ತಾರಾವಲೋಕನ ೩ – ವೀಕ್ಷಣಾ ಮಾರ್ಗದರ್ಶಿ, ಜನವರಿ

 ವಿಭಾಗ 

ವೀಕ್ಷಣಾ ಮಾರ್ಗದರ್ಶಿ

ಗಮನಿಸಿ: (೧) ಈ ವಿಭಾಗದ ಎಲ್ಲ ತಾರಾಪಟಗಳನ್ನೂ ರಾಶಿ ಚಿತ್ರಗಳನ್ನೂ ನನ್ನ ಹತ್ತಿರ ಇರುವ ಪರವಾನಗಿ ಪಡೆದಿರುವ ಸೈಬರ್‌ಸ್ಕೈ ೫ ತಂತ್ರಾಂಶದ ನೆರವಿನಿಂದ ರಚಿಸಿದ್ದೇನೆ. ತಂತ್ರಾಂಶದ ಮಾಹಿತಿ ಪಡೆಯಬಯಸುವವರು ಸಂಬಂಧಿತ ಜಾಲತಾಣಕ್ಕೆ ಭೇಟಿ ನೀಡಿ. (೨) ಈ ಮಾಲಿಕೆಯಲ್ಲಿ ಕೊಟ್ಟಿರುವ ತಾರಾಪಟಗಳನ್ನು ಅಕ್ಷಾಂಶ ೧೫ ೩೭ ರೇಖಾಂಶ ೭೬ ೧೪ ಸಮುದ್ರಮಟ್ಟದಿಂದ ೧೦೦೦ ಮೀ ಎತ್ತರದಲ್ಲಿ ಇರುವ ಕರ್ನಾಟಕದ ಕಾಲ್ಪನಿಕ ಸ್ಥಳದಲ್ಲಿ ೨೦೧೪ ನೇ ಇಸವಿಯಲ್ಲಿ ನಮೂದಿಸಿದ ತಿಂಗಳ ೧೫ ನೇ ದಿನಾಂಕ ರಾತ್ರಿ ೮ ಗಂಟೆಗೆ ಅನ್ವಯವಾಗುವಂತೆ ರಚಿಸಿದೆ.

 

೨.೧ ಜನವರಿ

ತಾರಾ ಪಟ ೧. ವಾಸ್ತವಿಕ1.1

ತಾರಾ ಪಟ ೨. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಸಹಿತ1.2

ತಾರಾ ಪಟ ೩. ತಾರಾಪುಂಜಗಳ ಕಾಲ್ಪನಿಕ ರೇಖಾಚಿತ್ರ ಮತ್ತು ರಾಶಿಗಳ ಸೀಮಾರೇಖೆ ಮತ್ತು ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಸಹಿತ1.3

ತಾರಾ ಪಟ ೪. ರಾಶಿಚಕ್ರ1.4

ವೀಕ್ಷಣಾ ಮಾರ್ಗದರ್ಶಿ

ಹಂತ : ಜನವರಿ ೧೫ ರಂದು ರಾತ್ರಿ ಸುಮಾರು ೮ ಗಂಟೆಗೆ ನಿಮ್ಮ ವೀಕ್ಷಣಾ ಸ್ಥಳದಲ್ಲಿ ಪೂರ್ವದಿಗಂತದಿಂದ ಖಮಧ್ಯದ ಮೂಲಕ ಪಶ್ಚಿಮ ದಿಗಂತದತ್ತ ಒಮ್ಮೆ ನಿಧಾನವಾಗಿ ನೋಡಿ. ಖಮಧ್ಯಕ್ಕೂ ಪೂರ್ವದಿಕ್ಕಿಗೂ ನಡುವೆ ತುಸು ದಕ್ಷಿಣಕ್ಕೆ ವಿಶಿಷ್ಟ, ವಿಚಿತ್ರ ಜ್ಯಾಮಿತೀಯ ಆಕಾರದಿಂದಲೂ ಸದಸ್ಯ ತಾರೆಗಳ ಉಜ್ವಲ ಪ್ರಭೆಯಿಂದಲೂ ರಾರಾಜಿಸುತ್ತಿರುವ ನಕ್ಷತ್ರಪುಂಜವೊಂದು ನಿಮ್ಮ ಗಮನ ಸೆಳೆಯುತ್ತದೆ.Jan 1 Orion - Identifying stars

ಇದರ ಮೂರು ಏಕರೇಖಾಗತ ಸಮೋಜ್ವಲ ತಾರೆಗಳು ನಿಮ್ಮನ್ನು ಮೊದಲು ಆಕರ್ಷಿಸುತ್ತವೆ. ಬೃಹತ್ ತ್ರಾಪಿಜ್ಯ ರೂಪದ ಈ ಆಕೃತಿಯ ದಕ್ಷಿಣೋತ್ತರವಾಗಿ ಚಾಚಿಕೊಂಡಿರುವ ಪೂರ್ವ ಮತ್ತು ಪಶ್ಚಿಮ ಬಾಹುಗಳು ಹೆಚ್ಚುಕಮ್ಮಿ ಪರಸ್ಪರ ಸಮಾಂತರವಾಗಿವೆ. ಉತ್ತರ ಮತ್ತು ದಕ್ಷಿಣ ಬಾಹುಗಳು ಪರಸ್ಪರ ಸಮಾಂತರವಾಗಿಲ್ಲ. ಉತ್ತರದ ಬಾಹುವಿನ ನೇರದಲ್ಲಿ ಪಶ್ಚಿಮಕ್ಕೆ ದೃಷ್ಟಿ ಹಾಯಿಸಿದರೆ ಪುಟ್ಟ ಬಿಲ್ಲಿನ ಆಕೃತಿಯನ್ನು ಬಿಂಬಿಸುವ ಮಂದ ಪ್ರಕಾಶದ ೩-೪ ತಾರೆಗಳೂ ಗೋಚರಿಸುತ್ತವೆ. ಒಮ್ಮೆ ಗುರುತಿಸಿದರೆ ಎಂದೂ ಮರೆಯಲಾಗದ ಮಹಾವ್ಯಾಧ (೫೦. ಒರೈಆನ್, ವಿಸ್ತೀರ್ಣ ೫೯೪.೧೨೦ ಚ ಡಿಗ್ರಿ) ರಾಶಿಯ ಪ್ರಧಾನ ತಾರಾಪುಂಜ ಇದು. ಇದರ ಕಾಲ್ಪನಿಕ ರೇಖಾಚಿತ್ರ ಇಂತಿದೆ:Jan 2 Orion-sketch

ಮಹಾವ್ಯಾಧ ರಾಶಿಯಲ್ಲಿ ನೀವು ಗುರುತಿಸಬಹುದಾದ ಪ್ರಮುಖ ತಾರೆಗಳು ಇವು:

೧. β ಮಹಾವ್ಯಾಧ (ರೈಜೆಲ್, ವ್ಯಾಧಪೃಷ್ಠ, ನೀಲ ದೈತ್ಯ. ಪಶ್ಚಿಮ ಬಾಹುವಿನ ದಕ್ಷಿಣ ತುದಿ. ತೋಉ ೦.೧೮, ದೂರ ೭೭೩ ಜ್ಯೋವ)

೨. α ಮಹಾವ್ಯಾಧ (ಬೀಟಲ್‌ಜ್ಯೂಸ್, ಕೆಂಪುದೈತ್ಯ. ಪೂರ್ವಬಾಹುವಿನ ಉತ್ತರ ತುದಿ.  ತೋಉ  ೦.೪೫-೦.೫೮, ದೂರ ೪೨೭ ಜ್ಯೋವ. ಭಾರತೀಯ ಜ್ಯೋತಿಷ್ಚಕ್ರದ ಆರ್ದ್ರಾ ‘ನಕ್ಷತ್ರ’ವನ್ನು ಗುರುತಿಸುವ ತಾರೆ),

೩. γ ಮಹಾವ್ಯಾಧ (ಬೆಲ್ಲೇಟ್ರಿಕ್ಸ್, ವ್ಯಾಧಭುಜ. ಪಶ್ಚಿಮಬಾಹುವಿನ ಉತ್ತರ ತುದಿ. ತೋಉ ೧.೬೪, ದೂರ ೨೪೩ ಜ್ಯೋವ)

೪. κ ಮಹಾವ್ಯಾಧ (ಸೈಫ್, ವ್ಯಾಧಜಂಘಾ. ಪೂರ್ವಬಾಹುವಿನ ದಕ್ಷಿಣ ತುದಿ. ತೋಉ ೨.೦೭, ದೂರ ೭೨೧ ಜೋವ)

೫. ζ ಮಹಾವ್ಯಾಧ (ತ್ರಿತಾರಾ ವ್ಯವಸ್ಥೆ ವ್ಯಾಧಮೇಖಲೆ, ಅರ್ಥಾತ್ ವ್ಯಾಧನ ಸೊಂಟದಪಟ್ಟಿಯ ಪೂರ್ವದ ತಾರೆ ಆಲ್ನಿಟಕ್, ನೀಲ ಮಹಾದೈತ್ಯ, ತೋಉ ೧.೭೪, ದೂರ ೮೧೭ ಜ್ಯೋವ)

೬. ε ಮಹಾವ್ಯಾಧ (ವ್ಯಾಧಮೇಖಲೆಯ ಮಧ್ಯದ ತಾರೆ, ಆಲ್ನಿಲಮ್. ಬಿಳಿ ಮಹಾದೈತ್ಯ, ತೋಉ ೧.೬೯, ದೂರ ೧೩೪೨ ಜ್ಯೋವ)

೭.δ ಮಹಾವ್ಯಾಧ (ವ್ಯಾಧಮೇಖಲೆಯ ಪಶ್ಚಿಮದ ತಾರೆ, ಮಿಂಟಾಕ. ತೋಉ ೨.೨೫, ದೂರ ೯೧೬ ಜ್ಯೋವ)

೮. λ ಮಹಾವ್ಯಾಧ (ಮೆಯಿಸ್ಸ, ಆರ್ದ್ರಾ ಮತ್ತು ವ್ಯಾಧಭುಜದ ನಡುವೆ ಕೊಂಚ ಉತ್ತರಕ್ಕೆ. ತೋಉ ೩.೩೯, ದೂರ ೧೦೫೫ ಜ್ಯೋವ. ಭಾರತೀಯ ಜ್ಯೋತಿಷ್ಚಕ್ರದ ಮೃಗಶಿರಾ ‘ನಕ್ಷತ್ರ’ವನ್ನು ಗುರುತಿಸುವ ತಾರೆ)

೯. ι ಮಹಾವ್ಯಾಧ (ಹತ್ಸ್ಯಾ, ವ್ಯಾಧಮೇಖಲೆಯ ಮಧ್ಯದ ತಾರೆಯಿಂದ ದಕ್ಷಿಣಕ್ಕೆ ಜಿನುಗಿದಂತೆ ತೋರುವ ಬೆಳಕಿನ ಪಸೆಯ ಅಂತ್ಯದಲ್ಲಿ ಕ್ಷೀಣವಾಗಿ ಗೋಚರಿಸುವ ತಾರೆಯೇ ವ್ಯಾಧನ ಖಡ್ಗದ ತುದಿ. ತೋಉ ೨.೭೫, ದೂರ ೧೩೨೫ ಜ್ಯೋವ)Jan 3 Orion-Stars,Boundaries

ಈಗ ಮಹಾವ್ಯಾಧ ರಾಶಿಯನ್ನು ಒಂದು ಕೈಗಂಬದಂತೆ ಬಳಸಿ ಅದಕ್ಕೆ ತಾಗಿಕೊಂಡಿರುವ ಮಿಥುನ, ವೃಷಭ, ವೈತರಿಣೀ, ಶಶ, ಏಕಶೃಂಗಿ ರಾಶಿಗಳನ್ನು ಗುರುತಿಸಲು ಪ್ರಯತ್ನಿಸಿ.

ವ್ಯಾಧಪೃಷ್ಠ (ರೈಜೆಲ್) ಮತ್ತು ಆರ್ದ್ರಾ ನಕ್ಷತ್ರಗಳನ್ನು ಜೋಡಿಸುವ ಕಾಲ್ಪನಿಕ ರೇಖೆಯಗುಂಟ ಸರಿಸುಮಾರು ಈಶಾನ್ಯದತ್ತ ದೃಷ್ಟಿ ಹಾಯಿಸಿ. ಎರಡು ಅವಳಿ ನಕ್ಷತ್ರಗಳು ನಿಮ್ಮ ಗಮನ ಸೆಳೆಯುತ್ತವೆ. ಇವು ಮಿಥುನ (53. ಜೆಮಿನೈ, ವಿಸ್ತೀರ್ಣ ೫೧೩.೭೬೧ ಚ ಡಿಗ್ರಿ) ರಾಶಿಯ α ಮಿಥುನ (ಕ್ಯಾಸ್ಟರ್ ಎ, ತೋಉ ೧.೫೮, ದೂರ ೫೨ ಜ್ಯೋವ) ಮತ್ತು β ಮಿಥುನ (ಪಾಲಕ್ಸ್, ತೋಉ ೧.೧೬, ದೂರ ೩೪ ಜ್ಯೋವ) ತಾರೆಗಳು. ಭಾರತೀಯ ಜ್ಯೋತಿಷ್ಚಕ್ರದ ಪುನರ್ವಸು ‘ನಕ್ಷತ್ರ’ವನ್ನು ಗುರುತಿಸುವ ತಾರೆಗಳು ಇವು. ವಾಸ್ತವವಾಗಿ ಕ್ಯಾಸ್ಟರ್ ಒಂದು ದ್ವಿತಾರಾ ವ್ಯವಸ್ಥೆ.Jan 4 Jemini- Castor & Pollux

ಬರಿಗಣ್ಣಿನಿಂದ ಮಿಥುನದ ಎಲ್ಲ ತಾರೆಗಳನ್ನು ಗುರುತಿಸುವುದು ಕಷ್ಟವಾದರೂ ಮಿಥುನ ರಾಶಿಯ ಪ್ರಧಾನ ತಾರಾಪುಂಜದ ಕಾಲ್ಪನಿಕ ರೇಖಾಚಿತ್ರ, ತಾರೆಗಳು ಮತ್ತು ಸೀಮಾರೇಖೆ ಸೂಚಿಸುವ ಚಿತ್ರದ ನೆರವಿನಿಂದ ನಕ್ಷೆಯ ನೆರವಿನಿಂದ ಸಾಧ್ಯವಾದವನ್ನು ಗುರುತಿಸಿ. ಮಿಥುನದ ತಾರೆಗಳು ಇವು:

೧. α ಮಿಥುನ (ಕ್ಯಾಸ್ಟರ್ ಎ, ತೋಉ ೧.೮೯, ದೂರ ೫೨ ಜ್ಯೋವ)

೨. β ಮಿಥುನ (ಪಾಲಕ್ಸ್, ತೋಉ ೧.೨೦, ದೂರ ೩೪ ಜ್ಯೋವ)

೩ γ ಮಿಥುನ (ತೋಉ ೧.೯೯, ದೂರ ೧೦೭ ಜ್ಯೋವ)

೪. μ ಮಿಥುನ (ತೋಉ ೨.೮೯, ದೂರ ೨೨೯ ಜ್ಯೋವ)

೫. ε ಮಿಥುನ (ತೋಉ ೩.೦೦ ದೂರ ೧೦೧೬ ಜ್ಯೋವ)

೬. η ಮಿಥುನ (ತೋಉ ೩.೩೨, ದೂರ ೩೬೫ ಜ್ಯೋವ)

