ನನ್ನ ಜೀವನ ದರ್ಶನ – ೩

‘ಅಂತಃವೀಕ್ಷಣೆಯ ನೆರವಿನಿಂದ ನಾನು ನನ್ನದೇ ಆದ ದಾರಿ ನಿರ್ಮಿಸಿಕೊಂಡು ಬಲು ನಿಧಾನವಾಗಿ ನಡೆಯುತ್ತಿದ್ದೇನೆ’ ಎಂದು ಹಿಂದಿನ ಲೇಖನದಲ್ಲಿ ಹೇಳಿದ್ದೆ. ಪ್ರಗತಿಯ ವೇಗ ತೃಪ್ತಿ ನೀಡುತ್ತಿಲ್ಲ. ದಾಸವರೇಣ್ಯರ ಭಕ್ತಿ ಮಾರ್ಗವೂ ನನ್ನ ಮನೋಧರ್ಮಕ್ಕೆ ತಕ್ಕುದಾಗಿಲ್ಲ. ಅಂದಮೇಲೆ ಮಾಡುವುದೇನು?

ಕರ್ಮ ಮಾಡುತ್ತಲೇ ಇಲ್ಲಿ ನೂರು ವರ್ಷಗಳನ್ನು ಜೀವಿಸುವುದಕ್ಕೆ ಬಯಸಬೇಕು. ಕರ್ಮ ಅಂಟಿಕೊಳ್ಳದಿರುವುದಕ್ಕೆ ಇದಕ್ಕಿಂತ  ಬೇರೆ ಮಾರ್ಗವಿಲ್ಲ (ಈಶಾವಾಸ್ಯ ಉಪನಿಷತ್ ಶ್ಲೋಕ ೨)

‘ಕರ್ಮ ಮಾಡುತ್ತಲೇ ಜೀವನ ಸವೆಸಿದರೆ ಕರ್ಮಬಂಧನಕ್ಕೆ ಸಿಲುಕುವುದಿಲ್ಲ’ – ಇದು ಈ ಶ್ಲೋಕದ ಧ್ವನಿತಾರ್ಥ. ಇಲ್ಲಿ ಒಂದು ಧರ್ಮಸೂಕ್ಷ್ಮ ಗಮನಿಸಬೇಕು. ಬಾಹ್ಯ ಜಗತ್ತಿನಲ್ಲಿ ನಾವು ಮಾಡುವ ಕ್ರಿಯೆಗಳೊಂದಿಗೆ ಮನಸ್ಸಿನಲ್ಲಿಯೇ ಮಾಡುವ ಕ್ರಿಯೆಗಳೂ ಕರ್ಮ ಅನ್ನಿಸಿಕೊಳ್ಳುತ್ತವೆ. (ಉದಾಹರಣೆಗೆ ವೀಕ್ಷಣೀಯ ಜಗತ್ತಿನಲ್ಲಿ ಏನೇನೋ ಕಸರತ್ತು ಮಾಡಿ ಒಬ್ಬ ವ್ಯಕ್ತಿಯ ಜೀವನವನ್ನು ಹಾಳುಮಾಡುವುದೂ ಕರ್ಮ, ಮನಸ್ಸಿನಲ್ಲಿಯೇ ಅವನ ಜೀವನ ಹಾಳಾಗಲಿ ಎಂದು ಬಯಸುವುದೂ ಕರ್ಮ) ಭಗವದ್ಗೀತೆಯ ೩ ನೆಯ ಅಧ್ಯಾಯದ ೪೩ ಶ್ಲೋಕಗಳು ಇದನ್ನೇ ನಾನಾ ರೀತಿಯಲ್ಲಿ ವರ್ಣಿಸಿವೆ.

ನೀನು ನಿಯತವಾದ (ಮಾಡಲೇಬೇಕಾದ) ಕರ್ಮವನ್ನು ಮಾಡು. ಏಕೆಂದರೆ ಕರ್ಮ ಅಕರ್ಮಕ್ಕಿಂತ (ನಿಷ್ಕ್ರಿಯತೆ) ಉತ್ತಮ. ಅಕರ್ಮಿಯಾಗಿದ್ದರೆ ಶರೀರವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೂ ಸಾಧ್ಯವಿಲ್ಲ (ಭಗವದ್ಗೀತೆ ೩-೮)

