ಎಲ್ಲರಿಗೂ ಬೇಕಿದೆ – ಸಾವನ್ನು ಎದುರಿಸಲು ಶಿಕ್ಷಣ

ಇದೇನು ಹುಚ್ಚು ಅನ್ನುವಿರಾ? ಸಾವು ಎಂಬ ಅಮಂಗಲಕರ ವಿಷಯದ ಕುರಿತು ಶಿಕ್ಷಣವೇ ಎಂದು ಹುಬ್ಬೇರಿಸುವಿರಾ? ಮುಂದೆ ನಾನು ಪ್ರಸ್ತುತ ಪಡಿಸುವ ವಿಚಾರಗಳ ಕುರಿತು ಚಿಂತನೆ ಮಾಡಿದ ಬಳಿಕ ಇಂಥದ್ದೊಂದು ಶಿಕ್ಷಣ ಬೇಕೇ ಬೇಡವೇ ಎಂಬುದನ್ನು ನೀವೇ ತೀರ್ಮಾನಿಸಿ. ಇಂಥ ಶಿಕ್ಷಣವನ್ನು ಯಾವ ವಯಸ್ಸಿನಲ್ಲಿ ಹೇಗೆ ನೀಡಬೇಕು ಅನ್ನುವ ವಿಚಾರಗಳನ್ನು ಪಕ್ಕಕ್ಕಿಟ್ಟು ಚಿಂತನೆ ನಡೆಸಿ. ವಿಷಯ ಪ್ರವೇಶಕ್ಕೆ ಮುನ್ನ ಇನ್ನೊಂದು ಮಾತು – ಈಗಲೇ ಸಾಯುವ ಬಯಕೆಯು ನನಗಿಲ್ಲವಾದ್ದರಿಂದ ಹಾಲಿ ಇರುವ ಆರೋಗ್ಯದ ಸಮಸ್ಯೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಮಾಡಲೇಬೇಕಾದುದನ್ನು ಮಾಡುತ್ತಿದ್ದೇನೆ. ಮುಂದೊಂದು ದಿನ ಸ್ವಾಭಾವಿಕವಾಗಿ ಸಾವು ಎದುರಾದಾಗ ಹೇಗಾದರೂ ಮಾಡಿ ಬದುಕಲೇಬೇಕೆಂದು ಪಣತೊಟ್ಟು ಪರದಾಡುವ ಇರಾದೆಯೂ ನನಗಿಲ್ಲ. ಶೀರ್ಷಿಕೆಯಲ್ಲಿ ಸೂಚಿಸಿದ ಆಲೋಚನೆಯ ಸೃಷ್ಟಿಕರ್ತ ನಾನಲ್ಲ. ಬಲು ಹಿಂದೆ, ನನಗೆ ನೆನಪಿದ್ದಂತೆ ಕಳೆದ ಶತಮಾನದ ೮೦ ರ ದಶಕದಲ್ಲಿ ಇಂಥದ್ದೊಂದು ಆಂದೋಲವನ್ನು ಭಾರತದಲ್ಲಿ ಹುಟ್ಟುಹಾಕಲು ಡಾ ರಾಜಾಗಣೇಶನ್ ಎಂಬುವರು ಪ್ರಯತ್ನಿಸಿದ್ದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ವಿಶೇಷವಾಗಿ ಅಮೇರಿಕಾದಲ್ಲಿ ಸ್ವಯಂಸೇವಾ ಸಂಘಟನೆಗಳು ಈ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿವೆ, ಯಶಸ್ವಿಯೂ ಆಗಿವೆ.

  • ನಮಗೆ ಸಾವು ಅನಿವಾರ್ಯ ಮತ್ತು ನಿಶ್ಚಿತ – ಇದು ತಥ್ಯ.
  • ನಮಗೆ ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದು ತಿಳಿದಿಲ್ಲ (ಆತ್ಮಹತ್ಯೆ ಹೊರತುಪಡಿಸಿ) – ಇದೂ ತಥ್ಯ.
  • ಪ್ರಸಾಮಾನ್ಯವಾಗಿ ಒಂದು ನಿರ್ದಿಷ್ಟ ವಯಸ್ಸಿನ ನಂತರ ಸಹಜಸಾವು ಬರುತ್ತದೆ ಎಂಬುದು ನಿಜವಾದರೂ ಇದು ಅನುಲ್ಲಂಘನೀಯ ನೈಸರ್ಗಿಕ ನಿಯಮವಲ್ಲ – ಇದೂ ತಥ್ಯ.