೭. ξ ಮಿಥುನ (ತೋಉ ೩.೩೪, ದೂರ ೫೭ ಜ್ಯೋವ)

೮. δ ಮಿಥುನ (ತೋಉ ೩.೫೩, ದೂರ ೫೯ ಜ್ಯೋವ)

೯. κ ಮಿಥುನ (ತೋಉ ೩.೫೬, ದೂರ ೧೪೪ ಜ್ಯೋವ)

೧೦. λ ಮಿಥುನ (ತೋಉ ೩.೫೭, ದೂರ ೯೪ ಜ್ಯೋವ)

೧೧. ಎಚ್‌ಐಪಿ ೨೮೭೩೪ (ತೋಉ ೪.೧೩, ದೂರ ೧೫೧ ಜ್ಯೋವ)

೧೨. ι ಮಿಥುನ (ತೋಉ ೩.೭೮, ದೂರ ೧೨೫ ಜ್ಯೋವ)

೧೩. ζ ಮಿಥುನ (ತೋಉ ೩.೯೫, ದೂರ ೯೭೪ ಜ್ಯೋವ)

೧೪ θ ಮಿಥುನ (ತೋಉ ೩.೬೦, ದೂರ ೧೯೪ ಜ್ಯೋವ)

೧೫. ν ಮಿಥುನ (ತೋಉ ೪.೧೩, ದೂರ ೪೬೯ ಜ್ಯೋವ)

೧೬. ρ ಮಿಥುನ (ತೋಉ ೪.೧೨, ದೂರ ೬೦ ಜ್ಯೋವ)

೧೭.τ ಮಿಥುನ (ತೋಉ ೪.೩೯, ದೂರ ೨೮೭ ಜ್ಯೋವ).Jan 5 Geimini sketch stars borders

ಮಿಥುನ ರಾಶಿಯಲ್ಲಿ ಇರುವ ಚಂದ್ರನ ಸಮೀಪದಲ್ಲಿ ಪಶ್ಚಿಮಕ್ಕೆ ಉಜ್ವಲವಾಗಿಯೇ ಗೋಚರಿಸುವ ಗುರು ಗ್ರಹವನ್ನೂ ಗುರುತಿಸಿ (ಇವನ್ನು ತಾರಾಪಟದಲ್ಲಿ ತೋರಿಸಿದೆ ಚಿತ್ರದಲ್ಲಿ ತೋರಿಸಿಲ್ಲ. ಗುರು ಗ್ರಹದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ). ಮಾರ್ಜಾಲ, ವಿಜಯಸಾರಥಿ, ವೃಷಭ, ಮಹಾವ್ಯಾಧ, ಏಕಶೃಂಗಿ, ಲಘುಶ್ವಾನ, ಕಟಕ ರಾಶಿಗಳು ಮಿಥುನವನ್ನು ಸುತ್ತುವರಿದಿವೆ.

ಆರ್ದ್ರಾ ಮತ್ತು ಮೃಗಶಿರಾ ನಕ್ಷತ್ರಗಳನ್ನು ಸೇರಿಸುವ ರೇಖೆಯನ್ನು ಪಶ್ಚಿಮದತ್ತ ವಿಸ್ತರಿಸಿ. ಆ ರೇಖೆಯಗುಂಟ ದೃಷ್ಟಿ ಹಾಯಿಸಿದರೆ ಕೊಂಚ ದೂರದಲ್ಲಿ ಆರ್ದ್ರಾದ ಅವಳಿಯಂತಿರುವ ನಸುಗೆಂಪು ಬಣ್ಣದ ಉಜ್ವಲ ತಾರೆ ಗೋಚರಿಸುತ್ತದೆ. ಇದು ವೃಷಭ (೬೮.. ಟಾರಸ್, ವಿಸ್ತೀರ್ಣ ೭೯೭.೨೪೯ ಚ ಡಿಗ್ರಿ) ರಾಶಿಯ ಮೊದಲನೇ ಪ್ರಧಾನ ತಾರೆ α ವೃಷಭ (ಆಲ್ಡೆಬರನ್, ತೋಉ ೦.೮೭, ದೂರ ೬೫ ಜ್ಯೋವ) ಭಾರತೀಯ ಜ್ಯೊತಿಷ್ಚಕ್ರದ ರೋಹಿಣಿ ‘ನಕ್ಷತ್ರ’ವನ್ನು ಗುರುತಿಸುವ ತಾರೆ ಇದು. ವೃಷಭ ರಾಶಿ ಮಿಥುನದ ಪಶ್ಚಿಮಕ್ಕಿದೆ.ರೊಹಿಣಿ ನಕ್ಷತ್ರವನ್ನು ವೃಷಭದ ಒಂದು ಕಣ್ಣು ಎಂದು ಕಲ್ಪಿಸಿರುವುದರಿಂದ ಇದಕ್ಕೆ ಗೂಳಿಯ ಕಣ್ಣು (ಬುಲ್ಸ್ ಐ) ಎಂಬ ಚಾರಿತ್ರಿಕ ಹೆಸರೂ ಇದೆ.Jan 6 Identifying Tarus

ಹೈಡ್ರೋಜನ್ ಇಂಧನ ಮುಗಿದು ಪ್ರಧಾನ ಶ್ರೇಢಿಯಿಂದ ಹೊರಬಂದು ರಕ್ತದೈತ್ಯ ಸ್ಥಿತಿಯಲ್ಲಿ ಇರುವ ತಾರೆ ಇದು.  ಹಾಲಿ ಇದರ ಇಂಧನ ಹೀಲಿಯಮ್. ಸೂರ್ಯನಿಗಿಂತ ಸುಮಾರು ಸುಮಾರು ೩೮ ಪಟ್ಟು ಅಧಿಕ ವ್ಯಾಸ ಉಳ್ಳ ಮತ್ತು ಸುಮಾರು ೧೫೦ ಪಟ್ಟು ಹೆಚ್ಚು ಬೆಳಕು ಸೂಸುವ ತಾರೆ. ಇದಕ್ಕೊಂದು ಬಲು ಮಂದ ಪ್ರಕಾಶದ ಕುಬ್ಜ ತಾರಾ ಸಂಗಾತಿ ಒಂದಿದೆ. ರೋಹಿಣಿ ಗುರುತಿಸಿದ ಬಳಿಕ ಉಳಿದ ಪ್ರಧಾನ ತಾರೆಗಳನ್ನು ಗುರುತಿಸುವುದು ಸುಲಭ. ಇವುಗಳ ಪೈಕಿ ಹೆಚ್ಚಿನವು ‘V’ ಅಕ್ಷರಾಕೃತಿಯಲ್ಲಿವೆ.

೧. α ವೃಷಭ (ಆಲ್ಡೆಬರನ್, ತೋಉ ೦.೯೪, ದೂರ ೬೬ ಜ್ಯೋವ)

೨. β ವೃಷಭ (ಎಲ್ ನಾತ್, ಅಗ್ನಿ, ತೋಉ ೧.೬೭, ದೂರ ೧೩೧ ಜ್ಯೋವ)

೩. ζ ವೃಷಭ (ತೋಉ ೨.೯೭, ದೂರ ೪೨೨ ಜ್ಯೋವ)

೪. θ2 ವೃಷಭ (ತೋಉ ೩.೪೧, ದೂರ ೧೪೯ ಜ್ಯೋವ)

೫. λ ವೃಷಭ (ತೋಉ ೩.೪೧, ದೂರ ೩೫೯ ಜ್ಯೋವ)

೬. ε ವೃಷಭ (ತೋಉ ೩.೫೩, ದೂರ ೧೫೪ ಜ್ಯೋವ)

೭. ο ವೃಷಭ (ತೋಉ ೩.೬೧, ದೂರ ೨೧೧ ಜ್ಯೋವ)

೮. γ ವೃಷಭ (ತೋಉ ೩.೬೪, ದೂರ ೧೫೮ ಜ್ಯೋವ)

ರೋಹಿಣಿ ನಕ್ಷತ್ರದಿಂದ ತುಸು ಪಶ್ಚಿಮಕ್ಕೆ ದೃಷ್ಟಿ ಹಾಯಿಸಿದಾಗ ಪಕ್ಕದ ಚಿತ್ರದಲ್ಲಿ ತೋರಿಸಿದ ಆಕೃತಿಯ ಬೆಳಕಿನ ರೇಣುಗಳ ನಿಬಿಡ ಒಕ್ಕೂಟ ನಿಮ್ಮನ್ನು ಆಕರ್ಷಿಸುತ್ತದೆ. ವೃಷಭ ರಾಶಿಯ ಈ ತಾರಾಗುಚ್ಛದ (ಕ್ಲಸ್ಟರ್) ಪ್ರಮುಖ ಆರು ತಾರೆಗಳನ್ನು ಎಣಿಸುವುದು ಸುಲಭ. ಪುರಾಣಗಳಲ್ಲಿ ಉಲ್ಲೇಖಿಸಿದ ಆರು ಕೃತ್ತಿಕಾ ದೇವಿಯರು ಇವು. ಈ ಪುಂಜವೇ ಅನೇಕ ದಂತಕತೆಗಳಿಗೆ ಕಾರಣವಾದ ಕೃತ್ತಿಕಾ ನಕ್ಷತ್ರಪುಂಜ (ಪ್ಲೈಆಡೀಸ್). ಸಮರ್ಪಕ ದೃಷ್ಟಿ ಇದ್ದರೆ ಏಳು ತಾರೆಗಳನ್ನೂ ಗುರುತಿಸಬಹುದು. ಎಂದೇ ಪಾಶ್ಚಾತ್ಯರು ಇವನ್ನು ಸಪ್ತ ಸೋದರಿಯರು ಎಂದು ಗುರುತಿಸುತ್ತಾರೆ. ಚಿತ್ರದಲ್ಲಿ ಬಾಣದ ಗುರುತಿನಿಂದ ಸೂಚಿಸಿದ η (೨೫) ವೃಷಭ (ಆಲ್‌ಸೈಎ ಎ, ತೋಉ ೨.೮೭, ದೂರ ೩೭೪ ಜ್ಯೋವ) ತಾರೆಯೇ ಭಾರತೀಯ ಜ್ಯೊತಿಶ್ಶಾಸ್ತ್ರೀಯ ಕೃತ್ತಿಕಾ ‘ನಕ್ಷತ್ರ’ವನ್ನು ಸೂಚಿಸುವ ತಾರೆ. ವಾಸ್ತವವಾಗಿ ಇದೊಂದು ಚತುಷ್ತಾರಾ ವ್ಯವಸ್ಥೆ.  ಅದಕ್ಕಿಂತ ಮೇಲಿರುವ ತಾರೆಯೇ ೨೭ ಟಾರಸ್ (ಅಟ್ಲಾಸ್ ಎ, ತೋಉ ೩.೬೨, ದೂರ ೪೧೮ ಜ್ಯೋವ).Jan 7 Tarus-Stars, sketch, boundaries

Jan 8 Tarus-Krittika

ವಿಜಯಸಾರಥಿ, ಪಾರ್ಥ, ಮೇಷ, ತಿಮಿಂಗಿಲ, ವೈತರಿಣೀ, ಮಹಾವ್ಯಾಧ, ಮಿಥುನ ರಾಶಿಗಳು ವೃಷಭವನ್ನು ಸುತ್ತುವರಿದಿವೆ.

ವೃಷಭದ ಪಶ್ಚಿಮ ಬಾಹುವಿನ ದಕ್ಷಿಣ ಭಾಗಕ್ಕೆ ತಾಗಿಕೊಂಡಿದೆ ವೈತರಿಣೀ (೭೦. ಇರಿಡನಸ್, ವಿಸ್ತೀರ್ಣ ೧೧೩೭.೯೧೯ ಚ ಡಿಗ್ರಿ) ರಾಶಿ.Jan 9 - Eridanus

೨೪ ಪ್ರಧಾನ ತಾರೆಗಳ ಪೈಕಿ ಒಂದು ಉಜ್ವಲ. ನದಿಯ ಪಥ ಬಿಂಬಿಸುವ ಅಂಕುಡೊಂಕಾದ ರೇಖಾಕೃತಿಯ ಪುಂಜದ ಈ ತಾರೆಯನ್ನು ಮೊದಲು ಗುರುತಿಸಿ. ತದನಂತರ ಸಮಗ್ರ ಪುಂಜ ಗುರುತಿಸಲು ಪ್ರಯತ್ನಿಸಿ. ಮೊದಲು ವ್ಯಾಧಪೃಷ್ಠ ಅಥವ ರೈಜೆಲ್ ತಾರೆಯ ನೈರುತ್ಯಕ್ಕೆ ದಿಗಂತಕ್ಕಿಂತ ಕೊಂಚ ಮೇಲೆ ಕಣ್ಣಾಡಿಸಿದಾಗ ಗೋಚರಿಸುತ್ತದೆ ಹೆಚ್ಚುಕಮ್ಮಿ ಆರ್ದ್ರಾದಷ್ಟೇ ಉಜ್ವಲ ತಾರೆ ಮುಂದೆ ನಮೂದಿಸಿದ ಮೊದಲನೇ ತಾರೆ. ತದನಂತರ ವ್ಯಾಧಪೃಷ್ಠದ ಸಮೀಪದಲ್ಲಿ ವಾಯವ್ಯ ದಿಕ್ಕಿನಲ್ಲಿ ಇರುವ ಮುಂದೆ ನಮೂದಿಸಿದ ಎರಡನೇ ತಾರೆ. ಅಲ್ಲಿಗೆ ತಾರೆ ತಾರೆಯನ್ನು ಗುರುತಿಸಿದರೆ ಅನುಕ್ರಮವಾಗಿ ವೈತರಿಣೀ ಪುಂಜದ ದಕ್ಷಿಣ ಮತ್ತು ಉತ್ತರದ ತುದಿಗಳನ್ನು ಗುರುತಿಸಿದಂತಾಗುತ್ತದೆ. ತದನಂತರ ರೇಖಾಚಿತ್ರದ ನೆರವಿನಿಂದ ಇಡೀ ಪುಂಜ ಗುರುತಿಸಲು ಪ್ರಯತ್ನಿಸಬಹುದು.

೧. α ವೈತರಿಣೀ (ವೈತರಿಣೀಮುಖ, ಏಕರ್ನಾರ್. ತೋಉ ೦.೫೦, ದೂರ ೧೪೩ ಜ್ಯೋವ)

೨. β ವೈತರಿಣೀ (ತೋಉ ೨.೭೮, ದೂರ ೮೯ ಜ್ಯೋವ)

೩. θ೧ ವೈತರಿಣೀ (ತೋಉ ೩.೨೧, ದೂರ ೧೫೯ ಜ್ಯೋವ)

೪. γ ವೈತರಿಣೀ (ತೋಉ ೨.೯೬, ದೂರ ೨೧೭ ಜ್ಯೋವ)

೫. δ ವೈತರಿಣೀ (ತೋಉ ೩.೫೨, ದೂರ ೩೦ ಜ್ಯೋವ)

೬. υ೪ ವೈತರಿಣೀ (ತೋಉ ೩.೫೫, ದೂರ ೧೮೧ ಜ್ಯೋವ)

೭. φ ವೈತರಿಣೀ (ತೋಉ ೩.೫೫, ದೂರ ೧೫೫ ಜ್ಯೋವ)

೮. τ೪ ವೈತರಿಣೀ (ತೋಉ ೩.೭೪, ದೂರ ೨೬೩ ಜ್ಯೋವ)

ವೈತರಿಣೀ ರಾಶಿಗೆ ತಾಗಿಕೊಂಡಿರುವ ರಾಶಿಗಳು ಇವು: ತಿಮಿಂಗಿಲ, ಅಗ್ನಿಕುಂಡ, ಚಕೋರ, ಶ್ಯೇನ (ಮೂಲೆ), ಕಾಳಿಂಗ, ಹೋರಾಸೂಚೀ, ವ್ರಶ್ಚನ, ಶಶ, ಮಹಾವ್ಯಾಧ, ವೃಷಭ.

