ಝೆನ್ (Zen) ಕತೆಗಳು: ಸಂಚಿಕೆ ೪

ಝೆನ್‌ (Zen) ಕತೆ ೭೬. ನಿಜವಾದ ಅಭ್ಯುದಯ

ತನ್ನ ಕುಟುಂಬದ ಅಭ್ಯುದಯವು ಒಂದೇ ರೀತಿಯಲ್ಲಿ ಮುಂದುವರಿಯುವಂತೆ ಮಾಡುವುದಕ್ಕಾಗಿ ಏನನ್ನಾದರೂ ಬರೆದು ಕೊಡುವಂತೆ ಒಬ್ಬ ಶ್ರೀಮಂತ ಸೆಂಗೈ ಅನ್ನು ಕೇಳಿದ. ಅದನ್ನು ಅತ್ಯಮೂಲ್ಯವಾದದ್ದು ಎಂಬುದಾಗಿ ಪರಿಗಣಿಸಿ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವಂಥದ್ದು ಆಗಿರಬೇಕು ಎಂಬುದೂ ಅವನ ಬಯಕೆಯಾಗಿತ್ತು.
ಕಾಗದದ ಒಂದು ದೊಡ್ಡ ಹಾಳೆಯನ್ನು ಪಡೆದು ಸೆಂಗೈ ಅದರಲ್ಲಿ ಇಂತು ಬರೆದ: “ಅಪ್ಪ ಸಾಯುತ್ತಾನೆ, ಮಗ ಸಾಯುತ್ತಾನೆ, ಮೊಮ್ಮಗ ಸಾಯುತ್ತಾನೆ.”
ಶ್ರೀಮಂತನಿಗೆ ಕೋಪ ಬಂದಿತು. “ನನ್ನ ಕುಟುಂಬದ ಸಂತೋಷಕ್ಕಾಗಿ ಏನನ್ನಾದರೂ ಬರೆಯಲು ನಾನು ಹೇಳಿದೆ! ಅದನ್ನು ಹೀಗೆ ತಮಾಷೆ ಮಾಡುವುದೇ?”
“ತಮಾಷೆ ಮಾಡುವ ಉದ್ದೇಶ ನನ್ನದಲ್ಲ,” ವಿವರಿಸಿದ ಸೆಂಗೈ. “ನಿನಗಿಂತ ಮೊದಲೇ ನಿನ್ನ ಮಗ ಸತ್ತರೆ ಅದು ನಿನಗೆ ಅತೀವ ದುಃಖ ಉಂಟು ಮಾಡುತ್ತದೆ. ನಿನ್ನ ಮೊಮ್ಮಗ ನಿನ್ನ ಮಗನಿಗಿಂತ ಮೊದಲೇ ಸತ್ತರೆ ನಿಮಗಿಬ್ಬರಿಗೂ ಮಹಾದುಃಖವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಒಂದು ಪೀಳಿಗೆಯ ನಂತರ ಇನ್ನೊಂದು ಪೀಳಿಗೆ ನಾನು ಬರೆದ ಕ್ರಮದಲ್ಲಿಯೇ ಸತ್ತರೆ ಆಗ ಸ್ವಾಭಾವಿಕ ಮಾರ್ಗದಲ್ಲಿ
ಜೀವನ ಮುಂದುವರಿದಂತೆ ಆಗುತ್ತದೆ. ಇದನ್ನು ನಾನು ನಿಜವಾದ ಅಭ್ಯುದಯ ಎಂಬುದಾಗಿ ಕರೆಯುತ್ತೇನೆ.”

ಝೆನ್‌ (Zen) ಕತೆ ೭೭. ಚೀನೀ ಕವಿತೆಯನ್ನು ಬರೆಯುವುದು ಹೇಗೆ

ಚೀನೀ ಕವಿತೆಯನ್ನು ಬರೆಯುವುದು ಹೇಗೆ ಎಂಬುದಾಗಿ ಸುವಿಖ್ಯಾತ ಜಪಾನೀ ಕವಿಯೊಬ್ಬನನ್ನು ಯಾರೋ ಕೇಳಿದರು.
“ಸಾಮಾನ್ಯವಾಗೀ ಚೀನಿ ಪದ್ಯದಲ್ಲಿ ನಾಲ್ಕು ಪಂಕ್ತಿಗಳಿರುತ್ತವೆ,” ಆತ ವಿವರಿಸಿದ. “ವಿಷಯ ಪ್ರತಿಪಾದನೆಯ ಮೊದಲನೇ ಮಜಲು ಒಂದನೇ ಸಾಲಿನಲ್ಲಿ ಇರುತ್ತದೆ; ಆ ಮಜಲಿನ ಮುಂದುವರಿದ ಭಾಗವಾಗಿರುತ್ತದೆ ಎರಡನೇ ಸಾಲು; ಮೂರನೇ ಸಾಲು ಆ ವಿಷಯವನ್ನು ಬಿಟ್ಟು ಬೇರೆ ಒಂದನ್ನು ಆರಂಭಿಸುತ್ತದೆ; ಮತ್ತು ನಾಲ್ಕನೇ ಸಾಲು ಮೊದಲಿನ ಮೂರು ಸಾಲುಗಳನ್ನು ಒಗ್ಗೂಡಿಸುತ್ತದೆ. ಈ ಜನಪ್ರಿಯ ಜಪಾನೀ ಹಾಡು ಇದನ್ನು ವಿಶದೀಕರಿಸುತ್ತದೆ:
ರೇಷ್ಮೆ ವ್ಯಾಪಾರಿಯೊಬ್ಬನ ಹೆಣ್ಣುಮಕ್ಕಳಿಬ್ಬರು ವಾಸಿಸುತ್ತಿದ್ದಾರೆ ಕ್ಯೋಟೋದಲ್ಲಿ.
ಹಿರಿಯವಳಿಗೆ ಇಪ್ಪತ್ತು, ಕಿರಿಯವಳಿಗೆ ಹದಿನೆಂಟು.
ಸೈನಿಕನೊಬ್ಬ ತನ್ನ ಖಡ್ಗದಿಂದ ಕೊಲ್ಲಬಲ್ಲ.
ಈ ಹುಡುಗಿಯರಾದರೋ ಪುರುಷರನ್ನು ಕೊಲ್ಲುತ್ತಾರೆ ತಮ್ಮ ಕಣ್ಣುಗಳಿಂದ.

ಝೆನ್‌ (Zen) ಕತೆ ೭೮. ಝೆನ್‌ನ ಒಂದು ಸ್ವರ

ಕಕುಆ ಚಕ್ರವರ್ತಿಯನ್ನು ಭೇಟಿಯಾದ ನಂತರ ಕಣ್ಮರೆಯಾದ ಮತ್ತು ಅವನಿಗೇನಾಯಿತು ಎಂಬುದು ಯಾರಿಗೂ ತಿಳಿಯಲಿಲ್ಲ. ಚೀನಾದಲ್ಲಿ ಅಧ್ಯಯನ ಮಾಡಿದ ಜಪಾನೀಯರ ಪೈಕಿ ಅವನೇ ಮೊದಲನೆಯವನು. ಆದರೂ ತಾನು ಕಲಿತದ್ದರಲ್ಲಿ ಒಂದು ಸ್ವರವನ್ನು ಹೊರತುಪಡಿಸಿದರೆ ಬೇರೇನನ್ನೂ ಆತ ಪ್ರದರ್ಶಿಸದೇ ಇದ್ದದ್ದರಿಂದ ತನ್ನ ದೇಶಕ್ಕೆ ಝೆನ್‌ ತಂದದ್ದಕ್ಕಾಗಿ ಆತನ ಹೆಸರನ್ನು ಯಾರೂ ಸ್ಮರಿಸಿಕೊಳ್ಳುವುದಿಲ್ಲ.
ಕಕುಆ ಚೀನಾಕ್ಕೆ ಭೇಟಿ ನೀಡಿ ನಿಜವಾದ ಬೋಧನೆಯನ್ನು ಸ್ವೀಕರಿಸಿದ. ಅಲ್ಲಿ ಇದ್ದಾಗ ಅವನು ಬೇರೆಬೇರೆ ಸ್ಥಳಗಳಿಗೆ ಪ್ರಯಾಣ ಮಾಡಲಿಲ್ಲ. ಸದಾ ಧ್ಯಾನ ಮಾಡುತ್ತಾ ಒಂದು ಪರ್ವತದ ಯಾವುದೋ ದೂರದ ಮೂಲೆಯಲ್ಲಿ ವಾಸಿಸುತ್ತಿದ್ದ. ಯಾವಾಗಲಾದರೂ ಯಾರಾದರೂ ಅವನನ್ನು ಕಂಡು ಏನಾದರೂ ಉಪದೇಶ ಮಾಡಿ ಎಂಬುದಾಗಿ ಕೇಳಿಕೊಂಡಾಗ ಕೆಲವೇ ಕೆಲವು ಪದಗಳನ್ನು ಹೇಳುತ್ತಿದ್ದ. ತದನಂತರ ಪರ್ವತದಲ್ಲಿ ಜನರಿಗೆ ಸುಲಭಗೋಚರನಾಗದಂಥ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗುತ್ತಿದ್ದ.
ಅವನು ಜಪಾನಿಗೆ ಹಿಂದಿರುಗಿದ ನಂತರ ಚಕ್ರವರ್ತಿಗೆ ಅವನ ವಿಷಯ ತಿಳಿದು, ತನ್ನ ಮತ್ತು ತನ್ನ ಪ್ರಜೆಗಳ ಆತ್ಮೋನ್ನತಿಗಾಗಿ ಝೆನ್ ಬೋಧಿಸುವಂತೆ ಕೇಳಿಕೊಂಡ.
ಚಕ್ರವರ್ತಿಯ ಮುಂದೆ ಕಕುಆ ತುಸು ಸಮಯ ಮೌನವಾಗಿ ನಿಂತಿದ್ದ. ತನ್ನ ಉದ್ದವಾದ ಮೇಲಂಗಿಯ ಮಡಿಕೆಯೊಳಗಿಂದ ಒಂದು ಕೊಳಲನ್ನು ಹೊರತೆಗೆದು ಒಂದು ಸ್ವರವನ್ನು ಅತ್ಯಲ್ಪ ಕಾಲ ಊದಿದ. ತದನಂತರ ವಿನಯದಿಂದ ತಲೆಬಾಗಿ ವಂದಿಸಿ, ಹೊರನಡೆದು ಕಣ್ಮರೆಯಾದ.

ಝೆನ್‌ (Zen) ಕತೆ ೭೯. ಮಹಾಪ್ರಭುವಿನ ಮಕ್ಕಳು

ಚಕ್ರವರ್ತಿಯ ಖಾಸಾ ಶಿಕ್ಷಕನಾಗಿದ್ದವನು ಯಾಮಾಓಕ. ಅವನು ಕತ್ತಿವರಿಸೆ ನಿಪುಣನೂ ಝೆನ್‌ನ ಗಂಭೀರವಾದ ವಿದ್ಯಾರ್ಥಿಯೂ ಆಗಿದ್ದ.
ಅವನ ಮನೆಯೋ ಶುದ್ಧ ನಿಷ್ಪ್ರಯೋಜಕರಾಗಿ ಅಂಡಲೆಯುವವರ ಬೀಡಾಗಿತ್ತು. ಅವನ ಹತ್ತಿರ ಕೇವಲ ಒಂದು ಜೊತೆ ಉಡುಪುಗಳಿದ್ದವು, ಏಕೆಂದರೆ ಅಂಡಲೆಯುವವರು ಅವನನ್ನು ಯಾವಾಗಲೂ ಬಡತನದಲ್ಲಿಯೇ ಇರಿಸುತ್ತಿದ್ದರು.
ಯಾಮಾಓಕನ ಉಡುಪು ಬಲು ಜೀರ್ಣವಾಗಿರುವುದನ್ನು ಗಮನಿಸಿದ ಚಕ್ರವರ್ತಿಯು ಹೊಸ ಉಡುಪುಗಳನ್ನು ಖರೀದಿಸಲು ಸ್ವಲ್ಪ ಹಣ ಕೊಟ್ಟನು. ಮುಂದಿನ ಸಲ ಚಕ್ರವರ್ತಿಯ ಬಳಿ ಬಂದಾಗಲೂ ಯಾಕಾಓಮ ಹಿಂದಿನ ಜೀರ್ಣವಾದ ಉಡುಪುಗಳಲ್ಲಿಯೇ ಇದ್ದನು.
“ಹೊಸ ಉಡುಪುಗಳು ಏನಾದವು ಯಾಕಾಓಮ?” ಕೇಳಿದನು ಚಕ್ರವರ್ತಿ.
“ಮಹಾಪ್ರಭುಗಳ ಮಕ್ಕಳಿಗೆ ನಾನು ಉಡುಪುಗಳನ್ನು ಪೂರೈಸಿದೆ” ಯಾಮಾಓಕ ವಿವರಿಸಿದ.

