ತಾರಾವಲೋಕನ ೨ – ಪೂರ್ವಸಿದ್ಧತೆ

೧.೧ ಸ್ವಾಗತ

ತಾರೆಗಳನ್ನು ಗುರುತಿಸುವ’ ರೋಮಾಂಚಕ ಹವ್ಯಾಸವನ್ನು ಬೆಳೆಸಿಕೊಳ್ಳಲು ಉತ್ಸುಕರಾಗಿರುವ ನಿಮಗೆ ಅಭಿನಂದನೆಗಳು. ತಾರೆಗಳನ್ನು ನಿಮ್ಮಂತೆಯೇ ಕುತೂಹಲದಿಂದ ಗುರುತಿಸಲು ಹೊರಟವರ ಪೈಕಿ ಅನೇಕರು ಖಗೋಳಶಾಸ್ತ್ರಕ್ಕೆ ಅದ್ವಿತೀಯ ಕೊಡುಗೆಗಳನ್ನು ನೀಡಿ ಅಪ್ರತಿಮ ‘ಹವ್ಯಾಸಿ ಖಗೋಳಜ್ಞ’ಎಂಬ ಕೀರ್ತಿಭಾಜನರಾಗಿದ್ದಾರೆ. ಮಾನವ ಭೂಮಿಯ ಮೇಲೆ ಕಾಣಿಸಿಕೊಂಡಂದೇ ಜನ್ಮತಾಳಿದ ಹವ್ಯಾಸ ಇದು. ಇದರಿಂದ ನಿಮಗೇನು ಲಾಭ? ಎಂದು ಕೇಳುವವರಿಗೆ ಖ್ಯಾತ ಹವ್ಯಾಸಿ ಖಗೋಳಜ್ಞ ಲೆಸ್ಲಿ ಪೆಲ್ಟಿಯೆರ್‌ನ (೧೯೦೦-೧೯೮೦) ಈ ಉಕ್ತಿಯನ್ನು ಪುನರುಚ್ಚರಿಸಿ: “ಮನುಕುಲದ ಸ್ವಯಂ-ನಿರ್ಮಿತ ಸಂಕಟಗಳ ಪೈಕಿ ಕೆಲವನ್ನಾದರೂ ಉಪಶಮನಗೊಳಿಸಬಲ್ಲ ಅನುಶಾಸನ ಒಂದನ್ನು ನಾನು ಬರೆದಿದ್ದರೆ, ಅದು ಇಂತಿರುತ್ತಿತ್ತು: ಪ್ರತೀ ಮೇಘರಹಿತ ರಾತ್ರಿ, ಮಲಗುವ ಮುನ್ನ ತಾರಾಪ್ರಕಾಶದ ಒಂದು ಡೋಸನ್ನು ನಿಧಾನವಾಗಿ ಸೇವಿಸತಕ್ಕದ್ದು”. ಡಿ ವಿ ಜಿ ಅವರ ಪ್ರಕಾರ ಈ ಹವ್ಯಾಸದಿಂದ ನಿಮಗೆ ‘ಪರಬ್ರಹ್ಮ’ ಸಾಕ್ಷಾತ್ಕಾರವೂ ಆದೀತು!1. Night sky

ತಾರೆಗಳನ್ನು ಗುರುತಿಸಲು ಕಲಿಯಲು ದುರ್ಬೀನು, ದೂರದರ್ಶಕ ಮೊದಲಾದ ದುಬಾರಿ ಸಾಮಗ್ರಿಗಳೂ ಖಗೋಳವಿಜ್ಞಾನದಲ್ಲಿ ಪ್ರಭುತ್ವವೂ ಅಗತ್ಯವಿಲ್ಲ. ಈ ಹವ್ಯಾಸ ಬೆಳೆಸಿಕೊಳ್ಳಲು, ಈ ಪುಸ್ತಕವನ್ನು ಹೊರತುಪಡಿಸಿ, ನೀವು ಹೂಡಬೇಕಾದ ಬಂಡವಾಳ – ಅದಮ್ಯ ಕುತೂಹಲ, ತಾಳ್ಮೆ ಹಾಗೂ ಛಲ. ಯಾವುದೇ ಜ್ಞಾನ ಅಥವ ಕುಶಲತೆ ಸಿದ್ಧಿಸಲು ಶಿಸ್ತುಬದ್ಧ ಸಾಧನೆ ಅಗತ್ಯ ಎಂಬುದು ನಿಮಗೆ ತಿಳಿದೇ ಇದೆ. ತಜ್ಞರ ನೆರವಿಲ್ಲದೆ ಪುಸ್ತಕವನ್ನು ಓದಿ ತಾರಾಲೋಕದ ಅನ್ವೇಷಣೆಗೆ ತೊಡಗುವ ಮುನ್ನ ಕೆಲವು ಪರಿಕಲ್ಪನೆಗಳು ನಿಮ್ಮಲ್ಲಿ ಸ್ಪಷ್ಟವಾಗಿ ರೂಪುಗೊಂಡಿರಬೇಕು. ಎಂದೇ, ಈ ಮುಂದೆ ನೀಡಿರುವ ವಿಷಯ ಮನೋಗತವಾಗುವ ತನಕ ವಿರಮಿಸದಿರಿ.

೧.೨ ಇದು ನಿಮಗೆ ತಿಳಿದಿರಲಿ

ಸ್ವಗುರುತ್ವದಿಂದ ಗೋಳರೂಪ ತಳೆದಿರುವ ದ್ರವ್ಯದ ಸ್ವಪ್ರಕಾಶಕ ಬೃಹತ್ ಆಕಾಶಕಾಯಗಳೇ ತಾರೆಗಳು (ಸ್ಟಾರ‍್ಸ್). ಇವು ತಮ್ಮ ಗರ್ಭದಲ್ಲಿ ಜರಗುವ ಬೈಜಿಕ ಸಂಲಯನ ಅಥವ ಸಮ್ಮಿಲನ ಕ್ರಿಯೆಗಳ ಪರಿಣಾಮವಾಗಿ ವಿದ್ಯುತ್ಕಾಂತೀಯ ವಿಕಿರಣಗಳನ್ನು, ವಿಶೇಷತಃ ಬೆಳಕನ್ನು ಉತ್ಸರ್ಜಿಸುತ್ತವೆ ಅಥವ ಹೊರಸೂಸುತ್ತವೆ. ಅನೂಹ್ಯ ದೂರದಲ್ಲಿ ಇರುವುದರಿಂದ ಇವು ನಮಗೆ ರಾತ್ರಿಯ ವೇಳೆ ಬೆಳಕು ಬೀರುವ ಚುಕ್ಕಿಗಳಂತೆ ಗೋಚರಿಸುತ್ತವೆ. ಸೂರ್ಯ ಒಂದು ತಾರೆ. ಸಾಪೇಕ್ಷವಾಗಿ ಭೂಮಿಗೆ ಸಮೀಪದಲ್ಲಿ ಇರುವುದರಿಂದ ದೊಡ್ಡ ಉಜ್ವಲ ಗೋಳದಂತೆ ಗೋಚರಿಸುತ್ತದೆ.

ತಾರಾನಿಬಿಡ ಬಾನಿನಡಿಯಲ್ಲಿ ನಿಂತು ಆಕಾಶದೆಲ್ಲೆಡೆ ದೃಷ್ಟಿ ಹಾಯಿಸಿ. ಅರ್ಧಗೋಳಾಕೃತಿಯ ಗುಮ್ಮಟದ ಅಡಿಯಲ್ಲಿ ನಿಂತಂತೆ ಭಾಸವಾಗುತ್ತದಲ್ಲವೇ? ಈ ಗುಮ್ಮಟದ ಒಳಮೈಗೆ ತಾರೆಗಳು, ಗ್ರಹಗಳು ಇವೇ ಮೊದಲಾದ ಆಕಾಶ ಕಾಯಗಳು ಅಂಟಿಕೊಂಡು ಇರುವಂತೆಯೂ ಭಾಸವಾಗುತ್ತದೆ.2. Celestial sphere

ಭೂಮಿಯನ್ನು ಕೇಂದ್ರವಾಗಿ ಉಳ್ಳ ಅಪರಿಮಿತ ಹರವು ಉಳ್ಳ ಗೋಳವೊಂದನ್ನು ಕಲ್ಪಿಸಿಕೊಳ್ಳಿ. ಅದೇ ಖಗೋಳ (ಸಿಲೆಸ್ಟಿಅಲ್ ಸ್ಪಿಅರ್). ತನ್ನನ್ನು ಅತಿ ದೂರದಲ್ಲಿ ಹಾಗೂ ಅತಿ ಎತ್ತರದಲ್ಲಿ ಸುತ್ತುವರಿದ ಗುಮ್ಮಟದಂತೆ ಖಗೋಳಾರ್ಧವು ವೀಕ್ಷಕನಿಗೆ ಗೋಚರಿಸುತ್ತದೆ. ನಮ್ಮ ದೃಷ್ಟಿಸಾಮರ್ಥ್ಯಕ್ಕೆ ಮಿತಿ ಇರುವುದೇ ಈ ವಿದ್ಯಮಾನಕ್ಕೆ ಕಾರಣ. ನೀವಿರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶ ನಿಮಗೆ ತಿಳಿದಿದೆಯೇ? ತಿಳಿದಿದ್ದರೆ ಇಲ್ಲಿ ಕ್ಲಿಕ್ಕಿಸಿದಾಗ ಪ್ರತ್ಯಕ್ಷವಾಗುವ ತಾಣದಲ್ಲಿ ಇರುವ ತಂತ್ರಾಂಶದ ನೆರವಿನಿಂದ ನೀವಿರುವ ಸ್ಥಳದ ಖಗೋಲ ಅಧ್ಯಯಿಸಿ. ತಿಳಿದಿಲ್ಲವಾದರೆ ಚಿಂತೆ ಬೇಡ. ಈ ಜಾಲತಾಣದಲ್ಲಿ ಅದನ್ನು ತಿಳಿಯಲು ಅಥವ ಅಂದಾಜಿಸಲು ಅಗತ್ಯವಾದ ಮಾಹಿತಿ ಇದೆ.

ಏಕಾಂಗಿಯಾಗಿ ತಾರಾನಿಬಿಡವಾದ ಆಕಾಶವನ್ನು ತದೇಕಚಿತ್ತದಿಂದ ನೋಡಿ. ಕೆಲವೆಡೆ ದಟ್ಟವಾಗಿಯೂ ಕೆಲವೆಡೆ ವಿರಳವಾಗಿಯೂ ತಾರೆಗಳು ಹರಡಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಇನ್ನೂ ಕೊಂಚಕಾಲ ನೋಡುತ್ತಿರಿ. (ಇಲ್ಲಿ ಕ್ಲಿಕ್ಕಿಸಿದಾಗ ಅಥವ ಈ ತಾಣದಲ್ಲಿ ಪ್ರತ್ಯಕ್ಷವಾಗುವ ತಂತ್ರಾಂಶದ ನೆರವಿನಿಂದ ನೀವಿರುವ ಸ್ಥಳದಲ್ಲಿ ನೀವು ಅಪೇಕ್ಷಿಸುವ ಸಮಯದಲ್ಲಿ ಖಗೋಲದಲ್ಲಿ ಯಾವ ತಾರೆಗಳು ಗೋಚರಿಸುತ್ತವೆ ಎಂಬುದನ್ನು ಕೋಣೆಯಲ್ಲಿ ಕುಳಿತುಕೊಂಡೇ ಪತ್ತೆಹಚ್ಚಬಹುದು)

ಅಸಂಖ್ಯ ತಾರೆಗಳ ಪೈಕಿ ಕೆಲವು ಒಂಟಿಗಳು ತಮ್ಮ ಉಜ್ವಲತೆಯಿಂದಾಗಿ ನಿಮ್ಮನ್ನು ಮೊದಲು ಆಕರ್ಷಿಸುತ್ತವೆ. ತದನಂತರ ಸಾಪೇಕ್ಷವಾಗಿ ಆಸುಪಾಸಿನಲ್ಲಿರುವ ಕೆಲವು ತಾರೆಗಳು ಮನಃಪಟಲದಲ್ಲಿ ವಿಶಿಷ್ಟ ಆಕೃತಿಗಳನ್ನು ಮೂಡಿಸುವುದರ ಮುಖೇನ ನಿಮ್ಮ ಗಮನ ಸೆಳೆಯುತ್ತವೆ. ವೀಕ್ಷಕನ ಮನಸ್ಸಿನಲ್ಲಿ ನಿರ್ದಿಷ್ಟ ಚಿತ್ರ ಬಿಂಬಿಸುವ ತಾರೆಗಳ ಇಂಥ ಸಮೂಹವನ್ನು, ಅರ್ಥಾತ್ ಪುಂಜವನ್ನು ತಾರಾಪುಂಜ ಅಥವ ತಾರಾರಾಶಿ (ಕಾನ್‌ಸ್ಟಲೇಷನ್ಸ್) ಅನ್ನುವುದು ವಾಡಿಕೆ. ಮುಂದೆ ನೀಡಿರುವ ಉದಾಹರಣೆಗಳನ್ನು ಗಮನಿಸಿ. ಚಿತ್ರಗಳಲ್ಲಿ ಇರುವ ತಾರಾಪುಂಜಗಳನ್ನೇ ನೋಡುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ನಿರ್ದಿಷ್ಟ ಚಿತ್ರಗಳು ಮೂಡುತ್ತವೆಯೇ3. Constellations

ಮೂಡದೇ ಇದ್ದರೆ ಚಿಂತೆ ಬೇಡ. ಎಲ್ಲ ಸಂಸ್ಕೃತಿಗಳಲ್ಲಿ ಪುರಾತನರು ಇಂಥ ಅನೇಕ ಪುಂಜಗಳನ್ನು ಗುರುತಿಸಿ ಅವು ಅವರ ಮನಸ್ಸಿನಲ್ಲಿ ಮೂಡಿಸಿದ ಬಿಂಬಗಳ ಹೆಸರನ್ನೇ ಇಟ್ಟರು.  ಉದಾಹರಣೆಗೆ, ಚಿತ್ರದಲ್ಲಿ ಇರುವ ತಾರೆಗಳ ವಿನ್ಯಾಸ ಗಮನಿಸಿ.4. Ursa Major

ಭಾರತೀಯರಿಗೆ ಇದು ‘ಸಪ್ತರ್ಷಿ ಮಂಡಲ’, ಯುರೋಪಿನವರಿಗೆ ‘ಉದ್ದಹಿಡಿಯ ಸೌಟು’ (ಬಿಗ್ ಡಿಪ್ಪರ್), ಬ್ರಿಟಿಷ್ ದ್ವೀಪ ವಾಸಿಗಳಿಗೆ ‘ನೇಗಿಲು’ (ದಿ ಪ್ಲೌ), ಉತ್ತರ ಇಂಗ್ಲೆಂಡಿಗರಿಗೆ ‘ಕಸಾಯಿ ಕತ್ತಿ’ (ಬುಚರ್ಸ್ ಕ್ಲೀವರ್), ಅಮೇರಿಕದ ಮೂಲನಿವಾಸಿಗಳಿಗೆ ‘ದೊಡ್ಡ ಕರಡಿ’ (ಬಿಗ್ ಬೇರ್).5. Big dipper, Big bear

ವಾಸ್ತವವಾಗಿ ಆಕಾಶದಲ್ಲಿ ಯಾವ ರೇಖಾ ಚಿತ್ರಗಳೂ ಇರುವದಿಲ್ಲ. ಯಾವುದೇ ತಾರಾಪುಂಜದ ತಾರೆಗಳು ಭೂಮಿಯಿಂದ ಸಮಾನ ದೂರಗಳಲ್ಲಿಯೂ ಇಲ್ಲ ಎಂಬುದೂ ನೆನಪಿರಲಿ. ಇದನ್ನು ಸಾಬೀತು ಪಡಿಸುವುದು ಹೇಗೆಂಬುದನ್ನು ತಿಳಿಯಬೇಕೇ? ಇಲ್ಲಿ ಕ್ಲಿಕ್ಕಿಸಿ.

