ಝೆನ್ (Zen) ಕತೆಗಳು: ಸಂಚಿಕೆ ೧

ಪೀಠಿಕೆ: ಬೌದ್ಧಮತದ ಮಹಾಯಾನ ಪಂಥದ ಒಂದು ಉಪಪಂಥ ಝೆನ್‌ (Zen). ೬ ನೇ ಶತಮಾನದಲ್ಲಿ ಚೀನಾದಲ್ಲಿ ಮೂಡಿದ ಈ ಪಂಥ ಕ್ರಮೇಣ ವಿಯೆಟ್ನಾಮ್‌, ಕೊರಿಯಾ ಮತ್ತು ಜಪಾನ್ ದೇಶಗಳಿಗೆ ಹರಡಿತು. ಬುದ್ಧತ್ವದ ಒಳನೋಟವನ್ನು ಧ್ಯಾನದ ಮುಖೇನ ಗಳಿಸುವುದಕ್ಕೆ, ಗಳಿಸಿದ ಒಳನೋಟವನ್ನು ದೈನಂದಿನ ಜೀವನದಲ್ಲಿ ಇತರರ ಒಳಿತಿಗಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಈ ಪಂಥ ಪ್ರಾಧಾನ್ಯ ನೀಡುತ್ತದೆಯೇ ವಿನಾ ಸಿದ್ಧಾಂತದ ಜ್ಞಾನ ಗಳಿಕೆಗೆ ಅಲ್ಲ. ಸಂಸ್ಕೃತದ ಪದ ಧ್ಯಾನ, ಇದರಿಂದ ವ್ಯುತ್ಪತ್ತಿಯಾದ ಚೀನೀ ಪದ dʑjen (ಇದರ ಉಚ್ಚಾರಣೆ ನನಗೆ ಗೊತ್ತಿಲ್ಲ), ಈ ಪದದ ಜಪಾನೀ ರೂಪಾಂತರ ಝೆನ್‌. ಬುದ್ಧತ್ವದ ಒಳನೋಟಗಳನ್ನು ಪುಟ್ಟಪುಟ್ಟ ಕತೆಗಳ ಮುಖೇನ ಶಿಷ್ಯರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದರು ಝೆನ್‌ ಗುರುಗಳು. ನೀವು ಯಾವ ಮತಾವಲಂಬಿಗಳಾಗಿದ್ದರೂ ಸರಿಯೇ, ಈ ಕತೆಗಳು ನಿಮ್ಮ ವಿಕಾಸಕ್ಕೆ ನೆರವು ನೀಡುತ್ತವೆ ಎಂಬ ನಂಬಿಕೆಯಿಂದ ಅವನ್ನು ಕನ್ನಡದಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ’ಮುಖಪುಸ್ತಕ (Face book)’ದಲ್ಲಿ ಪ್ರಕಟವಾದ ೨೫ ಕತೆಗಳನ್ನು ಕ್ರೋಡೀಕರಿಸಿದ ಮೊದಲನೇ ಸಂಚಿಕೆ ಇದು. ಇದೇ ರೀತಿ ಉಳಿದವುಗಳನ್ನೂ ಪ್ರಕಟಿಸುತ್ತೇನೆ

ಝೆನ್‌ (Zen) ಕತೆ ೧. ಒಂದು ಕಪ್ಪು ಚಹಾ
ಝೆನ್‌ ಕುರಿತಾದ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಲೋಸುಗ ಆಗಮಿಸಿದ್ದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರನ್ನು ಜಪಾನೀ ಗುರು ನ್ಯಾನ್-ಇನ್ ಸ್ವಾಗತಿಸಿದರು.
ಗುರುಗಳು ಅತಿಥಿಗೆ ಜಪಾನೀ ಸಂಪ್ರದಾಯದಂತೆ ಚಹಾ ನೀಡಲೋಸುಗ ಅವರ ಎದುರು ಮೇಜಿನ ಮೇಲೆ ಒಂದು ಚಹಾ ಕುಡಿಯುವ ಬಟ್ಟಲು ಇಟ್ಟು ಅದಕ್ಕೆ ಚಹಾ ಸುರಿಯಲಾರಂಭಿಸಿದರು, ಅದು ತುಂಬಿದ ಬಳಿಕವೂ ಸುರಿಯುತ್ತಲೇ ಇದ್ದರು.
ಬಟ್ಟಲು ತುಂಬಿ ಚಹಾ ಹೊರಚೆಲ್ಲುತ್ತಿರುವುದನ್ನು ತುಸು ಸಮಯ ಸುಮ್ಮನೆ ನೋಡುತ್ತಿದ್ದ ಪ್ರಾಧ್ಯಾಪಕರು ಕೊನೆಗೆ ತಡೆಯಲಾಗದೆ ಹೇಳಿದರು: “ ಬಟ್ಟಲು ತುಂಬಿದೆ. ಇನ್ನೂ ಹೆಚ್ಚಿನ ಚಹಾ ಅದರಲ್ಲಿ ಹಿಡಿಯುವುದಿಲ್ಲ”
ಅದಕ್ಕೆ ಇಂತು ಪ್ರತಿಕಿಯಿಸಿದರು ಗುರುಗಳು: “ಚಹಾ ತುಂಬಿದ ಈ ಬಟ್ಟಲಿನಂತೆಯೇ ನಿಮ್ಮೊಳಗೆ ನಿಮ್ಮದೇ ಆದ ಅಭಿಪ್ರಾಯಗಳೂ ಚಿಂತನಗಳೂ ತುಂಬಿವೆ. ನಿಮ್ಮ ಬಟ್ಟಲನ್ನು ನೀವು ಮೊದಲು ಖಾಲಿ ಮಾಡದೇ ಇದ್ದರೆ ಝೆನ್‌ ವಿಚಾರಧಾರೆಯನ್ನು ನಾನು ನಿಮಗೆ ತಿಳಿಸುವುದೆಂತು?”

ಝೆನ್‌ (Zen) ಕತೆ ೨. ವಿಧೇಯತೆ
ಗುರು ಬಾಂಕೈರ ಪ್ರವಚನಗಳನ್ನು ಕೇಳಲು ಝೆನ್‌ ವಿದ್ಯಾರ್ಥಿಗಳಷ್ಟೇ ಅಲ್ಲದೆ ಎಲ್ಲಾ ವರ್ಗಗಳ ಎಲ್ಲಾ ಸಾಮಾಜಿಕ ಸ್ತರಗಳಿಗೆ ಸೇರಿದ ಮಂದಿ ಬರುತ್ತಿದ್ದರು. ಮತೀಯ ಶ್ಲೋಕಗಳನ್ನು ಅವರು ಎಂದೂ ಉಲ್ಲೇಖಿಸುತ್ತಿರಲಿಲ್ಲ, ವಿದ್ವತ್ಪೂರ್ಣ ಉಪನ್ಯಾಸಗಳನ್ನೂ ನೀಡುತ್ತಿರಲಿಲ್ಲ. ಬದಲಿಗೆ ಅವರ ಮಾತುಗಳು ನೇರವಾಗಿ ಹೃದಯಾಂತರಾಳದಿಂದ ಹೊರಹೊಮ್ಮಿ ಶ್ರೋತೃಗಳ ಹೃದಯವನ್ನು ಮುಟ್ಟುತ್ತಿದ್ದವು.
ಅವರ ಪ್ರವಚನಗಳನ್ನು ಕೇಳಲು ಅಧಿಕ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ತನ್ನ ಪ್ರವಚನಗಳನ್ನು ಕೇಳುತ್ತಿದ್ದವರೂ ಗುರು ಬಾಂಕೈರ ಪ್ರವಚನಗಳತ್ತ ಆಕರ್ಷಿತರಾಗುತ್ತಿದ್ದದ್ದು ಬೌದ್ಧಮತದ ಒಳಪಂಗಡವೊಂದರ ’ಧರ್ಮಗುರು’ ಒಬ್ಬನಿಗೆ ಕೋಪ ಬರಿಸಿತು. ವಿದ್ವತ್ಪೂರ್ಣ ಚರ್ಚೆ ಮಾಡಲೇ ಬೇಕೆಂಬ ಇರಾದೆಯಿಂದ ಆ ಸ್ವಹಿತಾಸಕ್ತ ಗುರು ಬಾಂಕೈರ ಪ್ರವಚನ ನಡೆಯುತ್ತಿದ್ದ ಸ್ಥಳಕ್ಕೆ ಬಂದ.
’ಧರ್ಮಗುರು’: “ಅಯ್ಯಾ ಝೆನ್‌ ಬೋಧಕನೇ, ಒಂದು ನಿಮಿಷ ನಿಲ್ಲಿಸು ನಿನ್ನ ಪ್ರವಚನ. ನಿನ್ನನ್ನು ಗೌರವಿಸುವವರು ಮಾತ್ರ ನಿನಗೆ ವಿಧೇಯರಾಗಿ ನೀನು ಹೇಳಿದ್ದೆಲ್ಲವನ್ನೂ ಮಾಡುತ್ತಾರೆ. ನಾನಾದರೋ, ನಿನ್ನನ್ನು ಗೌರವಿಸುವುದಿಲ್ಲ. ನನ್ನಂಥವನು ವಿಧೇಯವಾಗಿ ನೀನು ಹೇಳಿದ್ದನ್ನು ಮಾಡುವಂತೆ ಮಾಡಬಲ್ಲೆಯೋ?”
ಬಾಂಕೈ: “ಅದನ್ನು ನಾನು ತೋರಿಸಬೇಕೇ? ಬೇಕೆಂದಾದರೆ ನನ್ನ ಹತ್ತಿರ ಬನ್ನಿ”
ಜನಸಂದಣಿಯ ನಡುವೆ ದಾರಿ ಮಾಡಿಕೊಂಡು ದುರಹಂಕಾರದಿಂದ ಕೂಡಿದ ’ಧರ್ಮಗುರು’ ಬಾಂಕೈರವರನ್ನು ಸಮೀಪಿಸಿದ.
ಬಾಂಕೈ: “ನನ್ನ ಎಡ ಭಾಗಕ್ಕೆ ಬನ್ನಿ”
’ಧರ್ಮಗುರು’ ಅಂತೆಯೇ ಮಾಡಿದ.
ಬಾಂಕೈ: “ಇಲ್ಲ, ನೀವು ನನ್ನ ಬಲ ಭಾಗಕ್ಕೆ ಬಂದರೆ ನಾವು ಚೆನ್ನಾಗಿ ಚರ್ಚಿಸಬಹುದು. ನನ್ನ ಬಲಭಾಗಕ್ಕೇ ಬನ್ನಿ”
’ಧರ್ಮಗುರು’ ಬಲು ಜಂಬದಿಂದ ಬಲಭಾಗಕ್ಕೆ ಬಂದ.
ಬಾಂಕೈ: “ನೋಡಿದಿರಾ, ನೀವು ನಾನು ಹೇಳಿದ್ದೆಲ್ಲವನ್ನೂ ಚಾಚೂ ತಪ್ಪದೆಯೇ ಮಾಡಿದ್ದೀರಿ. ವಾಸ್ತವವಾಗಿ ನೀವೊಬ್ಬ ಸಂಭಾವಿತ ವ್ಯಕ್ತಿ ಅನ್ನುವುದು ನನ್ನ ನಂಬಿಕೆ. ಈಗ, ಇಲ್ಲಿ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ”

ಝೆನ್‌ (Zen) ಕತೆ ೩. ಹೊರೆ
ಒಂದು ಸಂಜೆ ಇಬ್ಬರು ಬೌದ್ಧ ಸನ್ಯಾಸಿಗಳು ತಮ್ಮ ಆಶ್ರಮಕ್ಕೆ ಮರಳುತ್ತಿದ್ದರು. ಸುರಿಯುತ್ತಿದ್ದ ಮಳೆ ಆಗಷ್ಟೇ ನಿಂತಿತ್ತು, ರಸ್ತೆಯ ಇಕ್ಕೆಲಗಳಲ್ಲಿಯೂ ರಾಡಿನೀರಿನ ಪುಟ್ಟಪುಟ್ಟ ಹಳ್ಳಗಳಿದ್ದವು. ತುಸು ದೊಡ್ಡದಾದ ನೀರಿನ ಹೊಂಡವಿದ್ದ ಒಂದೆಡೆ ಸುಂದರಿಯೊಬ್ಬಳು ರಸ್ತೆ ದಾಟುವುದು ಹೇಗೆಂದು ಚಿಂತಿಸುತ್ತಾ ನಿಂತಿದ್ದಳು. ಸನ್ಯಾಸಿಗಳ ಪೈಕಿ ಹಿರಿಯನಾಗಿದ್ದಾತ ಸುಂದರಿಯನ್ನು ಸಮೀಪಿಸಿ ಅವಳನ್ನು ಎತ್ತಿಕೊಂಡು ರಸ್ತೆಯನ್ನು ದಾಟಿ ಇನ್ನೊಂದು ಬದಿಯಲ್ಲಿ ಅವಳನ್ನು ಇಳಿಸಿದ. ತದನಂತರ ಸನ್ಯಾಸಿಗಳೀರ್ವರೂ ತಮ್ಮ ಆಶ್ರಮದತ್ತ ಪ್ರಯಾಣ ಮುಂದುವರಿಸಿದರು.
ಆಶ್ರಮ ತಲುಪಿ ತುಸು ಸಮಯ ಕಳೆದ ಬಳಿಕ ಕಿರಿಯ ಸನ್ಯಾಸಿ ಹಿರಿಯನನ್ನು ಸಮೀಪಿಸಿ ಕೇಳಿದ: “ನಾವು ಸನ್ಯಾಸಿಗಳು, ಹೆಣ್ಣನ್ನು ಮುಟ್ಟಕೂಡದಲ್ಲವೇ?”
“ಹೌದು ಸಹೋದರ”, ಉತ್ತರಿಸಿದ ಹಿರಿಯ.
ಕಿರಿಯ ಪುನಃ ಕೇಳಿದ: “ ನೀವು ಅಲ್ಲಿ ರಸ್ತೆಯ ಒಂದು ಬದಿಯಿಂದ ಇನ್ನೊಂದಕ್ಕೆ ಸುಂದರಿಯನ್ನು ಎತ್ತಿಕೊಂಡು ಹೋದಿರಲ್ಲ?”
ಹಿರಿಯ ನಸುನಕ್ಕು ಹೇಳಿದ: “ನಾನು ಅವಳನ್ನು ಅಲ್ಲಿಯೇ, ರಸ್ತೆಯ ಬದಿಯಲ್ಲಿ ಇಳಿಸಿ ಬಂದೆ. ನೀನಾದರೋ ಅವಳನ್ನು ಇನ್ನೂ ಹೊತ್ತುಕೊಂಡಿರುವೆಯಲ್ಲ”

