ಪ್ರಸಾಮಾನ್ಯ ಜೀವನ (ನಾರ್ಮಲ್ ಲೈಫ್) – ಒಂದು ಕಾಲ್ಪನಿಕ ಕಥೆ (ಮಿತ್)

‘ನಮ್ಮದು ಪ್ರಸಾಮಾನ್ಯ ಜೀವನ. ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ನಾವು ಪ್ರಸಾಮಾನ್ಯರು. ಪ್ರಸಾಮಾನ್ಯರಿಗಿರುವ ಪ್ರಸಾಮಾನ್ಯ ಸಮಸ್ಯೆಗಳ ಹೊರತಾಗಿ ವಿಶೇಷವಾದ ಸಮಸ್ಯೆಗಳೇನೂ ನಮಗಿಲ್ಲ. ಈ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಗಳು ಎಂದು ನಾವು ಪರಿಗಣಿಸುವುದೇ ಇಲ್ಲ’ – ಬಹುಮಂದಿ ಇಂತು ಹೇಳುವುದನ್ನು ನಾನು ಕೇಳಿದ್ದೇನೆ. ‘ಪ್ರಸಾಮಾನ್ಯ’ ಎಂಬುದೇ ಮಾನವ ಸೃಷ್ಟಿಸಿದ ಕಾಲ್ಪನಿಕ ಪರಿಕಲ್ಪನೆ. ಆದ್ದರಿಂದ ‘ಪ್ರಸಾಮಾನ್ಯ ಜೀವನ’ ಎಂಬುದೂ ಒಂದು ಕಾಲ್ಪನಿಕ ಪರಿಕಲ್ಪನೆ. ಎಂದೇ ಇದೊಂದು ಕಾಲ್ಪನಿಕ ಕಥೆ. ಈ ದೋಷಪೂರ್ಣ ನಂಬಿಕೆಯ ಪರಿಣಾಮವಾಗಿ ಅಂತಃವೀಕ್ಷಣೆಯ (ಇದರ ಇನ್ನೊಂದು ಹೆಸರೇ ಧ್ಯಾನ) ನೆರವಿನಿಂದ ತಮ್ಮ ಮಾನಸಿಕ ಜೀವನದ ಗುಣಮಟ್ಟವನ್ನು ಉತ್ತಮೀಕರಿಸುವುದು ಸಾಧ್ಯ ಎಂಬುದನ್ನು ನಂಬಲು ಇವರು ತಯಾರಿಲ್ಲ – ಇದು ನನ್ನ ಅಭಿಪ್ರಾಯ. ಏನಾದರೂ ದೈಹಿಕ ಅಥವ ಮಾನಸಿಕ ಸಮಸ್ಯೆಗಳು ಇರುವವರು ಮಾತ್ರ ಇಂಥದ್ದನ್ನು ಮಾಡಬೇಕು, ಪ್ರಸಾಮಾನ್ಯರಲ್ಲ ಎಂಬುದು ಇವರ ನಿಲುವು. ಈ ಕುರಿತಾದ ಶಿಕ್ಷಣ ಪಡೆಯಲೂ ಇವರು ತಯಾರಿಲ್ಲ. (ಅದಕ್ಕೆ ಅಷ್ಟು ಶುಲ್ಕ ನೀಡುವುದೇಕೆ? ಹೇಳಿಕೊಳ್ಳುವಂಥ ಸಮಸ್ಯೆಗಳು ಈಗ ನಮಗಿಲ್ಲ, ನಮ್ಮ ಮಾನಸಿಕ ಆರೋಗ್ಯ ಪ್ರಸಾಮಾನ್ಯವಾಗಿದೆ, ವೃದ್ಧಾಪ್ಯದಲ್ಲಿ ‘ಅಂತಿಮ ಪರೀಕ್ಷೆ’ ಎದುರಿಸಬೇಕಾದ ಸಂದರ್ಭದಲ್ಲಿ ಧ್ಯಾನ, ಸತ್ಸಂಗ ಮುಂತಾದವುಗಳ ಅಗತ್ಯವಿರಬಹುದು, ಈಗ ಅಲ್ಲ – ಇತ್ಯಾದಿ ಕಾರಣಗಳ ಸಹಿತ) ‘ಮಾನಸಿಕ ಆರೋಗ್ಯ’, ‘ಪ್ರಸಾಮಾನ್ಯ’ – ಇವುಗಳ ಸ್ಪಷ್ಟ ಪರಿಕಲ್ಪನೆ ಇವರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂಬುದು ನನ್ನ ನಂಬಿಕೆ. ಎಂದೇ. ಅವನ್ನು ಈಗ ಪರಿಶೀಲಿಸೋಣ.

