ಝೆನ್ (Zen) ಕತೆಗಳು: ಸಂಚಿಕೆ ೫

ಝೆನ್‌ (Zen) ಕತೆ ೧೦೨. ತೋಸುಯ್‌ನ ವಿನಿಗರ್‌

ಭಿಕ್ಷುಕರೊಟ್ಟಿಗೆ ಒಂದು ಸೇತುವೆಯ ಅಡಿಯಲ್ಲಿ ವಾಸಿಸಲೋಸುಗ ದೇವಾಲಯಗಳ ಔಪಚಾರಿಕತೆಗಳನ್ನು ತ್ಯಜಿಸಿದವ ಝೆನ್‌ ಗುರು ತೋಸುಯ್‌. ತುಂಬಾ ವಯಸ್ಸು ಆದಾಗ ಭಿಕ್ಷೆ ಬೇಡದೆಯೇ ಜೀವಿಸಲು ಅಗತ್ಯವಾದ ಹಣ ಸಂಪಾದಿಸಲು ಅವನ ಮಿತ್ರನೊಬ್ಬ ಸಹಾಯ ಮಾಡಿದ. ಅಕ್ಕಿಯನ್ನು ಹೇಗೆ ಸಂಗ್ರಹಿಸಬೇಕು ಮತ್ತು ಅದರಿಂದ ವಿನಿಗರ್‌ ಉತ್ಪಾದಿಸುವುದು ಹೇಗೆ ಎಂಬುದನ್ನು ಅವನು ತೋರಿಸಿದ. ವಿಧಿವಶನಾಗುವ ವರೆಗೆ ತೋಸುಯ್‌ ಅದನ್ನೇ ಮಾಡುತ್ತಿದ್ದ.

ತೋಸುಯ್‌ ವಿನಿಗರ್‌ ತಯಾರಿಸುತ್ತಿದ್ದಾಗ ಭಿಕ್ಷುಕನೊಬ್ಬ ಅವನಿಗೆ ಬುದ್ಧನ ಚಿತ್ರವೊಂದನ್ನು ಕೊಟ್ಟ, ತೋಸುಯ್‌ ಅದನ್ನು ಗೋಡೆಯ ಮೇಲೆ ನೇತು ಹಾಕಿ ಪಕ್ಕದಲ್ಲಿ ಒಂದು ಮಾಹಿತಿಫಲಕವನ್ನೂ ಇಟ್ಟ. ಅದರಲ್ಲಿ ಇಂತು ಬರೆದಿತ್ತು:

ಶ್ರೀ ಅಮಿದಾ ಬುದ್ಧ: ಈ ಚಿಕ್ಕ ಕೋಣೆ ತುಂಬಾ ಇಕ್ಕಟ್ಟಾಗಿದೆ. ನೀನು ಸ್ವಲ್ಪಕಾಲ ಮಾತ್ರ ಇಲ್ಲಿ ಇರಲು ಅವಕಾಶ ನೀಡಬಲ್ಲೆ. ಅಂದ ಮಾತ್ರಕ್ಕೆ ನಿನ್ನ ಸ್ವರ್ಗದಲ್ಲಿ ಪುನಃ ಜನಿಸುವಂತೆ ನಿನ್ನನ್ನುಕೇಳುತ್ತಿದ್ದೇನೆ ಎಂಬುದಾಗಿ ಭಾವಿಸಬೇಡ.

 ಝೆನ್‌ (Zen) ಕತೆ ೧೦೩. ಬುದ್ಧನ ಝೆನ್‌

ಬುದ್ಧ ಹೇಳಿದ: “ರಾಜರುಗಳ ಮತ್ತು ಪ್ರಭುಗಳ ಸ್ಥಾನಮಾನಗಳನ್ನು ದೂಳಿನ ಕಣಗಳದ್ದಕ್ಕೆ ಸಮಾನ ಎಂಬುದಾಗಿ ಪರಿಗಣಿಸುತ್ತೇನೆ.

ಚಿನ್ನ ಮತ್ತು ರತ್ನಮಣಿಗಳ ಸಂಪತ್ತನ್ನು ಅಷ್ಟೇ ಪ್ರಮಾಣದ ಇಟ್ಟಿಗೆ ಮತ್ತು ಸಣ್ಣ ಉರುಟುಗಲ್ಲುಗಳು ಎಂಬುದಾಗಿ ಭಾವಿಸುತ್ತೇನೆ.

ಅತ್ಯುತ್ತಮವಾದ ರೇಷ್ಮೆ ಉಡುಪನ್ನು ಚಿಂದಿ ಚೂರಾಗಿರುವ ಹರಕು ಬಟ್ಟೆ ಎಂಬಂತೆ ನೋಡುತ್ತೇನೆ.

ವಿಶ್ವದಲ್ಲಿರುವ ಅಸಂಖ್ಯಾತ ಲೋಕಗಳನ್ನು ಹಣ್ಣಿನ ಸಣ್ಣ ಬೀಜಗಳಂತೆಯೂ ಭಾರತದ ಅತಿ ದೊಡ್ಡ ಸರೋವರವನ್ನು ನನ್ನ ಕಾಲಿನ ಮೇಲೆ ಇರುವ ಒಂದು ತೊಟ್ಟು ಎಣ್ಣೆಯಂತೆಯೂ ಕಾಣುತ್ತೇನೆ.

ಪ್ರಪಂಚದ ಬೋಧನೆಗಳನ್ನು ಜಾದೂಗಾರರು ಸೃಷ್ಟಿಸಿರುವ ಭ್ರಮೆ ಎಂದು ಗ್ರಹಿಸುತ್ತೇನೆ.

ಅತ್ಯುತ್ತಮವಾದ ವಿಮೋಚನೆಯ ಪರಿಕಲ್ಪನೆಯನ್ನು ಕನಸಿನಲ್ಲಿ ಗೋಚರಿಸುವ ಚಿನ್ನದ ಕಿಂಕಾಪು ಎಂಬುದಾಗಿ ತಿಳಿಯುತ್ತೇನೆ ಮತ್ತು ಆಧ್ಯಾತ್ಮಿಕ ಜ್ಞಾನಿಗಳ ಪವಿತ್ರ ವಿಧಾನಗಳನ್ನು ಒಬ್ಬನ ಕಣ್ಣುಗಳಲ್ಲಿ ಕಾಣಿಸಿಕೊಳ್ಳುವ ಪೊರೆ ಎಂಬಂತೆ ಕಾಣುತ್ತೇನೆ.

ಧ್ಯಾನವನ್ನು ಒಂದು ಪರ್ವತದ ಕಂಭದಂತೆಯೂ ನಿರ್ವಾಣವನ್ನು ಹಗಲು ಬೀಳುವ ಕೆಟ್ಟ ಕನಸಿನಂತೆಯೂ ನೋಡುತ್ತೇನೆ.

ಸರಿ ಮತ್ತು ತಪ್ಪುಗಳ ತೀರ್ಮಾನವನ್ನು ಡ್ರ್ಯಾಗನ್‌ನ ಮಾಡುವ ಹಾವಿನಂಥ ನೃತ್ಯ ಎಂಬಂತೆಯೂ ನಂಬಿಕೆಗಳ ಏಳು ಬೀಳುಗಳನ್ನು ವರ್ಷದ ನಾಲ್ಕು ಕಾಲಗಳು ಬಿಟ್ಟು ಹೋಗಿರುವ ಕುರುಹುಗಳು ಎಂಬಂತೆಯೂ ಕಾಣುತ್ತೇನೆ.

 ಝೆನ್‌ (Zen) ಕತೆ ೧೦೪. ಇನ್ನೊಂದು ದಡ

ಯುವ ಬೌದ್ಧಪಂಥೀಯೊಬ್ಬ ಒಂದು ದಿನ ತನ್ನ ಮನೆಯತ್ತ ಪಯಣಿಸುತ್ತಿರುವಾಗ ಅಗಲವಾದ ನದಿಯ ದಡಕ್ಕೆ ಬಂದನು. ತನ್ನ ಎದುರು ಇರುವ ಬೃಹತ್‌ ಅಡಚಣೆಯನ್ನು ನಿರಾಸೆಯಿಂದ ದಿಟ್ಟಿಸಿ ನೋಡುತ್ತಾ ಅದನ್ನು ದಾಟುವುದು ಹೇಗೆಂಬುದರ ಕುರಿತು ಗಂಟೆಗಟ್ಟಲೆ ಆಲೋಚಿಸಿದ. ಕೊನೆಗೆ ಆ ಪ್ರಯತ್ನವನ್ನು ಕೈಬಿಟ್ಟು ಬೇರೊಂದು ಮಾರ್ಗವಾಗಿ ಪ್ರಯಾಣ ಮುಂದುವರಿಸುಲು ಆರಂಭಿಸುವಷ್ಟರಲ್ಲಿ ನದಿಯ ಇನ್ನೊಂದು ದಡದಲ್ಲಿ ಖ್ಯಾತ ಅಧ್ಯಾಪಕನೊಬ್ಬನನ್ನು ನೋಡಿದ. ಯುವ ಬೌದ್ಧಪಂಥೀಯನು ತಾನಿರುವಲ್ಲಿಂದಲೇ ಆ ಅಧ್ಯಾಪಕನಿಗೆ ಕೇಳುವಂತೆ ಕಿರುಚಿದ: “ಓ ಜ್ಞಾನಿಯೇ, ನದಿಯ ಇನ್ನೊಂದು ದಡಕ್ಕೆ ಹೇಗೆ ದಾಟಬಹುದೆಂಬುದನ್ನು ನೀವು ನನಗೆ ಹೇಳಬಲ್ಲಿರಾ?”

ಅಧ್ಯಾಪಕ ಒಂದು ಕ್ಷಣ ಆಲೋಚಿಸಿ ತದನಂತರ ನದಿಯನ್ನು ಅದರ ಉದ್ದಗಲಕ್ಕೂ ವೀಕ್ಷಿಸಿ ಕಿರುಚಿದ: “ಮಗೂ ನೀನು ಇನ್ನೊಂದು ದಡದಲ್ಲಿಯೇ ಇರುವೆ.”

 ಝೆನ್‌ (Zen) ಕತೆ ೧೦೫. ಇರಬಹುದು

ಒಂದಾನೊಂದು ಕಾಲದಲ್ಲಿ ಅನೇಕ ವರ್ಷಗಳಿಂದ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದ ಮುದಿ ಕೃಷಿಕನೊಬ್ಬನಿದ್ದ. ಒಂದು ದಿನ ಅವನ ಕುದುರೆ ಓಡಿ ಹೋಯಿತು. ಸುದ್ದಿ ತಿಳಿದ ನೆರೆಹೊರೆಯವರು ಬಂದು “ಎಂಥಾ ದುರದೃಷ್ಟ” ಎಂಬುದಾಗಿ ಸಹಾನುಭೂತಿ ವ್ಯಕ್ತಪಡಿಸಿದರು.

ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.”

ಮರುದಿನ ಬೆಳಗ್ಗೆ ಆ ಕುದುರೆ ಹಿಂದಿರುಗಿತು. ಬರುವಾಗ ತನ್ನೊಂದಿಗೆ ಮೂರು ಕಾಡು ಕುದುರೆಗಳನ್ನೂ ಕರೆತಂದಿತು.

ನೆರೆಹೊರೆಯವರು ಉದ್ಗರಿಸಿದರು: “ಎಂಥಾ ಅದ್ಭುತ.”

ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.”

ಮರುದಿನ ಅವನ ಮಗ ಪಳಗಿಸದೇ ಇದ್ದ ಕಾಡುಕುದುರೆಯೊಂದನ್ನು ಸವಾರಿ ಮಾಡಲು ಪ್ರಯತ್ನಿಸಿದ. ಅದು ಅವನನ್ನು ಎಸೆದದ್ದರಿಂದ ಅವನ ಕಾಲು ಮುರಿಯಿತು. ಅವನ ದುರದೃಷ್ಟಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರು ನೆರೆಹೊರೆಯವರು.

ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.”

 ಅದರ ಮರುದಿನ ಸೈನ್ಯಕ್ಕೆ ಯುವಕರನ್ನು ಭರ್ತಿ ಮಾಡಿಕೊಳ್ಳಲೋಸುಗ ಸೇನಾಧಿಕಾರಿಗಳು ಆ ಹಳ್ಳಿಗೆ ಬಂದರು. ಮುದಿ ಕೃಷಿಕನ ಮಗನ ಕಾಲು ಮುರಿದಿರುವುದನ್ನು ನೋಡಿ ಅವನನ್ನು ಬಿಟ್ಟು ತೆರಳಿದರು. ನೆರೆಹೊರೆಯವರು ಬಂದು ಅವನ ಈ ಅದೃಷ್ಟಕ್ಕೆ ಅಭಿನಂದಿಸಿದರು.

ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.”

 ಝೆನ್‌ (Zen) ಕತೆ ೧೦೬. ಕುರುಡರು ಮತ್ತು ಆನೆ.

 ವಿಭಿನ್ನ ಮತಗಳ ಮತ್ತು ದೇವರ ಕುರಿತಂತೆ ಹಲವು ಮಂದಿ ಪ್ರಜೆಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತಾದರೂ ಸರ್ವಸಮ್ಮತವಾದ ಉತ್ತರವೊಂದು ಸಿಕ್ಕಲಿಲ್ಲ. ಎಂದೇ, ಅವರು ದೇವರು ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಬಳಿ ಬಂದರು.

ಒಂದು ಭವ್ಯವಾದ ಆನೆಯನ್ನೂ ನಾಲ್ವರು ಕುರುಡರನ್ನೂ ಕರೆ ತರುವಂತೆ ಬುದ್ಧ ತನ್ನ ಶಿಷ್ಯರಿಗೆ ಆದೇಶಿಸಿದ. ಅವರು ಅಂತೆಯೇ ಮಾಡಿದ ನಂತರ ಅವನು ನಾಲ್ವರು ಕುರುಡರನ್ನು ಅನೆಯ ಹತ್ತಿರ ಕರೆತಂದು ಆನೆ ’ನೋಡಲು’ ಹೇಗಿರುತ್ತದೆ ಎಂಬುದನ್ನು ಪತ್ತೆಹಚ್ಚಲು ಹೇಳಿದ.

ಮೊದಲನೆಯ ಕುರುಡ ಆನೆಯ ಕಾಲನ್ನು ಮುಟ್ಟಿ ಆನೆ ’ನೋಡಲು’ ಕಂಭದಂತಿದೆ ಎಂಬುದಾಗಿ ವರದಿ ಮಾಡಿದ. ಎರಡನೆಯವನು ಹೊಟ್ಟೆಯನ್ನು ಮುಟ್ಟಿ ಹೇಳಿದ: “ಗೋಡೆಯಂತಿದೆ.” ಮೂರನೆಯವನು ಕಿವಿಯನ್ನು ಮುಟ್ಟಿ ಹೇಳಿದ: “ಬಟ್ಟೆಯ ಚೂರಿನಂತಿದೆ.” ನಾಲ್ಕನೆಯವನು ಬಾಲವನ್ನು ಮುಟ್ಟಿ ಹೇಳಿದ: “ಹಗ್ಗದಂತಿದೆ.” ತತ್ಪರಿಣಾಮವಾಗಿ ಆನೆ ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಆಯಿತು.

ಬುದ್ಧ ಪ್ರಜೆಗಳನ್ನೂ ಕೇಳಿದ: “ಪ್ರತೀ ಕುರುಡನೂ ಆನೆಯನ್ನು ಮುಟ್ಟಿದ್ದಾನಾದರೂ ಅವರು ಆನೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಉತ್ತರಗಳ ಪೈಕಿ ಯಾವುದು ಸರಿ?”

 ಝೆನ್‌ (Zen) ಕತೆ ೧೦೭. ಅತೀ ಪ್ರೀತಿ

ಸುದೀರ್ಘಕಾಲ ಕ್ರಿಯಾಶೀಲ ಜೀವನ ನಡೆಸಿದ್ದ ವಯಸ್ಸಾದ ಸನ್ಯಾಸಿಯೊಬ್ಬನನ್ನು ಬಾಲಕಿಯರ ಶಿಕ್ಷಣ ಕೇಂದ್ರದಲ್ಲಿ ಪ್ರಾರ್ಥನಾ ಮಂದಿರದ ಪಾದ್ರಿಯಾಗಿ ನೇಮಿಸಲಾಯಿತು. ಚರ್ಚಾಗೋಷ್ಟಿಗಳಲ್ಲಿ ಆಗಾಗ್ಗೆ ಪ್ರೀತಿ, ಪ್ರೇಮ ಪ್ರಮುಖ ವಿಷಯವಾಗಿರುತ್ತಿದ್ದದ್ದನ್ನು ಆತ ಗಮನಿಸಿದ.

ಯುವತಿಯರಿಗೆ ಈ ಕುರಿತಾದ ಅವನ ಎಚ್ಚರಿಕೆ ಇಂತಿತ್ತು: “ನಿಮ್ಮ ಜೀವನದಲ್ಲಿ ಯಾವುದೇ ಆಗಿರಲಿ ಅತಿಯಾಗುವುದರ ಅಪಾಯವನ್ನು ತಿಳಿಯಿರಿ. ಅತಿಯಾದ ಕೋಪ ಕಾಳಗದಲ್ಲಿ ಭಂಡ ಧೈರ್ಯಕ್ಕೆ ಕಾರಣವಾಗಿ ಸಾವಿನಲ್ಲಿ ಅಂತ್ಯಗೊಳ್ಳಬಹುದು. ಮತೀಯ ನಂಬಿಕೆಗಳಲ್ಲಿ ಅತಿಯಾದ ವಿಶ್ವಾಸ ಮುಚ್ಚಿದ ಮನಸ್ಸು ಮತ್ತು ಕಿರುಕುಳ ಕೊಡುವಿಕೆಗೆ ಕಾರಣವಾಗಬಹುದು. ಅತಿಯಾದ ಭಾವೋದ್ರೇಕಯುತ ಪ್ರೀತಿಯು ಪ್ರೀತಿ ಪಾತ್ರರ ಕಾಲ್ಪನಿಕ ಬಿಂಬಗಳನ್ನು ಸೃಷ್ಟಿಸುತ್ತದೆ – ಅಂತಿಮವಾಗಿ ಅವು ಮಿಥ್ಯಾಬಿಂಬಗಳು ಎಂಬುದು ಸಾಬೀತಾಗಿ ಕೋಪ ಉಂಟಾಗುತ್ತದೆ. ಅತಿಯಾಗಿ ಪ್ರೀತಿಸುವುದು ಚಾಕಿನ ಮೊನೆಯಿಂದ ಜೇನು ನೆಕ್ಕಿದಂತೆ.”

“ಬ್ರಹ್ಮಚಾರಿ ಸನ್ಯಾಸಿಯಾಗಿರುವ ನಿಮಗೆ ಗಂಡು ಮತ್ತು ಹೆಣ್ಣಿನ ನಡುವಣ ಪ್ರೀತಿಯ ಕುರಿತು ಗೊತ್ತಿರುವುದು ಹೇಗೆ ಸಾಧ್ಯ?” ಕೇಳಿದಳು ಒಬ್ಬ ಯುವತಿ.

“ಪ್ರಿಯ ಮಕ್ಕಳೇ, ಯಾವಾಗಲಾದರೊಮ್ಮೆ ನಾನೇಕೆ ಸನ್ಯಾಸಿಯಾದೆ ಎಂಬುದನ್ನು ನಿಮಗೆ ಹೇಳುತ್ತೇನೆ,” ಅಂದನಾ ಸನ್ಯಾಸಿ.

ಝೆನ್‌ (Zen) ಕತೆ ೧೦೮. ಬದಲಾವಣೆ!

ಬಲು ಕೆಟ್ಟ ಸಿಡುಕಿಗೆ ಖ್ಯಾತನಾಗಿದ್ದ ಚೀನೀ ಚಕ್ರವರ್ತಿಯೊಬ್ಬ ಶೀಘ್ರದಲ್ಲಿಯೇ ಅವನ ವಧುವಾಗಲಿರುವವಳ ಮಲಗುವ ಕೋಣೆಯನ್ನು ಪ್ರವೇಶಿಸಿದ. ಇಡೀ ಚೀನಾದಲ್ಲಿ ಇರುವ ಪರಮ ಸುಂದರಿಯರ ಪೈಕಿ ಅವಳೂ ಒಬ್ಬಳಾಗಿದ್ದಳು. ಅವಳ ಇಚ್ಛೆಗೆ ವಿರುದ್ಧವಾಗಿ ಅವಳ ತಂದೆತಾಯಿಯರು ಬಲವಂತವಾಗಿ ಅವನನ್ನು ವಿವಾಹ ಆಗುವಂತೆ ಮಾಡಿದ್ದರು.

ಚಿಕ್ಕವಳಾಗಿದ್ದಾಗ ಮಹಾಪ್ರಾಜ್ಞರು ಅವಳ ಅಧ್ಯಾಪಕರಾಗಿದ್ದರು ಎಂಬುದು ಚಕ್ರವರ್ತಿಗೆ ತಿಳಿದಿರಲಿಲ್ಲ. ಭಾವಶೂನ್ಯಳಾಗಿ ಗೋಡೆಯನ್ನೇ ದುರುಗುಟ್ಟಿ ನೋಡುತ್ತಾ ಅವಳು ಕುಳಿತಿದ್ದಳು. ಚಕ್ರವರ್ತಿ “ಹಲೋ ಸುಂದರಿ” ಎಂಬುದಾಗಿ ಸಂಬೋಧಿಸಿದರೂ ಆಕೆ ಪ್ರತಿಕ್ರಿಯಿಸಲಿಲ್ಲ.

“ನಾನು ಹಲೋ ಹೇಳಿದ್ದು ನಿನಗೆ. ನಾನು ಸಂಬೋಧಿಸಿದಾಗ ನೀನು ಪ್ರತಿಕ್ರಿಯಿಸಲೇ ಬೇಕು, ತಿಳಿಯಿತೇ?” ಎಂಬುದಾಗಿ ಆತ ಗುರಕಾಯಿಸಿದ. ಆದರೂ ಆಕೆ ಪ್ರತಿಕ್ರಿಯಿಸಲಿಲ್ಲ.

ಬಹಳಷ್ಟು ಮಂದಿ ಅವನು ಅಷ್ಟು ಹೇಳಿದಾಗಲೇ ಉತ್ತರಿಸುತ್ತಿದ್ದರಾದ್ದರಿಂದ  ಅವನಲ್ಲಿ ಕುತೂಹಲ ಉಂಟಾಯಿತು. “ನೀನೇನು ಆಲೋಚಿಸುತ್ತಿರುವೆ?” ಒರಟಾಗಿ ಕೇಳಿದ.

ಕೊನೆಗೂ ಅವಳು ಉತ್ತರಿಸಿದಳು: “ಎರಡು ವಿಷಯಗಳು. ಮೊದಲನೆಯದಾಗಿ ನಿನ್ನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನೊಬ್ಬ ನಿಷ್ಕರುಣಿ ಮತ್ತು ಕೀಳು ಪ್ರವೃತ್ತಿಯವನು. ಮತ್ತಿನ್ನೊಂದು ವಿಷಯ, ನಿರ್ದಿಷ್ಟವಾದ ಏನೋ ಒಂದನ್ನು ಬದಲಾಯಿಸುವ ತಾಕತ್ತು ನಿನಗಿದೆಯೇ ಎಂಬುದರ ಕುರಿತು ಆಲೋಚಿಸುತ್ತಿದ್ದೆ.”

“ಏನು?!” ತೀವ್ರ ಅಸಮಾಧಾನದಿಂದ ಉದ್ಗರಿಸಿದ ಚಕ್ರವರ್ತಿ. “ಏಯ್‌ ದುಶ್ಶೀಲೆ. ನನ್ನ ಅಧಿಕಾರವನ್ನು ಪ್ರಶ್ನಿಸಲು ನಿನಗೆಷ್ಟು ಧೈರ್ಯ!…. ಆದರೆ…. ನನಗೆ ಕುತೂಹಲ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಬೆರಳಿನಿಂದ ಚಿಟಿಕೆ ಹೊಡೆದರೆ ಸಾಕು, ನನ್ನ ರಾಜ್ಯದಲ್ಲಿ ನನ್ನ ಆಜ್ಞೆ ಪಾಲಿಸಲ್ಪಡುತ್ತದೆ. ನನ್ನಿಂದ ಬದಲಾಯಿಸಲು ಸಾಧ್ಯವೇ ಎಂಬುದಾಗಿ ಯಾವುದರ ಕುರಿತು ನೀನು ಆಲೋಚಿಸುತ್ತಿದ್ದೆ?”

ಅವಳು ಉತ್ತರಿಸಿದಳು: “ನಿನ್ನ ಮನೋಧರ್ಮ.” ಅಷ್ಟು ಹೇಳಿ ಅವಳು ಎದ್ದು ಆ ಕೋಣೆಯಿಂದ ಹೊರ ನಡೆದಳು. ಚಕ್ರವರ್ತಿ ಮೌನವಾಗಿ ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದ.

 ಝೆನ್‌ (Zen) ಕತೆ ೧೦೯. ಸತ್ಯದ ತುಣುಕನ್ನು ಆವಿಷ್ಕರಿಸುವುದು

ದುಷ್ಟ ಮಾರ ಅದೊಂದು ದಿನ ತನ್ನ ಅನುಚರರೊಂದಿಗೆ ಹಳ್ಳಿಗಳ ಮೂಲಕ ಪಯಣಿಸುತ್ತಿದ್ದ. ಆಶ್ಚರ್ಯಚಕಿತ ಮುಖಭಾವದೊಂದಿಗೆ ಧ್ಯಾನ ಮಾಡುತ್ತಾ ನಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಅವರು ನೋಡಿದರು. ತನ್ನ ಮುಂದಿದ್ದ ನೆಲದಲ್ಲಿ ಏನನ್ನೋ ಆತ ಆಗ ತಾನೇ ಆವಿಷ್ಕರಿಸಿದಂತಿತ್ತು. ಅದೇನಿರಬಹುದೆಂದು ಅನುಚರನೊಬ್ಬ ಮಾರನನ್ನು ಕೇಳಿದಾಗ ಅವನು ಉತ್ತರಿಸಿದ: “ಸತ್ಯದ ತುಣುಕು.”

“ಓ ದುಷ್ಟನೇ, ಯಾರಾದರೊಬ್ಬ ಸತ್ಯದ ತುಣುಕನ್ನು ಆವಿಷ್ಕರಿಸುವುದು ನಿನ್ನನ್ನು ಚಿಂತೆಗೀಡು ಮಾಡುವುದಿಲ್ಲವೇ?” ಎಂಬುದಾಗಿ ಕೇಳಿದ ಅನುಚರ. ಮಾರ ಉತ್ತರಿಸಿದ: “ಇಲ್ಲ. ಏಕೆಂದರೆ, ಅದನ್ನು ಅವರು ಆವಿಷ್ಕರಿಸಿದ ಕೂಡಲೇ ನಂಬಿಕೆಯಾಗಿ ಪರಿವರ್ತಿಸುತ್ತಾರೆ.”

 ಝೆನ್‌ (Zen) ಕತೆ ೧೧೦. ಘಂಟೆ ಅಧ್ಯಾಪಕ

ತರಬೇತಿಗೆ ತನ್ನನ್ನು ತಾನು ಹೇಗೆ ಸಿದ್ಧಪಡಿಸಿಕೊಳ್ಳಬೇಕು ಎಂಬುದಾಗಿ ಹೊಸ ವಿದ್ಯಾರ್ಥಿಯೊಬ್ಬ ಝೆನ್‌ ಗುರುವಿನ ಹತ್ತಿರ ಕೇಳಿದ. ಗುರು ವಿವರಿಸಿದರು: “ನಾನೊಂದು ಘಂಟೆ ಎಂಬುದಾಗಿ ಕಲ್ಪಿಸಿಕೊ. ನನ್ನನ್ನು ಮಿದುವಾಗಿ ತಟ್ಟಿದರೆ ನಿನಗೊಂದು ಕ್ಷೀಣವಾದ ಅನುರಣಿಸುವ ಶಬ್ದ ಕೇಳಿಸುತ್ತದೆ. ಬಲವಾಗಿ ಹೊಡೆದರೆ ಕಿವಿಯಲ್ಲಿ ಮೊರೆಯುವಂಥ ಶಬ್ದ ಗಟ್ಟಿಯಾಗಿ ಕೇಳಿಸುತ್ತದೆ.”

 ಝೆನ್‌ (Zen) ಕತೆ ೧೧೧. ಪುಸ್ತಕಗಳು

ಹಿಂದೊಮ್ಮೆ ಅನೇಕ ವರ್ಷಗಳ ಕಾಲ ಝೆನ್‌ ಅಧ್ಯಯನವನ್ನೇ ಮಾಡುತ್ತಿದ್ದ ದಾರ್ಶನಿಕ ಹಾಗೂ ಪಂಡಿತನೊಬ್ಬನಿದ್ದ. ಜ್ಞಾನೋದಯವಾದ ದಿನ ಆತ ತನ್ನ ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನೂ ಪ್ರಾಂಗಣದಲ್ಲಿ ರಾಶಿ ಮಾಡಿ ಸುಟ್ಟು ಹಾಕಿದ.

 ಝೆನ್‌ (Zen) ಕತೆ ೧೧೨. ಅಹಂಕಾರ

ಟ್ಯಾಂಗ್‌ ವಂಶದವರ ಪ್ರಧಾನ ಮಂತ್ರಿಯು ರಾಜನೀತಿಜ್ಞನಾಗಿಯೂ ಸೈನ್ಯದ ನಾಯಕನಾಗಿಯೂ ಯಶಸ್ಸು ಗಳಿಸಿದ್ದರಿಂದ ರಾಷ್ಟ್ರೀಯ ಮಹಾಪುರುಷನಾಗಿದ್ದ. ಝೆನ್‌ ಅಧ್ಯಯಿಸಲೋಸುಗ ಆಗಾಗ್ಗೆ ಅವನು ತನ್ನ ನೆಚ್ಚಿನ ಗುರುವಿನ ಹತ್ತಿರ ಹೋಗುತ್ತಿದ್ದ. ಅವರೀರ್ವರೂ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಗೌರವಯುತವಾದ ನಡೆವಳಿಕೆಯುಳ್ಳ ಶಿಷ್ಯ ಮತ್ತು ಗೌರವಾನ್ವಿತ ಗುರುವಿನ ನಡುವೆ ಇರಬೇಕಾದ ಸಂಬಂಧ ಅವರ ನಡುವೆ ಇತ್ತೇ ವಿನಾ ಒಬ್ಬ ಪ್ರಧಾನಿ ಮತ್ತು ಅವನ ಸಲಹೆಗಾರನ ನಡುವಿನ ಸಂಬಂಧವಲ್ಲ.

ಮಾಮೂಲಿ ಭೇಟಿಯ ಒಂದು ದಿನ ಪ್ರಧಾನಿ ಗುರುವನ್ನು ಕೇಳಿದರು: “ಬೌದ್ಧ ಸಿದ್ಧಾಂತದ ಪ್ರಕಾರ ಅಹಂಕಾರ ಎಂದರೇನು ಗುರುಗಳೇ?”

