಮೃತ್ಯುವನ್ನು ಸಂಧಿಸಿದ್ದು

ಒಂದು ದಿನ ನಜ಼ರುದ್ದೀನ್‌ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾಗ ವಿಚಿತ್ರವಾಗಿದ್ದ ಕಪ್ಪನೆಯ ಆಕೃತಿಯೊಂದು ಅವನನ್ನು ಅಡ್ಡಗಟ್ಟಿ ಹೇಳಿತು, “ನಾನು ಮೃತ್ಯು, ನಿನ್ನನ್ನು ಕರೆದೊಯ್ಯಲು ಬಂದಿದ್ದೇನೆ.”“ಮೃತ್ಯುವೇ?” ನಜ಼ರುದ್ದೀನ್ ಉದ್ಗರಿಸಿದ. “ನಾನಿನ್ನೂ ಮುದುಕನಾಗಿಯೇ ಇಲ್ಲವಲ್ಲ. ನಾನು ಮಾಡಬೇಕಾದದ್ದು ಬಹಳಷ್ಟು ಬಾಕಿ ಇದೆ. ನನ್ನನ್ನು ಬೇರೆ ಯಾರೋ ಎಂಬುದಾಗಿ ನೀನು ತಪ್ಪಾಗಿ ತಿಳಿದಂತಿದೆ.”ಮೃತ್ಯು ಹೇಳಿತು, “ಸಾಯಲು ಸಿದ್ಧವಿಲ್ಲದವರನ್ನೇ ನಾನು ಒಯ್ಯುವುದು.”ಹೋಜ ಉತ್ತರಿಸಿದ, “ನೀನು ತಪ್ಪಾಗಿ ತಿಳಿದಿರುವೆ. ಈ ಕುರಿತು ಒಂದು ಬಾಜಿ ಕಟ್ಟೋಣ.”“ಬಾಜಿಯೇ? ಆಗಬಹುದು. ಪಣಕ್ಕಿಡುವುದು ಏನನ್ನು?”“ನನ್ನ ಪ್ರಾಣಕ್ಕೆ ಬದಲಾಗಿ ೧೦೦ ಬೆಳ್ಳಿಯ ನಾಣ್ಯಗಳು.”“ಆಗಬಹುದು,” ಸಮ್ಮತಿಸಿತು ಮೃತ್ಯು. ಅದರ ಕೈಯಲ್ಲಿ ೧೦೦ ಬೆಳ್ಳಿಯ ನಾಣ್ಯಗಳಿದ್ದ ಥೈಲಿ ಪ್ರತ್ಯಕ್ಷವಾಯಿತು. “ನೀನೆಂಥ ಮೂರ್ಖನಾಗಿರಬೇಕು, ಈ ತೆರನಾದ ಬಾಜಿಕಟ್ಟಲು. ಈ ಕ್ಷಣದಲ್ಲಿ ನಿನ್ನನ್ನು ಕೊಲ್ಲುವುದರ ಮುಖೇನ ಪಂದ್ಯ ಗೆಲ್ಲುವುದರಿಂದ ನನ್ನನ್ನು ಏನು ತಡೆಯುತ್ತದೆ?”ನಜ಼ರುದ್ದೀನ್ ಪ್ರತಿಕ್ರಿಯಿಸಿದ, “ನೀನು ನನ್ನನ್ನು ಕೊಲ್ಲುವೆ ಎಂಬುದು ನನಗೆ ತಿಳಿದಿದ್ದರಿಂದಲೇ ಬಾಜಿ ಕಟ್ಟಿದೆ.”“ಹಂ—-,” ಗಾಢವಾಗಿ ಆಲೋಚಿಸಿತು ಮೃತ್ಯು. “ಓ ಹಾಗೋ. ಅಂದ ಮೇಲೆ ಕರಾರಿನ ಷರತ್ತುಗಳ ಪ್ರಕಾರ ನಾನು ನಿನ್ನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ ಎಂಬುದೂ ನಿನಗೆ ಆಗಲೇ ತಿಳಿದಿದ್ದಿರಬೇಕು.”“ಖಂಡಿತಾ ಇಲ್ಲ!” ಅಂದವನೇ ನಾಣ್ಯದ ಥೈಲಿಯನ್ನು ಭದ್ರವಾಗಿ ಹಿಡಿದುಕೊಂಡು ನಜ಼ರುದ್ದೀನ್ ಮುಂದಕ್ಕೆ ನಡೆದ.

