ಮನಸ್ಸಿನ ರಕ್ಷಣತಂತ್ರಗಳು

ಮೊದಲು ದೈಹಿಕ ಆರೋಗ್ಯವನ್ನೂ ತದನಂತರ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಲೋಸುಗ ಪ್ರತೀ ವ್ಯಕ್ತಿ ಕೆಲವು ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕಾದದ್ದು, ಅವನ್ನು ಪೂರೈಸಿಕೊಳ್ಳಲೋಸುಗ ಯುಕ್ತ ಗುರಿಗಳನ್ನು ಆಯ್ದು ಕಾರ್ಯೋನ್ಮುಖನಾಗಬೇಕಾದದ್ದು ( ನೋಡಿ: ಆವಶ್ಯಕತೆಗಳು), ಕಾರ್ಯಸಾಧನೆಯ ಹಾದಿಯಲ್ಲಿ ಸಾಗುತ್ತಿರುವಾಗ ಕೆಲವೊಮ್ಮೆ ನಿವಾರಿಸಲಾಗದ ಅಡೆತಡೆಗಳು ಎದುರಾದರೆ ಸಮಯೋಚಿತ ಹೊಂದಾಣಿಕೆಗಳನ್ನು ಮಾಡಿಕೊಂಡು ಗುರಿಸಾಧಿಸುವುದರ ಮುಖೇನ ಆವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕಾದದ್ದು(ನೋಡಿ: ಹೊಂದಾಣಿಕೆಗಳ (ಅಡ್ಜಸ್ಟ್ ಮೆಂಟ್ಸ್) ಸರಪಣಿ – ಜೀವನ)ಅನಿವಾರ್ಯ. ಎಷ್ಟೇ ಪ್ರಯತ್ನಿಸಿದರೂ ಆವಶ್ಯಕತೆ ಪೂರೈಸದೇ ಆಂತರಿಕ ತಳಮಳ (ತುಯ್ತ) ವ್ಯಕ್ತಿಯ ತುಯ್ತತಾಳಿಕೆಯ ಮೇಲ್ಮಿತಿಯನ್ನು ದಾಟುವ ಸನ್ನಿವೇಶ ಸೃಷ್ಟಿಯಾದರೆ ಏನಾಗುತ್ತದೆ? ‘ಆಶಾಭಂಗ’ವಾಗಿ ವ್ಯಕ್ತಿಗಳು ‘ಭಗ್ನಮನೋರಥ’ರು ಆಗುತ್ತಾರೆ. ಆಗುವ ಆಶಾಭಂಗ ಅಹಂ ಪರಿಕಲ್ಪನೆಗೆ ಅಥವ ಆತ್ಮಾಭಿಮಾನಕ್ಕೆ ಧಕ್ಕೆ ಉಂಟುಮಾಡಿದರೆ ಆಗುವ ಮನೋವೇದನೆ ಅಸಹನೀಯವಾಗಿರುತ್ತದೆ. ತತ್ಪರಿಣಾಮವಾಗಿ ಮನಸ್ಸು ರೋಗಗ್ರಸ್ಥವಾಗಲೂಬಹುದು. ಅರ್ಥಾತ್, ವ್ಯಕ್ತಿಗಳು ಮನೋ ರೋಗಿಗಳಾಗಬಹುದು. ಅಂತಾಗದಂತೆ ಮಾಡಲೋಸುಗ ಮನೋವೇದನೆಯ ತೀವ್ರತೆಯನ್ನು ತಗ್ಗಿಸಲೋಸುಗ ಮನಸ್ಸಿನ ಅಜಾಗೃತ ಭಾಗ ಕೆಲವು ತಂತ್ರಗಳನ್ನು ಉಪಯೋಗಿಸುತ್ತದೆ. ಇವೇ ಮನಸ್ಸಿನ ಸ್ವರಕ್ಷಣ ತಂತ್ರಗಳು. ಇವಕ್ಕೆ ಮಾನಸಿಕ ತಂತ್ರಗಳು, ಹೊಂದಾಣಿಕೆಯ ತಂತ್ರಗಳು ಎಂಬ ಹೆಸರುಗಳೂ ಇವೆ. ಜೀವನದಲ್ಲಿ ವಿಕಸಿಸುತ್ತಿರುವಾಗ ಆಗುವ ಅನುಭವಗಳು ಮತ್ತು ವ್ಯಕ್ತಿತ್ವ ಲಕ್ಷಣಗಳನ್ನು ಆಧರಿಸಿ ಅನೇಕ ರಕ್ಣಣತಂತ್ರಗಳ ಭಂಡಾರವೊಂದು ಪ್ರತೀ ವ್ಯಕ್ತಿಯಲ್ಲಿ ಸೃಷ್ಟಿಯಾಗುತ್ತದೆ. ಆಶಾಭಂಗ ಉಂಟುಮಾಡುವ ಮನೋವೇದನೆಯ ತೀವ್ರತೆಯನ್ನೂ ವ್ಯಕ್ತಿಗಳನ್ನು ಆಂತರಂಗದಲ್ಲಿ ಕಾಡುವ ತುಯ್ತದ ತೀವ್ರತೆಯನ್ನೂ ತಾತ್ಕಾಲಿಕವಾಗಿ ಕಮ್ಮಿ ಮಾಡುವುದರ ಮುಖೇನ ತಕ್ಷಣ ಭಾವಾತ್ಮಕ ಅಥವ ಮಾನಸಿಕ ಕ್ಷೋಭೆ ಉಂಟಾಗುವುದನ್ನು ಇವು ತಡೆಗಟ್ಟುತ್ತವೆ. ಇಂಥ ಸ್ಥಿತಿಗೆ ಕಾರಣವಾದ ಆವಶ್ಯಕತೆಯನ್ನು ಇವು ನಿಜವಾಗಿ ಪೂರೈಸುವುದಿಲ್ಲವಾದ್ದರಿಂದ ಮನೋವೇದನೆ ಮತ್ತು ಆಂತರಿಕ ತುಯ್ತಗಳ ತೀವ್ರತೆ ಕಮ್ಮಿ ಆದೊಡನೆ ಆವಶ್ಯಕತೆಯನ್ನು ಪೂರೈಸುವ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಲೇಬೇಕು. ಇಲ್ಲದೇ ಇದ್ದರೆ ಪುನಃ ಆಂತರಿಕ ತುಯ್ತದ ತೀವ್ರತೆ ಹೆಚ್ಚುತ್ತದೆ, ಆಶಾಭಂಗವಾಗುತ್ತದೆ —-, ವಿಷವರ್ತುಲವೊಂದು ಸೃಷ್ಟಿಯಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಆಶಾಭಂಗರಹಿತ ಜೀವನ ಅಸಾಧ್ಯ. ಎಂದೇ, ಅರಿವಿಲ್ಲದೆಯೇ ಮಾನಸಿಕ ರಕ್ಷಣತಂತ್ರಗಳನ್ನು ಉಪಯೋಗಿಸಬೇಕಾದದ್ದೂ ಅನಿವಾರ್ಯ. ಈ ತಂತ್ರಗಳನ್ನು ಉಪಯೋಗಿಸುವಂತೆ ಮನಸ್ಸಿನ ಜಾಗೃತಭಾಗವನ್ನು ಪ್ರಚೋದಿಸುವುದು ಅಜಾಗೃತ ಭಾಗವಾದ್ದರಿಂದ ‘ಇಂತು ಮಾಡಿದ್ದೇಕೆ’ ಎಂಬ ಪ್ರಶ್ನೆಗೆ ಉಪಯೋಗಿಸಿದವರು ಉತ್ತರ ನೀಡಲು ಸಾಧ್ಯವಿಲ್ಲ. ಯಾವುದೇ ಮಾನಸಿಕ ರಕ್ಷಣ ತಂತ್ರವನ್ನು ಪದೇಪದೇ ಉಪಯೋಗಿಸುವುದನ್ನು ಅಪಾಯದ ಮುನ್ಸೂಚನೆ ಎಂದು ಪರಿಗಣಿಸಬಹುದು.

