ತಾರಾವಲೋಕನ ೧೫: ವಿಭಾಗ ೩ ರಾಶಿನಾಮ ರಹಸ್ಯ

೩.೧ ಹಿನ್ನೆಲೆ

ಜ್ಯೋತಿಶ್ಶಾಸ್ತ್ರೀಯ ಮಹತ್ವ ಉಳ್ಳ ದ್ವಾದಶ ರಾಶಿಗಳಿಗೆ ಅವುಗಳಲ್ಲಿ ಇರುವ ಪ್ರಧಾನ ಪುಂಜದಲ್ಲಿ ಕಲ್ಪಿಸಿಕೊಂಡ ಆಕೃತಿಗಳ ಹೆಸರನ್ನು ಇಟ್ಟಂತೆ ಮೇಲ್ನೋಟಕ್ಕೆ ಕಂಡರೂ ಆ ಹೆಸರುಗಳಿಗೆ ಕುತೂಹಲಕಾರಿ ಹಿನ್ನೆಲೆ ಇದೆ. ಈ ರಾಶಿಚಕ್ರದ ಕಲ್ಪನೆ ರೂಪುಗೊಂಡದ್ದು ಪ್ರಾಚೀನ ಈಜಿಪ್ಟನಲ್ಲಿ. ಈಜಿಪ್ಟಿನವರಿಂದ ಗ್ರೀಕರು, ಗ್ರೀಕರಿಂದ ಭಾರತೀಯರು ಈ ಪರಿಕಲ್ಪನೆಯನ್ನು ತಮ್ಮದಾಗಿಸಿಕೊಂಡರು. ಆದ್ದರಿಂದ ಈ ಎಲ್ಲ ಸಂಸ್ಕೃತಿಗಳಲ್ಲಿ ಈ ರಾಶಿಗಳ ಹೆಸರುಗಳ ಅರ್ಥ ಬದಲಾಗಿಲ್ಲ. ಈಜಿಪ್ಟಿನವರು ಕುರಿ, ಗೂಳಿ ಇವೇ ಮೊದಲಾದ ಪದಗಳನ್ನು ಏಕೆ ಆಯ್ಕೆ ಮಾಡಿದರು ಎಂಬುದಕ್ಕೆ ಕುತೂಹಲಕಾರಿ ವಾದವೊಂದು ಇಂತಿದೆ: ಈಗಿನ ಮಾರ್ಚ್ ೨೧ ರಿಂದ ಏಪ್ರಿಲ್೨೨ – ಈಜಿಪ್ಟಿನಲ್ಲಿ ಕುರಿಗಳು ಹೆಚ್ಚಾಗಿ ಮರಿ ಹಾಕುವ ಕಾಲ. ಎಂದೇ ಇದು ಮೇಷ (Aries, the Ram) ಮಾಸ. ತದನಂತರದ ತಿಂಗಳು ಈಜಿಪ್ಟಿನ ರೈತರು ನೆಲ ಉಳುವ ಕಾಲ. ಆದ್ದರಿಂದ ಅದು ವೃಷಭ (Taurus, the Bull) ಮಾಸ. ಮುಂದಿನ ತಿಂಗಳು ಈಜಿಪ್ಟಿನವರಿಗೆ ಪ್ರಿಯವಾಗಿದ್ದ ಮೇಕೆಗಳು ಬಹಳವಾಗಿ ಅವಳಿಜವಳಿ ಮರಿಗಳನ್ನು ಈಯುತ್ತಿದ್ದ ಕಾಲ, ಮಿಥುನ (Gemini, the Twins) ಮಾಸ. ಈ ಮೂರು ತಿಂಗಳ ಕಾಲ ಪೂರ್ವದಿಂದ ಉತ್ತರಕ್ಕೆ ಚಲಿಸುತ್ತಿದ್ದ ಸೂರ್ಯ ದಕ್ಷಿಣಕ್ಕೆ ಹಿಂದಿರುಗಲು ಆರಂಭಿಸುವ ಕಾಲ. ಹಿಂದಕ್ಕೆ ತೆವಳಿಕೊಂಡಿ ನಡೆಯುವಂತೆ ಕಾಣುವ ಏಡಿಯ ಚಲನೆಯನ್ನು ಸೂರ್ಯನ ಈ ಚಲನೆ ನೆನಪಿಸಿದ್ದರಿಂದ ಕಟಕ (Cancer, the Crab) ಮಾಸ. ಆ ನಂತರದ ಒಂದು ತಿಂಗಳು ಈಜಿಪ್ಟಿಗೆ ಉರಿಬಿಸಿಲಿನ ಕಾಲ. ಮರುಭೂಮಿಯ ಸಿಂಹಗಳು ನೈಲ್ ನದೀ ದಂಡೆಗೆ ಬರುತ್ತಿದ್ದ ಕಾಲ – ಸಿಂಹ (Leo, the Lion)  ಮಾಸ. ಆರನೆಯ ತಿಂಗಳು ಸುಗ್ಗಿಯ ಕಾಲ. ಎಂದೇ, ಕುಲವರ್ಧಕಳಾದ ಕನ್ಯೆಯ (Virgo, the Virgin)  ಮಾಸ. ಏಳನೆಯ ತಿಂಗಳು, ಹಗಲು ರಾತ್ರಿಗಳು ಹೆಚ್ಚು ಕಮ್ಮಿ ಸಮವಾಗಿರುತ್ತದ್ದ ಕಾಲ ತುಲಾ (Libra, the Scales)  ಮಾಸ. ಎಂಟನೆಯ ತಿಂಗಳು ಈಜಿಪ್ಟನ್ನು ರೋಗರುಜಿನಗಳು ಕಾಡುತ್ತಿದ್ದ ಕಾಲ, ಆದ್ದರಿಂದ ವೃಶ್ಚಿಕ (Scorpio, the Scorpion)  ಮಾಸ. ಒಂಭತ್ತನೆಯ ತಿಂಗಳು ಬೇಟೆಯಾಡುವ ಕಾಲ. ಅವರ ಪ್ರಮುಖ ಆಯುಧ, ಧನು (Sagittarius, the Archer) ಮಾಸ. ಹತ್ತನೆಯ ತಿಂಗಳು ಸೂರ್ಯ ಉತ್ತರಾಭಿಮುಖಿಯಾಗಿ ಏರಲಾರಂಭಿಸುವ ಕಾಲ ಕೊಂಬಿನ ಹೋತದ, ಅರ್ಥಾತ್ ಮಕರ (Capricornus, the Horned Goat)  ಮಾಸ. ಮಳೆ ಬರುವ ತಿಂಗಳು ನೀರು ತರುವವನ, ಅರ್ಥಾತ್ ಕುಂಭ (Aquarius, the Water Bearer)  ಮಾಸ. ಮಳೆಗಾಲದ ಬಳಿಕ ಮೀನುಗಳು ಹೇರಳವಾಗಿ ದೊರೆಯುವ ತಿಂಗಳು ಮೀನ (Pisces, the Fish)  ಮಾಸ. ಆಯಾಯಾ ಕಾಲದಲ್ಲಿ ಸೂರ್ಯ ಸಂಚರಿಸುತ್ತಿದ್ದ ಆಕಾಶ ಭಾಗಕ್ಕೆ ಆ ಹೆಸರುಗಳು. ತದನಂತರ ಆ ಭಾಗದಲ್ಲಿದ್ದ ತಾರೆಗಳಲ್ಲಿ ಅದೇ ಆಕೃತಿಗಳ ಕಲ್ಪನೆ!