*****

೪೪. ದೈವೇಚ್ಛೆ

ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ ಅದು ಇಂಗಿಸಲಾರದು ಎಂಬ ಕಾರಣಕ್ಕಾಗಿ ಅದನ್ನವರು ಹಂಚಿಕೊಳ್ಳಲು ಸಿದ್ಧವಿರಲಿಲ್ಲ. ಎಂದೇ ಪ್ರತಿಯೊಬ್ಬನೂ ತನ್ನ ಕುರಿತು ಬಡಾಯಿಕೊಚ್ಚಕೊಳ್ಳಲಾರಂಭಿಸಿದರು, “ನಾನು ಲೋಕದಲ್ಲಿ ಇರಬೇಕಾದದ್ದು ಅತೀ ಮುಖ್ಯವಾದದ್ದರಿಂದ ನನ್ನ ಪ್ರಾಣ ಉಳಿಸಲೇ ಬೇಕು.”

ಮೊದಲನೇ ಸಂತ ಹೇಳಿದ, “ನಾನು ಉಪವಾಸ ಮಾಡುತ್ತಿದ್ದೇನೆ, ಕಳೆದ ಅನೇಕ ವರ್ಷಗಳಿಂದ ಪ್ರಾರ್ಥನೆ ಮಾಡುತ್ತಿದ್ದೇನೆ. ನಿಮ್ಮಿಬ್ಬರ ಪೈಕಿ ಯಾರೊಬ್ಬರೂ ನನ್ನಷ್ಟು ದೈವಭಕ್ತಿ ಉಳ್ಳವರೂ ಅಲ್ಲ ಪವಿತ್ರವಾದವರೂ ಅಲ್ಲ. ಅದ್ದರಿಂದ ನಾನು ಉಳಿಯಬೇಕೆಂದು ದೇವರು ಬಯಸುತ್ತಾನೆ. ಎಂದೇ ಹಲ್ವಾ ನನಗೆ ಸೇರಬೇಕು.”

ಎರಡನೇ ಸಂತ ಹೇಳಿದ, “ನೀನು ಬಲು ಕಟ್ಟನಿಟ್ಟಿನಿಂದ ದೇವತಾರಾಧನೆ ಮಾಡುತ್ತಿರುವೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾನೊಬ್ಬ ವಿದ್ವಾಂಸ. ಎಲ್ಲ ಪವಿತ್ರ ಗ್ರಂಥಗಳನ್ನು ನಾನು ಓದಿದ್ದೇನೆ. ಜ್ಞಾನ ಪ್ರಸಾರಕ್ಕಾಗಿ ನನ್ನ ಜೀವನವನ್ನೇ ಮೀಸಲಾಗಿಟ್ಟಿದ್ದೇನೆ. ನಿನ್ನಂತೆ ಉಪವಾಸ ಮಾಡುವವರ ಆವಶ್ಯಕತೆ ಜಗತ್ತಿಗಿಲ್ಲ. ನೀನೇನು ಮಾಡಬಲ್ಲೆ? – ನೀನು ಉಪವಾಸ ಮಾತ್ರ ಮಾಡಬಲ್ಲೆ. ಸ್ವರ್ಗದಲ್ಲಿಯೂ ನೀನು ಉಪವಾಸ ಮಾಡಬಹುದು! ಜಗತ್ತಿಗೆ ಜ್ಞಾನದ ಆವಶ್ಯಕತೆ ಇದೆ. ಜಗತ್ತು ಎಷ್ಟು ಅಜ್ಞಾನದಲ್ಲಿ ಮುಳುಗಿದೆಯೆಂದರೆ ಅದು ನನ್ನಂಥವನನ್ನು ಕಳೆದುಕೊಳ್ಳಲು ತಯಾರಿಲ್ಲ. ಎಂದೇ ಹಲ್ವಾ ನನಗೇ ಸೇರಬೇಕು.”