ಅಧ್ಯಯಿಸಲು ಅನುಕೂಲವಾಗಲಿ ಎಂದು ಖಗೋಳದ ಒಟ್ಟು ಕ್ಷೇತ್ರವನ್ನು ಇಂಟರ್‌ನ್ಯಾಶನಲ್ ಅಸ್ಟ್ರನಾಮಿಕಲ್‌ನ ಯೂನಿಯನ್ 88 ಭಾಗಗಳಾಗಿ ವಿಭಜಿಸಿದೆ. ಈ ವಿಭಾಗಗಳಿಗೂ ತಾರಾರಾಶಿಗಳು ಅಥವ ರಾಶಿಗಳು (ಕಾನ್‌ಸ್ಟಲೇಷನ್ಸ್) ಎಂದು ಹೆಸರು. ಪ್ರತೀ ರಾಶಿಯಲ್ಲಿ ಅನೇಕ ತಾರೆಗಳು ಇವೆ. ಎಂದೇ, ಖಗೋಳದ ನಿರ್ದಿಷ್ಟ ಸೀಮಿತ ಕ್ಷೇತ್ರದಲ್ಲಿ ಇರುವ ತಾರೆಗಳ ಸಮೂಹ ಎಂದು ರಾಶಿಯನ್ನು ವ್ಯಾಖ್ಯಾನಿಸುವುದೂ ಉಂಟು. ಪ್ರತೀ ರಾಶಿಯಲ್ಲಿ ಒಂದು ತಾರಾಪುಂಜವನ್ನು ಗುರುತಿಸಿ ಅದರ ಹೆಸರಿನಿಂದಲೇ ರಾಶಿಯನ್ನು ಗುರುತಿಸುವುದು ವಾಡಿಕೆ. ಅಂದ ಮೇಲೆ, ಯಾವುದೇ ರಾಶಿಯಲ್ಲಿ ಅದರ ಹೆಸರಿನ ತಾರಾಪುಂಜದ ತಾರೆಗಳಷ್ಟೇ ಅಲ್ಲದೆ ಬೇರೆ ತಾರೆಗಳೂ ಇರುತ್ತವೆ. ಇವು, ತಾರಾಪುಂಜ ಬಿಂಬಿಸುವ ಆಕೃತಿಯ ಒಳಗೂ ಹೊರಗೂ ಇರಬಹುದು. ಈಗಾಗಲೇ ಉದಾಹರಿಸಿರುವ ರಾಶಿಗಳ ಚಿತ್ರಗಳನ್ನು ಇನ್ನೊಮ್ಮೆ ನೋಡಿ. ಪ್ರಧಾನ ತಾರಾಪುಂಜಗಳ ಆಸುಪಾಸಿನಲ್ಲಿ ಇನ್ನೂ ಅನೇಕ ತಾರೆಗಳು ಇರುವುದನ್ನು ಗಮನಿಸಿ.

ಸಮುದ್ರತಟ, ಗಿಡಮರ, ಬೆಟ್ಟಗುಡ್ಡ ಅಥವ ಕಟ್ಟಡಗಳು ದೃಷ್ಟಿಗೆ ತಡೆ ಒಡ್ಡದ ಸ್ಥಳ, ವಿಶಾಲವಾದ ಬಯಲು – ಇವುಗಳ ಪೈಕಿಯಾವುದಾದರೂ ಒಂದು ಪ್ರದೇಶದಲ್ಲಿ ನಿಂತು ಸುತ್ತಲೂ ದೃಷ್ಟಿ ಹರಿಸಿ. ಅತಿ ದೂರದಲ್ಲಿ ಆಕಾಶಗುಮ್ಮಟವು ಭೂಮಿ ಅಥವಾ ಸಮುದ್ರದೊಂದಿಗೆ ಸಂಗಮಿಸುವಂತೆ ಭಾಸವಾಗುತ್ತದಲ್ಲವೆ? ಹೀಗೆ ಬಾನೂ ಭುವಿಯೂ ಸಂಗಮಿಸುವಂತೆ ಭಾಸವಾಗುವ ಮಹಾವೃತ್ತವೇ ದಿಗಂತ ಅಥವ ಬಾನಂಚು (ಹರೈಸ್ನ್). ವೀಕ್ಷಕನೇ, ಅರ್ಥಾತ್ ನೀವೇ ಈ ಮಹಾವೃತ್ತದ ಕೇಂದ್ರ. ಹಾರಿಜ, ಕ್ಷಿತಿಜ ಇವು ಈ ಮಹಾವೃತ್ತದ ಶಾಸ್ತ್ರೋಕ್ತ ಹೆಸರುಗಳು.6. Horizon, celestial meridian, Zenith

ಮಾನವನ ದೃಷ್ಟಿಸಾಮರ್ಥ್ಯಕ್ಕೆ ಮಿತಿ ಇರುವುದೇ ಈ ವಿದ್ಯಮಾನಕ್ಕೂ ಕಾರಣ. ನಿಮ್ಮ ದೃಷ್ಟಿಗೆ ಯಾವ ತಡೆಯೂ ಇರದ ಸ್ಥಳದಲ್ಲಿ ಮಾತ್ರ ನಿಜವಾದ ದಿಗಂತ ಗೋಚರಿಸುತ್ತದೆ. ಸಮುದ್ರ ತಟದಲ್ಲಿ ಅಥವಾ ಅತಿ ವಿಶಾಲವಾದ ಬಯಲು ಪ್ರದೇಶದಲ್ಲಿ ಇದು ಭಾಗಶ: ಗೋಚರಿಸುತ್ತದೆ. ನೀವಿರುವ ಸ್ಥಳದಲ್ಲಿ ಯಾವ ತಡೆಯೂ ಇಲ್ಲದಿದ್ದರೆ ಅಪೇಕ್ಷಿತ ದಿನದಂದು ಅಪೇಕ್ಷಿತ ಸಮಯದಲ್ಲಿ ಇದು ಹೇಗೆ ಗೋಚರಿಸೀತು ಎಂಬುದನ್ನು ತಿಳಿಯಲು ಈ ತಾಣದಲ್ಲಿ ಇರುವ ತಂತ್ರಾಂಶಕ್ಕೆ ಯುಕ್ತ ಅಕ್ಷಾಂಶದ ಮತ್ತು ರೇಖಾಂಶದ ಮಾಹಿತಿ ಉಣಿಸಿ. ಧ್ರುವನಕ್ಷತ್ರದ ನೆರವಿನಿಂದ ಈ ಮಹಾವೃತ್ತದಲ್ಲಿ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ದಿಗ್ಬಿಂದುಗಳನ್ನು (ಕಾರ್ಡಿನಲ್ ಪಾಇಂಟ್ಸ್) ಗುರುತಿಸುವುದು ವಾಡಿಕೆ. ವೀಕ್ಷಕನ, ಅರ್ಥಾತ್ ನಿಮ್ಮ ನೆತ್ತಿಯ ನೇರದಲ್ಲಿ ಖಗೋಳದಲ್ಲಿ ಇರುವ ಕಾಲ್ಪನಿಕ ಬಿಂದುವೇ ಖಮಧ್ಯ (ಸೆನಿತ್). ಖಮಧ್ಯಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಇರುವ ಕಾಲ್ಪನಿಕ ಬಿಂದು ಅಧೋಬಿಂದು (ನೇಡರ್). ಖಗೋಳದ ಅಗೋಚರ ಭಾಗದಲ್ಲಿ ಇರುವುದರಿಂದ ಇದು ಅಗೋಚರ. ಉತ್ತರ ದಿಗ್ಬಿಂದು, ಧ್ರುವನಕ್ಷತ್ರ, ಖಬಿಂದು ಮತ್ತು ದಕ್ಷಿಣ ದಿಗ್ಬಿಂದು ಇವನ್ನು ಸೇರಿಸುವ ವೃತ್ತಕಂಸವೇ ಯಾಮ್ಯೋತ್ತರ ಅಥವ ಖಗೋಳ ಮಧ್ಯಾಹ್ನ ರೇಖೆ (ಸಿಲೆಸ್ಟಿಅಲ್ ಮರಿಡಿಅನ್).  ವೀಕ್ಷಕನೇ, ಅರ್ಥಾತ್ ನೀವೇ ಈ ಮಹಾವೃತ್ತದ ಕೇಂದ್ರ ಎಂದು ಈಗಾಗಲೇ ಹೇಳಿದೆಯಷ್ಟೆ. ಅಂದ ಮೇಲೆ ಹಾರಿಜ, ಖಮಧ್ಯ ಇತ್ಯಾದಿಗಳು ವೀಕ್ಷಕ ಇರುವ ಸ್ಥಳಾಧಾರಿತ ಪರಿಕಲ್ಪನೆಗಳು. ಅರ್ಥಾತ್, ನೀವು ವೀಕ್ಷಿಸುತ್ತಿರುವ ಹಾರಿಜ, ಖಮಧ್ಯ ಇತ್ಯಾದಿಗಳು ನಿಮ್ಮ ಸಮೀಪದಲ್ಲಿ ನಿಂತಿರುವವ ವೀಕ್ಷಿಸುತ್ತಿರುವ ಹಾರಿಜ, ಖಮಧ್ಯ ಇತ್ಯಾದಿಗಳು ಒಂದೇ ಆಗಿರುವುದಿಲ್ಲ!! ನೀವು ಇರುವ ಸ್ಥಳದಲ್ಲಿ ಇವು ಎಂತಿರುತ್ತವೆ ಎಂಬುದನ್ನು ಈ ತಾಣದಲ್ಲಿ ಇರುವ ತಂತ್ರಾಂಶದ ನೆರವಿನಿಂದಲೂ ತಿಳಿಯಬಹುದು.

ಭೂಮಿಯ ಆವರ್ತನೆಯಿಂದಾಗಿ ಸೂರ್ಯ ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತವಾಗುವಂತೆ ತೋರುತ್ತದೆ. ಇದು ಸೂರ್ಯನ ದೈನಂದಿನ ಚಲನೆ. ಕೊಂಚ ಶ್ರಮ ಪಟ್ಟರೆ ಈ ಕುರಿತಾದ ಕುತೂಹಲಕಾರೀ ವಿದ್ಯಮಾನವೊಂದನ್ನು ಗಮನಿಸಬಹುದು. ನೀವು ಮಾಡಬೇಕಾದದ್ದು ಇಷ್ಟೆ: ಪ್ರತೀ ದಿನ ನಿಮ್ಮ ಊರಿನ ಬಾನಂಚಿನ ಯಾವ ಬಿಂದುವಿನಲ್ಲಿ ಸೂರ್ಯೋದಯವಾಯಿತು ಮತ್ತು ಯಾವ ಬಿಂದುವಿನಲ್ಲಿ ಸೂರ್ಯಾಸ್ತವಾಯಿತು ಎಂಬುದನ್ನು ಒಂದು ವರ್ಷಕಾಲ ಗುರುತಿಸಿ. ಹೀಗೆ ಮಾಡಿದರೆ ನಿಮ್ಮ ಆವಿಷ್ಕಾರಗಳು ಇಂತಿರುತ್ತವೆ:

೧. ಮಾರ್ಚ್ ೨೦ ಮತ್ತು ಸೆಪ್ಟೆಂಬರ್ ೨೨/೨೩ ಈ ಎರಡು ದಿನಗಳಂದು ಮಾತ್ರ ಸೂರ್ಯ ಪೂರ್ವ ದಿಗ್ಬಿಂದುವಿನಲ್ಲಿ ಉದಯಿಸಿ ಪಶ್ಚಿಮ ದಿಗ್ಬಿಂದುವಿನಲ್ಲಿ ಅಸ್ತವಾಗುತ್ತದೆ. ಹಗಲು ಮತ್ತು ರಾತ್ರಿಗಳ ಅವಧಿ ಈ ದಿನಗಳಂದು ಮಾತ್ರ ಸಮನಾಗಿರುತ್ತದೆ.

೨. ಡಿಸೆಂಬರ್ ೨೧/೨೨ ರಂದು ಸೂರ್ಯೋದಯದ ಬಿಂದು ಪೂರ್ವ ದಿಗ್ಬಿಂದುವಿನಿಂದ ದಕ್ಷಿಣಕ್ಕೆ ಗರಿಷ್ಠ ದೂರದಲ್ಲಿ ಇರುತ್ತದೆ. ಹಗಲಿನ ಅವಧಿ ತನ್ನ ಕನಿಷ್ಠ ಮಿತಿಯನ್ನೂ ರಾತ್ರಿಯ ಅವಧಿ ತನ್ನ ಗರಿಷ್ಠ ಮಿತಿಯನ್ನೂ ತಲಪಿರುತ್ತದೆ.

೩. ಜೂನ್ ೨೦/೨೧ ರಂದು ಸೂರ್ಯೋದಯದ ಬಿಂದು ಪೂರ್ವ ದಿಗ್ಬಿಂದುವಿನಿಂದ ಉತ್ತರಕ್ಕೆ ಗರಿಷ್ಠ ದೂರದಲ್ಲಿ ಇರುತ್ತದೆ. ಹಗಲಿನ ಅವಧಿ ತನ್ನ ಗರಿಷ್ಠ ಮಿತಿಯನ್ನೂ ರಾತ್ರಿಯ ಅವಧಿ ತನ್ನ ಕನಿಷ್ಠ ಮಿತಿಯನ್ನೂ ತಲಪಿರುತ್ತದೆ.7. Solistice, Equinox

೪. ಡಿಸೆಂಬರ್ ೨೧/೨೨ ರಿಂದ ಜೂನ್ ೨೦/೨೧ ರ ವರೆಗೆ ದಿಗಂತದಲ್ಲಿ ಸೂರ್ಯೋದಯವಾಗುವ ಬಿಂದು ಉತ್ತರಾಭಿಮುಖವಾಗಿಯೂ (ಉತ್ತರಾಯಣ) ಜೂನ್ ೨೦/೨೧ ರಿಂದ ಡಿಸೆಂಬರ್ ೨೧/೨೨2 ರ ವರೆಗೆ ದಕ್ಷಿಣಾಭಿಮುಖವಾಗಿಯೂ (ದಕ್ಷಿಣಾಯನ) ಸರಿಯುತ್ತದೆ.8. Changing sun rise, sunset points

ಯಾವುದಾದರೂ ಒಂದು ರಾತ್ರಿ ಗಂಟೆಗೊಂದು ಬಾರಿ ತಾರೆಗಳ ಸ್ಥಾನವನ್ನು ವೀಕ್ಷಿಸಿ. ತಾರಾಪುಂಜಗಳು ತಮ್ಮ ಸಾಪೇಕ್ಷ ಸ್ಥಾನಗಳನ್ನು ಕಾಯ್ದುಕೊಂಡು ಪೂರ್ವದಿಂದ ಪಶ್ಚಿಮಕ್ಕೆ ಸರಿಯುತ್ತಿರುವಂತೆ ತೋರುತ್ತದೆ. ಅರ್ಥಾತ್ ಖಗೋಳವೇ ಪೂರ್ವ – ಪಶ್ಚಿಮ ದಿಕ್ಕಿನಲ್ಲಿ ಆವರ್ತಿಸುತ್ತಿರುವಂತೆ ಭಾಸವಾಗುತ್ತದೆ. ಈ ವಿದ್ಯಮಾನಕ್ಕೂ ಭೂಮಿಯ ಆವರ್ತನೆಯೇ, ಅರ್ಥಾತ್ ಭೂಮಿ ತನ್ನ ಅಕ್ಷದ ಸುತ್ತ ಗಿರಕಿ ಹೊಡೆಯುತ್ತಿರುವುದೇ ಕಾರಣ. ಭೂಮಿಯನ್ನು ೨೪ ಗಂಟೆಗೆ ಒಂದಾವರ್ತಿಯಂತೆ ಸೂರ್ಯ ಪರಿಭ್ರಮಿಸುತ್ತ ಇರುವಂತೆ ತೋರಲೂ ಇದೇ ಕಾರಣ.

