ಝೆನ್ (Zen) ಕತೆಗಳು: ಸಂಚಿಕೆ ೨

ಝೆನ್‌ (Zen) ಕತೆ ೨೬. ನನ್ನ ಹೃದಯ ಬೆಂಕಿಯಂತೆ ಸುಡುತ್ತಿದೆ
ಅಮೇರಿಕಾಕ್ಕೆ ಬಂದ ಮೊದಲನೇ ಝೆನ್‌ ಗುರು ಸೊಯೆನ್‌ ಶಾಕು ಇಂತು ಹೇಳಿದ: “ನನ್ನ ಹೃದಯ ಬೆಂಕಿಯಂತೆ ಸುಡುತ್ತಿದೆಯಾದರೂ ಕಣ್ಣುಗಳು ಬೂದಿಯಷ್ಟು ತಣ್ಣಗಿವೆ.”
ಈ ಮುಂದೆ ಪಟ್ಟಿ ಮಾಡಿದ ನಿಯಮಗಳನ್ನು ರೂಪಿಸಿ ತನ್ನಜೀವನದಲ್ಲಿ ಪ್ರತೀ ದಿನ ಅವನ್ನು ಚಾಚೂ ತಪ್ಪದೆಯೇ ಪಾಲಿಸಿದ.
* ಬೆಳಗ್ಗೆ ಎದ್ದು ಉಡುಪು ಧಾರಣೆ ಮಾಡುವುದಕ್ಕೆ ಮುನ್ನವೇ ಧೂಪದ್ರವ್ಯ ಉರಿಸು ಮತ್ತು ಧ್ಯಾನ ಮಾಡು
* ಕ್ಲುಪ್ತಕಾಲದಲ್ಲಿ ವಿಶ್ರಮಿಸು. ನಿಗದಿತ ಕಾಲಾವಧಿಯಲ್ಲೊಮ್ಮೆ ಆಹಾರ ಸೇವಿಸು. ಮಿತವಾಗಿ ತಿನ್ನು, ಎಂದೂ ತೃಪ್ತಿಯಾಗುವಷ್ಟು ತಿನ್ನಬೇಡ.
* ಏಕಾಂತದಲ್ಲಿ ಇರುವಾಗ ಯಾವ ಮನೋಭಾವದಲ್ಲಿ ಇರುತ್ತೀಯೋ ಅದೇ ಮನೋಭಾವದಲ್ಲಿ ಅತಿಥಿಯನ್ನು ಸ್ವಾಗತಿಸು. ಅತಿಥಿಗಳನ್ನು ಸ್ವಾಗತಿಸುವಾಗ ಯಾವ ಮನೋಭಾವದಲ್ಲಿ ಇರುತ್ತೀಯೋ ಅದೇ ಮನೋಭಾವದಲ್ಲಿ ಏಕಾಂತದಲ್ಲಿಯೂ ಇರು.
* ನೀನು ಏನು ಹೇಳುತ್ತೀಯೇ ಅನ್ನುವುದರ ಮೇಲೆ ನಿಗಾ ಇರಲಿ ಮತ್ತು ಏನನ್ನಾದರೂ ಹೇಳಿದರೆ ನೀನೂ ಅಂತೆಯೇ ಇರುವುದನ್ನು ಅಭ್ಯಾಸ ಮಾಡು.
* ಏನಾದರೂ ಅವಕಾಶ ದೊರೆತಾಗ ಅದನ್ನು ಕಳೆದುಕೊಳ್ಳಬೇಡ, ಆದರೂ ಏನನ್ನಾದರೂ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸು.
* ಹಿಂದೆ ಆದದ್ದಕ್ಕಾಗಿ ವ್ಯಥೆಪಡಬೇಡ. ಸದಾ ಮುಂದಕ್ಕೆ ನೋಡುತ್ತಿರು.
* ಧೀರೋದಾತ್ತನಂತೆ ಭಯರಹಿತ ಮನೋಧರ್ಮವಿರಲಿ. ಮಗುವಿನಂಥ ಸ್ನೇಹಮಯ ಹೃದಯವೂ ಇರಲಿ.
* ಮಲಗಿ ನಿದ್ರಿಸುವಾಗ, ಅದೇ ನಿನ್ನ ಅಂತಿಮ ನಿದ್ದೆ ಎಂಬಂತೆ ನಿದ್ರಿಸು. ಎಚ್ಚರವಾದಾಗ ಹಳೆಯ ಜೊತೆ ಪಾದರಕ್ಷೆಗಳನ್ನು ಬಿಸಾಡುವಂತೆ ಹಾಸಿಗೆಯನ್ನು ಬಿಟ್ಟು ಕ್ಷಣಮಾತ್ರದಲ್ಲಿ ಎದ್ದೇಳು.

ಝೆನ್‌ (Zen) ಕತೆ ೨೭. ಏಷನ್‌ಳ ತೆರಳುವಿಕೆ
೬೦ ವರ್ಷ ವಯಸ್ಸಿನ ಝೆನ್‌ ಸನ್ಯಾಸಿನಿ ಏಷನ್‌ಗೆ ಈ ಪ್ರಪಂಚವನ್ನು ಬಿಟ್ಟು ಹೋಗುವ ಸಮಯ ಬಂದಾಗ ಪ್ರಾಂಗಣದಲ್ಲಿ ಶವಸಂಸ್ಕಾರದ ಚಿತೆಗಾಗಿ ಕಟ್ಟಿಗೆಯ ರಾಶಿ ಸಿದ್ಧ ಪಡಿಸುವಂತೆ ಕೆಲವು ಸನ್ಯಾಸಿಗಳಿಗೆ ಹೇಳಿದಳು.
ಇದರ ಮಧ್ಯದಲ್ಲಿ ಭದ್ರವಾಗಿ ಕುಳಿತ ಏಷನ್‌ ಕಟ್ಟಿಗೆ ರಾಶಿಯ ಅಂಚಿನಗುಂಟ ಬೆಂಕಿ ಹಚ್ಚಲು ಹೇಳಿದಳು.
ತುಸು ಸಮಯ ಕಳೆದ ಬಳಿಕ ಒಬ್ಬ ಸನ್ಯಾಸಿ ಗಟ್ಟಿಯಾಗಿ ಕೂಗಿ ಕೇಳಿದ: “ಓ ಸನ್ಯಾಸಿನಿಯೇ, ಅಲ್ಲಿ ತುಂಬ ಬಿಸಿಯಾಗಿದೆಯೇ?”
“ನಿನ್ನಂತಹ ದಡ್ಡರು ಮಾತ್ರ ಅಂಥ ವಿಷಯಗಳಲ್ಲಿ ಆಸಕ್ತರಾಗಿರುತ್ತಾರೆ” ಉತ್ತರಿಸಿದಳು ಏಷನ್‌.
ಜ್ವಾಲೆಗಳು ಮೇಲೆದ್ದವು, ಏಷನ್ ತೀರಿಕೊಂಡಳು.

ಝೆನ್‌ (Zen) ಕತೆ ೨೮. ಸತ್ತ ಮನುಷ್ಯನ ಉತ್ತರ
ಖ್ಯಾತ ಧರ್ಮೋಪದೇಶಕನಾಗುವುದಕ್ಕಿಂತ ಬಲು ಹಿಂದೆ ಮಾಮಿಯಾ ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಗುರುವೊಬ್ಬನ ಹತ್ತಿರ ಹೋದ. ’ಒಂದು ಕೈನ ಶಬ್ದ’ವನ್ನು ವಿವರಿಸುವಂತೆ ಅವನಿಗೆ ಹೇಳಲಾಯಿತು.
ಒಂದು ಕೈನ ಶಬ್ದ ಹೇಗಿರಬಹುದೆಂಬುದರ ಕುರಿತು ಮಾಮಿಯಾ ಚಿಂತನೆ ಮಾಡಿದ. “ನೀನು ಸಾಕಷ್ಟು ಶ್ರಮಿಸುತ್ತಿಲ್ಲ. ಆಹಾರ, ಐಶ್ವರ್ಯ, ವಸ್ತುಗಳು ಮತ್ತು ಆ ಶಬ್ದಕ್ಕೆ ನೀನು ಶಾಶ್ವತವಾಗಿ ಅಂಟಿಕೊಂಡಿರುವೆ. ನೀನು ಸತ್ತರೆ ಒಳ್ಳೆಯದು. ಅದು ಸಮಸ್ಯೆಯನ್ನು ಪರಿಹರಿಸುತ್ತದೆ.” ಅಂದರು ಗುರುಗಳು.
ಮುಂದಿನ ಬಾರಿ ಗುರುವಿನ ದರ್ಶನಕ್ಕೆಂದು ಹೋದಾಗ ಅವರು ಪುನಃ ಒಂದು ಕೈನ ಶಬ್ದಕ್ಕೆ ಸಂಬಂಧಿಸಿದಂತೆ ಅವನು ತೋರಿಸುವುದು ಅಥವ ಹೇಳುವುದು ಏನಾದರೂ ಇದೆಯೇ ಎಂಬುದಾಗಿ ಕೇಳಿದರು. ಮಾಮಿಯಾ ತಕ್ಷಣ ಸತ್ತವನಂತೆ ಕೆಳಗೆ ಬಿದ್ದ.
“ನೀನು ಸತ್ತಿರುವೆ, ನಿಜ. ಆದರೆ ಆ ಶಬ್ದದ ಕುರಿತು ಏನು ಹೇಳುವೆ?” ಪ್ರತಿಕ್ರಿಯಿಸಿದರು ಗುರುಗಳು.
“ಅದನ್ನು ನಾನು ಇನ್ನೂ ಪತ್ತೆಹಚ್ಚಿಲ್ಲ” ತಲೆ ಎತ್ತಿ ಉತ್ತರಿಸಿದ ಮಾಮಿಯಾ
ಗುರುಗಳು ಇಂತು ಹೇಳಿದರು: “ಸತ್ತ ಮನುಷ್ಯರು ಮಾತನಾಡುವುದಿಲ್ಲ. ತೊಲಗಾಚೆ!”

ಝೆನ್‌ (Zen) ಕತೆ ೨೯. ಸಿಡುಕು ಸ್ವಭಾವ
ಝೆನ್‌ ವಿದ್ಯಾರ್ಥಿಯೊಬ್ಬ ಗುರು ಬಾಂಕೈಅನ್ನು ಸಮೀಪಿಸಿ ಪ್ರಲಾಪಿಸಿದ: “ಗುರುವೇ, ಹತೋಟಿ ಮಾಡಲಾಗದ ಸಿಡುಕು ಸ್ವಭಾವ ನನ್ನದು. ಅದರಿಂದ ಮುಕ್ತಿ ಪಡೆಯುವುದು ಹೇಗೆ?”
ಗುರು ಪ್ರತಿಕ್ರಿಯಿಸಿದ: “ನಿನ್ನ ಹತ್ತಿರ ಬಲು ವಿಚಿತ್ರವಾದದ್ದು ಏನೋ ಒಂದು ಇದೆ. ನಿನ್ನ ಹತ್ತಿರ ಇರುವುದನ್ನು ನಾನು ನೋಡಬಯಸುತ್ತೇನೆ”
ವಿದ್ಯಾರ್ಥಿ ಉತ್ತರಿಸಿದ: “ಈಗ ನಾನು ಅದನ್ನು ತೋರಿಸಲಾರೆ”
ಬಾಂಕೈ: “ನೀನು ಅದನ್ನು ಯಾವಾಗ ತೋರಿಸಬಲ್ಲೆ?”
ವಿದ್ಯಾರ್ಥಿ: “ಅದು ಅನಿರೀಕ್ಷಿತವಾಗಿ ಮೂಡಿಬರುತ್ತದೆ”
ಬಾಂಕೈ ಇಂತು ತೀರ್ಮಾನಿಸಿದ: “ಹಾಗಾದರೆ ಅದು ನಿನ್ನ ನೈಜ ಸ್ವಭಾವ ಅಲ್ಲ. ಅದು ನಿನ್ನ ನೈಜ ಸ್ವಭಾವ ಆಗಿದಿದ್ದರೆ ಯಾವಾಗ ಬೇಕಾದರೂ ತೋರಿಸಬಲ್ಲವನಾಗಿರುತ್ತಿದ್ದೆ. ನೀನು ಹುಟ್ಟಿದಾಗ ಅದು ನಿನ್ನಲ್ಲಿ ಇರಲಿಲ್ಲ, ನಿನ್ನ ತಂದೆತಾಯಿಯರು ಅದನ್ನು ನಿನಗೆ ಕೊಡಲೂ ಇಲ್ಲ. ಇದನ್ನು ಗಂಭೀರವಾಗಿ ಪರಿಶೀಲಿಸು.”

ಝೆನ್‌ (Zen) ಕತೆ ೩೦. ಯಾವುದೂ ಅಸ್ತಿತ್ವದಲ್ಲಿ ಇಲ್ಲ
ಚಿಕ್ಕ ವಯಸ್ಸಿನ ಝೆನ್‌ ವಿದ್ಯಾರ್ಥಿ ಯಾಮಓಕ ಟೆಶ್ಶು ಒಬ್ಬೊಬ್ಬರನ್ನಾಗಿ ಅನೇಕ ಝೆನ್‌ ಗುರುಗಳನ್ನು ಭೇಟಿ ಮಾಡುತ್ತಾ ಶೊಕೋಕುವಿನ ಝೆನ್‌ ಗುರು ಡೋಕುಆನ್‌ ಅನ್ನು ಭೇಟಿಯಾಗಲು ಹೋದ.
ತನ್ನ ಸಾಧನೆಗಳನ್ನು ಗುರುವಿಗೆ ತೋರಿಸಲು ಇಚ್ಛಿಸಿದ ಆತ ಹೇಳಿದ: “ಮನಸ್ಸು, ಬುದ್ಧ ಮತ್ತು ಇಂದ್ರಿಯಗ್ರಹಣ ಶಕ್ತಿಯುಳ್ಳ ಜೀವಿಗಳು ಇವೇ ಮೊದಲಾದವುಗಳು ಯಾವುವೂ ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲ. ಶೂನ್ಯಸ್ಥಿತಿಯೇ ಎಲ್ಲ ಇಂದ್ರಿಯಗ್ರಾಹ್ಯ ವಿಷಯಗಳ ನೈಜ ಸ್ವರೂಪ. ಅರಿವು ಎಂಬುದೇ ಇಲ್ಲ, ಭ್ರಮೆಯೂ ಇಲ್ಲ, ಮಹಾಜ್ಞಾನಿಗಳೂ ಇಲ್ಲ, ಸಮಾನ್ಯ ಯೋಗ್ಯತೆ ಉಳ್ಳವರೂ ಇಲ್ಲ. ಕೊಡುವುದು ಎಂಬುದೂ ಇಲ್ಲ, ತೆಗೆದುಕೊಳ್ಳಲು ಏನೂ ಇಲ್ಲ”
ಮೌನವಾಗಿ ಧೂಮಪಾನ ಮಾಡುತ್ತಿದ್ದ ಡೋಕುಆನ್‌ ಏನೂ ಹೇಳಲಿಲ್ಲ. ಆತ ಯಾಮಓಕನಿಗೆ ಹಠಾತ್ತನೆ ಅಂಗೈನಿಂದ ಜೋರಾಗಿ ಹೊಡೆದ. ಇದರಿಂದ ಆ ಯುವಕನಿಗೆ ವಿಪರೀತ ಕೋಪ ಬಂದಿತು.
“ಯಾವುದೂ ಅಸ್ತಿತ್ವದಲ್ಲಿ ಇಲ್ಲ ಎಂದಾದರೆ ಈ ಕೋಪ ಬಂದದ್ದು ಎಲ್ಲಿಂದ?” – ವಿಚಾರಿಸಿದ ಗುರು ಡೋಕುಆನ್.