ಮುಲ್ಲಾ ನಜ಼ರುದ್ದೀನ್‌ ಹೇಳಿದ, “ನಾನು ಬೈರಾಗಿಯಲ್ಲವಾದ್ದರಿಂದ ಸ್ವನಿಯಂತ್ರಣ ಮಾಡುತ್ತೇನೆ ಎಂಬ ಭರವಸೆ ನೀಡಲಾರೆ. ನಾನು ವಿಶೇಷವಾದದ್ದೇನನ್ನೂ ಓದಿಲ್ಲ, ಆದ್ದರಿಂದ ವಿದ್ವಾಂಸನೂ ಅಲ್ಲ. ನಾನೊಬ್ಬ ಸಾಧಾರಣ ಪಾಪಿ. ದೇವರು ಪಾಪಿಗಳಿಗೆ ಯಾವಾಗಲೂ ವಿಶೇಷ ಕರುಣೆ ತೋರುತ್ತಾನೆ ಎಂಬುದಾಗಿ ಕೇಳಿದ್ದೇನೆ. ಎಂದೇ ಹಲ್ವಾ ನನಗೆ ಸೇರಬೇಕು.”

ಯಾವ ತೀರ್ಮಾನಕ್ಕೂ ಆಗ ಬರಲಾಗದ್ದರಿಂದ ಮುಂದೇನು ಮಾಡುವುದೆಂಬುದರ ಕುರಿತು ಇಂತು ತೀರ್ಮಾನಿಸಿದರು: “ನಾವು ಮೂವರೂ ಹಲ್ವಾ ತಿನ್ನದೆ ಮಲಗೋಣ. ಅದು ಯಾರಿಗೆ ಸೇರಬೇಕೆಂಬುದನ್ನು ದೇವರು ತೀರ್ಮಾನಿಸಲಿ. ಯಾರಿಗೆ ಅತ್ಯುತ್ತಮವಾದ ಕನಸು ಬೀಳುವಂತೆ ದೇವರು ಮಾಡುತ್ತಾನೋ ಅವನಿಗೆ ಈ ಹಲ್ವಾ ಬೆಳಗ್ಗೆ ಸೇರಲಿ.”

ಬೆಳಗ್ಗೆ ಮೊದಲನೇ ಸಂತ ಹೇಳಿದ, “ನನ್ನೊಂದಿಗೆ ಇನ್ನುಮೇಲೆ ಯಾರೂ ಸ್ಪರ್ಧಿಸಲಾರರು. ಆ ಹಲ್ವಾ ನನಗೆ ಕೊಡಿ – ಕನಸ್ಸಿನಲ್ಲಿ ನಾನು ದೇವರ ಪಾದಗಳಿಗೆ ಮುತ್ತು ಕೊಟ್ಟೆ. ಇದಕ್ಕಿಂತ ಉತ್ತಮವಾದದ್ದು ಬೇರೇನಿರಲು ಸಾಧ್ಯ? ಇದಕ್ಕಿಂತ ಉತ್ತಮವಾದ ಅನುಭವ ಆಗಲು ಸಾಧ್ಯವೇ?”

ಎರಡನೇ ವಿದ್ವಾಂಸ ಸಂತ ನಗುತ್ತಾ ಹೇಳಿದ, “ಅದು ನನ್ನ ಕನಸಿಗೆ ಹೋಲಿಸಿದರೆ ಏನೇನೂ ಅಲ್ಲ. ನನ್ನ ಕನಸಿನಲ್ಲಿ ದೇವರು ನನ್ನನ್ನು ತಬ್ಬಿಕೊಂಡು ಮುತ್ತು ಕೊಟ್ಟರು! ನೀನು ಅವನ ಕಾಲಿಗೆ ಮುತ್ತು ಕೊಟ್ಟೆಯಷ್ಟೆ? ಅವನು ನನಗೆ ಮುತ್ತು ಕೊಟ್ಟದ್ದೂ ಅಲ್ಲದೆ ನನ್ನನ್ನು ತಬ್ಬಿಕೊಂಡ! ಹಲ್ವಾ ಎಲ್ಲಿದೆ? ಅದು ನನಗೇ ಸೇರಬೇಕು.”

ಅವರೀರ್ವರೂ ನಜ಼ರುದ್ದೀನನ ಕಡೆಗೆ ನೋಡಿ ಕೇಳಿದರು, “ನಿನಗೇನು ಕನಸು ಬಿತ್ತು?”

ನಜ಼ರುದ್ದೀನ್‌ ಹೇಳಿದ, “ನಾನೊಬ್ಬ ಬಡಪಾಯಿ ಪಾಪಿ, ನನ್ನ ಕನಸು ಬಲು ಸಾಧಾರಣದ್ದು – ಎಷ್ಟು ಸಾಧಾರಣದ್ದು ಅಂದರೆ ನಿಮಗೆ ಹೇಳಲೂ ತಕ್ಕುದಾದದ್ದಲ್ಲ. ಆದರೂ ನಾವು ಮಾಡಿಕೊಂಡ ಒಪ್ಪಂದದ ಪ್ರಕಾರ ಹೇಳಲೇಬೇಕಾದ್ದರಿಂದ ಹೇಳುತ್ತೇನೆ. ನನ್ನ ನಿದ್ದೆಯಲ್ಲಿ ದೇವರು ಕಾಣಿಸಿಕೊಂಡು ಹೇಳಿದರು, ‘ಎಲವೋ ಮೂರ್ಖ, ನೀನೇನು ಮಾಡುತ್ತಿರುವೆ? ಹಲ್ವಾ ತಿನ್ನು’ – ಆದ್ದರಿಂದ ನಾನು ಹಲ್ವಾವನ್ನು ತಿಂದೆ. ದೇವರ ಆಜ್ಞೆಯನ್ನು ನಾನು ಪಾಲಿಸದಿರುವುದು ಹೇಗೆ? ಈಗ ಹಲ್ವಾ ಉಳಿದಿಲ್ಲ!”

*****

೪೫. ನಗುವಿನಿಂದಾಗುವ ಲಾಭ

ಅಪರಿಚಿತನೊಬ್ಬ ಕಾಫಿಗೃಹದಲ್ಲಿ ಹೇಳುತ್ತಿದ್ದ ಬಲು ಉದ್ದನೆಯ ಕತೆಯೊಂದನ್ನು ಮುಲ್ಲಾ ನಜ಼ರುದ್ದೀನ್ ಬಲು ಏಕಾಗ್ರತೆಯಿಂದ ಕೇಳಿದ.

ಆದರೆ ಆ ಅಪರಿಚಿತನ ಉಚ್ಚಾರಣೆ ಅಸ್ಪಷ್ಟವಾಗಿದ್ದದ್ದಷ್ಟೇ ಅಲ್ಲದೆ ಮುಖ್ಯಾಂಶ ಸೂಚಕ ಪದಗಳ ಹೇಳುವಿಕೆಯೂ ಕುಲಗೆಟ್ಟಿತ್ತು. ತತ್ಪರಿಣಾಮವಾಗಿ ಕತೆ ಕೇಳುಗರನ್ನು ನಗಿಸುವಂತೆಯೂ ಇರಲಿಲ್ಲ. ಆ ಕತೆ ಕೇಳಿದವರ ಪೈಕಿ ನಕ್ಕದ್ದು ಮುಲ್ಲಾ ಒಬ್ಬ ಮಾತ್ರ! ಆ ಅಪರಿಚಿತ ಅಲ್ಲಿಂದ ಹೋದ ನಂತರ “ನಜ಼ರುದ್ದೀನ್‌ ನೀನು ನಕ್ಕದ್ದು ಏಕೆ?” ಎಂಬುದಾಗಿ ಯಾರೋ ಕೇಳಿದರು. “ನಾನು ಇಂಥ ಸನ್ನಿವೇಶಗಳಲ್ಲಿ ಯಾವಾಗಲೂ ನಗುತ್ತೇನೆ, ಆಗ ನಾನು ನಗದೇ ಇದ್ದಿದ್ದರೆ ಅವರು ಆ ಕತೆಯನ್ನು ಇನ್ನೊಮ್ಮೆ ಹೇಳುವ ಅಪಾಯವಿತ್ತು!”