ಝೆನ್‌ (Zen) ಕತೆ ೪. ಹೊಶಿನ್‌ರ ಕೊನೆಯ ಕವಿತೆ
ಅನೇಕ ವರ್ಷ ಕಾಲ ಚೀನಾದಲ್ಲಿ ವಾಸವಾಗಿದ್ದ ಝೆನ್‌ ಗುರು ಹೊಶಿನ್ ತನ್ನ ಜೀವಿತಾವಧಿಯ ಉತ್ತರಾರ್ಧದಲ್ಲಿ ಜಪಾನ್‌ನ ಈಶಾನ್ಯ ಭಾಗಕ್ಕೆ ಬಂದು ನೆಲಸಿ ತನ್ನಶಿಷ್ಯರಿಗೆ ಬೋಧಿಸಲಾರಂಭಿಸಿದರು. ವೃದ್ಧಾಪ್ಯವೇ ಅವರನ್ನು ಕಾಡತೊಡಗಿದಾಗ ಅವರು ತಾವು ಚೀನಾದಲ್ಲಿ ಕೇಳಿದ ಕತೆಯೊಂದನ್ನು ತನ್ನ ಶಿಷ್ಯರಿಗೆ ಹೇಳಿದರು. ಆ ಕತೆ ಇಂತಿದೆ:
ಬಲು ವೃದ್ಧರಾಗಿದ್ದ ಗುರು ಟೊಕುಫು ಒಂದು ವರ್ಷ ಡಿಸೆಂಬರ್‌ ೨೫ ರಂದು ತನ್ನ ಶಿಷ್ಯರಿಗೆ ಇಂತೆಂದರು: “ಮುಂದಿನ ವರ್ಷದ ವೇಳೆಗೆ ನಾನು ಬದುಕಿರುವುದಿಲ್ಲ. ಆದ್ದರಿಂದ ನೀವೆಲ್ಲರೂ ನನ್ನನ್ನು ಈ ವರ್ಷ ಚೆನ್ನಾಗಿ ನೋಡಿಕೊಳ್ಳಿ”
ಆತ ತಮಾಷೆ ಮಾಡುತ್ತಿರುವನೆಂದು ಶಿಷ್ಯರು ಭಾವಿಸಿದರೂ ಬಲು ಕರುಣಾಮಯಿಯೂ ವಿಶಾಲ ಹೃದಯಿಯೂ ಆದ ಗುರು ಆತನಾಗಿದ್ದದ್ದರಿಂದ ಆ ವರ್ಷದಲ್ಲಿ ಬಾಕಿ ಉಳಿದಿದ್ದ ದಿನಗಳಲ್ಲಿ ದಿನಕೊಬ್ಬ ಶಿಷ್ಯ ಔತಣ ನೀಡಿದ.
ಹೊಸ ವರ್ಷದ ಹಿಂದಿನ ದಿನ ಟೊಕುಫು ತನ್ನ ಶಿಷ್ಯರಿಗೆ ಇಂತೆಂದರು: “ನೀವೆಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿರಿ. ನಾನು ನಾಳೆ ಮಧ್ಯಾಹ್ನ ಹಿಮ ಬೀಳುವುದು ನಿಂತಾಗ ಇಲ್ಲಿಂದ ಹೋಗುತ್ತೇನೆ”
ರಾತ್ರಿಯ ಆಗಸ ಶುಭ್ರವಾಗಿಯೂ ಹಿಮರಹಿತವಾಗಿಯೂ ಇದ್ದದ್ದರಿಂದ ವೃದ್ಧನೊಬ್ಬನ ಅಸಂಬದ್ಧ ಪ್ರಲಾಪ ಇದೆಂದು ಭಾವಿಸಿದ ಶಿಷ್ಯರು ನಕ್ಕರು. ಮಧ್ಯರಾತ್ರಿಯ ವೇಳೆಗೆ ಹಿಮ ಬೀಳಲಾರಂಭಿಸಿತು. ಮರು ದಿನ ಗುರು ಎಲ್ಲಿಯೂ ಕಾಣಿಸಲಿಲ್ಲ. ಶಿಷ್ಯರು ಗುರುವನ್ನು ಹುಡುಕಲಾರಂಭಿಸಿದರು. ಧ್ಯಾನಮಂದಿರದಲ್ಲಿ ಗುರುವಿನ ಶವದ ದರ್ಶನವಾದಾಗ ಹಿಮ ಬೀಳುವುದು ನಿಂತಿತ್ತು.
ಈ ಕತೆ ಹೇಳಿದ ನಂತರ ತನ್ನ ಶಿಷ್ಯರನ್ನು ಕುರಿತು ಗುರು ಹೊಶಿನ್‌ ಇಂತೆಂದ: “ತಾನು ಯಾವಾಗ ಸಾಯುವೆನೆಂಬುದನ್ನು ಝೆನ್ ಗುರು ಮುಂದಾಗಿಯೇ ಘೋಷಿಸ ಬೇಕೆಂಬ ನಿಯಮವೇನೂ ಇಲ್ಲವಾದರೂ ಸ್ವಇಚ್ಛೆಯಿಂದ ಆತ ಘೋಷಿಸಲೂ ಬಹುದು”
ಒಬ್ಬ ಶಿಷ್ಯ ಕೇಳಿದ: “ನೀವು ಹೇಳಬಲ್ಲಿರಾ?”
“ಹೇಳಬಲ್ಲೆ. ನಾನೇನು ಮಾಡಬಲ್ಲೆ ಎಂಬುದನ್ನು ಇನ್ನು ಏಳು ದಿನಗಳ ನಂತರ ಪ್ರದರ್ಶಿಸುತ್ತೇನೆ” ಅಂದರು ಗುರು ಹೊಶಿನ್‌
ಯಾವ ಶಿಷ್ಯನೂ ಅದನ್ನು ನಂಬಲಿಲ್ಲ. ಒಂದೆರಡು ದಿನಗಳಲ್ಲಿ ಈ ಸಂಭಾಷಣೆಯನ್ನೇ ಶಿಷ್ಯರು ಮರೆತರು.
ಏಳು ದಿನಗಳ ನಂತರ ಶೀಷ್ಯರನ್ನೆಲ್ಲ ಒಂದೆಡೆ ಸೇರಿಸಿ ಹೊಶಿನ್‌ ಇಂತೆಂದರು: “ಏಳು ದಿನಗಳ ಹಿಂದೆ ಹೇಳಿದ್ದೆ – ನಾನು ನಿಮ್ಮನ್ನು ಬಿಟ್ಟು ಹೋಗುತ್ತೇನೆಂದು. ಇಂಥ ಸಂದರ್ಭಗಳಲ್ಲಿ ವಿದಾಯ ಗೀತೆಯೊಂದನ್ನು ಬರೆಯುವ ಸಂಪ್ರದಾಯವೊಂದಿದೆ. ನಾನು ಕವಿಯೂ ಅಲ್ಲ, ಚಂದದ ಕೈಬರೆಹಗಾರನೂ ಅಲ್ಲ. ಆದ್ದರಿಂದ ನನ್ನ ಅಂತಿಮ ಹೇಳಿಕೆಯನ್ನು ನಿಮ್ಮ ಪೈಕಿ ಯಾರಾದರೂ ಒಬ್ಬರು ಬರೆದುಕೊಳ್ಳಿ.
ಈತ ಏನೋ ತಮಾಷೆ ಮಾಡುತ್ತಿರುವನೆಂದು ಬಹುಮಂದಿ ಶಿಷ್ಯರು ಭಾವಿಸಿದರೂ ಒಬ್ಬಾತ ಗುರು ಹೇಳಿದ್ದನ್ನು ಬರೆದುಕೊಳ್ಳಲು ಸಿದ್ಧನಾದ.
ಗುರು ಕೇಳಿದರು: “ಬರೆದುಕೊಳ್ಳಲು ನೀನು ಸಿದ್ಧನಿರುವೆಯೋ?”
ಶಿಷ್ಯ: “ಸಿದ್ಧನಾಗಿದ್ದೇನೆ”
ಹೊಶಿನ್ ಇಂತೆಂದ:
“ತೇಜಸ್ಸಿನಿಂದ ನಾನು ಬಂದೆ
ತೇಜಸ್ಸಿಗೇ ನಾನು ಹಿಂದಿರುಗುತ್ತೇನೆ.
ಇದು ಏನು?”
ಕವಿತೆಯಲ್ಲಿ ಸಂಪ್ರದಾಯದಂತೆ ನಾಲ್ಕು ಪಂಕ್ತಿಗಳಿರಬೇಕಿತ್ತು. ಎಂದೇ ಶಿಷ್ಯ ಕೇಳಿದ: “ಗುರುಗಳೇ ಒಂದು ಪಂಕ್ತಿ ಕಮ್ಮಿ ಇದೆಯಲ್ಲಾ”
ಕಾದಾಟದಲ್ಲಿ ಜಯಶೀಲವಾದ ಸಿಂಹದೋಪಾದಿಯಲ್ಲಿ “ ಕಾ” ಎಂಬ ಘರ್ಜನೆಯೊಂದಿಗೆ ಹೊಶಿನ್ ವಿಧಿವಶರಾದರು.

ಝೆನ್‌ (Zen) ಕತೆ ೫. ಓಹೋ, ಹೌದಾ?
ನೆರೆಹೊರೆಯವರಿಂದ ’ಪರಿಶುದ್ಧ ಜೀವನ ಇವರದ್ದು’ ಎಂಬ ಹೊಗಳಿಕೆಗೆ ಪಾತ್ರನಾಗಿದ್ದವನು ಝೆನ್‌ ಗುರು ಹಕುಇನ್‌.
ಆತನ ನಿವಾಸದ ಸಮೀಪದಲ್ಲಿಯೇ ಬಲು ಸುಂದರಿಯಾಗಿದ್ದ ಜಪಾನೀ ತರುಣಿಯೊಬ್ಬಳು ತನ್ನ ತಂದೆತಾಯಿಯರೊಡನೆ ವಾಸವಾಗಿದ್ದಳು. ಆಹಾರ ಪದಾರ್ಥಗಳ ಅಂಗಡಿಯೊಂದರ ಮಾಲೀಕರು ಅವರು.
ಒಂದು ದಿನ ತಮ್ಮ ಮಗಳು ಗರ್ಭಿಣಿ ಎಂಬುದನ್ನು ಅವರು ಆಕಸ್ಮಿಕವಾಗಿ ಪತ್ತೆಹಚ್ಚಿದರು. ತತ್ಪರಿಣಾಮವಾಗಿ ಅವರಿಗೆ ವಿಪರೀತ ಸಿಟ್ಟು ಬಂದಿತು. ಬಡಪಟ್ಟಿಗೆ ತಾನು ಗರ್ಭವತಿಯಾಗಲು ಕಾರಣ ಯಾರೆಂಬುದನ್ನು ಆಕೆ ತಿಳಿಸಲಿಲ್ಲ. ಬಹುವಾಗಿ ಪೀಡಿಸಿದಾಗ ಆಕೆ ಹಕುಇನ್‌ ಇದಕ್ಕೆ ಕಾರಣ ಎಂಬುದಾಗಿ ಹೇಳಿದಳು.
ತಕ್ಷಣ ಗುರುವಿನ ಬಳಿ ತೆರಳಿ ಅವನನ್ನು ತರಾಟೆಗೆ ತೆಗೆದುಕೊಂಡರು. “ಓಹೋ, ಹೌದಾ?” ಎಂಬುದನ್ನು ಬಿಟ್ಟು ಆತ ಬೇರೇನನ್ನೂ ಹೇಳಲಿಲ್ಲ.
ಮಗು ಹುಟ್ಟಿದ ನಂತರ ಅದನ್ನು ತಂದು ಅವನಿಗೊಪ್ಪಿಸಿದರು. ಆ ವೇಳೆಗಾಗಲೇ ನೆರೆಹೊರೆಯವರು ಯಾರೂ ಆತನನ್ನು ಗೌರವಿಸುತ್ತಿರಲಿಲ್ಲವಾದರೂ ಅದರಿಂದ ಆತ ವಿಚಲಿತನಾಗಿರಲಿಲ್ಲ. ಮಗುವಿಗೆ ಬೇಕಾದ ಹಾಲು ಮತ್ತಿತರ ಎಲ್ಲವನ್ನೂ ಆತ ನೆರೆಹೊರೆಯವರಿಂದ ಪಡೆದು ಅದನ್ನು ಚೆನ್ನಾಗಿಯೇ ಪೋಷಿಸಿದ.
ಇದನ್ನೆಲ್ಲ ಗಮನಿಸುತ್ತಿದ್ದ ಆ ಮಗುವಿನ ತಾಯಿ, ಪಶ್ಚಾತ್ತಾಪದಿಂದ ಬೆಂದು ಊರಿನ ಮೀನುಮಾರುಕಟ್ಟೆಯಲ್ಲಿ ಕಾರ್ಮಿಕನಾಗಿದ್ದ ಯುವಕನೊಬ್ಬ ಮಗುವಿನ ನಿಜವಾದ ತಂದೆ ಎಂಬ ಸತ್ಯವನ್ನು ತನ್ನ ತಂದೆ ತಾಯಿಯರ ಬಳಿ ಬಯಲು ಮಾಡಿದಳು.
ಆ ತಂದೆತಾಯಿಯರು ತಕ್ಷಣವೇ ಹಕುಇನ್‌ ಬಳಿ ತೆರಳಿ ವಿಷಯ ತಿಳಿಸಿ ತಮ್ಮನ್ನು ಕ್ಷಮಿಸುವಂತೆ ಪರಿಪರಿಯಾಗಿ ವಿನಂತಿಸಿಕೊಂಡು ಮಗುವನ್ನು ತಮಗೆ ಒಪ್ಪಿಸುವಂತೆ ಬೇಡಿಕೊಂಡರು.
ಇದಕ್ಕೆ ತಲೆಯಾಡಿಸಿ ಸಮ್ಮತಿಸಿದ ಗುರು ಮಗುವನ್ನು ಅವರಿಗೆ ಒಪ್ಪಿಸಿದನು. ಈ ಸಂದರ್ಭದಲ್ಲಿಯೂ ಅವನು ಹೇಳಿದ್ದು ಇಷ್ಟೇ: “ಓಹೋ, ಹೌದಾ?”