ಮಾನಸಿಕ ಆರೋಗ್ಯದ ಕುರಿತು

ದೇಹಕ್ಕೆ ಸಂಬಂಧಿಸಿದಂತೆ ಆರೋಗ್ಯ ಅನ್ನುವುದು ಒಂದು ಸದಾ ಬದಲಾಗುತ್ತಿರುವ ಸ್ಥಿತಿ. ಎಂದೇ, ಒಂದು ಬಾರಿ ಆರೋಗ್ಯವಂತನಾದರೆ ಸಾಕು, ಮುಂದೆ ಅದರ ಚಿಂತೆ ಮಾಡಬೇಕಿಲ್ಲ ಅನ್ನುವುದು ಮೂರ್ಖತನ ಎಂಬುದು ನಿಮಗೆ ತಿಳಿದಿದೆ. ಹೇಳಿಕೊಳ್ಳುವಂಥ ರೋಗ ನಮಗಿಲ್ಲ ಅಂದ ಮಾತ್ರಕ್ಕೆ ೧೦೦% ಆರೋಗ್ಯ ನಮ್ಮದು ಅನ್ನುವಂತಿಲ್ಲ ಎಂಬುದೂ ನಿಮಗೆ ತಿಳಿದಿದೆ. ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಡ್ಡಿ ಉಂಟು ಮಾಡುವಂಥ ಅನಾರೋಗ್ಯದ ಸ್ಥಿತಿ ನಮ್ಮದಲ್ಲ ಅನ್ನುವುದನ್ನು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಾಬೀತು ಪಡಿಸುತ್ತದೆಯೇ ವಿನಾ ನಾವು ಆರೋಗ್ಯವಂತರು ಅನ್ನುವುದನ್ನಲ್ಲ. ಚಕ್ಕಪುಟ್ಟ ದೈಹಿಕ ತೊಂದರೆಗಳಿದ್ದರೆ ಅವುಗಳ ಕುರಿತು ಯಾರೂ ಚಿಂತೆ ಮಾಡತೊಡಗುವುದಿಲ್ಲ. ಕೆಲವೊಮ್ಮೆ ನಮಗೆ ತಿಳಿದಿರುವ ಔಷಧವನ್ನು ತೆಗೆದುಕೊಂಡು ಅವನ್ನು ಹೇಗೋ ನಿಭಾಯಿಸುತ್ತೇವೆಯೇ ವಿನಾ ವೈದ್ಯರ ಹತ್ತಿರ ಹೋಗುವುದಿಲ್ಲ, ಈ ಹಂತದಲ್ಲಿ ಇರುವಾಗ ‘ನಾವು ರೋಗಿಗಳು’ ಎಂದು ಯಾರೂ ಹೇಳಿಕೊಳ್ಳದಿದ್ದರೂ ವಾಸ್ತವವಾಗಿ ಅವರು ಆರೋಗ್ಯವಂತರಲ್ಲ. ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಡ್ಡಿಯುಂಟು ಮಾಡುವಂಥ ಅನಾರೋಗ್ಯದ ಸ್ಥಿತಿ ಇದ್ದರೆ ಮಾತ್ರ ವೈದ್ಯರ ಬಳಿ ಹೋಗುತ್ತೇವೆ, ರೋಗಿಗಳು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಅನಾರೋಗ್ಯದ ಸ್ಥಿತಿ ‘ಸಾವಿನ ಭೀತಿ’ ಮೂಡಿಸಿದರೆ ಮಾತ್ರ ಆಸ್ಪತ್ರೆಗಳಲ್ಲಿ ‘ಒಳರೋಗಿ’ಗಳಾಗಿ ದಾಖಲಾಗುತ್ತೇವೆ. ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ಇದಾಗಿದ್ದರೂ ಅದೇಕೋ ತಿಳಿಯದು ಮಾನಸಿಕ ಕ್ಷೇತ್ರಕ್ಕೆ ಇದೇ ಸೂತ್ರಗಳನ್ನು ಬಹುಮಂದಿ ಅನ್ವಯಿಸುವುದಿಲ್ಲ. ಪ್ರತೀ ದಿನ ಕನಿಷ್ಠ ಪಕ್ಷ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೋಸುಗ ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಪೌಷ್ಟಿಕ ಆಹಾರ ಸೇವಿಸಲು ಎಲ್ಲರೂ ಪ್ರಯತ್ನಿಸುತ್ತೇವಾದರೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನನ್ನೂ ಮಾಡುತ್ತಿಲ್ಲ. ಮಾನಸಿಕ ಆರೋಗ್ಯದ ಕುರಿತಾಗಲೀ ಅನಾರೋಗ್ಯದ ಲಕ್ಷಣಗಳ ಕುರಿತಾಗಲೀ ಪ್ರಾಥಮಿಕ ಜ್ಞಾನವೂ ಇವರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂಬುದು ನನ್ನ ನಂಬಿಕೆ. ‘ಮಾನಸಿಕ ಅಸ್ವಸ್ಥ’ ಅಂದೊಡನೆ ನೆನಪಿಗೆ ಬರುವುದು ಸಮಾಜ ಯಾರನ್ನು ‘ಹುಚ್ಚರು’ ಎಂದು ಗುರುತಿಸುತ್ತಾರೋ ಅವರು ಮಾತ್ರ. ವಾಸ್ತವವಾಗಿ ಇವರು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವಷ್ಟು ತೀವ್ರವಾದ ಮನೋರೋಗಿಗಳು. ದೈಹಿಕ ಆರೋಗ್ಯದ ಕುರಿತು ಎಷ್ಟು ಕಾಳಜಿ ವಹಿಸುತ್ತೇವೋ ಅಷ್ಟೇ ಕಾಳಜಿಯನ್ನು ಮಾನಸಿಕ ಆರೋಗ್ಯದ ಕುರಿತೂ ವಹಿಸಿದರೆ ಈ ಸ್ಥಿತಿಯನ್ನು ಯಾರೂ ತಲಪುವುದಿಲ್ಲ. ಏಕೆಂದರೆ ಮನೋರೋಗಗಳು ಬಾಹ್ಯ ಕಾರಕಗಳಿಂದ ಉಂಟಾಗುವುದಿಲ್ಲ. ನಮ್ಮ ಮನೋವ್ಯಾಪಾರಗಳೇ ಮನೋರೋಗಗಳ ಮೂಲ! ನಾವು ‘ಹುಚ್ಚ’ರಲ್ಲವಾದರೂ ಮಾನಸಿಕವಾಗಿ ಪರಿಪೂರ್ಣ ಆರೋಗ್ಯವಂತರೂ ಅಲ್ಲ. ಇದಕ್ಕೆ ಪುರಾವೆಯಾಗಿ ಪರಿಪೂರ್ಣ ಮಾನಸಿಕ ಆರೋಗ್ಯವಂತನ ಲಕ್ಷಣಗಳ ಪಟ್ಟಿ ನೀಡುತ್ತಿದ್ದೇನೆ. ಅದರ ನೆರವಿನಿಂದ ನಿಮ್ಮ ಮಾನಸಿಕ ಆರೋಗ್ಯದ ಸ್ಥಿತಿಯನ್ನು ನೀವೇ ನಿರ್ಧರಿಸಿ.