ಗುರುಗಳ ಮುಖ ಕೋಪದಿಂದ ಕೆಂಪಾಯಿತು, ಮಹದುಪಕಾರ ಮಾಡುವವನಂತೆ ಮೂದಲಿಸುವ ಧ್ವನಿಯಲ್ಲಿ ಗುರುಗಳು ಹಿಂದುಮುಂದು ನೋಡದೆ ಉದ್ಗರಿಸಿದರು: “ಇದೆಂಥ ಮೂರ್ಖ ಪ್ರಶ್ನೆ?”

ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಪ್ರಧಾನಿಗೆ ಆಘಾತವಾಯಿತು, ಅಸಮಾಧಾನದಿಂದ ಕೋಪ ಬಂದಿತು.

ಝೆನ್ ಗುರು ಮುಗುಳ್ನಗೆ ಬೀರಿ ಹೇಳಿದರು: “ಮಹಾಶಯರೇ ಇದೇ ಅಹಂಕಾರ”

 ಝೆನ್‌ (Zen) ಕತೆ ೧೧೩. ಆನೆ ಮತ್ತು ಚಿಗಟ

ಮನೋವಿಶ್ಲೇಷಕರ ಒಂದು ಗುಂಪಿಗೆ ಝೆನ್‌ ಕುರಿತು ತಿಳಿವಳಿಕೆ ನೀಡಲು ಒಪ್ಪಿದ ರೋಶಿ ಕಾಪೆಲೌ. ಮನೋವಿಶ್ಲೇಷಣ ಸಂಸ್ಥೆಯ ನಿರ್ದೇಶಕರು ಅವನನ್ನು ಗುಂಪಿಗೆ ಪರಿಚಯಿಸಿದ ನಂತರ ರೋಶಿ ನೆಲದ ಮೇಲೆ ಇದ್ದ ಮೆತ್ತೆಯ ಮೇಲೆ ಮೌನವಾಗಿ ಕುಳಿತನು. ಒಬ್ಬ ವಿದ್ಯಾರ್ಥಿ ಪ್ರವೇಶಿಸಿ ಸಾಷ್ಟಂಗವೆರಗಿ ಕೆಲವೇ ಅಡಿಗಳಷ್ಟು ದೂರದಲ್ಲಿದ್ದ ಮೆತ್ತೆಯೊಂದರ ಮೇಲೆ ಅಧ್ಯಾಪಕನತ್ತ ಮುಖ ಮಾಡಿ ಕುಳಿತು ಕೇಳಿದ: “ಝೆನ್‌ ಅಂದರೇನು?”. ರೋಶಿ ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ಸುಲಿದು ತಿನ್ನಲಾರಂಭಿಸಿದ. “ಇಷ್ಟೇನಾ? ಬೇರೇನನ್ನೂ ನೀವು ನನಗೆ ತೋರಿಸಲಾರಿರಾ?” ಕೇಳಿದ ವಿದ್ಯಾರ್ಥಿ. “ದಯವಿಟ್ಟು ಹತ್ತಿರ ಬಾ” ಅಂದರು ಗುರುಗಳು. ಹತ್ತಿರ ಬಂದ ವಿದ್ಯಾರ್ಥಿಯ ಮುಖದೆದುರು ಬಾಳೆಹಣ್ಣಿನ ಉಳಿದ ಭಾಗವನ್ನು ಅಲ್ಲಾಡಿಸಿದರು. ವಿದ್ಯಾರ್ಥಿ ಸಾಷ್ಟಂಗವೆರಗಿ ಅಲ್ಲಿಂದ ತೆರಳಿದ.

ಇನ್ನೊಬ್ಬ ವಿದ್ಯಾರ್ಥಿ ಎದ್ದು ನಿಂತು ಶ್ರೋತೃಗಳನ್ನು ಉದ್ದೇಶಿಸಿ ಹೇಳಿದ: “ನಿಮಗೆಲ್ಲರಿಗೂ ಅರ್ಥವಾಯಿತೇ? ಝೆನ್‌ನ ಅತ್ಯುತ್ತಮ ಪ್ರಾತ್ಯಕ್ಷಿಕೆಯನ್ನು ನೀವು ಈಗ ತಾನೇ ನೋಡಿದಿರಿ. ಏನಾದರೂ ಪ್ರಶ್ನೆಗಳಿವೆಯೇ?”

ಸುದೀರ್ಘ ಮೌನದ ನಂತರ ಶ್ರೋತೃಗಳ ಪೈಕಿ ಯಾರೋ ಒಬ್ಬ ಮಾತನಾಡಿದ: “ರೋಶಿ, ನಿಮ್ಮ ಪ್ರಾತ್ಯಕ್ಷಿಕೆಯಿಂದ ನನಗೆ ತೃಪ್ತಿ ದೊರೆಯಲಿಲ್ಲ. ನೀವೀಗ ತೋರಿಸಿದ್ದು ನನಗೆ ಅರ್ಥವಾಯಿತು ಎಂಬುದಾಗಿ ಖಚಿತವಾಗಿ ಹೇಳಲಾರೆ. ಝೆನ್‌ ಅಂದರೇನು ಎಂಬುದನ್ನು ಹೇಳಲು ಸಾಧ್ಯವಿರಲೇ ಬೇಕು.”

ರೋಶಿ ಉತ್ತರಿಸಿದ: “ಪದಗಳಲ್ಲಿಯೇ ಹೇಳಬೇಕು ಎಂಬುದಾಗಿ ನೀವು ಒತ್ತಾಯಿಸುವುದಾದರೆ ’ಝೆನ್‌ ಎಂಬುದು ಚಿಗಟವನ್ನು ಸಂಭೋಗಿಸುತ್ತಿರುವ ಆನೆ’.”

ಝೆನ್‌ (Zen) ಕತೆ ೧೧೪. ಎರಡು ಮೊಲಗಳ ಬೆನ್ನಟ್ಟಿ ಹೋಗುವುದು.

ಕದನ ಕಲೆಗಳ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಾಪಕನನ್ನು ಸಮೀಪಿಸಿ ಕೇಳಿದ: “ಕದನ ಕಲೆಗಳ ಕುರಿತಾದ ನನ್ನ ಜ್ಞಾನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳು ಬಯಕೆ ನನ್ನದು. ನಿಮ್ಮಿಂದ ಕಲಿಯುವುದರ ಜೊತೆಯಲ್ಲಿ ಇನ್ನೊಂದು ಶೈಲಿಯನ್ನು ಇನ್ನೊಬ್ಬ ಅಧ್ಯಾಪಕರಿಂದ ಕಲಿಯಬೇಕೆಂದಿದ್ದೇನೆ. ಈ ನನ್ನ ಆಲೋಚನೆಯ ಕುರಿತು ನಿಮ್ಮ ಅನಿಸಿಕೆ ಏನು?”

ಗುರುಗಳು ಉತ್ತರಿಸಿದರು: “ ಎರಡು ಮೊಲಗಳ ಬೆನ್ನಟ್ಟಿ ಹೋಗುವ ಬೇಟೆಗಾರ ಯಾವುದೊಂದನ್ನೂ ಹಿಡಿಯುವುದಿಲ್ಲ.”

 ಝೆನ್‌ (Zen) ಕತೆ ೧೧೫. ಹೈಆಕುಜೊನ ನರಿ

ಹೈಆಕುಜೊ ಪ್ರವಚನ ನೀಡುವಾಗಲೆಲ್ಲ ಇತರ ಸನ್ಯಾಸಿಗಳ ಜೊತೆ ಒಬ್ಬ ವೃದ್ಧನೂ ಕುಳಿತು ಕೇಳುತ್ತಿದ್ದ. ಅವರು ಸಭಾಂಗಣದಿಂದ ಹೊರಹೋಗುವಾಗ ಅವನೂ ಹೋಗುತ್ತಿದ್ದ. ಒಂದು ದಿನ ಉಳಿದವರು ಹೊರಹೋದರೂ ಅವನು ಅಲ್ಲೇ ಇದ್ದ. “ನೀನು ಯಾರು” ಕೇಳಿದ ಹೈಆಕುಜೊ. ವೃದ್ಧ ಉತ್ತರಿಸಿದ, “ ಹೌದು, ನಾನು ಮಾನವನಲ್ಲ. ಬಲು ಹಿಂದೆ, ಕಾಶೊ ಬುದ್ಧನ ಕಾಲದಲ್ಲಿ ನಾನು ಇಲ್ಲಿ ಸನ್ಯಾಸಿಗಳ ಮುಖ್ಯಸ್ಥನಾಗಿದ್ದೆ. ಕಾರಣ-ಪರಿಣಾಮ ಸರಪಳಿಯ ಪ್ರಭಾವದಿಂದ ಜ್ಞಾನೋದಯವಾದ ವ್ಯಕ್ತಿ ಪುನಃ ಕೆಳಸ್ತರಕ್ಕೆ ಬೀಳಲು ಸಾಧ್ಯವೇ ಎಂಬುದಾಗಿ ಆ ಸನ್ನಿವೇಶದಲ್ಲಿ ಸನ್ಯಾಸಿಯೊಬ್ಬ ನನ್ನನ್ನು ಕೇಳಿದ. ಸಾಧ್ಯವಿಲ್ಲ ಎಂಬುದಾಗಿ ನಾನು ಉತ್ತರಿಸಿದೆ. ಪರಿಣಾಮವಾಗಿ ನಾನು ನರಿಯಾಗಿ ಪುನರ್ಜನ್ಮ ಪಡೆದೆ. ನಿನ್ನ ಮಾತುಗಳ ಪ್ರಭಾವದಿಂದ ನನ್ನ ಮನಃಪರಿವರ್ತನೆಯಾಗುವಂತೆ ಮಾಡಿ ಈ ಜನ್ಮದಿಂದ ನನಗೆ ಮುಕ್ತಿ ದೊರಕುವಂತೆ ಮಾಡಬೇಕೆಂಬುದಾಗಿ ನಿನ್ನನ್ನು ಬೇಡಿಕೊಳ್ಳುತ್ತೇನೆ.” ತದನಂತರ ಅವನು ಹೈಆಕುಜೊನನ್ನು ಕೇಳಿದ, “ಕಾರಣ-ಪರಿಣಾಮ ಸರಪಳಿಯ ಪ್ರಭಾವದಿಂದ ಜ್ಞಾನೋದಯವಾದ ವ್ಯಕ್ತಿ ಪುನಃ ಕೆಳಸ್ತರಕ್ಕೆ ಬೀಳಲು ಸಾಧ್ಯವೇ ಸಾಧ್ಯವಿಲ್ಲವೇ?”  ಹೈಆಕುಜೊ ಉತ್ತರಿಸಿದ, “ಕಾರಣ-ಪರಿಣಾಮ ನಿಯಮವನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ.” ಈ ಮಾತುಗಳನ್ನು ಕೇಳಿದ ತಕ್ಷಣ ವೃದ್ಧನಿಗೆ ಜ್ಞಾನೋದಯವಾಯಿತು. ಅವನು ಹೈಆಕುಜೊನಿಗೆ ವಂದಿಸಿ ಹೇಳಿದ, ”ನನಗೆ ಈಗ ಈ ನರಿಯ ಜನ್ಮದಿಂದ ಮುಕ್ತಿ ದೊರೆಯಿತು. ಪರ್ವತದ ಆಚಿನ ಬದಿಯಲ್ಲಿ ನನ್ನ ದೇಹ ದೊರೆಯುತ್ತದೆ. ನಿಮ್ಮಲ್ಲಿ ನನ್ನದೊಂದು ಕೋರಿಕೆ ಇದೆ. ಮೃತ ಸಂನ್ಯಾಸಿ ಎಂಬುದಾಗಿ ನನ್ನ ದೇಹವನ್ನು ಹೂಳಿ.” ರಟರಟಿಕೆಗೆ (Clapper) ಬಡಿಯುವಂತೆ ಧರ್ಮಾಧಿಕಾರಿಗೆ ಹೇಳಿದ. ಸನ್ಯಾಸಿಗಳೆಲ್ಲರೂ ಅಲ್ಲಿಗೆ ಬಂದ ನಂತರ ಮಧ್ಯಾಹ್ನದ ಭೋಜನಾನಂತರ ಮೃತ ಸನ್ಯಾಸಿಯೊಬ್ಬನಿಗೆ ಉತ್ತರಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಗುವುದೆಂಬುದಾಗಿ ತಿಳಿಸಿದ. ಸನ್ಯಾಸಿಗಳಿಗೆ ಈ ಸೂಚನೆ ವಿಚಿತ್ರವಾಗಿದೆ ಅನ್ನಿಸಿತು. ಏಕೆಂದರೆ ಅವರೆಲ್ಲರೂ ಆರೋಗ್ಯವಂತರಾಗಿದ್ದರು, ಯಾರೂ ಆಸ್ಪತ್ರೆಯಲ್ಲಿ ದಾಖಲಾಗಿರಲಿಲ್ಲ. ಇಂಥ ಆಜ್ಞೆ ನೀಡಲು ಕಾರಣ ಏನಿರಬಹುದೆಂಬ ಕುತೂಹಲ ಅವರನ್ನು ಕಾಡತೊಡಗಿತು. ಬೋಜನಾನಂತರ ಹೈಆಕುಜೊ ಅವರನ್ನು ಪರ್ವತದ ಆಚಿನ ಬದಿಗೆ ಕರೆದೊಯ್ದ. ಅಲ್ಲಿ ಒಂದು ಬಂಡೆಯ ಬುಡದಲ್ಲಿದ್ದ ನರಿಯ ಮೃತದೇಹವನ್ನು ತನ್ನ ಊರೆಗೋಲಿನಂದ ಚುಚ್ಚಿದ. ತದನಂತರ ಅದನ್ನು ದಹನ ಮಾಡಿಸಿದ.

