ಚಿತ್ತವೃತ್ತಿ ನಿರೋಧ

ಮನಸ್ಸಿನ ಸ್ವಭಾವಸಿದ್ಧ ಚರ್ಯೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದೇ ‘ಚಿತ್ತವೃತ್ತಿ ನಿರೋಧ’, ಅರ್ಥಾತ್ ‘ಮನೋನಿಗ್ರಹ’. ಗಾಢ ನಿದ್ರಾವಸ್ಥೆಯನ್ನು ಹೊರತುಪಡಿಸಿ ಉಳಿದ ಎಲ್ಲ ಸಮಯದಲ್ಲಿ  ನಿರಂತರವಾಗಿ ಏನನ್ನಾದರೂ ‘ಹೇಳುತ್ತಿರುವುದು’ ಮನಸ್ಸಿನ ಸ್ವಭಾವಸಿದ್ಧ ಗುಣ, ಅರ್ಥಾತ್ ‘ಚಿತ್ತವೃತ್ತಿ’. ಮನಸ್ಸಿನ ಈ ನಿರಂತರ ‘ಮಾತನಾಡುವಿಕೆ’ಯನ್ನು ಸ್ವಸಂವಾದ, ಆಂತರಿಕ ಸಂವಾದ ಎಂದೂ ಕರೆಯುವುದುಂಟು. ಈ ಮುನ್ನ ಹೇಳಿದಂತೆ ಗಾಢ ನಿದ್ರಾವಸ್ಥೆಯ ಅವಧಿಯನ್ನು ಹೊರತುಪಡಿಸಿ, ಉಳಿದ ಎಲ್ಲ ಸಮಯದಲ್ಲಿ – ನೀವು  ಮಾತನಾಡುತ್ತಿರುವಾಗ, ಮೌನವಾಗಿರುವಾಗ, ಯಾವುದೋ ಕೆಲಸದಲ್ಲಿ ತಲ್ಲೀನರಾಗಿರುವಾಗ, ವಿಶ್ರಾಂತ ಸ್ಥಿತಿಯಲ್ಲಿ ಇರುವಾಗ – ಸ್ವಸಂವಾದ ಜರಗುತ್ತಲೇ ಇರುತ್ತದೆ. ಸ್ವಸಂವಾದ ಜರಗುತ್ತಿರುವುದು ನಿಮ್ಮ ಅರಿವಿಗೆ ಬಾರದೇ ಇರುವಾಗಲೂ ಅದು ಜರಗುತ್ತಲೇ ಇರುತ್ತದೆ! ನೀವು ಮೌನ ವ್ರತಧಾರಿಗಳಾದಾಗ,  ಕಣ್ಣುಮಚ್ಚಿ ಕುಳಿತು ಯಾವುದೋ ಒಂದು ಪದ ಅಥವ ಕ್ರಿಯೆಯ ಮೇಲೆ ಅವಧಾನವನ್ನು ನಾಭಿಸ್ಥಗೊಳಿಸಲು ಪ್ರಯತ್ನಿಸಿದಾಗ (ಅರ್ಥಾತ್ ಧ್ಯಾನ ಮಾಡಲು ಪ್ರಯತ್ನಿಸುವಾಗ), ಬಲು ಆಯಾಸವಾಗಿದೆ ಅಂದುಕೊಂಡು ಮಲಗಿ ನಿದ್ದೆ ಮಾಡಲು ಪ್ರಯತ್ನಿಸಿದಾಗ ನಿಮ್ಮ ಅಂತರಂಗದಲ್ಲಿ ಜರಗುತ್ತಿರುವ ಸ್ವಸಂವಾದ ನಿಮ್ಮ ಅರಿವಿಗೆ ಬರುವುದು ಖಾತರಿ. ಮನಸ್ಸು ಇಂತೇಕೆ ಮಾಡುತ್ತದೆ?