ಝೆನ್‌ (Zen) ಕತೆ ೮೦. ಮೂರು ತರಹದ ಶಿಷ್ಯರು

ಗೆಟ್ಟನ್ ಎಂಬ ಹೆಸರಿನ ಝೆನ್‌ ಗುರುವೊಬ್ಬ ಟೋಕುಗವಾ ಕಾಲದ ಉತ್ತರಾರ್ಧದಲ್ಲಿ ಇದ್ದ. ಅವನು ಯಾವಾಗಲೂ ಇಂತು ಹೇಳುತ್ತಿದ್ದ: “ಮೂರು ತರಹದ ಶಿಷ್ಯರು ಇರುತ್ತಾರೆ: ಇತರರಿಗೆ ಝೆನ್‌ ತಿಳಿಸುವವರು, ದೇವಾಲಯಗಳನ್ನೂ ಪೂಜಾಸ್ಥಳಗಳನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವವರು ಮತ್ತು ಅಕ್ಕಿ ಚೀಲಗಳು ಹಾಗೂ ಬಟ್ಟೆ ತೂಗುಹಾಕಲು ಉಪಯೋಗಿಸುವ ಸಾಧನಗಳು.”
ಗಾಸನ್‌ ಹೆಚ್ಚುಕಮ್ಮಿ ಇದೇ ಅಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಅವನು ಟೆಕುಸುಯ್‌ ಮಾರ್ಗದರ್ಶನದಲ್ಲಿ ಅಧ್ಯಯಿಸುತ್ತಿದ್ದಾಗ ಅವಮ ಗುರು ಬಲು ಕಠಿನ ಶಿಸ್ತಿನವನಾಗಿದ್ದ. ಕೆಲವೊಮ್ಮೆ ಅವನನ್ನು ಗುರು ಹೊಡೆದದ್ದೂ ಉಂಟು. ಈ ತೆರನಾದ ಬೋಧನೆಯನ್ನು ಸಹಿಸಿಕೊಳ್ಳಲಾಗದ ಇತರ ವಿದ್ಯಾರ್ಥಿಗಳು ಬಿಟ್ಟು ಹೋದರು. ಗಾಸನ್‌ ಇಂತು ಹೇಳುತ್ತಾ ಅಲ್ಲಿಯೇ ಇದ್ದ: “ಒಬ್ಬ ಸತ್ವಹೀನ ವಿದ್ಯಾರ್ಥಿ ಅಧ್ಯಾಪಕನ ಪ್ರಭಾವವನ್ನು ಉಪಯೋಗಿಸಿಕೊಳ್ಳುತ್ತಾನೆ. ಮಧ್ಯಮಗುಣದ ವಿದ್ಯಾರ್ಥಿ ಅಧ್ಯಾಪಕನ ಕಾರುಣ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಒಬ್ಬ ಒಳ್ಳೆಯ ವಿದ್ಯಾರ್ಥಿ ಅಧ್ಯಾಪಕನ ಶಿಸ್ತಿನಿಂದಾಗಿ ಸದೃಢನಾಗಿ ಬೆಳೆಯುತ್ತಾನೆ.”

ಝೆನ್‌ (Zen) ಕತೆ ೮೧. ದಡ್ಡ ಪ್ರಭು
ಡೈಗು ಮತ್ತು ಗೂಡೋ ಎಂಬ ಇಬ್ಬರು ಝೆನ್ ಗುರುಗಳು ತನ್ನನ್ನು ಭೇಟಿ ಆಗುವಂತೆ ಒಬ್ಬ ಪ್ರಭು ಆಹ್ವಾನಿಸಿದ. ಪ್ರಭುವನ್ನು ಕಾಣಲು ಬಂದ ನಂತರ ಗೂಡೋ ಹೇಳಿದ:” ನೀನು ಸ್ವಭಾವತಃ ವಿವೇಕಿ ಮತ್ತು ಝೆನ್‌ ಕಲಿಯಲು ಅಗತ್ಯವಾದ ಸಾಮರ್ಥ್ಯ ನಿನ್ನಲ್ಲಿ ಹುಟ್ಟಿನಿಂದಲೇ ಅಂತರ್ಗತವಾಗಿದೆ.”
“ಅಸಂಬದ್ಧ ಮಾತು” ಎಂಬುದಾಗಿ ಹೇಳಿದ ಡೈಗು. “ಈ ಪೆದ್ದನನ್ನು ನೀನೇಕೆ ಹೊಗಳುತ್ತಿರುವೆ? ಅವನೊಬ್ಬ ಪ್ರಭುವಾಗಿರಬಹುದು, ಆದರೆ ಅವನಿಗೆ ಝೆನ್ ಕುರಿತು ಏನೂ ಗೊತ್ತಿಲ್ಲ.”
ಗೂಡೋವಿಗೋಸ್ಕರ ದೇವಾಲಯ ನಿರ್ಮಿಸಬೇಕಾಗಿದ್ದ ಪ್ರಭು ಆ ಯೋಜನೆ ಕೈಬಿಟ್ಟು ಡೈಗುಗೋಸ್ಕರ ದೇವಾಲಯ ನಿರ್ಮಿಸಿ ಅವನ ಹತ್ತಿರ ಝೆನ್‌ ಅಧ್ಯಯಿಸಿದ.

ಝೆನ್‌ (Zen) ಕತೆ ೮೨. ಧೂಳಿನೊಂದಿಗೆ ಅಂಟಿಕೆ (Attachment) ಇಲ್ಲ

ಚೀನೀ ಗುರು ಟ್ಯಾಂಗ್ ವಂಶದ ಝೆಂಗೆಟ್ಸು ತನ್ನ ವಿದ್ಯಾರ್ಥಿಗಳಿಗಾಗಿ ಈ ಮುಂದಿನ ಸೂಚನೆಗಳನ್ನು ಬರೆದ
* ಪ್ರಪಂಚದಲ್ಲಿ ಬಾಳಿದರೂ ಪ್ರಪಂಚದ ಧೂಳಿಗೆ ಅಂಟಿಕೊಳ್ಳದೆಯೇ ಇರುವುದು ಝೆನ್‌ನ ನಿಜವಾದ ವಿದ್ಯಾರ್ಥಿಯ ವೈಲಕ್ಷಣ್ಯ.
* ಇನ್ನೊಬ್ಬನ ಒಳ್ಳೆಯ ಕಾರ್ಯವನ್ನು ನೋಡಿದಾಗ ಅವನ ಮೇಲ್ಪಂಕ್ತಿ ಅನುಸರಿಸುವಂತೆ ನಿನ್ನನ್ನು ನೀನೇ ಪ್ರೋತ್ಸಾಹಿಸು. ಇನ್ನೊಬ್ಬನ ತಪ್ಪು ಕಾರ್ಯದ ಕುರಿತು ಕೇಳಿದಾಗ ಅದನ್ನು ಅನುಕರಿಸದಂತೆ ನಿನಗೆ ನೀನೇ ಸೂಚಿಸಿಕೊ.
* ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಇರುವಾಗಲೂ ಗೌರವಾನ್ವಿತ ಅತಿಥಿಯೊಬ್ಬನ ಮುಂದೆ ಇರುವಾಗ ಎಂತಿರುವಿಯೋ ಅಂತೆಯೇ ಇರು.ನಿನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸು, ಆದರೆ ಅದು ನಿನ್ನ ನೈಜ ಸ್ವಭಾವಕ್ಕೆಹೊಂದಾಣಿಕೆ ಆಗುವಂತಿರಬೇಕೇ ವಿನಾ ಅತಿಯಾಗಬಾರದು.
* ಬಡತನ ಒಂದು ಸಂಪತ್ತು. ಆರಾಮದ ಜೀವನಕ್ಕೆ ಅದನ್ನು ಎಂದೂ ವಿನಿಮಯಿಸದಿರು.
ಒಬ್ಬ ಮೂರ್ಖನಂತೆ ತೋರಿದರೂ ನಿಜವಾಗಿ ಮೂರ್ಖನಲ್ಲದೇ ಇರಬಹುದು. ಆತ ತನ್ನ ವಿವೇಕವನ್ನು ಬಲು ಜಾಗರೂಕತೆಯಿಂದ ಸಂರಕ್ಷಿಸುತ್ತಿರಬಹುದು.
* ಸದ್ಗುಣಗಳು ಸ್ವಶಿಸ್ತಿನ ಫಲಗಳು, ಅವು ಅಂತರಿಕ್ಷದಿಂದ ಮಳೆ ಅಥವ ಹಿಮ ಬೀಳುವಂತೆ ಉದುರುವುದಿಲ್ಲ.
* ವಿನೀತತೆ ಎಲ್ಲ ಸದ್ಗುಣಗಳ ತಳಹದಿ. ನೆರೆಹೊರೆಯವರಿಗೆ ನಿಮ್ಮನ್ನು ನೀವು ತಿಳಿಯಪಡಿಸುವ ಮೊದಲೇ ಅವರು ನಿಮ್ಮನ್ನು ಆವಿಷ್ಕರಿಸುವಂತಿರಬೇಕು.
*ಉದಾತ್ತ ಹೃದಯವು ಎಂದೂ ತನ್ನನ್ನು ತಾನು ಬಲವಂತವಾಗಿ ಮುಂಚೂಣಿಯಲ್ಲಿ ಇರುವಂತೆ ಮಾಡುವುದಿಲ್ಲ. ಅದರ ಪದಗಳಾದರೋ ಅಪರೂಪಕ್ಕೆ ಪ್ರದರ್ಶಿಸಲ್ಪಡುವ ಅತ್ಯಮೂಲ್ಯವಾದ ದುರ್ಲಭ ರತ್ನಗಳಾಗಿರುತ್ತವೆ.
* ಪ್ರಾಮಾಣಿಕ ವಿದ್ಯಾರ್ಥಿಗೆ ಪ್ರತಿಯೊಂದು ದಿನವೂ ಮಂಗಳಕರ ದಿನವಾಗಿರುತ್ತದೆ. ಸಮಯ ಕಳೆಯುತ್ತದಾದರೂ ಅವನೆಂದೂ ಹಿಂದೆ ಬೀಳುವುದಿಲ್ಲ.ಉನ್ನತ ಕೀರ್ತಿಯೇ ಆಗಲಿ ಅವಮಾನವೇ ಆಗಲಿ ಅವನನ್ನು ಅಲುಗಾಡಿಸುವುದಿಲ್ಲ.
* ನಿನ್ನನ್ನು ನೀನೇ ಖಂಡಿಸು, ಇನ್ನೊಬ್ಬನನ್ನಲ್ಲ. ಸರಿ ಮತ್ತು ತಪ್ಪುಗಳನ್ನು ಚರ್ಚಿಸಬೇಡ.
* ಕೆಲವು ಅಂಶಗಳು ಸರಿಯಾದವೇ ಆಗಿದ್ದರೂ ಅನೇಕ ತಲೆಮಾರುಗಳ ಕಾಲ ತಪ್ಪು ಎಂಬುದಾಗಿ ಪರಿಗಣಿಸಲ್ಪಡುತ್ತಿದ್ದವು.ಸದಾಚಾರ ನಿಷ್ಠತೆಯ ಮೌಲ್ಯ ಅನೇಕ ಶತಮಾನಗಳ ನಂತರವೂ ಗುರುತಿಸಲ್ಪಡುವ ಸಾಧ್ಯತೆ ಇರುವುದರಿಂದ ತಕ್ಷಣ ಮೆಚ್ಚುಗೆ ದೊರೆಯಬೇಕೆಂಬುದಾಗಿ ಹಂಬಲಿಸುವ ಆವಶ್ಯಕತೆ ಇಲ್ಲ.
* ಕರ್ಮಗಳನ್ನು ಮಾಡತ್ತಾ ಜೀವಿಸು, ವಿಶ್ವದ ಮಹಾನ್‌ ನಿಯಮಕ್ಕೆ ಪರಿಣಾಮಗಳನ್ನು ನಿರ್ಧರಿಸಲು ಬಿಡು. ಶಾಂತವಾಗಿ ಚಿಂತನೆ ಮಾಡುತ್ತಾ ಪ್ರತಿಯೊಂದು ದಿನವನ್ನೂ ಸಾಗಿಹೋಗು.

ಝೆನ್‌ (Zen) ಕತೆ ೮೩. ನಿಜವಾದ ಪವಾಡ

ಬಾಂಕೈ ರ್ಯೂಮಾನ್‌ ದೇವಾಲಯದಲ್ಲಿ ಪ್ರವಚನ ನೀಡುತ್ತಿದ್ದಾಗ ಜರಗಿದ ವಿದ್ಯಮಾನ ಇದು. ಬಾಂಕೈನ ಪ್ರವಚನ ಕೇಳಲು ಬಹು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದದ್ದನ್ನು ನೋಡಿ ಶಿಂಶು ಪೂಜಾರಿಯೊಬ್ಬ ಕರುಬುತ್ತಿದ್ದ. ಅವನಾದರೋ ಪ್ರೇಮದ ಬುದ್ಧನ (Buddha of love) ಹೆಸರನ್ನು ಪುನರುಚ್ಚರಿಸುತ್ತಿರುವುದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದಾಗಿ ನಂಬಿದ್ದವ. ಎಂದೇ, ಅವನು ಬಾಂಕೈನೊಂದಿಗೆ ವಾದ ಮಾಡುವ ಅಪೇಕ್ಷೆ ಉಳ್ಳವನಾಗಿದ್ದ.
ಈ ಇರಾದೆಯಿಂದ ಪೂಜಾರಿ ಬಂದಾಗ ಬಾಂಕೈ ಪ್ರವಚನ ನೀಡುತ್ತಿದ್ದ. ಆದರೂ ಅವನು ಅಲ್ಲಿ ಮಾಡಿದ ಗಲಾಟೆಯಿಂದಾಗಿ ಬಾಂಕೈ ತನ್ನ ಪ್ರವಚನ ನಿಲ್ಲಿಸಿ ಗಲಾಟೆಗೆ ಕಾರಣ ಏನೆಂದು ಕೇಳಿದ.
“ನಮ್ಮ ಪಂಥದ ಸ್ಥಾಪಕನಿಗೆ ಎಂಥ ಪವಾಡ ಸದೃಶ ಸಾಮರ್ಥ್ಯ ಇತ್ತು ಅಂದರೆ,” ಬಡಾಯಿ ಕೊಚ್ಚಲು ಆರಂಭಿಸಿದ ಆ ಪೂಜಾರಿ, “ಅವನು ನದಿಯ ಒಂದು ದಡದಲ್ಲಿ ನಿಂತು ಕೈನಲ್ಲಿ ಕುಂಚ ಹಿಡಿದಾಗ ಅವನ ಅನುಚರ ಇನ್ನೊಂದು ದಡದಲ್ಲಿ ಕಾಗದದ ಹಾಳೆಯೊಂದನ್ನು ಎತ್ತಿ ಹಿಡಿದು ನಿಂತುಕೊಂಡರೆ ಅದರ ಮೇಲೆ ಪವಿತ್ರ ಅಮಿದಾನ (ಮಹಾಯಾನ ಪಂಥದಲ್ಲಿ ಬುದ್ಧನ ಒಂದು ಪರ್ಯಾಯ ನಾಮ) ಹೆಸರನ್ನು ಗಾಳಿಯ ಮುಖೇನ ಬರೆಯುತ್ತಿದ್ದ. ನೀನು ಅಂಥ ಅದ್ಭುತವಾದದ್ದು ಏನನ್ನಾದರೂ ಮಾಡಬಲ್ಲೆಯಾ? ಎಂಬುದಾಗಿ ಸವಾಲು ಹಾಕಿದ.
ಬಾಂಕೈ ನಿರುದ್ವೇಗದಿಂದ ಇಂತು ಉತ್ತರಿಸಿದ: “ಬಹುಶಃ ನಿನ್ನ ನರಿಯೂ ಆ ಚಮತ್ಕಾರವನ್ನು ಮಾಡುತ್ತದೆ. ಆದರೂ ಝೆನ್‌ನ ಕ್ರಮ ಅದಲ್ಲ. ನನಗೆ ಹಸಿವಾದಾಗ ಊಟ ಮಾಡುತ್ತೇನೆ, ನನಗೆ ಬಾಯಾರಿಕೆ ಆದಾಗ ನೀರು ಕುಡಿಯುತ್ತೇನೆ. ಇವೇ ನಾನು ಮಾಡುವ ಪವಾಡಗಳು.”

