ಸೂಫಿ ಕತೆಗಳು ೧-೫೦

೧. ಹಂಡೆ ಸತ್ತಿದೆ

ಕೋಜಿಯಾ ಒಂದು ದಿನ ಕಂಚುಗಾರನಿಂದ ಹಂಡೆಯೊಂದನ್ನು ಎರವಲು ಪಡೆದು ಮನೆಗೆ ಒಯ್ದನು. ಮರುದಿನ ಅದರೊಳಗೆ ದುಂಡನೆಯ ಪುಟ್ಟ ಬೋಗುಣಿಯೊಂದನ್ನು ಹಾಕಿ ಹಿಂದಿರುಗಿಸಿದ. ಮಾಲಿಕ ಹಂಡೆಯೊಳಗಿದ್ದ ಪುಟ್ಟ ಬೋಗುಣಿಯನ್ನು ತೋರಿಸಿ ಕೇಳಿದ, “ಇದೇನು?”

ಅದನ್ನು ನೋಡಿದ ಕೋಜಿಯಾ ಉದ್ಗರಿಸಿದ, “ಇದೇನು? ಹಂಡೆ ಒಂದು ಮರಿ ಹಾಕಿದೆ!”. ಮಾಲಿಕ ಬೋಗುಣಿಯನ್ನೂ ಹಂಡೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡ.

ಇನ್ನೊಂದು ದಿನ ಕೋಜಿಯಾ ಪುನಃ ಹಂಡೆಯನ್ನು ಎರವಲು ಪಡೆದು ಮನೆಗೆ ಒಯ್ದ. ಐದು ದಿನಗಳಾದರೂ ಅದನ್ನು ಕೋಜಿಯಾ ಹಿಂದಿರುಗಿಸದೇ ಇದ್ದದ್ದರಿಂದ ಮಾಲಿಕ ಅವನ ಮನೆಗೇ ಹೋಗಿ ಬಾಗಿಲು ತಟ್ಟಿದ.

ಬಾಗಿಲು ತೆರೆದು ಮಾಲಿಕನನ್ನು ನೋಡಿ ಕೋಜಿಯಾ ಕೇಳಿದ, “ನಿನಗೇನು ಬೇಕು?”

ಮಾಲಿಕ ಹೇಳಿದ, “ಹಂಡೆ”

ಕೋಜಿಯಾ ಉದ್ಗರಿಸಿದ, “ಓ ಹಂಡೆಯೋ. ಕ್ಷಮಿಸು, ಅದು ಸತ್ತು ಹೋಯಿತು”

ಮಾಲಿಕ ಕೇಳಿದ, “ಅಯ್ಯಾ ಕೋಜಿಯಾ, ಹಂಡೆ ಸಾಯುತ್ತದೆಯೇ?”

ಕೋಜಿಯಾ ಉತ್ತರಿಸಿದ, “ಹಂಡೆ ಮರಿ ಹಾಕಿತು ಎಂಬುದಾಗಿ ಹೇಳಿದ್ದನ್ನು ನೀನು ನಂಬಿದೆ. ಅಂದ ಮೇಲೆ ಅದು ಸತ್ತಿತು ಅನ್ನುವುದನ್ನು ಏಕೆ ನಂಬುವುದಿಲ್ಲ?”

*****

೨. ಭವ್ಯವಾದ ನೀಳ ಮೇಲಂಗಿ

ಒಂದು ದಿನ ಸನ್ಮಾನ್ಯ ಕೋಜಿಯಾ ವಿವಾಹ ಸಮಾರಂಭವೊಂದಕ್ಕೆ ಹೋದ. ಅವನು ಧರಿಸಿದ್ದ ಶೋಚನೀಯ ಸ್ಥಿತಿಯಲ್ಲಿ ಇದ್ದ ಹಳೆಯ ಉಡುಪನ್ನು ಗಮನಿಸಿದ ಅತಿಥೇಯ ಕೋಜಿಯಾನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ. ತನ್ನನ್ನು ಸತ್ಕರಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದನ್ನು ಮನಗಂಡ ಕೋಜಿಯಾ ಬಲು ವೇಗವಾಗಿ ತನ್ನ ಮನೆಗೆ ತೆರಳಿ ಭವ್ಯವಾದ ನೀಳ ನಿಲುವಂಗಿಯನ್ನು ಧರಿಸಿ ಸಮಾರಂಭಕ್ಕೆ ಹಿಂದಿರುಗಿದ. ಅವನು ಸಭಾಂಗಣವನ್ನು ಪ್ರವೇಶಿಸಿದ ತಕ್ಷಣವೇ ಅತಿಥೇಯ ಮಹಾಶಯ ಅವನನ್ನು ಬಲು ಗೌರವದಿಂದ “ಸನ್ಮಾನ್ಯ ಕೋಜಿಯಾರವರಿಗೆ ಸ್ವಾಗತ, ಸುಸ್ವಾಗತ” ಅನ್ನುತ್ತಾ ಸ್ವಾಗತಿಸಿ ಕರೆದೊಯ್ದು ಭೋಜನ ಮಾಡುವ ಮೇಜಿನ ಅಗ್ರಸ್ಥಾನದಲ್ಲಿ ಕುಳ್ಳಿರಿಸಿ “ಘನತೆವೆತ್ತ ಕೋಜಿಯಾರವರು ಭೋಜನ ಸ್ವೀಕರಿಸಬೇಕು” ಎಂಬುದಾಗಿ ವಿನಂತಿಸಿದನು. ತಕ್ಷಣವೇ ತನ್ನ ಭವ್ಯವಾದ ನೀಳ ನಿಲುವಂಗಿಯ ತುಪ್ಪಳದಿಂದ ಮಾಡಿದ್ದ ಅಂಚುಪಟ್ಟಿಯನ್ನು ಮೇಲತ್ತಿ ಹಿಡಿದು ಹೇಳಿದ, “ ಸುಸ್ವಾಗತ, ನನ್ನ ನಿಲುವಂಗಿಯೇ. ಘನತೆವೆತ್ತ ನಿಲುವಂಗಿಯೇ ಭೊಜನವನ್ನು ಸ್ವೀಕರಿಸಿ!”

ಆಶ್ಚರ್ಯಚಕಿತನಾದ ಅತಿಥೇಯ ಕೇಳಿದ, “ ಏನು ಇದರ ಅರ್ಥ?”

ಕೋಜಿಯಾ ಉತ್ತರಿಸಿದ, “ನೀವು ಗೌರವ ಸಲ್ಲಿಸಿದ್ದು ನನ್ನ ನಿಲುವಂಗಿಗೆ ಎಂಬುದು ಖಾತರಿ. ಆದ್ದರಿಂದ ಅದೂ ಸ್ವಲ್ಪ ಆಹಾರ ಸೇವಿಸಲಿ!”

*****

೩. ನಂಬಿಕೆಯ ಪ್ರಶ್ನೆ

ಒಂದು ದಿನ ಒಬ್ಬಾತ ಕೋಜಿಯಾನ ಮನೆಗೆ ಬಂದು ಅವನ ಕತ್ತೆಯನ್ನು ತನಗೆ ಎರವಲು ನೀಡುವಂತೆ ಕೋರಿದ.

ಕೋಜಿಯಾ ಹೇಳಿದ, “ಕತ್ತೆ ಮನೆಯಲ್ಲಿಲ್ಲ.”

ಆ ವೇಳೆಗೆ ಸರಿಯಾಗಿ ಒಳಗಿದ್ದ ಕತ್ತೆ ಅರಚಲಾರಂಭಿಸಿತು

ಬಂದಾತ ಹೇಳಿದ, “ಸನ್ಮಾನ್ಯ ಕೋಜಿಯಾರವರೇ ಕತ್ತೆ ಮನೆಯಲಿಲ್ಲ ಎಂಬುದಾಗಿ ನೀವು ಹೇಳುತ್ತಿದ್ದೀರಿ, ಒಳಗಿನಿಂದ ಕತ್ತೆಯ ಅರಚುವಿಕೆ ಕೇಳಿಸುತ್ತಿದೆ.”

ಕೋಜಿಯಾ ಹೇಳಿದ, “ಎಂಥ ವಿಚಿತ್ರ ಮನುಷ್ಯ ನೀನು! ಕತ್ತೆಯನ್ನು ನಂಬುತ್ತಿರುವೆ, ನರೆತ ಗಡ್ಡದ ನನ್ನಂಥವನ ಮಾತನ್ನು ನಂಬುತ್ತಿಲ್ಲ!”

*****

೪. ಕೋಜಿಯಾನ ದೊಗಲೆ ನಿಲುವಂಗಿ

ಕೋಜಿಯಾನ ಹೆಂಡತಿ ಅವನ ದೊಗಲೆ ನಿಲುವಂಗಿಯನ್ನು ಒಗೆದು ಒಣಗಿಸಲೋಸುಗ ಅದನ್ನು ಅಲ್ಲಿಯೇ ಇದ್ದ ಮರದಲ್ಲಿ ಒಂದು ದಿನ ತೂಗುಬಿಟ್ಟಳು. ಹೊರಗೆಲ್ಲಿಗೋ ಹೊರಟಿದ್ದ ಕೋಜಿಯಾನಿಗೆ ಅದು ಮರದ ಮೇಲೆ ಒಬ್ಬ ಮನುಷ್ಯ ಕೈಗಳನ್ನು ಅಗಲಕ್ಕೆ ಚಾಚಿಕೊಂಡು ನಿಂತಿರುವಂತೆ ಕಂಡಿತು. ಕೋಜಿಯಾ ತಕ್ಷಣ ತನ್ನ ಹೆಂಡತಿಯನ್ನು ಕರೆದು ಹೇಳಿದ, “ಬೇಗ ಹೋಗಿ ನನ್ನ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಬಾ.” ಅವನ ಹೆಂಡತಿ ಅಂತೆಯೇ ಮಾಡಿದಳು. ಕೋಜಿಯಾ ದೊಗಲೆ ನಿಲುವಂಗಿಗೆ ಚುಚ್ಚುವಂತೆ ಒಂದು ಬಾಣ ಬಿಟ್ಟು ಅದನ್ನು ನೆಲಕ್ಕೆ ಬೀಳಿಸಿದ. ತದನಂತರ ಒಳಬಂದು ಬಾಗಿಲನ್ನು ಭದ್ರವಾಗಿ ಹಾಕಿ ಮಲಗಿ ನಿದ್ದೆ ಮಾಡಿದ. ಮಾರನೆಯ ದಿನ ಬೆಳಗ್ಗೆ ಅವನು ಹೊರಬಂದಾಗ ತನ್ನ ದೊಗಲೆ ನಿಲುವಂಗಿಗೆ ತಾನೇ ಬಾಣ ಹೊಡೆದು ಬೀಳಿಸಿದ ವಿಷಯ ಅವನ ಅರಿವಿಗೆ ಬಂದಿತು. ಆ ತಕ್ಷಣ ನೆಲದಲ್ಲಿ ಕುಳಿತು ಅವನು ಜೋರಾಗಿ ಹೇಳಿದ, “ಓ ದೇವರೇ ನಿನಗೆ ಧನ್ಯವಾದಗಳು. ಆ ಅಂಗಿಯೊಳಗೆ ನಾನೇನಾದರೂ ಇದ್ದಿದ್ದರೆ ಖಂಡಿತ ಸಾಯುತ್ತಿದ್ದೆ.”

*****

೫. ಸ್ವರ್ಗದ ಹಣ್ಣು

ಹಿಂದೊಂದು ಕಾಲದಲ್ಲಿ ಸ್ವರ್ಗದ ಹಣ್ಣಿನ ಕುರಿತು ಕೇಳಿದಾಕೆ ಒಬ್ಬಳು ಇದ್ದಳು. ಅದನ್ನು ಪಡೆಯಬೇಕೆಂಬ ಬಯಕೆ ಅವಳಲ್ಲಿ ಮೂಡಿತ್ತು. ಸಬರ್‌ ಎಂಬ ಫಕೀರನನ್ನು ಆಕೆ ಕೇಳಿದಳು, “ಸ್ವರ್ಗದ ಹಣ್ಣು ನನಗೆ ಎಲ್ಲಿ ಸಿಕ್ಕೀತು? ಏಕೆಂದರೆ ಅದು ಸಿಕ್ಕಿದ ತಕ್ಷಣ ನಾನು ಜ್ಞಾನಿಯಾಗುತ್ತೇನೆ.” ಆ ಫಕೀರ ಹೇಳಿದ, “ನೀನು ನನ್ನೊಂದಿಗೆ ಅಧ್ಯಯನ ಮಾಡುವುದು ಅತ್ಯುತ್ತಮ. ಅಂತು ಮಾಡಲು ಸಾಧ್ಯವಿಲ್ಲದಿದ್ದರೆ ದೃಢನಿಶ್ಚಯದಿಂದ, ಕೆಲವೊಮ್ಮೆ ವಿಶ್ರಾಂತಿ ಇಲ್ಲದೆಯೇ ಈ ಭೂಮಂಡಲದಾದ್ಯಂತ ಪಯಣಿಸಬೇಕು.” ಅವಳು ಅವನನ್ನು ಬಿಟ್ಟು ಬೇರೆ ಮಾರ್ಗದರ್ಶಕರನ್ನು ಹುಡುಕಿಕೊಂಡು ಹೊರಟಳು. ವಿವೇಕಿ ಆರಿಫ್, ಮಹಾಪ್ರಾಜ್ಞ ಹಕೀಮ್, ಹುಚ್ಚ ಮ್ಯಾಝಪ್‌, ವಿಜ್ಞಾನಿ ಅಲೀಮ್ ಇವರೇ ಮೊದಲಾಗಿ ಇನ್ನೂ ಅನೇಕರನ್ನು ಭೇಟಿ ಮಾಡಿದಳು. ಈ ಹುಡುಕಾಟದಲ್ಲಿ ೩೦ ವರ್ಷಗಳನ್ನು ಕಳೆದಳು. ಕೊನೆಯಲ್ಲಿ ಒಂದು ದಿನ ಆಕೆ ತೋಟವೊಂದನ್ನು ಪ್ರವೇಶಿಸಿದಳು. ಅಲ್ಲಿತ್ತು ಸ್ವರ್ಗದ ಮರ. ಅದರ ಕೊಂಬೆಗಳಿಂದ ಸ್ವರ್ಗದ ಹಣ್ಣುಗಳು ನೇತಾಡುತ್ತಿದ್ದವು. ಆಕೆ ಮೊದಲು ಭೇಟಿ ಮಾಡಿದ ಫಕೀರ ಸಬರ್‌ ಆ ಮರದ ಪಕ್ಕದಲ್ಲಿ ನಿಂತಿದ್ದ. ಅವಳು ಕೇಳಿದಳು, “ಮೊದಲ ಸಲ ಭೇಟಿಯಾದಾಗ ’ನಾನೇ ಆ ಮರದ ಸಂರಕ್ಷಕ’ ಎಂಬ ವಿಷಯವನ್ನು ನನಗೇಕೆ ಹೇಳಲಿಲ್ಲ?”

ಅವನು ಉತ್ತರಿಸಿದ, “ಏಕೆಂದರೆ ನೀನು ಅದನ್ನು ನಂಬುತ್ತಿರಲಿಲ್ಲ. ಅಷ್ಟೇ ಅಲ್ಲದೆ ಈ ಮರ ೩೦ ವರ್ಷ ೩೦ ದಿನಗಳಿಗೆ ಒಂದು ಸಲ ಮಾತ್ರ ಫಲ ನೀಡುತ್ತದೆ.”

*****

೬. ಜಗತ್ತನ್ನು ಬದಲಾಯಿಸಿ

ಸೂಫಿ ಮುಮುಕ್ಷು ಬಯಾಝಿದ್‌ ತನ್ನ ಜೀವನಚರಿತ್ರೆಯಲ್ಲಿ ಇಂತು ಬರೆದಿದ್ದಾನೆ: ನಾನು ಚಿಕ್ಕವಯಸ್ಸಿನವನಾಗಿದ್ದಾಗ ನನ್ನ ಆಲೋಚನೆಗಳ, ದೇವರಿಗೆ ಮಾಡುತ್ತಿದ್ದ ಕೋರಿಕೆಗಳ, ಹಾಗೂ ಎಲ್ಲ ಪ್ರಾರ್ಥನೆಗಳ ತಿರುಳು “ಜಗತ್ತನ್ನು ಬದಲಿಸಲು ಅಗತ್ಯವಾದ ಶಕ್ತಿಯನ್ನು ನನಗೆ ಕೊಡು” ಎಂಬುದಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಏನೋ ಒಂದು ಲೋಪ ನನಗೆ ಗೋಚರಿಸುತ್ತಿತ್ತು. ನಾನೊಬ್ಬ ಕ್ರಾಂತಿಕಾರಿಯಾಗಿದ್ದೆ. ಇಡೀ ಪ್ರಪಂಚವನ್ನೇ ಬದಲಿಸುವ ಹಂಬಲ ನನ್ನದಾಗಿತ್ತು. ತುಸು ಪಕ್ವವಾದ ನಂತರ ನನಗನ್ನಿಸುತ್ತಿತ್ತು – ಈ ಬಯಕೆ ತುಸು ಅತಿಯಾಯಿತು. ನನ್ನ ಜೀವನ ನನ್ನ ಕೈ ಮೀರಿ ಹೋಗುತ್ತಿದೆ. ನನ್ನ ಅರ್ಧ ಆಯುಷ್ಯವೇ ಮುಗಿದಿದ್ದರೂ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಬದಲಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಅಂದ ಮೇಲೆ ಇಡೀ ಜಗತ್ತನ್ನೇ ಬದಲಿಸಬೇಕೆಂಬ ಬಯಕೆ ಅತಿಯಾಯಿತು. ಆದ್ದರಿಂದ ನಾನು ದೇವರಿಗೆ ಹೇಳಿದೆ, “ನನ್ನ ಕುಟುಂಬ ಸಾಕು. ನನ್ನ ಕುಟುಂಬವನ್ನು ನಾನು ಬದಲಿಸಲು ಅಗತ್ಯವಾದ ಶಕ್ತಿ ನೀಡು.” ನಾನು ಮುದುಕನಾದಾಗ ನನ್ನ ಕುಟುಂಬವನ್ನು ಬದಲಿಸ ಹೊರಟದ್ದೂ ಅತಿಯಾಯಿತು ಅನ್ನಿಸತೊಡಗಿತು. ಅವರನ್ನು ಬದಲಿಸಲು ನಾನು ಯಾರು? ನನ್ನನ್ನು ನಾನು ಬದಲಿಸಿದರೆ ಸಾಕು, ಆ ಸಾಧನೆಯೇ ಬಲು ದೊಡ್ಡ ಸಾಧನೆಯಾಗುತ್ತದೆ ಎಂಬ ಅರಿವು ಮೂಡಿತು. ತಕ್ಷಣ ದೇವರಲ್ಲಿ ಇಂತು ಪ್ರಾರ್ಥಿಸಿದೆ, “ಈಗ ನಾನು ಸರಿಯಾದ ನಿಲುವು ತಳೆದಿದ್ದೇನೆ. ಕನಿಷ್ಠಪಕ್ಷ ’ನನ್ನನ್ನು ನಾನು ಬದಲಿಸಿಕೊಳ್ಳಲು ಅವಕಾಶ ಕೊಡು.” ದೇವರು ಉತ್ತರಿಸಿದರು, “ಮಗೂ, ಈಗ ಸಮಯ ಉಳಿದಿಲ್ಲ. ಇದನ್ನು ನೀನು ಆರಂಭದಲ್ಲಿಯೇ ಕೇಳಬೇಕಿತ್ತು. ಆಗ ಅದನ್ನು ಮಾಡಬಹುದಾದ ಸಾಧ್ಯತೆ ಇತ್ತು.”

*****

೭. ಸೂರ್ಯ ಮತ್ತು ಗುಹೆ

ಒಂದು ದಿನ ಸೂರ್ಯನೂ ಗುಹೆಯೂ ಸಂಭಾಷಿಸುತ್ತಿದ್ದವು. ’ಅಂಧಕಾರ’, ’ಅತೀ ಥಂಡಿ’ – ಈ ಪರಿಕಲ್ಪನೆಗಳು ಸೂರ್ಯನಿಗೆ ಅರ್ಥವಾಗಲಿಲ್ಲ. ’ಬೆಳಕು’, ’ಪ್ರಕಾಶಮಾನವಾದ’ ಈ ಪರಿಕಲ್ಪನೆಗಳು ಗುಹೆಗೆ ಅರ್ಥವಾಗಲಿಲ್ಲ. ಅರ್ಥಮಾಡಿಕೊಳ್ಳಲೋಸುಗ ಸೂರ್ಯನು ಗುಹೆಗೆ, ಗುಹೆಯು ಸೂರ್ಯನಲ್ಲಿಗೆ ಭೇಟಿ ನೀಡಲು ತೀರ್ಮಾನಿಸಿದವು. ಮೊದಲು ಗುಹೆಯು ಸೂರ್ಯನಲ್ಲಿಗೆ ಭೇಟಿ ನೀಡಿ ಉದ್ಗರಿಸಿತು, “ ಆಹಾ, ಹೀಗೋ ವಿಷಯ. ಇದು ಅದ್ಭುತಕ್ಕೂ ಮಿಗಿಲಾದದ್ದು. ಈಗ ನೀನು ನಾನು ನೆಲೆಸಿರುವ ತಾಣಕ್ಕೆ ಬಂದು ನೋಡು.” ಸೂರ್ಯ ಗುಹೆಗೆ ಭೇಟಿ ನೀಡಿ ಉದ್ಗರಿಸಿತು, “ಛೇ, ನನಗೇನೂ ವ್ಯತ್ಯಾಸ ಕಾಣುತ್ತಿಲ್ಲ.”

*****

೮. ಕನಸು

ಸಂತ ಚಿಶ್ಟಿಯನ್ನು ಭೇಟಿ ಮಾಡಲು ಒಬ್ಬ ಬಂದ. ಕೊರಾನು ಜ್ಞಾನ ಪ್ರದರ್ಶಿಸಿ ಸಂತನನ್ನು ಚರ್ಚೆಯಲ್ಲಿ ಸೋಲಿಸುವ ಇರಾದೆ ಈ ಭೇಟಿಗಾರನಿಗೆ ಇತ್ತು. ಆದಾಗ್ಯೂ ಆತ ಒಳಕ್ಕೆ ಪ್ರವೇಶಿಸಿದ ಕೂಡಲೆ ಸಂತ ಚಿಶ್ಟಿ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಡರು. ಯೂಸುಫ್ ಮತ್ತು ತನಗೆ ಬಿದ್ದಿದ್ದ ಕನಸುಗಳ ಕುರಿತು ಕೊರಾನು ಪ್ರಕಾರ ವಿವರಣೆ ನೀಡಿದರು. ಇದ್ದಕ್ಕಿದ್ದಂತೆ ಅವರು ಭೇಟಿಗಾರನತ್ತ ತಿರುಗಿ “ನನಗೆ ಬಿದ್ದ ಒಂದು ಕನಸನ್ನು ಹೇಳಿದರೆ ನೀವು ಕೊರಾನು ಪ್ರಕಾರ ಅರ್ಥೈಸಬಲ್ಲಿರಾ,” ಎಂಬುದಾಗಿ ಕೇಳಿದರು. ಭೇಟಿಗಾರ ಅನುಮತಿಸಿದ ನಂತರ ತನಗೆ ಬಿದ್ದಿದ್ದ ಕನಸನ್ನು ತಿಳಿಸಿದರು. ಆ ಕನಸಿನಲ್ಲಿ ತಾವಿಬ್ಬರೂ ಇದ್ದುದಾಗಿ ತಿಳಿಸಿ ನಡೆದ ವಿದ್ಯಮಾನವನ್ನು ಇಂತು ವರ್ಣಿಸಿದರು: “ನಿಮ್ಮ ಕೈ ಜೇನು ತುಂಬಿದ್ದ ಜಾಡಿಯಲ್ಲಿಯೂ ನನ್ನ ಕೈ ಮಲ ತುಂಬಿದ್ದ ಪಾತ್ರೆಯಲ್ಲಿಯೂ ಮುಳುಗಿತ್ತು.”

