ಅಂತಃವಿಕ್ಷಣೆ – ಸ್ವವಿಕಾಸಕ್ಕೆ ಸುಲಭಲಭ್ಯ ಸಾಧನ

ಅಂತಃವೀಕ್ಷಣೆ, ಅಂತರ್ವೀಕ್ಷಣೆ, ಸ್ವಾವಲೋಕನ, ಆತ್ಮಾವಲೋಕನ, ಆತ್ಮಪರೀಕ್ಷಣ, ಆತ್ಮಶೋಧನ, ಆತ್ಮವಿಮರ್ಶೆ, ಅಂತರಂಗ ವೀಕ್ಷಣ ಎಂದೆಲ್ಲ ಉಲ್ಲೇಖಿಸಬಹುದಾದ ಈ ವಿಶಿಷ್ಟ ವಿಧಾನವನ್ನು ನಾವು ಇಂದು ಏನಾಗಿದ್ದೇವೋ ನಾಳೆ ಅದಕ್ಕಿಂತ ಉತ್ತಮರು ಆಗುವುದಕ್ಕೆ ನೆರವು ನೀಡುವ ಹತಾರವಾಗಿ ಉಪಯೋಗಿಸಬಹುದು ಅನ್ನುವುದು ನನ್ನ ಅಭಿಮತ.

ನಾನು ಈ ಅಭಿಪ್ರಾಯ ತಳೆಯಲು ಕಾರಣ:- ಸ್ವಾನುಭವ ಮತ್ತು ಸೈದ್ಧಾಂತಿಕ ಅಧ್ಯಯನಗಳು.

ನಮ್ಮನ್ನು ಕಾಡುತ್ತಿರುವ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಏನು ಎಂಬುದು ನಮ್ಮ ಅಂತರಂಗದಲ್ಲಿಯೇ ಹುದುಗಿರುತ್ತದೆ. ಸಮಸ್ಯೆ ಉದ್ಭವಿಸಲು ಕಾರಣ ಏನೆಂಬುದು ನಿಖರವಾಗಿ ತಿಳಿದರೆ ಪರಿಹಾರ ತಂತಾನೇ ಹೊಳೆಯುತ್ತದಲ್ಲವೆ? ಆ ಕಾರಣವೂ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಅಂತರಂಗದಲ್ಲಿಯೇ ಹುದುಗಿರುತ್ತದೆ. ಅರ್ಥಾತ್ ನಮ್ಮ ಸಮಸ್ಯೆಗಳ ಮೂಲ ನಾವೇ ಆಗಿರುತ್ತೇವೆ! ನಮ್ಮ ಬಲಾಬಲಗಳನ್ನು ನಾವು ವಿಷಯನಿಷ್ಠವಾಗಿಯೂ ನಿಖರವಾಗಿಯೂ ಗುರುತಿಸಬಲ್ಲೆವಾದರೆ ನಮ್ಮ ಸಮಸ್ಯೆಗಳ ಮೂಲವನ್ನು ಶೋಧಿಸುವುದು ಸುಲಭ. ಇದು ಅಂತಃವೀಕ್ಷಣೆಯಿಂದ ಮಾತ್ರ ಸಾಧ್ಯ. ಅರ್ಥಾತ್ ನಮ್ಮ ಅಂತರಂಗದಲ್ಲಿ ಏನಿದೆ ಎಂಬುದನ್ನು ನಾವೇ ವೀಕ್ಷಿಸುವುದನ್ನೂ ವಿಶ್ಲೇಷಿಸುವುದನ್ನೂ ಕಲಿಯಬೇಕು. ಮೇಲ್ನೋಟಕ್ಕೆ ಬಲು ಸುಲಭ ಎಂದನ್ನಿಸುವ ಈ ಕಾರ್ಯ ವಾಸ್ತವವಾಗಿ ಬಲು ಕಷ್ಟ. ನಮ್ಮ ಬಲಗಳನ್ನು ನಾವು ಒಪ್ಪಿಕೊಳ್ಳುವಷ್ಟು ಸುಲಭವಾಗಿ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲದಿರುವುದೇ ಇದಕ್ಕೆ ಕಾರಣ. ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ದೌರ್ಬಲ್ಯಗಳ ಕಾರಣ ಜೀವನದ ಯಾವುದೋ ಅನುಭವವೇ ಆಗಿರುತ್ತದೆ. ಇಂಥ ಅನುಭವಗಳು ಮನಸ್ಸಿನಾಳದಲ್ಲಿ ಹುದುಗಿದ್ದುಕೊಂಡೇ ನಮ್ಮ ವರ್ತನೆಯನ್ನು ನಿಯಂತ್ರಿಸುತ್ತಿರುತ್ತವೆ. ಎಂದೇ, ಇವನ್ನು ಹುಡುಕಿ ಹೊರಗೆಳೆದು ತೆಗೆದರೆ ಕನಿಷ್ಠಪಕ್ಷ ನಮ್ಮ ದೌರ್ಬಲ್ಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸುಲಭ. ಅಷ್ಟೇ ಅಲ್ಲ, ನಮ್ಮನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡರೆ ಇತರರನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಅಂತೆಯೇ ನಮ್ಮೊಳಗಿನ ಮನೋವ್ಯಾಪಾರಗಳನ್ನು ನಿಭಾಯಿಸುವುದನ್ನು ಕಲಿತರೆ ಇತರರ ವಿಶ್ವಾಸ ಮತ್ತು ಮಿತ್ರತ್ವವನ್ನು ಗಳಿಸುವುದರ ಮೂಲಕ ನಮ್ಮ ಸುತ್ತಲಿನ ಸಮಾಜಿಕ ಪರಿಸರದ ಆಗುಹೋಗುಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ.

ಇವೆಲ್ಲ ಆಧ್ಯಾತ್ಮಾಧಾರಿತ ಹೇಳಿಕೆಗಳಲ್ಲ, ಆಧುನಿಕ ಮನಃಶಾಸ್ತ್ರಾಧಾರಿತ ಹೇಳಿಕೆಗಳು.