ಝೆನ್‌ (Zen) ಕತೆ ೩೧. ಮಧ್ಯರಾತ್ರಿಯ ಪ್ರವಾಸ
ಝೆನ್‌ ಗುರು ಸೆಂಗೈನ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಧ್ಯಾನ ಮಾಡುವುದನ್ನು ಕಲಿಯುತ್ತಿದ್ದರು. ಅವರ ಪೈಕಿ ಒಬ್ಬ ವಿದ್ಯಾರ್ಥಿ ರಾತ್ರಿ ಎಲ್ಲರು ನಿದ್ದೆ ಮಾಡಿದ ನಂತರ ಎದ್ದು ದೇವಾಲಯದ ಗೋಡೆ ಹತ್ತಿ ಇಳಿದು ಮನಸ್ಸಂತೋಷಕ್ಕಾಗಿ ನಗರ ಪರ್ಯಟನ ಮಾಡುತ್ತಿದ್ದ.
ಒಂದು ರಾತ್ರಿ ಶಯನಶಾಲೆಯ ತಪಾಸಣೆ ಮಾಡುತ್ತಿದ್ದಾಗ ಒಬ್ಬ ವಿದ್ಯಾರ್ಥಿ ಇಲ್ಲದಿರುವುದೂ ಗೋಡೆಯ ಪಕ್ಕದಲ್ಲಿ ಅದನ್ನು ಏರಲೋಸುಗ ಒಂದು ಎತ್ತರದ ಸ್ಟೂಲು ಇದ್ದದ್ದನ್ನೂ ಸೆಂಗೈ ಗಮನಿಸಿದನು. ಆ ಸ್ಟೂಲನ್ನು ತೆಗೆದು ಬೇರೆಡೆ ಇಟ್ಟು ಮೊದಲು ಸ್ಟೂಲು ಇದ್ದ ಸ್ಥಳದಲ್ಲಿ ತಾನೇ ನಿಂತನು.
ಸಂತೋಷ ಪರ್ಯಟನ ಕೈಗೊಂಡಿದ್ದ ವಿದ್ಯಾರ್ಥಿ ಹಿಂದಿರುಗಿ ಬಂದ. ಸ್ಟೂಲಿನ ಸ್ಥಾನದಲ್ಲಿ ಸೆಂಗೈ ನಿಂತಿರುವುದನ್ನು ಗಮನಿಸದೆಯೇ ಗುರುವಿನ ತಲೆಯ ಮೇಲೆ ಕಾಲಿಟ್ಟು ಒಳಗಿನ ಪ್ರಾಂಗಣಕ್ಕೆ ಹಾರಿದ. ತಾನೇನು ಮಾಡಿದೆ ಎಂಬುದರ ಅರಿವಾದಾಗ ದಿಗಿಲುಗೊಂಡ.
ಸೆಂಗೈ ಅವನಿಗೆ ಹೇಳಿದ: “ಬೆಳ್ಳಂಬೆಳಗ್ಗೆ ಬಹಳ ಕೊರೆಯುವ ಚಳಿ ಇರುತ್ತದೆ. ನಿನಗೆ ಶೀತ-ನೆಗಡಿ ಹಿಡಿಯದಂತೆ ಜಾಗರೂಕನಾಗಿರು.”
ಆನಂತರ ಆ ವಿದ್ಯಾರ್ಥಿ ಎಂದೂ ರಾತ್ರಿ ಹೊರಹೋಗಲಿಲ್ಲ.

ಝೆನ್‌ (Zen) ಕತೆ ೩೨. ಸಾಯುತ್ತಿರುವವನಿಗೆ ಒಂದು ಪತ್ರ
ಝೆನ್‌ ಗುರು ಬಸ್ಸುಯ್ ಮರಣಶಯ್ಯೆಯಲ್ಲಿದ್ದ ತನ್ನೊಬ್ಬ ಶಿಷ್ಯನಿಗೆ ಬರೆದ ಪತ್ರ ಇಂತಿತ್ತು:
“ನಿನ್ನ ಮನಸ್ಸಿನ ಮೂಲ ತತ್ವ ಹುಟ್ಟಲಿಲ್ಲ, ಎಂದೇ ಅದೆಂದೂ ಸಾಯುವುದಿಲ್ಲ. ಅದರದ್ದು ನಾಶವಾಗುವ ಅಸ್ತಿತ್ವವಲ್ಲ. ಅದು ಬರಿದಾಗಿರುವ (ಏನೂ ಇಲ್ಲದ) ಶೂನ್ಯಸ್ಥಿತಿಯೂ ಅಲ್ಲ. ಅದಕ್ಕೆ ಬಣ್ಣವೂ ಇಲ್ಲ, ಆಕಾರವೂ ಇಲ್ಲ. ಅದು ಇಂದ್ರಿಯಸುಖಗಳನ್ನು ಅನುಭವಿಸಿ ಆನಂದಿಸುವುದೂ ಇಲ್ಲ, ನೋವುಗಳಿಂದ ಸಂಕಟಪಡುವುದೂ ಇಲ್ಲ.
ನೀನು ಬಲು ಅಸ್ವಸ್ಥನಾಗಿದ್ದೀಯ ಎಂಬುದು ನನಗೆ ತಿಳಿದಿದೆ. ಒಬ್ಬ ಒಳ್ಳೆಯ ಝೆನ್‌ ವಿದ್ಯಾರ್ಥಿಯಂತೆ ನೀನು ನಿನ್ನ ಅನಾರೋಗ್ಯವನ್ನು ನೇರವಾಗಿ ಎದುರಿಸುತ್ತಿರುವೆ. ಸಂಕಟಪಡುತ್ತಿರುವರು ಯಾರು ಎಂಬುದು ಕರಾರುವಕ್ಕಾಗಿ ನಿನಗೆ ಗೊತ್ತಿಲ್ಲದೇ ಇರಬಹುದು. ಆದರೂ ನಿನ್ನನ್ನು ನೀನೇ ಪ್ರಶ್ನಿಸಿಕೊ: ಮನಸ್ಸಿನ ಮೂಲತತ್ವ ಏನು? ಇದೊಂದರ ಕುರಿತು ಮಾತ್ರವೇ ಆಲೋಚಿಸು. ನಿನಗೆ ಬೇರೇನೂ ಬೇಕಾಗುವುದಿಲ್ಲ. ಏನನ್ನೂ ಬಯಸಬೇಡ. ನಿನ್ನ ಅಂತ್ಯ ನಿಜವಾಗಿಯೂ ಶುದ್ಧ ವಾಯುವಿನಲ್ಲಿ ಲೀನವಾಗುವ ಹಿಮಬಿಲ್ಲೆಯಂತೆ ಅಂತ್ಯವಿಲ್ಲದ್ದು.”

ಝೆನ್‌ (Zen) ಕತೆ ೩೩. ಅಂತಿಮ ಸತ್ಯದ ಬೋಧನೆ
ಪ್ರಾಚೀನ ಜಪಾನಿನಲ್ಲಿ ಒಳಗೆ ಮೋಂಬತ್ತಿ ಇರುತ್ತಿದ್ದ, ಬಿದಿರು ಮತ್ತು ಕಾಗದದಿಂದ ತಯಾರಿಸಿದ ಲಾಟೀನುಗಳನ್ನು ಉಪಯೋಗಿಸುತ್ತಿದ್ದರು. ಕುರುಡನೊಬ್ಬ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದ. ಮನೆಗೆ ಹಿಂದಿರುಗಲು ಹೊರಟಾಗ ರಾತ್ರಿಯಾಗಿತ್ತು. ಕತ್ತಲಾಗಿರುವುದರಿಂದ ಲಾಟೀನು ತೆಗೆದುಕೊಂಡು ಹೋಗುವಂತೆ ಸ್ನೇಹಿತ ಕುರುಡನಿಗೆ ಸಲಹೆ ಮಾಡಿದ.
ಕುರುಡ ಹೇಳಿದ: “ನನಗೆ ಲಾಟೀನಿನ ಆವಶ್ಯಕತೆ ಇಲ್ಲ. ನನಗೆ ಬೆಳಕು, ಕತ್ತಲು ಎಲ್ಲವೂ ಒಂದೇ.”
“ನಿನ್ನ ದಾರಿ ಕಂಡುಕೊಳ್ಳಲು ನಿನಗೆ ಲಾಟೀನಿನ ಅಗತ್ಯವಿಲ್ಲ ಎಂಬುದು ನನಗೆ ತಿಳಿದಿದೆ. ನಿನ್ನ ಹತ್ತಿರ ಲಾಟೀನು ಇಲ್ಲದಿದ್ದರೆ ಬೇರೆಯವರು ನಿನಗೆ ಢಿಕ್ಕಿ ಹೊಡೆಯಬಹುದು. ಆದ್ದರಿಂದ ನೀನು ಲಾಟೀನು ತೆಗೆದುಕೊಂಡು ಹೋಗಬೇಕು” ಅಂದನಾ ಸ್ನೇಹಿತ.
ಅಂತೆಯೇ ಲಾಟೀನು ಸಹಿತ ಆ ಕುರುಡ ತನ್ನ ಮನೆಯತ್ತ ಹೊರಟ. ತುಸು ದೂರ ಹೋಗುವಷ್ಟರಲ್ಲಿಯೇ ಯಾರೋ ಅವನಿಗೆ ನೇರವಾಗಿ ಢಿಕ್ಕಿ ಹೊಡೆದರು. ಕುರಡ ಉದ್ಗರಿಸಿದ: “ಎಲ್ಲಿಗೆ ಹೋಗುತ್ತಿದ್ದೀ ಎಂಬುದರ ಕಡೆ ಗಮನವಿರಲಿ. ಈ ಲಾಟೀನು ನಿನಗೆ ಕಾಣಿಸಲಿಲ್ಲವೇ?”
ಅಪರಿಚಿತನ ಉತ್ತರ ಇಂತಿತ್ತು: “ಅಣ್ಣಾ, ನಿನ್ನ ಲಾಟೀನಿನೊಳಗಿನ ಮೋಂಬತ್ತಿ ಉರಿದು ಮುಗಿದು ಹೋಗಿದೆ.”

ಝೆನ್‌ (Zen) ಕತೆ ೩೪. ಸುಮ್ಮನೆ ನಿದ್ದೆ ಮಾಡಿ
ಝೆನ್‌ ಗುರು ಗಾಸನ್‌ ತನ್ನ ಗುರು ಟೆಕಿಸುಯ್‌ ಸಾಯುವುದಕ್ಕೆ ಮೂರು ದಿನ ಮೊದಲು ಅವನ ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದ. ಅವನನ್ನು ತನ್ನ ಉತ್ತರಾಧಿಕಾರಿಯಾಗಿ ಟೆಕಿಸುಯ್ ಈಗಾಗಲೇ ಆಯ್ಕೆ ಮಾಡಿ ಆಗಿತ್ತು.
ಇತ್ತೀಚೆಗೆ ಸುಟ್ಟು ಭಸ್ಮವಾಗಿದ್ದ ದೇವಾಲಯವೊಂದನ್ನು ಗಾಸನ್‌ ಪುನಃ ನಿರ್ಮಿಸುತ್ತಿದ್ದ. ಟೆಕಿಸುಯ್ ಅವನನ್ನು ಕೇಳಿದ: “ದೇವಾಲಯವನ್ನು ಪುನಃ ನಿರ್ಮಿಸಿದ ನಂತರ ನೀನೇನು ಮಾಡುವಿ?”
“ನಿನ್ನ ಕಾಯಿಲೆ ವಾಸಿ ಆದ ನಂತರ ನೀನು ಅಲ್ಲಿ ಮಾತನಾಡಬೇಕು ಎಂಬುದು ನಮ್ಮ ಬಯಕೆ.” ಎಂದುತ್ತರಿಸಿ ಗಾಸನ್.
“ಆ ವರೆಗೆ ನಾನು ಬದುಕಿರದಿದ್ದರೆ?” ಕೇಳಿದ ಟೆಕಿಸುಯ್
“ಅಂತಾದರೆ ನಾವು ಬೇರೆ ಯಾರನ್ನಾದರೂ ಕರೆಯತ್ತೇವೆ.” ಉತ್ತರಿಸಿದ ಗಾಸನ್‌
“ಒಂದು ವೇಳೆ ನಿನಗೆ ಯಾರೂ ಸಿಕ್ಕದಿದದ್ದರೆ?” ಮುಂದುವರಿಸಿದ ಟೆಕಿಸುಯ್
ಗಾಸನ್‌ ಜೋರಾಗಿ ಹೇಳಿದ: “ ಇಂಥ ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ. ಸುಮ್ಮನೆ ಮಲಗಿ ನಿದ್ದೆ ಮಾಡಿ.”

ಝೆನ್‌ (Zen) ಕತೆ ೩೫. ದುಡಿಮೆ ಇಲ್ಲ, ಆಹಾರವೂ ಇಲ್ಲ
ಚೀನೀ ಝೆನ್‌ ಗುರು ಹ್ಯಾಕುಜೋ ೮೦ ವರ್ಷ ವಯಸ್ಸಾಗಿದ್ದಾಗಲೂ ತೋಟದ ಕೆಲಸಕಾರ್ಯಗಳಲ್ಲಿ ಆವರಣದ ಮೈದಾನವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸದಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ದುಡಿಯುತ್ತಿದ್ದ.
ವೃದ್ಧ ಗುರು ಕಷ್ಟಪಟ್ಟು ಶ್ರಮಿಸುತ್ತಿದ್ದದ್ದನ್ನು ನೋಡಿ ಮರುಕ ಪಡುತ್ತಿದ್ದರು. ಇಷ್ಟೊಂದು ಶ್ರಮ ಪಡಬೇಡಿ ಎಂಬುದಾಗಿ ವಿನಂತಿಸಿಕೊಂಡರೂ ಆತ ಅವರ ಮಾತನ್ನು ಕೇಳುವವನಲ್ಲ ಎಂಬುದು ಅವರಿಗೆ ತಿಳಿದಿತ್ತು. ಎಂದೇ ಅವರು ಅವನು ಉಪಯೋಗಿಸುತ್ತಿದ್ದ ಪರಿಕರಗಳನ್ನು ಬಚ್ಚಿಟ್ಟರು.
ಆ ದಿನ ಗುರು ಏನನ್ನೂ ತಿನ್ನಲಿಲ್ಲ. ಮರು ದಿನವೂ ಏನನ್ನೂ ತಿನ್ನಲಿಲ್ಲ, ಅದರ ಮರು ದಿನವೂ ತಿನ್ನಲಿಲ್ಲ. “ನಾವು ಅವರ ಪರಿಕರಗಳನ್ನು ಬಚ್ಚಿಟ್ಟದ್ದರಿಂದ ಕೋಪಗೊಂಡಿರಬಹುದು” ಎಂಬುದಾಗಿ ಶಂಕಿಸಿದ ವಿದ್ಯಾರ್ಥಿಗಳು ಪರಿಕರಗಳನ್ನು ಮೊದಲಿನ ಸ್ಥಳದಲ್ಲಿ ಇಟ್ಟರು.
ಅವರು ಅಂತು ಮಾಡಿದಂದು ಗುರು ಹಿಂದಿನಂತೆ ದುಡಿದು, ಹಿಂದಿನಂತೆಯೇ ಆಹಾರ ಸೇವಿಸಿದರು. ಅಂದು ಸಂಜೆ ಗುರು ತನ್ನ ಶಿಷ್ಯರಿಗೆ ಇಂತು ಬೋಧಿಸಿದರು: “ದುಡಿಮೆ ಇಲ್ಲ, ಆಹಾರವೂ ಇಲ್ಲ.”

ಝೆನ್‌ (Zen) ಕತೆ ೩೬. ನಿಜವಾದ ಗೆಳೆಯರು
ಒಂದಾನೊಂದು ಕಾಲದಲ್ಲಿ ಚೀನಾದಲ್ಲಿ ಇಬ್ಬರು ಸ್ನೇಹಿತರು ಇದ್ದರು. ಅವರ ಪೈಕಿ ಒಬ್ಬ ಹಾರ್ಪ್‌ ವಾದ್ಯ ನುಡಿಸುವುದರಲ್ಲಿ ಕುಶಲಿಯಾಗಿದ್ದ, ಇನ್ನೊಬ್ಬ ಕೇಳುವುದರಲ್ಲಿ ಕುಶಲಿಯಾಗಿದ್ದ.
ವಾದಕ ಒಂದು ಬೆಟ್ಟದ ಕುರಿತಾದ ಗೀತೆಯನ್ನು ನುಡಿಸಿದರೆ, “ನಮ್ಮ ಮುಂದೆ ಬೆಟ್ಟವೊಂದು ಗೋಚರಿಸುತ್ತಿದೆ” ಅನ್ನುತ್ತಿದ್ದ ಕೇಳುಗ.
ವಾದಕ ನೀರಿನ ಕುರಿತಾದ ಗೀತೆಯನ್ನು ನುಡಿಸಿದರೆ, “ಇಲ್ಲೊಂದು ಹರಿಯುವ ತೊರೆ ಇದೆ” ಎಂಬುದಾಗಿ ಕೇಳುಗ ಉದ್ಗರಿಸುತ್ತಿದ್ದ.
ಹೀಗಿರುವಾಗ ಕೇಳುಗ ರೋಗಗ್ರಸ್ತನಾಗಿ ಮರಣಿಸಿದ. ವಾದಕ ತನ್ನ ಹಾರ್ಪ್‌ನ ತಂತಿಗಳನ್ನು ತುಂಡುಮಾಡಿದ. ತದನಂತರ ಅವನೆಂದೂ ವಾದ್ಯ ನುಡಿಸಲೇ ಇಲ್ಲ. ಆ ಕಾಲದಿಂದ ಹಾರ್ಪ್ ವಾದ್ಯದ ತಂತಿಗಳನ್ನು ತುಂಡರಿಸುವುದು ಯಾವಾಗಲೂ ಆತ್ಮೀಯ ಗೆಳೆತನದ ಪ್ರತೀಕವಾಗಿಯೇ ಉಳಿದಿದೆ.

ಝೆನ್‌ (Zen) ಕತೆ ೩೭. ಸಾಯುವ ಸಮಯ ಬಂದಿತು
ಝೆನ್‌ ಗುರು ಇಕ್ಕ್ಯು ಬಾಲಕನಾಗಿದ್ದಾಗಲೇ ಬಲು ಬುದ್ಧಿವಂತನಾಗಿದ್ದ. ಅವನ ಗುರುವಿನ ಹತ್ತಿರ ಪ್ರಾಚೀನ ಕಾಲದ ಒಂದು ಚಹಾ ಕುಡಿಯುವ ಅಪರೂಪದ ಅಮೂಲ್ಯವಾದ ಬಟ್ಟಲು ಇತ್ತು. ಒಂದು ದಿನ ಆ ಬಟ್ಟಲು ಕೈನಿಂದ ಬಿದ್ದು ಒಡೆದದ್ದರಿಂದ ಇಕ್ಕ್ಯು ದಿಕ್ಕುತೋಚದಂತಾದ. ಆ ಸಮಯಕ್ಕೆ ಸರಿಯಾಗಿ ಗುರು ಬರುತ್ತಿರುವ ಹೆಜ್ಜೆ ಸದ್ದು ಕೇಳಿಸಿದ್ದರಿಂದ ಬಟ್ಟಲಿನ ಚೂರುಗಳನ್ನು ಕೈನಲ್ಲಿ ಬೆನ್ನ ಹಿಂದೆ ಅಡಗಿಸಿ ಇಟ್ಟುಕೊಂಡ.
ಗುರು ಗೋಚರಿಸಿದ ತಕ್ಷಣ ಇಂತು ಕೇಳಿದ: “ಜನ ಏಕೆ ಸಾಯಬೇಕು?”
ವೃದ್ಧ ಗುರು ವಿವರಿಸಿದ: “ಅದು ಸ್ವಾಭಾವಿಕವಾದದ್ದು. ಪ್ರತಿಯೊಂದೂ ಸಾಯಲೇ ಬೇಕು, ಪ್ರತಿಯೊಂದಕ್ಕೂ ಜೀವಿತದ ಅವಧಿ ಎಂಬುದು ಇರುತ್ತದೆ”
ಒಡೆದು ಹೋಗಿದ್ದ ಚಹಾ ಬಟ್ಟಲಿನ ಚೂರುಗಳನ್ನು ಗುರುಗಳಿಗೆ ತೋರಿಸಿ ಇಕ್ಕ್ಯು ಹೇಳಿದ: “ನಿಮ್ಮ ಚಹಾ ಕುಡಿಯುವ ಬಟ್ಟಲಿಗೆ ಸಾಯುವ ಸಮಯ ಬಂದಿತ್ತು”

ಝೆನ್‌ (Zen) ಕತೆ ೩೮. ಶುಂಕೈನ ಕತೆ
ಸುಝು ಎಂಬ ಹೆಸರೂ ಇದ್ದ ಪರಮಸುಂದರಿ ಶುಂಕೈ ಬಲು ಚಿಕ್ಕವಳಾಗಿದ್ದಾಗಲೇ ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದ ಮದುವೆ ಆಗಬೇಕಾಯಿತು. ಈ ಮದುವೆ ಅಂತ್ಯಗೊಂಡ ನಂತರ ಆಕೆ ವಿಶ್ವವಿದ್ಯಾನಿಲಯಕ್ಕೆ ಹೋಗಿ ತತ್ವಶಾಸ್ತ್ರವನ್ನು ಅಭ್ಯಸಿಸಿದಳು.
ಶುಂಕೈಯನ್ನು ನೋಡಿದವರು ಆಕೆಯನ್ನು ಮೋಹಿಸುವುದು ಖಾತರಿ ಅನ್ನಬಹುದಾದಷ್ಟು ಸುಂದರಿ ಆಕೆ. ಅಷ್ಟೇ ಅಲ್ಲದೆ, ಅವಳು ಹೋದೆಡೆಯೆಲ್ಲ ತಾನೇ ಇತರರನ್ನು ಮೋಹಿಸುತ್ತಿದ್ದಳು. ವಿಶ್ವವಿದ್ಯಾನಿಲಯದಲ್ಲಿಯೂ ತದನಂತರವೂ ಮೋಹ ಎಂಬುದು ಅವಳೊಂದಿಗೇ ಇತ್ತು. ತತ್ವಶಾಸ್ತ್ರ ಅವಳನ್ನು ತೃಪ್ತಿಪಡಿಸಲಿಲ್ಲ. ಎಂದೇ ಆಕೆ ಝೆನ್ ಕುರಿತು ಕಲಿಯಲೋಸುಗ ಒಂದು ದೇವಾಲಯಕ್ಕೆ ಭೇಟಿ ಕೊಟ್ಟಳು. ಅಲ್ಲಿನ ಝೆನ್‌ ವಿದ್ಯಾರ್ಥಿಗಳು ಆಕೆಯನ್ನು ಮೋಹಿಸಿದರು. ಶುಂಕೈನ ಪೂರ್ತಿ ಜೀವನವೇ ಮೋಹದಲ್ಲಿ ಮುಳುಗಿತ್ತು.
ಕಟ್ಟಕಡೆಗೆ ಆಕೆ ಕ್ಯೋಟೋ ಎಂಬಲ್ಲಿ ನಿಜವಾಗಿಯೂ ಝೆನ್‌ ವಿದ್ಯಾರ್ಥಿಯಾದಳು. ಕೆನ್ನಿನ್‌ನ ಉಪ ದೇವಾಲಯದಲ್ಲಿದ್ದ ಅವಳ ಸಹೋದರರು (ಅರ್ಥಾತ್, ಸಹ ವಿದ್ಯಾರ್ಥಿಗಳು) ಅವಳ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಅವಳು ಝೆನ್‌ನಲ್ಲಿ ಪ್ರಾವೀಣ್ಯ ಗಳಿಸಲು ಅವರ ಪೈಕಿ ಸಮಾನ ಮನೋಧರ್ಮದವನಾಗಿದ್ದ ಒಬ್ಬ ಸಹಾಯ ಮಾಡಿದ.
ಕೆನ್ನಿನ್ನ ಮುಖ್ಯಸ್ಥ‌, ಮೊಕುರೈ ಯಾನೆ ನಿಶ್ಶಬ್ದವಾದ ಗುಡುಗು, ಬಲು ಕಠಿನ ಸ್ವಭಾವದವನಾಗಿದ್ದ. ಆಚಾರ ಸೂತ್ರಗಳನ್ನು ತಾನು ಚಾಚೂ ತಪ್ಪದೇ ಪಾಲಿಸುತ್ತಿದ್ದ, ಅಲ್ಲಿದ್ದ ಇತರ ಧರ್ಮೋಪದೇಶಕರೂ ಅಂತೆಯೇ ಪಾಲಿಸಬೇಕೆಂಬ ನಿರೀಕ್ಷೆ ಉಳ್ಳವನಾಗಿದ್ದ. ಆಧುನಿಕ ಜಪಾನಿನಲ್ಲಿ ಈ ಧರ್ಮೋಪದೇಶಕರ ಉತ್ಸಾಹ ಏನೇ ಇದ್ದರೂ ತಾವು ಗಳಿಸಿದ ಬೌದ್ಧ ಸಿದ್ಧಾಂತಗಳನ್ನು ತಮ್ಮ ಪತ್ನಿಯರಿಗಾಗಿ ಅವರು ಕಳೆದುಕೊಂಡಂತೆ ತೋರುತ್ತಿತ್ತು. ಎಂದೇ, ತನ್ನ ಯಾವುದೇ ದೇವಾಲಯದಲ್ಲಿ ಸ್ತ್ರೀಯರನ್ನು ಕಂಡ ತಕ್ಷಣ ಮೊಕುರೈ ಒಂದು ಪೊರಕೆ ತೆಗೆದುಕೊಂಡು ಅವರನ್ನು ಆಚೆಗೆ ಓಡಿಸುತ್ತಿದ್ದ. ಇಂತಿದ್ದರೂ ಎಷ್ಟು ಮಂದಿ ಪತ್ನಿಯರನ್ನು ಅವನು ಆಚೆಗೆ ಓಡಿಸುತ್ತಿದ್ದನೋ ಅದಕ್ಕಿಂತ ಹೆಚ್ಚು ಮಂದಿ ಹಿಂದಿರುಗುತ್ತಿದ್ದಂತೆ ತೋರುತ್ತಿತ್ತು.
ಶುಂಕೈನ ಶ್ರದ್ಧೆ ಮತ್ತು ಸೌಂದರ್ಯಗಳನ್ನು ನೋಡಿ ಆ ದೇವಾಲಯದ ಮುಖ್ಯ ಧರ್ಮೋಪದೇಶಕನ ಪತ್ನಿಗೆ ಅಸೂಯೆ ಉಂಟಾಯಿತು. ಆಕೆಯ ಗಹನವಾದ ಝೆನ್‌ನನ್ನು ವಿದ್ಯಾರ್ಥಿಗಳು ಹೊಗಳುವುದನ್ನು ಕೇಳಿದಾಗಲೆಲ್ಲ ಆಕೆಗೆ ಸಂಕಟವಾಗುತ್ತಿದ್ದದ್ದಷ್ಟೇ ಅಲ್ಲ, ಮೈ ಪರಚಿಕೊಳ್ಳುವಂತೆಯೂ ಆಗುತ್ತಿತ್ತು. ಅಂತಿಮವಾಗಿ ಅವಳು ಶುಂಕೈ ಮತ್ತು ಆಕೆಯ ಯುವ ಮಿತ್ರನ ಕುರಿತಾಗಿ ವದಂತಿಯೊಂದು ಹರಡುವಂತೆ ಮಾಡಿದಳು. ತತ್ಪರಿಣಾಮವಾಗಿ ಆತನನ್ನು ಉಚ್ಛಾಟಿಸಿದರು, ಶುಂಕೈಯನ್ನೂ ಆ ದೇವಾಲಯದಿಂದ ತೆಗೆದುಹಾಕಿದರು.
“ಮೋಹಿಸುವ ತಪ್ಪನ್ನು ನಾನು ಮಾಡಿರಬಹುದಾದರೂ ನನ್ನ ಸ್ನೇಹಿತನೊಂದಿಗೆ ಇಷ್ಟು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವ್ಯವಹರಿಸುವುದಾದರೆ ಧರ್ಮೋಪದೇಶಕನ ಪತ್ನಿಯೂ ಈ ದೇವಾಲಯದಲ್ಲಿ ಇರಲೇ ಕೂಡದು.” ಎಂಬುದಾಗಿ ಆಗ ಆಲೋಚಿಸಿದ ಶುಂಕೈ ಅಂದಿನ ರಾತ್ರಿಯೇ ಒಂದು ಡಬ್ಬಿ ಸೀಮೆಎಣ್ಣೆಯಿಂದ ಆ ೫೦೦ ವರ್ಷ ಹಳೆಯ ದೇವಾಲಯಕ್ಕೆ ಬೆಂಕಿ ಹಚ್ಚಿ ಸುಟ್ಟು ನೆಲಸಮ ಮಾಡಿದಳು. ಇದರಿಂದಾಗಿ ಬೆಳಗ್ಗೆ ಅವಳು ಪೋಲೀಸರ ವಶದಲ್ಲಿದ್ದಳು.
ಆಕೆಯಲ್ಲಿ ಆಸಕ್ತನಾದ ಯುವ ವಕೀಲನೊಬ್ಬ ಆಕೆಗೆ ಲಘುಶಿಕ್ಷೆ ಆಗುವಂತೆ ಮಾಡಲು ಶ್ರಮಿಸಿದ.
“ನನಗೆ ಸಹಾಯ ಮಾಡಬೇಡ. ನಾನು ಪುನಃ ಬಂಧಿಯಾಗುವಂತೆ ಮಾಡಬಹುದಾದದ್ದು ಇನ್ನೇನನ್ನಾದರೂ ಮಾಡಲು ತೀರ್ಮಾನಿಸಬಹುದು” ಎಂಬುದಾಗಿ ಅವಳು ಅವನಿಗೆ ಹೇಳಿದಳು.
ಕೊನೆಗೂ ಅವಳಿಗೆ ವಿಧಿಸಿದ್ದ ೭ ವರ್ಷ ಸೆರೆಮನೆ ವಾಸದ ಶಿಕ್ಷೆ ಮುಗಿದು ಅವಳು ಜೈಲಿನಿಂದ ಬಿಡುಗಡೆಯಾದಳು. ಏತನ್ಮಧ್ಯೆ ಆ ಜೈಲಿನ ೬೦ ವರ್ಷ ವಯಸ್ಸಿನ ಮೇಲ್ವಿಚಾರಕ ಅವಳಲ್ಲಿ ಅನುರಕ್ತನಾಗಿದ್ದ.
ಅವಳನ್ನು ಈಗ ಎಲ್ಲರೂ ’ಜೈಲುಹಕ್ಕಿ’ ಎಂದೇ ಪರಿಗಣಿಸುತ್ತಿದ್ದರು.ಅವಳೊಂದಿಗೆ ಯಾರೂ ವ್ಯವಹರಿಸುತ್ತಿರಲಿಲ್ಲ. ಈ ಜೀವಿತಾವಧಿಯಲ್ಲಿ ಈ ದೇಹದೊಂದಿಗೆ ಜ್ಞಾನೋದಯ ಆಗುತ್ತದೆ ಎಂಬ ನಂಬಿಕೆ ಉಳ್ಳವರು ಎಂಬುದಾಗಿ ಅಂದುಕೊಂಡಿರುವ ಝೆನ್‌ ಮಂದಿ ಕೂಡ ಅವಳನ್ನು ದೂರವಿಡುತ್ತಿದ್ದರು. ಝೆನ್ ಸಿದ್ಧಾಂತ ಮತ್ತು ಝೆನ್ ಅನುಯಾಯಿಗಳು – ಎರಡೂ ಬೇರೆಬೇರೆ ಎಂಬುದನ್ನು ಶುಂಕೈ ಕಂಡುಕೊಂಡಳು. ಅವಳ ಬಂಧುಗಳು ಅವಳೊಂದಿಗೆ ಯಾವ ವ್ಯವಹಾರಕ್ಕೂ ಸಿದ್ಧವಿರಲಿಲ್ಲ. ಅವಳು ರೋಗಿಯಾದಳು, ಬಡವಳಾದಳು ಮತ್ತು ದುರ್ಬಲವಾದಳು.
ಅವಳು ಭೇಟಿಯಾದ ಶಿನ್‌ಶೂ ಧರ್ಮೋಪದೇಶಕನೊಬ್ಬ ಅವಳಿಗೆ ಪ್ರೇಮದ ಬುದ್ಧನ (Buddha of Love) ಹೆಸರನ್ನು ಕಲಿಸಿದ. ಇದರಲ್ಲಿ ಶುಂಕೈ ತುಸು ನೆಮ್ಮದಿಯನ್ನೂ ಮನಶ್ಶಾಂತಿಯನ್ನೂ ಕಂಡುಕೊಂಡಳು. ಇನ್ನೂ ಪರಮಸುಂದರಿಯಾಗಿದ್ದ ಅವಳು ೩೦ ವರ್ಷ ವಯಸ್ಸು ತುಂಬುವ ಮುನ್ನವೇ ಸತ್ತಳು.
ತನ್ನನ್ನು ಪೋಷಿಸಿಕೊಳ್ಳುವ ನಿರರ್ಥಕ ಪ್ರಯತ್ನವಾಗಿ ತನ್ನ ಕತೆಯನ್ನು ಬರೆದಿದ್ದಳು ಮತ್ತು ಅದರ ಸ್ವಲ್ಪ ಭಾಗವನ್ನು ಲೇಖಕಿಯೊಬ್ಬಳಿಗೆ ಹೇಳಿದ್ದಳು. ಆದುದರಿಂದ ಅದು ಜಪಾನೀಯರಿಗೆ ತಲುಪಿತು. ಶುಂಕೈಯನ್ನು ತಿರಸ್ಕರಿಸಿದವರು, ದುರುದ್ದೇಶದಿಂದ ಅವಳನ್ನು ಹಳಿದವರು ಮತ್ತು ದ್ವೇಷಿಸಿದವರು ಈಗ ಅವಳ ಜೀವನದ ಕುರಿತು ತೀವ್ರ ಪಶ್ಚಾತ್ತಾಪದಿಂದ ಕೂಡಿದ ಕಣ್ಣೀರು ಸುರಿಸುತ್ತಾ ಓದಿದರು.