ಸಾಮಾನ್ಯವಾಗಿ ಉಪಯೋಗಿಸುವ ಮನಸ್ಸಿನ ರಕ್ಷಣ ತಂತ್ರಗಳು ಇಂತಿವೆ:

ವರ್ಗ ೧. ಆಕ್ರಮಣ (ಆಗ್ರೆಷನ್) ತತ್ವಾಧಾರಿತ ರಕ್ಷಣ ತಂತ್ರಗಳು

ಆಕ್ರಮಣ ಪ್ರವೃತ್ತಿಯುಳ್ಳವರು ತಮ್ಮ ಗುರಿಸಾಧನೆಗೆ ಅಡ್ಡಿಯಾಗಿರುವ ವ್ಯಕ್ತಿ ಅಥವ ವಸ್ತುವಿನ ಮೇಲೆ ನೇರವಾಗಿ ಆಕ್ರಮಣ ಮಾಡಿ ಅಡ್ಡಿಯನ್ನು ನಾಶಪಡಿಸಿ ಅಥವ ನಿಷ್ಕ್ರಿಯಗೊಳಿಸಿ ಗುರಿ ಸಾಧಿಸಬಹುದು. ಆದರೆ ಬಹುತೇಕ ಸನ್ನಿವೇಶಗಳಲ್ಲಿ ಇದನ್ನು ಸಮಾಜ ಒಪ್ಪದೇ ಆಕ್ರಮಣಕಾರರನ್ನು ದಂಡಿಸಲೂ ಬಹುದು. ಅಷ್ಟೇ ಅಲ್ಲ, ಅನೇಕ ಸನ್ನಿವೇಶಗಳಲ್ಲಿ ಅಡ್ಡಿ ವ್ಯಕ್ತಿಗಿಂತ ಬಲಾಢ್ಯವಾದದ್ದಾಗಿರುವುದರಿಂದ ಅದರಮೇಲೆ ಆಕ್ರಮಣ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತಿಗಳು ಇರುತ್ತಾರೆ. ಎಂದೇ ಇಂಥ ಸನ್ನಿವೇಶಗಳಲ್ಲಿ ಆಕ್ರಮಣ ಪ್ರವೃತ್ತಿಯುಳ್ಳವರು ‘ಸ್ಥಾನಾಂತರಗೊಂಡ ಆಕ್ರಮಣ (ಡಿಸ್ಪ್ಲೇಸ್ಡ್ ಅಗ್ರೆಷನ್) ಅನ್ನುವ ಆಕ್ರಮಣ ತತ್ವಾಧಾರಿತ ರಕ್ಷಣತಂತ್ರ ಉಪಯೋಗಿಸುವ ಸಾಧ್ಯತೆ ಹೆಚ್ಚು. ಅಡ್ಡಿಯ ಮೇಲಿನ ಕೋಪವನ್ನು ಯಾವುದಾದರೂ ದುರ್ಬಲ ವಸ್ತುವಿನ ಅಥವ ತಮಗಿಂತ ತಮಗಿಂತ ದುರ್ಬಲವಾದ ಅಮಾಯಕ ವ್ಯಕ್ತಿಯ ಮೇಲೆ ಹರಿಯಬಿಡುವುದು ಇದರ ಪ್ರಧಾನ ಲಕ್ಷಣ. ಅದರ ಪ್ರಭೇದಗಳು ಇಂತಿವೆ

