ಜ್ಞಾನೋದಯ

ವ್ಯಕ್ತಿಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಅನಿರೀಕ್ಷಿತ ಮುಹೂರ್ತಗಳಲ್ಲಿ ಅಯಾಚಿತವಾಗಿಯೋ ಎಂಬಂತೆ ಆ ವ್ಯಕ್ತಿಯ ಮನಃಪಟಲದಲ್ಲಿ ಪರಿಹಾರಗಳು ಇದ್ದಕ್ಕಿದ್ದಂತೆ ಸ್ಫುರಿಸುವ ವಿದ್ಯಮಾನವೇ ಅವನ ಮಟ್ಟಿಗೆ ‘ಜ್ಞಾನೋದಯ’ ಎಂಬುದು ನನ್ನ ಅಂಬೋಣ. ‘ಜ್ಞಾನ’ ಅಂದರೇನು ಎಂಬುದರ ಕುರಿತು ದಾರ್ಶನಿಕ ದೃಷ್ಟಿಕೋನದಿಂದ ವ್ಯಾಖ್ಯಾನಿಸಲು ಪ್ರಯತ್ನಿಸದಿದದ್ದರೆ ನನ್ನ ಅಂಬೋಣವನ್ನು ನೀವೂ ಒಪ್ಪುತ್ತೀರಿ ಎಂಬ ನಂಬಿಕೆ ನನಗಿದೆ. ತೀವ್ರವಾಗಿ ಕಾಡುತ್ತಿದ್ದ ಯಾವುದೋ ಒಂದು ಸಮಸ್ಯೆಯನ್ನು ಪರಿಹರಿಸುವುದು ಹೇಗೆಂದು ನಿಮ್ಮ ಎಲ್ಲ ಸಂಚಿತ ಜ್ಞಾನ ಮತ್ತು ಅನುಭವಗಳನ್ನು ಕ್ರೋಢೀಕರಿಸಿ ಸುದೀರ್ಘ ಕಾಲ ಹೆಣಗಾಡುತ್ತಿದ್ದವರು ಪರಿಹರಿಸುವ ಮಾರ್ಗೋಪಾಯ ತೋಚದೆ ನಿರಾಸೆಯ ಅಂಚನ್ನು ತಲುಪಿ ಅದರ ಬಗ್ಗೆ ಆಲೋಚಿಸುವುದನ್ನೇ ತಾತ್ಕಾಲಿಕವಾಗಿ ನಿಲ್ಲಿಸಿ ಬೇರೇನನ್ನೋ ಮಾಡುತ್ತಿದ್ದಾಗ ಪರಿಹಾರೋಪಾಯ ಇದ್ದಕ್ಕಿದ್ದಂತೆ ಮನಃಪಟಲದಲ್ಲಿ ಸ್ಫುರಿಸಿದ ಅನುಭವ ನಿಮಗಾಗಿ ಕ್ಷಣಕಾಲ ಪುಳಕಿತರಾಗಿದ್ದರೆ ಅದೇ ‘ಜ್ಞಾನೋದಯ’ದ ಅನುಭವ. ಈ ತೆರನಾದ ‘ಜ್ಞಾನೋದಯ’ದ ಅನುಭವ ನಿಮಗೂ ಆಗಿರುವ ಸಾಧ್ಯತೆ ಇದೆ. ನಿಮಗಾದ ಜ್ಞಾನೋದಯದ ಲಾಭ ನಿಮಗೆ ಮಾತ್ರ ಆಯಿತು ಅಂದ ಮಾತ್ರಕ್ಕೆ  ಅದು ಜ್ಞಾನೋದಯವಲ್ಲ ಅನ್ನಕೂಡದು. ಯಾರಿಗೆ ಎಷ್ಟು ಲಾಭವಾಯಿತು ಅನ್ನುವುದಕ್ಕೆ ಪ್ರಾಧಾನ್ಯ ನೀಡದೆ ಪ್ರಕ್ರಿಯೆಗೆ ಪ್ರಾಧಾನ್ಯ ನೀಡಬೇಕು.

