ಮನಸ್ಸಿನ ಮಲಿನಕಾರಿಗಳು

ಪರಿಸರ ಮಾಲಿನ್ಯ ಅಂದರೇನು, ಅದರಿಂದಾಗುವ ದುಷ್ಪರಿಣಾಮಗಳೇನು, ಪರಿಸರ ಮಾಲಿನ್ಯ ಆಗುವುದನ್ನು ತಡೆಗಟ್ಟಬೇಕಾದರೆ ನಾವೇನು ಮಾಡಬೇಕು, ಈಗಾಗಲೇ ಪರಿಸರಕ್ಕೆ ಸೇರ್ಪಡೆಯಾಗಿರುವ ಮಲಿನಕಾರಿಗಳನ್ನು ತೆಗೆಯಬೇಕಾದರೆ ನಾವೇನು ಮಾಡಬೇಕು – ಇವೇ ಮೊದಲಾದ ವಿಷಯಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಮಾಹಿತಿ ನಿಮ್ಮಲ್ಲಿ ಇದೆ. ಮನಸ್ಸಿನ ಮಾಲಿನ್ಯ ಅಂದರೇನು, ಅದರಿಂದಾಗುವ ದುಷ್ಪರಿಣಾಮಗಳೇನು, ಮನಸ್ಸಿನ ಮಾಲಿನ್ಯ ಆಗುವುದನ್ನು ತಡೆಗಟ್ಟಬೇಕಾದರೆ ನಾವೇನು ಮಾಡಬೇಕು, ಈಗಾಗಲೇ ಮನಸ್ಸಿನಲ್ಲಿ ಸೇರ್ಪಡೆಯಾಗಿರುವ ಮಲಿನಕಾರಿಗಳನ್ನು ತೆಗೆಯಬೇಕಾದರೆ ನಾವೇನು ಮಾಡಬೇಕು – ಇವೇ ಮೊದಲಾದ ವಿಷಯಗಳ ಕುರಿತು ಮಾಹಿತಿ ನಿಮ್ಮಲ್ಲಿ ಇದೆಯೇ? ಬಹುಶಃ ಇಲ್ಲ. ಈ ಕುರಿತು ಸಮಗ್ರ ಮಾಹಿತಿಯನ್ನು ಲೇಖನ ಮುಖೇನ ಒದಗಿಸುವುದು ಕಷ್ಟ. ಎಂದೇ, ಮನಸ್ಸಿನ ಮಾಲಿನ್ಯ ಅಂದರೇನು, ಮಲಿನಕಾರಿಗಳು ಯಾವುವು ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳೇನು ಎಂಬುದನ್ನು ಸೂಚ್ಯವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ. ಮನಸ್ಸಿನ ಮಾಲಿನ್ಯ ಆಗುವುದನ್ನು ತಡೆಗಟ್ಟಬೇಕಾದರೆ ನಾವೇನು ಮಾಡಬೇಕು, ಈಗಾಗಲೇ ಮನಸ್ಸಿನಲ್ಲಿ ಸೇರ್ಪಡೆ ಆಗಿರುವ ಮಲಿನಕಾರಿಗಳನ್ನು ತೆಗೆಯಬೇಕಾದರೆ ನಾವೇನು ಮಾಡಬೇಕು ಎಂಬುದರ ಕುರಿತು ತಿಳಿಯುವ ಕುತೂಹಲ ಇರುವವರು ಇಂದಿನಿಂದಲೇ ಅನ್ವೇಷಣೆ ಆರಂಭಿಸಿ.