ಝೆನ್‌ (Zen) ಕತೆ ೮೪. ನಿಶ್ಶಬ್ದ ದೇವಾಲಯ

ಜ್ಞಾನೋದಯವಾಗಿ ಥಳಥಳಿಸುತ್ತಿದ್ದ ಶೋಯ್ಚಿ ಒಬ್ಬ ಒಕ್ಕಣ್ಣಿನ ಝೆನ್‌ ಗುರು. ತೋಫುಕು ದೇವಾಲಯದಲ್ಲಿ ಅವನು ಬೋಧಿಸುತ್ತಿದ್ದ.
ಅಹರ್ನಿಶಿ ದೇವಾಲಯ ನಿಶ್ಶಬ್ದವಾಗಿರುತ್ತಿತ್ತು. ಯಾವ ಸದ್ದೂ ಇರುತ್ತಿರಲಿಲ್ಲ.
ಶ್ಲೋಕ ಪಠನವನ್ನೂ ಅವನು ನಿಷೇಧಿಸಿದ್ದ. ಧ್ಯಾನ ಮಾಡುವುದರ ಹೊರತಾಗಿ ಬೇರೇನನ್ನೂ ಮಾಡುವಂತಿರಲಿಲ್ಲ.
ಗುರು ವಿಧಿವಶನಾದಾಗ, ವೃದ್ಧ ನೆರೆಯವಳೊಬ್ಬಳಿಗೆ ಗಂಟೆ ಬಾರಿಸಿದ ನಾದವೂ ಶ್ಲೋಕಗಳನ್ನು ಪಠಿಸುತ್ತಿರುವುದೂ ಕೇಳಿಸಿತು. ಆದ್ದರಿಂದ ಶೋಯ್ಚಿ ಸತ್ತಿದ್ದಾನೆ ಎಂಬುದು ಅವಳಿಗೆ ತಿಳಿಯಿತು.

ಝೆನ್‌ (Zen) ಕತೆ ೮೫. ಧೂಪ ದಾಹಕ (Incense burner)

ನಾಗಸಾಕಿ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಕಾಮೆ ಎಂಬಾಕೆ ಜಪಾನಿನಲ್ಲಿ ಧೂಪ ದಾಹಕಗಳನ್ನು ತಯಾರಿಸುತ್ತಿದ್ದ ಕೆಲವೇ ಕೆಲವು ಮಂದಿಯ ಪೈಕಿ ಒಬ್ಬಳು. ಇಂಥ ದಾಹಕಗಳು ಉತ್ತಮ ಕಲಾಕೃತಿಗಳಾಗಿರುತ್ತಿದ್ದದ್ದರಿಂದ ಕುಟುಂಬದ ಪೂಜಾಗೃಹದ ಮುಂದಿನ ಚಹಾ-ಕೋಣೆಯಲ್ಲಿ ಮಾತ್ರ ಉಪಯೋಗಿಸತಕ್ಕವು ಆಗಿದ್ದವು.
ಕಾಮೆಗಿಂತ ಮೊದಲು ಒಬ್ಬ ಇಂಥ ಕಲಾವಿದನೇ ಆಗಿದ್ದ ಅವಳ ತಂದೆಯು ಮದ್ಯಪಾನಪ್ರಿಯನಾಗಿದ್ದ. ಕಾಮೆಯೂ ಧೂಮಪಾನ ಮಾಡುತ್ತಿದ್ದಳು ಮತ್ತು ಬಹಳಷ್ಟು ಸಮಯವನ್ನು ಪುರುಷರ ಸಾಹಚರ್ಯದಲ್ಲಿ ಕಳೆಯುತ್ತಿದ್ದಳು.ಸ್ವಲ್ಪ ಹಣ ಸಂಪಾದಿಸಿದಾಗಲೆಲ್ಲ ಕಲಾವಿದರನ್ನು, ಕವಿಗಳನ್ನು, ಬಡಗಿಗಳನ್ನು, ಕಾರ್ಮಿಕರನ್ನು, ಇನ್ನೂ ಅನೇಕ ಕಸಬುದಾರರನ್ನೂ ಉಪಕಸಬುದಾರರನ್ನೂ ಆಹ್ವಾನಿಸಿ ಔತಣ ನೀಡುತ್ತಿದ್ದಳು. ಅವರ ಸಹವಾಸದಲ್ಲಿ ಆಕೆ ತನ್ನ ದಾಹಕಗಳ ರೂಪರೇಖೆಯನ್ನು ಸೃಷ್ಟಿಸುತ್ತಿದ್ದಳು.
ಕಾಮೆ ದಾಹಕವನ್ನು ಅತೀ ನಿಧಾನವಾಗಿ ತಯಾರಿಸುತ್ತಿದ್ದರೂ ಪೂರ್ಣಗೊಂಡಾಗ ಯಾವಾಗಲೂ ಅದೊಂದು ಅತ್ಯುತ್ತಮ ಕಲಾಕೃತಿಯೇ ಆಗಿರುತ್ತಿತ್ತು. ಎಂದೂ ಮದ್ಯಪಾನ ಮಾಡದ, ಧೂಮಪಾನ ಮಾಡದ ಮತ್ತು ಮುಕ್ತವಾಗಿ ಪರುಷರೊಂದಿಗೆ ಬೆರೆಯದ ಸ್ತ್ರೀಯರು ಇರುವ ಮನೆಗಳಲ್ಲಿ ಅವಳ ದಾಹಕಗಳನ್ನು ಅತ್ಯಮೂಲ್ಯ ವಸ್ತುಗಳೆಂದು ಪರಿಗಣಿಸಲಾಗುತ್ತಿತ್ತು.
ಒಮ್ಮೆ ನಾಗಸಾಕಿಯ ಮಹಾಪೌರರು ತನಗೊಂದು ಧೂಪ ದಾಹಕವನ್ನು ತಯಾರಿಸಿ ಕೊಡುವಂತೆ ಕಾಮೆಯನ್ನು ವಿನಂತಿಸಿದರು. ಹೆಚ್ಚುಕಮ್ಮಿ ಅರ್ಧ ವರ್ಷ ಕಳೆದರೂ ಆಕೆ ತಯಾರಿಕೆಯ ಪ್ರಕ್ರಿಯೆಯನ್ನು ಆರಂಭಿಸಿಯೇ ಇರಲಿಲ್ಲ. ಆ ಸಮಯದಲ್ಲಿ ದೂರದ ನಗರವೊಂದರ ಕಾರ್ಯಾಲಯಕ್ಕೆ ಬಡ್ತಿಯಾಗಿ ತೆರಳಿದ್ದ ಮಹಾಪೌರರು ಅವಳನ್ನು ಭೇಟಿ ಮಾಡಿದರು. ದಾಹಕ ತಯಾರಿಕೆಯ ಕಾರ್ಯವನ್ನು ಆರಂಭಿಸುವಂತೆ ಒತ್ತಾಯಿಸಿದರು.
ಕೊನೆಗೊಂದು ದಿನ ಇದ್ದಕ್ಕಿದ್ದಂತೆ ಪ್ರೇರಣೆ ದೊರೆತದ್ದರಿಂದ ಕಾಮೆ ಧೂಪ ದಾಹಕವನ್ನು ತಯಾರಿಸಿದಳು. ಪೂರ್ಣಗೊಂಡ ನಂತರ ಅದನ್ನು ಮೇಜಿನ ಮೇಲೆ ಇಟ್ಟಳು. ದೀರ್ಘಕಾಲ ಬಲು ಸೂಕ್ಷ್ಮವಾಗಿ ಅದನ್ನು ವೀಕಿಸಿದಳು. ಅದು ಅವಳ ಸಹಚರನೋ ಎಂಬಂತೆ ಅದರ ಎದುರು ದೂಮಪಾನವನ್ನೂ ಮದ್ಯಪಾನವನ್ನೂ ಮಾಡಿದಳು. ಇಡೀ ದಿನ ಅದನ್ನೇ ವೀಕ್ಷಿಸಿದಳು.
ಕೊನೆಗೆ ಒಂದು ಸುತ್ತಿಗೆಯನ್ನ ತೆಗೆದುಕೊಂಡು ಅದನ್ನು ಒಡೆದು ಚೂರುಚೂರು ಮಾಡಿದಳು. ಅವಳ ಮನಸ್ಸಿಗೆ ಅದೊಂದು ಪರಿಪೂರ್ಣ ಸೃಷ್ಟಿ ಅನ್ನಿಸಿರಲಿಲ್ಲ.

ಝೆನ್‌ (Zen) ಕತೆ ೮೬. ನೀನೇನು ಮಾಡುತ್ತಿರುವೆ? ನೀವೇನು ಹೇಳುತ್ತಿರುವಿರಿ?