ಪ್ರತೀ ೩೬೫.೨೫ ದಿನಗಳ ಅವಧಿಯಲ್ಲಿ ಒಂದು ಬಾರಿ ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತದೆ. ಅಂದ ಮೇಲೆ ಪ್ರತೀ ೩೬೫.೨೫ ದಿನಗಳ ಅವಧಿಯಲ್ಲಿ ಒಂದು ಬಾರಿ ಸೂರ್ಯ ಭೂಮಿಯನ್ನು ಪರಿಭ್ರಮಿಸಿದಂತೆ ಭಾಸವಾಗಬೇಕು. ವಾಸ್ತವವಾಗಿ ದೈನಂದಿನ ಚಲನೆಯಷ್ಟು ಸುಲಭವಾಗಿ ವಾರ್ಷಿಕ ಚಲನೆಯ ಅನುಭವ ನಮಗೆ ಆಗುವುದಿಲ್ಲ. ಋತುಗಳ ಬದಲಾವಣೆ, ಉತ್ತರಾಯಣ, ದಕ್ಷಿಣಾಯನ ವಿದ್ಯಮಾನಗಳು ಘಟಿಸಲು ವಾರ್ಷಿಕ ಚಲನೆಯೇ ಕಾರಣ. ಈ ಕುರಿತಾದ ಆಕರ್ಷಕ ಔಪಚಾರಿಕ ವಿವರಣೆಗಳನ್ನು ಈ ಮುಂದಿನ ತಾಣಗಳಲ್ಲಿ ನೋಡಬಹುದು: ತಾಣ ೧, ತಾಣ ೨, ತಾಣ ೩, ತಾಣ ೪.9. Eart's orbital around sun

ಸೂರ್ಯನ ತೋರಿಕೆಯ ವಾರ್ಷಿಕ ಚಲನೆಯ ಕಕ್ಷೆಯನ್ನು ಖಗೋಳದಲ್ಲಿ ಪ್ರತಿನಿಧಿಸುವ ಕಾಲ್ಪನಿಕ ಮಹಾವೃತ್ತಕ್ಕೆ ಕ್ರಾಂತಿವೃತ್ತ (ಇಕ್ಲಿಪ್ಟಿಕ್) ಎಂದು ಹೆಸರು. ಸೂರ್ಯನ ದೈನಂದಿನ ಚಲನೆಯ ಕಕ್ಷೆ ಮತ್ತು ವಾರ್ಷಿಕ ಚಲನೆಯ ಕಕ್ಷೆ ಬೇರೆಬೇರೆ ಆಗಿರುವುದನ್ನೂ ಇವೆರಡು ಕಕ್ಷೆಗಳು ಸೂರ್ಯ ಹಾಲಿ ಇರುವ ಬಿಂದುವಿನಲ್ಲಿ ಮಾತ್ರ ಸಂಧಿಸಿರುವುದನ್ನೂ ಚಿತ್ರಗಳಲ್ಲಿ ಗಮನಿಸಿ. ನೀವಿರುವ ಸ್ಥಳಕ್ಕೆ ಸಂಬಂಧಿಸಿದಂತೆ ಈ ಕುರಿತಾದ ಆಕರ್ಷಕ ಜೀವಂತ ರೇಖಾಚಿತ್ರ ನೋಡಲು ಈ ತಾಣಕ್ಕೆ  ಭೇಟಿ ನೀಡಿ. ಭೂಮಿಯ ಆವರ್ತನೆಯ ಅಕ್ಷವು ಕ್ರಾಂತಿವೃತ್ತ ಸಮತಲಕ್ಕೆ ೨೩.೫ದಷ್ಟು ಓರೆ ಆಗಿರುವುದು ಹಾಗೂ ಪರಿಭ್ರಮಣೆಯ ಅವಧಿಯಲ್ಲಿ ಸೂರ್ಯ ಭೂಮಿಗಳ ನಡುವಿನ ಅಂತರ ಬದಲಾಗುತ್ತಿರುವುದು ಆಯನಗಳು ಮತ್ತು ಋತುಗಳು ವಿದ್ಯಮಾನ ಜರಗಲು ಕಾರಣ.10. Ecliptic, Daily path

ಕ್ರಾಂತಿವೃತ್ತದಲ್ಲಿ ಇರುವ ರಾಶಿಗಳ ನೆರವಿನಿಂದ ಸೂರ್ಯನ ಸ್ಥಾನವನ್ನು ಗುರುತಿಸುವುದು ವಾಡಿಕೆ. ಈ ರಾಶಿಗಳು ರೂಪಿಸುವ ತಾರಾಪಟ್ಟಿಯೇ ರಾಶಿಚಕ್ರ (ಸೋಡಿಆಕ್). ಭೂಮಿಯಿಂದ ನೋಡಿದಾಗ ಸೂರ್ಯನ (ಅಥವ ಅಪೇಕ್ಷಿತ ಆಕಾಶಕಾಯದ) ಹಿನ್ನೆಲೆಯಲ್ಲಿ ಇರುವ ರಾಶಿಯನ್ನು ಸೂರ್ಯ (ಅಥವ ಅಪೇಕ್ಷಿತ ಆಕಾಶಕಾಯ) ಇರುವ ರಾಶಿ ಎಂದು ಉಲ್ಲೇಖಿಸುವುದು ವಾಡಿಕೆ (ಜನ್ಮಕುಂಡಲಿಯಲ್ಲಿ ಗ್ರಹಸ್ಥಾನ ಎಂದು ಸೂಚಿಸುವುದೂ ಇದನ್ನೇ). ಸೌರಮಂಡಲದ ಎಲ್ಲ ಸದಸ್ಯರ ಚಲನೆಯ ಕಕ್ಷೆಗಳು ಕ್ರಾಂತಿವೃತ್ತದ ಆಸುಪಾಸಿನಲ್ಲಿಯೇ, ಅರ್ಥಾತ್ ರಾಶಿಚಕ್ರದಲ್ಲಿಯೇ ಇರಬೇಕಾದದ್ದು ಅನಿವಾರ್ಯ. ರಾಶಿಚಕ್ರದ ಅಗಲ ೧೮. ಕ್ರಾಂತಿವೃತ್ತ ರಾಶಿಚಕ್ರವನ್ನು ಸಮದ್ವಿಭಾಗಿಸುತ್ತದೆ.11. Zodiac

ಯಾವ ತಿಂಗಳಿನಲ್ಲಿ ಸೂರ್ಯನ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಜ್ಯೋತಿಷ್ಚಕ್ರದ ಯಾವ ರಾಶಿ ಇರುತ್ತದೆಂಬುದನ್ನು ತಿಳಿಯಲು  ಇಲ್ಲಿ ಕ್ಲಿಕ್ಕಿಸಿ.

ರಾಶಿಚಕ್ರವನ್ನು ೧೨ ಸಮಖಂಡಗಳಾಗಿ ವಿಭಜಿಸಿ ಪ್ರತೀ ಖಂಡಕ್ಕೂ ಅದರಲ್ಲಿ ಗೋಚರಿಸುವ ತಾರಾಪುಂಜವನ್ನು ಆಧರಿಸಿ ನಾಮಕರಣ ಮಾಡಿದ ಖ್ಯಾತಿ ಪುರಾತನ ಖಗೋಳವಿಜ್ಞಾಗಳಿಗೆ ಉರುಫ್ ಜ್ಯೋತಿಷಿಗಳಿಗೆ ಸಲ್ಲುತ್ತದೆ. ಈ ಪದ್ಧತಿಯಲ್ಲಿ ಪ್ರತೀ ರಾಶಿಯ ವಿಸ್ತಾರ ಸೌರಮಂಡಲದ ಸದಸ್ಯರ ಚಲನೆಯ ನೇರದಲ್ಲಿ ೩೦, ಅರ್ಥಾತ್ ಇವು ಸಮವಿಸ್ತೀರ್ಣ ಉಳ್ಳವು.  ಆಧುನಿಕ ಖಗೋಳವಿಜ್ಞಾನ ಈ ೧೨ ರಾಶಿನಾಮಗಳನ್ನು ಮಾನ್ಯ ಮಾಡಿದೆಯಾದರೂ ಅವುಗಳ ವಿಸ್ತಾರವನ್ನು ಬದಲಿಸಿದೆ. ತತ್ಪರಿಣಾಮವಾಗಿ ರಾಶಿಚಕ್ರದಲ್ಲಿ ಪುರಾತನರು ಸೂಚಿಸಿದ ರಾಶಿಗಳಲ್ಲದೆ ಆಧುನಿಕ ಖಗೋಳವಿಜ್ಞಾನ ರೂಪಿತ ಇತರ ರಾಶಿಗಳ ಭಾಗಗಳೂ ಸೇರಿವೆ. ನಾರ್ತ್‌ ಕೆರೋಲಿನ ವಿಶ್ವವಿದ್ಯಾನಿಲಯದ ಮೋರ್‌ಹೆಡ್‌ ಪ್ಲಾನೆಟೋರಿಯಮ್ ನಿರ್ದೇಶಕ ಡಾ ಲೀ ಟಿ. ಶ್ಯಾಪ್ರಿಯೋ ರೂಪಿಸಿದ  ಈ ಮುಂದಿನ ತಖ್ತೆ ಆಧುನಿಕ ಖಗೋಲಶಾಸ್ತ್ರದ ಪ್ರಕಾರ ಯಾವ ಅವಧಿಯಲ್ಲಿ ಸೂರ್ಯ ಯಾವ ರಾಶಿಯಲ್ಲಿ ಇರುತ್ತದೆ ಎಂಬುದನ್ನು ಸೂಚಿಸುತ್ತದೆ (ಈ ಕುರಿತಾದ ಹೆಚ್ಚಿನ ಮಾಹಿತಿ ಬೇಕಾದವರು ನಾಸಾದ ಈ ತಾಣಕ್ಕೆ ಭೇಟಿ ನೀಡಿ. ಅಲ್ಲಿ ಸೂಚಿಸಿರುವ ಇನ್ನೊಂದು ತಾಣಕ್ಕೂ ಭೇಟಿ ನೀಡಿ) ಇದರ ಪ್ರಕಾರ ಜ್ಯೋತಿಷಿಗಳು ಹೇಳುವಂತೆ  ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಸೂರ್ಯ ಇರುವುದಿಲ್ಲ ಮತ್ತು ರಾಶಿ ಚಕ್ರದಲ್ಲಿ ೧೨ ರಾಶಿಗಳಿಗೆ ಬದಲಾಗಿ ೧೩ ರಾಶಿಗಳಿವೆ. ಈ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮತ್ತು ಸೂರ್ಯ (ಅಥವ ಗ್ರಹ) ಯಾವುದೇ ರಾಶಿಯಲ್ಲಿ ಇರುವುದು ಅನ್ನುವುದರ ನಿಜವಾದ ಅರ್ಥದ ಹಿನ್ನೆಲೆಯಲ್ಲಿ ಫಲಜ್ಯೋತಿಷ್ಯ ನಂಬಲರ್ಹವಾದದ್ದೇ ಎಂಬುದನ್ನು ನೀವೇ ತೀರ್ಮಾನಿಸಿ

ಸೂರ್ಯ ಇರುವ ರಾಶಿ ಇರುವ ತಿಂಗಳು ಒಟ್ಟು ದಿನಗಳು
ಧನು ಡಿಸೆಂಬರ್‌ ೧೮ – ಜನವರಿ ೧೮ ೩೨
ಮಕರ ಜನವರಿ ೧೯ – ಫೆಬ್ರವರಿ ೧೫ ೨೮
ಕುಂಭ ಫೆಬ್ರವರಿ ೧೬ – ಮಾರ್ಚ್‌ ೧೧ ೨೪
ಮೀನ ಮಾರ್ಚ್‌ ೧೨ – ಎಪ್ರಿಲ್ ೧೮ ೩೮
ಮೇಷ ಎಪ್ರಿಲ್‌ ೧೯ – ಮೇ ೧೩ ೨೫
ವೃಷಭ ಮೇ ೧೪ – ಜೂನ್‌ ೧೯ ೩೭
ಮಿಥುನ ಜೂನ್‌ ೨೦ – ಜುಲೈ ೨೦ ೩೧
ಕರ್ಕಟಕ ಜುಲೈ ೨೧ – ಆಗಸ್ಟ್‌ ೯ ೨೦
ಸಿಂಹ ಆಗಸ್ಟ್‌ ೧೦ – ಸೆಪ್ಟೆಂಬರ್‌ ೧೫ ೩೭
ಕನ್ಯಾ ಸೆಪ್ಟೆಂಬರ್‌ ೧೬ – ಅಕ್ಟೋಬರ್‌ ೩೦ ೪೫
ತುಲಾ ಅಕ್ಟೋಬರ್‌ ೩೧ – ನವೆಂಬರ್‌ ೨೨ ೨೩
ವೃಶ್ಚಿಕ ನವೆಂಬರ್‌ ೨೩ – ನವೆಂಬರ್ ೨೯
ಉರಗಧರ ನವೆಂಬರ್ ೩೦ – ಡಿಸೆಂಬರ್ ೧೭ ೧೮

ಆದ್ದರಿಂದ,  ಜ್ಯೋತಿಷಿಗಳು ಉಲ್ಲೇಖಿಸುವ  ಸಾಂಪ್ರದಾಯಿಕ ರಾಶಿಚಕ್ರವನ್ನು ಗೊಂದಲ ನಿವಾರಣೆಗಾಗಿಯಾದರೂ ‘ಜ್ಯೋತಿಷ್ಚಕ್ರ’ ಅನ್ನುವುದು ಉತ್ತಮ. ಜ್ಯೋತಿಷ್ಚಕ್ರದ ಆರಂಭದ ರಾಶಿ ಮೇಷ. ಮೇಷದ ಪೂರ್ವ ದಿಕ್ಕಿನಲ್ಲಿದೆ ನಂತರದ ವೃಷಭ ರಾಶಿ. ವೃಷಭದ ಪೂರ್ವಕ್ಕಿದೆ ಮಿಥುನ. ಹೀಗೆ ಈ ಚಕ್ರದಲ್ಲಿ ರಾಶಿಗಳು ಅನುಕ್ರಮವಾಗಿ ಪಶ್ಚಿಮ-ಪೂರ್ವಾಭಿಮುಖವಾಗಿವೆ ಎಂಬುದು ಗಮನಾರ್ಹ. ತತ್ಪರಿಣಾಮವಾಗಿ ಸೂರ್ಯನ ಜ್ಯೋತಿಷ್ಚಕ್ರ ಆಧಾರಿತ  ವಾರ್ಷಿಕ ಚಲನೆಗೆ ಸಂಬಂಧಿಸಿದಂತೆ ಜರಗುವ ಒಂದು ಕುತೂಹಲಕಾರೀ ವಿದ್ಯಮಾನ ಆವಿಷ್ಕರಿಸಲು ನೀವು ಕೊಂಚ ಶ್ರಮಿಸಬೇಕು. ಪ್ರತೀದಿನ ಸೂರ್ಯೋದಯಕ್ಕೆ ಮುನ್ನವೇ ಕನಿಷ್ಠ ಮೂರು ತಿಂಗಳ ಕಾಲ ಹಾಸಿಗೆ ಬಿಟ್ಟು ಏಳಬೇಕು! ಸೂರ್ಯೋದಯಕ್ಕೆ ಮುನ್ನ ಸೂರ್ಯೋದಯ ಆಗುವ ಬಿಂದುವಿಗಿಂತ ಮೇಲೆ ಬಾನಂಚಿನಲ್ಲಿ ಇರುವ ರಾಶಿಯನ್ನು ಹಾಗೂ ಸೂರ್ಯಾಸ್ತವಾದ ಬಳಿಕ ಆ ಬಿಂದುವಿಗಿಂತ ಮೇಲೆ ಬಾನಂಚಿನಲ್ಲಿ ಇರುವ ರಾಶಿಯನ್ನು ಗುರುತಿಸಿ ದಾಖಲಿಸಿ. ನೀವು ದಾಖಲಿಸಿದ ಮಾಹಿತಿ ಈ ತಥ್ಯಗಳನ್ನು  ಸೂಚಿಸುತ್ತದೆ: ಸೂರ್ಯ ಪಶ್ಚಿಮದಿಂದ ಪೂರ್ವಕ್ಕೆ ನಿಧಾನವಾಗಿ ಸರಿಯುತ್ತದೆ, ಒಂದು ರಾಶಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಇರುತ್ತದೆ. ಹೇಗೆ ಎಂಬುದನ್ನು ತಿಳಿಯಲು ವೀಕ್ಷಣಾದಾಖಲೆಯ ಈ ಉದಾಹರಣೆಯನ್ನು ಅಭ್ಯಸಿಸಿ.

