ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೪

ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುವಾಗ ನಾನು ಪತ್ತೆಹಚ್ಚಿದ, ನೋಡಿದ ‘ನಕಲು ಮಾಡುವಿಕೆ’ಗಳ ಪೈಕಿ ಅದ್ವಿತೀಯವಾದವುಗಳನ್ನು ಈ ಕಂತಿನಲ್ಲಿ ಮೆಲುಕು ಹಾಕುತ್ತಿದ್ದೇನೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸ ಬಯಸುತ್ತೇನೆ. ‘ನಕಲು ಮಾಡುವಿಕೆಯನ್ನು ಉತ್ತೇಜಿಸುವ ಪರಿಸರ ಒದಗಿಸದೇ ಇರುವುದಕ್ಕೆ ಒತ್ತು ಕೊಡಬೇಕೇ ವಿನಾ ನಕಲು ಮಾಡುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದಕ್ಕಲ್ಲ’ ಎಂಬುದು ನನ್ನ ನಿಲುವು. ನನ್ನ ವೃತ್ತಿ ಜೀವನದಲ್ಲಿ ನಕಲು ಮಾಡುತ್ತಿದ್ದ ಅಸಂಖ್ಯ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿದ್ದೇನೆ. ಇವರ ಪೈಕಿ ೯೯.೯೯% ವಿದ್ಯಾರ್ಥಿಗಳ ಕುರಿತು ವರದಿ ಮಾಡಿ ಅವರು ಅದೆಷ್ಠೋ ಪರೀಕ್ಷೆಗಳನ್ನು ತೆಗೆದುಕೊಳ್ಳದಂತೆ ಮಾಡುವ ಶಿಕ್ಷೆಗೆ ಒಳಪಡಿಸಿಲ್ಲ. ಇದಕ್ಕೆ ಬದಲಾಗಿ ನಾನು ಈ ಮುಂದಿನಂತೆ ಏರುಧ್ವನಿಯಲ್ಲಿ ಒಂದು ಪುಟ್ಟ ಭಾಷಣ ಬಿಗಿಯುತ್ತಿದ್ದೆ – “ನೋಡಪ್ಪಾ/ನೋಡಮ್ಮಾ ನೀನು ಮಾಡುತ್ತಿರುವುದು ತಪ್ಪು. ಈಗ ಮಾಡಿರುವ ತಪ್ಪನ್ನು ನನ್ನ ಹತ್ತಿರ ಮೌಖಿಕವಾಗಿ ಒಪ್ಪಿಕೊಂಡು ನಕಲು ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನೂ ಉತ್ತರ ಪತ್ರಿಕೆಯನ್ನೂ ನನಗೆ ಒಪ್ಪಿಸಿ ಪರೀಕ್ಷಾಕೊಠಡಿಯಿಂದ ಹೊರನಡೆ. ಈ ಬಾರಿ ಉಳಿದಿರುವ ಪರೀಕ್ಷೆಗಳಿಗೆ ‘ಸ್ವ-ಇಚ್ಛೆಯಿಂದ’ ಗೈರುಹಾಜರಾಗು. ತತ್ಪರಿಣಾಮವಾಗಿ ಈ ಬಾರಿ ನೀನು ನಪಾಸಗುತ್ತೀ. ಇದಕ್ಕೆ ಒಪ್ಪದೇ ಹೋದರೆ ನಾನು ಕಾನೂನು ರೀತ್ಯಾ ಮುಖ್ಯಸ್ಥರಿಗೆ ವರದಿ ನೀಡುತ್ತೇನೆ. ಆಗ ಪರೀಕ್ಷಾಮಂಡಲಿ ವಿಚಾರಣೆ ನಡೆಸಿ ಇನ್ನು ೨-೪ ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸುತ್ತಾರೆ. ಒಂದು ವೇಳೆ ನನಗೆ ಬೆದರಿಕೆ ಹಾಕುವುದು ಅಥವ ಜಗಳವಾಡುವುದು ಮಾಡಿದರೆ ಅದರಿಂದ ನನ್ನ ಮೇಲಾಗುವ ಪರಿಣಾಮ ಏನೇ ಆಗಿದ್ದರೂ ನಾನು ಕಾನೂನು ರೀತ್ಯಾ ಮುಖ್ಯಸ್ಥರಿಗೆ ವರದಿ ನೀಡುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಆಯ್ಕೆ ನಿನ್ನದು.” ನನ್ನ  ವೃತ್ತಿಜೀವನದಲ್ಲಿ ಎಲ್ಲರೂ ನನ್ನ ‘ಉಪದೇಶ’ದಂತೆಯೇ ನಡೆದುಕೊಂಡಿದ್ದಾರೆ. ನಕಲು ಮಾಡುವಿಕೆಯ ಪರಿಣಾಮದ ಕುರಿತಂತೆ ನನ್ನ ಅನುಭವಾಧಾರಿತ ತೀರ್ಮಾನಗಳು ಇಂತಿವೆ – ಒಂದು ಬಾರಿಯೂನಕಲು ಮಾಡುವಿಕೆಯನ್ನೇ ನಂಬಿದವರು ಮೇಲ್ವಿಚಾರಕರ ನೆರವಿಲ್ಲದಿದ್ದರೆ ಉತ್ತೀರ್ಣರಾಗುವುದೇ ಅಪರೂಪ. ಶಾಸ್ರೋಕ್ತವಾಗಿ ಅಧ್ಯಯಿಸದವರಿಗೆ ನಕಲು ಮಾಡುವ ಅವಕಾಶ ಸಿಕ್ಕರೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದು ಅಪರೂಪ. ಉತ್ತಮ ಶ್ರೇಣಿಯಲ್ಲಿ ಸ್ವಸಾಮರ್ಥ್ಯದಿಂದ ಉತ್ತೀರ್ಣರಾಗಬಲ್ಲವರಿಗೆ ಅವರಿಗೆ ಗೊತ್ತಿಲ್ಲದೇ ಇದ್ದ ಅಂಶಗಳನ್ನು ನಕಲು ಮಾಡುವ ಅವಕಾಶ ಸಿಕ್ಕರೆ ಅವರು ಮತ್ತಷ್ಟು ಹೆಚ್ಚು ಅಂಕ ಗಳಿಸಬಲ್ಲರಾದರೂ ನನ್ನ ಅನುಭವದಲ್ಲಿ ಅವರು ನಕಲು ಮಾಡುವ ಸಂಭವನೀಯತೆ ಬಲು ಕಮ್ಮಿ. ‘ಸಾಮೂಹಿಕ ನಕಲು ಮಾಡುವಿಕೆ’ ವಿದ್ಯಮಾನ ಜರಗುವ ಕೇಂದ್ರಗಳಲ್ಲಿ ಶೇಕಡಾವಾರು ಫಲಿತಾಂಶ ಚೆನ್ನಾಗಿರುತ್ತದೆಯಾದರೂ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಉತ್ತಮ ಅಂಕ ಗಳಿಸುವ ಸಂಭವನೀಯತೆ ಬಲು ಕಮ್ಮಿ.

೧. ಎಸ್ ಎಸ್ ಎಲ್ ಸಿ ಪರೀಕ್ಷಾಕೇಂದ್ರವೊಂದರಲ್ಲಿ ಆದ ವಿಶಿಷ್ಟ ಅನುಭವ ಇದು. ಒಂದು ಅಥವ ಹೆಚ್ಚು ಬಾರಿ ನಪಾಸಾದವರೇ ಇದ್ದ ಕೊಠಡಿಯೊಂದರ ಉಸ್ತುವಾಯ ಜವಾಬ್ದಾರಿ ನನ್ನದು. ಅಭ್ಯರ್ಥಿಗಳು ನಕಲು ಮಾಡುವುದಕ್ಕೆ ಅಡ್ಡಿ ಪಡಿಸಿದರೆ ಗೂಂಡಾಗಿರಿಗೆ ಹಿಂಜರಿಯದವರೆಂಬ ಮಾಹಿತಿಯನ್ನು ಮಿತ್ರರು ಮೊದಲೇ ತಿಳಿಸಿದ್ದರು. ಅಭ್ಯರ್ಥಿಗಳು ನಿಗದಿತ ಸ್ಥಳಗಳಲ್ಲಿ ಆಸೀನರಾಗಿ ಉತ್ತರ ಪತ್ರಿಕೆಯಲ್ಲಿ ತಮ್ಮ ರಿಜಿಸ್ಟರ್ ನಂಬರ್ ಮೊದಲಾದ ಮಾಹಿತಿ ಬರೆದ ನಂತರ ಪ್ರಶ್ನೆ ಪತ್ರಿಕೆ ವಿತರಿಸುವುದಕ್ಕೆ ಮುನ್ನ ‘ನಕಲು ಮಾಡುವುದನ್ನು ನಾನು ವಿರೋಧಿಸುವುವನಾದ್ದರಿಂದ ನಕಲು ಮಾಡುವವರು ನನ್ನಕೈಗೆ ಸಿಕ್ಕಿ ಬಿದ್ದರೆ ಏನು ಮಾಡುತ್ತೇನೆ ಎಂಬುದನ್ನು ಬಲು ಸ್ಪಷ್ಟವಾಗಿ ವಿವರಿಸಿ ಇದಕ್ಕೆ ಯಾರದಾದರೂ ಅಭ್ಯಂತರವಿದ್ದರೆ ಈಗಲೇ ತಿಳಿಸುವುದು ಉತ್ತಮವೆಂದೂ ಇದರಿಂದ ಮುಂದೆ ಅಹಿತಕರ ಘಟನೆಗಳು ಆಗುವುದನ್ನೂ ಪೋಲೀಸರ ಮಧ್ಯಪ್ರವೇಶವನ್ನು ತಪ್ಪಿಸಬಹುದೆಂದೂ ನನ್ನದೇ ಆದ ಶೈಲಿಯಲ್ಲಿ ಪುಟ್ಟ ಭಾಷಣ ಮಾಡಿದ್ದಾಯಿತು. ನಕಲು ಮಾಡಲು ಸಿದ್ಧರಾಗಿ ಬಂದಿದ್ದವರು ತಂದಿರುವ ಸಾಮಗ್ರಿಗಳನ್ನು ತಾವಾಗಿಯೇ ಅಗಲೇ ನನಗೊಪ್ಪಿಸಿದರೆ ಯಾವ ತೊಂದರೆಯೂ ಆಗುವುದಿಲ್ಲವೆಂಬ ಭರವಸೆಯನ್ನು ನೀಡಿದ್ದೂ ಆಯಿತು. ತತ್ಪರಿಣಾಮವಾಗಿ ಕೆಲವರು ತಾವು ತಂದಿದ್ದ ಸಾಮಗ್ರಿಗಳನ್ನು ಒಪ್ಪಿಸಿದ್ದೂ ಆಯಿತು. ನಕಲು ಮಾಡಬೇಕೆಂದು ದೃಢನಿಶ್ಚಯ ಮಾಡಿದವರಿದ್ದರೆ ನನ್ನ ಕಣ್ಣು ತಪ್ಪಿಸಿ ನಕಲು ಮಾಡಲು ಪ್ರಯತ್ನಿಸುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲವೆಂದೂ, ಅಂಥವರು ನನ್ನ ಕೈಗೆ ಅಕಸ್ಮಾತ್ ಸಿಕ್ಕಿಬಿದ್ದರೆ ಸದ್ದಿಲ್ಲದೇ ಆ ಸಾಮಗ್ರಿಯನ್ನು ನನ್ನ ಕೈಗೊಪ್ಪಿಸಿದರೆ ಏನೂ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆ ನೀಡಿ, ಹಾಗೆ ಮಾಡದಿದ್ದರೆ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮ ಖಂಡಿತವಾಗಿಯೂ ಕೈಗೊಳ್ಳುತ್ತೇನೆ ಎಂದೂ ತಿಳಿಸಿದ್ದಾಯಿತು. ತತ್ಪರಿಣಾಮವಾಗಿ ಪರೀಕ್ಷಾವಧಿ ಕಳ್ಳ-ಪೋಲೀಸ್ ಆಟದ ಅವಧಿಯಾಗಿತ್ತು. ಅಚ್ಚರಿಯಾಗುವಷ್ಟು ಪರಿಮಾಣದಲ್ಲಿ ಬರೆದುಕೊಂಡು ಬಂದಿದ್ದ ನಾನಾ ಗಾತ್ರದ ಕಾಗದದ ಹಾಳೆಗಳು ನನ್ನ ಕೈ ಸೇರಿದವು. ವಶಪಡಿಸಿಕೊಂಡಿದ್ದ ಕಾಗದಗಳನ್ನು ತುಂಬಿಸಲು ಕೊಠಡಿಯ ಹೊರಗೆ ಒಂದು ದೊಡ್ಡ ಬುಟ್ಟಿಯನ್ನು ಇಡಬೇಕಾಯಿತು. ಮರುದಿನ ಆ ಕೊಠಡಿಯಲ್ಲಿ ಹಿಂದಿನ ದಿನ ಇಲ್ಲದೇ ಇದ್ದ ಕುರ್ಚಿಯೊಂದು ಪ್ರತ್ಯಕ್ಷವಾಗಿತ್ತು. ಪರೀಕ್ಷೆ ಆರಂಭವಾಗಿ ೧೦-೧೫ ನಿಮಿಷಗಳು ಕಳೆಯವಷ್ಟರಲ್ಲಿ ಕೆಲವು ಅಭ್ಯರ್ಥಿಗಳು “ಈ ದಿನ ಯಾರೂ ಏನೂ ತಂದಿಲ್ಲ, ನೀವು ಸುಮ್ಮನೆ ಯಾಕೆ ಓಡಾಡುತ್ತೀರಿ, ಸ್ವಲ್ಪ ಹೊತ್ತು ಕುಳಿತುಕೊಂಡೇ ನೋಡಬಹುದಲ್ಲಾ” ಎಂಬ ಸಲಹೆ ನೀಡಿದರು. ಇದು ಅಸಹಜ ವರ್ತನೆಯಾದ್ದರಿಂದ ತರಗತಿಯಲ್ಲಿ ಕುಳಿತು ಪಾಠಮಾಡುವ ಮತ್ತು ಪರೀಕ್ಷಾ ಕೊಠಡಿಯಲ್ಲಿ ಕುