ಝೆನ್ (Zen) ಕತೆಗಳು: ಸಂಚಿಕೆ ೭

ಝೆನ್‌ (Zen) ಕತೆ ೧೫೧. ಜೇಡ

ಧ್ಯಾನ ಮಾಡಲು ಕಲಿಯುತ್ತಿದ್ದ ಟಿಬೆಟ್ಟಿನ ವಿದ್ಯಾರ್ಥಿಯೊಬ್ಬನ ಕತೆ ಇದು. ತನ್ನ ಕೊಠಡಿಯಲ್ಲಿ ಧ್ಯಾನ ಮಾಡುತ್ತಿರುವಾಗ ತನ್ನ ಮುಂದೆ ಜೇಡವೊಂದು ಮೇಲಿನಿಂದ ಇಳಿಯುತ್ತಿರುವುದನ್ನು ನೋಡಿರುವುದಾಗಿ ಆತ ನಂಬಿದ್ದ. ಪ್ರತೀ ದಿನ ದಿಗಿಲು ಹುಟ್ಟಿಸುವ ರೀತಿಯಲ್ಲಿ ಅದು ಮರಳಿ ಬರುತ್ತಿತ್ತು. ಅಷ್ಟೇ ಅಲ್ಲ, ಪ್ರತೀ ಸಲ ಬಂದಾಗ ಹಿಂದಿನ ಸಲಕ್ಕಿಂತ ದೊಡ್ಡದಾಗಿರುತ್ತಿತ್ತು. ಈ ವಿದ್ಯಮಾನದಿಂದ ಹೆದರಿದ ಅವನು ಗುರುವಿನ ಹತ್ತಿರ ಹೋಗಿ ತನ್ನ ಸಂಕಟವನ್ನು ಹೇಳಿಕೊಂಡ. ಧ್ಯಾನ ಮಾಡುವಾಗ ಚಾಕು ಇಟ್ಟುಕೊಂಡಿದ್ದು ಜೇಡ ಬಂದಾಗ ಅದನ್ನು ಕೊಲ್ಲುವ ಯೋಜನೆ ಹಾಕಿಕೊಂಡಿರುವುದಾಗಿಯೂ ತಿಳಿಸಿದ. ಈ ಯೋಜನೆಯನ್ನು ಕಾರ್ಯಗತಗೊಳಿಸದೇ ಇರುವಂತೆ ಸಲಹೆ ನೀಡಿದ ಗುರುಗಳು, ಅದಕ್ಕೆ ಬದಲಾಗಿ ಒಂದು ಸೀಮೆಸುಣ್ಣದ ತುಂಡೊಂದನ್ನು ಇಟ್ಟುಕೊಂಡಿದ್ದು ಜೇಡ ಬಂದೊಡನೆ ಅದರ ಉದರ ಬಾಗದ ಮೇಲೆ “×” ಗುರುತು ಮಾಡುವಂತೆಯೂ ತದನಂತರ ವರದಿ ಒಪ್ಪಿಸುವಂತೆಯೂ ಸೂಚಿಸಿದರು.

ವಿದ್ಯಾರ್ಥಿ ಹಿಂದಿರುಗಿ ತನ್ನ ಕೊಠಡಿಗೆ ಹೋಗಿ ಧ್ಯಾನ ಮಾಡಲು ಆರಂಭಿಸಿದನು. ಜೇಡ ಬಂದೊಡನೆ ಮನಸ್ಸಿನಲ್ಲಿ ಮೂಡಿದ ಅದನ್ನು ಕೊಲ್ಲುವ ಬಯಕೆಯನ್ನು ದಮನ ಮಾಡಿ ಗುರುಗಳು ಹೇಳಿದಂತೆ ಮಾಡಿದ. ತದನಂತರ ನಡೆದದ್ದನ್ನು ಗುರುಗಳಿಗೆ ವರದಿ ಮಾಡಿದ. ಅಂಗಿಯನ್ನು ಮೇಲೆತ್ತಿ ತನ್ನ ಉದರವನ್ನು ನೋಡುವಂತೆ ಗುರುಗಳು ಸೂಚಿಸಿದರು. ಅಲ್ಲಿತ್ತು “×”ಗುರುತು.

 ಝೆನ್‌ (Zen) ಕತೆ ೧೫೨. ಕಲ್ಲುಕುಟಿಗ

ತನ್ನ ಕುರಿತು ಹಾಗೂ ಜೀವನದಲ್ಲಿ ತನ್ನ ಸ್ಥಿತಿಗತಿಯ ಕುರಿತು ಅತೃಪ್ತನಾಗಿದ್ದ ಒಬ್ಬ ಕಲ್ಲುಕುಟಿಗನಿದ್ದ. ಒಂದು ದಿನ ಅವನು ಒಬ್ಬ ಶ್ರೀಮಂತ ವ್ಯಾಪಾರಿಯ ಮನೆಯ ಮುಂದಿನಿಂದಾಗಿ ಎಲ್ಲಿಗೋ ಹೋಗುತ್ತಿದ್ದ. ಮನೆಯ ಬಾಗಿಲು ದೊಡ್ಡದಾಗಿ ತೆರೆದಿದ್ದರಿಂದ ಮನೆಯ ಒಳಗೆ ಅನೇಕ ಗಣ್ಯರು ಇರುವುದನ್ನೂ ಸುಂದರ ವಸ್ತುಗಳು ಇರುವುದನ್ನೂ ಅವನು ನೋಡಿದ. “ಆ ವ್ಯಾಪಾರಿ ಅದೆಷ್ಟು ಪ್ರಭಾವಿಯಾಗಿರಬೇಕು” ಎಂಬುದಾಗಿ ಆಲೋಚಿಸಿದ ಕಲ್ಲು ಕುಟಿಗ. ವ್ಯಾಪಾರಿಯ ಸ್ಥಿತಿಗತಿ ನೋಡಿ ಕರುಬಿದ ಕಲ್ಲುಕುಟಿಗ ತಾನೂ ಆ ವ್ಯಾಪಾರಿಯಂತೆಯೇ ಆಗಬೇಕೆಂದು ಆಶಿಸಿದ.

ಅವನಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಇದ್ದಕ್ಕಿದ್ದಂತೆಯೇ ಕಲ್ಪನೆಗೂ ಮೀರಿದ ಸಿರಿಸಂಪತ್ತು ಮತ್ತು ಪ್ರಭಾವ ಉಳ್ಳ ವ್ಯಾಪಾರಿ ಅವನಾದ. ಆಗ ಅವನಷ್ಟು ಸಿರಿವಂತರಲ್ಲದೇ ಇದ್ದವರು ಅವನನ್ನು ನೋಡಿ ಕರುಬುತ್ತಿದ್ದರು ಮತ್ತು ದ್ವೇಷಿಸುತ್ತಿದ್ದರು. ಅಷ್ಟರಲ್ಲಿಯೇ ಜಾಗಟೆ ಬಾರಿಸುತ್ತಿದ್ದ ಸೈನಿಕರ ಬೆಂಗಾವಲಿನಲ್ಲಿ ಅನುಚರರೊಂದಿಗೆ ಇದ್ದ ಉನ್ನತ ಅಧಿಕಾರಿಯೊಬ್ಬನನ್ನು ಪಲ್ಲಕ್ಕಿ ಕುರ್ಚಿಯಲ್ಲಿ ಒಯ್ಯುತ್ತಿದ್ದದ್ದನ್ನು ನೋಡಿದ. ಎಲ್ಲರೂ, ಅವರು ಎಷ್ಟೇ ಶ್ರೀಮಂತರಾಗಿದ್ದಿರಲಿ, ಆ ಮೆರವಣಿಗೆಯ ಮುಂದೆ ತುಂಬ ಬಾಗಿ ನಮಸ್ಕರಿಸಲೇಬೇಕಿತ್ತು. ಆಗ ಅವನು ಅಲೋಚಿಸಿದ, “ಅವನೆಷ್ಟು ಪ್ರಭಾವೀ ಅಧಿಕಾರಿಯಾಗಿರಬೇಕು? ನಾನೂ ಅವನಂತೆಯೇ ಒಬ್ಬ ಪ್ರಭಾವೀ ಅಧಿಕಾರಿಯಾಗಲು ಇಷ್ಟ ಪಡುತ್ತೇನೆ.”

ತಕ್ಷಣ ಆತ ಉನ್ನತಾಧಿಕಾರಿಯಾದ. ಕಸೂತಿ ಕೆಲಸ ಮಾಡಿದ ಮೆತ್ತೆ ಇದ್ದ ಪಲ್ಲಕ್ಕಿ ಕುರ್ಚಿಯಲ್ಲಿ ಎಲ್ಲೆಡಗೂ ಆತನನ್ನು ಒಯ್ಯಲಾಗುತ್ತಿತ್ತು. ಅವನ ಸುತ್ತಲಿನ ಜನ ಅವನಿಗೆ ಹೆದರುತ್ತಿದ್ದರು, ಅವನನ್ನು ದ್ವೇಷಿಸುತ್ತಿದ್ದರು. ಸುಡುಬಿಸಿಲಿದ್ದ ಬೇಸಗೆಯ ಒಂದು ದಿನ, ಬೆವರಿನಿಂದಾಗಿ ಅಂಟಂಟಾಗಿದ್ದ ಮೈನಿಂದಾಗಿ ಪಲ್ಲಕ್ಕಿ ಕುರ್ಚಿಯಲ್ಲಿ ಸುಖವಿಲ್ಲದಂತಾಗಿತ್ತು. ತಲೆಯೆತ್ತಿ ಸೂರ್ಯನತ್ತ ನೋಡಿದ. ಅವನ ಇರುವಿಕೆಯಿಂದ ಕಿಂಚಿತ್ತೂ ಪ್ರಭಾವಿತವಾಗದ ಸೂರ್ಯ ಹೆಮ್ಮೆಯಿಂದ ಹೊಳೆಯುತ್ತಿರುವಂತೆ ಭಾಸವಾಯಿತು.

ಆಗ ಅವನು ಅಲೋಚಿಸಿದ, “ಸೂರ್ಯನೆಷ್ಟು ಪ್ರಭಾವಶಾಲಿಯಾಗಿರಬೇಕು? ನಾನೇ ಸೂರ್ಯನಾಗಿರಲು ಇಷ್ಟ ಪಡುತ್ತೇನೆ.”

ತಕ್ಷಣ ಅವನು ಸೂರ್ಯನಾದ. ಉಗ್ರ ತೇಜಸ್ಸಿನಿಂದ ಹೊಳೆದು ಪ್ರತಿಯೊಬ್ಬರನ್ನೂ ಸಂಕಟಕ್ಕೀಡು ಮಾಡಿದ, ಹೊಲಗದ್ದೆಗಳನ್ನು ಸುಟ್ಟು ಹಾಕಿದ. ತತ್ಪರಿಣಾಮವಾಗಿ ಕೃಷಿಕರೂ ಕಾರ್ಮಿಕರೂ ಅವನನ್ನು ಶಪಿಸಿದರು. ಆ ವೇಳೆಗೆ ಬೃಹದ್ಗಾತ್ರದ ಕಾರ್ಮುಗಿಲೊಂದು ಅವನಿಗೂ ಭೂಮಿಗೂ ನಡುವೆ ಬಂದಿತು. ತತ್ಪರಿಣಾಮವಾಗಿ ಅವನ ಬೆಳಕು ಭೂಮಿಯನ್ನು ತಲುಪಲೇ ಇಲ್ಲ. ಆಗ ಅವನು ಅಲೋಚಿಸಿದ, “ಕಾರ್ಮುಗಿಲೆಷ್ಟು ಪ್ರಭಾವಶಾಲಿಯಾಗಿರಬೇಕು? ನಾನೇ ಕಾರ್ಮುಗಿಲಾಗಿರಲು ಇಷ್ಟ ಪಡುತ್ತೇನೆ.”

ತಕ್ಷಣ ಅವನು ಕಾರ್ಮುಗಿಲಾದ. ಅಪರಿಮಿತ ಮಳೆ ಸುರಿಸಿ ಹೊಲಗದ್ದೆಗಳೂ ಹಳ್ಳಗಳೂ ಪ್ರವಾಹದಲ್ಲಿ ಮುಳುಗುವಂತೆ ಮಾಡಿದ. ತತ್ಪರಿಣಾಮವಾಗಿ ಎಲ್ಲರೂ ಹಿಡಿ ಶಾಪ ಹಾಕಿದರು. ಆದರೆ ಅಷ್ಟರಲ್ಲೇ ಯಾವುದೋ ಅವನ ಮೇಲೆ ಅತೀ ಹೆಚ್ಚು ಬಲ ಪ್ರಯೋಗಿಸಿ ದೂರಕ್ಕೆ ತಳ್ಳಿತು. ಹಾಗೆ ಮಾಡಿದ್ದು ಗಾಳಿ ಎಂಬುದು ಅವನ ಅರಿವಿಗೆ ಬಂದಿತು. ಆಗ ಅವನು ಅಲೋಚಿಸಿದ, “ಗಾಳಿ ಎಷ್ಟು ಬಲಶಾಲಿಯಾಗಿರಬೇಕು? ನಾನೇ ಗಾಳಿಯಾಗಿರಲು ಇಷ್ಟ ಪಡುತ್ತೇನೆ.”

ತಕ್ಷಣ ಅವನು ಗಾಳಿಯಾದ. ಜೋರಾಗಿ ಬೀಸಿ ಮನೆಗಳ ಮಾಡುಗಳ ಹೆಂಚುಗಳನ್ನು ಹಾರಿಸಿದ, ಮರಗಳನ್ನು ಬೇರು ಸಹಿತ ಉರುಳಿಸಿದ. ಕೆಳಗಿರುವ ಎಲ್ಲರೂ ಅವನಿಗೆ ಹೆದರುತ್ತಿದ್ದರು, ದ್ವೇಷಿಸುತ್ತಲೂ ಇದ್ದರು. ಅನತಿ ಕಾಲದಲ್ಲಿ ಎಷ್ಟು ಜೋರಾಗಿ ಬೀಸಿದರೂ ಒಂದಿನಿತೂ ಅಲುಗಾಡದ ಬೃಹತ್ ಬಂಡೆಯೊಂದು ಎದುರಾಯಿತು. ಆಗ ಅವನು ಅಲೋಚಿಸಿದ, “ಬಂಡೆ ಎಷ್ಟು ಬಲಶಾಲಿಯಾಗಿರಬೇಕು? ನಾನೇ ಬಂಡೆಯಾಗಿರಲು ಇಷ್ಟ ಪಡುತ್ತೇನೆ.”

ತಕ್ಷಣ ಅವನು ಭೂಮಿಯ ಮೇಲಿರುವ ಯಾವುದೇ ವಸ್ತುವಿಗಿಂತ ಹೆಚ್ಚು ಗಟ್ಟಿಯಾದ ಬಂಡೆಯಾದ. ಅವನು ಅಲ್ಲಿ ಬಂಡೆಯಾಗಿ ನಿಂತಿದ್ದಾಗ ತನ್ನ ಗಟ್ಟಿಯಾದ ಮೈಮೇಲೆ ಉಳಿ ಇಟ್ಟು ಯಾರೋ ಸುತ್ತಿಗೆಯಿಂದ ಹೊಡೆಯುತ್ತಿರುವಂತೆಯೂ ತನ್ನ ಆಕಾರವೇ ಬದಲಾಗುತ್ತಿರುವಂತೆಯೂ ಭಾಸವಾಯಿತು. ಅವನು ಆಲೋಚಿಸಿದ, “ಬಂಡೆಯಾಗಿರುವ ನನಗಿಂತ ಬಲಶಾಲಿಯಾದದ್ದು ಏನಿರಬಹುದು?”

ಕೆಳಗೆ ನೋಡಿದಾಗ ಗೋಚರಿಸಿದ್ದು ‘ಒಬ್ಬ ಕಲ್ಲುಕುಟಿಗ’.