ಪರಿಸರಕ್ಕೆ ಸೇರಿಸಿದಾಗ ಅನಪೇಕ್ಷಿತ ಪರಿಣಾಮಗಳನ್ನು ಉಂಟುಮಾಡುವಂಥವನ್ನು ಹೇಗೆ ಮಲಿನಕಾರಿ ಎಂದು ಪರಿಗಣಿಸುತ್ತೇವೆಯೋ ಅದೇ ರೀತಿ ಮನಸ್ಸಿಗೆ ಸೇರಿಸಿದಾಗ ಅನಪೇಕ್ಷಿತ ಪರಿಣಾಮಗಳನ್ನು ಉಂಟುಮಾಡುವ ಆಲೋಚನೆಗಳನ್ನು ಮನಸ್ಸಿನ ಮಲಿನಕಾರಿಗಳು ಎಂದು ಪರಿಗಣಿಸಬಹುದು. ಈ ಮಲಿನಕಾರಿ ಆಲೋಚನೆಗಳನ್ನು ನಾವೇ ಸ್ವತಃ ಸೃಷ್ಟಿಸಿ ನಮ್ಮ ಮನಸ್ಸಿಗೆ ನಾವೇ ಸೇರಿಸಿಕೊಳ್ಳುವುದಷ್ಟೇ ಅಲ್ಲದೆ ಅಂತಹವು ಇರುವವರೇ ಪ್ರಸಾಮಾನ್ಯರು ಎಂದು ಸಮರ್ಥಿಸಿಕೊಳ್ಳುತ್ತೇವೆ ಎಂಬುದೇ ಸೋಜಿಗದ ವಿಷಯ. ಇವನ್ನು ಮಲಿನಕಾರಿಗಳು ಎಂದು ಒಪ್ಪಿಕೊಳ್ಳಲೂ ನಾವು ಸಿದ್ಧವಿರುವುದಿಲ್ಲ. ಬಹುಮಂದಿಯಲ್ಲಿ ಈ ಮಲಿನಕಾರಿ ಆಲೋಚನೆಗಳು ಮನಸ್ಸಿನಾಳದಲ್ಲಿ ಹುದುಗಿರುವುದರಿಂದ ಅವರಿಗೆ ಅವುಗಳ ಇರುವಿಕೆಯ ಅರಿವೇ  ಇರುವುದಿಲ್ಲ. ವ್ಯಕ್ತಿಗಳಿಗೆ ಅರಿವಿಲ್ಲದೆಯೇ ಅವರ ಮನಃಸ್ವಾಸ್ಥ್ಯವನ್ನೂ ಅನೇಕ ಸಂದರ್ಭಗಳಲ್ಲಿ ದೇಹದ ಸ್ವಾಸ್ಥ್ಯವನ್ನೂ ನಾನಾ ಪ್ರಮಾಣಗಳಲ್ಲಿ ಇವು ಹಾಳುಗೆಡವುತ್ತವೆ. ಇಂಥ ಮಲಿನಕಾರಿಗಳು ಯಾವುವು? ಈ ಪ್ರಶ್ನೆಗೆ ಉತ್ತರ ನಿಮಗೆ ಅಚ್ಚರಿ ಉಂಟು ಮಾಡಬಹುದಾದರೂ ಸತ್ಯ ಎಂಬುದರಲ್ಲಿ ಸಂಶಯವಿಲ್ಲ.

ತೃಪ್ತಿಕರವಾಗಿ ಪ್ರಕಟಿಸಲಾಗದೆ ಮನಸ್ಸಿನಲ್ಲಿಯೇ ಧಾರಣ ಮಾಡಿದ ಕೋಪ ಮತ್ತು ಭಯ ಆಧಾರಿತ ಆಲೋಚನೆಗಳೇ ಮನಸ್ಸಿನ ಮಲಿನಕಾರಿಗಳು. ಅಸಹನೆ, ರೇಗುವುದು, ಹತಾಶೆ, ದೂಷಿಸುವಿಕೆ, ಅಸಮಾಧಾನ, ಹೊಟ್ಟೆಕಿಚ್ಚು, ವೈಷಮ್ಯ ಇವೇ ಮೊದಲಾದವೆಲ್ಲವೂ ಕೋಪದ ನಾನಾ ರೂಪಗಳು. ವ್ಯಾಕುಲತೆ, ಶಂಕೆ, ಅರಕ್ಷಿತ ಭಾವನೆ, ಅಧೈರ್ಯ, ತಾನು