ತಿಂಗಳು ದಿಗಂತದಲ್ಲಿ ಗೋಚರಿಸುವ ರಾಶಿ ಅಂದ ಮೇಲೆ ಸೂರ್ಯ ಇರುವ ರಾಶಿ
ಸೂರ್ಯೋದಯಕ್ಕೆ ಮುನ್ನ ಸೂರ್ಯಾಸ್ತದ ನಂತರ
ಜನವರಿ ವೃಶ್ಚಿಕ ಮಕರ ಧನು
ಫೆಬ್ರವರಿ ಧನು ಕುಂಭ ಮಕರ
ಮಾರ್ಚ್‌ ಮಕರ ಮೀನ ಕುಂಭ

ರಾಶಿಚಕ್ರದ ಪರಿಕಲ್ಪನೆಯನ್ನು ರೂಪಿಸಿದ್ದು ಪುರಾತನ ಜ್ಯೋತಿಷಿಗಳೇ ವಿನಾ ಖಗೋಳ ವಿಜ್ಞಾನಿಗಳಲ್ಲ. ಸೌರಮಂಡಲದ ಸದಸ್ಯರ ಸ್ಥಾನ ಹಾಗೂ ಕಕ್ಷೆ ಗುರುತಿಸಲು ಮಾತ್ರ ಖಗೋಳವಿಜ್ಞಾನಿಗಳು ಈ ಪರಿಕಲ್ಪನೆಯ ಲಾಭ ಪಡೆಯುತ್ತಾರೆ. ‘ಜ್ಯೋತಿಷಿ’ಗಳು ಕೆಲವು ರಾಶಿಗಳಿಗೆ ನೀಡಿರುವ ವಿಶೇಷ ಪ್ರಾಧಾನ್ಯಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಭಾರತೀಯ ಜ್ಯೋತಿಷಿಗಳು ಸೂರ್ಯಕಕ್ಷೆ ಆಧಾರಿತ ರಾಶಿಚಕ್ರದ ಪರಿಕಲ್ಪನೆಯನ್ನು ಈಜಿಪ್ಟ್ ಅಥವ ಗ್ರೀಕ್ ಜ್ಯೋತಿಷಿಗಳಿಂದ ಎರವಲು ಪಡೆದು ಅದರಲ್ಲಿ ಚಾಂದ್ರಕಕ್ಷೆ ಆಧಾರಿತ ರಾಶಿಚಕ್ರವನ್ನು ವಿಲೀನಗೊಳಿಸಿದಂತೆಯೂ ತೋರುತ್ತದೆ. ಚಾಂದ್ರಕಕ್ಷೆ ಆಧಾರಿತ ರಾಶಿಚಕ್ರವನ್ನು ೨೭¸ ಸಮ ಖಂಡಗಳಾಗಿ ವಿಭಾಗಿಸಿ ‘ನಕ್ಷತ್ರ’ಗಳು ಎಂದು ಕರೆದವರು ಭಾರತೀಯರು. ಭಾರತೀಯ ಪೌರಾಣಿಕರ ಕಲ್ಪನೆಯಲ್ಲಿ ತಾರಾಪತಿ ಚಂದ್ರನಿಗೆ ೨೭ ಪತ್ನಿಯರು. ಚಂದ್ರನ ಅರಮನೆಯಲ್ಲಿ ಇವರಿಗೆ ತಲಾ ಒಂದರಂತೆ ೨೭ ಕೊಠಡಿಗಳಿವೆ. ಪ್ರತೀ ಕೊಠಡಿಗೆ ತಿಂಗಳಿನಲ್ಲಿ ಒಂದು ದಿನ ಚಂದ್ರನ ಭೇಟಿ! ಪ್ರತೀ ‘ನಕ್ಷತ್ರ’ದ ವಿಸ್ತಾರ ೧೩ ೨೦’. ಅಶ್ವಿನಿಯಿಂದ ಮೊದಲ್ಗೊಂಡು ರೇವತಿಯೊಂದಿಗೆ ಅಂತ್ಯವಾಗುವ ೨೭ ‘ನಕ್ಷತ್ರ’ಗಳೇ ಈ ಖಂಡನಾಮಗಳು. ಪ್ರತೀ ‘ನಕ್ಷತ್ರ’ವನ್ನು ಪುನಃ ನಾಲ್ಕು ಸಮ ಉಪಖಂಡಗಳಾಗಿ ವಿಭಾಗಿಸಿ ಪ್ರತೀ ಉಪಖಂಡವನ್ನು ‘ನಕ್ಷತ್ರ’ದ ಒಂದು ಪಾದ (೧/೪) ಎಂದು ಗುರುತಿಸಿದರು. ಒಂದು ಪಾದದ ವಿಸ್ತಾರ ೩ ೨೦’. ಅರ್ಥಾತ್, ಸೂರ್ಯ ಕಕ್ಷೆ ಆಧಾರಿತ ರಾಶಿಚಕ್ರದ ಪ್ರತೀ ರಾಶಿಯಲ್ಲಿ ೯ ‘ನಕ್ಷತ್ರ’ ಪಾದಗಳು ಇರುವಂತೆ ವ್ಯವಸ್ಥೆಗೊಳಿಸಿ ಸೂರ್ಯ, ಚಂದ್ರ ಇವೇ ಮೊದಲಾದ ಜ್ಯೋತಿಷ್ಯ ಮಹತ್ವ ಉಳ್ಳ ಆಕಾಶಕಾಯಗಳ ಸ್ಥಾನ ಗುರುತಿಸುವ ಪದ್ಧತಿಯನ್ನು ಸೃಷ್ಟಿಸಿದರು. ಜ್ಯೋತಿಷ್ಯದ ಲೆಕ್ಕಾಚಾರಗಳಿಗೆ ನಿಖರತೆ ನೀಡುವ ಪ್ರಯತ್ನ ಇದಾಗಿರುವಂತೆ ತೋರುತ್ತದೆ. ತತ್ಪರಿಣಾಮವಾಗಿ ಕೆಲವು ‘ನಕ್ಷತ್ರ’ಗಳು ಎರಡು ಸೌರರಾಶಿಗಳಲ್ಲಿಯೂ ಹರಡಿವೆ. ಅಶ್ವಿನಿ, ಭರಣಿ ಇವೇ ಮೊದಲಾದವು ಪುರಾತನ ಜ್ಯೋತಿಷ್ಚಕ್ರದ ನಿರ್ದಿಷ್ಟ ಕ್ಷೇತ್ರದ ಹೆಸರುಗಳೇ ವಿನಾ ನಾವು ಸಾಮಾನ್ಯವಾಗಿ ನಕ್ಷತ್ರ ಎಂದು ಗುರುತಿಸುವ ದೃಗ್ಗೋಚರ ‘ಬೆಳಕಿನಚುಕ್ಕಿ’ಗಳ ಹೆಸರಲ್ಲ. ಇದರಿಂದ ಉದ್ಭವಿಸುವ ಗೊಂದಲ ನಿವಾರಣೆಗಾಗಿ ಈ ಪುಸ್ತಕದಲ್ಲಿ ಇಂಥ ‘ಬೆಳಕಿನ ಚುಕ್ಕಿ’ಗಳನ್ನು ಎಲ್ಲೆಡೆ ತಾರೆಗಳು ಎಂದು ಉಲ್ಲೇಖಿಸಿದೆ. ಪ್ರತೀ ಖಂಡದಲ್ಲಿ ಇರುವ ತಾರೆಗಳ ಪೈಕಿ ಅಂದಿನ ದಿನಗಳಲ್ಲಿ ಗಮನ ಸೆಳೆಯುತ್ತಿದ್ದ ಯಾವುದೋ ಒಂದು ತಾರೆಯ ನೆರವಿನಿಂದ ಅಶ್ವಿನಿ, ಭರಣಿ ಮೊದಲಾದ ರಾಶಿಖಂಡಗಳನ್ನು ಗುರುತಿಸುತ್ತಿದ್ದರು. ಖಗೋಳ ವಿಜ್ಞಾನಿಗಳು ಗುರುತಿಸಿ ಹೆಸರಿಸಿರುವ ನಕ್ಷತ್ರಗಳ ಪೈಕಿ ಈ ೨೭ ‘ನಕ್ಷತ್ರ ಅಥವ ರಾಶಿಖಂಡ’ಗಳನ್ನು ಗುರುತಿಸಲು ಬಳಸುತ್ತಿದ್ದ ತಾರೆಗಳು ಯಾವುವು ಎಂಬುದರ ಕುರಿತಂತೆ ಭಾರತೀಯ ವಿದ್ವಾಂಸರಲ್ಲಿ ಒಮ್ಮತ ಇರುವಂತೆ ತೋರುತ್ತಿಲ್ಲ. ಜ್ಯೋತಿಷ್ಚಕ್ರದ ದ್ವಾದಶರಾಶಿಗಳನ್ನೂ  ‘ನಕ್ಷತ್ರ’ಗಳನ್ನೂ ಗಣಿತೀಯವಾಗಿ ಲೆಕ್ಕಿಸಿ ನಿಖರವಾಗಿ ಗುರುತಿಸಬಹುದೇ ವಿನಾ ಕೇವಲ ವೀಕ್ಷಣೆಯಿಂದ ಅಲ್ಲ ಎಂಬ ಕಹಿ ಸತ್ಯ (!) ಹವ್ಯಾಸಿಗಳಾಗಬಯಸುವ ನಿಮಗೆ ಇರಲಿ.

ಪ್ರಾರಂಭಿಕ ಹವ್ಯಾಸಿ ಖಗೋಳ ವೀಕ್ಷಕ, ತಾನು ಗುರುತಿಸಿದ ತಾರೆ ಕ್ಷಿತಿಜದಿಂದ ಎಷ್ಟು ದೂರದಲ್ಲಿದೆ ಎಂಬುದನ್ನೇ ಆಗಲಿ, ತಾನು ಗುರುತಿಸಿದ ಎರಡು ತಾರೆಗಳ ನಡುವಿನ ಅಂತರ ಎಷ್ಟು ಎಂಬುದನ್ನೇ ಆಗಲಿ ಇತರರಿಗೆ ತಿಳಿಸುವದು ಅಥವ ದಾಖಲಿಸುವುದು ಹೇಗೆ?

ಕೋನೀಯ ದೂರವನ್ನು ಅಂದಾಜು ಮಾಡುವ ಕೆಲವು ಅಪರಿಷ್ಕೃತ ವಿಧಾನಗಳನ್ನು ಕಲಿತರೆ ಈ ಕಾರ್ಯವನ್ನು ಸುಲಭವಾಗಿ ನಿಭಾಯಿಸಬಹುದು. ಎರಡು ಸರಳರೇಖೆಗಳು ಒಂದನ್ನೊಂದು ಛೇದಿಸುವ ಅಥವ ಸಂಧಿಸುವ ಬಿಂದುವಿನಲ್ಲಿ ಕೋನ ಏರ್ಪಡುತ್ತದೆ ಹಾಗೂ ಕೋನದ ಅಳತೆಯ ಏಕಮಾನ ‘ಡಿಗ್ರಿ’ಎಂದು ನಿಮಗೆ ತಿಳಿದಿದೆ.12. Angle

ಅತಿ ದೂರದಲ್ಲಿ ಇರುವ ಎರಡು ಆಸುಪಾಸಿನ ತಾರೆಗಳನ್ನು ಏಕಕಾಲದಲ್ಲಿ ನೋಡುವಾಗ ವೀಕ್ಷಕನ ಕಣ್ಣಿನಿಂದ ಅವುಗಳತ್ತ ರೇಖಿಸಿದ ಎರಡು ಕಾಲ್ಪನಿಕ ದೃಷ್ಟಿರೇಖೆಗಳ ನಡುವಣ ಕೋನವೇ ಅವುಗಳ ನಡುವಿನ ತೋರಿಕೆಯ ಕೋನೀಯ ದೂರ ಅಥವ ಕೋನಾಂತರ.13. Angular Distance

ವೀಕ್ಷಕನಿಂದ ತಾರೆಗಳಿಗೆ ಇರುವ ನಿಜವಾದ ದೂರವನ್ನು ಕೋನಾಂತರ ಸೂಚಿಸುವುದಿಲ್ಲ ಎಂಬುದನ್ನು ಗಮನಿಸಿ. ಉದಾಹರಣೆಗೆ, ಚಿತ್ರದಲ್ಲಿ ಕೋನಾಂತರಕ್ಕೂ ವೀಕ್ಷಕನಿಂದ ಆ ತಾರೆಗಳಿಗೆ ಇರುವ ದೂರಗಳಿಗೂ ಸಂಬಂಧ ಇಲ್ಲದಿರುವುದನ್ನು ಗಮನಿಸಿ.

ಕೋನಾಂತರ ಅಂದಾಜು ಮಾಡಬೇಕಾದ ತಾರೆಗಳ ದಿಕ್ಕಿನಲ್ಲಿ ನಿಮ್ಮ ಕೈ ಪೂರ್ಣ ಚಾಚಿ ಒಂದು ಕಣ್ಣಿನಿಂದ ಕೈಗುಂಟ ತಾರೆಗಳನ್ನು ನೋಡಿ. ಕೈಬೆರಳುಗಳನ್ನು ಹೇಗೆ ಹಿಡಿದಿದ್ದೀರಿ ಎಂಬುದನ್ನು ಆಧರಿಸಿ ಕೋನಾಂತರ ಅಂದಾಜು ಮಾಡಿ. ಇದಕ್ಕೆ ಅಮೇರಿಕದ ನಾಸಾ ಸಂಸ್ಥೆ ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಈ ಮುಂದಿನ ಚಿತ್ರಗಳನ್ನು ಮಾರ್ಗದರ್ಶಿಯಾಗಿ ಬಳಸಿ.14. Finger measures

ನಿಮ್ಮ ಕೈ ಅಥವ ಕೈಬೆರಳುಗಳ ಗಾತ್ರದ ಬಗ್ಗೆ ಸಂದೇಹವಿದ್ದರೆ ಅಳತೆಪಟ್ಟಿಯನ್ನೂ ಕೋನಾಂತರ ಅಂದಾಜು ಮಾಡಲು ಬಳಸಬಹುದು.  ಪೂರ್ಣವಾಗಿ ಚಾಚಿದ ಕೈನಲ್ಲಿ ಕಣ್ಣಿನ ನೇರದಲ್ಲಿ ಅಳತೆಪಟ್ಟಿ ಹಿಡಿದು ಅಳತೆ ಮಾಡಿದರೆ ೧ ಸೆಂಮೀ ವಿಭಾಗ ಹೆಚ್ಚುಕಮ್ಮಿ ೧ ಕೋನಾಂತರವನ್ನು ಪ್ರತಿನಿಧಿಸುತ್ತದೆ. ಈ ರೀತಿ ಹಿಡಿದ ಅಳತೆಪಟ್ಟಿ ಮತ್ತು ಕಣ್ಣಿನ ನಡುವಿನ ಅಂತರ ಪ್ರಸಾಮಾನ್ಯವಾಗಿ ಹೆಚ್ಚುಕಮ್ಮಿ ೬೦ ಸೆಂಮೀ ಇರುವುದೇ ಇದಕ್ಕೆ ಕಾರಣ. ಚಿತ್ರದಲ್ಲಿ ತೋರಿಸಿದಂತೆ ೬೦ ಸೆಂಮೀ ಉದ್ದದ ಮರದ ಪಟ್ಟಿಗೆ ಅಳತೆಪಟ್ಟಿಯನ್ನು ಕಟ್ಟಿ ಉಪಯೋಗಿಸಲೂಬಹುದು.15. Cross bow

ಭೂಮಿಯಿಂದ ತಾರೆಗೆ ಇರುವ ಅಗಾಧ ದೂರವನ್ನು ಸೂಚಿಸಲು ಬಳಸುವ ಜನಪ್ರಿಯ ಮಾನಕ ಜ್ಯೋತಿರ್ವರ್ಷ (ಲೈಟ್ ಯಿಅರ್, ಜ್ಯೋವ). ನಿರ್ದ್ರವ್ಯತೆಯಲ್ಲಿ ಸೆಕೆಂಡಿಗೆ  ಸುಮಾರು ೩೦೦,೦೦೦ ಕಿಮೀ ವೇಗದಲ್ಲಿ ಪ್ರಸರಿಸುವ ಬೆಳಕು ಒಂದು ವರ್ಷದಲ್ಲಿ ಗಮಿಸುವ ದೂರಕ್ಕೆ ಈ ಹೆಸರು. ಜ್ಯೋತಿರ್ವರ್ಷದ ಅಗಾಧತೆಯನ್ನು ತಿಳಿಯಲು ಈ ಉದಾಹರಣೆಯಲ್ಲಿ ಲೆಕ್ಕಿಸಿರುವ ದೂರವನ್ನು ಓದಲು ಪ್ರಯತ್ನಿಸಿ. ತದನಂತರ ನಾವು ಸಾಮಾನ್ಯವಾಗಿ ಬಳಸುವ ವಾಹನಗಳಲ್ಲಿ ಪಯಣಿಸಿದರೆ ಈ ದೂರ ಕ್ರಮಿಸಲು ಎಷ್ಟು ಸಮಯ ಬೇಕಾಗಬಹುದೆಂಬುದನ್ನು ಲೆಕ್ಕಿಸಲು ಪ್ರಯತ್ನಿಸಿ. ಲುಬ್ಧಕ ತಾರೆಗೆ ಭೂಮಿಯಿಂದ ಇರುವ ದೂರ ೮.೬ ಜ್ಯೋತಿರ್ವರ್ಷ. ಅರ್ಥಾತ್, ೮.೬ x ೩೬೫.೨೫ x ೨೪ x ೬೦ x ೬೦ x ೨೯೯,೭೯೨,೪೫೮ = ೮೦೪,೧೬೨,೦೯೦೧೬೯೩೬೮೦೦ ಕಿಮೀ. ಲುಬ್ಧಕದಿಂದ ‘ಇಂದು’ ಹೊರಟ ಬೆಳಕು ಇನ್ನು ೮.೬ ವರ್ಷಗಳ ನಂತರ ನಮ್ಮನ್ನು ತಲಪುತ್ತದೆ. ‘ಇಂದು’ ನಾವು ನೋಡುತ್ತಿರುವುದು ೮.೬ ವರ್ಷಗಳ ಹಿಂದಿನ ಲುಬ್ಧಕವನ್ನು. ‘ಇಂದಿನ’ರಾತ್ರಿಯ ಆಕಾಶ ತಾರಾಲೋಕದ ಪ್ರಾಚೀನ ಇತಿಹಾಸದ ವಿಭಿನ್ನ ಕಾಲಗಳ ಸಂಯೋಜಿತ ದೃಶ್ಯ ಅಥವ ತೇಪೆಚಿತ್ರ!