*****

೪೬. ನೆನಪಿನ ಕಾಣಿಕೆ

“ನಜ಼ರುದ್ದೀನ್‌,” ಒಬ್ಬ ಸ್ನೇಹಿತ ಹೇಳಿದ, “ನಾನು ಬೇರೊಂದು ಹಳ್ಳಿಗೆ ವಲಸೆ ಹೋಗುತ್ತಿದ್ದೇನೆ. ನಿನ್ನ ಉಂಗುರವನ್ನು ನನಗೆ ಕೊಡುವೆಯಾ? ಏಕೆಂದರೆ ಅದನ್ನು ನಾನು ನೋಡಿದಾಗಲೆಲ್ಲ ನಿನ್ನನ್ನು ನೆನಪಿಸಿಕೊಳ್ಳುತ್ತೇನೆ.”

“ಓ, ನೀನು ಆ ಉಂಗುರವನ್ನು ಕಳೆದುಕೊಳ್ಳಬಹುದು ಹಾಗು ತದನಂತರ ನನ್ನನ್ನು ಮರೆತುಬಿಡಬಹುದು. ನಾನು ನಿನಗೆ ಉಂಗುರ ಕೊಡದೇ ಇದ್ದರೆ ಹೇಗೆ? ಆಗ ನೀನು ನಿನ್ನ ಬೆರಳು ನೋಡಿದಾಗಲೆಲ್ಲ ಅಲ್ಲಿ ಉಂಗುರ ಕಾಣಿಸುವುದಿಲ್ಲ, ಆಗ ನೀನು ಖಂಡಿತ ನನ್ನನ್ನು ನೆನಪಿಸಿಕೊಳ್ಳುವೆ.”

*****

೪೭. ಠಕ್ಕ ಫಕೀರ!

ಹಳ್ಳಿಯ ಕೇಂದ್ರ ಸ್ಥಳದಲ್ಲಿ ಫಕೀರನೊಬ್ಬ ನಿಂತುಕೊಂಡು “ದಿಢೀರ್‌ ತಂತ್ರ”ವೊಂದರ ನೆರವಿನಿಂದ ಅನಕ್ಷರಸ್ಥನಿಗೆ ಓದಲು ಕಲಿಸಬಲ್ಲೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದ.

“ಸರಿ ಹಾಗಾದರೆ, ನನಗೆ ಕಲಿಸು,” ಹೇಳಿದ ನಜ಼ರುದ್ದೀನ್‌.

ಫಕೀರ ನಜ಼ರುದ್ದೀನನ ತಲೆಯನ್ನು ಮುಟ್ಟಿ ಹೇಳಿದ, “ಈಗ ಹೋಗು ಏನನ್ನಾದರೂ ಓದು.”

ನಜ಼ರುದ್ದೀನ್ ಮನೆಗೆ ಹೋದ. ಒಂದು ಗಂಟೆಯ ನಂತರ ಪುನಃ ಕೋಪೋದ್ರಿಕ್ತನಾದಂತೆ ಕಾಣುತ್ತಿದ್ದ ನಜ಼ರುದ್ದೀನ್‌ ಅಲ್ಲಿಗೆ ಹಿಂದಿರುಗಿದ.

“ಏನಾಯಿತು? ನೀನೀಗ ಓದಬಲ್ಲೆಯಾ?” ಕೇಳಿದರು ಹಳ್ಳಿಯವರು.

“ನಿಜವಾಗಿಯೂ ನಾನು ಓದಬಲ್ಲೆ. ಆದರೆ ನಾನು ಹಿಂದಿರುಗಿ ಬಂದದ್ದು ಆ ಕಾರಣಕ್ಕಲ್ಲ. ಈಗ ಎಲ್ಲಿದ್ದಾನೆ ಆ ಠಕ್ಕ ಫಕೀರ?”

ಜನ ಕೇಳಿದರು, “ಮುಲ್ಲಾ, ಒಂದು ನಿಮಿಷದ ಒಳಗೆ ಆತ ನಿನಗೆ ಓದುವುದನ್ನು ಕಲಿಸಿದ. ಅಂದಮೇಲೆ ಅವನೊಬ್ಬ ಠಕ್ಕ ಎಂಬುದಾಗಿ ಹೇಗೆ ಹೇಳುವೆ?”

