ನನ್ನ ಜೀವನ ದರ್ಶನ – ೨

ಪರಮಾತ್ಮವನ್ನು ಅಂತರಂಗದಲ್ಲಿ ಹುಡುಕಬೇಕೇ ವಿನಾ ಬೇರೆಡೆ ಅಲ್ಲ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದು ಸರಿಯಷ್ಟೆ?

ಹುಡುಕುವುದು ಹೇಗೆ? ‘ಅದು’ ಸಿಕ್ಕಿದರೆ ಗುರುತಿಸುವುದು ಹೇಗೆ? ‘ಅದರ’ ಲಕ್ಷಣಗಳೇನು? ಮುಂದೆ ಉಲ್ಲೇಖಿಸಿರುವ ಕೇನೋಪನಿಷತ್ತಿನಲ್ಲಿರುವ ಶ್ಲೋಕಗಳನ್ನು ಗಮನಿಸಿ –

ನತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ

ನ ವಿದ್ಮೋ ವಿಜಾನೀಮೋ ಯಥೈತದನುಶಿಷ್ಯಾತ್  ।। (ಖಂಡ ೧, ಶ್ಲೋ ೩)

[ಅಲ್ಲಿಗೆ ಕಣ್ಣು ಹೋಗುವುದಿಲ್ಲ, ವಾಕ್ಕು ಹೋಗುವುದಿಲ್ಲ, ಮನಸ್ಸು ಹೋಗುವುದಿಲ್ಲ. ನಾವು ಅರಿಯೆವು. ಇದನ್ನು ಹೇಗೆ ಕಲಿಸಿಕೊಡಬೇಕೋ ಅರಿಯೆವು.]

ಮೇಲ್ನೋಟಕ್ಕೆ ಅರ್ಥವಿಹೀನ ಪದಪುಂಜದಂತೆ ಭಾಸವಾಗುತ್ತದೆಯಲ್ಲವೇ? ‘ಪರಮಾತ್ಮ ಅಥವ ಬ್ರಹ್ಮ’ ಎಂಬುದು ಜ್ಞಾನೇಂದ್ರಿಯಗ್ರಾಹ್ಯವಲ್ಲ, ಮನೋಗ್ರಾಹ್ಯವೂ ಅಲ್ಲ – ಇದು ಈ ಶ್ಲೋಕದ ಧ್ವನಿತಾರ್ಥ. ಇದೇ ಉಪನಿಷತ್ತಿನ ಇದೇ ಖಂಡದ ಮುಂದಿನ ಶ್ಲೋಕಗಳು ಈ ಧ್ವನಿತಾರ್ಥವನ್ನೇ ಪುನರುಚ್ಚರಿಸುತ್ತವೆ.

ಯಾವುದು ಮಾತಿನಿಂದ ವ್ಯಕ್ತವಾಗುವುದಿಲ್ಲವೋ ಯಾವುದರಿಂದ ಮಾತು ವ್ಯಕ್ತವಾಗುವುದೋ ಅದನ್ನು (೧-೫), ಯಾವುದನ್ನು ಮನಸ್ಸಿನಿಂದ ಮನನ ಮಾಡಲು ಆಗುವುದಿಲ್ಲವೋ ಯಾವುದರಿಂದ ಮನಸ್ಸು ಮನನ ಮಾಡಲ್ಪಟ್ಟಿದೆಯೋ ಅದನ್ನು (೧-೬), ಯಾವುದನ್ನು ಕಣ್ಣುಗಳಿಂದ ನೋಡುವುದಕ್ಕೆ ಆಗುವುದಿಲ್ಲವೋ ಯಾವುದರಿಂದ ಕಣ್ಣುಗಳನ್ನು ನೋಡಬಹುದೋ ಅದನ್ನು (೧-೭), ಯಾವುದನ್ನು ಕಿವಿಯಿಂದ ಕೇಳುವುದಕ್ಕೆ ಆಗುವುದಿಲ್ಲವೋ ಯಾವುದರಿಂದ ಕಿವಿಗಳು ಕೇಳಲ್ಪಡುವುದೋ ಅದನ್ನು (೧-೮), —-  ಇಂತು ಮುಂದುವರಿಯುತ್ತದೆ ‘ಅದ’ರ ವರ್ಣನೆ.

