ನನ್ನ ಜೀವನ ದರ್ಶನ – ೪

ಬ್ರಾಹ್ಮಣ, ಕ್ಷತ್ರಿಯ, ವೈಶ್ತ ಮತ್ತು ಶೂದ್ರ ಎಂಬ ನಾಲ್ಕು ಗುಂಪುಗಳಾಗಿ ಮಾನವರನ್ನು ವರ್ಗೀಕರಿಸಿದ್ದು ‘ದೇವರು’ ಎಂದು ನಂಬುವವರು ಪುರಾವೆಯಾಗಿ ಉಲ್ಲೇಖಿಸುವ ಭಗವದ್ಗೀತೆಯ ಶ್ಲೋಕ ಇಂತಿದೆ:

ಚಾತುರ್ವರ್ಣ್ಯಮ್ ಮಯಾ ಸೃಷ್ಟಮ್ ಗುಣಕರ್ಮ ವಿಭಾಗಶಃ

ತಸ್ಯ ಕರ್ತಾರಮ್ ಅಪಿ ಮಾಂ ವಿದ್ಧಿ ಅಕರ್ತಾರಮ್ ಅವ್ಯಯಮ್ ।।

‘ಚತುರ್ವಣಗಳನ್ನು ಸೃಷ್ಟಿಮಾಡಿದ್ದು ನಾನೇ’ ಎಂದು ಕೃಷ್ಣರೂಪದಲ್ಲಿ ಅವತಾರವೆತ್ತಿದ್ದ ‘ಪರಮಾತ್ಮ’ ಅಪ್ಪಣೆ ಕೊಡಿಸಿದ ಮೇಲೆ ಅದರ ಔಚಿತ್ಯವನ್ನು ಪ್ರಶ್ನಿಸುವುದು ದೈವವಿರೋಧೀ ಕೃತ್ಯವಲ್ಲವೇ? ಹಾಗನ್ನಿಸುತ್ತದೆ ಮೊದಲನೇ ವಾಕ್ಯದ ಪೂರ್ವಾರ್ಧವನ್ನು ಮಾತ್ರ ಉಲ್ಲೇಖಿಸಿದರೆ. ಉತ್ತರಾರ್ಧವನ್ನು ಜಾಗರೂಕತೆಯಿಂದ ಗಮನಿಸಿ. ಈ ವರ್ಗೀಕರಣದ ಮಾನದಂಡ ಸ್ಪಷ್ಟವಾಗುತ್ತದೆ. ‘ಗುಣ ಮತ್ತು ಕರ್ಮಗಳನ್ನು ಆಧರಿಸಿ’ ಎಂಬುದು ಈ ಭಾಗದ ಧ್ವನಿತಾರ್ಥ.