ಅಂದಮೇಲೆ ದೇಹವನ್ನೂ ಮನಸ್ಸನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅವಶ್ಯವಾದ ನಿತ್ಯಕರ್ಮಗಳನ್ನು ಮಾಡಲೇಬೇಕು – ಮಾಡಲು ಪ್ರಯತ್ನಿಸುತ್ತಲೂ ಇದ್ದೇನಾದರೂ. ಈ ನಿತ್ಯಕರ್ಮಗಳು ನಮ್ಮೊಳಗಿರುವ ‘ದೇವರು’ ಅನ್ನು ಹುಡುಕಲು ಬೇಕಾದ ಮನೋದೈಹಿಕ ಸ್ಥಿತಿ ನಿರ್ಮಿಸುತ್ತವೆಯೇ ವಿನಾ ‘ಅದರ’ ಆನುಭವ ಒದಗಿಸುವುದಿಲ್ಲ. ಆ ‘ಅನುಭವ’ ಒದಗಿಸಬಲ್ಲ ನಿತ್ಯಕರ್ಮಗಳು ಯಾವುವು?

ಯಜ್ಞಾರ್ಥವಾಗಿ ಮಾಡಿದ ಕರ್ಮ ವಿನಃ ಉಳಿದ ಕರ್ಮವೆಲ್ಲ ಬಂಧನಕ್ಕೆ ಕಾರಣವಾಗುತ್ತದೆ. ಆದುದರಿಂದ ಕೌಂತೇಯ (ಅರ್ಜುನ) ಭಾವಬಂಧನಕ್ಕೊಳಗಾಗದೆಯೇ ಶ್ರದ್ಧೆಯಿಂದ ಈ ಕರ್ಮಗಳನ್ನು ಮಾಡು (ಭಗವದ್ಗೀತೆ ೩-೯)

ತೈತ್ತರೀಯ ಅರಣ್ಯಕದಲ್ಲಿ ಸೂಚಿಸಿದ (೨-೧೦) ಪಂಚ ಮಹಾಯಜ್ಞಗಳ ನಿಮಿತ್ತವಾಗಿ ಮಾಡುವ ಕ್ರಿಯೆಗಳೇ ಇಲ್ಲಿ ಉಲ್ಲೇಖಿಸಿರುವ ‘ಯಜ್ಞಾರ್ಥವಾಗಿ ಮಾಡಿದ ಕರ್ಮಗಳು’. ತನಗೆ ಉಪಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದು ಮತ್ತು ತನ್ನಲ್ಲಿರುವ ಅತ್ಯುತ್ತಮವಾದದ್ದನ್ನು, ಅತ್ಯುಪಯುಕ್ತವಾದದ್ದನ್ನು ಅರ್ಹರಿಗೆ ನೀಡುವುದೇ ಇಲ್ಲಿ ಉಲ್ಲೇಖಿಸಿರುವ ಯಜ್ಞದ ತಿರುಳು. ಇದಕ್ಕೆ ಪುರೋಹಿತರ ಆವಶ್ಯಕತೆ ಇಲ್ಲ. ಹೋಮ ಹವನಗಳನ್ನು ಮಾಡಬೇಕಿಲ್ಲ. ನೀಡುವುದಕ್ಕೆ ಮುನ್ನ ಯಾವ ಮತೀಯ ವಿಧಿವಿಧಾನಗಳನ್ನೂ ಅನುಸರಿಸಬೇಕಿಲ್ಲ. ಶ್ರದ್ಧಾಪೂರ್ವಕವಾಗಿ ನೀಡಬೇಕಾದದ್ದನ್ನು ನೀಡಿದರೆ ಸಾಕು. ಇವು ಇನ್ನಾವುದೋ ಫಲಾಪೇಕ್ಷೆಯಿಂದ ಮಾಡುವ ಕರ್ಮಗಳಂತೆ ವ್ಯಕ್ತಿಗಳನ್ನು ಕರ್ಮಬಂಧನದಲ್ಲಿ ಸಿಲುಕಿಸುವುದಿಲ್ಲ.

ಅಂದಮೇಲೆ, ಈ ಪಂಚ ಮಹಾಯಜ್ಞಗಳು ಯಾವುವು? ಅವನ್ನು ಮಾಡುವುದು ಹೇಗೆ?