ಯೋಗ್ಯನಲ್ಲ ಎಂಬ ಭಾವನೆ, ತಾನು ದುರದೃಷ್ಟವಂತ ಅನ್ನುವ ಭಾವನೆ ಇವೇ ಮೊದಲಾದವು ಭಯದ ನಾನಾ ರೂಪಗಳು. ತಪ್ಪಿತಸ್ಥ-ಪ್ರಜ್ಞೆ, ಅರ್ಥಾತ್ ಮಾಡಬಾರದ್ದನ್ನು ಮಾಡಿದ್ದೇವೆ ಎಂಬ ಭಾವನೆಯೂ ಭಯಕ್ಕೆ ಕಾರಣವಾಗುತ್ತದೆ. ಕೋಪ ಬರುವದೇ ಆಗಲಿ, ಭಯ ಪಡುವುದೇ ಆಗಲಿ ಅಸ್ವಾಭಾವಿಕವಲ್ಲ. ಅವುಗಳನ್ನು ಯುಕ್ತ ರೀತಿಯಲ್ಲಿ ಪ್ರಕಟಿಸಿ ಸಹಜ ಸಮಚಿತ್ತ ಸ್ಥಿತಿಗೆ ಬರುವುದಕ್ಕೆ ಬದಲಾಗಿ ಯಾವುದೇ ಕಾರಣಕ್ಕಾಗಿ ಮನಸ್ಸಿನಲ್ಲಿ ಅದುಮಿ ಇಟ್ಟುಕೊಂಡಾಗ ಮಲಿನಕಾರಿಗಳಾಗುತ್ತವೆ. ಉದಾಹರಣೆಗೆ  ಮನಸ್ಸಿನಲ್ಲಿ ಯಾರ ಕುರಿತಾಗಿಯೋ ಅದುಮಿ ಇಟ್ಟುಕೊಂಡ ಕೋಪ ನಿಮ್ಮಲ್ಲಿ ಮನಃಕ್ಷೋಭೆ ಉಂಡುಮಾಡುತ್ತದೆಯೇ ವಿನಾ ಅವರ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ ಎಂಬುದನ್ನು ಗಮನಿಸಿ. ಮುಂದೆ ಇಂಥ ಆಲೋಚನೆಗಳು ಮನಸ್ಸಿನ ಅಜಾಗೃತ ಬಾಗಕ್ಕೆ ಅನೈಚ್ಛಿಕವಾಗಿ ಜರಗುವುದರಿಂದ ಮರೆತಂತೆ ಭಾಸವಾಗುತ್ತದೆಯೇ ವಿನಾ ನಿಜವಾಗಿ ಮನಸ್ಸಿನಿಂದ ಅಳಿದು ಹೋಗಿರುವುದಿಲ್ಲ. ಮನಸ್ಸಿನಾಳದಲ್ಲಿ ಹುದುಗಿರುವ ಇವು ವರ್ತನೆಯ ಮೇಲೂ ದೈಹಿಕ ಆರೋಗ್ಯದ ಮೇಲೂ ಅನಪೇಕ್ಷಿತ ಪರಿಣಾಮ ಉಂಟುಮಾಡುತ್ತಿರುತ್ತವೆ. ಅಂತಃವೀಕ್ಷಣೆಯಿಂದ ಇವನ್ನು ಪುನಃ ಹೊರಕ್ಕೆಳೆದು ಯುಕ್ತ ಕ್ರಮ ಕೈಗೊಳದಿದ್ದರೆ ಜೀವನದುದ್ದಕ್ಕೂ ಇವು ನಮಗರಿವಿಲ್ಲದೆಯೇ ಕಾಡುತ್ತಿರುತ್ತವೆ. ಕೆಲವು ಸಂದರ್ಭಗಳಲ್ಲಿ ದೈಹಿಕ ರೋಗಗಳಿಗೂ ಕಾರಣವಾಗುತ್ತವೆ. ಕೆಲವು ಸಂದರ್ಭಗಳಲ್ಲಿ ದೈಹಿಕ ರೋಗಕ್ಕೆ ನೀಡುವ ಚಿಕಿತ್ಸೆ ನಿರೀಕ್ಷಿತ ಫಲ ನೀಡದಂತೆ ಮಾಡುತ್ತವೆ.

