ನನ್ನನ್ನು ನಾನೇ ಹುಡುಕತೊಡಗಿದಾಗ

ಹೌದು, ಸುಮಾರು ೩೦ ವರ್ಷಗಳಿಂದ ನನ್ನನ್ನು ನಾನೇ ಹುಡುಕುತ್ತಿದ್ದೇನೆ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವ ಕಾರ್ಯಕ್ರಮಗಳನ್ನು ನೀಡುತ್ತಿದ್ದ ನಾನು ಅವೈಜ್ಞಾನಿಕದಂತೆ ತೋರುವ ಪ್ರಶ್ನೆಯೊಂದಕ್ಕೆ ಉತ್ತರ ತಿಳಿಯಲೋಸುಗ ವಿಚಿತ್ರ ಅನ್ನಬಹುದಾದ ಈ ಹುಡುಕಾಟ ಆರಂಭಿಸಲು ಕಾರಣವಾದ ಅನೇಕ ಸಂಗತಿಗಳನ್ನೂ ಆದ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.

೬೦ ರ ದಶಕದ ಪೂರ್ವಾರ್ಧದಲ್ಲಿ ನೋಡಿದ್ದ ಡಾ ರಾಜಕುಮಾರ್ ಅಭಿನಯಿಸಿದ್ದ ‘ಭಕ್ತ ಕನಕದಾಸ’ ಎಂಬ ಚಲನಚಿತ್ರದಲ್ಲಿನ ಒಂದು ಸಂಭಾಷಣೆ ಇನ್ನೂ ನನ್ನ ನೆನಪಿನಲ್ಲಿ ಉಳಿದಿದೆ. ಗುರು ವ್ಯಾಸತೀರ್ಥರು ಕೇಳಿದ “ನೀನು ಮೋಕ್ಷಕ್ಕೆ ಹೋಗುವಿಯೋ” ಎಂಬ ಪ್ರಶ್ನೆಗೆ ಕನಕದಾಸರ ಉತ್ತರ ಹೀಗಿತ್ತು: “ನಾನು ಹೋದರೆ ಹೋದೇನು”.  ಆಗ ನನ್ನನ್ನು ಕಾಡಿದ ಪ್ರಶ್ನೆ ಈ ‘ನಾನು’ ಅಂದರೇನು? ಅದಕ್ಕೆ ಸ್ವತಂತ್ರವಾದ ಅಸ್ತಿತ್ವ ಇದೆಯೇ? ಅದು ಹೋಗುವುದು ಅಂದರೇನು? ಅಂದಿನ ದಿನಗಳಲ್ಲಿ, ತುಸು ಸಮಯ ನನ್ನನ್ನು ಆಲೋಚಿಸುವಂತೆ ಮಾಡಿದ ಈ ಪ್ರಶ್ನೆಯ ಉತ್ತರ ಅರೆಂಬರೆ ಅರ್ಥವಾದಂತೆ ಭಾಸವಾದರೂ ಮನೋವಿಜ್ಞಾನದ ಪರಿಭಾಷೆಯಲ್ಲಿ ಕ್ರಮೇಣ ಮನಸ್ಸಿನಾಳಕ್ಕೆ ಜರುಗಿ ಹುದುಗಿತು.

೬೦ ರ ದಶಕದ ಉತ್ತರಾರ್ಧದಲ್ಲಿ ಮಡಿಕೇರಿಯ ಬಸ್ ನಿಲ್ದಾಣದ ಬಳಿ ಇದ್ದ ಪುಸ್ತಕದ ಅಂಗಡಿಯೊಂದರಲ್ಲಿ ಸ್ವಾಮಿ ಚಿದ್ಭವಾನಂದರ ಟಿಪ್ಪಣಿಗಳೊಂದಿಗೆ ಪ್ರಕಟವಾಗಿದ್ದ ಭಗವದ್ಗೀತೆ ಅಕಸ್ಮಿಕವಾಗಿ ಕಂಡಿತು. ರೂ ೧೫ ಬೆಲೆಯ ಬಲು ದಪ್ಪನೆಯ ಈ ಪುಸ್ತಕವನ್ನು ತಿರುವಿಹಾಕಿದಾಗ ಟಿಪ್ಪಣಿಗಳು ಸರಳವಾಗಿಯೂ ನನಗೆ ಅರ್ಥವಾಗುವಂತೆಯೂ ಇವೆ ಅನ್ನಿಸಿದ್ದರಿಂದ ಖರೀದಿಸಿದೆ. ಪುಸ್ತಕದಲ್ಲಿದ್ದ ಅಧ್ಯಾಯಗಳ ಪೈಕಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ೩ ನೇ ಅಧ್ಯಾಯ. ಅದರ ತಿರುಳನ್ನು ಮನೋಗತ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಈ ಕಸರತ್ತಿನಿಂದಾಗಿ ‘ನಾನು ಅಂದರೆ ಕರ್ಮಬಂಧನದಲ್ಲಿ ಸಿಕ್ಕಿಹಾಕಿಕೊಂಡು ಪದೇಪದೇ ಜನನ-ಮರಣ ಚಕ್ರದಲ್ಲಿ ಅನೈಚ್ಛಿಕವಾಗಿ ಸುತ್ತುತ್ತಿರುವ ಅವಿನಾಶಿಯಾದ ಆತ್ಮ’ ಅನ್ನುವ ‘ಪುಸ್ತಕದ ಬದನೆಕಾಯಿ’ ಮನಸ್ಸಿನಲ್ಲಿ ಬೇರೂರಿತು. ಗೀತೆಯಲ್ಲಿ ಅದರಿಂದ ಪಾರಾಗುವ ವಿಧಾನ ವಿವರಿಸಿದೆಯಾದರೂ ಅದರಂತೆ ನನ್ನಂಥ ಹುಲುಮಾನವರಿಂದ ಬದುಕಲು ಸಾಧ್ಯವಿಲ್ಲವೆಂದು ತೀರ್ಮಾನಿಸಿದೆ. ಕೆಲವೊಮ್ಮೆ ಭಾಷಣಗಳಲ್ಲಿ ಉಲ್ಲೇಖಿಸಲು ಅಗತ್ಯವಾದ ಶ್ಲೋಕಗಳ ಆಕರವಾಗಿ ಈ ಪುಸ್ತಕ ಬಳಸುತ್ತಿದ್ದೆ. ಅದು ಇಂದಿಗೂ ನನ್ನ ಹತ್ತಿರ ಇದೆ.

೭೦ ರ ದಶಕದಲ್ಲಿ ಒಂದು ಬಾರಿ ಅಧಿಕೃತ ಕಾರ್ಯ ನಿಮಿತ್ತ ತಿರುವಣ್ಣಾಮಲೈಗೆ ಹೋಗಿದ್ದೆ. ಶ್ರೀ ರಮಣ ಮಹರ್ಷಿ ಎಂಬ ಸಂತರ ಹೆಸರು ನಾನು ಮೊದಲ ಬಾರಿ ಕೇಳಿದ್ದೇ ಆಗ. ಅವರ ಬೋಧನೆಗಳ ಕುರಿತಾದ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತುದ್ದಾಗ ನನ್ನ ಗಮನ ಸೆಳೆದ ಒಂದು ವಿಚಾರ ಇಂತಿದೆ: ಆತ್ಮಜ್ಙಾನ ಪ್ರಾಪ್ತಿಗೆ ನಮ್ಮ ಅಂತರಂಗವನ್ನು ಶೋಧಿಸಿ ‘ನಾನು ಯಾರು’ ಎಂಬ ಪ್ರಶ್ನೆಗೆ ಉತ್ತರ ಪತ್ತೆಹಚ್ಚುವುದೇ ಅತ್ಯುತ್ತಮ ಉಪಾಯ. ಮೇಲ್ನೋಟಕ್ಕೆ ಬಲು ಸುಲಭ ಅನ್ನಿಸುವ ಈ ತಂತ್ರ ವಾಸ್ತವವಾಗಿ ಸುಲಭವಲ್ಲ ಅನ್ನುವುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೆಲವು ನಿಮಿಷಗಳ ಅಥವ ಗಂಟೆಗಳ ಅಂತಃವೀಕ್ಷಣೆಯಿಂದ ಆಗುವ ಕೆಲಸ ಇದಲ್ಲ ಎಂಬ ಅರಿವೂ ಆಯಿತು. ಅಲ್ಲಿಗೆ ಆ ಪ್ರಯತ್ನ ಕೈಬಿಟ್ಟು ಜೀವನ ಮುಂದುವರಿಸಿದೆ.