ಆ ತಕ್ಷಣ ಮಧ್ಯಪ್ರವೇಶಿಸಿದ ಭೇಟಿಗಾರ ಆ ಕನಸನ್ನು ಅರ್ಥೈಸಿದ, “ಅರ್ಥ ಸುಸ್ಪಷ್ಟ! ನೀವು ತಪ್ಪು ದಾರಿಯಲ್ಲಿ ಸಾಗುತ್ತಿದ್ದೀರಿ. ನಾನಾದರೋ ನೈತಿಕವಾಗಿ ಸರಿಯಾದ ರೀತಿಯಲ್ಲಿ ಜೀವಿಸುತ್ತಿದ್ದೇನೆ.”

ಸಂತ ಛಿಶ್ಟಿ ಹೇಳಿದರು, “ಕನಸು ಅಲ್ಲಿಗೇ ಮುಗಿಯುವುದಿಲ್ಲ.”

“ಮುಂದೇನಾಯಿತು ಹೇಳಿ,” ಭೇಟಿಗಾರ ವಿನಂತಿಸಿದ.

ಸಂತರು ತಮ್ಮ ಕನಸಿನ ವರ್ಣನೆ ಮುಂದುವರಿಸಿದರು, “ನೀವು ನನ್ನ ಕೈ ನೆಕ್ಕುತ್ತಿದ್ದಿರಿ, ನಾನು ನಿಮ್ಮ ಕೈ ನೆಕ್ಕುತ್ತಿದ್ದೆ.”

*****

೯. ಹೆರಾಟ್‌ನ ಪ್ರಾಜ್ಞ

ಘಾಝ್ನದ ಸುಲ್ತಾನ ಮಹಮದ್‌ನ ಆಳ್ವಿಕೆಯ ಅವಧಿಯಲ್ಲಿ ಹೈದರ್ ಆಲಿ ಜಾನ್‌ ಎಂಬ ಹೆಸರಿನವನೊಬ್ಬನಿದ್ದ. ಸುಲ್ತಾನನ ಆಶ್ರಯ ಹೈದರ್‌ಗೆ ಲಭ್ಯವಾಗಬೇಕು ಎಂಬ ಬಯಕೆಯಿಂದ ಅವನ ತಂದೆ ಇಸ್ಕಂದರ್‌ ಖಾನ್ ಅಂದಿನ ಖ್ಯಾತ ಜ್ಞಾನಿಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕತೆಯನ್ನು ಅವನು ಅಧ್ಯಯನ ಮಾಡಲು ವ್ಯವಸ್ಥೆ ಮಾಡಿದ.

ಸೂಫಿ ಶಾಲೆಗಳಲ್ಲಿ ಕಲಿಸುವ ಅನೇಕ ಆಧ್ಯಾತ್ಮ ಸಂಬಂಧಿತ ವ್ಯಾಯಾಮಗಳು ಹಾಗೂ ಆಧ್ಯಾತ್ಮಿಕ ಶ್ಲೋಕಗಳನ್ನು ಕಂಠಸ್ಥ ಮಾಡಿಕೊಂಡು ವ್ಯಾಖ್ಯಾನಿಸುವುದರಲ್ಲಿ ಹೈದರ್‌ ಆಲಿ ಪ್ರಭುತ್ವ ಸಾಧಿಸಿದ ನಂತರ ಇಸ್ಕಂದರ್‌ ಖಾನ್ ಅವನನ್ನು ಸುಲ್ತಾನ ಮಹಮದ್‌ನ ಸಮ್ಮುಖಕ್ಕೆ ಕರೆದುಕೊಂಡು ಹೋಗಿ ಹೇಳಿದ, “ಮಹಮದ್ ಸುಲ್ತಾನ ಶ್ರೇಷ್ಠರೇ, ನೀವು ಜ್ಞಾನದ ಪೋಷಕರೆಂಬುದು ತಿಳಿದಿರುವುದರಿಂದ ನನ್ನ ದೊಡ್ಡ ಮತ್ತು ಬಲು ಬುದ್ಧಿವಂತ ಮಗನಿಗೆ ತಮ್ಮ ಆಸ್ಥಾನದಲ್ಲಿ ಉತ್ತಮ ಹುದ್ದೆ ದೊರೆತೀತು ಎಂಬ ಆಸೆಯಿಂದ ಸೂಫಿ ವಿಧಿವಿಧಾನಗಳಲ್ಲಿ ವಿಶೇಷ ತರಬೇತಿ ಕೊಡಿಸಿದ್ದೇನೆ.”

ಸುಲ್ತಾನ ಅವನತ್ತ ತಲೆ ಎತ್ತಿ ಸಹ ನೋಡದೆಯೇ, “ಇನ್ನು ಒಂದು ವರ್ಷ ಕಳೆದ ನಂತರ ಅವನನ್ನು ಕರೆದುಕೊಂಡು ಬಾ.”

ತುಸು ನಿರಾಸೆಯಾದರೂ ಸಂಪೂರ್ಣ ಹತಾಶನಾಗದೆ ಇಸ್ಕಂದರ್‌ ಖಾನ್‌ ಮಗನನ್ನು ಹಿಂದಿದ್ದ ಮಹಾನ್‌ ಸೂಫೀ ಸಂತರ ಕೃತಿಗಳನ್ನು ಅಭ್ಯಸಿಸಲೂ ಪ್ರಾಚೀನ ಗುರುಗಳ ಸಮಾಧಿಗಳಿಗೆ ಭೇಟಿ ನೀಡಲೂ ಕಳುಹಿಸಿದ. ಮುಂದಿನ ವರ್ಷ ಇಂದಿನದ್ದಕ್ಕಿಂತ ಹೆಚ್ಚು ಸಿದ್ಧತೆಯೊಂದಿಗೆ ಸುಲ್ತಾನನ್ನು ಕಾಣುವ ಇರಾದೆ ಅವನದಾಗಿತ್ತು.

ಒಂದು ವರ್ಷದ ನಂತರ ಅವನು ಹೈದರ್‌ನನ್ನು ಸುಲ್ತಾನನ ಆಸ್ಥಾನಕ್ಕೆ ಕರೆದೊಯ್ದು ಹೇಳಿದ, “ಮಹಾಪ್ರಭು, ನನ್ನ ಮಗ ಸುದೀರ್ಘ ಕಾಲ ತ್ರಾಸದಾಯಕವಾದ ಯಾತ್ರೆಗಳನ್ನು ಮಾಡಿ ಸೂಫಿ ಇತಿಹಾಸ ಹಾಗೂ ಶಾಸ್ತ್ರೀಯವಾದ ಆಧ್ಯಾತ್ಮಿಕ ವ್ಯಾಯಾಮಗಳಲ್ಲಿ ಈಗ ಹಿಂದಿಗಿಂತಲೂ ಹೆಚ್ಚು ಜ್ಞಾನ ಗಳಿಸಿದ್ದಾನೆ. ನಿಮ್ಮ ಆಸ್ಥಾನದ ಒಂದು ಸಂಪತ್ತು ಎಂಬುದಾಗಿ ಪರಿಗಣಿಸುವಷ್ಟು ಅರ್ಹತೆ ಅವನದ್ದು ಎಂಬುದನ್ನು ಸಾಬೀತು ಪಡಿಸಲೋಸುಗ ಅವನನ್ನು ಪರೀಕ್ಷಿಸಿ.”

ಒಂದಿನಿತೂ ಹಿಂದುಮುಂದು ನೋಡದೆ ಸುಲ್ತಾನ ಹೇಳಿದ, “ಇನ್ನೊಂದು ವರ್ಷ ಕಳೆದ ನಂತರ ಬಾ!”

ಮುಂದಿನ ೧೨ ತಿಂಗಳುಗಳಲ್ಲಿ ಹೈದರ್‌ ಆಲಿ ಅಮುದಾರ್ಯಾ ನದಿಯನ್ನು ದಾಟಿ ಬುಕಾರಾ, ಸಮರ್‌ಖಂಡ್‌, ಕ್ವಾಸರ್‌-ಐ-ಆರಿಫಿನ್‌, ತಾಶ್ಕೆಂಟ್, ದುಶಾಂಬೆ, ಟರ್ಕಿಸ್ತಾನ್‌ಗಳಲ್ಲಿ ಇರುವ ಸೂಫಿ ಸಂತರುಗಳ ಸಮಾಧಿಗಳಿಗೆ ಭೇಟಿ ನೀಡಿದ. ಆಸ್ಥಾನಕ್ಕೆ ಹಿಂದಿರುಗಿದಾಗ, ಸುಲ್ತಾನ ಒಮ್ಮೆ ಅವನತ್ತ ದೃಷ್ಟಿ ಹಾಯಿಸಿ ಹೇಳಿದ, “ಒಂದು ವರ್ಷ ಕಳೆದ ನಂತರ ಅವನು ಬರಲಿ!”

ಆ ವರ್ಷ ಹೈದರ್‌ ಆಲಿ ಮೆಕ್ಕಾಕ್ಕೆ ತೀರ್ಥಯಾತ್ರೆ ಮಾಡಿದ. ತದನಂತರ ಅವನು ಭಾರತ ಮತ್ತು ಪರ್ಶಿಯಾಗಳಿಗೆ ಭೇಟಿ ನೀಡಿ ಅಪರೂಪದ ಗ್ರಂಥಗಳನ್ನು ಪರಿಶೀಲಿಸಿದ. ಆ ಕಾಲದಲ್ಲಿ ಆ ಸ್ಥಳಗಳಲ್ಲಿ ಇದ್ದ ಮಹಾನ್‌ ದರವೇಶಿಗಳನ್ನು ಕಂಡು ತನ್ನ ನಮನಗಳನ್ನು ಸಲ್ಲಿಸುವುದನ್ನೂ ಮರೆಯಲಿಲ್ಲ.

ಘಾಝ್ನಾಕ್ಕೆ ಹಿಂದಿರುಗಿದ ಹೈದರ್‌ನಿಗೆ ಸುಲ್ತಾನ ಮಹಮದ್‌ ಹೇಳಿದ, “ಈಗ ಒಬ್ಬ ಗುರುವನ್ನು ಆಯ್ಕೆ ಮಾಡು. ಅವರು ನಿನ್ನನ್ನು ಶಿಷ್ಯನಾಗಿ ಸ್ವೀಕರಿಸಿದರೆ ಒಂದು ವರ್ಷ ಕಳೆದ ನಂತರ ಬಾ!”

ಒಂದು ವರ್ಷ ಕಳೆಯಿತು. ಇಸ್ಕಂದರ್‌ ಖಾನ್‌ ಮಗನನ್ನು ಆಸ್ಥಾನಕ್ಕೆ ಕರೆದೊಯ್ಯಲು ತಯಾರಿ ಮಾಡಿಕೊಂಡನಾದರೂ ಹೈದರ್‌ ಆಲಿ ಸುಲ್ತಾನನನ್ನು ಭೇಟಿ ಮಾಡಲು ಆಸಕ್ತನಾಗಿರಲಿಲ್ಲ. ಹೆರಾಟ್‌ನಲ್ಲಿದ್ದ ತನ್ನ ಗುರುವಿನ ಪಾದಗಳ ಸಮೀಪದಲ್ಲಿ ಆತ ಕುಳಿತ. ಅವನ ತಂದೆ ಏನೇ ಹೇಳಿದರೂ ಅವನು ಅಲ್ಲಿಂದ ಕದಲಿಲ್ಲ.

“ನನ್ನ ಹಣ ಹಾಗೂ ಸಮಯವನ್ನು ಹಾಳುಮಾಡಿಕೊಂಡೆ. ಸುಲ್ತಾನ ಮಹಮದ್‌ ನೀಡಿದ ಪರೀಕ್ಷೆಗಳಲ್ಲಿ ನನ್ನ ಮಗ ಉತ್ತೀರ್ಣನಾಗಲಿಲ್ಲ,” ಎಂಬುದಾಗಿ ಇಸ್ಕಂದರ್‌ ಖಾನ್‌ ತನ್ನ ಕುಟುಂಬದವರೊಂದಿಗೂ ಮಿತ್ರರೊಂದಿಗೂ ಹೇಳಿಕೊಂಡು ಗೋಳಾಡಿದ. ಹೈದರ್‌ ಆಲಿಯ ಒಳಿತಿಗಾಗಿ ತಾನು ಹಾಕಿಕೊಂಡಿದ್ದ ಮಹಾನ್ ಯೋಜನೆಗಳನ್ನು ಕೈಬಿಟ್ಟು ಅವನನ್ನು ಅವನ ಗುರುವಿನ ಹತ್ತಿರ ಇರಲು ಬಿಟ್ಟುಬಿಡಲು ತೀರ್ಮಾನಿಸಿದ.

ಹೈದರ್‌ ಆಲಿ ತನ್ನ ಆಸ್ಥಾನದಲ್ಲಿ ಹಾಜರಾಗಬೇಕಾದ ದಿನ ಕಳೆದ ನಂತರ ಸುಲ್ತಾನ ತನ್ನ ಆಸ್ಥಾನಿಕರಿಗೆ ಹೇಳಿದ, “ಹೆರಾಟ್‌ಗೆ ಪ್ರಯಾಣ ಮಾಡಲು ಸಿದ್ಧರಾಗಿ. ಆ ನಗರದಲ್ಲಿ ನಾನು ಭೇಟಿ ಮಾಡಲೇ ಬೇಕಾದವರೊಬ್ಬರು ಇದ್ದಾರೆ.”

ಡೋಲು ಕಹಳೆಗಳ ವಾದ್ಯಗೋಷ್ಟಿಯೊಂದಿಗೆ ಸುಲ್ತಾನ ಮಹಮದ್‌ನ ಪರಿವಾರ ಹೆರಾಟ್‌ ನಗರವನ್ನು ಪ್ರವೇಶಿಸಿದಾಗ ಹೈದರ್‌ ಆಲಿ ಮತ್ತು ಅವನ ಗುರು ಸಮೀಪದಲ್ಲಿಯೇ ಇದ್ದ ಉದ್ಯಾನವನದಲ್ಲಿನ ಆಶ್ರಯತಾಣದಲ್ಲಿ ಕುಳಿತಿದ್ದರು. ಸುಲ್ತಾನ ಮಹಮದ್‌ ಮತ್ತು ಆಸ್ಥಾನಿಕ ಅಯಾಝ್‌ ತಮ್ಮ ಪಾದರಕ್ಷೆಗಳನ್ನು ಗೌರವಸೂಚಕವಾಗಿ ಕಳಚಿ ಇಟ್ಟು ಆಶ್ರಯತಾಣಕ್ಕೆ ಬಂದರು.

“ಸುಲ್ತಾನ ಮಹಮದ್‌ ಅವರಿಗೆ ಸುಸ್ವಾಗತ,” ಎಂಬುದಾಗಿ ಸ್ವಾತಿಸಿದ ಸೂಫಿ ಗುರುಗಳು ಹೈದರ್‌ ಆಲಿಯನ್ನು ತೋರಿಸುತ್ತಾ ಹೇಳಿದರು, “ನಿಮ್ಮ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ಏನೂ ಆಗಿರದಿದ್ದ ವ್ಯಕ್ತಿಯೇ ಈತ. ಆದರೀಗ ಆತ ರಾಜನೇ ಭೇಟಿ ಮಾಡಲು ಬರುವಷ್ಟರ ಮಟ್ಟಿಗೆ ಯೋಗ್ಯನಾಗಿದ್ದಾನೆ. ಅವನನ್ನು ನೀವು ಸೂಫಿ ಸಮಾಲೋಚಕನಾಗಿ ಇಟ್ಟುಕೊಳ್ಳಬಹುದು, ಏಕೆಂದರೆ ಅವನೀಗ ಅದಕ್ಕೆ ಸಿದ್ಧನಾಗಿದ್ದಾನೆ!”

*****

೧೦. ದೇವರತ್ತ ಹೋಗುವ ದಾರಿ ಒಳಮುಖವಾಗಿದೆ

ಒಬ್ಬ ಹಸುವೊಂದನ್ನು ಖರೀದಿಸಿದ. ಅವನಿಗೆ ಹಸುಗಳನ್ನು ನಿಭಾಯಿಸುವುದು ಹೇಗೆಂಬುದು ತಿಳಿದಿರಲಿಲ್ಲ. ಹಸುವಿನ ಕೊಂಬುಗಳನ್ನು ಹಿಡಿದು ಅದನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿದ್ದ. ಹಸು ಪ್ರತಿಭಟಿಸುತ್ತಿತ್ತು. ಈ ಕಸುಬಿಗೆ ಅವನು ಹೊಸಬ ಎಂಬುದು ಸುಸ್ಪಷ್ಟವಾಗಿ ಗೋಚರಿಸುತ್ತಿತ್ತು. ತನ್ನ ಹಿಂದಿನ ಮಾಲಿಕನ ಹತ್ತಿರ, ಅರ್ಥಾತ್ ತನ್ನ ಮನೆಗೆ ಹೋಗಲು ಹಸು ಪ್ರಯತ್ನಿಸುತ್ತಿತ್ತು.

ಇದನ್ನು ವೀಕ್ಷಿಸುತ್ತಿದ್ದ ಸೂಫಿ ಮುಮುಕ್ಷುವೊಬ್ಬ ಹೇಳಿದ, “ನೀನು ಈ ಕಸುಬಿಗೆ ಹೊಸಬನಿರಬೇಕು. ಹಸುಗಳನ್ನು ನಿಭಾಯಿಸುವುದು ಹೇಗೆಂಬುದು ನಿನಗೆ ತಿಳಿದಿಲ್ಲ. ನೀನು ಸರಿಯಾದ ವಿಧಾನ ಅನುಸರಿಸುತ್ತಿಲ್ಲ.”

ಆ ಮನುಷ್ಯ ಉತ್ತರಿಸಿದ, “ನಾನೇನು ಮಾಡಲಿ, ನಾನು ಅಷ್ಟು ಬಲಿಷ್ಠನಲ್ಲ. ಹಸು ನನಗಿಂತ ಬಲಿಷ್ಠವಾಗಿದೆ, ಅದು ನನ್ನನ್ನು ತನ್ನೊಂದಿಗೆ ಎಳೆದೊಯ್ಯುತ್ತಿದೆ.”

ಸೂಫಿ ಮುಮುಕ್ಷು ಅವನಿಗೆ ತುಸು ತಾಜಾ ಹಸಿರು ಹುಲ್ಲನ್ನು ಕೊಟ್ಟು ಹೇಳಿದ, “ಕೊಂಬುಗಳನ್ನು ಬಿಡು. ಈ ಹುಲ್ಲನ್ನು ಅದಕ್ಕೆ ತೋರಿಸು. ಅದು ಹುಲ್ಲನ್ನು ತಿನ್ನಲು ಬಂದಾಗ ನೀನು ನಿನ್ನ ಮನೆಯತ್ತ ತುಸು ಜರುಗು. ಅದು ಹುಲ್ಲನ್ನು ತಿನ್ನಲೋಸುಗ ನಿನ್ನತ್ತ ಪುನಃ ಬರುತ್ತದೆ. ಆಗ ನೀನು ಪುನಃ ನಿನ್ನ ಮನೆಯತ್ತ ತುಸು ಜರುಗು. ಈ ರೀತಿಯಲ್ಲಿ ಅದಕ್ಕೆ ಹುಲ್ಲನ್ನು ತೋರಿಸುತ್ತಾ ನಿನ್ನ ಮನೆಯತ್ತ  ನೀನು ನಡೆ. ಹುಲ್ಲನ್ನು ತಿನ್ನುವ ಅವಕಾಶ ಮಾತ್ರ ನೀಡಬೇಡ. ಅದು ಹುಲ್ಲಿನ ಆಸೆಯಿಂದ ನಿನ್ನನ್ನು ಹಿಂಬಾಲಿಸಿ ನಿನ್ನ ಮನೆಗೆ ಬರುತ್ತದೆ.”

ಈ ತಂತ್ರ ಯಶಸ್ವಿಯಾಯಿತು. ಒಂದೆರಡು ಹೆಜ್ಜೆ ಮುಂದಿಟ್ಟರೆ ಎಟುಕುವಷ್ಟು ದೂರದಲ್ಲಿ ತಾಜಾ ಹಸಿರು ಹುಲ್ಲು ಸದಾ ಗೋಚರಿಸುತ್ತಿದ್ದದ್ದರಿಂದ ಆ ಹಸು ತನ್ನ ಹಿಂದಿನ ಮನೆಯನ್ನೂ ಮಾಲಿಕನನ್ನೂ ಮರೆತು ಹುಲ್ಲನ್ನು ಹಿಡಿದುಕೊಂಡಿದ್ದವನನ್ನು ಹಿಂಬಾಲಿಸಿ ಹೊಸ ಮಾಲಿಕನ ಮನೆಯ ಕೊಟ್ಟಿಗೆಯೊಳಕ್ಕೆ ಹೋಗಿ ಅಲ್ಲಿ ಬಂಧಿಸಲ್ಪಟ್ಟಿತು.

*****

೧೧. ಗುರಿಯೇ ಇಲ್ಲ

ಫಕೀರರ ಗುಂಪೊಂದು ತಮ್ಮ ಗುರುಗಳ ಆಜ್ಞಾನುಸಾರ ಮಾಂಸ ತಿನ್ನುತ್ತಿರಲಿಲ್ಲ, ಧೂಮಪಾನ ಮಾಡುತ್ತಿರಲಿಲ್ಲ. ಇದನ್ನು ತಿಳಿದ ವ್ಯಕ್ತಿಯೊಬ್ಬ ಆ ಜ್ಞಾನಿಗಳ ಪಾದಗಳ ಬಳಿ ಕುಳಿತುಕೊಳ್ಳಲೋಸುಗ ಆ ಜ್ಞಾನಿಗಳು ಅವರು ಒಟ್ಟಾಗಿ ಸೇರುವ ತಾಣಕ್ಕೆ ಹೋದ. ಅಲ್ಲಿದ್ದವರೆಲ್ಲರೂ ೯೦ ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದರು. ಅಲ್ಲಿ ತಂಬಾಕಿನ ಸುಳಿವೂ ಇರಲಿಲ್ಲ, ಮಾಂಸದ ಸುಳಿವೂ ಇರಲಿಲ್ಲ. ಹೋದಾತನಿಗೆ ಬಲು ಆನಂದವಾಯಿತು. ಅವರು ನೀಡಿದ ಹುರುಳಿ-ಮೊಸರಿನ ಸೂಪ್‌ನ ರುಚಿ ಆಸ್ವಾದಿಸುತ್ತಾ ಮಾಲಿನ್ಯರಹಿತ ವಾಯು ಸೇವನೆ ಮಾಡುತ್ತಾ ಅಲ್ಲಿ ಕುಳಿತ. ಕನಿಷ್ಠಪಕ್ಷ ೧೦೦ ವರ್ಷವಾದರೂ ಅವರು ಬದುಕಿರಬೇಕೆಂಬುದು ಅವನ ಆಶಯವಾಗಿತ್ತು.

ಇದ್ದಕ್ಕಿದ್ದಂತೆಯೇ ಅಲ್ಲಿದ್ದವರ ಪೈಕಿ ಒಬ್ಬ ಫಕೀರ ಪಿಸುಗುಟ್ಟಿದ, “ಅದೋ, ನಮ್ಮ ಮಹಾನ್ ಗುರುಗಳು ಬರುತ್ತಿದ್ದಾರೆ.” ಆ ಪೂಜ್ಯ ಸಂತ ಒಳ ಬಂದಾಗ ಎಲ್ಲರೂ ಎದ್ದು ನಿಂತರು. ಆತ ಒಳಬಂದವನೇ ಅನುಗ್ರಹ ಸೂಚಕವಾಗಿ ಮುಗುಳ್ನಗೆ ಬೀರಿ ತನ್ನ ಕೊಠಡಿಯತ್ತ ಹೋದ. ೫೦ ವರ್ಷಕ್ಕಿಂತ ಒಂದು ದಿನದಷ್ಟೂ ಹೆಚ್ಚು ವಯಸ್ಸು ಆದವನಂತೆ ಅವನು ಗೋಚರಿಸುತ್ತಿರಲಿಲ್ಲ.

ಅಲ್ಲಿಗೆ ಬಂದಿದ್ದಾತ ಕೇಳಿದ, “ಅವರಿಗೆಷ್ಟು ವಯಸ್ಸು? ಅವರೇನು ತಿನ್ನುತ್ತಾರೆ?”

ಅಲ್ಲಿದ್ದ ಹಿರಿಯರ ಪೈಕಿ ಒಬ್ಬ ಉಸುರಿದ, “ಅವರಿಗೆ ೧೫೦ ವರ್ಷ ವಯಸ್ಸಾಗಿದೆ. ಬಹುಶಃ ನಾವು ಯಾರೂ ಆವರ ವಯಸ್ಸನ್ನೇ ಆಗಲಿ ಅವರು ಇರುವ ಸ್ಥಾನವನ್ನೇ ಆಗಲಿ ತಲುಪುವುದಿಲ್ಲ. ಅಂದ ಹಾಗೆ ಕೆಟ್ಟ ಚಪಲಗಳಿಂದಲೇ ಆಗಲಿ, ಹುಡುಗಾಟಿಕೆಯ ವಸ್ತುಗಳಿಂದಲೇ ಆಗಲಿ ಪ್ರಭಾವಿತರಾಗುವ ವಯಸ್ಸು ಅವರದಲ್ಲವಾದ್ದರಿಂದ ದಿನಕ್ಕೆ ೨೦ ಸಿಗಾರ್‌ಗಳನ್ನೂ ಹುರಿದ ಮಾಂಸದ ೩ ತುಂಡುಗಳನ್ನೂ ತೆಗೆದುಕೊಳ್ಳುತ್ತಾರೆ!”

*****

೧೨. ತಲೆಬುರುಡೆಗಳ ರಾಶಿ

ಸೂಫಿ ಸಂತ ಬಯಾಝಿದ್ ಒಂದು ದಿನ ಸ್ಮಶಾನದ ಮೂಲಕ ಹೋಗುತ್ತಿದ್ದಾಗ ತಲೆಬುರುಡೆಗಳ ಒಂದು ರಾಶಿಯನ್ನು ಕಂಡ. ಕುತೂಹಲದಿಂದ ಅವನು ಒಂದು ತಲೆಬುರುಡೆಯನ್ನು ‌ಕೈನಲ್ಲಿ ಎತ್ತಿ ಹಿಡಿದು ವೀಕ್ಷಿಸಿದ. ಎಲ್ಲ ತಲೆಬುರುಡೆಗಳೂ ಹೆಚ್ಚುಕಮ್ಮಿ ಒಂದೇ ತೆರನಾಗಿರುತ್ತದೆಂಬುದಾಗಿ ತಿಳಿದಿದ್ದ ಅವನಿಗೆ ಅವು ಒಂದೇ ತೆರನಾಗಿ ಇಲ್ಲದಿರುವುದನ್ನು ಕಂಡು ಅಚ್ಚರಿಯಾಯಿತು. ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳ ನಡುವೆ ಸಂಪರ್ಕ ಕಲ್ಪಿಸುವ ಹಾದಿಯೊಂದಿತ್ತು, ಕೆಲವು ತಲೆಬುರುಡೆಗಳಲ್ಲಿ ಎರಡು ಕಿವಿಗಳ ನಡುವೆ ಸಂಪರ್ಕ ಏರ್ಪಡುವುದಕ್ಕೆ ಅಡ್ಡಿ ಉಂಟು ಮಾಡುವ ತಡೆ ಇತ್ತು. ಕೆಲವು ತಲೆಬುರುಡೆಗಳಲ್ಲಿ ಪ್ರತೀ ಕಿವಿಗೂ ಹೃದಯಕ್ಕೂ ನಡುವೆ ಸಂಪರ್ಕವೇರ್ಪಟ್ಟಿತ್ತೇ ವಿನಾ ಅವುಗಳ ನಡುವೆ ನೇರ ಸಂಪರ್ಕವಿರಲಿಲ್ಲ.

ಅಶ್ಚರ್ಯಚಕಿತನಾದ ಆತ ದೇವರನ್ನು ಪ್ರಾರ್ಥಿಸಿದ, “ಓ ದೇವರೇ ಇದೇನು ವಿಷಯ? ನನಗೆ ಏನನ್ನು ತಿಳಿಯಪಡಿಸಲು ಪ್ರಯತ್ನಿಸುತ್ತಿರುವೆ?”

ಆಗ ದೇವರು ಹೇಳಿದರು, “ಜಗತ್ತಿನಲ್ಲಿ ಮೂರು ವರ್ಗಗಳ ಜನರಿರುತ್ತಾರೆ. ಒಂದು ಕಿವಿಯಿಂದ ಕೇಳಿದ್ದನ್ನು ಇನ್ನೊಂದು ಕಿವಿಯಿಂದ ಹೊರಹಾಕುವವರು ಮೊದಲನೆಯ ವರ್ಗದವರು. ಇವರು ಕೇಳಿಸಿಕೊಂಡದ್ದು ಕ್ಷಣಕಾಲ ಮಾತ್ರ ಅವರೊಂದಿಗೆ ಇರುತ್ತದೆ, ತದನಂತರ ಅವರೊಳಗೆ ನಿಲ್ಲದೇ ಹೊರಹೋಗುತ್ತದೆ. ಒಂದೇ ಕಿವಿಯಿಂದ ಕೇಳುವವರು ಎರಡನೇ ವರ್ಗದವರು. ಅವರ ಒಂದು ಕಿವಿಯ ಒಳಹೊಕ್ಕದ್ದು ಎಲ್ಲಿಗೂ ಹೋಗುವುದಿಲ್ಲ. ಅರ್ಥಾತ್, ಅವರು ಕೇಳಿಸಿಕೊಂಡಿರುವುದೇ ಇಲ್ಲ, ಏನೋ ಶಬ್ದವಾಯಿತು ಎಂಬುದಾಗಿ ಭಾವಿಸುತ್ತಾರೆ. ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಎರಡೂ ಕಿವಿಗಳ ಮೂಲಕ ಒಳ ಹೊಕ್ಕದ್ದು ಹೃದಯವನ್ನು ಮುಟ್ಟುತ್ತದೆ. ದೇವರು ಮುಂದುವರಿದು ಹೇಳಿದರು, “ಬಯಾಝಿದ್‌ ನೀನು ಇತರರೊಂದಿಗೆ ಮಾತನಾಡುವಾಗ ನೆನಪಿನಲ್ಲಿ ಇಟ್ಟಿರಲೇಬೇಕಾದ ಅಂಶವನ್ನು ತಿಳಿಯಪಡಿಸಲೋಸುಗ ನಾನು ನಿನ್ನನ್ನು ಈ ತಲೆಬುರುಡೆಗಳ ರಾಶಿಯ ಬಳಿಗೆ ಕರೆತಂದಿದ್ದೇನೆ. ನೀನು ಹೇಳಿದ್ದನ್ನು ಯಾರು ಹೃದ್ಗತ ಮಾಡಿಕೊಳ್ಳುತ್ತಾರೋ ಅಂಥವರೊಂದಿಗೆ ಮಾತ್ರ ಮಾತನಾಡು. ಮಿಕ್ಕುಳಿದವರೊಂದಿಗೆ ಮಾತನಾಡುತ್ತಾ ನಿನ್ನ ಸಮಯವನ್ನೂ ಶಕ್ತಿಯನ್ನೂ ವೃಥಾ ವ್ಯಯಿಸಬೇಡ. ಏಕೆಂದರೆ ನಿನ್ನ ಜೀವನ ಅತ್ಯಮೂಲ್ಯವಾದದ್ದು. ನೀನು ಹೇಳಬೇಕಾದದ್ದೂ ಅತ್ಯಮೂಲ್ಯವಾದದ್ದು.”

*****

೧೩. ಭೋಜನ ಕೂಟ

ಹರಕು ಬಟ್ಟೆ ಧರಿಸಿದ್ದ ಬಡವನೊಬ್ಬ ಅರಮನೆಯ ಭೋಜನಕೂಟಕ್ಕೆ ಬಂದ. ಸಭ್ಯತೆಯನ್ನು ಉಲ್ಲಂಘಿಸಬಾರದೆಂಬ ಕಾರಣಕ್ಕಾಗಿ ಅವನನ್ನು ಒಳಹೋಗಲು ಬಿಟ್ಟರೂ ಊಟದ ಮೇಜಿನ ಕೊನೆಯಲ್ಲಿ ಅವನನ್ನು ಕೂರಿಸಿದರು. ಊಟಕ್ಕೆ ಬಡಿಸುವ ಪರಾತಗಳು ಅವನಿರುವಲ್ಲಿಗೆ ತಲಪುವ ವೇಳೆಗೆ ಹೆಚ್ಚುಕಮ್ಮಿ ಖಾಲಿ ಆಗಿರುತ್ತಿದ್ದವು. ಆದ್ದರಿಂದ ಆತ ಅಲ್ಲಿಂದ ಹೊರಟು ಹೋದ. ಒಬ್ಬ ಶ್ರೀಮಂತ ಮಿತ್ರನಿಂದ ಬೆಲೆಬಾಳುವ ನಿಲುವಂಗಿಯನ್ನೂ ಆಭರಣಗಳನ್ನೂ ಎರವಲು ಪಡೆದು ಧರಿಸಿಕೊಂಡು ಸ್ವಲ್ಪ ಸಮಯದ ನಂತರ ಭೋಜನಕೂಟದ ತಾಣಕ್ಕೆ ಪುನಃ ಬಂದ. ಈ ಸಲ ಅವನನ್ನು ತಕ್ಷಣವೇ ಬಲು ಗೌರವದಿಂದ ಊಟದ ಮೇಜಿನಲ್ಲಿ ಮೊಟ್ಟಮೊದಲನೆಯ ಆಸನದ ಸಮೀಪದಲ್ಲಿ ಕೂರಿಸಿ ಅವನಿದ್ದಲ್ಲಿಗೇ ಮೊದಲು ಊಟಕ್ಕೆ ಬಡಿಸುವ ಪರಾತಗಳನ್ನು ತರಲಾರಂಭಿಸಿದರು.

“ಓ, ಎಷ್ಟು ರುಚಿಯಾದ ತಿನಿಸುಗಳು ನನ್ನ ತಟ್ಟೆಯಲ್ಲಿವೆ,” ಎಂದು ಉದ್ಗರಿಸಿ, ‘ತಾನು ಒಂದು ಚಮಚೆ ಆಹಾರವನ್ನು ತನ್ನ ಉಡುಪಿಗೆ ಹಾಕುವುದು ನಂತರದ ಚಮಚೆಯ ಆಹಾರವನ್ನು ತಿನ್ನುವುದು’ ಮಾಡತೊಡಗಿದ. ಆತನ ಪಕ್ಕದಲ್ಲಿ ಕುಳಿತಿದ್ದ ಕುಲೀನನೊಬ್ಬ ಈ ಕೊಳಕು ವರ್ತನೆಯನ್ನು ನೋಡಿ ಮುಖ ಸಿಂಡರಿಸಿ ಕೇಳಿದ, “ಮಹಾಶಯ, ನಿಮ್ಮ ಇಷ್ಟು ಒಳ್ಳೆಯ ಉಡುಪಿಗೆ ಆಹಾರವನ್ನು ಏಕೆ ಮೆತ್ತುತ್ತಿದ್ದೀರಿ?”

ಆತ ಲೊಚಗುಟ್ಟುತ್ತಾ ಉತ್ತರಿಸಿದ, “ಈಗ ನನ್ನ ಉಡುಪು ಗಲೀಜಾಗಿ ನಿಮಗೆ ಕಾಣುತ್ತಿರುವುದಕ್ಕೆ ಕ್ಷಮಿಸಿ. ಈ ಉಡುಪಿನಿಂದಾಗಿ ನನಗೆ ಇಷ್ಟು ಒಳ್ಳೆಯ ತಿನಿಸುಗಳು ಸಿಕ್ಕಿವೆ. ಎಂದೇ, ಅದಕ್ಕೆ ಮೊದಲು ತಿನ್ನಿಸಬೇಕಾದದ್ದು ನ್ಯಾಯೋಚಿತವಲ್ಲವೇ?”

*****

೧೪. ನಾವು ಈ ಮೊದಲೇ ದೇವರು ಆಗಿದ್ದೇವೆ.

ಖ್ಯಾತ ಸೂಫಿ ಮುಮುಕ್ಷು ರಬಿಯಾ ಎಂದಿನಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಮಾರುಕಟ್ಟೆಗೆ ಪ್ರತೀದಿನ ಅವಳು ಹೋಗುತ್ತಿದ್ದ ರಸ್ತೆ ಅದು. ಪ್ರತೀದಿನ ಮಾರುಕಟ್ಟೆಗೆ ಹೋಗಿ ತಾನು ಕಂಡುಕೊಂಡ ಸತ್ಯವನ್ನು ಎಲ್ಲರಿಗೂ ಕೇಳುವಂತೆ ಬೊಬ್ಬೆಹೊಡೆಯುವುದು ಅವಳ ದೈನಂದಿನ ಕಾಯಕಗಳಲ್ಲಿ ಒಂದಾಗಿತ್ತು. ರಸ್ತೆಯಲ್ಲಿ ಹೋಗುವಾಗ ಸುಪರಿಚಿತ ಮುಮುಕ್ಷು ಹಸನ್‌ ಮಸೀದಿಯ ಬಾಗಿಲ ಎದುರು ಕುಳಿತು, “ಓ ದೇವರೇ, ಬಾಗಿಲು ತೆರೆ! ದಯವಿಟ್ಟು ಬಾಗಿಲು ತೆರೆ! ನನ್ನನ್ನು ಒಳಕ್ಕೆ ಬಿಡು!” ಎಂಬುದಾಗಿ ಪ್ರತೀದಿನ ಪ್ರಾರ್ಥಿಸುತ್ತಿರುವುದನ್ನು ಬಹುದಿನಗಳಿಂದ ನೋಡುತ್ತಿದ್ದಳು. ಅನೇಕ ಸಲ ಹಸನ್‌ ಅಳುತ್ತಿದ್ದ, ಅವನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಅವನು ಪುನಃ ಪುನಃ ಬೊಬ್ಬೆ ಹೊಡೆಯುತ್ತಿದ್ದ, “ಬಾಗಿಲು ತೆರೆ! ನನ್ನನ್ನು ಒಳಕ್ಕೆ ಬಿಡು! ನೀನೇಕೆ ನಾನು ಹೇಳುವುದನ್ನು ಕೇಳಿಸಿಕೊಳ್ಳುತ್ತಿಲ್ಲ? ನೀನೇಕೆ ನನ್ನ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಿಲ್ಲ?” ಪ್ರತೀ ದಿನ ಹಸನ್‌ ಹೇಳುವುದನ್ನು ಕೇಳಿ ಅವಳು ನಗುತ್ತಿದ್ದಳು. ಆದರೆ ಒಂದು ದಿನ ರಬಿಯಾಳಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವನ ಹತ್ತಿರ ಹೋಗಿ ಅವನನ್ನು ಹಿಡಿದು ಅಲುಗಾಡಿಸಿ ಹೇಳಿದಳು, “ಈ ಅವಿವೇಕದ ಮಾತು ನಿಲ್ಲಿಸು! ಬಾಗಿಲು ತೆರೆದಿದೆ – ವಾಸ್ತವವಾಗಿ ನೀನು ಈಗಾಗಲೇ ಒಳಗಿರುವೆ!”

ಹಸನ್‌ ರಬಿಯಾಳನ್ನು ನೋಡಿದ. ಆ ಕ್ಷಣವೇ ಅವನಿಗೆ ಸತ್ಯದ ಸಾಕಾತ್ಕಾರದ ಕ್ಷಣವಾಯಿತು. ರಬಿಯಾಳ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಅವನು ಶಿರಬಾಗಿ ವಂದಿಸಿದ, ಅವಳ ಪಾದಗಳನ್ನು ಸ್ಪರ್ಷಿಸಿ ವಂದಿಸಿದ. ತದನಂತರ ಹೇಳಿದ, “ಸರಿಯಾದ ಸಮಯದಲ್ಲಿ ನೀನು ಬಂದೆ. ಇಲ್ಲವಾಗಿದ್ದಲ್ಲಿ ನಾನು ನನ್ನ ಜೀವಿತಾವಧಿಯನ್ನೆಲ್ಲಾ ದೇವರನ್ನು ಕರೆಯುವುದರಲ್ಲಿಯೇ ಕಳೆಯುತ್ತಿದ್ದೆ. ಎಷ್ಟೋ ವರ್ಷಗಳಿಂದ ನಾನು ಇಂತು ಮಾಡುತ್ತಿದ್ದೇನೆ. ಈ ಮೊದಲು ನೀನು ಎಲ್ಲಿ ಹೋಗಿದ್ದೆ? ಈ ಬೀದಿಯಲ್ಲಿ ನೀನು ಪ್ರತೀದಿನ ಹೋಗುತ್ತಿರುವ ವಿಷಯ ನನಗೆ ತಿಳಿದಿದೆ. ನಾನು ಅಳುತ್ತಿರುವುದನ್ನೂ ಪ್ರಾರ್ಥಿಸುತ್ತಿರುವುದನ್ನೂ ನೀನು ನೋಡಿರಲೇ ಬೇಕು.”

ಆಗ ರಬಿಯಾ ಹೇಳಿದಳು, “ಅದು ನಿಜ. ಆದರೆ ಸತ್ಯವನ್ನು ನಿರ್ದಿಷ್ಟ ಕ್ಷಣದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಂದರ್ಭದಲ್ಲಿಯೇ ಹೇಳಬೇಕು. ನಾನು ಆ ಸರಿಯಾದ ಕ್ಷಣಕ್ಕೆ ಕಾಯುತ್ತಿದ್ದೆ. ಆ ಕ್ಷಣ ಇಂದು ಬಂದೊದಗಿತು. ಎಂದೇ, ನಾನು ನಿನ್ನ ಸಮೀಪಕ್ಕೆ ಬಂದೆ. ನಾನೇನಾದರೂ ನಿನ್ನೆ ಹೇಳಿದ್ದಿದ್ದರೆ ಅದು ನಿನ್ನನ್ನು ಸಿಟ್ಟಗೆಬ್ಬಿಸುತ್ತಿತ್ತು, ನಿನಗೆ ಕೋಪ ಬರುತ್ತಿತ್ತು, ನೀನು ನನಗೆ ವಿರುದ್ಧವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯೂ ಇತ್ತು. ‘ನೀನು ನನ್ನ ಪ್ರಾರ್ಥನೆಗೆ ವಿಘ್ನವುಂಟು ಮಾಡಿರುವೆ, ಯಾರದೇ ಪ್ರಾರ್ಥನೆಗೆ ಅಡ್ಡಿಯುಂಟು ಮಾಡುವುದು ಸರಿಯಲ್ಲ,’ ಎಂಬುದಾಗಿ ನನಗೇ ನೀನು ಹೇಳುವ ಸಾಧ್ಯತೆಯೂ ಇತ್ತು. ನಿನಗೆ ತಿಳಿದಿರುವಂತೆ ಒಬ್ಬ ಭಿಕ್ಷುಕನ ಪ್ರಾರ್ಥನೆಗೆ ರಾಜನೂ ಅಡ್ಡಿಯುಂಟುಮಾಡಕೂಡದು. ಮುಸ್ಲಿಮ್‌ ರಾಷ್ಟ್ರಗಳಲ್ಲಿ ಅಪರಾಧಿಯನ್ನು, ಆತ ಕೊಲೆಗಡುಕನೇ ಆಗಿದ್ದರೂ, ಪ್ರಾರ್ಥನೆ ಮಾಡುತ್ತಿರುವಾಗ ದಸ್ತಗಿರಿ ಮಾಡುವುದಿಲ್ಲ. ಎಂದೇ, ನಾನು ನಿನಗೆ, ‘ಹಸನ್‌ ಮೂರ್ಖನಂತಾಡಬೇಡ, ಬಾಗಿಲು ತೆರೆದಿದೆ. ವಾಸ್ತವವಾಗಿ ನೀನು ಈಗಾಗಲೇ ಒಳಗಿರುವೆ’ ಎಂದು ಹೇಳಲು ಯುಕ್ತ ಕ್ಷಣ ಬರಲಿ ಎಂದು ಕಾಯುತ್ತಿದ್ದೆ.”

*****

೧೫. ನಂಬಿಕೆ ತಂದ ಸಂಕಷ್ಟ

ಒಬ್ಬಳು ತನ್ನ ಗೆಳತಿಗೆ ಹೇಳಿದಳು, “ಪಾಪ, ಮೈಸೈ ತಾನು ಯಾವುದನ್ನು ನಂಬಿದ್ದಳೋ ಅದರಿಂದಾಗಿ ತುಂಬ ಸಂಕಟಪಡಬೇಕಾಯಿತು”

ಗೆಳತಿ ಕೇಳಿದಳು, “ಅವಳು ಏನನ್ನು ನಂಬಿದ್ದಳು?”