ಮಾನವನ ಮನಸ್ಸನ್ನು ಸಾಗರದಲ್ಲಿ ತೇಲುತ್ತಿರುವ ನೀರ್ಗಲ್ಲಬಂಡೆಗೆ (ಐಸ್ ಬರ್ಗ್) ಹೋಲಿಸಿ ಮನೋವಿಶ್ಲೇಷಣ ಪಂಥದ ಮೂಲಪುರುಷ ಆಸ್ಟ್ರಿಯಾದ ನರಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ (೧೮೫೬-೧೯೩೯) ನೀಡಿರುವ ವಿವರಣೆಯ ಕುರಿತು ಈ ಲೇಖನದ ಓದುಗರ ಪೈಕಿ ಬಹು ಮಂದಿ ಕೇಳಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನೀರ್ಗಲ್ಲಬಂಡೆಯ ಒಟ್ಟು ಗಾತ್ರದ ೧/೯ ರಷ್ಟು ಭಾಗ ಮಾತ್ರ ನೀರಿನ ಮೇಲ್ಭಾಗದಲ್ಲಿ ಇರುತ್ತದೆ. ಇದು ನೀರ್ಗಲ್ಲಬಂಡೆಯ ಗೋಚರ ಭಾಗ. ಉಳಿದ ೮/೯ ರಷ್ಟು ಭಾಗ ನೀರೊಳಗಿರುತ್ತದೆ. ಇದರ ಪೈಕಿ ನೀರಿನ ಮೇಲ್ಮೈನ ಸಮೀಪದಲ್ಲಿರುವ ತುಸು ಭಾಗ ಅಸ್ಪಷ್ಟವಾಗಿ ಕಾಣಿಸುತ್ತದೆ, ಉಳಿದದ್ದು ಅಗೋಚರ. ಫ್ರಾಯ್ಡ್ ಪ್ರಕಾರ ಮಾನವನ ಮನಸ್ಸನ್ನೂ ಮೂರು ವಿಭಾಗಗಳಾಗಿ ವಿಂಗಡಿಸಬಹುದು – ನಾವು ಎಚ್ಚರವಾಗಿರುವಾಗ ಎಲ್ಲ ಮನೋವ್ಯಾಪಾರಗಳು ಜರಗುವ ಜಾಗೃತ (ಕಾನ್ಷಸ್) ಮನಸ್ಸು, ಅಸ್ಪಷ್ಟವಾಗಿ ನಮ್ಮ ಅರಿವಿಗೆ ಬರುವ ಎಲ್ಲ ಮನೋವ್ಯಾಪಾರಗಳು ಜರಗುವ ಜಾಗೃತಪೂರ್ವ (ಪ್ರಿಕಾನ್ಷಸ್) ಮನಸ್ಸು, ಮತ್ತು ನಮ್ಮ ಅರಿವಿಗೆ ಬರದೇ ಇರುವ ಮನೋವ್ಯಾಪಾರಗಳು ಜರಗುವ ಅಜಾಗೃತ (ಅನ್ಕಾನ್ಷಸ್) ಮನಸ್ಸು. ಸಾಗರದಲ್ಲಿ ತೇಲುತ್ತಿರುವ ನೀರ್ಗಲ್ಲಬಂಡೆಯ ಅಗೋಚರಭಾಗದ ಗಾತ್ರದಂತೆ ನಮ್ಮ ಅರಿವಿಗೆ ಬರುವ ಮನೋವ್ಯಾಪಾರಗಳು ಜರಗುವ ಜಾಗೃತ ಮನಸ್ಸಿಗಿಂತ ಅರಿವಿಗೆ ಬರದ ಮನೋವ್ಯಾಪಾರಗಳು ಜರಗುವ ಅಜಾಗೃತ ಮನಸ್ಸಿನ ಪ್ರಮಾಣ ಕಮ್ಮಿ ೮-೯ ಪಟ್ಟು ಹೆಚ್ಚು ಇರುತ್ತದೆ. ನಮ್ಮ ಸಮಸ್ಯೆಗಳ ಮೂಲ ಹುದುಗಿರುವುದೇ ಇಲ್ಲಿ. ಆ ಕಾರಣಗಳು ಅಜಾಗೃತ ಮನಸ್ಸಿನಲ್ಲಿ ಎಷ್ಟು ಆಳದಲ್ಲಿ ಹುದುಗಿವೆ ಅನ್ನುವುದು ಅದನ್ನು ಎಷ್ಟು ಸುಲಭವಾಗಿ ಹೊರಗೆಳೆಯಬಹುದು ಅಥವ ಮನಸ್ಸಿನ ಜಾಗೃತ ಭಾಗಕ್ಕೆ ತರಬಹುದು ಅನ್ನುವುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ನಮ್ಮ ಅಹಂಗೆ ಅಥವ ಸ್ವಬಿಂಬಕ್ಕೆ (ಈಗೋ ಇಮೇಜ್) ಧಕ್ಕೆ ಉಂಟುಮಾಡುವ ಸಾಮರ್ಥ್ಯ ಉಳ್ಳ ಅನುಭವಗಳನ್ನೂ ಕಾರಣಗಳನ್ನೂ, ನಮ್ಮಲ್ಲಿ ‘ಪಾಪ ಪ್ರಜ್ಞೆ’ ಉತ್ಪಾದಿಸಬಲ್ಲ ಅನುಭವಗಳನ್ನೂ ಮನಸ್ಸಿನ ಜಾಗೃತ ಭಾಗಕ್ಕೆ ತರುವುದು ಬಲು ಕಷ್ಟ.