ಅಂದಮೇಲೆ ಇದು ಅಮಂಗಲಕರ ವಿಷಯವಾಗುವುದು ಹೇಗೆ? ಸಾವು ಬಂದಾಗ ಅದನ್ನು ಧೈರ್ಯವಾಗಿ ಎದುರಿಸಲು ಕಲಿಯುವುದೂ ಕಲಿಸುವುದೂ ತಪ್ಪೇ? ನಮ್ಮ ಸಾವು ಸಂಭವಿಸುವಾಗ ಮತ್ತು ತದನಂತರ ಇತರರ, ವಿಶೇಷತಃ ಆತ್ಮೀಯ ಬಂಧುಗಳ ಜೀವನವು ತೀವ್ರವಾಗಿ ಅಸ್ತವ್ಯಸ್ತವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆಂಬುದನ್ನು ಕಲಿಯುವುದೂ ಕಲಿಸುವುದೂ ತಪ್ಪೇ? ನಾವು ಬದುಕಿದ್ದಾಗ ನಮ್ಮನ್ನು ಸಂಪೂರ್ಣವಾಗಿ ಅವಲಂಬಿಸಿದವರು ಇದ್ದರೆ ನಮ್ಮ ಸಾವಿನ ನಂತರ ಅವರು ತಮ್ಮ ಜೀವನವನ್ನು ಯಾರ ಹಂಗೂ ಇಲ್ಲದೆಯೇ ಸಾಗಿಸಲು ವ್ಯವಸ್ಥೆ ಮಾಡುವುದು ಹೇಗೆಂಬುದನ್ನು ಕಲಿಯುವುದೂ ಕಲಿಸುವುದೂ ತಪ್ಪೇ? ನಮ್ಮ ಸಾವು ಅನೇಕ ಹೊಸ ಸಮಸ್ಯೆಗಳನ್ನು ನಮ್ಮ ಉತ್ತರಾಧಿಕಾರಿಗಳಿಗೆ ಹುಟ್ಟುಹಾಕದಂತೆ ವ್ಯವಸ್ಥೆ ಮಾಡುವುದು ಹೇಗೆಂಬುದನ್ನು ಕಲಿಯುವುದೂ ಕಲಿಸುವುದೂ ತಪ್ಪೇ? ಜೀವನಸಂಗಾತಿಯ ಸಾವಿನಿಂದ ಆಗಬಹುದಾದ ಮಾನಸಿಕ ಆಘಾತದಿಂದ ಹೊರಬಂದು ಮುಂದಿನ ಬದುಕನ್ನು ರೂಪಿಸಿಕೊಳ್ಳುವ ಕುರಿತು ಕಲಿಯುವುದೂ ಕಲಿಸುವುದೂ ತಪ್ಪೇ? ನಮ್ಮ ನಂತರ ಏನಾಗುತ್ತದೆ ಎಂಬುದರ ಕುರಿತು ನಾವೇಕೆ ಚಿಂತೆ ಮಾಡಬೇಕು, ಏನೇ ಆದರೂ ಅದು ನಮ್ಮನ್ನು ಪ್ರಭಾವಿಸುವುದಿಲ್ಲವಲ್ಲ – ಎಂಬ ನಿಲುವು ತಳೆಯುವುದು ಸರಿಯೇ? ಸರಿಯಲ್ಲ ಅನ್ನುವವರು ಉಪಯುಕ್ತ ಮಾಹಿತಿಗಾಗಿ ಮುಂದೆ ಓದಿ, ಸರಿ ಅನ್ನುವವರೂ ಮುಂದೆ ಓದಿ – ನಿಮ್ಮ ನಿಲುವು ಬದಲಾಗುವ ಸಾಧ್ಯತೆ ಇರುವುದರಿಂದ.