 

ಆ ಸಂಜೆ ಸಭಾಂಗಣದಲ್ಲಿ ವೇದಿಕೆ ಏರಿದ ಹೈಆಕುಜೊ ಸನ್ಯಾಸಿಗಳಿಗೆ ಪೂರ್ಣ ಕತೆಯನ್ನು ಹೇಳಿದ. ಆಗ ಒಬಾಕು ಈ ಮುಂದಿನ ಪ್ರಶ್ನೆ ಕೇಳಿದ, “ಉತ್ತರ ನೀಡುವುದರಲ್ಲಿ ಆ ವೃದ್ಧ ತಪ್ಪು ಮಾಡಿದ್ದರಿಂದ ನರಿಯಾಗಿ ಐದುನೂರು ಬಾರಿ ಪುನರ್ಜನ್ಮ ತಳೆಯಬೇಕಾಯಿತು ಎಂಬುದಾಗಿ ನೀವು ಹೇಳುತ್ತಿದ್ದೀರಿ. ಒಂದು ವೇಳೆ ಆತ ಪ್ರತೀ ಬಾರಿ ಉತ್ತರಿಸುವಾಗಲೂ ತಪ್ಪು ಮಾಡದೇ ಇರುತ್ತಿದ್ದರೆ ಏನಾಗುತ್ತಿತ್ತು?” ಹೈಆಕುಜೊ ಉತ್ತರಿಸಿದ, “ಇಲ್ಲಿ ನನ್ನ ಸಮೀಪಕ್ಕೆ ಬಾ, ನಿನಗೆ ಉತ್ತರಿಸುತ್ತೇನ!” ಒಬಾಕು ಹೈಆಕುಜೋ ಸಮೀಪಕ್ಕೆ ಹೋದ, ಅವನ ಕಪಾಳಕ್ಕೆ ಹೊಡೆದ. ಹೈಆಕುಜೊ ಚಪ್ಪಳೆ ತಟ್ಟತ್ತಾ ನಕ್ಕು ಉದ್ಗರಿಸಿದ, “ಅನ್ಯದೇಶೀಯ (Barbarian, ಅನ್ಯಮತೀಯ/ಅನಾಗರಿಕ) ವ್ಯಕ್ತಿಗೆ ಕೆಂಪು ಗಡ್ಡ ಇರುತ್ತದೆ ಎಂಬುದಾಗಿ ನಾನು ತಿಳಿದಿದ್ದೆ, ಆದರೆ ಇಲ್ಲೊಬ್ಬ ಕೆಂಪು ಗಡ್ಡದವನಿದ್ದಾನೆ!”

 ಝೆನ್‌ (Zen) ಕತೆ ೧೧೬. ಏಕಾಗ್ರತೆ

ಬಿಲ್ಲುಗಾರಿಕೆಯ ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಸರ್ವವಿಜೇತನಾಗಿದ್ದ ಯುವ ಬಿಲ್ಗಾರನೊಬ್ಬ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿಯೂ ತುಸು ಮುಂದೆಯೇ ಇದ್ದ. ಒಮ್ಮೆ ಆತ ತನ್ನೊಂದಿಗೆ ಸ್ಪರ್ಧಿಸುವಂತೆ ಕುಶಲಿಯಾದ ಬಿಲ್ಲುಗಾರ ಎಂಬ ಖ್ಯಾತಿಪಾತ್ರನಾಗಿದ್ದ ಒಬ್ಬ ವೃದ್ಧ ಝೆನ್‌ ಗುರುವಿಗೆ ಸವಾಲು ಹಾಕಿದ. ಮೊದಲನೇ ಪ್ರಯತ್ನದಲ್ಲಿಯೇ ದೂರದಲ್ಲಿದ್ದ ಗುರಿಗಣ್ಣಿಗೆ (Bull’s eye) ಸರಿಯಾಗಿ ತಾಗುವಂತೆ ಒಂದು ಬಾಣ ಹೊಡೆದು ತದನಂತರ ಅದನ್ನು ಇನ್ನೊಂದು ಬಾಣದಿಂದ ಸೀಳುವುದರ ಮುಖೇನ ತನ್ನ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದ. ಆ ನಂತರ ವೃದ್ಧನಿಗೆ ಹೇಳಿದ: “ನಾನು ಪ್ರದರ್ಶಿಸಿದ್ದಕ್ಕೆ ಸಮನಾದದ್ದನ್ನು ಪ್ರದರ್ಶಿಸಲು ಸಾಧ್ಯವೇ, ನೋಡಿ.” ಒಂದಿನಿತೂ ಕ್ಷುಬ್ದನಾಗದೆ ಆತ ತನ್ನನ್ನು ಹಿಂಬಾಲಿಸುವಂತೆ ಯುವಕನಿಗೆ ಸನ್ನೆ ಮಾಡಿ ಸೂಚಿಸಿ ಅಲ್ಲಿದ್ದ ಬೆಟ್ಟವನ್ನು ಹತ್ತಲಾರಂಭಿಸಿದ.

ವೃದ್ಧ ಗುರುವಿನ ಉದ್ದೇಶ ತಿಳಿಯುವ ಕುತೂಹಲದಿಂದ ಯುವಕ ಅವನನ್ನು ಹಿಂಬಾಲಿಸಿದ. ಹೆಚ್ಚು ಕಮ್ಮಿ ಬೆಟ್ಟದ ತುದಿಯಲ್ಲಿ ಇದ್ದ ಆಳವಾದ ಕಂದರವನ್ನು ಅವರು ತಲುಪಿದರು. ಕಂದರದ ಎರಡು ಅಂಚುಗಳನ್ನು ಜೋಡಿಸಿತ್ತು ಒಂದು ಅಲುಗಾಡುತ್ತಿದ್ದ ಅರೆಂಬರೆ ಹಾಳಾಗಿದ್ದ ಮರದ ದಿಮ್ಮಿ. ಒಂದಿನಿತೂ ಅಳುಕಿಲ್ಲದೆ ಅಸ್ಥಿರವೂ ಅಪಾಯಕಾರಿಯೂ ಆಗಿದ್ದ ಆ ದಿಮ್ಮಿಯ ಮಧ್ಯ ಭಾಗಕ್ಕೆ ಹೋಗಿ ನಿಂತು ಬಲು ದೂರದಲ್ಲಿದ್ದ ಮರವೊಂದನ್ನು ಲಕ್ಷ್ಯವಾಗಿರಿಸಿಕೊಂಡು ಮೊದಲನೇ ಪ್ರಯತ್ನದಲ್ಲಿಯೇ ಬಾಣ ಬಿಡುವುದರಲ್ಲಿ ಯಶಸ್ವಿಯಾದನು. “ಈಗ ನಿನ್ನ ಸರದಿ” ಎಂಬುದಾಗಿ ಹೇಳುತ್ತಾ ಆ ವೃದ್ಧ ಗುರು ಸರಕ್ಷಿತ ತಾಣಕ್ಕೆ ಹಿಂದಿರುಗಿದ. ಭಯಗ್ರಸ್ಥನಾದ ಯುವಕ ಬಾಣ ಬಿಡುವುದು ಅಂತಿರಲಿ, ಪ್ರಾಣಭಯದಿಂದ ದಿಮ್ಮಿಯ ಮೇಲೆ ಹೆಜ್ಜೆ ಇಡಲೇ ಇಲ್ಲ.