ಬಾಹ್ಯ ಪ್ರಪಂಚವು ದೇಹದ ಜ್ಞಾನೇಂದ್ರಿಯಗಳ ಮೂಲಕ ಉಣಿಸಿದ ಮಾಹಿತಿಗಳನ್ನು ಸ್ವೀಕರಿಸಿ, ಸಂಘಟಿಸಿ, ವಿಶ್ಲೇಷಿಸಿ, ಅರ್ಥೈಸಿ ಚಿಂತೆ, ವ್ಯಥೆ, ಕೋಪ, ಆಸೆ ಇವೇ ಮೊದಲಾದ ಭಾವನೆಗಳ ಪೈಕಿ ಅದಕ್ಕೆ ಯುಕ್ತ ಅನ್ನಿಸಿದ್ದನ್ನು ಉದ್ದೀಪಿಸುವುದರ ಮುಖೇನ ತಕ್ಕುದಾದ ಪ್ರತಿಕ್ರಿಯೆಯನ್ನು ದೇಹದ ಕರ್ಮೇಂದ್ರಿಯಗಳ ನೆರವಿನಿಂದ ಪ್ರಕಟಿಸುವಂತೆ ಮಾಡಲು ‘ನಾನು’ (ಅರ್ಥಾತ್ ಆತ್ಮ) ಉಪಯೋಗಿಸುವ ‘ಸಲಕರಣೆ’ಯೇ ಮನಸ್ಸು. ಬಾಹ್ಯ ಪ್ರಪಂಚದಲ್ಲಿ ಕ್ರಿಯಾಶೀಲವಾಗಿ ‘ನಾನು’ ಬಾಳಬೇಕಾದರೆ ಈ ಸಲಕರಣೆಯನ್ನೂ ಇದರ ನಿಯಂತ್ರಣದಲ್ಲಿ ಇರುವ ಜ್ಞಾನೆಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಉಳ್ಳ ದೇಹವೆಂಬ ಸಲಕರಣೆಯನ್ನೂ ಉಪಯೋಗಿಸ ಬೇಕಾದದ್ದು ಅನಿವಾರ್ಯ. (ಈ ಕುರಿತು ಇನ್ನೂ ಹೆಚ್ಚು ತಿಳಿಯಬೇಕೆಂದಿರುವವರು ‘ಪಂಚಕೋಶ’ ಸಿದ್ಧಂತವನ್ನು ಅಧ್ಯಯಿಸಿ) ಜ್ಞಾನೇಂದ್ರಿಯಗಳೂ ಕರ್ಮೇಂದ್ರಿಯಗಳೂ ಕ್ರಿಯಾಶೀಲವಾದ ಕ್ಷಣದಿಂದಲೇ ಈ ಸಲಕರಣೆಯ ಉಪಯೋಗ ಅನಿವಾರ್ಯವಾಗಿ ಆರಂಭವಾಗುತ್ತದೆ. ಮನಸ್ಸು ಹೇಳಿದ್ದನ್ನು ಸದಸದ್ವಿವೇಚನೆಯ (ಆತ್ಮಸಾಕ್ಷಿ / ಅಂತಸ್ಸಾಕ್ಷಿ / ಅಂತರ್ಬೋಧೆ / ಅಂತರ್ವಾಣಿ) ನಿಕಷಕ್ಕೆ ಒರೆದು ಪರೀಕ್ಷಿಸಿ ಯುಕ್ತವಾದದ್ದು ಆಗಿದ್ದರೆ ಮಾತ್ರ ಒಪ್ಪಿಕೊಳ್ಳಬೇಕು. ದುರದೃಷ್ಟವಶಾತ್ ನಮ್ಮ ಪೈಕಿ ಬಹುಮಂದಿ ಮನಸ್ಸು ಉದ್ದೀಪಿಸುವ ಭಾವನೆಗಳಿಗೆ ಪ್ರಾಧಾನ್ಯ ನೀಡಿ ಸದಸದ್ವಿವೇಚನೆಯ  ಪಿಸುನುಡಿಗೆ ಕಿವಿಗೊಡದೆ ಮನಸ್ಸು ಹೇಳಿದ್ದೇ ಸರಿ ಎಂದು ತೀರ್ಮಾನಿಸಿ ಅದು ಹೇಳಿದಂತೆ ಕಾರ್ಯೋನ್ಮುಖರಾಗುತ್ತೇವೆ, ಮನಸ್ಸು ಎಂಬುದು ‘ನಾನು’ ಉಪಯೋಗಿಸುವ ಸಲಕರಣೆ ಎಂಬುದನ್ನು ಮರೆತುಬಿಟ್ಟಿದ್ದೇವೆ. ಅರ್ಥಾತ್. ನಾವು ನಮ್ಮ ಮನಸ್ಸಿನ ಆಜ್ಞಾನುವರ್ತಿಗಳಾಗಿದ್ದೇವೆ! ನಮ್ಮ ಈ ಚರ್ಯೆಯೇ ಅನೇಕ ಸಮಸ್ಯೆಗಳ ಮೂಲ.

ನಾವೇಕೆ ಇಂತಾಗುತ್ತೇವೆ?