ಅದೇನೇ ಇರಲಿ, ಈಜಿಪ್ಟಿನವರು ಬಳಸುತ್ತಿದ್ದ ಹೆಸರುಗಳನ್ನು ಗ್ರೀಕರು ಭಾಷಂತರಿಸಿಕೊಂಡು ತಮ್ಮ ಸಂಸ್ಸೃತಿಗಳ ಪುರಾಣ ಕಥೆಗಳನ್ನು ಜೋಡಿಸಿದರು, ಗ್ರೀಕರು ಬಳಸುತ್ತಿದ್ದ ಹೆಸರುಗಳ ಪೈಕಿ ಒಂಭತ್ತನ್ನು ಭಾರತೀಯರು ಯಥಾವತ್ತಾಗಿ ಸಂಸ್ಕೃತಕ್ಕೆ ಭಾಷಾಂತರಿಸಿಕೊಂಡರು. ಮೂರರ ಹೆಸರುಗಳನ್ನು ಮೂಲ ಹೆಸರುಗಳ ಧ್ವನಿತಾರ್ಥ ಕೊಡುವ ಹಾಗೂ ತಮ್ಮ ಸಂಸ್ಕೃತಿಗೆ ತಕ್ಕುದಾದ ಸಂಸ್ಕೃತ ಹೆಸರುಗಳಾಗಿ ಬದಲಿಸಿದರು. ಆಧುನಿಕರೂ ಈ ೧೨ ರಾಶಿಗಳ ಕ್ಷೇತ್ರಗಳ ವಿಸ್ತೀರ್ಣಗಳನ್ನು ಬದಲಿಸಿದ್ದರೂ ಮೂಲ ಗ್ರೀಕ್-ಈಜಿಪ್ಟ್ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಉಳಿದ ೭೬ ರಾಶಿಗಳಿಗೆ ಖಗೋಳವಿಜ್ಞಾನಿಗಳು ಆಯ್ಕೆಮಾಡಿರುವ ಹೆಸರುಗಳು ಬಹುತೇಕ ಪಾಶ್ಚಾತ್ಯರಿಗೆ ಚಿರಪರಿಚಿತವಾಗಿರುವ ಭೂಚರ, ಜಲಚರ, ಖಗಚರ ಜೀವಿಗಳ ಹಾಗೂ ವಸ್ತುಗಳ ಮತ್ತು ಹೋಮರನ ಮಹಾಕಾವ್ಯಗಳ ನಾಯಕ ನಾಯಿಕೆಯರದ್ದು. ಊಪಯೋಗಿಸಿರುವ ಬಹುತೇಕ ಪದಗಳು ಗ್ರೀಕ್, ಲ್ಯಾಟಿನ್ ಮೂಲದವು. ಎಂದೇ, ನಮಗೆ ಅವು ಅರ್ಥವಾಗುವುದೂ ಕಷ್ಟ, ಅವುಗಳನ್ನು ಉಚ್ಚರಿಸುವುದೂ ನೆನಪಿನಲ್ಲಿ ಇಟ್ಟುಕೊಳ್ಳುವುದೂ ಕಷ್ಟ. ಈ ಸಂಕಷ್ಟದಿಂದ ಭಾರತೀಯರನ್ನು ಪಾರುಮಾಡಲೋಸುಗ  ಭಾರತೀಯ ಸಂಸ್ಸೃತಿಗೆ ವಿಹಿತವಾದ ಸಂಸ್ಕೃತ ಹೆಸರುಗಳನ್ನು ಸೃಷ್ಟಿಸಿದ ಖ್ಯಾತಿ ಕನ್ನಡನಾಡು ಕಂಡ ಅದ್ವಿತೀಯ ವಿಜ್ಞಾನ ಲೇಖಕ ದಿ. ಆರ್ ಎಲ್ ನರಸಿಂಹಯ್ಯ ಅವರಿಗೆ ಸಲ್ಲುತ್ತದೆ. ಅವರು ಅನುಸರಿಸಿದ ಸೂತ್ರಗಳು ಇಂತಿವೆ: ಯಾವುದಾದರೂ ರಾಶಿಗೆ ಅಥವ ಪುಂಜಕ್ಕೆ ಆರ್ಷೇಯವಾದ ಭಾರತೀಯ ಹೆಸರು ಇದ್ದರೆ ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ವ್ಯಕ್ತಿ ನಾಮಗಳಿರುವ ರಾಶಿಗಳಿಗೆ ಖಗೋಳದಲ್ಲಿ ರಾಶಿಯ ಸ್ಥಾನ, ಮೂಲ ಹೆಸರಿನ ವ್ಯಕ್ತಿಗಳ ಹಿನ್ನೆಲೆ ಇವನ್ನು ಗಮನದಲ್ಲಿ ಇಟ್ಟುಕೊಂಡು ಭಾರತೀಯ ಪುರಾಣಗಳಿಂದ, ವಿಶೇಷತಃ ಮಹಾಭಾರತದದಿಂದ ಆಯ್ದ ನಾಯಕ ನಾಯಿಕೆಯರ ಹೆಸರುಗಳನ್ನು ಇಡಬೇಕು.  ಇತರ ರಾಶಿ ನಾಮಗಳಿಗೆ ಭಾರತೀಯರಿಗೆ ಪರಿಚಿತವಾಗಿರುವ ಅಥವಾ ಧ್ವನಿತಾರ್ಥ ಉಳ್ಳ ಪಾರಿಭಾಷಿಕ ಪದಗಳನ್ನು ಉಪಯೋಗಿಸಬೇಕು. ಆಯ್ಕೆ ಮಾಡಿದ ಪದಗಳು ಭಾರತದಾದ್ಯಂತ ಉಪಯೋಗಾರ್ಹವಾದವು ಆಗಿರಬೇಕು. ಈ ಸಂದರ್ಭದಲ್ಲಿ ಇನ್ನೂ ಒಂದು ಅಂಶ ಗಮನಿಸಬೇಕು. ಆಸುಪಾಸಿನ ರಾಶಿಗಳ ಹೆಸರುಗಳ ನಡುವೆ ಸಂಬಂಧ ಕಲ್ಪಿಸಿ ಕಥೆ ಹೆಣೆಯಲು ಅನುಕೂಲವಾಗುವಂತೆ ರಾಶಿಗಳಿಗೆ ನಾಮಕರಣ ಮಾಡಿದ್ದಾರೆ ಪುರಾತನರು. ಇದೇ ತಂತ್ರವನ್ನು ಭಾಷಾಂತರ ಮಾಡುವವರೂ ಅಳವಡಿಸಿಕೊಂಡಿದ್ದಾರೆ.

ರಾಶಿಯ ಕನ್ನಡ ಹೆಸರು, ಪಾಶ್ಚಾತ್ಯ ಹೆಸರು, ತದನಂತರ ಪಾಶ್ಚಾತ್ಯ ಹೆಸರಿನ ಹಿನ್ನೆಲೆ, ಅಗತ್ಯವಿರುವಲ್ಲಿ ಕನ್ನಡ ಹೆಸರಿನ ಔಚಿತ್ಯ – ಇವಿಷ್ಟನ್ನು ಪಟ್ಟಿ ಮಾಡಿದೆ.

೩.೨ ನಾಮ ವಿವರ

೧. ಅಗ್ನಿಕುಂಡ, ಫಾರ್‌ನ್ಯಾಕ್ಸ್: ಆರಂಭದಲ್ಲಿ ಇದ್ದ ಹೆಸರು ಫಾರ್‌ನ್ಯಾಕ್ಸ್ ಕೆಮಿಕಾ. ಈ ಪದದ ಅರ್ಥ – ರಾಸಾಯನಿಕ ಪ್ರಯೋಗಗಳಲ್ಲಿ ಬಳಕೆ ಇದ್ದ ಘನ ಇಂಧನ ಕುಂಡ. ಎಂದೇ, ಕನ್ನಡದಲ್ಲಿ ಅಗ್ನಿಕುಂಡ.

೨. ಅಜಗರ, ಹೈಡ್ರ: ಸೊಟ್ಟನಾಗಿ ತಿರಿಚಿಕೊಂಡಿರುವ ಹಾವಿನ ಬಿಂಬದ ಕಲ್ಪನೆ. ಬಹು ದೊಡ್ಡ ರಾಶಿ. ಎಂದೇ, ಕನ್ನಡದಲ್ಲಿ ಅಜಗರ ಎಂಬ ಹೆಸರು. ಗ್ರೀಕ್ ದೇವ ಅಪಾಲೊ ನೀರು ತರಲೋಸುಗ ಕಳುಹಿಸಿದ ಕಾಗೆಯೊಂದು ಸೋಮಾರಿತನದಿಂದ ಅಲ್ಲಿಇಲ್ಲಿ ವಿರಮಿಸುತ್ತಾ ಹೋಗಿ ಕೊನೆಗೆ ಚಿಕ್ಕ ಬಟ್ಟಲಿನಲ್ಲಿ ನೀರನ್ನೂ ತಡವಾಗಲು ಕಾರಣವಾದದ್ದು ಎಂದು ಒಂದು ಹಾವನ್ನೂ ಸಾಕ್ಷಿಯಾಗಿ ತಂದಿತಂತೆ. ಕಾಗೆಯ ಸುಳ್ಳಿನಿಂದ ಕುಪಿತನಾದ ಅಪಾಲೊ ಕಾಗೆ, ಬಟ್ಟಲು ಮತ್ತು ಹಾವುಗಳನ್ನು ಆಕಾಶಕ್ಕೆ ಎಸೆದನಂತೆ. ಇನ್ನೊಂದು ಕಥೆಯ ಪ್ರಕಾರ ಗ್ರೀಕ್ ವೀರ ಹರ್ಕ್ಯುಲೀಸ್ ಕೊಂದ ಅನೇಕ ತಲೆಗಳುಳ್ಳ ಸರ್ಪದಂಥ ವಿಕಾರರೂಪೀ ದೈತ್ಯ ಜಲಚರ ಪ್ರಾಣಿ (ಅಥವ ಜಲ ರಾಕ್ಷಸ) ಹೈಡ್ರ ಎಂಬ ಕಥೆಯೂ ಇದೆ.

೩. ಅಷ್ಟಕ, ಆಕ್ಟೇನ್: ಖಗೋಳಕಾಯಗಳ ಔನ್ನತ್ಯವನ್ನು ಅಳೆಯಲು ಉಪಯೋಗಿಸುವ, ಪ್ರತಿಫಲನ ಕನ್ನಡಿಗಳ ನಡುವೆ ಗರಿಷ್ಠ ೪೫ ಕೋನವುಳ್ಳ ಸಾಧನ ಆಕ್ಟೇನ್. ಅಷ್ಟಕ ಕನ್ನಡದ ಪಾರಿಭಾಷಿಕ ಪದ.

೪. ಉತ್ತರ ಕಿರೀಟ, ಕರೋನ ಬೋರಿಆಲಿಸ್: ಪ್ರಮುಖ ತಾರೆಗಳು ಅರ್ಧವೃತ್ತ ರಚಿಸುವುದರಿಂದ ಕರೋನ ಅರ್ಥಾತ್ ಕಿರೀಟ ಎಂದು ಟಾಲಮಿ ಹೆಸರಿಸಿದ. ‘ಬೋರಿಯಾಲಿಸ್ ಅರ್ಥಾತ್ ಉತ್ತರ’ ಎಂಬ ವಿಶೇಷಣ ಸೇರಿಸಿದ್ದು ಆಧುನಿಕರು. ಉತ್ತರ ಕಿರೀಟ ಕನ್ನಡ ಭಾಷಾಂತರ.

೫. ಉರಗಧರ, ಆಫೀಯೂಕಸ್: ಆಫೀಯೂಕಸ್ ಪದದ ಅರ್ಥ ‘ಹಾವು ಹಿಡಿದಿರುವವನು’. ಉರಗಧರ ಕನ್ನಡ ಭಾಷಾಂತರ.