ನಜ಼ರುದ್ದೀನ್‌ ವಿವರಿಸಿದ, “ನಾನು ಮನೆಗೆ ಹೋದ ಮೇಲೆ ಓದಲಾರಂಭಿಸಿದ ಪುಸ್ತಕದಲ್ಲಿ ‘ಎಲ್ಲ ಫಕೀರರೂ ಠಕ್ಕರು’ ಎಂಬುದಾಗಿ ಖಡಾಖಂಡಿತವಾಗಿ ಬರೆದಿತ್ತು.”

*****

೪೮. ನಜ಼ರುದ್ದೀನನ ಸವಿತಿನಿಸು

ನಜ಼ರುದ್ದೀನನೂ ಅವನ ಇಬ್ಬರು ಸಹಪ್ರಯಾಣಿಕರೂ ಪ್ರಯಾಣಾವಧಿಯಲ್ಲಿ ತಿನ್ನಲೆಂದೇ ತಾವು ತಂದಿದ್ದ ಬುತ್ತಿಗಳಲ್ಲಿದ್ದದ್ದನ್ನು ತಿನ್ನಲೋಸುಗ ಒಂದೆಡೆ ವಿರಮಿಸಿದರು.

ಅವರ ಪೈಕಿ ಒಬ್ಬ ಬಡಾಯಿಕೊಚ್ಚಿಕೊಂಡ, “ನಾನು ಯಾವಾಗಲೂ ಹುರಿದು ಉಪ್ಪು ಹಾಕಿದ ಪಿಸ್ತಾ ಬೀಜಗಳನ್ನು, ಗೋಡಂಬಿಗಳನ್ನು, ಖರ್ಜೂರಗಳನ್ನು ಮಾತ್ರ ತಿನ್ನುತ್ತೇನೆ.”

“ಓ, ನಾನು ಒಣಗಿಸಿದ ಸ್ಯಾಲಮನ್‌ಗಳನ್ನು ಮಾತ್ರ ತಿನ್ನುತ್ತೇನೆ,” ಹೇಳಿದ ಇನ್ನೊಬ್ಬ ಸಹಪ್ರಯಾಣಿಕ.

ಇಬ್ಬರೂ ನಜ಼ರುದ್ದೀನ್‌ ಏನು ಹೇಳುತ್ತಾನೆಂಬುದನ್ನು ಕೇಳಲು ಅವನತ್ತ ನೋಡಿದರು.

ಕೆಲವು ಕ್ಷಣಗಳ ನಂತರ ನಜ಼ರುದ್ದೀನ್‌ ಒಂದು ಬ್ರೆಡ್ ತುಂಡನ್ನು ಎತ್ತಿ ಹಿಡಿದು ಆತ್ಮವಿಶ್ವಾಸದಿಂದ ಹೇಳಿದ, “ನಾನು ತಿನ್ನುವುದು ಚೆನ್ನಾಗಿ ಪುಡಿ ಮಾಡಿ ಜಾಗರೂಕತೆಯಿಂದ ನೀರಿನೊಂದಿಗೆ ಬೆರೆಸಿ ನಿಗದಿತ ಪರಿಮಾಣದ ಯೀಸ್ಟ್‌ ಮತ್ತು ಉಪ್ಪು ಸೇರಿಸಿ ನಿಗದಿತ ಕಾಲದಲ್ಲಿ ನಿಗದಿತ ಉಷ್ಣತೆಯಲ್ಲಿ ಬೇಯಿಸಿದ ಗೋಧಿಯನ್ನು ಮಾತ್ರ!”