೧. ಬಲಿಪಶುವಾಗಿಸುವಿಕೆ (ಸ್ಕೇಪ್ ಗೋಟಿಂಗ್): ಮೇಲಧಿಕಾರಿಯ ಕೋಪಕ್ಕೆ ತುತ್ತಾದವರು ತಮ್ಮ ಅಧೀನದಲ್ಲಿರುವವರ ಮೇಲೆ ಅಥವ ತಮ್ಮ ಬಾಳಸಂಗಾತಿಯ, ಮಕ್ಕಳಮೇಲೆ ರೇಗುವುದು, ತಂದೆತಾಯಿಯರ ಮೇಲಿನ ಕೋಪವನ್ನು ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದರ ಮುಖೇನ ಮಕ್ಕಳು ತೀರಿಸಿಕೊಳ್ಳುವುದು, ಸರ್ಕಾರದ ಮೇಲಿನ ಕೋಪವನ್ನು ಬೀದಿದೀಪ ಒಡೆದು ತೀರಿಸಿಕೊಳ್ಳುವುದು, ಬಸ್ಸಿಗಾಗಿ ಕಾಯುತ್ತಿರುವಾಗ ಅದು ಸಮಯಕ್ಕೆ ಸರಿಯಾಗಿ ಬರದೇ ಇದ್ದಾಗ ಕೈಗೆ ಸಿಕ್ಕಿದ ಕಡ್ಡಿಯೊಂದನ್ನು ಚೂರುಚೂರು ಮಾಡುವುದು ಈ ಪ್ರಭೇದದ ಉದಾಹರಣೆಗಳು. ಈ ಉದಾಹರಣೆಗಳಲ್ಲಿ ‘ಬಲಿಪಶು’ ಆದದ್ದು ‘ದುರ್ಬಲ ವಸ್ತು’ ಅಥವ ‘ದುರ್ಬಲ, ಮುಗ್ಧ ವ್ಯಕ್ತಿ’ ಅನ್ನುವುದನ್ನು ಗಮನಿಸಿ.

೨. ಸ್ವತಂತ್ರವಾಗಿ ತೇಲುತ್ತಿರುವ (ಫ್ರೀ ಫ್ಲೋಟಿಂಗ್) ಕೋಪ: ಗುರಿ ಸಾಧನೆಗೆ ಅಡ್ಡಿಯಾದದ್ದರ ಸ್ವರೂಪವೇ ಅರ್ಥವಾಗದಿದ್ದಾಗ ಅಥವ ಅಮೂರ್ತ ಸ್ವರೂಪದ್ದಾಗಿರುವಾಗ ಈ ಪ್ರಭೇದವನ್ನು ಉಪಯೋಗಿಸುವ ಸಾಧ್ಯತೆ ಹೆಚ್ಚು. ತಮಗಿಂತ ಬಲಯುತವಾದದ್ದೇ ಅಥವ ದುರ್ಬಲವಾದದ್ದೇ ಎಂಬುದರ ಕುರಿತು ಆಲೋಚನೆ ಮಾಡದೆಯೇ ಎದುರು ಸಿಕ್ಕ ವಸ್ತು ಅಥವ ವ್ಯಕ್ತಿಗಳ ಮೇಲೆ ಕೋಪ ಹರಿಯಬಿಡುವುದು ಈ ಪ್ರಭೇದದ ಬಳಕೆದಾರನ ವೈಶಿಷ್ಟ್ಯ.