೧. ದೇವಯಜ್ಞ: ಇದನ್ನು ಮಾಡುವುದು ಬಲು ಸುಲಭ. ನಮ್ಮ ಜೀವನದ ಎಲ್ಲ ಆಗುಹೋಗುಗಳು ‘ದೇವರು’ (ನೋಡಿ: ದೇವರು, ಧರ್ಮ ಮತ್ತು ಮತ, ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ?) ತತ್ವದಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳಿಗೆ ಅನುಸಾರವಾಗಿಯೇ ಜರಗುತ್ತಿರುವುದರಿಂದ ನಾವು ಜೀವಿಸುತ್ತಿದ್ದೇವೆ. ತೃಪ್ತಜೀವನ ನಡೆಸಲು ತಕ್ಕುದಾದ ನಿಯಮಗಳು ಅಂತಸ್ಥವಾಗಿರುವ ಆ ‘ದೇವರು’ ತತ್ವಕ್ಕೆ ಶ್ರದ್ಧೆಯಿಂದ ಪ್ರತೀದಿನ ಕೃತಜ್ಞತೆ ಸಲ್ಲಿಸಬೇಕಾದದ್ದು, ಆ ನಿಯಮಗಳನ್ನು ಉಲ್ಲಂಘಿಸದೆಯೇ ಜೀವನ ನಡೆಸಲು ಅವಶ್ಯವಾದ ಮನಃಸ್ಥೈರ್ಯ ನಮ್ಮದಾಗಲಿ ಎಂದು ಶ್ರದ್ಧೆಯಿಂದ ಪ್ರತೀದಿನ ಸಂಕಲ್ಪಿಸಬೇಕಾದದ್ದು ನಮ್ಮ ಕರ್ತವ್ಯ. ಈ ಕರ್ತವ್ಯ ಪಾಲನೆ ಮಾಡುವುದು ಮನಸ್ಸಿನಲ್ಲಿ. ಈ ಮಾನಸಿಕ ಕರ್ಮವನ್ನು ಶ್ರದ್ಧೆಯಿಂದ ಮಾಡುವುದು ಕಷ್ಟ ಎಂದನ್ನಿಸಿದರೆ ಯಾವುದನ್ನಾದರೂ ‘ದೇವರ’ ಪ್ರತೀಕ ಎಂದು ಕಲ್ಪಿಸಿಕೊಂಡು ನಮಗೆ ಯುಕ್ತವೆನಿಸಿದ ಮತೀಯಾಚರಣೆ ಮಾಡಲೂ ಬಹುದು. ಶ್ರದ್ಧೆಯಿಂದ ಮಾಡಬೇಕಾದದ್ದು ಮಾನಸಿಕ ಕರ್ಮವನ್ನು, ಮತೀಯ ಆಚರಣೆಯನ್ನಲ್ಲ ಎಂಬುದನ್ನು ಮರೆಯಕೂಡದು. ಇದೇ ದೇವಯಜ್ಞ ಎಂಬುದು ನನ್ನ ಅಭಿಮತ.

೨. ಋಷಿಯಜ್ಞ: ‘ದೇವರು’ ತತ್ವವನ್ನು ಸಾಕ್ಷಾತ್ಕರಿಸಿಕೊಂಡವರು ತಮ್ಮ ಅನುಭವ ಸರ್ವರಿಗೂ ಆಗಬೇಕೆಂಬ ಹೆಬ್ಬಯಕೆಯಿಂದ ತಾವು ಅನುಭವಿಸಿದ್ದನ್ನು ತಮ್ಮದೇ ಆದ ರೀತಿಯಲ್ಲಿ ತಮ್ಮದೇ ಆದ ಪದಗಳಲ್ಲಿ ತಮ್ಮದೇ ಆದ ಉದಾಹರಣೆಗಳೊಂದಿಗೆ ವಿವರಿಸುವ ಪ್ರಯತ್ನ ಮಾಡಿದ್ದರಿಂದ ನಾವು ಆ ಕುರಿತು ಆಲೋಚಿಸಲು, ಆ ಅವರ್ಣನೀಯ ಅದ್ವಿತೀಯ ಅನುಭವ ಪಡೆಯಲು ಕಾರ್ಯೋನ್ಮುಖರಾಗಲು ಸಾಧ್ಯವಾಗಿದೆ. ಜ್ಞಾನೇಂದ್ರಿಯಗ್ರಾಹ್ಯವೂ, ಮನೋಗ್ರಾಹ್ಯವೂ ವರ್ಣನೀಯವೂ ಅಲ್ಲದ ಅದ್ವಿತೀಯವಾದದ್ದನ್ನು (ನೋಡಿ: ನನ್ನ ಜೀವನ ದರ್ಶನ – ೨) ಅನೇಕರು ತಮ್ಮ ಶಿಷ್ಯರಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವರ್ಣಿಸಿದ್ದನ್ನು ನಾವು ಅಧ್ಯಯಿಸುವಾಗ ಗೊಂದಲವಾಗುವ ಸಾಧ್ಯತೆ ಹೆಚ್ಚು. ಎಂದೇ, ಈ ಕುರಿತು ಲಭ್ಯವಿರುವ ಎಲ್ಲವನ್ನೂ ಮನನ ಮಾಡುವುದರಿಂದ ವೃಥಾ ಕಾಲಹರಣ ಆಗುತ್ತದೆ ಎಂಬುದು ನನ್ನ ಅಭಿಮತ. ಇದಕ್ಕೆ ಬದಲಾಗಿ ನಮಗೆ ಅರ್ಥವಾಗುವ ಕೆಲವನ್ನು ಮನನ ಮಾಡಲು ಪ್ರಯತ್ನಿಸುವುದು ಉಚಿತವಾಗಬಹುದು. [ನಾನು ಅವಲಂಬಿಸಿರುವುದು, ಶ್ರೀರಾಮಕೃಷ್ಣಾಶ್ರಮ ಪ್ರಕಟಿತ ಗೀತಾ ಭಾವಧಾರೆ ಮತ್ತು ಉಪನಿಷತ್ ಭಾವಧಾರೆ]. ಪ್ರತೀದಿನ ನಮಗೆ ಇಷ್ಟವಾದದ್ದನ್ನು ಶ್ರದ್ಧೆಯಿಂದ ಅಧ್ಯಯಿಸುವುದು, ಅದನ್ನು ನಮಗೆ ನೀಡಿದ ಮಹಾನುಭಾವರಿಗೆ ಶ್ರದ್ಧೆಯಿಂದ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸಿವುದು, ನಾವು ಅರ್ಥಮಾಡಿಕೊಂಡದ್ದರ ಪೈಕಿ ಎಷ್ಟು ಸಾಧ್ಯವೋ ಅಷ್ಟನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು, ನಾವು ಅರ್ಥಮಾಡಿಕೊಂಡದ್ದನ್ನು ಮಾತ್ರ ಇತರರಿಗೆ ತಿಳಿಸುವುದು ಋಷಿಯಜ್ಞದ ಕ್ರಿಯೆಗಳು ಎಂಬುದು ನನ್ನ ಅಂಬೋಣ.