ಈ ಸನ್ನಿವೇಶಗಳಲ್ಲಿ ವಾಸ್ತವವಾಗಿ ನಡೆದದ್ದೇನು? ‘ಉದಯ’ ಅಂದರೇನು? ಉದಯಿಸಿದ ‘ಜ್ಞಾನ’ ಅದಕ್ಕೂ ಮುನ್ನ ಎಲ್ಲಿತ್ತು? ಉದಯಿಸಲು ಕಾರಣ ಏನು? ಇವೇ ಮೊದಲಾದ ವಿಷಯಗಳ ಕುರಿತಾದ ನನ್ನ ಚಿಂತನೆಯನ್ನು ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ.

ಮನೋವಿಜ್ಞಾನದ ಜೆಸ್ಟಾಲ್ಟ್ ಪಂಥದ ಹುಟ್ಟಿಗೆ ಕಾರಣರಾದವರ ಪೈಕಿ ಒಬ್ಬನಾದ ಜರ್ಮನಿಯ ವೂಲ್ಫ್ ಗ್ಯಾಂಗ್ ಕಾಯ್ಲರ್ (೧೮೮೭-೧೯೬೭) ಸಮಸ್ಯೆ ಪರಿಹರಿಸುವಿಕೆ ಸಂಬಂಧಿಸಿದಂತೆ ಚಿಂಪಾಂಜಿಗಳನ್ನು ಪ್ರಯೋಗಪಶುಗಳಾಗಿ ಉಪಯೋಗಿಸಿಕೊಂಡು ಅನೇಕ ಪ್ರಯೋಗಗಳನ್ನು ಮಾಡಿದ. ಅವುಗಳ ಪೈಕಿ ಒಂದು ಇಂತಿದೆ: ಚತ್ತುವಿಗೆ ಬಾಳೆಯಹಣ್ಣಿನ ಚಿಪ್ಪೊಂದನ್ನು ನೇತುಹಾಕಿದ್ದ ಗೂಡಿನೊಳಕ್ಕೆ ಚಿಂಪಾಂಜಿಯೊಂದನ್ನು ಬಿಟ್ಟು ಅದು ಏನು ಮಾಡುತ್ತದೆಂಬುದನ್ನು ವೀಕ್ಷಿಸಿದ. ಬಾಳೆಯಹಣ್ಣನ್ನು ಗಿಟ್ಟಿಸಿಕೊಳ್ಳಲೋಸುಗ ಚಿಂಪಾಜಿ ಅನೇಕಬಾರಿ ಜಿಗಿಯಿತು. ಎಷ್ಟುಬಾರಿ ನೆಗೆದರೂ ಬಾಳೆಯಹಣ್ಣು ಸಿಕ್ಕದಿದ್ದಾಗ ಆಶಾಭಂಗವಾಗಿ ಜಿಗುಪ್ಸೆಗೊಂಡೋ ಕೋಪಗೊಂಡೋ ದೂರಹೋಗಿ ಕುಳಿತು ಬಾಳೆಯಹಣ್ಣನ್ನು ನೋಡುತ್ತಿತ್ತು. ಆ ಸನ್ನಿವೇಶದಲ್ಲಿ ಗೂಡಿನೊಳಗೆ ಬೇಕಾಬಿಟ್ಟಿಯಾಗಿ ಬಿದ್ದಿದ್ದ ಮರದ ಡಬ್ಬಿಗಳನ್ನೂ ಬಾಳೆಯಹಣ್ಣನ್ನೂ ಪರ್ಯಾಯವಾಗಿ ನೋಡಲಾರಂಭಿಸಿತು. ತುಸು ಸಮಯಾನಂತರ ಏನೋ ಹೊಳೆದಂತೆ ದಿಢೀರನೆ ಎದ್ದು ಆ ಪೆಟ್ಟಿಗೆಗಳನ್ನು ಒಂದರಮೇಲೊಂದರಂತೆ ಪೇರಿಸಿ ಮೇಲೇರಿ ಬಾಳೆಯಹಣ್ಣನ್ನು ಗಿಟ್ಟಿಸಿಕೊಂಡಿತು. ಇನ್ನೊಂದು ಪ್ರಯೋಗದಲ್ಲಿ ಮತ್ತೊಂದು ಚಿಂಪಾಜಿ ಗೂಡಿನ ಹೊರಗೆ ಕೈಗೆಟುಕದಷ್ಟು ದೂರದಲ್ಲಿದ್ದ ಬಾಳೆಯಹಣ್ಣನ್ನು ಹೆಚ್ಚುಕಮ್ಮಿ ಇದೇ ರೀತಿಯ ಆರಂಭಿಕ ವರ್ತನೆಯ ಬಳಿಕ ಗೂಡಿನೊಳಗೆ ಬೇಕಾಬಿಟ್ಟಿಯಾಗಿ ಬಿದ್ದಿದ್ದ ಕೊಳವೆಗಳನ್ನು ಒಂದರೊಳಗೊಂದರಂತೆ ಜೋಡಿಸಿ ಅದರ ನೆರವಿನಿಂದ ಬಾಳೆಯ ಹಣ್ಣನ್ನು ಎಳೆದು ಗಿಟ್ಟಿಸಿಕೊಂಡಿತು.