ಅವನ ಇಕ್ಕಟ್ಟಿನ ಮನಃಸ್ಥಿತಿಯನ್ನು ಊಹಿಸಿದ ಗುರು ಇಂತೆಂದ: “ಬಿಲ್ಗಾರಿಕೆಯಲ್ಲಿ ನಿನಗೆ ಕುಶಲತೆ ಇದೆಯಾದರೂ ಬಾಣ ಬಿಡಲು ತೀರ್ಮಾನಿಸುವ ಮನಸ್ಸಿನ ಮೇಲೆ ನಿನಗೆ ಹಿಡಿತವಿಲ್ಲ.”

 ಝೆನ್‌ (Zen) ಕತೆ ೧೧೭. ಕುತೂಹಲ

ಒಂದಾನೊಂದು ಕಾಲದಲ್ಲಿ ಬಲು ಎತ್ತರವೂ ಅಪಾಯಕಾರಿಯೂ ಆಗಿದ್ದ ಪ್ರಪಾತದ ಸಮೀಪದಲ್ಲಿ ವೃದ್ಧನೊಬ್ಬ ವಾಸಿಸುತ್ತಿದ್ದ. ಪ್ರತೀ ದಿನ ಬೆಳಗ್ಗೆ ಆತ ಪ್ರಪಾತದ ಅಂಚಿನಲ್ಲಿ ಕುಳಿತು ಸುತ್ತಲಿದ್ದ ಪರ್ವತಗಳನ್ನೂ ಕಾಡನ್ನೂ ವೀಕ್ಷಿಸುತ್ತಿದ್ದ, ತದನಂತರ ಧ್ಯಾನ ಮಾಡುತ್ತಿದ್ದ. ಒಂದು ದಿನ ಅವನು ಎಂದಿನಂತೆ ಧ್ಯಾನ ಮಾಡಲೋಸುಗ ಕುಳಿತಾಗ ಪ್ರಪಾತದ ಬುಡದಲ್ಲಿ ಹೊಳೆಯುತ್ತಿರುವ ಏನೋ ಒಂದು ವಸ್ತುವನ್ನು ಗಮನಿಸಿದ. ಅದು ಬಲು ಆಳದಲ್ಲಿದ್ದರೂ ವೃದ್ಧನ ತೀಕ್ಷಣವಾದ ಕಣ್ಣುಗಳು ಅದೇನೆಂಬುದನ್ನು ಬಲು ಕಷ್ಟದಿಂದ ಗುರುತಿಸಿದವು. ಚಿನ್ನದ ರೇಕುಗಳಿಂದ ಅಲಂಕರಿಸಿದ್ದ ಕಪ್ಪು ಬಣ್ಣದ ದೊಡ್ಡ ಪೆಟಾರಿಯಂತೆ ಗೋಚರಿಸುತ್ತಿದ್ದ ಅದು ಒಂದು ಬಂಡೆಕಲ್ಲಿನ ಮೇಲೆ ಇತ್ತು. ವೃದ್ಧ ಅವನಷ್ಟಕ್ಕೆ ಅವನೇ ಆಲೋಚಿಸತೊಡಗಿದ, “ಅದು ಅಲ್ಲಿಗೆ ಎಲ್ಲಿಂದ ಬಂದಿತು? ಅದರೊಳಗೆ ಏನಿರಬಹುದು?”

 ಝೆನ್‌ (Zen) ಕತೆ ೧೧೮. ಹತಾಶ

ನಿಪುಣ ಕಳ್ಳನೊಬ್ಬನ ಮಗ ತನಗೂ ವೃತ್ತಿಯ ನಿಗೂಢ ರಹಸ್ಯಗಳನ್ನು ತನಗೆ ಕಲಿಸುವಂತೆ ತಂದೆಯನ್ನು ಕೇಳಿದ. ಇದಕ್ಕೊಪ್ಪಿದ ಹಿರಿಯ ಕಳ್ಳ ಅಂದು ರಾತ್ರಿ ದೊಡ್ಡ ಮನೆಯೊಂದಕ್ಕೆ ಕನ್ನ ಹಾಕಲು ಮಗನನ್ನೂ ಜೊತೆಯಲ್ಲಿ ಕರೆದೊಯ್ದ. ಕುಟುಂಬದ ಸದಸ್ಯರೆಲ್ಲರೂ ನಿದ್ರಿಸುತ್ತಿದ್ದಾಗ ಉಡುಗೆತೊಡುಗೆಗಳನ್ನಿಡುವ ದೊಡ್ಡ ಕಪಾಟು ಇರುವ ಕೋಣೆಗೆ ಹೊಸಗಸುಬಿಯನ್ನು ಸದ್ದುಮಾಡದೇ ಕರೆದೊಯ್ದ. ಕಪಾಟಿನೊಳಕ್ಕೆ ಹೋಗಿ ಕೆಲವು ಉಡುಪುಗಳನ್ನು ಆಯ್ದು ತರುವಂತೆ ಹೇಳಿದ. ಅವನು ಕಪಾಟಿನೊಳಕ್ಕೆ ಹೋದ ತಕ್ಷಣ ಬಾಗಿಲು ಹಾಕಿ ಹೊರಗಿನಿಂದ ಚಿಲಕ ಹಾಕಿದ. ತದನಂತರ ಮನೆಯಿಂದ ಹೊರಹೋಗಿ ಮುಂಬಾಗಿಲನ್ನು ಹೊರಗಿನಿಂದ ಜೋರಾಗಿ ತಟ್ಟಿ ಮಲಗಿದ್ದವರನ್ನು ಎಬ್ಬಿಸಿದ,ಬೇರೆಯವರು ನೋಡುವ ಮುನ್ನವೇ ಅಲ್ಲಿಂದ ಸದ್ದು ಮಾಡದೆ ಹೊರಟುಹೋದ. ಎಷ್ಟೋ ಗಂಟೆಗಳು ಕಳೆದ ಬಳಿಕ ಬಳಲಿದ ಕೊಳಕಾಗಿದ್ದ ಮಗ ಮನೆಗೆ ಹಿಂದಿರುಗಿದ. ಬಂದವನೇ ಕೋಪದಿಂದ ಕಿರುಚಿದ: “ಅಪ್ಪಾ, ನನ್ನನ್ನೇಕೆ ಕಪಾಟಿನಲ್ಲಿ ಕೂಡಿಹಾಕಿದೆ? ಸಿಕ್ಕಿಹಾಕಿಕೊಳ್ಳುವ ಭಯದಿಂದ ನಾನು ಹತಾಶನಾಗದೇ ಇದ್ದಿದ್ದರೆ ತಪ್ಪಿಸಿಕೊಂಡು ಬರಲು ಸಾಧ್ಯವೇ ಆಗುತ್ತಿರಲಿಲ್ಲ. ಹೊರಬರಲು ನನ್ನ ಎಲ್ಲ ಕಲ್ಪನಾ ಚಾತುರ್ಯವನ್ನು ಉಪಯೋಗಿಸಬೇಕಾಯಿತು!”. ಅಪ್ಪ ಕಳ್ಳ ಮುಗುಳ್ನಗೆ ಬೀರಿದ. “ಮಗನೇ, ಕನ್ನ ಹಾಕುವ ಕಲೆಯ ಮೊದಲನೆಯ ಪಾಠ ಇಂದು ನಿನಗಾಗಿದೆ.”

 ಝೆನ್‌ (Zen) ಕತೆ ೧೧೯. ಕನಸು ಕಾಣುವಿಕೆ

ಅಲ್ಲಿ ಇಲ್ಲಿ ಹಾರಾಡುತ್ತಿದ್ದ ಚಿಟ್ಟೆ ತಾನಾಗಿದ್ದಂತೆ ಒಮ್ಮೆ ಕನಸು ಕಂಡನಂತೆ ಪುರಾತನ ಕಾಲದ ಚೀನೀ ಟಾವೋಪಂಥೀಯ ಚುಯಾಂಗ್‌ ಝು. ಕನಸ್ಸಿನಲ್ಲಿ ತಾನೊಂದು ಚಿಟ್ಟೆ ಎಂಬ ಅರಿವು ಮಾತ್ರ ಅವನಿಗಿತ್ತೇ ವಿನಾ ತಾನೊಬ್ಬ ಮನುಷ್ಯ ಎಂಬ ಅರಿವೇ ಇರಲಿಲ್ಲ. ಇದ್ದಕ್ಕಿದ್ದಂತೆ ಅವನಿಗೆ ಎಚ್ಚರವಾಯಿತು ಮತ್ತು ಹಾಸಿಗೆಯ ಮೇಲೆ ಮಲಗಿರುವ ಮನುಷ್ಯ ತಾನು ಎಂಬ ಅರಿವು ಪುನಃ ಉಂಟಾಯಿತು. ಆಗ ಅವನು ತನ್ನಷ್ಟಕ್ಕೆ ತಾನೇ ಆಲೋಚಿಸಿದ: “ಚಿಟ್ಟೆ ತಾನೆಂದು ಕನಸು ಕಂಡ ಮನುಷ್ಯ ತಾನೋ ಅಥವ ಮನುಷ್ಯ ತಾನೆಂದು ಕನಸು ಕಾಣುತ್ತಿರುವ ಚಿಟ್ಟೆ ತಾನೋ?”

 ಝೆನ್‌ (Zen) ಕತೆ ೧೨೦. ಗುಟೈನ ಬೆರಳು

ಖ್ಯಾತ ಗುರು ಗುಟೈನನ್ನು ಝೆನ್‌ ಕುರಿತಾಗಿ ಯಾರಾದರೂ ಪ್ರಶ್ನೆ ಕೇಳಿದಾಗಲೆಲ್ಲ ಆತ ಮೌನವಾಗಿ ಒಂದು ಬೆರಳನ್ನು ಎತ್ತಿ ತೋರಿಸುತ್ತಿದ್ದ.