ಆಧುನಿಕ ಕಾಲದಲ್ಲಿ ಗುರುಗಳ ಮತ್ತು ಶಿಷ್ಯರ ಕುರಿತು, ವಿಶೇಷ ಪ್ರೀತಿಪಾತ್ರ ವಿದ್ಯಾರ್ಥಿಗಳು ಗುರುವಿನ ಬೋಧನೆಗಳನ್ನು ಉತ್ತರಾಧಿಕಾರದಿಂದ ಪಡೆಯುವುದರ ಮತ್ತು ತತ್ಪರಿಣಾಮವಾಗಿ ಸತ್ಯವನ್ನು ತಮ್ಮ ಅನುಯಾಯಿಗಳಿಗೆ ವರ್ಗಾಯಿಸಲು ಅವರಿಗೆ ಬರುವ ಅಧಿಕಾರದ ಕುರಿತು ತೀರ ಅಸಂಬದ್ಧ ಮಾತುಗಳನ್ನಾಡಲಾಗುತ್ತಿದೆ.
ಝೆನ್‌ ಅನ್ನು ಹೀಗೆಯೇ, ಅರ್ಥಾತ್‌ ಹೃದಯದಿಂದ ಹೃದಯಕ್ಕೆ, ಶ್ರುತಪಡಿಸುವುದು ಸರಿಯಾದ ವಿಧಾನ ಎಂಬುದು ನಿಜ. ಹಿಂದಿನ ಕಾಲದಲ್ಲಿ ಈ ಕಾರ್ಯವನ್ನು ನಿಜವಾಗಿ ಇಂತೆಯೇ ಯಶಸ್ವಿಯಾಗಿ ಮಾಡುತ್ತಿದ್ದರು. ಪಾಂಡಿತ್ಯಪೂರ್ಣ ಹೇಳಿಕೆ ಮತ್ತು ದೃಢ ವಚನಗಳಿಗೆ ಬದಲಾಗಿ ಮೌನ ಮತ್ತು ವಿನಯಗಳ ಆಧಿಪತ್ಯವಿತ್ತು. ಇಂಥ ಬೋಧನೆ ಪಡೆದವ ವಿಷಯವನ್ನು ೨೦ ವರ್ಷಗಳ ನಂತರವೂ ಗೌಪ್ಯವಾಗಿ ಇಟ್ಟುಕೊಳ್ಳುತ್ತಿದ್ದ. ಒಬ್ಬ ತನ್ನ ಆವಶ್ಯಕತೆಯಿಂದಾಗಿ ನಿಜವಾದ ಗುರುವೊಬ್ಬ ಇಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಿದ ನಂತರವೇ ಬೋಧನೆಯನ್ನು ಶ್ರುತಪಡಿಸಲಾಗಿದೆ ಎಂಬುದು ಅವನ ಅರಿವಿಗೆ ಬರುತ್ತಿತ್ತು. ಅಂಥ ಸಂದರ್ಭದಲ್ಲಿಯೂ ಕಲಿಕೆಯ ಸನ್ನಿವೇಶ ಬಲು ಸ್ವಾಭಾವಿಕವಾಗಿ ಸೃಷ್ಟಿಯಾಗುತ್ತಿತ್ತು ಹಾಗೂ ಬೊಧನೆ ತಂತಾನೇ ವರ್ಗಾವಣೆ ಆಗುತ್ತಿತ್ತು. ಯಾವುದೇ ಸನ್ನಿವೇಶದಲ್ಲಿ ಅಧ್ಯಾಪಕ “ನಾನು ಇಂಥವರ ಉತ್ತರಾಧಿಕಾರಿ” ಎಂಬುದಾಗಿ ಘೋಷಿಸಿಕೊಳ್ಳುತ್ತಿರಲಿಲ್ಲ, ಏಕೆಂದರೆ ಅಂಥ ಘೋಷಣೆ ಅಪೇಕ್ಷಿತ ಪರಿಣಾಮಕ್ಕೆ ತದ್ವಿರುದ್ಧವಾದ್ದನ್ನೇ ಉಂಟುಮಾಡುತ್ತಿತ್ತು.
ಝೆನ್‌ ಗುರು ಮು-ನ್ಯಾನ್‌ಗೆ ಇದ್ದದ್ದು ಒಬ್ಬನೇ ಒಬ್ಬ ಉತ್ತರಾಧಿಕಾರಿ. ಅವನ ಹೆಸರು ಶೋಜು. ಶೋಜು ಝೆನ್ಅನ್ನು ಸಂಪೂರ್ಣವಾಗಿ ಅಧ್ಯಯಿಸಿದ ನಂತರ ಮು-ನ್ಯಾನ್‌ ಅವನನ್ನು ತನ್ನ ಕೊಠಡಿಗೆ ಕರೆಯಿಸಿಕೊಂಡು ಇಂತೆಂದ: “ನಾನು ವೃದ್ಧನಾಗುತ್ತಿದ್ದೇನೆ. ನನಗೆ ತಿಳಿದ ಮಟ್ಟಿಗೆ ನನ್ನ ಬೋಧನೆಗಳನ್ನು ಮುಂದಕ್ಕೆ ಒಯ್ಯಬಲ್ಲವನು ನೀನೊಬ್ಬ ಮಾತ್ರ. ಅದು ಗುರುವಿನಿಂದ ಗುರುವಿಗೆ ವರ್ಗಾವಣೆ ಆಗುತ್ತಾ ಏಳು ಪೀಳಿಗೆಗಳು ಕಳೆದಿವೆ. ನನ್ನ ಅರಿವಿಗೆ ಅನುಗುಣವಾಗಿ ನಾನೂ ಅನೇಕ ಅಂಶಗಳನ್ನು ಸೇರಿಸಿದ್ದೇನೆ. ಈ ಪುಸ್ತಕ ಬಲು ಅಮೂಲ್ಯವಾದದ್ದು. ನೀನು ನನ್ನ ಉತ್ತರಾಧಿಕಾರಿ ಎಂಬುದನ್ನು ಸೂಚಿಸಲು ಇದನ್ನು ನಿನಗೆ ಕೊಡುತ್ತಿದ್ದೇನೆ”
ಅದಕ್ಕೆ ಶೋಜು ಇಂತು ಉತ್ತರಿಸಿದ: “ಪುಸ್ತಕ ಅಷ್ಟೊಂದು ಮುಖ್ಯವಾದದ್ದೇ ಆಗಿದ್ದರೆ ಅದನ್ನು ನೀವೇ ಇಟ್ಟುಕೊಳ್ಳುವುದೇ ಉಚಿತ. ಬರೆವಣಿಗೆಯ ನೆರವಿಲ್ಲದೆಯೇ ನಾನು ನಿಮ್ಮಿಂದ ಝೆನ್‌ಅನ್ನು ಸ್ವೀಕರಿಸಿದ್ದೇನೆ. ಅದು ಈಗ ಇರುವ ಸ್ಥಿತಿಯಲ್ಲಿಯೇ ನನಗೆ ತೃಪ್ತಿ ನೀಡಿದೆ.”
ಮು-ನ್ಯಾನ್ ಪ್ರತಿಕ್ರಿಯಿಸಿದ: “ನನಗೆ ಅದು ಗೊತ್ತಿದೆ. ಆದರೂ ಈ ಕೃತಿ ಏಳು ತಲೆಮಾರುಗಳಲ್ಲಿ ಗುರುವಿನಿಂದ ಗುರುವಿಗೆ ಬಂದಿದೆ. ಆದ್ದರಿಂದ ಬೋಧನೆಯನ್ನು ಸ್ವೀಕರಿಸಿದ್ದರ ಪ್ರತೀಕವಾಗಿ ಇದನ್ನು ಇಟ್ಟುಕೊ. ತೆಗೆದುಕೊ ಇದನ್ನು.”
ಈ ವಿದ್ಯಮಾನ ಘಟಿಸಿದ್ದು ಒಂದು ಅಗ್ಗಿಷ್ಟಿಕೆಯ ಮುಂದೆ. ಪುಸ್ತಕ ತನ್ನ ಕೈ ಸೇರಿದ ತಕ್ಷಣ ಶೋಜು ಅದನ್ನು ಧಗಧಗಿಸುತ್ತಿರುವ ಅಗ್ನಿಗೆ ಹಾಕಿದ. ಅವನಿಗೆ ಯಾವುದೇ ವಸ್ತು ಸ್ವಾಮ್ಯದಲ್ಲಿ ಆಸಕ್ತಿ ಇರಲಿಲ್ಲ.
ಹಿಂದೆಂದೂ ಕೋಪಗೊಂಡಿರದಿದ್ದ ಮು-ನ್ಯಾನ್ ಕಿರುಚಿದ: “ನೀನೇನು ಮಾಡುತ್ತಿರುವೆ?”
ಶೋಜು ಕೂಡ ಹಿಂದಕ್ಕೆ ಕಿರುಚಿದ: “ನೀವೇನು ಹೇಳುತ್ತಿರುವಿರಿ!”

ಝೆನ್‌ (Zen) ಕತೆ ೮೭. ಹತ್ತು ಉತ್ತರಾಧಿಕಾರಿಗಳು

ಅಧ್ಯಾಪಕರು ತಮ್ಮನ್ನು ಕೊಂದರೂ ಸರಿಯೇ, ತಾವು ಝೆನ್ ಕಲಿಯುತ್ತೇವೆ ಎಂಬುದಾಗಿ ಝೆನ್‌ ವಿದ್ಯಾರ್ಥಿಗಳು ಕಲಿಕೆಯ ಆರಂಭದಲ್ಲಿ ಶಪಥ ಮಾಡುತ್ತಾರೆ. ತಮ್ಮ ಬೆರಳನ್ನು ತುಸು ಕತ್ತರಿಸಿ ಸುರಿಯುವ ರಕ್ತದಿಂದ ತಮ್ಮ ಲಿಖಿತ ತೀರ್ಮಾನಕ್ಕೆ ಮುದ್ರೆಯೊತ್ತುತ್ತಾರೆ. ಕ್ರಮೇಣ ಈ ಶಪಥ ಮಾಡುವುದು ಔಪಚಾರಿಕ ಪ್ರಕ್ರಿಯೆಯೇ ಆಯಿತು. ಈ ಕಾರಣಕ್ಕಾಗಿ ಗುರು ಎಕಿಡೋ ಕೈನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ಹುತಾತ್ಮನಂತೆ ಬಿಂಬಿಸಲಾಯಿತು.
ಎಕಿಡೋ ಬಲು ಕಠಿನ ಶಿಸ್ತಿನ ಅಧ್ಯಾಪಕ. ಅವನ ವಿದ್ಯಾರ್ಥಿಗಳು ಅವನಿಗೆ ಭಯಪಡುತ್ತಿದ್ದರು. ಸಮಯ ಎಷ್ಟೆಂಬುದನ್ನು ಸೂಚಿಸಲು ದೊಡ್ಡ ಜಾಗಟೆ ಹೊಡೆಯುವ ಕರ್ತವ್ಯ ನಿಭಾಯಿಸುತ್ತಿದ್ದ ವಿದ್ಯಾರ್ಥಿಯೊಬ್ಬ, ದೇವಾಲಯದ ಮಹಾದ್ವಾರದ ಬಳಿ ಹೋಗುತ್ತಿದ್ದ ಸುಂದರ ಹುಡುಗಿಯೊಬ್ಬಳಿಂದ ಆಕರ್ಷಿತನಾಗಿ ಜಾಗಟೆಯನ್ನು ಎಷ್ಟು ಸಲ ಹೊಡೆಯಬೇಕಿತ್ತೋ ಅಷ್ಟು ಸಲ ಹೊಡೆಯಲಿಲ್ಲ.
ಆ ಕ್ಷಣದಲ್ಲಿ ಅವನ ಹಿಂದೆಯೇ ನಿಂತಿದ್ದ ಎಕಿಡೋ ಒಂದು ದೊಣ್ಣೆಯಿಂದ ಪೆಟ್ಟು ಕೊಟ್ಟ. ತತ್ಪರಿಣಾಮವಾಗಿ ಆದ ಆಘಾತದಿಂದ ವಿದ್ಯಾರ್ಥಿ ಸತ್ತ.
ಆ ವಿದ್ಯಾರ್ಥಿಯ ಪಾಲಕ ಅಪಘಾತದ ಸುದ್ದಿ ಕೇಳಿ ನೇರವಾಗಿ ಎಕಿಡೋ ಹತ್ತಿರ ಹೋದ. ಅವನನ್ನು ದೂಷಿಸುವುದು ಸರಿಯಲ್ಲ ಎಂಬುದನ್ನು ತಿಳಿದಿದ್ದ ಪಾಲಕ ಗುರುವನ್ನು ಆತನ ನಿರ್ದಾಕ್ಷಿಣ್ಯ ಬೋಧನ ವಿಧಾನಕ್ಕಾಗಿ ಹೊಗಳಿದ. ಆಗಲೂ ಎಕಿಡೋವಿನ ಮನೋಧರ್ಮ ವಿದ್ಯಾರ್ಥಿ ಜೀವಂತವಾಗಿದ್ದಿದ್ದರೆ ಎಂತಿರುತ್ತಿತ್ತೋ ಅಂತೆಯೇ ಇತ್ತು.
ಈ ವಿದ್ಯಮಾನ ಜರಗಿದ ನಂತರ ಎಕಿಡೋ ತನ್ನ ಮಾರ್ಗದರ್ಶನದಲ್ಲಿ ಹತ್ತಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜ್ಞಾನಿಗಳನ್ನು ತಯಾರಿಸಿದ. ಇದೊಂದು ಅಸಾಮಾನ್ಯ ವಿದ್ಯಮಾನವಾಗಿತ್ತು.

ಝೆನ್‌ (Zen) ಕತೆ ೮೮. ನಿಜವಾದ ಮಾರ್ಗ

ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು.
ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?”
ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ ಕೊಡು.”
ಈ ಪದಗಳನ್ನು ಹೇಳುವುದರ ಮುಖೇನ ಇಕ್ಕ್ಯು ದಾರಿಯನ್ನು ಎಷ್ಟು ಸ್ಪಷ್ಟವಾಗಿ ತೋರಿಸಿದನೆಂದರೆ ನಿನಕಾವಾ ಮುಗುಳ್ನಗೆ ಬೀರಿ ಸತ್ತನು.

ಝೆನ್‌ (Zen) ಕತೆ ೮೯. ಗೂಡೋ ಮತ್ತು ಚಕ್ರವರ್ತಿ

ಚಕ್ರವರ್ತಿ ಗೋಯೋಝೈ ಗುರು ಗೂಡೋ ಮಾರ್ಗದರ್ಶನದಲ್ಲಿ ಝೆನ್‌ಅನ್ನು ಅಧ್ಯಯಿಸುತ್ತಿದ್ದ.
ಚಕ್ರವರ್ತಿ ವಿಚಾರಿಸಿದ: “ಝೆನ್‌ನಲ್ಲಿ ಈ ಮನಸ್ಸೇ ಬುದ್ಧ. ಇದು ಸರಿಯಷ್ಟೆ?”
ಗೂಡೋ ಉತ್ತರಿಸಿದ: “ನಾನು ಹೌದು ಎಂಬುದಾಗಿ ಹೇಳಿದರೆ ಅರ್ಥ ಮಾಡಿಕೊಳ್ಳದೆಯೇ ಅರ್ಥವಾಗಿದೆ ಎಂಬುದಾಗಿ ನೀನು ಆಲೋಚಿಸುವೆ. ಇಲ್ಲ ಎಂಬುದಾಗಿ ನಾನು ಹೇಳಿದರೆ, ನೀನು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಹುದಾದ ತಥ್ಯವನ್ನು ಅಲ್ಲಗಳೆದಂತಾಗುತ್ತದೆ”
ಇನ್ನೊಂದು ದಿನ ಗೂಡೋವನ್ನು ಚಕ್ರವರ್ತಿ ಕೇಳಿದ: “ಜ್ಞಾನೋದಯವಾದ ಮನುಷ್ಯ ಸತ್ತ ನಂತರ ಎಲ್ಲಿಗೆ ಹೋಗುತ್ತಾನೆ?”
ಗೂಡೋ ಉತ್ತರಿಸಿದ: “ನನಗೆ ಗೊತ್ತಿಲ್ಲ.”
ಚಕ್ರವರ್ತಿ ಕೇಳಿದ: “ನಿಮಗೆ ಏಕೆ ಗೊತ್ತಿಲ್ಲ?”
ಗೂಡೋ ಉತ್ತರಿಸಿದ: “ಏಕೆಂದರೆ ನಾನಿನ್ನೂ ಸತ್ತಿಲ್ಲ.”
ತದನಂತರ ತನ್ನ ಮನಸ್ಸಿನಿಂದ ಗ್ರಹಿಸಲಾಗದ ಇಂಥ ವಿಷಯಗಳ ಕುರಿತು ಹೆಚ್ಚು ವಿಚಾರಿಸಲು ಚಕ್ರವರ್ತಿ ಹಿಂದೇಟು ಹಾಕಿದ. ಆದ್ದರಿಂದ ಅವನನ್ನು ಜಾಗೃತಗೊಳಿಸಲೋ ಎಂಬಂತೆ ಗೂಡೋ ತನ್ನ ಕೈನಿಂದ ನೆಲಕ್ಕೆ ಹೊಡೆದ. ಚಕ್ರವರ್ತಿಗೆ ಜ್ಞಾನೋದಯವಾಯಿತು!
ಜ್ಞಾನೋದಯವಾದ ನಂತರ ಚಕ್ರವರ್ತಿಯು ಝೆನ್‌ ಅನ್ನೂ ಗೂಡೋವನ್ನೂ ಮೊದಲಿಗಿಂತ ಹೆಚ್ಚು ಗೌರವಿಸತೊಡಗಿದ. ತನ್ನ ಚಳಿಗಾಲದಲ್ಲಿ ಅರಮನೆಯ ಒಳಗೆ ಟೊಪ್ಪಿ ಧರಿಸಲು ಅನುಮತಿಯನ್ನೂ ಗೂಡೋನಿಗೆ ನೀಡಿದ.೮೦ ವರ್ಷಕ್ಕಿಂತ ಹೆಚ್ಚು ವಯಸ್ಸು ಆದ ನಂತರ ಗೂಡೋ ತಾನು ಭಾಷಣ ಮಾಡುತ್ತಿರುವಾಗಲೇ ನಿದ್ದೆಗೆ ಜಾರುತ್ತಿದ್ದ. ಅಂಥ ಸನ್ನಿವೇಶಗಳಲ್ಲಿ ತನ್ನ ಪ್ರೀತಿಯ ಶಿಕ್ಷಕ ತನ್ನ ವಯಸ್ಸಾಗುತ್ತಿರುವ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ಅನುಭವಿಸಲಿ ಎಂಬ ಕಾರಣಕ್ಕಾಗಿ ಚಕ್ರವರ್ತಿ ತಾನೇ ಸದ್ದು ಮಾಡದೆಯೇ ಇನ್ನೊಂದು ಕೊಠಡಿಗೆ ತೆರಳುತ್ತಿದ್ದ.