untitled

ಈ ಪ್ರಯೋಗಗಳಿಂದ ನಾವು ಕಲಿಯಬಹುದಾದದ್ದು ಏನು? ವಿಶ್ಲೇಷಿಸೋಣ.

೧. ಚಿಂಪಾಂಜಿಗೆ ತಾನು ಪರಿಹರಿಸಲೇಬೇಕಾದ ಸಮಸ್ಯಾಸನ್ನಿವೇಶವೊಂದು ಎದುರಾಯಿತು.

೨. ಸಮಸ್ಯೆಯನ್ನು ಪರಿಹರಿಸಲು ತನಗೆ ತಿಳಿದಿದ್ದ ತಂತ್ರಗಳನ್ನು ಪ್ರಯೋಗಿಸಿತು.

೩. ತನಗೆ ತಿಳಿದಿದ್ದ ತಂತ್ರಗಳಿಂದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲವೆಂಬ ಅರಿವು ಮೂಡಿದಾಗ ಪ್ರಯತ್ನಿಸುವುದನ್ನು ಬಿಟ್ಟು ಒಂದೆಡೆ ಕುಳಿತು ಸಮಸ್ಯೆಯ ಕುರಿತು ಆಲೋಚಿಸತೊಡಗಿತು.

೪. ಆಲೋಚಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸಮಸ್ಯೆಗೆ ಪರಿಹಾರ ಹೊಳೆದು ಅದನ್ನು ಕಾರ್ಯರೂಪಕ್ಕೆ ತಂದು ಸಮಸ್ಯೆ ಪರಿಹರಿಸಿಕೊಂಡಿತು.

ಚಿಂಪಾಂಜಿಗೆ ಪರಿಹಾರ ಇದ್ದಕ್ಕಿದ್ದಂತೆ ಹೊಳೆದದ್ದು ಏಕೆ? ಎಂಬುದನ್ನು ವೀಕ್ಷಿಸಲು ಸಾಧ್ಯವಾಗದಿದ್ದರೂ ಇಂತು ಅನುಮಾನಿಸಬಹುದು:

೧. ಏಕಾಗ್ರಚಿತ್ತದಿಂದ ಮನಸ್ಸಿನಲ್ಲಿಯೇ ಸಮಸ್ಯಾ ಸನ್ನಿವೇಶವನ್ನು ಚಿಂಪಾಂಜಿ ವಿಶ್ಲೇಷಿಸಿ ಅದರ ಘಟಕಗಳನ್ನು ಗುರುತಿಸಿರಬೇಕು.

೨. ಇಂತು ಗುರುತಿಸಿದ ಘಟಕಗಳ ನಡುವೆ ಇರಬಹುದಾದ ಸಂಬಂಧವನ್ನು ಊಹಿಸಲು ಪ್ರಯತ್ನಿಸಿರಬೇಕು.

೩. ತದನಂತರ ಆ ಘಟಕಗಳನ್ನು ಎಂತು ಪುನರ್ ಸಂಘಟಿಸಿದರೆ ಸಮಸ್ಯೆ ಪರಿಹಾರವಾದೀತು ಎಂಬುದರ ಕುರಿತು ಆಲೋಚಿಸಿರಬೇಕು

೪. ಆ ವೇಳೆಯಲ್ಲಿ ಪರಿಹಾರ ಅದಕ್ಕೆ ಹೊಳೆದಿರಬೇಕು, ಅರ್ಥಾತ್ ಜ್ಞಾನೋದಯವಾಗಿರಬೇಕು.