ಅಂದ ಮೇಲೆ, ಅನೇಕರು ಯಾವುದನ್ನು ‘ದೇವರು’ ಎಂದು ಆರಾಧಿಸುತ್ತಿದ್ದಾರೋ ಅದು ಏನು?

ಉಲ್ಲೇಖಿಸಿದ ಎಲ್ಲ ಶ್ಲೋಕಗಳೂ ಯಾವುದನ್ನು ಇದು ಎಂದು ಉಪಾಸನೆ ಮಾಡುತ್ತಾರೆಯೋ ಅದು ಬ್ರಹ್ಮವಲ್ಲ ಎಂದು ಸಾರಿವೆ.

ಅಂದ ಮೇಲೆ ನಾವು ದೇವಲಾಯಗಳಲ್ಲಿ, ಮನೆಗಳಲ್ಲಿ —- ದೇವರು ಎಂದು ಭ್ರಮಿಸಿ ಉಪಾಸಿಸುತ್ತಿರುವುದು ಏನನ್ನು? ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ‘ಪುರೋಹಿತಷಾಹಿ’ ವರ್ಗ ಪೋಷಿಸುತ್ತಿರುವುದು ಕಠೋಪನಿಷತ್ತಿನಲ್ಲಿ ಉಲ್ಲೇಖಿಸಿದ ‘ವಿದ್ಯ’ಯನ್ನೋ ‘ಅವಿದ್ಯೆ’ಯನ್ನೋ? ಜ್ಞಾನವನ್ನೋ, ಅಜ್ಞಾನವನ್ನೋ? ವೇದೋಪನಿಷತ್ತು ಆಧಾರಿತ ಜ್ಞಾನವನ್ನೋ ಮೂಢನಂಬಿಕೆಯನ್ನೋ? – ನೀವೇ ತೀರ್ಮಾನಿಸಿ. ಜ್ಞಾನೇಂದ್ರಿಯಯ ಗ್ರಾಹ್ಯವೂ ಮನೋಗ್ರಾಹ್ಯವೂ ಅಲ್ಲದ್ದನ್ನು ಅನುಭವಿಸಬೇಕಲ್ಲವೇ? ಅಂದ ಹಾಗೆ ಈ ಅನುಭವವವೂ ಅವರ್ಣನೀಯ.

ನಾನು ಚೆನ್ನಾಗಿ ಅರಿತುಕೊಂಡಿರುವೆನು ಎಂದು ಭಾವಿಸುವುದಿಲ್ಲ, ಅರಿತುಕೊಂಡಿಲ್ಲ ಅಂತಲೂ ಭಾವಿಸುವುದಿಲ್ಲ ಎಂದು ನಮ್ಮಲ್ಲಿ ಯಾರು ಬಲ್ಲರೋ ಅವರೇ ಬಲ್ಲರು (೨-೨), ಯಾರಿಗೆ ತಿಳಿವಳಿಕೆ ಇಲ್ಲವೋ ಅವನಿಗೆ ತಿಳಿದಿದೆ, ಯಾರಿಗೆ ತಿಳಿವಳಿಕೆ ಇದೆಯೋ ಅವನಿಗೆ ತಿಳಿದಿಲ್ಲ. ತಿಳಿದವರಿಗೆ ತಿಳಿದಿಲ್ಲ, ತಿಳಿಯದವರಿಗೆ ತಿಳಿದಿದೆ (೨-೩) ಅನ್ನುತ್ತದೆ ಕೇನೋಪನಿಷತ್ತು.