ನಿಸರ್ಗದಲ್ಲಿ ಇರುವ ಜ್ಞಾನೇಂದ್ರಿಯ ಗ್ರಾಹ್ಯವಾದವನ್ನು ಯಾವುದೋ ಒಂದು ಅಥವ ಹೆಚ್ಚು ಗುಂಪುಗಳಾಗಿ ವರ್ಗೀಕರಿಸುವುದು ಮಾನವ ಸಹಜ ವರ್ತನೆ. ವೈವಿಧ್ಯಮಯ ಸೃಷ್ಟಿಯನ್ನು ಅರ್ಥೈಸಲು ಇದು ಅವಶ್ಯ. ಉದಾಹರಣೆ: ಜೀವಿ – ನಿರ್ಜೀವಿ, ಲೋಹ – ಅಲೋಹ, ಸಸ್ಯ – ಪ್ರಾಣಿ, ಒಳ್ಳೆಯವರು – ಕೆಟ್ಟವರು —-. ಭಗವದ್ಗೀತೆ, ವೇದಗಳು, ಉಪನಿಷತ್ತುಗಳು ಇವೇ ಮೊದಲಾದವುಗಳು ‘ದೇವರು’ ತತ್ವವನ್ನು ಸಾಕ್ಷಾತ್ಕರಿಸಿಕೊಂಡವರು ಎಂದು ನಂಬಲಾಗಿರುವ ಮಾನವರ ರಚನೆಗಳು. (ಭಗವದ್ಗೀತೆಯ ರಚನೆಯಾದದ್ದು ಸುಮಾರು ೧೫೦೦ ವರ್ಷಗಳ ಹಿಂದೆ ಬೌದ್ಧ ಧರ್ಮದ ಪ್ರಭಾವವನ್ನೂ ಅದರ ಸಾಹಿತ್ಯದ ಮಹತ್ವವನ್ನೂ ವೈದಿಕ ಪಂಥದವರಲ್ಲಿ ಬೇರುಬಿಟ್ಟಿದ್ದ ಅನಿಷ್ಟಗಳ ಪ್ರಭಾವವನ್ನೂ ಕುಗ್ಗಿಸಲು ಭಗವದ್ಗೀತೆಯನ್ನು ರಚಿಸಲಾಯಿತೇ ವಿನಾ ಪುರೋಹಿತಷಾಹಿ ವರ್ಗ ಹೇಳುವಂತೆ ೫೦೦೦ ವರ್ಷಗಳ ಹಿಂದೆ ಅವತಾರ ಪುರುಸನಿಂದಲ್ಲ ಎಂಬ ವಾದವೂ ಇದೆ. ಭಗವದ್ಗೀತೆ ೫೦೦೦ ವರ್ಷಗಳ ಹಿಂದೆಯೇ ರಚನೆಯಾಗಿತ್ತು ಎಂಬ ವಾದವನ್ನು ಒಪ್ಪಿಕೊಂಡರೂ ಈ ಲೇಖನದಲ್ಲಿ ನಾನು ಮಂಡಿಸಿದ ವಾದವನ್ನು ತಳ್ಳಿಹಾಕಲು ಸಾಧ್ಯವಿಲ್ಲ) ತಮ್ಮ ಅನುಭವವನ್ನೂ ‘ದೇವರು’ ತತ್ವದಲ್ಲಿ ಅಂತಸ್ಥವಾಗಿರುವ ನಿಯಮಾನುನಿಯಮಗಳ ಪೈಕಿ ತಾವು ಅರಿತಿದ್ದೇವೆ ಅಂದುಕೊಂಡಿದ್ದನ್ನು ಮಾನವ ಸಹಜವಾದ ಭಾಷೆಯಲ್ಲಿ ವಿವರಿಸಲು ಅವರು ಮಾಡಿದ ಪ್ರಯತ್ನಗಳ ಫಲಗಳು ಈ ಶಾಸ್ತ್ರಗಳು ಎಂಬುದು ನನ್ನ ವಾದ. ಎಂದೇ, ನಿಸರ್ಗ ಉದ್ದೇಶಪೂರ್ವಕವಾಗಿ ಈ ವರ್ಣಗಳನ್ನು ಸೃಷ್ಟಿಸಿದೆ ಅನ್ನುವುದು ಸರಿಯಲ್ಲ ಎಂದು ನನ್ನ ಅನಿಸಿಕೆ. ಜಗತ್ತಿನಲ್ಲಿ ಇರುವ ಎಲ್ಲ ಮಾನವರನ್ನು ಅವರ ಗುಣ ಮತ್ತು ಅವರು ಮಾಡುತ್ತಿರುವ ಕಾರ್ಯವನ್ನು ಆಧರಿಸಿ ಗುಂಪುಗಳಾಗಿ ವರ್ಗೀಕರಿಸಲೋಸುಗ ಮಾನವರೇ ಮಾಡಿದ ಪ್ರಯತ್ನ ಇದು. ಸತ್ವ, ರಜ ಮತ್ತು ತಮವೆಂಬ ಮೂರು ಗುಣಗಳ ಪೈಕಿ ಯಾವುವು ಯಾವ ಅನುಪಾತದಲ್ಲಿ ವ್ಯಕ್ತಿಯಲ್ಲಿ ಇವೆ ಎಂಬುದನ್ನೂ ಆ ವ್ಯಕ್ತಿ ಯಾವ ಕರ್ಮಗಳನ್ನು ಪ್ರಮುಖವಾಗಿ ಮಾಡುತ್ತಿದ್ದಾನೆ ಎಂಬುದನ್ನೂ ಆಧರಿಸಿ ವ್ಯಕ್ತಿಗಳನ್ನು ವರ್ಗೀಕರಿಸುವ ಪ್ರಯತ್ನ ಇದು. ಅರ್ಥಾತ್, ಇಲ್ಲಿ ಉಲ್ಲೇಖಿಸಿರುವುದು ಜನ್ಮತಃ ಅಂಟಿಕೊಳ್ಳುವ ‘ಜಾತಿ’ಯನ್ನಲ್ಲ ಎಂಬುದು ಬಲು ಸ್ಪಷ್ಟ. ವ್ಯಕ್ತಿಗಳನ್ನು ಬ್ರಾಹ್ಮಣ, ಕ್ಷತ್ರಿಯ ಮುಂತಾಗಿ ವರ್ಗೀಕರಿಸಬೇಕಾದದ್ದು ಅವನ ಗುಣ ಮತ್ತು ಕರ್ಮವನ್ನು ಆಧರಿಸಿಯೇ ವಿನಾ ಆತನ ತಂದೆ ತಾಯಿ ಯಾವ ವರ್ಣಕ್ಕೆ ಸೇರಿದವರು ಎಂಬುದನ್ನು ಆಧರಿಸಿ ಅಲ್ಲ. ಛಾಂದೋಗ್ಯ ಉಪನಿಷತ್ತಿನ ೪ ನೆಯ ಅಧ್ಯಾಯದಲ್ಲಿ ಇರುವ ಸತ್ಯಕಾಮ ಜಾಬಾಲನ ಕತೆಯೂ ಇದನ್ನೇ ಸೂಚಿಸುತ್ತದೆ.  ಬ್ರಾಹ್ಮಣ ದಂಪತಿಗಳ ವಂಶಜರು ಕ್ಷತ್ರಿಯರೂ ಆಗಿರಬಹುದು ವೈಶ್ಯರೂ ಆಗಿರಬಹುದು ಶೂದ್ರರೂ ಆಗಿರಬಹುದು. ಅಂತೆಯೇ ಶೂದ್ರ ದಂಪತಿಗಳ ವಂಶಜರು ಕ್ಷತ್ರಿಯರೂ ಆಗಿರಬಹುದು ವೈಶ್ಯರೂ ಆಗಿರಬಹುದು ಬ್ರಾಹ್ಮಣರೂ ಆಗಿರಬಹುದು. ದೇಹದ ಮೇಲೆ ವಿಶಿಷ್ಟ ಗುರುತುಗಳನ್ನು ಮಾಡಿಕೊಳ್ಳುವುದರಿಂದಲಾಗಲೀ ವಿಶಿಷ್ಟ ಸೂಚಕಗಳನ್ನು (ಜನಿವಾರ –) ಧರಿಸುವುದರಿಂದಾಗಲೀ ವ್ಯಕ್ತಿಯ ವರ್ಣ ನಿರ್ಧರಿಸಲು ಸಾಧ್ಯವಿಲ್ಲ ಎಂಬ ಸತ್ಯ ನಮ್ಮ ಸುತ್ತಲಿರುವವರನ್ನು ಗಮನಿಸಿದರೆ ನಮಗೇ ತಿಳಿಯುತ್ತದೆ. (ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳದೇ ಆಷಾಢಭೂತೀತನ ಪ್ರದರ್ಶಿಸುತ್ತಿರುವುದು ಏಕೆ ಎಂಬುದು ಅಧ್ಯಯನಯೋಗ್ಯ ವಿಷಯ) ಈ ತೆರನಾದ ವರ್ಗೀಕರಣ ಪದ್ಧತಿಯನ್ನು ಅನುಲ್ಲಂಘನೀಯ ಎಂದು ಈಗಲೂ ಅನುಸರಿಸಬೇಕೇ ನೀವೇ ತೀರ್ಮಾನಿಸಿ. ನನ್ನ ಪ್ರಕಾರ ಇದು ಪರಿಷ್ಕರಣಯೋಗ್ಯ ಪದ್ಧತಿ.