೩. ಆತ್ಮ ನಿಂದೆ (ಸೆಲ್ಫ್ ಬ್ಲೇಮಿಂಗ್): ‘ನಾನು ಪಡೆದುಕೊಂಡು ಬಂದದ್ದೇ ಇಷ್ಟು’, ನನಗೆ ಅದೃಷ್ಟವಿಲ್ಲ’, ‘ನನ್ನ ಹಣೇಬರೆಹವೇ ಇಷ್ಟು’, ‘ನಾನು ಬದುಕಿರುವುದಕ್ಕಿಂತ ಸಾಯುವುದೇ ಒಳಿತು’ — ಇಂತೆಲ್ಲ ತಮ್ಮನ್ನು ತಾವೇ ಹಳಿದುಕೊಳ್ಳುವುದು ಈ ಪ್ರಭೇದಕ್ಕೆ ಉದಾಹರಣೆಗಳು. ಅಡ್ಡಿಯ ಮೇಲಿನ ಕೋಪವನ್ನು ಆತ್ಮದ ಕಡೆಗೆ ಅರ್ಥಾತ್, ತಮ್ಮತ್ತವೇ ತಿರುಗಿಸಿಕೊಳ್ಳುವುದು ಈ ಪ್ರಭೇದದ ವಿಶಿಷ್ಟತೆ. ಆತ್ಮ ನಿಂದೆಯು ಆತ್ಮಹತ್ಯೆಯ ಬೆದರಿಕೆ ಹಾಕುವ ರೂಪವನ್ನೂ (ಗಮನಿಸಿ – ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ) ತಾಳಬಹುದು.

೪. ಹುಚ್ಚು ಆವೇಶ (ಬರ್ಸರ್ಕ್): ಕಾರಣ-ಪರಿಣಾಮ ವಿವೇಚನೆ ಇಲ್ಲದೆ ಎದುರು ಬಂದದ್ದೆಲ್ಲವನ್ನೂ ಎದುರು ಬಂದವರೆಲ್ಲರನ್ನೂ ಧ್ವಂಸ ಮಾಡತೊಡಗುವುದು ಈ ಪ್ರಭೇದದ ವಿಶಿಷ್ಟತೆ. ಈ ತಂತ್ರದ ಬಳಕೆದಾರನನ್ನು ಸಮಾಜ ದಂಡಿಸುವ ಸಾಧ್ಯತೆ ಹೆಚ್ಚು.

ವರ್ಗ ೨. ಪಲಾಯನ (ರನ್ನಿಂಗ್ ಅವೇ) ತತ್ವಾಧಾರಿತ ರಕ್ಷಣ ತಂತ್ರಗಳು

ತುಸು ಪುಕ್ಕಲು ಸ್ವಭಾವದವರು ತುಯ್ತವನ್ನು ಉಂಟುಮಾಡುವ ಸನ್ನಿವೇಶದಿಂದ ಪಲಾಯನಗೈದು ಹೊಸ ಸನ್ನಿವೇಶದಲ್ಲಿ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಬಹುದು. ಸಮಾಜ ಇಂಥವರನ್ನು ‘ಹೇಡಿ’ ಎಂದು ಹಂಗಿಸುವ ಸಾಧ್ಯತೆ ಇರುವುದರಿಂದ ‘ಓಡಿ ಹೋಗಲೂ ಸಾಧ್ಯವಿಲ್ಲ, ಅಲ್ಲಿಯೇ ಇರಲೂ ಸಾಧ್ಯವಿಲ್ಲ’ ಅನ್ನುವ ಪರಿಸ್ಥಿತಿ ಏರ್ಪಟ್ಟು ತುಯ್ತದ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ಇಂಥ ಸನ್ನಿವೇಶದಲ್ಲಿ ಅಜಾಗೃತ ಮನಸ್ಸು ಸೃಷ್ಟಿಸುವ ‘ಚಿಪ್ಪಿ’ನೊಳಕ್ಕೆ ಮಾನಸಿಕವಾಗಿ ನುಸುಳಿಕೊಳ್ಳುವ ಅರ್ಥಾತ್, ಸನ್ನಿವೇಶದಿಂದ ‘ಮಾನಸಿಕವಾಗಿ ಪಲಾಯನಗೈಯುವ’ ರಕ್ಷಣತಂತ್ರದ ಯಾವುದಾದರೊಂದು ಪ್ರಭೇದವನ್ನು ಉಪಯೋಗಿಸಬಹುದು. ಈ ವರ್ಗದ ರಕ್ಷಣ ತಂತ್ರದ ಕೆಲವು ಪ್ರಭೇದಗಳು ಇಂತಿವೆ:

೧. ಅನೈಚ್ಛಿಕ ದಮನ (ರಿಪ್ರೆಷನ್): ತೀವ್ರ ವೇದನೆ, ಅಸಮಾಧಾನ, ಅಪರಾಧಿ ಮನೋಭಾವ, ‘ಪಾಪಿ ಪ್ರಜ್ಞೆ’ ಉಂಟುಮಾಡುವ ಅನುಭವಗಳು ಅಥವ ಆಲೋಚನೆಗಳು ವ್ಯಕ್ತಿಗೆ ಅರಿವಿಲ್ಲದೆಯೇ ಮನಸ್ಸಿನ ಜಾಗೃತ ಭಾಗದಿಂದ ಅಜಾಗೃತ ಭಾಗಕ್ಕೆ ರವಾನೆಯಾಗುತ್ತವೆ. ತತ್ಪರಿಣಾಮವಾಗಿ ವ್ಯಕ್ತಿಗಳು ಅವನ್ನು ‘ಮರೆಯುತ್ತಾರೆ’. ಇಂತು ‘ಮರೆತದ್ದನ್ನು’ ಪುನಃ ಜ್ಞಾಪಿಸಿಕೊಳ್ಳುವುದು ಬಲು ಕಷ್ಟ. ಈ ತೆರನಾದ ಮರೆಯುವಿಕೆಯ ಕಾರಣ ಮತ್ತು ಪೂರ್ಣತೆಯು ‘ಪ್ರಯತ್ನಪೂರ್ವಕ ದಮನ (ಅಥವ ಕಷ್ಟಪಟ್ಟು ಮರೆಯುವುದು)’ (ಸಪ್ರೆಷನ್) ಮತ್ತು ಸಾಮಾನ್ಯ ಮರೆಯುವಿಕೆಗಳಿಂದ ಕಾರಣ ಮತ್ತು ಪೂರ್ಣತೆಯಿಂದ ಭಿನ್ನವಾಗಿರುತ್ತದೆ ಎಂಬುದನ್ನು ಗಮನಿಸಿ.

೨. ಹಗಲುಗನಸು ಕಾಣುವಿಕೆ (ಡೇ ಡ್ರೀಮಿಂಗ್): ಎಚ್ಚರವಾಗಿರುವಾಗಲೇ ಮನಸ್ಸಿನಲ್ಲಿ ಭ್ರಮಾಲೋಕವೊಂದನ್ನು ಸೃಷ್ಟಿಸಿ ಅಲ್ಲಿ ಅತೃಪ್ತ ಕಾಮನೆಗಳನ್ನು ತೃಪ್ತಿಗೊಳಿಸುವ ರಕ್ಷಣತಂತ್ರದ ಪ್ರಭೇದವಿದು. ಜೀವಿತಾವಧಿಯಲ್ಲಿ ಹದಿಹರೆಯದಲ್ಲಿ, ಬಾಲ್ಯದಲ್ಲಿ ಇದನ್ನು ತುಸು ಹೆಚ್ಚು ಉಪಯೋಗಿಸುವುದು ಸ್ವಾಭಾವಿಕ.

೩. ಹಿಮ್ಮರಳುವಿಕೆ (ನಿವರ್ತನ, ಹಿಂಚಲನೆ, ರಿಗ್ರೆಷನ್): ವ್ಯಕ್ತಿಗಳು ತಮಗೆ ಅರಿವಿಲ್ಲದೆಯೇ ತಮ್ಮ ಜೀವನದ ಅತ್ಯಂತ ಸುರಕ್ಷಿತ ಕಾಲಕ್ಕೆ (ಬಹುಮಂದಿಗೆ ಜೀವನದ ಮೊದಲ ನಾಲ್ಕು ವರ್ಷಗಳು ಇಂಥ ಕಾಲ) ಮಾನಸಿಕವಾಗಿ ಹಿಂದಿರುಗಿ ಆ ಅವಧಿಯಲ್ಲಿ ಗುರಿಸಾಧನೆಗಾಗಿ ಉಪಯೋಗಿಸುತ್ತಿದ್ದ ತಂತ್ರಗಳನ್ನು (ಉದಾ: ಅಳುವಿಕೆ, ಅಣಕಿಸುವಿಕೆ, ಹಠಮಾಡುವಿಕೆ, ಮುನಿಸಿಕೊಳ್ಳುವಿಕೆ, ಮೊದ್ದುಮೊದ್ದಾಗಿ ಮಾತನಾಡುವಿಕೆ ಇತ್ಯಾದಿ) ಉಪಯೋಗಿಸುವುದು.

