ನನ್ನ ಜೀವನ ದರ್ಶನ – ೧೨

ಅಪ್ರಾಮಾಣಿಕರಾಗುವ ಅತ್ಯಂತ ಸುಲಭ ವಿಧಾನ – ನಮ್ಮ ಮಾತನ್ನು ನಾವೇ ಗೌರವಿಸದಿರುವುದು. ಆದ್ದರಿಂದ ಇದು ಧರ್ಮಸಮ್ಮತವಾದದ್ದು ಅಲ್ಲ ಮತ್ತು ಕರ್ಮಬಂಧನದಲ್ಲಿ ನಮ್ಮನ್ನು ಬಂಧಿಸುವುದು ಖಾತರಿ ಎಂಬುದು ನನ್ನ ಖಚಿತ ನಿಲುವು.

ಎಂದೇ, ನಾನು ಮಾಡುವುದಾಗಿ ಒಪ್ಪಿಕೊಂಡ ಕಾರ್ಯವನ್ನು, ಅದು ಎಷ್ಟೇ ಕಷ್ಟವಾದರೂ, ಮಾಡಲು ಸರ್ವ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ನನ್ನ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದಾಗಿ ಕೊಟ್ಟಮಾತಿನಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದ ಸನ್ನಿವೇಶಗಳಲ್ಲಿ ಸಂಬಂಧಿಸಿದವರನ್ನು ಮುಖತಃ ಭೇಟಿಯಾಗಿ (ಬಹುದೂರದಲ್ಲಿ ಇರುವವರಾಗಿದ್ದರೆ ದೂರವಾಣಿ ಮುಖೇನ ಸಂಪರ್ಕಿಸಿ) ನಡೆದುದನ್ನು ವಿವರಿಸಿ ಆದ ತಪ್ಪಿಗೆ ಕ್ಷಮೆಕೋರುವುದು ಮಾಡಿದ ತಪ್ಪಿನಿಂದ ಸಂಬಂಧಿಸಿದವರಿಗೆ ಏನಾದರೂ ಹಾನಿ ಉಂಟಾಗಿದ್ದರೆ ಅದನ್ನು ಸಾಧ್ಯವಿರುವಷ್ಟು ಮಟ್ಟಿಗೆ ಸರಿಪಡಿಸಲು ಪ್ರಯತ್ನಿಸುವುದು ನಾನು ಪಾಲಿಸಿಕೊಂಡು ಬಂದ ನೀತಿ. ಕೊಟ್ಟ  ಮಾತಿಗೆ ವ್ಯತಿರಿಕ್ತವಾಗಿ ನಾನು ನಡೆದುಕೊಂಡ ಉದಾಹರಣೆಗಳು ನೆನಪಿಲ್ಲ. ಅಷ್ಠೇ ಅಲ್ಲ, ಕೊಟ್ಟಮಾತಿನಂತೆ ನಡೆದುಕೊಳ್ಳದವರನ್ನು ನಿಕೃಷ್ಟವಾಗಿ ನೋಡುವ, ಅವರನ್ನು ಹೀಗಳೆಯುವ ಪ್ರವೃತ್ತಿಯನ್ನೂ ರೂಢಿಸಿಕೊಂಡಿದ್ದೆ. ತತ್ಪರಿಣಾಮವಾಗಿ ‘ಬಲು ಶಿಸ್ತಿನ ಮನುಷ್ಯ’ ಎಂಬ ಬಿರುದು ಅಯಾಚಿತವಾಗಿ ದೊರೆಯಿತು. ಮಾತ್ರವಲ್ಲ ‘ಎಲ್ಲಿ ಏನಂದುಬಿಡುತ್ತಾನೋ’ ಎಂಬ ಭಯದಿಂದ ಗೌರವಯುತವಾಗಿ ದೂರದಲ್ಲಿಯೇ ಇರಿಸಬೇಕಾದ ವ್ಯಕ್ತಿತ್ವ ನನ್ನದಾಯಿತು. ಈ ಎರಡನೆಯ ಅಂಶದಲ್ಲಿ ‘ಎಡವಿದ್ದೇನೆ’ ಎಂಬುದು ಇತ್ತೀಚೆಗಷ್ಟೇ ನನ್ನ ಅರಿವಿಗೆ ಬಂದಿರುವುದರಿಂದ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸತ್ತಿದ್ದೇನೆ.