ಮಹಾವ್ಯಾಧದ ದಕ್ಷಿಣ ಗಡಿ ಮತ್ತು ವೈತರಿಣೀ ಮತ್ತು ಮಹಾವ್ಯಾಧಗಳ ಸಂಧಿಸ್ಥಾನದ ಪೂರ್ವಕ್ಕೆ ಗಮನ ಹರಿಸಿ ಶಶ (೭೪. ಲೀಪಸ್, ವಿಸ್ತೀರ್ಣ ೨೯೦.೨೯೧ ಚ ಡಿಗ್ರಿ) ರಾಶಿಯನ್ನು ಗುರುತಿಸಲು ಪ್ರಯತ್ನಿಸಬಹುದು. ಮುಂದೆ ಪಟ್ಟಿ ಮಾಡಿದ ಈ ರಾಶಿಯ ಎಂಟು ಪ್ರಧಾನ ತಾರೆಗಳ ಪೈಕಿ ಮೊದಲ ಎರಡು ಸಾಪೇಕ್ಷವಾಗಿ ಉಜ್ವಲವಾಗಿವೆ. ಇವುಗಳ ನೆರವಿನಿಂದ ರಾಶಿಯನ್ನು ಗುರುತಿಸಬಹುದು.Jan 10 -Lepus

೧. α ಶಶ (ತೋಉ ೨.೫೯, ದೂರ ೧೪೫೦ ಜ್ಯೋವ)

೨. β ಶಶ (ತೋಉ ೨.೮೩, ದೂರ ೧೬೧ ಜ್ಯೋವ)

೩. ε ಶಶ (ತೋಉ ೩.೧೮, ದೂರ ೨೨೨ ಜ್ಯೋವ)

೪. μ ಶಶ (ತೋಉ ೩.೨೮, ದೂರ ೧೮೩ ಜ್ಯೋವ)

೫. ζ ಶಶ (ತೋಉ ೩.೫೪, ದೂರ ೭೦ ಜ್ಯೋವ)

೬. γ ಶಶ ಎ (ತೋಉ ೩.೫೯, ದೂರ ೨೯ ಜ್ಯೋವ)

೭. η ಶಶ (ತೋಉ ೩.೭೧, ದೂರ ೪೯ ಜ್ಯೋವ)

೮. δ ಶಶ  ಬಿ (ತೋಉ ೩.೭೭, ದೂರ ೧೧೩ ಜ್ಯೋವ)

ಮಹಾವ್ಯಾಧ, ವೈತರಿಣೀ, ವ್ರಶ್ಚನ, ಕಪೋತ, ಮಹಾಶ್ವಾನ, ಏಕಶೃಂಗಿ ರಾಶಿಗಳು ಶಶವನ್ನು ಸುತ್ತುವರಿದಿವೆ.

ಮಹಾವ್ಯಾಧ ರಾಶಿಯ ಪೂರ್ವಕ್ಕೂ ಮಿಥುನದ ದಕ್ಷಿಣಕ್ಕೂ ಇರುವ ರಾಶಿ ಏಕಶೃಂಗಿ (6. ಮನಾಸರಸ್, ವಿಸ್ತೀರ್ಣ ೪೮೧.೫೬೯ ಚ ಡಿಗ್ರಿ). β ಏಕಶೃಂಗಿ (ತೋಉ ೪.೬೨, ದೂರ ೭೧೭ ಜ್ಯೋವ), α ಏಕಶೃಂಗಿ (ತೋಉ ೩.೯೪, ದೂರ ೧೪೪ ಜ್ಯೋವ), γ ಏಕಶೃಂಗಿ (ತೋಉ ೩.೯೭, ದೂರ ೬೨೦ ಜ್ಯೋವ), δ  ಏಕಶೃಂಗಿ (ತೋಉ ೪.೧೪, ದೂರ ೩೭೮ ಜ್ಯೋವ) ಇವು ಈ ರಾಶಿಯ ಪ್ರಧಾನ ತಾರೆಗಳು.Jan 11 - Monoceros

ಬಲು ಮಂದ ಪ್ರಕಾಶದ ಈ ತಾರೆಗಳನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟವಾದರೆ, ರಾಶಿಯ ವಲಯ ಅಂದಾಜು ಮಾಡಿ.

ಇದರ ಸುತ್ತಣ ರಾಶಿಗಳು ಇವು: ಮಿಥುನ, ಮಹಾವ್ಯಾಧ, ಶಶ, ಮಹಾಶ್ವಾನ, ನೌಕಾಪೃಷ್ಠ, ಅಜಗರ, ಲಘುಶ್ವಾನ.

ಹಂತ ೨: ವ್ಯಾಧಮೇಖಲೆಯ ತಾರೆಗಳನ್ನು ಜೋಡಿಸುವ ಸರಳರೇಖೆಯ ಪೂರ್ವ ದಿಕ್ಕಿನ ವಿಸ್ತರಣೆಯ ನೇರದಲ್ಲಿ  ಅತ್ಯಂತ ಉಜ್ವಲ ತಾರೆಯೊಂದು ಗೋಚರಿಸುತ್ತದೆ. ಇದೇ ಮಹಾವ್ಯಾಧದ ಆಗ್ನೇಯಕ್ಕೆ ಇರುವ ಮಹಾಶ್ವಾನ (೫೧. ಕ್ಯಾನಿಸ್ ಮೇಜರ್, ವಿಸ್ತೀರ್ಣ ೩೮೦.೧೧೮ ಚ ಡಿಗ್ರಿ). ಮಹಾವ್ಯಾಧನ ಜೊತೆಯಲ್ಲಿ ಮಹಾಶ್ವಾನ! ೮ ಪ್ರಧಾನ ತಾರೆಗಳ ಪೈಕಿ ೫ ಉಜ್ವಲ. ಪಕ್ಕದಲ್ಲಿ ಇರುವ ಚಿತ್ರದ ನೆರವಿನಿಂದ ನಕ್ಷತ್ರಪುಂಜ ಗುರುತಿಸಿ.  α ಮಹಾಶ್ವಾನ (ಸಿರಿಯಸ್, ಲುಬ್ಧಕ. ದೃಗ್ಗೋಚರ ತಾರೆಗಳ ಪೈಕಿ ಉಜ್ವಲ  ತಾರೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ತೋ ಉ -೧.೧೨, ದೂರ ೮.೬ ಜ್ಯೋತಿರ್ವರ್ಷ). ಒಂದು ತಾರೆಯಂತೆ ಗೋಚರಿಸುವ ಇದು ವಾಸ್ತವವಾಗಿ ಯಮಳ ತಾರಾ ವ್ಯವಸ್ಥೆ. ಅರ್ಥಾತ್, ಸಾಮಾನ್ಯ ಗುರುತ್ವಕೇಂದ್ರದ ಸುತ್ತ ಪರಿಭ್ರಮಿಸುತ್ತಿರುವ ಪ್ರಧಾನ ಶ್ರೇಢಿಯ ಬಿಳಿ ತಾರೆ ಸಿರಿಯಸ್ ಎ ಮತ್ತು ಮಂಕಾಗಿರುವ ಬಿಳಿ ಕುಬ್ಜ ತಾರೆ (ಶ್ವೇತ ಕುಬ್ಜ) ಸಿರಿಯಸ್ ಬಿ ಎಂಬ ಎರಡು ತಾರೆಗಳ ವ್ಯವಸ್ಥೆ. ಸಿರಿಯಸ್ ಎ ಸೂರ್ಯಗಿಂತ ಎರಡು ಪಟ್ಟು ಅಧಿಕ ರಾಶಿಯ ಮತ್ತು ೨೫ ಪಟ್ಟು ಹೆಚ್ಚು ಬೆಳಕು ಸೂಸುವ ತಾರೆ. ಸೂರ್ಯನನ್ನು ಹೊರತುಪಡಿಸಿದರೆ ಅತಿ ಹೆಚ್ಚು ಪೌರಾಣಿಕ ಮತ್ತು ಜಾನಪದ ದಂತಕತೆಗಳ ಕಥಾವಸ್ತು ಲುಬ್ಧಕ. ಅರುಣೋದಯ ಕಾಲದಲ್ಲಿ ಇದು ಪೂರ್ವ ದಿಗಂತದಲ್ಲಿ ಉದಯಿಸುವುದು ಪುರಾತನ ಈಜಿಪ್ಟಿನವರಿಗೆ ನೈಲ್ ನದಿಯಲ್ಲಿ ಪ್ರವಾಹ ಉಂಟಾಗುವುದರ, ಗ್ರೀಕರಿಗೆ ಕಡು ಬೇಸಿಗೆಯ ಆರಂಭದ, ಪಾಲಿನೀಷಿಯದವರಿಗೆ ಕಡು ಚಳಿಗಾಲದ ಆರಂಭದ ಸೂಚಕವಾಗಿತ್ತು. ಪೆಸಿಫಿಕ್ ಸಾಗರದಲ್ಲಿ ಪುರಾತನ ನೌಕಾಯಾನಿಗಳಿಗಿದು ಮಾರ್ಗದರ್ಶಿಯೂ ಆಗಿತ್ತು.Jan 12 - Canis Major

ಗುರುತಿಸಲು ಪ್ರಯತಿಸಬಹುದಾದ ಇತರ ತಾರೆಗಳು ಇವು:

೧. ε ಮಹಾಶ್ವಾನ (ತೋಉ ೧.೫೨, ದೂರ ೪೩೩ ಜ್ಯೋವ) ೨. δ ಮಹಾಶ್ವಾನ (ತೋಉ ೧.೮೩, ದೂರ ೧೯೧೯ ಜ್ಯೋವ) ೩. β ಮಹಾಶ್ವಾನ (ತೋಉ ೧.೯೬, ದೂರ ೪೭೮ ಜ್ಯೋವ) ೪. η ಮಹಾಶ್ವಾನ (ತೋಉ ೨.೪೫, ದೂರ ೨೪೩೪ ಜ್ಯೋವ) ೫. ζ ಮಹಾಶ್ವಾನ (ತೋಉ ೩.೦೧, ದೂರ ೩೪೪ ಜ್ಯೋವ) ೬. ο೨ ಮಹಾಶ್ವಾನ (ತೋಉ ೩.೦೩, ದೂರ ೨೯೧೨ ಜ್ಯೋವ) ೭. σ ಮಹಾಶ್ವಾನ (ತೋಉ ೩.೪೭, ದೂರ ೧೧೧೩ ಜ್ಯೋವ).

ಏಕಶೃಂಗಿ, ಶಶ, ಕಪೋತ, ನೌಕಾಪೃಷ್ಠ ಇವು ಮಹಾಶ್ವಾನಕ್ಕೆ ತಾಗಿಕೊಂಡಿರುವ ರಾಶಿಗಳು. ಇವುಗಳ ಪೈಕಿ ಏಕಶೃಂಗಿ ಮತ್ತು ಶಶ ರಾಶಿಗಳನ್ನು ಗುರುತಿಸಿದ್ದೀರಿ. ನೌಕಾಪೃಷ್ಠ ಇನ್ನೂ ಪೂರ್ಣವಾಗಿ ಉದಯಿಸಿಲ್ಲ.

ಈಗಾಗಲೇ ಗುರುತಿಸಿದ ಶಶ ರಾಶಿಯ ದಕ್ಷಿಣ ಗಡಿಗೆ ತಾಗಿಕೊಂಡಿದೆ ಕಪೋತ ರಾಶಿ (೯. ಕಲಂಬ, ವಿಸ್ತೀರ್ಣ ೨೭೦.೧೮೪ ಚ ಡಿಗ್ರಿ). ಇದರ ಪ್ರಧಾನ ತಾರೆಗಳು ಇಂತಿವೆ: ೧. α ಕಪೋತ (ತೋಉ ೨.೬೫, ದೂರ ೨೬೨ ಜ್ಯೋವ), ೨. β ಕಪೋತ (ತೋಉ ೩.೧೧, ದೂರ ೮೬ ಜ್ಯೋವ), ೩. δ ಕಪೋತ (ತೋಉ ೩.೮೪, ದೂರ ೨೩೫ ಜ್ಯೋವ), ೪. ε ಕಪೋತ (ತೋಉ ೩.೮೬, ದೂರ ೨೭೪ ಜ್ಯೋವ). ರೇಖಾಚಿತ್ರದ ನೆರವಿನಿಂದ ಇರುವ ತಾರೆಗಳ ಪೈಕಿ ಹೆಚ್ಚು ಉಜ್ವಲ ತಾರೆ α ಕಪೋತ ಗುರುತಿಸಲು ಪ್ರಯತ್ನಿಸಿ. ಯಶಸ್ಸು ಲಭಿಸದೇ ಇದ್ದರೆ ರಾಶಿಯ ವಲಯ ಅಂದಾಜು ಮಾಡಿ ಮುಂದುವರಿಯುವುದು ಉತ್ತಮ.Jan 13 - Columba

ಶಶ, ವ್ರಶ್ಚನ, ಚಿತ್ರಫಲಕ, ನೌಕಾಪೃಷ್ಠ ಮತ್ತು ಮಹಾಶ್ವಾನ ರಾಶಿಗಳು ಕಪೋತವನ್ನು ಸುತ್ತುವರಿದಿವೆ.

ಹಂತ ೩: ಈ ತನಕ ಮಹಾವ್ಯಾಧ ಮತ್ತು ಮಹಾಶ್ವಾನ ರಾಶಿಗಳಿಗೆ ತಾಗಿಕೊಂಡಿರುವ ಮಿಥುನ, ವೃಷಭ, ವೈತರಿಣೀ, ಶಶ, ಏಕಶೃಂಗಿ ಮತ್ತು ಕಪೋತ ರಾಶಿಗಳನ್ನು ಗುರುತಿಸಿದ್ದೀರಿ. ಈಗ ಮಿಥುನ ರಾಶಿಯನ್ನು ಕೈಕಂಬವಾಗಿಸಿ ಅದನ್ನು ಸುತ್ತುವರಿದಿರುವ ಮಾರ್ಜಾಲ, ವಿಜಯಸಾರಥಿ, ವೃಷಭ, ಮಹಾವ್ಯಾಧ, ಏಕಶೃಂಗಿ, ಲಘುಶ್ವಾನ, ಕಟಕ ರಾಶಿಗಳನ್ನು ಗುರುತಿಸಿ. ಈ ಪೈಕಿ ವೃಷಭ, ಮಹಾವ್ಯಾಧ ಮತ್ತು ಏಕಶೃಂಗಿ ರಾಶಿಗಳನ್ನು ಗುರುತಿಸಿದ್ದೀರಿ. ಅಂದ ಮೇಲೆ ಉಳಿದ ಮಾರ್ಜಾಲ, ವಿಜಯಸಾರಥಿ, ಲಘುಶ್ವಾನ, ಕಟಕ ರಾಶಿಗಳನ್ನು ಈಗ ಗುರುತಿಸಬೇಕು

ಮಿಥುನಕ್ಕೆ ಉತ್ತರ ದಿಕ್ಕಿನಲ್ಲಿ ತಾಗಿಕೊಂಡು ಮಾರ್ಜಾಲ ರಾಶಿ (೫೨. ಲಿಂಕ್ಸ್, ವಿಸ್ತೀರ್ಣ ೫೪೫.೩೮೬ ಚ ಡಿಗ್ರಿ) ಇದೆ. ಈ ರಾಶಿಯಲ್ಲಿಯೂ ಸುಲಭಗೋಚರ ಉಜ್ವಲ ತಾರೆಗಳಿಲ್ಲ. ರೇಖಾಚಿತ್ರದ ನೆರವಿನಿಂದ ಈ ತಾರೆಗಳನ್ನು ಗುರುತಿಸಲು ಪ್ರಯತ್ನಿಸಿ.