ಝೆನ್‌ (Zen) ಕತೆ ೩೯. ಶೊಉನ್‌ ಮತ್ತು ಅವನ ತಾಯಿ
ಶೊಉನ್‌ ಝೆನ್‌ನ ಸಾಖೆ ಸೋಟೋ ಝೆನ್‌ನ ಅಧ್ಯಾಪಕನಾದ. ಅವನು ವುದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ಅವನನ್ನು ವೃದ್ಧ ತಾಯಿಯ ವಶಕ್ಕೊಪ್ಪಿಸಿ ಸತ್ತನು.
ಧ್ಯಾನ ಮಂದಿರಕ್ಕೆ ಹೋಗುವಾಗಲೆಲ್ಲ ಶೊಉನ್‌ ತನ್ನ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ. ಅವನು ಮಠಗಳಿಗೆ ಭೇಟಿ ನೀಡುವಾಗಲೂ ಅವಳು ಜೊತೆಯಲ್ಲಿಯೇ ಇರುತ್ತಿದ್ದದ್ದರಿಂದ ಅವನ್ನು ಸನ್ಯಾಸಿಗಳ ಜೊತೆ ತಂಗಲು ಆಗುತ್ತಿರಲಿಲ್ಲ. ಹಾಗಾಗಿ ಅವನೊಂದು ಪುಟ್ಟ ಮನೆ ಕಟ್ಟಿ ತನ್ನ ವೃದ್ಧ ತಾಯಿಯನ್ನು ಪೋಷಿಸುತ್ತಿದ್ದ. ಸೂತ್ರಗಳನ್ನು, ಅರ್ಥಾತ್ ಬೌದ್ಧ ಶ್ಲೋಕಗಳ ನಕಲು ಮಾಡಿಕೊಟ್ಟ ಆಹಾರಕ್ಕೆ ಬೇಕಾದ ಅಲ್ಪ ಹಣವನ್ನು ಸ್ವೀಕರಿಸುತ್ತಿದ್ದ.
ಶೊಉನ್‌ ತಾಯಿಗೋಸ್ಕರ ಮೀನು ತಂದಾಗ ಸನ್ಯಾಸಿಗಳು ಮೀನು ತಿನ್ನಕೂಡದು ಎಂಬುದನ್ನು ತಿಳಿದಿದ್ದ ಜನ ಅಪಹಾಸ್ಯ ಮಾಡುತ್ತಿದ್ದರು. ಅದಕ್ಕೆಲ್ಲ ಶೊಉನ್‌ ತಲೆಕೆಡಿಸಿಕೊಳ್ಳುತ್ತಿರಲಿಲ್ಲವಾಗಿದ್ದರೂ ಇತರರು ತನ್ನ ಮಗನನ್ನು ನೋಡಿ ನಗುವುದು ಅವನ ತಾಯಿಯ ಮನಸ್ಸನ್ನು ನೋಯಿಸುತ್ತಿತ್ತು. ಕೊನೆಗೊಮ್ಮೆ ಅವಳು ಶೊಉನ್‌ಗೆ ಇಂತೆಂದಳು: “ನಾನೊಬ್ಬ ಸನ್ಯಾಸಿನಿ ಆಗಬೇಕೆಂದು ಆಲೋಚಿಸಿದ್ದೇನೆ. ಆಗ ನಾನೂ ಒಬ್ಬ ಸಸ್ಯಾಹಾರಿಯಾಗಬಹುದು”. ಅವಳು ಸನ್ಯಾಸಿನಿಯಾದಳು ಮತ್ತು ಅವರಿಬ್ಬರೂ ಜೊತೆಯಾಗಿ ಅಭ್ಯಸಿಸತೊಡಗಿದರು.
ಶೊಉನ್‌ ಒಬ್ಬ ಸಂಗೀತಪ್ರಿಯನಾಗಿದ್ದ. ಆತನೊಬ್ಬ ನುರಿತ ಹಾರ್ಪ್‌ ವಾದಕನಾಗಿದ್ದ. ಅವನ ತಾಯಿಯೂ ಹಾರ್ಪ್ ನುಡಿಸಬಲ್ಲವಳಾಗಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಅವರೀರ್ವರೂ ಜೊತೆಯಾಗಿ ಹಾರ್ಪ್‌ ನುಡಿಸುತ್ತಿದ್ದರು.
ಒಂದು ರಾತ್ರಿ ಅವರ ಮನೆಯ ಪಕ್ಕದಲ್ಲಿ ಹಾದುಹೋಗುತ್ತಿದ್ದ ಯುವತಿಯೊಬ್ಬಳಿಗೆ ಆ ಸಂಗೀತ ಕೇಳಿಸಿತು. ಆ ಸಂಗೀತಕ್ಕೆ ಮನಸೋತ ಅವಳು ಮಾರನೆಯ ದಿನ ಸಂಜೆ ತನ್ನ ಮನೆಗೆ ಬಂದು ಹಾರ್ಪ್‌ ನುಡಿಸುವಂತೆ ಆಹ್ವಾನಿಸಿದಳು. ಆ ಆಹ್ವಾನವನ್ನು ಅವನು ಸ್ವೀಕರಿಸಿದ. ಕೆಲವು ದಿನಗಳ ನಂತರ ರಸ್ತೆಯಲ್ಲಿ ಅವಳ ಭೇಟಿಯಾದಾಗ ಶೊಉನ್‌ ಅವಳು ನೀಡಿದ ಆತಿಥ್ಯಕಾಕಾಗಿ ಧನ್ಯವಾದಗಳನ್ನು ಅರ್ಪಿಸಿದ. ಇತರರು ಅವನನ್ನು ನೋಡಿ ನಕ್ಕರು. ಅವನು ಬೀದಿಬಸವಿಯೊಬ್ಬಳ (ಸೂಳೆಯ) ಮನೆಗೆ ಹೋಗಿದ್ದ.
ಬಲು ದೂರದಲ್ಲಿದ್ದ ದೇವಾಲಯದಲ್ಲಿ ಉಪನ್ಯಾಸ ನೀಡಲೋಸುಗ ಶೊಉನ್ ಒಂದು ದಿನ ತೆರಳಿದ. ಕೆಲವು ತಿಂಗಳುಗಳ ನಂತರ ಅವನು ಮನೆಗೆ ಹಿಂದಿರುಗಿದಾಗ ಅವನ ತಾಯಿ ಸತ್ತಿದ್ದಳು. ಅವನನ್ನು ಎಲ್ಲಿ ಸಂಪರ್ಕಿಸಬೇಕು ಎಂಬುದು ಅವನ ಸ್ನೇಹಿತರಿಗೆ ಗೊತ್ತಿಲ್ಲದೇ ಇದ್ದದ್ದರಿಂದ ಅಂತ್ಯಕ್ರಿಯೆಗಳು ಜರಗುತ್ತಿದ್ದವು.
ಶೊಉನ್‌ ಶವಪೆಟ್ಟಿಗೆಯ ಹತ್ತಿರ ಹೋಗಿ ತನ್ನ ಕೈನಲ್ಲಿ ಇದ್ದ ಊರಗೋಲಿನಿಂದ ಅದನ್ನು ತಟ್ಟಿ ಹೇಳಿದ: “ಅಮ್ಮ, ನಿನ್ನ ಮಗ ಹಿಂದಿರುಗಿ ಬಂದಿದ್ದಾನೆ.”
ತಾಯಿಯ ಪರವಾಗಿ ಅವನೇ ಉತ್ತರಿಸಿದ: “ಮಗನೇ, ನೀನು ಹಿಂದಿರುಗಿ ಬಂದದ್ದನ್ನು ನೋಡಿ ನನಗೆ ಸಂತೋಷವಾಗಿದೆ.”
“ಹೌದು, ನನಗೂ ಸಂತೋಷವಾಗಿದೆ” ಎಂಬುದಾಗಿ ಶೊಉನ್‌ ಪ್ರತಿಕ್ರಿಯಿಸಿದ. ತದನಂತರ ತನ್ನ ಸುತ್ತಲಿದ್ದ ಜನಗಳಿಗೆ ಇಂತೆಂದ: “ಉತ್ತರಕ್ರಿಯೆಯ ಕರ್ಮಾಚರಣೆ ಮುಗಿಯಿತು. ನೀವಿನ್ನು ಶವಪೆಟ್ಟಿಗೆಯನ್ನು ಹೂಳಬಹುದು.”
ಶೊಉನ್ ವೃದ್ಧನಾದಾಗ ಅಂತ್ಯ ಸಮೀಪಿಸಿತ್ತಿರುವುದು ಅವನಿಗೆ ತಿಳಿಯಿತು. ಮಧ್ಯಾಹ್ನ ತಾನು ಸಾಯುವುದಾಗಿಯೂ, ಬೆಳಗ್ಗೆ ತನ್ನ ಸುತ್ತಲೂ ಎಲ್ಲರೂ ಒಟ್ಟಿಗೆ ಸೇರಬೇಕೆಂದೂ ತನ್ನ ಶಿಷ್ಯರಿಗೆ ಹೇಳಿದ. ತನ್ನ ತಾಯಿ ಮತ್ತು ಗುರುವಿನ ಚಿತ್ರಗಳ ಎದುರು ಧೂಪದ್ರವ್ಯ ಉರಿಸಿದ ನಂತರ ಪದ್ಯವೊಂದನ್ನು ಬರೆದ:
’ಐವತ್ತಾರು ವರ್ಷ ಕಾಲ ಜಗತ್ತಿನಲ್ಲಿ ನನ್ನ ದಾರಿ ಮಾಡಿಕೊಳ್ಳುತ್ತಾ
ನನಗೆ ತಿಳಿದಷ್ಟು ಚೆನ್ನಾಗಿ ನಾನು ಬಾಳಿದ್ದೇನೆ.
ಈಗ ಮಳೆ ನಿಂತಿದೆ, ಮೋಡಗಳು ಚೆದರುತ್ತಿವೆ.
ನೀಲಾಕಾಶದಲ್ಲಿ ಪೂರ್ಣಚಂದ್ರವಿದೆ”
ಶ್ಲೋಕವೊಂದನ್ನು ಪಠಿಸುತ್ತಾ ಶಿಷ್ಯರೆಲ್ಲರೂ ಅವನ ಸುತ್ತಲೂ ಸೇರಿದರು. ಈ ಪ್ರಾರ್ಥನೆಯ ಸಮಯದಲ್ಲಿ ಶೊಉನ್ ಅಸು ನೀಗಿದನು.