ಅಮೇರಿಕಾದಲ್ಲಿ ಮಾಡಿದ ಒಂದು ಸರ್ವೇಕ್ಷಣೆಯ ಪ್ರಕಾರ ತಮ್ಮ ಸಾವಿಗೆ ಸಂಬಂಧಿಸಿದಂತೆ ಬಹುಮಂದಿ

  • ಸ್ವಗೃಹದಲ್ಲಿ ಸಾಯಲು ಬಯಸುತ್ತಾರೆ (ಆಸ್ಪತ್ರೆಯಲ್ಲಿ ಅಥವ ಅಲ್ಲಿನ ಐ ಸಿ ಯು ನಲ್ಲಿ ಅಲ್ಲ)
  • ನೋವಿಲ್ಲದ ಸಾವನ್ನು ಅಪೇಕ್ಷಿಸುತ್ತಾರೆ (ಇದಕ್ಕಾಗಿ ಪ್ರಸಾಮಾನ್ಯವಾಗಿ ಉಪಯೋಗಿಸದ ಪ್ರಖರವಾದ ನೋವುನಿವಾರಕ ಅಥವ ನಿದ್ರಾಜನಕಗಳ ನೆರವಿನಿಂದಲಾದರೂ ಅಡ್ಡಿ ಇಲ್ಲ )
  • ಆತ್ಮೀಯ ಪ್ರೀತಿಪಾತ್ರರು ಜೊತೆಯಲ್ಲಿ ಇರುವಾಗ ಸಾಯಲು ಬಯಸುತ್ತಾರೆ (ಅಪರಿಚಿತ ದಾದಿಯರು, ವೈದ್ಯರು ಮತ್ತು ಯಂತ್ರೋಪಕರಣಗಳೊಂದಿಗೆ ಇರುವಾಗ ಅಲ್ಲ)
  • ಅನಾರೋಗ್ಯದಿಂದ ಬಳಲುತ್ತಿದ್ದರೆ ಪಡೆಯುವ ಚಿಕಿತ್ಸಾಸ್ವರೂಪವನ್ನು ನಿರ್ಧರಿಸುವ ಸ್ವಾತಂತ್ರ್ಯ ತಮಗೂ ಇರಬೇಕೆಂದು ಬಯಸುತ್ತಾರೆ (ಲಭ್ಯವಿರುವ ಪರ್ಯಾಯಗಳನ್ನು ವೈದ್ಯರಿಂದ ತಿಳಿದ ಬಳಿಕ)

(ಗಮನಿಸಿ: ಆವರಣ ಚಿಹ್ನೆಗಳ ಒಳಗೆ ಪುಟ್ಟ ಓರೆ ಅಕ್ಷರದಲ್ಲಿರುವುದು ನನ್ನ ಕೊಡುಗೆ, ಸರ್ವೇಕ್ಷಣೆಯದ್ದಲ್ಲ)

ನನ್ನ ಅಪೇಕ್ಷೆಯೂ ಇದೇ ಆಗಿದೆ, ನಿಮ್ಮದೂ ಇದೇ ಎಂದು ನಂಬಿದ್ದೇನೆ

ಎಂದೇ, ಈ ಮುಂದೆ ನಮೂದಿಸಿದ ಅಂಶಗಳ ಕುರಿತಂತೆ ಚಿಂತನೆ ಮಾಡಿ

೧. ನಿಮ್ಮ ಸ್ವಯಾರ್ಜಿತ ಆಸ್ತಿಯನ್ನು (ಸ್ಥಿರ ಮತ್ತು ಚರ) ನಿಮ್ಮ ನಂತರ ಹೇಗೆ ವಿಲೇವಾರಿ ಮಾಡಬೇಕೆಂಬುದರ ಕುರಿತು ಉಯಿಲು ಬರೆದಿರುವಿರಾ?  (ಗಮನಿಸಿ: ಪಿತ್ರಾರ್ಜಿತ ಾಸ್ತಿಯನ್ನು ನಿಮಗಿಷ್ಟಬಂದಂತೆ ವಿಲೇವಾರಿ ಮಾಡುವಂತಿಲ್ಲ)