ಅಂತಃವೀಕ್ಷಣೆಯ ಮೂಲಕ ಜಾಗೃತ ಮನಸ್ಸಿನ ವ್ಯವಹಾರಗಳನ್ನು ವೀಕ್ಷಿಸುವುದೂ ವಿಶ್ಲೇಷಿಸುವುದೂ ಸುಲಭ. ಅಂತಃವೀಕ್ಷಣೆ ಮಾಡುತ್ತಿರುವಾಗ ಮನಸ್ಸಿನ ಅಜಾಗೃತ ಭಾಗದಲ್ಲಿ ಹುದುಗಿರುವ ಸಾಮಗ್ರಿ ತಂತಾನೇ ಜಾಗೃತ ಭಾಗಕ್ಕೆ ಬರಲು ಆರಂಭಿಸುವುದುಂಟು. ಇಂತಾಗಬೇಕಾದರೆ ನಮ್ಮ ಅಂತರಗದಲ್ಲಿ ಅಡಗಿರುವ ಯಾವ ಅನುಭವ ಅಥವ ಆಲೋಚನೆ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂಬುದನ್ನು ತಿಳಿಯಲೇಬೇಕೆಂಬ ಪ್ರಾಮಾಣಿಕ ತುಡಿತದೊಂದಿಗೆ ಸುದೀರ್ಘಕಾಲ ಪ್ರಯತ್ನಿಸಬೇಕಾದದ್ದು ಅನಿವಾರ್ಯ. ಎಷ್ಟು ಕಾಲ ಅನ್ನುವುದಕ್ಕೆ ಸಾರ್ವತ್ರಿಕ ಉತ್ತರ ನೀಡಲು ಸಾಧ್ಯವಿಲ್ಲ.

ಅಂತಃವೀಕ್ಷಣೆ ಭಾರತೀಯರಿಗೆ ಹೊಸದಲ್ಲ.  ‘ಪ್ರಾಯೋಗಿಕ ಮನೋವಿಜ್ಞಾನದ ತಂದೆ’ ಎಂದೇ ಖ್ಯಾತನಾಗಿರುವ ಜರ್ಮನಿಯ ವಿಲ್ಹೆಲ್ಮ್ ಮ್ಯಾಕ್ಸಿಮಿಲಿಯನ್ ವೂಂಟ್ (೧೮೩೨-೧೯೨೦) ಮನೋವ್ಯಾಪಾರಗಳನ್ನು ಅಧ್ಯಯಿಸಲು ಒಂದು ಹತಾರವಾಗಿ ಅತಿನಿಷ್ಕೃಷ್ಟತೆ ಬಯಸುವ ನಿರ್ಬಂಧಗಳಿಂದ ಕೂಡಿದ ಅಂತಃವೀಕ್ಷಣೆಯನ್ನು (ಇನ್ ಟ್ರ ಸ್ಪೆಕ್ ಷನ್) ಉಪಯೋಗಿಸಲಾರಭಿಸಿದ್ದರಿಂದ ಇದು ಪಾಶ್ಚಾತ್ಯ ಜಗತ್ತಿನ ಮನೋವಿಜ್ಞಾನಿಗಳ, ತತ್ಪರಿಣಾಮವಾಗಿ ‘ಆಧುನಿಕರ’ ಗಮನ ಸೆಳೆಯಿತು. ತದನಂತರ ಆತನ ಶಿಷ್ಯ ಎಡ್ವರ್ಡ್ ಬ್ರಾಡ್ ಫೋರ್ಡ್ ಟಿಚನರ್ (೧೮೬೭-೧೯೨೭) ಎಂಬ ಬ್ರಿಟಿಷ್ ಮನೋವಿಜ್ಞಾನಿ ಅಮೆರಿಕಾದಲ್ಲಿ ವೂಂಟನ ಚಿಂತನೆಗಳನ್ನು ಜನಪ್ರಿಯಗೊಳಿಸುವ ಭರಾಟೆಯಲ್ಲಿ ‘ಒಬ್ಬನ ಒಟ್ಟು ಭಾವನೆಗಳು ಮತ್ತು ಆಲೋಚನೆಗಳ ಪ್ರಜ್ಞೆ’ಯ (ಕಾನ್ಷಸ್ ನೆಸ್) ಗುಣಾತ್ಮಕ ವಿಶ್ಲೇಷಣೆಗೆ ಮಾತ್ರ ಅಂತಃವೀಕ್ಷಣೆ ನೆರವು ನೀಡುತ್ತದೆ ಅಂದದ್ದರಿಂದ ಈ ವಿಧಾನ ಒದಗಿಸುವ ಮಾಹಿತಿಗೆ ವೈಜ್ಞಾನಿಕ ವಿಶ್ವಾಸಾರ್ಹತೆ ಇಲ್ಲವೆಂಬ ಕಾರಣ ನೀಡಿ ಪರಿಮಾಣಾತ್ಮಕ ಅಳೆಯುವಿಕೆಗೆ ಒತ್ತುಕೊಡುವ ಆಧುನಿಕ ವಿಜ್ಞಾನಿಗಳು ಇದನ್ನು ಮನೋವೈಜ್ಞಾನಿಕ ಮಾಹಿತಿ ಸಂಗ್ರಹಣೆಯ ಒಂದು ಹಾತಾರ ಎಂದು ಒಪ್ಪಿಕೊಳ್ಳಲಿಲ್ಲ. ಆದರೂ ಇತ್ತೀಚೆಗೆ ಮನೋವಿಜ್ಞಾನದ ಜ್ಞಾನಗ್ರಹಿಕೆ (ಕಾಗ್ ನಿಟಿವ್) ಪಂಥೀಯರು ಕೆಲವು ಸಂದರ್ಭಗಳಲ್ಲಿ ಇದನ್ನು ಬಳಸುವುದುಂಟು, ಉದಾಹರಣೆಗೆ – ಗಟ್ಟಿಯಾಗಿ ಆಲೋಚಿಸು (ತಿಂಕ್ ಅಲೌಡ್) ತಂತ್ರ.

