‘ಧ್ಯಾನ’ – ತಥ್ಯ, ಮಿಥ್ಯ.

ಇತ್ತೀಚೆಗೆ, ನನ್ನ (ವಯಸ್ಸು ೭೩+) ಯುವಮಿತ್ರರೊಬ್ಬರು (ವಯಸ್ಸು ೪೦+) ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮತ್ತು ಅವರಲ್ಲಿ ಹುಟ್ಟಹಾಕಿರುವ ಮನಃಕ್ಷೋಭೆಯ ಕುರಿತು ನನ್ನೊಂದಿಗೆ ಹೇಳುತ್ತಿದ್ದಾಗ ಅವರನ್ನು ಕೇಳಿದೆ, “ನೀವೇಕೆ ಧ್ಯಾನ ಮಾಡಬಾರದು?” ಅವರ ಉತ್ತರ, “ಏನು ಸಾರ್. ಹೀಗೆ ಹೇಳ್ತೀರಿ, ಧ್ಯಾನ ಮಾಡಬೇಕಾದ ವಯಸ್ಸೇ ನನ್ನದು?” ನನಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

‘ಧ್ಯಾನ’ – ಈ ಪದ ಕೇಳಿದ ತಕ್ಷಣ ಎಲ್ಲಾ ತರಹದ ಬಿಂಬಗಳೂ ಭಾವನೆಗಳೂ ಬಹುಮಂದಿಯ ಮನಃಪಟಲದಲ್ಲಿ ಮೂಡುತ್ತವೆ. ‘ಇದು ಆಧ್ಯಾತ್ಮ ಪಥದಲ್ಲಿ ನಡೆಯಬಯಸುವವರಿಗೆ, ಅಥವ ಯೋಗಿಗಳಿಗೆ ನನಗಲ್ಲ’, ‘ದೀರ್ಘಕಾಲ ಅಲುಗಾಡದೆ ಕುಳಿತುಕೊಳ್ಳಲು ನನಗೆ ಸಾಧ್ಯವಿಲ್ಲ’, ‘ನಮ್ಮಂಥವರಿಗೆ ಇದರಿಂದೇನೂ ಪ್ರಯೋಜನವಿಲ್ಲ’, ‘ಮನಸ್ಸಿನಲ್ಲಿ ಯಾವುದೇ ಲೌಕಿಕ ಆಲೋಚನೆಯನ್ನು ಮಾಡದೆ ಭಗವಂತನ ಹೆಸರನ್ನು ಮಾತ್ರ ನಿರಂತರವಾಗಿ ಸ್ಮರಿಸುತ್ತಿರುವುದು’ – ಇವು ಅಂತಹ ಭಾವನೆಗಳ ಉದಾಹರಣೆಗಳು. ಮನಃಪಟಲದಲ್ಲಿ ಮೂಡುವ ಬಿಂಬಗಳ ಉದಾಹರಣೆಗಳು ಇಂತಿವೆ:

Untitled-1

ವಾಸ್ತವವಾಗಿ ಇವೆಲ್ಲವೂ ತಪ್ಪು ಪರಿಕಲ್ಪನೆಗಳನ್ನು ಆಧರಿಸಿರುವ ಭಾವನೆಗಳು ಮತ್ತು ಬಿಂಬಗಳು. ‘ಧ್ಯಾನ’ದ ಕುರಿತಾಗಿ ನಿಮ್ಮಲ್ಲಿ ಇರಬಹುದಾದ ಮಿಥ್ಯಾಕಲ್ಪನೆಗಳನ್ನು ನಿವಾರಿಸಿಕೊಳ್ಳಲು ಮುಂದೆ ಓದಿ.