(ಆಧುನಿಕ ಮನೋವಿಜ್ಞಾನದಲ್ಲಿ ಇದಕ್ಕೆ ಒಳನೋಟದಿಂದ ಕಲಿಕೆ ಎಂದು ಹೆಸರು. ಮಾನಸಿಕವಾಗಿ ಸಮಸ್ಯೆಯ ಒಳಹೊಕ್ಕು ವೀಕ್ಷಿಸಿದ್ದರಿಂದ ಇದು ಸಾಧ್ಯವಾಯಿತಾದ್ದರಿಂದ)

ಮಾನವರಲ್ಲಿ ಇಂತಾಗುವುದು ಸಾಧ್ಯವೇ? ಈ ಮುಂದಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ (ಇಂಥ ಉದಾಹರಣೆಗಳು ಅನೇಕವಿದ್ದರೂ ಇಲ್ಲಿ ಮೂರನ್ನು ಮಾತ್ರ ಉಲ್ಲೇಖಿಸಿದೆ).

೧. ಶಾಕ್ಯ ವಂಶಸ್ಥ ರಾಜಕುಮಾರ ಸಿದ್ಧಾರ್ಥ (ಕ್ರಿಪೂ ೫೬೩-೪೮೩?)  ಗೌತಮ ಬುದ್ಧನಾದದ್ದು ಹೇಗೆ? ಸಿದ್ಧಾರ್ಥನನ್ನು ಕಾಡಿತ್ತು ಮೂರು ಪ್ರಶ್ನೆಗಳು. ಉತ್ತರ ಕಂಡುಕೊಳ್ಳುವ ಅದಮ್ಯ ಬಯಕೆಯಿಂದ ಆರಂಭದಲ್ಲಿ ತನಗೆ ತಿಳಿದಿದ್ದ ತಾನು ಕೇಳಿದ್ದ ಎಲ್ಲ ವಿಧಾನಗಳ ಮುಖೇನ ಪ್ರಯತ್ನಿಸಿದ. ಉತ್ತರ ಸಿಕ್ಕದಿದ್ದಾಗ ದೈನಂದಿನ ಜೀವನಾವಶ್ಯಕ ಕರ್ಮಗಳನ್ನು ಮಾಡುತ್ತಲೇ ಬೋಧಿವೃಕ್ಷದಡಿಯಲ್ಲಿ ಕುಳಿತು ಆ ಕುರಿತೇ ‘ಧ್ಯಾನ’ ಮಾಡತೊಡಗಿದ. ಅರ್ಥಾತ್ ಏಕಾಗ್ರಚಿತ್ತದಿಂದ ಆಲೋಚಿಸತೊಡಗಿದ. ಅದೊಂದು ದಿನ ಇದ್ದಕ್ಕಿದ್ದಂತೆ ಉತ್ತರ ಹೊಳೆಯಿತು – ಜ್ಞಾನೋದಯವಾಯಿತು.