 ಝೆನ್‌ (Zen) ಕತೆ ೧೫೩. ಉತ್ತರಾಧಿಕಾರಿ

ವೃದ್ಧ ಝೆನ್‌ ಗುರುವಿನ ಆರೋಗ್ಯ ಹದಗೆಡುತ್ತಿತ್ತು. ಸಾವು ಸಮೀಪಿಸುತ್ತಿರುವುದನ್ನು ತಿಳಿದ ಆತ ಆಶ್ರಮದ ಮುಂದಿನ ಮುಖ್ಯಸ್ಥನ ನೇಮಕಾತಿ ಮಾಡಲೋಸುಗ ತನ್ನ ನಿಲುವಂಗಿ ಮತ್ತು ಬಟ್ಟಲನ್ನು ಹಸ್ತಾಂತರಿಸುವುದಾಗಿ ಪ್ರಕಟಿಸಿದ. ಒಂದು ಸ್ಪರ್ಧೆಯ ಫಲಿತಾಂಶವನ್ನು ಆಧರಿಸಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಾಗಿಯೂ ತಿಳಿಸಿದ. ಆ ಹುದ್ದೆಯನ್ನು ಬಯಸುವವರೆಲ್ಲರೂ ಪದ್ಯ ಬರೆಯುವುದರ ಮುಖೇನ ತಮ್ಮ ಆಧ್ಯಾತ್ಮಿಕ ವಿವೇಕವನ್ನು ಪ್ರದರ್ಶಿಸಬೇಕಾಗಿತ್ತು. ಉತ್ತರಾಧಿಕಾರಿಯಾಗುವುದು ಖಚಿತ ಎಂಬುದಾಗಿ ಎಲ್ಲರೂ ನಂಬಿದ್ದ ಸಂನ್ಯಾಸಿಗಳ ತಂಡದ ಮುಖ್ಯಸ್ಥ ಉತ್ತಮ ಒಳನೋಟದಿಂದ ಕೂಡಿದ್ದ ಸುರಚಿತ ಪದ್ಯವನ್ನು ಒಪ್ಪಿಸಿದ. ತಮ್ಮ ನಾಯಕನಾಗಿ ಅವನ ಆಯ್ಕೆಯ ನಿರೀಕ್ಷೆಯಲ್ಲಿ ಇದ್ದರು ಎಲ್ಲ ಸನ್ಯಾಸಿಗಳು. ಆದಾಗ್ಯೂ, ಮರುದಿನ ಬೆಳಗ್ಗೆ ಮುಖ್ಯ ಹಜಾರದ ಹಾದಿಯ ಗೋಡೆಯ ಮೇಲೆ, ಬಹುಶಃ ಮಧ್ಯರಾತ್ರಿಯ ವೇಳೆ ಬರೆದಿರಬಹುದಾಗಿದ್ದ ಪದ್ಯವೊಂದು ಗೋಚರಿಸಿತು. ತನ್ನ ಲಾಲಿತ್ಯ ಮತ್ತು ಜ್ಞಾನದ ಗಹನತೆಯಿಂದಾಗಿ ಅದು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತು. ಅದನ್ನು ಬರೆದವರು ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಆ ವ್ಯಕ್ತಿ ಯಾರೆಂಬುದನ್ನು ಪತ್ತೆಹಚ್ಚಲೇ ಬೇಕೆಂದು ಸಂಕಲ್ಪಿಸಿದ ವೃದ್ಧ ಗುರು ಎಲ್ಲ ಸನ್ಯಾಸಿಗಳನ್ನು ಪ್ರಶ್ನಿಸಲಾರಂಭಿಸಿದ. ಅವನೇ ಅಚ್ಚರಿ ಪಡುವ ರೀತಿಯಲ್ಲಿ, ಭೋಜನಕ್ಕೆ ಬೇಕಾದ ಅಕ್ಕಿಯನ್ನು ಭತ್ತ ಕುಟ್ಟಿ ಸಿದ್ಧಪಡಿಸುತ್ತಿದ್ದ ಅಡುಗೆಮನೆಯ ನಿರಾಡಂಬರದ ಸಹಾಯಕನತ್ತ ಒಯ್ದಿತು ಅವನ ಅನ್ವೇಷಣೆ. ಈ ಸುದ್ದಿ ಕೇಳಿ ಹೊಟ್ಟೆ ಉರಿ ತಾಳಲಾರದ ಸಂನ್ಯಾಸಿಗಳ ತಂಡದ ಮುಖ್ಯಸ್ಥ ಮತ್ತು ಅವನ ಸಹವರ್ತಿಗಳು ತಮ್ಮ ಎದುರಾಳಿಯನ್ನು ಕೊಲ್ಲಲು ಸಂಚು ರೂಪಿಸಿದರು. ವೃದ್ಧ ಗುರು ಗೌಪ್ಯವಾಗಿ ತನ್ನ ನಿಲುವಂಗಿ ಮತ್ತು ಬಟ್ಟಲನ್ನು ಆ ಸಹಾಯಕನಿಗೆ ಹಸ್ತಾಂತರಿಸಿದ ಮತ್ತು ಅವನ್ನು ಸ್ವೀಕರಿಸಿದ ಆತ ಆಶ್ರಮದಿಂದ ತಪ್ಪಿಸಿಕೊಂಡು ಓಡಿಹೋದ. ತರುವಾಯ ಆತ ಸುವಿಖ್ಯಾತ ಝೆನ್‌ ಗುರುವಾದ.

 ಝೆನ್‌ (Zen) ಕತೆ ೧೫೪. ಗುರುವನ್ನು ಚಕಿತಗೊಳಿಸುವುದು

ಆಶ್ರಮವೊಂದರಲ್ಲಿನ ವಿದ್ಯಾರ್ಥಿಗಳು ಹಿರಿಯ ಸನ್ಯಾಸಿಯನ್ನು ಭಯಭಕ್ತಿಯಿಂದ ಗೌರವಿಸುತ್ತಿದ್ದರು. ಅವರು ಇಂತಿದ್ದದ್ದು ಅವನು ಕಠಿನ ಶಿಸ್ತಿನ ಮನುಷ್ಯ ಎಂಬುದಕ್ಕಾಗಿ ಅಲ್ಲ, ಯಾವುದೂ ಅವನ ಮನಸ್ಸನ್ನು ಅಸ್ತವ್ಯಸ್ತಗೊಳಿಸುವಂತೆ ಅಥವ ಕ್ಷೋಭೆಗೊಳಿಸುವಂತೆ ತೋರುತ್ತಿರಲಿಲ್ಲ ಎಂಬುದಕ್ಕಾಗಿ. ಈ ಕಾರಣದಿಂದಾಗಿ ಅವರಿಗೆ ಆತ ತುಸು ಅಲೌಕಿಕನಂತೆ ಕಾಣಿಸುತ್ತಿದ್ದ ಮತ್ತು ಕೆಲವೊಮ್ಮೆ ಅವನನ್ನು ಕಂಡಾಗ ಭಯವೂ ಹುಟ್ಟುತ್ತಿತ್ತು.

ಒಂದು ದಿನ ಅವನನ್ನು ಪರೀಕ್ಷಿಸಲು ಅವರು ತೀರ್ಮಾನಿಸಿದರು. ಹಜಾರದ ಹಾದಿಯೊಂದರ ಕತ್ತಲಾಗಿದ್ದ ಮೂಲೆಯಲ್ಲಿ ಅವರ ಪೈಕಿ ಕೆಲವರು ಅಡಗಿ ಕುಳಿತು ಹಿರಿಯ ಸನ್ಯಾಸಿ ಅಲ್ಲಿಗಾಗಿ ನಡೆದು ಹೋಗುವುದನ್ನು ಕಾಯುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಒಂದು ಕಪ್ ಚಹಾ ಸಮೇತ ಹಿರಿಯ ಸನ್ಯಾಸಿ ಬರುತ್ತಿದ್ದದ್ದು ಗೋಚರಿಸಿತು. ಅವರು ಅಡಗಿ ಕುಳಿತಿದ್ದ ಮೂಲೆಯ ಸಮೀಪಕ್ಕೆ ಅವನು ಬಂದಾಗ ಅವರೆಲ್ಲರೂ ಒಟ್ಟಾಗಿ ಎಷ್ಟು ಸಾಧ್ಯವೋ ಅಷ್ಟೂ ಜೋರಾಗಿ ವಿಕಾರವಾಗಿ ಅರಚುತ್ತಾ ಮೂಲೆಯಿಂದ ಹೊರಗೋಡಿ ಬಂದರು.  ಆಗ ಆ ಸನ್ಯಾಸಿಯಾದರೋ ಕಿಂಚಿತ್ತೂ ಪ್ರತಿಕ್ರಿಯೆ ತೋರಲಿಲ್ಲ. ಹಜಾರದ ತುದಿಯಲ್ಲಿದ್ದ ಪುಟ್ಟ ಮೇಜಿನ ಹತ್ತಿರಕ್ಕೆ ಶಾಂತವಾಗಿ ಹೋಗಿ ಕಪ್ಪನ್ನು ಮೆಲ್ಲಗೆ ಮೇಜಿನ ಮೇಲೆ ಇಟ್ಟನು. ತದನಂತರ ಗೋಡೆಗೆ ಒರಗಿ ನಿಂತು ಘಟನೆಯಿಂದ ಆದ ಆಘಾತವನ್ನು ಗಟ್ಟಿಯಾಗಿ “ಓ………” ಎಂಬುದಾಗಿ ಕಿರುಚಿ ಪ್ರಕಟಿಸಿದ!

 ಝೆನ್‌ (Zen) ಕತೆ ೧೫೫. ತೊಕುಸಾನ್‌ನ ಬಟ್ಟಲು

ತೊಕುಸಾನ್‌ ಒಂದು ದಿನ ಧ್ಯಾನ ಮಂದಿರದಿಂದ ಭೋಜನಶಾಲೆಯತ್ತ ತನ್ನ ಬಟ್ಟಲುಗಳೊಂದಿಗೆ ಹೋಗುತ್ತಿದ್ದ. ಸೆಪ್ಪೊ ಅವನನ್ನು ಕೇಳಿದ, “ಬಟ್ಟಲುಗಳೊಂದಿಗೆ ನೀನು ಎಲ್ಲಿಗೆ ಹೋಗುತ್ತಿರುವೆ? ಇನ್ನೂ ಘಂಟೆ ಬಾರಿಸಿಲ್ಲ, ಡೋಲೂ ಬಾರಿಸಿಲ್ಲ.” ತಕ್ಷಣ ತೊಕುಸಾನ್‌ ತನ್ನ ಕೋಣೆಗೆ ಹಿಂದಿರುಗಿದ. ಸೆಪ್ಪೊ ಈ ವಿದ್ಯಮಾನವನ್ನು ಗೆಂಟೋನಿಗೆ ಹೇಳಿದಾಗ ಆತ ಉದ್ಗರಿಸಿದ, “ತೊಕುಸಾನ್ ಅನೇಕ ವರ್ಷಗಳಿಂದ ಧ್ಯಾನ ಮಾಡುತ್ತಿದ್ದರೂ ಝೆನ್‌ನ ಅಂತಿಮ ವಾಕ್ಯ, ಅರ್ಥಾತ್‌ ಪರಮ ಸತ್ಯವನ್ನು ಇನ್ನೂ ತಿಳಿದಿಲ್ಲ.” ಇದನ್ನು ತಿಳಿದ ತೊಕುಸಾನ್‌ ಸಹಾಯಕನೊಬ್ಬನನ್ನು ಕಳುಹಿಸಿ ಗೆಂಟೋನನ್ನು ಕರೆಯಿಸಿ ಕೇಳಿದ, “ನನ್ನ ಕುರಿತು ಏನಾದರೂ ಠೀಕೆ ಮಾಡುವುದಿದೆಯೇ?” ಗೆಂಟೋ ತಾನು ಹೇಳಿದ್ದರ ಅರ್ಥವನ್ನು ತೊಕುಸಾನ್‌ನ ಕಿವಿಯಲ್ಲಿ ಪಿಸುಗುಟ್ಟಿದ. ತೊಕುಸಾನ್‌ ಏನೂ ಹೇಳದೆಯೇ ಅಲ್ಲಿಂದ ಹೋದನು. ಮರುದಿನ ಉಪನ್ಯಾಸ ವೇದಿಕೆಯನ್ನೇರಿದಾಗ ತೊಕುಸಾನ್ ಸಂಪೂರ್ಣವಾಗಿ ಬದಲಾಗಿದ್ದ. ಗೆಂಟೋ ಸಭಾಂಗಣದ ಮುಂಭಾಗಕ್ಕೆ ಬಂದು ಕೈ ಚಪ್ಪಾಳೆ ತಟ್ಟಿ ನಗುತ್ತಾ ಹೇಳಿದ, “ಇದೆಷ್ಟು ಸಂತೋಷದ ಸುದ್ದಿ! ಈ ಮುದುಕನಿಗೆ ಝೆನ್‌ನ ಅಂತಿಮ ವಾಕ್ಯ ಸಿಕ್ಕಿದೆ. ಇಂದಿನಿಂದ ಅವನನ್ನು ಮೀರಿಸಲು ಯಾರಿಗೂ ಸಾಧ್ಯವಾಗದು.”

ಝೆನ್‌ (Zen) ಕತೆ ೧೫೬. ತೊಝಾನ್‌ನ ಹುಡುಕಾಟ

ಝೆನ್‌ ಗುರು ಉಮ್ಮಾನ್‌ನ ಶಿಷ್ಯನಾಗಲು ಬಂದ ತೋಝಾನ್‌ನನ್ನು ಅವನು ಕೇಳಿದ, “ನೀನು ಬಂದದ್ದು ಎಲ್ಲಿಂದ?” ತೋಝಾನ್ ಉತ್ತರಿಸಿದ, “ಸ್ಯಾಟೋನಿಂದ.” “ಈ ಬೇಸಿಗೆಯಲ್ಲಿ ನೀನು ಎಲ್ಲಿದ್ದೆ?” “ಕೋನನ್ ಪ್ರಾಂತ್ಯದ ಹೋಜಿ ದೇವಾಲಯದಲ್ಲಿದ್ದೆ.” “ಆ ಸ್ಥಳವನ್ನು ನೀನು ಬಿಟ್ಟದ್ದು ಯಾವಾಗ?” “ಆಗಸ್ಟ್‌ ಇಪ್ಪತ್ತೈದರಂದು.” ಇದ್ದಕ್ಕಿದ್ದಂತೆ ಆವೇಶಭರಿತನಾಗಿ ಉಮ್ಮಾನ್‌ ಘರ್ಜಿಸಿದ, “ನಿನಗೆ ಚೆನ್ನಾಗಿ ಪೆಟ್ಟು ಬೀಳಬೇಕು.” ಮಾರನೆಯ ದಿನ ಪುನಃ ಬಂದ ತೋಝಾನ್‌ ಮಂಡಿಯೂರಿ ಕುಳಿತು ಉಮ್ಮಾನ್‌ನನ್ನು ಕೇಳಿದ, “ನೀವು ನಿನ್ನೆ ನನಗೆ ಹೊಡೆಯ ಬೇಕೆಂದು ಬಯಸಿದಿರಿ. ಮಾಡಬಾರದ್ದನ್ನು ನಾನೇನು ಮಾಡಿರಲಿಲ್ಲ, ಹೇಳಬಾರದ್ದನ್ನು ಹೇಳಿರಲೂ ಇಲ್ಲ. ನಾನು ಮಾಡಿದ ತಪ್ಪಾದರೂ ಏನು?” ಉಮ್ಮಾನ್‌ ಹೇಳಿದ, “ನೀನೊಂದು ಕೊಳಕಾಗಿರುವ ದೊಡ್ಡ ತುತ್ತಿನ ಚೀಲ! ಕೋನನ್‌ನ ಹೋಜಿಯಿಂದ ಇಲ್ಲಿಗೆ ಬಂದದ್ದಾದರೂ ಏಕೆ?” ಆಗ ಥಟ್ಟನೆ ತೋಝಾನ್‌ಗೆ ಆತ್ಮ ಸಾಕ್ಷಾತ್ಕಾರವಾಯಿತು.

ಝೆನ್‌ (Zen) ಕತೆ ೧೫೭. ಚಹಾ ಕಪ್‌ಗಳು

ಸುಝುಕಿ ರೋಶಿಯನ್ನು ವಿದ್ಯಾರ್ಥಿಯೊಬ್ಬ ಕೇಳಿದ, “ಜಪಾನೀಯರು ಸುಲಭವಾಗಿ ಒಡೆದು ಹೋಗುವಷ್ಟು ತೆಳುವಾಗಿಯೂ ನಾಜೂಕಾಗಿಯೂ ಇರುವಂತೆ ತಮ್ಮ ಚಹಾ ಕಪ್‌ಗಳನ್ನೇಕೆ ತಯಾರಿಸುತ್ತಾರೆ?”

ರೋಶಿ ಉತ್ತರಿಸಿದರು, “ಅವು ಅತೀ ನಾಜೂಕಾಗಿವೆ ಅನ್ನುವುದು ವಿಷಯವಲ್ಲ. ನಿನಗೆ ಅವನ್ನು ಸರಿಯಾಗಿ ಬಳಕೆ ಮಾಡುವುದು ಹೇಗೆಂಬುದು ತಿಳಿದಿಲ್ಲ ಅನ್ನುವುದು ವಿಷಯ. ನೀನು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೇ ವಿನಾ ಪರಿಸರ ನಿನ್ನೊಂದಿಗೆ ಅಲ್ಲ.”

 ಝೆನ್‌ (Zen) ಕತೆ ೧೫೮. ಹಂಗಾಮಿ ಅತಿಥಿ

ಖ್ಯಾತ ಆಧ್ಯಾತ್ಮಿಕ ಗುರುವೊಬ್ಬ ರಾಜನ ಅರಮನೆಯ ಮುಂದಿನ ಮಹಾದ್ವಾರದ ಬಳಿಗೆ ಬಂದ. ಆ ಬಾಗಿಲಿನ ಮೂಲಕ ಒಳಪ್ರವೇಶಿಸಿದಾಗ ಯಾವ ಕಾವಲುಗಾರನೂ ಅವನನ್ನು ತಡೆಯಲ್ಲು ಪ್ರಯತ್ನಿಸಲಿಲ್ಲ. ಅವನು ನೇರವಾಗಿ ಸಿಂಹಾಸನದ ಮೇಲೆ ರಾಜ ಕುಳಿತ ಸ್ಥಳಕ್ಕೆ ಬಂದ. ಇಂತು ಭೇಟಿ ಮಾಡಿದವ ಯಾರೆಂಬುದನ್ನು ಗುರುತಿಸಿದ ರಾಜ ಕೇಳಿದ, “ನಿಮಗೇನು ಬೇಕು?”