೧. ‘ಧ್ಯಾನ’ ಮಾಡುವುದು ಅಂದರೆ ಮನಸ್ಸಿನಲ್ಲಿ ಯಾವುದೇ ಲೌಕಿಕ ಆಲೋಚನೆಯನ್ನು ಮಾಡದೆ ಭಗವಂತನ ಯಾವುದಾದರೂ ಹೆಸರನ್ನು ಮಾತ್ರ ನಿರಂತರವಾಗಿ ಸ್ಮರಿಸುತ್ತಿರುವುದು’ ಎಂಬ ಹೇಳಿಕೆ ಧ್ಯಾನ ಮಾಡುವ ಅನೇಕ ವಿಧಾನಗಳ ಪೈಕಿ ಒಂದರ ವಿವರಣೆಯೇ ವಿನಾ ‘ಧ್ಯಾನ’ಎಂಬ ಪದದ ನಿಷ್ಕೃಷ್ಟ ಅರ್ಥ ನಿರೂಪಣೆ ಅಲ್ಲ. ಜಾಗೃತಾವಾಸ್ಥೆಯಲ್ಲಿ ಪ್ರಸಾಮಾನ್ಯವಾಗಿ ಸದಾ ಇರುವ ಆಲೋಚನೆಗಳ ಹರಿವನ್ನು ನಿರ್ಲಕ್ಷಿಸುವುದರ ಮುಖೇನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಒಂದು ಪದ ಅಥವ ಪದಪುಂಜ, ವಸ್ತು, ಧ್ವನಿ, ಉಸಿರು, ಮನೋಗೋಚರೀಕರಣ (ವಿಷ್ಯುಅಲೈಸೇಷನ್) – ಇವುಗಳ ಪೈಕಿ ಯಾವುದಾದರೂ ಒಂದರ ಮೇಲೆ ಅವಧಾನವನ್ನು ಅಪೇಕ್ಷಿತ ಕಾಲಾವಧಿಯಲ್ಲಿ ನಾಭೀಕರಿಸುವ (ಫೋಕಸ್) ಪ್ರಕ್ರಿಯೆಯೇ ಧ್ಯಾನ.

೨. ನೆಲದ ಮೇಲೆ ಒಂದು ನಿರ್ದಿಷ್ಟ ಭಂಗಿಯಲ್ಲಿ ಕುಳಿತೇ ಧ್ಯಾನ ಮಾಡಬೇಕು ಎಂದು ಅನೇಕರು ಭಾವಿಸಿದ್ದಾರೆ. ಧ್ಯಾನ ಮಾಡುತ್ತಿರುವ ವೈದಿಕ ಪಂಥದ ಅಥವ ಬೌದ್ಧಮತದ ಯೋಗಿಗಳ ಹೆಚ್ಚು ಪ್ರಚಾರದಲ್ಲಿರುವ ಚಿತ್ರಗಳು ಈ ತಪ್ಪು ಪರಿಕಲ್ಪನೆ ಬೇರೂರಲು ಕಾರಣ ಎಂಬುದು ನನ್ನ ಗುಮಾನಿ. ಪತಂಜಲಿಯ ಯೋಗಸೂತ್ರಗಳು ಧ್ಯಾನಮಾಡಲು ‘ಸ್ಥಿರಸುಖಾಸನ’ದಲ್ಲಿ ಕುಳಿತುಕೊಳ್ಳಬೇಕೆಂದು ಸೂಚಿಸುತ್ತವೆಯೇ ವಿನಾ ‘ಇಂತೆಯೇ’ ಕುಳಿತುಕೊಳ್ಳಬೇಕೆಂದು ಹೇಳಿಲ್ಲ. ಧ್ಯಾನಾವಧಿಯಲ್ಲಿ ಆರಾಮವಾಗಿ ಅಚಲವಾಗಿರಲು ತಕ್ಕುದಾದ ಬೆನ್ನುಹುರಿ ನೇರವಾಗಿರುವ ಭಂಗಿಯೇ ಸ್ಥಿರಸುಖಾಸನ. ಕುಳಿತುಕೊಳ್ಳುವ ಭಂಗಿ ಧ್ಯಾನ ಮಾಡುವುದರ ಉದ್ದೇಶ ಈಡೇರಿಕೆಗೆ ಪೂರಕವಾಗಿರಬೇಕೇ ವಿನಾ ಭಂಗಿಯನ್ನು ಕಾಯ್ದುಕೊಳ್ಳುವುದೇ ಗುರಿಯಾಗಬಾರದು. ಮುಂದೆ ಇರುವ ಚಿತ್ರಗಳಲ್ಲಿ ತೋರಿಸಿದಂತೆ ಕುಳಿತುಕೊಳ್ಳಲೂಬಹುದು. ಬೆನ್ನಿಗೆ ಆಸರೆ ಅಗತ್ಯವಿದ್ದರೆ ಇಟ್ಟುಕೊಳ್ಳಲೂ ಬಹುದು.

Untitled-2

೩. ‘ಮತೀಯ ಆಚರಣೆಗಳಲ್ಲಿ ನಂಬಿಕೆ ಇರುವವರಿಗೆ ಅಥವ ಆಧ್ಯಾತ್ಮಿಕತೆಯಲ್ಲಿ ಒಲವು ಇರುವವರಿಗೆ ಇದು ಉಪಯುಕ್ತ’ ಎಂಬುದು ಅನೇಕರ ನಂಬಿಕೆ. ಈ ಮುನ್ನ ನೀಡಿರುವ ಧ್ಯಾನದ ಅರ್ಥನಿರೂಪಣೆಯನ್ನು ಪರಿಶೀಲಿಸಿದರೆ ಈ ನಂಬಿಕೆ ತಪ್ಪು  ಎಂಬುದು ಸಾಬೀತಾಗಿತ್ತದೆ. ಎಲ್ಲ ಮತಗಳಲ್ಲಿ ಆಯಾ ಮತಗಳ ಆರಾಧ್ಯ ದೇವರುಗಳ ಧ್ಯಾನಕ್ಕೆ ಪ್ರಾಮುಖ್ಯ ನೀಡಿರುವುದರಿಂದ ಈ ನಂಬಿಕೆ ಉಂಟಾಗಿರಬಹುದು. ವಾಸ್ತವವಾಗಿ ಧ್ಯಾನದಲ್ಲಿ ಅನೇಕ ವಿಧಗಳಿವೆ. ಆರಾಧ್ಯದೈವದ ನಾಮಸ್ಮರಣೆ ಅವುಗಳ ಪೈಕಿ ಒಂದು. ಎಲ್ಲರಿಗೂ ಅನ್ವಯಿಸಬಹುದಾದ ಒಂದು ವಿಧಾನ ಇಲ್ಲ. ವ್ಯಕ್ತಿಯ ಹಾಲಿ ಮನೋದೈಹಿಕ ಸ್ಥಿತಿಗೆ ತಕ್ಕುದಾದ ವಿಧಾನವನ್ನು ಆಯ್ಕೆ ಮಾಡಬೇಕು. ದುರದೃಷ್ಟವಶಾತ್ ಧ್ಯಾನ ಮಾಡುವುದು ಹೇಗೆಂಬುದನ್ನು ಹೇಳಿಕೊಡುತ್ತಿರುವ ಹಾಲಿ ‘ಗುರು’ಗಳು ತಮಗೆ ಅಪೇಕ್ಷಿತ ಫಲ ನೀಡಿದ ವಿಧಾನವೇ ಅತ್ಯುತ್ತಮ ಎಂಬ ನಂಬಿಕೆಯಿಂದ ಎಲ್ಲರಿಗೂ ಅದನ್ನು ಹೇಳಿಕೊಡಲು ಪ್ರಯತ್ನಿಸುತ್ತಿದ್ದಾರೆ.

[ವಿ ಸೂ: ಧ್ಯಾನಾವಧಿಯಲ್ಲಿ ಮನಃಪಟಲದಲ್ಲಿ ಮೂಡುವ ಆಲೋಚನೆಗಳನ್ನು ನಿರ್ಲಕ್ಷಿಸುತ್ತಾ  ಗುರು ನೀಡಿದ ‘ಮಂತ್ರ’ದ ಮೇಲೆ ಅವಧಾನ ನಾಭೀಕರಿಸುವ ಅತೀಂದ್ರಿಯ (ಟ್ರ್ಯಾನ್ಸೆಂಡೆಂಟಲ್) ಧ್ಯಾನ, ಧ್ಯಾನಾವಧಿಯಲ್ಲಿ ಮನಃಪಟಲದಲ್ಲಿ ಮೂಡುವ ಆಲೋಚನೆಗಳನ್ನು ವಿಮರ್ಶಿಸದೆಯೇ ವೀಕ್ಷಿಸುತ್ತಾ ಉಸಿರಾಟ ಅಥವ ವಸ್ತು ಅಥವ ಬಿಂಬದ ಮೇಲೆ ಅವಧಾನ ನಾಭೀಕರಿಸುವ ಒಳನೋಟ (ಇನ್ಸೈಟ್) ಅಥವ ಸಾವಧಾನತೆ (ಮೈಂಡ್ ಫುಲ್ ನೆಸ್) ಅಥವ ವಿಪಾಸನ ಧ್ಯಾನ, ಯುಕ್ತ ದೃಶ್ಯಾವಳಿಗಳನ್ನು ಚಲನಚಿತ್ರದೋಪಾದಿಯಲ್ಲಿ ಧ್ಯಾನಾವಧಿಯಲ್ಲಿ ಮನಃಪಟಲದ ಮೇಲೆ ಮೂಡಿಸಿಕೊಳ್ಳುವುದರ ಮೂಲಕ ಅಪೇಕ್ಷಿತ ಫಲ ಪಡೆಯಲು ಪ್ರಯತ್ನಿಸುವ ಮನೋಗೋಚರೀಕರಣ (ವಿಶುವಲೈಸೇಷನ್) ಧ್ಯಾನ ಇವು ಧ್ಯಾನದ ಪ್ರಮುಖ ಪ್ರಭೇದಗಳು]