*****

೪೯. ನಾವು ಪಕ್ಕಾ ಕೆಲಸಗಾರರು

ಒಮ್ಮೆ ನಜ಼ರುದ್ದೀನ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಂದು ದಿನ ಒಬ್ಬಾತ ಅವನ ಹತ್ತಿರ ಓಡಿ ಬಂದು ಹೇಳಿದ, “ಈ ಹಳ್ಳಿಯ ಗಡಿಯ ಸಮೀಪದಲ್ಲಿ ನನ್ನನ್ನು ಲೂಟಿ ಮಾಡಿದ್ದಾರೆ. ಕಳ್ಳ ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ – ನನ್ನ ಪಾದರಕ್ಷೆಗಳು, ನನ್ನ ಷರಾಯಿ, ನನ್ನ ಅಂಗಿ, ನನ್ನ ಮೇಲಂಗಿ, ನನ್ನ ಕಂಠಹಾರ, ನನ್ನ ಕಾಲುಚೀಲಗಳನ್ನೂ ಬಿಡಲಿಲ್ಲ – ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡ. ಅವನನ್ನು ಪತ್ತೆಹಚ್ಚಿ ನನಗೆ ನ್ಯಾಯ ಕೊಡಿಸಿ.”

ನಜ಼ರುದ್ದೀನ್‌ ಹೇಳಿದ, “ಸರಿ ನೋಡೋಣ. ಆದರೆ ನೀನೀಗ ಒಳ ಉಡುಪುಗಳನ್ನು ಧರಿಸಿರುವೆ. ಅಂದಮೇಲೆ ಕಳ್ಳ ಅದನ್ನು ಕಿತ್ತುಕೊಂಡಿಲ್ಲ, ಅಲ್ಲವೇ?”

“ಇಲ್ಲ.”

“ಅಂದಮೇಲೆ ಕಳ್ಳ ಈ ಊರಿನವನಲ್ಲ ಎಂಬುದು ಖಾತರಿ. ಆದ್ದರಿಂದ ಈ ಪ್ರಕರಣವನ್ನು ನಾನು ತನಿಖೆ ಮಾಡಿಸಲು ಸಾಧ್ಯವಿಲ್ಲ, ಇದು ನನ್ನ ಕಾರ್ಯವ್ಯಾಪ್ತಿಯಲ್ಲಿ ಇಲ್ಲ.”

“ಅಷ್ಟು ಖಚಿತವಾಗಿ ಹೇಗೆ ಹೇಳುವಿರಿ?”

“ಹೇಗೆ ಹೇಳುತ್ತೇನೆ!, ಅವನು ಇಲ್ಲಿಯವನಾಗಿದ್ದಿದ್ದರೆ ನಿನ್ನ ಒಳ ಉಡುಪುಗಳನ್ನೂ ಕಿತ್ತುಕೊಳ್ಳುತ್ತಿದ್ದ. ನಾವು, ಇಲ್ಲಿಯವರು ಏನನ್ನೇ ಮಾಡಲಿ, ಪರಿಪೂರ್ಣವಾಗಿ ಮಾಡುತ್ತೇವೆ. ನಾವು ಪಕ್ಕಾ ಕೆಲಸಗಾರರು!”

*****

೫೦. ಸೇಡು ತೀರಿಸಿಕೊಳ್ಳುವಿಕೆ

ನಜ಼ರುದ್ದೀನ್‌ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ದಿನ ಹೆಂಗಸೊಬ್ಬಳು ಬಂದು ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿದಳು, “ನಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಆ ತನಕ ನಾನು ಭೇಟಿ ಮಾಡದೇ ಇದ್ದ ಪುರುಷನೊಬ್ಬ ಬಂದು ನನಗೆ ಮುತ್ತು ಕೊಟ್ಟ! ನನಗೆ ನ್ಯಾಯ ದೊರಕಿಸಿ ಕೊಡಿ!”

ನಜ಼ರುದ್ದೀನ್ ಉದ್ಗರಿಸಿದ, “ನಿನಗೆ ನ್ಯಾಯ ಸಿಕ್ಕಲೇ ಬೇಕು ಎಂಬ ವಿಷಯವನ್ನು ನಾನು ಒಪ್ಪುತ್ತೇನೆ. ಆದ್ದರಿಂದ ನೀನು ಅವನಿಗೊಂದು ಮುತ್ತು ಕೊಟ್ಟು ಸೇಡು ತೀರಿಸಿಕೊ ಎಂಬುದಾಗಿ ಆಜ್ಞೆ ಮಾಡುತ್ತಿದ್ದೇನೆ!”

 

Advertisements
This entry was posted in ನಜ಼ರುದ್ದೀನ್‌ ಕತೆಗಳು and tagged , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s