೧. α ಮಾರ್ಜಾಲ (ತೋಉ ೩.೧೩, ದೂರ ೨೨೨ ಜ್ಯೋವ),

೨. ೩೮ ಮಾರ್ಜಾಲ (ತೋಉ ೩.೮೯, ದೂರ ೧೨೨ ಜ್ಯೋವ),

೩. ೧೦ ಸಪ್ತರ್ಷಿಮಂಡಲ (ತೋಉ ೩.೯೬, ದೂರ ೫೪ ಜ್ಯೋವ),

೪. ೩೧ ಮಾರ್ಜಾಲ (ತೋಉ ೪.೨೪, ದೂರ ೩೯೪ ಜ್ಯೋವ). ಕಷ್ಟ ಅನ್ನಿಸಿದರೆ ರಾಶಿಯ ವಲಯ ಅಂದಾಜು ಮಾಡಿ ಮುಂದುವರಿಯಿರಿ.Jan 14 - LYNX

ಸಪ್ತರ್ಷಿಮಂಡಲ. ದೀರ್ಘಕಂಠ, ವಿಜಯಸಾರಥಿ, ಮಿಥುನ, ಕಟಕ, ಸಿಂಹ (ಮೂಲೆ) ಮತ್ತು ಲಘುಸಿಂಹ ರಾಶಿಗಳು ಮಾರ್ಜಾಲವನ್ನು ಸುತ್ತುವರಿದಿವೆ.

ಈಗ β ವೃಷಭ ಅಥವ ಅಗ್ನಿ ತಾರೆಯ ಮೇಲೆ ಗಮನ ಕೇಂದ್ರೀಕರಿಸಿ.

೧. ಅಗ್ನಿಯ ಉತ್ತರ ದಿಕ್ಕಿನಲ್ಲಿ ಕೊಂಚ ದೂರದಲ್ಲಿ ಇರುವ ಉಜ್ವಲ ತಾರೆ α ವಿಜಯಸಾರಥಿ (ಕಪೆಲ, ಬ್ರಹ್ಮಹೃದಯ, ತೋಉ ೦.೧೦, ದೂರ ೪೨ ಜ್ಯೋವ) ಗುರುತಿಸಿದರೆ ವಿಜಯಸಾರಥಿ (೬೩. ಆರೈಗ, ವಿಸ್ತೀರ್ಣ ೬೫೭.೪೩೮ ಚ ಡಿಗ್ರಿ) ರಾಶಿಯನ್ನು ಗುರುತಿಸುವುದು ಬಲು ಸುಲಭ.Jan 15-Auriga

೨. ಬ್ರಹ್ಮಹೃದಯದ ಪಶ್ಚಿಮಕ್ಕೆ ಅನತಿ ದೂರದಲ್ಲಿ ಉಜ್ವಲ ತಾರೆ β ವಿಜಯಸಾರಥಿ (ತೋಉ ೧.೮೯, ದೂರ ೮೨ ಜ್ಯೋವ) ಗೋಚರಿಸುತ್ತದೆ.

೩. ತದನಂತರ ಬ್ರಹ್ಮಹೃದಯದ ದಕ್ಷಿಣಕ್ಕೆ ಅಗ್ನಿ ತಾರೆಗಿಂತ ಮೊದಲು ಅನುಕ್ರಮವಾಗಿ ಇರುವ ε ವಿಜಯಸಾರಥಿ (ತೋಉ ೩.೦೨, ದೂರ  ೨೪೩೪ ಜ್ಯೋವ) ಮತ್ತು

೪. η ವಿಜಯಸಾರಥಿ (ತೋಉ ೩.೧೬, ದೂರ ೨೧೮ ಜ್ಯೋವ) ಮತ್ತು

೫. ι ವಿಜಯಸಾರಥಿ  (ತೋಉ ೨.೬೮, ದೂರ  ೫೧೩ ಜ್ಯೋವ) ಗುರುತಿಸಬಹುದು.

೬. ಅದೇ ರೀತಿ β ವಿಜಯಸಾರಥಿಯ ದಕ್ಷಿಣಕ್ಕೆ ಇರುವ θ ವಿಜಯಸಾರಥಿ (ತೋಉ ೨.೬೩, ದೂರ ೧೭೩ ಜ್ಯೋವ) ತಾರೆಯನ್ನು ರೇಖಾನಕ್ಷೆಯ ನೆರವಿನಿಂದ ಗುರುತಿಸಬಹುದು.

ಚಿತ್ರದಲ್ಲಿ ಕೆಂಪು ಗೆರೆ ಪ್ರತಿನಿಧಿಸುವ ಆಕಾರ ಮತ್ತು ಸಾಪೇಕ್ಷ ಸ್ಥಾನ ಮನೋಗತವಾಗುವ ತನಕ ವೀಕ್ಷಿಸುವುದು ಉತ್ತಮ. ವಿಜಯಸಾರಥಿಯ ಸುತ್ತಣ ರಾಶಿಗಳು ಇವು: ದೀರ್ಘಕಂಠ, ಪಾರ್ಥ, ವೃಷಭ, ಮಿಥುನ, ಮಾರ್ಜಾಲ.

ಮಿಥುನ ರಾಶಿಯ ದಕ್ಷಿಣ ಗಡಿಗೆ ತಾಗಿಕೊಂಡು ಇರುವ ವಲಯದಲ್ಲಿ ಉಜ್ವಲ ತಾರೆಯೊಂದು ನಿಮ್ಮ ಗಮನ ಸೆಳೆಯುತ್ತದೆ. ಇದೇ α ಲಘುಶ್ವಾನ ತಾರೆ (ಪ್ರೂಸಿಆನ್, ಪೂರ್ವಶ್ವಾನ. ತೋಉ ೦.೪೫, ದೂರ ೧೧ ಜ್ಯೋವ). ಇದು ಲಘುಶ್ವಾನ ರಾಶಿಯ (೬೦. ಕ್ಯಾನಿಸ್ ಮೈನರ್, ವಿಸ್ತೀರ್ಣ ೧೮೩.೩೬೭ ಚ ಡಿಗ್ರಿ) ಒಂದನೇ ಪ್ರಧಾನ ತಾರೆ. ಅದರ ವಾಯವ್ಯಕ್ಕೆ ತುಸು ದೂರದಲ್ಲಿ ಇರುವ ಎರಡನೇ ಪ್ರಧಾನ ತಾರೆ β ಲಘುಶ್ವಾನವನ್ನೂ (ತೋಉ ೨.೮೮, ದೂರ ೧೬೮ ಜ್ಯೋವ) ಗುರುತಿಸಿ. ಮಹಾವ್ಯಾಧನ ನೆರವಿಗೆ ಒಂದು ದೊಡ್ಡ ನಾಯಿ, ಒಂದು ಚಿಕ್ಕ ನಾಯಿ! ಚಿತ್ರದ ನೆರವಿನಿಂದ ರಾಶಿಯ ವಲಯವನ್ನು ಗುರುತಿಸಲು ಪ್ರಯತ್ನಿಸಿ.Jan 16 Canis Minor

ಲಘುಶ್ವಾನ ರಾಶಿಯನ್ನು ಮಿಥುನ, ಏಕಶೃಂಗಿ, ಅಜಗರ ಮತ್ತು ಕಟಕ ರಾಶಿಗಳು ಸುತ್ತುವರಿದಿವೆ.

ಮಿಥುನದ ಪೂರ್ವಕ್ಕೆ ಇರುವುದೇ ಕರ್ಕಾಟಕ ಅಥವ ಕಟಕ ರಾಶಿ (೧೦. ಕ್ಯಾನ್ಸರ್, ವಿಸ್ತೀರ್ಣ ೫೦೫.೮೭೨ ಚ ಡಿಗ್ರಿ). ಇದರ ಸದಸ್ಯ ತಾರೆಗಳನ್ನು ಗುರುತಿಸುವುದು ಕಷ್ಟ. ರೇಖಾಚಿತ್ರದ ನೆರವಿನಿಂದ ಗುರುತಿಸಲು ಪ್ರಯತ್ನಿಸಬಹುದಾದ ತಾರೆಗಳು ಇವು:

೧. β ಕಟಕ (ತೋಉ ೩.೫೩, ದೂರ ೨೯೦ ಜ್ಯೋವ) ಮತ್ತು

೨. δ ಕಟಕ (ತೋಉ ೩.೯೪, ದೂರ ೧೩೬ ಜ್ಯೋವ) ತಾರೆಗಳನ್ನು ಮೊದಲು ಗುರುತಿಸಲು ಪ್ರಯತ್ನಿಸಿ. δ ಕರ್ಕಾಟಕವೇ ಭಾರತೀಯ ಜ್ಯೋತಿಷ್ಚಕ್ರದ ‘ನಕ್ಷತ್ರ’ಪುಷ್ಯದ ತಾರೆ.

ತದನಂತರ

೩. ι ಕಟಕ ಎ (ತೋಉ ೪.೦೩, ದೂರ ೨೯೮ ಜ್ಯೋವ)

೪. α ಕಟಕ (ತೋಉ ೪.೨೬, ದೂರ ೧೭೩ ಜ್ಯೋವ)

೫. γ ಕಟಕ (ತೋಉ ೪.೬೬, ದೂರ ೧೫೮ ಜ್ಯೋವ)Jan 17 - Cancer

ಅಷ್ಟೇನೂ ಉಜ್ವಲವಲ್ಲದ ಈ ತಾರೆಗಳನ್ನು ಗುರುತಿಸುವುದು ಕಷ್ಟವಾದರೆ ರಾಶಿಯ ವಲಯ ಅಂದಾಜು ಮಾಡಿ.

ಕಟಕದ ಸುತ್ತಣ ರಾಶಿಗಳು ಇವು: ಮಾರ್ಜಾಲ, ಮಿಥುನ, ಲಘುಶ್ವಾನ, ಅಜಗರ, ಸಿಂಹ, ಲಘುಸಿಂಹ (ಮೂಲೆ).

ಹಂತ ೪: ಈಗ ವೃಷಭರಾಶಿಯನ್ನು ಕೈಕಂಬವಾಗಿಸಿ ಅದನ್ನು ಸುತ್ತುವರಿದಿರುವ ವಿಜಯಸಾರಥಿ, ಪಾರ್ಥ, ಮೇಷ, ತಿಮಿಂಗಿಲ, ವೈತರಿಣೀ, ಮಹಾವ್ಯಾಧ, ಮಿಥುನ ರಾಶಿಗಳ ಪೈಕಿ ಈ ತನಕ ಗುರುತಿಸದೇ ಇರುವ ಪಾರ್ಥ, ಮೇಷ, ತಿಮಿಂಗಿಲ ರಾಶಿಗಳನ್ನು ಗುರುತಿಸಲು ಆರಂಭಿಸಿ.

ವಿಜಯಸಾರಥಿ ರಾಶಿಯ ಪಶ್ಚಿಮಕ್ಕೂ ವೃಷಭದ ಉತ್ತರ ದಿಕ್ಕಿಗೂ ಬಾಗಿದ ಕಡ್ಡಿಹುಳುವಿನಂತೆ ಗೋಚರಿಸುವ ಪುಂಜ ಇರುವ ರಾಶಿ ಪಾರ್ಥ (೪೩. ಪರ್ಸೀಅಸ್, ವಿಸ್ತೀರ್ಣ ೬೧೪.೯೯೭ ಚ ಡಿಗ್ರಿ). ಮೊದಲು α ಪಾರ್ಥ (ಮಿರ್‌ಫಾಕ್‌, ಪಾರ್ಥ ಪ್ರಥಮ, ತೋಉ ೧.೮೦, ದೂರ ೫೬೭ ಜ್ಯೋವ), ಮತ್ತು β ಪಾರ್ಥ (ಆಲ್‌ಗಾಲ್, ಸೈಂಧವ, ತ್ರಿತಾರಾ ವ್ಯವಸ್ಥೆ, ತೋ ಉ ೨.೧೦, ದೂರ ೯೩ ಜ್ಯೋವ) ಉಜ್ವಲ ತಾರೆಗಳನ್ನು ಗುರುತಿಸಿ. ಮೊದಲನೆಯದು ಬ್ರಹ್ಮಹೃದಯದ ಪಶ್ಚಿಮಕ್ಕೂ, ಎರಡನೆಯದು ಮೊದಲನೆಯದರ ದಕ್ಷಿಣಕ್ಕೆ ಕೊಂಚ ಆಗ್ನೇಯ ದಿಕ್ಕಿನಲ್ಲಿ ಇದೆ. ಇವನ್ನು ರೇಖಾಚಿತ್ರದ ನೆರವಿನಿಂದ ಗುರುತಿಸಲು ಪ್ರಯತ್ನಿಸಿ:

೧. ζ ಪಾರ್ಥ (ತೋಉ ೨.೮೭, ದೂರ ೧೧೪೪ ಜ್ಯೋವ)

೨. ε ಪಾರ್ಥ (ತೋಉ ೨.೯೦, ದೂರ ೫೫೮ ಜ್ಯೋವ)

೩. γ ಪಾರ್ಥ ಎ (ತೋಉ ೨.೯೩, ದೂರ ೨೬೦ ಜ್ಯೋವ)

೪. δ ಪಾರ್ಥ (ತೋಉ ೩.೦೦, ದೂರ ೫೦೧ ಜ್ಯೋವ)

೫. ρ ಪಾರ್ಥ (ತೋಉ ೩.೩೯, ದೂರ ೩೧೩ ಜ್ಯೋವ)Jan 18 - Perseus

ಕುಂತೀ, ದ್ರೌಪದಿ, ತ್ರಿಕೋಣಿ, ಮೇಷ, ವೃಷಭ, ವಿಜಯಸಾರಥಿ, ದೀರ್ಘಕಂಠ ರಾಶಿಗಳು ಪಾರ್ಥವನ್ನು ಸುತ್ತುವರಿದಿವೆ