“ಪ್ರವಾಸಿಗಳ ಈ ವಸತಿಗೃಹದಲ್ಲಿ ಮಲಗಲು ನನಗೆ ಸ್ಥಳ ಬೇಕು,” ಉತ್ತರಿಸಿದರು ಗುರುಗಳು.

ರಾಜ ಹೇಳಿದ, “ಆದರೆ ಇದು ನನ್ನ ಅರಮನೆ, ಪ್ರವಾಸಿಗಳ ವಸತಿಗೃಹವಲ್ಲ.”

“ನಿನಗಿಂತ ಮೊದಲು ಇದು ಯಾರ ವಶದಲ್ಲಿತ್ತು ಎಂಬುದನ್ನು ಕೇಳಬಹುದೇ?”

“ನನ್ನ ತಂದೆಯವರ ವಶದಲ್ಲಿತ್ತು ಅವರು ಈಗಿಲ್ಲ.”

“ಅವರಿಗಿಂತ ಮೊದಲು ಇದು ಯಾರ ವಶದಲ್ಲಿತ್ತು?”

“ನನ್ನ ಅಜ್ಜನ ವಶದಲ್ಲಿತ್ತು.”

“ಜನ ಸ್ವಲ್ಪ ಕಾಲ ಇಲ್ಲಿದ್ದು ಮುಂದಕ್ಕೆ ಹೋಗುವ ಈ ಸ್ಥಳ ಪ್ರವಾಸಿಗರ ವಸತಿಗೃಹ ಅಲ್ಲ ಎಂಬುದಾಗಿ ನೀನು ಹೇಳಿದಂತಿತ್ತಲ್ಲ?”

 ಝೆನ್‌ (Zen) ಕತೆ ೧೫೯. ನಿಜವಾದ ನಾನು

ಮನಃಕ್ಷೋಭೆಗೀಡಾಗಿದ್ದ ವ್ಯಕ್ತಿಯೊಬ್ಬ ಝೆನ್‌ ಗುರುವಿನ ಹತ್ತಿರ ಬಂದು ಹೇಳಿದ, “ದಯವಿಟ್ಟು ಗುರುಗಳೇ, ನಾನು ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ, ನಾನು ಹತಾಶನಾಗಿದ್ದೇನೆ. ನಿಜವಾದ ನಾನು ಯಾರು ಎಂಬುದನ್ನು ದಯವಿಟ್ಟು ತೋರಿಸಿಕೊಡಿ!” ಗುರುಗಳಾದರೋ ಏನೂ ಪ್ರತಿಕ್ರಿಯಿಸದೆ ಬೇರೆಲ್ಲೊ ನೋಡಿದರು. ಆ ವ್ಯಕ್ತಿ ಪರಿಪರಿಯಾಗಿ ಕೇಳಿಕೊಂಡ, ಬೇಡಿಕೊಂಡ, ಆದರೂ ಗುರುಗಳು ಉತ್ತರಿಸಲೇ ಇಲ್ಲ. ಕೊನೆಗೆ ನಿರಾಶನಾದ ಆತ ಅಲ್ಲಿಂದ ತೆರಳಲೋಸುಗ ಹಿಂದಕ್ಕೆ ತಿರುಗಿದ. ಆ ಕ್ಷಣದಲ್ಲಿ ಗುರುಗಳು ಅವನ ಹೆಸರು ಹೇಳಿ ಕರೆದರು. “ಗುರುಗಳೇ!” ಅನ್ನುತ್ತಾ ಕೂಡಲೇ ಗುರುಗಳತ್ತ ಆತ ತಿರುಗಿದ. “ಅದು ಅಲ್ಲಿದೆ!” ಉದ್ಗರಿಸಿದರು ಗುರುಗಳು.

 ಝೆನ್‌ (Zen) ಕತೆ ೧೬೦. ನಿಷ್ಪ್ರಯೋಜಕ ಜೀವನ

ವಯಸ್ಸು ಆದದ್ದರಿಂದ ಕೃಷಿಕನೊಬ್ಬನಿಗೆ ಜಮೀನಿನಲ್ಲಿ ದುಡಿಯಲು ಆಗುತ್ತಿರಲಿಲ್ಲ. ಮನೆಯ ಮುಖಮಂಟಪದಲ್ಲಿ ದಿನವಿಡೀ ಸುಮ್ಮನೆ ಕುಳಿತುಕೊಂಡು ಕಾಲಕಳೆಯತ್ತಿದ್ದ. ತಂದೆ ಮುಖಮಂಟಪದಲ್ಲಿ ಕುಳಿತಿರುವುದನ್ನು ಅವನ ಮಗ ತಾನು ಜಮೀನಿನಲ್ಲಿ ದುಡಿಯುತ್ತಿರುವಾಗ ಆಗಾಗ ತಲೆಯೆತ್ತಿ ನೋಡುತ್ತಿದ್ದ. ಮಗ ಆಲೋಚಿಸಿದ, “ಅವನಿಂದ ಇನ್ನೇನೂ ಉಪಯೋಗವಿಲ್ಲ. ಅವನೇನ್ನನೂ ಮಾಡುವುದಿಲ್ಲ.” ಕೊನೆಗೊಂದು ದಿನ ಹತಾಶನಾದ ಮಗ ಮರದ ಶವಪೆಟ್ಟಿಗೆಯೊಂದನ್ನು ಮಾಡಿ, ಅದನ್ನು ಮುಖಮಂಟಪದ ಸಮೀಪಕ್ಕೆ ಎಳೆದು ತಂದು ಅಪ್ಪನಿಗೆ ಅದರೊಳಕ್ಕೆ ಹೋಗುವಂತೆ ಹೇಳಿದ. ಏನನ್ನೂ ಹೇಳದೆ ಅಪ್ಪ ಶವಪೆಟ್ಟಿಗೆಯೊಳಕ್ಕೆ ಹೋದ. ಮುಚ್ಚಳ ಮುಚ್ಚಿ ಶವಪೆಟ್ಟಿಗೆಯನ್ನು ಜಮೀನಿನ ಒಂದು ಅಂಚಿನಲ್ಲಿ ಇದ್ದ ಕಡಿದಾದ ಪ್ರಪಾತದಂಚಿಗೆ ಎಳೆದುಕೊಂಡು ಹೋದ. ಪ್ರಪಾತದಂಚನ್ನು ಸಮೀಪಿಸುತ್ತಿದ್ದಾಗ ಶವಪೆಟ್ಟಿಗೆಯನ್ನು ಒಳಗಿನಿಂದ ಮಿದುವಾಗಿ ತಟ್ಟಿದ ಶಬ್ದ ಕೇಳಿಸಿತು. ಮಗ ಶವಪೆಟ್ಟಿಗೆಯ ಮುಚ್ಚಳ ತೆರೆದ. ಅದರೊಳಗೆ ಶಾಂತವಾಗಿ ಮಲಗಿದ್ದ ಅಪ್ಪ ಮಗನತ್ತ ನೋಡಿ ಹೇಳಿದ, “ನೀನು ನನ್ನನ್ನು ಪ್ರಪಾತದಂಚಿನಿಂದ ಕೆಳಕ್ಕೆ ತಳ್ಳಲಿರುವೆ ಎಂಬುದು ನನಗೆ ತಿಳಿದಿದೆ. ನೀನು ಅಂತು ಮಾಡುವ ಮೊದಲು ನಾನೊಂದು ಸಲಹೆ ನೀಡಬಹುದೇ?” “ಏನದು?” ಕೇಳಿದ ಮಗ. ಅಪ್ಪ ಹೇಳಿದ, “ಪ್ರಪಾತದಂಚಿನಿಂದ ನನ್ನನ್ನು ಕೆಳಕ್ಕೆ ತಳ್ಳ ಬಯಸಿದರೆ ಅಂತೆಯೇ ಮಾಡು. ಆದರೆ ಈ ಒಳ್ಳೆಯ ಶವಪೆಟ್ಟಿಗೆಯನ್ನು ಹಾಗೆಯೇ ಉಳಿಸಿಕೋ, ಮುಂದೊಂದು ದಿನ ನಿನ್ನ ಮಕ್ಕಳಿಗೆ ಅದನ್ನು ಉಪಯೋಗಿಸುವ ಆವಶ್ಯಕತೆ ಉಂಟಾಗಬಹುದು.”