ಈ ತಂತ್ರದ ಕುರಿತು ಆಧುನಿಕ ಮನೋವಿಜ್ಞಾನದ ನಿಲುವು ಏನೇ ಆಗಿರಲಿ ಈಗಾಗಲೇ, ಅನೇಕರು ಈ ತಂತ್ರದ ತಿರುಳಿಗೆ ತಮ್ಮದೇ ಆದ ವಿಶಿಷ್ಟತೆಯ ಉಡುಗೆಯನ್ನು ತೊಡಿಸಿ ಆಕರ್ಷಕ ಹೆಸರುಗಳನ್ನಿತ್ತು ವ್ಯಕ್ತಿತ್ವ ಸುಧಾರಣೆಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಆ ತರಬೇತಿ ನೀಡುವುದನ್ನೇ ತಮ್ಮ ಜೀವನೋಪಾಯದ ಹಾದಿಯಾಗಿಸಿಕೊಂಡಿದ್ದಾರೆ. ಆಧ್ಯಾತ್ಮಿಕ ಚಿಂತನೆಯತ್ತ ಒಲವು ತೋರುವವರಿಗಾಗಿ ‘ಧ್ಯಾನ’, ‘ಯೋಗ’ ಮುಂತಾದ  ನಾನಾ ರೂಪಗಳಲ್ಲಿ ಲಭ್ಯವಿರುವ ತರಬೇತಿ ಕಾರ್ಯಕ್ರಮಗಳ ಕೇಂದ್ರದಲ್ಲಿಯೂ ಅಂತಃವೀಕ್ಷಣೆಯ ತಿರುಳು ಇದ್ದೇ ಇರುತ್ತದೆ.

ರಮಣ ಮಹರ್ಷಿಗಳು ‘ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ನಿನ್ನ ಅಂತರಂಗದಲ್ಲಿಯೇ ಹುದುಗಿದೆ. ಅದನ್ನು ಆವಿಷ್ಕರಿಸಿದರೆ ‘ಆತ್ಮಸಾಕ್ಷಾತ್ಕಾರವಾದಂತೆ’ ಅಂದದ್ದು, ಆಧ್ಯಾತ್ಮಿಕ ಸಾಧಕರು ‘ತಪಸ್ಸಿ’ನಿಂದ, ‘ಧ್ಯಾನ’ದಿಂದ ಆತ್ಮಸಾಕ್ಷಾತ್ಕಾರ/ಭಗವಂತ ಸಾಕ್ಷಾತ್ಕಾರವಾಗುತ್ತದೆ ಅಂದದ್ದು ಅಂತಃವೀಕ್ಷಣೆಯಿಂದ ಒಬ್ಬ ವ್ಯಕ್ತಿ ತನ್ನ ನಿಜಸ್ವರೂಪವನ್ನು ತಿಳಿಯಲು ಸಾಧ್ಯ ಎಂಬ ಅರ್ಥದಲ್ಲಿ ಅನ್ನುವುದು ನನ್ನ ಖಚಿತ ನಿಲುವು. ಎಂದೇ, ದೇಹದಿಂದ ಭಿನ್ನವಾದ ಅವಿನಾಶೀ ಆತ್ಮವಿದೆಯೋ ಇಲ್ಲವೋ ಎಂಬುದರ ಕುರಿತಾಗಲೀ, ಜನ್ಮಜನ್ಮಾಂತರಗಳ ನೆನಪುಗಳು ಮನಸ್ಸಿನಾಳದಲ್ಲಿ ಇದೆಯೋ ಇಲ್ಲವೋ ಎಂಬುದರ ಕುರಿತಾಗಲೀ ತಾರ್ಕಿಕ ವಾದವಿವಾದಗಳಲ್ಲಿ ತೊಡಗಿಸಿಕೊಳ್ಳುವುದರ ಬದಲು ನಮ್ಮನ್ನು ಅರ್ಥಮಾಡಿಕೊಳ್ಳಲು ಸಹಕಾರಿ, ಸ್ವವಿಕಾಸಕ್ಕೆ ನೆರವು ನೀಡುತ್ತದೆ ಎಂಬ ಕಾರಣಗಳಿಗಾಗಿ ಅಂತಃವೀಕ್ಷಣೆ ಮಾಡುವುದನ್ನು ಅಭ್ಯಸಿಸುವುದು ಉತ್ತಮ, ಅದೂ ನನ್ನಲ್ಲಿ ಸುಧಾರಣೆ ತಂದುಕೊಳ್ಳಬೇಕು ಅನ್ನುವ ಅದಮ್ಯ ಬಯಕೆ ಇದ್ದರೆ ಮಾತ್ರ. ಇದು ಒಂದು ಬಾರಿ ಮಾಡಿ ಫಲ ಪಡೆದು ನಂತರ ಮರೆತು ಬಿಡುವ ವ್ಯವಹಾರವಲ್ಲ ಎಂಬುದೂ ತಿಳಿದಿರಲಿ. ಅರ್ಥಾತ್, ಒಮ್ಮೆ ಆರಂಭಿಸಿ ಅಲ್ಪಸ್ವಲ್ಪ ಲಾಭ ಆದೊಡನೆ ಬಿಟ್ಟು ಬಿಡುವುದಕ್ಕಿಂತ ನಿರಂತರವಾಗಿ ಮಾಡುತ್ತಿದ್ದರೆ ಆಗುವ ಲಾಭ ಹೆಚ್ಚು ಅನ್ನುವುದು ನೆನಪಿನಲ್ಲಿರಲಿ. ಇನ್ನಾರದೋ ಬಲವಂತಕ್ಕೆ, ಬಹಳಷ್ಟು ಮಂದಿ ಕಲಿಯುತ್ತಿದ್ದಾರೆ ಎಂಬ ಕಾರಣಕ್ಕೆ, ಅದು ಇಂದಿನ ‘ಫ್ಯಾಷನ್’ ಎಂಬ ಕಾರಣಕ್ಕೆ, ನಾನು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ ಎಂದು ಢಂಗುರ ಸಾರಿ ಸ್ವಪ್ರತಿಷ್ಠೆ ಮೆರೆಯುವುದಕ್ಕೋಸ್ಕರ ಅಂತಃವೀಕ್ಷಣೆ ಮಾಡಲೆತ್ನಿಸುವುದು ನಿಷ್ಪ್ರಯೋಜಕ. ಅಂತಃವೀಕ್ಷಣೆ ಎಂಬುದು ನಮ್ಮ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಮಂತ್ರದಂಡ ಎಂಬ ಭ್ರಮೆಯೂ ಬೇಡ.