ಝೆನ್‌ (Zen) ಕತೆ ೬. ಅಕ್ಕರೆಯ ಕರುಣೆ ಇಲ್ಲ
೨೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸನ್ಯಾಸಿಯೊಬ್ಬನಿಗೆ ನೆರವು ನೀಡುತ್ತಿದ್ದ ವೃದ್ಧೆಯೊಬ್ಬಳು ಚೀನಾದಲ್ಲಿ ಇದ್ದಳು. ಅವನಿಗೊಂದು ಪುಟ್ಟ ಗುಡಿಸಲನ್ನು ಆಕೆ ಕಟ್ಟಿ ಕೊಟ್ಟಿದ್ದಳು. ಅವನು ಧ್ಯಾನಕ್ಕೆ ಕುಳಿತಾಗ ಅವಶ್ಯವಾದ ಆಹಾರವನ್ನೂ ಪೂರೈಸುತ್ತಿದ್ದಳು. ಈ ಅವಧಿಯಲ್ಲಿ ಅವನ ಆಧ್ಯಾತ್ಮಿಕ ಪ್ರಗತಿ ಎಷ್ಟಾಗಿದೆ ಎಂಬುದನ್ನು ತಿಳಿಯುವ ಕುತೂಹಲ ಅವಳಲ್ಲಿ ಒಂದು ದಿನ ಉಂಟಾಯಿತು.
ಉತ್ತರ ಪತ್ತೆ ಹಚ್ಚಲೋಸುಗ ಲೈಂಗಿಕ ಬಯಕೆಯಲ್ಲಿ ಶ್ರೀಮಂತವಾಗಿದ್ದ ಹುಡುಗಿಯೊಬ್ಬಳ ನೆರವನ್ನು ಪಡೆದಳು.
“ಹೋಗು, ಅವನನ್ನು ತಬ್ಬಿಕೊ. ನಂತರ ’ಮುಂದೇನು?’ ಎಂಬುದಾಗಿ ಅವನನ್ನು ಕೇಳು”
ಯಾವ ಸಂಕೋಚವೂ ಇಲ್ಲದೆಯೇ ಆಕೆ ಅಂತೆಯೇ ಮಾಡಿದಳು.
ಅವಳ ಪ್ರಶ್ನೆಗೆ ಸನ್ಯಾಸಿ ತುಸು ಕಾವ್ಯಾತ್ಮಕವಾಗಿ ಇಂತು ಉತ್ತರಿಸಿದನು: “ಚಳಿಗಾಲದಲ್ಲಿ ತಣ್ಣನೆಯ ಕಲ್ಲಿನ ಮೇಲೆ ಮುದಿ ಮರವೊಂದು ಬೆಳೆಯುತ್ತದೆ. ಎಲ್ಲೂ ಒಂದಿನಿತೂ ಭಾವೋದ್ರಿಕ್ತತೆ ಇಲ್ಲ”
ಹುಡುಗಿ ಹಿಂದಿರುಗಿ ನಡೆದುದನ್ನು ವೃದ್ಧೆಗೆ ತಿಳಿಸಿದಳು.
ಅವಳಿಗೆ ಇದನ್ನು ಕೇಳಿ ವಿಪರೀತ ಸಿಟ್ಟು ಬಂದಿತು, “ಈ ಮನುಷ್ಯನಿಗೆ ೨೦ ವರ್ಷ ಕಾಲ ಆಹಾರ ಕೊಟ್ಟೆನೆಂಬುದನ್ನು ಯೋಚಿಸಿದರೇ ಮೈಯೆಲ್ಲ ಉರಿಯುತ್ತದೆ. ಅವನು ನಿನ್ನ ಆವಶ್ಯಕತೆಯ ಕುರಿತು ಚಿಂತನೆ ಮಾಡಲೇ ಇಲ್ಲ. ನಿನ್ನ ಹಾಲಿ ಪರಿಸ್ಥಿತಿಯನ್ನು ವಿವರಿಸುವ ಮನಸ್ಸು ಮಾಡಲಿಲ್ಲ. ಅವನು ನಿನ್ನ ಕಾಮೋದ್ರೇಕಿಸುವ ವರ್ತನೆಗೆ ಪ್ರತಿಕ್ರಿಯೆ ತೋರಬೇಕಿರಲಿಲ್ಲವಾದರೂ ಕನಿಷ್ಠ ಪಕ್ಷ ಸ್ವಲ್ಪವಾದರೂ ಕನಿಕರ ತೋರಬಹುದಿತ್ತು”
ತಕ್ಷಣವೇ ಅವಳು ಸನ್ಯಾಸಿ ವಾಸವಿದ್ದ ಗುಡಿಸಿಲಿಗೆ ಹೋಗಿ ಅವನನ್ನು ಓಡಿಸಿ ಗುಡಿಸಲನ್ನು ಸುಟ್ಟು ಹಾಕಿದಳು.

ಝೆನ್‌ (Zen) ಕತೆ ೭. ಸ್ತೋತ್ರ ಪಠನ
ಮರಣಿಸಿದ ತನ್ನ ಪತ್ನಿಗಾಗಿ ಸ್ತೋತ್ರಗಳನ್ನು ಪಠಿಸುವಂತೆ ಟೆಂಡೈ (ಚೀನಾದ ಒಂದು ಬೌದ್ಧಪಂಥೀಯ ಗುಂಪು) ಪುರೋಹಿತನೊಬ್ಬನನ್ನು ರೈತನೊಬ್ಬ ಕೋರಿಕೊಂಡ. ಪಠನ ಮುಗಿದ ನಂತರ ರೈತ ಕೇಳಿದ: “ಇದರಿಂದ ನನ್ನ ಪತ್ನಿಗೆ ಪುಣ್ಯ ಲಭಿಸಿದೆ ಎಂಬುದಾಗಿ ನಿಮಗನ್ನಿಸುತ್ತಿದೆಯೇ?”
ಪುರೋಹಿತರು: “ನಿನ್ನ ಪತ್ನಿಗೆ ಅಷ್ಟೇ ಅಲ್ಲ, ಇಂದ್ರಿಯ ಗ್ರಹಣ ಸಾಮರ್ಥ್ಯ ಉಳ್ಳವರೆಲ್ಲರಿಗೂ ಈ ಸ್ತೋತ್ರ ಪಠನದಿಂದ ಲಾಭವಾಗುತ್ತದೆ”
ರೈತ: “ಇಂದ್ರಿಯ ಗ್ರಹಣ ಸಾಮರ್ಥ್ಯ ಉಳ್ಳವರೆಲ್ಲರಿಗೂ ಲಾಭವಾಗುತ್ತದೆ ಅನ್ನುವಿರಾ? ನನ್ನ ಪತ್ನಿ ಬಲು ದುರ್ಬಲಳಾಗಿರುವುದರಿಂದ ಇತರರು ಅವಳ ದೌರ್ಬಲ್ಯದ ಲಾಭ ಪಡೆದು ಅವಳಿಗೆ ಸಲ್ಲಬೇಕಾದ ಪುಣ್ಯವನ್ನು ತಾವೇ ಗಳಿಸುತ್ತಾರೆ. ಆದ್ದರಿಂದ ದಯವಿಟ್ಟು ಕೇವಲ ಅವಳಿಗೋಸ್ಕರ ಸ್ತೋತ್ರ ಪಠನ ಮಾಡಿ”
ಎಲ್ಲ ಜೀವಿಗಳಿಗೂ ಒಳ್ಳೆಯದಾಗಲಿ ಮತ್ತು ಎಲ್ಲ ಜೀವಿಗಳೂ ಪುಣ್ಯ ಗಳಿಸಲಿ ಎಂಬುದು ಬುದ್ಧನ ನಿಜವಾದ ಅನುಯಾಯಿಗಳ ಬಯಕೆ ಎಂಬುದನ್ನು ಪುರೋಹಿತರು ವಿವರಿಸಿದರು.
“ಅದು ಬಲು ಉತ್ತಮವಾದ ಬೋಧನೆಯಾದರೂ ಈ ಒಂದು ಸಂದರ್ಭವನ್ನು ಅದಕ್ಕೆ ಅಪವಾದ ಎಂಬುದಾಗಿ ದಯವಿಟ್ಟು ಪರಿಗಣಿಸಿ. ನನ್ನ ನೆರೆಮನೆಯಲ್ಲಿ ಸಣ್ಣ ಮನಸ್ಸಿನ ಒರಟು ವರ್ತನೆಯ ಒಬ್ಬನಿದ್ದಾನೆ. ನೀವು ಹೇಳಿದ ’ಇಂದ್ರಿಯ ಗ್ರಹಣ ಸಾಮರ್ಥ್ಯ ಉಳ್ಳವರ’ ಪಟ್ಟಿಯಿಂದ ಅವನ ಹೆಸರನ್ನು ತೆಗೆದು ಹಾಕಿ”