೩. ಪಿತೃಯಜ್ಞ: ನಮ್ಮ ಹಿರಿಯರು, ವಿಶೇಷತಃ ಜನ್ಮದಾತೃಗಳು ನಾವು ಈ ಭೂಮಿಯಮೇಲೆ ಜನಿಸಿ ಕರ್ಮ ಸವೆಸಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ, ನಮ್ಮನ್ನು ಬೆಳೆಸಲು ಮತ್ತು ನಮ್ಮ ಒಳಿತಿಗಾಗಿ ತಮ್ಮ ಇತಿಮಿತಿಗಳೊಳಗೆ ತಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿದ್ದಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸಬೇಕಾದದ್ದು ಕರ್ತವ್ಯ. ಅವರು ಬದುಕಿದ್ದಾಗ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದರ ಮುಖೇನ, ವೃದ್ಧಾಪ್ಯದಲ್ಲಿ ಅವರ ಆವಶ್ಯಕತೆಗಳನ್ನು ನಮ್ಮ ಇತಿಮಿತಿಗಳೊಳಗೆ ಅಕ್ಕರೆಯಿಂದ ಪೂರೈಸುವುದರ ಮುಖೇನ, ಅವರ ಮರಣಾನಂತರ ಅವರನ್ನು ಶ್ರದ್ಧೆಯಿಂದ ಸ್ಮರಿಸಿಕೊಳ್ಳುವುದರ ಮುಖೇನ ಈ ಕರ್ತವ್ಯವನ್ನು ನಿಭಾಯಿಸುವುದು ಪಿತೃಯಜ್ಞವೇ ವಿನಹ ಸತ್ತನಂತರ ಮತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಅಪರಕರ್ಮಗಳೇ ಆಗಲಿ ವಾರ್ಷಿಕ ಶ್ರಾದ್ಧವೇ ಆಗಲಿ ಅಲ್ಲ ಎಂಬುದು ನನ್ನ ಅಭಿಮತ. ಈ ಮುನ್ನ ಉಲ್ಲೇಖಿಸಿದ ಕರ್ತವ್ಯ ಪಾಲನೆ ಮಾಡದೆಯೇ ಅಪರಕರ್ಮಗಳನ್ನು ಎಷ್ಟು ಹಣ ವ್ಯಯಿಸಿ ಮಾಡಿದರೂ ನಿಷ್ಪ್ರಯೋಜಕ ಎಂಬುದು ನನ್ನ ನಿಲುವು.