ಝೆನ್‌ (Zen) ಕತೆ ೪೦. ಬೋಧನೆಯಲ್ಲಿ ಜಿಪುಣ
ಝೆನ್‌ ಅಭ್ಯಸಿಸುತ್ತಿದ್ದ ಕಾಲೇಜು ಮಿತ್ರನೊಬ್ಬನನ್ನು ಟೋಕಿಯೋ ವಾಸಿ ಯುವ ವೈದ್ಯ ಕುಸುಡಾ ಸಂಧಿಸಿದ. ಝೆನ್‌ ಅಂದರೇನು ಎಂಬುದನ್ನು ಅವನಿಂದ ತಿಳಿಯಬಯಸಿದ.
ಮಿತ್ರ ಇಂತು ಉತ್ತರಿಸಿದ: “ಅದೇನು ಎಂಬುದನ್ನು ನಾನು ನಿನಗೆ ಹೇಳಲಾರೆನಾದರೂ ಒಂದು ಅಂಶ ಖಚಿತ. ಝೆನ್‌ಅನ್ನು ಅರಿತರೆ ನೀನು ಸಾಯಲು ಹೆದರುವುದಿಲ್ಲ”.
“ಪರವಾಗಿಲ್ಲ, ನಾನೊಮ್ಮೆ ಪ್ರಯತ್ನಿಸುತ್ತೇನೆ. ಒಳ್ಳೆಯ ಅಧ್ಯಾಪಕರು ಎಲ್ಲಿದ್ದಾರೆ?” ಕೇಳಿದ ಕುಸುಡಾ.
“ಗುರು ನ್ಯಾನ್‌ಇನ್‌ಹತ್ತಿರ ಹೋಗು,” ಸಲಹೆ ನೀಡಿದ ಆ ಮಿತ್ರ.
ಅಂತೆಯೇ ನ್ಯಾನ್‌ಇನ್‌ಅನ್ನು ಕಾಣಲು ಹೋದ ಕುಸುಡಾ. ಸಾಯಲು ಅಧ್ಯಾಪಕ ಹೆದರುತ್ತಾನೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಒಂಭತ್ತೂವರೆ ಅಂಗುಲದ ಕಿರುಗತ್ತಿಯನ್ನೂ ಒಯ್ದಿದ್ದ.
ಕುಸುಡಾನನ್ನು ಕಂಡೊಡನೆಯೇ ನ್ಯಾನ್‌ಇನ್‌ ಉದ್ಗರಿಸಿದ: ಹಲೋ ಗೆಳೆಯ. ನೀನು ಹೇಗಿದ್ದೀ? ಸುದೀರ್ಘಕಾಲದಿಂದ ನಾವು ಒಬ್ಬರನ್ನೊಬ್ಬರು ನೋಡಿಯೇ ಇಲ್ಲ.”
ದಿಗ್ಭ್ರಾಂತನಾದ ಕುಸುಡಾ ಹೇಳಿದ: “ನಾವು ಹಿಂದೆಂದೂ ಭೇಟಿಯಾಗಿರಲೇ ಇಲ್ಲವಲ್ಲಾ?”
ನ್ಯಾನ್‌ಇನ್‌ ಉತ್ತರಿಸಿದ: “ಅದು ಸರಿಯೇ. ಇಲ್ಲಿ ಪಾಠ ಹೇಳಿಸಿಕೊಳ್ಳುತ್ತಿರುವ ಇನ್ನೊಬ್ಬ ವೈದ್ಯ ನೀನೆಂಬುದಾಗಿ ತಪ್ಪಾಗಿ ಗ್ರಹಿಸಿದೆ.”
ಇಂಥ ಆರಂಭದಿಂದಾಗಿ ಕುಸುಡಾ ಅಧ್ಯಾಪಕನನ್ನು ಪರೀಕ್ಷಿಸುವ ಅವಕಾಶವನ್ನು ಕಳೆದುಕೊಂಡ. ಒಲ್ಲದ ಮನಸ್ಸಿನಿಂದ ತನಗೆ ಬೋಧಿಸಲು ಸಾಧ್ಯವೇ ಎಂಬುದಾಗಿ ಕೇಳಿದ.
ನ್ಯಾನ್‌ಇನ್‌ ಹೇಳಿದ: “ಝೆನ್‌ ಕಲಿಯುವುದು ಏನೂ ಕಷ್ಟದ ಕೆಲಸವಲ್ಲ. ನೀನೊಬ್ಬ ವೈದ್ಯನಾಗಿದ್ದರೆ ನಿನ್ನ ರೋಗಿಗಳಿಗೆ ಕರುಣೆಯಿಂದ ಚಿಕಿತ್ಸೆ ಮಾಡು. ಅದೇ ಝೆನ್.”
ಕುಸುಡಾ ಮೂರು ಸಲ ನ್ಯಾನ್‌ಇನ್‌ಅನ್ನು ಭೇಟಿ ಮಾಡಿದ. ಪ್ರತೀ ಸಲವೂ ನ್ಯಾನ್‌ಇನ್‌ ಅದನ್ನೇ ಹೇಳಿದ. “ವೈದ್ಯರು ಇಲ್ಲಿ ಅವರ ಸಮಯ ಹಾಳು ಮಾಡಬಾರದು. ಮನೆಗೆ ಹೋಗಿ ನಿನ್ನ ರೋಗಿಗಳ ಕಡೆ ಗಮನ ಕೊಡು.”
ಆದಾಗ್ಯೂ ಕುಸುಡಾನಿಗೆ ಇಂಥ ಬೋಧನೆಯು ಸಾವಿನ ಭಯವನ್ನು ಹೇಗೆ ನಿವಾರಿಸುತ್ತದೆ ಎಂಬುದು ಸ್ಪಷ್ಟವಾಗಲಿಲ್ಲ. ಎಂದೇ, ನಾಲ್ಕನೆಯ ಭೇಟಿಯಲ್ಲಿ ಅವನು ಗೊಣಗಿದ: “ಝೆನ್ ಕಲಿತಾಗ ಸಾವಿನ ಭಯ ಹೋಗುತ್ತದೆ ಎಂಬುದಾಗಿ ನನ್ನ ಸ್ನೇಹಿತ ಹೇಳಿದ. ನಾನು ಇಲ್ಲಿಗೆ ಬಂದಾಗಲೆಲ್ಲ ಪ್ರತೀ ಸಲ ನನ್ನ ರೋಗಿಗಳ ಕುರಿತು ಕಾಳಜಿ ವಹಿಸುವಂತೆ ಮಾತ್ರ ನೀವು ನನಗೆ ಹೇಳಿದಿರಿ. ಅಷ್ಟು ನನಗೆ ಗೊತ್ತಿದೆ. ಅಷ್ಟನ್ನು ಮಾತ್ರ ನೀವು ಝೆನ್‌ಅನ್ನುವುದಾದರೆ ಇನ್ನು ಮುಂದೆ ನಾನು ನಿಮ್ಮನ್ನು ಭೇಟಿಯಾಗುವುದಿಲ್ಲ.” ನ್ಯಾನ್‌ಇನ್‌ ಮುಗುಳ್ನಕ್ಕು ವೈದ್ಯನ ಬೆನ್ನನ್ನು ಮಿದುವಾಗಿ ತಟ್ಟಿದ. “ನಾನು ನಿನ್ನೊಂದಿಗೆ ಅತೀ ನಿಷ್ಠುರವಾಗಿ ವರ್ತಿಸಿದೆ. ನಿನಗೊಂದು ಕೋಅನ್‌ (koan)೧ ಕೊಡುತ್ತೇನೆ.” ಮನಸ್ಸಿನಲ್ಲಿ ಅರಿವು ಮೂಡಿಸಲೋಸುಗ ರಚಿತವಾಗಿರುವ ’ದ ಗೇಟ್‌ಲೆಸ್‌ ಗೇಟ್‌’ ಎಂಬ ಪುಸ್ತಕದಲ್ಲಿರುವ ಮೊದಲನೇ ಸಮಸ್ಯೆ ಜೋಶುನ ಮು೨ ಅನ್ನು ಕುಸುಡಾಗೆ ತಾಲಿಮು ಮಾಡಲೋಸುಗ ನೀಡಿದ.
ಈ ಮು (ಇಲ್ಲ – ವಸ್ತು) ಸಮಸ್ಯೆಯ ಕುರಿತು ಎರಡು ವರ್ಷಗಳ ಕಾಲ ಕೊಸುಡಾ ಮನಸ್ಸಿನಲ್ಲಿಯೇ ವಿಚಾರಮಾಡಿದ. ಈ ಕುರಿತಾದ ಒಂದು ಖಚಿತ ನಿರ್ಧಾರಕ್ಕೆ ಮನಸ್ಸಿನಲ್ಲಿಯೇ ಬಂದಿರುವುದಾಗಿ ಕೊನೆಗೊಮ್ಮೆ ಆಲೋಚಿಸಿದ ಕೊಸುಡಾ. ಆದರೆ ಗುರು “ನೀನಿನ್ನೂ ಒಳ ಹೊಕ್ಕಿಲ್ಲ” ಅಂದರು.
ಇನ್ನೂ ಒಂದೂವರೆ ವರ್ಷ ಕಾಲ ಸಮಸ್ಯೆಯ ಮೇಲೆ ಅವಧಾನ ಕೇಂದ್ರೀಕರಿಸುವುದನ್ನು ಕುಸುಡಾ ಮುಂದುವರಿಸಿದ. ಅವನ ಮನಸ್ಸು ಶಾಂತವಾಯಿತು. ಸಮಸ್ಯೆಗಳು ಮಾಯವಾದವು. ಇಲ್ಲ-ವಸ್ತು ಸತ್ಯವಾಯಿತು. ತನ್ನ ರೋಗಿಗಳಿಗೆ ಬಲು ಚೆನ್ನಾಗಿ ಸೇವೆ ಮಾಡಿದ. ಬದುಕು ಸಾವುಗಳ ಕಾಳಜಿಯಿಂದ ಆತ ಅರಿವಿಲ್ಲದೆಯೇ ಮುಕ್ತನಾಗಿದ್ದ.
ಆನಂತರ ಆತ ನ್ಯಾನ್‌ಇನ್‌ ಅನ್ನು ಭೇಟಿ ಮಾಡಿದಾಗ ಅವರು ಮುಗುಳುನಗೆ ನಕ್ಕರು

೧ ಕೋಅನ್‌: “ದೊಡ್ಡ ಸಂಶಯ”ವನ್ನು ಉಂಟು ಮಾಡಲು ಮತ್ತು ಝೆನ್‌ ಅಭ್ಯಾಸದಲ್ಲಿ ವಿದ್ಯಾರ್ಥಿಯ ಪ್ರಗತಿಯನ್ನು ಪರೀಕ್ಷಿಸಲೋಸುಗ ಝೆನ್‌ ಅಭ್ಯಾಸಕ್ರಮದಲ್ಲಿ ಉಪಯೋಗಿಸುವ ’ಒಂದು ಕಥೆ, ಸಂಭಾಷಣೆ ಅಥವ ಹೇಳಿಕೆ’ ಈ ಮಾಲಿಕೆಯಲ್ಲಿ ಇರುವ ಕತೆಗಳಲ್ಲವೂ ಕೋಅನ್‌ಗಳೇ ಆಗಿವೆ.
೨ ಚಾಓ ಚೌ ಎಂಬ ಚೀನೀ ಗುರುವಿನ ಜಪಾನೀ ಹೆಸರು ಜೋಶು. ’ಮು’ ಅನ್ನುವ ಜಪಾನೀ ಪದಕ್ಕೆ ’ಇಲ್ಲ’ ಎಂಬ ಅರ್ಥವೂ ’ಯಾವುದೇ ಒಂದರ ಮೇಲೆ ಅವಧಾನ ಕೇಂದ್ರೀಕರಿಸದೇ ಇರುವ ಮನಃಸ್ಥಿತಿ’ ಎಂಬ ಅರ್ಥವೂ ಇದೆ. ಸಂಭಾಷಣೆಯ ರೂಪದಲ್ಲಿ ಇರುವ ಜೋಶುನ ಮು ಇಂತಿದೆ:
ಒಬ್ಬ ಸನ್ಯಾಸಿ ಬಲು ಶ್ರದ್ಧೆಯಿಂದ ಜೋಶುನನ್ನು ಕೇಳಿದ: “ನಾಯಿಗೆ ಬುದ್ಧ ಸ್ವಭಾವ ಇರುತ್ತದೋ ಇಲ್ಲವೋ?” ಜೋಶು ಹೇಳಿದ: “ಮು!”