ಗುರುವಿನ ಈ ವರ್ತನೆಯನ್ನು ಅನುಕರಿಸಲು ಆರಂಭಿಸಿದ ಆ ಹಳ್ಳಿಯ ಒಬ್ಬ ಹುಡುಗ. ಗುಟೈನ ಬೋಧನೆಗಳ ಕುರಿತಾಗಿ ಜನ ಚರ್ಚಿಸುವುದು ಕೇಳಿದಾಗಲೆಲ್ಲ ಅವನು ಮಧ್ಯ ಪ್ರವೇಶಿಸಿ ಬೆರಳನ್ನು ಎತ್ತಿ ತೋರಿಸುತ್ತಿದ್ದ. ಗುಟೈಗೆ ಹುಡುಗನ ತುಂಟಾಟದ ಸುದ್ದಿ ತಲುಪಿತು. ಬೀದಿಯಲ್ಲಿ ಆ ಹುಡುಗನನ್ನು ಕಂಡಾಗ ಗುಟೈ ಅವನನ್ನು ಹಿಡಿದು ಬೆರಳನ್ನು ಕತ್ತರಿಸಿ ಹಾಕಿದ. ಆ ಹುಡುಗ ಅಳುತ್ತಾ ಓಡಲಾರಂಭಿಸಿದಾಗ ಗುಟೈ ಅವನನ್ನು ಕರೆದ. ಹುಡುಗ ನಿಂತು ಹಿಂದಿರುಗಿ ನೋಡಿದಾಗ ಗುಟೈ ತನ್ನ ಬೆರಳನ್ನು ಎತ್ತಿ ತೋರಿಸಿದ.ಆ ಕ್ಷಣದಲ್ಲಿ ಆ ಹುಡುಗನಿಗೆ ಜ್ಞಾನೋದಯವಾಯಿತು.

 

ಗುಟೈ ಮರಣಶಯ್ಯೆಯಲ್ಲಿ ಇದ್ದಾಗ ತನ್ನ ಸುತ್ತಲೂ ಸೇರಿದ್ದ ಸನ್ಯಾಸಿಗಳಿಗೆ ಹೇಳಿದ, “ಟೆನ್‌ರ್ಯು ಅವರಿಂದ ನಾನು ಈ ಒಂದು ಬೆರಳಿನ ಝೆನ್‌ ಅನ್ನು ಸ್ವೀಕರಿಸಿದೆ. ನನ್ನ ಜೀವಮಾನವಿಡೀ ಅದನ್ನು ಉಪಯೋಗಿಸಿದೆನಾದರೂ ಅದನ್ನು ಪೂರ್ತಿಯಾಗಿ ಉಪಯೋಗಿಸಲಿಲ್ಲ.” ಇಷ್ಟನ್ನು ಹೇಳಿ ಮುಗಿಸಿದ ನಂತರ ಅವನು ಚಿರವಿಶ್ರಾಂತಿಯ ಸ್ಥಿತಿಯನ್ನು ಪ್ರವೇಶಿಸಿದನು.

 ಝೆನ್‌ (Zen) ಕತೆ ೧೨೧. ಕೇವಲ ಎರಡು ಪದಗಳು.

ಬಲು ಕಠಿನವಾದ ಶಿಸ್ತಿಗೆ ಒತ್ತು ನೀಡುತ್ತಿದ್ದ ಆಶ್ರಮವೊಂದಿತ್ತು. ಮೌನವ್ರತ ಧಾರಣೆಯ ಪ್ರತಿಜ್ಞೆ ಮಾಡಿದ ನಂತರ ಯಾರೂ ಒಂದಕ್ಷರವನ್ನೂ ಮಾತನಾಡುವಂತಿರಲಿಲ್ಲ. ಈ ನಯಮಕ್ಕೊಂದು ವಿನಾಯಿತಿ ಇತ್ತು. ಪ್ರತೀ ಹತ್ತು ವರ್ಷಗಳಲ್ಲಿ ಒಮ್ಮೆ ಮಾತ್ರ ಕೇವಲ ಎರಡು ಪದಗಳನ್ನು ಮಾತ್ರ ಸನ್ಯಾಸಿಗಳು ಮಾತನಾಡಬಹುದಿತ್ತು. ಸನ್ಯಾಸಿಯೊಬ್ಬ ಮೊದಲ ಹತ್ತು ವರ್ಷಗಳು ಕಳೆದ ಬಳಿಕ ಪ್ರಧಾನ ಸನ್ಯಾಸಿಯ ಬಳಿಗೆ ಹೋಗಿ ಇಂತೆಂದ, “ಹತ್ತು ವರ್ಷಗಳು ಕಳೆಯಿತು.” ಪ್ರಧಾನ ಸನ್ಯಾಸಿ ಕೇಳಿದ, “ನೀನು ಮಾತನಾಡಲು ಇಚ್ಛಿಸುವ ಎರಡು ಪದಗಳು ಯಾವುವು?”

ಸನ್ಯಾಸಿ ಹೇಳಿದ, “ಹಾಸಿಗೆ….. ಗಟ್ಟಿ….”

“ಓ, ಹೌದಾ?” ಉತ್ತರಿಸಿದ ಪ್ರಧಾನ ಸನ್ಯಾಸಿ.

ಇನ್ನೊಂದು ಹತ್ತು ವರ್ಷಗಳು ಕಳೆದ ನಂತರ ಆ ಸನ್ಯಾಸಿ ಪುನಃ ಪ್ರಧಾನ ಸನ್ಯಾಸಿಯ ಬಳಿಗೆ ಹೋದ. ಪ್ರಧಾನ ಸನ್ಯಾಸಿ ಕೇಳಿದ, “ಇನ್ನೂ ಹತ್ತು ವರ್ಷಗಳು ಕಳೆಯಿತು. ನೀನು ಮಾತನಾಡಲು ಇಚ್ಛಿಸುವ ಎರಡು ಪದಗಳು ಯಾವುವು?”

ಸನ್ಯಾಸಿ ಹೇಳಿದ, “ಆಹಾರ….. ದುರ್ವಾಸನೆ….”

“ಓ, ಹೌದಾ?” ಉತ್ತರಿಸಿದ ಪ್ರಧಾನ ಸನ್ಯಾಸಿ.

ಮತ್ತೊಂದು ಹತ್ತು ವರ್ಷಗಳು ಕಳೆದ ನಂತರ ಆ ಸನ್ಯಾಸಿ ಪುನಃ ಪ್ರಧಾನ ಸನ್ಯಾಸಿಯ ಬಳಿಗೆ ಹೋದ. ಪ್ರಧಾನ ಸನ್ಯಾಸಿ ಕೇಳಿದ, “ಈ ಹತ್ತು ವರ್ಷಗಳು ಕಳೆದ ನಂತರ ನೀನು ಮಾತನಾಡಲು ಇಚ್ಛಿಸುವ ಎರಡು ಪದಗಳು ಯಾವುವು?”

ಸನ್ಯಾಸಿ ಹೇಳಿದ, “ನಾನು….. ಬಿಟ್ಟುಬಿಡುತ್ತೇನೆ….”

“ಓ, ಹೌದಾ? ಏಕೆ ಎಂಬುದು ನನಗೆ ತಿಳಿದಿದೆ. ದೂರು ನೀಡುವುದೊಂದೇ ನೀನು ಈ ವರೆಗೆ ಮಾಡುತ್ತಿದ್ದದ್ದು” ಉತ್ತರಿಸಿದ ಪ್ರಧಾನ ಸನ್ಯಾಸಿ.

 ಝೆನ್‌ (Zen) ಕತೆ ೧೨೨. ಜ್ಞಾನೋದಯವಾದವ

ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು.

“ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು.

“ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ.

“ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು.

“ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ

 

ಝೆನ್‌ (Zen) ಕತೆ ೧೨೩. ಸಭ್ಯಾಚಾರ

ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ ಹೊತ್ತಿದ್ದ ರಾಜಕುಮಾರನೂ ಅವನೊಂದಿಗೆ ಇನ್ನುಳಿದ ರಾಜಕುಮಾರರೂ ಪಂಡಿತೋತ್ತಮರೂ ದೇವಾಲಯಕ್ಕೆ ಭೇಟಿ ನೀಡಿದರು. ಗುರುಪೀಠದಲ್ಲಿ ಆಸೀನರಾಗಿದ್ದ ಗುರುಗಳು ಕೇಳಿದರು, “ಅಯ್ಯಾ ಹಿರಿಯ ರಾಜಕುಮಾರನೇ ನಿನಗೆ ಚಾನ್‌ನ (ಝೆನ್‌ನ ಚೀನೀ ರೂಪಾಂತರ) ತಿಳಿವಳಿಕೆ ಇದೆಯೇ?.” ರಾಜಕುಮಾರ ಉತ್ತರಿಸಿದ, “ಇಲ್ಲ, ನಾನು ಅದನ್ನು ಗ್ರಹಿಸಲಾರೆ.”

ಗುರುಗಳು ಹೇಳಿದರು, “ನಾನು ಚಿಕ್ಕಂದಿನಿಂದಲೇ ಸಸ್ಯಾಹಾರಿ. ನನ್ನ ದೇಹಕ್ಕೆ ವಯಸ್ಸಾಗಿದೆ. ಜನಗಳನ್ನು ನಾನು ಭೇಟಿ ಮಾಡುತ್ತೇನಾದರೂ ಗುರುಪೀಠದಿಂದ ಕೆಳಕ್ಕಿಳಿದು ಬರುವಷ್ಟು ತಾಕತ್ತು ನನ್ನಲ್ಲಿಲ್ಲ.”

ರಾಜಕುಮಾರನಿಗೆ ಗುರುವಿನ ಮೇಲೆ ಆದರಪೂರ್ವಕವಾದ ಗೌರವ ಮೂಡಿತು. ಅವನು ಮಾರನೆಯ ದಿನ ತನ್ನ ಸೈನ್ಯದ ಜನರಲ್‌ ಮುಖೇನ ಸಂದೇಶವೊಂದನ್ನು ಗುರುಗಳಿಗೆ ಕಳುಹಿಸಿದ. ಜನರಲ್‌ಅನ್ನು ಸ್ವಾಗತಿಸಲು ಗುರುಗಳು ಗುರುಪೀಠದಿಂದ ಕೆಳಕ್ಕಿಳಿದು ಬಂದರು. ಜನರಲ್ ಹಿಂದಿರುಗಿದ ನಂತರ ಗುರುಗಳ ಅನುಚರನೊಬ್ಬ ಕೇಳಿದ, “ನಿನ್ನೆ ರಾಜಕುಮಾರ ಭೇಟಿಗಾಗಿ ಬಂದಾಗ ನೀವು ಗುರುಪೀಠದಿಂದ ಕೆಳಕ್ಕಿಳಿದು ಬರಲಿಲ್ಲ. ಇಂದು ಜನರಲ್‌ ನಿಮ್ಮನ್ನು ಕಾಣಲು ಬಂದಾಗ ನೀವೇಕೆ ಗುರುಪೀಠದಿಂದ ಕಳಗೆ ಇಳಿದಿರಿ?”