ತಾರೆಗಳ ಉಜ್ವಲತೆಯಲ್ಲಿ ವ್ಯತ್ಯಾಸ ಇರುವುದನ್ನು ನೀವು ಗಮಸಿರಬಹುದು. ತಾರೆಗಳ ತೋರಿಕೆಯ (ಅಪ್ಯಾರನ್ಟ್) ಮತ್ತು ನಿರಪೇಕ್ಷ (ಆಬ್ಸಲ್ಯೂಟ್) ಉಜ್ವಲತೆಯನ್ನು ಪರಿಮಾಣೀಕರಿಸುವ ಮಾನಕ ಉಜ್ವಲತಾಂಕ ಅಥವ ಕಾಂತಿಮಾನ (ಮ್ಯಾಗ್ನಿಟ್ಯೂಡ್). ತಾರೆಗಳನ್ನು ಗುರುತಿಸಲು ಅವುಗಳ ತೋರಿಕೆಯ ಉಜ್ವಲತೆಯನ್ನು ಮಾರ್ಗದರ್ಶಿಯಾಗಿ ಹವ್ಯಾಸಿಗಳು ಉಪಯೋಗಿಸಲೂ ಬಹುದು. ಬಲು ಕಷ್ಟದಿಂದ ಬರಿಗಣ್ಣಿಗೆ ಗೋಚರಿಸುವ ತಾರೆಯ ತೋರಿಕೆಯ ಉಜ್ವಲತಾಂಕ ೬. ತೋರಿಕೆಯ ಉಜ್ವಲತಾಂಕ ೫ ಇರುವ ತಾರೆ ಅದಕ್ಕಿಂತ ೨.೫೧೨ ಪಟ್ಟು ಹೆಚ್ಚು ಉಜ್ವಲವಾಗಿರುತ್ತದೆ. ಅರ್ಥಾತ್ ತೋರಿಕೆಯ ಉಜ್ವಲತಾಂಕ ಕಮ್ಮಿ ಇದ್ದಷ್ಟೂ ಉಜ್ವಲತೆ ಹೆಚ್ಚು. ಸೂರ್ಯನ ತೋರಿಕೆಯ ಉಜ್ವಲತಾಂಕ -೨೬.೭೩, ಲುಬ್ಧಕ ನಕ್ಷತ್ರದ್ದು -೧.೪೬, ಪೂರ್ಣ ಚಂದ್ರನದ್ದು -೧೨.೬, ಧ್ರುವ ತಾರೆಯದ್ದು ೧.೯೨ ರಿಂದ ೨.೦೭. ತೋರಿಕೆಯ ಉಜ್ವಲತಾಂಕ ೩ ಕ್ಕಿಂತ ಹೆಚ್ಚು ಉಜ್ವಲತಾಂಕ ಇರುವ ತಾರೆಗಳನ್ನು ನಗರವಾಸಿಗಳು ಬರಿಗಣ್ಣಿಂದ ನೋಡುವುದು ಕಷ್ಟ (ಇತ್ತೀಚೆಗೆ ಮಹಾನಗರಗಳಲ್ಲಿ ೧೦-೨೦ ತಾರೆಗಳು ಗೋಚರಿಸುವುದೂ ಅಪರೂಪ). ಈ ಮಾಲಿಕೆಯಲ್ಲಿ ತೋರಿಕೆಯ ಉಜ್ವಲತಾಂಕ ೨.೫ ಕ್ಕಿಂತ ಕಮ್ಮಿ ಇರುವ ತಾರೆಗಳನ್ನು ಮಾತ್ರ ‘ಉಜ್ವಲ‘ ಎಂದು ನಮೂದಿಸಿದೆ.

ಒಂದು ಸ್ಥಳದಲ್ಲಿ ರಾತ್ರಿ ವೀಕ್ಷಿಸ ಬಹುದಾದ ಆಕಾಶ ಕಾಯಗಳ ಸಾಪೇಕ್ಷ ಸ್ಥಾನ ಸೂಚಿಸುವ ನಕ್ಷೆಯೇ ತಾರಾಪಟ. ಸ್ಥಳದ ಅಕ್ಷಾಂಶ, ರೇಖಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ವೀಕ್ಷಣ ದಿನಾಂಕ ಮತ್ತು ಸಮಯ ಇವನ್ನು ಆಧರಿಸಿ ತಾರಾಪಟ ರಚಿಸುತ್ತಾರೆ. ವಾಸ್ತವವಾಗಿ ತಾರಾಪಟದಲ್ಲಿ ಇರುವ ಯಾವ ರೇಖೆಗಳೂ ಆಕಾಶದಲ್ಲಿ ಇರುವುದಿಲ್ಲ ಮತ್ತು ಯಾವುದೇ ಪುಂಜದ ಎಲ್ಲ ತಾರೆಗಳು ಭೂಮಿಯಿಂದ ಸಮಾನ ದೂರಗಳಲ್ಲಿಯೂ ಇಲ್ಲ ಎಂಬುದು ನೆನಪಿರಲಿ. ತಾರೆಗಳು ರೂಪಿಸುತ್ತವೆ ಎನ್ನಲಾದ ಆಕೃತಿಗಳು ಮಾನವನ ಕಲ್ಪನೆಯ ಉತ್ಪನ್ನಗಳು. ನಮ್ಮ ಕಣ್ಣುಗಳ ಕ್ಷಮತೆಯ ಮಿತಿಯಿಂದಾಗಿ ಎಲ್ಲ ತಾರೆಗಳು ಒಂದೇ ಸಮತಲದಲ್ಲಿ ಇರುವಂತೆ ಭಾಸವಾಗುತ್ತದೆ. ತಾರಾಪಟದ ನಮೂನೆಯಲ್ಲಿ ದಿಕ್ಕುಗಳನ್ನು ಸೂಚಿಸಿರುವ ವಿಧಾನ ಗಮನಿಸಿ. ಎಲ್ಲ ಭೂಪಟಗಳಲ್ಲಿ ಗುರುತಿಸುವಂತೆ ಈ ಪಟದ ಮೇಲ್ಭಾಗದಲ್ಲಿ ಉತ್ತರ ಮತ್ತು ಕೆಳಭಾಗದಲ್ಲಿ ದಕ್ಷಿಣ ಗುರುತಿಸಿದ್ದರೂ ಪೂರ್ವ ಮತ್ತು ಪಶ್ಚಿಮಗಳನ್ನು ಗುರುತಿಸುವುದರಲ್ಲಿ ಮಾಡಿರುವ ವ್ಯತ್ಯಾಸ ಗಮನಿಸಿ. ತಾರಾಪಟದಲ್ಲಿ ಎಡಭಾಗದಲ್ಲಿ ಪೂರ್ವ ಎಂದೂ ಬಲಭಾಗದಲ್ಲಿ ಪಶ್ಚಿಮ ಎಂದೂ ಗುರುತಿಸಿರುವುದನ್ನು ಗಮನಿಸಿ. ನೀವು ಇರುವ ಸ್ಥಳದ ಉತ್ತರ-ದಕ್ಷಿಣ ದಿಕ್ಕುಗಳಿಗೆ ಅಭಿಮುಖವಾಗಿ ಪಟದ ಉತ್ತರ-ದಕ್ಷಿಣ ದಿಕ್ಕುಗಳು ಇರುವಂತೆ ಅದನ್ನು ಮೇಜಿನ ಮೇಲೆ ಇಟ್ಟರೆ ಅದರ ಪೂರ್ವ-ಪಶ್ಚಿಮಗಳು ಆ ಸ್ಥಳದ ಪೂರ್ವ-ಪಶ್ಚಿಮಾಭಿಮುಖಿಗಳಾಗಿ ಇರುವುದಿಲ್ಲ ಎಂಬುದನ್ನು ಗಮನಿಸಿ. ತಾರಾಪಟದ ಉತ್ತರ-ದಕ್ಷಿಣಗಳು ನೀವಿರುವ ಸ್ಥಳದ ಉತ್ತರ-ದಕ್ಷಿಣಗಳಿಗೆ ಅಭಿಮುಖವಾಗಿ ಇರುವಂತೆ ಅದನ್ನು ನಿಮ್ಮ ತಲೆಯ ಮೇಲೆ ಕೆಳಮುಖವಾಗಿ ಹಿಡಿದಾಗ ಪಟದ ದಿಕ್ಕುಗಳು ನೀವಿರುವ ಸ್ಥಳದ ದಿಕ್ಕುಗಳನ್ನು ಸರಿಯಾಗಿ ಸೂಚಿಸುವುದನ್ನು ಗಮನಿಸಿ. ಅರ್ಥಾತ್, ತಾರಾಪಟದ ನೆರವಿಂದ ತಾರೆಗಳನ್ನು ಗುರುತಿಸುವಾಗ ಪಟವನ್ನು ನಿಮ್ಮ ನೆತ್ತಿಯ ಮೇಲೆ ಕೆಳಮುಖವಾಗಿಯೂ ಪಟದ ಉತ್ತರ-ದಕ್ಷಿಣಗಳು ವೀಕ್ಷಣಾಸ್ಥಳದ ಉತ್ತರ-ದಕ್ಷಿಣಾಭಿಮುಖವಾಗಿ ಇರುವಂತೆಯೂ ಹಿಡಿದಿರಬೇಕು. ವೀಕ್ಷಕನ ದಿಗಂತವನ್ನು ಅಥವ ಬಾನಂಚನ್ನು ಪಟದ ವೃತ್ತಾಕಾರದ ಸೀಮಾರೇಖೆಯೂ, ಖಮಧ್ಯವನ್ನು ಮಧ್ಯದಲ್ಲಿರುವ ‘+’ ಚಿಹ್ನೆಯೂ ಸೂಚಿಸುತ್ತದೆ.

ಭೂಮಿಯಿಂದ ತಾರೆಗೆ ಇರುವ ಅಗಾಧ ದೂರವನ್ನು ಸೂಚಿಸಲು ಬಳಸುವ ಜನಪ್ರಿಯ ಮಾನಕ ಜ್ಯೋತಿರ್ವರ್ಷ (ಲೈಟ್ ಯಿಅರ್, ಜ್ಯೋವ). ನಿರ್ದ್ರವ್ಯತೆಯಲ್ಲಿ ಸೆಕೆಂಡಿಗೆ  ಸುಮಾರು ೩೦೦,೦೦೦ ಕಿಮೀ ವೇಗದಲ್ಲಿ ಪ್ರಸರಿಸುವ ಬೆಳಕು ಒಂದು ವರ್ಷದಲ್ಲಿ ಗಮಿಸುವ ದೂರಕ್ಕೆ ಈ ಹೆಸರು. ಜ್ಯೋತಿರ್ವರ್ಷದ ಅಗಾಧತೆಯನ್ನು ತಿಳಿಯಲು ಈ ಉದಾಹರಣೆಯಲ್ಲಿ ಲೆಕ್ಕಿಸಿರುವ ದೂರವನ್ನು ಓದಲು ಪ್ರಯತ್ನಿಸಿ. ತದನಂತರ ನಾವು ಸಾಮಾನ್ಯವಾಗಿ ಬಳಸುವ ವಾಹನಗಳಲ್ಲಿ ಪಯಣಿಸಿದರೆ ಈ ದೂರ ಕ್ರಮಿಸಲು ಎಷ್ಟು ಸಮಯ ಬೇಕಾಗಬಹುದೆಂಬುದನ್ನು ಲೆಕ್ಕಿಸಲು ಪ್ರಯತ್ನಿಸಿ. ಲುಬ್ಧಕ ತಾರೆಗೆ ಭೂಮಿಯಿಂದ ಇರುವ ದೂರ ೮.೬ ಜ್ಯೋತಿರ್ವರ್ಷ. ಅರ್ಥಾತ್, ೮.೬ x ೩೬೫.೨೫ x ೨೪ x ೬೦ x ೬೦ x ೨೯೯,೭೯೨,೪೫೮ = ೮೦೪,೧೬೨,೦೯೦೧೬೯೩೬೮೦೦ ಕಿಮೀ. ಲುಬ್ಧಕದಿಂದ ‘ಇಂದು’ ಹೊರಟ ಬೆಳಕು ಇನ್ನು ೮.೬ ವರ್ಷಗಳ ನಂತರ ನಮ್ಮನ್ನು ತಲಪುತ್ತದೆ. ‘ಇಂದು’ ನಾವು ನೋಡುತ್ತಿರುವುದು ೮.೬ ವರ್ಷಗಳ ಹಿಂದಿನ ಲುಬ್ಧಕವನ್ನು. ‘ಇಂದಿನ’ರಾತ್ರಿಯ ಆಕಾಶ ತಾರಾಲೋಕದ ಪ್ರಾಚೀನ ಇತಿಹಾಸದ ವಿಭಿನ್ನ ಕಾಲಗಳ ಸಂಯೋಜಿತ ದೃಶ್ಯ ಅಥವ ತೇಪೆಚಿತ್ರ!

ತಾರೆಗಳ ಉಜ್ವಲತೆಯಲ್ಲಿ ವ್ಯತ್ಯಾಸ ಇರುವುದನ್ನು ನೀವು ಗಮಸಿರಬಹುದು. ತಾರೆಗಳ ತೋರಿಕೆಯ (ಅಪ್ಯಾರನ್ಟ್) ಮತ್ತು ನಿರಪೇಕ್ಷ (ಆಬ್ಸಲ್ಯೂಟ್) ಉಜ್ವಲತೆಯನ್ನು ಪರಿಮಾಣೀಕರಿಸುವ ಮಾನಕ ಉಜ್ವಲತಾಂಕ ಅಥವ ಕಾಂತಿಮಾನ (ಮ್ಯಾಗ್ನಿಟ್ಯೂಡ್). ತಾರೆಗಳನ್ನು ಗುರುತಿಸಲು ಅವುಗಳ ತೋರಿಕೆಯ ಉಜ್ವಲತೆಯನ್ನು ಮಾರ್ಗದರ್ಶಿಯಾಗಿ ಹವ್ಯಾಸಿಗಳು ಉಪಯೋಗಿಸಲೂ ಬಹುದು. ಬಲು ಕಷ್ಟದಿಂದ ಬರಿಗಣ್ಣಿಗೆ ಗೋಚರಿಸುವ ತಾರೆಯ ತೋರಿಕೆಯ ಉಜ್ವಲತಾಂಕ ೬. ತೋರಿಕೆಯ ಉಜ್ವಲತಾಂಕ ೫ ಇರುವ ತಾರೆ ಅದಕ್ಕಿಂತ ೨.೫೧೨ ಪಟ್ಟು ಹೆಚ್ಚು ಉಜ್ವಲವಾಗಿರುತ್ತದೆ. ಅರ್ಥಾತ್ ತೋರಿಕೆಯ ಉಜ್ವಲತಾಂಕ ಕಮ್ಮಿ ಇದ್ದಷ್ಟೂ ಉಜ್ವಲತೆ ಹೆಚ್ಚು. ಸೂರ್ಯನ ತೋರಿಕೆಯ ಉಜ್ವಲತಾಂಕ -೨೬.೭೩, ಲುಬ್ಧಕ ನಕ್ಷತ್ರದ್ದು -೧.೪೬, ಪೂರ್ಣ ಚಂದ್ರನದ್ದು -೧೨.೬, ಧ್ರುವ ತಾರೆಯದ್ದು ೧.೯೨ ರಿಂದ ೨.೦೭. ತೋರಿಕೆಯ ಉಜ್ವಲತಾಂಕ ೩ ಕ್ಕಿಂತ ಹೆಚ್ಚು ಉಜ್ವಲತಾಂಕ ಇರುವ ತಾರೆಗಳನ್ನು ನಗರವಾಸಿಗಳು ಬರಿಗಣ್ಣಿಂದ ನೋಡುವುದು ಕಷ್ಟ (ಇತ್ತೀಚೆಗೆ ಮಹಾನಗರಗಳಲ್ಲಿ ೧೦-೨೦ ತಾರೆಗಳು ಗೋಚರಿಸುವುದೂ ಅಪರೂಪ). ಈ ಮಾಲಿಕೆಯಲ್ಲಿ ತೋರಿಕೆಯ ಉಜ್ವಲತಾಂಕ ೨.೫ ಕ್ಕಿಂತ ಕಮ್ಮಿ ಇರುವ ತಾರೆಗಳನ್ನು ಮಾತ್ರ ‘ಉಜ್ವಲ‘ ಎಂದು ನಮೂದಿಸಿದೆ.