ಮಾನಸಿಕ ಆರೋಗ್ಯವಂತನ ಲಕ್ಷಣಗಳು:

೧. ತನ್ನದೇ ಆದ ವ್ಯಕ್ತಿತ್ವ ಒಂದಿದೆ ಎಂಬುದರ ಅರಿವು ಇರುತ್ತದೆ. ತತ್ಪರಿಣಾಮವಾಗಿ ‘ಹೌದಪ್ಪ’ ಅಥವ ‘ಅಲ್ಲಪ್ಪ’ರಂತೆ ವರ್ತಿಸುವುದಿಲ್ಲ.

೨. ಸ್ವತಂತ್ರವಾಗಿಯೂ ಕಾರ್ಯನಿರ್ವಹಿಸಬಲ್ಲೆ, ಇತರರೊಂದಿಗೆ ಯುಕ್ತ ಹೊಂದಾಣಿಕೆ ಮಾಡಿಕೊಂಡೂ ಕಾರ್ಯನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ಇರುತ್ತದೆ.

೩. ಇತರರ ಸಾಮರ್ಥ್ಯದಲ್ಲಿಯೂ ನಂಬಿಕೆ ಇರುತ್ತದೆ. ತತ್ಪರಿಣಾಮವಾಗಿ ‘ತಮ್ಮಷ್ಟು ಕ್ಷಮತೆಯಿಂದ ಕಾರ್ಯಮಾಡುವವರು ಯಾರೂ ಇಲ್ಲ’ ಎಂಬ ದುರಭಿಮಾನ ಇರುವುದಿಲ್ಲ. ‘ತಾವೂ ಮಾಡಬಲ್ಲೆವು, ಇತರರೂ ಮಾಡಬಲ್ಲರು’ ಎಂಬ ನಂಬಿಕೆ ಇರುತ್ತದೆ.

೪. ಇತರರನ್ನು ಪ್ರೀತಿಸಬಲ್ಲರು, ಇತರರ ಪ್ರೀತಿಯನ್ನು ಸ್ವೀಕರಿಸಲೂ ಬಲ್ಲರು.

೫. ತಮ್ಮ ಬಲಾಬಲಗಳ ಸಂಪೂರ್ಣ ಅರಿವು ಇರುತ್ತದೆ. ಎಂದೇ, ಕೈಲಾಗದ್ದನ್ನು ಮಾಡಹೊರಟು ‘ಕೈಸುಟ್ಟು’ಕೊಳ್ಳುವುದೂ ಇಲ್ಲ ಸಾಮರ್ಥ್ಯ ಇದ್ದರೂ ‘ಇದು ತಮ್ಮಿಂದಾಗದ ಕೆಲಸ’ ಎಂಬ ಕೀಳರಿಮೆಯಿಂದ ಸುಮ್ಮನಿರುವವರೂ ಅಲ್ಲ.

೬. ಸದಾ ಜವಾಬ್ದಾರಿಯುತ ವರ್ತನೆ ಪ್ರಕಟಿಸುತ್ತಾರೆ. ಒಪ್ಪಿಕೊಂಡ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಅಕಸ್ಮಾತ್ ಅಯಶಸ್ವಿಗಳಾದರೆ ಕುಂಟುನೆಪಗಳನ್ನು ಕೊಟ್ಟು ಇತರರ ಮೇಲೆ ದೋಷಾರೋಪಣೆ ಮಾಡುವುದೂ ಇಲ್ಲ.

೭. ಯಾವುದೇ ಕಾರ್ಯವನ್ನು ಆರಂಭಿಸುವ ಮುನ್ನವೇ ಅದರ ದೀರ್ಘಕಾಲಿಕ ಪರಿಣಾಮಗಳ ಕುರಿತು ಚಿಂತನೆ ಮಾಡುತ್ತಾರೆ. ಆದ್ದರಿಂದ ‘ಹೀಗಾಗುತ್ತದೆಂದು ತಿಳಿದಿದ್ದರೆ ಮಾಡುತ್ತಲೇ ಇರಲಿಲ್ಲ’ ಎಂದು ಪರಿತಪಿಸುವ ಸನ್ನಿವೇಶವೇ ಉದ್ಭವಿಸುವುದಿಲ್ಲ.

೮. ಪ್ರತೀ ಚಟುವಟಿಕೆಗೆ ಖಚಿತವಾದ ನಿರ್ದಿಷ್ಟ ಉದ್ದೇಶವಿರುತ್ತದೆ.

೯. ಯುಕ್ತ ಪೂರ್ವಸಿದ್ಧತೆಯೊಂದಿಗೆ ಕಾರ್ಯ ಆರಂಭಿಸುತ್ತಾರೆ. ಕಾರ್ಯಸಾಧನೆಯ ಪಥದಲ್ಲಿ ಎದುರಾಗುವ ಅಡೆತಡೆಗಳಿಂದ ವಿಚಲಿತರಾಗುವುದಿಲ್ಲ.

೧೦. ಸಮಯದ ಮಹತ್ವದ ಪೂರ್ಣ ಅರಿವು ಇರುತ್ತದೆ.

೧೧. ತಮ್ಮದೇ ಆದ ಜೀವನ ದರ್ಶನ ಮತ್ತು ಮೌಲ್ಯಗಳನ್ನು ರೂಪಿಸಿಕೊಂಡಿರುತ್ತಾರೆ.