೬. ಏಕಶೃಂಗಿ, ಮನಾಸರಸ್: ಮನಾಸರಸ್ ಎಂಬುದು ಒಕ್ಕೊಂಬೀ ಕುದುರೆಯ ರೂಪದ ಪ್ರಾಣಿ. ಶೃಂಗಿ ಎಂಬ ಪದಕ್ಕೆ ಒಂದು ಬಗೆಯ ಕುದುರೆ ಎಂಬ ಅರ್ಥವೂ ಇದೆ. ಎಂದೇ ಕನ್ನಡದಲ್ಲಿ ಏಕಶೃಂಗಿ.

೭. ಕಂದರ, ಕ್ರೇಟರ್: ಕ್ರೇಟರ್ ಪದದ ಮೂಲ ಅರ್ಥ: ಕಪ್, ಅರ್ಥಾತ್ ಇಂದು ಚಹ ಕುಡಿಯುವ ಚಿಕ್ಕ ಬಟ್ಟಲು.  ಗ್ರೀಕ್ ದೇವತೆ ಅಪಾಲೊ ಬಿಸಾಡಿದ ‘ಕಪ್’ನಂಥ ಚಿಕ್ಕ ಬಟ್ಟಲು ಎಂಬ ಕಲ್ಪನೆ. (ನೋಡಿ: ಅಜಗರ). ಬಲು ಕ್ಷೀಣ ತಾರೆಗಳಿರುವುದರಿಂದ ಬರಿಗಣ್ಣಿಗೆ ಗೋಚರಿಸುವುದು ಕಷ್ಟ. ಎಂದೇ ಕನ್ನಡದಲ್ಲಿ ಕಂದರ.

೮. ಕನ್ಯಾ, ವರ್ಗೋ: ಜ್ಯೋತಿಷ್ಚಕ್ರದಲ್ಲಿ ಮಹತ್ವ ಉಳ್ಳ ಈ ರಾಶಿ ಯಾರನ್ನು ಪ್ರತಿನಿಧಿಸುತ್ತದೆ ಎಂಬುದು ಅಸ್ಪಷ್ಟ. ಹೆಚ್ಚುಕಮ್ಮಿ ಎಲ್ಲ ಮುಖ್ಯ ದೇವತೆಗಳೊಂದಿಗೆ ಜೋಡಿಸಿದ ಕಥೆಗಳಿವೆ. ಒಂದು ಗ್ರೀಕ್ ಕಥೆಯ ಪ್ರಕಾರ ಸ್ಯೂಸ್ ಮತ್ತು ತೀಮಸ್ ದೇವ ದಂಪತಿಗಳ ಮಗಳು ಏಸಟ್ರಿಅ ಎಂಬ ನ್ಯಾಯದೇವತೆಯನ್ನು ಇದು ಪ್ರತಿನಿಧಿಸುತ್ತದೆ. ಮುಂದಿನ ರಾಶಿಯೇ ತುಲಾ ಎಂಬುದನ್ನು ಗಮನಿಸಿ. ಈಕೆ ಕುಮಾರಿಯಾಗಿಯೇ ಉಳಿದು ಜಗತ್ತನ್ನು ನ್ಯಾಯಸಮ್ಮತವಾಗಿ ಆಳುತ್ತಿದ್ದಳಂತೆ. ಕ್ರಮೇಣ ಮಾನವರು ಪಾಷಾಣ ಹೃದಯಿಗಳಾಗುತ್ತಿರುವುದನ್ನು ಗಮನಿಸಿ ಬೇಸತ್ತು ಆಕಾಶಕ್ಕೆ ಹಿಂದಿರುಗಿದಳಂತೆ. ದ್ವಾದಶ ರಾಶಿಗಳ ಪೈಕಿ ಒಂದು. ಎಂದೇ, ಮೂಲ ಹೆಸರಿನ ಭಾಷಾಂತರ ಕನ್ಯಾ.

೯. ಕಪೋತ, ಕಲಂಬ: ಕಲಂಬ ಪದದ ಅರ್ಥ – ಪಾರಿವಾಳ. ಎಂದೇ, ಕನ್ನಡದಲ್ಲಿ ಕಪೋತ.

೧೦. ಕರ್ಕಾಟಕ, ಕಟಕ, ಕ್ಯಾನ್ಸರ್: ಕ್ಯಾನ್ಸರ್ ಎಂಬ ಪದಕ್ಕೆ ಏಡಿ ಎಂಬ ಅರ್ಥವೂ ಇದೆ. ಹರ್ಕ್ಯುಲೀಸ್ ಹೈಡ್ರಾ ಎಂಬ ಪ್ರಾಣಿಯೊಂದಿಗೆ ಹೋರಾಡುತ್ತಿದ್ದಾಗ (ನೋಡಿ: ಅಜಗರ) ಅವನನ್ನು ಇಷ್ಟ ಪಡದ ಹಿರ ಎಂಬ ದೇವತೆ ಅವನ ಗಮನವನ್ನು ಬೇರೆಡೆಗೆ ಸೆಳೆಯಲೋಸುಗ ಏಡಿಯೊಂದನ್ನು ಕಳುಹಿಸಿದಳಂತೆ. ಅದು ಅವನ ಪಾದವೊಂದರ ಹೆಬ್ಬೆರಳನ್ನು ಹಿಡಿದು ಅಲುಗಾಡಿಸಿತಂತೆ. ಕೋಪಗೊಂಡ ಹರ್ಕ್ಯುಲೀಸ್ ಹೈಡ್ರಾದಿಂದ ಹೋರಾಡುತ್ತಲೇ ಏಡಿಯನ್ನು ತುಳಿದು ಕೊಂದನಂತೆ. ಏಡಿಯ ತ್ಯಾಗಕ್ಕೆ ಮನಸೋತ ದೇವತೆ ಅದಕ್ಕೆ ಆಕಾಶದಲ್ಲಿ ಸ್ಥಾನ ಕಲ್ಪಿಸಿದಳಂತೆ. ಏಡಿ ತನ್ನ ಕಾರ್ಯದಲ್ಲಿ ಯಶಸ್ವಿ ಆಗದಿದ್ದುದರಿಂದ ಏಡಿಗೆ ಉಜ್ವಲ ತಾರೆಗಳನ್ನು ಕೊಡಲಿಲ್ಲವಂತೆ. ದ್ವಾದಶ ರಾಶಿಗಳ ಪೈಕಿ ಒಂದು. ಎಂದೇ, ಮೂಲ ಹೆಸರಿನ ಭಾಷಾಂತರ ಕರ್ಕಾಟಕ ಅಥವ ಕಟಕ.

೧೧. ಕಾಳಭೈರವ, ಕೇನೀಜ್ವಿನ್ಯಾಟಿಸೈ: ಕೇನೀಜ್ವಿನ್ಯಾಟಿಸೈ ಎಂದರೆ ‘ಬೇಟೆನಾಯಿಗಳು’.  ದನಗಾಹಿ ಬೋಟೀಸ್ ಹಗ್ಗದಿಂದ ಕಟ್ಟಿ ಹಿಡಿದಿರುವ ಎರಡು ನಾಯಿಗಳು ಇವು ಎಂಬ ಕಲ್ಪನೆ ಇದೆ. ಕನ್ನಡದಲ್ಲಿ ಕಾಳಭೈರವ.

೧೨. ಕಾಳಿಂಗ, ಹೈಡ್ರಸ್: ಒಂದು ಜಾತಿಯ ನೀರುಹಾವಿನ ಹೆಸರು ಹೈಡ್ರಸ್. ಕನ್ನಡದಲ್ಲಿ ಕಾಳಿಂಗ. ಇದು ಮಹಾಭಾರತದಲ್ಲಿ ಉಲ್ಲೇಖಿಸಿರುವ ಜಲಸರ್ಪ.

೧೩. ಕಿನ್ನರ, ಸೆಂಟಾರಸ್: ಸೆಂಟಾರಸ್ ಅರ್ಧ ಕುದುರೆ ಅರ್ಧ ಮನುಷ್ಯನಂಥ ಪೌರಾಣಿಕ ಪ್ರಾಣಿ, ಅರ್ಥಾತ್ ನರಾಶ್ವ. ಗ್ರೀಕ್ ಪುರಾಣಗಳಲ್ಲಿ ವರ್ಣಿಸಿರುವ ಧನುರ್ಧಾರಿ ಕೈರಾನ್ ಎಂಬ ನರಾಶ್ವದ ಕಲ್ಪನೆ ಈ ರಾಶಿಯಲ್ಲಿ. ನಮ್ಮ ಪುರಾಣಗಳಲ್ಲಿ ಬರುವ ಕಿನ್ನರರನ್ನು ಹೋಲುವುದರಿಂದ ಕನ್ನಡದಲ್ಲಿ ಈ ಹೆಸರು.

೧೪. ಕಿಶೋರ, ಎಕ್‌ವ್ಯೂಲಿಅಸ್: ಎಕ್‌ವ್ಯೂಲಿಅಸ್ ಪದದ ಅರ್ಥ ‘ಕುದುರೆ ಮರಿ’. ಎಂದೇ, ಕನ್ನಡದಲ್ಲಿ ಕಿಶೋರ. ಯಾವುದೇ ಪ್ರಾಣಿಯ ಮರಿ, ಕುದುರೆಯ ಮರಿ ಎಂದು ಈ ಪದದ ಮೊದಲನೇ ಅರ್ಥ.