ಮಾಡಲೇಬೇಕಾದ ಕಾರ್ಯಗಳನ್ನು (ವಿಷೇಷವಾಗಿ ಮಾಡಲು ಇಷ್ಟವಿಲ್ಲದ) ತರ್ಕಸಮ್ಮತವಾಗ ಬಹುದಾದ ಕಾರಣಗಳಿಗಾಗಿ ಮುಂದೂಡುವುದು, ತಡಮಾಡುವ ಚಾಳಿ, ಅತಿವಿನಯ, ಸದಾ ಪ್ರಸನ್ನತೆಯಿಂದ ಇರಲು ಪ್ರಯತ್ನಿಸುವುದು, (ಅಂತರಂಗದಲ್ಲಿ ಇಷ್ಟವಿಲ್ಲದಿದ್ದರೂ) ‘ಹಲ್ಕಿರಿಯುತ್ತ’ ಸಹಿಸಿಕೊಳ್ಳುವುದು, ಆಗಿಂದಾಗ್ಗೆ ನಿಟ್ಟುಸಿರು ಬಿಡುವುದು, ಇತರರಿಗೆ ನೋವುಂಟು ಮಾಡಿ ಆನಂದಿಸುವುದು, ಅತಿ ನಿಯಂತ್ರಿತ ಏರುಪೇರಿಲ್ಲದ ಧ್ವನಿಯಲ್ಲಿ (ಏಕಶ್ರುತಿಯಲ್ಲಿ) ಮಾತನಾಡುವುದು, ಆಗಿಂದಾಗ್ಗೆ ದುಃಸ್ವಪ್ನ ಬೀಳುವುದು, ಅಸಂಖ್ಯ ಆಲೋಚನೆಗಳಿಂದಾಗಿ ನಿದ್ರಿಸಲು ಕಷ್ಟವಾಗುವುದು, ಭಾವರಾಹಿತ್ಯ, ಬೇಜಾರು, ಈ ಹಿಂದೆ ಆಸಕ್ತಿ ಉಂಟು ಮಾಡುತ್ತಿದ್ದವುಗಳಲ್ಲಿಯೂ ನಿರಾಸಕ್ತಿ, ನಿರಾಶಾಭಾವ, ಬಲುಬೇಗನೆ ಸುಸ್ತಾಗುವುದು, ಕ್ಷುಲ್ಲಕ ವಿಷಯಗಳಿಗೆ ಸಂಬಂಧಿಸಿದಂತೆಯೂ ರೇಗಾಡುವುದು, ಅನೈಚ್ಛಿಕವಾಗಿ ಮುಖದಲ್ಲಿ ಕಾಣಬರುವ ಸ್ನಾಯುಗಳ ಹಠಾತ್ತಾದ ಸೆಳೆತ ಅಥವ ಮುಷ್ಟಿಬಿಗಿಯುವುದು ಇವೇ ಮೊದಲಾದವುಗಳು ಮಲಿನಕಾರಿಗಳು ಮನಸ್ಸಿನಲ್ಲಿ ಹುದುಗಿರುವುದರ ಸೂಚಕಗಳು. ದೀರ್ಘಕಾಲದಿಂದ ಹುದುಗಿರುವ ಕೋಪ ಆಧಾರಿತ ಮಲಿನಕಾರಿಗಳು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ದೇಹದ ಒಳಗೆ ಅಥವ ಹೊರಗೆ ಹುಣ್ಣು, ಕೀಲೂತ ಮುಂತಾದ ರೋಗಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ.

ಎಂದೇ, ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ಹುದುಗಿರುವ ಮಲಿನಕಾರಿಗಳನ್ನು ಅಂತಃವೀಕ್ಷಣೆಯಿಂದ ಗುರುತಿಸಿ ತೆಗೆದುಹಾಕಲು ಯುಕ್ತ ಕ್ರಮ ಕೈಗೊಳ್ಳಬೇಕಾದ ಆವಶ್ಯಕತೆ ಇದೆ.

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s