೧೧. ಇತರರನ್ನು ಪ್ರೀತಿಸುವ ಸಾಮರ್ಥ್ಯ, ಮನರಂಜನೆ ಮತ್ತು ಕಾರ್ಯನಿರ್ವಹಣೆಯ ವಿಧಾನಗಳಲ್ಲಿ ಪರಿಪೂರ್ಣತೆ, ಉತ್ತಮ ಮಾನವ-ಸಂಬಂಧಗಳನ್ನು ರೂಪಿಸಿವ ಸಾಮರ್ಥ್ಯ, ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ, ತಮ್ಮ ಪರಿಸರದಿಂದ ತೃಪ್ತಿಪಡೆಯುವ ಸಾಮರ್ಥ್ಯ, ಸಮಸ್ಯೆ-ಪರಿಹರಿಸುವ ಕುಶಲತೆಗಳು ಇವುಗಳಿಂದಾಗಿ ಪರಿಸರದ ಮೇಲೆ ಪ್ರಭುತ್ವ ಸಾಧಿಸುತ್ತಾರೆ.

ಈ ಎಲ್ಲ ಲಕ್ಷಣಗಳೂ ಸಮ್ಮಲ್ಲಿ ಸರಿಸುಮಾರಾಗಿ ಇವೆ ಎಂದೋ, ಹೆಚ್ಚಿನವು ಇವೆ ಎಂದೋ ಘೊಷಿಸಿಕೊಂಡು ಆತ್ಮವಂಚನೆ ಮಾಡಿಕೊಳ್ಳದೇ ಮಾನಸಿಕವಾಗಿ ಪರಿಪೂರ್ಣ ಆರೋಗ್ಯ ನಮಗಿಲ್ಲ ಎಂಬುದನ್ನು ಎಂದು ಒಪ್ಪಿಕೊಳ್ಳುತ್ತೇವೆಯೋ ಅಂದಿನಿಂದ ನಮ್ಮ ಮಾನಸಿಕ ಆರೋಗ್ಯ ಸುಧಾರಿಸತೊಡಗುತ್ತದೆ. ತತ್ಪರಿಣಾಮವಾಗಿ ನಾವು ನಡೆಸುತ್ತಿರುವ ಜೀವನದ ಗುಣಮಟ್ಟ ಅನೂಹ್ಯ ಗತಿಯಲ್ಲಿ ಸುಧಾರಿಸತೊಡಗುತ್ತದೆ. ದುರದೃಷ್ಟವಶಾತ್ ಬಹು ಮಂದಿಯ ನಿಲುವು ಇಂತಿದೆ: ‘ಈ ಮೇಲೆ ಉಲ್ಲೇಖಿಸಿದ ಎಲ್ಲ ಲಕ್ಷಣಗಳ ದೃಷ್ಟಿಯಿಂದಲೂ ನಾವು ‘ಪ್ರಸಾಮಾನ್ಯರು’. ಯಾವ ಶಿಕ್ಷಣ ಪಡೆಯದೆಯೇ ನಾವು ನಮ್ಮ ಪ್ರಸಾಮಾನ್ಯತೆಯನ್ನು ಈ ತನಕ ಸಂರಕ್ಷಿಸಿಕೊಂಡು ಬಂದಿದ್ದೇವೆ. ಇಂತೆಯೇ ಮುಂದುವರಿಯುವ ನಂಬಿಕೆ ನಮಗಿದೆ. ಆದ್ದರಿಂದ ಈ ಕುರಿತು ಈಗ ಮಾಡಬೇಕಾದದ್ದು ಏನೂ ಇಲ್ಲ. ಅಷ್ಟೇ ಅಲ್ಲ, ನಮ್ಮ ಭವಿಷ್ಯದ ರೂವಾರಿಗಳು ನಾವೇ ಆಗಿರುವುದರಿಂದ ಈ ಕುರಿತು ನಿಮಗೇಕೆ ಚಿಂತೆ?’ ಬಹುಶಃ ‘ಪ್ರಸಾಮಾನ್ಯ’ದ ದೋಷಪೂರ್ಣ ಪರಿಕಲ್ಪನೆ ಇವರಲ್ಲಿ ಇರುವುದು ಇದಕ್ಕೆ ಕಾರಣವಿರಬಹುದು. ‘ಪ್ರಸಾಮಾನ್ಯ’ ಎಂಬದಕ್ಕೆ ಎರಡು ವ್ಯಾಖ್ಯಾನಗಳಿವೆ: ಗಣಿತೀಯ ಮತ್ತು ಸಮಾಜಶಾಸ್ತ್ರೀಯ. ಇವನ್ನು ಈಗ ಪರಿಶೀಲಿಸೋಣ.