೪. ನರಯಜ್ಞ: ಇತರರ, ಅರ್ಥಾತ್ ಸಮುದಾಯದ, ವಿಶೇಷವಾಗಿ ದುರ್ಬಲರ ಒಳಿತಿಗಾಗಿ ಮಾಡುವ ಎಲ್ಲ ನಿಸ್ವಾರ್ಥ ಕ್ರಿಯೆಗಳು (ಅವು ಯಾವುವೇ ಆಗಿರಲಿ) ನರಯಜ್ಞದ ಕ್ರಿಯೆಗಳು. ನಿಸ್ವಾರ್ಥತೆಗಿಂತ ಸ್ವಾರ್ಥವೇ ಹೆಚ್ಚಾದರೆ ಕರ್ಮಬಂಧನದಲ್ಲಿ ಸಿಲುಕುವುದು ಖಾತರಿ. ಈ ಬಂಧನದ ಸ್ವರೂಪ ಮತ್ತು ತೀವ್ರತೆ ಸ್ವಾರ್ಥತೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ ಎಂಬುದು ನನ್ನ ನಂಬಿಕೆ. (ನೋಡಿ: ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ) ಅಂದಹಾಗೆ ಈ ಕ್ರಿಯೆಗಳು ಧರ್ಮಸಮ್ಮತವಾದವು (ನೋಡಿ: ದೇವರು, ಧರ್ಮ ಮತ್ತು ಮತ) ಆಗಿರಬೇಕು ಎಂಬುದನ್ನು ಮರೆಯಕೂಡದು. ಈ ಕುರಿತು ಸುದೀರ್ಘ ಸಂವಾದ ನಡೆಸುವುದು ಸಾಧ್ಯ.

೫. ಭೂತಯಜ್ಞ: ನಿಸರ್ಗದಲ್ಲಿ ನಿರುಪಯುಕ್ತವಾದದ್ದು ಇರಬಾರದ್ದು ಯಾವುದೂ ಇಲ್ಲ. ಎಂದೇ ಸಮಸ್ತ ಜೀವರಾಶಿಯೊಡನೆ ಮತ್ತು ನಿರ್ಜೀವ ವಸ್ತುಗಳೊಡನೆ ಗೌರವದಿಂದ ಧರ್ಮಸಮ್ಮತ ರೀತಿಯಲ್ಲಿ (ನೋಡಿ: ದೇವರು, ಧರ್ಮ ಮತ್ತು ಮತ) ನಿಸ್ವಾರ್ಥತೆಯಿಂದ ವ್ಯವಹರಿಸುವುದೇ ಭೂತಯಜ್ಞ ಎಂಬುದು ನನ್ನ ನಿಲುವು. ಈ ಕ್ರಿಯೆಗಳಲ್ಲಿಯೂ ನಿಸ್ವಾರ್ಥತೆಗಿಂತ ಸ್ವಾರ್ಥವೇ ಹೆಚ್ಚಾದರೆ ಕರ್ಮಬಂಧನದಲ್ಲಿ ಸಿಲುಕುವುದು ಖಾತರಿ. ಈ ಕುರಿತೂ ಸುದೀರ್ಘ ಸಂವಾದ ನಡೆಸುವುದು ಸಾಧ್ಯ.

ನಿತ್ಯಕರ್ಮಗಳನ್ನು ನಿಸ್ವಾರ್ಥತೆಯಿಂದ ಮಾಡುವುದು ಬಲು ಕಷ್ಟ. ಎಂದೇ, ಈ ಕುರಿತು ಸದಾ ಜಾಗರೂಕರಾಗಿರ ಬೇಕು. ಎಡವಿದಾಗಲೆಲ್ಲ ಆತ್ಮಾವಲೋಕನ ಮಾಡಿಕೊಂಡು ಮುಂದುವರಿಯುವ ಅಗತ್ಯವಿದೆ. ನಿತ್ಯಕರ್ಮಗಳನ್ನು ಮಾಡಬೇಕಾದ ರೀತಿಯಲ್ಲಿಯೇ ಮಾಡುವುದರಲ್ಲಿ ಸಫಲರಾದರೆ ಸಂಸಾರಿಯಾಗಿದ್ದುಕೊಂಡೇ ‘ದೇವರು’ ಅನುಭವ ಪಡೆಯುವುದು ಸಾಧ್ಯ ಅನ್ನುವುದು ನನ್ನ ನಂಬಿಕೆ. ಈ ನನ್ನ ನಂಬಿಕೆಯೇ ನನ್ನ ಜೀವನದ ದಾರಿದೀಪ. ಗುರಿ ಎಂದು ಮುಟ್ಟುತ್ತೇನೆ ಎಂಬುದು ತಿಳಿದಿಲ್ಲ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s