೨. ಹರಕೆಯ ಸಲ್ಲಿಕೆಗಾಗಿ ಸಿರಾಕ್ಯುಸ್ ನ ರಾಜ ಹೀರೊ ೨ ಮಾಡಿಸಿದ್ದ ಚಿನ್ನದ ಕಿರೀಟದಲ್ಲಿ ಅಕ್ಕಸಾಲಿಗ ಬೆಳ್ಳಿ ಮಿಶ್ರ ಮಾಡಿ ವಂಚಿಸಿದ್ದಾನೆಯೇ – ಇದು ಆರ್ಕಿಮಿಡಿಸ್ (ಕ್ರಿ ಪೂ ೨೮೭ – ೨೧೨) ಸಾಕ್ಷ್ಯಾಧಾರ ಸಹಿತ ಉತ್ತರಿಸ ಬೇಕಾಗಿದ್ದ ಪ್ರಶ್ನೆ. ತನಗೆ ತಿಳಿದಿದ್ದ ಯಾವುದೇ ತಂತ್ರ ಪ್ರಯೋಗದಿಂದ ಉತ್ತರಿಸಲು ಸಾಧ್ಯವಾಗದಿದ್ದಾಗ ನಿರಾಶನಾದ ಆತ ಸಮಸ್ಯೆಯ ಕುರಿತೇ  ಆಲೋಚಿಸುತ್ತಾ ಸ್ನಾನ ಮಾಡಲೋಸುಗ ಸ್ನಾನದ ತೊಟ್ಟಿಯೊಳಕ್ಕೆ ಇಳಿದ. ನೀರಿನ ಮಟ್ಟ ತುಸು ಮೇಲೇರಿದ್ದು ಗೋಚರಿಸಿತು. ಇದಕ್ಕಿದ್ದಂತೆಯೇ ಸಮಸ್ಯೆಯನ್ನು ಪರಿಹರಿಸುವ ವಿಧಾನ ಹೊಳೆಯಿತು – ಜ್ಞಾನೋದಯವಾಯಿತು.

೩. ಜರ್ಮನಿಯ ರಸಾಯನ ಶಾಸ್ತ್ರಜ್ಞ ಫ್ರೆಡ್ರಿಚ್ ಆಗಸ್ಟ್ ಕೆಕುಲೆ ವಾನ್ ಸ್ಟ್ರ್ಯಾಡೋನಿಟ್ಜ್ (೧೮೨೯ -೧೮೯೬) ಬೆಂಜೀನ್ ನ ಅಣುಸಂರಚನೆಯನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದ. ಸುದೀರ್ಘಕಾಲದ ಪ್ರಯತ್ನಿಸಿದರೂ ಯಶಸ್ಸು ದೊರೆಯದೇ ಇದ್ದದ್ದರಿಂದ ದಿಕ್ಕುತೋಚದೇ ಕುಳಿತಿದ್ದ ಕುರ್ಚಿಯಲ್ಲಿಯೇ ನಿದ್ದೆಗೆ ಜಾರಿದ. ಕನಸೊಂದನ್ನು ಕಂಡ. ಅದರಲ್ಲಿ ಅಣುಗಳು ಉದ್ದನೆಯ ಸೋರಚನೆಯ ರೂಪ ತಳೆದು ಹಾವುಗಳಂತೆ ನರ್ತಿಸುತ್ತಿದ್ದವು. ಆ ಅವಧಿಯಲ್ಲಿ ಒಂದು ಹಾವು ತನ್ನ ಬಾಲದ ತುದಿಯನ್ನು ತಾನೇ ಕಚ್ಚಿಹಿಡಿದು ಅವನನ್ನು ಅಣಕಿಸುವಂತೆ ನರ್ತಿಸತೊಡಗಿತು. ದಿಢೀರನೆ ಎಚ್ಚರಗೊಂಡ, ಕಾಡುತ್ತಿದ್ದ ಪ್ರಶ್ನೆಗೆ ಪ್ರತೀಕ ರೂಪದಲ್ಲಿ ಕನಸ್ಸಿನಲ್ಲಿ ಉತ್ತರ ಹೊಳೆದಿತ್ತು – ಜ್ಞಾನೋದಯವಾಗಿತ್ತು.

ಚಿಂಪಾಂಜಿಯ ಪ್ರಯೋಗವೂ ಸೇರಿದಂತೆ ಉದಾಹರಿಸಿದ ಎಲ್ಲ ವಿದ್ಯಮಾನಗಳಲ್ಲಿ ಇರುವ ಸಾಮ್ಯತೆ ಗಮನಿಸಿ – ಕಾಡುತ್ತಿರುವ ಸಮಸ್ಯೆಗಳಿಗೆ ಉತ್ತರ ಹುಡುಕಲೇ ಬೇಕೆಂಬ ಅದಮ್ಯ ಬಯಕೆ – ನಿರಂತರ ಪ್ರಯತ್ನ – ಅಯಶಸ್ಸಿನಿಂದ ವಿಮನಸ್ಕರಾದಂತೆ ತೋರುವ ವರ್ತನೆ – ಅನಿರೀಕ್ಷಿತ ಸ್ಥಳಗಳಲ್ಲಿ ಅನಿರೀಕ್ಷಿತ ಸಮಯದಲ್ಲಿ ನೇರವಾಗಿ ಅಥವ ಪ್ರತೀಕರೂಪದಲ್ಲಿ ‘ಉತ್ತರ’ ಹೊಳೆಯುವಿಕೆ – ಜ್ಞಾನೋದಯವಾಗುವಿಕೆ!