ಝೆನ್‌ (Zen) ಕತೆ ೯೦. ವಿಧಿಯ ಕೈಗಳಲ್ಲಿ

ನೊಬುನಾಗ ಎಂಬ ಹೆಸರಿನ ಜಪಾನಿನ ಮಹಾಯೋಧನೊಬ್ಬ ತನ್ನ ಶತ್ರು ಪಾಳೆಯದಲ್ಲಿದ್ದ ಸೈನಿಕರ ಸಂಖ್ಯೆಯ ಹತ್ತನೇ ಒಂದು ಭಾಗದಷ್ಟು ಮಂದಿ ತನ್ನ ಅಧೀನದಲ್ಲಿ ಇಲ್ಲದಿದ್ದರೂ ಧಾಳಿ ಮಾಡಲು ನಿರ್ಧರಿಸಿದ. ತನ್ನ ಗೆಲ್ಲುವು ಖಚಿತ ಎಂಬುದು ಅವನಿಗೆ ಗೊತ್ತಿದ್ದರೂ ಅವನ ಸೈನಿಕರಿಗೆ ಈ ಕುರಿತು ಸಂಶಯವಿತ್ತು.
ಹೋಗುವ ದಾರಿಯಲ್ಲಿ ಇದ್ದ ಶಿಂಟೋ ಪೂಜಾಸ್ಥಳದ ಬಳಿ ಆತ ನಿಂತು ತನ್ನ ಸೈನಿಕರಿಗೆ ಇಂತು ಹೇಳಿದ: “ಪೂಜಾಸ್ಥಳದೊಳಕ್ಕೆ ಹೋಗಿ ಬಂದ ನಂತರ ನಾನು ನಾಣ್ಯವೊಂದನ್ನು ಮೇಲಕ್ಕೆ ಚಿಮ್ಮುತ್ತೇನೆ. ಮುಮ್ಮುಖ ಮೇಲೆ ಇರುವಂತೆ ನಾಣ್ಯ ಕೆಳಗೆ ಬಿದ್ದರೆ ನಾವು ಗೆಲ್ಲುತ್ತೇವೆ, ಹಿಮ್ಮುಖ ಮೇಲೆ ಇರುವಂತೆ ಬಿದ್ದರೆ ನಾವು ಸೋಲುತ್ತೇವೆ. ನಮ್ಮನ್ನು ವಿಧಿ ಅದರ ಕೈಗಳಲ್ಲಿ ಹಿಡಿದುಕೊಂಡಿದೆ.”
ನೊಬುನಾಗ ಪೂಜಾಸ್ಥಳವನ್ನು ಪ್ರವೇಶಿಸಿ ಮೌನ ಪ್ರಾರ್ಥನೆ ಸಲ್ಲಿಸಿದ. ಹೊರಬಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದ, ಮುಮ್ಮುಖ ಮೇಲೆ ಇತ್ತು. ಯುದ್ಧ ಮಾಡಲು ಅವನ ಸೈನಿಕರು ಎಷ್ಟು ಉತ್ಸುಕರಾಗಿದ್ದರೆಂದರೆ ಯುದ್ಧದಲ್ಲಿ ಅವರು ಬಲು ಸುಲಭವಾಗಿ ಜಯ ಗಳಿಸಿದರು.
ಯುದ್ಧ ಮುಗಿದ ನಂತರ ನೊಬುನಾಗನ ಅನುಚರ ಅವನಿಗೆ ಇಂತೆಂದ: “ವಿಧಿಯ ತೀರ್ಪನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ.”
“ಖಂಡಿತ ಸಾಧ್ಯವಿಲ್ಲ” ಎಂಬುದಾಗಿ ಉದ್ಗರಿಸಿದ ನೊಬುನಾಗ ತಾನು ಚಿಮ್ಮಿದ ನಾಣ್ಯವನ್ನು ತೋರಿಸಿದ. ಅದರ ಎರಡೂ ಪಾರ್ಶ್ವಗಳಲ್ಲಿ ಮುಮ್ಮುಖದಲ್ಲಿರಬೇಕಾದ ಚಿತ್ರವೇ ಇತ್ತು.

ಝೆನ್‌ (Zen) ಕತೆ ೯೧. ಕಾಸನ್‌ ಬೆವರಿದ

ಪ್ರಾಂತೀಯ ಪ್ರಭುವಿನ ಶವಸಂಸ್ಕಾರವನ್ನು ಅಧಿಕೃತವಾಗಿ ನೆರವೇರಿಸುವಂತೆ ಕಾಸನ್‌ಗೆ ಹೇಳಲಾಯಿತು.
ಆ ವರೆಗೆ ಅವನು ಪ್ರಭುಗಳನ್ನೇ ಆಗಲಿ ಶ್ರೇಷ್ಠರನ್ನೇ ಆಗಲಿ ಸಂಧಿಸಿಯೇ ಇರಲಿಲ್ಲವಾದ್ದರಿಂದ ಅಧೀರನಾಗಿದ್ದ. ಶವ ಸಂಸ್ಕಾರದ ಕರ್ಮಾಚರಣೆ ಆರಂಭವಾದಾಗ ಅವನು ಬೆವರಿದ.
ತರುವಾಯ, ಅವನು ಹಿಂದಿರುಗಿ ಬಂದ ನಂತರ, ತನ್ನ ಶಿಷ್ಯರನ್ನು ಒಂದೆಡೆ ಸೇರಿಸಿದ. ವಿಜನ ಪ್ರದೇಶದಲ್ಲಿರುವ ದೇವಾಲಯದಲ್ಲಿ ತನ್ನ ನಡೆನುಡಿ ಹೇಗಿರುತ್ತದೋ ಅಂತೆಯೇ ಖ್ಯಾತರ ಜಗತ್ತಿನಲ್ಲಿಯೂ ಇರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಶಿಕ್ಷಕನಾಗುವ ಅರ್ಹತೆ ಈಗ ತನಗಿಲ್ಲವೆಂಬುದನ್ನು ಒಪ್ಪಿಕೊಂಡ.
ಆನಂತರ ಕಾಸನ್‌ ರಾಜೀನಾಮೆ ಸಲ್ಲಿಸಿ ಇನ್ನೊಬ್ಬ ಗುರುವಿನ ಶಿಷ್ಯನಾದ. ೮ ವರ್ಷಗಳ ತರುವಾಯ ಜ್ಞಾನಿಯಾಗಿ ತನ್ನ ಹಿಂದಿನ ಶಿಷ್ಯರ ಬಳಿಗೆ ಹಿಂದಿರುಗಿದ.

ಝೆನ್‌ (Zen) ಕತೆ ೯೨. ಕಲ್ಲು ಮನಸ್ಸು

ಚೀನೀ ಝೆನ್‌ ಗುರು ಹೋಗೆನ್‌ ಗ್ರಾಮಾಂತರ ಪ್ರದೇಶದ ಒಂದು ಸಣ್ಣ ದೇವಾಲಯದಲ್ಲಿ ಏಕಂಗಿಯಾಗಿ ವಾಸಿಸುತ್ತಿದ್ದ. ಅದೊಂದು ದಿನ ಯಾತ್ರೆ ಹೋಗುತ್ತಿದ್ದ ನಾಲ್ಕು ಮಂದಿ ಸನ್ಯಾಸಿಗಳು ಬಂದು ಅವನ ನಿವಾಸದ ಪ್ರಾಂಗಣದಲ್ಲಿ ಬೆಂಕಿ ಹಾಕಿ ತಾವು ಮೈ ಬೆಚ್ಚಗೆ ಮಾಡಿಕೊಳ್ಳಬಹುದೇ ಎಂಬುದಾಗಿ ಕೇಳಿದರು.
ಬೆಂಕಿ ಹಾಕುತ್ತಿರುವಾಗ ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆ ಕುರಿತು ಅವರು ಚರ್ಚಿಸುತ್ತಿರುವುದು ಹೋಗೆನ್‌ಗೆ ಕೇಳಿಸಿತು. ಅವನು ಅವರ ಜೊತೆ ಸೇರಿ ಕೇಳಿದ: “ಅಲ್ಲೊಂದು ದೊಡ್ಡ ಕಲ್ಲು ಇದೆ. ಅದು ನಿಮ್ಮಮನಸ್ಸಿನ ಒಳಗಿದೆ ಎಂಬುದಾಗಿ ಪರಿಗಣಿಸುತ್ತಿರೋ ಅಥವ ಹೊರಗಿದೆ ಎಂಬುದಾಗಿ ಪರಿಗಣಿಸುತ್ತೀರೋ?”
ಅವರ ಪೈಕಿ ಒಬ್ಬ ಸನ್ಯಾಸಿ ಇಂತು ಉತ್ತರಿಸಿದ: “ಬೌದ್ಧಸಿದ್ಧಾಂತದ ದೃಷ್ಟಿಕೋನದಿಂದ ನೋಡುವುದಾದರೆ ಪ್ರತಿಯೊಂದೂ ಮನಸ್ಸಿನ ಮೂರ್ತೀಕರಣವೇ ಆಗಿರುತ್ತದೆ. ಆದ್ದರಿಂದ ಕಲ್ಲು ನನ್ನ ಮನಸ್ಸಿನ ಒಳಗಿದೆ ಎಂಬುದಾಗಿ ನಾನು ಹೇಳುತ್ತೇನೆ.”
ಅದಕ್ಕೆ ಹೋಗೆನ್‌ ಇಂತು ಪ್ರತಿಕ್ರಿಯಿಸಿದ: “ಅಂಥ ಕಲ್ಲನ್ನು ನಿನ್ನ ಮನಸ್ಸಿನಲ್ಲಿ ಎಲ್ಲೆಡೆಗೂ ಹೊತ್ತೊಯ್ಯುತ್ತಿದ್ದರೆ ನಿನ್ನ ತಲೆ ಬಲು ಭಾರವಾಗಿರುವಂತೆ ಭಾಸವಾಗುತ್ತಿರಬೇಕು.”

ಝೆನ್‌ (Zen) ಕತೆ ೯೩. ತಪ್ಪನ್ನು ತಿನ್ನುವುದು

ಒಂದು ದಿನ ಸೋಟೋ ಝೆನ್‌ ಗುರು ಫುಕೈ ಮತ್ತು ಅವನ ಅನುಯಾಯಿಗಳ ರಾತ್ರಿಯ ಭೋಜನ ತಡವಾಗಿ ತಯಾರಿಸಬೇಕಾದ ಪರಿಸ್ಥಿತಿ ಉದ್ಭವಿಸಿತು.
ಅಡುಗೆಯವ ತನ್ನ ಬಾಗಿದ ಚಾಕುವಿನೊಂದಿಗೆ ತೋಟಕ್ಕೆ ಹೋಗಿ ಆತುರಾತುರವಾಗಿ ಹಸಿರು ತರಕಾರಿಗಳ ತುದಿಗಳನ್ನು ಕತ್ತರಿಸಿ ತಂದು ಅವನ್ನು ಒಟ್ಟಾಗಿಯೇ ಕೊಚ್ಚಿ ಸಾರು ಮಾಡಿದ, ತರಾತುರಿಯಲ್ಲಿ ತರಕಾರಿಗಳ ಜೊತೆಯಲ್ಲಿ ಒಂದು ಹಾವಿನ ಭಾಗವೂ ಸೇರಿರುವುದನ್ನು ಅವನು ಗಮನಿಸಲೇ ಇಲ್ಲ.
ಫುಕೈನ ಅನುಯಾಯಿಗಳು ಇಷ್ಟು ರುಚಿಯಾದ ಸಾರನ್ನು ತಿಂದೇ ಇರಲಿಲ್ಲ ಅಂದುಕೊಂಡರು. ತನ್ನ ಬಟ್ಟಲಿನಲ್ಲಿ ಹಾವಿ ತಲೆ ಇದ್ದದ್ದನ್ನು ಗಮನಿಸಿದ ಗುರು ಅಡುಗೆಯವನನ್ನು ಕರೆಸಿ ಹಾವಿನ ತಲೆಯನ್ನು ಎತ್ತಿ ತೋರಿಸುತ್ತಾ ಕೇಳಿದ: “ಏನಿದು?”
“ಓ, ಧನ್ಯವಾದಗಳು ಗುರುವೇ” ಎಂಬುದಾಗಿ ಉತ್ತರಿಸಿದ ಅಡುಗೆಯವ ತುಂಡನ್ನು ತಗೆದುಕೊಂಡು ಬೇಗನೆ ತಿಂದ.