ಅಂದ ಮೇಲೆ ಸ್ವಘೋಷಿತ ಗುರುಗಳು, ಶಾಸ್ತ್ರಾಧ್ಯಯನ ಮಾಡಿದ ಮಹಾಪಂಡಿತರು, ಮಠಾಧಿಪತಿಗಳು ಮಾಡುತ್ತಿರುವುದೇನು? ನೀವೇ ತೀರ್ಮಾನಿಸಿ.

ವೇದಗಳನ್ನೂ ಉಪನಿಷತ್ತುಗಳನ್ನೂ ಭಗವದ್ಗೀತೆಯನ್ನೂ ಬ್ರಹ್ಮಸೂತ್ರಗಳನ್ನೂ ಇತಿಹಾಸಪುರಾಣಗಳನ್ನೂ ಅನೇಕವರ್ಷಕಾಲ ನೇಮನಿಷ್ಠೆಯಿಂದ ಗುರುಮುಖೇನ ಅಧ್ಯಯಿಸಿ ಕಂಠಸ್ಥಗೊಳಿಸಿ ಮನೋಗತಮಾಡಿಕೊಂಡಿದ್ದೇವೆ ಎಂದು ಘೋಷಿಸಿಕೊಂಡವರಿಗೆ, ಈ ಕುರಿತು ಅತ್ಯುತ್ತಮ ಪ್ರವಚನ ನೀಡುವವರಿಗೆ ತಿಳಿದಿದೆಯೇ? ಈ ಮುಂದೆ ಉಲ್ಲೇಖಿಸಿದ ಅಂಶವನ್ನಾಧರಿಸಿ ನೀವೇ ತೀರ್ಮಾನಿಸಿ

ಈ ಆತ್ಮ ಪ್ರವಚನದಿಂದ ಲಭ್ಯನಲ್ಲ, ಮೇಧಾಶಕ್ತಿಯಿಂದಲೂ ಶ್ರವಣದಿಂದಲೂ ಲಭ್ಯನಲ್ಲ. ಯಾರನ್ನು ಈ ಸಾಧಕ ಬೇಡುತ್ತಾನೆಯೋ ಅವನಿಂದ ಲಭ್ಯನು. ಅವನಿಗೆ ಆತ್ಮನು ತನ್ನ ತನುವನ್ನೇ ತೋರುತ್ತಾನೆ (ಕಠೋಪನಿಷತ್ತು: ೨-೨೩)

ಓದುವುದು, ಮೇಧಾಶಕ್ತಿ, ಶ್ರವಣ ಇವೇ ಮೊದಲಾದವುಗಳು ಮನಸ್ಸನ್ನು ತುಸು ಹದಮಾಡಲು ನೆರವಾಗಬಹುದೇ ವಿನಾ ಆತ್ಮಸಾಕ್ಷಾತ್ಕಾರ ಮಾಡಿಸಲಾರವು. ಯಾರು ಉತ್ಕಟಾಕಾಂಕ್ಷೆಯಿಂದ ಅಂತರಂಗದಲ್ಲಿಯೇ ಅತ್ಮವನ್ನು ಅಂತಃವೀಕ್ಷಣೆಯ ಮುಖೇನ (ಅರ್ಥಾತ್, ಧ್ಯಾನ) ಹುಡುಕುವರೋ (ಅರ್ಥಾತ್, ತಪಸ್ಸು ಮಾಡುವರೋ) ಅವರಿಗೆ ಅದರ ನಿಜವಾದ ಅರಿವು ಆಗುತ್ತದೆ- ಎಂದು ಇದನ್ನು ನಾನು ಅರ್ಥೈಸುತ್ತೇನೆ.