ವರ್ಗ ೩. ಒಪ್ಪಂದ ಮಾಡಿಕೊಳ್ಳುವಿಕೆ (ಕಾಂಪ್ರಮೈಸ್) ತತ್ವಾಧಾರಿತ ರಕ್ಷಣ ತಂತ್ರಗಳು

ತುಸು ತ್ಯಾಗ ಮಾಡಬೇಕು, ತತ್ಪರಿಣಾಮವಾಗಿ ನಮಗೆ ಬೇಕಾದದ್ದನ್ನು ಗಳಿಸಬೇಕು – ಇದು ಒಪ್ಪಂದದ ತತ್ವ. ಈ ತತ್ವಾನುಸರಣೆಗೆ ಸಮಾಜದ ಆಕ್ಷೇಪಣೆ ಇಲ್ಲವಾದರೂ ಕೆಲವು ಬಾರಿ ಒಪ್ಪಂದದ ಪರಿಣಾಮವಾಗಿ ಅಹಂ ಪಿಕಲ್ಪನೆಗೆ ಆತ್ಮಾಭಿಮಾನಕ್ಕೆ ಧಕ್ಕೆ ಉಂಟಾಗಬಹುದು. ಇಂಥ ಸನ್ನಿವೇಶಗಳಲ್ಲಿ ಒಪ್ಪಂದ ಮಾಡಿಕೊಳ್ಳುವಿಕೆ ತತ್ವಾಧಾರಿತ ರಕ್ಷಣ ತಂತ್ರಗಳು ಕ್ರಿಯಾಶೀಲವಾಗುತ್ತವೆ. ಈ ವರ್ಗದ ರಕ್ಷಣ ತಂತ್ರಗಳ ಪೈಕಿ ಪ್ರಮುಖವಾದವು ಇವು:

೧. ಉದಾತ್ತೀಕರಣ (ಸಬ್ಲಿಮೇಶನ್) ಮತ್ತು ಪ್ರತಿಸ್ಥಾಪನೆ (ರಿಪ್ಲೇಸ್ ಮೆಂಟ್): ಗುರಿ ಅಥವ ಗುರಿಸಾಧನೆಯ ವಿಧಾನ ಸಮಾಜ ಒಪ್ಪುವಂಥದ್ದು ಆಗಿರದಿದ್ದರೆ ಅಥವ ‘ಅಪರಾಧಿ ಪ್ರಜ್ಞೆ’ ಸೃಷ್ಟಿಸುವಂಥದ್ದು ಆಗಿದ್ದರೆ ವ್ಯಕ್ತಿಗಳು ಅರಿವಿಲ್ಲದೆಯೇ ಬೇರೆ ಒಂದು ಗುರಿಯನ್ನು ಅಥವ ಗುರಿಸಾಧನೆಯ ಬೇರೆ ಒಂದು ವಿಧಾನವನ್ನು ಆಯ್ದು ಪರೋಕ್ಷವಾಗಿಯಾದರೂ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಂತೆ ಮಾಡುವ ತಂತ್ರಗಳು ಇವು. ಆಯ್ದ ಪರ್ಯಾಯ ಗುರಿ ಅಥವ ವಿಧಾನ ಸಮಾಜ ಒಪ್ಪುವಂಥದ್ದು ಆಗಿದ್ದರೆ ಅದು ಉದಾತ್ತೀಕರಣ ರಕ್ಷಣತಂತ್ರ. ಸಮಾಜದ ಒಪ್ಪಿಗೆ ಮತ್ತು ಸೃಷ್ಟಿಯಾಗುವ ಅಪರಾಧಿ ಪ್ರಜ್ಞೆಗೆ ಸಂಬಂಧಿಸಿದಂತೆ ಆಯ್ದ ಪರ್ಯಾಯದ ಗುಣಮಟ್ಟ ಹೆಚ್ಚುಕಮ್ಮಿ ಮೊದಲಿನದ್ದರಷ್ಟೇ ಆಗಿದ್ದರೆ ಅದು ಪ್ರತಿಸ್ಥಾಪನೆ ರಕ್ಷಣ ತಂತ್ರ. ಲೈಂಗಿಕ ಬಯಕೆಗಳನ್ನು ಶೃಂಗಾರ ರಸ ಪ್ರಧಾನ ಸಾಹಿತ್ಯ ರಚನೆ ಅಥವ ವಾಚನ, ತೈಲಚಿತ್ರ ರಚನೆ ಅಥವ ನೋಡುವಿಕೆ ಇವೇ ಮೊದಲಾದವುಗಳ ಮುಖೇನ, ಆಕ್ರಮಣ ಪ್ರವೃತ್ತಿಯನ್ನು ಕುಸ್ತಿ ಕಲಿಕೆಯ ಮುಖೇನ ತಣಿಸಲು ಪ್ರಯತ್ನಿಸುವುದು ಉದಾತ್ತೀಕರಣಕ್ಕೂ ಅಶ್ಲೀಲ ಸಾಹಿತ್ಯ ರಚನೆ ಅಥವ ವಾಚನ, ಅಶ್ಲೀಲಚಿತ್ರ (ಬ್ಲೂ ಫಿಲ್ಮ್) ರಚನೆ ಅಥವ ನೋಡುವಿಕೆ ಆಕ್ರಮಣ ಪ್ರವೃತ್ತಿಯನ್ನು ಅಮಾಯಕರನ್ನು ಶೋಷಿಸುವುದರ ಮುಖೇನ ತಣಿಸಲು ಪ್ರಯತ್ನಿಸುವುದು ಪ್ರತಿಸ್ಥಾಪನೆಗೂ ಉದಾಹರಣೆಗಳು.