“ಒಂಭತ್ತು ಗಾತ್ರದ ಪಾದಗಳಿರುವವರು ಆರು ಗಾತ್ರದ ಪಾದರಕ್ಷೆಗಳನ್ನು ಧರಿಸಬಹುದು!”

*****

೧೬. ನಾಯಿಗೆ ತಿಳಿದಿದೆಯೇ?

ನನ್ನ ಮಿತ್ರನೊಬ್ಬ ಒಂದು ದೇಶದ ಅಧ್ಯಕ್ಷರನ್ನು ಬೇಟಿ ಮಾಡಲು ಹೋಗಿದ್ದ.  ಆದ್ಯಕ್ಷರ ನಿವಾಸದ ಆವರಣದಲ್ಲಿ ಅವರು ಮಾತನಾಡುತ್ತಾ ಸುತ್ತಾಡುತ್ತಿದ್ದಾಗ ನೋಡಲು ಭಯಂಕರವಾಗಿದ್ದ ದೊಡ್ಡ ನಾಯಿಯೊಂದು ಅಲ್ಲಿಯೇ ಇದ್ದ ಒಬ್ಬ ಹಿಂದೂ ಗುರುವಿನ ಕೌಪೀನವನ್ನು ಕಚ್ಚಿ ಹರಿದದ್ದಲ್ಲದೆ ಜೋರಾಗಿ ಬೊಗಳುತ್ತಾ ಅವನನ್ನು ಒಂದು ಗೋಡೆಯ ಸಮೀಪಕ್ಕೆ ಅಟ್ಟಿಕೊಂಡು ಹೋಯಿತು. ಹುಲಿಗಳನ್ನು ತನ್ನ ನೋಟದಿಂದಲೇ ಪಳಗಿಸುವ ಸಾಮರ್ಥ್ಯ ಉಳ್ಳವನು ಎಂಬುದಾಗಿ ಖ್ಯಾತನಾಗಿದ್ದ ಆ ಗುರುವಿಗೆ ನಾಯಿಗಳನ್ನು ಆ ರೀತಿ ಪಳಗಿಸುವ ಸಾಮರ್ಥ್ಯವಿರಲಿಲ್ಲವಾದ್ದರಿಂದ ಏನಾದರೂ ಮಾಡುವಂತೆ ನನ್ನ ಸ್ನೇಹಿತನಿಗೆ ವಿನಂತಿಸಿಕೊಂಡನು.

ನನ್ನ ಸ್ನೇಹಿತ ಹೇಳಿದ, “ಬೊಗಳುವ ನಾಯಿ ಕಚ್ಚುವುದಿಲ್ಲ.”

ಗುರು ಉದ್ಗರಿಸಿದ, “ಅದು ನನಗೂ ಗೊತ್ತಿದೆ ನಿನಗೂ ಗೊತ್ತಿದೆ. ಆದರೆ, ನಾಯಿಗೆ ಗೊತ್ತಿದೆಯೇ?”

*****

೧೭. ಶತ್ರುವನ್ನು ಮೂರ್ಖರನ್ನಾಗಿಸುವುದು.

ನೂತನ ಪ್ರವೇಶಿ ಸೈನಿಕನೊಬ್ಬನನ್ನು ತರಬೇತುದಾರ ಕೇಳಿದ, “ಶತ್ರುವನ್ನು ಮೂರ್ಖರನ್ನಾಗಿಸುವುದು ಹೇಗೆಂಬುದಕ್ಕೆ ಒಂದು ಉದಾಹರಣೆ ಕೊಡು.”

ನೂತನ ಪ್ರವೇಶಿ ಉತ್ತರಿಸಿದ, “ನಿಮ್ಮ ಹತ್ತಿರ ಇದ್ದ ಮದ್ದುಗುಂಡಿನ ದಾಸ್ತಾನು ಮುಗಿದು ಹೋದರೆ ಅದು ಶತ್ರುಗಳಿಗೆ ತಿಳಿಯದಂತೆ ನೋಡಿಕೊಳ್ಳಿ — ಅದಕ್ಕೋಸ್ಕರ ಗುಂಡು ಹಾರಿಸುತ್ತಲೇ ಇರಿ.”

*****

೧೮. ಯಾರು ಮೂರ್ಖರು?

ಅಷ್ಟೇನೂ ತೀಕ್ಷಮತಿಗಳಲ್ಲದ ಇಬ್ಬರು ದೋಣಿಯೊಂದನ್ನು ಬಾಡಿಗೆಗೆ ಪಡೆದು ಮೀನು ಹಿಡಿಯಲು ಹೋದರು. ತುಂಬ ಚೆನ್ನಾಗಿರುವ ಮೀನುಗಳನ್ನೂ ಹಿಡಿದರು. ಮನೆಗೆ ಹಿಂದಿರುಗುತ್ತಿರುವಾಗ ಒಬ್ಬ ಇನ್ನೊಬ್ಬನನ್ನು ಕೇಳಿದ, “ಮೀನು ಹಿಡಿಯುವ ಆ ಅದ್ಭುತ ತಾಣಕ್ಕೆ ನಾವು ಪುನಃ ಹೋಗುವುದು ಹೇಗೆ?” ಇನ್ನೊಬ್ಬ ಉತ್ತರಿಸಿದ, “ಆ ಕುರಿತು ನಾನಾಗಲೇ ಆಲೋಚಿಸಿದ್ದೆ. ಸೀಮೆಸುಣ್ಣದಿಂದ ನಾನು ದೋಣಿಯ ಮೇಲೆ ಒಂದು ಗುರುತು ಮಾಡಿದ್ದೇನೆ.” ಮೊದಲನೆಯವ ಅಬ್ಬರಿಸಿದ, “ನೀನೊಬ್ಬ ಮುಠ್ಠಾಳ!. ಅದರಿಂದೇನೂ ಪ್ರಯೋಜನವಿಲ್ಲ. ಮುಂದಿನ ಸಲ ಅವರು ನಮಗೆ ಬೇರೆ ದೋಣಿಯನ್ನು ಕೊಟ್ಟರೆ?”

*****

೧೯. ಡ್ರಮ್‌ನ ಒಳಗೇನಿದೆ?

ಇಡೀ ದಿನವನ್ನು ಡ್ರಮ್‌ ಬಾರಿಸುತ್ತಾ ಕಳೆಯುತ್ತಿದ್ದ ಪುಟ್ಟ ಹುಡುಗನೊಬ್ಬನಿದ್ದ. ಡ್ರಮ್‌ ಬಾರಿಸುತ್ತಿದ್ದ ಪ್ರತೀ ಕ್ಷಣವನ್ನೂ ಆತ ಆನಂದದಿಂದ ಆಸ್ವಾದಿಸುತ್ತಿದ್ದ. ಯಾರು ಏನೇ ಮಾಡಲಿ, ಏನೇ ಹೇಳಲಿ ಅವನು ಡ್ರಮ್‌ ಬಾರಿಸುವುದನ್ನು ನಿಲ್ಲಿಸುತ್ತಿರಲಿಲ್ಲ. ಈ ಹುಡುಗನನ್ನು ನಿಯಂತ್ರಿಸಲು ಏನಾದರೂ ಮಾಡಿ ಎಂಬುದಾಗಿ ನೆರೆಹೊರೆಯವರು ತಮ್ಮನ್ನು ತಾವು ಸೂಫಿಗಳು ಎಂದು ಕರೆದುಕೊಳ್ಳುತ್ತಿದ್ದ ಅನೇಕರನ್ನೂ ಇತರರನ್ನೂ ವಿನಂತಿಸಿದರು. ತನ್ನನ್ನು ತಾನು ಸೂಫಿ ಅಂದುಕೊಳ್ಳಿತ್ತಿದ್ದವನೊಬ್ಬ “ನೀನು ಇದೇ ರೀತಿ ಇಷ್ಟೊಂದು ಗದ್ದಲ ಮಾಡುತ್ತಿದ್ದರೆ ನಿನ್ನ ಕಿವಿತಮಟೆಯಲ್ಲಿ ತೂತು ಮಾಡುತ್ತೇನೆ” ಎಂಬುದಾಗಿ ಹೆದರಿಸಿದ. ಆ ಹುಡುಗ ವಿಜ್ಞಾನಿ ಅಥವ ಪಂಡಿತ ಆಗಿರದೇ ಇದ್ದದ್ದರಿಂದ ಈ ಬೆದರಿಕೆ ಅವನಿಗೆ ಅರ್ಥವಾಗಲೇ ಇಲ್ಲ. ಎರಡನೆಯವ ಹೇಳಿದ, “ಡ್ರಮ್‌ ಬಾರಿಸುವುದು ಒಂದು ಪವಿತ್ರ ಕಾರ್ಯವಾದದ್ದರಿಂದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅದನ್ನು ಬಾರಿಸಬೇಕು.” ಆ ಹುಡುಗನ ನೆರೆಹೊರೆಯವರೆಲ್ಲರಿಗೂ ಕಿವಿಗೆ ಹಾಕಿಕೊಳ್ಳಲು ತಕ್ಕುದಾದ ಬೆಣೆಗಳನ್ನು ವಿತರಿಸಿದ ಮೂರನೆಯವ. ಆ ಹುಡುಗನಿಗೆ ಚಿತ್ತಾಕರ್ಷಕವಾದ ಪುಸ್ತಕವೊಂದನ್ನು ಕೊಟ್ಟ ನಾಲ್ಕನೆಯವನು. ಐದನೆಯವನಾದರೋ, ಜೈವಿಕ ಹಿನ್ನುಣಿಸುವಿಕೆ (biofeedback) ತಂತ್ರದಿಂದ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬುದರ ವಿವರಣೆ ಇರುವ ಪುಸ್ತಕಗಳನ್ನು ನೆರೆಹೊರೆಯವರಿಗೆ ವಿತರಿಸಿದ. ಆರನೆಯವನು ಹುಡುಗನನ್ನು ಶಾಂತಮನಸ್ಕನನ್ನಾಗಿಸಲೋಸುಗ ಧ್ಯಾನಮಾಡುವ ಹಂತಗಳನ್ನು ಅವನಿಗೆ ಪರಿಚಯಿಸಿದ. ಅಷ್ಟೇ ಅಲ್ಲ, ನಾವು ವಾಸ್ತವಿಕತೆ ಅಂದುಕೊಂಡಿರುವುದೆಲ್ಲವೂ ಹೇಗೆ ನಮ್ಮ ಕಲ್ಪನೆ ಎಂಬುದನ್ನೂ ವಿವರಿಸಿದ. ಎಲ್ಲ ಹುಸಿಮದ್ದುಗಳಂತೆ (placebos) ಈ ಪ್ರತಿಯೊದು ಪರಿಹಾರವೂ ಮೊದಮೊದಲು ಅಪೇಕ್ಷಿತ ಫಲಿತಾಂಶ ನೀಡಿದಂತೆ ಗೋಚರಿಸಿದರೂ ಸ್ವಲ್ಪ ಕಾಲಾನಂತರ ನಿಷ್ಪ್ರಯೋಜಕವಾದವು.

ಕಟ್ಟಕಡೆಗೆ ಅಲ್ಲಿಗೆ ಬಂದ ಒಬ್ಬ ನಿಜವಾದ ಸೂಫಿ ಪರಿಸ್ಥಿತಿಯನ್ನು ಅವಲೋಕಿಸಿದ. ತದನಂತರ ಹುಡುಗನ ಕೈಗೆ ಸುತ್ತಿಗೆ ಹಾಗೂ ಉಳಿ ಕೊಟ್ಟು ಹೇಳಿದ, “ಈ ಡ್ರಮ್‌ನ ಒಳಗೆ ಏನಿರಬಹುದು?”

*****

೨೦. ಜಿಪುಣಾಗ್ರೇಸರ

ಅಬರ್‌ಡೀನ್‌ವಾಸೀ ಜಿಪುಣನೊಬ್ಬ ಗಾಲ್ಫ್‌ ಕಲಿಯಲೋಸುಗ ಗಾಲ್ಫ್‌ಕ್ಲಬ್‌ನ ಸದಸ್ಯನಾದ. ಅವನು ಆಟವಾಡಲು ಉಪಯೋಗಿಸುವ ಚೆಂಡು ಬೇರೆ ಯಾರಿಗಾದರೂ ಸಿಕ್ಕಿದರೆ ಅವರು ಅದನ್ನು ಕ್ಲಬ್‌ನ ಕಛೇರಿಗೆ ತಲುಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅದರ ಮೇಲೆ ಅವನ ಹೆಸರಿನ ಆದ್ಯಕ್ಷರಗಳನ್ನು.ಬರೆಯುವಂತೆ ತರಬೇತುದಾರ ಸೂಚಿಸಿದ. ಚೆಂಡು ಕಛೇರಿಗೆ ತಲುಪಿದರೆ ಅದನ್ನು ಕಛೇರಿಯ ಸಿಬ್ಬಂದಿಯಿಂದ ಆತ ಮರಳಿ ಪಡೆಯಬಹುದಾಗಿತ್ತು. ಈ ಸಲಹೆಯಲ್ಲಿ ಆಟ ಕಲಿಯಬಂದವನಿಗೆ ವಿಶೇಷ ಆಸಕ್ತಿ ಮೂಡಿತು. ಅವನು ತರಬೇತುದಾರನಿಗೆ ಹೇಳಿದ, “ಒಳ್ಳೆಯ ಸಲಹೆ. ನೀವೇ ಅದರ ಮೇಲೆ ನನ್ನ ಹೆಸರು ಆಂಗಸ್‌ ಮ್ಯಾಕ್‌ ಟ್ಯಾವಿಷ್‌ನ ಆದ್ಯಕ್ಷರಗಳಾದ ಎ ಎಮ್‌ ಟಿ ಅನ್ನು ಗೀರಿ ಗುರುತಿಸಿ.” ತರಬೇತುದಾರ ಅಂತೆಯೇ ಮಾಡಿದ. “ಓಹ್‌, ನಾನೊಬ್ಬ ವೈದ್ಯನಾದ್ದರಿಂದ ಅದರಲ್ಲಿ ಸ್ಥಳವಿದ್ದರೆ ಎಮ್‌ ಡಿ ಅಕ್ಷರಗಳನ್ನೂ ಬರೆಯಿರಿ.” ತರಬೇತುದಾರ ಅಂತೆಯೇ ಮಾಡಿದ. ಮ್ಯಾಕ್‌ ಟ್ಯಾವಿಷ್ ತನ್ನ ತಲೆಕೆರೆದುಕೊಂಡು ಹೇಳಿದ, “ಹಾಗೆಯೇ ಗಂಟೆ ೧೧.೩೦ ಇಂದ ೪ ರ ವರೆಗೆ ಎಂಬುದನ್ನೂ ಸೇರಿಸಿ ಬಿಡಿ!”

*****

೨೧. ಅಮ್ಮಂದಿರ ಸಂಭಾಷಣೆ

ಇಬ್ಬರು ಅಮ್ಮಂದಿರು ತಮ್ಮ ಮಕ್ಕಳ ಕುರಿತು ಮಾತನಾಡುತ್ತಿದ್ದರು.

ಒಬ್ಬಳು ಕೇಳಿದಳು, “ಗುರುವಾಗಿ ನಿನ್ನ ಮಗ ಹೇಗೆ ಮುಂದುವರಿಯುತ್ತಿದ್ದಾನೆ?”

ಇನ್ನೊಬ್ಬಳು ಉತ್ತರಿಸಿದಳು, “ಬಲು ಚೆನ್ನಾಗಿ ಮುಂದುವರಿಯುತ್ತಿದ್ದಾನೆ. ಕೆಲವು ಹಳೆಯ ವಿದ್ಯಾರ್ಥಿಗಳನ್ನು ಕಳುಹಿಸಿದರೂ ತೊಂದರೆಯಾಗದಷ್ಟು ಮಂದಿ ವಿದ್ಯಾರ್ಥಿಗಳು ಈಗ ಇದ್ದಾರೆ.”

ಮೊದಲನೆಯವಳು ಹೇಳಿದಳು, “ಬಹಳ ಒಳ್ಳೆಯದು. ನನ್ನ ಮಗ ಎಷ್ಟು ಮುಂದುವರಿದಿದ್ದಾನೆಂದರೆ ತನ್ನ ಹತ್ತಿರ ಕಲಿಯಲು ಬಯಸಿ ಬರುವವರೆಲ್ಲರನ್ನೂ ಶಿಷ್ಯರನ್ನಾಗಿ ಸ್ವೀಕರಿಸಲು ಅವನಿಗೆ ಸಾಧ್ಯವಾಗುತ್ತಿಲ್ಲ”

*****

೨೨. ಗುರುಗಳು ಹೇಳಬೇಕಾದದ್ದು

ಒಬ್ಬ ಗುರುಗಳು ಇನ್ನೊಬ್ಬ ಗುರುಗಳಿಗೆ ಹೇಳಿದರು, “ಸರಿಯೇ ತಪ್ಪೇ ಎಂಬುದನ್ನು ಪರೀಕ್ಷಿಸಿ ನೋಡಲಾಗದ್ದನ್ನೇ ಯಾವಾಗಲೂ ಹೇಳಬೇಕು.” “ಏಕೆ?” ಕೇಳಿದರು ಎರಡನೆಯ ಗುರುಗಳು. ಮೊದಲನೆಯವರು ವಿವರಿಸಿದರು, “ಏಕೆಂದರೆ, ’ಕುಜಗ್ರಹದಲ್ಲಿ ನಮ್ಮ ಜ್ಞಾನೇಂದ್ರಿಯಗಳಿಂದ ಗುರುತಿಸಲಾಗದ ಮಿಲಿಯಗಟ್ಟಲೆ ಜೀವಿಗಳು ಇದ್ದಾರೆ. ನಾನು ಅವರನ್ನು ಸಂಧಿಸಿದ್ದೇನೆ’ ಎಂಬುದಾಗಿ ನೀವು ಹೇಳಿದರೆ ಯಾರೂ ಅದನ್ನು ಪ್ರಶ್ನಿಸುವುದಿಲ್ಲ. ಅದಕ್ಕೆ ಬದಲಾಗಿ ’ಇದೊಂದು ಸುಂದರ ದಿನ’ ಎಂಬುದಾಗಿ ಹೇಳಿದರೆ  ಯಾರೋ ಒಬ್ಬ ಮೂರ್ಖ ’ನಿನ್ನೆಯಷ್ಟು ಸುಂದರವಾಗಿಲ್ಲ’ ಎಂಬುದಾಗಿ ಹೇಳಿಯೇ ಹೇಳುತ್ತಾನೆ. ’ಹಸಿ ಬಣ್ಣ’ ಎಂಬುದಾಗಿ ಬರೆದ ಫಲಕ ಹಾಕಿದರೆ ಜನ ನಿಮ್ಮನ್ನು ನಂಬುತ್ತಾರೆ ಅಂದುಕೊಂಡಿರಾ? ಅಲ್ಲಿ ಆಗಿರುವ ಬೆರಳು ಗುರುತುಗಳನ್ನು ಗಮನಿಸಿದರೆ ತಿಳಿಯುತ್ತದೆ ಎಷ್ಟು ಕಮ್ಮಿ ಜನ ನಿಮ್ಮನ್ನು ನಂಬಿದರು ಎಂಬುದು.”

*****

೨೩. ಕಾಳಿಯ ದಯೆ

ಭಾರತದಲ್ಲಿ ಹೇಳುವ ದಂತಕತೆ ಇದು. ಒಬ್ಬ ಗುರುವಿನ ಅನುಯಾಯಿ ಒಂದು ಸಂಜೆ ಕಾಡು-ಬಾತು ಬೇಟೆಗೆ ಹೊರಡುವ ಮುನ್ನ ಗುರುವಿನ ಆಶೀರ್ವಾದ ಪಡೆಯಲು ಹೋದ. ಆ ಗುರುವಾದರೋ ನಾಶದ ದೇವತೆ ಕಾಳಿಯನ್ನು ಸದಾಸ್ಮರಿಸುವ ತಾಂತ್ರಿಕ ವರ್ಗಕ್ಕೆ ಸೇರಿದವನಾಗಿದ್ದ. ಅನುಯಾಯಿಗೆ ಅವನ ಆಶೀರ್ವಾದವೇನೋ ಸಿಕ್ಕಿತಾದರೂ ಬೇಟೆಯಾಡಲು ಒಂದೇ ಒಂದು ಕಾಡು-ಬಾತು ಸಿಕ್ಕಲಿಲ್ಲ. ಮಾರನೆಯ ದಿನ ಅನುಯಾಯಿ ಗುರುವಿನ ಬಳಿಗೆ ಹೋದ. ಗುರುಗಳು ವಿಚಾರಿಸಿದರು, “ಬೇಟೆ ಹೇಗೆ ನಡೆಯಿತು. ಬಹು ಸಂಖ್ಯೆಯಲ್ಲಿ ಕಾಡು-ಬಾತುಗಳನ್ನು ನೀನು ಬೇಟೆಯಾಡಿರಬೇಕಲ್ಲವೇ?” ಅನುಯಾಯಿ ಉತ್ತರಿಸಿದ, “ಇಲ್ಲ. ಆದರೆ ಅಂತಾಗಲು ಕಾರಣ ನನ್ನ ಗುರಿಯ ದೋಷವಲ್ಲ, ತಾಯಿ ಕಾಳಿ ಪಕ್ಷಿಗಳಿಗೆ ಕರುಣೆ ತೋರಿಸಲು ನಿರ್ಧರಿಸಿದ್ದು.”

*****

೨೪. ಒಣಜಂಭ

ವಿಜ್ಞಾನಿಯೊಬ್ಬ ತರ್ಕಶಾಸ್ತ್ರಜ್ಞನಿಗೆ ಹೇಳಿದ, “ಮೇಧಾವಿಗಳು ಅತಿಯಾಗಿ ಸರಳೀಕರಿಸುವ ಹಾಗು ಹೆಚ್ಚು ಮಾತನಾಡದ ಪ್ರವೃತ್ತಿಯವರಾಗಿದ್ದರೂ ಒಟ್ಟಾರೆಯಾಗಿ ಒಣಜಂಭ ಉಳ್ಳವರು ಎಂಬುದಾಗಿ ನಾನು ಸಂಖ್ಯಾಶಾಸ್ತ್ರೀಯವಾಗಿ ನಿರ್ಧರಿಸಿದ್ದೇನೆ.”

ತರ್ಕಶಾಸ್ತ್ರಜ್ಞ ಪ್ರತಿಕ್ರಿಯಿಸಿದ, “ಶುದ್ಧಾಂಗ ಸುಳ್ಳು. ಮೇಧಾವಿಗಳು – ಒಣಜಂಭ ಉಳ್ಳವರು ಹಾಗು ಶಬ್ದ ಬಾಹುಳ್ಯವಿಲ್ಲದವರೇ? ನನ್ನ ವಿಷಯವಾಗಿ ನೀನೇನು ಹೇಳುವೆ?”