 ಝೆನ್‌ (Zen) ಕತೆ ೧೬೧. ದೇವರನ್ನು ನೋಡುವ ಬಯಕೆ

ಸನ್ಯಾಸಿಯೊಬ್ಬ ನದೀ ತಟದಲ್ಲಿ ಧ್ಯಾನ ಮಾಡುತ್ತಿದ್ದ. ಯುವಕನೊಬ್ಬ ಅವನ ಧ್ಯಾನಕ್ಕೆ ಭಂಗ ಉಂಟುಮಾಡಿ ಕೇಳಿದ, “ಗುರುಗಳೇ, ನಾನು ನಿಮ್ಮ ಶಿಷ್ಯನಾಗಲಿಚ್ಛಿಸುತ್ತೇನೆ.” “ಏಕೆ?” ಕೇಳಿದ ಸನ್ಯಾಸಿ. ಒಂದು ಕ್ಷಣ ಆಲೋಚಿಸಿ ಯುವಕ ಹೇಳಿದ, “ಏಕೆಂದರೆ ನಾನು ದೇವರನ್ನು ಹುಡುಕಿ ನೋಡಬೇಕೆಂದು ಬಯಸುತ್ತೇನೆ.”

ಗುರುಗಳು ದಢಕ್ಕನೆ ಎದ್ದವರೇ ಯುವಕನ ಕತ್ತಿನ ಪಟ್ಟಿ ಹಿಡಿದು ನದಿಗೆ ಎಳೆದೊಯ್ದು ಅವನ ತಲೆಯನ್ನು ನೀರನಲ್ಲಿ ಮುಳುಗಿಸಿ ಅದುಮಿ ಹಿಡಿದರು. ಬಿಡಿಸಿಕೊಳ್ಳಲು ಕೈಕಾಲು ಬಡಿಯುತ್ತಾ ಪರದಾಡುತ್ತಿದ್ದ ಅವನನ್ನು ಒಂದು ಒಂದು ನಿಮಿಷ ಕಾಲ ಅಂತೆಯೇ ಹಿಡಿದಿದ್ದು ತದನಂತರ ನೀರಿನಿಂದ ಹೊರಕ್ಕೆಳೆದು ಬಿಟ್ಟರು. ಯುವಕ ಏದುಸಿರು ಬಿಡುತ್ತಾ ಕೆಮ್ಮುತ್ತಾ ತುಸು ನೀರನ್ನು ಉಗುಳಿದನು. ಅವನು ಶಾಂತನಾದ ನಂತರ ಗುರುಗಳು ಮಾತನಾಡಿದರು, “ನಿನ್ನ ತಲೆ ನೀರಿನಲ್ಲಿ ಮುಳುಗಿದ್ದಾಗ ನೀನು ಬಹುವಾಗಿ ಬಯಸುತ್ತಿದ್ದದ್ದು ಏನನ್ನು ಎಂಬುದನ್ನು ಹೇಳು.” ಯುವಕ ಉತ್ತರಿಸಿದ, “ವಾಯು.” ಗುರುಗಳು ಪ್ರತಿಕ್ರಿಯಿಸಿದರು, “ಬಹಳ ಒಳ್ಳೆಯದು. ಈಗ ಮನೆಗೆ ಹೋಗು. ವಾಯುವನ್ನು ಮಾತ್ರ ನೀನು ಬಯಸುತ್ತಿದ್ದಷ್ಟೇ ತೀವ್ರತೆಯಿಂದ ದೇವರನ್ನು ಬಯಸಲಾರಂಭಿಸಿದಾಗ ನನ್ನ ಹತ್ತಿರಕ್ಕೆ ಮರಳಿ ಬಾ.”

 ಝೆನ್‌ (Zen) ಕತೆ ೧೬೨. ಪ್ರಸಕ್ತ ಕ್ಷಣ.

ಜಪಾನಿ ಯೋಧನೊಬ್ಬನನ್ನು ಅವನ ಶತ್ರುಗಳು ಹಿಡಿದು ಸೆರೆಮನೆಯೊಳಕ್ಕೆ ಹಾಕಿದರು. ಮಾರನೆಯ ದಿನ ತನ್ನನ್ನು ಎಡೆಬಿಡದೆ ಪ್ರಶ್ನಿಸಬಹುದು ಅಥವ ಚಿತ್ರಹಿಂಸೆ ಕೊಟ್ಟು ಗಲ್ಲಿಗೇರಿಸಬಹುದು ಎಂಬ ಭಯದಿಂದ ಆ ರಾತ್ರಿ ಅವನಿಗೆ ನಿದ್ದೆ ಬರಲಿಲ್ಲ. ಆ ಸಂದರ್ಭದಲ್ಲಿ ಅವನ ಝೆನ್‌ ಗುರುವಿನ ಮಾತುಗಳು ನೆನಪಿಗೆ ಬಂದವು, “ನಾಳೆ ಎಂಬುದು ನಿಜವಲ್ಲ, ಅದೊಂದು ಭ್ರಮೆ. ಈಗ ಅನ್ನುವುದು ಮಾತ್ರ ನಿಜ.”  ಈ ಮಾತುಗಳನ್ನು ಆತ ಸ್ವೀಕರಿಸಿದ ತಕ್ಷಣ ಮನಸ್ಸು ಶಾಂತವಾಯಿತು, ನಿದ್ದೆ ಬಂದಿತು.

 ಝೆನ್‌ (Zen) ಕತೆ ೧೬೩. ಕ್ಯೋಗೆನ್‌ನ ಮರದ ಮೇಲಿನ ಸನ್ಯಾಸಿ

ಕ್ಯೋಗೆನ್‌ ಇಂತು ಹೇಳಿದ, “ಕೆಲವು ಸಂದಿಗ್ಧಗಳು ಮರದ ಕೊಂಬೆಯೊಂದನ್ನು ಬಾಯಿಯಿಂದ ಕಚ್ಚಿಕೊಂಡು ನೇತಾಡುತ್ತಿರುವ ಸನ್ಯಾಸಿಯಂತೆ; ಕೈನಿಂದ ಕೊಂಬೆಯನ್ನು ಹಿಡಿದುಕೊಳ್ಳಲು ಅವನಿಗೆ ಸಾಧ್ಯವಾಗುತ್ತಿಲ್ಲ, ಅವನ ಕಾಲುಗಳಿಗೆ ಯಾವ ಕೊಂಬೆಯೂ ಎಟಕುತ್ತಿಲ್ಲ. ಮರದ ಕೆಳಗೆ ನಿಂತವನೊಬ್ಬ ಪಶ್ಚಿಮದಿಂದ ಬರುವ ದರುಮದ (ಧರ್ಮ ಬೊಂಬೆ) ಅರ್ಥ ಏನೆಂದು ಕೇಳುತ್ತಾನೆ. ಸನ್ಯಾಸಿ ಉತ್ತರ ನೀಡದಿದ್ದರೆ ಕರ್ತವ್ಯ ಚ್ಯುತಿಆಗುತ್ತದೆ, ಉತ್ತರ ಕೊಟ್ಟರೆ ಬಿದ್ದು ಸಾಯುತ್ತಾನೆ. ಅವನೇನು ಮಾಡಬೇಕು?”

 ಝೆನ್‌ (Zen) ಕತೆ ೧೬೪. ಸೋಝನ್‌ ನೂ ಬಡ ಸೈಝೈನೂ

ಸೋಝನ್‌ಗೆ ಸನ್ಯಾಸಿ ಸೈಝೈ ಇಂತು ಹೇಳಿದ, “ನಾನೊಬ್ಬ ಬಡ ಸನ್ಯಾಸಿ. ಮುಕ್ತಿಯ ಭಿಕ್ಷೆಯನ್ನು ನನಗೆ ಕರುಣಿಸಬೇಕಾಗಿ ನಿಮ್ಮನ್ನು ಬೇಡುತ್ತೇನೆ.” ಸೋಝುನ್ ಹೇಳಿದ, “ಆಚಾರ್ಯ ಸೈಝೈ!” ಸೈಝೈ ತಕ್ಷಣ ಉತ್ತರಿಸಿದ, “ಏನು ಸ್ವಾಮಿ?” ಸೋಝನ್‌ ಹೇಳಿದ, “ಯಾರೋ ಒಬ್ಬರು ಮೂರು ಬಟ್ಟಲುಗಳಷ್ಟು ಅತ್ಯುತ್ತಮವಾದ ದ್ರಾಕ್ಷಾರಸವನ್ನು ಕುಡಿದಿದ್ದಾರಾದರೂ ತನ್ನ ತುಟಿಗಳು ಇನ್ನೂ ಒದ್ದೆಯೇ ಆಗಿಲ್ಲ ಎಂಬುದಾಗಿ ಪ್ರತಿಪಾದಿಸುತ್ತಿದ್ದಾರೆ.”