‘ಪ್ರಸಾಮಾನ್ಯ’ ಪರಿಕಲ್ಪನೆ ಕುರಿತು’

ಗಣಿತದಲ್ಲಿ ಇರುವ ‘ಸರಾಸರಿ (ಆವರೇಜ್)’ ಎಂಬ ಪರಿಕಲ್ಷನೆಯ ಕುರಿತು ನಿಮಗೆ ಈಗಾಗಲೇ ತುಸು ಮಾಹಿತಿ ಇದ್ದರೂ ಈ ಮುಂದಿನ ತಥ್ಯಗಳನ್ನು ಪರಿಶೀಲಿಸಿ:

ನಿಸರ್ಗದ ಆಗುಹೋಗುಗಳನ್ನು ಅರ್ಥೈಸಲು ನಾವೇ ಸೃಷ್ಟಿಸಿದ ಒಂದು ಕಾಲ್ಪನಿಕ ಗಣಿತೀಯ ಪರಿಕಲ್ಪನೆ – ‘ಸರಾಸರಿ’. ಪರಿಮಾಣಾತ್ಮಕವಾಗಿ ಅಳತೆ ಮಾಡಬಹುದಾದ ಯಾವುದೇ ಲಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಜನಸಂಖ್ಯೆಯ ‘ಸರಾಸರಿ’ ಲೆಕ್ಕಿಸಲು ಸಾಧ್ಯ ಎಂಬುದು ನಿಮಗೆ ತಿಳಿದಿದೆಯಷ್ಟೆ? ಇಂಥ ‘ಸರಾಸರಿ’ಗೆ ಸಂಬಂಧಿಸಿದಂತೆ ಈ ಮುಂದಿನ ಉದಾಹರಣೆ ಪರಿಶೀಲಿಸಿ: ಅನುಕ್ರಮವಾಗಿ ೫, ೫.೫, ೬, ೬.೫. ೭, ೭.೫ ಅಡಿ ಎತ್ತರ ಇರುವ ೬ ಮಂದಿಯ ಗುಂಪಿನ ಸರಾಸರಿ ಎತ್ತರ ೬.೨೫ ಅಡಿ. ವಾಸ್ತವವಾಗಿ ೬.೨೫ ಅಡಿ ಎತ್ತರದ ವ್ಯಕ್ತಿ ಆ ಗುಂಪಿನಲ್ಲಿ ಇಲ್ಲವೇ ಇಲ್ಲ. ಇನ್ನೂ ಒಂದು ಉದಾಹರಣೆ ಪರಿಶೀಲಿಸಿ: ೧ ರಿಂದ ೧೦೦ – ಈ ಎಲ್ಲ ಸಂಖ್ಯೆಗಳ ಸರಾಸರಿ ೫೦.೫. ವಾಸ್ತವವಾಗಿ ಈ ಸಂಖ್ಯೆ ಆ ಶ್ರೇಣಿಯಲ್ಲಿ ಇಲ್ಲವೇ ಇಲ್ಲ. ‘ಸರಾಸರಿ’ಗೆ ಸಮನಾದ ವ್ಯಕ್ತಿ ಅಸ್ತಿತ್ವದಲ್ಲಿ ಇಲ್ಲದೇ ಇರುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಇದ್ದರೂ ಅವರ ಸಂಖ್ಯೆ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಸರಿಸುಮಾರಾಗಿ ಇಲ್ಲವೇ ಇಲ್ಲ ಅನ್ನುವಷ್ಟು ಕಮ್ಮಿ ಇರುತ್ತದೆ! ಅಂದಮೇಲೆ, ಪ್ರಸಾಮಾನ್ಯ ವ್ಯಕ್ತಿಗಳು ಅಂದರೆ ಯಾರು? ‘ಸರಾಸರಿಯ’ ಆಸುಪಾಸಿನಲ್ಲಿ (ಆಸುಪಾಸು ಎಂಬುದಕ್ಕೂ ಪ್ರತ್ಯೇಕ ವ್ಯಾಖ್ಯಾನವಿದೆ) ಇರುವವರೆಲ್ಲರನ್ನೂ ಪ್ರಸಾಮಾನ್ಯ ವ್ಯಕ್ತಿಗಳು ಎಂದು ಪರಿಗಣಿಸುತ್ತದೆ ಗಣಿತಶಾಸ್ತ್ರ. ಒಂದು ಜನಸಂಖ್ಯೆಯ (ಸಮಷ್ಟಿಯ) ಯಾವುದೇ ಲಕ್ಷಣವನ್ನು ದೋಷರಹಿತವಾಗಿ ಅಳತೆಮಾಡಿ ರಚಿಸುವ ಆಲೇಖ (ಗ್ರ್ಯಾಫ್) ಚಿತ್ರದಲ್ಲಿ ತೋರಿಸಿದಂತೆ ಇರುವ ಸಾಧ್ಯತೆ ಅನ್ನುತ್ತದೆ ಗಣಿತಶಾಸ್ತ್ರ. ಇಂಥ ಆಲೇಖಕ್ಕೆ ಪ್ರಸಾಮಾನ್ಯ ಸಂಭಾವ್ಯತಾ ವಕ್ರ (ನಾರ್ಮಲ್ ಪ್ರಾಬೆಬಿಲಿಟಿ ಕರ್ವ್) ಎಂದು ಹೆಸರು.