ಝೆನ್‌ (Zen) ಕತೆ ೮. ಒಂದು ಕೈ ಚಪ್ಪಾಳೆಯ ಸದ್ದು
ಕೆನ್ನಿನ್ ಬೌದ್ಧ ದೇವಾಲಯದಲ್ಲಿ ಇದ್ದ ಝೆನ್‌ ಗುರು ಮೊಕುರೈ. ಇವನಿಗೆ ನಿಶ್ಶಬ್ದ ಗುಡುಗು ಎಂಬ ಅಡ್ಡ ಹೆಸರೂ ಇತ್ತು. ಇವನ ರಕ್ಷಣೆಯಲ್ಲಿ ೧೨ ವರ್ಷ ವಯಸ್ಸಿನ ಟೋಯೋ ಎಂಬ ಬಾಲಕನೊಬ್ಬನಿದ್ದ. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಹಿರಿಯ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಗುರುಗಳ ಕೊಠಡಿಗೆ ಹೋಗಿ ಏಕಾಂತದಲ್ಲಿ ವೈಯಕ್ತಿಕ ಮಾರ್ಗದರ್ಶನ ಪಡೆಯುತ್ತಿದ್ದದ್ದನ್ನು ನೋಡುತ್ತಿದ್ದ. ಆ ಅವಧಿಯಲ್ಲಿ ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಲು ನೆರವಾಗುವ ಪುಟ್ಟಕತೆಗಳನ್ನು(ಕೊಅನ್‌ಗಳನ್ನು) ಗುರು ಅವರಿಗೆ ಹೇಳುತ್ತಿದ್ದರು.
ಟೋಯೋ ಕೂಡ ಅಂಥ ಮಾರ್ಗದರ್ಶನ ಪಡೆಯಲು ಇಚ್ಛಿಸಿದ.
“ನೀನಿನ್ನೂ ತುಂಬ ಚಿಕ್ಕವನು. ಅಂಥ ಮಾರ್ಗದರ್ಶನ ಪಡೆಯಲು ಇನ್ನೂ ಸ್ವಲ್ಪ ದಿನ ಕಾಯಬೇಕು” ಅಂದರು ಗುರುಗಳು. ಆದರೂ ತನಗೆ ಮಾರ್ಗದರ್ಶನ ನೀಡಲೇ ಬೇಕೆಂದು ಆ ಬಾಲಕ ಹಠ ಮಾಡಿದ. ಆದಕಾರಣ ಗುರುಗಳು ಸಮ್ಮತಿಸಿದರು.
ಅಂದು ಸಂಜೆ ಸರಿಯಾದ ಸಮಯಕ್ಕೆ ಗುರುಗಳು ಏಕಾಂತದಲ್ಲಿ ಮಾರ್ಗದರ್ಶನ ನೀಡುವ ಕೊಠಡಿಯ ಹೊಸ್ತಿಲ ಬಳಿ ಟೋಯೋ ಹೋಗಿ ಅಲ್ಲಿ ನೇತು ಹಾಕಿದ್ದ ಜಾಗಟೆ ಬಾರಿಸಿ ತನ್ನ ಬರುವಿಕೆಯನ್ನು ಘೋಷಿಸಿದ. ಗೌರವಸೂಚಕವಾಗಿ ಬಾಗಿಲಿನ ಹೊರಗಿನಿಂದಲೇ ಮೂರು ಬಾರಿ ತಲೆಬಾಗಿ ವಂದಿಸಿ ಒಳಹೋಗಿ ಗುರುಗಳ ಎದುರು ಮೌನವಾಗಿ ಕುಳಿತುಕೊಂಡ.
ಗುರುಗಳು ಇಂತೆಂದರು: “ ಎರಡು ಕೈಗಳಿಂದ ಚಪ್ಪಾಳೆ ತಟ್ಟಿದಾಗ ಆಗುವ ಶಬ್ದವನ್ನು ನೀನು ಕೇಳಿರುವೆ. ಈಗ ಒಂದು ಕೈನಿಂದ ಆಗುವ ಶಬ್ದವನ್ನು ನನಗೆ ತೋರಿಸು”
ಸಮಸ್ಯೆಯ ಕುರಿತು ಆಲೋಚಿಸುವ ಸಲುವಾಗಿ ಟೋಯೋ ಗುರುಗಳಿಗೆ ತಲೆಬಾಗಿ ವಂದಿಸಿ ತನ್ನ ಕೊಠಡಿಗೆ ಹಿಂದಿರುಗಿದ. ಕೊಠಡಿಯ ಕಿಟಕಿಯ ಮೂಲಕ ಗೇಷಗಳ (ಜಪಾನೀ ನರ್ತಕಿಯರು) ಸಂಗಿತ ಅವನಿಗೆ ಕೇಳಿಸಿತು. “ಆಹಾ! ನನಗೆ ತಿಳಿಯಿತು” ಎಂದು ಘೋಷಿಸಿದ ಟೋಯೋ.
ಮಾರನೆಯ ದಿನ ಸಂಜೆ ಒಂದು ಕೈನ ಶಬ್ದವನ್ನು ಪ್ರದರ್ಶಿಸುವಂತೆ ಗುರುಗಳು ಹೇಳಿದಾಗ ಟೋಯೋ ಗೇಷಾಗಳ ಸಂಗೀತವನ್ನು ನುಡಿಸಲಾರಂಭಿಸಿದನು.
“ಅಲ್ಲ, ಅಲ್ಲ” ಅಂದರು ಗುರುಗಳು. “ಅದಲ್ಲವೇ ಅಲ್ಲ. ಅದು ಒಂದು ಕೈನ ಶಬ್ದವಲ್ಲ. ನಿನಗದು ತಿಳಿದೇ ಇಲ್ಲ”
ಇಂಥ ಸಂಗೀತ ತನ್ನ ಹುಡುಕಾಟಕ್ಕೆ ಅಡ್ಡಿ ಉಂಟುಮಾಡುತ್ತದೆ ಎಂಬುದಾಗಿ ಆಲೋಚಿಸಿದ ಟೋಯೋ ತನ್ನ ವಾಸಸ್ಥಳವನ್ನು ನಿಶ್ಶಬ್ದವಾದ ತಾಣಕ್ಕೆ ಸ್ಥಳಾಂತರಿಸಿದ. “ಒಂದು ಕೈನ ಶಬ್ದ ಹೇಗಿರಬಹುದು” – ಈ ಕುರಿತು ಧ್ಯಾನ ಮಾಡತೊಡಗಿದ ಟೋಯೋ. ಆ ಅವಧಿಯಲ್ಲಿ ನೀರು ತೊಟ್ಟಿಕ್ಕುವ ಶಬ್ದ ಅವನಿಗೆ ಕೇಳಿಸಿತು. “ನನಗೆ ತಿಳಿಯಿತು” ಎಂಬುದಾಗಿ ಊಹಿಸಿದ.
ಮಾರನೆಯ ದಿನ ಗುರುಗಳನ್ನು ಭೇಟಿ ಮಾಡಿದಾಗ ನೀರು ತೊಟ್ಟಿಕ್ಕುವಾಗ ಆಗುವ ಶಬ್ದವನ್ನು ಅನುಕರಿಸಿ ತೋರಿಸಿದ.
“ಏನದು? ಅದು ನೀರು ತೊಟ್ಟಿಕ್ಕುವ ಶಬ್ದ, ಒಂದು ಕೈನ ಶಬ್ದವಲ್ಲ. ಪುನಃ ಪ್ರಯತ್ನಿಸು” ಅಂದರು ಗುರುಗಳು.
ಒಂದು ಕೈನ ಶಬ್ದ ಕೇಳಲೋಸುಗ ಟೋಯೋ ಮಾಡಿದ ಧ್ಯಾನವೆಲ್ಲವೂ ನಿಷ್ಪ್ರಯೋಜಕವಾಯಿತು. ಬೀಸುವ ಗಾಳಿಯ ಸುಯ್‌ ಶಬ್ದ ಕೇಳಿಸಿತು. ಗುರು ಅದನ್ನು ತಿರಸ್ಕರಿಸಿದರು. ಒಂದು ಗೂಬೆಯ ಕರೆ ಕೇಳಿಸಿತು. ಅದನ್ನೂ ಗುರು ಒಪ್ಪಲಿಲ್ಲ. ಮಿಡತೆಗಳ ಸಬ್ದವೂ ಒಂದು ಕೈನ ಶಬ್ದ ಅಲ್ಲವೆಂದಾಯಿತು.
ಬೇರೆ ಬೇರೆ ಶಬ್ದಗಳನ್ನು ಒಂದು ಕೈನ ಶಬ್ದವೆಂದು ತಿಳಿದು ಹತ್ತಕ್ಕೂ ಹೆಚ್ಚು ಬಾರಿ ಗುರುಗಳ ಬಳಿ ತೆರಳಿದ. ಎಲ್ಲವನ್ನೂ ಗುರುಗಳು ತಿರಸ್ಕರಿಸಿದರು.
ಹೆಚ್ಚುಕಮ್ಮಿ ಒಂದು ವರ್ಷ ಕಾಲ ಒಂದು ಕೈನ ಶಬ್ದ ಹೇಗಿರಬಹುದೆಂಬುದರ ಕುರಿತು ಟೋಯೋ ಆಲೋಚಿಸಿದ.
ಕೊನೆಗೆ ಒಂದು ದಿನ ಎಲ್ಲ ಶಬ್ದಗಳಿಗೂ ಅತೀತವಾದ ಶಬ್ದಾತೀತ ಧ್ಯಾನ ಸ್ಥಿತಿಯನ್ನು ಟೋಯೋ ತಲುಪಿದ. “ಯಾವ ಶಬ್ದವೂ ಕೇಳಿಸದ ನಿಶ್ಶಬ್ದ ಶಬ್ದವನ್ನು ನಾನು ತಲುಪಿದೆ” ಎಂಬುದಾಗಿ ಆ ಸ್ಥಿತಿಯನ್ನು ಟೋಯೋ ಆನಂತರ ವಿವರಿಸಿದ.
ಟೋಯೋಗೆ ಒಂದು ಕೈನ ಶಬ್ದದ ಸಾಕ್ಷಾತ್ಕಾರವಾಗಿತ್ತು.

ಝೆನ್‌ (Zen) ಕತೆ ೯. ಇನ್ನೂ ಮೂರು ದಿನಗಳು
ಝೆನ್‌ ಗುರು ಹಕುಇನ್‌ನ ಶಿಷ್ಯ ಸುಯಿವೊ ಕೂಡ ಒಳ್ಳೆಯ ಗುರುವಾಗಿದ್ದ. ಒಂದು ಬೇಸಿಗೆಯ ಏಕಾಂತತೆಯ ಅವಧಿಯಲ್ಲಿ ಅವರ ಬಳಿಗೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ.
ಪರಿಹರಿಸಲೋಸುಗ ಅವನಿಗೊಂದು ಸಮಸ್ಯೆಯನ್ನು ಸುಯಿವೊ ನೀಡಿದ: “ಒಂದು ಕೈನ ಶಬ್ದವನ್ನು ಕೇಳು”
ಅಲ್ಲಿಯೇ ಇದ್ದುಕೊಂಡು ಮೂರು ವರ್ಷ ಕಾಲ ಪ್ರಯತ್ನಿಸಿದರೂ ಅದು ಅವನಿಗೆ ಸಾಧ್ಯವಾಗಲಿಲ್ಲ.
ಒಂದು ದಿನ ರಾತ್ರಿ ಅವನು ಗುರುವಿನ ಹತ್ತಿರ ಅಳುತ್ತಾ ಬಂದು ಹೇಳಿದ: “ಸಮಸ್ಯೆಗೆ ಉತ್ತರ ಪತ್ತೆಹಚ್ಚಲು ಆಗುತ್ತಿಲ್ಲ. ಅಂದ ಮೇಲೆ ಅವಮಾನಿತನಾಗಿ ಮುಜುಗರದಿಂದ ದಕ್ಷಿಣಕ್ಕೆ ನಾನು ಹಿಂದಿರುಗುತ್ತೇನೆ.”
“ಇನ್ನೊಂದು ವಾರ ಪ್ರಯತ್ನಿಸು. ಆ ಅವಧಿಯಲ್ಲಿ ಅವಿಚ್ಛಿನ್ನವಾಗಿ ಧ್ಯಾನ ಮಾಡು” ಅಂದರು ಗುರುಗಳು. ವಿದ್ಯಾರ್ಥಿ ಅಂತೆಯೇ ಮಾಡಿದರೂ ಪ್ರಯೋಜನವಾಗಲಿಲ್ಲ.
ಗುರು ಆಜ್ಞಾಪಿಸಿದರು: “ಇನ್ನೂ ಒಂದು ವಾರ.” ಅದರಿಂದಲೂ ಪ್ರಯೋಜನವಾಗಲಿಲ್ಲ. ತನ್ನನ್ನು ಬಿಟ್ಟುಬಿಡುವಂತೆ ಗುರುಗಳಲ್ಲಿ ವಿನಂತಿಸಿಕೊಂಡ ಆ ವಿದ್ಯಾರ್ಥಿ. ಇನ್ನೂ ಐದು ದಿನ ಪ್ರಯತ್ನ ಮುಂದುವರಿಸುವಂತೆ ಹೇಳಿದರು ಗುರುಗಳು. ಫಲಿತಾಂಶ ಶೂನ್ಯ. ಕೊನೆಗೆ ಗುರುಗಳು ಹೇಳಿದರು: “ಇನ್ನೂ ಮೂರು ದಿನ ಧ್ಯಾನ ಮಾಡು. ಆಗಲೂ ಜ್ಞಾನೋದಯವಾಗದೇ ಇದ್ದರೆ ನೀನು ಆತ್ಮಹತ್ಯೆ ಮಾಡಿಕೊಳ್ಳುವುದು ಒಳ್ಳೆಯದು”
ಎರಡನೆಯ ದಿನ ವಿದ್ಯಾರ್ಥಿಗೆ ಜ್ಞಾನೋದಯವಾಯಿತು.

ಝೆನ್‌ (Zen) ಕತೆ ೧೦. ಪ್ರಕಟಣೆ
ಝೆನ್‌ ಗುರು ಟ್ಯಾನ್‌ಝಾನ್‌ ತನ್ನ ಜೀವನದ ಕೊನೆಯ ದಿನ ೬೦ ಅಂಚೆ ಕಾರ್ಡ್‌ಗಳನ್ನು ಬರೆದು ಅವನ್ನು ಅಂಚೆ ಮೂಲಕ ಕಳುಹಿಸುವಂತೆ ತನ್ನ ಅನುಚರನಿಗೆ ಹೇಳಿದ. ತದನಂತರ ಆತ ವಿಧಿವಶನಾದ.
ಆ ಕಾರ್ಡ್‌ಗಳಲ್ಲಿ ಇಂತು ಬರೆದಿತ್ತು:
ನಾನು ಈ ಲೋಕದಿಂದ ತೆರಳುತ್ತಿದ್ದೇನೆ.
ಇದೇ ನನ್ನ ಕೊನೆಯ ಪ್ರಕಟಣೆ.
ಟ್ಯಾನ್‌ಝಾನ್
ಜುಲೈ ೨೭, ೧೮೯೨.
ಝೆನ್‌ (Zen) ಕತೆ ೧೧. ಸಂತೃಪ್ತ ಚೀನಾದವ (Happy Chinaman)
ಅಮೇರಿಕಾದಲ್ಲಿ ಇರುವ ಯಾವುದೇ ಚೀನೀಯರ ಕೇರಿಯಲ್ಲಿ ತಿರುಗಾಡಿದವರು ನಾರಗಸೆ ದಾರದ ಚೀಲವನ್ನು ಹೊತ್ತ ಬೊಜ್ಜು ಮೈನ ಸಂತೃಪ್ತ ಚೀನೀಯನ ಮೂರ್ತಿಯೊಂದನ್ನು ನೋಡಿಯೇ ಇರುತ್ತಾರೆ. ಇದನ್ನು ನಗುತ್ತಿರುವ ಬುದ್ಧ ಅನ್ನುವುದೂ ಉಂಟು.
ಟ್ಯಾಂಗ್‌ ವಂಶಸ್ಥ ಹೊಟೆಯ್‌. ತನ್ನನ್ನು ತಾನು ಝೆನ್‌ ಗುರು ಎಂಬುದಾಗಿ ಹೇಳಿಕೊಳ್ಳುವುದರಲ್ಲಿ ಮತ್ತು ಅನೇಕ ಶಿಷ್ಯರನ್ನು ತನ್ನ ಸುತ್ತ ಇರುವಂತೆ ಮಾಡುವುದರಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ. ಇದಕ್ಕೆ ಬದಲಾಗಿ ಆತ ಚೀಲದಲ್ಲಿ ವಿವಿಧ ಬಗೆಯ ತಿನಿಸುಗಳನ್ನು ತುಂಬಿಕೊಂಡು ರಸ್ತೆಗಳಲ್ಲಿ ಅಲೆದಾಡುತ್ತಿದ್ದ. ಆಟವಾಡಲೋಸುಗ ಅವನ ಸುತ್ತ ಸೇರುತ್ತಿದ್ದ ಮಕ್ಕಳಿಗೆ ಅವನ್ನು ಕೊಡುತ್ತಿದ್ದ. ರಸ್ತೆಯ ಬಾಲವನವೊಂದನ್ನು ಆತ ಸ್ಥಾಪಿಸಿದ.
ಝೆನ್ ಅನುಯಾಯಿಯನ್ನು ಆತ ಯಾವಾಗಲಾದರೂ ಭೇಟಿಯಾದರೆ ಅವರ ಮುಂದೆ ಕೈ ಚಾಚಿ ಕೇಳುತ್ತಿದ್ದ: “ನನಗೆ ಒಂದು ಪೆನ್ನಿ ಕೊಡಿ.”
ಈ ತೆರನಾಗಿ ಆತ ಆಟ-ಕಾರ್ಯದಲ್ಲಿ ತೊಡಗಿದ್ದಾಗ ಒಂದು ಸಲ ಅಲ್ಲಿ ಹೋಗುತ್ತಿದ್ದ ಝೆನ್‌ ಗುರುವೊಬ್ಬ ಕೇಳಿದ: “ಝೆನ್‌ನ ಅರ್ಥ ಏನು?”
ಅದಕ್ಕೆ ಉತ್ತರವಾಗಿ ತಕ್ಷಣ ಹೊಟೆಯ್ ಏನೂ ಮಾತನಾಡದೆಯೇ ತನ್ನ ಚೀಲವನ್ನು ನೆಲಕ್ಕೆ ಸಶಬ್ದವಾಗಿ ಬೀಳಿಸಿದ.
ಇನ್ನೊಬ್ಬ ಝೆನ್‌ ಗುರು ಕೇಳಿದ: “ಅಂತಾದರೆ, ಝೆನ್‌ನ ವಾಸ್ತವೀಕರಣ ಅಂದರೇನು?”
ತಕ್ಷಣವೇ ಹೊಟೆಯ್ ತನ್ನ ಚೀಲವನ್ನು ಹೆಗಲ ಮೇಲೇರಿಸಿ ತನ್ನ ದಾರಿಯಲ್ಲಿ ಮುಂದೆ ಹೋದ.

