ನನ್ನ ಜೀವನ ದರ್ಶನ – ೫

ನಿತ್ಯಕರ್ಮಗಳನ್ನು ಮಾಡುವುದರ ಮುಖೇನವೂ ‘ದೇವರು’ ತತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ ಎಂಬುದು ನನ್ನ ನಂಬಿಕೆ. (ನೋಡಿ: ನನ್ನ ಜೀವನ ದರ್ಶನ – ೩) ಮಾಡಬಹುದಾದ ಧರ್ಮಸಮ್ಮತ ಕರ್ಮಗಳು ಅನೇಕವಿರುವಾಗ ನಾವು ಅವುಗಳ ಪೈಕಿ ಯಾವುದನ್ನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ನೀಡಲು ನನಗೆ ಮಾರ್ಗದರ್ಶನ ಮಾಡಿದ ಈ ಮುಂದಿನ ಐದು ಉಕ್ತಿಗಳನ್ನು ಪರಿಶೀಲಿಸಿ:

೧. ಚೆನ್ನಾಗಿ ಮಾಡಿದ ಉತ್ಕೃಷ್ಟವಲ್ಲದ ಸ್ವಧರ್ಮವು ಚೆನ್ನಾಗಿ ಮಾಡಿದ ಪರಧರ್ಮಕ್ಕಿಂತ ಉತ್ತಮ

ಸ್ವಧರ್ಮದಲ್ಲಿ ಮರಣವು ಶ್ರೇಯಸ್ಕರ. ಪರಧರ್ಮವು ಅಪಾಯಕರವಾದದ್ದು (ಭಯವನ್ನುಂಟುಮಾಡುತ್ತದೆ) (ಭಗವದ್ಗೀತೆ: ೩-೩೫)

೨. ಸ್ವಕರ್ಮದಲ್ಲಿ ನಿರತನಾದ ಮಾನವನು ಪರಿಪೂರ್ಣತೆಯನ್ನು (ಮೋಕ್ಷವನ್ನು) ಪಡೆಯುತ್ತಾನೆ. ಸ್ವಕರ್ಮದಲ್ಲಿ ನಿರತನಾದವನು ಹೇಗೆ ಪರಿಪೂರ್ಣತೆಯನ್ನು (ಮೋಕ್ಷವನ್ನು) ಪಡೆಯುತ್ತಾನೋ ಕೇಳು (ಭಗವದ್ಗೀತೆ: ೧೮-೪೫)

೩. ಯಾರಿಂದ ಸರ್ವ ಜೀವಿಗಳೂ ವಿಕಸಿಸಿವೆಯೋ ಯಾರಿಂದ ಇದೆಲ್ಲವೂ ವ್ಯಾಪಿಸಲ್ಪಟ್ಟಿದೆಯೋ ಅವನನ್ನು ಸ್ವಕರ್ಮದಿಂದ ಪೂಜಿಸುವ ಮಾನವ ಪರಿಪೂರ್ಣತೆಯನ್ನು ಗಳಿಸುತ್ತಾನೆ (ಭಗವದ್ಗೀತೆ: ೧೮-೪೬)

೪. ಚೆನ್ನಾಗಿ ಮಾಡಿದ ಗುಣರಹಿತ ಸ್ವಧರ್ಮವು ಚೆನ್ನಾಗಿ ಮಾಡಿದ ಪರಧರ್ಮಕ್ಕಿಂತ ಉತ್ತಮ. ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡುವವನಿಗೆ ಪಾಪವು ಅಂಟುವುದಿಲ್ಲ (ಭಗವದ್ಗೀತೆ ; ೧೮-೪೭)

೫. ಸ್ವಭಾವಕ್ಕೆ ತಕ್ಕುದಾದ ಕರ್ಮವು ದೋಷಯುಕ್ತವಾಗಿದ್ದರೂ ಅದನ್ನು ಬಿಡಕೂಡದು. ಏಕೆಂದರೆ ಅಗ್ನಿಯೊಂದಿಗೆ ಹೊಗೆಯೂ ಇರುವಂತೆ ಸಕಲ ಕರ್ಮಗಳೊಂದಿಗೆ ದೋಷಗಳು ಇರುತ್ತವೆ. (ಭಗವದ್ಗೀತೆ: ೧೮-೪೮)

 ಈ ಎಲ್ಲ ಉಕ್ತಿಗಳ ತಿರುಳು: ಸ್ವಧರ್ಮದ ಪಾಲನೆಯನ್ನೇ ಮಾಡತಕ್ಕದ್ದು.

