ತಾರಾವಲೋಕನ ೧

Untitled

ಇಂತೊಂದು ಲೇಖನ ಮಾಲಿಕೆಯನ್ನು ವಿ-ಮಾಧ್ಯಮದಲ್ಲಿ ಪ್ರಕಟಿಸುತ್ತಿರುವುದರ ಹಿನ್ನೆಲೆ –

ತಾರಾವಲೋಕನ – ಇದು ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇರುವವರಿಗಾಗಿ ೨೦೦೯ ರಲ್ಲಿ ನಾನು ಕನ್ನಡದಲ್ಲಿ ಬರೆದ ಮಾರ್ಗದರ್ಶೀ ಪುಸ್ತಕ. ಇಂಥದ್ದೊಂದು ಪುಸ್ತಕ ಬರೆಯಲು ಕಾರಣ – ದಿ. ಶ್ರೀ ಜಿ ಟಿ ನಾರಾಯಣ ರಾವ್. ಹೇಗೆ ಎಂಬುದನ್ನು ತಿಳಿಸುತ್ತದೆ ಮುದ್ರಿತ ಪುಸ್ತಕದಲ್ಲಿ ಪೀಠಿಕಾ ರೂಪದಲ್ಲಿ ನಾನು ಬರೆದಿದ್ದ ‘ಅರ್ಪಣೆ’ ಹೇಳಿಕೆ ಮತ್ತು ‘ನಿವೇದನ’. ಅದರ ಯಥಾವತ್ತು ನಕಲು ಇಲ್ಲಿದೆ, ಓದಿ.

***************************

ಅರ್ಪಣೆ

Untitled-2 copy

ಈ ಕೃತಿ ರಚನೆಗೆ ನನ್ನನ್ನು ಪ್ರೇರೇಪಿಸಿ, ಅಗತ್ಯವಾದ ಆಕರ ಗ್ರಂಥಗಳನ್ನೂ ತಮ್ಮ ಕೃತಿಗಳಲ್ಲಿ ಇರುವ ವಿಷಯಗಳಲ್ಲಿ ನನಗೆ

ಉಚಿತ ಅನ್ನಿಸಿದ್ದನ್ನು ಯಥಾವತ್ತಾಗಿ ‘ನಕಲು’ ಮಾಡಲು ಅನುಮತಿಯನ್ನೂ ನೀಡಿ, ಪ್ರಗತಿಯನ್ನು ಗಮನಿಸುತ್ತಿದ್ದು, ಕೃತಿ ಅನಾವರಣಗೊಳ್ಳುವ ಮೊದಲೇ ಜೀವನ ಪಯಣ ಮುಗಿಸಿದ ಪ್ರಾತಃಸ್ಮರಣೀಯ ಮಾರ್ಗದರ್ಶಿ, ಗಣಿತದ ಗುರು ಹಾಗೂ ಬಂಧು

ಜಿ ಟಿ ಎನ್‌

ಅವರಿಗೆ

************************

ನಿವೇದನ (ಮುದ್ರಿತ ಪುಸ್ತಕದಲ್ಲಿ ಇರುವಂತೆ)

 

ತಾರಾವಲೋಕನ ನಾನು ಬರೆದದ್ದಾದರೂ ಏಕೆ?

 