೨. ಪ್ರಕ್ಷೇಪಣೆ (ಪ್ರೊಜೆಕ್ಷನ್)

‘ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ’ ಎಂಬ ಜಾಣ್ನುಡಿ ಈ ರಕ್ಷಣ ತಂತ್ರದ ತತ್ವವನ್ನು ಬಿಂಬಿಸುತ್ತದೆ. ತಮ್ಮ ಗುಣಗಳನ್ನು ತಮಗೆ ಅರಿವಿಲ್ಲದೆ ಇತರರ ಮೇಲೆ ಪ್ರಕ್ಷೇಪಿಸಿ ಅವರಲ್ಲಿ ಅವನ್ನು ಕಾಣುವುದರ ಮೂಲಕ ಮೂಲಕ ಸಮಾಜ ಮೆಚ್ಚದ ಭಾವನೆ, ಆಲೋಚನೆ, ಗುಣ ಇವೇ ಮೊದಲಾದವು ಉಳ್ಳವರು ‘ಎಲ್ಲರಂತೆ ತಾವು ಇದ್ದೇವೆ’ ಎಂದು ತಮ್ಮನ್ನು ತಾವೇ ನಂಬಿಸಿಕೊಂಡು ‘ಅಪರಾಧಿ ಮನೋಭಾವ’ದ ತೀವ್ರತೆಯನ್ನು ಕಮ್ಮಿ ಮಾಡಿಕೊಳ್ಳುತ್ತಾರೆ. ‘ಎಲ್ಲರೂ ಸ್ವಾರ್ಥಿಗಳು’ ಎಂದು ಮಹಾಸ್ವಾರ್ಥಿ ಘೋಷಿಸುವುದು, ‘ಲಂಚ ತೆಗೆದುಕೊಳ್ಳದವರು ಯಾರಿದ್ದಾರೆ ನಮ್ಮ ದೇಶದಲ್ಲಿ’ ಎಂದು ಲಂಚಕೋರ ಕೇಳುವುದು ಇದಕ್ಕೆ ಉದಾಹರಣೆಗಳು.

೩. ಪರಿಹಾರ (ಕಾಂಪೆನ್ಸೇಷನ್): ಒಂದು ಚಟುವಟಿಕೆಯಲ್ಲಿ ನಿರಂತರವಾಗಿ ಸೋಲುವುದರಿಂದ ಉತ್ಪತ್ತಿ ಆಗುವ ಕೀಳರಿಮೆಯ ನೋವನ್ನು ನಿವಾರಿಸಲೋಸುಗ ತಾವು ಯಶಸ್ವಿಯಾಗಬಲ್ಲ ಬೇರೆ ಯಾವುದೋ ಚಟುವಟಿಕೆಯಲ್ಲಿ ವ್ಯಕ್ತಿಗಳು ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ರಕ್ಷಣ ತಂತ್ರ ಇದು. ಈ ರಕ್ಷಣತಂತ್ರದ ಬಳಕೆದಾರರು ತಮ್ಮಲ್ಲಿ ಇರುವ ಸಾಮರ್ಥ್ಯದ ಪೂರ್ಣ ಲಾಭ ಪಡೆದು ಸಮಾಜದ ಮನ್ನಣೆ ಗಳಿಸುತ್ತಾರಾದರೂ ತಮ್ಮ ದೌರ್ಬಲ್ಯವನ್ನು ನಿಯಂತ್ರಿಸುವುದರಲ್ಲಿ ಅಸಮರ್ಥರಾಗಿರುತ್ತಾರೆ. ಔಪಚಾರಿಕ ಶಿಕ್ಷಣದಲ್ಲಿ ಹಿಂದುಳಿದವರು ಯಾವುದಾದರೊಂದು ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಯತ್ನಿಸುವುದು, ಅಂಧರ ಪೈಕಿ ಕೆಲವರು ತಮ್ಮ ಕಂಠಶ್ರೀಯ ಲಾಭಪಡೆದು ಸಾಮಾಜಿಕ ಮನ್ನಣೆ ಗಳಿಸುವುದು ಮುಂತಾದವು ಉದಾಹರಣೆಗಳು. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಮಾಜ ಮೆಚ್ಚದ ಚಟಗಳಿಗೆ ಬಲಿಯಾದವರ ಪೈಕಿ ಕೆಲವರು ಲಲಿತಕಲೆಗಳ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಜನಮನ್ನಣೆ ಗಳಿಸಿರುವುದೂ ಈ ವರ್ಗದ ರಕ್ಷಣತಂತ್ರ ಪರಿಣಾಮ ಎಂಬುದು ನನ್ನ ಗುಮಾನಿ.

೪. ತರ್ಕಸಮ್ಮತವಾಗಿಸುವಿಕೆ (ರೇಶನಲೈಸೇಷನ್): ಆತ್ಮಗೌರವಕ್ಕೆ ಧಕ್ಕೆ ಉಂಟುಮಾಟುವ ವರ್ತನೆಗಳನ್ನು, ಸೋಲುಗಳನ್ನು ತಮಗೆ ಅರಿವಿಲ್ಲದೆಯೇ ತರ್ಕಸಮ್ಮತ ವಾದಗಳಿಂದ ಸಮರ್ಥಿಸಿಕೊಳ್ಳುವಂತೆ ಮಾಡುವ ರಕ್ಷಣ ತಂತ್ರ ಇದು. ‘ಹುಳಿ ದ್ರಾಕ್ಷಿ’ ಮನೋಭಾವ (ನರಿ ಮತ್ತು ದ್ರಾಕ್ಷಿಯ ಕತೆ ಜ್ಞಾಪಿಸಿಕೊಳ್ಳಿ) ಮತ್ತು ‘ಸಿಹಿ ನಿಂಬೆ’ ಮನೋಭಾವ (ನಾನು ತಿಂದ ನಿಂಬೆ ಹಣ್ಣು ಬಲು ಸಿಹಿಯಾಗಿತ್ತು ಅನ್ನುವುದು) ಈ ರಕ್ಷಣ ತಂತ್ರದ ಪರಿಣಾಮಗಳು.