೪. ‘ಧ್ಯಾನ ಮಾಡುವುದರಿಂದ ಆಧ್ಯಾತ್ಮಿಕವಾಗಿ ವಿಕಸಿಸಬಯಸುವವರಿಗೆ ಲಾಭವಾಗಬಹುದೇ ವಿನಾ ಇತರರಿಗಲ್ಲ’ ಎಂದು ನಂಬುವವರೂ ಬಹು ಮಂದಿ ಇದ್ದಾರೆ. ಇದೊಂದು ತಪ್ಪು ತಿಳಿವಳಿಕೆ. ಧ್ಯಾನಮಾಡುವುದರಿಂದ ಲೌಕಿಕ ವ್ಯವಹಾರಗಳಲ್ಲಿಯೇ ಜೀವನ ಸವೆಸುವವರಿಗೂ ಲಾಭವಿದೆ. ಏನು ಎಂಬುದರ ವಿವರಣೆ ಇಂತಿದೆ: ‘ವಿಶ್ರಾಂತಿ ಅನುಕ್ರಿಯೆ (ರಿಲ್ಯಾಕ್ಸೇಶನ್ ರೆಸ್ಪಾನ್ಸ್)’ ಎಂದು ಉಲ್ಲೇಖಿಸುವ ಜೀವರಾಸಾಯಾನಿಕ ಮತ್ತು ದೈಹಿಕ ಬದಲಾವಣೆಗಳ ಸಮೂಹವನ್ನು ಧ್ಯಾನ ಮಾಡುವಿಕೆ ಪ್ರೇರೇಪಿಸುತ್ತದೆ. ಅರ್ಥಾತ್, ಚಯಾಪಚಯ (ಮೆಟಬಾಲಿಸಮ್), ಹೃದಯಬಡಿತದ ದರ, ಉಸಿರಾಟ, ರಕ್ತದೊತ್ತಡ ಇವೇ ಮೊದಲಾದವುಗಳಲ್ಲಿ ಗಮನಾರ್ಹ ಆರೋಗ್ಯಕರ ಬದಲಾವಣೆಗಳು ಆಗುತ್ತವೆ. ಮಿದುಳಿನ ರಾಸಾಯನಿಕ ಚಟುವಟಿಕೆಗಳ ವೇಗವೂ ತಗ್ಗುವುದರಿಂದ ಆಲ್ಫಾ ತರಂಗಗಳು ಗಮನಾರ್ಹವಾಗಿ ಹೆಚ್ಚುವುದನ್ನು  ವಿದ್ಯುನ್ಮಸ್ತಿಷ್ಕಲೇಖಿ (ಇ ಇ ಜಿ) ಸಾಬೀತುಪಡಿಸಿದೆ.