ಫೆಬ್ರವರಿ 2008 ರ ಒಂದು ದಿನ. ಸಂಜೆಯ ವಾಕಿಂಗ್ ಮುಗಿಸಿ ಶ್ರೀ ಜಿ ಟಿ ನಾರಾಯಣ ರಾವ್ ಅವರ ಮನೆ ಎದುರಿನ ಮಾರ್ಗವಾಗಿ ನನ್ನ ಮನೆಗೆ ಹಿಂದಿರುಗುತ್ತಿದ್ದೆ. ಮನೆಯ ಹೊರಗೆ ಇದ್ದ ಶ್ರೀಯುತರು ನನ್ನನ್ನು ಕಂಡೊಡನೆ ಮನೆಯೊಳಕ್ಕೆ ಕರೆದೊಯ್ದು ಮೊದಲು ತುಸು ಕಾಲ ಲೋಕಾಭಿರಾಮವಾಗಿ ಮಾತನಾಡಿ, ಬಳಿಕ ಅನಿರೀಕ್ಷಿತ ಪ್ರಸ್ತಾವನೆಯೊಂದನ್ನು ನನ್ನ ಮುಂದಿಟ್ಟರು.  ಅದರ ತಿರುಳು ಇಷ್ಟು: ತಾರಾ ವೀಕ್ಷಣೆಗೆ ಸಂಬಂಧಿಸಿದಂತೆ ತಾವು ಬರೆದಿದ್ದ ಮೂರು ಕೃತಿಗಳ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಬೇಡಿಕೆ ಇದೆ. ಪರಿಷ್ಕರಿಸಿ ಕೊಟ್ಟರೆ ಪ್ರಕಟಿಸುತ್ತೇನೆ ಅಂದಿದ್ದಾನೆ ಮಗ ಅಶೋಕ. ಪುನಃ ಅದನ್ನು ಪರಿಷ್ಕರಿಸಿ ಬರೆಯುವ ಚೈತನ್ಯ ನನಗಿಲ್ಲ. ಆ ಎಲ್ಲ ಪುಸ್ತಕಗಳ ಪ್ರತಿಗಳನ್ನು ನಿನಗೆ ಕೊಡುತ್ತೇನೆ. ಅವುಗಳಲ್ಲಿ ಇರುವ ಮಾಹಿತಿಯಲ್ಲಿ ಉಚಿತ ಅನ್ನಿಸಿದ್ದನ್ನು ಹಾಗೆಯೇ ಇಟ್ಟುಕೊಂಡಾದರೂ ಸರಿ. ಪರಿಷ್ಕರಿಸಿದರೂ ಅಡ್ಡಿ ಇಲ್ಲ. ಹೊಸ ಮಾಹಿತಿ ಸೇರಿಸಿದರೂ ಅಭ್ಯಂತರವಿಲ್ಲ. ನಿನಗೆ ಸರಿ ಎಂದು ಕಂಡ ರೀತಿಯಲ್ಲಿ ಪುಸ್ತಕ ಬರೆಯಬೇಕು. ನನ್ನಿಂದ ಬೇಕಾದ ನೆರವು ಪಡೆಯಬಹುದು. ಶ್ರೀಯುತರು ಸ್ನಾತಕ ಪದವಿ ತರಗತಿಗಳಲ್ಲಿ ನನಗೆ ಗಣಿತ, ವಿಶೇಷತಃ ಖಗೋಳವಿಜ್ಞಾನ ಕಲಿಸಿದವರು. ತದನಂತರ ವಿಜ್ಞಾನ ಮತ್ತು ವಿಜ್ಞಾನೇತರ ವಿಷಯ ಸಂಬಂಧಿತ ಪುಸ್ತಕಗಳನ್ನೂ ಲೇಖನಗಳನ್ನೂ ಬರೆಯುವಾಗ ಸಮಯೋಚಿತ ಸಲಹೆ ಮಾರ್ಗದರ್ಶನ ನೀಡಿದವರು. ಕನ್ನಡ ವಿಶ್ವಕೋಶದ ಕೊನೆಯ ಸಂಪುಟಕ್ಕೆ ವಿಜ್ಞಾನ ಸಂಬಂಧಿತ ವಿಷಯಗಳ ಗೌರವ ಸಂಪಾದಕನಾಗಿ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಒದಗಿಸಿ ಕೊಟ್ಟವರು, ಬಂಧುಗಳು. ತಾವು ನಿರ್ಧರಿಸಿದ್ದನ್ನು ಸಾಧಿಸದೇ ಬಿಡುವವರು ಜಿ ಟಿ ಎನ್ ಅಲ್ಲ ಎಂದು ತಿಳಿದಿದ್ದರೂ ಈ ಕಾರ್ಯ ನಿಭಾಯಿಸಲು ಅಗತ್ಯವಾದ ವಿಷಯ ಜ್ಞಾನ ನನಗಿಲ್ಲ ಎಂಬ ಅರ್ಧಸತ್ಯವನ್ನು ವಿವರಿಸಿ ನುಣುಚಿಕೊಳ್ಳಲು ವಿಫಲ ಪ್ರಯತ್ನ ಮಾಡಿದ್ದಾಯಿತು. ಜನಸಾಮಾನ್ಯರಲ್ಲಿ ವ್ಶೆಜ್ಞಾನಿಕ  ವಿಚಾರಧಾರೆಯನ್ನು ಜನಪ್ರಿಯಗೊಳಿಸಲೋಸುಗ ಬಲು ಹಿಂದೆ ನಾನು ಸಂಘಟಿಸಿದ್ದ ತಾರೆಗಳನ್ನು ಗುರುತಿಸಲು ಕಲಿಯೋಣ ಎಂಬ ಕಾರ್ಯಕ್ರಮ ಯಶಸ್ವಿಯಾದದ್ದನ್ನು ನೆನಪಿಸಿ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿದರು. ಪುಸ್ತಕರಚನೆ ಇಬ್ಬರ ಜಂಟಿ ಜವಾಬ್ದಾರಿ. ನನಗೆ ತಿಳಿದಿದ್ದನ್ನು ನನಗೆ ಸರಿ ತೋಚಿದಂತೆ ಬರೆಯುವ ಜವಾಬ್ದಾರಿ ನನ್ನದು ಅದನ್ನು ಪರಿಷ್ಕರಿಸುವ ಹೊಣೆಗಾರಿಕೆ ಅವರದ್ದು ಎಂದು ತೀರ್ಮಾನಿಸಿದ್ದಾಯಿತು. ಇದಾದ ಮಾರನೆಯ ದಿನ ಬೆಳಗ್ಗೆ 83ಉತ್ಸಾಹಿ ತರುಣ ಜಿ ಟಿ ಎನ್, 68ವೃದ್ಧನ ಮನೆಗೇ ಬಂದು ತಾವು ಬರೆದ ಪುಸ್ತಕಗಳನ್ನು ಕೊಟ್ಟದ್ದೂ ಆಯಿತು. ಸುಮಾರು ಒಂದು ವಾರ ಕಳೆದ ಬಳಿಕ ಅವರ ಪುಸ್ತಕಗಳಲ್ಲಿ ಇದ್ದ ವಿಷಯದ ನಿಷ್ಕೃಷ್ಟತೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಪರಿಹಾರವಾಗಿ ಎರಡು ಇಂಗ್ಲಿಷ್ ಮತ್ತು ಒಂದು ಕನ್ನಡದ ಆಕರ ಗ್ರಂಥಗಳನ್ನೂ ಮತ್ತೊಂದು ವಾರದ ಬಳಿಕ ತಮ್ಮ ಸೊಸೆ ರುಕ್ಮಿಣಿ ನನ್ನ ಉಗ್ರಾಣದಲ್ಲಿ ನನ್ನ ಅನುಪಸ್ಥಿತಿಯಲ್ಲಿ ಹುಡುಕಲು ತೆಗೆದುಕೊಂಡ ಶ್ರಮದ ಫಲ ಇದು ಎನ್ನುತ್ತಾ ಕನ್ನಡದ ಮತ್ತೊಂದು ಆಕರ ಗ್ರಂಥವನ್ನೂ ಮನೆಗೇ ತಲಪಿಸಿದರು. ಇಷ್ಟಾದ ಮೇಲೆ ಬರೆಯದೇ ಇರುವುದು ಹೇಗೆ?