೧೫. ಕುಂತೀ, ಕ್ಯಾಸಿಓಪಿಯಾ: ಕ್ಯಾಸಿಯೋಪಿಯಾ ತನ್ನ ಅಸಮಾನ ಸೌಂದರ್ಯದ ಕುರಿತು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಈ ರಾಣಿಯ ಕಥೆ ಗ್ರೀಕ್ ಪುರಾಣಗಳಲ್ಲಿ ಇದೆ. ಗುಣದಲ್ಲಿ ಹೋಲಿಕೆ ಇಲ್ಲದಿದ್ದರೂ ಮಹಾಭಾರತದ ಕುಂತೀ ಹೆಸರನ್ನು ಇದಕ್ಕೆ ಇಡಲಾಗಿದೆ, ಇತರ ಇಂಥ ರಾಶಿನಾಮಗಳೊಂದಿಗೆ ಹೊಂದಾಣಿಕೆ ಆಗುತ್ತದೆ ಎಂಬ ಕಾರಣಕ್ಕಾಗಿ.

೧೬. ಕುಂಭ, ಅಕ್ವೇರಿಅಸ್: ನೀರು ಹೊರುವವ –ಇದು ಅಕ್ವೇರಿಅಸ್ ಪದದ ಅರ್ಥ. ತೊರೆಯೊಂದಕ್ಕೆ ಗಡಿಗೆಯಿಂದ ನೀರು ಸುರಿಯುತ್ತಿರುವ ಮನುಷ್ಯ ಬಿಂಬದ ಕಲ್ಪನೆ. ಗ್ರೀಕ್ ದಂತಕಥೆಯೊಂದರ ಪ್ರಕಾರ ಜಲಪ್ರಳಯಕ್ಕೆ ಬೇಕಾದ ನೀರು ಪೂರೈಸಿದವ ಈತ. ಭಾರತೀಯ ಸಂಸ್ಸೃತಿಗೆ ವಿಹಿತವಾಗುವಂತೆ ಕುಂಭ ಎಂದು ಪುರಾತನರಿಂದ ಭಾಷಾಂತರ.

೧೭. ಕೃಷ್ಣವೇಣಿ, ಕೋಮ ಬೆರನೈಸೀಸ್: ಬೆರನೈಸೀಸ್ಳ ಕೂದಲು ಎಂದು ಪದದ ಅರ್ಥ. ಬಹುಕಾಲ ಈ ರಾಶಿಯ ಪ್ರಧಾನ ಪುಂಜವನ್ನು ಸಿಂಹದ ಬಾಲದ ತುದಿ ಎಂದು ಕೆಲವರು, ಕನ್ಯೆಯ ಭಾಗ ಎಂದು ಕೆಲವರು ಪರಿಗಣಿಸುತ್ತಿದ್ದರು. ಆಧುನಿಕ ರಾಶಿ ಆಗಿದ್ದರೂ ಈ ಪುಂಜಕ್ಕೆ ಚಾರಿತ್ರಿಕ ವ್ಯಕ್ತಿಗೆ ಸಂಬಂಧಿಸಿದಂತೆ ದಂತಕಥೆ ಇದೆ. ಅಲೆಕ್ಸಾಂಡ್ರಿಯದ ರಾಜ ಮೂರನೇ ಟಾಲಮಿಯ ಪತ್ನಿ ಈಜಿಪ್ಟಿನ ಎರಡನೇ ಬೆರನೈಸೀಸ್. ದಂಡಯಾತ್ರೆ ಹೋಗಿದ್ದ ರಾಜ ಸುರಕ್ಷಿತವಾಗಿ ಹಿಂದಿರುಗಿದರೆ ತನ್ನ ಉದ್ದನೆಯ ಸುಂದರ ತಲೆಗೂದಲನ್ನು ಕತ್ತರಿಸಿ ದೇವತೆಗೆ ಅರ್ಪಿಸುವೆ ಎಂದು ಹರಕೆ ಹೊತ್ತಳಂತೆ. ರಾಜ ಹಿಂದಿರುಗಿದ, ರಾಣಿ ತಲೆಗೂದಲನ್ನು ಕತ್ತರಿಸಿ ದೇವತೆಯ ಮುಂದೆ ಇಟ್ಟಳಂತೆ, ಮಾರನೆಯ ದಿನ ನೋಡಿದಾಗ ಅದು ಮಾಯವಾಗಿತ್ತಂತೆ. ಕುಪಿತಗೊಂಡ ರಾಜ ರಾಣಿಯರನ್ನು ಸಮಾಧಾನ ಪಡಿಸಲೋಸುಗ ಆಸ್ಥಾನ ಜ್ಯೋತಿಷಿ ದೇವತೆ ಸಂತುಷ್ಟಳಾಗಿ ಕೂದಲಿಗೆ ಆಕಾಶದಲ್ಲಿ ಸ್ಥಾನ ಕಲ್ಪಿಸಿರುವುದಾಗಿ ಸಮಜಾಯಿಷಿ ನೀಡಿದನಂತೆ. ಕಪ್ಪಾದ ಜಡೆ ಎಂಬ ಅರ್ಥದ ಪದ ಕೃಷ್ಣವೇಣಿ.

೧೮. ಖೇಟಕ, ಸ್ಕ್ಯೂಟಮ್: ಸ್ಕ್ಯೂಟಮ್ ಪದದ ಅರ್ಥ ಗುರಾಣಿ. ಆದುನಿಕ ರಾಶಿಗಳ ಪೈಕಿ ಒಂದಾಗಿರುವುದರಿಂದ ದಂತಕಥೆಗಳಿಲ್ಲ. ಪೋಲೆಂಡಿನ ರಾಜ 3 ನೇ ಜಾನ್ ಸೊಬೈಸ್ಕಿ ಎಂಬಾತನ ಲಾಂಛನವನ್ನು ಪ್ರತಿನಿಧಿಸುವ ವಿನ್ಯಾಸ. ಕನ್ನಡದ ಗುರಾಣಿ ಪದದ ಸಂಸ್ಕೃತ ಭಾಷಾಂತರ ಖೇಟಕ.

೧೯. ಗರುಡ, ಅಕ್ವಿಲ: ಅಕ್ವಿಲ ಪದದ ಅರ್ಥ ಹದ್ದು. ಎಂದೇ, ಕನ್ನಡದಲ್ಲಿ ಎಲ್ಲರಿಗೂ ಪರಿಚಿತವಾದ ಗರುಡ.

೨೦. ಚಂಚಲವರ್ಣಿಕಾ,  ಕಮೀಲಿಅನ್: ಕನ್ನಡದ ಗೋಸುಂಬೆಯೇ ಕಮೀಲಿಅನ್. ಭಾರತಾದ್ಯಂತ ಉಪಯೋಗಿಸಬಹುದು ಎಂಬ ಕಾರಣಕ್ಕಾಗಿ ಧ್ವನಿತಾರ್ಥ ಇರುವ ಸಂಸ್ಕತ ಪದ ಚಂಚಲವರ್ಣಿಕಾ.

೨೧. ಚಕೋರ, ಫೀನಿಕ್ಸ್: ಶತಮಾನಗಳ ಕಾಲ ಬಾಳಿ ಕೊನೆಗೆ ಚಿತೆಯೊಂದನ್ನು ತಾನೇ ಮಾಡಿ ಅದನ್ನು ಪ್ರವೇಶಿಸಿ ಸುಟ್ಟು ಬೂದಿಯಗಿ, ಅದರಿಂದಲೇ ಹೊಸಕಾಯದೊಂದಿಗೆ ಮರುಹುಟ್ಟು ಪಡೆದು ಪುನಃ ಅಷ್ಟೇಕಾಲ ಬಾಳುತ್ತಿತ್ತು ಎನ್ನಲಾದ ಪೌರಾಣಿಕ ಪಕ್ಷಿ ಫೀನಿಕ್ಸ್. ನಮಗೆ ಅಪರಿಚಿತ. ಚಂದ್ರಕಿರಣಗಳನ್ನು ನುಂಗಿ ಬದುಕುತ್ತದೆ ಎನ್ನಲಾದ ಭಾರತೀಯ ಪೌರಾಣಿಕ ಪಕ್ಷಿ ಚಕೋರ.

೨೨. ಚತುಷ್ಕ, ನಾರ್ಮ: ಲಂಬಕೋನ – ಇದು ನಾರ್ಮ ಪದದ ಅರ್ಥ. ಬಡಗಿಗಳು ಲಂಬಕೋನ ಗುರುತಿಸಲು ಉಪಯೋಗಿಸುವ ಚೌಕಾಕೃತಿಯ ಸಾಧನ ಎಂಬುದು ಧ್ವನಿತಾರ್ಥ. ಎಂದೇ ಕನ್ನಡದಲ್ಲಿ ಚತುಷ್ಕ.

೨೩. ಚಿತ್ರಫಲಕ, ಪಿಕ್ಟರ್: ವರ್ಣಚಿತ್ರ ಬಿಡಿಸಲು ಚಿತ್ರಗಾರ ಉಪಯೋಗಿಸುವ ಚೌಕಟ್ಟಿನ ಹೆಸರು ಪಿಕ್ಟರ್. ಎಂದೇ ಕನ್ನಡದಲ್ಲಿ ಚಿತ್ರಫಲಕ.

೨೪. ಜಾಲ, ರೆಟಿಕ್ಯುಲಮ್: ತಾರೆಗಳ ಸ್ಥಾನಗಳನ್ನು ಅಳೆಯಲು ಉಪಯೋಗಿಸುವ ಸಾಧನ ಎಂಬ ಅರ್ಥದಲ್ಲಿ ರೆಟಿಕ್ಯುಲಮ್ ಎಂದು ರಾಶಿಯನ್ನು ಹೆಸರಿಸಿದ್ದರೂ ಜಾಲ ಎಂಬ ಅರ್ಥ ಇರುವುದರಿಂದಲೂ ಮತ್ಸ್ಯ ರಾಶಿಯ ಪಕ್ಕದಲ್ಲಿ ಇರುವುದರಿಂದಲೂ ಕನ್ನಡದಲ್ಲಿ ಜಾಲ ಎಂದು ಹೆಸರು.