ಝೆನ್‌ (Zen) ಕತೆ ೯೪. ನಿಜವಾದ ಸುಧಾರಣೆ

ರ್ಯೋಕಾನ್‌ ಝೆನ್‌ ಅಧ್ಯಯನಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಟ್ಟಿದ್ದವನು. ಬಂಧುಗಳು ಎಷ್ಟೇ ಎಚ್ಚರಿಕೆ ನೀಡಿದರೂ ತನ್ನ ಸಹೋದರನ ಮಗ ತನ್ನ ಹಣವನ್ನು ವೇಶ್ಯೆಯೊಬ್ಬಳಿಗಾಗಿ ವ್ಯಯಿಸುತ್ತಿದ್ದಾನೆ ಎಂಬ ವಿಷಯ ಅವನಿಗೆ ತಿಳಿಯಿತು. ಕುಟುಂಬದ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರ್ಯೋಕಾನ್‌ನ ಅನುಪಸ್ಥಿತಿಯಲ್ಲಿ ಅವನು ಹೊತ್ತುಕೊಂಡಿದ್ದನಾದ್ದರಿಂದ ಸೊತ್ತು ಸಂಪೂರ್ಣವಾಗಿ ಕರಗುವ ಅಪಾಯ ಎದುರಾಗಿತ್ತು. ಈ ಕುರಿತು ಏನಾದರೂ ಮಾಡುವಂತೆ ರ್ಯೋಕಾನ್‌ಅನ್ನು ಬಂಧುಗಳು ಕೋರಿದರು.
ಅನೇಕ ವರ್ಷಗಳಿಂದ ನೋಡದೇ ಇದ್ದ ಸಹೋದರನ ಮಗನನ್ನು ಭೇಟಿ ಮಾಡಲು ರ್ಯೋಕಾನ್‌ ಬಹು ದೂರ ಪಯಣಿಸಬೇಕಾಯಿತು. ಸಹೋದರನ ಮಗನಿಗೆ ತನ್ನ ದೊಡ್ಢಪ್ಪನನ್ನು ನೋಡಿ ಬಲು ಸಂತೋಷವಾದಂತೆ ತೋರಿತು. ಅವನು ತನ್ನ ಮನೆಯಲ್ಲಿಯೇ ಆ ರಾತ್ರಿ ತಂಗುವಂತೆ ತನ್ನ ದೊಡ್ಡಪ್ಪನನ್ನು ವಿನಂತಿಸಿದನು.
ರ್ಯೋಕಾನ್‌ ಇಡೀ ರಾತ್ರಿಯನ್ನು ಧ್ಯಾನ ಮಾಡುತ್ತಾ ಕಳೆದನು. ಬೆಳಗ್ಗೆ ಅಲ್ಲಿಂದ ಹೊರಡುವಾಗ ಹೇಳಿದ: “ನಾನು ಮುದುಕನಾಗುತ್ತಿರಬೇಕು. ಎಂದೇ ನನ್ನ ಕೈಗಳು ನಡುಗುತ್ತಿವೆ. ನನ್ನ ಹುಲ್ಲಿನ ಚಪ್ಪಲಿಯ ದಾರ ಕಟ್ಟಲು ನೀನು ನನಗೆ ಸಹಾಯ ಮಾಡಬಲ್ಲೆಯ?”
ಸಹೋದರನ ಮಗ ಸಂತೋಷದಿಂದಲೇ ಅವನಿಗೆ ಸಹಾಯ ಮಾಡಿದ. ರ್ಯೋಕಾನ್‌ ಕೊನೆಯದಾಗಿ ಹೇಳಿದ: “ಧನ್ಯವಾದಗಳು. ದಿನದಿಂದ ದಿನಕ್ಕೆ ಮನುಷ್ಯನ ವಯಸ್ಸು ಹೆಚ್ಚುತ್ತಾ ಹೋಗುತ್ತದೆ, ಅವನು ದುರ್ಬಲನಾಗುತ್ತಾ ಹೋಗುತ್ತಾನೆ. ನಿನ್ನ ಕುರಿತು ನೀನೇ ಎಚ್ಚರಿಕೆಯಿಂದಿರು.” ತದನಂತರ ವೇಶ್ಯೆಯ ಕುರಿತಾಗಲೀ ಅವನ ಬಂಧುಗಳ ದೂರಿನ ಕುರಿತಾಗಲೀ ಒಂದೇ ಒಂದು ಪದವನ್ನೂ ಹೇಳದೆಯೆ ರ್ಯೋಕಾನ್‌ ಅಲ್ಲಿಂದ ಹೊರಟನು. ಆದರೂ, ಆ ಬೆಳಗ್ಗಿನಿಂದಲೇ ಅವನ ಸಹೋದರನ ಮಗನ ದುಂದುವೆಚ್ಚ ಮಾಡುವಿಕೆ ನಿಂತು ಹೋಯಿತು.

ಝೆನ್‌ (Zen) ಕತೆ ೯೫. ಜೀವಂತ ಬುದ್ಧ ಮತ್ತು ತೊಟ್ಟಿ ಮಾಡುವವ

ಝೆನ್‌ ಗುರುಗಳು ವಿಜನ ಪ್ರದೇಶದಲ್ಲಿರುವ ಕೊಠಡಿಯಲ್ಲಿ ವೈಯಕ್ತಿಕ ಮಾರ್ಗದರ್ಶನ ನೀಡುತ್ತಾರೆ. ಅಧ್ಯಾಪಕ ಮತ್ತು ವಿದ್ಯಾರ್ಥಿ ಒಟ್ಟಿಗೆ ಇರುವಾಗ ಆ ಕೋಣೆಯೊಳಕ್ಕೆ ಬೇರೆ ಯಾರೂ ಪ್ರವೇಶಿಸುವುದಿಲ್ಲ.
ವರ್ತಕರೊಂದಿಗೆ, ವಾರ್ತಾಪತ್ರಿಕೆಯವರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡುವುದೆಂದರೆ ಕ್ಯೋಟೋದ ಕೆನ್ನಿನ್ ದೇವಾಲಯದ ಝೆನ್ ಗುರು ಮೊಕುರೈಗೆ ಬಲು ಇಷ್ಟ. ಒಬ್ಬ ತೊಟ್ಟಿ ಮಾಡುವವ (Tubmaker) ಹೆಚ್ಚುಕಮ್ಮಿ ಅನಕ್ಷರಸ್ಥನಾಗಿದ್ದ. ಅವನು ಯಾವಾಗಲೂ ಮೊಕುರೈಅನ್ನು ಮೂರ್ಖಪ್ರಶ್ನಗಳನ್ನು ಕೇಳುತ್ತಿದ್ದ. ತದನಂತರ ಚಹಾ ಕುಡಿದು ಅಲ್ಲಿಂದ ಹೋಗುತ್ತಿದ್ದ.
ಒಂದು ದಿನ ತೊಟ್ಟಿ ಮಾಡುವವ ಇದ್ದ ವೇಳೆಯಲ್ಲಿ ತನ್ನೊಬ್ಬ ಶಿಷ್ಯನಿಗೆ ವೈಯಕ್ತಿಕ ಮಾರ್ಗದರ್ಶನ ನೀಡಲು ಬಯಸಿದ ಮೊಕುರೈ. ಎಂದೇ, ಇನ್ನೊಂದು ಕೊಠಡಿಯಲ್ಲಿ ಕಾಯುತ್ತಿರುವಂತೆ ತೊಟ್ಟಿ ಮಾಡುವವನಿಗೆ ಹೇಳಿದ.
“ನೀನೊಬ್ಬ ಜೀವಂತ ಬುದ್ಧ ಎಂಬುದಾಗಿ ನಾನು ತಿಳಿದಿದ್ದೇನೆ,” ಆಕ್ಷೇಪಿಸಿದ ತೊಟ್ಟಿ ಮಾಡುವವ. “ದೇವಾಲಯದಲ್ಲಿ ಇರುವ ಕಲ್ಲಿನ ಬುದ್ಧರುಗಳು ಕೂಡ ತಮ್ಮೆದುರಿಗೆ ಬಹು ಮಂದಿ ಒಟ್ಟಿಗೆ ಬರುವವರನ್ನು ನಿರಾಕರಿಸುವುದಿಲ್ಲ. ಅಂದ ಮೇಲೆ ನನ್ನನ್ನೇಕೆ ಹೊರಹಾಕಬೇಕು?”
ತನ್ನ ಶಿಷ್ಯನನ್ನು ನೋಡಲು ಮೊಕುರೈ ಹೊರ ಹೋಗಲೇ ಬೇಕಾಯಿತು.

ಝೆನ್‌ (Zen) ಕತೆ ೯೬. ಝೆನ್ ಸಂಭಾಷಣೆ

ತಮ್ಮ ಮನಸ್ಸಿನಲ್ಲಿರುವುದನ್ನುಅಭಿವ್ಯಕ್ತಪಡಿಸಲು ಝೆನ್‌ ಗುರುಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಎರಡು ಝೆನ್‌ ದೇವಾಲಯಗಳಲ್ಲಿ ತಲಾ ಒಬ್ಬೊಬ್ಬರಂತೆ ಬಾಲ ಪೋಷಿತರು ಇದ್ದರು. ಅವರ ಪೈಕಿ ಪ್ರತೀ ದಿನ ಬೆಳಗ್ಗೆ ತರಕಾರಿಗಳನ್ನು ತರಲು ಹೋಗುತ್ತಿದ್ದ ಒಬ್ಬ ಬಾಲಕನು ದಾರಿಯಲ್ಲಿ ಇನ್ನೊಬ್ಬನನ್ನು ಭೇಟಿಯಾಗುತ್ತಿದ್ದ.
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಒಬ್ಬ.
“ನನ್ನ ಕಾಲುಗಳು ಎಲ್ಲಿಗೆ ಹೋಗುತ್ತವೆಯೋ ಅಲ್ಲಿಗೆ ಹೋಗುತ್ತಿರುವೆ,” ಪ್ರತಿಕ್ರಿಯಿಸಿದ ಇನ್ನೊಬ್ಬ.
ಈ ಉತ್ತರ ಮೊದಲನೆಯವನನ್ನು ತಬ್ಬಿಬ್ಬುಗೊಳಿಸಿದ್ದರಿಂದ ಅವನು ತನ್ನ ಅಧ್ಯಾಪಕನ ನೆರವು ಕೋರಿದ. “ನಾಳೆ ಬೆಳಗ್ಗೆ,” ಅಧ್ಯಾಪಕರು ಹೇಳಿಕೊಟ್ಟರು, “ಆ ಚಿಕ್ಕವನನ್ನು ನೀನು ಭೇಟಿ ಮಾಡಿದಾಗ ಅದೇ ಪ್ರಶ್ನೆಯನ್ನು ಕೇಳು. ಅವನು ಹಿಂದಿನಂತೆಯೇ ಉತ್ತರಿಸುತ್ತಾನೆ. ಆಗ ನೀನು ಅವನನ್ನು ಕೇಳು: ’ನಿನಗೆ ಕಾಲುಗಳೇ ಇಲ್ಲ ಎಂದಾದರೆ, ಆಗ ನೀನು ಎಲ್ಲಿಗೆ ಹೋಗುವೆ?’ ಅವನಿಗೆ ತಕ್ಕ ಶಾಸ್ತಿ ಆಗುತ್ತದೆ.”
ಮರುದಿನ ಬೆಳಗ್ಗೆ ಆ ಬಾಲಕರು ಪುನಃ ಪರಸ್ಪರ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಮೊದಲನೆಯವನು.
“ಗಾಳಿ ಎಲ್ಲಿಗೆ ಬೀಸುತ್ತಿದೆಯೋ ಅಲ್ಲಿಗೆ ಹೋಗುತ್ತಿರುವೆ,” ಪ್ರತಿಕ್ರಿಯಿಸಿದ ಎರಡನೆಯವನು.
ಈ ಉತ್ತರದಿಂದ ಪುನಃ ತಬ್ಬಿಬ್ಬಾದ ಬಾಲಕ ತನ್ನ ಸೋಲನ್ನು ಗುರುವಿನ ಹತ್ತಿರ ಹೇಳಿಕೊಂಡ.
“ಗಾಳಿಯೇ ಬೀಸದಿದ್ದರೆ ಎಲ್ಲಿಗೆ ಹೋಗುವೆ ಎಂಬುದಾಗಿ ಕೇಳು,” ಸಲಹೆ ನೀಡಿದರು ಅಧ್ಯಾಪಕರು.
ಮರುದಿನ ಬೆಳಗ್ಗೆ ಆ ಬಾಲಕರು ಮೂರನೆಯ ಸಲ ಪರಸ್ಪರ ಭೇಟಿಯಾದರು.
“ನೀನು ಎಲ್ಲಿಗೆ ಹೋಗುತ್ತಿರುವೆ?” ಕೇಳಿದ ಮೊದಲನೆಯವನು.
“ನಾನು ಮಾರುಕಟ್ಟೆಗೆ ತರಕಾರಿ ಖರೀದಿಸಲು ಹೋಗುತ್ತಿದ್ದೇನೆ,” ಉತ್ತರಿಸಿದ ಎರಡನೆಯವನು.