ನಾನು ಬರೆಯಲಾರಂಭಿಸಿದ್ದೇನೆ ಎಂಬುದು ಖಚಿತವಾದ ಬಳಿಕ ಒಂದು ದಿನ ಬೆಳಗ್ಗೆ ಸುಮಾರು 7 ಗಂಟೆಗೆ ದೂರವಾಣಿ ಮೂಲಕ ಬೆಳಗ್ಗೆ 4 ಗಂಟೆಗೆ ಎದ್ದು ಬರೆಯುತ್ತಿದ್ದೀ ತಾನೆ ಎಂದು ಅನಿರೀಕ್ಷಿತವಾಗಿ ವಿಚಾರಿಸಿದ್ದೂ ಅಲ್ಲದೆ ಅದೇ ದಿನ ಮನೆಗೆ ಬಂದು ಈ ಪುಸ್ತಕ ಸಂಪೂರ್ಣವಾಗಿ ನಿನ್ನದೇ ಆಗಿರಲಿ ಎಂದು ಹೇಳಿ ಚರ್ಚೆಗೆ ಅವಕಾಶ ನೀಡದೆ ತೆರಳಿದರು. ಇದಾದ ಎರಡು ದಿನಗಳಲ್ಲಿಯೇ ತಮ್ಮ ಜೀವನ ಪಯಣ ಮುಗಿಸಿ ಕಾಲಪ್ರವಾಹಿನಿಯಲ್ಲಿ ಲೀನವಾದರು. ತದನಂತರ ಪುಸ್ತಕ ಪ್ರಕಟಿಸುವ ಭರವಸೆಯನ್ನಿತ್ತು ಕೆಲಸ ಮುಂದುವರಿಸಲು ಪ್ರೋತ್ಸಾಹಿಸಿದವನು ಅವರ ಪುತ್ರ ಜಿ ಎನ್ ಅಶೋಕವರ್ಧನ.