ಒಂದು ಸ್ಥಳದಲ್ಲಿ ರಾತ್ರಿ ವೀಕ್ಷಿಸ ಬಹುದಾದ ಆಕಾಶ ಕಾಯಗಳ ಸಾಪೇಕ್ಷ ಸ್ಥಾನ ಸೂಚಿಸುವ ನಕ್ಷೆಯೇ ತಾರಾಪಟ. ಸ್ಥಳದ ಅಕ್ಷಾಂಶ, ರೇಖಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ವೀಕ್ಷಣ ದಿನಾಂಕ ಮತ್ತು ಸಮಯ ಇವನ್ನು ಆಧರಿಸಿ ತಾರಾಪಟ ರಚಿಸುತ್ತಾರೆ. ವಾಸ್ತವವಾಗಿ ತಾರಾಪಟದಲ್ಲಿ ಇರುವ ಯಾವ ರೇಖೆಗಳೂ ಆಕಾಶದಲ್ಲಿ ಇರುವುದಿಲ್ಲ ಮತ್ತು ಯಾವುದೇ ಪುಂಜದ ಎಲ್ಲ ತಾರೆಗಳು ಭೂಮಿಯಿಂದ ಸಮಾನ ದೂರಗಳಲ್ಲಿಯೂ ಇಲ್ಲ ಎಂಬುದು ನೆನಪಿರಲಿ. ತಾರೆಗಳು ರೂಪಿಸುತ್ತವೆ ಎನ್ನಲಾದ ಆಕೃತಿಗಳು ಮಾನವನ ಕಲ್ಪನೆಯ ಉತ್ಪನ್ನಗಳು. ನಮ್ಮ ಕಣ್ಣುಗಳ ಕ್ಷಮತೆಯ ಮಿತಿಯಿಂದಾಗಿ ಎಲ್ಲ ತಾರೆಗಳು ಒಂದೇ ಸಮತಲದಲ್ಲಿ ಇರುವಂತೆ ಭಾಸವಾಗುತ್ತದೆ. ತಾರಾಪಟದ ನಮೂನೆಯಲ್ಲಿ ದಿಕ್ಕುಗಳನ್ನು ಸೂಚಿಸಿರುವ ವಿಧಾನ ಗಮನಿಸಿ. ಎಲ್ಲ ಭೂಪಟಗಳಲ್ಲಿ ಗುರುತಿಸುವಂತೆ ಈ ಪಟದ ಮೇಲ್ಭಾಗದಲ್ಲಿ ಉತ್ತರ ಮತ್ತು ಕೆಳಭಾಗದಲ್ಲಿ ದಕ್ಷಿಣ ಗುರುತಿಸಿದ್ದರೂ ಪೂರ್ವ ಮತ್ತು ಪಶ್ಚಿಮಗಳನ್ನು ಗುರುತಿಸುವುದರಲ್ಲಿ ಮಾಡಿರುವ ವ್ಯತ್ಯಾಸ ಗಮನಿಸಿ. ತಾರಾಪಟದಲ್ಲಿ ಎಡಭಾಗದಲ್ಲಿ ಪೂರ್ವ ಎಂದೂ ಬಲಭಾಗದಲ್ಲಿ ಪಶ್ಚಿಮ ಎಂದೂ ಗುರುತಿಸಿರುವುದನ್ನು ಗಮನಿಸಿ. ನೀವು ಇರುವ ಸ್ಥಳದ ಉತ್ತರ-ದಕ್ಷಿಣ ದಿಕ್ಕುಗಳಿಗೆ ಅಭಿಮುಖವಾಗಿ ಪಟದ ಉತ್ತರ-ದಕ್ಷಿಣ ದಿಕ್ಕುಗಳು ಇರುವಂತೆ ಅದನ್ನು ಮೇಜಿನ ಮೇಲೆ ಇಟ್ಟರೆ ಅದರ ಪೂರ್ವ-ಪಶ್ಚಿಮಗಳು ಆ ಸ್ಥಳದ ಪೂರ್ವ-ಪಶ್ಚಿಮಾಭಿಮುಖಿಗಳಾಗಿ ಇರುವುದಿಲ್ಲ ಎಂಬುದನ್ನು ಗಮನಿಸಿ. ತಾರಾಪಟದ ಉತ್ತರ-ದಕ್ಷಿಣಗಳು ನೀವಿರುವ ಸ್ಥಳದ ಉತ್ತರ-ದಕ್ಷಿಣಗಳಿಗೆ ಅಭಿಮುಖವಾಗಿ ಇರುವಂತೆ ಅದನ್ನು ನಿಮ್ಮ ತಲೆಯ ಮೇಲೆ ಕೆಳಮುಖವಾಗಿ ಹಿಡಿದಾಗ ಪಟದ ದಿಕ್ಕುಗಳು ನೀವಿರುವ ಸ್ಥಳದ ದಿಕ್ಕುಗಳನ್ನು ಸರಿಯಾಗಿ ಸೂಚಿಸುವುದನ್ನು ಗಮನಿಸಿ. ಅರ್ಥಾತ್, ತಾರಾಪಟದ ನೆರವಿಂದ ತಾರೆಗಳನ್ನು ಗುರುತಿಸುವಾಗ ಪಟವನ್ನು ನಿಮ್ಮ ನೆತ್ತಿಯ ಮೇಲೆ ಕೆಳಮುಖವಾಗಿಯೂ ಪಟದ ಉತ್ತರ-ದಕ್ಷಿಣಗಳು ವೀಕ್ಷಣಾಸ್ಥಳದ ಉತ್ತರ-ದಕ್ಷಿಣಾಭಿಮುಖವಾಗಿ ಇರುವಂತೆಯೂ ಹಿಡಿದಿರಬೇಕು. ವೀಕ್ಷಕನ ದಿಗಂತವನ್ನು ಅಥವ ಬಾನಂಚನ್ನು ಪಟದ ವೃತ್ತಾಕಾರದ ಸೀಮಾರೇಖೆಯೂ, ಖಮಧ್ಯವನ್ನು ಮಧ್ಯದಲ್ಲಿರುವ ‘+’ ಚಿಹ್ನೆಯೂ ಸೂಚಿಸುತ್ತದೆ.

ಮುಂದೆ ಉದಾಹರಣೆಯಾಗಿ ಮೂರು ತಾರಾಪಟಗಳನ್ನು ಒದಗಿಸಿದ್ದೇನೆ. ಅವುಗಳ ಪೈಕಿ ಒಂದು ಪಟದಲ್ಲಿ ಕೇವಲ ತಾರೆ ಮತ್ತು ಗ್ರಹಗಳನ್ನು ತೋರಿಸಿದೆ. ಎರಡನೇ ಪಟದಲ್ಲಿ ಪ್ರಮುಖ ತಾರಾಪುಂಜಗಳನ್ನು ಗುರುತಿಸಲು ನೆರವು ನೀಡುವ ರೇಖಾಚಿತ್ರಗಳನ್ನೂ ಮೂರನೇಯದ್ದರಲ್ಲಿ ಅವುಗಳೊಂದಿಗೆ ರಾಶಿಗಳ ಸೀಮಾರೇಖೆಗಳನ್ನೂ ಗುರುತಿಸಿದೆ. ಈಗಾಗಲೇ ನೀಡಿರುವ ವಿವರಣೆಯ ಹಿನ್ನೆಲೆಯಲ್ಲಿ ತಾರಾಪಟದ ವಿಶಿಷ್ಟತೆಗಳನ್ನು ಅಧ್ಯಯಿಸಿ.16. Map Actual17. Map with Const. figures18. Map with const. figures & boundaries

ತಾರಾಪಟದ ನೆರವಿನಿಂದ ತಾರೆಗಳ ಸ್ಥಾನವನ್ನು ಖಗೋಳದಲ್ಲಿ ಗುರುತಿಸಲು ಬಲು ಸುಲಭವಾದ ಕ್ಷಿತಿಜೀಯ ಸ್ಥಾನನಿರ್ದೇಶಕ ವ್ಯವಸ್ಥೆಯನ್ನು (ಹರೈಸ್ನ್ ಕೋಆರ್ಡಿನಟ್ ಸಿಸ್ಟಮ್) ಉಪಯೋಗಿಸಬಹುದು, ವೀಕ್ಷಕನ ಸ್ಥಾನವನ್ನು ಆಧರಿಸಿರುವ ವ್ಯವಸ್ಥೆ ಇದು. ನೀವು ಉತ್ತರಾಭಿಮುಖಿಯಾಗಿ ನಿಂತಿರುವಾಗ ಎಡ ಭಾಗದಲ್ಲಿ ದಿಗಂತದಿಂದ ಕೊಂಚ ಮೇಲೆ ಉಜ್ವಲ ತಾರೆ ಗೋಚರಿಸುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಅದರ ಸ್ಥಾನವನ್ನು ಉಲ್ಲೇಖಿಸುವುದು ಹೇಗೆ? ಉತ್ತರಾಭಿಮುಖಿಗಳಾಗಿ ನಿಂತು ಪಶ್ಚಿಮ ದಿಕ್ಕಿಗೆ ಸುಮಾರು ಇಷ್ಟು ಡಿಗ್ರಿ ತಿರುಗಿ, ಸುಮಾರು ಇಷ್ಟು ಡಿಗ್ರಿ ಖಮಧ್ಯದತ್ತ ತಲೆ ಎತ್ತಿ ನೋಡಿ ಎಂದು ನಿರ್ದೇಶಿಸಬಹುದಲ್ಲವೆ? ಅನುಕ್ರಮವಾಗಿ ಇವು ಖಗೋಳ ವಿಜ್ಞಾನದ ಪರಿಭಾಷೆಯಲ್ಲಿ ದಿಗಂಶ ಅಥವಾ ಕ್ಷಿತಿಜಾಂಶ (ಆಸಿಮತ್) ಮತ್ತು ಉನ್ನತಿ (ಆಲ್ಟಿಟ್ಯೂಡ್) ಎಂಬ ಎರಡು ಸ್ಥಾನನಿರ್ದೇಶಕಗಳು. ಉತ್ತರ ದಿಗ್ಬಿಂದುವಿನಿಂದ ಆರಂಭಿಸಿ ಕ್ಷಿತಿಜದಗುಂಟ ಪೂರ್ವ-ದಕ್ಷಿಣ-ಪಶ್ಚಿಮ-ಉತ್ತರಾಭಿಮುಖವಾಗಿಯೇ ಕ್ಷಿತಿಜಾಂಶ ಅಳತೆಮಾಡುವುದು ಸರ್ವಮಾನ್ಯ. ಆದ್ದರಿಂದ ಈ ಮೊದಲೇ ಸೂಚಿಸಿದಂತೆ ಉತ್ತರಾಭಿಮುಖಿಗಳಾದ ನಿಮ್ಮ ಎಡ ಬಾಗದಲ್ಲಿ ತಾರೆಯ ಕ್ಷಿತಿಜಾಂಶ ಸುಮಾರು ೨೨೫ (ಉತ್ತರ ದಿಗ್ಬಿಂದುವಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಗ್ಬಿಂದುವಿಗೆ ೧೮೦, ತದನಂತರ ಸುಮಾರು  ೪೫. ಚಿತ್ರದಲ್ಲಿ ಕೆಂಪು ಗೆರೆ ಇದನ್ನು ಪ್ರತಿನಿಧಿಸುತ್ತದೆ), ಉನ್ನತಿ ಸುಮಾರು ೪೫ (ಚಿತ್ರದಲ್ಲಿ ಹಸಿರು ಗೆರೆ ಉದನ್ನು ಪ್ರತಿನಿಧಿಸುತ್ತದೆ). ದಿಗ್ಬಿಂದುಗಳ ನಡುವಿನ ಕೋನಾಂತರ ೯೦, ಖಮಧ್ಯದಿಂದ ತಾರೆಯ ಮೂಲಕ ಹಾದು ಹೋಗುವ ರೇಖೆ ಕ್ಷಿತಿಜವನ್ನು ಲಂಬವಾಗಿ ಸಂಧಿಸುತ್ತದೆ, ಈ ಬಿಂದುವಿಗೂ ಖಮಧ್ಯಕ್ಕೂ ಇರುವ ಕೋನಾಂತರ ೯೦ ಎಂಬುದು ತಿಳಿದಿದ್ದರೆ ಸಾಕು, ಕೋನಮಾಪಕ ಇಲ್ಲದೆ ಇದ್ದರೂ ಕೋನವನ್ನು ಅಂದಾಜು ಮಾಡಬಹುದು.19. Horizontal coordinate system

೧.೩ ವೀಕ್ಷಣಾ ವಿಧಿ ವಿಧಾನಗಳು

ತಾರೆಗಳನ್ನು ಗುರುತಿಸುವ ಹವ್ಯಾಸ ಬೆಳೆಸಿಕೊಳ್ಳಲೋಸುಗ ನೀವು ಕೆಲವು ವಿಧಿವಿಧಾನಗಳನ್ನು ಪಾಲಿಸಬೇಕು. ಅವು ಇಂತಿವೆ:

೧. ಈ ಮಾಲಿಕೆಯ ವಿಶಿಷ್ಟ ಸಂರಚನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಒದಗಿಸಿರುವ ಮಾಹಿತಿಯ ಪೂರ್ಣ ಲಾಭ ಪಡೆಯಲು ಇದು ಅನಿವಾರ್ಯ. ಸಂರಚನೆಯ ವೈಶಿಷ್ಟ್ಯಗಳ ಪರಿಚಯ ಮುಂದೆ ಮಾಡಿದೆ.

೨. ಮೋಡರಹಿತ ನಿರ್ಮಲ ಆಕಾಶ ಇರುವ ಯಾವುದೇ ರಾತ್ರಿಯಂದು ಕಾರ್ಯಾರಂಭ ಮಾಡಿ. ಕನಿಷ್ಠ ಪಕ್ಷ ತದನಂತರದ ೬-೭ ರಾತ್ರಿಗಳೂ ನಿಮ್ಮ ಕಲಿಕೆ ಮುಂದುವರಿಯಬೇಕು. ನವೆಂಬರ್ – ಮೇ ಮಾಸಗಳಲ್ಲಿ ಇಂಥ ರಾತ್ರಿಗಳು ಹೆಚ್ಚು ಇರುತ್ತವೆ.