೮೦ ರ ದಶಕದಲ್ಲಿ ಒಂದು ವರ್ಷ ಮೈಸೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳ ಕೋಲಾರ ಕೇಂದ್ರದಲ್ಲಿ ಉಪ ಮುಖ್ಯ ಪರೀಕ್ಷಾಧಿಕಾರಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದೆ. ಆ ಅವಧಿಯಲ್ಲಿ ಒಂದು ದಿನ ಅದ್ವೈತ ಸಿದ್ಧಾಂತದ ಕುರಿತು ನನ್ನ ಪರಿಚಿತರೊಬ್ಬರ ಪ್ರವಚನ ಕೇಳಲು ಹೋಗಿದ್ದೆ. ಶ್ರೀಯುತರು ತಮಿಳರು. ಎಂದೇ, ಪ್ರವಚನ ಇಂಗ್ಲಿಷ್ ಭಾಷೆಯಲ್ಲಿತ್ತು.  ಪ್ರವಚನಾನಂತರ ನಡೆದ ಸಂವಾದದಲ್ಲಿ ನಾನು ಏನೋ ಒಂದು ಪ್ರಶ್ನೆ ಕೇಳಿದೆ. ಅದೇನೆಂಬುದು ಈಗ ಮರೆತು ಹೋಗಿದೆಯಾದರೂ ಅದಕ್ಕೆ ಅವರು ನೀಡಿದ ಉತ್ತರ ಮರೆಯಲು ಸಾಧ್ಯವೇ ಇಲ್ಲ. ಅದರ ಸಂಕ್ಷಿಪ್ತ ರೂಪ ಇಂತಿದೆ: “What is your age Mr. Rao?”, “40 years, Sir”, “ So you have been on this planet for the past 40 years”, “Yes, Sir”, “In these 40 years of existence you must have come to your own conclusion about the purpose of your life, what life in general is all about etc. Have you not Mr. Rao?”, “Sir, I have not thought about it”, “What? You have wasted 40 precious years of your life and yet you want to argue with me about Advaita Philosophy?” ಪೆಚ್ಚು ಮುಖ ಹಾಕಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡುವುದರ ಹೊರತಾಗಿ ಬೇರಾವ ಮಾರ್ಗವೂ ಕಾಣಿಸಲಿಲ್ಲ. ಹಿಂದಿನಿಂದ ಮನಸ್ಸಿನಾಳದಲ್ಲಿ ಹುದುಗಿದ್ದ ‘ನಾನು ಯಾರು’ ಎಂಬ ಪ್ರಶ್ನೆ ಪುನಃ ಮೇಲೆದ್ದು ಕಾಡತೊಡಗಿತು, ಹೊಸತಾಗಿ ಸೇರಿಕೊಂಡ ‘ನನ್ನ ಜೀವನದ ಉದ್ದೇಶ ಏನು?’ ಎಂಬ ಉಪಪ್ರಶ್ನೆಯೊಂದಿಗೆ. ನನ್ನ ಈ ‘ಅವೈಜ್ಞಾನಿಕ ವಿಷಯದ’ ಕುರಿತಾದ ಕುತೂಹಲವನ್ನು ಅನೇಕರು, ವಿಶೇಷತಃ ‘ಆತ್ಮ’ದ ಮತ್ತು ‘ದೇವರ’ ಅಸ್ತಿತ್ವವನ್ನು ಒಪ್ಪದ ಮಿತ್ರರು ಗೇಲಿ ಮಾಡಿದ್ದುಂಟು. ಪ್ರತಿಕ್ರಿಯೆಯಾಗಿ ಅವರಿಗೆ ನಾನು ಕೇಳುತ್ತಿದ್ದ ಪ್ರಶ್ನೆಗಳು ಇಂತಿವೆ: ನೈಸರ್ಗಿಕ ವಿದ್ಯಮಾನಗಳು ನಿಯಮಬದ್ಧವಾದವು ಮತ್ತು ಈ ನಿಯಮಗಳು ಅನುಲ್ಲಂಘನೀಯವಾದವು ಎಂಬ ನಂಬಿಕೆಯೇ ವಿಜ್ಞಾನದ ಬುನಾದಿ. ಈ ನಿಯಮಗಳನ್ನು ಪಡಯಲು ವಿಜ್ಞಾನಿಗಳಯ ಶ್ರಮಿಸುತ್ತಿದ್ದಾರಾದರೂ ಅವರ ಅವಧಾನ ಜ್ಞಾನೇಂದ್ರಿಯ ಗ್ರಾಹ್ಯವಾದ ಭೌತ ವಿದ್ಯಮಾನಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿರುವುದು ಏಕೆ? ‘ಪ್ರಾಣ (ಲೈಫ್)’ ಎಂಬ ವಿಶಿಷ್ಟತೆಯು ಅಧ್ಯಯನಯೋಗ್ಯ ವಸ್ತುವಲ್ಲ ಎಂಬ ನಿಲುವು ತಳೆದಿರುವುದು ಏಕೆ? ಹುಟ್ಟು-ಸಾವು’ ಎಂಬ ವಿದ್ಯಮಾನಗಳ ಘಟಿಸುವಿಕೆಯ ನಿರ್ಧಾರಕ ನಿಯಮಗಳು ಇಲ್ಲ ಎಂಬ ನಿಲುವು ತಳೆದಿರುವುದು ಏಕೆ? ಜ್ಞಾನೇಂದ್ರಿಯ ಗ್ರಾಹ್ಯ ವಿದ್ಯಮಾನಗಳು ಮಾತ್ರ ನಿಯಮಬದ್ಧವಾಗಿ ನಡೆಯುತ್ತವೆ ಎಂಬುದನ್ನು ನಂಬುವುದು ಹೇಗೆ? ಕರ್ಮಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ವಿವರಿಸಬಹುದಾದ ವಿದ್ಯಮಾನಗಳನ್ನು ಆಕಸ್ಮಿಕಗಳು ಎಂಬ ಹಣೆಪಟ್ಟಿ ಹಚ್ಚಿ ನಿರ್ಲಕ್ಷಿಸುವುದು ವೈಜ್ಞಾನಿಕ ಮನೋಧರ್ಮದ ಲಕ್ಷಣವೇ? ಇಂಥ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ನನ್ನ ವೈಜ್ಞಾನಿಕ ಮನೋಧರ್ಮದ ಸಾಚಾತನವನ್ನು ಪರೋಕ್ಷವಾಗಿ ಇವರು ಪ್ರಶ್ನಿಸಿದ್ದಾರೆಯೇ ವಿನಾ ಯಾರೂ ಅಲ್ಲಗಳೆಯಲಾಗದ ವಾದಗಳನ್ನು ಮಂಡಿಸಿಲ್ಲ.