ಬರೆದದ್ದಾಗಿದೆ. ಜಿ ಟಿ ಎನ್ ಅವರ ಅನುಪಸ್ಥಿತಿಯಲ್ಲಿ ಓದುವ ನೀವೇ ಇದರ ಒಪ್ಪುತಪ್ಪುಗಳನ್ನು ವಿಮರ್ಶಿಸಬೇಕು.

ಪ್ರಕಟಿಸಿದವರು ಮಂಗಳೂರಿನ ಅತ್ರಿ ಬುಕ್ ಸೆಂಟರ್, ಅಂದವಾಗಿ ಮುದ್ರಿಸಿದವರು ಮೈಸೂರಿನ ಶ್ರೀ ಶಕ್ತಿ ಇಲೆಕ್ಟ್ರಿಕ್ ಪ್ರೆಸ್. ಈರ್ವರಿಗೂ ನನ್ನ ಹಾರ್ದಿಕ ವಂದನೆಗಳು.

ಎ ವಿ ಗೋವಿಂದ ರಾವ್

*******************

ತಾರಾವಲೋಕನ ಪುಸ್ತಕ ರಚನೆಯ ಹಿನ್ನಲೆ ತಿಳಿಯಿತಲ್ಲವೇ? ಅದರ ಪ್ರತಿಗಳು ಈಗ ಮಾರುಕಟ್ಟೆಯಲ್ಲಿ ಅಲಭ್ಯ. ಪರಿಷ್ಕರಿಸಿ ಮರುಮುದ್ರಿಸುವ ಹಂಬಲವೂ ಇಲ್ಲ. ಇಂತಿರುವಾಗ ದಿನಾಂಕ 1-11-2013 ರಂದು ಬೆಳಿಗ್ಯೆ ಎಂದಿನಂತೆ ಅಂತರ್ಜಾಲ ಲೋಕದೊಳ ಹೊಕ್ಕು ವಿಹರಿಸುತ್ತಿದ್ದಾಗ ನನ್ನ ವಿ-ಅಂಚೆ ಡಬ್ಬಿಯಲ್ಲಿ ಹೊಸ ಪತ್ರವೊಂದು ನನಗಾಗಿ ಕಾಯುತ್ತಿದೆ ಎಂದು ಗೂಗಲ್ ಅಂಚೆ ವ್ಯವಸ್ಥೆ ಸೂಚನೆ ನೀಡಿತು. ಶ್ರೀ ಜಿ ಟಿ ಎನ್‌ ಅವರ ಮಗ ಅಶೋಕವರ್ಧನ ಬರೆದ ಆ ಪತ್ರದ ಯಾಥವತ್ತು ನಕಲು ಇಲ್ಲಿದೆ. ನೀವೇ ನೋಡಿ:

*******************

ಪ್ರಿಯರೇ

ಅಪ್ಪನ ಆತ್ಮಕಥೆ ಜನವರಿ ೨೮,೨೦೧೪ (ಮಂಗಳವಾರ)ಕ್ಕೆ ಕೊನೆಯ ಕಂತು ಇಲ್ಲಿ ಪ್ರಕಟವಾಗಿ ಮುಗಿಯುತ್ತದೆ. (ಅಷ್ಟೂ ಕಾಲ ನಿಗದಿಗೊಳಿಸಿ ಜಾಲಕ್ಕೆ ಏರಿಸಿಯಾಗಿದೆ). ಅದಕ್ಕೊಂದು ಸಂಪಾದಕೀಯವನ್ನು ಬರೆಯುವ ಅನಿವಾರ್ಯತೆಯಲ್ಲಿ ನಾನು ಹೀಗೂ ಕೆಲವು ಮಾತುಗಳನ್ನು ಸೇರಿಸಿದ್ದೇನೆ. ನಿಮ್ಮ ಸಿದ್ಧತೆಗಳೆಲ್ಲಿಗೆ ಬಂದಿವೆ ಎಂದು ತಿಳಿದಂತಾಯ್ತು ಎನ್ನುವುದಕ್ಕೆ ಇದನ್ನು ನಿಮ್ಮ ಗಮನಕ್ಕೆ ಮುಂದಾಗಿ ತರುತ್ತಿದ್ದೇನೆ. ಏನಾದರೂ ಬದಲಾವಣೆ, ಸೇರ್ಪಡೆಗಳಿದ್ದರೆ ಅವಶ್ಯ ತಿಳಿಸಿ.