ಅಂತಃವೀಕ್ಷಣೆ ಮಾಡುವುದು ಹೇಗೆ?

ಈ ಪ್ರಶ್ನೆಗೆ ಸರ್ವಮಾನ್ಯ ಸಾರ್ವತ್ರಿಕ ಉತ್ತರ ಕೊಡಲು ಸಾಧ್ಯವಿಲ್ಲವಾದರೂ ಈ ಕೆಳಗಿನಂತೆ ಪ್ರಯತ್ನಿಸಿ ನೋಡಿ. ‘ಗುರು’ಮುಖೇನ ಅಭ್ಯಸಿಸಲು ಬಯಸುವವರಿಗೊಂದು ಕಿವಿಮಾತು: ‘ಧ್ಯಾನ’ ಅಥವ ‘ಯೋಗ’ ಎಂಬ ಪದದ ಅಂತ್ಯಪ್ರತ್ಯಯದೊಂದಿಗೆ ವಿಭಿನ್ನ ರೂಪಗಳಲ್ಲಿ ಮಾರುಕಟ್ಟೆಯಲ್ಲಿ ತರಬೇತಿ ಶಿಬಿರಗಳು/ ಕಾರ್ಯಕ್ರಮಗಳು ಜರಗುತ್ತಿವೆ. ಎಲ್ಲರಿಗೂ ಅಪೇಕ್ಷಿತ ಫಲ ನೀಡಬಲ್ಲ ಒಂದು ಕಾರ್ಯಕ್ರಮ ಇಲ್ಲವಾದ್ದರಿಂದ ಲಭ್ಯವಿರುವ ಕಾರ್ಯಕ್ರಮಗಳ ಪೈಕಿ ನಿಮ್ಮ ಮನಃಪ್ರವೃತ್ತಿಗೆ, ನಿಮ್ಮ ಆರ್ಥಿಕ ಸ್ಥಿತಿಗತಿಗೆ ಹೊಂದುವಂಥದ್ದನ್ನು ಆಯ್ಕೆ ಮಾಡಿಕೊಳ್ಳಿ. ತಾವೇ ಕಲಿಯಲಿಚ್ಛಿಸುವವರಿಗಾಗಿ ಮುಂದೆ ಕೆಲವು ಮಾರ್ಗದರ್ಶಿ ಸಲಹೆಗಳನ್ನು ನೀಡುತ್ತಿದ್ದೇನೆ. ಇವು ಮಾರ್ಗದರ್ಶೀ ಸಲಹೆಗಳ ರೂಪದಲ್ಲಿವೆ ಅನುಲ್ಲಂಘನೀಯ ನಿಯಮಗಳ ರೂಪದಲ್ಲಿ ಅಲ್ಲ.

೧. ಅಂತಃವೀಕ್ಷಣೆ ಮಾಡ ಬಯಸುವವರಿಗೆ ಸ್ವಶಿಸ್ತು ಇರಬೇಕಾದದ್ದು ಅತ್ಯಗತ್ಯ. ಪ್ರತೀ ದಿನ ಕನಿಷ್ಠ ಪಕ್ಷ ೨೦ ನಿಮಿಷ ಅಂತಃವೀಕ್ಷಣೆಗಾಗಿ ಮೀಸಲಿಡಬೇಕು. ಅದು ಬೆಳಗ್ಗೆ ದೈನಂದಿನ ಕಾರ್ಯಾರಂಭಿಸುವ ಮುನ್ನವೋ ಅಥವ ಸಂಜೆ ದೈನಂದಿನ ಕಾರ್ಯಗಳನ್ನು ಮಾಡಿ ಮುಗಿಸಿದ ನಂತರವೋ ಎಂಬುದನ್ನು ತೀರ್ಮಾನಿಸಿ ಅದಕ್ಕೆ ಬದ್ಧರಾಗಿರಿ.