untitled4

‘ಸರಾಸರಿ’ಯನ್ನು ಪ್ರತಿನಿಧಿಸುವ ಬಿಂದುವಿನಿಂದ ಎಕ್ಸ್ – ಅಕ್ಷಕ್ಕೆ ಎಳೆದ ಲಂಬರೇಖೆಯ ಎರಡೂ ಪಾರ್ಶ್ವಗಳಲ್ಲಿ ಸಮಷ್ಟಿಯ ಸದಸ್ಯರು ಸಮವಾಗಿ ಹಂಚಿಕೆ ಆಗಿರುವುದನ್ನು ಗಮನಿಸಿ. ಸರಾಸರಿಗಿಂತ ಮೇಲೆ ಇರುವಷ್ಟೇ ಮಂದಿ ಕೆಳಗೂ ಇರುವುದನ್ನೂ ಸರಾಸರಿಯ ಆಸುಪಾಸಿನಲ್ಲಿ ಹೆಚ್ಚು ಮಂದಿ ಇರುವುದನ್ನೂ ಸರಾಸರಿಯ ಎರಡೂ ಪಾರ್ಶ್ವಗಳಲ್ಲಿ ದೂರ ಸರಿದಂತೆ ಮಂದಿಯ ಸಂಖ್ಯೆ ಕಮ್ಮಿ ಆಗುವುದನ್ನೂ ಗಮನಿಸಿ. ಯಾವುದೇ ಲಕ್ಷಣಕ್ಕೆ ಸಂಬಂಧಿಸಿದಂತೆ ನಿಸರ್ಗದಲ್ಲಿ ಹೆಚ್ಚು ವೈಪರೀತ್ಯಗಳು ಇಲ್ಲದಿರುವುದನ್ನು ಇದು ಸೂಚಿಸುತ್ತದೆ. ಸಮಷ್ಟಿಯಲ್ಲಿ ಸರಾಸರಿಗಿಂತ ಕೆಳಗಿರುವವರ ಪೈಕಿ ಸರಿಸುಮಾರು ೩೪.೧% ಮಂದಿಯನ್ನೂ ಮೇಲಿರುವವರ ಪೈಕಿ ಸರಿಸುಮಾರು ೩೪.೧% ಮಂದಿಯನ್ನೂ ‘ಪ್ರಸಾಮಾನ್ಯ’ರು ಅನ್ನುತ್ತದೆ ಗಣಿತ ಶಾಸ್ತ್ರ. ಅರ್ಥಾತ್, ಸಮಷ್ಟಿಯ ಸರಾಸರಿಯ ಆಸುಪಾಸಿನಲ್ಲಿರುವ ೬೮.೨% ಮಂದಿ ಪ್ರಸಾಮಾನ್ಯರು. ಪ್ರಸಾಮಾನ್ಯತೆಯನ್ನು ನಿರ್ಧರಿಸಲು ಸಮಷ್ಟಿಯ ‘ಸರಾಸರಿ’ಯೇ ಆಧಾರ ಎಂಬುದನ್ನು ಗಮನಿಸಿ. ‘ಸರಾಸರಿ’ಯ ಪರಿಕಲ್ಪನೆ ವಸ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆಯೇ ವಿನಾ ಅದರ ಗುಣಮಟ್ಟವನ್ನೇ ಆಗಲಿ ಅಪೇಕ್ಷಣೀಯತೆಯನ್ನೇ ಆಗಲಿ ಅಲ್ಲ ಎಂಬುದನ್ನೂ ಗಮನಿಸಿ.