*****

೨೫. ಸತ್ತ ಹಿರಿಯರಿಗೆ ಗೌರವ ಸೂಚಿಸುವುದು

ಚೀನೀ ಮಹಾಶಯನೊಬ್ಬ ತನ್ನ ಹಿರಿಯರ ಸಮಾಧಿಗಳ ಫಲಕಗಳ ಎದುರು ಹಣದ ನೋಟ್‌ಗಳನ್ನು ಸುಡುತ್ತಿರುವುದನ್ನು ಪಾಶ್ಚಾತ್ಯನೊಬ್ಬ ನೋಡಿ ಕೇಳಿದ, “ಕಾಗದದ ಹಣದ ಹೊಗೆಯಿಂದ ನಿಮ್ಮ ಹಿರಿಯರು ಹೇಗೆ ಲಾಭ ಪಡೆಯಲು ಸಾಧ್ಯ?” ಚೀನೀಯನು ಉತ್ತರಿಸಿದ, “ನೀವು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟಾಗ ಮರಣಿಸಿದ ನಿಮ್ಮ ಹಿರಿಯರು ಹೇಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೋ ಅದೇ ರೀತಿ.”

*****

೨೬. ದಾವಾ ಹಾಕು, ಹಸಿವಿನಿಂದ ಸಾಯಿಸಬೇಡ

ರಾಜನೀತಿಜ್ಞ ಡೇನಿಯಲ್‌ ವೆಬ್‌ಸ್ಟರ್‌ ಕುರಿತಾದ ದಂತಕತೆ ಇದು. ಕಟುಕನೊಬ್ಬ ತನಗೆ ಬರಬೇಕಾಗಿದ್ದ ಸಾಲಕ್ಕಾಗಿ ಡೇನಿಯಲ್‌ ವೆಬ್‌ಸ್ಟರ್‌ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಕಿದ್ದ. ಒಂದು ದಿನ ಆತ ರಸ್ತೆಯಲ್ಲಿ ಡೇನಿಯಲ್‌ಗೆ ಎದುರಾದಾಗ ತನ್ನಿಂದ ಮಾಂಸದ ಬೇಡಿಕೆ ಪಡೆಯಲು ಇತ್ತೀಚೆಗೆ ಏಕೆ ಬರುತ್ತಿಲ್ಲ ಎಂಬುದಾಗಿ ವಿಚಾರಿಸಿದ. ಹಾಲಿ ಪರಿಸ್ಥಿತಿಯಲ್ಲಿ ಡೇನಿಯಲ್‌ ತನ್ನೊಂದಿಗೆ ವ್ಯವಹರಿಸಲು ಇಷ್ಟಪಡದೇ ಇರಬಹುದು ಎಂಬ ಕಾರಣಕ್ಕಾಗಿ ಬರುತ್ತಿಲ್ಲ ಎಂಬುದಾಗಿ ತಿಳಿಸಿದ ಕಟುಕ. ಅದಕ್ಕೆ ಡೇನಿಯಲ್‌ ಪರಿಪೂರ್ಣ ಶಾಂತಚಿತ್ತತೆ ಪ್ರದರ್ಶಿಸುತ್ತ ಹೇಳಿದ, “ ಛೆ, ಛೆ. ನನ್ನ ಮೇಲೆ ಎಷ್ಟಾದರೂ ಮೊಕದ್ದಮೆಗಳನ್ನು ಹಾಕು. ಆದರೆ, ದೇವರ ಮೇಲಾಣೆ, ನನ್ನನ್ನು ಹಸಿವಿನಿಂದ ಸಾಯುವಂತೆ ಮಾಡಬೇಡ.”

*****

೨೭. ಮೊದಲನೆಯ ಭೋಜನ, ಮುಂದಿನ ಭೋಜನ?

“ಬಲು ಮುಖ್ಯವಾದ ಅಂತಿಮ ಭೋಜನದ ಲೋಹದ ಉಬ್ಬುಚಿತ್ರ” ಎಂಬುದಾಗಿ ತಾನೇ ಘೋಷಿಸಿದ ಕಲಾಕೃತಿಯೊಂದನ್ನು ಅಪರೂಪದ ವಸ್ತುಗಳ ಮಾರಾಟಗಾರ ಮಹಿಳಾ ಪ್ರವಾಸಿಯೊಬ್ಬಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಕೇಳುಗರನ್ನು ದಂಗುಬಡಿಸುವ ಪ್ರತಿಕ್ರಿಯೆ ಆಕೆಯದಾಗಿತ್ತು – “ಏನೇ ಆಗಲಿ, ಅಂತಿಮ ಭೋಜನದಲ್ಲಿ ಅಂತಹ ವಿಶೇಷತೆ ಏನಿದೆ? ನಿಮ್ಮ ಹತ್ತಿರ ಮೊದಲನೇ ಭೋಜನದ ಚಿತ್ರ ಇದ್ದಿದ್ದರೆ ಅದು ವಿಶೇಷ. ಅಂದ ಹಾಗೆ ಮುಂದಿನ ಭೋಜನ ಯಾವಾಗ?”

*****

೨೮. ತಾಂತ್ರಿಕ!

ಮುಂಬೈ ಬೃಹತ್‌ ಮಾರುಕಟ್ಟೆ ರಸ್ತೆ, ಭಿಂಡಿ ಬಾಝಾರ್‌ನಲ್ಲಿ ನಡೆದ ವಿದ್ಯಮಾನ ಇದು. ರಸ್ತೆಯ ಬದಿಯಲ್ಲಿ ಕುಳಿತಿದ್ದ ಒಬ್ಬ ಮುದುಕನಿಂದ ಅನತಿ ದೂರದಲ್ಲಿ ಒಂದು ಬಸ್ಸು ಬಂದು ನಿಂತಿತು. ಸತ್ಯವನ್ನು ಅನ್ವೇಷಿಸಲೇಬೇಕು ಎಂಬುದಾಗಿ ಪಣತೊಟ್ಟಂತಿದ್ದ ಪಾಶ್ಚಾತ್ಯರ ಗುಂಪೊಂದು ಅದರಿಂದ ಇಳಿದು ಆ ಮುದುಕನನ್ನು ಸುತ್ತುವರಿಯಿತು. ಕೆಲವರು ಅವನ ಫೋಟೋ ತೆಗೆದರು, ಕೆಲವರು ಭಾವೋದ್ವೇಗದಿಂದ ಒಂದೇಸಮನೆ ಬಡಬಡಿಸಲಾರಂಭಿಸಿದರು. ಒಬ್ಬಳು ಅವನೊಂದಿಗೆ ಸಂಭಾಷಿಸಲು ಪ್ರಯತ್ನಿಸಿದಳು. ಅವಳನ್ನು ದುರುಗುಟ್ಟಿ ನೋಡುವುದು ಮಾತ್ರ ಅವನ ಪ್ರತಿಕ್ರಿಯೆಯಾಗಿತ್ತು. ಅವಳು ಮಾರ್ಗದರ್ಶಿಯೊಂದಿಗೆ ಹೇಳಿದಳು, “ಎಷ್ಟು ಒಳ್ಳೆಯ ಮುದುಕ; ಇವನು ನಿಜವಾಗಿಯೂ ಒಬ್ಬ ಜೀವಂತ ಸಂತನಾಗಿರಬೇಕು. ಇವನೊಬ್ಬ ಸಂತನೇ?”

ಸುಳ್ಳು ಹೇಳಲು ಇಚ್ಛಿಸದ ಭಾರತೀಯ ಮಾರ್ಗದರ್ಶಿ ಅವರನ್ನು ಸಂತೋಷಪಡಿಸಲೋಸುಗ ಹಾಸ್ಯಭರಿತ ಧ್ವನಿಯಲ್ಲಿ ಹೇಳಿದ, “ಮ್ಯಾಡಮ್‌, ಅವನು ಸಂತನಿರಬಹುದಾದರೂ ನಮಗೆ ಅವನೊಬ್ಬ ಈ ಪ್ರದೇಶದಲ್ಲಿ ಇರುವ ಅತ್ಯಾಚಾರೀ ಮನುಷ್ಯ.”

ಅವಳು ತಕ್ಷಣ ಪ್ರತಿಕ್ರಿಯಿಸಿದಳು, “ಓ, ಆ ಕುರಿತು ನಾನು ಕೇಳಿದ್ದೇನೆ. ಅದು ಅವರ ಮತಕ್ಕೆ ಸಂಬಂಧಿಸಿದ ವಿಷಯ. ಅವನೊಬ್ಬ ತಾಂತ್ರಿಕನಿರಬೇಕು ಎಂಬುದಾಗಿ ಊಹಿಸುತ್ತೇನೆ!”

*****

೨೯. ನೀವೇ ಏಕೆ ಪಾದರಕ್ಷೆ ತಯಾರಿಸಬಾರದು?

ಅಂಗಡಿಯೊಂದರ ಒಳಹೋಗಿ ಅಂಗಡಿಯವನನ್ನು ಒಬ್ಬ ಕೇಳಿದ, “ನಿಮ್ಮಲ್ಲಿ ಹದಮಾಡಿದ ಚರ್ಮ ಇದೆಯೇ?”

ಅಂಗಡಿಯವ ಉತ್ತರಿಸಿದ, “ಇದೆ.”

“ಮೊಳೆಗಳು?”

“ಇವೆ.”

“ದಾರ?”

“ಇದೆ.”

“ಸೂಜಿ?”

“ಇದೆ.”

“ಅಂದಮೇಲೆ ನೀವೆ ಏಕೆ ಪಾದರಕ್ಷೆ ತಯಾರಿಸಬಾರದು?”

*****

೩೦. ಕಪ್ಪೆಗಳು

ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಎಲ್ಲಿಗೋ ಪಯಣಿಸುತ್ತಿದ್ದಾಗ ಅವುಗಳ ಪೈಕಿ ಎರಡು ಕಪ್ಪೆಗಳು ಒಂದು ಆಳವಾದ ಗುಂಡಿಯೊಳಕ್ಕೆ ಬಿದ್ದವು. ಉಳಿದ ಕಪ್ಪೆಗಳು ಗುಂಡಿಯ ಮೇಲೆ ಸುತ್ತಲೂ ನಿಂತು ಗುಂಡಿ ಎಷ್ಟು ಆಳವಿದೆ ಎಂಬುದನ್ನು ಅಂದಾಜಿಸಿದವು. ತದನಂತರ ಗುಂಡಿಯೊಳಕ್ಕೆ ಬಿದ್ದ ದುರದೃಷ್ಟವಂತ ಕಪ್ಪೆಗಳಿಗೆ ಅವು ಎಂದೆಂದಿಗೂ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದವು. ಆ ಎರಡು ಕಪ್ಪೆಗಳು ಈ ಹೇಳಿಕೆಯನ್ನು ನಿರ್ಲಕ್ಷಿಸಿ ಗುಂಡಿಯಿಂದ ಹೊರಕ್ಕೆ ಹಾರಲು ಪ್ರಯತ್ನಿಸತೊಡಗಿದವು.

ಆ ಗುಂಡಿಯೊಳಗೇ ಸಾಯುವುದು ಖಚಿತವಾದ್ದರಿಂದ ವೃಥಾ ಶ್ರಮ ಪಟ್ಟು ಹಾರುವುದನ್ನು ನಿಲ್ಲಿಸಿರೆಂದು ಮೇಲಿದ್ದ ಕಪ್ಪೆಗಳು ಮೇಲಿಂದ ಮೇಲೆ ಹೇಳಲಾರಂಭಿಸಿದವು. ಕೊನೆಗೆ ಒಂದು ಕಪ್ಪೆ ಅವುಗಳ ಮಾತಿಗೆ ಮನ್ನಣೆ ನೀಡಿ ಹಾರುವ ಪ್ರಯತ್ನ ನಿಲ್ಲಿಸಿತು. ತತ್ಪರಿಣಾಮವಾಗಿ ಅದು ಕೆಳಗೆ ಬಿದ್ದು ಸತ್ತು ಹೋಯಿತು.

ಇನ್ನೊಂದು ಕಪ್ಪೆ ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸಿ ಸಾಧ್ಯವಿರುವಷ್ಟೂ ಎತ್ತರಕ್ಕೆ ಹಾರುತ್ತಲೇ ಇತ್ತು. ಉಳಿದ ಕಪ್ಪೆಗಳು ಪುನಃ ಹಾರುವುದನ್ನು ನಿಲ್ಲಿಸಿ ಸಾವನ್ನು ಸ್ವೀಕರಿಸುವಂತೆ ಬೊಬ್ಬೆಹೊಡೆಯತೊಡಗಿದವು. ಆ ಕಪ್ಪೆ ಇನ್ನೂ ಹೆಚ್ಚಿನ ಶಕ್ತಿ ಪ್ರಯೋಗಿಸಿ ಹಾರತೊಡಗಿತು, ಕೊನೆಗೂ ಗುಂಡಿಯಿಂದ ಹೊರಕ್ಕೆ ಹಾರುವುದರಲ್ಲಿ ಯಶಸ್ವಿಯಾಯಿತು.

“ನೀನು ಹಾರುವುದನ್ನು ನಿಲ್ಲಿಸಲಿಲ್ಲವೇಕೆ? ನಾವು ಹೇಳಿದ್ದು ಕೇಳಿಸಲಿಲ್ಲವೇ?” ಎಂಬುದಾಗಿ ಕೇಳಿದವು ಉಳಿದ ಕಪ್ಪೆಗಳು.

ತಾನೊಂದು ಕಿವಿಡು ಕಪ್ಪೆ ಎಂಬುದನ್ನು ಅದು ಉಳಿದವಕ್ಕೆ ವಿವರಿಸಿತು. ಹಾರುವಂತೆ ತನ್ನನ್ನು ಉಳಿದ ಕಪ್ಪೆಗಳು ಪ್ರೋತ್ಸಾಹಿಸುತ್ತಿವೆ ಎಂಬುದಾಗಿ ಆ ಕಪ್ಪೆ ಆಲೋಚಿಸಿತ್ತಂತೆ!

*****

೩೧. ಪಕ್ಷಿಗಳ ಸ್ಪರ್ಧೆ

ವಿಭಿನ್ನ ಪಕ್ಷಿ ಕುಲಗಳ ಪ್ರತಿನಿಧಿಗಳು ಯಾವ ಕುಲದ ಪಕ್ಷಿಗಳು ಅತೀ ಎತ್ತರಕ್ಕೆ ಹಾರಬಲ್ಲವು ಎಂಬುದನ್ನು ಪತ್ತೆಹಚ್ಚಲು ನಿರ್ಧರಿಸಿದವು. ತೀರ್ಪು ನೀಡಲು ಒಂದು ಸಮಿತಿಯನ್ನು ರಚಿಸಲಾಯಿತು. ಸ್ಪರ್ಧೆಗಳು ಆರಂಭವಾದವು. ಹದ್ದು ಒಂದನ್ನು ಬಿಟ್ಟು ಮಿಕ್ಕ ಪಕ್ಷಿಗಳು ಒಂದೊಂದಾಗಿ ಸೋಲನ್ನು ಒಪ್ಪಿಕೊಂಡು ಸ್ಪರ್ಧೆಯಿಂದ ಹಿದೆ ಸರಿದವು. ಹದ್ದು ಮಾತ್ರ ಅದರಿಂದ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹಾರಿ ಉದ್ಗರಿಸಿತು, “ನೋಡಿ, ನಾನೀಗ ಗರಿಷ್ಠ ಎತ್ತರದಲ್ಲಿದ್ದೇನೆ, ಉಳಿದ ಎಲ್ಲ ಸ್ಪರ್ಧಿಗಳು ಬಲು ಕೆಳಗೇ ಇದ್ದಾರೆ.”

ಆ ಕ್ಷಣದಲ್ಲಿ ಹದ್ದಿಗೆ ತಿಳಿಯದಂತೆ ಅದರ ಬೆನ್ನಿನ ಮೇಲೆ ಸವಾರಿ ಮಾಡುತ್ತಿದ್ದ ಪುಟ್ಟ ಗುಬ್ಬಚ್ಚಿಯೊಂದು ತನ್ನ ಶಕ್ತಿಯನ್ನು ಒಂದಿನಿತೂ ವ್ಯಯಿಸದೇ ಇದ್ದದ್ದರಿಂದ ಹದ್ದಿನ ಬೆನ್ನಿನ ಮೇಲಿನಿಂದ ಇನ್ನೂ ಎತ್ತರಕ್ಕೆ ಹಾರಿತು.

ಗೆದ್ದವರು ಯಾರೆಂಬುದನ್ನು ತೀರ್ಮಾನಿಸಲು ತೀರ್ಪುಗಾರರ ಸಮಿತಿ ಸಭೆ ಸೇರಿತು. “ಗುಬ್ಬಚ್ಚಿಗೆ ಒಂದು ಬಹುಮಾನ ಅದರ ಜಾಣತನಕ್ಕಾಗಿ. ಸಾಧನೆಗಾಗಿ ಇರುವ ಬಹುಮಾನ ಹದ್ದಿಗೇ ಸಲ್ಲಬೇಕು. ಗುಬ್ಬಚ್ಚಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಎಲ್ಲರಿಗಿಂತ ಎತ್ತರ ಹಾರಿದ ಹದ್ದಿಗೆ ದೀರ್ಘ ಕಾಲ ಆಯಾಸವನ್ನು ತಡೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಿದ್ದಕ್ಕಾಗಿ ಇನ್ನೂ ಒಂದು ವಿಶೇಷ ಬಹುಮಾನ!” ಎಂಬುದಾಗಿ ಘೋಷಿಸಿತು ಸಮಿತಿ.

*****

೩೨. ಕೋಡುಗಲ್ಲು

ಹುಲಿಯೊಂದು ಅಟ್ಟಿಸಿಕೊಂಡು ಬಂದದ್ದರಿಂದ ಒಬ್ಬ ಕೋಡುಗಲ್ಲಿನ ಅಂಚಿನಿಂದ ಕೆಳಕ್ಕೆ ಬಿದ್ದ. ಬೀಳುತ್ತಿರುವಾಗ ಅದೃಷ್ಟವಶಾತ್ ಕೈಗೆ ಸಿಕ್ಕಿದ ಕೊಂಬೆಯೊಂದನ್ನು ಹಿಡಿದು ನೇತಾಡತೊಡಗಿದ. ಅವನಿಂದ ೬ ಅಡಿ ದೂರದಲ್ಲಿ ಮೇಲೆ ಹುಲಿ ಘರ್ಜಿಸುತ್ತಾ ನಿಂತಿತ್ತು. ಕೆಳಗೆ ೧೦೦ ಅಡಿ ದೂರದಲ್ಲಿ ತುಂಬ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಬಂಡೆಗಳಿಗೆ ಪ್ರಕ್ಷುಬ್ದ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದವು. ಅವನು ಹಿಡಿದುಕೊಂಡಿದ್ದ ಕೊಂಬೆಯ ಬುಡವನ್ನು ಎರಡು ಇಲಿಗಳು ಒಂದೇ ಸಮನೆ ಕಡಿಯುತ್ತಿದ್ದದ್ದನ್ನು ಗಮನಿಸಿ ಆತ ಭಯಭೀತನಾದ. ತನ್ನ ಅವಸಾನ ಕಾಲ ಸಮೀಪಿಸುತ್ತಿದೆಯೆಂದು ಭಾವಿಸಿದ ಆತ ಜೋರಾಗಿ ಕಿರುಚಿದ, “ಓ ದೇವರೇ, ನನ್ನನ್ನು ರಕ್ಷಿಸು.”

ತಕ್ಷಣ ಅಶರೀರವಾಣಿಯೊಂದು ಕೇಳಿಸಿತು, “ ಖಂಡಿತ ರಕ್ಷಿಸುತ್ತೇನೆ. ಆದರೆ ಅದಕ್ಕೂ ಮುನ್ನ ಆ ಕೊಂಬೆಯನ್ನು ಬಿಟ್ಟುಬಿಡು.”

*****

೩೩. ನಾಲ್ಕು ಮಂದಿ ಮತ್ತು ದುಭಾಷಿ

ಬೇರೆ ಬೇರೆ ದೇಶಗಳ ನಾಲ್ಕು ಮಂದಿ. ಒಂದೆಡೆ ಸೇರಿದ್ದಾಗ ಅವರಿಗೆ ಹಣದ ಒಂದು ನಾಣ್ಯ ಸಿಕ್ಕಿತು.

ಅವರ ಪೈಕಿ ಪರ್ಶಿಯಾದವ ಹೇಳಿದ, “ಈ ಹಣದಿಂದ ನಾನು ’ಅಂಗೂರ’ ಕೊಂಡುಕೊಳ್ಳುತ್ತೇನೆ.”

ಅರೇಬಿಯಾದವ ಹೇಳಿದ, “ಬೇಡ, ಏಕೆಂದರೆ ನನಗೆ  ಇನಾಬ್‌ ಬೇಕು.”

ಟರ್ಕಿಯವ ಹೇಳಿದ, “ನನಗೆ ಇನಾಬ್‌ ಬೇಡ, ಅಝಮ್‌ ಬೇಕು.”

ಗ್ರೀಸಿನವ ಹೇಳಿದ, “ನನಗೆ ಸ್ಟಫಿಲ್‌ ಬೇಕು.”

ಪ್ರತಿಯೊಬ್ಬನಿಗೂ ಇನ್ನೊಬ್ಬ ಏನನ್ನು ಬೇಕು ಅಂದದ್ದು ಅರ್ಥವಾಗದ್ದರಿಂದ ಅವರ ನಡುವೆ ಜಗಳ ಶುರುವಾಯಿತು. ಅವರಲ್ಲಿ ಇದ್ದದ್ದು ಮಾಹಿತಿಯೇ ವಿನಾ ಜ್ಞಾನವಲ್ಲ.

ಅಲ್ಲಿ ಯಾರಾದರೊಬ್ಬ ವಿವೇಕಿ ಇದ್ದಿದ್ದರೆ ಇಂತು ಹೇಳಿ ಅವರನ್ನೆಲ್ಲ ಒಗ್ಗೂಡಿಸುತ್ತಿದ್ದ: “ನಿಮ್ಮ ಹಣದ ಈ ಒಂದು ನಾಣ್ಯದಿಂದ ನಾನು ನಿಮ್ಮೆಲ್ಲರ ಆವಶ್ಯಕತೆಗಳನ್ನು ಪೂರೈಸಬಲ್ಲೆ. ನಿಜವಾಗಿ ನೀವು ನನ್ನನ್ನು ನಂಬುವಿರಾದರೆ ನಿಮ್ಮ ಒಂದು ನಾಣ್ಯ ನಾಲ್ಕಾಗುತ್ತದೆ; ವೈಷಮ್ಯದಿಂದ ಇರುವ ನಾಲ್ಕು ಒಗ್ಗೂಡಿ ಒಂದಾಗುತ್ತದೆ.”

ಏಕೆಂದರೆ, ಇಂಥ ವಿವೇಕಿಗೆ ತಿಳಿದಿರುತ್ತಿತ್ತು ಈ ನಾಲ್ವರೂ ತಮ್ಮ ತಮ್ಮ ಭಾಷೆಗಳಲ್ಲಿ ಹೇಳಿದ್ದು ಒಂದೇ ವಸ್ತುವನ್ನು ಅನ್ನುವ ಸತ್ಯ. ಎಲ್ಲರೂ ಬಯಸಿದ್ದು – ದ್ರಾಕ್ಷಿ

*****

೩೪. ನಾಲ್ಕು ಪಟ್ಟಣಗಳು

ನಾಲ್ಕು ಪಟ್ಟಣಗಳು ಇದ್ದವು. ಪ್ರತೀ ಪಟ್ಟಣದಲ್ಲಿಯೂ ಜನ ಹಸಿವಿನಿಂದ ಸಾಯುತ್ತಿದ್ದರು. ಪ್ರತೀ ಪಟ್ಟಣದಲ್ಲಿಯೂ ಬೀಜಗಳು ತುಂಬಿದ್ದ ಒಂದು ಚೀಲವಿತ್ತು.

