ನನ್ನ ಜೀವನ ದರ್ಶನ – ೧೧

ನಾವು ಏಕೆ ಅಪ್ರಾಮಾಣಿಕರಾಗುತ್ತೇವೆ? ನನ್ನ ಪ್ರಕಾರ, ಈ ಪ್ರಶ್ನೆಗೆ ನೀಡಬಹುದಾದ ಅತೀ ಸರಳ ಉತ್ತರ – ಸ್ವಹಿತ ಕಾಯ್ದುಕೊಳ್ಳಲು. ಸ್ವಹಿತ ಕಾಯ್ದುಕೊಳ್ಳುವುದು ತಪ್ಪೇ? ಖಂಡಿತ ಅಲ್ಲ, ಧರ್ಮ ಸಮ್ಮತ ವಿಧಾನಗಳಿಂದ ಆಗಿದ್ದರೆ. ಅಪ್ರಾಮಾಣಿಕರಾಗಿ ಸ್ವಹಿತ ಕಾಯ್ದುಕೊಳ್ಳುವುದು ಧರ್ಮಸಮ್ಮತವೇ? ನೀವೇ ತೀರ್ಮಾನಿಸಿ. (ನೋಡಿ: ನನ್ನ ಜೀವನ ದರ್ಶನ – ೬ ಮತ್ತು ನನ್ನ ಜೀವನ ದರ್ಶನ – ೮)

ದೇಹ ಮತ್ತು ಮನಸ್ಸು ಇವೆರಡನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದದದ್ದು ನಮ್ಮ ಕರ್ತವ್ಯ. ಈ ಕರ್ತವ್ಯ ನಿಭಾಯಿಸಲೋಸುಗ ನಾವು ಪೂರೈಸಲೇಬೇಕಾದ ಆವಶ್ಯಕತೆಗಳು ಅನೇಕವಿವೆ. (ನೋಡಿ: ಆವಶ್ಯಕತೆಗಳು) ಅಬ್ರಾಹಂ ಹೆರಾಲ್ಡ್ ಮ್ಯಾಸ್ಲೋ (೧೯೦೮-೭೦) ಎಂಬ ಮನೋವಿಜ್ಞಾನಿ ಮಾನವನ ಆವಶ್ಯಕತೆಗಳನ್ನು ವರ್ಗೀಕರಿಸಿ ಕ್ರಮಬದ್ಧ ಶ್ರೇಣಿಯಂದನ್ನು (ಹೈರಾರ್ಕಿ) ರೂಪಿಸಿದ್ದಾನೆ. ಇದನ್ನು ಪರಿಶೀಲಿಸಿದರೆ ಆವಶ್ಯಕತೆಗಳನ್ನು ಧರ್ಮಸಮ್ಮತ ವಿಧಾನಗಳಿಂದ ಪೂರೈಸುವುದು ಎಷ್ಟು ಕಷ್ಟ ಎಂಬುದು ತಿಳಿಯುತ್ತದೆ.

(೧) ಶಾರೀರಿಕ ಆವಶ್ಯಕತೆಗಳು ( ಹಸಿವು, ಉಸಿರಾಟ, ನಿದ್ದೆ —)

(೨) ಸುರಕ್ಷೆಯ ಆವಶ್ಯಕತೆಗಳು (ಚಿಂತೆಯಿಂದ ಮುಕ್ತಿ, ನೋವಾಗದಂತೆ ರಕ್ಷಣೆ —-)

(೩) ಪ್ರೀತಿ ಮತ್ತು ಒಲವಿನ ಆವಶ್ಯಕತೆಗಳು (ನಮ್ಮನ್ನು ಪ್ರೀತಿಸುವವರು ಕನಿಷ್ಠ ಒಬ್ಬರಾದರೂ ಇರಬೇಕು, ನಾವೂ ಒಬ್ಬರನ್ನಾದರೂ ಪ್ರೀತಿಸುವಂತಾಗಬೇಕು. ನಮ್ಮ ಮೇಲೆ ಒಲವಿರುವವರ ಸಮೂಹದಲ್ಲಿ ಬಾಳ್ವೆ ನಡೆಸಲು ಇಚ್ಛಿಸುತ್ತೇವೆ)

(೪) ಗಣ್ಯತೆಯ ಆವಶ್ಯಕತೆಗಳು (ಇತರರರಿಂದ ‘ಒಳ್ಳೆಯವ’, ‘ಸಭ್ಯ’,’ಸುಸಂಕೃತ’ — ಅನ್ನಿಸಿಕೊಳ್ಳುವ ಆವಶ್ಯಕತೆ)

(೫) ಸ್ವವಿಕಾಸದ ಆವಶ್ಯಕತೆಗಳು (ಸೃಜನಶೀಲ ಅಭಿವ್ಯಕ್ತಿಯ ಆವಶ್ಯಕತೆ, ಕುತೂಹಲ ತಣಿಸುವ ಆವಶ್ಯಕತೆ –)

ಈ ಆವಶ್ಯಕತೆಗಳನ್ನು ಪೂರೈಸಲೋಸುಗ ನಾವು ಬಾಹ್ಯಪ್ರಪಂಚದಲ್ಲಿ ಏನನ್ನಾದರೂ ಮಾಡುತ್ತಲೇ ಇರಬೇಕು. ಆವಶ್ಯಕತೆಯೊಂದನ್ನು ಪೂರೈಸಲೋಸುಗ ನಾವೇ ಆಯ್ದ ಮಾರ್ಗದಲ್ಲಿ (ಅದು ಧರಮ ಸಮ್ಮತವಾದದ್ದಾಗಿರಲಿ ಅಥವ ಆಗಿಲ್ಲದ್ದಾಗಿರಲಿ) ಕ್ರಮಿಸುತ್ತಿರುವಾಗ ಅನೇಕ ಸಂದರ್ಭಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಅಡೆತಡೆಗಳನ್ನು ನಿವಾರಿಸುವುದು ಅಥವ ದಾಟುವುದು ಹೇಗೆಂಬುದು ತಿಳಿಯದಿದ್ದಾಗ, ಆವಶ್ಯಕತೆಯನ್ನು ಪೂರೈಸಬಲ್ಲ ಬೇರೊಂದು ವಿಧಾನ ತಿಳಿಯದಿದ್ದಾಗ ಆಂತರಿಕ ತುಯ್ತ ತೀವ್ರವಾಗುತ್ತದೆ. ಆವಶ್ಯಕತೆಯನ್ನು ‘ಹೇಗಾದರೂ’ ಪೂರೈಸುವುದೇ ಪ್ರಧಾನವಾಗುತ್ತದೆ. ಆಂಥ ಸನ್ನಿವೇಶಗಳಲ್ಲಿ ‘ಪ್ರಾಮಾಣಿಕತೆ’ ‘ನೈತಿಕತೆ’ ‘ಧರ್ಮಸಮ್ಮತ’ ಇವೇ ಮೊದಲಾದವುಗಳನ್ನು ನಾನೂ ಸೇರಿದಂತೆ ಬಹುಮಂದಿ ಉಪೇಕ್ಷಿಸುತ್ತೇವೆ. ತದನಂತರ ಪಾಪ ಪರಿಹಾರಾರ್ಥ ಯಾವುದಾದರೂ ಪೂಜೆ ಅಥವ ವ್ರತ ಅಥವ ತೀರ್ಥಯಾತ್ರೆ ಮಾಡುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ? ಇಂತು ಮಾಡುವ ಪೂಜೆ ಅಥವ ವ್ರತ ಅಥವ ತೀರ್ಥಯಾತ್ರೆಗಳು ನಮ್ಮನ್ನು ಕರ್ಮಬಂಧನದಿಂದ ಪಾರುಮಾಡುತ್ತವೆಯೇ? ಎಂಬುದನ್ನು ನೀವೇ ತೀರ್ಮಾನಿಸಿ. ಏಕೆಂದರೆ, ಇವೆಲ್ಲ ವೈಯಕ್ತಿಕ ನಿರ್ಧಾರಗಳಾಗಿರಬೇಕು. ಈ ಪ್ರಶ್ನೆಗಳಿಗೆ ನನ್ನ ಉತ್ತರ: ಸರಿಯಲ್ಲ, ಪಾರುಮಾಡುವುದಿಲ್ಲ.

ಅಂದ ಹಾಗೆ ಪ್ರತಿಶತ ೧೦೦ ರಷ್ಟು ಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ಅಪ್ರಾಮಾಣಿಕ ವ್ಯಕ್ತಿಯನ್ನೇ ಆಗಲಿ ನಾನು ನೋಡಿಯೇ ಇಲ್ಲ, ಅಂಥವನು ನಾನೂ ಅಲ್ಲ ಎಂದು ಈ ಹಿಂದಿನ ಲೇಖನದಲ್ಲಿಯೇ ಹೇಳಿದ್ದೇನಷ್ಟೆ?

ಜೀವನದಲ್ಲಿ ಪ್ರಾಮಾಣಿಕತೆಯ ಪ್ರಮಾಣ ಹೆಚ್ಚಿಸಲು-ಅಪ್ರಾಮಾಣಿಕತೆಯ ಪ್ರಮಾಣ ತಗ್ಗಿಸಲು, ನಾನು ಪರಿಪೂರ್ಣ ಪ್ರಾಮಾಣಿಕ ಎಂದು ಆತ್ಮವಂಚನೆ ಮಾಡಿಕೊಳ್ಳದಿರಲು, ಅಪ್ರಾಮಾಣಿಕನಾಗಿದ್ದ ಸಂದರ್ಭದಲ್ಲಿ ‘ನಾನು ಮಾಡಿದ್ದೇ ಸರಿ’ ಎಂದು ಆತ್ಮವಂಚನೆ ಮಾಡಿಕೊಳ್ಳದಿರಲೂ ಸದಾ ಪ್ರಯತ್ನಿಸುತ್ತಿರುತ್ತೇನೆ. ಬೆರಳೆಣಿಕೆಯಷ್ಟು ಸನ್ನಿವೇಶಗಳಲ್ಲಿ ನನ್ನ ಅಪ್ರಾಮಾಣಿಕ ವರ್ತನೆಯನ್ನು ನಾನೇ ಗುರುತಿಸಿ ಸಂಬಂಧಿಸಿದವರೊಡನೆ ಅದನ್ನು ಒಪ್ಪಿಕೊಂಡು ಕ್ಷಮೆ ಕೋರುವ ಧೈರ್ಯಮಾಡಿ ಯಶಸ್ವಿಯೂ ಆಗಿದ್ದೇನೆ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s