ಅನೈಚ್ಛಿಕ ಚಟುವಟಿಕೆಗಳಾದ ಹೃದಯದ ಬಡಿಯುವಿಕೆ, ಉಸಿರಾಡುವಿಕೆ ಇವೇ ಮೊದಲಾದವನ್ನು ನಿಯಂತ್ರಿಸುವ ಉಪಾನುವೇದಕ (ಪ್ಯಾರಸಿಂಪತೆಟಿಕ್) ನರಮಂಡಲ ಮತ್ತು ದೇಹವನ್ನು ಪ್ರಚೋದಿಸಿ ಹುರುಪಿನ ಚಟುವಟಿಕೆಗಳಿಗೆ ದೇಹವನ್ನು ಸಜ್ಜುಗೊಳಿಸುವ ಅನುವೇದನಾ (ಸಿಂಪತೆಟಿಕ್) ನರಮಂಡಲ ಈ ಎರಡು ಸಂಯೋಜನೆಯಿಂದಾಗಿದೆ ಮಾನವ ನರಮಂಡಲ. ಧ್ಯಾನಮಾಡುವಿಕೆಯು ಉಪಾನುವೇದಕ ನರಮಂಡಲದ ಮೇಲೆ ಪ್ರಭಾವ ಬೀರಿ ಹೃದಯದ ಬಡಿತದ ದರ, ಉಸಿರಾಟದ ದರ ಇವೇ ಮೊದಲಾದವನ್ನು ತಗ್ಗಿಸುತ್ತದೆ ಮತ್ತು ಅನುವೇದನಾ ನರಮಂಡಲದ ಮೇಲೆ ಪ್ರಭಾವ ಬೀರಿ ಚಟುವಟಿಕೆಯಲ್ಲಿ ನಿರತವಾಗಲು ದೇಹವನ್ನು ಪ್ರಚೋದಿಸದಂತೆ ಮಾಡುತ್ತದೆ ಎಂಬುದು ವೈದ್ಯಕೀಯ ಲೋಕದ ಅಭಿಪ್ರಾಯ. ಎಂದೇ, ಗಾಢ ನಿದ್ರಾವಸ್ಥೆಯಲ್ಲಿ ತಲುಪಬೇಕಾದ ವಿಶ್ರಾಂತ ಸ್ಥಿತಿಯನ್ನು ಜಾಗೃತಾವಸ್ಥೆಯಲ್ಲಿಯೇ ತಲುಪಬಹುದು. ಧ್ಯಾನಮಾಡುವಾಗ ಮನಃಪಟಲದಲ್ಲಿ ಏನೇನು ಮೂಡುತ್ತದೆಯೋ ಅದೆಲ್ಲವನ್ನೂ ವೀಕ್ಷಿಸುವ ಅವಕಾಶವೂ ದೊರೆಯುವುದರಿಂದ ಅಂತಃವೀಕ್ಷಣೆಯ ಮುಖೇನ ಸ್ವವಿಕಾಸವೂ ಆಗುತ್ತದೆ.

೪. ‘ಧ್ಯಾನ ಮಾಡುವುದು ಬಲು ಕಷ್ಟದ ಕೆಲಸ. ಎಂದೇ, ಇದು ಎಲ್ಲರಿಂದಲೂ ಸಾಧ್ಯವಿಲ್ಲ.’  – ಇದು ಕೆಲವರ ಅಂಬೋಣ. ಧ್ಯಾನ ಎಂಬುದು ಸಂತರು, ಅಧಿಕೃತವಾಗಿ ದೀಕ್ಷೆ ಪಡೆದ ಸನ್ಯಾಸಿಗಳು ಮತ್ತು ಆಧ್ಯಾತ್ಮಿಕ ಸಾಧಕರು ಪ್ರತೀದಿನ ಸುದೀರ್ಘಕಾಲ ಮಾಡಲೇಬೇಕಾದ ಕಾರ್ಯವಾಗಿರುವುದು ಈ ಅಭಿಪ್ರಾಯ ಮೂಡಲು ಪ್ರಮುಖ ಕಾರಣವಾಗಿರಬಹುದು. ಧ್ಯಾನಾವಧಿಯಲ್ಲಿ ಒಂದೇ ಭಂಗಿಯಲ್ಲಿ ಅಲುಗಾಡದೆ ಕುಳಿತಿರಬೇಕು ಮತ್ತು ಸದಾ ಇರುವ ಆಲೋಚನೆಗಳ ಹರಿವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಬೇಕು ಎಂಬ ಹೇಳಿಕೆಗಳು ಈ ಅಭಿಪ್ರಾಯ ನಂಬಿಕೆಯಾಗುವಂತೆ ಮಾಡಿದೆ. ‘ಇದು ಕಷ್ಟ, ಇದು ನಮ್ಮಿಂದಾಗದು’ ಅನ್ನುವ ಋಣಾತ್ಮಕ ಮನೋಧರ್ಮದಿಂದ ಆರಂಭಿಸುವ ಯಾವುದೇ ಕೆಲಸ ಕಷ್ಟವಾಗಿಯೇ ಇರುತ್ತದೆ. ‘ನನ್ನಿಂದಾಗುತ್ತದೆ, ಏಕಾಗುವುದಿಲ್ಲ ಎಂಬುದನ್ನು ನೋಡಿಯೇ ಬಿಡುತ್ತೇನೆ’ ಅನ್ನುವ ಧನಾತ್ಮಕ ಮನೋಧರ್ಮದಿಂದ ಆರಂಭಿಸುವ ಕೆಲಸ ಕಷ್ಟವಾಗುವುದಿಲ್ಲ. ಆರಂಭಿಕರು ಪ್ರತೀದಿನ ಸುಮಾರು ೨೦ ನಿಮಿಷಕಾಲ ‘ಧ್ಯಾನ’ ಮಾಡಿದರೆ ಸಾಕು ಅನ್ನುತ್ತಾರೆ ಪರಿಣಿತರು. ವಾಸ್ತವವಾಗಿ ಯುಕ್ತ ಮಾರ್ಗದರ್ಶನ ಇದ್ದರೆ ಹೊಸದಾಗಿ ಕಲಿಯುವ ಆರಂಭಿಕರಿಗೆ ೨೦ ನಿಮಿಷಗಳ ಧ್ಯಾನ ಒಂದು ಸುಲಭದ ಭಾರಿ ಮೋಜಿನ ಚಟುವಟಿಕೆಯಾಗುತ್ತದೆ. ಆದ್ದರಿಂದ ಅದು ಕಷ್ಟದ ಕೆಲಸ ಅನಿಸುವುದೇ ಇಲ್ಲ ಮತ್ತು ಅಭ್ಯಾಸವಾದ ಬಳಿಕ ೨೦ ನಿಮಿಷ ಕಳೆದದ್ದೇ ತಿಳಿಯುವುದಿಲ್ಲ ಎಂಬುದು ನನ್ನ ಅನುಭವ.