೨. ಅಂತಃವೀಕ್ಷಣೆ ಆರಂಭಿಸುವ ಮುನ್ನ ದೇಹದಲ್ಲಿ ಯಾವುದೇ ತುಯ್ತಗಳಿಲ್ಲದಂತೆಯೂ ಮನಸ್ಸಿನಲ್ಲಿ ಯಾವುದೇ ಕ್ಷೋಭೆಗಳಿಲ್ಲದಂತೆಯೂ ವಿರಮಿಸಬೇಕು. ಇಂತು ವಿರಮಿಸಲು ಮಾಡಬಹುದಾದ ತಂತ್ರಗಳೂ ಅನೇಕವಿವೆ. ಅವುಗಳ ಪೈಕಿ ಹೆಚ್ಚಿನವುಗಳಲ್ಲಿ ಈ ಮುಂದೆ ನಮೂದಿಸಿದ ಪ್ರಕ್ರಿಯೆಗಳು ಇರುತ್ತವೆ. (ಅ) ಆರಾಮವಾಗಿ ಕುಳಿತುಕೊಳ್ಳಿ. ಎರಡೂ ಪಾದಗಳು ನೆಲದ ಮೇಲೆ ಊರಿರಲಿ. ಸಾಧ್ಯವಿರುವಷ್ಟರ ಮಟ್ಟಿಗೆ ಕಾಲುಗಳು ತೊಡೆಗಳ ಭಾಗಕ್ಕೆ ಲಂಬವಾಗಿರುವಂತೆಯೂ ಬೆನ್ನು ನೆಟ್ಟಗೂ ಇರುವಂತೆ ನೋಡಿಕೊಳ್ಳಿ. ಕೈಗಳನ್ನು ತೊಡೆಯಮೇಲೆ ಇರಿಸಿಕೊಳ್ಳಿ. (ಆ) ೩ ಬಾರಿ ನೀಳವಾಗಿ ಉಸಿರೆಳೆದು ಬಿಡಿ. ಸಾಮಾನ್ಯವಾಗಿ ನೀಳವಾಗಿ ಉಸಿರೆಳೆದುಕೊಂಡಾಗ ಎದೆ ಹಿಗ್ಗಿ ಉದರ ಕುಗ್ಗುತ್ತದೆ. ಸರಿಯಾದ ನೀಳ ಉಸಿರಾಟದಲ್ಲಿ ಎದೆಯೊಂದಿಗೆ ಉದರವೂ ಹಿಗ್ಗಬೇಕು (ಇದನ್ನು ಅಭ್ಯಾಸ ಮಾಡಿಸುವ ಕಸರತ್ತುಗಳೂ ಇವೆ). (ಇ) ದೇಹದ ಯಾವುದೇ ಅಂಗದಲ್ಲಿ ತುಯ್ತ, ಬಿಗಿತ ಇಲ್ಲದಂತೆ ಮಾಡಿ. (ಕಣ್ಣು ಮುಚ್ಚಿ ಪಾದದಿಂದಾರಂಭಿಸಿ ದೇಹದ ಒಂದೊಂದೇ ಬಾಗದ ಮೇಲೆ ಅವಧಾನ ಕೇಂದ್ರೀಕರಿಸಿ ಅದು ವಿರಮಿಸುವಂತೆ ಮಾನಸಿಕ ಸೂಚನೆ ಕೊಡುವುದು ಅಥವ ಅದನ್ನು ಮೊದಲು ಬಿಗಿಗೊಳಿಸಿ ನಂತರ ಸಡಿಲವಾಗಿಸುವುದು ಜನಪ್ರಿಯ ತಂತ್ರ). ಈ ಎಲ್ಲ ಕಸರತ್ತುಗಳ ಉದ್ದೇಶ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಯ್ತರಹಿತ ಸ್ಥಿತಿ ಸಾಧಿಸುವುದು.