ಝೆನ್‌ (Zen) ಕತೆ ೯೭. ಕೊನೆಯ ಮೊಟಕು

ಟ್ಯಾನ್ಗೆನ್‌ ಬಾಲ್ಯದಿಂದಲೇ ಸೆಂ‌ಗೈ ಬಳಿ ಅಧ್ಯಯಿಸುತ್ತಿದ್ದ ಅವನಿಗೆ ೨೦ ವರ್ಷ ವಯಸ್ಸು ಆದಾಗ ತನ್ನ ಗುರುವನ್ನು ಬಿಟ್ಟು ಬೇರೆಯವರನ್ನು ಭೇಟಿ ಮಾಡಿ ತೌಲನಿಕ ಅಧ್ಯಯನ ಮಾಡಲು ಬಯಸಿದನಾದರೂ ಸೆಂಗೈ ಅನುಮತಿ ನೀಡಲಿಲ್ಲ. ಟ್ಯಾನ್ಗೆನ್ ಕೇಳಿದಾಗಲೆಲ್ಲ ಸೆಂಗೈ ಮೊಟಕುತ್ತಿದ್ದ.
ಅಂತಿಮವಾಗಿ ಅನುಮತಿ ನೀಡುವಂತೆ ಸೆಂಗೈನನ್ನು ಪುಸಲಾಯಿಸಲು ಹಿರಿಯ ಸಹೋದರನೊಬ್ಬನನ್ನು ಟ್ಯಾನ್ಗೆನ್ ವಿನಂತಿಸಿದ. ಆ ಕಾರ್ಯ ನಿರ್ವಹಿಸಿದ ಹಿರಿಯ ಸಹೋದರ ಟ್ಯಾನ್ಗೆನ್‌ನಿಗೆ ವರದಿ ಮಾಡಿದ: “ಈ ಕುರಿತು ಒಪ್ಪಂದವಾಗಿದೆ. ನಿನ್ನ ಸಮಸ್ಯೆಯನ್ನು ನಿನಗಾಗಿ ನಾನು ಬಗೆಹರಿಸಿದ್ದೇನೆ. ತಕ್ಷಣವೇ ಯಾತ್ರೆ ಆರಂಭಿಸು.”
ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಸೆಂಗೈ ಬಳಿಗೆ ಟ್ಯಾನ್ಗೆನ್ ಹೋದಾಗ ಉತ್ತರ ರೂಪದಲ್ಲಿ ಗುರು ಅವನ ತಲೆ ಮೇಲೆ ಕುಟ್ಟಿದ.
ನಡೆದುದನ್ನು ಹಿರಿಯ ಸಹೋದರನಿಗೆ ಟ್ಯಾನ್ಗೆನ್ ವರದಿ ಮಾಡಿದ. ಅವನು ”ಏನಿದು ವಿಷಯ?. ಸೆಂಗೈ ಮೊದಲು ಅನುಮತಿ ನೀಡಿ ತದನಂತರ ಮನಸ್ಸು ಬದಲಿಸಿದ್ದು ಸರಿಯಲ್ಲ. ನಾನು ಅವನಿಗೆ ಇದನ್ನೇ ಹೇಳುತ್ತೇನೆ.” ಅಂದವನೇ ಅಧ್ಯಾಪಕನನ್ನು ನೋಡಲು ಹೋದ.
“ನಾನು ನೀಡಿದ್ದ ಅನುಮತಿಯನ್ನು ರದ್ದುಪಡಿಸಲಿಲ್ಲ,” ಎಂಬುದಾಗಿ ಹೇಳಿದ ಸೆಂಗೈ. “ಕೊನೆಯ ಸಲ ಮೊಟಕುವುದು ಮಾತ್ರ ನನ್ನ ಬಯಾಕೆಯಾಗಿತ್ತು, ಏಕೆಂದರೆ ಅವನು ಹಿಂದಿರುಗಿ ಬರುವಾಗ ಜ್ಞಾನೋದಯವಾಗಿರುತ್ತದಾದ್ದರಿಂದ ಪುನಃ ನಾನು ಅಧಿಕೃತವಾಗಿ ಅವನನ್ನು ದಂಡಿಸಲು ಸಾಧ್ಯವಿಲ್ಲ.”

ಝೆನ್‌ (Zen) ಕತೆ ೯೮. ಬ್ಯಾನ್‌ಝೋನ ಖಡ್ಗದ ರುಚಿ

ಮತಾಜುರೊ ಯಾಗ್ಯು ಒಬ್ಬ ಖ್ಯಾತ ಕತ್ತಿವರಿಸೆಗಾರನ ಮಗ. ತನ್ನ ಮಗನ ಕತ್ತಿವರಿಸೆಯ ಕುಶಲತೆಯು ಸಾಧಾರಣ ಮಟ್ಟದ್ದಾದ್ದರಿಂದ ಅದರಲ್ಲಿ ಅವನಿಂದ ಆಧಿಪತ್ಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಅವನ ತಂದೆಯದ್ದು, ಎಂದೇ ಅವನು ಮಗನನ್ನು ತನ್ನವನೆನ್ನಲು ನಿರಾಕರಿಸಿದನು.
ಆದ್ದರಿಂದ ಮತಾಜುರೊ ಫುತಾರಾ ಪರ್ವತಕ್ಕೆ ಹೋದನು. ಅಲ್ಲಿ ಖ್ಯಾತ ಕತ್ತಿವರಿಸೆಗಾರ ಬ್ಯಾನ್‌ಝೊ ಕಾಣಸಿಕ್ಕಿದ. ಅವನೂ ತಂದೆಯ ತೀರ್ಮಾನವನ್ನೇ ದೃಢೀಕರಿಸಿದ. “ನನ್ನ ಮಾರ್ಗದರ್ಶನದಲ್ಲಿ ಕತ್ತಿವರಿಸೆ ಕಲಿಯಲು ಇಚ್ಛಿಸುವೆಯಾ?” ಕೇಳಿದ ಬ್ಯಾನ್‌ಝೊ. “ಇರಲೇಬೇಕಾದ ಅರ್ಹತೆಗಳು ನಿನ್ನಲ್ಲಿ ಇಲ್ಲ.”
“ನಾನು ಬಲು ಶ್ರಮಪಟ್ಟು ಕಲಿತರೆ ಪ್ರಾವೀಣ್ಯ ಗಳಿಸಲು ಎಷ್ಟು ವರ್ಷ ಬೇಕಾಗಬಹುದು?” ಪಟ್ಟುಹಿಡಿದು ಮುಂದುವರಿಸಿದ ಆ ಯುವಕ.
“ಬಾಕಿ ಉಳಿದಿರುವ ನಿನ್ನ ಇಡೀ ಜೀವಮಾನ,” ಉತ್ತರಿಸಿದ ಬ್ಯಾನ್‌ಝೊ.
“ಅಷ್ಟು ಕಾಲ ನಾನು ಕಾಯಲಾರೆ,” ವಿವರಿಸಿದ ಮತಾಜುರೊ. “ನೀವು ಕಲಿಸುವಿರಿ ಎಂದಾದರೆ ನಾನು ಯಾವುದೇ ತೊಂದರೆ ಅನುಭವಿಸಲು ಸಿದ್ಧನಿದ್ದೇನೆ. ನಿಮ್ಮ ಶ್ರದ್ಧಾವಂತ ಸೇವಕ ನಾನಾದರೆ ಎಷ್ಟು ಕಾಲ ಬೇಕಾದೀತು?”
“ಒಃ, ಬಹುಶಃ ಹತ್ತು ವರ್ಷಗಳು,” ಉತ್ತರಿಸಿದ ಬ್ಯಾನ್‌ಝೊ.
“ನನ್ನ ತಂದೆ ಮುದುಕರಾಗುತ್ತಿದ್ದಾರೆ, ಸಧ್ಯದಲ್ಲೇ ನಾನು ಅವರ ಪಾಲನೆಪೋಷಣೆ ಮಾಡಬೇಕಾಗುತ್ತದೆ,” ಮುಂದುವರಿಸಿದ ಮತಾಜುರೊ. “ಹೆಚ್ಚು ತೀವ್ರವಾದ ಅಭ್ಯಾಸ ಮಾಡಿದರೆ ಎಷ್ಟು ಸಮಯ ತೆಗೆದುಕೊಂಡೇನು?”
“ಒಃ, ಬಹುಶಃ ಮೂವತ್ತು ವರ್ಷಗಳು,” ತಿಳಿಸಿದ ಬ್ಯಾನ್‌ಝೊ.
“ಏಕೆ ಹಾಗೆ?” ಕೇಳಿದ ಮತಾಜುರೊ. “ಮೊದಲು ಹತ್ತುವರ್ಷ ಅಂದಿರಿ. ಈಗ ಮೂವತ್ತು ವರ್ಷ ಅನ್ನುತ್ತಿದ್ದೀರಿ. ಅತ್ಯಲ್ಪ ಅವಧಿಯಲ್ಲಿ ಈ ಕಲೆಯಲ್ಲಿ ಪ್ರಾವೀಣ್ಯ ಗಳಿಸಲು ನಾನು ಎಂಥ ತೊಂದರೆಗಳನ್ನು ಬೇಕಾದರೂ ಸಹಿಸಿಕೊಳ್ಳುತ್ತೇನೆ.”
“ಸರಿ ಹಾಗಾದರೆ,” ಹೇಳಿದ ಬ್ಯಾನ್‌ಝೊ. “ನೀನು ನನ್ನ ಹತ್ತಿರ ಎಪ್ಪತ್ತು ವರ್ಷ ಕಾಲ ಇರಬೇಕಾಗುತ್ತದೆ. ನಿನ್ನಂತೆ ವಿಪರೀತ ಅವಸರದಲ್ಲಿ ಫಲಿತಾಂಶ ಬಯಸುವವರು ಬೇಗನೆ ಕಲಿಯುವುದು ಬಲು ವಿರಳ.”
“ಸರಿ ಹಾಗಾದರೆ,” ತನ್ನ ಅಸಹನೆಗಾಗಿ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಕನೆಗೂ ಅರ್ಥ ಮಾಡಿಕೊಂಡ ಯುವಕ ಘೋಷಿಸಿದ, “ನಾನು ಒಪ್ಪಿಕೊಳ್ಳುತ್ತೇನೆ.”
ಕತ್ತಿವರಿಸೆಯ ಕುರಿತು ಯಾವತ್ತೂ ಮಾತನಾಡಲೇ ಕೂಡದೆಂದೂ ಖಡ್ಗವನ್ನು ಯಾವತ್ತೂ ಮುಟ್ಟಲೇ ಕೂಡದೆಂದೂ ಮತಾಜುರೊಗೆ ಹೇಳಲಾಯಿತು. ಅವನು ಕತ್ತಿವರಿಸೆಯ ಕುರಿತು ಚಕಾರವೆತ್ತದೇ ತನ್ನ ಗುರುಗಳಿಗೆ ಅಡುಗೆ ಮಾಡುತ್ತಿದ್ದ, ಪಾತ್ರೆಗಳನ್ನು ತೊಳೆಯುತ್ತಿದ್ದ, ಹಾಸಿಗೆ ಸಿದ್ಧಪಡಿಸುತ್ತಿದ್ದ, ಅಂಗಳ ಗುಡಿಸುತ್ತಿದ್ದ, ಕೈ ತೋಟ ನೋಡಿಕೊಳ್ಳುತ್ತಿದ್ದ.
ಮೂರು ವರ್ಷಗಳು ಉರುಳಿದವು. ಮತಾಜುರೊ ದುಡಿಯುತ್ತಲೇ ಇದ್ದ. ತನ್ನ ಭವಿಷ್ಯದ ಕುರಿತು ಆಲೋಚಿಸಿದಾಗ ಅವನು ದುಃಖಿತನಾಗುತ್ತಿದ್ದ. ಯಾವ ಕಲೆಗಾಗಿ ತನ್ನ ಜೀವನವನ್ನೇ ಮೀಸಲಾಗಿಡಬಯಸಿದ್ದನೋ ಅದನ್ನು ಕಲಿಯಲು ಇನ್ನೂ ಆರಂಭಿಸಿಯೇ ಇರಲಿಲ್ಲ.
ಇಂತಿರುವಾಗ ಒಂದು ದಿನ ಬ್ಯಾನ್‌ಝೊ ಅವನ ಹಿಂದಿನಿಂದ ಒಂದಿನಿತೂ ಸದ್ದು ಮಾಡದೆಯೇ ಬಂದು ಮರದ ಖಡ್ಗದಿಂದ ಭಾರಿ ಹೊಡೆತ ಹೊಡೆದ.
ಮರುದಿನ ಮತಾಜುರೊ ಅನ್ನ ಮಾಡುತ್ತಿರುವಾಗ ಅನಿರೀಕ್ಷಿತವಾಗಿ ಬ್ಯಾನ್‌ಝೊ ಪುನಃ ಅದೇ ರೀತಿಯ ಹೊಡೆತ ನೀಡಿದ.
ತದನಂತರ ಅಹರ್ನಿಶಿ ಅನಿರೀಕ್ಷಿತ ತಿವಿತಗಳಿಂದ ಮತಾಜುರೊ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಿತ್ತು. ಬ್ಯಾನ್‌ಝೊನ ಖಡ್ಗದ ರುಚಿಯ ಕುರಿತು ಆಲೋಚಿಸದ ಕ್ಷಣವೇ ಯಾವುದೇ ದಿನದಲ್ಲಿ ಇರುತ್ತಿರಲಿಲ್ಲ.
ಗುರುವಿನ ಮುಖದಲ್ಲಿ ಮುಗುಳ್ನಗು ಕಾಣಿಸಿಕೊಳ್ಳುವಷ್ಟು ತೀವ್ರಗತಿಯಲ್ಲಿ ಅವನು ಕಲಿಯುತ್ತಿದ್ದ. ಆ ನಾಡಿನ ಅತ್ಯಂತ ಅಸಾಧಾರಣ ಕತ್ತಿವರಿಸೆಗಾರನಾದ ಮತಾಜುರೊ.