ಕೃತ್ತಿಕಾ ನಕ್ಷತ್ರಪುಂಜದಿಂದ ಪಶ್ಚಿಮಕ್ಕೆ ದೃಷ್ಟಿ ಹಾಯಿಸಿ. ಅನತಿ ದೂರದಲ್ಲಿ ಚಿತ್ರದಲ್ಲಿ ತೋರಿಸಿದಂತೆ ಏಕ ರೇಖಾಗತವಾದ ಎರಡು ತಾರೆಗಳು ಗೋಚರಿಸುತ್ತವೆ.  ಮೇಷ (೫೬. ಏರೀಜ್, ವಿಸ್ತೀರ್ಣ ೪೪೧.೩೯೫ ಚ ಡಿಗ್ರಿ) ರಾಶಿಯ ಪ್ರಧಾನ ತಾರೆಗಳ ಪೈಕಿ ಉಜ್ವಲವಾದವು ಇವು. ಮೊದಲನೆಯದು α ಮೇಷ (ಹಾಮಲ್, ತೋಉ ೨.೦೧, ದೂರ ೬೬ ಜ್ಯೋವ).  ರಕ್ತದೈತ್ಯ. ಸೂರ್ಯಗಿಂತ ೧೮ ಪಟ್ಟು ಹೆಚ್ಚು ವ್ಯಾಸ, ೫೫ ಪಟ್ಟು ಹೆಚ್ಚು ಬೆಳಕು ಸೂಸುವ ತಾರೆ. ಇದನ್ನು ಕೆಲವರು ಭಾರತೀಯ ಜ್ಯೋತಿಶ್ಶಾಸ್ತ್ರೀಯ ಅಶ್ವಿನೀ ‘ನಕ್ಷತ್ರ’ ಎಂದು ಗುರುತಿಸುತ್ತಾರೆ. ಎರಡನೆಯದು β ಮೇಷ (ಶೆರಟಾನ್, ತೋಉ ೨.೬೪, ದೂರ ೬೦ ಜ್ಯೋವ). ಇದನ್ನು ಕೆಲವರು ಭಾರತೀಯ ಜ್ಯೋತಿಷ್ಚಕ್ರದ ಅಶ್ವಿನೀ ‘ನಕ್ಷತ್ರ’ ಎಂದು ಗುರುತಿಸುತ್ತಾರೆ.  ಇನ್ನೂ ಕೊಂಚ ಪ್ರಯತ್ನಿಸಿದರೆ β ಕ್ಕಿಂತ ತುಸು ಕೆಳಗಿರುವ ಮೂರನೇ ತಾರೆಯೂ, ಅರ್ಥಾತ್ γ೧ ಮೇಷ (ತೋಉ ೩.೮೮, ದೂರ ೨೦೪ ಜ್ಯೋವ) ಗೋಚರಿಸುತ್ತದೆ. ತಾಳ್ಮೆಯಿಂದ ಪ್ರಯತ್ನಿಸಿದರೆ ಅಶ್ವಿನೀ ಮತ್ತು ಕೃತ್ತಿಕಾ ಪುಂಜದ ನಡುವೆ ತುಸು ಉತ್ತರಕ್ಕೆ ಇರುವ ೪೧ ಮೇಷ (ತೋಉ ೩.೬೧, ದೂರ ೧೫೯ ಜ್ಯೋವ) ಗುರುತಿಸಬಹುದು. ಭಾರತೀಯ ಜ್ಯೋತಿಷ್ಚಕ್ರದ ಭರಣಿ ‘ನಕ್ಷತ್ರ’ವನ್ನು ಗುರುತಿಸುವ ತಾರೆ ಇದು.Jan 19 - Aries

ಪಾರ್ಥ, ತ್ರಿಕೋಣಿ, ಮೀನ, ತಿಮಿಂಗಿಲ, ವೃಷಭ ಇವು ಮೇಷವನ್ನು ಸುತ್ತುವರಿದಿರುವ ರಾಶಿಗಳು.

ಮೇಷ ಮತ್ತು ವೃಷಭ ರಾಶಿಗಳ ಸಂಧಿಸ್ಥಾನದಿಂದ ನೈರುತ್ಯ ದಿಕ್ಕಿನತ್ತ ಗಮನ ಹರಿಸಿ. ಇಲ್ಲಿದೆ ತಿಮಿಂಗಿಲ (೨೫. ಸೀಟಸ್, ವಿಸ್ತೀರ್ಣ ೧೨೩೧.೪೧೧ ಚ ಡಿಗ್ರಿ) ರಾಶಿ.

೧. α ತಿಮಿಂಗಿಲ (ಮೆನ್‌ಕರ್, ತಿಮಿಂಗಿಲ  ನಾಸಿಕ, ತೊಉ ೨.೫೪, ದೂರ ೨೨೫ ಜ್ಯೋವ),

೨. δ ತಿಮಿಂಗಿಲ (ತೋಉ ೪.೦೭, ದೂರ ೭೦೧ ಜ್ಯೋವ),

೩. β ತಿಮಿಂಗಿಲ (ಡೆನೆಬ್ ಕೈಟಾಸ್, ತಿಮಿಂಗಿಲ ಪುಚ್ಛ, ತೋಉ ೨.೦೪, ದೂರ ೯೬ ಜ್ಯೋವ) ತಾರೆಗಳನ್ನು ರೇಖಾಚಿತ್ರದ ನೆರವಿನಿಂದ ಮೊದಲು ಗುರುತಿಸಬೇಕು. ಬದಲಾಗುತ್ತಿರುವ ಉಜ್ವಲತೆಯ ತಾರೆ ಮೈರಾ. ಎಂದೇ, ಕೆಲಕಾಲ ಗೋಚರಿಸದೆಯೂ ಇರಬಹುದು. ಮೆನ್‌ಕರ್ ತನ್ನ ಜೀವನ ಪಯಣ ಮುಗಿಸುತ್ತಿರುವ ತಾರೆ. ಹಾಲಿ ಕೆಂಪು ದ್ಯತ್ಯ, ಶ್ವೇತ ಕುಬ್ಜ ಸ್ಥಿತಿಯತ್ತ ಸಾಗುತ್ತಿದೆ.Jan 20 - Cetus

ತದನಂತರ ರೇಖಾಚಿತ್ರದ ನೆರವಿನಿಂದ ಗುರುತಿಸಲು ಪ್ರಯತ್ನಿಸಬಹುದಾದ ಈ ರಾಶಿಯ ಕೆಲವು ತಾರೆಗಳು ಇವು:

೪. η ತಿಮಿಂಗಿಲ (ತೋಉ ೩.೪೫, ದೂರ ೧೧೯ ಜ್ಯೋವ),

೫. γ ತಿಮಿಂಗಿಲ (ತೋಉ ೩.೫೪, ದೂರ ೮೨ ಜ್ಯೋವ),

೬. τ ತಿಮಿಂಗಿಲ (ತೋಉ ೩.೪೯, ದೂರ ೧೨ ಜ್ಯೋವ),

೭. ι ತಿಮಿಂಗಿಲ (ತೋಉ ೩.೫೫, ದೂರ ೨೮೫ ಜ್ಯೋವ),

೮. ζ ತಿಮಿಂಗಿಲ (ತೋಉ ೩.೭೩, ದೂರ ೨೬೮ ಜ್ಯೋವ),

೯. υ ತಿಮಿಂಗಿಲ (ತೋಉ ೪.೦೦, ದೂರ ೩೦೯ ಜ್ಯೋವ).

ಎಲ್ಲ ತಾರೆಗಳನ್ನು ಗುರುತಿಸಲು ಯಶಸ್ವಿಗಳಾಗದೇ ಇದ್ದರೂ ತಿಮಿಂಗಿಲ ರಾಶಿ ಎಲ್ಲಿದೆ ಎಂಬದನ್ನು ಅಂದಾಜು ಮಾಡಬಹುದು.

ತಿಮಿಂಗಿಲದ ಸುತ್ತಣ ರಾಶಿಗಳು ಇವು: ಮೇಷ, ಮೀನ, ಕುಂಭ, ಶಿಲ್ಪಶಾಲಾ, ಅಗ್ನಿಕುಂಡ, ವೈತರಿಣೀ, ವೃಷಭ.

ಹಂತ ೫: ಮೊದಲು ಗುರುತಿಸಿದ ಮಹಾವ್ಯಾಧ ರಾಶಿಯ ಸುತ್ತಣ ರಾಶಿಗಳನ್ನು ಅನುಕ್ರಮವಾಗಿ ಕೈಕಂಬವಾಗಿಸಿಕೊಂಡು ವೀಕ್ಷಣಾ ವಲಯವನ್ನು ವಿಸ್ತರಿಸುತ್ತಿರುವುದನ್ನು ನೀವು ಗಮನಿಸಿರಬಹುದು. ಅಂತೆಯೇ ಈಗ ಕೈಕಂಬವಾಗುವ ಸರದಿ ವೈತರಿಣೀ ರಾಶಿಯದ್ದು. ವೈತರಿಣೀ ರಾಶಿಗೆ ತಾಗಿಕೊಂಡಿರುವ ರಾಶಿಗಳು ಇವು: ತಿಮಿಂಗಿಲ, ಅಗ್ನಿಕುಂಡ, ಚಕೋರ, ಕಾಳಿಂಗ, ಶ್ಯೇನ (ಮೂಲೆ), ಹೋರಾಸೂಚೀ, ವ್ರಶ್ಚನ, ಶಶ, ಮಹಾವ್ಯಾಧ, ವೃಷಭ. ಈ ಪೈಕಿ ತಿಮಿಂಗಿಲ, ಶಶ, ಮಹಾವ್ಯಾಧ, ಮತ್ತು ವೃಷಭ ರಾಶಿಗಳನ್ನು ಗುರುತಿಸಿ ಆಗಿದೆ. ಕಾಳಿಂಗ ಮತ್ತು ಶ್ಯೇನ ರಾಶಿಗಳು ಭಾಗಶಃ ಅಸ್ತವಾಗಿವೆ. ಎಂದೇ, ಅಗ್ನಿಕುಂಡ, ಚಕೋರ, ಹೋರಾಸೂಚೀ, ವ್ರಶ್ಚನ ರಾಶಿಗಳನ್ನು ಗುರುತಿಸಿ.

ತಿಮಿಂಗಿಲದ ದಕ್ಷಿಣಕ್ಕೂ, ವೈತರಿಣೀ ರಾಶಿಯ ಪಶ್ಚಿಮಕ್ಕೂ ತಾಗಿಕೊಂಡು ಅಗ್ನಿಕುಂಡ ರಾಶಿ (೧. ಫಾರ್‌ನ್ಯಾಕ್ಸ್, ವಿಸ್ತೀರ್ಣ ೩೯೭.೫೦೨ ಚ ಡಿಗ್ರಿ) ಇದೆ. ಇದರ ಪೂರ್ವಕ್ಕೆ ವೈತರಿಣೀ ರಾಶಿ ತಾಗಿಕೊಂಡಿದೆ. ಇದರ ಪ್ರಮುಖ ತಾರೆಗಳ ಪೈಕಿ ಸಾಪೆಕ್ಷವಾಗಿ ಉಜ್ವಲವಾದ ತಾರೆ α ಅಗ್ನಿಕುಂಡ (ತೊಉ ೩.೯೦, ದೂರ ೪೬ ಜ್ಯೋವ), β ಅಗ್ನಿಕುಂಡ (ತೊಉ ೪.೪೫, ದೂರ ೧೬೮ ಜ್ಯೋವ) ಇವನ್ನು ಗುರುತಿಸಲು ಪ್ರಯತ್ನಿಸಿ ರಾಶಿಯ ವಲಯ ಅಂದಾಜು ಮಾಡಿ.Jan 21 - Fornax

ತಿಮಿಂಗಿಲ, ಶಿಲ್ಪಶಾಲಾ, ಚಕೋರ, ವೈತರಿಣೀ ರಾಶಿಗಳು ಅಗ್ನಿಕುಂಡವನ್ನು ಸುತ್ತುವರಿದಿವೆ.

ಅಗ್ನಿಕುಂಡದ ದಕ್ಷಿಣ ಬಾಹುವಿನ ಪಶ್ಚಿಮ ತುದಿಗೆ ತಾಗಿಕೊಂಡು  ಇರುವ ರಾಶಿ ಚಕೋರ (೨೧. ಫೀನಿಕ್ಸ್, ವಿಸ್ತೀರ್ಣ ೪೬೯.೩೧೯ ಚ ಡಿಗ್ರಿ). ಚಕೋರದ ಪ್ರಮುಖ ತಾರೆಗಳು ಅನುಕ್ರಮವಾಗಿ ಇವು: α ಚಕೋರ (ತೋಉ ೨.೩೯, ದೂರ ೭೭ ಜ್ಯೋವ), β ಚಕೋರ (ತೋಉ ೩.೩೨, ದೂರ ೩೦೪ ಜ್ಯೋವ), γ ಚಕೋರ (ತೋಉ ೩.೪೪, ದೂರ ೨೩೮ ಜ್ಯೋವ), ε ಚಕೋರ (ತೋಉ ೩.೮೮, ದೂರ ೧೪೦ ಜ್ಯೋವ), κ ಚಕೋರ (ತೋಉ ೩.೯೪, ದೂರ ೭೭ ಜ್ಯೋವ), δ ಚಕೋರ (ತೋಉ ೩.೯೪, ದೂರ ೧೪೭ ಜ್ಯೋವ), ζ ಚಕೋರ (ತೋಉ ೩.೯೮, ದೂರ ೨೯೧ ಜ್ಯೋವ). ಇವುಗಳ ಪೈಕಿ ಮೊದಲನೆಯದು ಉಜ್ವಲವಾದದ್ದು. ಎಂದೇ ಇದನ್ನು ತಾಳ್ಮೆ ಇದ್ದರೆ ಗುರುತಿಸಬಹುದು, ತದನಂತರ ಉಳಿದವನ್ನು ಅಥವ ರಾಶಿ ವಲಯವನ್ನು ಗುರುತಿಸಲು ಪ್ರಯತ್ನಿಸಬಹುದು.Jan 22 - Phoenix

ಶಿಲ್ಪಶಾಲಾ, ಬಕ, ಶ್ಯೇನ, ಕಾಳಿಂಗ (ಮೂಲೆ), ವೈತರಿಣೀ, ಅಗ್ನಿಕುಂಡ ಇದರ ಸುತ್ತಲೂ ಇರುವ ರಾಶಿಗಳು.

ವೈತರಿಣೀಮುಖ ತಾರೆಯ ನೇರದಲ್ಲಿ ಪಶ್ಚಿಮ ಎಲ್ಲೆಗೆ ತಾಗಿಕೊಂಡು ಹೋರಾಸೂಚೀ ರಾಶಿ (೮೮. ಹಾರೋಲಾಷಿಅಮ್, ವಿಸ್ತೀರ್ಣ ೨೪೮.೮೮೫ ಚ ಡಿಗ್ರಿ) ಇದೆ. ಉಜ್ವಲ ತಾರೆಗಳು ಇಲ್ಲದಿರುವ ಈ ರಾಶಿಯನ್ನು ಗುರುತಿಸುವುದು ಕಷ್ಟ. ರೇಖಾಚಿತ್ರದ ನೆರವಿನಿಂದ ವಲಯ ಗುರುತಿಸಲು ಪ್ರಯತ್ನಿಸಬಹುದು. ಇದರ ಪ್ರಮುಖ ತಾರೆಗಳ ಪೈಕಿ ಸಾಪೇಕ್ಷವಾಗಿ ಉಜ್ವಲವಾದವು ಅನುಕ್ರಮವಾಗಿ ಇಂತಿವೆ: α ಹೋರಾಸೂಚೀ (ತೋಉ ೩.೮೫, ದೂರ ೧೧೭ ಜ್ಯೋವ), δ ಹೋರಾಸೂಚೀ (ತೋಉ ೪.೯೩, ದೂರ ೧೭೭ ಜ್ಯೋವ),  β ಹೋರಾಸೂಚೀ (ತೋಉ ೪.೯೭, ದೂರ ೩೨೦ ಜ್ಯೋವ).Jan 23 - Horologium

ವೈತರಿಣೀ, ಕಾಳಿಂಗ, ಜಾಲ, ಮತ್ಸ್ಯ ಮತ್ತು ವ್ರಶ್ಚನ ರಾಶಿಗಳು ಹೋರಾಸೂಚಿಯನ್ನು ಸುತ್ತುವರಿದಿವೆ.