ನೀವು ಬರೆದಿರುವ ಉಯಿಲಿನಲ್ಲಿ ನಮೂದಿಸಿರುವ ವಿಚಾರಗಳಿಗೆ ನಿಮ್ಮ ಬಾಳಸಂಗಾತಿಯೂ ಮತ್ತಿತರ ವಾರಸುದಾರರೂ ನಿಮ್ಮ ಸಮ್ಮುಖದಲ್ಲಿಯೇ ಸಮ್ಮತಿಸಿದರೆ ಬಲು ಒಳ್ಳೆಯದು. ನಿಮ್ಮ ಮರಣಾನಂತರ ಆಸ್ತಿಯ ಕುರಿತಾಗಿ ಅವರ ನಡುವೆ ವೈಮನಸ್ಯಗಳು ಉದ್ಭವಿಸುವುದನ್ನು ಇದು ತಡೆಯುತ್ತದೆ. ನಿಮ್ಮ ನಂತರ ಜೀವನಸಂಗಾತಿಯು ತಕ್ಕಮಟ್ಟಿಗಿನ ಆರ್ಥಿಕ ಸ್ವಾತಂತ್ರ್ಯದೊಂದಿಗೆ ಗೌರವಯುತವಾಗಿ ನೆಮ್ಮದಿಯ ಜೀವನ ನಡೆಸಲು ಅಗತ್ಯವಾದ ಅಂಶಗಳು ಉಯಿಲಿನಲ್ಲಿ ಇರಬೇಕಾದದ್ದು ಅತೀ ಮುಖ್ಯ. ತನ್ನ ಮುಂದಿನ ಜೀವನಕ್ಕೆ ಸಂಬಂಧಿಸಿದಂತೆ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಜೀವನಸಂಗಾತಿಗೆ ಇರಬೇಕೇ ವಿನಾ ಮಕ್ಕಳಿಗಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ದೃಷ್ಟಿಯಲ್ಲಿ ಜೀವನಸಂಗಾತಿಯನ್ನು ಶಕ್ತವಾಗಿಸಲು ಅಗತ್ಯವಾದ ವಿಚಾರಗಳು ಉಯಿಲಿನಲ್ಲಿ ಇರಬೇಕು.

ವೃದ್ಧಾಪ್ಯದಲ್ಲಿರುವವರು ಉಯಿಲು ಮಾಡಿದರೆ ಸಾಕು, ಚಿಕ್ಕ ವಯಸ್ಸಿನವರಲ್ಲ ಎಬ ಭ್ರಮೆಯಿಂದ ಉಯಿಲು ಬರೆಯುವುದನ್ನು ಮುಂದೂಡುತ್ತಾ ಹೋದದ್ದರಿಂದ ಸಂಕಷ್ಟಕ್ಕೆ ಸಿಕ್ಕಿದ ಕುಟುಂಬಗಳನ್ನು ನಾನು ನೋಡಿದ್ದೇನೆ.

೨. ನಿಮ್ಮ ಆರೋಗ್ಯಪಾಲನೆಗೆ ಸಂಬಂಧಿಸಿದಂತೆ ನೀವೇ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲದ ಸಂದರ್ಭಗಳಲ್ಲಿ ಯಾರು ನಿಮ್ಮ ಪರವಾಗಿ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ನೀವು ಬಯಸುವಿರಿ?