ಸ್ವಧರ್ಮ ಪಾಲನೆ ಅಂದರೇನು? ನಾವು ಯಾವ ಮತಾವಲಂಬಿಗಳು ಎಂಬುದಕ್ಕೂ ಸ್ವಧರ್ಮಕ್ಕೂ ಸಂಬಂಧವಿಲ್ಲ. ಮತ ಮತ್ತು ಧರ್ಮ ಸಮಾನಾರ್ಥಕ ಪದಗಳಲ್ಲ (ನೋಡಿ:  ದೇವರು, ಧರ್ಮ ಮತ್ತು ಮತ). ನಾವು ಯಾವ ಕುಲದಲ್ಲಿ ಜನಿಸಿದ್ದೇವೆ? ಆ ಕುಲದ ಕಸುಬೇನು? ನಮ್ಮ ಜನ್ಮದಾತೃಗಳ ವರ್ಣ/ಜಾತಿ ಯಾವುದು? (ನೋಡಿ: ನನ್ನ ಜೀವನ ದರ್ಶನ – ೪) ನಮ್ಮ ಹಿರಿಯರ ಕಸುಬೇನು? ಇವೇ ಮೊದಲಾದವಕ್ಕೂ ಸ್ವಧರ್ಮಕ್ಕೂ ಸಂಬಂಧವಿಲ್ಲ.

 ಜನ್ಮತಃ ಇರುವ ಪ್ರವೃತ್ತಿ, ಮನೋಧರ್ಮ, ಸ್ವಭಾವಗಳು ಮೇಳೈಸಿ ಉಂಟಾದ ವಿಶಿಷ್ಟ ಪಾಕಕ್ಕೆ ತಕ್ಕುದಾದ ಧರ್ಮಸಮ್ಮತವಾದ ಕರ್ಮಗಳ ಪೈಕಿ ನಾವಿರುವ ಪರಿಸ್ಥಿತಿಗೆ ಹೊಂದಾಣಿಕೆ ಆಗುವಂಥ ಯಾವುವನ್ನಾದರೂ ಮಾಡುವುದೇ ಸ್ವಧರ್ಮಪಾಲನೆ ಎಂಬುದು ನನ್ನ ನಿಲುವು. ನಮ್ಮ ಸ್ವಭಾವಕ್ಕೆ ತಕ್ಕುದಾದ ಕರ್ಮಗಳನ್ನು ಆಯ್ಕೆ ಮಾಡುವಾಗ ಅವುಗಳ ಉತ್ತಮಿಕೆಯನ್ನೇ ಆಗಲಿ ಅವುಗಳು ತಂದುಕೊಡುವ ಹಿರಿಮೆಗರಿಮೆಗಳನ್ನೇ ಆಗಲಿ ಅವುಗಳಿಂದ ಲಭಿಸುವ ಸ್ಥಾನಮಾನಗಳನ್ನೇ ಆಗಲಿ ಪರಿಗಣಿಸುವ ಅಗತ್ಯವಿಲ್ಲ ಎಂಬ ಸಂದೇಶವನ್ನು ನೀಡುವುದರ ಜೊತೆಗೆ ಇಂತು ಮಾಡುವುದರಿಂದ ಆಗುವ ಲಾಭಗಳನ್ನೂ ಈ ಮುನ್ನ ಉಲ್ಲೇಖಿಸಿದ ಉಕ್ತಿಗಳು ಸ್ಪಷ್ಟಪಡಿಸಿವೆ. ನಾವು ಆಯ್ಕೆ ಮಾಡಿದ ಕಸುಬು/ಉದ್ಯೋಗದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸದಿರುವುದು ಅಕ್ಷಮ್ಯ ಅಪರಾಧ ಎಂಬುದು ನನ್ನ ನಿಲುವು.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s