ಶಶ ರಾಶಿಯ ದಕ್ಷಿಣಕ್ಕೂ ವೈತರಿಣೀ ರಾಶಿಯ ಪಶ್ಚಿಮಕ್ಕೂ, ಹೋರಾಸೂಚೀ ರಾಶಿಯ ಉತ್ತರಕ್ಕೂ ವ್ರಶ್ಚನ ರಾಶಿ (೭೧. ಸೀಲಮ್, ವಿಸ್ತೀರ್ಣ ೧೨೪.೮೬೫ ಚ ಡಿಗ್ರಿ) ತಾಗಿಕೊಂಡಿದೆ.Jan 24 - Caelum

α ವ್ರಶ್ಚನ (ತೋಉ ೪.೪೪, ದೂರ ೬೬ ಜ್ಯೋವ) ತಾರೆಯೇ ಈ ರಾಶಿಯ ಅತ್ಯುಜ್ವಲ ತಾರೆ. ಎಂದೇ, ಬರಿಗಣ್ಣಿನಿಂದ ಗುರುತಿಸುವುದು ಕಷ್ಟ. ರಾಶಿಯ ವಲಯವನ್ನು ಸರಿಸುಮಾರಾಗಿ ಅಂದಾಜು ಮಾಡಬಹುದು.

ವೈತರಿಣೀ, ಹೋರಾಸೂಚೀ, ಮತ್ಸ್ಯ, ಚಿತ್ರಫಲಕ, ಕಪೋತ ಮತ್ತು ಶಶ ರಾಶಿಗಳು ಇದನ್ನು ಸುತ್ತುವರಿದಿವೆ.

ಈಗ ಶಶ ರಾಶಿಯನ್ನು ಕೈಕಂಬವಾಗಿಸಿ ವೀಕ್ಷಣೆ ಮುಂದುವರಿಸಿ. ಶಶ ರಾಶಿಯ ಸುತ್ತಣ ರಾಶಿಗಳು ಇವು: ಮಹಾವ್ಯಾಧ, ವೈತರಿಣೀ, ವ್ರಶ್ಚನ, ಕಪೋತ, ಮಹಾಶ್ವಾನ, ಏಕಶೃಂಗಿ ರಾಶಿಗಳು ಶಶವನ್ನು ಸುತ್ತುವರಿದಿವೆ. ಈ ಎಲ್ಲ ರಾಶಿಗಳನ್ನೂ ಈಗಾಗಲೇ ಗುರುತಿಸಿರುವುದರಿಂದ ವೀಕ್ಷಣೆಗೆ ಕೈಕಂಬವಾಗುವ ಅದೃಷ್ಟ ಶಶ ರಾಶಿಗಿಲ್ಲ. ಸುತ್ತಣ ರಾಶಿಗಳನ್ನು ವೀಕ್ಷಿಸಿದ್ದಾಗಿದೆ ಅಥವ ಅವು ಪೂರ್ಣ ಉದಯಿಸಿಲ್ಲ ಎಂಬ ಕಾರಣಕ್ಕಾಗಿ ಏಕಶೃಂಗಿ ರಾಶಿಗೂ ಇಲ್ಲ.

ಹಂತ : ಈ ಹಂತದಲ್ಲಿ ವಿಜಯಸಾರಥಿ ಕೈಕಂಬವಾಗಲಿ. ವಿಜಯಸಾರಥಿಯ ಸುತ್ತಣ ರಾಶಿಗಳು ಇವು: ದೀರ್ಘಕಂಠ, ಪಾರ್ಥ, ವೃಷಭ, ಮಿಥುನ, ಮಾರ್ಜಾಲ. ಇವುಗಳ ಪೈಕಿ ದೀರ್ಘಕಂಠ ರಾಶಿಯನ್ನು ಮಾತ್ರ ಗುರುತಿಸಬೇಕು.Jan 25 - Camelopardalis

ವಿಜಯಸಾರಥಿ ಹಾಗೂ ಪಾರ್ಥ ರಾಶಿಗಳೆರಡಕ್ಕೂ ಉತ್ತರ ದಿಕ್ಕಿನಲ್ಲಿ ತಾಗಿಕೊಂಡಿದೆ ದೀರ್ಘಕಂಠ ರಾಶಿ (೩೩. ಕಮೆಲಾಪಾರ್ಡಲಿಸ್, ವಿಸ್ತೀರ್ಣ 756.828 ಚ ಡಿಗ್ರಿ). ಈ ರಾಶಿಯ ತಾರೆಗಳು ಸುಲಭವಾಗಿ ನೋಡುವಷ್ಟು ಉಜ್ವಲವಾಗಿಲ್ಲ, ಎಂದೇ, ಗುರುತಿಸುವುದು ಕಷ್ಟ. β ದೀರ್ಘಕಂಠ (ತೋಉ ೪.೦೨, ದೂರ ೧೦೨೨ ಜ್ಯೋವ), ಎಚ್‌ಡಿ ೨೧೨೯೧ (ತೋಉ ೪.೨೪, ದೂರ ೫೨೬೧ ಜ್ಯೋವ), α  ದೀರ್ಘಕಂಠ (ತೋಉ ೪.೩೦, ದೂರ  ೮೫೮೩ ಜ್ಯೋವ) – ಇವು ಅನುಕ್ರಮವಾಗಿ ಈ ರಾಶಿಯ ಅತ್ಯಂತ ಉಜ್ವಲ ತಾರೆಗಳು. ಚಿತ್ರದ ನೆರವಿನಿಂದ ವಲಯ ಗುರುತಿಸಲು ಪ್ರಯತ್ನಿಸಿ.

ಸುಯೋಧನ, ಲಘುಸಪ್ತರ್ಷಿ, ಯುಧಿಷ್ಠಿರ, ಕುಂತೀ, ಪಾರ್ಥ, ವಿಜಯಸಾರಥಿ, ಮಾರ್ಜಾಲ ಮತ್ತು ಸಪ್ತರ್ಷಿಮಂಡಲಗಳು ದೀರ್ಘಕಂಠವನ್ನು ಸುತ್ತುವರಿದಿವೆ.

ಹಂತ : ಈಗ ಪಾರ್ಥ ರಾಶಿ ವೀಕ್ಷಣೆಗೆ ಕೈಕಂಬವಾಗಲಿ. ಕುಂತೀ, ದ್ರೌಪದಿ, ತ್ರಿಕೋಣಿ, ಮೇಷ, ವೃಷಭ, ವಿಜಯಸಾರಥಿ, ದೀರ್ಘಕಂಠ ರಾಶಿಗಳು ಪಾರ್ಥವನ್ನು ಸುತ್ತುವರಿದಿವೆ. ಈ ಪೈಕಿ ಮೊದಲನೇ ಮೂರನ್ನು ಮಾತ್ರ ಗುರುತಿಸಬೇಕು. ಅವುಗಳ ಪೈಕಿ ಸಧ್ಯಕ್ಕೆ ಕುಂತೀ, ತ್ರಿಕೋಣಿ ರಾಶಿಗಳನ್ನು ಗುರುತಿಸಿ.

ಪಾರ್ಥ ರಾಶಿಯ ಉತ್ತರದ ಅಂಚಿಗೂ ದೀರ್ಘಕಂಠ ರಾಶಿಯ ಪಶ್ಚಿಮ ಅಂಚಿಗೂ ತಾಗಿಕೊಂಡಿರುವ ವಲಯದ ಮೇಲೆ ದೃಷ್ಟಿ ಹಾಯಿಸಿದರೆ M ಅಕ್ಷರವನ್ನು ಹೋಲುವ ಐದು ತಾರೆಗಳ ಪುಂಜ ಉಳ್ಳ ಕುಂತೀ ರಾಶಿಯ (೧೫. ಕ್ಯಾಸಿಓಪಿಯಾ, ವಿಸ್ತೀರ್ಣ ೫೯೮.೪೦೭ ಚ ಡಿಗ್ರಿ) ದರ್ಶನವಾಗುತ್ತದೆ.Jan 26 - Cassiopeia

೧. γ ಕುಂತೀ (ತೋಉ ೨.೧೭, ದೂರ ೬೧೫ ಜ್ಯೋವ)

೨. α ಕುಂತೀ (ತೋಉ ೨.೨೪, ದೂರ ೨೩೮ ಜ್ಯೋವ)

೩. β ಕುಂತೀ (ಜಮದಗ್ನಿ, ತೋಉ ೨.೨೭, ದೂರ ೫೪ ಜ್ಯೋವ)

೪. δ ಕುಂತೀ (ತೋಉ ೨.೬೭, ದೂರ ೧೦೦ ಜ್ಯೋವ) ಮತ್ತು

೫. ε ಕುಂತೀ (ತೋಉ ೩.೩೫, ದೂರ ೪೪೮ ಜ್ಯೋವ ಇವೇ ಆ ಐದು ತಾರೆಗಳು. ಇವನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಇವಲ್ಲದೆ α ಕುಂತೀ ಇಂದ ಅನತಿ ದೂರದಲ್ಲಿ M ಅಕ್ಷರದ ರೇಖೆಯಿಂದ ಹೊರಗೆ η  ಕುಂತೀ (ತೋಉ ೩.೪೫, ದೂರ ೧೯ ಜ್ಯೋವ) ಎಂಬ ಇನ್ನೊಂದು ತಾರೆ ಇರುವುದನ್ನೂ ಗಮನಿಸಿ.

ಯುಧಿಷ್ಠಿರ, ಮುಸಲೀ, ದ್ರೌಪದಿ, ಪಾರ್ಥ, ದೀರ್ಘಕಂಠ ರಾಶಿಗಳು ಕುಂತೀ ರಾಶಿಯನ್ನು ಸುತ್ತುವರಿದಿವೆ.

ಕುಂತೀ ಪುಂಜದ ನೆರವಿಂದ ಧ್ರುವ ತಾರೆಯನ್ನು (ಪೊಲಾರಿಸ್, α ಅರ್ಸಾ ಮೈನರ್, ತೋಉ ೧.೯೯, ದೂರ ೪೨೬ ಜ್ಯೋವ) ಗುರುತಿಸಬಹುದು.  M ಆಕೃತಿಯ δ ಕುಂತೀ ತಾರೆ ಇರುವ ಶೃಂಗ ಕೋನದ ಸಮದ್ವಿಭಾಜಕ ರೇಖೆಯ ಉತ್ತರ ದಿಕ್ಕಿನ ವಿಸ್ತರಣೆ ಧ್ರುವ ತಾರೆಯನ್ನು ಸ್ಪರ್ಷಿಸುತ್ತದೆ. ಸಪ್ತರ್ಷಿಮಂಡಲದ ಗೈರುಹಾಜರಿಯಲ್ಲಿಯೂ ಧ್ರುವ ತಾರೆ ಗುರುತಿಸಬಹುದು, ಭೂಮಿಯ ಭೌಗೋಲಿಕ ಉತ್ತರವನ್ನು ಪತ್ತೆಹಚ್ಚಲೂ ಬಹುದು. ಕುಂತೀ ಪುಂಜದ ವಿರುದ್ಧ ದಿಶೆಯಲ್ಲಿ, ಅರ್ಥಾತ್ ಧ್ರುವತಾರೆಯ ಇನ್ನೊಂದು ಪಾರ್ಶ್ವದಲ್ಲಿ ಸಪ್ತರ್ಷಿಮಂಡಲ ಇರುತ್ತದೆ. ಧ್ರುವತಾರೆಯ ಉನ್ನತಿಯೇ (ಆಲ್ಟಿಟ್ಯೂಡ್) ಆ ಸ್ಥಳದ ಅಕ್ಷಾಂಶ (ಲ್ಯಾಟಿಟ್ಯೂಡ್). ಅರ್ಥಾತ್, ಧ್ರುವ ತಾರೆಯನ್ನು ಗುರುತಿಸಿ, ಅದರ ಉನ್ನತಿಯನ್ನು ಅಳೆಯಿರಿ. ಅದೇ ನೀವಿರುವ ಸ್ಥಳದ ಅಕ್ಷಾಂಶ. (‘ಧ್ರುವತಾರೆ’ಯ ಪಟ್ಟವನ್ನು ಬೇರೆ ಬೇರೆ ತಾರೆಗಳು ಅಲಂಕರಿಸುತ್ತವೆ ಎಂಬ ತಥ್ಯದ ಕುರಿತು ತಿಳಿಯಬೇಕಾದರೆ ಈ ಜಾಲತಾಣಕ್ಕೆ ಹೋಗಿ)Identifying Pole Star

ಪಾರ್ಥ ರಾಶಿಯ ಪಶ್ಚಿಮ ಬಾಹುವಿನ ದಕ್ಷಿಣ ತುದಿಗೆ, ಮೇಷ ರಾಶಿಯ ಅಶ್ವಿನಿಯ ಉತ್ತರ ದಿಕ್ಕಿಗೆ ಅನತಿ ದೂರದಲ್ಲಿ ಪುಟ್ಟ ರಾಶಿ ತ್ರಿಕೋಣಿ (೨೭. ಟ್ರೈಆಂಗ್ಯುಲಮ್, ವಿಸ್ತೀರ್ಣ ೧೩೧.೮೪೭ ಚ ಡಿಗ್ರಿ) ಇದೆ.Jan 27 - Triangulum

ರೇಖಾಚಿತ್ರದಲ್ಲಿ ತೋರಿಸಿದ ತಾರೆಗಳು ಅಷ್ಟೇನೂ ಉಜ್ವಲವಲ್ಲದ್ದರಿಂದ ಗುರುತಿಸುವುದು ಕೊಂಚ ಕಷ್ಟ. ಅನುಕ್ರಮವಾಗಿ ತಾರೆಗಳು ಇವು: β ತ್ರಿಕೋಣಿ (ತೋಉ ೩.೦೦, ದೂರ ೧೨೬ ಜ್ಯೋವ), α ತ್ರಿಕೋಣಿ (ತೋಉ ೩.೪೨, ದೂರ ೬೪ ಜ್ಯೋವ), γ ತ್ರಿಕೋಣಿ (ತೋಉ ೪.೦೦, ದೂರ ೧೧೯ ಜ್ಯೋವ).

ತ್ರಿಕೋಣಿಯ ಸುತ್ತಣ ರಾಶಿಗಳು ಇವು: ದ್ರೌಪದಿ, ಮೀನ, ಮೇಷ, ಪಾರ್ಥ.

ಹಂತ : ಕೈಕಂಬವಾಗುವ ಗೌರವ ಮೇಷ ರಾಶಿಗೆ ಸಲ್ಲಲಿ. ಇದನ್ನು ಸುತ್ತುವರಿದ ರಾಶಿಗಳ ಪೈಕಿ ಮೀನ ರಾಶಿಯನ್ನು ಮಾತ್ರ ಗುರುತಿಸ ಬೇಕಾಗಿದೆ. ಆದ್ದರಿಂದ ಮೀನ ರಾಶಿಯನ್ನು ಗುರುತಿಸಿದ ಬಳಿಕ ಅದನ್ನು ಕೈಕಂಬವಾಗಿಸಿ ಮುಂದುವರಿಯಿರಿ.Jan 28 - Pisces

ಮೇಷ ರಾಶಿಯ ಪಶ್ಚಿಮ ಗಡಿಗೆ ತಾಗಿಕೊಂಡಿದೆ ಮೀನ ರಾಶಿ (೫೪. ಪೈಸೀಜ್, ವಿಸ್ತೀರ್ಣ ೮೮೯.೪೧೭ ಚ ಡಿಗ್ರಿ). ಈ ರಾಶಿಯಲ್ಲಿ ಉಜ್ವಲ ಎಂದು ತೋರಿಸಬಹುದಾದ ತಾರೆಗಳು ಇಲ್ಲದೇ ಇರುವುದರಿಂದ ಸದಸ್ಯ ತಾರೆಗಳನ್ನು ಗುರುತಿಸುವುದು ಕಷ್ಟ. ಎಂದೇ ರಾಶಿಯ ವಲಯವನ್ನು ಗುರುತಿಸಬಹುದು.

