ಇವರು ನಮ್ಮ ದೇವರುಗಳು!

“I don’t know if God exists, but it would certainly be better for his reputation if he didn’t.” – ಜೂಲೆಸ್ ರೆನಾರ್ಡ್ (೧೮೬೪-೧೯೧೦), ಖ್ಯಾತ ಫ್ರೆಂಚ್ ಲೇಖಕ.

‘ದೇವರು’ ಕುರಿತಾಗಿ ಹಾಲಿ ಇರುವ ನಂಬಿಕೆಗಳು ಈತ ಹೀಗನ್ನಲು ಕಾರಣಗಳು ಎಂಬುದು ನನ್ನ ಗುಮಾನಿ ಅಂಥ ಕೆಲವು ನಂಬಿಕೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ನನ್ನ ಗುಮಾನಿ ಸರಿಯೇ ತಪ್ಪೇ ಎಂಬುದನ್ನು ನೀವೇ ನಿರ್ಧರಿಸಿ.

೧. ಸರ್ವಶಕ್ತ ದೇವರು ಒಬ್ಬ ಗಂಡಸು!

ಈ ಒಬ್ಬ ಸರ್ವೋಚ್ಛ ದೇವರು ತನ್ನ ಕರ್ತವ್ಯಗಳನ್ನು ನಿಭಾಯಿಸಲು ನೆರವು ನೀಡುವ ಎಲ್ಲ ಪ್ರಮುಖ ದೇವರುಗಳೂ ಗಂದಸರು. ಇವರು ತೀರ ಅನಿವಾರ್ಯವಾದಾಗ ಹೆಣ್ಣು ದೇವರುಗಳನ್ನು ತಮ್ಮ ಶತ್ರುಗಳ ಮೇಲೆ ಛೂ ಬಿಡುತ್ತಾರೆ. ಆಡಳಿತದ ಎಲ್ಲ ಪ್ರಮುಖ ಖಾತೆಗಳ ಮುಖ್ಯಸ್ಥರು ಗಂಡು ದೇವರುಗಳು. ಲಲಿತಕಲೆ, ಶಿಕ್ಷಣ, ಪುಟ್ಟ ಗ್ರಾಮಗಳ ಮೇಲುಸ್ತುವಾರಿ ಮುಂತಾದ ಖಾತೆಗಳನ್ನು ಹೆಣ್ಣು ದೇವರುಗಳಿಗೆ ಹಂಚಲಾಗಿದೆ.

೩ ಹೇಗೆ ಜೀವಿಸಬೇಕೆಂಬುದನ್ನು ಈ ಎಲ್ಲ ದೇವರುಗಳು ಹುಲು ಮಾನವರಿಗೆ ಬೋಧಿಸುತ್ತಾರೆಯೇ ವಿನಾ ತಾವು ಅಂತೆಯೇ ಜೀವಿಸುವುದಿಲ್ಲ. ಅವರಿಗೂ ನಮ್ಮಂತೆಯೇ ವಿಪರೀತ ಕೋಪ ಬರುವುದುಂಟು, ಪರಸ್ತ್ರೀಯರ ಬಯಕೆ ಆಗುವುದುಂಟು. ಹೊಗಳುಭಟ್ಟರಿಗೆ ಮತ್ತು ನಿಷ್ಠಾವಂತ ಅನುಯಾಯಿಗಳಿಗೆ ವಿಶೇಷ ಅನುಕೂಲತೆಗಳನ್ನು ಮಾಡಿಕೊಡುವುದೂ ತಮ್ಮನ್ನು ಅಧಿಕಾರದಿಂದ ಕೆಳಕ್ಕಿಳಿಸಿಯಾರು ಎಂಬ ಗುಮಾನಿ ಯಾರ ಮೇಲೆ ಉಂಟಾಗುವುದೋ ಅವರನ್ನು ಸಾಮ, ದಾನ ಭೇದ, ದಂಡೋಪಾಯಗಳಿಂದ ಮಣಿಸುವುದು ಅವರ ಸ್ವಭಾವ ಸಿದ್ಧ ಗುಣ. ಪತ್ನಿಯಲ್ಲದೆ ಉಪಪತ್ನಿಯರನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯ ಅವರಿಗುಂಟು. ಅಧೀನದಲ್ಲಿ ಇರುವವರು ತಾವು ಹೇಳಿದಂತೆ ಕೇಳದಿದ್ದರೆ ಶಿಕ್ಷಿಸುವುದು ಅವರ ಹಕ್ಕು ಆಗಿರುವಂತೆ ತೋರುತ್ತದೆ. ಬಹುಮಂದಿ ದೇವರುಗಳು ಐಷಾರಾಮೀ ಜೀವನ ನಡೆಸುವವರಾಗಿದ್ದರೂ ಪ್ರಾಣಿಗಳನ್ನೇ ವಾಹನಗಳನ್ನಾಗಿ ಇನ್ನೂ ಉಪಯೋಗಿಸುತ್ತಿರುವುದು ವಿಪರ್ಯಾಸ.

೩. ಬಹುಮಂದಿ ದೇವರುಗಳು ಸರ್ವಾಧಿಕಾರಿ ಪಾಳೇಗಾರರ (ಹಿಟ್ಲರ್) ಮನೋಧರ್ಮದವರು. ತಮ್ಮ ಇಚ್ಛೆಯಂತೆ ಎಲ್ಲವೂ ಜರಗಬೇಕು, ತಮಗಿಂತ ದುರ್ಬಲರು ನಡೆದುಕೊಳ್ಳಬೇಕು ಎಂಬುದು ಇವರ ಅಪೇಕ್ಷೆ. ಕಾಲಕಾಲಕ್ಕೆ ತಮಗೆ ಕಪ್ಪಕಾಣಿಕೆಗಳನ್ನು ಕೊಡುವವರಿಗೆ ಮಾತ್ರ ಅವರ ಶ್ರೀರಕ್ಷೆ ಲಭ್ಯ. ಹಾಗೆ ಮಾಡದವರು ಸಿಕ್ಕಿಬಿದ್ದಲ್ಲಿ ವಿಶೇಷ ‘ತಪ್ಪುಕಾಣಿಕೆ’ ಸಲ್ಲಿಸಿ ಬಚಾವಾಗಬಹುದು. ಇಂತು ಮಾಡದವರನ್ನು ಪತ್ತೆಹಚ್ಚಲೋಸುಗ ನಿಯೋಜಿತರಾದ ದೇವರುಗಳು ಇದ್ದಾರೆ. ನ್ಯಾಯಾಧೀಶರ ಕರ್ತವ್ಯ ನಿಭಾಯಿಸಲೋಸುಗ ನಿಯೋಜಿತರಾದ ದೇವರುಗಳ ಎದುರು ಅಪರಾಧಿಗಳನ್ನು ಹಾಜರು ಪಡಿಸಿ ಅಪರಾಧವನ್ನು ದಾಖಲೆ ಸಹಿತ ಸಾಬೀತು ಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಅಪರಾಧಿಯ ಪರ ಯಾರೂ ವಕಾಲತ್ತು ವಹಿಸುವಂತಿಲ್ಲವಾದ್ದರಿಂದ ರೌರವ, ಕುಂಭೀಪಾಕ ಇವೇ ಮೊದಲಾದ ವಿಶೇಷ ಸೆರೆಮನೆ ವಾಸ ಇವರಿಗೆ ಖಾತರಿ. ನ್ಯಾಯಾಧೀಶ ದೇವರಿಗಿಂತ ಉನ್ನತ ಸ್ಥಾನದಲ್ಲಿರುವ ದೇವರುಗಳ ನಿಷ್ಠಾವಂತ ಅನುಯಾಯಿಗಳನ್ನು ಶಿಕ್ಷಿಸಿದರೆ ತಮಗೇ ಅಪಾಯವಾಗುವ ಸಾಧ್ಯತೆ ಇರುವುದರಿಂದ ಈ ನ್ಯಾಯಾಧೀಶ ದೇವರುಗಳು ಸಾಮಾನ್ಯವಾಗಿ ಬಲು ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ.