ಈ ಎಲ್ಲ ಸನ್ನಿವೇಶಗಳಲ್ಲಿ ಸಮಸ್ಯೆಗೆ ಪರಿಹಾರ ಇದ್ದಕ್ಕಿದ್ದಂತೆ ಸ್ಫುರಿಸಿದ್ದು ಹೇಗೆ?

ಮನಸ್ಸಿನ ಸಂರಚನೆಯ ಕುರಿತು ಫ್ರಾಯ್ಡ್ ಪ್ರತಿಪಾದಿಸಿದ ವಾದದ ಕುರಿತು ನಿಮಗೆ ತಿಳಿದಿದೆ ಎಂದು ನಂಬಿದ್ದೇನೆ (ನೋಡಿ: ಅಂತಃವಿಕ್ಷಣೆ – ಸ್ವವಿಕಾಸಕ್ಕೆ ಸುಲಭಲಭ್ಯ ಸಾಧನ). ಯಾವುದೇ ಸಮಸ್ಯೆ ವ್ಯಕ್ತಿಯನ್ನು ತೀವ್ರವಾಗಿ ಕಾಡತೊಡಗಿದಾಗ, ಅದನ್ನು ಪರಿಹರಿಸಲೇ ಬೇಕೆಂಬ ಅದಮ್ಯ ಛಲವೂ ತುಡಿತವೂ ಬದ್ಧತೆಯೂ ವ್ಯಕ್ತಿಯಲ್ಲಿ ಉಂಟಾದಾಗ ಆತ ಏಕಾಗ್ರಚಿತ್ತದಿಂದ ಕಾರ್ಯೋನ್ಮುಖನಾಗುವುದು ಖಚಿತ. ಇಂತಾದಾಗ ಆತನ ಮನಸ್ಸಿನ ಜಾಗೃತ ಮತ್ತು ಅಜಾಗೃತ ಭಾಗಗಳೆರಡೂ ಸಮಸ್ಯೆ ಪರಿಹರಿಸಲೋಸುಗ ಕಾರ್ಯೋನ್ಮುಖವಾಗಿರುತ್ತವೆ. ಅಜಾಗೃತ ಭಾಗದಲ್ಲಿ ಜರಗುತ್ತಿರುವ ಹುಡುಕಾಟಗಳ ಅರಿವು ಜಾಗೃತ ಭಾಗಕ್ಕೆ ತಿಳಿದಿರುವುದಿಲ್ಲ. ಅರ್ಥಾತ್, ವ್ಯಕ್ತಿಗೇ ‘ತಿಳಿದಿರುವುದಿಲ್ಲ’. ಇಂಥ ಸನ್ನಿವೇಶಗಳಲ್ಲಿ ವ್ಯಕ್ತಿ ಸಮಸ್ಯೆ ಪರಿಹರಿಸುವುದಕ್ಕೆ ಸಂಬಂಧಿಸಿರದ ಬೇರಾವುದೋ ಚಟುವಟಿಕೆಗಳಲ್ಲಿ ನಿರತನಾಗಿದ್ದರೂ ಇತರರ ದೃಷ್ಟಿಯಲ್ಲಿ ಆತ ತನ್ನ ಪ್ರಯತ್ನವನ್ನು ನಿಲ್ಲಿಸಿದಂತೆ ತೋರಿದರೂ ಆತನ ಮನಸ್ಸಿನ ಅಜಾಗೃತ ಭಾಗ ಸಮಸ್ಯೆ ಪರಿಹರಿಸುವ ಪ್ರಯತ್ನವನ್ನು ಮುಂದುವರಿಸಿರುತ್ತದೆ. ವ್ಯಕ್ತಿ ನಿದ್ದೆ ಮಾಡುತ್ತಿರುವಾಗ ಮನಸ್ಸಿನ ಜಾಗೃತ ಭಾಗ ನಿಷ್ಕ್ರಿಯವಾಗುತ್ತದೆಯೇ ವಿನಾ ಅಜಾಗೃತ ಭಾಗವಲ್ಲ. ವ್ಯಕ್ತಿಗೇ ಇದರ ಅರಿವು ಇರುವುದಿಲ್ಲ! ನಿಜವಾದ ‘ತಪಸ್ಸು’ ಅಥವ ‘ಧ್ಯಾನ’ ಇದು.