ಈ ಮುನ್ನವೇ ಹೇಳಿದಂತೆ, ಜ್ಞಾನೇಂದ್ರಿಯಗಳು ಒದಗಿಸುವ ಮಾಹಿತಿಯನ್ನು ಗ್ರಹಿಸಿ ಅರ್ಥೈಸುವುದು (ನೋಡಿ: ಅನೇಕ ಅನರ್ಥಗಳ ಮೂಲ – ಎಲ್ಲವನ್ನೂ ಅರ್ಥೈಸುವ ಪ್ರವೃತ್ತಿ) ಮತ್ತು ಅರ್ಥೈಸಿದ್ದಕ್ಕೆ ಮೇಳೈಸುವಂಥ ಪ್ರತಿಕ್ರಿಯೆ ಏನಾಗಿರಬೇಕೆಂಬುದನ್ನು ತೀರ್ಮಾನಿಸಿ ಅದನ್ನು ಕರ್ಮೇಂದ್ರಿಯಗಳು ಪ್ರಕಟಿಸುವಂತೆ ಮಾಡಲು ಅಗತ್ಯವಾದ ಸೂಚನೆಗಳನ್ನು ಕೊಡುವುದು ಮನಸ್ಸಿನ ಪ್ರಮುಖ ಕಾರ್ಯ. ಈ ಕಾರ್ಯನಿರ್ವಹಣೆಗೆ ‘ತಕ್ಷಣ ಹಿತಾನುಭವ ಅಥವ ಸುಖ ನೀಡುವುದು’ ತತ್ವವನ್ನು ಮಾರ್ಗದರ್ಶಿಯಾಗಿ ಇಟ್ಟುಕೊಳ್ಳುವುದೂ ಅದರ ಸ್ವಭಾವಸಿದ್ಧ ಗುಣ. ತನ್ನ ತೀರ್ಮಾನವನ್ನು ‘ಅಂತಸ್ಸಾಕ್ಷಿಯ’ ನಿಕಷಕ್ಕೆ ಒರೆದು ಪರೀಕ್ಷಿಸುವ ಗೊಡವೆಗೆ ಅದು ಹೋಗುವುದಿಲ್ಲ. ಈ ಕೆಲಸವನ್ನು ‘ನಾನು’ ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಅರ್ಥಾತ್, ಮನಸ್ಸು ಹೇಳಿದ್ದನ್ನು ಮಾಡುವ ಮುನ್ನ ಅಂತಸ್ಸಾಕ್ಷಿಯ ಪಿಸುನುಡಿಗೆ ಕಿವಿಗೊಡಬೇಕು. ಅಂತಸ್ಸಾಕ್ಷಿ ಒಪ್ಪದ್ದನ್ನು ತಿರಸ್ಕರಿಸಿದರೆ ಮನಸ್ಸು ಬೇರೊಂದು ತೀರ್ಮಾನಕ್ಕೆ ಬರುತ್ತದೆ.

ಶೈಶವ, ಹಸುಳೆತನ ಮತ್ತು ಬಾಲ್ಯ – ವ್ಯಕ್ತಿ ವಿಕಾಸದ ಈ ಹಂತಗಳಲ್ಲಿ ಸದಸದ್ವಿವೇಚನೆಯ ಸಾಮರ್ಥ್ಯ ಪಕ್ವವಾಗಿರುವುದಿಲ್ಲ, ಇರುವ ಸಾಮರ್ಥ್ಯವನ್ನು ಹೇಗೆ ಉಪಯೋಗಿಸಬೇಕೆಂಬುದರ ಅರಿವೂ ಇರುವುದಿಲ್ಲ. ಈ ಕುರಿತಾದ ಶಿಕ್ಷಣವಾಗಲೀ ಮಾರ್ಗದರ್ಶನವಾಗಲೀ ಇಲ್ಲವೇ ಇಲ್ಲ. ಎಂದೇ, ಈ ಹಂತಗಳಲ್ಲಿ ಮನಸ್ಸು ‘ತಕ್ಷಣ ಹಿತಾನುಭವ ಅಥವ ಸುಖ ನೀಡುವುದು’ ತತ್ವವನ್ನು ಆಧರಿಸಿ ಕೈಗೊಳ್ಳುವ ತೀರ್ಮಾನಗಳೇ ಮಾನವನ ವರ್ತನೆಯ ಪ್ರಧಾನ ನಿರ್ಧಾರಕಗಳು. ತತ್ಪರಿಣಾಮವಾಗಿ ಮುಂದೆ ಮನಸ್ಸು ಹೇಳಿದಂತೆ ಕೇಳುವುದು ಅಭ್ಯಾಸವಾಗಿ ಅಂತಸ್ಸಾಕ್ಷಿಯ ಪಿಸುನುಡಿಗೆ ಕಿವಿಗೊಡುವುದೇ ಇಲ್ಲ. ಯಾವುದೇ ತೀರ್ಮಾನ ಕೈಗೊಳ್ಳಲು ಮನಸ್ಸು ತನ್ನಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸುತ್ತದೆ, ಅಂತಸ್ಸಾಕ್ಷಿಯನ್ನಲ್ಲ. ಈ ಕಾರಣಕ್ಕಾಗಿ ಅದು ತನಗೆ ಲಭಿಸಿದ ಎಲ್ಲ ಮಾಹಿತಿಗಳನ್ನೂ ತಾನು ಹಿಂದೆ ಕೈಗೊಂಡ ತೀರ್ಮಾನಗಳನ್ನೂ ಅದರ ಪರಿಣಾಮಗಳನ್ನೂ ದಾಖಲಿಸಿ ಇಟ್ಟುಕೊಳ್ಳುತ್ತದೆ. ಅರ್ಥಾತ್, ವಯಸ್ಸು ಆದಂತೆಲ್ಲ ಈ ದಾಖಲೆಗಳ ಪರಿಮಾಣವೂ ವೃದ್ಧಿಸುತ್ತಿರುತ್ತದೆ. ಯಾವುದೇ ಸಮಯದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಿಂದೆ ಆದ ಎಲ್ಲ ಅನುಭವಗಳ ದಾಖಲೆಗಳ ಸಂಚಯವಿರುತ್ತದೆ. ಇವುಗಳ ಪೈಕಿ ಹೆಚ್ಚಿನವು ಮನಸ್ಸಿನಾಳದಲ್ಲಿ ಹುದುಗಿರುವುದರಿಂದ ಅವು ಇವೆಯೆಂಬ ಅರಿವೂ ಇರುವುದಿಲ್ಲ (ಪುನರ್ಜನ್ಮವಾದಿಗಳ ಪ್ರಕಾರ ಹಿಂದಿನ ಜನ್ಮಗಳ ಅನುಭವಗಳ ದಾಖಲೆಗಳೂ ಈ ಸಂಚಯದಲ್ಲಿ ಹುದುಗಿರುತ್ತವೆ). ನಮ್ಮ ಪೈಕಿ ಬಹುಮಂದಿ ಕೈಗೊಳ್ಳುವ ತೀರ್ಮಾನಗಳು ನಮ್ಮ ಮನಸ್ಸು ತನ್ನ ಹಿಂದಿನ ಅನುಭವಗಳನ್ನು ಆಧರಿಸಿ ಸ್ವಸಂವಾದದ ಮುಖೇನ ಕೈಗೊಂಡ ತೀರ್ಮಾನಗಳು ಆಗಿರುತ್ತವೆಯೇ ವಿನಾ ಅಂತಸ್ಸಾಕ್ಷಿಯ ನೆರವಿನಿಂದ ಕೈಗೊಂಡ ತೀರ್ಮಾನಗಳು ಆಗಿರುವುದಿಲ್ಲ. ಮನಸ್ಸು ಸ್ವಸಂವಾದದ ಮುಖೇನ ಕೈಗೊಳ್ಳುವ ತೀರ್ಮಾನವನ್ನು ‘ನನ್ನ’ ತೀರ್ಮಾನವೆಂದು ಕಲ್ಪಿಸಿಕೊಳ್ಳುತ್ತೇವೆಯಾದರೂ ವಾಸ್ತವವಾಗಿ ಅದು ‘ನನ್ನ’ ತೀರ್ಮಾನವಲ್ಲ. ಇಂಥ ತೀರ್ಮಾನವನ್ನು ಅಂತಸ್ಸಾಕ್ಷಿ ಎಂಬ ನಿಕಷಕ್ಕೆ ಒರೆದು ಸ್ವೀಕರಿಸಿದರೆ ಮಾತ್ರ ಅದು ‘ನನ್ನ’ ತೀರ್ಮಾನವಾಗುತ್ತದೆ. ಒಟ್ಟಾರೆ ಪರಿಣಾಮ: ‘ನನ್ನ’ ಸಲಕರಣೆ ‘ನಾನು’ ಹೇಳಿದಂತೆ ಮಾಡುವುದಿಲ್ಲ, ಅದು ತನಗಿಷ್ಟ ಬಂದಂತೆ ‘ನನ್ನ’ ಇತರ ಸಲಕರಣೆಗಳಾದ ಜ್ಞಾನೇಂದ್ರಿಯಗಳನ್ನೂ ಕರ್ಮೇಂದ್ರಿಯಗಳನ್ನೂ ‘ಕುಣಿಸುತ್ತದೆ’. ವಾಸ್ತವ ಸ್ಥಿತಿ ಇದಾಗಿದ್ದರೂ ಈ ‘ಕುಣಿತದ’ ಪ್ರಭಾವದಿಂದ ‘ನಾನು’ ತೊಳಲಾಡಬೇಕಾಗುತ್ತದೆ. ‘ನಾನು’ ‘ನನ್ನ’ ಉಪಯೋಗಕ್ಕೆಂದು ಸೃಷ್ಟಿಸಿದ ಸಲಕರಣೆಗಳು ‘ನನ್ನನ್ನು’ ತಮ್ಮ ಬಂಧಿಯಾಗಿಸಿ ತಮಗಿಷ್ಟ ಬಂದಂತೆ ಮಾಡುತ್ತಿವೆ! ಮನಸ್ಸಿನಲ್ಲಿ ಜರಗುವ ಸ್ವಸಂವಾದಕ್ಕೆ ಪ್ರಾಧಾನ್ಯ ನೀಡುವುದರಿಂದ, ಅದರ ತೀರ್ಮಾನಗಳನ್ನು ವಿವೇಚನಾರಹಿತವಾಗಿ ಒಪ್ಪಿಕೊಳ್ಳುವುದರಿಂದ ಅದು ನಿರಂತರವಾಗಿ ಸ್ವಸಂವಾದದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತದೆ. ಅದೇನಾದರೂ ಇಂತು ಮಾಡದಿದ್ದರೆ ಅಂತಸ್ಸಾಕ್ಷಿ ಹೇಳಿದಂತೆ ನಾವು ಮಾಡುತ್ತೇವೆ, ಮನಸ್ಸು ಸೃಷ್ಟಿಸಿದ ಭ್ರಮಾಲೋಕದಿಂದ ಬಿಡುಗಡೆ ಪಡೆಯುತ್ತೇವೆ. ‘ನನಗೆ’ ಬೇಕೆನಿಸಿದಾಗಲೆಲ್ಲ ‘ನನ್ನ’ ಸಹಜ ಸ್ಥಿತಿಗೆ ‘ನಾನು’ ಹಿಂದಿರುಗುತ್ತೇನೆ. ‘ಅಧಿಕಾರ’ದ ರುಚಿ ನೋಡಿದ ಮನಸ್ಸು ಇಂತಾಗದಂತೆ ಮಾಡಲು ಅನೇಕ ತಂತ್ರಗಳನ್ನು ಬಳಸುತ್ತದೆ (ಇಂದಿನ ರಾಜಕಾರಣಿಗಳಂತೆ)!