೪. ದೇವರುಗಳ ದರ್ಶನ ಭಾಗ್ಯ ಪಡೆಯುವುದು ಸುಲಭಸಾಧ್ಯವಲ್ಲ. ಪಡೆಯಲು ಪ್ರಯತ್ನಿಸುವವರು ತಮ್ಮ ‘ಕುರ್ಚಿ’ಯನ್ನು ಕಿತ್ತುಕೊಳ್ಳುವವರಲ್ಲ ಎಂಬುದನ್ನು ನಾನಾ ಪರೀಕ್ಷೆಗಳನ್ನು ನೀಡಿ ಖಾತರಿ ಪಡಿಸಿಕೊಂಡ ಬಳಿಕವೇ ದರ್ಶನ ಕರುಣಿಸುವ ಸಾಧ್ಯತೆ (ಖಾತರಿ ಕೊಡಲಾಗುವುದಿಲ್ಲ) ಇದೆ ಅನ್ನಬಹುದು. ಅನೇಕ ಸಂದರ್ಭಗಳಲ್ಲಿ ಎದುರಾದ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ದರ್ಶನಾಕಾಂಕ್ಷಿಗಳು ತಮ್ಮ ಬುದ್ಧಿಮತ್ತೆಯಿಂದ ದೇವರಿಗೇ ‘ಪಂಗ ನಾಮ’ ಹಾಕಿ ಅವರಿಗೆ ಫಜೀತಿ ಮಾಡಿದ್ದೂ ಉಂಟು.

೫. ಹೆಚ್ಚುಕಮ್ಮಿ ಎಲ್ಲ ದೇವರುಗಳು ಆಡಳಿತ ನಡೆಸುವುದು ‘ಕಷ್ಟಕಾರ್ಪಣ್ಯಗಳನ್ನು’ ಸೃಷ್ಟಿಸುವ ‘ಭಯೋತ್ಪಾದಕ’ ಅಸ್ತ್ರಗಳ ನರವಿನಿಂದ. ದೇವರುಗಳು ಒಂದು ರೀತಿಯಲ್ಲಿ ‘ಭಯೋತ್ಪಾದಕರು’ ಆಗಿರುವುದರಿಂದಲೋ ಏನೋ ಅನೇಕ ಹುಲುಮಾನವರು ಅಪೇಕ್ಷಿತ ಫಲ ದೊರೆಯದಿದ್ದರೂ ಅವರನ್ನು ಓಲೈಸುವ ನಾಟಕವಾಡುತ್ತಾ ಬದುಕು ಸವೆಸುತ್ತಿದ್ದಾರೆ. ಈ ಭಯೋತ್ಪಾದಕ ದೇವರುಗಳನ್ನು ಓಲೈಸಿ ಒಲಿಸಿಕೊಳ್ಳು ವಿಧಾನಗಳಲ್ಲಿ ತಾವು ನಿಷ್ಣಾತರೆಂದು ಘೋಷಿಸಕೊಂಡು ಅದನ್ನೇ ಜೀವನೋಪಾಯವನ್ನಾಗಿಸಿಕೊಂಡ ಮಧ್ಯವರ್ತಿಗಳ/ದಲ್ಲಾಳಿಗಳ ದಂಡು ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಬಹುಶಃ ಈ ಪಟ್ಟಿಯನ್ನು ಇನ್ನೂ ವಿಸ್ತರಿಸುವ ಸಾಮರ್ಥ್ಯ ನಿಮಗೇ ಇರುವುದರಿಂದ ನಾನು ಈ ಮುಂದಿನ ಉಕ್ತಿಯನ್ನು ಉಲ್ಲೇಖಿಸಿ ಇಷ್ಟಕ್ಕೇ ವಿರಮಿಸುತ್ತೇನೆ.

“Our ideas of God tell us more about ourselves than about Him.” – ತಾಮಸ್ ಮೆರ್ಟನ್ (೧೯೧೫-೧೯೬೮), ಕ್ರಿಶ್ಚಿಯನ್ ಮೋಕ್ಷಾಕಾಂಕ್ಷೀ ಯೋಗಿ.

Advertisements
This entry was posted in ಅನುಭವಾಮೃತ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s