ಒಂದನೆಯ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಎಂಬುದು ಯಾರಿಗೂ ತಿಳಿದಿರಲಿಲ್ಲ. ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಯಾರಿಗೂ ತಿಳಿದಿರಲಿಲ್ಲ. ಎಂದೇ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದರು.

ಎರಡನೇ ಪಟ್ಟಣದಲ್ಲಿ ಒಬ್ಬನಿಗೆ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ತಿಳಿದಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಏನೂ ಮಾಡಲಿಲ್ಲ. ಎಂದೇ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದರು.

ಮೂರನೇ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಒಬ್ಬನಿಗೆ ತಿಳಿದಿತ್ತು. ತನ್ನನ್ನು ರಾಜ ಎಂಬುದಾಗಿ ಎಲ್ಲರೂ ಒಪ್ಪಿಕೊಳ್ಳುವಂತಿದ್ದರೆ ಮಾತ್ರ ಬೀಜ ಬಿತ್ತನೆ ಮಾಡುವುದಾಗಿ ತಿಳಿಸಿದ. ಎಲ್ಲರೂ ಒಪ್ಪಿಕೊಂಡರು. ತತ್ಪರಿಣಾಮವಾಗಿ ಎಲ್ಲರಿಗೂ ತಿನ್ನಲು ಸಿಕ್ಕಿತಾದರೂ ಒಬ್ಬನ ಆಳ್ವಿಕೆಗೆ ಒಳಪಡಬೇಕಾಯಿತು.

ನಾಲ್ಕನೇ ಪಟ್ಟಣದಲ್ಲಿ ಬೀಜಗಳಿಂದ ಏನು ಉಪಯೋಗ ಹಾಗೂ ಅವನ್ನು ಬಿತ್ತನೆ ಮಾಡುವುದು ಹೇಗೆ ಎಂಬುದೂ ಒಬ್ಬನಿಗೆ ತಿಳಿದಿತ್ತು. ಅವನು ಬೀಜಗಳನ್ನು ಬಿತ್ತನೆ ಮಾಡಿದ್ದು ಮಾತ್ರವಲ್ಲದೆ ತೋಟಗಾರಿಕೆಯ ಕಲೆಯನ್ನು ಎಲ್ಲರಿಗೂ ಕಲಿಸಿದನು. ತತ್ಪರಿಣಾಮವಾಗಿ ಎಲ್ಲರೂ ಶಶಕ್ತರಾದರು, ಎಲ್ಲರಿಗೂ ತಿನ್ನಲು ಸಿಕ್ಕಿತು, ಎಲ್ಲರೂ ಸ್ವತಂತ್ರರಾಗಿಯೇ ಇದ್ದರು.

*****

೩೫. ಮೊಳೆ

ಒಂದು ಮೊಳೆ ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸಂಭಾಷಣೆ ಇಂತಿದೆ:

ಮೊಳೆ: “ಅನೇಕ ವರ್ಷಗಳಿಂದ ಈ ಫಲಕಕ್ಕೆ ಅಂಟಿಕೊಂಡಿರುವ ನಾನು ಭವಿಷ್ಯದಲ್ಲಿ ನನಗೆ ಏನಾಗಬಹುದೆಂಬುದರ ಕುರಿತು ಅನೇಕ ಸಲ ಕುತೂಹಲದಿಂದ ಆಲೋಚಿಸಿದ್ದೇನೆ.”

ಮನುಷ್ಯ: “ನೀನು ಈಗ ಇರುವ ಸನ್ನಿವೇಶದಲ್ಲಿ ಅನೇಕ ಸಾಧ್ಯತೆಗಳು ಹುದುಗಿವೆ. ಯಾರಾದರು ಚಿಮುಟದಿಂದ ನಿನ್ನನ್ನು ಎಳೆದು ಹಾಕಬಹುದು, ನೀನಿರುವ ಫಲಕ ಸುಟ್ಟು ಹೋಗಬಹುದು, ನೀನಿರುವ ಫಲಕವನ್ನು ಹುಳು ತಿನ್ನಬಹುದು – ಹೀಗೆ ಅನೇಕ ಸಾಧ್ಯತೆಗಳಿವೆ.

ಮೊಳೆ: “ಇಂಥ ಮೂರ್ಖ ಪ್ರಶ್ನೆಗಳನ್ನು ಕೇಳಬಾರದೆಂಬ ವಿವೇಕ ನನ್ನಲ್ಲಿ ಇರಬೇಕಾಗಿತ್ತು! ಸಾಧ್ಯತೆಗಳು ಅನೇಕವಿರಲಿ, ಅವುಗಳ ಪೈಕಿ ಹೆಚ್ಚಿನವು ಅಸಂಭಾವ್ಯವಾದವು. ಅದೇನೇ ಇರಲಿ, ಯಾರಿಗೂ ತಮ್ಮ ಭವಿಷ್ಯ ತಿಳಿಯಲು ಸಾಧ್ಯವಿಲ್ಲ,”

ಇಂತು ಸಂಭಾಷಣೆಯನ್ನು ನಿಲ್ಲಿಸಿದ ಆ ಮೊಳೆ ತನ್ನನ್ನು ಹೆದರಿಸದೆಯೇ ಜಾಣತನದಿಂದ ಮಾತನಾಡಬಲ್ಲವರು ಯಾರಾದರೂ ಬರಬಹುದು ಎಂಬ ನಿರೀಕ್ಷೆಯಿಂದ ಕಾಯಲಾರಂಭಿಸಿತು.

*****

೩೬. ಮನುಷ್ಯ ಮತ್ತು ಹುಲಿ

ಹಸಿದ ಹುಲಿಯೊಂದು ಮನುಷ್ಯನೊಬ್ಬನ ಬೆನ್ನುಹತ್ತಿತ್ತು. ಹತಾಶೆಯಿಂದ ಆತ ಹಿಂದಕ್ಕೆ ತಿರುಗಿ ಹುಲಿಗೆ ಮುಖಾಮುಖಿಯಾಗಿ ನಿಂತು ಕಿರುಚಿದ, “ನನ್ನನ್ನು ನನ್ನಷ್ಟಕ್ಕೆ ಹೋಗಲು ನೀನೇಕೆ ಬಿಡಬಾರದು?”

ಹುಲಿ ಉತ್ತರಿಸಿತು, “ನೀನು ನನಗೆ ಹಸಿವುಂಟುಮಾಡುವುದನ್ನು ನಿಲ್ಲಿಸಬಾರದೇಕೆ?”

*****

೩೭. ಘಾಝ್ನಾದ ಮಹಮದ್‌

ಒಂದು ದಿನ ಘಾಝ್ನಾದ ಮಹಮದ್‌ ತನ್ನ ಉದ್ಯಾನವನದಲ್ಲಿ ವಿಹಾರಾರ್ಥ ನಡೆಯುತ್ತಿದ್ದಾಗ ಪೊದೆಯೊಂದರ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಕುರುಡ ಫಕೀರನೊಬ್ಬನನ್ನು ಎಡವಿ ಮುಗ್ಗರಿಸಿದ.

ಫಕೀರನಿಗೆ ಎಚ್ಚರವಾಯಿತು. ತಕ್ಷಣ ಅವನು ಗಟ್ಟಿಯಾಗಿ ಕೂಗಿ ಕೇಳಿದ, “ಏ ಒಡ್ಡೊಡ್ಡಾದ ದಡ್ಡ! ನಿನಗೇನು ಕಣ್ಣುಗಳಿಲ್ಲವೇ? ಮನುಷ್ಯರನ್ನು ತುಳಿಯುತ್ತೀದ್ದೀಯಲ್ಲ?”

ಮಹಮದ್‌ನ ಜೊತೆಯಲ್ಲಿ ಇದ್ದ ಆಸ್ಥಾನಿಕನೊಬ್ಬ ಘರ್ಜಿಸಿದ, “ನಿನ್ನ ಕುರುಡುತನಕ್ಕೆ ತಕ್ಕಂತೆ ಇದೆ ನಿನ್ನ ದಡ್ಡತನ! ನೀನು ನೋಡಲಾರೆಯಾದ್ದರಿಂದ ಯಾರ ಮೇಲಾದರೂ ಅಜಾಗರೂಕತೆಯ ಆಪಾದನೆ ಹೊರಿಸುವ ಮುನ್ನ ಹೆಚ್ಚು ಜಾಗರೂಕತೆಯಿಂದಿರಬೇಕು.”

ಫಕೀರ ಹೇಳಿದ, “ಒಬ್ಬ ಸುಲ್ತಾನನನ್ನು ನಾನು ಠೀಕೆ ಮಾಡಬಾರದು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ, ನಿಮ್ಮ ಜ್ಞಾನ ಆಳವಾಗಿಲ್ಲದಿರುವ ವಿಷಯದ ಅರಿವು ನಿಮಗೆ ಆಗಬೇಕಿದೆ.”

ತಾನು ಒಬ್ಬ ರಾಜನ ಎದುರು ನಿಂತಿರುವ ವಿಷಯ ಕುರುಡನಿಗೆ ತಿಳಿದಿದೆ ಎಂಬ ಅಂಶವೇ ಮಹಮದ್‌ನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿತು. ಅವನು ಕೇಳಿದ, “ಎಲೈ ಫಕೀರನೇ, ಒಬ್ಬ ರಾಜ ನಿನ್ನ ಬೈಗುಳನ್ನು ಏಕೆ ಕೇಳಬೇಕು?”

ಫಕೀರ ಹೇಳಿದ, “ಕರಾರುವಾಕ್ಕಾಗಿ ಹೇಳುವುದಾದರೆ ಯಾವುದೇ ವರ್ಗದ ಜನ ಅವರಿಗೆ ತಕ್ಕುದಾದ ಠೀಕೆಯಿಂದ ರಕ್ಷಿಸಲ್ಪಟ್ಟಿದ್ದರೆ ಅದೇ ಅವರ ಅವನತಿಗೆ ಕಾರಣವಾಗುತ್ತದೆ. ಉಜ್ಜಿ ಒಪ್ಪಮಾಡಿದ ಲೋಹ ಮಾತ್ರ ಹೊಳೆಯುತ್ತದೆ, ಮಸೆಗಲ್ಲಿಗೆ ಉಜ್ಜಿದ ಚಾಕು ಮಾತ್ರ ಅತ್ಯುತ್ತಮವಾಗಿ ಕತ್ತರಿಸುತ್ತದೆ, ಕಸರತ್ತು ಮಾಡಿದ ಕೈ ಮಾತ್ರ ಭಾರವನ್ನು ಎತ್ತುತ್ತದೆ.”

*****

೩೮. ನಿಮಗೇನು ಬೇಕಾಗಬಹುದು?

ಒಬ್ಬ ಬೆಡುಇನ್‌ ಹೆಗಲ ಮೇಲೆ ತೊಗಲಿನ ನೀರಿನ ಚೀಲ ಹೊತ್ತುಕೊಂಡು ತನ್ನ ನಾಯಿಯೊಂದಿಗೆ ಕರುಣಾಜನಕವಾಗಿ ಅಳುತ್ತಾ ಮರುಭೂಮಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ.

ಅಳುತ್ತಿರುವುದು ಏಕೆಂದು ಯಾರೋ ಕೇಳಿದಾಗ ಹೇಳಿದ, “ಏಕೆಂದರೆ, ನನ್ನ ನಾಯಿ ದಾಹದಿಂದ ಸಾಯುತ್ತಿದೆ.”

“ಹಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಏಕೆ ಕೊಡುತ್ತಿಲ್ಲ?” ಎಂಬುದಾಗಿ ಮರುಪ್ರಶ್ನೆ ಹಾಕಿದಾಗ, ಬೆಡುಇನ್‌ ಉತ್ತರಿಸಿದ, “ಏಕೆಂದರೆ, ನನಗೇ ನೀರು ಬೇಕಾಗಬಹುದು.”

*****

೩೯. ಸೂಫಿಗಳ ಪ್ರಾರ್ಥನೆ

ಸೂಫಿಗಳು ಮೊದಲನೆಯ ಸಲ ’ಅಲ್ಲಾ ಹು ಅಕ್ಬರ್‌’ ಅಂದಾಗ ಅವರು ಜಗತ್ತನ್ನೂ ಅದರ ನಿವಾಸಿಗಳನ್ನೂ ಮರೆಯುತ್ತಾರೆ.

ಎರಡನೆಯ ಸಲ ’ಅಲ್ಲಾ ಹು ಅಕ್ಬರ್‌’ ಅಂದಾಗ ಅವರು ಮುಂದಿನದ್ದನ್ನು/ಪರಲೋಕವನ್ನು ಮರೆಯುತ್ತಾರೆ.

ಮೂರನೆಯ ಸಲ ’ಅಲ್ಲಾ ಹು ಅಕ್ಬರ್‌’ ಅಂದಾಗ ಅವರು ದೇವರ ಹೊರತಾಗಿ ಮಿಕ್ಕ ಎಲ್ಲ ಆಲೋಚನೆಗಳನ್ನೂ ತಮ್ಮ ಹೃದಯದಿಂದ ಹೊರಹಾಕುತ್ತಾರೆ.

ನಾಲ್ಕನೆಯ ಸಲ ’ಅಲ್ಲಾ ಹು ಅಕ್ಬರ್‌’ ಅಂದಾಗ ಅವರು ತಮ್ಮನ್ನು ತಾವೇ ಮರೆಯುತ್ತಾರೆ.

*****

೪೦. ಬೋಹ್‌ಲುಲ್‌ ಮತ್ತು ಸೇತುವೆ

ನದಿ ನೀರಿನ ಹರಿಯುವಿಕೆಯನ್ನು ನೋಡುತ್ತಾ ಒಂದು ಸೇತುವೆಯ ಮೇಲೆ ಕುಳಿತಿದ್ದ ಬೋಹ್‌ಲುಲ್‌. ರಾಜ ಅವನನ್ನು ನೋಡಿದ, ತಕ್ಷಣ ದಸ್ತಗಿರಿ ಮಾಡಿಸಿದ.

ರಾಜ ಹೇಳಿದ, “ಸೇತುವೆ ಇರುವುದು ನದಿಯನ್ನು ದಾಟಲೋಸುಗ, ಅಲ್ಲಿಯೇ ಉಳಿದುಕೊಳ್ಳಲು ಅಲ್ಲ.”

ಬೋಹ್‌ಲುಲ್ ಉತ್ತರಿಸಿದ, “ನೀವೊಮ್ಮೆ ನಿಮ್ಮನ್ನೇ ನೋಡಿಕೊಳ್ಳುವುದು ಒಳ್ಳೆಯದು. ಈ ಜೀವನಕ್ಕೆ ಹೇಗೆ ಅಂಟಿಕೊಂಡಿದ್ದೀರಿ ಎಂಬುದನ್ನೊಮ್ಮೆ ಗಮನಿಸುವುದು ಒಳ್ಳೆಯದು.”

*****

೪೧. ಬಾಸ್ರಾದ ಹಸನ್‌ನಿಗೆ ರಬಿ’ಆ ಳ ಉಡುಗೊರೆಗಳು

ರಬಿ’ಆ ಅಲ್‌-ಅದವಿಯ್ಯಾ ಬಾಸ್ರಾದ ಹಸನ್‌ನಿಗೆ ಮೂರು ವಸ್ತುಗಳನ್ನು ಕಳುಹಿಸಿದಳು – ಮೇಣದ ಒಂದು ತುಂಡು, ಒಂದು ಸೂಜಿ, ಒಂದು ಕೂದಲು.

ಅವಳು ಹೇಳಿದಳು, “ಮೇಣದಂತಿರು. ಜಗತ್ತನ್ನು ಬೆಳಗಿಸು, ನೀನು ಸುಟ್ಟು ಬೂದಿಯಾಗು. ಅನಲಂಕೃತವಾಗಿ ಯಾವಾಗಲೂ ಕೆಲಸ ಮಾಡುತ್ತಿರುವ ಸೂಜಿಯಂತಿರು. ಈ ಎರಡು ಕೆಲಸಗಳನ್ನು ನೀನು ಮಾಡಿದಾಗ ಒಂದು ಸಾವಿರ ವರ್ಷಗಳು ನಿನಗೆ ಒಂದು ಕೂದಲಿನಂತೆ ಭಾಸವಾಗುತ್ತದೆ.”

ರಬಿ’ಆ ಳನ್ನು ಹಸನ್‌ ಕೇಳಿದ, “ನಾವು ಮದುವೆ ಆಗಬೇಕೆಂಬುದು ನಿನ್ನ ಅಪೇಕ್ಷೆಯೇ?”

ರಬಿ’ಆ ಉತ್ತರಿಸಿದಳು, “ಸ್ವತಂತ್ರ ಅಸ್ತಿತ್ವ ಉಳ್ಳವರಿಗೆ ವಿವಾಹ ಬಂಧನ ಅನ್ವಯಿಸುತ್ತದೆ. ನನ್ನ ವಿಷಯದಲ್ಲಿ ಸ್ವತಂತ್ರ ಅಸ್ತಿತ್ವ ಮಾಯವಾಗಿದೆ. ನಾನು ನನ್ನನ್ನು ಇಲ್ಲವಾಗಿಸಿದ್ದೇನೆ. ನಾನು ‘ಅವನ’ ಮೂಲಕ ಮಾತ್ರವೇ ಅಸ್ತಿತ್ವದಲ್ಲಿದ್ದೇನೆ. ನಾನು ಸಂಪೂರ್ಣವಾಗಿ ‘ಅವನ’ ಸ್ವಾಮ್ಯದಲ್ಲಿ ಇದ್ದೇನೆ. ‘ಅವನ’ ನಿಯಂತ್ರಣದ ನೆರಳಿನಲ್ಲಿ ನಾನು ಜೀವಿಸುತ್ತಿದ್ದೇನೆ. ನನ್ನ ಕೈಹಿಡಿಯಬೇಕಾದರೆ ನೀನು ‘ಅವನನ್ನು’ ಕೇಳಬೇಕು, ನನ್ನನ್ನಲ್ಲ.”

ಹಸನ್‌ ಕೇಳಿದ, “ಈ ರಹಸ್ಯ ನಿನಗೆ ತಿಳಿದಿದ್ದಾದರೂ ಹೇಗೆ ರಬಿ’ಆ?”

ರಬಿ’ಆ ಉತ್ತರಿಸಿದಳು, “ನಾನು ‘ದೊರಕಿಸಿಕೊಂಡ’ ಎಲ್ಲವನ್ನೂ ‘ಅವನಲ್ಲಿ’ ಕಳೆದುಕೊಂಡೆ.”

ಹಸನ್‌ ವಿಚಾರಿಸಿದ, “ನಿನಗೆ ‘ಅವನು’ ಹೇಗೆ ಗೊತ್ತು?”

ರಬಿ’ಆ ಹೇಳಿದಳು, “ ನಿನಗೆ ‘ಹೇಗೆ’ ಗೊತ್ತು, ನನಗಾದರೋ ‘ಹೇಗಲ್ಲ’ ಗೊತ್ತು.”

*****

೪೨. ಸೂಫಿಗಳ ಹಾಗೂ ಧು ನನ್‌ನ ವಿರುದ್ಧವಾಗಿದ್ದವ

ಒಬ್ಬ ಯುವಕ ಯಾವಾಗಲೂ ಸೂಫಿಗಳ ವಿರುದ್ಧ ಮಾತನಾಡುತ್ತಿದ್ದ. ಒಂದು ದಿನ ಧು ನನ್‌ ತನ್ನ ಕೈಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಅವನಿಗೆ ಕೊಟ್ಟು ಹೇಳಿದ, “ಇದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಒಂದು ಡಾಲರ್‌ಗೆ ಮಾರಾಟ ಮಾಡು.”

ಆ ಯುವಕ ಅದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸಿದಾಗ ಯಾರೂ ಅದಕ್ಕೆ ೧೦ ಸೆಂಟ್‌ಗಳಿಗಿಂತ ಹೆಚ್ಚು ಹಣ ಕೊಡಲು ಸಿದ್ಧರಿರಲಿಲ್ಲ. ಆತ ಹಿಂದಿರುಗಿ ಬಂದು ಧು ನನ್‌ಗೆ ವಿಷಯ ತಿಳಿಸಿದ.

“ಈಗ ಇದನ್ನು ಆಭರಣದ ವ್ಯಾಪಾರಿಗಳ ಹತ್ತಿರ ತೆಗೆದುಕೊಂಡು ಹೋಗು. ಅವರು ಅದಕ್ಕೆ ಏನು ಬೆಲೆ ಕೊಡಲು ಸಿದ್ಧರಿರುತ್ತಾರೆ ಎಂಬುದನ್ನು ಗಮನಿಸು,’ ಎಂಬುದಾಗಿ ಹೇಳಿದ ಧು ನನ್‌.

ಆಭರಣದ ವ್ಯಾಪಾರಿಗಳು ಅದಕ್ಕೆ ೧೦೦೦ ಡಾಲರ್‌ ಕೊಡಲು ಸಿದ್ಧರಿದ್ದರು.

ಯುವಕ ಹಿಂದಿರುಗಿ ಬಂದಾಗ ಧು ನನ್‌ ಹೇಳಿದ, “ಮಾರುಕಟ್ಟೆಯಲ್ಲಿ ಇದ್ದವರಿಗೆ ಉಂಗುರದ ಕುರಿತು ಎಷ್ಟು ತಿಳಿದಿತ್ತೋ ಅಷ್ಟೇ ಸೂಫಿ ಕುರಿತು ನಿನಗೆ ತಿಳಿದಿದೆ.”

ಯುವಕ ತನ್ನ ವರ್ತನೆಗಾಗಿ ಪಶ್ಚಾತ್ತಾಪ ಪಟ್ಟು ಅಂದಿನಿಂದ ಸೂಫಿಗಳನ್ನು ಅಪನಂಬಿಕೆಯಿಂದ ನೋಡುವುದನ್ನು ಬಿಟ್ಟುಬಿಟ್ಟ.

*****

೪೩. ಬಯಾಝಿದ್‌ ಅಲ್‌-ಬಿಸ್ತಾಮಿ ಅವರಿಂದ ನಮ್ರತೆಯನ್ನು ಕಲಿಯುವುದು

ಬೆಸ್ತಾಮ್‌ನ ಮಹಾನ್‌ ಸಂತರುಗಳ ಪೈಕಿ ಒಬ್ಬ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ಸಂನ್ಯಾಸಿಯೊಬ್ಬನಿದ್ದ. ಅವನಿಗೆ ಅವನದೇ ಆದ ಅನುಯಾಯಿಗಳೂ ಅಭಿಮಾನಿಗಳೂ ಇದ್ದರು. ಆದರೂ, ಆತ ಬಯಾಝಿದ್‌ ಅಲ್‌-ಬಿಸ್ತಾಮಿ (ಅಥವ ಅಬು ಯಾಝಿದ್‌ ಅಲ್‌-ಬಿಸ್ತಾಮಿ) ಅವರ ಅನುಯಾಯಿ ವಲಯದಲ್ಲಿಯೇ ಸದಾ ಇರುತ್ತಿದ್ದ. ಅವರ ಎಲ್ಲ ಪ್ರವಚನಗಳನ್ನೂ ಕೇಳುತ್ತಿದ್ದ, ಅವರ ಸಹಚರರೊಂದಿಗೇ ಕುಳಿತುಕೊಳ್ಳುತ್ತಿದ್ದ.