೩. ಬೀದಿದೀಪಗಳ ಮತ್ತು ಮನೆ ದೀಪಗಳ ಬೆಳಕು ನಿಮ್ಮ ಮೇಲೆ ನೇರವಾಗಿ ಬೀಳದಂಥ, ಕಟ್ಟಡಗಳು, ಮರಗಳು ಅಥವ ಬೆಟ್ಟಗುಡ್ಡಗಳು ಆಕಾಶ ವೀಕ್ಷಣೆಗೆ ಅಡ್ಡಿ ಮಾಡದ ಸ್ಥಳ ಆಯ್ಕೆಮಾಡಿ. ಮನೆಯ ತಾರಸಿ, ವಿಶಾಲವಾದ ಉದ್ಯಾನವನ, ಶಾಲೆಯ ಆಟದ ಮೈದಾನ ಇವೇ ಮೊದಲಾದವು ನಗರವಾಸಿಗಳು ಆಯ್ಕೆ ಮಾಡಬಹುದಾದ ಸ್ಥಳಗಳು. ಗಿಡಮರಗಳು ಅಥವ ಸಮೀಪದ ಬೆಟ್ಟಗುಡ್ಡಗಳು ವೀಕ್ಷಣೆಗೆ ಅಡ್ಡಿ ಉಂಟುಮಾಡದ ಬಯಲು ಅಥವ ಗುಡ್ಡೆಯ ತುದಿ ಗ್ರಾಮವಾಸಿಗಳಿಗೆ ಪ್ರಶಸ್ತ.

೪. ಚಳಿಗಾಲವಾಗಿದ್ದರೆ ಬೆಚ್ಚನೆಯ ಉಡುಪು ಧರಿಸಿ. ಸೊಳ್ಳೆಗಳ ಕಾಟ ಇದ್ದರೆ ಯುಕ್ತ ನಿವಾರಣೋಪಾಯ ಸನ್ನದ್ಧರಾಗಿ, ಕತ್ತಲೆಯಲ್ಲಿ ತಾರಾಪಟವನ್ನು ಓದಲೋಸುಗ ಮಂದಪ್ರಕಾಶ ಬೀರುವ ಟಾರ್ಚ್‌ಲೈಟ್ ಮತ್ತು ವೀಕ್ಷಿಸಿದ ತಾರೆಗಳ ನಡುವಿನ ಕೋನಾಂತರ ಸರಿಸುಮಾರಾಗಿ ಅಳೆಯಲು ಒಂದು ಅಳತೆಪಟ್ಟಿ ಸಹಿತ ವೀಕ್ಷಣಾ ಸ್ಥಳಕ್ಕೆ ಹೋಗಿ. ವೀಕ್ಷಿಸಿದ್ದರ ವಿವರಗಳನ್ನು ದಾಖಲಿಸಲು ಒಂದು ಪೆನ್ ಮತ್ತು ಕಿರುಪುಸ್ತಕ ಒಯ್ಯುವುದು ಒಳ್ಳೆಯದು.

೫. ತಾರೆಗಳನ್ನು ಗುರುತಿಸಲು ಆರಂಭಿಸುವ ಮುನ್ನ ತಾರಾಪಟವನ್ನು ಅರ್ಥೈಸುವ ಕುಶಲತೆ ಬೆಳೆಸಿಕೊಳ್ಳಿ.

೬. ನೀವು ತಾರಾವೀಕ್ಷಣೆಗೆ ಆಯ್ಕೆ ಮಾಡಿದ ತಿಂಗಳಿನ ತಾರಾಪಟವನ್ನು ವೀಕ್ಷಣೆಗೆ ಮುನ್ನ ಅಭ್ಯಸಿಸಿ. ಸುಲಭವಾಗಿ ಗುರುತಿಸಬಹುದಾದ ತಾರೆ, ಪುಂಜಗಳ ಸ್ಥಾನ ಗಮನಿಸಿ, ಮನನ ಮಾಡಿ.

೭. ಆರಂಭಿಕ ಹಂತದಲ್ಲಿ ಮಾಲಿಕೆಯಲ್ಲಿ ಕೊಟ್ಟಿರುವ ಸೂಚನೆಯಂತೆ ವೀಕ್ಷಿಸಿ.

೮. ಈ ಮಾಲಿಕೆಯಲ್ಲಿ ನೀಡಿರುವ ತಾರಾಪಟಗಳಲ್ಲಿ ಸುಲಭಗೋಚರ ತಾರೆ ಅಥವ ಮತ್ತು ಪುಂಜಗಳ ಸ್ಥಾನ ಮತ್ತು ಎಲ್ಲ ರಾಶಿಗಳ ಸರಹದ್ದುಗಳನ್ನು ಮಾತ್ರ ಗುರುತಿಸಿದೆ. ಅನೂಹ್ಯ ದೂರದಲ್ಲಿ ಇರುವ ನೀಹಾರಿಕೆ ಮೊದಲಾದ ಆಕಾಶಕಾಯಗಳನ್ನು ಗುರುತಿಸಿಲ್ಲ. ಖಗೋಲದಲ್ಲಿ ಸಾಪೇಕ್ಷವಾಗಿ ಕ್ಷಿಪ್ರಗತಿಯಲ್ಲಿ ಚಲಿಸುವಂತೆ ತೋರುವ ಚಂದ್ರ ಹಾಗೂ ಸೌರಮಂಡಲದ ಗ್ರಹಗಳ ಸ್ಥಾನಗಳನ್ನೂ ಗುರುತಿಸಿದೆ.

೯. ತಾರಾಪಟಗಳು ಮೊದಲೇ ತಿಳಿಸಿದಂತೆ ನಿರ್ದಿಷ್ಟ ಸ್ಥಳ ಮತ್ತು ಸಮಯಕ್ಕೆ ಅನ್ವಯವಾಗುತ್ತವೆ. ನಿಮ್ಮ ಊರಿನ ರಾತ್ರಿಯ ಆಕಾಶವನ್ನು ಇವು ಯಥಾವತ್ತಾಗಿ ಬಿಂಬಿಸದಿದ್ದರೂ ಆಕಾಶದಲ್ಲಿ ತಾರೆಗಳ ಸಾಪೇಕ್ಷ ಸ್ಥಾನ ಹೆಚ್ಚುಕಮ್ಮಿ ಸ್ಥಿರವಾಗಿ ಇರುವುದರಿಂದ ಈ ಪಟಗಳನ್ನು ಉಪಯೋಗಿಸಲು ಸಾಧ್ಯ. (ಭಾರತ ಸರ್ಕಾರ ಪ್ರಾಯೋಜಿತ ಈ ತಾಣದಲ್ಲಿ ಅಥವ ಖಾಸಗಿ ಸಂಘಟನೆ ಪ್ರಾಯೋಜಿತ ಈ ತಾಣದಲ್ಲಿ ಲಭ್ಯವಿರುವ ತಂತ್ರಾಶದ ನೆರವಿನಿಂದ ನೀವು ವೀಕ್ಷಣೆ ಮಾಡಲು ಆರಂಭಿಸುವ ಸಮಯದಲ್ಲಿ ನಿಮ್ಮ ಊರಿನ ಅಥವ ಅತ್ಯಂತ ಸಮೀಪದ ಊರಿನ ಆಕಾಶವನ್ನು ಪ್ರತಿನಿಧಿಸುವ ತಾರಾಪಟ ಪಡೆಯಬಹುದು) ಪಟದಲ್ಲಿ ಇರುವ ಒಂದೆರಡು ತಾರೆ ಅಥವ ಪುಂಜಗಳನ್ನು ನಿಮ್ಮ ಊರಿನ ಆಕಾಶದಲ್ಲಿ ಗುರುತಿಸಿ.  ಅವುಗಳ ಸ್ಥಾನಕ್ಕೂ ಈ ಪಟಗಳಲ್ಲಿ ಅವುಗಳು ಇರುವ ಸ್ಥಾನಕ್ಕೂ ಇರುವ ವ್ಯತ್ಯಾಸ ಗಮನಿಸಿ. ಈ ತಾರಾಪಟಗಳನ್ನು ಉಪಯೋಗಿಸಿ ನಿಮ್ಮ ಊರಿನಲ್ಲಿ ತಾರೆ ಅಥವ ಪುಂಜಗಳನ್ನು ಗುರುತಿಸುವುದು ಹೇಗೆ ಎಂಬುದು ನಿಮಗೇ ತಿಳಿಯುತ್ತದೆ. ತಾರಾಪಟದಲ್ಲಿ ಸೂಚಿತ ಸಮಯಕ್ಕಿಂತ ಮೊದಲೇ ವೀಕ್ಷಿಸಿದಾಗ ರಾಶಿಗಳು ಪಟದಲ್ಲಿ ಸೂಚಿಸಿದ ಸ್ಥಳಕ್ಕಿಂತ ಪೂರ್ವಕ್ಕೂ ನಂತರ ವೀಕ್ಷಿಸಿದಾಗ ರಾಶಿಗಳು ಪಟದಲ್ಲಿ ಸೂಚಿಸಿದ ಸ್ಥಳಕ್ಕಿಂತ ಪಶ್ಚಿಮಕ್ಕೂ ಇರುತ್ತವೆ.

೧೦.  ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ – ಈ ಮುಖ್ಯ ದಿಗ್ಬಿಂದುಗಳ ಪೈಕಿ ಯಾವುದಾದರೂ ಒಂದರಿಂದ ದಿಗಂತದಗುಂಟ ಎಷ್ಟು ದೂರ ಕ್ರಮಿಸಿ ಬಳಿಕ ಖಮಧ್ಯದತ್ತ ಎಷ್ಟು ದೂರ ಮೇಲೇರಿದರೆ ಅಪೇಕ್ಷಿತ ತಾರೆ ಅಥವ ಪುಂಜ ಸಿಕ್ಕುತ್ತದೆ ಎಂಬುದನ್ನು ತಾರಾಪಟದ ನೆರವಿನಿಂದ ಅಂದಾಜು ಮಾಡುವ ಕುಶಲತೆ ಬೆಳೆಸಿಕೊಳ್ಳಿ.

೧೧. ಬರಿಗಣ್ಣಿನಿಂದ ಗುರುತಿಸಬಹುದಾದ ತಾರೆಗಳನ್ನು, ಪುಂಜಗಳನ್ನು ಮತ್ತು ಗ್ರಹಗಳನ್ನು ಗುರುತಿಸಲು ಮೊದಲು ಕಲಿಯಿರಿ. ಅವುಗಳ ಪೈಕಿ ಸುಲಭವಾಗಿ ಗುರುತಿಸಬಹುದಾದವು, ಹೆಚ್ಚು ಪ್ರಕಾಶಮಾನವಾದವು, ಹೆಚ್ಚು ಕಮ್ಮಿ ಖಮಧ್ಯದ ಸಮೀಪ ಇರುವವು, ಚಂದ್ರನ ಆಸುಪಾಸಿನಲ್ಲಿ ಇರುವವು, ದಿಗ್ಬಿಂದುಗಳ ಸಮೀಪ ಇರುವವು, ರಾಶಿಚಕ್ರದಲ್ಲಿ ಇರುವವು ಇವುಗಳ ಪೈಕಿ ನಿಮಗೆ ಸುಲಭವಾದವನ್ನು ಮೊದಲು ಗುರುತಿಸಿ. ಮೊದಲು ಗುರುತಿಸಿದ ತಾರೆ ಅಥವ ಪುಂಜವನ್ನು ಮಾರ್ಗದರ್ಶಿಯಾಗಿ ಇಟ್ಟುಕೊಂಡು ಉಳಿದವನ್ನು ಗುರುತಿಸಿ.

೧೨. ತಾರಾಪಟದಲ್ಲಿ ಇರುವ ಎಲ್ಲ ರಾಶಿಗಳನ್ನು ಗುರುತಿಸಲು ಸಾಧ್ಯವಾಗದಿದ್ದರೆ ನಿರಾಶರಾಗಬೇಡಿ. ಪ್ರಧಾನ ರಾಶಿಗಳನ್ನು ಗುರುತಿಸಿದ್ದೇ ಒಂದು ಸಾಧನೆ ಎಂದು ಆನಂದಿಸಿ. ವಾಯುಮಂಡಲದ ಏರುಪೇರುಗಳಿಂದ, ಸುತ್ತಲಿನ ಬೆಳಕಿನ ಮಾಲಿನ್ಯದಿಂದ ಎಲ್ಲ ತಾರೆಗಳು ಗೋಚರಿಸದೆಯೂ ಇರಬಹುದು. ತಾರಾಪಟವನ್ನು ನಿಮ್ಮ ಊರಿಗೆ ಅನ್ವಯವಾಗುವಂತೆ ರಚಿಸದೇ ಇರುವುದರಿಂದ ಬಾನಂಚಿನಲ್ಲಿ ಇರುವ ರಾಶಿಗಳು ಗೋಚರಿಸದಿರುವ ಸಾಧ್ಯತೆಯೂ ಇದೆ. ಒಂದೆರಡು ತಾಸು ಹಿಂದೆ ಅಥವಾ ಮುಂದೆ ಅವೂ ಗೋಚರಿಸುತ್ತವೆ. ತಾರಾಪಟಗಳಲ್ಲಿ ತೋರಿಸಿದ ಎಲ್ಲ ರಾಶಿಗಳನ್ನು ಅಥವ ತಾರಾಪುಂಜಗಳನ್ನು ಯಾವುದೇ ಕಾರಣಕ್ಕೆ ತತ್ಸಂಬಂಧಿತ ತಿಂಗಳುಗಳಲ್ಲಿ ಗುರುತಿಸಲಾಗದಿದ್ದರೆ ಧೃತಿಗೆಡದಿರಿ. ಸತತ ಪ್ರಯತ್ನದಿಂದ ಬಹಳಷ್ಟನ್ನು ಗುರುತಿಸಲು ಕಲಿಯುವುದು ಖಚಿತ.

೧೩. ಪಂಚಾಂಗಗಳಲ್ಲಿ ಸೂರ್ಯ, ಚಂದ್ರ, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಯಾವ ದಿನದಲ್ಲಿ ಯಾವ ರಾಶಿಯಲ್ಲಿ, ಇರುತ್ತವೆ ಎಂಬ ಮಾಹಿತಿ ಇರುತ್ತದೆ. ಅಪೇಕ್ಷಿತ ದಿನದಂದು ಚಂದ್ರ ಇರುವ ರಾಶಿ ಯಾವುದು ಎಂಬ ಮಾಹಿತಿ ಪಡೆದು ಅದರ ನೆರವಿನಿಂದ ಆ ತಾರಾಪುಂಜವನ್ನು ಆಕಾಶದಲ್ಲಿ ಗುರುತಿಸಲೂ ಬಹುದು. ತದನಂತರ ತಾರಾಪಟದ ನೆರವಿನಿಂದ ಆಸುಪಾಸಿನ ರಾಶಿಗಳನ್ನು ಗುರುತಿಸಲೂಬಹುದು. ‘ಬೆಳ್ಳಿ’, ‘ಮುಂಜಾನೆಯ ತಾರೆ’, ‘ಮುಸ್ಸಂಜೆಯ ತಾರೆ’ ಎಂದು ಗ್ರಾಮೀಣ ಜನತೆ ಗುರುತಿಸುತ್ತಿರುವುದು ವಾಸ್ತವವಾಗಿ ಶುಕ್ರ ಗ್ರಹ.

೧೪. ಕೆಲವು ದಿನ ಸೂರ್ಯೋದಯಕ್ಕೆ ಮುನ್ನ ಪೂರ್ವಾಕಾಶದಲ್ಲಿಯೂ ಕೆಲವು ದಿನ ಸೂರ್ಯಾಸ್ತದ ನಂತರ ಪಶ್ಚಿಮಾಕಾಶದಲ್ಲಿಯೂ ಇದು ಉಜ್ವಲವಾಗಿ ಹೊಳೆಯುತ್ತಿರುವುದರಿಂದ ಗುರುತಿಸುವುದು ಸುಲಭ. ಇದು ಇರುವ ರಾಶಿಯನ್ನು ಪಂಚಾಂಗದಿಂದ ತಿಳಿದು ಬಳಿಕ ತಾರಾಪಟದ ನೆರವಿನಿಂದ ಆಸುಪಾಸಿನ ಇತರ ರಾಶಿಗಳನ್ನು ಗುರುತಿಸಲೂಬಹುದು. ಪಂಚಾಂಗದ ನೆರವಿನಿಂದ ಗುರು, ಶನಿ ಮತ್ತು ಮಂಗಳ ಗ್ರಹಗಳು ಇರುವ ರಾಶಿಯ ಮಾಹಿತಿ ಪಡೆದು ತದನಂತರ ಆ ರಾಶಿಗಳನ್ನು ರಾಶಿಪಟದ ನೆರವಿನಿಂದ ಆಕಾಶದಲ್ಲಿ ಗುರುತಿಸಿ ಗ್ರಹಗಳನ್ನೂ ಗುರುತಿಸಬಹುದು.