ಝೆನ್‌ (Zen) ಕತೆ ೧೨. ತಾಯಿಯ ಬುದ್ಧಿವಾದ
ಜಿಉನ್ ಎಂಬ ಶೋಗನ್‌ ಗುರುವು ಟೊಕುಗುವಾ ಕಾಲದ (೧೬೦೩-೧೮೬೮) ಖ್ಯಾತ ಸಂಸ್ಕೃತ ವಿದ್ವಾಂಸನೂ ಆಗಿದ್ದ. ತರುಣನಾಗಿದ್ದಾಗ ಸಹಪಾಠಿಗಳಿಗೆ ಉಪನ್ಯಾಸಗಳನ್ನು ನೀಡುವ ಅಭ್ಯಾಸ ಅವನಿಗಿತ್ತು.
ಅವನ ತಾಯಿಗೆ ಈ ವಿಷಯ ತಿಳಿದಾಗ ಅವಳು ಅವನಿಗೊಂದು ಪತ್ರ ಬರೆದಳು:
“ಮಗನೇ, ಉಳಿದವರಿಗೆ ನಡೆದಾಡುವ ಅರ್ಥಕೋಶ ಆಗುವ ಬಯಕೆಯಿಂದ ನೀನು ಬುದ್ಧನ ಭಕ್ತನಾದೆ ಎಂಬುದಾಗಿ ನಾನು ಭಾವಿಸಿಲ್ಲ. ಮಾಹಿತಿ ಸಂಗ್ರಹಣೆಗೆ, ಅವುಗಳನ್ನು ವ್ಯಾಖ್ಯಾನಿಸುವುದಕ್ಕೆ, ಗೌರವಯುತ ಖ್ಯಾತಿ ಗಳಿಸುವ ಪ್ರಯತ್ನಗಳಿಗೆ ಅಂತ್ಯ ಇಲ್ಲ.
ಈ ಉಪನ್ಯಾಸ ನೀಡುವ ವ್ಯವಹಾರವನ್ನು ನೀನು ನಿಲ್ಲಿಸಬೇಕೆಂದು ನಾನು ಆಶಿಸುತ್ತೇನೆ. ಬೆಟ್ಟದ ಅತೀ ದೂರದ ಮೂಲೆಯಲ್ಲಿ ಇರುವ ಪುಟ್ಟ ದೇವಾಲಯದಲ್ಲಿ ನೀನು ಜನಸಂಪರ್ಕಕ್ಕೆ ಅಲಭ್ಯನಾಗುವಂತೆ ಸೇರಿಕೊ. ನಿನ್ನ ಸಮಯವನ್ನು ಧ್ಯಾನಕ್ಕೆ ವಿನಿಯೋಗಿಸು. ನಿಜವಾದ ಸಾಕ್ಷಾತ್ಕಾರಕ್ಕೆ ಇದು ಸರಿಯಾದ ವಿಧಾನ”

ಝೆನ್‌ (Zen) ಕತೆ ೧೩. ನೀನು ಪ್ರೀತಿಸಬೇಕೆಂದಿದ್ದರೆ ಮುಚ್ಚುಮರೆಯಿಲ್ಲದೆ ಪ್ರೀತಿಸು.
೨೦ ಸನ್ಯಾಸಿಗಳೂ ಏಷನ್ ಎಂಬ ಒಬ್ಬ ಸನ್ಯಾಸಿನಿಯೂ ಝೆನ್‌ ಗುರುವೊಬ್ಬನ ಮಾರ್ಗದರ್ಶನದಲ್ಲಿ ಧ್ಯಾನ ಮಾಡುವುದನ್ನು ಅಭ್ಯಸಿಸುತ್ತಿದ್ದರು.
ಏಷನ್‌ಳ ತಲೆ ಬೋಳಿಸಿದ್ದರೂ ಉಡುಪು ಬಲು ಸರಳವಾದದ್ದು ಆಗಿದ್ದರೂ ನೋಡುಗರಿಗೆ ಬಲು ಸುಂದರವಾಗಿಯೇ ಕಾಣುತ್ತಿದ್ದಳು.
ಅನೇಕ ಸನ್ಯಾಸಿಗಳು ಗುಟ್ಟಾಗಿ ಅವಳನ್ನು ಪ್ರೀತಿಸುತ್ತಿದ್ದರು. ಅವರ ಪೈಕಿ ಒಬ್ಬನಂತೂ ತನ್ನನ್ನು ಖಾಸಗಿಯಾಗಿ ಭೇಟಿಯಾಗುವಂತೆ ಪ್ರೇಮಪತ್ರ ಬರೆದು ಆಗ್ರಹಿಸಿದ್ದ.
ಏಷನ್‌ ಅದಕ್ಕೆ ಉತ್ತರಿಸಲಿಲ್ಲ. ಮರುದಿನ ಗುರುಗಳು ಶಿಷ್ಯಸಮೂಹಕ್ಕೆ ಉಪನ್ಯಾಸ ನೀಡುವ ಕಾರ್ಯಕ್ರಮವಿತ್ತು. ಉಪನ್ಯಾಸ ಮುಗಿದ ತಕ್ಷಣ ಏಷನ್‌ ಎದ್ದು ನಿಂತಳು. ತನಗೆ ಪ್ರೇಮಪತ್ರವನ್ನು ಬರೆದವನನ್ನು ಉದ್ದೇಶಿಸಿ ಇಂತೆಂದಳು: “ನೀನು ನಿಜವಾಗಿಯೂ ನನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ ಬಾ, ಈಗಲೇ ನನ್ನನ್ನು ಅಪ್ಪಿಕೋ”

ಝೆನ್‌ (Zen) ಕತೆ ೧೪. ನೀತಿಕತೆ
ಬುದ್ಧ ಹೇಳಿದ ನೀತಿಕತೆ:
ಒಂದು ಹುಲ್ಲುಗಾವಲಿನಲ್ಲಿ ಪಯಣಿಸುತ್ತಿದ ಒಬ್ಬಾತನಿಗೆ ಹುಲಿಯೊಂದು ಎದುರಾಯಿತು. ಅದರಿಂದ ತಪ್ಪಿಸಿಕೊಳ್ಳಲೋಸುಗ ಅವನು ಓಡತೊಡಗಿದ, ಹುಲಿ ಅವನನ್ನು ಅಟ್ಟಿಸಿಕೊಂಡು ಹೋಯಿತು. ಓಡುತ್ತಾ ಓಡುತ್ತಾ ಪ್ರಪಾತವೊಂದರ ಅಂಚಿಗೆ ತಲುಪಿದಾಗ ಅಲ್ಲಿದ್ದ ಯಾವುದೋ ಕಾಡುಬಳ್ಳಿಯ ಬೇರನ್ನು ಹಿಡಿದು ಪ್ರಪಾತದ ಅಂಚಿನ ಸಮೀಪದಲ್ಲಿ ತುಸು ಕೆಳಗೆ ನೇತಾಡತೊಡಗಿದ. ಹುಲಿ ಅಂಚಿನಲ್ಲಿಯೇ ಮೇಲೆ ನಿಂತು ಅವನ ವಾಸನೆಯನ್ನು ಆಘ್ರಾಣಿಸಲಾರಂಭಿಸಿತು. ನಡುಗುತ್ತಿದ್ದ ಆತ ಕೆಳಗೆ ನೋಡಿದರೆ ಅತೀ ಆಳದಲ್ಲಿ ಇನ್ನೊಂದು ಹುಲಿ ಅವನು ಕೆಳಗೆ ಬಿದ್ದಾಗ ತಿನ್ನಲೋಸುಗ ಕಾಯುತ್ತಿರುವುದನ್ನು ಕಂಡ. ಎರಡೂ ಹುಲಿಗಳ ಆಹಾರವಾಗುವುದರಿಂದ ಅವನನ್ನು ರಕ್ಷಿಸಿತ್ತು ಆ ಬಳ್ಳಿ.
ಇಂತಿರುವಾಗ ಎರಡು ಇಲಿಗಳು, ಒಂದು ಬಿಳಿ ಬಣ್ಣದ್ದು ಒಂದು ಕಪ್ಪು ಬಣ್ಣದ್ದು, ಆ ಬಳ್ಳಿಯನ್ನು ಒಂದೇ ಸಮನೆ ಕಚ್ಚಿ ತುಂಡು ಮಾಡಲಾರಂಭಿಸಿದವು. ಆಗ ಆತ ಪಕ್ಕದಲ್ಲಿಯೇ ನೇತಾಡುತ್ತಿದ್ದ ರಸಭರಿತ ಸ್ಟ್ರಾಬೆರಿ ಹಣ್ಣುಗಳನ್ನು ನೋಡಿದ. ಒಂದು ಕೈನಿಂದ ಬಳ್ಳಿಯನ್ನು ಹಿಡಿದು ನೇತಾಡುತ್ತಾ ಇನ್ನೊಂದು ಕೈನಿಂದ ಸ್ಟ್ರಾಬೆರಿ ಹಣ್ಣುಗಳನ್ನು ಕಿತ್ತು ತಿಂದ. ಅವು ಬಲು ಸಿಹಿಯಾಗಿದ್ದವು!

ಝೆನ್‌ (Zen) ಕತೆ ೧೫. ಆನಂದದ ಧ್ವನಿ
ಬಾಂಕೈ ವಿಧಿವಶನಾದ ನಂತರ, ಅವನಿದ್ದ ದೇವಾಲಯದ ಸಮೀಪದಲ್ಲಿಯೇ ವಾಸಿಸುತ್ತಿದ್ದ ಕುರುಡನೊಬ್ಬ ತನ್ನ ಮಿತ್ರನೊಡನೆ ಇಂತೆಂದ: “ನಾನು ಕುರುಡನಾಗಿರುವುದರಿಂದ ವ್ಯಕ್ತಿಯ ಮುಖವನ್ನು ನೋಡಲಾಗುವುದಿಲ್ಲ. ಎಂದೇ, ಅವನ ಧ್ವನಿಯನ್ನು ಆಧರಿಸಿ ಚಾರಿತ್ರ್ಯದ ಕುರಿತು ನಿರ್ಧರಿಸಬೇಕು. ಸಾಮಾನ್ಯವಾಗಿ ಒಬ್ಬ ಮತ್ತೊಬ್ಬನ ಸೊಂತೋಷ ಅಥವ ಯಶಸ್ಸಿನ ಕುರಿತು ಅಭಿನಂದಿಸುವಾಗ ಅದರಲ್ಲಿ ಅಸೂಯೆಯ ಧ್ವನಿ ಹುದುಗಿರುವುದು ನನಗೆ ತಿಳಿಯುತ್ತದೆ. ಒಬ್ಬ ಇನ್ನೊಬ್ಬನ ದುರದೃಷ್ಟಕ್ಕೆಸಂತಾಪ ಸೂಚಿಸುವಾಗ ಅದರಲ್ಲಿ ನನಗೆ ತನಗೇನೋ ಲಾಭವಾಗುತ್ತದೆ ಅನ್ನುವ ಸಂತೋಷ ಮತ್ತು ತೃಪ್ತಿಯ ಭಾವ ಕೇಳಿಸುತ್ತದೆ. ನನ್ನ ಅನುಭವದಲ್ಲಿ ಬಾಂಕೈ ಅವರ ಧ್ವನಿಯಲ್ಲಿ ಯಾವಾಗಲೂ ಪ್ರಾಮಾಣಿಕತೆಯೇ ಇರುತ್ತಿತ್ತು. ಅವರು ಆನಂದವನ್ನು ವ್ಯಕ್ತ ಪಡಿಸಿದಾಗ ಆನಂದದ ಧ್ವನಿ ಬಿಟ್ಟು ಬೇರೆ ಯಾವ ಧ್ವನಿಯೂ ಕೇಳಿಸುತ್ತಿರಲಿಲ್ಲ. ಅಂತೆಯೇ, ದುಃಖವನ್ನು ವ್ಯಕ್ತಪಡಿಸಿದಾಗ ದುಃಖದ ಧ್ವನಿ ಬಿಟ್ಟು ಬೇರೆ ಯಾವ ಧ್ವನಿಯೂ ಕೇಳಿಸುತ್ತಿರಲಿಲ್ಲ,”