೨೫. ತಿಮಿಂಗಿಲ, ಸೀಟಸ್: ಪ್ರಾಚೀನ ಗ್ರೀಕರು ಸಾಗರ ದೈತ್ಯ, ಬೃಹದಾಕಾರದ ಮೀನು, ತಿಮಿಂಗಿಲಗಳನ್ನು ಸೀಟಸ್ ಎಂದು ಕರೆಯತ್ತಿದ್ದರು. ಎಂದೇ, ಕನ್ನಡದಲ್ಲಿ ತಿಮಿಂಗಿಲ.

೨೬. ತುಲಾ, ಲೀಬ್ರಾ: ಗ್ರೀಕ್ ನ್ಯಾಯದೇವತೆಯ ತಕ್ಕಡಿಯನ್ನು ಕಲ್ಪಿಸಿಕೊಂಡದ್ದರಿಂದ ಈ ಹೆಸರು. (ನೋಡಿ: ಕನ್ಯಾ).

೨೭. ತ್ರಿಕೋಣಿ, ಟ್ರೈಆಂಗ್ಯುಲಮ್: ಟ್ರೈಆಂಗ್ಯುಲಮ್ ಪದದ ನೇರ ಭಾಷಾಂತರ ತ್ರಿಕೋಣಿ.

೨೮. ತ್ರಿಶಂಕು, ಕ್ರಕ್ಸ್: ಕ್ರಕ್ಸ್ ಎಂದರೆ ಶಿಲುಬೆ ಎಂದರ್ಥ. ದಕ್ಷಿಣ ಶಿಲುಬೆ ಎಂದೂ ಕರೆಯುವುದುಂಟು. ಭಾರತೀಯ ಸಂಸ್ಕೃತಿಗೆ ಒಗ್ಗುವ ತ್ರಿಶಂಕು ಎಂದು ಕನ್ನಡದಲ್ಲಿ ಹೆಸರಿಸಿದೆ. ಮೇಲಕ್ಕೇರಲಾಗದೆ, ಪೂರ್ಣ ಕೆಳಕ್ಕೂ ಇಳಿಯಲಾಗದ ತ್ರಿಶಂಕುವಿನ ಸ್ಥಿತಿ ಈ ದಕ್ಷಿಣದಲ್ಲಿರುವ ರಾಶಿಯದು. ಎಂದೇ ಇದು ಅನ್ವರ್ಥ ನಾಮ.

೯. ದಕ್ಷಿಣ ಕಿರೀಟ, ಕರೋನ ಆಸ್ಟ್ರೇಲಿಸ್: ಸದರನ್ ಕರೋನ ಎಂಬ ಹೆಸರೂ ಇರುವುದರಿಂದ ದಕ್ಷಿಣ ಕಿರೀಟ.

೩೦. ದಕ್ಷಿಣ ತ್ರಿಕೋಣ, ಟ್ರೈಆಂಗ್ಯುಲಮ್ ಆಸ್‌ಟ್ರೈಲೀ: ದಕ್ಷಿಣದಲ್ಲಿ ಇರುವ ತ್ರಿಕೋನವಾದ್ದರಿಂದ . ದಕ್ಷಿಣ ತ್ರಿಕೋಣಿ.

೩೧. ದಕ್ಷಿಣ ಮೀನ, ಪೈಸೀಸ್ ಆಸ್ಟ್ರಿನಸ್: ಸದರನ್ ಫಿಶ್ ಎಂಬ ಹೆಸರೂ ಇರುವುದರಿಂದ ದಕ್ಷಿಣ ಮೀನ.

೩೨. ದಿಕ್ಸೂಚಿ, ಪಿಕ್ಸಿಸ್: ನೋಡಿ – ದೇವನೌಕಾ.

೩೩. ದೀರ್ಘಕಂಠ, ಕ್ಯಾಮೆಲಾಪರ‍್ಡಾಲಿಸ್: ಕ್ಯಾಮೆಲಾಪರ‍್ಡಾಲಿಸ್ ಎಂದರೆ ಜಿರಾಫೆ. ಜಿರಾಫೆಗೆ ಉದ್ದನೆಯ ಕತ್ತು ಇರುವುದರಿಂದ ಕನ್ನಡದಲ್ಲಿ ದೀರ್ಘಕಂಠ.

೩೪. ದೂರದರ್ಶಿನಿ, ಟೆಲಿಸ್ಕೋಪಿಯಮ್: ಇಂಗ್ಲಿಷ್ ಹೆಸರಿನ ನೇರ ಅನುವಾದ ದೂರದರ್ಶಿನಿ.

೩೫. ದೇವನೌಕಾ, ಕರೈನ: ಪುರಾತನರು ಆರ್ಗೋ ಎಂದು ಕರೆಯತ್ತಿದ್ದ ಅತಿ ದೊಡ್ಡ ರಾಶಿಯನ್ನು ಆಧುನಿಕ ಖಗೋಳಜ್ಞರು ಅಧ್ಯಯಿಸಲು ಅನುಕೂಲವಾಗಲಿ ಎಂದು ಕರೈನ, ಪಪಿಸ್, ಪಿಕ್ಸಿಸ್ ಮತ್ತು ವೀಲ ಎಂಬ ನಾಲ್ಕು ರಾಶಿಗಳಾಗಿ ಆರ್ಗೋ ಪರಿಕಲ್ಪನೆಗೆ ಧಕ್ಕೆ ಆಗದಂತೆ ವಿಭಜಿಸಿದರು. ಕರೈನ ಪದದ ನಿಜಾರ್ಥ ನೌಕೆಯ ತಳ ರಕ್ಷಿಸುವ ಪಟ್ಟಿ, ಧ್ವನಿತಾರ್ಥ ನೌಕೆ. ಪಪಿಸ್ ಪದದ ನಿಜಾರ್ಥ ನೌಕೆಯ ಹಿಂಭಾಗ, ಅರ್ಥಾತ್ ನೌಕಾಪೃಷ್ಠ, ಪಿಕ್ಸಿಸ್ ಪದದ ನಿಜಾರ್ಥ ಪಟ್ಟಿಗೆ, ಧ್ವನಿತಾರ್ಥ ನಾವಿಕನ ದಿಕ್ಸೂಚಿ. ವೀಲ ಪದದ ಅರ್ಥ ಹಾಯಿ, ಅರ್ಥಾತ್ ನೌಕಾಪಟ. ಗ್ರೀಕ್ ಪೌರಾಣಿಕ ಮಹಾವೀರ ಜೇಸನ್ ಎಂಬಾತ ಚಿನ್ನದ ಶಾಲನ್ನು ಹುಡುಕಿ ತರಲೋಸುಗ ಆರ್ಗೋ ಎಂಬ ನೌಕೆಯಲ್ಲಿ ಯಾನ ಬೆಳೆಸಿದನು ಎಂಬುದು ಕಥೆ. ಈ ನೌಕೆಯ ಚಾಲಕ ಕನೋಪಸ್ (ನಮ್ಮ ಪುರಾತನರ ಅಗಸ್ತ್ಯ). ದೇವನೌಕಾ ಎಂದು ಕನ್ನಡಕ್ಕೆ ಭಾವನುವಾದ.

೩೬. ದೇವವಿಹಗ, ಏಪಸ್: ಏಪಸ್ ಗ್ರೀಕ್ ಪೌರಾಣಿಕ ಬರ‍್ಡ್ ಆಫ್ ಪ್ಯಾರಡೈಸ್, ಅರ್ಥಾತ್ ಸ್ವರ್ಗದ ಹಕ್ಕಿ. ಎಂದೇ ಕನ್ನಡದಲ್ಲಿ ದೇವವಿಹಗ. ವಿಹಗ ಎಂದರೆ ಹಕ್ಕಿ.

೩೭. ದ್ರೌಪದಿ, ಆಂಡ್ರೋಮಿಡಾ: ಗ್ರೀಕ್ ಪುರಾಣ ಕಥೆಗಳ ನಾಯಿಕೆಯರ ಪೈಕಿ ಒಬ್ಬಳು ಆಂಡ್ರೋಮಿಡಾ. ಎಂದೇ, ಕನ್ನಡದಲ್ಲಿ ನಮ್ಮ ಪೌರಾಣಿಕ ನಾಯಿಕೆ ದ್ರೌಪದಿಯ ಹೆಸರು.

೩೮. ಧನಿಷ್ಠಾ, ಡೆಲ್‌ಫೈನಸ್: ಡಾಲ್‌ಫಿನ್ ಎಂಬ ಸಮುದ್ರವಾಸಿ ಸ್ಥನಿಯೇ ಡೆಲ್‌ಫೈನಸ್. ನಮ್ಮ ಪುರಾತನರು ಈ ರಾಶಿಗೆ ಧನಿಷ್ಠಾ ಎಂದು ನಾಮಕರಣ ಮಾಡಿದ್ದರು.

೩೯. ಧನು, ಸಜಿಟೆರಿಅಸ್: ಗ್ರೀಕ್ ಪುರಾಣಗಳ ಪ್ರಕಾರ ಸಜಿಟೆರಿಅಸ್ ಒಂದು ನರಾಶ್ವ, ಅರ್ಥಾತ್ ಅರ್ಧ ಕುದುರೆ ಅರ್ಧ ಮನುಷ್ಯ. ಚೇಳನ್ನು ಕೊಲ್ಲಲೋಸುಗ ಗುರಿ ಇಡುತ್ತಿದ್ದಾನೆ ಎಂಬ ಕಥೆಯೂ ಇದೆ. ಪಕ್ಕದಲ್ಲಿ ಇರುವ ಶರ ರಾಶಿ ಈತನ ಬತ್ತಳಿಕೆ! ಭಾರತೀಯ ಸಂಸ್ಸೃತಿಗೆ ಒಗ್ಗುವಂತೆ ಮಾರ್ಪಾಟು ಮಾಡಿ ಧನು ಅಥವ ಧನುಸ್ ಎಂದು ಪುರಾತನರಿಂದ ಭಾವಾನುವಾದ.