ಅಂದ ಮಾತ್ರಕ್ಕೆ ಮನಸ್ಸು ಎಂಬುದೊಂದು ಉಪದ್ರವ ನೀಡುವ ಸಲಕರಣೆ ಎಂಬ ತೀರ್ಮಾನಕ್ಕೆ ಬರಕೂಡದು. ಈ ಸಲಕರಣೆಯಲ್ಲಿ ಇರುವ ದೋಷಗಳನ್ನು ತಿಳಿದಿದ್ದು ಅದರ ಸ್ವಭಾವಸಿದ್ಧ ಚರ್ಯೆಯನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರೆ ಜ್ಞಾನೇಂದ್ರಿಯಗಳನ್ನೂ ಕರ್ಮೇಂದ್ರಿಯಗಳನ್ನೂ ಸಮರ್ಥವಾಗಿ ನಿಯಂತ್ರಿಸಬಹುದು,

ಇದಕ್ಕೆ ಮಾಡಬೇಕಾದ್ದೇನು?

  • ಮನಸ್ಸು ತನ್ನ ಕಾರ್ಯನಿರ್ವಹಣೆಯಲ್ಲಿ ಅನುಸರಿಸುವ ವಿಧಾನಗಳಲ್ಲಿನ ದೋಷಗಳ ಅರಿವು ಮನಃಪಟಲದಲ್ಲಿ ಸದಾ ಅಗ್ರಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಿ, ಇಂತಾದಲ್ಲಿ ಮನಸ್ಸು ಕೈಗೊಳ್ಳುವ ತೀರ್ಮಾನಗಳನ್ನು ಪುನಃಪರಿಶೀಲಿಸದೆಯೇ ಒಪ್ಪಿಕೊಳ್ಳುವ ಸಾಧ್ಯತೆ ಕಮ್ಮಿ ಆಗುವುದಲ್ಲದೆ ಅಂತಸ್ಶಾಕ್ಷಿಗೆ ಕಿವಿಗೊಡುವ ಸಾಧ್ಯತೆ ಹೆಚ್ಚುತ್ತದೆ.

ಆ ದೋಷಗಳು ಇಂತಿವೆ: (೧) ಸಾಕ್ಷ್ಯಾಧಾರ ಹುಡುಕುವುದು. ಭೌತ ವಿದ್ಯಮಾನಗಳನ್ನು ಅಧ್ಯಯಿಸುವಾಗ ಅತ್ಯಗತ್ಯವಾದ ಈ ಚರ್ಯೆ ಪ್ರೀತಿ, ಮತ್ತೊಬ್ಬರ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆ ಮುಂತಾದವುಗಳ ಕುರಿತು ತೀರ್ಮಾನ ಕೈಗೊಳ್ಳಲು ಇದ್ದು ಅಡ್ಡಿಯಾಗುವ ಸಾಧ್ಯತೆಯೇ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಒಂದು ಅಥವ ಎರಡು ವಿದ್ಯಮಾನಗಳನ್ನು ಪುರಾವೆಯಾಗಿ ಪರಿಗಣಿಸಿ ಸಾರ್ವತ್ರೀಕೃತ ತೀರ್ಮಾನಕ್ಕೆ ಬರುವುದು ಮನಸ್ಸಿನ ಕಾರ್ಯವಿಧಾನದಲ್ಲಿರುವ ಒಂದು ದೋಷ. (೨) ವಾಸ್ತವವಾಗಿ ಇಲ್ಲದುದನ್ನು ಇದೆಯೆಂದು ಕಲ್ಪಿಸಿಕೊಳ್ಳುವುದು. ಘಟಿಸಿದ ವಿದ್ಯಮಾನವನ್ನು ಅರ್ಥೈಸುವಾಗ ಏನೇನನ್ನೋ (ವಾಸ್ತವವಾಗಿ ಇಲ್ಲದ್ದನ್ನು) ಊಹಿಸಿಕೊಳ್ಳುವುದು ಇದಕ್ಕೆ ಉದಾಹರಣೆ. (ನೋಡಿ: ಅನೇಕ ಅನರ್ಥಗಳ ಮೂಲ – ಎಲ್ಲವನ್ನೂ ಅರ್ಥೈಸುವ ಪ್ರವೃತ್ತಿ). ಚಿಂತೆ, ವ್ಯಥೆ, ಕೋಪ, ಆಸೆ ಇವೇ ಮೊದಲಾದ ಭಾವನೆಗಳ ಪೈಕಿ ಕನಿಷ್ಠಪಕ್ಷ ಯಾವುದಾದರೂ ಒಂದು ಈ ಕಲ್ಪನೆಗಳೊಂದಿಗೆ ಮೇಳಯಿಸಿಕೊಳ್ಳುವುದರಿಂದ ಇವು ಮಲಿನಕಾರಿಗಳಾಗಿ ಮನಸ್ಸಿನಲ್ಲಿಯೇ ನೆಲೆನಿಲ್ಲುವ ಸಾಧ್ಯತೆ ಇದೆ (ನೋಡಿ: ಮನಸ್ಸಿನ ಮಲಿನಕಾರಿಗಳು), (೩) ‘ಸುಖದಾಯಕಗಳು’ ಎಂದು ನಾವು ನಂಬಿರುವ, ನಮ್ಮ ಹತ್ತಿರ ಇಲ್ಲದ್ದರ ಕುರಿತು ಸ್ವಸಂವಾದದಲ್ಲಿ ಚಿಂತಿಸುವುದು, ಇದ್ದಿದ್ದರೆ ಹೇಗಿರುತ್ತಿತ್ತು ಎಂದು ಹಗಲುಗನಸು ಕಾಣುವುದು, ಅದು ಇರುವವರ ಕುರಿತು ಅಸೂಯೆ ಪಡುವುದು. ಮಾನಸಿಕ ಸಮತೋಲವನ್ನು ಹಾಳುಮಾಡುವುದರಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ. (೪) ಹಿಂದೆಂದೋ ನಡೆದ ಘಟನೆಯನ್ನು ಜ್ಞಾಪಿಸಿಕೊಂಡು ಅದರ ಕುರಿತೇ ಆಲೋಚಿಸುವುದು, ಅದಕ್ಕೂ ಈಗ ನಡೆದಿರುವ ಘಟನೆಗೂ ಸಾಮ್ಯತೆ ಕಲ್ಪಿಸಿಕೊಳ್ಳುವುದು, ಅದನ್ನು ಪ್ರಧಾನ ಸಾಕ್ಷ್ಯಾಧಾರವಾಗಿ ಇಟ್ಟುಕೊಂಡು ಇಂದಿನ ವಿಷಯದ ಕುರಿತು ತೀರ್ಮಾನ ಕೈಗೊಳ್ಳುವುದು.

  • ಈ ದೋಷಗಳನ್ನು ನಿವಾರಿಸಲು ಸಾಧ್ಯವಿಲ್ಲ. ಮನಸ್ಸು ತನ್ನಲ್ಲಿ ದಾಖಲಿಸಿಕೊಂಡಿರುವ ಅನುಭವಗಳನ್ನು ಅಳಿಸಿ ಹಾಕಲೂ ಸಾಧ್ಯವಿಲ್ಲ. ಮನಸ್ಸು ಮೌನವಾಗಿರುವಂತೆ ಮಾಡುವುದೂ ಸಾಧ್ಯವಿಲ್ಲ. ಮನಸ್ಸನ್ನು ನಿಯಂತ್ರಿಸಲು ಎಷ್ಟು ಪ್ರಯತ್ನಿಸುತ್ತೀರೋ ಅಷ್ಟೂ ಸುಲಭಗ್ರಾಹ್ಯವಲ್ಲದ ತಂತ್ರಗಳಿಂದ ನಿಯಂತ್ರಣಕ್ಕೊಳಪಡುವುದರಿಂದ ತಪ್ಪಿಸಿಕೊಳ್ಳುತ್ತದೆ.  ಮನಸ್ಸು ಸ್ವಸಂವಾದದ ಮುಖೇನ ನಿಮಗೆ ಏನು ಹೇಳುತ್ತಿದೆಯೋ ಅದನ್ನು ನೀವು ಎಲ್ಲಿಯ ತನಕ ಕೇಳುವಿರೋ ಅಲ್ಲಿಯ ತನಕ ಅದು ‘ವಟಗುಟ್ಟುವುದನ್ನು’ ನಿಲ್ಲಿಸುವುದೂ ಇಲ್ಲ. ಅಂದ ಮೇಲೆ ಅದು ಹೇಳುವುದನ್ನು “ಇದು ‘ನನ್ನ’ ಆಲೋಚನೆಗಳಲ್ಲ ಅಂದುಕೊಂಡು ನಿರ್ಲಕ್ಷಿಸುವುದನ್ನು ಅಭ್ಯಸಿಸಬೇಕು! ಅರ್ಥಾತ್, ಮನಸ್ಸಿನ ಹಿಡಿತದಿಂದ ನೀವು ಪಾರಾಗಬೇಕು.