ಝೆನ್‌ (Zen) ಕತೆ ೧೬. ಬೃಹತ್‌ ಅಲೆಗಳು
ಮೈಜಿ ಕಾಲದ ಆರಂಭಿಕ ದಿನಗಳಲ್ಲಿ ಒ-ನಾಮಿ, ಅರ್ಥಾತ್ ಬೃಹತ್‌ ಅಲೆಗಳು ಎಂಬ ಹೆಸರಿನ ಸುಪರಿಚಿತ ಜಟ್ಟಿಯೊಬ್ಬನಿದ್ದ. ಆತ ಅಪರಿಮಿತ ಬಲಶಾಲಿಯೂ ಕುಸ್ತಿ ಕಲೆಯನ್ನು ಬಲು ಚೆನ್ನಾಗಿ ತಿಳಿದವನೂ ಆಗಿದ್ದ. ಆತ ಎಷ್ಟು ನಾಚಿಕೆಯ ಪ್ರವೃತ್ತಿಯವ ಆಗಿದ್ದನೆಂದರೆ ಖಾಸಗಿ ಕುಸ್ತಿ ಪಂದ್ಯಗಳಲ್ಲಿ ತನ್ನ ಗುರುವನ್ನೇ ಸೋಲಿಸಬಲ್ಲವನಾಗಿದ್ದರೂ ಸಾರ್ವಜನಿಕ ಕುಸ್ತಿ ಪಂದ್ಯಗಳಲ್ಲಿ ತನ್ನ ಶಿಷ್ಯರಿಂದಲೂ ಸೋಲನ್ನು ಅನುಭವಿಸುತ್ತಿದ್ದ.
ಈ ಸಮಸ್ಯೆಯ ಪರಿಹಾರಕ್ಕೆ ಯಾರಾದರೊಬ್ಬ ಝೆನ್‌ ಗುರುವಿನ ನೆರವು ಪಡೆಯಬೇಕೆಂದು ಭಾವಿಸಿದ ಒ-ನಾಮಿ. ಸಮೀಪದಲ್ಲಿ ಇದ್ದ ಪುಟ್ಟ ದೇವಾಲಯದಲ್ಲಿ ಅಲೆಮಾರಿ ಗುರು ಹಕುಜು ತಂಗಿರುವ ಸುದ್ದಿ ತಿಳಿದ ಒ-ನಾಮಿ ಅವನ ಹತ್ತಿರ ಹೋಗಿ ತನ್ನ ಸಮಸ್ಯೆಯನ್ನು ಹೇಳಿದ.
ಗುರುಗಳ ಸಲಹೆ ಇಂತಿತ್ತು: “ನಿನ್ನ ಹೆಸರು ಬೃಹತ್‌ ಅಲೆಗಳು, ಆದ್ದರಿಂದ ಇಂದು ರಾತ್ರಿ ಈ ದೇವಾಲಯದಲ್ಲಿಯೇ ಇರು. ಆ ಬೃಹತ್‌ ಅಲೆಗಳು ನೀನೇ ಎಂಬುದಾಗಿ ಕಲ್ಪಿಸಿಕೊ. ಈ ಹಿಂದಿನಂತೆ ಭಯಗ್ರಸ್ತನಾದ ಜಟ್ಟಿ ಈಗ ನೀನಲ್ಲ. ತಮ್ಮ ಮುಂದಿರುವ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ, ತಮ್ಮ ದಾರಿಗೆ ಅಡ್ಡ ಬರುವ ಎಲ್ಲವನ್ನೂ ಕಬಳಿಸುತ್ತಾ ಮುಂದೆ ಸಾಗುವ ಆ ಬೃಹತ್‌ ಅಲೆಗಳೇ ನೀನು. ನೀನು ಇಂತು ಮಾಡಿದರೆ ಈ ಭೂಮಿಯ ಮೇಲಿನ ಅತ್ಯಂತ ಪ್ರಬಲ ಜಟ್ಟಿ ನೀನಾಗುವೆ.”
ಇಷ್ಟು ಹೇಳಿದ ಗುರುಗಳು ಏಕಾಂತಕ್ಕೆ ಹಿಂದಿರುಗಿದರು. ಒ-ನಾಮಿ ಕಣ್ನುಮುಚ್ಚಿ ಕುಳಿತು ತನ್ನನ್ನು ಬೃಹತ್ ಅಲೆಗಳು ಎಂಬುದಾಗಿ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದ. ಆರಂಭದಲ್ಲಿ ಅನೇಕ ವಿಭಿನ್ನ ವಿಷಯಗಳ ಕುರಿತು ಆತ ಆಲೋಚಿಸಿದ. ಕ್ರಮೇಣ, ಹಿಂದಿಗಿಂತ ಹೆಚ್ಚು ಹೆಚ್ಚು ಕಾಲ ಆತ ತನ್ನನ್ನು ಬೃಹತ್‌ ಅಲೆಗಳು ಎಂದು ಕಲ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾದ. ರಾತ್ರಿ ಮುಂದುವರಿದಂತೆಲ್ಲಾ ಅಲೆಗಳು ಹೆಚ್ಚು ಹೆಚ್ಚು ದೊಡ್ಡದಾಗಲಾರಂಭಿಸಿದವು. ಅಲ್ಲಿ ಹೂಕುಂಡಗಳಲ್ಲಿದ್ದ ಹೂವಿನ ಗಿಡಗಳನ್ನು ಅವು ಕೊಚ್ಚಿಕೊಂಡು ಹೋದವು. ಬುದ್ಧನ ಗುಡಿಯನ್ನೇ ಅವು ಮೂಳುಗಿಸಿದವು. ಸೂರ್ಯೋದಯಕ್ಕೆ ಮುನ್ನವೇ ಆ ದೇವಾಲಯ ಉಬ್ಬರವಿಳಿತಗಳಿಂದ ಕೂಡಿದ ಅಲೆಗಳುಳ್ಳ ಅಪರಿಮಿತ ಸಾಗರವೇ ಆಗಿತ್ತು.
ಧ್ಯಾನಸ್ಥನಾಗಿದ್ದ ತುಸು ಮುಗುಳ್ನಗೆಯುತ ಮುಖದ ಒ-ನಾಮಿಯನ್ನು ಬೆಳಗ್ಗೆ ಗುರು ನೋಡಿದ. ಜಟ್ಟಿಯ ಭುಜವನ್ನು ತಟ್ಟಿ ಹೇಳಿದ: “ನಿನ್ನ ಮನಸ್ಸನ್ನು ಈಗ ಯಾವುದೂ ಕದಡಲಾರದು. ಈಗ ನೀನೇ ಬೃಹತ್ ಅಲೆ. ನಿನ್ನ ಮುಂದಿರುವ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವೆ.”
ಒ-ನಾಮಿ ಅಂದೇ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಜಯಶೀಲನಾದ. ತದನಂತರ ಅವನನ್ನು ಸೋಲಿಸಲು ಜಪಾನ್‌ನ ಯಾರಿಂದಲೂ ಸಾಧ್ಯವಾಗಲಿಲ್ಲ.

ಝೆನ್‌ (Zen) ಕತೆ ೧೭. ಎಲ್ಲವೂ ಅತ್ಯುತ್ತಮವಾದದ್ದೇ
ಮಾರುಕಟ್ಟೆಯ ಮೂಲಕ ಬನ್ಝಾನ್ ನಡೆದು ಹೋಗುತ್ತಿದ್ದಾಗ ಒಬ್ಬ ಕಸಾಯಿ ಮತ್ತು ಅವನ ಗ್ರಾಹಕನ ನಡುವಣ ಸಂಭಾಷಣೆ ಅಯಾಚಿತವಾಗಿ ಕೇಳಿಸಿತು.
ಗ್ರಾಹಕ: “ನಿನ್ನ ಹತ್ತಿರ ಇರುವ ಮಾಂಸಗಳ ಪೈಕಿ ಅತ್ಯುತ್ತಮವಾದ ತುಂಡೊಂದನ್ನು ನನಗೆ ಕೊಡು”
ಕಸಾಯಿ: “ ನನ್ನ ಅಂಗಡಿಯಲ್ಲಿ ಇರುವುದೆಲ್ಲವೂ ಅತ್ಯುತ್ತಮವಾದದ್ದೇ ಆಗಿದೆ. ಅತ್ಯುತ್ತಮವಲ್ಲದ ಯಾವುದೇ ಮಾಂಸದ ತುಂಡು ನಿಮಗೆ ಇಲ್ಲಿ ಗೋಚರಿಸುವುದಿಲ್ಲ”
ಈ ಪದಗಳು ಕಿವಿಯ ಮೇಲೆ ಬಿದ್ದೊಡನೆ ಬಾನ್ಝಾನನಿಗೆ ಜ್ಞಾನೋದಯವಾಯಿತು.

ಝೆನ್‌ (Zen) ಕತೆ ೧೮. ಒಂದು ತೊಟ್ಟು ನೀರು
ಗೀಸನ್‌ ಎಂಬ ಝೆನ್‌ ಗುರು ತನ್ನ ಕಿರಿಯ ವಿದ್ಯಾರ್ಥಿಯೊಬ್ಬನಿಗೆ ಸ್ನಾನದ ನೀರು ತಣಿಸಲೋಸುಗ ಒಂದು ಬಕೀಟು ತಣ್ಣೀರು ತರಲು ಹೇಳಿದ.
ನೀರು ತಂದು ಸ್ನಾನದ ನೀರಿಗೆ ಅಗತ್ಯವಿರುವಷ್ಟು ಸೇರಿಸಿ ತಣಿಸಿ ಉಳಿದ ಸ್ವಲ್ಪ ನೀರನ್ನು ಆ ವಿದ್ಯಾರ್ಥಿ ನೆಲಕ್ಕೆ ಸುರಿದನು.
ಆತ ಅಂತು ಮಾಡಿದ್ದಕ್ಕೆ ಗುರುಗಳು ಬಯ್ದರು: “ಮುಠ್ಠಾಳ, ಮಿಕ್ಕ ನೀರನ್ನು ಗಿಡಗಳಿಗೆ ಏಕೆ ಹಾಲಿಲ್ಲ. ಈ ದೇವಾಲಯದಲ್ಲಿ ನೀರನ್ನು, ಅದು ಒಂದು ತೊಟ್ಟು ಆಗಿದ್ದರೂ ಸರಿಯೇ, ಪೋಲು ಮಾಡುವ ಹಕ್ಕು ನಿನಗೆಲ್ಲಿದೆ?”
ಆ ಕ್ಷಣದಲ್ಲಿ ಆ ವಿದ್ಯಾರ್ಥಿಗೆ ಝೆನ್‌ನ ಸಾಕ್ಷಾತ್ಕಾರವಾಯಿತು, ಅವನು ತನ್ನ ಹೆಸರನ್ನು ಟೆಕುಇಸುಯ್,ಅರ್ಥಾತ್ ಒಂದು ತೊಟ್ಟು ನೀರು ಎಂಬುದಾಗಿ ಬದಲಿಸಿಕೊಂಡ.

ಝೆನ್‌ (Zen) ಕತೆ ೧೯. ಚಂದ್ರನನ್ನು ಕದಿಯಲು ಸಾಧ್ಯವಿಲ್ಲ
ಬೆಟ್ಟವೊಂದರ ಬುಡದಲ್ಲಿ ಇದ್ದ ಪುಟ್ಟ ಗುಡಿಸಿಲಿನಲ್ಲಿ ಝೆನ್‌ ಗುರು ರೈಒಕಾನ್ ಸರಳಾತಿಸರಳ ಜೀವನ ನಡೆಸುತ್ತಿದ್ದ. ಒಂದು ಸಂಜೆ ರೈಒಕಾನ್ ಇಲ್ಲದಿದ್ದಾಗ ಆ ಗುಡಿಸಿಲಿನೊಳಕ್ಕೆ ನುಗ್ಗಿದ ಕಳ್ಳನೊಬ್ಬ ಅಲ್ಲಿ ಕದಿಯಬಹುದಾದದ್ದು ಏನೂ ಇಲ್ಲ ಎಂಬುದನ್ನು ಆವಿಷ್ಕರಿಸಿದ.
ಗುಡಿಸಿಲಿಗೆ ಹಿಂದಿರುಗಿದ ರೈಒಕಾನ್ ತನ್ನ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಇಂತೆಂದ: “ನನ್ನನ್ನು ನೋಡಲು ನೀನು ಬಹು ದೂರದಿಂದ ಬಂದಿರಬೇಕು. ಆದ್ದರಿಂದ ನೀನು ಖಾಲಿ ಕೈನಲ್ಲಿ ಹಿಂದಿರುಗಕೂಡದು. ದಯವಿಟ್ಟು ಈ ನನ್ನ ಬಟ್ಟೆಗಳನ್ನು ಉಡುಗೊರೆಯಾಗಿ ಸ್ವೀಕರಿಸು”
ಕಕ್ಕಾಬಿಕ್ಕಿಯಾದ ಕಳ್ಳ ಬಟ್ಟೆಗಳನ್ನು ತೆಗೆದುಕೊಂಡು ನಾಚಿಕೆಯಿಂದ ಹೊರಟುಹೋದ.
ರೈಒಕಾನ್ ಬತ್ತಲೆಯಾಗಿ ಚಂದ್ರನನ್ನು ನೋಡುತ್ತಾ ಕುಳಿತುಕೊಂಡು ಇಂತು ಆಲೋಚಿಸಿದ: “ಪಾಪ, ಬಡವಪಾಯಿ. ಈ ಸುಂದರವಾದ ಚಂದ್ರನನ್ನು ಕೋಡುವ ಸಾಮರ್ಥ್ಯ ನನಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.”