೩. ಈ ಹಂತದಲ್ಲಿ ನಿಜವಾದ ಅಂತಃವೀಕ್ಷಣೆ ಆರಂಭವಾಗುತ್ತದೆ. ಆರಂಭಿಸುವುದು ಹೇಗೆ ಎಂಬುದು ವ್ಯಕ್ತಿಯ ಉದ್ದೇಶವನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ತನ್ನ ಶ್ವಾಸೋಚ್ಛ್ವಾಸ ಕ್ರಿಯೆಯ ಮೇಲೆ ಅಥವ ಇಷ್ಟದೇವತೆಯ ಮಾನಸಿಕಬಿಂಬಸಹಿತವಾದ ಹೆಸರಿನ ಮೇಲೆ ಅಥವ ‘ಗುರು’ ಹೇಳಿದ್ದರ ಮೇಲೆ ಅಥವ ತಾನು ಪರಿಹರಿಸಬೇಕೆಂದಿರುವ ಸಮಸ್ಯೆಯ ಮೇಲೆ ಅಥವ ರಮಣ ಮಹರ್ಷಿಗಳು ಹೇಳಿದಂತೆ ‘ನಾನು ಯಾರು?’ ಎಂಬ ವಿಷಯದ ಮೇಲೆ ಅಥವ ಮನಸ್ಸನ್ನು ಆಲೋಚನಾರಹಿತ ಸ್ಥಿತಿಗೆ ತರುವುದರ ಕುರಿತು ಅವಧಾನವನ್ನು ನೂರಕ್ಕೆ ನೂರರಷ್ಟು ಕೇಂದ್ರೀಕರಿಸಲು ಪ್ರಯತ್ನಿಸುವುದರೊಂದಿಗೆ ಆರಂಭವಾಗುತ್ತದೆ ಅಂತಃವೀಕ್ಷಣೆ. ಬೆಳಗ್ಗೆ ಅಂತಃವೀಕ್ಷಣೆ ಮಾಡುತ್ತಿದ್ದರೆ ಹಿಂದಿನ ದಿನದ ತನ್ನ ಚಟುವಟಿಕೆಗಳನ್ನು, ಸಂಜೆ ಮಾಡುತ್ತಿದ್ದರೆ ಆ ದಿನದ ತನ್ನ ಚಟುವಟಿಕೆಗಳನ್ನು ಸ್ವಮೌಲ್ಯಮಾಪನ ಮಾಡಿಕೊಳ್ಳುತ್ತಾ ಪುನಃ ಮೆಲುಕು ಹಾಕುವುದರೊಂದಿಗೆ ಅಂತಃವೀಕ್ಷಣೆ ಆರಂಭಿಸುವ ಕ್ರಮವೂ ಉಂಟು. ಈ ಸನ್ನಿವೇಶದಲ್ಲಿ ಮನಃಪಟಲದಲ್ಲಿ ಮೂಡುವ ಆಲೋಚನೆಗಳಲ್ಲಿ ಭಾವನಾತ್ಮಕನಾಗಿ ಪಾಲ್ಗೊಳ್ಳದೆಯೇ ವಿಷಯನಿಷ್ಠ ವಿಮರ್ಶಕ ದೃಷ್ಟಿಯಿಂದ ಅವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳ ಬೇಕಾದದ್ದು ಬಲು ಮುಖ್ಯ. ಆರಂಭಿಕ ದಿನಗಳಲ್ಲಿ ಮನಃಪಟಲದಲ್ಲಿ ಮೂಡಿದ್ದನ್ನು ಅರ್ಥೈಸಿಕೊಳ್ಳಲೂ ಅವು ಉದ್ದೀಪಿಸುವ ಸಂವೇದನೆಗಳನ್ನು ನಿಭಾಯಿಸಲೂ ‘ಗುರು’ವಿನ ಆವಶ್ಯಕತೆ ಬಹಳಷ್ಟು ಮಂದಿಗೆ ಇರುತ್ತದೆ. ( ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ—). ‘ಗುರು’ವಿನ ನೆರವು ಇಲ್ಲದೆಯೇ ಏಕಲವ್ಯನಂತೆ ಈ ಪ್ರಕ್ರಿಯೆಯ ಮೇಲೆ ಪ್ರಭುತ್ವ ಸ್ಥಾಪಿಸುವುದು ಅಸಾಧ್ಯವಲ್ಲವಾದರೂ ಏಕಲವ್ಯನಂಥವರಿಂದ ಮಾತ್ರ ಅದು ಸಾಧ್ಯ ಎಲ್ಲರಿಂದಲೂ ಅಲ್ಲ. ಆರಂಭದ ಕೆಲ ದಿನಗಳಲ್ಲಿ ‘ಅಚ್ಚರಿ’ದಾಯಕ ಲಾಭಗಳಾದಂತೆ ಅನ್ನಿಸಿ ತದನಂತರ ಅಡ್ಡಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ವ್ಯಕ್ತಿ ಏನನ್ನು ಕುರಿತು ಆಲೋಚಿಸಲು ಪ್ರಯತ್ನಿಸುತ್ತಿದ್ದಾನೋ ಅದಕ್ಕೆ ‘ಸಂಬಂಧವಿಲ್ಲದ’ ಅಥವ ‘ಅಸಂಗತ’ ಎಂದು ಮೇಲ್ನೋಟಕ್ಕೆ ಭಾಸವಾಗುವ ಏನೇನೋ ಆಲೋಚನೆಗಳು, ಮರೆತು ಹೋಗಿವೆ ಎಂದು ಭಾವಿಸಿದ್ದ ಗತಕಾಲದ ನೆನಪುಗಳು, ಅತೃಪ್ತ ಕಾಮನೆಗಳನ್ನು ಪೂರೈಸಬಲ್ಲ ಭ್ರಮಾಲೋಕ ಇವೇ ಮೊದಲಾದವು ಮನಃಪಟಲದ ಮೇಲೆ ಮೂಡತೊಡಗುವುದು ಸಾಮಾನ್ಯ. ಅನೇಕರು ಕಿರುನಿದ್ದೆಗೆ ಅಥವ ಅರೆನಿದ್ದೆಗೆ ಜಾರುವುದೂ ಉಂಟು. ಕೆಲವರಿಗೆ ದೇಹದ ಯಾವುದಾದರೊಂದು ಭಾಗದಲ್ಲಿ ತೀವ್ರ ತುರಿಕೆ ಉಂಟಾಗುವುದೂ ಈ ಪ್ರಕ್ರಿಯೆ ಮುಂದುವರಿಸುವುದು ಅಸಾಧ್ಯ ಅನ್ನುವಷ್ಟು ಚಡಪಡಿಕೆ ಕೆಲವರಿಗೆ ಉಂಟಾಗುವುದೂ ಇದೆ. ಇವೆಲ್ಲವನ್ನೂ ನಿಭಾಯಿಸಲು ಕಲಿಯಬೇಕೇ ವಿನಾ ತಡೆಗಟ್ಟಲು ಪ್ರಯತ್ನಿಸಿದರೆ ಮನಃಸ್ವಾಸ್ಥ್ಯ ಕೆಡಬಹುದು. ನಿಭಾಯಿಸಲು ಸಾಧ್ಯವಿಲ್ಲ ಎಂದಾದರೆ ಆ ವ್ಯಕ್ತಿಗೆ ‘ಗುರು’ವಿನ ಆವಶ್ಯಕತೆ ಇದೆ ಎಂದೇ ಅರ್ಥ. ಅಂಥವರು ಸ್ವಯಂಕಲಿಕೆಯನ್ನು ಬಿಟ್ಟು ತನಗೆ ಹೊಂದಿಕೊಳ್ಳುವ ‘ಗುರು’ವಿನ ಮಾರ್ಗದರ್ಶನ ಪಡೆಯುವುದು ಒಳಿತು. ನಿಭಾಯಿಸಲು ಕಲಿತು ಮುಂದುವರಿದರೆ ಇಷ್ಟಾರ್ಥ ಸಿದ್ಧಿಸುವುದರಲ್ಲಿ ಸಂಶಯವಿಲ್ಲ.