 ಝೆನ್‌ (Zen) ಕತೆ ೧೬೫. ಜೋಶುನ ಏಕಾಂತವಾಸೀ ಸನ್ಯಾಸಿಗಳು

ಜೋಶು ಒಬ್ಬ ಏಕಾಂತವಾಸೀ ಸನ್ಯಾಸಿಯ ಹತ್ತಿರ ಹೋಗಿ ಕೇಳಿದ, “ಇಲ್ಲಿ ಏನಾದರೂ ಇದೆಯೇ? ಇಲ್ಲಿ ಏನಾದರೂ ಇದೆಯೇ?” ಆ ಸನ್ಯಾಸಿ ತನ್ನ ಮುಷ್ಟಿಯನ್ನು ಎತ್ತಿ ತೋರಿಸಿದ. “ಇಲ್ಲಿ ನೀರಿನ ಆಳ ತುಂಬ ಕಮ್ಮಿ ಇರುವುದರಿಂದ ಲಂಗರು ಹಾಕಲು ಸಾಧ್ಯವಿಲ್ಲ,” ಎಂಬುದಾಗಿ ಹೇಳಿದ ಜೋಶು ಅಲ್ಲಿಂದ ತೆರಳಿದ. ಅವನು ಇನ್ನೊಬ್ಬ ಏಕಾಂತವಾಸೀ ಸನ್ಯಾಸಿಯ ಹತ್ತಿರ ಹೋಗಿ ಕೇಳಿದ, “ಇಲ್ಲಿ ಏನಾದರೂ ಇದೆಯೇ? ಇಲ್ಲಿ ಏನಾದರೂ ಇದೆಯೇ?” ಆ ಸನ್ಯಾಸಿ ತನ್ನ ಮುಷ್ಟಿಯನ್ನು ಎತ್ತಿ ತೋರಿಸಿದ. “ನಿರ್ದಾಕ್ಷಿಣ್ಯವಾಗಿ ನೀನು ನೀಡುವೆ, ನಿರ್ದಾಕ್ಷಿಣ್ಯವಾಗಿ ನೀನು ತೆಗೆದುಕೊಳ್ಳುವೆ. ನಿರ್ದಾಕ್ಷಿಣ್ಯವಾಗಿ ನೀನು ಜೀವದಾನ ಮಾಡುವೆ, ನಿರ್ದಾಕ್ಷಿಣ್ಯವಾಗಿ ನೀನು ನಾಶ ಮಾಡುವೆ,” ಎಂಬುದಾಗಿ ಹೇಳಿದ ಜೋಶು ಗಂಭೀರವಾಗಿ ತಲೆಬಾಗಿಸಿ ವಂದಿಸಿದ.

ಝೆನ್‌ (Zen) ಕತೆ ೧೬೬. ನ್ಯಾನ್ಸೆನ್‌ನ ಸಾಮಾನ್ಯ ಮನಸ್ಸು

ನ್ಯಾನ್ಸೆನ್‌ನನ್ನು ಜೋಶು ಕೇಳಿದ, “ವಿಶ್ವದ ಆಗುಹೋಗುಗಳ ನಿರ್ಧಾರಕ ತತ್ವ ಏನು?” ನ್ಯಾನ್ಸೆನ್‌ ಉತ್ತರಿಸಿದ, “ನಿನ್ನ ಸಾಮಾನ್ಯ ಮನಸ್ಸು – ಅದೇ ನೀನು ಕೇಳಿದ ನಿರ್ಧಾರಕ ತತ್ವ.” ಜೋಶು ಕೇಳಿದ, “ಅದರ ಕಾರ್ಯವಿಧಾನಕ್ಕೊಂದು ದಿಕ್ಕು ಎಂಬುದಿದೆಯೇ?” ನ್ಯಾನ್ಸೆನ್‌ ಉತ್ತರಿಸಿದ, “ನೀನು ಅದನ್ನು ಹುಡುಕಿಕೊಂಡು ಹೋದಂತೆಲ್ಲ ಅದು ನಿನ್ನಿಂದ ದೂರ ದೂರಕ್ಕೆ ಸರಿಯುತ್ತದೆ.” ಜೋಶು: “ಅಂದ ಮೇಲೆ ಅದು ವಿಶ್ವದ ಆಗುಹೋಗುಗಳ ನಿರ್ಧಾರಕ ತತ್ವ ಎಂಬುದು ನಿಮಗೆ ತಿಳಿಯುವುದಾದರೂ ಹೇಗೆ?” ನ್ಯಾನ್ಸೆನ್‌: “ತಿಳಿಯುವುದು ಅಥವ ತಿಳಿಯದಿರುವುದು ಎಂಬುದಾಗಿ ಅದನ್ನು ವರ್ಗೀಕರಿಸಲಾಗುವುದಿಲ್ಲ. ತಿಳಿದಿದೆ ಅಂದುಕೊಳ್ಳುವುದು ಭ್ರಮೆ. ತಿಳಿಯಲಾಗುವುದಿಲ್ಲ ಅಂದುಕೊಳ್ಳುವುದು ವಿವೇಚನಾ ಶಕ್ತಿ ಇಲ್ಲದಿರುವಿಕೆಯ ಸೂಚಕ. ಇಂಥ ದಿಕ್ಕು ತೋಚದ ಸ್ಥಿತಿಯನ್ನು ನೀನು ತಲುಪಿದಾಗ, ಅದು ವ್ಯೋಮದ ವೈಶಾಲ್ಯದಂತಿರುತ್ತದೆ, ಹರವು ಅಳತೆ ಮಾಡಲಾಗದ ಖಾಲಿ ಸ್ಥಳ. ಅಂದ ಮೇಲೆ, ಅದನ್ನು ಇದು ಅಥವ ಅದು, ಹೌದು ಅಥವ ಇಲ್ಲ ಅನ್ನುವುದು ಹೇಗೆ?” ಇದನ್ನು ಕೇಳಿದ ಜೋಶುನಿಗೆ ಥಟ್ಟನೆ ಅದರ ಸಾಕ್ಷಾತ್ಕಾರವಾಯಿತು.

 ಝೆನ್‌ (Zen) ಕತೆ ೧೬೭. ನಿನ್ನ ಬಟ್ಟಲನ್ನು ತೊಳೆ

ಹೊಸದಾಗಿ ಸಂನ್ಯಾಸತ್ವ ಸ್ವೀಕರಿಸಿದವನೊಬ್ಬ ಗುರು ಜೋಶುವಿನ ಬಳಿಗೆ ಬಂದು ಕೇಳಿದ, “ನಾನು ಈಗ ತಾನೇ ಈ ಆಶ್ರಮಕ್ಕೆ ಸೇರಿದ್ದೇನೆ. ಝೆನ್‌ನ ಮೊದಲನೇ ತತ್ವವನ್ನು ಕಲಿಯಲು ನಾನು ಕಾತುರನಾಗಿದ್ದೇನೆ.”

ಜೋಶು ಕೇಳಿದ, “ನಿನ್ನ ಊಟವಾಯಿತೇ?”

ನವಶಿಷ್ಯ ಉತ್ತರಿಸಿದ, “ನನ್ನ ಊಟವಾಯಿತು.”

ಜೋಶು ಹೇಳಿದ, “ಸರಿ ಹಾಗದರೆ, ಈಗ ನಿನ್ನ ಬಟ್ಟಲನ್ನು ತೊಳೆ.”

 ಝೆನ್‌ (Zen) ಕತೆ ೧೬೮. ದಣಿದಾಗ

ವಿದ್ಯಾರ್ಥಿಯೊಬ್ಬ ಗುರುವನ್ನು ಕೇಳಿದ, “ಗುರುಗಳೇ, ನಿಜವಾದ ಅರಿವು ಅಂದರೇನು?”

ಗುರುಗಳು ಉತ್ತರಿಸಿದರು, “ಹಸಿವಾದಾಗ ಊಟ ಮಾಡು, ದಣಿದಾಗ ನಿದ್ದೆ ಮಾಡು.”

 ಝೆನ್‌ (Zen) ಕತೆ ೧೬೯. ಕಣ್ಣು ಮಿಟುಕಿಸದೆ

ಊಳಿಗಮಾನ್ಯ ಪದ್ಧತಿ ಇದ್ದ ಜಪಾನಿನಲ್ಲಿ ಅಂತರ್ಯುದ್ಧಗಳು ನಡೆಯುತ್ತಿದ್ದ ಕಾಲದಲ್ಲಿ ಆಕ್ರಮಣ ಮಾಡುತ್ತಿದ್ದ ಸೈನ್ಯ ಬಲು ವೇಗವಾಗಿ ಪಟ್ಟಣವನ್ನು ಆಕ್ರಮಿಸಿ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿತ್ತು. ಒಂದು ಹಳ್ಳಿಯಲ್ಲಿ ಆಕ್ರಮಣ ಮಾಡುವ ಸೈನ್ಯ ಬರುವುದಕ್ಕೆ ತುಸು ಮೊದಲೇ ಝೆನ್ ಗುರುವೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಪಲಾಯನ ಮಾಡಿದರು.