ಝೆನ್‌ (Zen) ಕತೆ ೨೦. ಹುಳಿಯಾಗಿರುವ ಮಿಸೊ
ಗುರು ಬಾಂಕೈರ ಆಶ್ರಮದಲ್ಲಿ ಅಡುಗೆಯವನಾಗಿದ್ದ ಸನ್ಯಾಸಿ ಡೈರ್ಯೋ ತನ್ನ ವಯಸ್ಸಾದ ಗುರುವಿನ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಲೂ ಅವರಿಗೆ ಯಾವಾಗಲೂ ತಾಜಾ ಮಿಸೊ (ಉಪ್ಪೂರಿಸಿದ ಸೊಯಾ ಅವರೆ, ಗೋಧಿ ಮತ್ತು ಹುದುಗಿಸುವ ಸಾಮರ್ಥ್ಯ ಉಳ್ಳ ಯೀಸ್ಟ್‌ ಇವುಗಳ ಮಿಶ್ರಣದಿಂದ ತಯಾರಿಸಿದ ಗೊಜ್ಜಿನಂಥ ತಿನಿಸು) ನೀಡಲೂ ನಿರ್ಧರಿಸಿದ. ತನ್ನ ಶಿಷ್ಯರಿಗೆ ಬಡಿಸಿದ್ದಕ್ಕಿಂತ ಉತ್ತಮ ಗುಣಮಟ್ಟದ ಮಿಸೊವನ್ನು ತನಗೆ ಬಡಿಸುತ್ತಿರುವುದನ್ನು ಗಮನಿಸಿದ ಬಾಂಕೈ ಕೇಳಿದ: “ಇವತ್ತು ಅಡುಗೆ ಮಾಡಿದ್ದು ಯಾರು?”
ಡೈರ್ಯೋ ಗುರುವಿನ ಎದುರು ಬಂದು ನಿಂತ. ವಯಸ್ಸು ಮತ್ತು ಸ್ಥಾನದ ಪ್ರಯುಕ್ತ ತಾಜಾ ಮಿಸೊವನ್ನು ಮಾತ್ರ ತಾನು ತಿನ್ನಬೇಕೆಂಬುದನ್ನು ಡೈರ್ಯೋನಿಂದ ಬಾಂಕೈ ಕೇಳಿ ತಿಳಿದ. ತದನಂತರ ಅಡುಗೆಯವನಿಗೆ ಹೇಳಿದ: “ಅಂದ ಮೇಲೆ ನಾನು ತಿನ್ನಲೇ ಕೂಡದೆಂಬುದು ನಿನ್ನ ಆಲೋಚನೆ.” ಇಂತು ಹೇಳಿದ ಬಾಂಕೈ ತನ್ನ ಕೊಠಡಿಯೊಳಕ್ಕೆ ಹೋಗಿ ಯಾರೂ ಒಳ ಬರದಂತೆ ಬಾಗಿಲು ಹಾಕಿಕೊಂಡ.
ಡೈರ್ಯೋ ಬಾಗಿಲಿನ ಹೊರಗೆ ಕುಳಿತುಕೊಂಡು ತನ್ನನ್ನು ಕ್ಷಮಿಸುವಂತೆ ಗುರುವನ್ನು ಬೇಡಿಕೊಂಡ. ಬಾಂಕೈ ಉತ್ತರಿಸಲೇ ಇಲ್ಲ. ಏಳು ದಿನಗಳ ಕಾಲ ಡೈರ್ಯೋ ಬಾಗಿಲಿನ ಹೊರಗೆ ಕುಳಿತೇ ಇದ್ದ, ಬಾಂಕೈ ತನ್ನ ಕೊಠಡಿಯೊಳಗೇ ಇದ್ದ.
ಇದರಿಂದ ಹತಾಶನಾದ ಅನುಯಾಯಿಯೊಬ್ಬ ಕೂಗಿ ಹೇಳಿದ: “ಓ ವೃದ್ಧ ಬೋಧಕನೇ ನೀನೇನೋ ಒಳಗೆ ಕ್ಷೇಮವಾಗಿರಬಹುದು. ಆದರೆ ಹೊರಗಿರುವ ನಿನ್ನ ಈ ಚಿಕ್ಕವಯಸ್ಸಿನ ಶಿಷ್ಯ ಏನನ್ನಾದರೂ ತಿನ್ನಲೇ ಬೇಕಲ್ಲವೇ? ಅವನು ಅನಿರ್ದಿಷ್ಟ ಕಾಲ ಆಹಾರ ಸೇವಿಸದೆ ಬದುಕಿರಲು ಸಾಧ್ಯವಿಲ್ಲ!”
ಇದನ್ನು ಕೇಳಿದ ಬಾಂಕೈ ಬಾಗಿಲು ತೆರೆದು ಮುಗುಳ್ನಗುತ್ತಾ ಹೊರಬಂದ. ಅವನು ಡೈರ್ಯೋಗೆ ಇಂತು ಹೇಳಿದ: “ ನನ್ನ ಅನುಯಾಯಿಗಳ ಪೈಕಿ ಅತ್ಯಂತ ಅಮುಖ್ಯ ಎಂಬುದಾಗಿ ಪರಿಗಣಿಸಲ್ಪಟ್ಟಿರುವವನು ಸೇವಿಸುವ ಆಹಾರವನ್ನೇ ನಾನೂ ಸೇವಿಸಬೇಕೆಂದು ಪಟ್ಟು ಹಿಡಿಯುತ್ತೇನೆ. ನೀನು ಒಬ್ಬ ಬೋಧಕನಾದಾಗ ಇದನ್ನು ನೀನು ಮರೆಯಕೂಡದು ಎಂಬುದು ನನ್ನ ಆಶಯ.”

ಝೆನ್‌ (Zen) ಕತೆ ೨೧. ನಿನ್ನೊಳಗಿರುವ ಸತ್ಯದ ಬೆಳಕು ನಂದಿ ಹೋಗಬಹುದು
ಬೌದ್ಧ ಮತದ ಒಂದು ದಾರ್ಶನಿಕ ಪಂಥ ಟೆಂಡೈ. ಅದರ ವಿದ್ಯಾರ್ಥಿಯೊಬ್ಬ ಝೆನ್‌ ಅಭ್ಯಸಿಸಲೋಸುಗ ಗಾಸನ್ ಎಂಬ ಝೆನ್‌ ಗುರುವಿನ ಶಿಷ್ಯನಾದ. ಕೆಲವು ವರ್ಷಗಳ ನಂತರ ಆತ ಅಲ್ಲಿಂದ ಹೊರಟು ನಿಂತಾಗ ಗಾಸನ್ ಹೇಳಿದ ಎಚ್ಚರಿಕೆಯ ಮಾತುಗಳು ಇವು: “ಚಿಂತನಾ ವಿಧಾನದಿಂದ ಸತ್ಯವನ್ನು ಅಭ್ಯಸಿಸುವುದು ಧರ್ಮೋಪದೇಶಕ್ಕೆ ಅವಶ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಲು ಉಪಯುಕ್ತ. ಆದರೆ ನೆನಪಿರಲಿ – ನಿರಂತರವಾಗಿ ನೀನು ಧ್ಯಾನ ಮಾಡದೇ ಇದ್ದರೆ ನಿನ್ನೊಳಗಿರುವ ಸತ್ಯದ ಬೆಳಕು ನಂದಿ ಹೋಗಬಹುದು”

ಝೆನ್‌ (Zen) ಕತೆ ೨೨. ಕೊಡುವವನೇ ಆಭಾರಿಯಾಗಿರಬೇಕು
ಕಾಮಕುರ ಪಟ್ಟಣದ ಎಂಗಾಕು ಬೌದ್ಧ ದೇವಾಲಯದಲ್ಲಿ ಇದ್ದ ಸೈಎಟ್ಸು ಎಂಬ ಗುರು ಬೋಧಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕುದಾದ ಬಿಡಾರ ಇಲ್ಲದೇ ಇದ್ದದ್ದರಿಂದ ತರಗತಿಯಲ್ಲಿ ಯಾವಾಗಲೂ ಅತೀ ಹೆಚ್ಚು ವಿದ್ಯಾರ್ಥಿಗಳು ಇದ್ದಂತೆ ಭಾಸವಾಗುತ್ತಿತ್ತು. ಎಂದೇ, ಆತನಿಗೆ ಇನ್ನೂ ವಿಶಾಲವಾದ ಬಿಡಾರದ ಆವಶ್ಯಕತೆ ಇತ್ತು. ಈದನ್ನು ತಿಳಿದ ಉಮೇಝ ಸೈಬೈ ಎಂಬ ವ್ಯಾಪಾರಿ ರ್ಯೋ ಎಂಬ ಹೆಸರಿನ ೫೦೦ ಚಿನ್ನದ ನಾಣ್ಯಗಳನ್ನು ವಿಶಾಲವಾದ ಬಿಡಾರ ನಿರ್ಮಿಸಲೋಸುಗ ದಾನವಾಗಿ ಕೊಡಲು ನಿರ್ಧರಿಸಿದ. ತೀರ್ಮಾನಿಸಿದಂತೆ ಹಣವನ್ನು ಗುರುವಿಗೆಕೊಡಲು ತಂದ.
ಸೈಎಟ್ಸು: “ಸರಿ. ನಾನು ಅದನ್ನು ಸ್ವೀಕರಿಸುತ್ತೇನೆ”
ಗುರುವಿಗೆ ಚಿನ್ನದ ನಾಣ್ಯಗಳಿದ್ದ ಚೀಲವನ್ನು ಉಮೇಝ ಒಪ್ಪಿಸಿದನಾದರೂ ಗುರು ಅದನ್ನು ಸ್ವೀಕರಿಸಿದ ರೀತಿ ಅವನಿಗೆ ಖುಷಿ ಆಗಲಿಲ್ಲ. ಮೂರು ರ್ಯೋಗಳು ಇದ್ದರೆ ಒಬ್ಬ ಮನುಷ್ಯ ಒಂದು ಪೂರ್ಣ ವರ್ಷ ಆರಾಮವಾಗಿ ಬುದುಕಬಹುದಾಗಿತ್ತು. ಸನ್ನಿವೇಶ ಇಂತಿದ್ದರೂ ೫೦೦ ನಾಣ್ಯ ಕೊಟ್ಟಿದ್ದಕ್ಕೆ ಗುರು ಅವನಿಗೆ ಕೃತಜ್ಞತೆ ಸೂಚಿಸಲೂ ಇಲ್ಲ.
ಉಮೇಝ ತಾನು ದಾನವಾಗಿ ಕೊಟ್ಟ ದೊಡ್ಡ ಮೊತ್ತದತ್ತ ಗಮನ ಸೆಳೆಯಲೋಸುಗ ಹೇಳಿದ: “ಆ ಚೀಲದಲ್ಲಿ ೫೦೦ ರ್ಯೋಗಳಿವೆ”
ಸೈಎಟ್ಸು: “ನೀನು ಈ ಮೊದಲೇ ಅದನ್ನು ನನಗೆ ಹೇಳಿರುವೆ”
ಉಮೇಝು: “ನಾನೊಬ್ಬ ಶ್ರೀಮಂತ ವ್ಯಾಪರಿಯಾಗಿದ್ದರೂ ೫೦೦ ರ್ಯೋ ನನಗೂ ಬಹು ದೊಡ್ಡ ಮೊತ್ತ”
ಸೈಎಟ್ಸು: “ಅದಕ್ಕಾಗಿ ನಾನು ನಿನಗೆ ಕೃತಜ್ಞತೆ ಸೂಚಿಸ ಬೇಕೇನು?”
ಉಮೇಝು: “ ನೀವು ಸೂಚಿಸಲೇ ಬೇಕು”
ಸೈಎಟ್ಸು: “ನಾನೇಕೆ ಸೂಚಿಸಬೇಕು? ವಾಸ್ತವವಾಗಿ ಕೊಡುವವನೇ ಆಭಾರಿಯಾಗಿರಬೇಕು!”