  • ಸ್ವಸಂವಾದದಲ್ಲಿ ಮೂಡುವ ನಮ್ಮ ಆಲೋಚನೆಗಳನ್ನು, ಅರ್ಥಾತ್ ಮನಸ್ಸಿನ ದೊಂಬರಾಟಗಳನ್ನು ಒಂದು ನಾಟಕವನ್ನು ನೋಡುವಂತೆ ನಾವೇ ವೀಕ್ಷಿಸುವುದನ್ನು ಅಭ್ಯಸಿಸಬೇಕು. ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ಅಂಜಕೂಡದು. ಅದರ ಕಸರತ್ತುಗಳನ್ನು ಪ್ರತಿರೋಧಿಸಲೂ ಬೇಡಿ, ಅದರ ‘ವಟಗುಟ್ಟುವಿಕೆ’ಯನ್ನು ಕೇಳಿಸಿಕೊಂಡರೂ ಕೇಳಿಸಿಕೊಳ್ಳದಂತಿರಿ. ಅದರ ಆಲೋಚನಾಪ್ರವಾಹ ಎಲ್ಲಿಂದೆಲ್ಲಿಗೋ ಹೋಗುವ ವೈಚಿತ್ರ್ಯವನ್ನು ಅಚ್ಚರಿಯಿಂದ ವೀಕ್ಷಿಸಿ. ಮನಸ್ಸಿನ ಉಗ್ರಾಣದಲ್ಲಿ ಸಂಗ್ರಹವಾಗಿರುವ ಭಯ, ಕೋಪ, ಅಸೂಯೆ, ತಿರಸ್ಕಾರ ಇವೇ ಮೊದಲಾದ ಋಣಾತ್ಮಕ ಭಾವನೆಗಳು ಮೇಳೈಸಿರುವ ಆಲೋಚನೆಗಳನ್ನು (ನೋಡಿ: ಮನಸ್ಸಿನ ಮಲಿನಕಾರಿಗಳು) ಗುರುತಿಸಿ ಅವುಗಳು ನಿಮ್ಮ ವರ್ತನೆಯನ್ನು ಪ್ರಭಾವಿಸದಂತೆ ಜಾಗರೂಕರಾಗಿರುವುದನ್ನು ಅಭ್ಯಸಿಸಿ. ಸಂಕ್ಷಿಪ್ತವಾಗಿ: ಮನಸ್ಸಿನ ‘ಮೋಹಕ ರಾಗ’ಕ್ಕೆ ತಕ್ಕಂತೆ ಕುಣಿಯದಿರಿ. ಅಂತಃವೀಕ್ಷಣೆ/ಧ್ಯಾನ ತಂತ್ರಗಳಿಂದ ಇದನ್ನು ಸಾಧಿಸಬಹುದು. ನಾನು ಮತ್ತು ನನ್ನ ಮನಸ್ಸು ಪ್ರತ್ಯೇಕ ಅಸ್ತಿತ್ವ ಉಳ್ಳವು ಎಂಬುದನ್ನು ಸದಾ ನೆನಪಿಸಿಕೊಳ್ಳುತ್ತಿರಬೇಕು. ನಿಮಗಿರುವುದು ಎರಡೇ ಆಯ್ಕೆಗಳು: ಮನಸ್ಸು ಹೇಳಿದಂತೆ ಕೇಳುವುದು, ಮನಸ್ಸಿನ ದೊಂಬರಾಟದ ವೀಕ್ಷಕರಾಗಿರುವುದು.
  • ಮನಸ್ಸಿನಾಳಕ್ಕೆ ಬೇರು ಬಿಟ್ಟಿರುವ ಮನಸ್ಸಿನೊಂದಿಗಿನ ತಾದಾತ್ಮ್ಯ ಮಾನೋಭಾವವನ್ನು ಅಳಿಸಿ ಹಾಕಲು ನೀವು ಪ್ರಯತ್ನಿಸುವಾಗ ಮನಸ್ಸು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ನಾನಾ ತಂತ್ರಗಳನ್ನು ಪ್ರಯೋಗಿಸುತ್ತದೆ. ನಿಮ್ಮನ್ನು ವಿಚಲಿತರನ್ನಾಗಿಸಬಲ್ಲ ಭಾವನೆಗಳನ್ನು ಕೆರಳಿಸಬಲ್ಲ ಆಲೋಚನೆಗಳನ್ನು ತನ್ನ ದಾಸ್ತಾನಿನಿಂದ ಹೊರಕ್ಕೆಳೆದು ಮನಃಪಟಲದ ಮೇಲೆ ಮೂಡಿಸುವುದು, ತುಸು ಕಾಲ ನಿಷ್ಕ್ರಿಯವಾಗಿರುವಂತೆ ನಟಿಸಿ ನೀವು ಅಜಾಗರೂಕರಾಗುವಂತೆ ಮಾಡಿ ಪುನಃ ನಿಮ್ಮ ಮೇಲೆ ಹಿಡಿತ ಸಾಧಿಸುವುದು ಅದು ಪ್ರಯೋಗಿಸುವ ಸಾಮಾನ್ಯ ತಂತ್ರ. ‘ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದೇನೆ, ಈಗ ಅನಪೇಕ್ಷಿತ ಆಲೋಚನೆಗಳು ಮೂಡುತ್ತಿಲ್ಲ’ ಅಂದಂದುಕೊಂಡಾಗಲೇ ಅದು ಪುನಃ ನಿಮಗರಿವಿಲ್ಲದೆಯೇ ನಿಮ್ಮನ್ನು ಬಲೆಗೆ ಕೆಡವಿರುತ್ತದೆ. ವಾಸ್ತವವಾಗಿ ಇದೂ ‘ಒಂದು ಆಲೋಚನೆ’ ಅನ್ನುವುದು ನಮಗೆ ಹೊಳೆದಿರುವುದೇ ಇಲ್ಲ!