ಭಗವದ್ಗೀತೆ ಮತ್ತು ಉಪನಿಷತ್ತುಗಳಲ್ಲಿ ಹೇಳಿರುವುದರ ಪೈಕಿ ಕೆಲ ಅಂಶಗಳ ಕುರಿತಾದ ಚಿಂತನೆ ಮಾಡುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಅಸ್ಪಷ್ಟ ಪರಿಕಲ್ಪನೆಗಳನ್ನು ತುಸು ಸ್ಷಷ್ಟೀಕರಿಸಲು ಆಕಸ್ಮಿಕವಾಗಿ ನನಗೆ ಸಿಕ್ಕಿದ ಕೆಲವು ಇಂಗ್ಲಿಷ್ ಪುಸ್ತಕಗಳು (ಉದಾ: ೧. Many Mansions – The Edgar Cayce Story of Reincarnation (1950), ೨. Reflections on Life after Life (1977), ೩. What they saw At The Hour Of Death – The results of research on over 1000 afterlife experiences). ನೆರವು ನೀಡಿದವು. [ನೋಡಿ: ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ?, ‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ, ಪುನರ್ಜನ್ಮ – ಒಂದು ವಿವೇಚನೆ]  ಇಂತಿರುವಾಗಲೇ ನನ್ನ ಪರಿಚಿತರು ಮಹರ್ಷಿ ಮಹೇಶ ಯೋಗಿ (೧೯೧೮-೨೦೦೮) ಆವಿಷ್ಕರಿಸಿದ ‘ಅತೀಂದ್ರಿಯ ಧ್ಯಾನ (ಟ್ರ್ಯಾನ್ಸೆಂಡೆಂಟಲ್ ಮೆಡಿಟೇಷನ್)’ [ನೋಡಿ: ‘ಧ್ಯಾನ’ – ತಥ್ಯ, ಮಿಥ್ಯ.] ತರಬೇತಿ ಶಿಬಿರಗಳನ್ನು ಮೈಸೂರಿನಲ್ಲಿ ಆಯೋಜಿಸಿದರು. ಈ ಶಿಬಿರದಲ್ಲಿ ಶಾಸ್ತ್ರೋಕ್ತ ತರಬೇತಿ ಪಡೆದು ಅಭ್ಯಾಸ ಮಾಡಲು ಆರಂಭಿಸಿದೆ. ಯಾವ ಉದ್ದೇಶದಿಂದ ಈ ಕಸರತ್ತು ಆರಂಭಿಸಿದ್ದೆನೋ ಅದೊಂದನ್ನು ಬಿಟ್ಟು ಬೇರೆ ಏನೇನೋ ಅನುಭವಗಳು ಆಗತೊಡಗಿದವು. ಉದಾಹರಣೆ: ದೇಹದ ಯಾವುದೋ ಭಾಗದಲ್ಲಿ ಅಸಹನೀಯ ತುರಿಕೆ, ನಿರಂತರ ಆಕಳಿಕೆ, ಎದ್ದು ಓಡಿ ಹೋಗುವಂತೆ ಮಾಡುವ ಸಾಮರ್ಥ್ಯವಿರುವ ಚಡಪಡಿಕೆ, ನಿದ್ದೆಗೆ ಶರಣಾಗುವಿಕೆ, ವಿನಾ ಕಾರಣ ಕಣ್ಣೀರು. ಧ್ಯಾನ ಮಾಡುವುದನ್ನು ಬಿಟ್ಟುಬಿಡುವಂತೆ ಪ್ರೇರೇಪಿಸುವುದೇ ಈ ಅನುಭವಗಳ ಉದ್ದೇಶ ಎಂಬುದು ನನ್ನ ಗುಮಾನಿ. ಇಂಥ ಅನುಭವಗಳು ಆಗುವುದರ ಕುರಿತು ಮತ್ತು ಅವನ್ನು ನಿಭಾಯಿಸುವುದು ಹೇಗೆಂಬುದರ ಕುರಿತು ತರಬೇತಿ ಶಿಬಿರದಲ್ಲಿ ಸೂಚ್ಯವಾಗಿ ತಿಳಿಸಿದ್ದರಿಂದ ಧ್ಯಾನ ಮಾಡುವುದನ್ನು ಮುಂದುವರಿಸಿದೆ. ಈ ಅವಧಿಯಲ್ಲಿ ನಾನು ಗಮನಿಸಿದ ಇನ್ನೊಂದು ಅಂಶ – ನಾವು ಎಚ್ಚರವಾಗಿದ್ದಾಗ ನಮ್ಮ ಮನಸ್ಸಿಗೆ ತೆಪ್ಪಗಿರುವುದು ಹೇಗೆಂದು ಗೊತ್ತೇ ಇಲ್ಲ! ಅವ್ಯಾಹತವಾಗಿ, ನಿರಂತರವಾಗಿ ತನ್ನೊಂದಿಗೆ ತಾನೇ ಅದು ಸಂವಾದದಲ್ಲಿ ತೊಡಗಿಸಿಕೊಂಡಿರುತ್ತದೆ, ದಿಕ್ಕುದೆಸೆ ಇಲ್ಲದ ಆಲೋಚನೆಗಳ ಪ್ರವಾಹವನ್ನು ಹೊರಹೊಮ್ಮಿಸುತ್ತಲೇ ಇರುತ್ತದೆ. ನಾವು ಜಾಗರೂಕರಾಗಿ ಇಲ್ಲದೇ ಇದ್ದರೆ ನಮ್ಮ ಎಲ್ಲ ವರ್ತನೆಯ ಮೇಲೆ ನಮಗರಿವಿಲ್ಲದೆಯೇ ಅನಪೇಕ್ಷಣೀಯ ಪ್ರಭಾವ ಬೀರುತ್ತದೆ ಈ ಸ್ವ-ಸಂವಾದ. ನಾವು ಯಾವುದೇ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಇರುವಾಗಲೂ ಈ ಸ್ವ-ಸಂವಾದ ಹಿನ್ನೆಲೆಯಲ್ಲಿ ಜರಗುತ್ತಲೇ ಇದ್ದರೂ ನಾವು ಅದನ್ನು ಗಮನಿದೇ ಇರುವುದು ಅಚ್ಚರಿಯ ಸಂಗತಿ. ಕಣ್ಣು ಮುಚ್ಚಿ ಧ್ಯಾನ ಮಾಡತೊಡಗಿದಾಗ ಈ ತಥ್ಯದ ಅರಿವಾಗುವುದು ಖಚಿತ. ಜಾಗರೂಕರಾಗಿಲ್ಲದೇ ಇದ್ದರೆ ಧ್ಯಾನ ಮಾಡುವುದನ್ನು ಬಿಟ್ಟು ಈ ಆಲೋಚನಾ ಪ್ರವಾಹದಲ್ಲಿ ಕೊಚ್ಚಿ ಹೋಗುವುದೂ ಖಚಿತ. ಧ್ಯಾನಾವಧಿಯಲ್ಲಿ ಮನಃಪಟಲದಲ್ಲಿ ಮೂಡುವ ಆಲೋಚನೆಗಳನ್ನು ಅವು ಮೂಡಿದ ತಕ್ಷಣವೇ ಗುರುತಿಸಿ ನಿರ್ಲಕ್ಷಿಸಿ ಅಪೇಕ್ಷಿತ ಅಂಶದ ಮೇಲೆ ಅವಧಾನ ಕೇಂದ್ರೀಕರಿಸುವುದರಲ್ಲಿ ಯಶಸ್ವಿಗಳಾಗಬೇಕಾದರೆ ನಾವು ಆಧುನಿಕ ಭಗೀರಥರು ಆಗಲೇ ಬೇಕಾಗುತ್ತದೆ. ನನ್ನ ಈ ಪ್ರಯತ್ನಗಳ ಪರಿಣಾಮವಾಗಿ ನನ್ನ ಉದ್ದೇಶ ಈಡೇರದೇ ಇದ್ದರೂ ಇನ್ನೊಂದು ರೀತಿಯ ಲಾಭವಾಯಿತು. ನನಗೆ ಸುಮಾರು ೩+ ವರ್ಷ ವಯಸ್ಸಾದಂದಿನಿಂದ ಆರಂಭಿಸಿ ಜೀವನದುದ್ದಕ್ಕೂ ಘಟಿಸಿದ್ದ ‘ಮರೆತು’ ಹೋಗಿದ್ದ ಎಲ್ಲ ‘ಪ್ರಮುಖ ಹಿತಕರ ಮತ್ತು ಅಹಿತಕರ ಘಟನೆಗಳೂ’ ಮನಃಪಟಲದ ಮೇಲೆ  ಮೂಡಿದವು. ಇವು ಯಾವುದೇ ನಿರ್ದಿಷ್ಟ ಕ್ರಮದಲ್ಲಿಯೇ ಆಗಲಿ, ನಿಯತಕಾಲಿಕವಾಗಿ ಆಗಲಿ ಜ್ಞಾಪಕಕ್ಕೆ ಬರುವುದಿಲ್ಲ, ಅಯಾಚಿತವಾಗಿ ಅನಿರೀಕ್ಷಿತ ಕ್ಷಣಗಳಲ್ಲಿ ಬರುತ್ತವೆ ಎಂಬುದು ಗಮನಾರ್ಹ. ತತ್ಪರಿಣಾಮವಾಗಿ ‘ಸ್ವಭಾವಸಿದ್ಧ’ ಅಂದುಕೊಂಡಿದ್ದ ನನ್ನ ಅನೇಕ ವರ್ತನೆಗಳ ‘ಹುಟ್ಟಿನ ರಹಸ್ಯ’ ತಿಳಿಯಿತು (ಬಹುಶಃ ನಾನು ಶೈಕ್ಷಣಿಕ ಮನೋವಿಜ್ಞಾನದ ವಿದ್ಯಾರ್ಥಿಯೂ ಆಗಿದುದ್ದರಿಂದ). ಈ ಅನುಭವಕ್ಕೆ ಚಿಕಿತ್ಸಕ ಮೌಲ್ಯವಿರುವುದರಿಂದ ನನ್ನ ಶ್ರಮ ಪೂರ್ಣ ವ್ಯರ್ಥವಾಗಲಿಲ್ಲ. ನನ್ನ ಮೂಲ ಉದ್ದೇಶ ಈಡೇರುವ ಅಥವ ಆ ದಿಸೆಯಲ್ಲಿ ಸಾಗುವ ಯಾವ ಲಕ್ಷಣಗಳೂ ನನಗೆ ಗೋಚರಿಸದೇ ಇದದ್ದರಿಂದ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುವ ಮತ್ತು ವೃತ್ತಿಸಂಬಂಧಿತ ಕಾರ್ಯಬಾಹುಳ್ಯದ ನೆಪ ಮುಂದಿಟ್ಟುಕೊಂಡು ಅವಕಾಶವಾದಾಗ ಧ್ಯಾನ ಮಾಡುವುದೆಂದೂ ಸಂಬಂಧಿತ ಸಾಹಿತ್ಯ ದೊರೆತರೆ ಅಧ್ಯಯಿಸುವದೆಂತಲೂ ನಿರ್ಧರಿಸಿದೆ, ಅಂತೆಯೇ ನಡೆದುಕೊಂಡೆ.

೨೦ ನೇ ಶತಮಾನದಿಂದ ೨೧ ನೇ ಶತಮಾನಕ್ಕೆ ಕಾಲಿಟ್ಟರೂ ಹೇಳಿಕೊಳ್ಳುವಂಥ ಪ್ರಗತಿಯನ್ನೇನೂ ಸಾಧಿಸಲಿಲ್ಲ. ೨೦೧೨ ರಲ್ಲಿ ಒಂದು ದಿನ ಬೆಂಗಳೂರಿನಲ್ಲಿ ನೆಲೆಸಿರುವ ನನ್ನ ಮಗ ತಾನು ಒಂದು ವಿಶಿಷ್ಟ ತರಬೇತಿ* ಪಡೆದಿರುವುದಾಗಿಯೂ ಅದರಿಂದ ಬಹಳಷ್ಟು ಲಾಭವಾಗಿರುವುದಾಗಿಯೂ ತರಬೇತಿ ಶಿಬಿರದ ಅಂತಿಮ ಹಂತದಲ್ಲಿ ಒಂದು ದಿನ ಶಿಬಿರಕ್ಕೆ ಆತ್ಮೀಯ ಅತಿಥಿಗಳನ್ನು ಕರೆತರಲು ಅವಕಾಶ ಇದೆಯೆಂದೂ ತಿಳಿಸಿ ನಮ್ಮನ್ನು ಬರಲೇಬೇಕೆಂದು ಆಗ್ರಹಿಸಿದ. ಅವನ ಆಹ್ವಾನವನ್ನು ಮನ್ನಿಸಿ ನಾನೂ ನನ್ನ ಹೆಂಡತಿಯೂ ಹೋಗಿದ್ದೆವು. ಅಂದು ಜರಗಿದ ಕಾರ್ಯಕ್ರಮವನ್ನು ವೀಕ್ಷಿಸಿ ತರಬೇತಿ ಪಡೆದವರ ಅನುಭವಗಳನ್ನು ಕೇಳಿದ ಬಳಿಕ ಈ ತರಬೇತಿಯಿಂದ ನಮಗೂ ಲಾಭವಾಗುತ್ತದೆ ಅಂದನ್ನಿಸಿತು. ತಲಾ ರೂ ೧೦೨೦೦ ಶುಲ್ಕ ಪಾವತಿಸಿ ಮುಂದಿನ ಮೊದಲ ಹಂತದ ತರಬೇತಿ ಶಿಬಿರಕ್ಕೆ ನಮ್ಮ ಹೆಸರನ್ನು ನೋಂದಾಯಿಸಿದೆವು. ಒಂದೆರಡು ದಿನಗಳ ನಂತರ ನನ್ನ ಸೊಸೆಯೂ ತನ್ನ ಹೆಸರನ್ನು ನೋಂದಾಯಿಸಿದಳು. (ಇತ್ತೀಚೆಗೆ ನನ್ನ ಮೊಮ್ಮಗನೂ ಮಕ್ಕಳಿಗಾಗಿ ಇರುವ ಶಿಬಿರದಲ್ಲಿ ಭಾಗವಹಿಸಿದ್ದ). ಈ ತರಬೇತಿಯಿಂದ ಉಳಿದವರಿಗೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ನನ್ನ ಹುಡುಕಾಟಕ್ಕೆ ಅಡ್ಡಿಯಾಗಿದ್ದ ಅನೇಕ ಅಂಶಗಳನ್ನು ಗುರುತಿಸಲು ಈ ತರಬೇತಿ ನನಗೆ ನೆರವು ನೀಡಿತು. ಇವೆಲ್ಲವೂ ನನ್ನೊಳಗೇ ಇದ್ದವು! ಇದ್ದವೆಂಬ ಅರಿವು ಆ ತನಕ ನನಗೇ ಇರಲಿಲ್ಲ. ಇವಕ್ಕೆ ಸಂಬಂಧಿಸಿದಂತೆ ನಾನು ಕಂಡುಕೊಂಡದ್ದನ್ನು ಈಗಾಗಲೇ ನನ್ನ ಜೀವನ ದರ್ಶನ ಲೇಖನ ಮಾಲಿಕೆ ಮತ್ತು ಇತರ ಕೆಲವು ಲೇಖನಗಳ ಮುಖೇನ ನಿಮ್ಮೊಡನೆ ಹಂಚಿಕೊಂಡಿದ್ದೇನೆ. (ನೋಡಿ: ಅನೇಕ ಅನರ್ಥಗಳ ಮೂಲ – ಎಲ್ಲವನ್ನೂ ಅರ್ಥೈಸುವ ಪ್ರವೃತ್ತಿ, ನಾನೂ ನೀವೂ ನಟಶಿರೋಮಣಿಗಳು ಎಂಬ ತಥ್ಯ ನಿಮಗೆ ಗೊತ್ತೇ?, ಮನಸ್ಸಿನ ಮಲಿನಕಾರಿಗಳು, ನಮ್ಮ ಜೀವಂತಿಕೆಯ ಚೈತನ್ಯದ ಪ್ರಮುಖ ಆಕರ – ನಮ್ಮ ಕುಟುಂಬ). ಈ ಅನುಭವದಿಂದ ಉತ್ತೇಜಿತನಾದ ನಾನು ನನ್ನಂತರಂಗದಲ್ಲಿಯೇ ಬೇರೂರಿ ನನ್ನ ಹುಡುಕಾಟಕ್ಕೆ ಅಡ್ಡಿಯನ್ನು ಉಂಟುಮಾಡುತ್ತಿದ್ದ ಅಂಶಗಳನ್ನು ನಿವಾರಿಸುವುದರತ್ತ ಗಮನ ಹರಿಸಿದೆ. ಆಗ ನನಗೆ ನೆರವು ನೀಡಿದವು You Can Heal Your Life ಮತ್ತು Inner Magic ಎಂಬ ಪುಸ್ತಕಗಳು. ಈ ನೆರವಿನ ಸ್ವರೂಪವನ್ನು ಸೂಚ್ಯವಾಗಿ ಲೇಖನವೊಂದರ ಮುಖೇನ ಈಗಾಗಲೇ ತಿಳಿಸಿದ್ದೇನೆ. (ನೋಡಿ: ತಂತಾನೇ ಮೂಡುವ ಋಣಾತ್ಮಕ ಆಲೋಚನೆಗಳು – ನಮ್ಮನ್ನು ನಾಶ ಮಾಡಬಲ್ಲ ‘ಗೆದ್ದಲುಹುಳು’ಗಳು). ಬಲು ಹಿಂದೆ ಮಾಡುತ್ತಿದ್ದ ಅತೀಂದ್ರಿಯ ಧ್ಯಾನಕ್ಕೆ ಬದಲಾಗಿ ಸಾವಧಾನತೆ (ಮೈಂಡ್ ಫುಲ್ ನೆಸ್) ಅಥವ ವಿಪಾಸನ ಧ್ಯಾನ ತಂತ್ರದ [ನೋಡಿ: ‘ಧ್ಯಾನ’ – ತಥ್ಯ, ಮಿಥ್ಯ.] ನೆರವಿನಿಂದ ನನ್ನ ಹುಡುಕಾಟ ಮುಂದುವರಿಸಿದ್ದೇನೆ. ಏನನ್ನು ಹುಡುಕುತ್ತಿದ್ದೇನೋ ಅದು ದೊರೆತಾಗ (ಇನ್ನೂ ದೊರೆತಿಲ್ಲ) ಅದನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಾಗಲಾರದು ಎಂಬ ಸೂಚನೆಗಳು ಧ್ಯಾನಾವಧಿಯಲ್ಲಿ ಸಿಕ್ಕುತ್ತಿವೆ! ಅಂದಹಾಗೆ ಪ್ರತಿಶತ ೧೦೦ ರಷ್ಟು ಆಲೋಚನಾರಹಿತ ಮೌನದ ಸ್ಥಿತಿಯನ್ನು ಅಥವ ಎಚ್ಚರವಾಗಿದ್ದರೂ ಗಾಢ ನಿದ್ದೆಯನ್ನು ಹೋಲುವ ಸ್ಥಿತಿಯನ್ನು ವರ್ಣಿಸುವುದು