೧೫. ನೀವು ‘ಇಂದು’ ನೋಡುವ ತಾರೆಗಳು ವಾಸ್ತವವಾಗಿ ‘ಇಂದಿನವು’ ಅಲ್ಲ ಎಂಬ ತಥ್ಯದ ಅರಿವು ಸದಾ ನಿಮ್ಮಲ್ಲಿ ಜಾಗೃತವಾಗಿರಲಿ. ‘ಈಗ’ ನೀವು ನೋಡುತ್ತಿರುವುದು ಸುಮಾರು ೮ ನಿಮಿಷಗಳಷ್ಟು ಹಿಂದೆ ಇದ್ದ ಸೂರ್ಯನನ್ನು!

೧.೪ ಪುಸ್ತಕ ಪರಿಚಯ

ತಾರಾವೀಕ್ಷಣೆಯನ್ನು ಆರಂಭಿಸುವ ಮುನ್ನ ಈ ಮಾಲಿಕೆಯ ವಿಶಿಷ್ಟ ಸಂರಚನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸ ಬೇಕಾದದ್ದು ಒದಗಿಸಿರುವ ಮಾಹಿತಿಯ ಪೂರ್ಣ ಲಾಭ ಪಡೆಯಲು ಅನಿವಾರ್ಯ ಎಂದು ಈ ಮೊದಲೇ ಹೇಳಿದೆಯಲ್ಲವೇ? ಸಂರಚನೆಯ ವೈಶಿಷ್ಟ್ಯಗಳು ಇಂತಿವೆ:

೧. ವಿಷಯವನ್ನು ನಾಲ್ಕು ವಿಭಾಗಗಳಾಗಿ ವಿಭಜಿಸಿದೆ. ತಾರಾವೀಕ್ಷಣೆಗೆ ಮುನ್ನ ತಿಳಿದಿರಬೇಕಾದ ಜ್ಞಾನಾಂಶಗಳನ್ನೂ ಅನುಸರಿಸಬೇಕಾದ ವಿಧಿವಿಧಾನಗಳನ್ನೂ ತಿಳಿಸುವ ‘ಪೂರ್ವಸಿದ್ಧತೆ’ ಮೊದಲನೇ ವಿಭಾಗ. ವೀಕ್ಷಣೆಗೆ ಮಾರ್ಗದರ್ಶನ ಮಾಡುವ ‘ವೀಕ್ಷಣಾ ಮಾರ್ಗದರ್ಶಿ’ ಎರಡನೇ ವಿಭಾಗ. ರಾಶಿಗಳಿಗೆ ನಾಮಕರಣ ಮಾಡಲು ಅನುಸರಿಸಿದ ತಂತ್ರಗಳನ್ನೂ ಕೆಲವು ರಾಶಿಸಂಬಂಧಿತ ಮಾನವಕಲ್ಪಿತ ಕಥೆಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ‘ರಾಶಿನಾಮ ರಹಸ್ಯ’ ಮೂರನೇ ವಿಭಾಗ. ಹವ್ಯಾಸ ಮುಂದುವರಿಸಲು ಇಚ್ಛಿಸುವವರಿಗಾಗಿ ಕೆಲವು ಖಗೋಳವೈಜ್ಞಾನಿಕ ಜ್ಞಾನಾಂಶಗಳನ್ನು ವಿವರಿಸುತ್ತದೆ ‘ಸಿದ್ಧಾಂತ ಪುರವಣಿ’ ವಿಭಾಗ. ವೀಕ್ಷಣೆಯನ್ನು ಅನುಕೂಲಿಸಬಲ್ಲ ಉಪಯುಕ್ತ ತಾಂತ್ರಿಕ ಮಾಹಿತಿ ಒದಗಿಸುವ ‘ಅನುಬಂಧಗಳು’ ನಾಲ್ಕನೇ ವಿಭಾಗ. ಕೊನೆಯದಾಗಿ ವಿಷಯ-ಪುಟ ಸೂಚಿ ಇದೆ.

೨. ವೀಕ್ಷಣಾ ಮಾರ್ಗದರ್ಶಿ ವಿಭಾಗದ ಸಂರಚನೆ ಇಂತಿದೆ:

  • ವೀಕ್ಷಣೆಗೆ ಅಗತ್ಯವಾದ ಸೂಚನೆಗಳನ್ನು ಜನವರಿಯಿಂದ ಆರಂಭಿಸಿ ಮಾಹೆವಾರು ಸಂಘಟಿಸಿದೆ.
  • ಪ್ರತೀ ತಿಂಗಳ ವೀಕ್ಷಣಾ ಮಾರ್ಗದರ್ಶಿಯಲ್ಲಿ ಆ ತಿಂಗಳಿಗೆ ಅನ್ವಯಿಸುವ ತಾರಾಪಟ ಇದೆ. ಈ ಮಾಲಿಕೆಯಲ್ಲಿ ಕೊಟ್ಟಿರುವ ತಾರಾಪಟಗಳನ್ನು ಅಕ್ಷಾಂಶ ೧೫ 37” ರೇಖಾಂಶ ೭೬ ೧೪” ಸಮುದ್ರಮಟ್ಟದಿಂದ ೧೦೦೦ ಮೀ ಎತ್ತರದಲ್ಲಿ ಇರುವ ಕರ್ನಾಟಕದ ಕಾಲ್ಪನಿಕ ಸ್ಥಳದಲ್ಲಿ ೨೦೧೪ ನೇ ಇಸವಿಯಲ್ಲಿ ನಮೂದಿಸಿದ ತಿಂಗಳ ೧೫ ನೇ ದಿನಾಂಕ ರಾತ್ರಿ ೮ ಗಂಟೆಗೆ ಅನ್ವಯವಾಗುವಂತೆ ರಚಿಸಿದೆ. ಈ ವಿಭಾಗದಲ್ಲಿ ಇರುವ ತಾರಾಪಟಗಳನ್ನೂ ತಾರಾಪುಂಜ ಮತ್ತಿತರ ಚಿತ್ರಗಳನ್ನೂ ಸೈಬರ್‌ ಸ್ಕೈ ೫ ಎಂಬ ಖರೀದಿಸಿದ ತಂತ್ರಾಶದ ನೆರವಿನಿಂದ ರಚಿಸಲಾಗಿದೆ. (ಸೈಬರ್‌ ಸ್ಕೈ ಜಾಲತಾಣಕ್ಕೆ ಭೇಟಿ ನೀಡಬಯಸುವವರು ಇಲ್ಲಿ ಕ್ಲಿಕ್ಕಿಸಿ) ಇವನ್ನು ಕರ್ನಾಟಕದಾದ್ಯಂತ ಉಪಯೋಗಿಸಬಹುದಾದರೂ ನಿಮ್ಮ ಊರಿನ ಆಕಾಶವನ್ನು ಇದು ಯಥಾವತ್ತಾಗಿ ಬಿಂಬಿಸುವುದಿಲ್ಲ ಎಂಬ ತಥ್ಯ ನೆನಪಿರಲಿ.
  • ಪುಂಜದ ರೇಖಾ ಚಿತ್ರಗಳನ್ನು ಮತ್ತು ರಾಶಿಯ ಎಲ್ಲೆಗಳನ್ನು ಮಾತ್ರ ತಾರಾಪಟಗಳಲ್ಲಿ ತೋರಿಸಿದೆ.
  • ಜನವರಿ ತಿಂಗಳಿನಲ್ಲಿ ವೀಕ್ಷಿಸಬಹುದಾದ ಎಲ್ಲ ರಾಶಿಗಳನ್ನು ಅಥವ ಪುಂಜಗಳನ್ನು ಗುರುತಿಸಲು ಅನುಸರಿಸಬೇಕಾದ ಕ್ರಮವನ್ನು ತಿಳಿಸಿದೆ. ತದನಂತರದ ತಿಂಗಳುಗಳಲ್ಲಿ ಆಯಾ ತಿಂಗಳುಗಳಲ್ಲಿ ಗೋಚರಿಸುವ ಹೊಸ ರಾಶಿಗಳನ್ನು ಗುರುತಿಸಲು ಅಗತ್ಯವಾದ ಸೂಚನೆಗಳನ್ನು ಮಾತ್ರ ಕೊಟ್ಟಿದೆ. ಉಳಿದ ರಾಶಿಗಳನ್ನು ಗುರುತಿಸಲು ಅಗತ್ಯವಾದ ಸೂಚನೆಗಳು ಯಾವ ತಿಂಗಳಿನ ಮಾರ್ಗದರ್ಶಿಯಲ್ಲಿ ಲಭ್ಯ ಎಂಬುದನ್ನು ತಿಳಿಸಿದೆ.
  • ಪ್ರತೀ ರಾಶಿಗೆ ಸಂಬಂಧಿಸಿದಂತೆ ರಾಶಿಯ ಹೆಸರನ್ನು ಮೊದಲು ಕನ್ನಡದಲ್ಲಿಯೂ ತದನಂತರ ಆವರಣ ಚಿಹ್ನೆಯ ಒಳಗೆ ಅಕರಾದಿಯಾಗಿ ಕನ್ನಡದ ರಾಶಿನಾಮಗಳನ್ನು ಅಳವಡಿಸಿದ ಪಟ್ಟಿಯಲ್ಲಿ ರಾಶಿಯ ಕ್ರಮ ಸಂಖ್ಯೆ ಎಷ್ಟು ಎಂಬುದನ್ನು. ಇಂಗ್ಲಿಷ್ ಹೆಸರು ಮತ್ತು ಚದರ ಡಿಗ್ರಿಗಳಲ್ಲಿ  ವಿಸ್ತೀರ್ಣವನ್ನು ‘ಚ ಡಿಗ್ರಿ’ ಎಂಬ ಸಂಕ್ಷೇಪಣದೊಂದಿಗೂ ನೀಡಿದೆ.
  • ಪ್ರತೀ ರಾಶಿಗೆ ಸಂಬಂಧಿಸಿದಂತೆ ಬರಿಗಣ್ಣಿನಿಂದ ಗುರುತಿಸಬಹುದಾದ ಕೆಲವು ಪುಂಜಗಳು ಅಥವ ತಾರೆಗಳನ್ನು ಗುರುತಿಸಲು ಮಾರ್ಗದರ್ಶೀ ಸೂಚನೆ ಇದೆ. ತದನಂತರ ಪುಂಜದ ಪ್ರಧಾನ ತಾರೆಗಳಿಗೆ ಸಂಬಂಧಿಸಿದಂತೆ ಅವುಗಳ ಬೇಯರ್ ಪದ್ಧತಿಯ ಖಗೋಳವ್ಶೆಜ್ಞಾನಿಕ ಹೆಸರು, ತೋರಿಕೆಯ ಉಜ್ವಲತಾಂಕ (ತೋಉ) ಮತ್ತು ಭೂಮಿಯಿಂದ ಎಷ್ಟು ಜ್ಯೋತಿರ್ವರ್ಷ (ಜ್ಯೋವ) ದೂರದಲ್ಲಿದೆ ಮಾಹಿತಿ ಇದೆ. ಪುಂಜದ ಎಲ್ಲ ತಾರೆಗಳ ಹೆಸರನ್ನೇ ಆಗಲಿ ಮಾಹಿತಿಯನ್ನೇ ಆಗಲಿ ನೀಡಿಲ್ಲ. ಖಗೋಳವಿಜ್ಞಾನಿಗಳು ಎಲ್ಲ ತಾರೆಗಳಿಗೆ ನಾಮಕರಣ ಮಾಡಿದ್ದರೂ ಆರಂಭಿಕ ಹಂತದ ಹವ್ಯಾಸಿಗಳು ಇವನ್ನು ಕಲಿಯುವುದು ಅನಗತ್ಯ. ಕೆಲವು ತಾರೆಗಳಿಗೆ ಇರುವ ಜನಪ್ರಿಯ ಭಾರತೀಯ ಅಥವ ಅನ್ಯ ಹೆಸರುಗಳು ಮತ್ತು ಭಾರತೀಯ ಜ್ಯೋತಿಶ್ಶಾಸ್ತ್ರೀಯ ‘ನಕ್ಷತ್ರ’ ಸೂಚಕ ತಾರೆಗಳು ಯಾವುವು ಎಂಬ ಸಂದರ್ಭೋಚಿತ ಮಾಹಿತಿಯೂ ಇದೆ. ತಾರೆಗಳ ಖಗೋಳವೈಜ್ಞಾನಿಕ ಹೆಸರನ್ನು ಓದಲು ನೆರವು ನೀಡಲೋಸುಗ ಅನುಬಂಧದಲ್ಲಿ ಗ್ರೀಕ್ ವರ್ಣಮಾಲೆ ಮತ್ತು ಅದರ ಉಚ್ಚಾರಣೆಯ ಮಾಹಿತಿ ಅನುಬಂಧದಲ್ಲಿ ಇದೆ.
  • ಉತ್ತರ ದಿಕ್ಕಿನ ಸರಹದ್ದಿನಿಂದ ಆರಂಭಿಸಿ ಪಶ್ಚಿಮ-ದಕ್ಷಿಣ-ಪೂರ್ವಾಭಿಮುಖವಾಗಿ ಸರಹದ್ದಿಗೆ ತಾಗಿಕೊಂಡಿರುವ ರಾಶಿಗಳ ಹೆಸರುಗಳನ್ನೂ ರಾಶಿಯ ಪರಿಚಯಾತ್ಮಕ ಮಾಹಿತಿಯೊಂದಿಗೆ ಉಲ್ಲೇಖಿಸಿದೆ. ರಾಶಿಗಳನ್ನು ಗುರುತಿಸಲು ನೆರವಾಗುವ ಕೈಕಂಬದಂತೆ ಈ ಮಾಹಿತಿಯನ್ನು ಉಪಯೋಗಿಸಬಹುದು.

೩. ‘ರಾಶಿನಾಮ ರಹಸ್ಯ’ ವಿಭಾಗದಲ್ಲಿ ರಾಶಿಯ ಕನ್ನಡ ಮತ್ತು ಇಂಗ್ಲಿಷ್ ಹೆಸರುಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಸಂಕ್ಷೇಪಿಸಿದ ಕುತೂಹಲಜನಕ ದಂತಕಥೆಗಳಿವೆ.

೪. ‘ಸಿದ್ಧಾಂತ ಪುರವಣಿ’ ವಿಭಾಗದಲ್ಲಿ ಕೆಲವು ಖಗೋಳವೈಜ್ಞಾನಿಕ ಪರಿಕಲ್ಪನೆಗಳ ಸಂಕ್ಷಿಪ್ತ ವಿವರಣೆ ಇದೆ. ತಾರಾವೀಕ್ಷಣೆ ಹವ್ಯಾಸವನ್ನು ವೈಜ್ಞಾನಿಕವಾಗಿ ಮುಂದುವರಿಸಲಿಚ್ಛಿಸುವವರಿಗೆ ಇದು ನೆರವಾಗುತ್ತದೆ.

೫. ಅನುಬಂಧಗಳಲ್ಲಿ ಸಂದರ್ಭೋಚಿತವಾಗಿ ಉಪಯೋಗಿಸಬಹುದಾದ ಅನೇಕ ಮಾಹಿತಿ ಇದೆ. ಈ ವಿಭಾಗದ ಮೇಲೆ ಒಮ್ಮೆಯಾದರೂ ಕಣ್ಣಾಡಿಸಲು ಮರೆಯದಿರಿ.

ಕೊನೆಯದಾಗಿ ನೆನಪಿಡಿ-

‘ಉಪಯುಕ್ತ’ ಎಂಬ ಕಾರಣಕ್ಕಾಗಿ ತಾರಾವಲೋಕನದಲ್ಲಿ ತೊಡಗಿಸಿಕೊಳ್ಳಬೇಡಿ, ಅದರ ‘ಬೆರಗುಗೊಳಿಸುವ ಸೌಂದರ್ಯ’ ಅನುಭವಿಸಲೋಸುಗ ತೊಡಗಿಸಿಕೊಳ್ಳಿ. ಈ ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿಮ್ಮದಾಗುತ್ತದೆಯೇ ಎಂಬುದು ಈ ಕುರಿತು ನಿಮಗಿರುವ ಆಂತರಿಕ ತುಡಿತದ ತೀವ್ರತೆಯನ್ನು ಅವಲಂಬಿಸಿದೆಯೇ ವಿನಾ ಬಾಹ್ಯ ಪರಿಕರಗಳನ್ನಲ್ಲ.

(ಮುಂದುವರಿಯುತ್ತದೆ)

Advertisements
This entry was posted in ತಾರಾವಲೋಕನ and tagged , , , , , , , , , , , , , , , , , , , , , . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s