ಝೆನ್‌ (Zen) ಕತೆ ೯೯. ಬೆಂಕಿ ಕೆದಕುವ ಸಲಾಕಿ ಝೆನ್

ಚಹಾದ ಅಂಗಡಿ ಇಟ್ಟುಕೊಂಡಿದ್ದ ಒಬ್ಬ ಮುದಿ ಹೆಂಗಸಿನ ಕುರಿತು ಗುರು ಹಕುಇನ್‌ ತನ್ನ ವಿದ್ಯಾರ್ಥಿಗಳಿಗೆ ಆಗಾಗ್ಗೆ ಹೇಳುತ್ತಿದ್ದ. ಝೆನ್‌ ಕುರಿತಾದ ಅವಳ ತಿಳಿವಳಿಕೆಯನ್ನು ಅವನು ಹೊಗಳುತ್ತಿದ್ದ. ಅವನು ಹೇಳಿದ್ದನ್ನು ವಿದ್ಯಾರ್ಥಿಗಳು ನಂಬುತ್ತಿರಲಿಲ್ಲ. ಆದ್ದರಿಂದ ತಾವೇ ಪತ್ತೆಹಚ್ಚಲೋಸುಗ ಆ ಚಹಾದ ಅಂಗಡಿಗೆ ಸ್ವತಃ ಹೋಗುತ್ತಿದ್ದರು.
ಅವರು ಬರುತ್ತಿರುವುದನ್ನು ನೋಡಿದ ತಕ್ಷಣ ಅವರು ಚಹಾ ಕುಡಿಯಲೋಸುಗ ಬರುತ್ತಿದ್ದಾರೆಯೇ, ಝೆನ್ ಕುರಿತಾದ ಅವಳ ಜ್ಞಾನವ್ಯಾಪ್ತಿಯನ್ನು ಪರೀಕ್ಷಿಸಲೋಸುಗ ಬರುತ್ತಿದ್ದಾರೆಯೇ ಎಂಬುದನ್ನು ಹೇಳಬಲ್ಲವಳಾಗಿದ್ದಳು. ಚಹಾ ಕುಡಿಯಲು ಬಂದವರಾಗಿದ್ದರೆ ಸ್ನೇಹಪೂರ್ವಕವಾಗಿ ಚಹಾ ನೀಡುತ್ತಿದ್ದಳು. ಅವಳ ಝೆನ್‌ ತಿಳಿವಳಿಕೆಯನ್ನು ಪತ್ತೆಹಚ್ಚಲೋಸುಗ ಬಂದವರಾಗಿದ್ದರೆ ಒಂದು ಪರದೆಯ ಹಿಂದೆ ಬರುವಂತೆ ಮೂಕಸನ್ನೆ ಮಾಡುತ್ತಿದ್ದಳು. ಅವರು ಆಜ್ಞೆಯಂತೆ ನಡೆದುಕೊಂಡ ತಕ್ಷಣ ಬೆಂಕಿ ಕೆದಕುವ ಸಲಾಕಿಯಿಂದ ಅವರಿಗೆ ಹೊಡೆಯುತ್ತಿದ್ದಳು.
ಹತ್ತು ಮಂದಿಯ ಪೈಕಿ ಒಂಭತ್ತು ಮಂದಿಗೆ ಅವಳ ಹೊಡೆತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.

ಝೆನ್‌ (Zen) ಕತೆ ೧೦೦. ಕತೆ ಹೇಳುವವನ ಝೆನ್‌

ಎಂಚೊ ಒಬ್ಬ ಖ್ಯಾತ ಕತೆ ಹೇಳುವವ. ಅವನ ಪ್ರೇಮದ ಕತೆಗಳು ಕೇಳುಗರ ಹೃದಯವನ್ನು ಕಲಕುತ್ತಿದ್ದವು. ಅವನೊಂದು ಯುದ್ಧದ ಕತೆ ಹೇಳಿದರೆ ಕೇಳುಗರಿಗೆ ತಾವೇ ರಣರಂಗಲದಲ್ಲಿ ಇದ್ದಂತೆ ಭಾಸವಾಗುತ್ತಿತ್ತು.
ಝೆನ್‌ನ ಯಾಜಮಾನ್ಯವನ್ನು ಬಹುತೇಕ ಅಂಗೀಕರಿಸುವುದರಲ್ಲಿದ್ದ ಶ್ರೀಸಾಮಾನ್ಯ ಯಾಮಓಕಾ ಟೆಶ್ಶು ಎಂಬಾತನನ್ನು ಎಂಚೊ ಸಂಧಿಸಿದ. ಯಾಮಓಕಾ ಹೇಳಿದ: “ನಮ್ಮ ನಾಡಿನಲ್ಲಿ ನೀನು ಅತ್ಯುತ್ತಮ ಕತೆ ಹೇಳುವವ ಮತ್ತು ಜನ ನಿನ್ನ ಇಷ್ಟದಂತೆ ಅಳುವಂತೆಯೋ ನಗುವಂತೆಯೋ ಮಾಡುವೆ ಎಂಬುದಾಗಿ ನಾನು ತಿಳಿದಿದ್ದೇನೆ. ನನಗೆ ಅತ್ಯಂತ ಪ್ರಿಯವಾದ ’ಪೀಚ್‌ ಹುಡುಗ’ (Peach boy) ಕತೆಯನ್ನು ಹೇಳು. ತುಂಬಾ ಚಿಕ್ಕವನಿದ್ದಾಗ ನಾನು ಅಮ್ಮನ ಪಕ್ಕದಲ್ಲಿ ಮಲಗುತ್ತಿದ್ದೆ, ಅವಳು ಆಗಾಗ್ಗೆ ಈ ದಂತಕತೆ ಹೇಳುತ್ತಿದ್ದಳು. ಕತೆ ಮುಗಿಯುವ ಮುನ್ನವೇ ನಾನು ನಿದ್ದೆ ಮಾಡುತ್ತಿದ್ದೆ. ನನ್ನ ಅಮ್ಮ ನನಗೆ ಹೇಳುತ್ತಿದ್ದ ರೀತಿಯಲ್ಲಿಯೇ ಅದನ್ನು ನೀನು ಹೇಳು.”
ಪ್ರಯತ್ನಿಸುವ ಧೈರ್ಯ ಮಾಡಲಿಲ್ಲ ಎಂಚೊ. ಅಧ್ಯಯಿಸಲು ಕಾಲಾವಕಾಶ ಕೋರಿದ ಎಂಚೊ. ಅನೇಕ ತಿಂಗಳುಗಳು ಕಳೆದ ನಂತರ ಅವನು ಯಾಮಓಕಾನ ಬಳಿಗೆ ಹೋಗಿ ಇಂತೆಂದ: “ಕತೆಯನ್ನು ಹೇಳಲು ನನಗೆ ದಯವಿಟ್ಟು ಅವಕಾಶ ಕೊಡು.”
“ಇನ್ನೊಂದು ದಿವಸ,” ಉತ್ತರಿಸಿದ ಯಾಮಓಕ.
ಎಂಚೊನಿಗೆ ತುಂಬಾ ನಿರಾಸೆ ಆಯಿತು. ಇನ್ನೂ ಹೆಚ್ಚು ಅಧ್ಯಯಿಸಿ ಪ್ರಯತ್ನಿಸಿದ. ಅನೇಕ ಸಲ ಯಾಮಓಕ ಅವನ ಕೋರಿಕೆಯನ್ನು ತಿರಸ್ಕರಿಸಿದ. ಎಂಚೊ ಕತೆ ಹೇಳಲು ಆರಂಭಿಸಿದಾಗ ಯಾಮಓಕ ಅವನನ್ನು ತಡೆಯುತ್ತಿದ್ದ: “ಇನ್ನೂ ನೀನು ನನ್ನ ಅಮ್ಮನಂತೆ ಇಲ್ಲ.”
ಐದು ವರ್ಷಗಳ ನಂತರ ಯಾಮಓಕನಿಗೆ ಅವನ ಅಮ್ಮ ಹೇಳುತ್ತಿದ್ದಂತೆಯೇ ದಂತಕತೆ ಹೇಳಲು ಎಂಚೊನಿಗೆ ಸಾಧ್ಯವಾಯಿತು.
ಎಂಚೊನಿಗೆ ಇಂತು ಝೆನ್‌ ಕಲಿಸಲ್ಪಟ್ಟಿತು.

ಝೆನ್‌ (Zen) ಕತೆ ೧೦೧. ಅಂಟಿಕೊಳ್ಳದಿರುವಿಕೆ (Non-attachment)

ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು ಸ್ವೀಕರಿಸಿದ.
“ಧೂಮಪಾನ ಎಂಥ ಹಿತಾನುಭವ ನೀಡುತ್ತದೆ,” ಉದ್ಗರಿಸಿದ ಕಿಟಾನೋ. ಅವರೀರ್ವರೂ ಬೇರೆಬೇರೆ ಆಗಬೇಕಾದಾಗ ಯಾತ್ರಿಕ ತುಸು ತಂಬಾಕು ಮತ್ತು ಧುಮಪಾನ ಮಾಡುವ ಕೊಳವೆಯೊಂದನ್ನು ಕಿಟಾನೋಗೆ ನೀಡಿದ.
ತುಸು ಸಮಯದ ನಂತರ ಕಿಟಾನೋಗೆ ಅನ್ನಿಸಿತು: “ಇಂಥ ಆಪ್ಯಾಯಮಾನವಾದ ವಸ್ತುಗಳು ಧ್ಯಾನಕ್ಕೆ ಅಡ್ಡಿ ಉಂಟು ಮಾಡಬಹುದು. ಈ ಅಭ್ಯಾಸ ಬೇರೂರುವ ಮೊದಲೇ, ಈಗಲೇ ನಾನು ಇದನ್ನು ನಿಲ್ಲಿಸಬೇಕು.” ಆದ್ದರಿಂದ ಧೂಮಪಾನ ಮಾಡುವ ಸಾಮಗ್ರಿಗಳನ್ನು ಬಿಸಾಡಿದ.
೨೩ ವರ್ಷ ವಯಸ್ಸಾಗಿದ್ದಾಗ ಆಳವಾದ ಅಧ್ಯಯನ ಮತ್ತು ಚಿಂತನಗಳನ್ನು ಕೋರುವ ವಿಶ್ವ ಸಿದ್ಧಾಂತ ’ಐ-ಕಿಂಗ್’ ಅನ್ನು ಅಧ್ಯಯಿಸಿದ. ಆಗ ಚಳಿಗಾವಾಗಿದ್ದದ್ದರಿಂದ ಅವನಿಗೆ ಬೆಚ್ಚನೆಯ ಉಡುಪುಗಳ ಆವಶ್ಯಕತೆ ಇತ್ತು. ಒಂದುನೂರು ಮೈಲಿ ದೂರದಲ್ಲಿ ವಾಸಿಸುತ್ತಿದ್ದ ತನ್ನ ಗುರುವಿಗೆ ತನ್ನ ಆವಶ್ಯಕತೆಯನ್ನು ವಿವರಿಸಿ ಪತ್ರವೊಂದನ್ನು ಬರೆದು ಅದನ್ನು ತಲುಪಿಸುವಂತೆ ಯಾತ್ರಿಕನೊಬ್ಬನ ಕೈನಲ್ಲಿ ಕೊಟ್ಟ. ಚಳಿಗಾಲ ಕಳೆಯಿತಾದರೂ ಪತ್ರಕ್ಕೆ ಉತ್ತರವೂ ಬರಲಿಲ್ಲ ಅಪೇಕ್ಷಿತ ಉಡುಪುಗಳೂ ಬರಲಿಲ್ಲ. ಆದ್ದರಿಂದ ಅರಿವಿಗೆ ಎಟಕದ್ದನ್ನು ಅರಿಯುವ ಕಲೆಯನ್ನು ಕಲಿಸುವ ವಿಭಾಗವಿದ್ದ ಐ-ಕಿಂಗ್‌ನ ಮುನ್ನರಿವು ತಂತ್ರವನ್ನು ತನ್ನ ಪತ್ರ ತಲುಪಿದೆಯೋ ಇಲ್ಲವೋ ಎಂಬುದನ್ನು ತಿಳಿಯಲೋಸುಗ ಆಶ್ರಯಿಸಿದ. ಪತ್ರ ತಲುಪಿಲ್ಲ ಅನ್ನುವುದು ಅವನಿಗೆ ತಿಳಿಯಿತು. ಅವನ ಗುರುವಿನಿಂದ ಆನಂತರ ಬಂದ ಪತ್ರದಲ್ಲಿ ಉಡುಪಿನ ಉಲ್ಲೇಖವೇ ಇರಲಿಲ್ಲ.
“ಐ-ಕಿಂಗ್‌ನ ನೆರವಿನಿಂದ ಅರಿವಿಗೆ ಎಟಕದ್ದನ್ನು ಇಷ್ಟು ನಿಖರವಾಗಿ ತಿಳಿಯುವ ಕಾರ್ಯ ನಾನು ಮಾಡಲಾರಂಭಿಸಿದರೆ ಧ್ಯಾನ ಮಾಡುವಿಕೆಯನ್ನು ನಿರ್ಲಕ್ಷಿಸಲೂ ಬಹುದು,” ಎಂಬುದಾಗಿ ಆಲೋಚಿಸಿದ ಕಿಟಾನೋ. ಎಂದೇ, ಅವನು ಈ ಅದ್ಭುತ ಕಲಿಕೆಯನ್ನು ಕೈಬಿಟ್ಟನು ಮತ್ತು ಮುಂದೆಂದೂ ಅದರ ಸಾಮರ್ಥ್ಯವನ್ನು ಪ್ರಯೋಗಿಸಲಿಲ್ಲ.
೨೮ ವರ್ಷ ವಯಸ್ಸು ಆಗಿದ್ದಾಗ ಚೀನೀ ಆಲಂಕಾರಿಕ ಕೈಬರೆಹದ ಕಲೆಯನ್ನೂ ಕಾವ್ಯಗಳನ್ನೂ ಅಧ್ಯಯಿಸಿದ. ಅಧ್ಯಾಪಕರು ಬಹುವಾಗಿ ಹೊಗಳುವಷ್ಟರ ಮಟ್ಟಿಗೆ ಈ ಕಲೆಗಳಲ್ಲಿ ಅವನು ಕುಶಲಿಯಾದ. ಆಗ ಕಿಟಾನೋ ಇಂತು ಆಲೋಚಿಸಿದ: “ಈಗ ಇದನ್ನು ನಾನು ನಿಲ್ಲಿಸದಿದ್ದರೆ ಝೆನ್‌ ಗುರುವಾಗುವ ಬದಲು ಕವಿಯಾಗುತ್ತೇನೆ.” ಮುಂದೆಂದೂ ಅವನು ಪದ್ಯ ಬರೆಯಲಿಲ್ಲ.

Advertisements
This entry was posted in ಝೆನ್‌ (Zen) ಕತೆಗಳು and tagged . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s