ಈ ವೃದ್ಧ ಗುರು ಎಂಥ ವ್ಯಕ್ತಿ ಎಂಬುದನ್ನು ಸ್ವತಃ ನೋಡಲೋಸುಗ ಸೇನಾನಿ ಅವನಿದ್ದ ದೇವಾಲಯಕ್ಕೆ ಹೋದ. ಅವನಿಗೆ ರೂಢಿಯಾಗಿದ್ದ ನಮ್ರತೆ ಮತ್ತು ಗೌರವ ಮರ್ಯಾದೆಗಳಿಂದ ಗುರು ಸೇನಾನಿಯೊಂದಿಗೆ ನಡೆದುಕೊಳ್ಳದ್ದರಿಂದ ಆತನಿಗೆ ವಿಪರೀತ ಸಿಟ್ಟು ಬಂದಿತು.

ಸಿಟ್ಟಿನಿಂದ ಸೇನಾನಿ ತನ್ನ ಕತ್ತಿಯನ್ನು ಒರೆಯಿಂದ ಹೊರಗೆಳೆಯುತ್ತಾ ಅಬ್ಬರಿಸಿದ, “ಎಲವೋ ಮೂರ್ಖ, ಕಣ್ಣು ಮಿಟುಕಿಸದೇ ನಿನ್ನ ಮೂಲಕ ಖಡ್ಗವನ್ನು ತೂರಿಸಬಲ್ಲ ವ್ಯಕ್ತಿಯ ಮುಂದೆ ನಿಂತಿದ್ದೇನೆ ಎಂಬ ಅರಿವೂ ನಿನಗಿಲ್ಲವೇ?”

ತಾಳ್ಮೆಯಿಂದ ಗುರುಗಳು ಉತ್ತರಿಸಿದರು, “ಖಡ್ಗ ತೂರಿಸಿದಾಗಲೂ ಕಣ್ಣು ಮಿಟುಕಿಸದೇ ನಿಲ್ಲಬಲ್ಲ ವ್ಯಕ್ತಿಯ ಎದುರು ನಿಂತಿದ್ದೇನೆ ಎಂಬ ಅರಿವು ನಿನಗಿದೆಯೇ?”

 ಝೆನ್‌ (Zen) ಕತೆ ೧೭೦. ಕೋಡಂಗಿಗಿಂತಲೂ ಕೆಟ್ಟದಾಗಿರು

ಬಲು ಶ್ರದ್ಧೆಯಿಂದ ಧರ್ಮಾನುಷ್ಠಾನ ನಿರತನಾಗಿದ್ದ ಯುವ ಸನ್ಯಾಸಿಯೊಬ್ಬ ಚೀನಾದಲ್ಲಿ ಇದ್ದ. ಒಂದು ಸಲ ಅರ್ಥವಾಗದ ಅಂಶವೊಂದು ಅವನ ಗಮನಕ್ಕೆ ಆಕಸ್ಮಿಕವಾಗಿ ಬಂದಿತು. ಅದರ ಕುರಿತು ಕೇಳಲೋಸುಗ ಅವನು ಗುರುವಿನ ಹತ್ತಿರ ಹೋದ. ಆತನ ಪ್ರಶ್ನೆಯನ್ನು ಗುರು ಕೇಳಿದ ತಕ್ಷಣ ಗಟ್ಟಿಯಾಗಿ ನಗಲಾರಂಭಿಸಿದರು, ಸುದೀರ್ಘ ಕಾಲ ನಗುತ್ತಲೇ ಇದ್ದರು. ಕೊನೆಗೆ ನಗುತ್ತಲೇ ಎದ್ದು ಅಲ್ಲಿಂದ ತೆರಳಿದರು.

ಗುರುವಿನ ಈ ಪ್ರತಿಕ್ರಿಯೆಯು ಯುವ ಸನ್ಯಾಸಿಯಲ್ಲಿ ಮನಃಕ್ಷೋಭೆಯನ್ನು ಉಂಟುಮಾಡಿತು. ಮುಂದಿನ ಮೂರು ದಿನಗಳ ಕಾಲ ಆತನಿಗೆ ಸರಿಯಾಗಿ ತಿನ್ನಲಾಗಲಿಲ್ಲ, ನಿದ್ದೆ ಮಾಡಲಾಗಲಿಲ್ಲ, ಅಷ್ಟೇ ಅಲ್ಲದೆ ಸರಿಯಾಗಿ ಆಲೋಚಿಸಲೂ ಆಗಲಿಲ್ಲ. ಮೂರು ದಿನಗಳ ನಂತರ ಆತ ಪುನಃ ಗುರುವಿನ ಹತ್ತಿರ ಹೋಗಿ ತನ್ನ ದುಸ್ಥಿತಿಯನ್ನು ಹೇಳಿಕೊಂಡ.

ಇದನ್ನು ಕೇಳಿದ ಗುರುಗಳು ಹೇಳಿದರು, “ಅಯ್ಯಾ ಸನ್ಯಾಸಿಯೇ, ನಿನ್ನ ಸಮಸ್ಯೆ ಏನೆಂಬುದು ನಿನಗೆ ಗೊತ್ತಿದೆಯೇ? ನೀನು ಒಬ್ಬ ಕೋಡಂಗಿಗಿಂತಲೂ ಕೀಳುಸ್ಥಿತಿಯಲ್ಲಿರುವುದೇ ನಿನ್ನ ಸಮಸ್ಯೆ.”

ಯುವ ಸನ್ಯಾಸಿಗೆ ಇದನ್ನು ಕೇಳಿ ಆಘಾತವಾಯಿತು. “ಪೂಜ್ಯರೇ, ನೀವು ಹೀಗೆ ಹೇಳಬಹುದೇ? ನಾನು ಕೋಡಂಗಿಗಿಂತಲೂ ಕೀಳುಸ್ಥಿತಿಯಲ್ಲಿರುವುದು ಹೇಗೆ?”

ಗುರುಗಳು ವಿವರಿಸಿದರು, “ಜನ ನಗಾಡುವುದನ್ನು ನೋಡಿ ಕೋಡಂಗಿ ಸಂತೋಷಿಸುತ್ತಾನೆ. ನೀನು? ಇನ್ನೊಬ್ಬ ನಕ್ಕರೆ ಮನಃಕ್ಷೋಭೆಗೀಡಾಗುತ್ತಿರುವೆ. ಈಗ ನೀನೇ ಹೇಳು, ನೀನು ಕೋಡಂಗಿಗಿಂತ ಕೀಳುಸ್ಥಿತಿಯಲ್ಲಿ ಇಲ್ಲವೇ?”

ಇದನ್ನು ಕೇಳಿದ ಯುವ ಸನ್ಯಾಸಿ ತಾನೂ ನಗಲಾರಂಭಿಸಿದ. ಅವನಿಗೆ ಜ್ಞಾನೋದಯವಾಯಿತು, ಅರ್ಥಾತ್‌ ನಿಜವಾದ ಅರಿವು ಮೂಡಿತು.

ಝೆನ್‌ (Zen) ಕತೆ ೧೭೧. ಶಿಗೆನ್‌ನ ಸ್ವಗತ

ಪ್ರತೀ ದಿನ ಶಿಗೆನ್‌ ತನ್ನೊಂದಿಗೆ ತಾನೇ ಇಂತು ಸಂಭಾಷಿಸುತ್ತಿದ್ದ:

“ಏ ನೈಜ ಆತ್ಮನೇ”

“ಹೇಳಿ, ಸ್ವಾಮಿ”

“ಎದ್ದೇಳು, ಎದ್ದೇಳು”

“ಆಯಿತು, ಎಚ್ಚರವಾಗಿದ್ದೇನೆ”

“ಈ ಕ್ಷಣದಿಂದ ಮುಂದಕ್ಕೆ ಇತರರು ಕೀಳಾಗಿ ನೋಡುವಂತೆ ಮಾಡಿಕೊಳ್ಳಬೇಡ, ಇತರರರು ನಿನ್ನನ್ನು ಮೂರ್ಖನನ್ನಾಗಿಸಲು ಬಿಡಬೇಡ!”

“ಇಲ್ಲ, ಅಂತಾಗಲು ನಾನು ಬಿಡುವುದಿಲ್ಲ.”

Advertisements
This entry was posted in ಝೆನ್‌ (Zen) ಕತೆಗಳು and tagged . Bookmark the permalink.

One Response to ಝೆನ್ (Zen) ಕತೆಗಳು: ಸಂಚಿಕೆ ೭

  1. kasimmk ಹೇಳುತ್ತಾರೆ:

    Zen ಕಥೆಗಳು ತುಂಬಾ ಸುಂದರವಾಗಿದೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s