ಹೇಗೆ? ನಾನು ಕಂಡುಕೊಂಡ ಇನ್ನೂ ಒಂದು ಅಂಶ ಇಂತಿದೆ: ನಾನು ಏನನ್ನು ಹುಡುಕುತ್ತಿದ್ದೇನೋ ಅದನ್ನು ಹುಡುಕಲು ಸನ್ಯಾಸಿ ಆಗಬೇಕಿಲ್ಲ. ಗೃಹಸ್ಥಾಶ್ರಮದಲ್ಲಿ ಇದ್ದುಕೊಂಡು ಆ ಆಶ್ರಮದ ಕರ್ತವ್ಯಗಳನ್ನು ನಿಭಾಯಿಸಿಕೊಂಡೇ ಹುಡುಕಾಟದಲ್ಲಿ ಯಶಸ್ವಿಯಾಗಲು ಸಾಧ್ಯ. (ನಾನು ಆಗುತ್ತೇನೋ ಇಲ್ಲವೋ ಗೊತ್ತಿಲ್ಲ). ಇತಿಹಾಸ ಪುರಾಣಗಳಲ್ಲಿ ಇಂಥ ಅನೇಕರ ಉಲ್ಲೇಖವಿದೆ.

* ಈ ಜಾಲತಾಣದಲ್ಲಿ ನಾನು ಉಲ್ಲೇಖಿಸಿದ ತರಬೇತಿಯ ಮಾಹಿತಿ ಲಭ್ಯ. http://www.landmarkworldwide.com/

ಗೂಗಲಿಸಿದರೆ ನಾನು ಉಲ್ಲೇಖಿಸಿದ ಪುಸ್ತಕಗಳ ಮಾಹಿತಿ ಪಡೆಯುವುದು ಕಷ್ಟವಾಗಲಾರದು.

Advertisements
This entry was posted in ಅನುಭವಾಮೃತ. Bookmark the permalink.

One Response to ನನ್ನನ್ನು ನಾನೇ ಹುಡುಕತೊಡಗಿದಾಗ

  1. subrubhat ಹೇಳುತ್ತಾರೆ:

    ಶ್ರೀ ಗೋವಿಂದ ರಾಯರೇ,
    ಬಲು ಚೆನ್ನಾಗಿ ಓದುಗನನ್ನು ತಮ್ಮ ಅನುಭವದ ಪ್ರಪಂಚಕ್ಕೆ ಕರೆದೊಯ್ದು, ಸ್ವತಹ ’ನಾನು ಯಾರು; ನನ್ನ ಜೀವನದ ಉದ್ದೇಶ ಏನು?’ ಎಂಬ ಆಲೋಚನೆ ಬರುವಂತೆಯೂ ಮಾಡಿದ್ದೀರಿ! ಬಹುಶಹ, “ಮೇಲ್ನೋಟಕ್ಕೆ ಬಲು ಸುಲಭ ಅನ್ನಿಸುವ ಈ ತಂತ್ರ ವಾಸ್ತವವಾಗಿ ಸುಲಭವಲ್ಲ ಅನ್ನುವುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ” ಎನ್ನುವುದು ಸಾಮನ್ಯ ಅನುಭವ. ಆದರೆ, ನೀವು ಅಲ್ಲಿಗೆ ನಿಜಕ್ಕೂ ನಿಮ್ಮ ಜಿಜ್ನಾಸೆಯನ್ನು ನಿಲ್ಲಿಸಲಿಲ್ಲ! ಒಮ್ಮೆ ಈ ಪ್ರಶ್ನೆ ಮನಸ್ಸಿನ ಒಳಗೆ ಹೋದರೆ, ಮತ್ತೆ ಪರಮಾತ್ಮನೇ ಗತಿ! ಆದೆಂದಿಗೂ ಮಾಯವಾಗುವುದಿಲ್ಲ ಎನ್ನುವುದು ನನ್ನ ಅನುಭವ. ಪುಸ್ತಕದ ಉತ್ತರ ಸುಲಭವಾಗಿ ಸಿಗುತ್ತದೆ; ಸ್ವತಹ ಅನುಭವಿಸಿದ ಉತ್ತರ ಇನ್ನೂ ಸಿಕ್ಕಿಲ್ಲ. ಇಂತಹ ಲೇಖನವನ್ನು ನಮಗೆ ಓದಲು ಅವಕಾಶ ಮಾಡಿಕೊತ್ತದ್ದಕ್ಕಾಗಿ ಧನ್ಯವಾದಗಳು.

    ಸುಬ್ರಹ್ಮಣ್ಯ ಭಟ್ಟ ಯೇತಡ್ಕ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s