ಈ ಚತುರ್ವರ್ಣಗಳ ಪೈಕಿ ಬ್ರಾಹ್ಮಣ ವರ್ಗ ಅತ್ಯಂತ ಶ್ರೇಷ್ಠವಾದದ್ದೇ? ಶೂದ್ರ ವರ್ಗ ಅತ್ಯಂತ ಕೀಳಾದದ್ದೇ? ಈ ಭ್ರಮೆಯನ್ನು ಹುಟ್ಟುಹಾಕಲು ಪಟ್ಟಭದ್ರ ಹಿತಾಸಕ್ತಿಗಳು ಉಪಯೋಗಿಸಿರಬಹುದಾದ ಮೂಲ ಯಾವುದು? ಋಗ್ವೇದದಲ್ಲಿ ಇರುವ ಪುರುಷಸೂಕ್ತದ ‘ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯ: ಕೃತ: | ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗಮ್ ಶೂದ್ರೋ ಅಜಾಯತಃ ||’ ಎಂಬ ಸಾಲುಗಳು ಎಂಬುದು ನನ್ನ ಗುಮಾನಿ. ವಿಶ್ವವೇ ಪರಮಾತ್ಮ ಎಂಬುದನ್ನು ತನ್ನದೇ ಆದ ರೀತಿಯಲ್ಲಿ ವಿವರಿಸುವ ಪ್ರಯತ್ನ ಇದು ಎಂಬುದು ನನ್ನ ಅಭಿಪ್ರಾಯ. ದೃಗ್ಗೋಚರ ವಿಶ್ವ ಸೃಷ್ಟಿಯಾದದ್ದು ಹೇಗೆ ಎಂಬುದನ್ನು ವಿವರಿಸುವ ಪ್ರಯತ್ನವೂ ಇಲ್ಲಿದೆ. ವಿಶ್ವಪುರುಷನ (ಅರ್ಥಾತ್ ಪರಮಾತ್ಮನ) ಮುಖದಿಂದ ಬ್ರಾಹ್ಮಣರೂ ಬಾಹುಗಳಿಂದ ಕ್ಷತ್ರಿಯರೂ ತೊಡೆಗಳಿಂದ ವೈಶ್ಯರೂ ಪಾದಗಳಿಂದ ಶೂದ್ರರೂ ಸೃಷ್ಟಿಯಾದರು ಎಂಬ ಇಲ್ಲಿನ ಅಂಬೋಣವನ್ನು ತಮ್ಮ ಮೂಗಿನ ನೇರಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಅರ್ಥೈಸಿದ್ದಾರೆ ಎಂಬುದರಲ್ಲಿ ನನಗೆ ಸಂಶಯವಿಲ್ಲ. ಉಲ್ಲೇಖಿಸಿದ ಪ್ರತೀ ವರ್ಣದವರು ಸಮುದಾಯದ ಅವಿಭಾಜ್ಯ ಅಂಗಗಳು, ದೇಹದ ಪ್ರತೀ ಅಂಗವೂ ಅದಕ್ಕೆ ತಕ್ಕುದಾದ ಕಾರ್ಯವನ್ನು ಕ್ಷಮತೆಯಿಂದ ಮಾಡಿದರೆ ಮಾತ್ರ ದೇಹ ಸುಸ್ಥಿತಿಯಲ್ಲಿ ಇರುವಂತೆ ನಾಲ್ಕೂ ವರ್ಣಗಳವರು ತಮ್ಮ ಮನೋಧರ್ಮಕ್ಕೆ ತಕ್ಕುದಾದ ಧರ್ಮಸಮ್ಮತ ಕಾರ್ಯಗಳನ್ನು ಮಾಡಿದರೆ ಮಾತ್ರ ಸಮುದಾಯ ಸುಸ್ಥಿತಿಯಲ್ಲಿ ಇರುತ್ತದೆ ಎಂದು ಈ ಅಂಬೋಣವನ್ನು ಅರ್ಥೈಸಬೇಕೇ ವಿನಾ ಯಾರು ಮೇಲು ಯಾರು ಕೀಳು ಎಂಬುದನ್ನು ನಿರ್ಧರಿಸಲು ಅಲ್ಲ ಎಂಬುದು ನನ್ನ ಖಚಿತ ನಿಲುವು. ಮಾನವ ದೇಹದ ಮುಖ, ಬಾಹು, ತೊಡೆ, ಪಾದ ಈ ಅಂಗಗಳ ಪೈಕಿ ಮುಖವೇ ಶ್ರೇಷ್ಠ ಉಳಿದವು ಅವುಗಳ ಅಧೀನದಲ್ಲಿ ಕಾರ್ಯ ನಿರ್ವಹಿಸಬೇಕು, ಅಥವ ಬಾಹು, ತೊಡೆ, ಪಾದ ಈ ಅಂಗ ಗಳ ಪೈಕಿ ಬಾಹುವಿನ ಅಧೀನದಲ್ಲಿ ಉಳಿದವು ಕಾರ್ಯ ನಿರ್ವಹಿಸಬೇಕು ಅನ್ನುವುದು ಎಷ್ಟು ಹಾಸ್ಯಾಸ್ಪದವೋ ಅಷ್ಟೇ ಹಾಸ್ಯಾಸ್ಪದ ನಾಲ್ಕು ವರ್ಣಗಳನ್ನು ಮೇಲು – ಕೀಳು ಎಂದು ಸಂಘಟಿಸುವುದು.

ಎಂದೇ, ತಂದೆತಾಯಿಯರ ವರ್ಣ ಆಧರಿಸಿ ಅವರಿಗೆ ಹುಟ್ಟುವ ಮಕ್ಕಳ ವರ್ಣ ನಿರ್ಧರಿಸುವ ಪದ್ಧತಿಯನ್ನು ನಾನು ಒಪ್ಪುವುದಿಲ್ಲ. ವ್ಯಕ್ತಿಗಳು ಮಾಡುವ (ಧರ್ಮಸಮ್ಮತ) ಕಾರ್ಯವನ್ನು ಆಧರಿಸಿ ಅವರನ್ನು ಶ್ರೇಣೀಕೃತ ವ್ಯವಸ್ಥೆಯಲ್ಲಿ ಇರಿಸುವುದನ್ನೂ ನಾನು ವಿರೋಧಿಸುತ್ತೇನೆ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s