  • ಮನಸ್ಸಿನ ಸ್ವಭಾವಸಿದ್ಧ ಗುಣವನ್ನು ಹತೋಟಿಯಲ್ಲಿ ಇಟ್ಟುಕೊಂಡು ಆಲೋಚನಾರಹಿತ ಸ್ಥಿತಿ ತಲುಪಲು ಸಾಧ್ಯ ಎಂಬುದು ಸುದೀರ್ಘಕಾಲದಿಂದ ಸಾಧನೆ ಮಾಡುತ್ತಿರುವವರ ಅಂಬೋಣ. ಜಾಗೃತವಸ್ಥೆಯಲ್ಲಿರುವಾಗಲೇ ಆಲೋಚನಾರಹಿತ ಸ್ಥಿತಿ ತಲುಪುವುದು  ಅಂದರೆ ಜಾಗೃತವಸ್ಥೆಯಲ್ಲಿಯೇ ಗಾಢನಿದ್ರಾವಸ್ಥೆಯನ್ನು ಅನುಭವಿಸುವುದು ಎಂದರ್ಥ! ಅಪೇಕ್ಷಿಸಿದಾಗಲೆಲ್ಲ ಅಪೇಕ್ಷಿಸಿದಷ್ಟು ಅವಧಿ ಈ ಸ್ಥಿತಿಯಲ್ಲಿ ಇರುವುದು ಸುಲಭಸಾಧ್ಯವಲ್ಲ ಎಂಬ ಅರಿವು ಇರಲಿ. ಅಂತಃವೀಕ್ಷಣೆ/ಧ್ಯಾನಾವಧಿಯಲ್ಲಿ ಅನಿರೀಕ್ಷಿತವಾಗಿ ಅಯಾಚಿತವಾಗಿ ಕೆಲವು ಕ್ಷಣಗಳ ಕಾಲ ಇಂಥ ಸ್ಥಿತಿಯ ಅನುಭವ ಆಗುವ ಸಾಧ್ಯತೆ ಇದೆ. ಲೌಕಿಕ ವ್ಯವಾಹಾರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಹಂತ ತಲುಪದವರಿಗೆ ಇಷ್ಟಾದರೂ ಸಾಕು, ಅನೇಕ ಮನೋದೌರ್ಬಲ್ಯಗಳೂ ವಿಕಾರಗಳೂ ನಾಶವಾಗುತ್ತವೆ. ‘ಸ್ಥಿತಪ್ರಜ್ಞತ್ವದತ್ತ’ ಪಯಣಿಸತೊಡಗುವುದರಿಂದ ಜೀವನ ಈಗ ಇರುವುದಕ್ಕಿಂತ ಸುಂದರವಾಗುತ್ತದೆ.

ಗಮನಿಸಿ: ಚಿತ್ತವೃತ್ತಿ ನಿರೋಧ ಅಂದರೆ ಮನಸ್ಸನ್ನು ಕಟ್ಟಿಹಾಕುವುದು ಎಂದರ್ಥವಲ್ಲ, ಅದರ ಕಾರುಬಾರುಗಳಿಂದ ಸಂಪೂರ್ಣವಾಗಿ ಪ್ರಭಾವಿತರಾಗದೇ ಇರುವುದು, ಮನಸ್ಸಿನ ದೊಂಬರಾಟಗಳನ್ನು ದೂರದಿಂದ ವೀಕ್ಷಿಸುವ ಸಾಮರ್ಥ್ಯ ಗಳಿಸುವುದು, ಮನಸ್ಸು ಹೇಳಿದಂತೆ ನಾವು ವರ್ತಿಸುವುದಕ್ಕೆ ಬದಲಾಗಿ ಮನಸ್ಸು ‘ನನ್ನ’ ಆಜ್ಞಾನುಸಾರ ಕಾರ್ಯನಿರ್ವಹಿಸುವಂತೆ ಮಾಡುವುದು ಎಂದರ್ಥ. ಈ ದಿಸೆಯಲ್ಲಿ ಸಾಗುವ ಪ್ರಯತ್ನ ಮಾಡಿದರೆ ಸುಖಶಾಂತಿಯುತ ಜೀವನ ನಡೆಸಲು ಸಾಧ್ಯ ಅನ್ನುವುದು ಸ್ವಾನುಭವ.

Advertisements
This entry was posted in ಅನುಭವಾಮೃತ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s