ಗುರುಗಳು ಉತ್ತರಿಸಿದರು, “ನನ್ನ ಸಭ್ಯಾಚಾರ ನಿನ್ನ ಸಭ್ಯಾಚಾರದಿಂದ ಭಿನ್ನವಾದದ್ದು. ಮೇಲ್ವರ್ಗದ ವ್ಯಕ್ತಿ ಬಂದಾಗ ನಾನು ಅವರೊಂದಿಗೆ ಗುರುಪೀಠದಿಂದಲೇ ವ್ಯವಹರಿಸುತ್ತೇನೆ. ಮಧ್ಯಮ ವರ್ಗದ ವ್ಯಕ್ತಿ ಬಂದಾಗ ನಾನು ಗುರುಪೀಠದಿಂದ ಕೆಳಕ್ಕಿಳಿದು ಅವನೊಂದಿಗೆ ವ್ಯವಹರಿಸುತ್ತೇನೆ. ಕೆಳವರ್ಗದ ವ್ಯಕ್ತಿಯೊಂದಿಗೆ ವ್ಯವಹರಿಸಲು ನಾನೇ ದೇವಾಲಯದ ದ್ವಾರ ದಾಟಿ ಆಚೆ ಹೋಗುತ್ತೇನೆ.”

ಯಾರೋ ಕೇಳಿದರು, “ಗುರುಗಳೇ ತಾವು ನರಕವನ್ನು ಪ್ರವೇಶಿಸುವಿರಾ?”

ಗುರುಗಳು ಉತ್ತರಿಸಿದರು, “ನಾನು ಅದನ್ನು ಪ್ರವೇಶಿಸುವವರ ಪೈಕಿ ಮೊದಲನೆಯವನಾಗಿರುತ್ತೇನೆ.”

ಆ ವ್ಯಕ್ತಿ ಪುನಃ ಕೇಳಿದ, “ಚಾನ್‌ನ ನಿಮ್ಮಂಥ ಉತ್ತಮ ಗುರುಗಳು ನರಕವನ್ನು ಏಕೆ ಪ್ರವೇಶಿಸಬೇಕು?”

ಗುರುಗಳು ಕೇಳಿದರು, “ನಾನು ಅದನ್ನು ಪ್ರವೇಶಿಸದೇ ಇದ್ದರೆ ನಿನ್ನನ್ನು ಬೋಧನೆಯ ಮುಖೇನ ಪರಿವರ್ತಿಸುವವರು ಯಾರು?”

 

ಝೆನ್‌ (Zen) ಕತೆ ೧೨೪. ಮೂದಲಿಕೆಗಳ ಉಡುಗೊರೆ

ಒಂದಾನೊಂದು ಕಾಲದಲ್ಲಿ ಮಹಾನ್‌ ಯೋಧನೊಬ್ಬನಿದ್ದ. ಬಹಳ ವಯಸ್ಸಾಗಿದ್ದರೂ ಸಾವಲೆಸೆಯುವ ಯಾರನ್ನೇ ಆಗಲಿ ಸೋಲಿಸುತ್ತಿದ್ದ. ಅವನ ಖ್ಯಾತಿ ಬಹು ದೂರದ ವರೆಗೆ ಪಸರಿಸಿತ್ತು. ಎಂದೇ, ಅನೇಕ ವಿದ್ಯಾರ್ಥಿಗಳು ಅವನ ಮಾರ್ಗದರ್ಶನದಲ್ಲಿ ಅಭ್ಯಸಿಸಲು ಅವನ ಹತ್ತಿರ ಸೇರುತ್ತಿದ್ದರು. ಒಂದು ದಿನ ಆ ಹಳ್ಳಿಗೆ ಕುಖ್ಯಾತ ಯುವ ಯೋಧನೊಬ್ಬ ಬಂದನು. ಮಹಾನ್‌ ಗುರುವನ್ನು ಸೋಲಿಸಿದ ಮೊದಲನೆಯವ ತಾನಾಗಬೇಕೆಂದು ಆತ ತೀರ್ಮಾನಿಸಿದ್ದ. ಅವನಲ್ಲಿ ಬಲವೂ ಇತ್ತು, ಎದುರಾಳಿಯ ದ್‌ಔರ್ಬಲ್ಯವನ್ನು ನಿಖರವಾಗಿ ಗುರುತಿಸಿ ಅದರ ಲಾಭಪಡೆಯುವ ಅಸ್ವಾಭಾವಿಕ ಸಾಮರ್ಥ್ಯವೂ ಇತ್ತು. ಎದುರಾಳಿ ಮೊದಲ ಹೆಜ್ಜೆ ಇಡುವ ವರೆಗೆ ಕಾಯುತ್ತಿದ್ದು ಅದರಲ್ಲಿ ಅವನ ದೌರ್ಬಲ್ಯ ಗುರುತಿಸಿದ ನಂತರ ಅವನು ಮಿಂಚಿನ ವೇಗದಲ್ಲಿ ದಯಾಶೂನ್ಯನಾಗಿ ಪ್ರಹಾರ ಮಾಡುತ್ತಿದ್ದ. ಮೊದಲನೇ ಹೆಜ್ಜೆಗಿಂತ ಹೆಚ್ಚು ಕಾಲ ಅವನೊಂದಿಗೆ ಯಾರೂ ಸೆಣಸಲು ಸಾಧ್ಯವಾಗಿರಲಿಲ್ಲ.

ಶಿಷ್ಯರ ವಿರೋಧವಿದ್ದಾಗ್ಯೂ ವೃಧ್ದ ಗುರು ಯುವ ಯೋಧನ ಸವಾಲನ್ನು ಸಂತೋಷದಿಂದಲೇ ಸ್ವೀಕರಿಸಿದ. ಇಬ್ಬರೂ ಎದರುಬದುರಾಗಿ ನಿಂತು ಯುದ್ಧಕ್ಕೆ ಅಣಿಯಾಗುತ್ತಿರುವಾಗ ಯುವ ಯೋಧ ವೃದ್ಧ ಯೋಧನನ್ನು ಮೂದಲಿಸಲು ಆರಂಭಿಸಿದ. ವೃದ್ಧ ಯೋದನ ಮುಖಕ್ಕೆ ಮಣ್ಣೆರಚಿದ, ಉಗಿದ. ಮನುಕುಲಕ್ಕೆ ಗೊತ್ತಿದ್ದ ಎಲ್ಲ ಬಯ್ಗಳನ್ನೂ ಶಾಪಗಳನ್ನೂ ಅನೇಕ ಗಂಟೆಗಳ ಕಾಲ ಪ್ರಯೋಗಿಸಿದ. ವೃದ್ಧ ಯೋಧನಾದರೋ ಒಂದಿನಿತೂ ಅಲುಗಾಡದೆ ಪ್ರಶಾಂತವಾಗಿ ಅಷ್ಟೂ ಸಮಯ ನಿಂತೇ ಇದ್ದ. ಕೊನೆಗೆ ಯುವ ಯೋಧ ಸುಸ್ತಾಗಿ ನಿಂತದ್ದಷ್ಟೇ ಅಲ್ಲದೆ ತಾನು ಸೋಲುವುದು ಖಚಿತ ಎಂಬುದನ್ನು ಅರಿತು ನಾಚಿಕೆಯಿಂದ ಅಲ್ಲಿಂದ ಹೊರಟುಹೋದ.

ದುರಹಂಕಾರಿ ಯುವ ಯೋಧನೊಂದಿಗೆ ತಮ್ಮ ಗುರು ಸೆಣಸಾಡದೇ ಇದ್ದದ್ದರಿಂದ ನಿರಾಶರಾದ ವೃದ್ಧ ಗುರುವಿನ ಶಿಷ್ಯರು ಅವನನ್ನು ಸುತ್ತುವರಿದು ಕೇಳಿದರು, “ಅಂಥ ಅನುಚಿತ ವರ್ತನೆಯನ್ನು ನೀವು ಹೇಗೆ ಸಹಿಸಿಕೊಂಡಿರಿ? ಅವನನ್ನು ಓಡಿಸಿದ್ದು ಹೇಗೆ?”

ಗುರು ಉತ್ತರಿಸಿದರು, “ನಿಮಗೆ  ಯಾರೋ ಒಬ್ಬರು ಕೊಡುವ ಉಡುಗೊರೆಯನ್ನು ನೀವು ಸ್ವೀಕರಿಸದೇ ಇದ್ದರೆ ಅದು ಯಾರದ್ದಾಗಿ ಉಳಿಯುತ್ತದೆ?”

 

ಝೆನ್‌ (Zen) ಕತೆ ೧೨೫. ಹರಿವಿನೊಂದಿಗೆ ಹೋಗುವುದು

ಮೂಲತಃ ಇದೊಂದು ಟಾವೋ ಸಿದ್ಧಾಂತದ ಕತೆ. ವೃದ್ಧನೊಬ್ಬ ಎತ್ತರವೂ ಅಪಾಯಕಾರಿಯೂ ಆಗಿದ್ದ ಜಲಪಾತದತ್ತ ಸಾಗುತ್ತಿದ್ದ ನದಿಯ ರಭಸದ ಹರಿವಿಗೆ ಆಕಸ್ಮಿಕವಾಗಿ ಬಿದ್ದ. ಅವನಿಗೆ ಪ್ರಾಣಾಪಾಯವಾಗುತ್ತದೆಂದು ನೋಡುಗರು ಹೆದರಿದರು. ಪವಾಡ ಸದೃಶ ರೀತಿಯಲ್ಲಿ ಅವನು ಜಲಪಾತದ ಬುಡದಿಂದ ಏನೂ ಅಪಾಯವಿಲ್ಲದೆ ಜೀವಂತವಾಗಿ ಹೊರಬಂದನು. ಬದುಕಿ ಉಳಿದದ್ದು ಹೇಗೆಂಬುದಾಗಿ ಎಲ್ಲರೂ ಅವನನ್ನು ಕೇಳಿದರು.

“ನಾನು ನೀರಿನೊಂದಿಗೆ ಹೊಂದಿಕೆ ಮಾಡಿಕೊಂಡೆ, ನೀರು ನನ್ನೊಂದಿಗಲ್ಲ. ಒಂದಿನಿತೂ ಚಿಂತೆ ಮಾಡದೆ ಅದು ತನಗೆ ಬೇಕಾದಂತೆ ನನ್ನನ್ನು ರೂಪಿಸಲು ಆಸ್ಪದ ನೀಡಿದೆ. ಸುಳಿಯಲ್ಲಿ ಮುಳುಗಿ ಸುಳಿಯೊಂದಿಗೆ ಹೊರಬಂದೆ. ನಾನು ಬದುಕಿದ್ದು ಹೀಗೆ.”

 

Advertisements
This entry was posted in ಝೆನ್‌ (Zen) ಕತೆಗಳು and tagged , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s