೫. ಶುದ್ಧೀಕರಣ (ಕ್ಲೆನ್ಸಿಂಗ್): ಮಾಡಬಾರದ್ದನ್ನು ಮಾಡಿದ್ದೇವೆ ಎಂಬ ‘ಪಾಪ ಪ್ರಜ್ಞೆ’ಪೀಡಿತರು ‘ಧಾರ್ಮಿಕ ಅಥವ ಮತೀಯ’ ಆಚರಣೆಗಳ ಮೂಲಕ (ಪೂಜೆ, ದಾನ, ವ್ರತ ಇತ್ಯಾದಿ) ತಮ್ಮಲ್ಲಿ ಇರುವ ಅಪರಾಧಿ ಮನೋಭಾವ ಉಂಟುಮಾಡುವ ಮನೋವೇದನೆಯ ತೀವ್ರತೆಯನ್ನು ನಿವಾರಿಸಲು ಅಥವ ಕಮ್ಮಿ ಮಾಡಲು ಯತ್ನಸುವುದು ಈ ರಕ್ಷಣ ತಂತ್ರದ ಪರಿಣಾಮ.

೬. ತಾದಾತ್ಮ್ಯಗೊಳಿಸುವಿಕೆ (ಐಡೆಂಟಿಫಿಕೇಶನ್): ತಾವು ಸಾಧಿಸಿಬೇಕೆಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಅದನ್ನು ಸಾಧಿಸಿದವರ ನಿಕಟ ಸ್ನೇಹ ಸಂಪಾದಿಸಿ ಸದಾ ಅವರ ಒಡನಾಟದಲ್ಲಿಯೇ ಇರಲೂ ಅವರ ಯಶಸ್ಸಿಗೆ ತಮ್ಮ ಕೊಡುಗೆಯೂ ಇದೆ ಎಂದು ಬಿಂಬಿಸಲೂ ಪ್ರಯತ್ನಿಸುವುದು ಅಥವ ಅವೆರ ನಡೆನುಡಿ, ಉಡುಗೆತೊಡುಗೆ, ಆಚಾರವಿಚಾರಗಳನ್ನು ಯಥಾವತ್ತಾಗಿ ಅನುಕರಿಸುವುದರ ಮೂಲಕ ಅವರ ವ್ಯಕ್ತಿತ್ವದ ಪ್ರತಿಕೃತಿ ತಾವಾಗಲು ಪ್ರಯತ್ನಿಸುವುದು ಈ ರಕ್ಷಣ ತಂತ್ರದ ಪರಿಣಾಮ.

ಆಧುನಿಕ ಜಗತ್ತಿನಲ್ಲಿ ಆಶಾಭಂಗರಹಿತ ಜೀವನ ಅಸಾಧ್ಯ. ಎಂದೇ, ಅರಿವಿಲ್ಲದೆಯೇ ಮಾನಸಿಕ ರಕ್ಷಣತಂತ್ರಗಳ ಪೈಕಿ ಕೆಲವನ್ನು ಪ್ರತಿಯೊಬ್ಬರೂ ಉಪಯೋಗಿಸರುತ್ತೇವೆ. ಇದು ಅಪಾಯಕಾರಿಯೂ ಅಲ್ಲ. ರಕ್ಷಣತಂತ್ರದ ಬಳಕೆಯಿಂದ ಆಂತರಿಕ ತುಯ್ತದ ತೀವ್ರತೆ ಕಮ್ಮಿ ಆದ ತಕ್ಷಣ ಮೂಲ ಸಮಸ್ಯೆಯನ್ನು ಗುರುತಿಸಿ ಕಾರ್ಯಸಾಧುವಾದ ಪರಿಹಾರೋಪಾಯಗಳನ್ನು ಹುಡುಕಲು ಪ್ರಯತ್ನಿಸದಿರುವುದು ಅಪಾಯಕಾರಿ

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

1 Response to ಮನಸ್ಸಿನ ರಕ್ಷಣತಂತ್ರಗಳು

  1. Anamika ಹೇಳುತ್ತಾರೆ:

    ಅಬ್ಬಾಬ್ಬಾ ಸರ್, ಎಷ್ಟೊಂದು ಗೊಂದಲ ಗೊಜಲು ನಮ್ಮ ಮನದಲ್ಲಿ! ಒಳ್ಳೆಯ ಲೇಖನ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s