ನೀವು ಆಯ್ದ ವ್ಯಕ್ತಿ ಯಾರೆಂಬುದು ನಿಮ್ಮ ಆತ್ಮೀಯರಿಗೆಲ್ಲರಿಗೂ ತಿಳಿದಿರಬೇಕಾದದ್ದೂ ಅದಕ್ಕೆ ಅವರು ಒಪ್ಪಿಗೆ ಸೂಚಿಸಿರಬೇಕಾದದ್ದೂ ಅತ್ಯಗತ್ಯ. ಈ ಲೇಖನದಲ್ಲಿ ನಮೂದಿಸಿದ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯಗಳನ್ನು ಆ ವ್ಯಕ್ತಿಯೊಂದಿಗೆ ಚರ್ಚಿಸಿರಬೇಕು. ಇದು ಆ ವ್ಯಕ್ತಿ ನಿಮ್ಮ ಪರವಾಗಿ ಅಂತಿಮ ತೀರ್ಮಾನ ಕೈಗೊಳ್ಳಲು ನೆರವು ನೀಡುತ್ತದೆ. ವೃದ್ಧ ತಂದೆ ತಾಯಿಯರು ಇದ್ದಕ್ಕಿದ್ದಂತೆ ರೋಗಪೀಡಿತರಾಗಿ ಆರೋಗ್ಯಪಾಲನೆಗೆ ಸಂಬಂಧಿಸಿದಂತೆ ನೀವೇ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲದೇ ಇರುವಾಗ ಅವರ ಮಕ್ಕಳು ಸಮಾಜ ನಿಂದಿಸೀತು ಎಂದು ಹೆದರಿ ಪ್ರಯೋಜನವಾಗದಿದ್ದರೂ ದುಬಾರಿ ಚಿಕಿತ್ಸೆ ಕೊಟ್ಟು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದನ್ನು ನೀವು ಗಮನಿಸಿರಬಹುದು. ನೀವು ಆರೋಗ್ಯವಂತರಾಗಿದ್ದಾಗಲೇ ಈ ಲೇಖನದಲ್ಲಿ ನಮೂದಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರೆ ಅವರ ಜೀವನ ಅಸ್ತವ್ಯಸ್ತವಾಗಲಾರದು.

೩. ಯಾವ ರೀತಿಯ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ನೀವು ಬಯಸುವಿರಿ ಅಥವ ಬಯಸುವುದಿಲ್ಲ?

ಇಂದಿನ ದಿನಗಳಲ್ಲಿ ವೈದ್ಯವೃತ್ತಿಯೂ ಒಂದು ವಾಣಿಜ್ಯ ಚಟುವಟಿಕೆ ಆಗಿದೆ. ಎಂದೇ, ಯಾವುದೇ ರೋಗದ ಚಿಕಿತ್ಸೆಗೆಂದು ನೀವು ವೈದ್ಯರ ಬಳಿ ಹೋದರೆ ನಿಮ್ಮ ರೋಗಮುಕ್ತರಾಗುತ್ತೀರೋ ಇಲ್ಲವೋ ಧನಮುಕ್ತರಂತೂ ಆಗುವುದು ಖಚಿತ. ಕೆಲವು ರೋಗಗಳು (ಉದಾ: ಅರ್ಬುದ ಅಥವ ಕ್ಯಾನ್ಸರ್) ನಿರ್ದಿಷ್ಟ ಹಂತ ದಾಟಿದ ಬಳಿಕ ಸಾವನ್ನು ಮುಂದೂಡಬಹುದೇ ವಿನಾ ನಿವಾರಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಅತೀ ದುಬಾರಿ ಚಿಕಿತ್ಸೆ ಅಗತ್ಯವೆ? ೮೦-೯೦ ವರ್ಷ ವಯಸ್ಸಾದ ಬಳಿಕವೂ ಹಾಸಿಗೆಯಲ್ಲಿಯೇ ನಿಶ್ಚಲವಾಗಿದ್ದರೂ ಅಡ್ಡಿಯಿಲ್ಲ, ಇನ್ನಷ್ಷು ವರ್ಷ ಬದುಕಿಸಲೇ ಬೇಕು ಎಂದು ಆ ತನಕ ಮಾಡಿದ್ದ ಉಳಿತಾಯವನ್ನೆಲ್ಲ ವೈದ್ಯರಿಗೆ ಕೊಡಬೇಕೇ? ನೋವಿನ ತೀವ್ರತೆ ಕಮ್ಮಿ ಆಗುವಂತೆ ಮಾಡಲು ಒದಗಿಸಬೇಕಾದ ಚಿಕಿತ್ಸೆಗೆ ಆದ್ಯತೆ ಕೊಟ್ಟರೆ ಸಾಕೇ? ಅದೇನೇ ಇರಲಿ, ಇವೆಲ್ಲವೂ ವೈಯಕ್ತಿಕ ತೀರ್ಮಾನಗಳು. ಎಂದೇ, ಈ ಪ್ರಶ್ನೆಗೆ ಅವರದ್ದೇ ಆದ ಖಚಿತ ಉತ್ತರವನ್ನು ಮೊದಲೇ ನೀಡಬೇಕು ಮತ್ತು ಅದನ್ನು ಸಂಬಂಧಿಸಿದವರಿಗೆ ತಿಳಿಸಿರಲೂಬೇಕು.