ರೇಖಾಚಿತ್ರದ ನೆರವಿಂದ ಕೆಲವು ತಾರೆಗಳನ್ನು ಗುರುತಿಸಲು ಸಾಧ್ಯವೇ, ಪರೀಕ್ಷಿಸಿ.

೧. η ಮೀನ (ತೋಉ ೩.೬೨, ದೂರ ೩೦೩ ಜ್ಯೋವ)

೨. γ ಮೀನ (ತೋಉ ೩.೭೦, ದೂರ ೧೩೧ ಜ್ಯೋವ)

೩. α ಮೀನ (ತೋಉ ೪.೦೧, ದೂರ 139 ಜ್ಯೋವ) ಇವು ಈ ರಾಶಿಯ ಸದಸ್ಯ ತಾರೆಗಳ ಪೈಕಿ ಸಾಪೇಕ್ಷವಾಗಿ ಉಜ್ವಲವಾದವು. ಭಾರತೀಯ ಜ್ಯೋತಿಷ್ಚಕ್ರದ ‘ನಕ್ಷತ್ರ’ಗಳ ಪೈಕಿ, ಕೊನೆಯ ರೇವತಿ ಇರುವ ರಾಶಿ ಇದು. ರೇವತಿ ‘ನಕ್ಷತ್ರ’ ಎಂದು ಯಾವ ತಾರೆಯನ್ನು ಗುರುತಿಸಬೇಕು ಎಂಬ ಕುರಿತಂತೆ ಭಿನ್ನಾಭಿಪ್ರಾಯವಿದೆ. ರೇವತಿ ‘ನಕ್ಷತ್ರ’ ಎಂದು ಗುರುತಿಸಲಾಗಿರುವ ತಾರೆಗಳು ಇವು:

(೪) ε ಮೀನ (ತೋಉ ೪.೨೭, ದೂರ ೧೮೯ ಜ್ಯೋವ)

(೧) η ಮೀನ

(೫) ζ ಮೀನ (ತೋಉ ೫.೧೯, ದೂರ ೧೫೦ ಜ್ಯೋವ)

ಇವುಗಳ ಪೈಕಿ η ಮೀನ ಸಾಪೇಕ್ಷವಾಗಿ ಉಜ್ವಲವಾದದ್ದು.

ಮೀನ ರಾಶಿಯ ಸುತ್ತಣ ರಾಶಿಗಳು ಇವು: ತ್ರಿಕೋಣಿ, ದ್ರೌಪದಿ, ನಕುಲ, ಕುಂಭ, ತಿಮಿಂಗಿಲ, ಮೇಷ.

ಈ ಪೈಕಿ ಕುಂಭ ಭಾಗಶಃ ಅಸ್ತವಾಗಿದೆ, ತ್ರಿಕೋಣಿ, ತಿಮಿಂಗಿಲ ಮತ್ತು ಮೇಷಗಳನ್ನು ಗುರುತಿಸಿ ಆಗಿದೆ. ಉಳಿದದ್ದು ನಕುಲ ಮತ್ತು ದ್ರೌಪದಿ.

ಮೀನದ ಪಶ್ಚಿಮಕ್ಕೆ ತುಸು ಉತ್ತರ ದಿಕ್ಕಿಗೆ ಇರುವ ವಲಯದಲ್ಲಿ ಅನುಕ್ರಮವಾಗಿ ಕನಿಷ್ಠ ಮೂರು ಉಜ್ವಲ ತಾರೆಗಳು, ε ನಕುಲ (ತೋಉ ೨.೩೭, ದೂರ ೭೬೨ ಜ್ಯೋವ), β ನಕುಲ (ತೋಉ ೨.೪೭, ದೂರ ೧೯೯ ಜ್ಯೋವ), α ನಕುಲ (ತೋಉ ೨.೪೮, ದೂರ ೧೩೮ ಜ್ಯೋವ) ಮತ್ತು ಅಷ್ಟೇನೂ ಉಜ್ವಲವಲ್ಲದ γ ನಕುಲ (ತೋಉ ೨.೮೩, ದೂರ ೩೫೯ ಜ್ಯೋವ), η ನಕುಲ (ತೋಉ ೨.೯೪, ದೂರ ೨೨೩ ಜ್ಯೋವ) ಗೋಚರಿಸುತ್ತವೆ. ಇವು ಚಿತ್ತಾಕರ್ಷಕ ನಕುಲ ರಾಶಿಯ(೪೦. ಪೆಗಸಸ್, ವಿಸ್ತೀರ್ಣ ೧೧೨೦.೭೯೪ ಚ ಡಿಗ್ರಿ) ಪ್ರಮುಖ ತಾರೆಗಳು.

ಇವಷ್ಟೇ ಅಲ್ಲದೆ, α ದ್ರೌಪದಿ (ಸಿರ್‌ಹಾ, ಆಲ್‌ಫೆರಟ್ಸ್, ತೋಉ ೨.೦೫, ದೂರ ೯೮ ಜ್ಯೋವ) ಎಂಬ ಉಜ್ವಲ ತಾರೆಯೂ ಈ ವಲಯದ ಅಂಚಿನಲ್ಲಿ ಗೋಚರಿಸುತ್ತದೆ. α, β, γ ನಕುಲ ತಾರೆಗಳು ಮತ್ತು α ದ್ರೌಪದಿ ಒಂದು ಅಸಮ ಚತುರ್ಭುಜ ರಚಿಸುವುದರಿಂದ ಇವನ್ನು ಗುರುತಿಸುವುದು ಸುಲಭ. α, β ನಕುಲ ತಾರೆಗಳನ್ನು (ಮಾರ್‌ಕಾಬ್, ಮೆನ್‌ಕಿಬ್/ಶ್ಕೀಟ್) ಪೂರ್ವಾಭಾದ್ರಾ ‘ನಕ್ಷತ್ರ’ದ ತಾರೆ ಎಂದೂ γ ನಕುಲ (ಆಲ್‌ಜೀಬ್) ಮತ್ತು α ದ್ರೌಪದಿ (ಸಿರ್‌ಹಾ, ಆಲ್‌ಫೆರಟ್ಸ್) ತಾರೆಗಳನ್ನು ಉತ್ತರಾಭಾದ್ರಾ ‘ನಕ್ಷತ್ರ’ದ ತಾರೆಗಳು ಎಂದೂ ಪರಿಗಣಿಸಲಾಗಿದೆ.Jan 29 - Pegasus

ನಕುಲ ರಾಶಿಯನ್ನು ಸುತ್ತುವರಿದಿರುವ ರಾಶಿಗಳು ಇವು: ದ್ರೌಪದಿ, ಮುಸಲೀ, ರಾಜಹಂಸ, ಶೃಗಾಲ, ಧನಿಷ್ಠಾ, ಕಿಶೋರ ಮತ್ತು ಕುಂಭ.

ಈಗಾಗಲೇ ಗುರುತಿಸಿದ (೧) α ದ್ರೌಪದಿ (ಸಿರ್‌ಹಾ) ಎಂಬ ಉಜ್ವಲ ತಾರೆಯ ನೆರವಿನಿಂದ ದ್ರೌಪದಿ ರಾಶಿಯನ್ನು (೩೭. ಆಂಡ್ರಾಮಿಡ, ವಿಸ್ತೀರ್ಣ ೭೨೨.೨೭೮ ಚ ಡಿಗ್ರಿ) ಗುರುತಿಸಬಹುದು. β ನಕುಲ ಮತ್ತು α ದ್ರೌಪದಿ ತಾರೆಗಳನ್ನು ಜೋಡಿಸುವ ರೇಖೆಯನ್ನು ಕೊಂಚ ಬಾಗಿಸಿ ಈಶಾನ್ಯ ದಿಕ್ಕಿನತ್ತ ವಿಸ್ತರಿಸಿದರೆ ಈ ರಾಶಿಯ ಉಳಿದ ಮೂರು ಉಜ್ವಲ ತಾರೆಗಳು ಇಂತಿವೆ: (೨) β ದ್ರೌಪದಿ (ಮಿರಾಕ್, ತೋಉ ೨.೦೮, ದೂರ ೨೦೬ ಜ್ಯೋವ) ಮತ್ತು (೩) γ ದ್ರೌಪದಿ (ಆಲ್‌ಮಾಕ್, ತೋಉ ೨.೧೬, ದೂರ ೩೭೮ ಜ್ಯೋವ), (೪) δ ದ್ರೌಪದಿ (ಸಾದಿರಾದ್ರಾ, ತೋಉ ೩.೨೭, ದೂರ ೧೦೨ ಜ್ಯೋವ).Jan 30 - Andromeda

ದ್ರೌಪದಿಯ ಸುತ್ತಣ ರಾಶಿಗಳು ಇವು: ಕುಂತೀ, ಮುಸಲೀ, ನಕುಲ, ಮೀನ, ತ್ರಿಕೋಣಿ ಮತ್ತು ಪಾರ್ಥ.

ಹಂತ : ಉತ್ತರ ಖಗೋಳಾರ್ಧದಲ್ಲಿ ಗುರುತಿಸದೆ ಉಳಿದಿರುವ ಮುಸಲೀ ಮತ್ತು ಯುಧಿಷ್ಠಿರ ರಾಶಿಗಳನ್ನು ಈಗ ಗುರುತಿಸಿ.

ಕುಂತೀ ಮತ್ತು ದ್ರೌಪದಿ ರಾಶಿಗಳೆರಡಕ್ಕೂ ಪಶ್ಚಿಮದಲ್ಲಿ ತಾಗಿಕೊಂಡು ಇರುವ ರಾಶಿ ಮುಸಲೀ (೫೫. ಲಸರ್ಟ, ವಿಸ್ತೀರ್ಣ ೨೦೦.೬೮೮ ಚ ಡಿಗ್ರಿ). ದಕ್ಷಿಣದಲ್ಲಿ ನಕುಲ ರಾಶಿ ಇದೆ. ಇದರ ಅತ್ಯಂತ ಉಜ್ವಲ ತಾರೆ α ಮುಸಲೀಯ ತೋರಿಕೆಯ ಉಜ್ವಲತಾಂಕ ೩.೭೭ (ದೂರ ೧೦೩ ಜ್ಯೋವ). ಎಂದೇ, ಈ ರಾಶಿಯ ವಲಯವನ್ನು ಅಂದಾಜು ಮಾಡಬಹುದೇ ವಿನಾ ಪುಂಜವನ್ನು ಬರಿಗಣ್ಣಿನಿಂದ ನೋಡುವುದು ಕಷ್ಟ.Jan 31 - Lacerta

ಯುಧಿಷ್ಠಿರ, ರಾಜಹಂಸ, ನಕುಲ, ದ್ರೌಪದಿ, ಕುಂತೀ ರಾಶಿಗಳು ಮುಸಲೀಯನ್ನು ಸುತ್ತುವರಿದಿವೆ.

ಕುಂತೀ ರಾಶಿಯ ಉತ್ತರ ದಿಶೆಯಲ್ಲಿ ಅದಕ್ಕೆ ತಾಗಿಕೊಂಡು ಇರುವ ರಾಶಿ ಯುಧಿಷ್ಠಿರ (೫೭. ಸೀಫಿಅಸ್, ವಿಸ್ತೀರ್ಣ ೫೮೭.೭೮೭ ಚ ಡಿಗ್ರಿ).Jan 32 - Cepheus

ಇದರ ಏಳು ಪ್ರಮುಖ ತಾರೆಗಳ ಪೈಕಿ

೧. α ಯುಧಿಷ್ಠಿರ (ತೋಉ ೨.೪೬, ದೂರ ೪೯ ಜ್ಯೋವ) ಉಜ್ವಲ.

ಇತರ ಆರು ತಾರೆಗಳು ಇವು:

೨. γ ಯುಧಿಷ್ಠಿರ (ತೋಉ ೩.೨೧, ದೂರ ೪೫ ಜ್ಯೋವ)

೩. β ಯುಧಿಷ್ಠಿರ (ತೋಉ ೩.೨೨, ದೂರ ೬೦೨ ಜ್ಯೋವ)

೪. ζ ಯುಧಿಷ್ಠಿರ (ತೋಉ ೩.೩೫, ದೂರ ೭೮೬ ಜ್ಯೋವ)

೫. η ಯುಧಿಷ್ಠಿರ (ತೋಉ ೩.೪೨, ದೂರ ೪೭ ಜ್ಯೋವ)

೬. ι ಯುಧಿಷ್ಠಿರ (ತೋಉ ೩.೫೦, ದೂರ ೧೧೭ ಜ್ಯೋವ)

೭. δ ಯುಧಿಷ್ಠಿರ (ತೋಉ ೪.೧೧, ದೂರ ೯೬೫ ಜ್ಯೋವ)

ಯುಧಿಷ್ಠಿರದ ಸುತ್ತಣ ರಾಶಿಗಳು ಇವು: ಲಘುಸಪ್ತರ್ಷಿ, ಸುಯೋಧನ, ರಾಜಹಂಸ, ಮುಸಲೀ, ಕುಂತೀ, ದೀರ್ಘಕಂಠ.

ಹಂತ ೧೦: ಈಗ ದಕ್ಷಿಣ ಖಗೋಳಾರ್ಧದಲ್ಲಿ ಈ ತನಕ ಗುರುತಿಸದೇ ಬಿಟ್ಟಿದ್ದ ರಾಶಿಗಳತ್ತ ಗಮನ ಹರಿಸಿ. ಈಗಾಗಲೇ ಗುರುತಿಸಿದ್ದ ಮಹಾಶ್ವಾನ ರಾಶಿಗೆ ತಾಗಿಕೊಂಡಿದ್ದ ಕಪೋತ ರಾಶಿವಲಯವನ್ನು ಇನ್ನೊಮ್ಮೆ ನೋಡಿ. ಶಶ, ವ್ರಶ್ಚನ, ಚಿತ್ರಫಲಕ, ನೌಕಾಪೃಷ್ಠ ಮತ್ತು ಮಹಾಶ್ವಾನ ಇದನ್ನು ಸುತ್ತುವರಿದಿರುವ ರಾಶಿಗಳು. ಇವುಗಳ ಪೈಕಿ ಶಶ ಮತ್ತು ವ್ರಶ್ಚನ ಗುರುತಿಸಿದ್ದಾಗಿದೆ. ನೌಕಾಪೃಷ್ಠ ಭಾಗಶಃ ಉದಯಿಸಿದೆ. ಉಳಿದದ್ದು ಕಪೋತದ ದಕ್ಷಿಣ ಪಾರ್ಶ್ವಕ್ಕೆ ತಾಗಿಕೊಂಡಿರುವ ಚಿತ್ರಫಲಕ ರಾಶಿ.