ಈ ಮುನ್ನ ಹೇಳಿದಂತೆ ಸಮಸ್ಯೆಯ ವಿಶ್ಲೇಷಣೆ, ಸಮಸ್ಯಾಸನ್ನಿವೇಶವನ್ನು ಘಟಕಗಳಾಗಿ ವಿಶ್ಲೇಷಿಸಿ ಅವುಗಳ ನಡುವಿನ ಸಂಬಂಧವನ್ನು ತಿಳಿಯುವ ಪ್ರಯತ್ನ, ಘಟಕಗಳನ್ನು ಹೇಗೆ ಪುನರ್ ಸಂಘಟಿಸಿದರೆ ಪರಿಹಾರ ದೊರೆತೀತು ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಇವೇ ಮೊದಲಾದ ಎಲ್ಲ ಚಟುವಟಿಕೆಗಳೂ ಮನಸ್ಸಿನ ಅಜಾಗೃತ ಭಾಗದಲ್ಲಿ ನಿರಂತರವಾಗಿ ಮುಂದುವರಿಯುತ್ತಿರುತ್ತವೆ. ಅಂದ ಮಾತ್ರಕ್ಕೆ, ವ್ಯಕ್ತಿ ತನ್ನ ಜಾಗೃತಾವಸ್ಥೆಯಲ್ಲಿ ಸಮಸ್ಯೆಯ ಕುರಿತು ಆಲೋಚಿಸುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟರೂ

ಅಜಾಗೃತ ಭಾಗ ಬಿಟ್ಟುಬಿಡುವುದಿಲ್ಲ ಎಂದು ಅರ್ಥೈಸಕೂಡದು. ಜಾಗೃತಾವಸ್ಥೆಯಲ್ಲಿ ನಿತ್ಯಕರ್ಮಗಳನ್ನು ಮಾಡಲೋಸುಗ ಆ ಕುರಿತು ಆಲೋಚಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತದನಂತರ ಮುಂದುವರಿಸುತ್ತಿದ್ದರೆ ಮಾತ್ರ ಅಜಾಗೃತ ಭಾಗ ನಿರಂತರವಾಗಿ ಪ್ರಯತ್ನವನ್ನು ಮುಂದುವರಿಸುತ್ತದೆ.