೪೦. ನಕುಲ, ಪೆಗಸಸ್: ಗ್ರೀಕ್ ಪುರಾಣಗಳಲ್ಲಿ ವರ್ಣಿಸಿರುವ ರೆಕ್ಕೆಯುಕ್ತ ಕುದುರೆ ಪೆಗಸಸ್. ಗ್ರೀಕ್ ಪೌರಾಣಿಕ ವೀರ ಪರ್ಸೀಅಸ್ ಮೆಡುಸಾ ಎಂಬ ರಾಕ್ಷಸಿಯನ್ನು ಕೊಂದಾಗ ಅವಳ ರಕ್ತದಿಂದ ಪೆಗಸಸ್ ಉದ್ಭವಿಸಿದ ಎಂಬುದು ಕಥೆ. ಕುದುರೆ ಸಂಬಂಧಿತ ಎಂಬ ಕಾರಣಕ್ಕಾಗಿ ಮಹಾಭಾರತದ ಅಶ್ವಶಾಸ್ತ್ರ ಪರಿಣತ ನಕುಲನ ಹೆಸರು.

೪೧. ನೌಕಾಪಟ, , ವೀಲ: ನೋಡಿ – ದೇವನೌಕಾ.

೪೨. ನೌಕಾಪೃಷ್ಠ, ಪಪಿಸ್: ನೋಡಿ – ದೇವನೌಕಾ.

೪೩. ಪಾರ್ಥ, ಪರ್ಸೀಅಸ್: ಗ್ರೀಕ್ ಪೌರಾಣಿಕ ಅಸದೃಶ ವೀರರ ಪೈಕಿ ಒಬ್ಬ ಪರ್ಸೀಅಸ್. ಎಂದೇ, ಮಹಾಭಾರತದ ಪಾರ್ಥನ ಹೆಸರು.

೪೪. ಬಕ, ಗ್ರಸ್: ಗ್ರಸ್ ಎಂದರೆ ಕೊಕ್ಕರೆ. ಎಂದೇ ಕನ್ನಡದಲ್ಲಿ ಬಕ.

೪೫. ಭೀಮ, ಹರ್ಕ್ಯುಲೀಸ್: ಗ್ರೀಕ್ ಪೌರಾಣಿಕ ವೀರ ಹರಾಕ್ಲೀಸ್‌ನ ರೂಪಾಂತರಗೊಂಡ ರೋಮನ್ ಹೆಸರು ಹರ್ಕ್ಯುಲೀಸ್. ಈತ ಖ್ಯಾತನಾದದ್ದು ತನ್ನ ಅಸದೃಶ ದೇಹಬಲಕ್ಕಾಗಿ. ಎಂದೇ ಈ ರಾಶಿಗೆ ಭೀಮನ ಹೆಸರು.

೪೬. ಮಕರ, ಕ್ಯಾಪ್ರಿಕಾರ್ನಸ್: ಕ್ಯಾಪ್ರಿಕಾರ್ನಸ್ ಪದದ ಅರ್ಥ – ಕೊಂಬು ಉಳ್ಳ ಗಂಡು ಮೇಕೆ. ಮೀನಿನಂಥ ಬಾಲ ಇರುವ ಸಾಗರವಾಸಿ ಮೇಕೆ ಎಂಬ ಅರ್ಥವೂ ಇದೆ. ಭಾರತೀಯ ಜಾಯಮಾನಕ್ಕೆ ಒಗ್ಗುವ ರೀತಿ ಮಕರ ಎಂದು ಪುರಾತನರಿಂದ ಧ್ವನಿತಾರ್ಥದ ಭಾಷಾಂತರ

೪೭. ಮತ್ಸ್ಯ, ಡಾರಾಡೊ: ಡಾರಾಡೊ ಎಂಬುದು ಒಂದು ಜಾತಿಯ ಕಡಲ ಮೀನಿನ ಹೆಸರು. ಎಂದೇ, ಕನ್ನಡದಲ್ಲಿ ಮತ್ಸ್ಯ.

೪೮. ಮಯೂರ, ಪೇವೋ: ಪೇವೊ ಎಂದರೆ ನವಿಲು. ಭಾರತದಾದ್ಯಂತ ಅರ್ಥವಾಗುವ ಸಂಸ್ಕೃತ ಪದ ಮಯೂರ.

೪೯. ಮಶಕ, ಮಸ್ಕ: ಮಸ್ಕ ಎಂದರೆ ನೊಣ. ಉಚ್ಚರಣ ಸಾಮ್ಯವಿದೆ ಎಂದು ಸಂಸ್ಕೃತದ ಮಶಕ ಪದಪ್ರಯೋಗ. ವಾಸ್ತವವಾಗಿ ಮಶಕ ಎಂದರೆ ಸೊಳ್ಳೆ.

೫೦. ಮಹಾವ್ಯಾಧ,  ಒರೈಆನ್: ಗ್ರೀಕ್ ಪುರಾಣಗಳಲ್ಲಿ ಒಬ್ಬ ದೈತ್ಯಕಾಯದ ಬೇಟೆಗಾರನ ಹೆಸರು ಒರೈಆನ್. ಈತನ ಕುರಿತು ಅನೇಕ ದಂತಕಥೆಗಳಿವೆ. ಭೂಮಿಯ ಎಲ್ಲ ಪ್ರಾಣಿಗಳನ್ನೂ ಕೊಲ್ಲುವುದಾಗಿ ದೇವತೆಗಳಿಗೆ ಸವಾಲು ಹಾಕಿದ್ದರಿಂದ ಕುಪಿತರಾದ ದೇವತೆಗಳು ಚೇಳೊಂದನ್ನು ಸೃಷ್ಟಿಸಿದರೆಂದೂ, ಅದು ಆತನನ್ನು ಕೊಂದ ಬಳಿಕ ದೇವತೆಗಳೇ ಒರೈಆನ್‌ಗೆ ಮತ್ತು ಚೇಳಿಗೆಳು ಆಕಾಶದಲ್ಲಿ ಸ್ಥಾನ ನೀಡಿದರೆಂದು ಒಂದು ಕಥೆ. ಭಯಭೀತನಾದ ಬೇಟಗಾರ ಓಡುತ್ತಿದಾನೆಚಿದೂ ಚೇಳು ಅವನನ್ನು ಅಟ್ಟಿಸಿಕೊಂಡು ಹೋಗುತ್ತಿದೆಯೆಂದೂ ಇನ್ನೊಂದು ಕಥೆ. ಅದೇನೇ ಇರಲಿ, ಕನ್ನಡದಲ್ಲಿ ಮಹಾವ್ಯಾಧ.

೫೧. ಮಹಾಶ್ವಾನ, ಕ್ಯಾನಿಸ್ ಮೇಜರ್: ಕ್ಯಾನಿಸ್ ಎಂದರೆ ನಾಯಿ. ಮೇಜರ್ ಎಂದರೆ ಪ್ರಧಾನ. ಉಚ್ಚರಣ ಸೌಕರ್ಯಕ್ಕಾಗಿ ಮಹಾಶ್ವಾನ ಎಂದು ಭಾವಾನುವಾದ.

೫೨. ಮಾರ್ಜಾಲ, ಲಿಂಕ್ಸ್: ಒಂದು ಜಾತಿಯ ಕಾಡುಬೆಕ್ಕಿನ ಇಂಗ್ಲಿಷ್ ಹೆಸರು ಲಿಂಕ್ಸ್. ಎಂದೇ ಮಾರ್ಜಾಲ.

೫೩. ಮಿಥುನ, ಜೆಮಿನೈ: ಎರಡು ಸಮಾಂತರ ಕಡ್ಡಿಚಿತ್ರಗಳನ್ನು ಸುಲಭವಾಗಿ ಕಲ್ಪಿಸಿಕೊಂಡು ಅವುಗಳಲ್ಲಿ ಕ್ಯಾಸ್ಟರ್ ಮತ್ತು ಪಾಲಕ್ಸ್ ಎಂಬ ಯಮಳರು ಹಸುಗಳನ್ನು ಕದಿಯಲು ಹೊಂಚುಹಾಕುತ್ತಿದ್ದುದನ್ನು ಕಲ್ಪನಾಚಕ್ಷುವಿನಿಂದ ಪುಂಜದಲ್ಲಿ ನೋಡಿದ್ದರಿಂದ ಈ ಹೆಸರು. ಹಾಲು ಕೊಡುವ ಹಸುಗಳ ಮಂದೆಯ ಮೆರವಣಿಗೆ ಎಂದು ಕಲ್ಪಿಸಿಕೊಂಡ ಕ್ಷೀರಪಥದ ಸಮೀಪದಲ್ಲಿಯೇ ಈ ರಾಶಿ ಇದೆ. ಇವರು ಟ್ರಾಯ್‌ನ ಹೆಲೆನ್‌ಳ ಸಹೋದರರು.

೫೪. ಮೀನ, ಪೈಸೀಜ್: ಪೈಸೀಜ್ ಎಂದರೆ ಮೀನುಗಳು. ಉದ್ದನೆಯ ದಾರಗಳಿಂದ ಒಂದೇ ಬಿಂದುವಿಗೆ ಕಟ್ಟಿದ ಮೀನುಗಳಂತೆ ಗೋಚರಿಸಿದ್ದರಿಂದ ಈ ಹೆಸರು. ನಮ್ಮ ಪುರಾತನರು ಮಾಡಿದ ಭಾಷಾಂತರ ಮೀನ.

೫೫. ಮುಸಲೀ, ಲಸರ್ಟ: ಲಸರ್ಟ ಎಂದರೆ ಹಲ್ಲಿ. ಮುಸಲಿ ಎಂದರೂ ಹಲ್ಲಿ

೫೬. ಮೇಷ, ಏರೀಜ್: ಓಡುತ್ತಿರುವ ಅಥವ ಹಾರುತ್ತಿರುವ ಕುರಿಯನ್ನು ಕಲ್ಪಿಸಿಕೊಂಡದ್ದರಿಂದ ಈ ಹೆಸರು.

೫೭. ಯುಧಿಷ್ಠಿರ, ಸೀಫಿಅಸ್: ಗ್ರೀಕ್ ಪುರಾಣಗಳಲ್ಲಿ ಉಲ್ಲೇಖಿಸಿರುವ ಒಬ್ಬ ರಾಜನ ಹೆಸರು ಸೀಫಿಅಸ್. ಎಂದೇ, ಈ ರಾಶಿಗೆ ಮಹಾಭಾರತದ ಯುಧಿಷ್ಠಿರ ನ ಹೆಸರು.

೫೮. ರಾಜಹಂಸ, ಸಿಗ್ನಸ್: ಸಿಗ್ನಸ್ ಎಂದರೆ ಹಂಸ. ಭಾವಾನುವಾದ ರಾಜಹಂಸ.

೫೯. ರೇಚಕ, ಆಂಟ್‌ಲಿಯ: ಆಂಟ್‌ಲಿಯ ಎಂದರೆ ಪಂಪು. ಕನ್ನಡದಲ್ಲಿ ಉಪಯೋಗಿಸುತ್ತಿರುವ ಇಂಗ್ಲಿಷ್ ಪದ. ತಾರೆಗಳೇ ಇಲ್ಲದ ಸ್ಥಳದಂತೆ ಬರಿಗಣ್ಣಿಗೆ ಕಾಣುವ ರಾಶಿ ಇದಾಗಿರುವುದರಿಂದ ಬರಿದಾಗಿಸುವ ಸಾಧನ ಎಂಬ ಧ್ವನಿತಾರ್ಥ ಇರುವ ರೇಚಕ.

೬೦. ಲಘುಶ್ವಾನ, ಕ್ಯಾನಿಸ್ ಮೈನರ್: ಕ್ಯಾನಿಸ್ ಮೈನರ್ ಎಂದರೆ ಚಿಕ್ಕ ನಾಯಿ. ಲಘುಶ್ವಾನ ಎಂದರೂ ಅದೇ ಅರ್ಥ.

೬೧. ಲಘುಸಪ್ತರ್ಷಿ, ಅರ್ಸ ಮೈನರ್: ಅರ್ಸಾ ಎಂದರೆ ಕರಡಿ. ಅರ್ಸಾ ಮೈನರ್ ಚಿಕ್ಕ ಕರಡಿ. ಅರ್ಸಾ ಮೇಜರ್, ಅರ್ಥಾತ್ ದೊಡ್ಡ ಕರಡಿ ರಾಶಿಯ ಭಾರತೀಯ ಪುರಾತನ ಹೆಸರು ಸಪ್ತರ್ಷಿಮಂಡಲ. ಆದ್ದರಿಂದ ಅರ್ಸಾ ಮೈನರ್ ಲಘುಸಪ್ತರ್ಷಿ.

೬೨. ಲಘುಸಿಂಹ, ಲೀಓ ಮೈನರ್: ಇಂಗ್ಲಿಷ್ ಹೆಸರಿನ ನೇರ ಭಾಷಾಂತರ ಲಘುಸಿಂಹ.

೬೩. ವಿಜಯಸಾರಥಿ, ಆರೈಗ: ಆರೈಗ ಎಂದರೆ ಸಾರಥಿ. ಈ ಕುರಿತು ಅನೇಕ ಗ್ರೀಕ್ ದಂತಕಥೆಗಳಿವೆ. ಮಹಾಭಾರತದ ನಾಯಕ ನಾಯಿಕೆಯರ ಹೆಸರನ್ನು ಅನೇಕ ರಾಶಿಗಳಿಗೆ ಗ್ರೀಕ್ ಹೆಸರುಗಳಿಗೆ ಬದಲಾಗಿ ಇಟ್ಟಿರುವುದರಿಂದ ಕೃಷ್ಣ ಎಂಬ ಧ್ವನಿತಾರ್ಥ ಇರಲಿ ಎಂದು ವಿಜಯಸಾರಥಿ ಎಂಬ ರೂಪಾಂತರಗೊಂಡ ಹೆಸರು.

೬೪. ವೀಣಾ, ಲೈರ: ಪ್ರಾಚೀನ ಗ್ರೀಸ್‌ನಲ್ಲಿ ಜನಪ್ರಿಯವಾಗಿದ್ದ ಬೆರಳುಗಳಿಂದ ಮೀಟಿ ನಾದ ಹೊಮ್ಮಿಸುತ್ತಿದ್ದ ತಂತಿವಾದ್ಯ ಲೈರ. ಎಂದೇ, ಭಾರತೀಯ ತಂತಿವಾದ್ಯ ವೀಣಾ ಎಂದು ಅನುವಾದ.

೬೫. ವೃಕ, ಲ್ಯೂಪಸ್: ಲ್ಯೂಪಸ್ ಎಂದರೆ ತೋಳ. ಎಂದೇ, ವೃಕ ಅರ್ಥಾತ್ ತೋಳ.

೬೬. ವೃತ್ತಿನೀ, ಸರ್ಸಿನಸ್: ಸರ್ಸಿನಸ್ ಎಂದರೆ ದಿಕ್ಸೂಚಿ. ಈ ಹೆಸರಿನ ಇನ್ನೊಂದು ರಾಶಿ ಇದೆ. ಸರ್ಸಿನಸ್ ಎಂಬ ಪದ ಕೇಳಿದಾಗ ಇದು ವೃತ್ತ ಎಂಬ ಅರ್ಥ ಇರುವ ಸರ್ಕಲ್ ಪದಕ್ಕೆ ಸಂಬಂಧಿಸಿರಬೇಕು ಎಂದು ಭಾವಿಸುವ ಸಾಧ್ಯತೆ ಹೆಚ್ಚು. ಎಂದೇ ವೃತ್ತಿನೀ ಎಂದು ನಾಮಕರಣ.

೬೭. ವೃಶ್ಚಿಕ, ಸ್ಕಾರ್ಪಿಯಸ್: ಚೇಳಿನ ಬಾಲವನ್ನು ಪುಂಜದಲ್ಲಿ ಕಲ್ಪಿಸಿಕೊಂಡದ್ದರಿಂದ ಈ ಹೆಸರು. ಗ್ರೀಕ್, ಮಾವೊರಿ ಮತ್ತು ಚೀನೀ ದಂತ ಕಥೆಗಳಿವೆ. ಒಂದು ಕಥೆಯ ಪ್ರಕಾರ ಮಹಾವ್ಯಾಧನನ್ನು ಕೊಲ್ಲಲೋಸುಗ ಕೆಲವು ದೇವತೆಗಳು ಕಳುಹಿಸಿದ ಚೇಳು ಇದು. ಮಹಾವ್ಯಾಧ ರಾಶಿ ಅಸ್ತವಾಗುವಾಗ ಈ ರಾಶಿ ಉದಯಿಸುತ್ತದೆ. ಮಹಾವ್ಯಾಧ ಚೇಳಿನಿಂದ ತಪ್ಪಿಸಿಕೊಂಡು ಓಡುತ್ತಿದ್ದಾನೆ, ಚೇಳು ಅವನನ್ನು ಅಟ್ಟಸಿಕೊಂಡು ಹೋಗುತ್ತಿದೆ!

೬೮. ವೃಷಭ, ಟಾರಸ್: ಗೂಳಿಯನ್ನು ಪುಂಜದಲ್ಲಿ ಕಲ್ಪಿಸಿಕೊಂಡದ್ದರಿಂದ ಟಾರಸ್ ಎಂದು ಹೆಸರು. ಜ್ಯೋತಿಶ್ಶಾಸ್ತ್ರೀಯ ಮಹತ್ವ ಇದೆ. ಯುರೋಪಾ ಎಂಬ ಸುಂದರಿಯನ್ನು ಅಪಹರಿಸಲು ಭವ್ಯವಾದ ಬಿಳಿ ಗೂಳಿಯ ರೂಪ ತಾಳಿದ ಸ್ಯೂಸ್ ದೇವನ ಬಿಂಬ ಇದು ಎಂಬ ಕಥೆಯೂ ಇದೆ. ಪುರಾತನರು ಮಾಡಿದ ಭಾಷಾಂತರ ವೃಷಭ.

೬೯. ವೇದಿಕಾ, ಏರ: ಏರ ಎಂದರೆ ಪೂಜಾವೇದಿಕೆ. ಇದರ ರೂಪಾಂತರ ವೇದಿಕಾ.

೭೦. ವೈತರಿಣೀ, ಇರಿಡನಸ್: ಇರಿಡನಸ್ ಒಂದು ನದಿಯ ಗ್ರೀಕ್ ಹೆಸರು. ನಮಗೆ ಅಪರಿಚಿತ.  ವೈತರಿಣೀ ನಮಗೆ ಪರಿಚಿತವಾಗಿರುವ ಪೌರಾಣಿಕ ನದಿ. ಎಂದೇ, ರಾಶಿಗೆ ಈ ಹೆಸರು.

೭೧. ವ್ರಶ್ಚನ, ಸೀಲಮ್: ಸೀಲಮ್ ಎಂದರೆ ಶಿಲ್ಪಿಯ ಉಳಿ. ಸಂಸ್ಕೃತದಲ್ಲಿ ವ್ರಶ್ಚನ.