ಒಂದು ದಿನ ಅವನು ಅಬು ಯಾಝಿದ್‌ರಿಗೆ ಹೇಳಿದ, “ಗುರುಗಳೇ, ಕಳೆದ ೩೦ ವರ್ಷಗಳಿಂದಲೂ ನಿರಂತರವಾಗಿ ನಾನು ಹಗಲು ಹೊತ್ತು ಉಪವಾಸ ಮಾಡುತ್ತಿದ್ದೇನೆ. ರಾತ್ರಿಯ ವೇಳೆ ನಿದ್ದೆ ಮಾಡದೆಯೇ ಪ್ರಾರ್ಥನೆ ಮಾಡುತ್ತಿದ್ದೇನೆ. ಆದರೂ ನೀವು ಹೇಳುವ ಜ್ಞಾನದ ಕುರುಹೂ ನನಗೆ ಸಿಕ್ಕಿಲ್ಲ. ಆದರೂ ಈ ಜ್ಞಾನದಲ್ಲಿ ನನಗೆ ನಂಬಿಕೆ ಇದೆ, ಈ ಕುರಿತಾದ ಪ್ರವಚನಗಳು ನನಗೆ ಬಹಳ ಪ್ರಿಯವಾದವು.”

ಅಬು ಯಾಝಿದ್‌ ಹೇಳಿದರು, “ ಇನ್ನೂ ಮುನ್ನೂರು ವರ್ಷಗಳ ಕಾಲ ನೀನು ಹಗಲು ಉಪವಾಸ-ರಾತ್ರಿ ಪ್ರಾರ್ಥನೆ ಮಾಡಿದರೂ ಈ ಪ್ರವಚನಗಳಲ್ಲಿ ಹೇಳಿದ್ದರ ಒಂದು ಅಣು ಮಾತ್ರದಷ್ಟನ್ನೂ ಸಾಕ್ಷಾತ್ಕರಿಸಿಕೊಳ್ಳುವುದಿಲ್ಲ.”

ಆತ ಕೇಳಿದ, “ಏಕೆ?”

ಅಬು ಯಾಝಿದ್‌ ಉತ್ತರಿಸಿದರು, “ಏಕೆಂದರೆ ನಿನ್ನ ಅಹಂನ ಪರದೆ ನಿನ್ನನ್ನು ಆವರಿಸಿಕೊಂಡಿದೆ.”

ಆತ ಕೇಳಿದ, “ಇದಕ್ಕೇನು ಪರಿಹಾರ?”

ಅಬು ಯಾಝಿದ್‌ ಉತ್ತರಿಸಿದರು, “ನೀನು ಅದನ್ನೂ ಎಂದಿಗೂ ಒಪ್ಪಿಕೊಳ್ಳುವುದಿಲ್ಲ.”

ಆತ ಹೇಳಿದ, “ನಾನು ಒಪ್ಪಿಕೊಳ್ಳುತ್ತೇನೆ. ಅದೇನೆಂಬುದನ್ನು ಹೇಳಿ, ನೀವು ಹೇಳಿದಂತೆ ಮಾಡುತ್ತೇನೆ.”

ಅಬು ಯಾಝಿದ್‌ ಹೇಳಿದರು, “ಸರಿ ಹಾಗಾದರೆ. ಈಗಲೇ ಹೋಗಿ ನಿನ್ನ ಗಡ್ಡ, ಮೀಸೆ, ತಲೆ ಬೋಳಿಸಿಕೊ. ಈಗ ನೀನು ಧರಿಸಿರುವ ಉಡುಗೆಗಳನ್ನು ಕಳಚಿ ಹಾಕು. ಮೇಕೆಯ ಉಣ್ಣೆಯಿಂದ ಮಾಡಿದ ಕೌಪೀನವನ್ನು ನಿನ್ನ ಸೊಂಟಕ್ಕೆ ಕಟ್ಟಿಕೊ. ನಿನ್ನ ಕುತ್ತಿಗೆಗೆ ನೆಲಗಡಲೆ ಇರುವ ಚೀಲ ನೇತು ಹಾಕಿಕೊ. ಆ ನಂತರ ಮಾರುಕಟ್ಟೆಗೆ ಹೋಗಿ ಅಲ್ಲಿರುವ ಮಕ್ಕಳನ್ನೆಲ್ಲ ನಿನ್ನ ಸಮೀಪಕ್ಕೆ ಕರೆದು ಅವರಿಗೆ ಹೇಳು, ’ನನಗೆ ಒಂದು ಪೆಟ್ಟು ಕೊಡುವವರಿಗೆಲ್ಲ ಒಂದೊಂದು ನೆಲಗಡಲೆ ಕೊಡುತ್ತೇನೆ.’ ತದನಂತರ ನಗರದಾದ್ಯಂತ, ವಿಶೇಷವಾಗಿ ನಿನ್ನ ಪರಿಚಿತರು ಇರುವೆಡೆ, ಸುತ್ತು ಹಾಕಿ ಇದೇ ರೀತಿ ಮಾಡು. ಇದೇ ನಿನಗೆ ತಕ್ಕುದಾದ ಪರಿಹಾರೋಪಾಯ.”

ಈ ಪದಗಳನ್ನು ಕೇಳಿದೊಡನೆ ಆತ ಗಟ್ಟಿಯಾಗಿ ಕೂಗಿ ಹೇಳಿದ, “ದೇವರಿಗೆ ಜಯವಾಗಲಿ! ದೇವರು ಇರುವುದು ನಿಜ.”

ಅಬು ಯಾಝಿದ್‌ ಉದ್ಗರಿಸಿದರು, “ನಾಸ್ತಿಕನೊಬ್ಬ ಈ ಘೋಷಣೆ ಕೂಗಿ ಹೇಳಿದ್ದರೆ ಅವನು ಆಸ್ತಿಕನಾಗುತ್ತಿದ್ದ. ನೀನಾದರೋ ಇಂತು ಘೋಷಿಸಿ ಬಹುದೇವತಾ ಸಿದ್ಧಾಂತಿಯಾದೆ.”

ಆತ ಕೇಳಿದ, “ಅದು ಹೇಗೆ?”

ಅಬು ಯಾಝಿದ್‌ ಉತ್ತರಿಸಿದರು, “ನಾನು ಹೇಳಿದ್ದನ್ನು ಮಾಡಬಾರದಷ್ಟು ದೊಡ್ಡಮನುಷ್ಯ ಎಂಬುದಾಗಿ ನಿನ್ನನ್ನು ನೀನು ಪರಿಗಣಿಸಿರುವೆ. ಎಂದೇ, ನೀನು ಬಹುದೇವಾತಾ ಸಿದ್ಧಾಂತಿ. ನೀನು ಈ ಘೋಷಣೆಯನ್ನು ಕೂಗಿ ಹೇಳಿದ್ದು ದೇವರನ್ನು ಹೊಗಳಲು ಅಲ್ಲ, ನಿನ್ನ ಪ್ರಾಮುಖ್ಯವನ್ನು ಅಭಿವ್ಯಕ್ತಿಗೊಳಿಸಲೋಸುಗ.”

ಆತ ಆಕ್ಷೇಪಿಸಿದ, “ಇದನ್ನು ನಾನು ಮಾಡಲಾರೆ. ನನಗೆ ನೀವು ಬೇರೆ ಪರಿಹಾರೋಪಾಯಗಳನ್ನು ಸೂಚಿಸಿ.”

ಅಬು ಯಾಝಿದ್‌ ಘೋಷಿಸಿದರು, “ನಾನು ಹೇಳಿದ್ದೇ ಪರಿಹಾರೋಪಾಯ.”

ಆತ ಉತ್ತರಿಸಿದ, “ಅದನ್ನು ನಾನು ಮಾಡಲಾರೆ.”

ಅಬು ಯಾಝಿದ್‌ ಹೇಳಿದರು, “ನೀನು ಎಂದೆಂದಿಗೂ ನಾನು ಹೇಳಿದಂತೆ ಮಾಡುವುದಿಲ್ಲ ಎಂಬುದಾಗಿ ಈ ಮೊದಲೇ ಹೇಳಿದ್ದೆನಲ್ಲವೇ?”

*****

೪೪. ರಬಿ’ಆ ಳೂ ಪಂಡಿತನೂ

ರಬಿ’ಆ ಅಲ್‌-ಅದವಿಯ್ಯಾ ಅನಾರೋಗ್ಯದಿಂದ ನರಳುತ್ತಿದ್ದಾಗ ಬಾಸ್ರಾದ ಖ್ಯಾತ ಪಂಡಿತನೊಬ್ಬ ಅವಳನ್ನು ಭೇಟಿಮಾಡಲು ಬಂದ. ಅವಳ ತಲೆದಿಂಬಿನ ಪಕ್ಕದಲ್ಲಿ ಕುಳಿತುಕೊಂಡು ಪ್ರಪಂಚ ಎಷ್ಟು ಭಯಾನಕವಾದದ್ದು ಎಂಬುದರ ಕುರಿತು ಆತ ಮಾತನಾಡಿದ.

ರಬಿ’ಆ ಪ್ರತಿಕ್ರಿಯಿಸಿದಳು, “ನೀನು ಪ್ರಪಂಚವನ್ನು ಬಹುವಾಗಿ ಪ್ರೀತಿಸುತ್ತಿರುವೆ. ನೀನು ಪ್ರಪಂಚವನ್ನು ಪ್ರೀತಿಸದೇ ಇರುತ್ತಿದ್ದರೆ ಅದರ ಕುರಿತು ಇಷ್ಟೊಂದು ಮಾತನಾಡುತ್ತಿರಲಿಲ್ಲ. ಕೊಂಡುಕೊಳ್ಳುವವನು ಯಾವಾಗಲೂ ತಾನು ಕೊಂಡುಕೊಳ್ಳಬಯಸಿದ್ದನ್ನು ಹೀನೈಸಿ ಮಾತನಾಡುತ್ತಾನೆ. ನೀನು ಪ್ರಪಂಚದೊಂದಿಗಿನ ವ್ಯವಾಹರವನ್ನು ಮುಗಿಸಿದ್ದಿದ್ದರೆ ಅದರ ಒಳ್ಳೆಯ ಅಥವ ಕೆಟ್ಟ ಅಂಶಗಳನ್ನು ಉಲ್ಲೇಖಿಸುತ್ತಲೇ ಇರಲಿಲ್ಲ. ಈಗ ನೀನು ಅದನ್ನು ಆಗಿಂದಾಗ್ಯೆ ಉಲ್ಲೇಖಿಸುತ್ತಿರುವೆ. ಏಕೆಂದರೆ ಗಾದೆಯೊಂದರ ಪ್ರಕಾರ ಯಾರು ಏನನ್ನು ಪ್ರೀತಿಸುತ್ತಾರೋ ಅದನ್ನು ಆಗಿಂದಾಗ್ಯೆ ಉಲ್ಲೇಖಿಸುತ್ತಲೇ ಇರುತ್ತಾರೆ.”

*****

೪೫. ಕಲಾವಿದರ ಕತೆ

ಸುಲ್ತಾನ ಶೋಯೆಬ್‌ನ ಸಮ್ಮುಖದಲ್ಲಿ ಚೀನೀ ಕಲಾವಿದರ ಹಾಗೂ ಗ್ರೀಕ್‌ ಕಲಾವಿದರ ಪುಟ್ಟ ಗುಂಪುಗಳ ನಡುವೆ ಯಾರಲ್ಲಿ ಮೇಲ್ದರ್ಜೆಯ ಕಲಾ ಕುಶಲತೆ ಇದೆ ಎಂಬುದರ ಕುರಿತು ಜಗಳವಾಯಿತು. ಮಹಾನ್‌ ಕುಶಲತೆಗಳು ಅಧಿಕ ಸಂಖ್ಯೆಯಲ್ಲಿ ತಮ್ಮಲ್ಲಿ ಇವೆಯೆಂದು ಚೀನೀ ಕಲಾವಿದರು ಘೋಷಿಸಿದರು, ತಾವು ಕಲೆಯ ಮೇಲೆ ಪ್ರಭುತ್ವ ಸಾಧಿಸಿರುವುದಾಗಿ ಗ್ರೀಕ್‌ ಕಲಾವಿದರು ಘೋಷಿಸಿದರು.

ಅವೆರಡೂ ಗುಂಪುಗಳ ನಡುವೆ ಸ್ಪರ್ಧೆಯೊಂದನ್ನು ಏರ್ಪಡಿಸುವುದರ ಮೂಲಕ ವಿವಾದವನ್ನು ಪರಿಹರಿಸಲು ಸುಲ್ತಾನ ನಿರ್ಧರಿಸಿದ. ಅರಮನೆಯ ಸಮೀಪದಲ್ಲಿ ಇದ್ದ ಬೆಟ್ಟದ ತುದಿಯಲ್ಲಿ ಎರಡು ಖಾಲಿ ಮನೆಗಳು ಇದ್ದವು. ಒಂದು ಮನೆಗೆ ಬಣ್ಣ ಹಾಕುವಂತೆ ಚೀನೀ ಗುಂಪಿಗೂ ಇನ್ನೊಂದಕ್ಕೆ ಬಣ್ಣ ಹಾಕುವಂತೆ ಗ್ರೀಕ್‌ ಗುಂಪಿಗೂ ಸುಲ್ತಾನ ಆದೇಶಿಸಿದ. ೧೦೦ ಬಣ್ಣಗಳನ್ನು ಒದಗಿಸುವಂತೆ ಚೀನೀ ಕಲಾವಿದರು ಕೇಳಿದರು. ಗ್ರೀಕ್‌ ಕಲಾವಿದರಾದರೋ ತಮಗೆ ಬಣ್ಣಗಳೇ ಬೇಡ ಎಂದರು.

ಚೀನೀ ಕಲಾವಿದರು ತಮ್ಮ ಕೆಲಸ ಮುಗಿಸಿದ ನಂತರ ಡೋಲುಬಡಿಯುತ್ತಾ ಕುಣಿದು ಸಂಭ್ರಮಿಸಿದರು. ತಮ್ಮ ಕೆಲಸದ ಮೌಲ್ಯಮಾಪನ ಮಾಡಲು ಅವರು ಸುಲ್ತಾನನನ್ನು ಆಹ್ವಾನಿಸಿದರು. ಊಹಿಸಬಹುದಾದ ಪ್ರತಿಯೊಂದು ಬಣ್ಣವನ್ನೂ ಉಪಯೋಗಿಸಿ ಅವರು ಬಲು ಪರಿಶ್ರಮದಿಂದ ಮನೆಗೆ ಬಣ್ಣ ಹಾಕಿದ್ದರು. ಎಂದೇ, ಅವರ ಕೆಲಸ ಸುಲ್ತಾನನ ಮೇಲೆ ಒಳ್ಳೆಯ ಪರಿಣಾಮ ಉಂಟುಮಾಡಿತು.

ಗ್ರೀಕ್‌ ಕಲಾವಿದರಾದರೋ ಯಾವುದೇ ಬಣ್ಣವನ್ನು ಉಪಯೋಗಿಸಿರಲಿಲ್ಲ. ಅವರು ತಮಗೆ ನಿಗದಿಯಾಗಿದ್ದ ಮನೆಯ ಗೋಡೆಗಳನ್ನು ಅವು ಹೊಳೆಯುವಷ್ಟು ಸ್ವಚ್ಛ ಮಾಡಿದ್ದರು. ತತ್ಪರಿಣಾಮವಾಗಿ ಅವು ಚೀನೀ ಕಲಾವಿದರು ಬಣ್ಣ ಹಾಕಿದ್ದ ಗೋಡೆಗಳ ಮೇಲಿನ ಬಣ್ಣಗಳನ್ನೂ ಸುತ್ತಣ ನಿಸರ್ಗದ ಬಣ್ಣಗಳನ್ನೂ ಪ್ರತಿಫಲಿಸುತ್ತಿದ್ದದ್ದರಿಂದ ಅತ್ಯದ್ಭುತವಾಗಿ ಕಾಣುತ್ತಿದ್ದವು.

*****

೪೬. ಸಿಕ್ಕಿಹಾಕಿಕೊಂಡ ಕೈ

ಒಂದು ಬೇಸಿಗೆಯ ಶನಿವಾರ ಅಪರಾಹ್ನ ಖುರ್ರಮ್‌ನ ಹೆಂಡತಿ ಅವನಿಗೆ ಬಲು ಪ್ರೀತಿಯ ಪರ್ಶಿಯಾದ ನೆಲಗಡಲೆ ಭರಿತ ರುಚಿಯಾದ ಖಾದ್ಯವೊಂದನ್ನು ತಯಾರಿಸುವುದಾಗಿ ಭರವಸೆ ನೀಡಿದಳು. ತತ್ಪರಿಣಾಮವಾಗಿ ಅಡುಗೆಮನೆಯಲ್ಲಿ ಅವಳಿಗೆ ನೆರವಾಗಲು ಅತ್ಯುತ್ಸಾಹ ತೋರಿದ ಖುರ್ರಮ್. ಬಲು ಆನಂದದಿಂದ ನೆಲಗಡಲೆ ಇದ್ದ ಜಾಡಿಯೊಳಕ್ಕೆ ಕೈ ತೂರಿಸಿ ಸಾಧ್ಯವಾದಷ್ಟು ಹೆಚ್ಚು ನೆಲಗಡಲೆ ಬೀಜವನ್ನು ಕೈನಲ್ಲಿ ತೆಗೆದುಕೊಂಡ. ಜಾಡಿಯಿಂದ ಬೀಜಭರಿತ ಕೈಯನ್ನು ಹೊರತೆಗೆಯಲು ಪ್ರಯತ್ನಿಸಿದಾಗ ಅದು ಜಾಡಿಯಲ್ಲಿ ಸಿಕ್ಕಿಹಾಕಿಕೊಂಡಿತು. ಕೈಯನ್ನು ಜಾಡಿಯಿಂದ ಹೊರಗೆಳೆಯಲು ಅವನು ಎಷ್ಟು ಬಲ ಪ್ರಯೋಗಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವನ ಹೆಂಡತಿ ತನ್ನೆಲ್ಲಾ ಶಕ್ತಿಹಾಕಿ ಜಾಡಿಯನ್ನು ಎಳೆದರೂ ಏನೂ ಪ್ರಯೋಜನವಾಗಲಿಲ್ಲ. ಅವನ ಕೈ ಜಾಡಿಯ ಕುತ್ತಿಗೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು.

ಅನೇಕ ಸಲ ಪ್ರಯತ್ನಿಸಿ ಅಯಶಸ್ವಿಗಳಾದ ನಂತರ ಅವರು ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದರು. ಜಮಾಲ್‌ ಎಂಬ ಒಬ್ಬಾತ ತಕ್ಷಣ ಧಾವಿಸಿ ಬಂದು ಕೈ ಜಾಡಿಯಲ್ಲಿ ಸಿಕ್ಕಿಹಾಕಿಕೊಂಡದ್ದು ಹೇಗೆ ಎಂಬುದನ್ನು ವಿಚಾರಿಸಿದ. ನೋವಿನಿಂದ ಹತಾಶನಾಗಿದ್ದ ಖುರ್ರಮ್ ಆ ಕತೆಯನ್ನು ಹೇಳಿದ.

ಜಮಾಲ್‌ ಹೇಳಿದ, “ಜಾಡಿಯಿಂದ ಹೊರಕ್ಕೆ ಕೈ ತೆಗೆಯಲು ನಿನಗೆ ಹೇಗೆ ಸಹಾಯಮಾಡಬೇಕು ಎಂಬುದು ನನಗೆ ಗೊತ್ತಿದೆ. ಆದರೆ ಅದಕ್ಕೆ ನೀನು ನಾನು ಹೇಳಿದಂತೆ ಮಾಡಬೇಕು.”

ಖುರ್ರಮ್‌ ಉತ್ತರಿಸಿದ, “ಖಂಡಿತ. ನೀನು ಹೇಳಿದಂತೆಯೇ ನಾನು ಮಾಡುತ್ತೇನೆ. ಈ ಭೀಕರ ಜಾಡಿಯಿಂದ ನನಗೆ ಮುಕ್ತಿ ದೊರಕುವಂತೆ ಮಾಡು.”

ಜಮಾಲ್ ಹೇಳಿದ, “ಸರಿ ಹಾಗಾದರೆ. ಈಗ ನಿನ್ನ ಕೈಯನ್ನು ಜಾಡಿಯೊಳಕ್ಕೆ ತಳ್ಳು.”

ಖುರ್ರಮ್‌ನಿಗೆ ಈ ಸೂಚನೆ ತುಸು ವಿಚಿತ್ರವಾಗಿದೆ ಅನ್ನಸಿತು. ಕೈಯನ್ನು ಜಾಡಿಯಿಂದ ಹೊರತೆಗೆಯಬೇಕಾದರೆ ಅದನ್ನು ಒಳಕ್ಕೆ ಏಕೆ ತಳ್ಳಬೇಕು ಎಂಬುದು ಅವನಿಗೆ ಅರ್ಥವಾಗಲಿಲ್ಲವಾದರೂ ಜಮಾಲ್‌ ಹೇಳಿದಂತೆಯೇ ಮಾಡಿದ.

ಜಮಾಲ್‌ ಮುಂದುವರಿಸಿದ, “ಈಗ ನೀನು ಮುಷ್ಟಿ ಬಿಡಿಸಿ ಹಿಡಿದುಕೊಂಡಿರುವ ಬೀಜಗಳನ್ನು ಬಿಟ್ಟುಬಿಡು.” ಈ ಸೂಚನೆ ಖುರ್ರಮ್‌ಗೆ ಅಪ್ರಿಯವಾದದ್ದಾಗಿತ್ತು ಏಕೆಂದರೆ ತನ್ನ ಪ್ರಿಯವಾದ ಖಾದ್ಯ ತಯಾರಿಸಲು ಆ ಬೀಜಗಳು ಬೇಕಿತ್ತು. ಇಷ್ಟವಿಲ್ಲದಿದ್ದರೂ ಆತ ಅರೆಮನಸ್ಸಿನಿಂದ ಜಮಾಲ್‌ ಹೇಳಿದಂತೆ ಮಾಡಿದ.

ತದನಂತರ ಜಮಾಲ್‌ ಹೇಳಿದ, “ಈಗ ನಿನ್ನ ಅಂಗೈಯನ್ನು ಸಾಧ್ಯವಿರುವಷ್ಟು ಚಿಕ್ಕದಾಗಿ ಮುದುಡಿಕೊಂಡು ನಿಧಾನವಾಗಿ ಜಾಡಿಯಿಂದ ಕೈಯನ್ನು ಹೊರತೆಗೆ.”