ಝೆನ್‌ (Zen) ಕತೆ ೪೧. ಮೊದಲನೆಯ ತತ್ವ
ಕ್ಯೋಟೋನಲ್ಲಿ ಇರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಮಹಾದ್ವಾರದ ಮೇಲೆ “ಮೊದಲನೆಯ ತತ್ವ” ಎಂಬ ಪದಗಳನ್ನು ಕೆತ್ತಿರುವುದು ಗೋಚರಿಸುತ್ತದೆ. ಅಕ್ಷರಗಳು ಅಸಾಮಾನ್ಯ ಅನ್ನಬಹುದಾದಷ್ಟು ದೊಡ್ಡದಾಗಿವೆ. ಆಲಂಕಾರಿಕ ಕೈಬರೆಹವನ್ನು ಆಸ್ವಾದಿಸುವವರೆಲ್ಲರೂ ಅದೊಂದು ಅತ್ಯುತ್ತಮ ಕೃತಿ ಎಂಬುದಾಗಿ ಮೆಚ್ಚಿಕೊಳ್ಳುತ್ತಾರೆ. ಅವು ಇನ್ನೂರು ವರ್ಷಗಳ ಹಿಂದೆ ಗುರು ಕೋಸೆನ್‌ನಿಂದ ರೇಖಿಸಲ್ಪಟ್ಟವು.
ಗುರು ಅವನ್ನು ಬರೆದದ್ದು ಕಾಗದದ ಮೇಲೆ. ಕುಶಲಕರ್ಮಿಗಳು ಅದರ ಕೆತ್ತನೆಯನ್ನು ಮರದಲ್ಲಿ ತಯಾರಿಸುತ್ತಿದ್ದರು. ಆ ಅಕ್ಷರಗಳನ್ನು ಕೋಸೆನ್‌ ರೇಖಿಸುವಾಗ ಅಲಂಕಾರಿಕ ಕೈಬರೆಹಕ್ಕಾಗಿ ಗ್ಯಾಲನ್‌ಗಟ್ಟಳೆ ಶಾಯಿಯನ್ನು ತಯಾರಿಸಿ ಕೊಟ್ಟಿದ್ದ ಮತ್ತು ತನ್ನ ಗುರುವಿನ ಕೃತಿಯನ್ನು ವಿಮರ್ಶಿಸಲು ಎಂದೂ ಹಿಂಜರಿಯದ ಧೈರ್ಯಸ್ಥ ವಿದ್ಯಾರ್ಥಿಯೊಬ್ಬ ಅವನ ಹತ್ತಿರ ಇದ್ದ.
ಕೋಸೆನ್‌ನ ಮೊದಲ ಪ್ರಯತ್ನದ ಫಲಿತಾಂಶವನ್ನು ಅವನು ನೋಡಿ ಹೇಳಿದ: “ಅದು ಚೆನ್ನಾಗಿಲ್ಲ.”
“ಇದು ಹೇಗಿದೆ?” ಇನ್ನೊಂದು ಪ್ರಯತ್ನದ ಕುರಿತು ಕೇಳಿದ ಕೋಸೆನ್‌.
“ಕಳಪೆ. ಹಿಂದಿನದ್ದಕ್ಕಿಂತ ಕೆಟ್ಟದಾಗಿದೆ.” ಅಂದನಾ ವಿದ್ಯಾರ್ಥಿ.
ಎಂಭತ್ತನಾಲ್ಕು ’ಮೊದಲ ತತ್ವಗಳು’ ರಾಶಿ ಆಗುವ ವರೆಗೆ ಕೋಸೆನ್‌ ತಾಳ್ಮೆಯಿಂದ ಒಂದಾದ ನಂತರ ಒಂದರಂತೆ ಕಾಗದದ ಹಾಳೆಗಳಲ್ಲಿ ಬರೆದನಾದರೂ ವಿದ್ಯಾರ್ಥಿ ಯಾವುದನ್ನೂ ಒಪ್ಪಲಿಲ್ಲ.
ಆನಂತರ ಯುವ ವಿದ್ಯಾರ್ಥಿ ಕೆಲವು ಕ್ಷಣಕಾಲ ಹೊರಗೆ ಹೋದಾಗ “ಅವನ ತೀಕ್ಷಣವಾದ ಕಣ್ಣುಗಳಿಂದ ನಾನು ತಪ್ಪಿಸಿಕೊಳ್ಳಲು ಈಗ ಅವಕಾಶ ಸಿಕ್ಕಿತು” ಎಂಬುದಾಗಿ ಕೋಸೆನ್‌ ಆಲೋಚಿಸಿದ ಮತ್ತು ಅನ್ಯಮನಸ್ಕತೆಯಿಂದ ಮುಕ್ತನಾಗಿ ಆತರಾತುರವಾಗಿ ಬರೆದ: “ಮೊದಲನೆಯ ತತ್ವ”
ಒಳಬಂದ ವಿದ್ಯಾರ್ಥಿ ಉದ್ಗರಿಸಿದ: “ಒಂದು ಅತ್ಯುತ್ತಮ ಕೃತಿ”.

ಝೆನ್‌ (Zen) ಕತೆ ೪೨. ವಸತಿಗಾಗಿ ಸಂಭಾಷಣೆಯನ್ನು ವ್ಯಾಪಾರ ಮಾಡುವುದು.
ಝೆನ್‌ ದೇವಾಲಯದಲ್ಲಿ ಈಗಾಗಲೇ ವಾಸಿಸುತ್ತಿರುವವರೊಂದಿಗೆ ಬೌದ್ಧ ಸಿದ್ಧಾಂತಗಳ ಕುರಿತಾದ ಚರ್ಚೆಯಲ್ಲಿ ಗೆದ್ದರೆ, ಯಾರಾದರೂ ಅಲೆಮಾರಿ ಸನ್ಯಾಸಿ ಅಲ್ಲಿಯೇ ಉಳಿಯಬಹುದಿತ್ತು. ಸೋತರೆ ಅವನು ಮುಂದೆ ಸಾಗಬೇಕಾಗಿತ್ತು.
ಜಪಾನಿನ ಉತ್ತರ ಭಾಗದಲ್ಲಿ ಇದ್ದ ಝೆನ್‌ ದೇವಾಲಯದಲ್ಲಿ ಇಬ್ಬರು ಸನ್ಯಾಸೀ ಸಹೋದರರು ಒಟ್ಟಿಗೆ ವಾಸಿಸುತ್ತಿದ್ದರು. ಅವರ ಪೈಕಿ ಹಿರಿಯವನು ಸುಶಿಕ್ಷಿತನಾಗಿದ್ದ. ಕಿರಿಯವನು ಪೆದ್ದನೂ ಒಂದು ಕಣ್ಣಿನವನೂ ಆಗಿದ್ದ.
ಅಲ್ಲಿಗೆ ಬಂದ ಅಲೆಮಾರಿ ಸನ್ಯಾಸಿಯೊಬ್ಬ ದಿವ್ಯ ಬೋಧನೆಗಳ ಕುರಿತಾಗಿ ತನ್ನೊಡನೆ ಚರ್ಚಿಸುವಂತೆ ಅವರಿಗೆ ಸವಾಲು ಹಾಕಿದ.
ಇಡೀ ದಿನ ಅಧ್ಯಯನ ಮಾಡಿ ಸುಸ್ತಾಗಿದ್ದ ಹಿರಿಯವನು ಕಿರಿಯವನಿಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಹೇಳಿದ, “ಹೋಗು, ಮೌನವಾಗಿ ಸಂಭಾಷಿಸುವಂತೆ ವಿನಂತಿಸು.” ಎಂಬುದಾಗಿ ಎಚ್ಚರಿಕೆ ಕೊಟ್ಟು ಕಳುಹಿಸಿದ.
ಕಿರಿಯವನೂ ಅಪರಿಚಿತನೂ ಪೂಜಾಸ್ಥಳಕ್ಕೆ ಹೋಗಿ ಕುಳಿತರು.
ಸ್ವಲ್ಪ ಕಾಲದಲ್ಲೇ ಪಯಣಿಗ ಎದ್ದು ಒಳಗಿದ್ದ ಹಿರಿಯವನ ಹತ್ತಿರ ಹೋಗಿ ಹೇಳಿದ: “ನಿನ್ನ ಕಿರಿಯ ಸಹೋದರನೊಬ್ಬ ಅದ್ಭುತ ವ್ಯಕ್ತಿ. ಅವನು ನನ್ನನ್ನು ಸೋಲಿಸಿದ.”
ಹಿರಿಯವ ವಿನಂತಿ ಮಾಡಿದ: “ನಡೆದ ಸಂಭಾಷಣೆಯನ್ನು ನನಗೆ ತಿಳಿಸು.”
ಪ್ರಯಾಣಿಕ ಇಂತು ವಿವರಿಸಿದ: “ ಮೊದಲು ನಾನು ಒಂದು ಬೆರಳನ್ನು ತೋರಿಸಿದೆ. ಅದು ಮಹಾಜ್ಞಾನಿ ಬುದ್ಧನನ್ನು ಪ್ರತಿನಿಧಿಸುತ್ತಿತ್ತು. ಅವನು ಬುದ್ಧ ಮತ್ತು ಅವನ ಬೋಧನೆಯನ್ನು ಪ್ರತಿನಿಧಿಸಲೋಸುಗ ಎರಡು ಬೆರಳುಗಳನ್ನು ತೋರಿಸಿದ. ಬುದ್ಧ, ಅವನ ಬೋಧನೆ ಮತ್ತು ಶಿಷ್ಯರು ಸಮರಸವುಳ್ಳ ಜೀವನ ನಡೆಸುವುದನ್ನು ಪ್ರತಿನಿಧಿಸಲೋಸುಗ ನಾನು ಮೂರು ಬೆರಳುಗಳನ್ನು ತೋರಿಸಿದೆ. ಅದಕ್ಕೆ ಉತ್ತರವಾಗಿ ಈ ಮೂರೂ ಒಂದೇ ಅರಿವಿನಿಂದ ಮೂಡಿಬಂದವು ಎಂಬುದನ್ನು ಸೂಚಿಸುವ ಸಲುವಾಗಿ ತನ್ನ ಮುಷ್ಟಿಯನ್ನು ನನ್ನ ಮುಖದ ಎದುರು ಆಡಿಸಿದ. ಇಂತು ಅವನೇ ಗೆದ್ದದ್ದರಿಂದ ನನಗೆ ಇಲ್ಲಿ ತಂಗುವ ಹಕ್ಕು ಇಲ್ಲ.” ಇಂತೆಂದ ಆ ಪ್ರಯಾಣಿಕ ಅಲ್ಲಿಂದ ಮುಂದಕ್ಕೆ ಸಾಗಿದ.
“ಅವನೆಲ್ಲಿ ಹೋದ?” ಎಂಬುದಾಗಿ ಕೇಳುತ್ತಾ ಕಿರಿಯವ ಹಿರಿಯವನ ಹತ್ತಿರಕ್ಕೆ ಓಡಿ ಬಂದ.
“ನೀನು ಅವನನ್ನು ಸೋಲಿಸಿದೆ ಎಂಬುದಾಗಿ ತಿಳಿಯಿತು.”
“ಸೋಲಿಸಿದೆನಾ? ಹಾಗೇನೂ ಇಲ್ಲ. ಅವನನ್ನು ಹಿಡಿದು ಚೆನ್ನಾಗಿ ಹೊಡೆಯುತ್ತೇನೆ.”
ಹಿರಿಯವ ಕೇಳಿದ: “ಚರ್ಚೆಯ ವಿಷಯ ನನಗೆ ಹೇಳು.”
“ನನಗೆ ಒಂದೇ ಒಂದು ಕಣ್ಣು ಇದೆ ಎಂಬುದನ್ನು ಪರೋಕ್ಷವಾಗಿ ಸೂಚಿಸಿ ಅವಮಾನಿಸಲೋಸುಗ ನನ್ನನ್ನು ಕಂಡ ತಕ್ಷಣ ಅವನು ಒಂದು ಬೆರಳು ತೋರಿಸಿದ, ಅವನು ಅಪರಿಚಿತನಾದುದರಿಂದ ಮರ್ಯಾದೆಯಿಂದ ವ್ಯವಹರಿಸೋಣ ಎಂಬುದಾಗಿ ಆಲೋಚಿಸಿ ಅವನಿಗೆ ಎರಡು ಕಣ್ಣಗಳೂ ಇರುವುದಕ್ಕೆ ಅಭಿನಂದಿಸಲೋಸುಗ ಎರಡು ಬೆರಳುಗಳನ್ನು ತೋರಿಸಿದೆ. ಅದಕ್ಕೆ ಆ ಅಸಭ್ಯ ದರಿದ್ರ ಮನುಷ್ಯ ಮೂರು ಬೆರಳು ತೋರಿಸಿ ನಮ್ಮಿಬ್ಬರಿಗೂ ಒಟ್ಟು ಇರುವುದೇ ಮೂರುಕಣ್ಣುಗಳು ಎಂಬುದಾಗಿ ಸೂಚಿಸಿದ. ಅದರಿಂದ ನನಗೆ ಬಹಳ ರೇಗಿ ಹೋಯಿತು ಮತ್ತು ಅವನಿಗೆ ಮುಷ್ಟಿಯಿಂದ ಗುದ್ದಲು ಕೈ ಎತ್ತಿದೆ. ಅಷ್ಟರಲ್ಲಿಯೇ ಅವನು ಹೊರಕ್ಕೋಡಿದ. ಅಲ್ಲಿಗೆ ಅದು ಮುಗಿಯಿತು!”

ಝೆನ್‌ (Zen) ಕತೆ ೪೩. ನಿಮ್ಮ ಸ್ವಂತದ ಭಂಡಾರವನ್ನು ತೆರೆಯಿರಿ
ಗುರು ಬಾಸೋನನ್ನು ಡೈಜು ಚೀನಾದಲ್ಲಿ ಭೇಟಿ ಮಾಡಿದ.
ಬಾಸೋ ಕೇಳಿದ: “ನೀನು ಏನನ್ನು ಹುಡುಕುತ್ತಿದ್ದೀ?”
ಡೈಜು ಉತ್ತರಿಸಿದ: “ನಿಜವಾದ ಜ್ಞಾನ”
ಬಾಸೋ ಕೇಳಿದ: “ನಿನ್ನದೇ ಸ್ವಂತದ ಭಂಡಾರವಿದೆ. ಹೊರಗೇಕೆ ಹುಡುಕುವೆ?”
ಡೈಜು ವಿಚಾರಿಸಿದ: “ಎಲ್ಲಿದೆ ನನ್ನ ಸ್ವಂತದ ಭಂಡಾರ?”
ಬಾಸೋ ಉತ್ತರಿಸಿದ: “ನೀನು ಕೇಳುತ್ತಿರುವುದು ನಿನ್ನ ಭಂಡಾರವನ್ನು.”
ಡೈಜುಗೆ ಮಹದಾನಂದವಾಯಿತು! ತದನಂತರ ಅವನು ತನ್ನ ಸ್ನೇಹಿತರನ್ನು ಒತ್ತಾಯಿಸುತ್ತಿದ್ದ: “ನಿಮ್ಮ ಭಂಡಾರವನ್ನು ತೆರೆಯಿರಿ ಮತ್ತು ಅದರಲ್ಲಿ ಇರುವ ಸಂಪತ್ತನ್ನು ಉಪಯೋಗಿಸಿ.”