‘ಬಹುಮಂದಿಯ ವರ್ತನೆಯೇ ಸಮುದಾಯದ ದೃಷ್ಟಿಯಿಂದ ಪ್ರಸಾಮಾನ್ಯ ವರ್ತನೆ’ ಅಂದಿದ್ದಾನೆ ಫ್ರೆಂಚ್ ಸಮಾಜವಿಜ್ಞಾನಿ ಡೇವಿಡ್ ಎಮಿಲೆ ಡರ್ಕೈಮ್ (೧೮೫೮-೧೯೧೭). ಬಹುಮಂದಿಯ ವರ್ತನೆಯಿಂದ ಭಿನ್ನವಾದ ವರ್ತನೆಯನ್ನು ಪ್ರದರ್ಶಿಸುವವರನ್ನು ಸಮುದಾಯ ಅಪಸಾಮಾನ್ಯರು (ಅಬ್ ನಾರ್ಮಲ್) ಅಥವ ಅಸಾಮಾನ್ಯರು (ಅಬೋವ್ ನಾರ್ಮಲ್ ಅಥವ ಎಕ್ಸೆಪ್ಷನಲ್) ಎಂದು ಪರಿಗಣಿಸುತ್ತದೆ. ಅರ್ಥಾತ್, ಸಮಾಜ ಒಪ್ಪಿಕೊಂಡಿರುವ ಪ್ರಮಾಣಕಕ್ಕೆ (ನಾರ್ಮ್) ತಕ್ಕುದಾದ ವರ್ತನೆಯೇ ಪ್ರಸಾಮಾನ್ಯ ವರ್ತನೆ, ಪ್ರಸಾಮಾನ್ಯ ವರ್ತನೆ ಪ್ರಕಟಿಸುವವರೆಲ್ಲರೂ ಪ್ರಸಾಮಾನ್ಯರು. ಇದು ಸಮುದಾಯದ ದೃಷ್ಟಿಕೋನದಿಂದ ನೀಡಿದ ವ್ಯಾಖ್ಯಾನ. ವ್ಯಕ್ತಿಯ ಸಾಮಾನ್ಯವಾಗಿ ವರ್ತಿಸುವ ರೀತಿಯೇ ಅವನ ದೃಷ್ಟಿಕೋನದಿಂದದ ಪ್ರಸಾಮಾನ್ಯ ವರ್ತನೆ ಎಂಬುದನ್ನೂ ಮರೆಯಕೂಡದು. ಸಮಾಜ ಒಪ್ಪಿಕೊಂಡಿರುವ ಪ್ರಸಾಮಾನ್ಯ ವರ್ತನಾ ಪ್ರಮಾಣಕಕ್ಕೆ ವ್ಯಕ್ತಿಯ ಪ್ರಸಾಮನ್ಯ ವರ್ತನೆ ತಾಳೆ ಆಗದಿದ್ದರೆ ಅವನು ಶಿಕ್ಷೆಗೊಳಪಡುವ ಸಾಧ್ಯತೆ ಇದೆ. ಪ್ರಸಾಮಾನ್ಯತೆಯ ವ್ಯಾಖ್ಯಾನ ಸಮುದಾಯ, ಕಾಲ, ಸಂದರ್ಭ ಅಥವ ಸನ್ನಿವೇಶ ಆಧಾರಿತ ‘ಜೀವನ ಗುಣಮಟ್ಟ’ ಆಧಾರಿತ ಅಲ್ಲ ಎಂಬುದನ್ನು ಗಮನಿಸಿ.

ಎಂದೇ, ‘ಪ್ರಸಾಮಾನ್ಯತೆ’ ಒಂದು ‘ಸದ್ಗುಣ’ ಎಂಬ ಭ್ರಮೆ ಅಪೇಕ್ಷಣೀಯವಲ್ಲ. ಪ್ರಸಾಮಾನ್ಯತೆಯಿಂದ ಅಸಾಮಾನ್ಯತೆಯತ್ತ ಸಾಗುವುದು ನಮ್ಮ ಗುರಿ ಆಗಿರಬೇಕೇ ವಿನಾ ಪ್ರಸಾಮಾನ್ಯತೆಗೇ ಅಂಟಿಕೊಂಡಿರುವುದು ಆಗಿರಬಾರದು ಎಂಬುದು ನನ್ನ ನಿಲುವು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ನನ್ನ ನಿಲುವು ಇದೇ ಆಗಿದೆ.

Advertisements
This entry was posted in ಅನುಭವಾಮೃತ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s