‘ವ್ಯಕ್ತಿ ಏನನ್ನು ಕುರಿತು ಆಲೋಚಿಸಲು ಪ್ರಯತ್ನಿಸುತ್ತಿದ್ದಾನೋ ಅದಕ್ಕೆ ‘ಸಂಬಂಧವಿಲ್ಲದ’ ಅಥವ ‘ಅಸಂಗತ’ ಎಂದು ಮೇಲ್ನೋಟಕ್ಕೆ ಭಾಸವಾಗುವ ಏನೇನೋ ಆಲೋಚನೆಗಳು, ಮರೆತು ಹೋಗಿವೆ ಎಂದು ಭಾವಿಸಿದ್ದ ಗತಕಾಲದ ನೆನಪುಗಳು’ ಮನಃಪಟಲದಲ್ಲಿ ಮೂಡುವುದು ಸರ್ವೇಸಾಮಾನ್ಯ ಎಂದು ಈ ಮುನ್ನ ಹೇಳಿದ್ದು ಸರಿಯಷ್ಟೆ? ಮನಸ್ಸಿನ ಅಜಾಗೃತ ಭಾಗ ಅನ್ನುವುದು ವ್ಯಕ್ತಿಯ ಸಮಸ್ತ ಜೀವನಾನುಭವಗಳ ಉಗ್ರಾಣ. ಇಲ್ಲಿ ಹುದುಗಿರುವ ಅನುಭವಗಳು ವ್ಯಕ್ತಿಯ ಅರಿವಿಗೆ ಬರದಂತೆ ಜಾಗೃತ ಮನಸ್ಸಿನ ವ್ಯವಹಾರಗಳನ್ನು ತೆರೆಯಮರೆಯಿಂದ ನಿಯಂತ್ರಿಸುತ್ತವೆ (ಪುನರ್ಜನ್ಮ-ಪರ ವಾದಿಗಳು ಜನ್ಮಜನ್ಮಾಂತರದ ಅನುಭವಗಳೂ ಇಲ್ಲಿರುತ್ತವೆ ಅನ್ನುತ್ತಾರೆ), ಅಂತಃವೀಕ್ಷಣೆಯನ್ನು ಛಲಬಿಡದೆ ಮುಂದುವರಿಸಿದರೆ ನಾವು ಯಾವ ಉದ್ದೇಶಕ್ಕಾಗಿ ಅಂತಃವೀಕ್ಷಣೆಯನ್ನು ಆರಂಭಿಸಿದೆವೋ ಅದರ ಈಡೇರಿಕೆಗೆ ಪೂರಕವಾಗುವ ಮಾಹಿತಿಯೂ ಮನಸ್ಸಿನ ಅಜಾಗೃತ ಭಾಗದಿಂದ ಜಾಗೃತಭಾಗಕ್ಕೆ ಬಂದೇಬರುತ್ತದೆ, ಅಂತು ಬಂದದ್ದು ವ್ಯಕ್ತಿಯ ಅರಿವಿಗೂ ಬರುತ್ತದೆ (ಇದೇ ‘ಜ್ಞಾನೋದಯ’). ಅಂತಃವೀಕ್ಷಣೆ ಮಾಡಲಾರಂಭಿಸಿದ ಎಷ್ಟು ಕಾಲಾನಂತರ ಇಂತಾಗುತ್ತದೆ ಎಂಬುದು, ವ್ಯಕ್ತಿಯ ಉದ್ದೇಶದ ಸ್ವರೂಪ, ಉದ್ದೇಶ ಈಡೆರಿಕೆಗಾಗಿ ಇರುವ ತುಡಿತದ ತೀವ್ರತೆ. ಪ್ರಯತ್ನದ ಪ್ರಾಮಾಣಿಕತೆ ಇವೇ ಮೊದಲಾದವನ್ನು ಆಧರಿಸಿರುತ್ತದೆ. ಆದ್ದರಿಂದ ಅನಿರೀಕ್ಷಿತ ಕಾಲಾವಧಿಯಲ್ಲಿ ಅನಿರೀಕ್ಷಿತ ರೀತಿಯಲ್ಲಿ ಲಾಭವಾಗುತ್ತದೆ ಎಂದಷ್ಟೇ ಹೇಳಲು ಸಾಧ್ಯ.

ಅಂದಮೇಲೆ, ಅಂತಃವೀಕ್ಷಣೆಯನ್ನು ಮಾಡಿಕೋಳ್ಳುವುದರಿಂದ ‘ಪರ’ದ ಚಿಂತೆಯಿಲ್ಲದವರಿಗೂ ‘ಇಹ’ದಲ್ಲಿ ಯಶಸ್ವಿಗಳಾಗಲೇ ಬೇಕೆಂಬ ತುಡಿತ ಇರುವವರಿಗೂ ಅನನುಕೂಲಕ್ಕಿಂತ (ದಿನಕ್ಕೆ ಕನಿಷ್ಠಪಕ್ಷ ೨೦ ನಿಮಿಷಗಳನ್ನು ಮೀಸಲಿಡುವುದನ್ನು ಅನನುಕೂಲ ಅನ್ನುವುದಾದರೆ) ಅನುಕೂಲಗಳೇ ಜಾಸ್ತಿ ಎಂದು ಈ ತನಕ ನಡೆದಿರುವ ಎಲ್ಲ ಅಧ್ಯಯನಗಳೂ ಅಂತಃವೀಕ್ಷಣೆ ಮಾಡಿದವರ ಅನುಭವಗಳೂ ಸಾಬೀತು ಪಡಿಸಿವೆ.

‘ನಮ್ಮ ಭವಿಷ್ಯದ ರೂವಾರಿಗಳು ನಾವೇ ಆಗಿರುವುದರಿಂದ’ ಅಂತಃವೀಕ್ಷಣೆ ಮಾಡದೆಯೇ ಸುಖವಾಗಿ ಬದುಕಬಲ್ಲೆ ಎಂದು ತೀರ್ಮಾನಿಸುವ ಸ್ವಾತಂತ್ರ್ಯವೂ ನಿಮಗಿದೆ.

Advertisements
This entry was posted in ಅನುಭವಾಮೃತ, ನನ್ನ ಜೀವನ ದರ್ಶನ, ಶಿಕ್ಷಣ. Bookmark the permalink.

1 Response to ಅಂತಃವಿಕ್ಷಣೆ – ಸ್ವವಿಕಾಸಕ್ಕೆ ಸುಲಭಲಭ್ಯ ಸಾಧನ

  1. rukminimala ಹೇಳುತ್ತಾರೆ:

    `ನಮ್ಮ ಭವಿಷ್ಯದ ರೂವಾರಿಗಳು ನಾವೇ ಆಗಿರುವುದರಿಂದ’ ಅಂತರ್ವೀಕ್ಷಣೆ ಮಾಡದೆಯೇ ಸುಖವಾಗಿ ಬದುಕಬಲ್ಲೆ ಎಂದು ತೀರ್ಮಾನಿಸುವ ಸ್ವಾತಂತ್ರ್ಯವೂ ನಿಮಗಿದೆ.’ ಸದ್ಯಕ್ಕೆ ಹೀಗೇ ಇರುವ ಮನಸ್ಸು ಮಾಡಿರುವೆ.
    ಮಾಲಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s