೪. ಅಂತಿಮ ದಿನಗಳಲ್ಲಿ ಹಾಯಾಗಿರಲು ನೀವು ಬಯಸುವ ಸೌಕರ್ಯಗಳೇನು?

ಜೀವನ ಸಂಗ್ರಾಮದಲ್ಲಿ ಹೋರಾಡಿ ಅದರಿಂದ ದೂರಸರಿಯಲೇ ಬೇಕಾಗಿ ಬಂದಾಗ ನಿಶ್ಚಿಂತೆಯಿಂದ ಉಳಿದ ದಿನಗಳನ್ನು ಕಳೆಯಲು ನೀವು ಬಯಸುವ ಸೌಕರ್ಯಗಳೇನು ಎಂಬುದನ್ನು ನಿಮ್ಮ ಮತ್ತು ನಿಮ್ಮ ಆತ್ಮೀಯರ ಇತಿಮಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನಿಸಿ. ನಿಮ್ಮ ಆಸೆಯನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನೀವು ಜೀವನದಲ್ಲಿ ಕ್ರಿಯಾಶೀಲರಾಗಿದ್ದಾಗಲೇ ಇವುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನೀವೇ ಮಾಡಿಕೊಳ್ಳಿ.

೫. ಇತರರು ನಿಮ್ಮೊಂದಿಗೆ ಹೇಗೆ ವ್ಯವಹರಿಸಬೇಕೆಂದು ನೀವು ಬಯಸುವಿರಿ?

ಅಂತಿಮ ದಿನಗಳನ್ನು ಕಳೆಯುತ್ತಿರುವಾಗ ನಿಮ್ಮನ್ನು ಭೇಟಿ ಮಾಡಲು ಬರುವವರು (ಅವರ ಉದ್ದೇಶ ಏನೇ ಆಗಿರಲಿ) ನಿಮ್ಮೊಂದಿಗೆ ಹೇಗೆ ವ್ಯವಹರಿಸಬೇಕೆಂದು ನೀವು ಬಯಸುವಿರಿ ಎಂಬುದನ್ನು ನಿಮ್ಮ ಆತ್ಮೀಯರೊಂದಿಗೆ ಮೊದಲೇ ಹೇಳಿದ್ದರೆ ಭೇಟಿಗಳು ಆನಂದದಾಯಕಗಳಾಗಿರುತ್ತವೆ. ಅನೇಕ ಸಲ ಬಂದವರ ವರ್ತನೆ ಮತ್ತು ಮಾತುಕತೆ ಅತೀ ಕೃತಕವಾದದ್ದಾಗಿರುವುದನ್ನೂ ಯಾಂತ್ರಿಕವಾಗಿರುವುದನ್ನೂ (ಕೃತಕವಾದ ಗಂಭೀರ ಅಥವ ಬೇಸರದ ಮುಖಮುದ್ರೆ!) ನಾನು ಗಮನಿಸಿದ್ದೇನೆ. ತತ್ಪರಿಣಾಮವಾಗಿ ಈ ಭೇಟಿಗಳು ರೋಗಿಯ ಮಾನಸಿಕ ಕುಸಿತಕ್ಕೆ ಅಥವ ಅಸಂತುಷ್ಟಿಗೆ ಕಾರಣವಾಗುತ್ತವೆ.

೬. ನಿಮ್ಮ ಪ್ರೀತಿಪಾತ್ರರಿಗೆ ತಿಳಿದಿರಲೇಬೇಕಾದ್ದು ಎಂದು ಯಾವುದನ್ನು ನೀವು ಪರಿಗಣಿಸುವಿರಿ?