‘ಹೇಳಿದ ಸಮಯಕ್ಕೆ ಸರಿಯಾಗಿ ಕೊಟ್ಟ ಮಾತಿನಂತೆ’ ನಡೆದುಕೊಳ್ಳುವವರ ಸಂಖ್ಯೆ ದಿನೇದಿನೇ ಕಮ್ಮಿ ಆಗುತ್ತಿರುವುದನ್ನೂ ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲೋಸುಗ ಅಥವ ತತ್ಕ್ಷಣದ ಲಾಭಕ್ಕೋಸ್ಕರ ಪೊಳ್ಳು ಭರವಸೆ’ ನೀಡುವವರ ಸಂಖ್ಯೆ ಹೆಚ್ಚುತ್ತಿರುವುದನ್ನೂ ನೀವು ಗಮನಿಸಿರುತ್ತೀರಿ. (ಹೇಳಿದ ಸಮಯಕ್ಕೆ ಸರಿಯಾಗಿ ಅನ್ನುವುದ ಒಂದು ಆಯಾಮ, ಮಾಡುತ್ತೇನೆಂದು ಹೇಳಿದ್ದನ್ನು ಮಾಡುವುದು ಇನ್ನೊಂದು ಆಯಾಮ ಅನ್ನುವುದನ್ನು ಗಮನಿಸಿ) ಇಂತು ನಡೆದುಕೊಳ್ಳದವರು ‘ನಡೆದುಕೊಳ್ಳದಿರುವುದಕ್ಕೆ’ ನೀವು ಅಲ್ಲಗಳೆಯಲಾಗದಷ್ಟು ‘ಪ್ರಬಲ’ ಕಾರಣಗಳನ್ನು ನೀಡುವುದನ್ನೂ ‘ಎಲ್ಲ ಪ್ರಸಾಮಾನ್ಯ (ನಾರ್ಮಲ್) ವ್ಯಕ್ತಿಗಳು ಮಾಡುವುದನ್ನೇ ತಾವೂ ಮಾಡಿದ್ದೇವೆ, ಮನುಷ್ಯ ಅಂದ ಮೇಲೆ ತುಸು ಹಿಂದೆಮುಂದೆ ಆಗುವುದು ಸ್ವಾಭಾವಿಕ’ ಅನ್ನುವುದರ ಮುಖೇನ ತಾವು ಪ್ರಸಾಮಾನ್ಯರು ಎಂದು ಸಮರ್ಥಿಸಿಕೊಳ್ಳುವುದನ್ನೂ ನೀವು ಗಮನಿಸಿರಬಹುದು. ಇವೆಲ್ಲವೂ ಅವರು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಅವರ ಮನಸ್ಸಿನ ಅಜಾಗೃತ ಭಾಗದಲ್ಲಿ ಹುದುಗಿರುವ ಅಪ್ರಾಮಾಣಿಕತೆಯ ‘ಲೀಲೆ’ ಇದು (ದೈವಲೀಲೆ ಅಲ್ಲ). ವಾಸ್ತವವಾಗಿ, ‘ಪ್ರಸಾಮಾನ್ಯ(ನಾರ್ಮಲ್)’ ಅನ್ನುವುದು ನಿಸರ್ಗದ ಆಗುಹೋಗುಗಳನ್ನು ಅರ್ಥೈಸಲೋಸುಗ ಮಾನವ ಸೃಷ್ಟಿಸಿದ ಒಂದು ಗಣಿತೀಯ ಪರಿಕಲ್ಪನೆ ಎಂಬ ತಥ್ಯ ಅನೇಕರಿಗೆ ತಿಳಿದಿಲ್ಲ. ಸರಿಸುಮಾರು ೬೮% ಮಂದಿ ಏನು ಮಾಡುತ್ತಾರೋ ಅದೇ ಪ್ರಸಾಮಾನ್ಯ ವರ್ತನೆ. ಪ್ರಸಾಮಾನ್ಯತೆಯ ಮಟ್ಟಕ್ಕಿಂತ ಮೇಲಿನ ಸ್ತರಗಳಲ್ಲಿ ಸರಿಸುಮಾರು ೧೬% ಮಂದಿಯೂ ಕೆಳಗಿನ ಸ್ತರಗಳಲ್ಲಿ ಕೇವಲ ೧೬% ಮಂದಿಯೂ ಇರುತ್ತಾರೆ ಎಂಬದನ್ನೂ ಇದು ಸೂಚಿಸುತ್ತದೆ. ಅರ್ಥ  ಪ್ರಸಾಮಾನ್ಯವಾದದ್ದು ಧರ್ಮಸಮ್ಮತವಾದದ್ದು ಆಗಿರಲೇ ಬೇಕೆಂಬ ನಿಯಮವಿಲ್ಲ. ಆದ್ದರಿಂದ ಪ್ರಸಾಮಾನ್ಯತೆಯ ಮಟ್ಟಕ್ಕಿಂತ ಮೇಲಿನ ಸ್ತರಗಳಲ್ಲಿ ಇರುವವರ ಪೈಕಿ ಒಬ್ಬರಾಗುವ ಪ್ರಯತ್ನವನ್ನು ನಾವು ಮಾಡಬೇಕೇ ವಿನಾ ಪ್ರಸಾಮಾನ್ಯತೆಯಲ್ಲೇ ಇರಲು ಅಲ್ಲ. ದುರದೃಷ್ಟವಶಾತ್, ಬಹುಮಂದಿ ತಾವು ‘ಪ್ರಸಾಮಾನ್ಯ’ರಾಗಿರಲು ಪ್ರಯತ್ನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನಿಮ್ಮ ನಿಲುವು ಏನು ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s