ಕಪೋತದ ದಕ್ಷಿಣಕ್ಕೆ, ಬಾನಂಚಿಗಿಂತ ತುಸು ಮೇಲೆ ಉಜ್ವಲವಾದ ತಾರೆಯೊಂದು ತನ್ನತ್ತ ನಿಮ್ಮ ಗಮನ ಸೆಳೆಯುತ್ತದೆ. ಇನ್ನೂ ಪೂರ್ತಿಯಾಗಿ ಉದಯಿಸದ ದೇವನೌಕಾ ರಾಶಿಯ ಅಗಸ್ತ್ಯ ತಾರೆ ಇದು. ಈ ರಾಶಿಯನ್ನು ಸಧ್ಯಕ್ಕೆ ಹಾಗೆಯೇ ಬಿಡಿ. ಆ ರಾಶಿಯ ಪಶ್ಚಿಮಕ್ಕೂ ಅರ್ಥಾತ್ ಕಪೋತದ ದಕ್ಷಿಣಕ್ಕೂ ತಾಗಿಕೊಂಡಿರುವ ರಾಶಿ ಚಿತ್ರಫಲಕ ರಾಶಿ (೨೩. ಪಿಕ್ಟರ್, ವಿಸ್ತೀರ್ಣ ೨೪೬.೭೩೯ ಚ ಡಿಗ್ರಿ).Jan 33 - Pictor

ಅನುಕ್ರಮವಾಗಿ α ಚಿತ್ರಫಲಕ (ತೋಉ ೩.೨೪, ದೂರ ೮೭ ಜ್ಯೋವ), β ಚಿತ್ರಫಲಕ ( ತೋಉ ೩.೮೫, ದೂರ ೬೩ ಜ್ಯೋವ) ಮತ್ತು γ ಚಿತ್ರಫಲಕ (ತೋಉ ೪.೪೯, ದೂರ ೧೭೪ ಜ್ಯೋವ) ಇದರ ಪ್ರಮುಖ ತಾರೆಗಳು. ಇವು ಉಜ್ವಲ ತಾರೆಗಳಲ್ಲ. ಎಂದೇ, ಬರಿಗಣ್ಣಿನಿಂದ ಗುರುತಿಸುವುದು ಕಷ್ಟ. ವಲಯ ಅಂದಾಜು ಮಾಡಬಹುದು.

ಕಪೋತ, ವ್ರಶ್ಚನ, ಮತ್ಸ್ಯ, ಶಫರೀ, ದೇವನೌಕಾ ಮತ್ತು ನೌಕಾಪೃಷ್ಠ ರಾಶಿಗಳು ಇದರ ಸುತ್ತಣ ರಾಶಿಗಳು.

ಚಿತ್ರಫಲಕದ ಪಶ್ಚಿಮ ಗಡಿಗೆ ತಾಗಿಕೊಂಡು ಮತ್ಸ್ಯ ರಾಶಿ (೪೭. ಡಾರಾಡೋ, ವಿಸ್ತೀರ್ಣ ೧೭೯.೧೭೩ ಚ ಡಿಗ್ರಿ) ಇದೆ. ಬಾನಂಚಿನಲ್ಲಿ ಇರುವ ಇದರ ಪ್ರಮುಖ ತಾರೆಗಳು ಉಜ್ವಲವಾಗಿಲ್ಲದ ಕಾರಣ ಬರಿಗಣ್ಣಿನಿಂದ ಗುರುತಿಸುವುದು ಕಷ್ಟ.  ಅವು ಅನುಕ್ರಮವಾಗಿ ಇಂತಿವೆ: α ಮತ್ಸ್ಯ (ತೋಉ ೩.೨೩, ದೂರ ೧೭೬ ಜ್ಯೋವ),  β ಮತ್ಸ್ಯ (ತೋಉ ೩.೮೦, ದೂರ ೧೦೧೩ ಜ್ಯೋವ),  γ ಮತ್ಸ್ಯ  (ತೋಉ ೪.೨೫, ದೂರ ೬೬ ಜ್ಯೋವ).

ಮತ್ಸ್ಯ ರಾಶಿಯ ಪಶ್ಚಿಮ ಎಲ್ಲೆಗೆ ತಾಗಿಕೊಂಡು ಜಾಲ ರಾಶಿ (೨೪. ರೆಟಿಕ್ಯುಲಮ್, ವಿಸ್ತೀರ್ಣ ೧೧೩.೯೩೬ ಚ ಡಿಗ್ರಿ) ಇದೆ. ಬರಿಗಣ್ಣಿನಿಂದ ಗುರುತಿಸುವುದು ಬಲು ಕಷ್ಟವಾದ ಇದರ ತಾರೆಗಳು ಅನುಕ್ರಮವಾಗಿ ಇವು: α ಜಾಲ (ತೋಉ ೩.೩೩, ದೂರ ೧೬೪ ಜ್ಯೋವ), β ಜಾಲ (ತೋಉ ೩.೮೩, ದೂರ ೧೦೦ ಜ್ಯೋವ), ε ಜಾಲ (ತೋಉ ೪.೪೩, ದೂರ ೬೦ ಜ್ಯೋವ),  γ ಜಾಲ (ತೋ ಉ ೪.೫೨, ದೂರ ೪೯೯ ಜ್ಯೋವ). ಈ ರಾಶಿಗಳ ವಲಯದ ಹರವನ್ನು ಅಂದಾಜು ಮಾಡಬಹುದು.Jan 34 - Dorado, Reticulum

ವ್ರಶ್ಚನ, ಹೋರಾಸೂಚೀ, ಜಾಲ, ಕಾಳಿಂಗ, ಸಾನು, ಶಫರೀ ಮತ್ತು ಚಿತ್ರಫಲಕ ರಾಶಿಗಳು ಮತ್ಸ್ಯವನ್ನು ಸುತ್ತುವರಿದಿವೆ. ಹೋರಾಸೂಚೀ, ಕಾಳಿಂಗ ಮತ್ತು ಮತ್ಸ್ಯ ರಾಶಿಗಳು ಜಾಲವನ್ನು ಸುತ್ತುವರಿದಿವೆ.

ಈಗಾಗಲೇ ಗುರುತಿಸಿದ ಅಗ್ನಿಕುಂಡಕ್ಕೆ ಪಶ್ಚಿಮದಲ್ಲಿ ತಾಗಿಕೊಂಡಿದೆ ಶಿಲ್ಪಶಾಲಾ ರಾಶಿ (೭೫. ಸ್ಕಲ್ಪ್‌ಟರ್, ವಿಸ್ತೀರ್ಣ ೪೭೪.೭೬೪ ಚ ಡಿಗ್ರಿ).Jan 35 - Sculptor

ಇದರ ಉತ್ತರ ದಿಕ್ಕಿಗೆ ತಿಮಿಂಗಿಲವೂ ದಕ್ಷಿಣಕ್ಕೆ ಚಕೋರವೂ ಇದೆ. ಇದರ ಪ್ರಮುಖ ತಾರೆಗಳ ಪೈಕಿ ಸಾಪೆಕ್ಷವಾಗಿ ಉಜ್ವಲವಾದ ತಾರೆ α ಶಿಲ್ಪಶಾಲಾ (ತೋಉ ೪.೩೦, ದೂರ ೬೧೮ ಜ್ಯೋವ). ಎಂದೇ, ಈ ರಾಶಿಯ ವಲಯ ಗುರುತಿಸಲು ಪ್ರಯತ್ನಿಸಿ.

ತಿಮಿಂಗಿಲ, ಕುಂಭ, ದಕ್ಷಿಣ ಮೀನ, ಬಕ, ಚಕೋರ, ಅಗ್ನಿಕುಂಡ ರಾಶಿಗಳು ಶಿಲ್ಪಶಾಲಾವನ್ನು ಸುತ್ತುವರಿದಿವೆ.

ಶಿಲ್ಪಶಾಲಾ ರಾಶಿಯ ಪಶ್ಚಿಮಕ್ಕೆ, ಬಾನಂಚಿನಲ್ಲಿ ಉಜ್ವಲ ತಾರೆಯೊಂದು ಗೋಚರಿಸುತ್ತದೆ. ಇದು ದಕ್ಷಿಣ ಮೀನ ರಾಶಿಯ ತಾರೆ ಮೀನಾಕ್ಷಿ (ತೋಉ ೧.೨೧, ದೂರ ೨೫.೨ ಜ್ಯೋವ). ಭಾಗಶಃ ಅಸ್ತವಾಗಿರುವ ಈ ರಾಶಿಯ ಪೂರ್ಣ ಪರಿಚಯ ಮುಂದೊಂದು ದಿನ ಮಾಡಿಕೊಳ್ಳೋಣ.

ದಕ್ಷಿಣ ದಿಗ್ಬಿಂದುವಿನಲ್ಲಿ ನಿಮ್ಮ ದೃಗ್ಗೊಚರ ಖಗೋಳದೊಳಕ್ಕೆ ಒಂದು ಹೆಜ್ಜೆಯಿಟ್ಟು ಮಾಯವಾಗುವ ಎರಡು ರಾಶಿಗಳಿವೆ. ಉತ್ತರ ಅಕ್ಷಾಂಶ ಪ್ರದೇಶವಾಸಿಗಳಿಗೆ ಅವುಗಳ ಪೂರ್ಣ ದರ್ಶನ ಭಾಗ್ಯವಿಲ್ಲ. ಅವುಗಳ ವಿವರ ಇಂತಿದೆ.

೧. ಸಾನು (೮೨. ಮೆನ್ಸ, ವಿಸ್ತೀರ್ಣ ೧೫೩.೪೮೪ ಚ ಡಿಗ್ರಿ). ಇದು ದಕ್ಷಿಣ ದಿಗ್ಬಿಂದುವಿನ ಸಮೀಪ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಭಾಗಶ: ಕಾಣಿಸಿಕೊಳ್ಳುತ್ತದೆ. ಬರಿಗಣ್ಣಿಗೆ ಗೋಚರಿಸುವುದು ಬಲು ಕಷ್ಟವಾದ ಈ ಪುಂಜದ ತಾರೆಗಳು ಇವು: α ಸಾನು (ತೋಉ ೫.೦೭, ದೂರ ೩೩ ಜ್ಯೋವ), γ ಸಾನು (ತೋಉ ೫.೧೭, ದೂರ ೧೦೩ ಜ್ಯೋವ), β ಸಾನು (ತೋಉ ೫.೨೯, ದೂರ ೬೩೬ ಜ್ಯೋವ), η ಸಾನು (ತೋಉ ೫.೪೬, ದೂರ ೭೧೭ ಜ್ಯೋವ). ಮತ್ಸ್ಯ, ಕಾಳಿಂಗ, ಅಷ್ಟಕ, ಚಂಚಲವರ್ಣಿಕಾ ಮತ್ತು ಶಫರೀ ರಾಶಿಗಳು ಸಾನುವನ್ನು ಸುತ್ತುವರಿದಿವೆ.Jan 36 - Hydrus, Mensa

೨. ಕಾಳಿಂಗ (೧೨. ಹೈಡ್ರಸ್, ವಿಸ್ತೀರ್ಣ ೨೪೩.೦೩೫ ಚ ಡಿಗ್ರಿ). ಇದು ದಕ್ಷಿಣ ದಿಗ್ಬಿಂದುವಿನ ಸಮೀಪ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಭಾಗಶ: ಕಾಣಿಸಿಕೊಳ್ಳುತ್ತದೆ. ಈ ಪುಂಜದ ತಾರೆಗಳು ಇವು: β ಕಾಳಿಂಗ (ತೋಉ ೨.೭೯, ದೂರ ೨೪ ಜ್ಯೋವ), α ಕಾಳಿಂಗ (ತೋಉ ೨.೮೫, ದೂರ ೭೧ ಜ್ಯೋವ), γ ಕಾಳಿಂಗ (ತೋಉ ೩.೨೬, ದೂರ ೨೧೨ ಜ್ಯೋವ), δ ಕಾಳಿಂಗ (ತೋಉ ೪.೦೭, ದೂರ ೧೩೬ ಜ್ಯೋವ), ε ಕಾಳಿಂಗ (ತೋಉ ೪.೧೧, ದೂರ ೧೫೩ ಜ್ಯೋವ). ವೈತರಿಣೀ, ಚಕೋರ (ಮೂಲೆ), ಶ್ಯೇನ, ಅಷ್ಟಕ, ಸಾನು, ಮತ್ಸ್ಯ, ಜಾಲ ಮತ್ತು ಹೋರಾಸೂಚೀ ರಾಶಿಗಳು ಕಾಳಿಂಗವನ್ನು ಸುತ್ತುವರಿದಿವೆ.

ಜ್ಯೋತಿಷ್ಚಕ್ರದ ತಾರಾಪಟದಲ್ಲಿ ನಮೂದಿಸಿದ ರಾಶಿಗಳ ಪೈಕಿ ಸಿಂಹ ಉದಯವಾಗುತ್ತಿದೆ ಮತ್ತು ಕುಂಭ ಭಾಗಶಃ ಅಸ್ತವಾಗಿದೆ. ಆದ್ದರಿಂದ ಅವುಗಳ ಪರಿಚಯ ಮುಂದೆ ಮಾಡಿಕೊಳ್ಳೋಣ

ಸಿಂಹಾವಲೋಕನ

ಜನವರಿ ತಿಂಗಳಿನಲ್ಲಿ ರಾತ್ರಿ ಸುಮಾರು ೮.೦೦ ಗಂಟೆಗೆ ದೃಗ್ಗೋಚರ ಖಗೋಳಾರ್ಧವನ್ನು ಸಂಪೂರ್ಣವಾಗಿ ಅವಲೋಕಿಸಿ ಪರಿಚಯ ಮಾಡಿಕೊಂಡ ೩೩ ರಾಶಿಗಳನ್ನೂ, ೯ ಉಜ್ವಲ ತಾರೆಗಳನ್ನೂ ೧೧ ‘ನಕ್ಷತ್ರ’ಗಳನ್ನೂ ಪಟ್ಟಿಮಾಡಿ. ಅವನ್ನು ವೀಕ್ಷಿಸಿದ ಸಮಯ ಮತ್ತು ನಿಮ್ಮ ದೃಗ್ಗೋಚರ ಖಗೋಳದಲ್ಲಿ ಅವುಗಳ ಸ್ಥಾನವನ್ನೂ ಬರೆದಿಡಿ.

(ಮುಂದುವರಿಯುತ್ತದೆ)

Advertisements
This entry was posted in ತಾರಾವಲೋಕನ and tagged , , , , , , , , , , , , , , , , , , , , , , , , , , , , , , , , . Bookmark the permalink.

One Response to ತಾರಾವಲೋಕನ ೩ – ವೀಕ್ಷಣಾ ಮಾರ್ಗದರ್ಶಿ, ಜನವರಿ

  1. m.j. rajeeva gowda ಹೇಳುತ್ತಾರೆ:

    ನಿಜಕ್ಕೂ ನಿಮ್ಮ ಕೆಲಸ ತುಂಬಾ ಶ್ಲಾಘನೀಯವಾದದು ಸರ್. ನನಗೆ ತುಂಬಾ ಇಷ್ಟವಾಯಿತು. ಸದರಿ ತಂತ್ರಾಂಶದ ಪರವಾನಗಿ ಪಡೆಯಲು ನಾನೇನು ಮಾಡಬಹುದು ಎಂಬುದನ್ನು ದಯಮಾಡಿ ತಿಳಿಸಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s