೫. ‘ಆಧುನಿಕ ಜೀವನಶೈಲಿಯಲ್ಲಿ ಪ್ರತೀದಿನ ಧ್ಯಾನ ಮಾಡುವ ವ್ಯವಧಾನ, ಅರ್ಥಾತ್ ಬಿಡುವು ಮತ್ತು ತಾಳ್ಮೆ ಯಾರಿಗೂ ಇರುವುದಿಲ್ಲ.’ – ಇದು ಸುಶಿಕ್ಷಿತ ನಗರವಾಸೀ ಉದ್ಯೋಗಸ್ಥರ ವಾದ. ‘ಧ್ಯಾನ ಮಾಡುವುದು ನಿಷ್ಪ್ರಯೋಜಕ’ ಎಂದು ನಂಬಿರುವವರೂ ‘ಧ್ಯಾನ ಮಾಡುವುದು ನಮ್ಮಿಂದಾಗದ ಕೆಲಸ’ ಎಂದು ತಿಳಿದಿರುವವರೂ ಕೊಡುವ ಸಬೂಬು ಇದು ಎಂಬುದು ನನ್ನ ಅಭಿಮತ. ದಿನವಿಡೀ ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುತ್ತಿದ್ದರೂ ಅನೇಕ ವರ್ಷಗಳಿಂದ ಪ್ರತೀದಿನ ಸುಮಾರು ೨೦ ನಿಮಿಷ ಕಾಲ ಧ್ಯಾನ ಮಾಡುತ್ತಿರುವ ಬಹಳ ಮಂದಿ ಇದ್ದಾರೆ. ಪ್ರತೀ ದಿನ ‘ಧ್ಯಾನ’ ಮಾಡುವುದರಿಂದ ಹೆಚ್ಚು ಕೆಲಸವನ್ನು ದಣಿಯದೇ ಮಾಡಲು ಸಾಧ್ಯವಾಗುತ್ತದೆ ಎಂಬುದು ಸ್ವಾನುಭವ.