ಖೂರ್ರಮ್‌ ಅಂತೆಯೇ ಮಾಡಿದಾಗ ಯಾವ ತೋದರೆಯೂ ಇಲ್ಲದೇ ಕೈ ಜಾಡಿಯಿಂದ ಹೊರಬಂದಿತು. ಅಲ್ಲಿ ನೆರೆದಿದ್ದ ನೆರೆಹೊರೆಯವರು ಕೈ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು. ಆದರೆ, ಖುರ್ರಮ್‌ನಿಗೆ ಸಂಪೂರ್ಣ ತೃಪ್ತಿ ಅಗಿರಲಿಲ್ಲ. ಅವನು ಕೇಳಿದ, “ನನ್ನ ಕೈ ಹೊರ ಬಂದಿತು. ಆದರೆ ನೆಲಗಡಲೆ ಬೀಜದ ವಿಷಯ ಏನು?”

ಇದನ್ನು ಕೇಳಿದ ಜಮಾಲ್ ನಸುನಕ್ಕು ಜಾಡಿಯನ್ನು ಒಂದು ತಟ್ಟೆಯ ಮೇಲೆ ಓರೆ ಮಾಡಿ ಅನೇಕ ಬೀಜಗಳನ್ನು ತಟ್ಟೆಗೆ ಬೀಳಿಸಿದ. ಇದನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಖುರ್ರಮ್‌ ಆಶ್ಚರ್ಯದಿಂದ ಕೇಳಿದ, “ನೀನೊಬ್ಬ ಜಾದೂಗಾರನೇ?”

*****

೪೭. ಅಂಬಿಗನೂ ಅಧ್ಯಾಪಕನೂ

ತನ್ನ ದೋಣಿಯಲ್ಲಿ ವಿಹಾರಾರ್ಥ ಕ್ಯಾಸ್ಪಿಯನ್‌ ಸಮುದ್ರದಲ್ಲಿ ಒಂದು ಸುತ್ತು ಹಾಕಲು ಅಂಬಿಗ ಆರ್ಯ ಹಳ್ಳಿ ಶಾಲೆಯ ಅಧ್ಯಾಪಕನನ್ನು ಆಹ್ವಾನಿಸಿದ. ಮೆತ್ತೆ ಇದ್ದ ಆಸನದಲ್ಲಿ ಆರಾಮವಾಗಿ ಕುಳಿತ ಅಧ್ಯಾಪಕ ಆರ್ಯನನ್ನು ಕೇಳಿದ, “ಇವತ್ತು ನಮಗೆ ಯಾವ ರೀತಿಯ ಹವಾಮಾನ ಎದುರಾಗುತ್ತದೆ?”

ಆರ್ಯ ಗಾಳಿ ಬೀಸುವ ದಿಕ್ಕನ್ನು ಪರೀಕ್ಷಿಸಿದ, ತಲೆಯೆತ್ತಿ ಸೂರ್ಯನ ಆಸುಪಾಸಿನ ಆಕಾಶ ನೋಡಿದ. ತದನಂತರ ಹುಬ್ಬುಗಂಟಿಕ್ಕಿ ಹೇಳಿದ, “ನೀವು ನನ್ನನ್ನು ಕೇಳುವುದಾದರೆ, ನನ್ನ ಪ್ರಕಾರ ಇವತ್ತು ನಮಗೆ ಬಿರುಗಾಳಿ ಸಿಕ್ಕುತ್ತದೆ.”

ವ್ಯಾಕರಣ ದೋಷಗಳುಳ್ಳ ಈ ಮಾತುಗಳನ್ನು ಕೇಳಿ ಅಧ್ಯಾಪಕನಿಗೆ ಅಸಹ್ಯವಾಯಿತು. ಅವನು ಮುಖ ಸಿಂಡರಿಸಿ ಟೀಕಿಸುವ ಧ್ವನಿಯಲ್ಲಿ ಕೇಳಿದ, “ಆರ್ಯ, ನೀನು ಈ ರೀತಿ ಮಾತನಾಡಬಾರದು. ನೀನು ಹೇಳಿದ ವಾಕ್ಯಗಳಲ್ಲಿ ತುಂಬಾ ವ್ಯಾಕರಣ ದೋಷಗಳಿವೆ. ನೀನು ವ್ಯಾಕರಣ ಕಲಿತೇ ಇಲ್ಲವೇ?” ಈ ಟೀಕೆಗೆ ಭುಜ ಹಾರಿಸುವುದಷ್ಟೇ ಆರ್ಯನ ಪ್ರಮುಖ ಪ್ರತಿಕ್ರಿಯೆ ಆಗಿತ್ತು. ಅವನು ಕೇಳಿದ, “ನಾನೇಕೆ ಕಲಿಯಬೇಕು? ವ್ಯಾಕರಣದಿಂದ ನನಗೆ ಏನು ಉಪಯೋಗ?” ಈ ಅನಿರೀಕ್ಷಿತ ಉತ್ತರದಿಂದ ದಿಗ್ಭ್ರಮೆಗೊಂಡ ಅಧ್ಯಾಪಕ ಹೇಳಿದ, “ಏನು? ನಿನಗೆ ವ್ಯಾಕರಣ ತಿಳಿದಿಲ್ಲವೇ? ನಿನ್ನ ಅರ್ಧ ಆಯುಷ್ಯ ಗಟಾರದಲ್ಲಿ ಕೊಚ್ಚಿಕೊಂಡು ಹೋಯಿತೆಂದು ತಿಳಿ.”

ಆ ವೇಳೆಗೆ ಸರಿಯಾಗಿ ಆರ್ಯ ಭವಿಷ್ಯ ನುಡಿದಿದ್ದಂತೆ ದಿಗಂತದಲ್ಲಿ ಕಾರ್ಮೋಡಗಳು ದಟ್ಟೈಸಲಾರಂಭಿಸಿದವು, ಗಾಳಿ ಜೋರಾಗಿ ಬೀಸಲಾರಂಭಿಸಿತು, ಅಲೆಗಳ ಏರಿಳಿತಗಳು ತೀವ್ರವಾಗಲಾರಂಭಿಸಿತು. ಪ್ರಕ್ಷುಬ್ದ ಸಮುದ್ರದಲ್ಲಿ ದೋಣಿ ಅತ್ತಿತ್ತ ಹೊಯ್ದಾಡಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ದೋಣಿಯ ಒಳಗೆ ನೀರು ತುಂಬಲಾರಂಭಿಸಿತು. ಅಧ್ಯಾಪಕನನ್ನು ಆರ್ಯ ಕೇಳಿದ, “ನೀವು ಈಜಲು ಕಲಿತಿದ್ದೀರೋ?”

ಅಧ್ಯಾಪಕ ಉತ್ತರಿಸಿದ, “ಇಲ್ಲ, ನಾನೇಕೆ ಈಜಲು ಕಲಿಯಬೇಕು?”

ಆರ್ಯ ಉತ್ತರಿಸಿದ, “ಸರಿ ಸರಿ. ನೀವು ಈಜು ಕಲಿಯದ್ದರಿಂದ ನಿಮ್ಮ ಇಡೀ ಆಯುಷ್ಯ ಗಟಾರದಲ್ಲಿ ಕೊಚ್ಚಿ ಹೋಗುತ್ತದೆ, ಏಕೆಂದರೆ ಯಾವುದೇ ಕ್ಷಣದಲ್ಲಿ ನಮ್ಮ ದೋಣಿ ಮುಳುಗುತ್ತದೆ!”

*****

೪೮. ಚದುರಂಗದಾಟದ ಕತೆ

ತಾಬಿಸ್ತಾನದ ರಾಜಕುಮಾರ ದಾಮವಂದ್‌ ಎಂಬಾತನೊಂದಿಗೆ ಚದುರಂಗ ಆಡುತ್ತಿದ್ದ. ಚದುರಂಗದ ಮಣೆಯ ಮೇಲೆ ಅಂತಿಮ ನಡೆಯನ್ನು ಮಾಡಿದ ನಂತರ ದಾಮವಂದ್ ’ಶಹಾಬಂದು’ (ಚೆಕ್‌ಮೇಟ್‌) ಎಂಬುದಾಗಿ ಘೋಷಿಸಿದ. ಇದರಿಂದ ಕೋಪಗೊಂಡ ರಾಜಕುಮಾರ ಚದುರಂಗದ ಕಾಯಿಗಳನ್ನು ಒಂದೊಂದಾಗಿ “ಇಗೋ, ನಿನ್ನ ಶಹಾಬಂದುವನ್ನು ತೆಗೆದುಕೋ” ಅನ್ನುತ್ತಾ  ದಾಮವಂದ್‌ ಮೇಲೆಸೆದ. ಪ್ರತೀ ಸಲ ಏಟು ಬಿದ್ದಾಗಲೂ “ಕರುಣೆ ಇರಲಿ” ಎಂಬುದಾಗಿ ದಾಮವಂದ್‌ ಕೂಗುತ್ತಲೇ ಇದ್ದ. ಆ ನಂತರ ಪುನಃ ಚದುರಂಗ ಆಡುವಂತೆ ದಾಮವಂದ್‌ನಿಗೆ ರಾಜಕುಮಾರ ಆಜ್ಞಾಪಿಸಿದ. ದಾಮವಂದ್ ಹೆದರಿ ನಡುಗುತ್ತಾ ರಾಜಕುಮಾರನ ಆಜ್ಞಾನುಸಾರ ಆಟವಾಡಿದ. ಎರಡನೆಯ ಬಾರಿಯೂ ರಾಜಕುಮಾರ ಸೋತಾಗ ಶಹಾಬಂದು ಎಂಬುದಾಗಿ ಘೋಷಿಸುವ ಮುನ್ನ ದಾಮವಂದ್‌ ಕೊಠಡಿಯ ಒಂದು ಮೂಲೆಗೆ ಓಡಿ ಹೋಗಿ ಪರ್ಸಿಯಾದ ಐದು ಕಂಬಳಿಗಳನ್ನು ಹೊದ್ದುಕೊಂಡು ಮಲಗಿದ.

“ಏಯ್‌, ಇದೇನು ಮಾಡುತ್ತಿರುವೆ?” ಕೇಳಿದ ರಾಜಕುಮಾರ.

“ಶಹಾಬಂದು! ಶಹಾಬಂದು! ಶಹಾಬಂದು!” ಕುಂದಿದ ಧ್ವನಿಯಲ್ಲಿ ಕಂಬಳಿಯ ಅಡಿಯಿಂದ ಘೋಷಿಸಿದ ದಾಮವಂದ್‌.

*****

೪೯. ದತ್ತು ಹಕ್ಕಿಮರಿಯ ಕತೆ

ಒಂದಾನೊಂದು ಕಾಲದಲ್ಲಿ ಹಾರಲಾರದ ಹೆಣ್ಣು ಪಕ್ಷಿಯೊಂದಿತ್ತು. ಕೋಳಿಯಂತೆ ನೆಲದ ಮೇಲೆ ನಡೆದಾಡುತ್ತಿದ್ದ ಅದಕ್ಕೆ ಕೆಲವು ಪಕ್ಷಿಗಳು ನಿಜವಾಗಿಯೂ ಹಾರುತ್ತಿದ್ದವು ಎಂಬುದು ತಿಳಿದಿತ್ತು. ಒಂದು ದಿನ ಅದು ಹಾರುವ ಪಕ್ಷಿಯ ಪರಿತ್ಯಕ್ತ ಮೊಟ್ಟೆಯೊಂದನ್ನು ನೋಡಿತು. ಮೊಟ್ಟೆಯೊಡೆದು ಮರಿ ಹೊರಬರುವ ವರೆಗೆ ಅದಕ್ಕೆ ಕಾವು ಕೊಡಲು ತೀರ್ಮಾನಿಸಿತು.

ಯುಕ್ತ ಸಮಯಾನಂತರ ಮೊಟ್ಟೆಯನ್ನು ಒಡೆದುಕೊಂಡು ಮರಿ ಹೊರಬಂದಿತು. ಅದು ಹಾರುವ ಸಾಮರ್ಥ್ಯವಿದ್ದ ಪಕ್ಷಿಯ ಮೊಟ್ಟಯಿಂದ ಹೊರಬಂದ ಮರಿಯಾದ್ದರಿಂದ ಅದಕ್ಕೂ ಹಾರುವ ಸಾಮರ್ಥ್ಯ ಹುಟ್ಟುವಾಗಲೇ ಇತ್ತು. ತುಸು ಬೆಳೆದ ನಂತರ ಅದು ತನ್ನನ್ನು ದತ್ತು ತೆಗೆದುಕೊಂಡಿದ್ದ ತಾಯಿಯನ್ನು ಕೇಳಿತು, “ನಾನು ಹಾರುವುದು ಯಾವಾಗ?” ಭೂ ಬಂಧಿತ ಪಕ್ಷಿ ಉತ್ತರಿಸಿತು, “ಇತರರಂತೆ ನಿನ್ನ ಪ್ರಯತ್ನಗಳನ್ನು ಪಟ್ಟುಬಿಡದೆ ಮುಂದುವರಿಸು.” ಮರಿಹಕ್ಕಿಗೆ ಹಾರುವುದು ಹೇಗೆಂಬುದನ್ನು ಕಲಿಸುವ ತಂತ್ರಗಳು ಆ ಹಕ್ಕಿಗೆ ತಿಳಿದಿರಲಿಲ್ಲ. ತನಗೆ ಹಾರಲು ಹೇಳಿಕೊಡಲು ಅದಕ್ಕೆ ಸಾಧ್ಯವಿಲ್ಲ ಎಂಬ ವಿಷಯ ಮರಿಹಕ್ಕಿಗೆ ಗೊತ್ತಿರಲಿಲ್ಲ. ತಾನು ಮೊಟ್ಟೆಯಿಂದ ಹೊರಬರಲು ಕಾರಣವಾದ ಹಕ್ಕಿಯ ಕುರಿತು ಮರಿಹಕ್ಕಿಗೆ ಕೃತಜ್ಞತಾ ಭಾವ ಇದ್ದದ್ದರಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳಲ್ಲುವುದರಲ್ಲಿ ಅದಕ್ಕೆ ಗೊಂದಲವಾಗುತ್ತಿತ್ತು.

ಎಂದೇ ಮರಿಹಕ್ಕಿ ತನಗೆ ತಾನೇ ಇಂತು ಹೇಳಿಕೊಳ್ಳುತ್ತಿತ್ತು: “ನನ್ನನ್ನು ದತ್ತು ತೆಗೆದುಕೊಂಡ ತಾಯಿಹಕ್ಕಿ ಕಾವುಕೊಡದೇ ಇದ್ದಿದ್ದರೆ ನಾನು ಇನ್ನೂ ಮೊಟ್ಟೆಯೊಳಗೆ ಇರುತ್ತಿದ್ದೆ. ನಾನು ಮೊಟ್ಟೆಯೊಡೆದು ಹೊರಬರಲು ನೆರವಾದವರು ನನಗೆ ಹಾರುವುದನ್ನು ಖಂಡಿತ ಕಲಿಸಬಲ್ಲರು. ಬಹುಶಃ ಅದಕ್ಕೆ ಯುಕ್ತ ಸಮಯ ಒದಗಿ ಬರಬೇಕಷ್ಟೆ. ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಾಕೆ ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ಮುಂದಿನ ಹಂತಕ್ಕೆ ಕರೆದೊಯ್ಯುವುದು ಖಚಿತ.”

*****

೫೦. ನಾನು, ನನ್ನ ಮನಸ್ಸು ಬೇರೆಬೇರೆ ಅಲ್ಲ ಎಂಬ ನಂಬಿಕೆ – ದುಃಖದ ಮೂಲ

ಜುನೈದ್‌ ತನ್ನ ಶಿಷ್ಯರೊಂದಿಗೆ ಪಟ್ಟಣದ ಮಾರುಕಟ್ಟೆಯ ಮೂಲಕ ಹೋಗುತ್ತಿದ್ದಾಗ ಯಾರೋ ಒಬ್ಬ ತನ್ನ ಹಸುವನ್ನು ಎಳೆದುಕೊಂಡು ಹೋಗುತ್ತಿದ್ದದ್ದನ್ನು ನೋಡಿದರು. ತಕ್ಷಣ “ತುಸು ಕಾಲ ನಿಲ್ಲು” ಎಂಬುದಾಗಿ ಅವನಿಗೆ ಹೇಳಿ ತನ್ನ ಶೀಷ್ಯರಿಗೆ ಹೇಳಿದರು, “ನೀವೆಲ್ಲರೂ ಈ ಮನುಷ್ಯ ಮತ್ತು ಅವನ ಹಸುವನ್ನು ಸುತ್ತುವರಿದು ನಿಂತುಕೊಳ್ಳಿ. ಈಗ ನಿಮಗೇನನ್ನೋ ಬೋಧಿಸುತ್ತೇನೆ.”

ಜುನೈದ್‌ ಒಬ್ಬ ಖ್ಯಾತ ಮುಮುಕ್ಷುವಾಗಿದ್ದದ್ದರಿಂದಲೂ ತನ್ನನ್ನೂ ತನ್ನ ಹಸುವನ್ನೂ ಉಪಯೋಗಿಸಿಕೊಂಡು ಏನು ಬೋಧಿಸುವರೆಂಬುದನ್ನು ತಿಳಿಯುವ ಕುತೂಹಲದಿಂದಲೂ ಆ ಮನುಷ್ಯ ಹಸುವನ್ನು ಹಿಡಿದುಕೊಂಡು ನಿಂತನು.

ಜುನೈದ್‌ ತನ್ನ ಶಿಷ್ಯರನ್ನು ಕೇಳಿದರು, “ನನಗೆ ನಿಮ್ಮಿಂದ ಒಂದು ವಿಷಯ ತಿಳಿಯಬೇಕಾಗಿದೆ. ಇಲ್ಲಿ ಯಾರು ಯಾರಿಗೆ ಬಂಧಿಸಲ್ಪಟ್ಟದ್ದಾರೆ? ಹಸು ಮನುಷ್ಯನಿಗೆ ಬಂಧಿಸಲ್ಪಟ್ಟದೆಯೋ ಅಥವ ಮನುಷ್ಯ ಹಸುವಿಗೆ ಬಂಧಿಸಲ್ಪಟ್ಟಿದ್ದಾನೋ?”

ಶಿಷ್ಯರು ಹೇಳಿದರು, “ಹಸು ಮನುಷ್ಯನಿಗೆ ಬಂಧಿಸಲ್ಪಟ್ಟಿದೆ. ಮನುಷ್ಯ ಇಲ್ಲಿ ಯಜಮಾನ. ಅವನು ಹಗ್ಗದಿಂದ ಹಸುವನ್ನು ಬಂಧಿಸಿ ಹಿಡಿದುಕೊಂಡಿದ್ದಾನೆ. ಅವನು ಹೋದಲ್ಲಿಗೆಲ್ಲ ಹಸು ಹೋಗಲೇ ಬೇಕು. ಅವನು ಯಜಮಾನ, ಹಸು ಗುಲಾಮ.”

“ಹಾಗೋ? ಈಗ ನೋಡಿ,” ಎಂಬುದಾಗಿ ‌ ಹೇಳಿದ ಜುನೈದ್ ಒಂದು ಚಾಕುವಿನಿಂದ ಹಗ್ವನ್ನು ಕತ್ತರಿಸಿದರು. ತಕ್ಷಣ ಹಸು ಅಲ್ಲಿಂದ ತಪ್ಪಿಸಿಕೊಂಡು ಓಡಿತು. ಅದರ ಮಾಲಿಕ ಅದನ್ನು ಹಿಡಿಯಲೋಸುಗ ಅದರ ಹಿಂದೆ ಓಡಿದ.

ಜುನೈದ್‌ ಶಿಷ್ಯರಿಗೆ ಹೇಳಿದರು, “ಏನಾಗುತ್ತಿದೆ ಎಂಬುದನ್ನು ಗಮನಿಸಿ. ಯಾರು ನಿಜವಾದ ಯಜಮಾನ? ಹಸುವಿಗೆ ಆ ಮನುಷ್ಯನ ಕುರಿತು ಯಾವ ಆಸಕ್ತಿಯೂ ಇಲ್ಲ. ಎಂದೇ ಅದು ತಪ್ಪಿಸಿಕೊಂಡು ಓಡುತ್ತಿದೆ.”

ಹಸುವಿನ ಮಾಲಿಕ ಕೋಪೋದ್ರಿಕ್ತನಾಗಿ ಅಬ್ಬರಿಸಿದ, “ಇದೆಂಥಾ ಪ್ರಯೋಗ?”

ಅದನ್ನು ನಿರ್ಲಕ್ಷಿಸಿ ಜನೈದ್‌ ತನ್ನ ಶಿಷ್ಯರಿಗೆ ಹೇಳಿದರು, “ನಿಮ್ಮ ಮನಸ್ಸಿಗೆ ಈ ವಿದ್ಯಮಾನವನ್ನು ಅನ್ವಯಿಸಬಹುದು. ನೀವು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುವ ತೀರ ಅವಿವೇಕದ ಅಳೋಚನೆಗಳು ನಿಮ್ಮಲ್ಲಿ ಆಸಕ್ತವಾಗಿಲ್ಲ. ನಿಮಗೆ ಅವುಗಳಲ್ಲಿ ಆಸಕ್ತಿ ಇದೆ. ಏನೇನೋ ಕಸರತ್ತು ಮಾಡಿ ಅವನ್ನು ನೀವು ಹಿಡಿದಿಟ್ಟುಕೊಂಡಿದ್ದೀರಿ. ಅವನ್ನು ಹಿಡಿದಿಟ್ಟುಕೊಳ್ಳುವ ಕಾಯಕದಲ್ಲಿ ನೀವು ಹುಚ್ಚರಾಗುತ್ತಿದ್ದೀರಿ. ನೀವು ಅವುಗಳಲ್ಲಿ ಆಸಕ್ತಿ ಕಳೆದುಕೊಂಡ ತಕ್ಷಣ, ನೀವು ಅವುಗಳ ನಿರುಪಯುಕ್ತತೆಯನ್ನು ಮನಗಂಡ ತಕ್ಷಣ ಅವು ಮಾಯವಾಗಲಾರಂಭಿಸುತ್ತವೆ. ಈ ಹಸುವಿನಂತೆ ಅವು ನಿಮ್ಮಿಂದ ತಪ್ಪಿಸಿಕೊಂಡು ಹೊರಟು ಹೋಗುತ್ತವೆ.”

 

Advertisements
This entry was posted in ಸೂಫಿ ಕತೆಗಳು and tagged , , . Bookmark the permalink.

One Response to ಸೂಫಿ ಕತೆಗಳು ೧-೫೦

 1. Basavaraj ಹೇಳುತ್ತಾರೆ:

  ನಮಸ್ಕಾರ,
  I am Basavaraj Kanthi. I have a ebook publishing website where you can publish your writings. With online publishing you can reach more number of readers. Also you can decide price of books yourself. Contact me for more details.
  email: kanthibasu@gmail.com

  Thanks,
  Basavaraj

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s