 

ತಂದೆ ಆತ್ಮಕತೆಗೆ ಇಳಿಯುವುದಕ್ಕಿಂತ ಒಂದೆರಡು ವರ್ಷಕ್ಕೂ ಮೊದಲೇ ನಾನವರಲ್ಲಿ ನಕ್ಷತ್ರ ವೀಕ್ಷಣೆ ಪುಸ್ತಕದ ಮರುಮುದ್ರಿಸುವ ಆವಶ್ಯಕತೆಯನ್ನು ತಿಳಿಸಿದ್ದೆ. ತಂದೆ ವಿಜ್ಞಾನಸಾಹಿತ್ಯದ ಬರಿಯ ಮರುಮುದ್ರಣವನ್ನು ಎಂದೂ ಒಪ್ಪಿದವರಲ್ಲ. ಪ್ರತಿ ಮರುಮುದ್ರಣದ ಹಂತದಲ್ಲಿ ಕಾಲಾನುಗುಣವಾಗಿ ವಿಷಯವನ್ನು ಪರಿಷ್ಕರಿಸಲೇ ಬೇಕು ಎಂದು ನಂಬಿದ್ದರು ಮತ್ತು ಉಗ್ರವಾಗಿ ಪ್ರತಿಪಾದಿಸುತ್ತಿದ್ದರು. ಸಹಜವಾಗಿ ನನ್ನ ಮರುಮುದ್ರಣ ಯೋಚನೆಯನ್ನು ಚಿಗುರಿನಲ್ಲೇ ಚಿವುಟಿದರು. ಖಗೋಳ ವಿಜ್ಞಾನದ ನೂತನ ಪಠ್ಯವನ್ನೇ ಬರೆಯಬೇಕು. ಆದರೆ, ನಾನಲ್ಲ! ವಯೋಸಹಜವಾದ ಬಳಲಿಕೆಯಲ್ಲಿ ವಿಸ್ತೃತ ಕೃತಿಯೊಂದನ್ನು ಈಗ ರಚಿಸುವುದು ನನಗಸಾಧ್ಯ. [ಮುಂದುವರಿದು ನೋಡುವ, ಶಿಷ್ಯ ಗೋವಿಂದನನ್ನು (ಪ್ರೊ| ಎ.ವಿ. ಗೋವಿಂದರಾವ್) ಒಪ್ಪಿಸುತ್ತೇನೆ ಎಂದಿದ್ದರು ಮತ್ತು ಒಪ್ಪಿಸಿದರು. ಆದರೆ ಆ ಪುಸ್ತಕ ನೋಡಲು ತಂದೆ ಉಳಿಯಲಿಲ್ಲ. ಗೋವಿಂದರಾಯರು ತಾರಾವಲೋಕನ ಬರೆದು ಕೊಟ್ಟರು, ನಾನು ಪ್ರಕಟಿಸಿದ್ದೂ ಆಯ್ತು, ಮಾರಿ ಮುಗಿಸಿದ್ದೂ ಆಯ್ತು! ಈಚೆಗೆ ಗೋವಿಂದರಾಯರು ಅದನ್ನು ಅಂತರ್ಜಾಲದಲ್ಲಿ ವಿ-ಪುಸ್ತಕವಾಗಿ ಒದಗಿಸುತ್ತೇನೆ ಎಂದಿದ್ದಾರೆ. ಎವಿಜಿ ಗುರುವಿಗೆ ತಕ್ಕ ಶಿಷ್ಯ – ಯಥಾಪ್ರತಿ ಕೊಡಲಾರರು, ಪರಿಷ್ಕರಿಸುತ್ತಿರಬೇಕು. ಕಾದು ನೋಡಿ.] 