ವ್ಯಕ್ತಿಯ ಮನಸ್ಸಿನ ಅಜಾಗೃತ ಭಾಗದ ವ್ಯವಹಾರಗಳು ಜಾಗೃತ ಭಾಗಕ್ಕೆ ತಿಳಿಯದಿರುವುದರಿಂದ  ಅಜಾಗೃತ ಭಾಗ ಪರಿಹಾರವನ್ನು ಆವಿಷ್ಕರಿಸಿದರೆ ಏನಾಗುತ್ತದೆ? ಆವಿಷ್ಕರಿಸಿದ ಪರಿಹಾರವನ್ನು ಜಾಗೃತ ಭಾಗಕ್ಕೆ ತಕ್ಷಣವೇ ರವಾನಿಸುತ್ತದೆ! ಆ ಸಮಯದಲ್ಲಿ ಜಾಗೃತ ಭಾಗ ನಿಷ್ಕ್ರಿಯವಾಗಿದ್ದರೆ, ಅರ್ಥಾತ್ ವ್ಯಕ್ತಿ ನಿದ್ರಿಸುತ್ತಿದ್ದರೆ ಪರಿಹಾರ ಪ್ರತೀಕ ರೂಪದಲ್ಲಿ ರವಾನೆಯಾಗಿ ಕನಸಿನ ರೂಪದಲ್ಲಿ ಪ್ರಕಟವಾಗುತ್ತದೆ. ಇಂತು ರವಾನೆಯಾದ ಪರಿಹಾರ ಅಜಾಗೃತ ಭಾಗದಿಂದ ಜಾಗೃತ ಭಾಗಕ್ಕೆ ಅವೆರಡರ ನಡುವಿನ ಸೀಮಾರೇಖೆಯನ್ನು ದಾಟಿದ ತಕ್ಷಣ ವ್ಯಕ್ತಿಗೆ ಪರಿಹಾರ ಇದ್ದಕ್ಕಿದ್ದಂತೆ ಸ್ಫುರಿಸಿದ ಅನುಭವವಾಗುತ್ತದೆ. ಇಲ್ಲಿ ಅಜಾಗೃತ ಭಾಗ ಆವಿಷ್ಕರಿಸಿದ ಪರಿಹಾರವೇ ‘ಜ್ಞಾನ’. ಅದು ಅಜಾಗೃತ ಭಾಗದಿಂದ ಜಾಗೃತ ಭಾಗಕ್ಕೆ ಎರಡರ ನಡುವಿನ ಸೀಮಾರೇಖೆಯನ್ನು ದಾಟುವ ವಿದ್ಯಮಾನವೇ ‘ಜ್ಞಾನೋದಯ’. ಮನಸ್ಸಿನ ಜಾಗೃತಭಾಗಕ್ಕಿಂತ ಕೆಳಗೆ ಅಜಾಗೃತ ಭಾಗವಿದೆ ಎಂದು ನಾವು ಕಲ್ಪಿಸಿಕೊಂಡಿರುವುದರಿಂದ ‘ಉದಯ’ ಅನ್ನುವ ಪದವನ್ನು ಉಪಯೋಗಿಸಿದೆ.

ಅಂದಮೇಲೆ, ಎಲ್ಲ ‘ಜ್ಞಾನ’ ಪ್ರತೀ ವ್ಯಕ್ತಿಯ ಅಂತರಂಗದಲ್ಲಿಯೇ ಇದೆ. ಅದು ಹೊರಗಿನಿಂದ ಬರುವುದಿಲ್ಲ. ಮಾನವಾತೀತ ಶಕ್ತಿಯ ಕೃಪೆಯಿಂದ ಸಿಕ್ಕುವ ವಸ್ತು ಅದಲ್ಲ. ವಿಶ್ವದ ಬುನಾದಿಯಲ್ಲಿ ಏನಿದೆಯೋ ಅದೇ ವ್ಯಕ್ತಿಯ ಬುನಾದಿಯಲ್ಲಿಯೂ ಇದೆಯಾದ್ದರಿಂದ ಸ್ವಪ್ರಯತ್ನದಿಂದ ತಿಳಿಯಲಾಗದ್ದು ಏನೂ ಇಲ್ಲ. ‘ಮನಸ್ಸು ಮಾಡಿದರೆ ಸಾಧಿಸಲಾಗದ್ದು ಏನೂ ಇಲ್ಲ’. (ನೋಡಿ: ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ?)

ಏಕಾಗ್ರಚಿತ್ತದಿಂದ, ಪ್ರಾಮಾಣಿಕವಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೆ ಅಪೇಕ್ಷಿತ ಜ್ಞಾನ ನಮ್ಮ ಅಂತರಂಗದಿಂದಲೇ ಹೊರಹೊಮ್ಮುತ್ತದೆ? ಎಂದು? ಯಾವ ರೂಪದಲ್ಲಿ? ಅನ್ನುವುದು ಸಮಸ್ಯೆಯ ಸ್ವರೂಪ, ವ್ಯಕ್ತಿಯ ಮನಸ್ಸಿನಾಳದಲ್ಲಿ ಹುದುಗಿರುವ ಜ್ಞಾನ ಮತ್ತು ಅನುಭವಗಳ ಸಂಚಯ, ವ್ಯಕ್ತಿಯ ಪ್ರಯತ್ನದ ಪ್ರಾಮಾಣಿಕತೆ ಇವೇ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತದೆಯೇ ವಿನಾ ‘ದೈವಕೃಪೆ’ಯನ್ನಲ್ಲ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s