೬. ‘ಆಲೋಚನೆಗಳ ಹರಿವನ್ನು ತಡೆಯದಿದ್ದರೆ ಅಥವ ನಿಯಂತ್ರಿಸದಿದ್ದರೆ ಧ್ಯಾನಮಾಡುವುದರಿಂದ ಅಪೇಕ್ಷಿತ ಫಲ ದೊರೆಯುವುದಿಲ್ಲ’ – ಧ್ಯಾನದ ಕುರಿತಾಗಿರುವ ತಪ್ಪು ಪರಿಕಲ್ಪನೆಗಳ ಪೈಕಿ ಇದೂ ಒಂದು. ವಾಸ್ತವವಾಗಿ ಧ್ಯಾನಾವಧಿಯಲ್ಲಿ  ಆಲೋಚನಾ ಲಹರಿಯನ್ನು ಬಲವಂತವಾಗಿ ತಡೆಯಲೂ ಪ್ರಯತ್ನಿಸುವುದಿಲ್ಲ, ನಿಯಂತ್ರಿಸಲೂ ಪ್ರಯತ್ನಿಸುವುದಿಲ್ಲ. ಪ್ರಯತ್ನಿಸಿದ್ದೇ ಆದರೆ ಮಾನಸಿಕ ಒತ್ತಡ ಉಂಟಾಗಿ ಧ್ಯಾನದ ಮೂಲ ಉದ್ದೇಶ ಈಡೇರಿಕೆಗೆ ಧಕ್ಕೆ ಉಂಟಾಗುತ್ತದೆ. ಇದಕ್ಕೆ ಬದಲಾಗಿ ಧ್ಯಾನಾವಧಿಯಲ್ಲಿ ಮನಃಪಟಲದ ಮೇಲೆ ಮೂಡುವ ಆಲೋಚನೆಗಳನ್ನು ಭಾವರಹಿತ ದೃಷ್ಟಿಯಿಂದ ವೀಕ್ಷಿಸುತ್ತಾ ನಿರ್ಲಕ್ಷಿಸಿ ಆಯ್ದ ಅಂಶದ ಮೇಲೆ ಅವಧಾನವನ್ನು ನಾಭೀಕರಿಸಬೇಕು. ಇಂತು ಮಾಡುವುದರಿಂದ ನಮ್ಮಲ್ಲಿ ಹುದುಗಿರುವ ಆಲೋಚನೆಗಳ ಸ್ವರೂಪದ ಅರಿವು ಆದರೂ ಒತ್ತಡ ಉಂಟಾಗುವುದಿಲ್ಲ. ಕ್ರಮೇಣ ಆಲೋಚನೆಗಳ ಹರಿವಿನ ವೇಗವೂ ಆಲೋಚನೆಗಳ ಸಂಖ್ಯೆಯೂ ಕಡಿಮೆ ಆಗುತ್ತದೆ, ಆಲೋಚನಾರಹಿತ ಅವಧಿ ಹೆಚ್ಚುತ್ತದೆ.

೭. ‘ಧ್ಯಾನ ಮಾಡುವುದರ ಘೋಷಿತ ಪರಿಣಾಮಗಳು ಗೋಚರಿಸಬೇಕಾದರೆ ಅನೇಕ ವರ್ಷಗಳೇ ಬೇಕಾಗುತ್ತದೆ’ – ಈ ಅಭಿಪ್ರಾಯ ಆಧ್ಯಾತ್ಮಿಕ ದೃಷ್ಟಿಯಿಂದ ಸರಿಯಾದದ್ದು ಆಗಿರಬಹುದಾದರೂ ಈ ಮುನ್ನ ವಿವರಿಸಿದ ಪರಿಣಾಮಗಳ ಪೈಕಿ ಹೆಚ್ಚಿನವು ಸುಮಾರು ೭-೮ ವಾರಗಳಲ್ಲಿಯೂ ಗೋಚರಿಸುತ್ತವೆ ಎಂಬುದು ವೈದ್ಯಕೀಯ ಪ್ರಯೋಗಗಳಿಂದ ಸಾಬೀತಾಗಿವೆ. ಎಂದೇ, ಧ್ಯಾನ ಮಾಡುವಂತೆ ಅಮೇರಿಕದ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಲಹೆ ನೀಡಲಾಗುತ್ತಿದೆ. ಧ್ಯಾನ ಮಾಡಲಾರಂಭಿಸಿದ ಕೆಲವೇ ದಿನಗಳಲ್ಲಿ ರಾತ್ರಿ ಗಾಢವಾದ ನಿದ್ದೆ ಬರುತ್ತಿದೆ ಅನ್ನುವವರ ಸಂಖ್ಯೆಯೂ ಗಮನಾರ್ಹವಾಗಿದೆ,

೮. ‘ನಮ್ಮನ್ನು ನಾವೇ ಸಮ್ಮೋಹನಕ್ಕೆ (ಹಿಪ್ನೋಸಿಸ್) ಒಳಪಡಿಸಿಕೊಳ್ಳುವುದಕ್ಕೆ ಸಮನಾದ ಪ್ರಕ್ರಿಯೆ ಧ್ಯಾನ’ – ಇದು ಸಮ್ಮೋಹನ ಚಿಕಿತ್ಸಕರು (ಹಿಪ್ನೋತೆರಪಿಸ್ಟ್ಸ್) ಹುಟ್ಟು ಹಾಕಿದ ತಪ್ಪು ಪರಿಕಲ್ಪನೆ. ಏನು ಜರಗುತ್ತಿದೆ ಎಂಬುದರ ಅರಿವು ಸಮ್ಮೋಹನ ಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಇರುವುದಿಲ್ಲ. ಪ್ರತೀ ಕ್ಷಣದಲ್ಲಿಯೂ ಏನು ಜರಗುತ್ತಿದೆ ಎಂಬುದರ ಅರಿವು ಧ್ಯಾನ ಮಾಡುವವರಿಗೆ ಇರುತ್ತದೆ. ಮನಸ್ಸಿನಾಳದಲ್ಲಿ ಹುದುಗಿರುವ ಅನುಭವಗಳನ್ನು ಪುನಃ ಭಾವನಾತ್ಮಕವಾಗಿ ಅನುಭವಿಸುವಂತೆ ಮಾಡುವ ಪ್ರಕ್ರಿಯೆ ಸಮ್ಮೋಹನ. ಧ್ಯಾನವಾದರೋ ಅವುಗಳ ಪ್ರಭಾವದಿಂದ ವ್ಯಕ್ತಿಯನ್ನು ಮುಕ್ತಗೊಳಿಸುತ್ತದೆ. ಸಮ್ಮೋಹನ ಸ್ಥಿತಿಯಲ್ಲಿ ಚಯಾಪಚಯ ಚಟುವಟಿಕೆಗಳು ಹೆಚ್ಚುತ್ತವೆ, ಧ್ಯಾನಾವಧಿಯಲ್ಲಿ ಕಡಿಮೆ ಆಗುತ್ತದೆ.

೯. ‘ವೃದ್ಧಾಪ್ಯದಲ್ಲಿ ಧ್ಯಾನ ಮಾಡಿದರೆ ಸಾಕು,’ – ಜೀವನದ ಸಂಧ್ಯಾಕಾಲದಲ್ಲಿ ಶಾಂತಚಿತ್ತರಾಗಿ ಬದುಕುವುದನ್ನು ಕಲಿಯುವ ಆವಶ್ಯಕತೆ ಹೆಚ್ಚು ಎಂದು ನಂಬುವವರ ಅಂಬೋಣ ಇದು. ವಾಸ್ತವವಾಗಿ, ಜೀವನದ ಏಳುಬೀಳುಗಳನ್ನು ಸಮಚಿತ್ತದಿಂದ ಎದುರಿಸಬೇಕಾದ ಆವಶ್ಯಕತೆ ಎಲ್ಲ ವಯಸ್ಸಿನವರಿಗೂ ಇದೆ. ಎಂದೇ, ಎಲ್ಲ ವಯಸ್ಸಿನವರೂ ಲಾಭ ಪಡೆಯಬಹುದಾದ ಪ್ರಕ್ರಿಯೆ ಧ್ಯಾನ.

೧೦. ‘ನಿರ್ದಿಷ್ಟ ಸಮಯದಲ್ಲಿಯೇ ಧ್ಯಾನ ಮಾಡಬೇಕು’ – ಲಾಭದಾಯಕ ಎಂದು ತಿಳಿದಿದ್ದರೂ ತಾವು ಏಕೆ ಧ್ಯಾನಮಾಡುವುದಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ಕೊಡಬಹುದಾದ ಕಾರಣ ಇದು. ವಾಸ್ತವವಾಗಿ, ಯಾವುದೇ ಸಮಯದಲ್ಲಿ ಧ್ಯಾನ ಮಾಡಬಹುದು. ಊಟ ಮಾಡಿದ ತಕ್ಷಣ, ನಿದ್ದೆ ಬರುತ್ತಿರುವ ವೇಳೆಯಲ್ಲಿ ಧ್ಯಾನ ಮಾಡಲಾರಂಭಿಸಿದರೆ ಗಾಢನಿದ್ದೆಗೆ ಜಾರುವ ಸಾಧ್ಯತೆ ಇರುವುದರಿಂದ ಆ ಕಾಲದಲ್ಲಿ ಧ್ಯಾನ ಮಾಡದಿರುವುದು ಒಳ್ಳೆಯದು ಎಂಬುದು ಸಲಹೆ ಮಾತ್ರ. ಬೆಳಗ್ಗೆ ಎದ್ದು ಶೌಚಕರ್ಮಗಳನ್ನು ಮುಗಿಸಿದ ನಂತರ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ಧ್ಯಾನಮಾಡುವುದು ಒಳಿತೆಂಬುದು ಅನುಭವಸ್ತರ ಅಭಿಮತ. ಮೊದಲನೆಯದು ದಿನವಿಡೀ ಉತ್ಸಾಹದಿಂದ ದುಡಿಯಲು ಸಹಕಾರಿ, ಎರಡನೆಯದ್ದು ದಿನದ ದುಗುಡ ದುಮ್ಮಾನಗಳಿಂದ ಮುಕ್ತರಾಗಲು ಸಹಕಾರಿ ಎಂಬ ಕಾರಣಗಳಿಗಾಗಿ.

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s