ಝೆನ್‌ (Zen) ಕತೆ ೪೪. ನೀರೂ ಇಲ್ಲ, ಚಂದಿರನೂ ಇಲ್ಲ
ಸನ್ಯಾಸಿನಿ ಚಿಯೋನೋ ಎಂಗಾಕುವಿನ ಗುರು ಬುಕ್ಕೋ ಎಂಬುವನ ಮಾರ್ಗದರ್ಶನದಲ್ಲಿ ಝೆನ್‌ ಅಧ್ಯಯನ ಮಾಡುತ್ತಿದ್ದಾಗ ಸುದೀರ್ಘಕಾಲ ಧ್ಯಾನದ ಫಲಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
ಕೊನೆಗೊಂದು ಬೆಳದಿಂಗಳ ರಾತ್ರಿ ಬಿದಿರಿಗೆ ಕಟ್ಟಿದ್ದ ಹಳೆಯ ಬಕೀಟಿನಲ್ಲಿ ನೀರನ್ನು ಒಯ್ಯುತ್ತಿದ್ದಳು. ಬಿದಿರು ಮುರಿಯಿತು ಮತ್ತು ಬಕೀಟಿನ ತಳ ಕಳಚಿ ಕೆಳಗೆ ಬಿತ್ತು. ಆ ಕ್ಷಣದಲ್ಲಿ ಚಿಯೋನೋ ವಿಮುಕ್ತಿಗೊಳಿಸಲ್ಪಟ್ಟಳು!
ಅದರ ಸ್ಮರಣಾರ್ಥ ಅವಳೊಂದು ಪದ್ಯ ಬರೆದಳು:
ಬಿದಿರ ಪಟ್ಟಿ ದುರ್ಬಲವಾಗುತ್ತಿದ್ದದ್ದರಿಂದ ಮತ್ತು ಮುರಿಯುವುದರಲ್ಲಿದ್ದದ್ದರಿಂದ
ಹಳೆಯ ಬಕೀಟನ್ನು ಉಳಿಸಲು ನಾನು ನಾನಾ ರೀತಿಯಲ್ಲಿ ಪ್ರಯತ್ನಿಸಿದೆ,
ಅದರ ತಳ ಬೀಳುವ ವರೆಗೆ.
ಬಕೀಟಿನಲ್ಲಿ ಒಂದಿನಿತೂ ನೀರಿಲ್ಲ! ನೀರಿನಲ್ಲಿ ಚಂದಿರನೂ ಇಲ್ಲ!

ಝೆನ್‌ (Zen) ಕತೆ ೪೫. ಭೇಟಿಚೀಟಿ
ಮೈಜಿ ಯುಗದ ಖ್ಯಾತ ಝೆನ್‌ ಗುರು ಕೈಚುರವರು ಕ್ಯೋಟೋದಲ್ಲಿದ್ದ ಟೊಫುಕು ಪ್ರಾರ್ಥನಾ ಮಂದಿರದ ಮುಖ್ಯಸ್ಥರಾಗಿದ್ದರು. ಒಂದು ದಿನ ಕ್ಯೋಟೋದ ರಾಜ್ಯಪಾಲರು ಅವರನ್ನು ಪ್ರಥಮ ಬಾರಿ ಭೇಟಿ ಮಾಡಲು ಬಂದರು.
ರಾಜ್ಯಪಾಲರ ಸೇವಕನೊಬ್ಬ ಅವರ ಭೇಟಿಚೀಟಿಯನ್ನು ಗುರುಗಳಿಗೆ ಕೊಟ್ಟನು. ಅದರಲ್ಲಿ ಇಂತು ಬರೆದಿತ್ತು: ಕಿಟಗಾಕಿ, ಕ್ಯೋಟೋದ ರಾಜ್ಯಪಾಲ.
“ಇಂಥ ವ್ಯಕ್ತಿಗಳೊಂದಿಗೆ ನನಗೇನೂ ಕೆಲಸವಿಲ್ಲ. ಅವನನ್ನು ಇಲ್ಲಿಂದ ಹೊರಹೋಗಲು ಹೇಳು” ಸೇವಕನಿಗೆ ಆಜ್ಞಾಪಿಸಿದರು ಗುರುಗಳು.
ಸೇವಕ ಅಧೈರ್ಯದಿಂದ ಭೇಟಿಚೀಟಿಯನ್ನು ಹಿಂದಕ್ಕೆ ತೆಗೆದುಕೊಂಡು ಹೋದ. “ಅದು ನನ್ನದೇ ತಪ್ಪು” ಎಂಬುದಾಗಿ ಹೇಳಿದ ರಾಜ್ಯಪಾಲರು ಒಂದು ಪೆನ್ಸಿಲ್‌ನಿಂದ ’ಕ್ಯೋಟೋದ ರಾಜ್ಯಪಾಲ’ ಎಂಬ ಪದಗಳು ಗೋಚರಿಸದಂತೆ ಗೀಚಿದರು.
“ನಿನ್ನ ಗುರುಗಳನ್ನು ಪುನಃ ಕೇಳು.”
“ಓ, ಅದು ಕಟಗಾಕಿಯೋ” ಭೇಟಿಚೀಟಿಯನ್ನು ನೋಡಿ ಉದ್ಗರಿಸಿದರು ಗುರುಗಳು. “ನಾನು ಅವನನ್ನು ನೋಡಬಯಸುತ್ತೇನೆ.”

ಝೆನ್‌ (Zen) ಕತೆ ೪೬. ಅಂಗುಲ ಸಮಯ ಅಡಿ ರತ್ನಮಣಿ.
ಶ್ರೀಮಂತ ಯಜಮಾನನೊಬ್ಬ ಝೆನ್‌ ಗುರು ಟಾಕುಆನ್‌ ಅನ್ನು ತಾನು ಹೇಗೆ ಸಮಯ ಕಳೆಯಬಹುದೆಂಬುದರ ಕುರಿತು ಸಲಹೆ ನೀಡುವಂತೆ ಕೋರಿದ. ತನ್ನ ಕಾರ್ಯಾಲಯಕ್ಕೆ ಹಾಜರಾಗಿ ಇತರರಿಂದ ಗೌರವದ ಕಾಣಿಕೆ ಸ್ವೀಕರಿಸಲೋಸುಗ ಠೀವಿಯಿಂದ ಕುಳಿತುಕೊಳ್ಳುವುದರಿಂದ ದಿನಗಳು ಬಲು ಉದ್ದವಾಗಿರುವಂತೆ ಅವನಿಗೆ ಭಾಸವಾಗುತ್ತಿತ್ತು.
ಟಾಕುಆನ್ ಆ ಮನುಷ್ಯನಿಗೆ ಎಂಟು ಚೀನೀ ಅಕ್ಷರಗಳನ್ನು ಬರೆದು ಕೊಟ್ಟನು:
ಈ ದಿನ ಎರಡು ಬಾರಿ ಇಲ್ಲ
ಅಂಗುಲ ಸಮಯ ಅಡಿ ರತ್ನಮಣಿ.
ಈ ದಿನ ಪುನಃ ಬರುವುದಿಲ್ಲ.
ಪ್ರತೀ ಕ್ಷಣವೂ ಒಂದು ಅಮೂಲ್ಯ ರತ್ನಮಣಿಯಷ್ಟು ಬೆಲೆಯುಳ್ಳದ್ದು.

ಝೆನ್‌ (Zen) ಕತೆ ೪೭. ಮೊಕುಸೆನ್‌ನ ಕೈ
ಟಾಂಬಾ ಪ್ರಾಂತ್ಯದ ದೇವಾಲಯವೊಂದರಲ್ಲಿ ಮೊಕುಸೆನ್‌ ಹಿಕಿ ವಾಸಿಸುತ್ತಿದ್ದ. ಅವನ ಒಬ್ಬ ಅನುಯಾಯಿ ತನ್ನ ಪತ್ನಿಯ ಜಿಪುಣತನದ ಕುರಿತು ಅತೃಪ್ತಿ ವ್ಯಕ್ತಪಡಿಸಿದ.
ಮೊಕುಸೆನ್‌ ಅನುಯಾಯಿಯ ಪತ್ನಿಯನ್ನು ಭೇಟಿ ಮಾಡಿ ತನ್ನ ಬಿಗಿ ಮುಷ್ಟಿಯನ್ನು ಅವಳ ಮುಖದ ಮುಂದೆ ಹಿಡಿದ.
“ಏನು ಇದರ ಅರ್ಥ?” ಆಶ್ಚರ್ಯಚಕಿತಳಾದ ಆ ಹೆಂಗಸು ಕೇಳಿದಳು.
ಅವನು ಕೇಳಿದ: “ನನ್ನ ಮುಷ್ಟಿ ಯಾವಾಗಲೂ ಹೀಗೆಯೇ ಇದ್ದರೆ ಅದನ್ನು ನೀನು ಏನೆಂದು ಕರೆಯುವೆ?”
ಅವಳು ಇಂತು ಉತ್ತರಿಸಿದಳು: “ವಿರೂಪಗೊಂಡ ಕೈ”
ತದನಂತರ ಮೊಕುಸೆನ್ ತನ್ನ ಮುಷ್ಟಿ ಬಿಡಿಸಿ ಬೆರಳುಗಳನ್ನು ಅಗಲವಾಗಿ ಹರಡಿ ಅಂಗೈಯನ್ನು ತೋರಿಸಿ ಕೇಳಿದ: “ಒಂದು ವೇಳೆ ಇದು ಯಾವಾಗಲೂ ಹೀಗೆಯೇ ಇರುವುದಾದರೆ, ಅದಕ್ಕೇನೆನ್ನುವೆ?”
“ಇನ್ನೊಂದು ರೀತಿಯ ವಿರೂಪತೆ” ಅಂದಳು ಅವಳು.
“ಅಷ್ಟನ್ನು ನೀನು ತಿಳಿದುಕೊಂಡರೆ, ನೀನೊಬ್ಬಳು ಒಳ್ಳೆಯ ಪತ್ನಿಯಾಗುವೆ” ಇಂತು ತೀರ್ಪು ನೀಡಿದ ಮೊಕುಸೆನ್‌ ಅಲ್ಲಿಂದ ತೆರಳಿದ.
ಮೊಕುಸೆನ್‌ನ ಆ ಭೇಟಿಯ ನಂತರ ಅವಳು ತನ್ನ ಪತಿ ’ಹಂಚಲೂ ಉಳಿತಾಯ ಮಾಡಲೂ’ ನೆರವಾದಳು.

ಝೆನ್‌ (Zen) ಕತೆ ೪೮. ಅವನ ಜೀವಿತಾವಧಿಯಲ್ಲಿ ಒಂದು ಮುಗುಳ್ನಗು
ಭೂಮಿಯ ಮೇಲೆ ಅವನ ಕೊನೆಯ ದಿನದ ವರೆಗೆ ಮೊಕುಗೆನ್‌ ಮುಗುಳ್ನಗು ನಕ್ಕಿದ್ದು ಯಾರಿಗೂ ಗೊತ್ತೇ ಇಲ್ಲ. ಸಾಯುವ ಸಮಯ ಸಮೀಪಿಸಿದಾಗ ಆತ ತನ್ನ ವಿಧೇಯ ಶಿಷ್ಯರಿಗೆ ಇಂತೆಂದ: “ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನೀವು ನನ್ನ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದೀರಿ. ನಿಮ್ಮ ಪ್ರಕಾರ ಝೆನ್‌ನ ನಿಜವಾದ ಅರ್ಥ ಏನು ಎಂಬುದನ್ನು ನನಗೆ ತೋರಿಸಿ. ಯಾರು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತಾರೋ ಅವರು ನನ್ನ ಉತ್ತರಾಧಿಕಾರಿಯಾಗುತ್ತಾರೆ. ಆತ ನನ್ನ ನಿಲುವಂಗಿ ಮತ್ತು ಬಟ್ಟಲನ್ನು ಪಡೆಯುತ್ತಾನೆ.”
ಮೊಕುಗೆನ್‌ನ ಕಠೋರ ಮುಖವನ್ನು ಪ್ರತಿಯೊಬ್ಬರೂ ಗಮನವಿಟ್ಟು ನೋಡುತ್ತಿದ್ದರೇ ವಿನಾ ಯಾರೊಬ್ಬರೂ ಉತ್ತರಿಸಲಿಲ್ಲ.
ಗುರುವಿನೊಂದಿಗೆ ಬಹು ಕಾಲದಿಂದಲೂ ಇದ್ದ ಶಿಷ್ಯ ಎಂಚೋ ಹಾಸಿಗೆಯನ್ನು ಸಮೀಪಿಸಿದ. ಔಷಧಿಯ ಬಟ್ಟಲನ್ನು ಕೆಲವೇ ಇಂಚುಗಳಷ್ಟು ಮುಂದೆ ತಳ್ಳಿದ. ಗುರುವಿನ ಪ್ರಶ್ನೆಗೆ ಇದು ಅವನ ಉತ್ತರವಾಗಿತ್ತು.
ಗುರುವಿನ ಮುಖ ಇನ್ನೂ ಕಠೋರವಾಯಿತು. “ನೀನು ತಿಳಿದುಕೊಂಡದ್ದು ಇಷ್ಟೇನಾ?”
ಎಂಚೋ ಕೈ ಮುಂದೆ ಚಾಚಿ ಬಟ್ಟಲನ್ನು ಹಿಂದಕ್ಕೆ ಸರಿಸಿದ.
ಮೊಕುಗೆನ್ ಮುಖದಲ್ಲಿ ಸುಂದರವಾದ ನಗು ಕಾಣಿಸಿಕೊಂಡಿತು. “ಏ ಪೋಕರಿ, ನೀನು ಹತ್ತು ವರ್ಷಗಳಿಂದ ನನ್ನೊಡನೆ ಕೆಲಸ ಮಾಡಿದ್ದೀಯಾದರೂ ನನ್ನ ಪೂರ್ಣ ದೇಹವನ್ನು ನೋಡಿಲ್ಲ. ನನ್ನ ನಿಲುವಂಗಿ ಮತ್ತು ಬಟ್ಟಲನ್ನು ತೆಗೆದುಕೋ. ಅವು ನಿನ್ನವು.”