ಝೆನ್‌ (Zen) ಕತೆ ೨೩. ಅಂತಿಮ ಉಯಿಲು ಮತ್ತು ವಿಧಾಯಕ ವಾಕ್ಯ
ಅಶಿಕಾಗ ಕಾಲದ ಖ್ಯಾತ ಝೆನ್‌ ಗುರು ಇಕ್ಕ್ಯು ಅಂದಿನ ಚಕ್ರವರ್ತಿಯ ಮಗ. ಅವನು ಬಲು ಚಿಕ್ಕವನಾಗಿದ್ದಾಗಲೇ ಅವನ ತಾಯಿ ಅರಮನೆಯನ್ನು ಬಿಟ್ಟು ಝೆನ್‌ ಅಭ್ಯಸಿಸಲು ದೇವಾಲಯವೊಂದಕ್ಕೆ ಹೋಗಿದ್ದಳು. ಹೀಗಾಗಿ ಇಕ್ಕ್ಯು ಕೂಡ ಝೆನ್‌ನ ವಿದ್ಯಾರ್ಥಿಯಾದ. ಮುಂದೊಂದು ದಿನ ಮಗನಿಗೊಂದು ಪತ್ರ ಬರೆದಿಟ್ಟು ಅವನ ತಾಯಿ ವಿಧಿವಶಳಾದಳು.
ಅದು ಇಂತಿತ್ತು:
ಇಕ್ಕ್ಯುಗೆ:
ಈ ಜೀವನದಲ್ಲಿ ನಾನು ಮಾಡಬೇಕಾದದ್ದನ್ನು ಮಾಡಿ ಮುಗಿಸಿದ್ದೇನೆ. ಎಂದೇ, ಈಗ ನಾನು ಅನಂತತೆಗೆ ಹಿಂದಿರುಗುತ್ತಿದ್ದೇನೆ.
ನೀನು ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಲಿ ಮತ್ತು ನಿನ್ನ ಬುದ್ಧ-ಸ್ವರೂಪವನ್ನು ಪೂರ್ಣವಾಗಿ ಅರಿತುಕೊಳ್ಳುವಂತೆ ಆಗಲಿ ಎಂಬುದಾಗಿ ಆಶಿಸುತ್ತೇನೆ. ನಾನು ನರಕದಲ್ಲಿ ಇದ್ದೇನೋ ಮತ್ತು ನಾನು ಯಾವಾಗಲೂ ನಿನ್ನೊಡನೆ ಇದ್ದೇನೋ ಒಲ್ಲವೋ ಎಂಬುದು ನಿನಗೆ ತಿಳಿಯುತ್ತದೆ.
ಬುದ್ಧ ಮತ್ತು ಅವನ ಅನುಯಾಯಿ ಬೋಧಿಧರ್ಮ ನಿನ್ನ ಸ್ವಂತದ ಸೇವಕರು ಎಂಬದನ್ನು ಪೂರ್ಣವಾಗಿ ಅರಿತವ ನೀನಾದಾಗ ಅಧ್ಯಯನವನ್ನು ನಿಲ್ಲಿಸಿ ಮನುಕುಲದ ಒಳಿತಿಗಾಗಿ ಕೆಲಸ ಮಾಡಲು ಆರಂಭಿಸಬಹುದು.ಬುದ್ಧ ೪೯ ವರ್ಷ ಕಾಲ ಧರ್ಮೋಪದೇಶ ಮಾಡಿದ. ಆ ಅವಧಿಯಲ್ಲಿ ಒಂದು ಪದವನ್ನೂ ಮಾತನಾಡುವ ಆವಶ್ಯಕತೆ ಅವನಿಗೆ ಕಾಣಲಿಲ್ಲ. ಏಕೆ ಎಂಬುದು ನಿನಗೆ ತಿಳಿದಿರಲೇ ಬೇಕು. ತಿಳಿದಿಲ್ಲವಾದರೂ ಕೆಲಸ ಮಾಡಲಿಚ್ಛಿಸುವಿಯಾದರೆ ನಿರರ್ಥಕವಾಗಿ ಆಲೋಚಿಸುವುದನ್ನು ಬಿಟ್ಟುಬಿಡು.
ನಿನ್ನ ತಾಯಿ,
ಹುಟ್ಟಲಿಲ್ಲ, ಸಾಯಲಿಲ್ಲ.
ಸೆಪ್ಟೆಂಬರ್‌ ಮೊದಲನೇ ದಿನ

ಪಶ್ಚಲೇಖ (P S): ಇತರರಲ್ಲಿ ಅರಿವು ಮೂಡಿಸುವುದು ಬುದ್ಧನ ಬೋಧನೆಗಳ ಪ್ರಮುಖ ಉದ್ದೇಶವಾಗಿತ್ತು. ಅವುಗಳಲ್ಲಿ ತಿಳಿಸಿದ ವಿಧಾನಗಳ ಪೈಕಿ ಯಾವುದೇ ಒಂದರ ಮೇಲೆ ನೀನು ಅವಲಂಬಿತನಾಗಿದ್ದರೂ ನೀನೊಬ್ಬ ನಿಶ್ಪ್ರಯೋಜಕನಷ್ಟೇ ಅಲ್ಲ ಏನೇನೂ ತಿಳಿವಳಿಕೆ ಇಲ್ಲದ ಕೀಟ. ಬೌದ್ಧಮತಕ್ಕೆ ಸಂಬಂಧಿಸಿದ ೮೦,೦೦೦ ಪುಸ್ತಕಗಳು ಇವೆ. ಅವೆಲ್ಲವನ್ನು ಓದಿದ ನಂತರವೂ ನೀನು ನಿನ್ನ ನಿಜ ಸ್ವರೂಪವನ್ನು ಕಂಡುಕೊಳ್ಳಲಿಲ್ಲ ಎಂದಾದರೆ ಈ ಪತ್ರವೂ ನಿನಗೆ ಅರ್ಥವಾಗುವುದಿಲ್ಲ. ಇದೇ ನನ್ನ ಅಂತಿಮ ಉಯಿಲು ಮತ್ತು ವಿಧಾಯಕ ವಾಕ್ಯ.

ಝೆನ್‌ (Zen) ಕತೆ ೨೪. ಒಬ್ಬ ಬುದ್ಧ
ಜಪಾನ್‌ನಲ್ಲಿ ಮೈಜಿ ಕಾಲದಲ್ಲಿ ಉನ್‌ಶೊ ಮತ್ತು ಟ್ಯಾನ್‌ಝಾನ್‌ ಎಂಬ ಇಬ್ಬರು ಪ್ರಸಿದ್ಧ ಬೋಧಕರು ವಾಸಿಸುತ್ತಿದ್ದರು. ಮೊದಲನೆಯವನು ಬೌದ್ಧಮತದ ಶಿಂಗಾನ್ ಪಂಥದ ಬೋಧಕ, ಎರಡನೆಯವನು ಇಂಪೀರಿಯಲ್‌ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕ. ಇವರೀರ್ವರೂ ಗುಣಲಕ್ಷಣಗಳ ದೃಷ್ಟಿಯಿಂದ ತದ್ವಿರುದ್ಧರಾಗಿದ್ದರು. ಮೊದಲನೆಯವನಾದರೋ ಬುದ್ಧ ಬೋಧಿಸಿದ ಆಚಾರಸೂತ್ರಗಳನ್ನು ಚಾಚೂ ತಪ್ಪದೆಯೇ ಪರಿಪಾಲಿಸುವವ, ಎರಡನೆಯವನಾದರೋ ಅವನ್ನು ಆಚರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಮೊದಲನೆಯವನು ಮಾದಕಪೇಯಗಳನ್ನು ಕುಡಿಯುತ್ತಿರಲಿಲ್ಲ ಮತ್ತು ಬೆಳಗ್ಗೆ ೧೧ ಗಂಟೆಯ ನಂತರ ಏನನ್ನೂ ತಿನ್ನುತ್ತಿರಲಿಲ್ಲ. ಎರಡನೆಯನವನಾದರೋ ತಿನ್ನಬೇಕೆನ್ನಿಸಿದಾಗ ತಿನ್ನುತ್ತಿದ್ದ, ಮಲಗಬೇಕೆನ್ನಿಸಿದಾಗ, ಅದು ಹಗಲೇ ಆಗಿದ್ದರೂ ಮಲಗಿ ನಿದ್ರಿಸುತ್ತಿದ್ದ.
ಅದೊಂದು ದಿನ ಟ್ಯಾನ್‌ಝಾನ್ ಅನ್ನು ಭೇಟಿಯಾಗಲು ಉನ್‌ಶೊ ಹೋದಾಗ ಬೌದ್ಧಮತೀಯರ ನಾಲಗೆಯ ಮೇಲೆ ಒಂದು ತೊಟ್ಟು ಕೂಡ ಬೀಳಬಾರದು ಅನ್ನಬಹುದಾಗಿದ್ದ (ಹುಳಿಹಿಡಿಸಿದ) ದ್ರಾಕ್ಷಾರಸವನ್ನು (wine) ಟ್ಯಾನ್‌ಝಾನ್ ಕುಡಿಯುತ್ತಿದ್ದ.
“ಹಲೋ ಸಹೋದರ,” ಅವನನ್ನು ಟ್ಯಾನ್‌ಝಾನ್ ಸ್ವಾಗತಿಸಿದ. “ಒಂದು ಲೋಟ ಈ ದ್ರಾಕ್ಷಾರಸ ತೆಗೆದುಕೊಳ್ಳುವುದಿಲ್ಲವೇ?”
“ನಾನೆಂದೂ ಮದ್ಯ ಕುಡಿಯುವುದಿಲ್ಲ” ಉದ್ಗರಿಸಿದ ಉನ್‌ಶೊ
“ಮದ್ಯ ಕುಡಿಯದವನು ಮನುಷ್ಯನೇ ಅಲ್ಲ” ಪ್ರತಿಕ್ರಿಯಿಸಿದ ಟ್ಯಾನ್‌ಝಾನ್
“ನಾನು ಮಾದಕ ಪಾನೀಯಗಳನ್ನು ಕುಡಿಯುವುದಿಲ್ಲ ಅಂದ ಮಾತ್ರಕ್ಕೆ ಪಶುಪ್ರಾಯನಾದವ ಎಂಬುದಾಗಿ ನನ್ನನ್ನು ಕರೆಯುವಿಯೇನು?” ಕೋಪೋದ್ರಿಕ್ತನಾದ ಉನ್‌ಶೊ ಉದ್ಗರಿಸಿದ. “ನಾನು ಮನುಷ್ಯನಲ್ಲ ಅನ್ನುವುದಾದರೆ ನಾನು ಬೇರೇನು ಆಗಿದ್ದೇನೆ?”
ಟ್ಯಾನ್‌ಝಾನ್ ಉತ್ತರಿಸಿದ “ಒಬ್ಬ ಬುದ್ಧ”

ಝೆನ್‌ (Zen) ಕತೆ ೨೫. ಬುದ್ಧತ್ವದಿಂದ ಬಹುದೂರದಲ್ಲಿ ಇಲ್ಲ
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಗುರು ಗಾಸನ್‌ನನ್ನು ಭೇಟಿ ಮಾಡಿದಾಗ ಕೇಳಿದ “ನೀವು ಕ್ರಿಶ್ಚಿಯನ್ನರ ಬೈಬಲ್‌ ಅನ್ನು ಯಾವಾಗಲಾದರೂ ಓದಿದ್ದೀರಾ?”
“ಇಲ್ಲ, ನನಗೆ ಅದನ್ನು ಓದಿ ಹೇಳು” ಉತ್ತರಿಸಿದ ಗಾಸನ್.
ವಿದ್ಯಾರ್ಥಿ ಬೈಬಲ್‌ ಅನ್ನು ತೆರೆದು ಸಂತ ಮ್ಯಾಥ್ಯೂ ನಿಂದ ಒಂದು ತುಣುಕನ್ನು ಓದಿದ: “ಉಡುಗೆತೊಡುಗೆಗಳ ಕುರಿತು ನೀನೇಕೆ ಯೋಚಿಸುವೆ?. ಬಯಲಿನಲ್ಲಿ ಇರುವ ಲಿಲ್ಲಿ ಹೂವುಗಳನ್ನು ಪರಿಗಣಿಸು, ಅವು ಹೇಗೆ ಬೆಳಯುತ್ತವೆ? ಅವೇನೂ ಕಷ್ಟಪಡುವುದೂ ಇಲ್ಲ ನೂಲುವುದೂ ಇಲ್ಲ. ಆದಾಗ್ಯೂ ನಾನು ನಿನಗೆ ಹೇಳುತ್ತೇನೆ, ತನ್ನೆಲ್ಲ ವೈಭವಯುತನಾದ ಸೋಲೋಮನ್‌ ಕೂಡ ಇವುಗಳಲ್ಲಿ ಯಾವುದೇ ಒಂದರಷ್ಟೂ ಚೆಂದವಾಗಿರಲಿಲ್ಲ…. ಆದ್ದರಿಂದ ನಾಳೆಯ ಕುರಿತು ಯೋಚಿಸಬೇಡ, ಏಕೆಂದರೆ ನಾಳೆಯು ತನಗೆ ಸಂಬಂಧಿಸಿದ ಎಲ್ಲವನ್ನೂ ತಾನೇ ಆಲೋಚಿಸಿಕೊಳ್ಳುತ್ತದೆ”
ಗಾಸನ್‌ ಪ್ರತಿಕ್ರಿಯಿಸಿದ: “ನಾನು ಈ ಮಾತುಗಳನ್ನು ಹೇಳಿದಾತನನ್ನು ಜ್ಞಾನೋದಯವಾದವ ಎಂಬುದಾಗಿ ಪರಿಗಣಿಸುತ್ತೇನೆ”
ವಿದ್ಯಾರ್ಥಿ ಓದುವುದನ್ನು ಮುಂದುವರಿಸಿದ: “ಕೇಳು, ಅದು ನಿನಗೆ ಕೊಡಲ್ಪಡುತ್ತದೆ. ಹುಡುಕು, ಅದು ನಿನಗೆ ಗೋಚರಿಸುತ್ತದೆ. ತಟ್ಟು, ಅದು ನಿನಗೆ ತೆರೆಯಲ್ಪಡುತ್ತದೆ. ಏಕೆಂದರೆ ಕೇಳಿದ ಪ್ರತಿಯೊಬ್ಬನಿಗೂ ಸಿಕ್ಕುತ್ತದೆ, ಹುಡುಕುವ ಪ್ರತಿಯೊಬ್ಬನಿಗೂ ಗೋಚರಿಸುತ್ತದೆ, ತಟ್ಟಿದ ಪ್ರತಿಯೊಬ್ಬನಿಗೂ ಅದು ತೆರೆಯಲ್ಪಡುತ್ತದೆ.”
ಗಾಸನ್ ಉದ್ಗರಿಸಿದ: “ ಇದು ಅತ್ಯುತ್ತಮವಾದದ್ದು. ಇದನ್ನು ಯಾರು ಹೇಳಿದರೋ ಅವರು ಬುದ್ಧತ್ವದಿಂದ ಬಹು ದೂರದಲ್ಲಿ ಇಲ್ಲ.”

Advertisements
This entry was posted in ಝೆನ್‌ (Zen) ಕತೆಗಳು and tagged , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s