೭೨. ಶಫರೀ, ವೋಲನ್ಜ್: ಒಂದು ಜಾತಿಯ ಹಾರುವ ಮೀನು ವೋಲನ್ಜ್. ಶಫರೀ ಎಂದರೂ ಅದೇ ಅರ್ಥ.

೭೩. ಶರ, ಸಜೀಟ: ಸಜೀಟ ಎಂದರೆ ಕನ್ನಡದ ಬಾಣ, ಸಂಸ್ಕೃತದ ಶರ.

೭೪. ಶಶ, ಲೀಪಸ್: ಲೀಪಸ್ ಎಂದರೆ ಮೊಲ, ಸಂಸ್ಕೃತದಲ್ಲಿ ಶಶ.

೭೫. ಶಿಲ್ಪಶಾಲಾ, ಸ್ಕಲ್ಪ್‌ಟರ್: ಸ್ಕಲ್ಪ್‌ಟರ‍್ಸ್ ಸ್ಟುಡಿಯೊ, ಅರ್ಥಾತ್ ಶಿಲ್ಪಿಯ ಕಾರ್ಯಾಗಾರ ಎಂಬ ಮೂಲ ಹೆಸರು ತದನಂತರ ಹ್ರಸ್ವಗೊಂಡು ಸ್ಕಲ್ಪ್‌ಟರ್ ಆಯಿತು. ಆದ್ದರಿಂದ ಮೂಲ ಹೆಸರಿನ ಧ್ವನಿತಾರ್ಥ ಉಳ್ಳ ಪದ ಶಿಲ್ಪಶಾಲಾ.

೭೬. ಶೃಗಾಲ, ವಲ್ಪೆಕ್ಯೂಲ: ವಲ್ಪಕ್ಯೂಲ ಎಂದರೆ ಚಿಕ್ಕ ನರಿ. ಶೃಗಾಲ ಎಂದರೂ ನರಿ.

೭೭. ಶ್ಯೇನ, ಟ್ಯುಕೇನ: ಉಜ್ವಲ ಬಣ್ಣದ ಗರಿಗಳುಳ್ಳ ಭಾರೀ ಕೊಕ್ಕಿನ ಹಕ್ಕಿಗಳ ಜಾತಿಗೆ ಸೇರಿದ ಒಂದು ಹಕ್ಕಿ ಟುಕೇನ. ಶ್ಯೇನ ಎಂದರೆ ಡೇಗೆ ಎಂದು ಕರೆಯುವ ಹಕ್ಕಿ.

೭೮. ಷಷ್ಠಕ, ಸೆಕ್ಸ್‌ಟಾನ್ಸ್: ಖಗೋಳವಿಜ್ಞಾನದಲ್ಲಿ ಉಪಯೋಗಿಸುವ ಸಾಧನ ಸೆಕ್ಸ್ಟಂಟ್ ಅಥವ ಷಷ್ಠಕ. ಇಂಗ್ಲಿಷ್ ಪದದ ನೇರ ಅನುವಾದ.

೭೯. ಸಪ್ತರ್ಷಿಮಂಡಲ, ಅರ್ಸ ಮೇಜರ್: ಅರ್ಸಾ ಮೇಜರ್ ಅಂದರೆ ದೊಡ್ಡ ಕರಡಿ. ನಮ್ಮ ಪುರಾತನರು ಈ ಪುಂಜವನ್ನು ಸಪ್ತರ್ಷಿಮಂಡಲ ಎಂದು ಗುರುತಿಸುತ್ತಿದ್ದರು.

೮೦. ಸರ್ಪ, ಸರ್ಪೆನ್ಸ್: ಸರ್ಪನ್ಸ್ ಎಂದರೆ ಹಾವು. ಆದ್ದರಿಂದ ಸರ್ಪ.

೮೧. ಸಹದೇವ, ಬೊಓಟೀಜ್: ದನಗಾಹಿ ಅಥವ ಗೋವಳ ಇದು ಬೊಓಟೀಜ್ ಪದದ ಮೂಲ ಅರ್ಥ. ಮಹಾಭಾರತದ ಸಹದೇವ ಅಜ್ಞಾತವಾಸದ ಅವಧಿಯಲ್ಲಿ ಗೋವಳನಾಗಿ ಇದ್ದದ್ದರಿಂದ ಅವನ ಹೆಸರು ಈ ರಾಶಿಗೆ.

೮೨. ಸಾನು, ಮೆನ್ಸ: ಬೆಟ್ಟದ ಮೇಲಿರುವ ಸಮತಟ್ಟು ಪ್ರದೇಶ ಅಥವಾ ಪ್ರಸ್ಥಭೂಮಿ – ಇದು ಮೆನ್ಸ ಪದದ ಅರ್ಥ.  ಸಾನು ಎಂದರೂ ಅದೇ ಅರ್ಥ.

೮೩. ಸಿಂಧೂ, ಇಂಡಸ್: ಅಮೇರಿಕದ ಮೂಲನಿವಾಸಿಗಳ ಒಂದು ಗುಂಪನ್ನು 16 ನೇ ಶತಮಾನದ ಯುರೋಪಿಯನ್ ಭೂಶೋಧಕರು ಇಂಡಸ್ ಎಂದು ಕರೆಯುತ್ತಿದ್ದರು. ಆ ಗುಂಪನ್ನು ಇಂಡಸ್ ರಾಶಿ ಪ್ರತಿನಿಧಿಸುತ್ತದೆ ಎಂಬ ಕಲ್ಪನೆ. ಇಂಡಸ್ ಪದವನ್ನು ಇತಿಹಾಸಕಾರರು ಸಿಂಧೂ ಎಂಬ ಅರ್ಥದಲ್ಲಿಯೂ ಉಪಯೋಗಿಸಿರುವುದರಿಂದ ಈ ಭಾಷಾಂತರ.

೮೪. ಸಿಂಹ, ಲೀಓ: ಲಿಯೋ ಪದದ ನೇರ ಭಾಷಾಂತರವೇ ಸಿಂಹ. ಸೂರ್ಯ ಈ ರಾಶಿಯಲ್ಲಿ ಇರುವಾಗ ನೈಲ್ ನದೀ ದಡಕ್ಕೆ ಮರಳುಗಾಡಿನ ಸಿಂಹಗಳು ಬರುತ್ತಿದ್ದುದರಿಂದ ಈ ಹೆಸರು ಬಂದಿರಬೇಕೆಂದು ಊಹೆ.

೮೫. ಸುಯೋಧನ, ಡ್ರೇಕೋ: ಮೊಸಳೆ ಯಾ ಹಾವಿನಂತಿರುವ ಬೆಂಕಿ ಕಾರುವ ಪೌರಾಣಿಕ ಹಾರಬಲ್ಲ ದೈತ್ಯಪ್ರಾಣಿ ಡ್ರೇಕೋ. ಇಂಥ ಪ್ರಾಣಿಯ ಪರಿಕಲ್ಪನೆ ನಮ್ಮ ಪುರಾಣಗಳಲ್ಲಿ ಇಲ್ಲ. ಮಹಾಭಾರತದಲ್ಲಿ ಕೌರವರನ್ನು ಇಂದಿನ ಚಲನಚಿತ್ರಗಳ ಖಳ ನಾಯಕರಿಗೆ ಹೋಲಿಸಬಹುದು. ಕೌರವರ ಪೈಕಿ ದುರ್ಯೋಧನನಿಗೆ ವೀರಸ್ವರ್ಗ ಪ್ರಾಪ್ತಿಯಾಯಿತಂತೆ. ಎಂದೇ ಅವನು ಸುಯೋಧನ. ಈ ಕಾರಣಕ್ಕಾಗಿಯೂ, ಅಸ್ತವ್ಯಸ್ತವಾದ ಅರೆಸುರುಳಿಯಂತಿರುವ ಈ ರಾಶಿಯಲ್ಲಿ ತೊಡೆಮುರಿದು ರಣರಂಗದಲ್ಲಿ ಬಿದ್ದಿರುವ ಅವನ ಬಿಂಬವನ್ನು ಕಲ್ಪಿಸಿಕೊಳ್ಳುವುದು ಸುಲಭ ಎಂಬ ಕಾರಣಕ್ಕಾಗಿಯೂ ಈ ರಾಶಿಗೆ ಸುಯೋಧನನ ಹೆಸರು.

೮೬. ಸೂಕ್ಷ್ಮದರ್ಶಿನಿ, ಮೈಕ್ರೋಸ್ಕೋಪಿಯಮ್: ಇಂಗ್ಲಿಷ್ ಪದದ ನೇರ ಅನುವಾದ.

೮೭. ಹಸ್ತಾ, ಕಾರ್ವಸ್: ಕಾರ್ವಸ್ ಎಂದರೆ ಕಾಗೆ. ಈ ರಾಶಿಯನ್ನು ನಮ್ಮವರು ಹಿಂದಿನಿಂದಲೂ ಹಸ್ತಾ ಎಂದು ಗುರುತಿಸುತ್ತಿದ್ದರು.

೮೮. ಹೋರಾಸೂಚೀ, ಹಾರೋಲಾಷಿಅಮ್: ಹಾರೋಲಾಷಿಅಮ್ ಎಂದರೆ ಗಡಿಯಾರ. ಹೋರಾಸೂಚೀ ಅದೇ ಧ್ವನಿತಾರ್ಥ ಇರುವ ಪದ.

Advertisements
This entry was posted in ತಾರಾವಲೋಕನ and tagged , . Bookmark the permalink.

1 Response to ತಾರಾವಲೋಕನ ೧೫: ವಿಭಾಗ ೩ ರಾಶಿನಾಮ ರಹಸ್ಯ

  1. bhatpr ಹೇಳುತ್ತಾರೆ:

    Very Interesting.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s