‘ದುರಾಚಾರದಿಂದ ಪಾರಾಗದೇ ಇರುವವನು, ಶಾಂತನಲ್ಲದವನು, ಸಮಾಹಿತನಲ್ಲದವನು, ಮನಃಶಾಂತಿ ಇಲ್ಲದವನು ಪ್ರಜ್ಞಾನದಿಂದ ಇದನ್ನು ಪಡೆಯಲಾರನು’ (ಕಠೋಪನಿಷತ್ತು: ೨-೨೪)

‘ದೇವರು’ ಅಂದರೇನು ಎಂಬುದನ್ನು ಅನ್ವೇಷಿಸಬಯಸುವವನು ಪ್ರಯತ್ನಿಸುವ ಮುನ್ನ ಏನನ್ನು ಸಾಧಿಸಿರಬೇಕು? ಎಂಬುದನ್ನು ಈ ಶ್ಲೋಕ ತಿಳಿಸುತ್ತದೆ ಎಂಬುದು ನನ್ನ ಅಭಿಮತ. ಈ ಸ್ಥಿತಿಯನ್ನು ತಲುಪಲು ನೆರವು ನೀಡಬಲ್ಲವನೇ ನಿಜವಾದ ‘ಗುರು’. ಇಂತು ನೆರವು ನೀಡಬಲ್ಲ ‘ಗುರು’ವಿಗೆ ‘ಅದು’ ಏನೆಂಬುದರ ಅನುಭವ ಆಗಿರಬೇಕಾದದ್ದು ಅನಿವಾರ್ಯ. ಅಂಥ ‘ಗುರು’ ಮಾತ್ರ ಅನ್ವೇಷಕನ ಹಾಲಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವನಿಗೆ ತಕ್ಕುದಾದ ಸಾಧನಾತಂತ್ರವನ್ನು ರೂಪಿಸಬಲ್ಲ. ಸಾರ್ವತ್ರಿಕ ಏಕರೂಪೀ ಶಿಕ್ಷಣದ ಸೂತ್ರಗಳನ್ನು ಇಲ್ಲಿ ಅನ್ವಯಿಸುವುದು ಸಾಧ್ಯವಿಲ್ಲ. ‘ಗುರು’ ಇಲ್ಲದೆಯೇ ಈ ಎಲ್ಲ ಗುರಿಗಳನ್ನು ಸಾಧಿಸಬಹುದಾದರೂ ಸುಲಭವಲ್ಲ. ಎಂದೇ, ‘ಗುರು’ ಇದ್ದರೆ ಸುಲಭಸಾಧ್ಯ. ಅಂಥ ಗುರುಗಳನ್ನು ನಾನು ಹಾಲಿ ‘ಸಂತ’ರಲ್ಲಿ, ಮಠಾಧೀಶರಲ್ಲಿ ಕಂಡಿಲ್ಲ. ಆದ್ದರಿಂದ ಅವರೆಂದರೆ ನನಗೆ ತುಸು ಅಲರ್ಜಿ. ಎಂದೇ, ಅಂತಃವೀಕ್ಷಣೆಯ ನೆರವಿನಿಂದ ನಾನು ನನ್ನದೇ ಆದ ದಾರಿ ನಿರ್ಮಿಸಿಕೊಂಡು ಬಲು ನಿಧಾನವಾಗಿ ನಡೆಯುತ್ತಿದ್ದೇನೆ.

ಅಂದ ಹಾಗೆ, ಈ ಆತ್ಮ ಪ್ರವಚನದಿಂದ ಲಭ್ಯನಲ್ಲ, ಮೇಧಾಶಕ್ತಿಯಿಂದಲೂ ಶ್ರವಣದಿಂದಲೂ ಲಭ್ಯನಲ್ಲ’ ಅನ್ನುವುದು ನಿಜವಾದರೂ ಏನೂ ಮಾಡದೇ ಇರುವುದಕ್ಕಿಂತ ಈ ಕುರಿತು ಕೇಳುವುದು, ಓದುವುದು, ತರ್ಕಿಸುವುದು ಒಳ್ಳೆಯದು – ಮುಂದೊಂದು ದಿನ ಅಂತಃವೀಕ್ಷಣೆಯ ನೆರವಿನಿಂದ ಮನಃಶಾಂತಿ ಗಳಿಸಿ ‘ಅದರ’ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಮನಸ್ಥಿತಿ ಏರ್ಪಟ್ಟೀತು ಎಂಬುದಕ್ಕಾಗಿ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s