ನಿಮ್ಮ ಮನದಾಳದ ಭಾವನೆಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಬೇಕಾದ, ಪ್ರೀತಿಪಾತ್ರರ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸಬೇಕಾದ, ನಿಮ್ಮಿಂದಾಗಿರಬಹುದಾದ ತಪ್ಪುಗಳಿಗಾಗಿ ಕ್ಷಮೆ ಕೋರಬೇಕಾದ ಸಮಯ ಇದು. ವ್ಯಾವಹಾರಿಕವಾಗಿ ಹೇಳುವಂಥದ್ದು ಏನಾದರೂ ಬಾಕಿ ಉಳಿದಿದ್ದರೆ ಅದನ್ನು ಹೇಳುವುದನ್ನು ಮುಂದೂಡದಿರುವುದು ಒಳ್ಳೆಯದು.

೭. ನಿಮ್ಮ ಮರಣಾನಂತರದ ಉತ್ತರಕ್ರಿಯೆಗಳು ಇಂತಾಗಬೇಕೆಂಬ ಬಯಕೆ ಇದ್ದರೆ ಅದನ್ನು ಪ್ರೀತಿಪಾತ್ರರಿಗೆ ತಿಳಿಸಿದ್ದೀರಾ?

ಹಿಂದುಗಳಲ್ಲಿ, ವಿಶೇಷವಾಗಿ ಬ್ರಾಹ್ಮಣರಲ್ಲಿ, ಉತ್ತರಕ್ರಿಯೆಗಳು ಬಲು ದುಬಾರಿಯಾದ ಯಾಂತ್ರಿಕವಾಗಿ ಮಾಡುವ ಭಾವನಾರಹಿತ ವ್ಯವಹಾರವಾಗಿದೆ. ಈ ಕುರಿತು ನಿಮ್ಮ ಬಯಕೆಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ತಿಳಿಸಿರಿ. (ನನ್ನ ಮರಣಾನಂತರ ನನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ಒಪ್ಪಿಸತಕ್ಕದ್ದು. ಯಾವುದೇ ಮತೀಯ ಆಚರಣೆಗಳನ್ನು ಮಾಡುವ ಆವಶ್ಯಕತೆ ಇಲ್ಲ. ನನ್ನ ಕೊಡುಗೆಯನ್ನು ಜ್ಞಾಪಿಸಿಕೊಳ್ಳಲೇ ಬೇಕೆಂಬ ಬಯಕೆ ಇದ್ದರೆ ಕನಿಷ್ಟ ಒಂದು ಬಡಮಗುವಿನ ಶಿಕ್ಷಣವೆಚ್ಚ ಭರಿಸುವುದು, ಅನಾಥಾಶ್ರಮಗಳಲ್ಲಿ ಭೋಜನ ವ್ಯವಸ್ಥೆ ಇತ್ಯಾದಿ ಮಾಡುವುದು ಮುಂತಾದವುಗಳ ಪೈಕಿ ಯುಕ್ತವೆಂದು ತೋಚಿದ್ದನ್ನು ಮಾಡಬಹುದು ಎಂಬುದು ನನ್ನ ಅಪೇಕ್ಷೆ. ಇದಕ್ಕೆ ನನ್ನ ಕುಟುಂಬದವರ ಸಮ್ಮತಿ ಇದೆ)

ಈಗ ನೀವೇ ತೀರ್ಮಾನಿಸಿ – ಸಾವನ್ನು ಎದುರಿಸುವ ಕುರಿತಾದ ಶಿಕ್ಷಣ ಎಲ್ಲರಿಗೂ ಅಗತ್ಯವೇ ಅಲ್ಲವೇ ಎಂಬುದನ್ನು.

[ಗಮನಿಸಿ: ನಮ್ಮ ಸಮಾಜದಲ್ಲಿ ಸಾವನ್ನು ಎದುರಿಸುವ ಕುರಿತಾಗಲೀ ಲೈಂಗಿಕತೆಯ ಕುರಿತಾಗಲೀ ನಿರ್ಭಿಡೆಯಿಂದ ಚರ್ಚಿಸುವುದನ್ನೇ ಆಗಲಿ ಶಿಕ್ಷಣ ನೀಡುವುದನ್ನೇ ಆಗಲಿ ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ. ಇವುಗಳ ಪರಿಣಾಮದ ಕುರಿತಾಗಿರುವ ತಪ್ಪು ಪರಿಕಲ್ಪನೆಗಳೇ ಇದಕ್ಕೆ ಕಾರಣ ಎಂಬುದು ನನ್ನ ಅನಿಸಿಕೆ]

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s