ಇಂತು ವಿಶ್ವಾಸಿ

ಅಶೋಕವರ್ಧನ

*************************

ಪತ್ರ ಓದಿದ ಬಳಿಕ ತಾರಾವಲೋಕನ ಪುಸ್ತಕದ ಕುರಿತು ಹಿಂದೆಂದೋ ಅಶೋಕನಿಗೆ ಹೇಳಿ ಮರೆತದ್ದು ಪುನಃ ನೆನಪಾಯಿತು. ಮರುದಿನ ಈ ಮುಂದಿನ ಬಾಲಂಗೋಚಿಯೂ ನನ್ನ ವಿ-ಅಂಚೆ ಡಬ್ಬಿಯೊಳಗಿತ್ತು:

ಪ್ರಿಯರೇ

ದಿನಕ್ಕೊಂದು ಐನ್ಸ್ಟೈನಿಗೆ ಸಟ್ಟೆಂದು ನಿಮ್ಮ ಲೈಕ್ ಬಂತು. ಆದರೆ ಈ ಪತ್ರಕ್ಕೆ ನಿಮ್ಮುತ್ತರ ಇನ್ನೂ ಕಾಣಲಿಲ್ಲವಲ್ಲಾ. ನನ್ನ ಬರವಣಿಗೆಯಲ್ಲಿ ಏನು ತಿದ್ದುಪಡಿಯ ಆವಶ್ಯಕತೆ ಇದ್ದರೂ ತಿಳಿಸಿ, ಅಳವಡಿಸುತ್ತೇನೆ

 

ಅಶೋಕ

**************************

‘ಅಪ್ಪನಿಗೆ ತಕ್ಕ ಮಗ’ ಅಂದು ಮನಸ್ಸಿನಲ್ಲಿಯೇ ಗೊಣಗಿಕೊಂಡು ಪುಸ್ತಕವನ್ನು ವಿದ್ಯುನ್ಮಾನ ಮಾಧ್ಯಮಕ್ಕೆ ತಕ್ಕುದಾಗಿ ಪುನರ್ ವಿನ್ಯಾಸದ/ಪರಿಷ್ಕರಣೆಯ ಕಾಯಕ ಕೈಗೆತ್ತಿಕೊಂಡೆ. ಇದರ ಫಲವನ್ನು ನಿಮಗೊಪ್ಪಿಸುತ್ತಿದ್ದೇನೆ. ಇದು ಖಗೋಲಶಾಸ್ತ್ರಾಭ್ಯಾಸ ಮಾಡದವರಿಗಾಗಿರುವ ಮಾರ್ಗದರ್ಶೀ ಲೇಖನ ಮಾಲಿಕೆಯೇ ವಿನಾ ಖಗೋಲವಿಜ್ಞಾನದ ಪಠ್ಯಪುಸ್ತಕವೂ ಅಲ್ಲ ಆಕರ ಗ್ರಂಥವೂ ಅಲ್ಲ ಎಂಬುದು ನೆನಪಿನಲ್ಲಿರಲಿ

ವಿ-ಮಾಧ್ಯಮಕ್ಕೆ ಲೇಖನ ಮಾಲಿಕೆಯನ್ನು ಅಳವಡಿಸಲು ಅಗತ್ಯವಿರುವ ತಾಂತ್ರಿಕತೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ಜಿ ಟಿ ಎನ್‌ ಅವರ ಮೊಮ್ಮಗ ಜಿ ಎನ್‌ ಅಭಯಸಿಂಹನಿಗೆ ನಾನು ಆಭಾರಿಯಾಗಿದ್ದೇನೆ.

ಎ ವಿ ಗೋವಿಂದ ರಾವ್

(ಮುಂದುವರಿಯುತ್ತದೆ)

Advertisements
This entry was posted in ತಾರಾವಲೋಕನ and tagged . Bookmark the permalink.

2 Responses to ತಾರಾವಲೋಕನ ೧

 1. Rama ಹೇಳುತ್ತಾರೆ:

  Sir,
  After I started reading ತಾರಾವಲೋಕನ book, I stumbled upon this blog when I was searching for more details about ‘Mahaavyaadha’. It is very nice to see online version of your book. I appreciate that.

  One improvement could be to add a ‘content index’ blog page/post with links for all the articles of this series, and also update existing pages with a link to the content index page.

  That would help to switch between different sections of this series with ease.

  Thanks

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s