ಝೆನ್‌ (Zen) ಕತೆ ೪೯. ದೂಳು ತುಂಬಿದ ರಸ್ತೆಯಲ್ಲಿ ಆಕಸ್ಮಿಕವಾಗಿ ವಜ್ರವನ್ನು ಆವಿಷ್ಕರಿಸುವುದು
ಗೂಡೋ ಆ ಕಾಲದ ಚಕ್ರವರ್ತಿಯ ಗುರುವಾಗಿದ್ದರೂ ಅಲೆಮಾರೀ ಬೈರಾಗಿಯಂತೆ ಏಕಾಂಗಿಯಾಗಿ ಪ್ರಯಾಣ ಮಾಡುವ ಅಭ್ಯಾಸ ಉಳ್ಳವರಾಗಿದ್ದರು. ಒಂದು ಬಾರಿ ಎಲ್ಲೆಲ್ಲಿಯೋ ಸುತ್ತಿ ಸರ್ಕಾರದ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಎಡೋಗೆ ಮರಳುತ್ತಿರುವಾಗ ಟಕೆನಾಕಾ ಎಂಬ ಹಳ್ಳಿಯನ್ನು ಸಮೀಪಿಸಿದರು. ಆಗ ಸಂಜೆಯಾಗಿತ್ತು, ಜೋರಾಗಿ ಮಳೆ ಸುರಿಯುತ್ತಿತ್ತು. ತತ್ಪರಿಣಾಮವಾಗಿ ಸಂಪೂರ್ಣವಾಗಿ ತೊಯ್ದಿದ್ದ ಗೂಡೋವಿನ ಒಣಹುಲ್ಲಿನ ಚಪ್ಪಲಿಗಳು ಹರಿದುಹೋದವು. ಹಳ್ಳಿಯ ಸಮೀಪದಲ್ಲಿ ಇದ್ದ ಹೊಲಮನೆಯೊಂದರ ಕಿಟಕಿಯಲ್ಲಿ ೪-೫ ಜೋಡಿ ಚಪ್ಪಲಿಗಳು ಇರುವುದನ್ನು ಗಮನಿಸಿ, ಅವುಗಳ ಪೈಕಿ ಒಂದು ಜೊತೆ ಒಣ ಚಪ್ಪಲಿಗಳನ್ನು ಕೊಳ್ಳಲು ತೀರ್ಮಾನಿಸಿದರು.
ಚಪ್ಪಲಿಗಳನ್ನು ನೀಡಿದ ಮನೆಯೊಡತಿಯು ಪ್ರಯಾಣಿಕ ಸಂಪೂರ್ಣವಾಗಿ ಒದ್ದೆಯಾಗಿರುವುದನ್ನು ಗಮನಿಸಿ ರಾತ್ರಿಯನ್ನು ತಮ್ಮ ಮನೆಯಲ್ಲಿಯೇ ಕಳೆಯಬೇಕೆಂದು ವಿನಂತಿಸಿಕೊಂಡಳು. ಗೂಡೋ ಅದಕ್ಕೆ ಒಪ್ಪಿಕೊಂಡು ಆಕೆಗೆ ಧನ್ಯವಾದಗಳನ್ನು ಅರ್ಪಿಸಿದರು. ಮನೆಯನ್ನು ಪ್ರವೇಶಿಸಿದ ಗೂಡೋ ಕುಟುಂಬದ ಪ್ರಾರ್ಥನಾ ಸ್ಥಳದ ಮುಂದೆ ಶ್ಲೋಕವೊಂದನ್ನು ಪಠಿಸಿದರು. ತದನಂತರ ಅವರನ್ನು ಮನೆಯೊಡತಿಯ ತಾಯಿ ಮತ್ತು ಮಕ್ಕಳಿಗೆ ಪರಿಚಯಿಸಲಾಯಿತು. ಇಡೀ ಕುಟುಂಬ ವಿಪರೀತ ನಿರಾಶಾಭಾವ ತಳೆದಿರುವುದನ್ನು ಗಮನಿಸಿದ ಗೂಡೋ ತೊಂದರೆ ಏನೆಂಬುದನ್ನು ವಿಚಾರಿಸಿದರು.
ಅದಕ್ಕೆ ಮನೆಯೊಡತಿ ಇಂತೆಂದಳು: “ನನ್ನ ಗಂಡನೊಬ್ಬ ಜೂಜುಕೋರ ಮತ್ತು ಕುಡುಕ. ಜೂಜಿನಲ್ಲಿ ಗೆದ್ದಾಗ ಕುಡಿದು ಬಯ್ಯಲಾರಂಭಿಸುತ್ತಾನೆ. ಸೋತಾಗ ಇತರರಿಂದ ಹಣವನ್ನು ಸಾಲವಾಗಿ ಪಡೆಯುತ್ತಾನೆ. ಕೆಲವೊಮ್ಮೆ ಅತಿಯಾಗಿ ಕುಡಿದು ಅಮಲೇರಿದಾಗ ಮನೆಗೇ ಬರುವುದಿಲ್ಲ. ನಾನೇನು ಮಾಡಲಿ?”
“ನಾನು ಅವನಿಗೆ ಸಹಾಯ ಮಾಡುತ್ತೇನೆ” ಅಂದರು ಗೂಡೋ. “ಈ ಹಣ ತೆಗೆದುಕೊಳ್ಳಿ. ಒಂದು ಗ್ಯಾಲನ್‌ ಒಳ್ಳೆಯ ದ್ರಾಕ್ಷಾರಸ ಮತ್ತು ತಿನ್ನಲು ಏನಾದರೂ ಒಳ್ಳೆಯ ತಿನಿಸು ತಂದು ಕೊಡಿ. ಆ ನಂತರ ನೀವು ವಿಶ್ರಮಿಸಿ. ನಾನು ನಿಮ್ಮ ಪ್ರಾರ್ಥನಾ ಸ್ಥಳದ ಮುಂದೆ ಧ್ಯಾನ ಮಾಡುತ್ತಿರುತ್ತೇನೆ.”
ಸುಮಾರು ಮಧ್ಯರಾತ್ರಿಯ ವೇಳೆಗೆ ಕುಡಿದು ಅಮಲೇರಿದ್ದ ಆಕೆಯ ಗಂಡ ಮನೆಗೆ ಹಿಂದಿರುಗಿ ಅಬ್ಬರಿಸಿದ: “ಏ ಹೆಂಡತಿ, ನಾನು ಮನೆಗೆ ಬಂದಿದ್ದೇನೆ. ನನಗೇನಾದರೂ ತಿನ್ನಲು ಕೊಡುವಿಯೋ?”
ಗೂಡೋ ಅದಕ್ಕೆ ಇಂತು ಹೇಳಿದ: “ನನ್ನ ಹತ್ತಿರ ನಿನಗಾಗಿ ಏನೋ ಸ್ವಲ್ಪ ಇದೆ. ನಾನು ಮಳೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ನಿನ್ನ ಹೆಂಡತಿ ರಾತ್ರಿ ಇಲ್ಲಿ ತಂಗುವಂತೆ ಹೇಳಿದಳು. ಅದಕ್ಕೆ ಪ್ರತಿಫಲವಾಗಿ ನಾನು ಸ್ವಲ್ಪ ದ್ರಾಕ್ಷಾರಸ ಮತ್ತು ಮೀನು ತಂದಿದ್ದೇನೆ. ಅದನ್ನು ನೀನೂ ತೆಗೆದುಕೊಳ್ಳಬಹುದು.”
ಗಂಡನಿಗೆ ಆನಂದವಾಯಿತು. ತಕ್ಷಣವೇ ಅವನು ದ್ರಾಕ್ಷಾರಸ ಕುಡಿದು ನೆಲದ ಮೇಲೆಯೇ ಮಲಗಿದ. ಅವನ ಸಮೀಪದಲ್ಲಿಯೇ ಗೂಡೋ ಧ್ಯಾನ ಮಾಡುತ್ತಾ ಕುಳಿತ.
ಬೆಳಗ್ಗೆ ಎದ್ದ ಗಂಡ ಹಿಂದಿನ ರಾತ್ರಿ ನಡೆದದ್ದನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದ. ಇನ್ನೂ ಧ್ಯಾನ ಮಾಡುತ್ತಿದ್ದ ಗೂಡೋವನ್ನು ಕೇಳಿದ: “ಯಾರು ನೀನು? ಎಲ್ಲಿಂದ ಬಂದೆ?”
ಝೆನ್ ಗುರು ಉತ್ತರಿಸಿದ: “ನಾನು ಕ್ಯೋಟೋದ ಗೂಡೋ. ಎಡೋಗೆ ಹೋಗುತ್ತಿದ್ದೆ”
ಆ ಮನುಷ್ಯ ನಾಚಿಕೆಯಿಂದ ತಲೆ ತಗ್ಗಿಸಿದ. ಅಪರಿಮಿತವಾಗಿ ತನ್ನ ಚಕ್ರವರ್ತಿಯ ಗುರುವಿನ ಕ್ಷಮೆ ಯಾಚಿಸಿದ.
ಗೂಡೋ ನಸುನಕ್ಕು ವಿವರಿಸಿದ: “ ಈ ಜೀವನದಲ್ಲಿ ಪ್ರತಿಯೊಂದೂ ನಶ್ವರ. ಜೀವನ ಅಲ್ಪ ಕಾಲಾವಧಿಯದ್ದು. ನೀನು ಕುಡಿಯುತ್ತಾ ಮತ್ತು ಜೂಜಾಡುತ್ತಾ ಇದ್ದರೆ ಬೇರೇನನ್ನೂ ಸಾಧಿಸಲು ನಿನಗೆ ಸಮಯವೇ ಉಳಿಯುವುದಿಲ್ಲ. ನಿನ್ನ ಕುಟುಂಬದ ನರಳುವಿಕೆಗೂ ನೀನೇ ಕಾರಣನಾಗುವೆ.”
ಕನಸಿನಿಂದ ಎಚ್ಚರಗೊಂಡಂತೆ ಗಂಡನ ಅರಿವು ಜಾಗೃತವಾಯಿತು. “ನೀವು ಹೇಳಿದ್ದು ಸರಿಯಾಗಿದೆ,” ಅವನು ಉದ್ಗರಿಸಿದ. “ಇಷ್ಟು ಅದ್ಭುತವಾದ ಬೋಧನೆಗೆ ಪ್ರತಿಫಲವಾಗಿ ನಾನೇನು ತಾನೇ ಸಲ್ಲಿಸಬಲ್ಲೆ! ನಿಮ್ಮನ್ನು ಬೀಳ್ಕೊಡಲೋಸುಗ ಸ್ವಲ್ಪ ದೂರ ನಿಮ್ಮ ವಸ್ತುಗಳನ್ನು ನಾನು ಹೊತ್ತು ತರಲು ಅನುಮತಿ ನೀಡಿ.”
“ನಿನ್ನ ಇಚ್ಛೆಯಂತೆಯೇ ಆಗಲಿ,” ಒಪ್ಪಿಗೆ ಸೂಚಿಸದರು ಗೂಡೋ.
ಇಬ್ಬರೂ ನಡೆಯಲಾರಂಭಿಸಿದರು. ಮೂರು ಮೈಲಿ ದೂರ ಕ್ರಮಿಸಿದ ನಂತರ ಹಿಂದಿರುಗಲು ಅವನಿಗೆ ಸೂಚಿಸಿದರು ಗೂಡೋ. “ಇನ್ನೊಂದೈದು ಮೈಲಿ ಮಾತ್ರ,” ಆತ ಬೇಡಿಕೊಂಡ. ಈರ್ವರೂ ಪ್ರಯಾಣ ಮುಂದುವರಿಸಿದರು.
“ಈಗ ನೀನು ಹಿಂದಿರುಗಬಹುದು,” ಸಲಹೆ ನೀಡಿದರು ಗೂಡೋ
“ಇನ್ನೊಂದು ಹತ್ತು ಮೈಲಿಗಳ ನಂತರ,” ಉತ್ತರಿಸಿದ ಆತ.
ಹತ್ತು ಮೈಲಿ ಕ್ರಮಿಸಿದ ನಂತರ “ಹಿಂದಿರುಗಿ ಹೋಗು,” ಎಂಬುದಾಗಿ ಹೇಳಿದರು ಗೂಡೋ.
“ನಾನು ನನ್ನ ಉಳಿದ ಜೀವಮಾನವಿಡೀ ನಿಮ್ಮನ್ನು ಅನುಸರಿಸುತ್ತೇನೆ,” ಘೋಷಿಸಿದ ಆತ.

ಝೆನ್‌ (Zen) ಕತೆ ೫೦. ಪುಷ್ಪ ವೃಷ್ಟಿ
ಸುಭೂತಿ ಬುದ್ಧನ ಶಿಷ್ಯನಾಗಿದ್ದ. ಶೂನ್ಯತೆಯ ಶಕ್ತಿಯನ್ನು ತಿಳಿಯುವುದರಲ್ಲಿ ಆತ ಯಶಸ್ವಿಯಾಗಿದ್ದ. ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆಗಳೊಂದಿಗೆ ಶೂನ್ಯತೆಗೆ ಇರುವ ಸಂಬಂಧದ ಹೊರತಾಗಿ ಏನೂ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ದೃಷ್ಟಿಕೋನ ಇದು.
ಒಂದು ದಿನ ಮಹೋನ್ನತ ಶೂನ್ಯತೆಯ ಚಿತ್ತಸ್ಥಿತಿಯಲ್ಲಿ ಸುಭೂತಿ ಒಂದು ಮರದ ಕೆಳಗೆ ಕುಳಿತಿದ್ದ. ಅವನ ಸುತ್ತಲೂ ಹೂವುಗಳು ಬೀಳಲಾರಂಭಿಸಿದವು.
“ಶೂನ್ಯತೆಯ ಕುರಿತಾದ ನಿನ್ನ ಪ್ರವಚನಕ್ಕಾಗಿ ನಾವು ನಿನ್ನನ್ನು ಶ್ಲಾಘಿಸುತ್ತಿದ್ದೇವೆ” ಎಂಬುದಾಗಿ ಪಿಸುಗುಟ್ಟಿದರು ದೇವತೆಗಳು.
“ಶೂನ್ಯತೆಯ ಕುರಿತಾಗಿ ನಾನು ಮಾತನಾಡಿಯೇ ಇಲ್ಲ” ಪ್ರತಿಕ್ರಿಯಿಸಿದ ಸುಭೂತಿ.
“ನೀನು ಶೂನ್ಯತೆಯ ಕುರಿತು ಮಾತನಾಡಲಿಲ್ಲ, ನಾವು ಶೂನ್ಯತೆಯನ್ನು ಕೇಳಲೂ ಇಲ್ಲ. ಇದೇ ನಿಜವಾದ ಶೂನ್ಯತೆ” ಅಂದರು ದೇವತೆಗಳು. ಮಳೆ ಸುರಿದಂತೆ ಸುಭೂತಿಯ ಮೇಲೆ ಪುಷ್ಪವೃಷ್ಟಿ ಆಯಿತು.

Advertisements
This entry was posted in ಝೆನ್‌ (Zen) ಕತೆಗಳು and tagged . Bookmark the permalink.

1 Response to ಝೆನ್ (Zen) ಕತೆಗಳು: ಸಂಚಿಕೆ ೨

  1. niranjan kumar ಹೇಳುತ್ತಾರೆ:

    thank you sir for sending the zen stories

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s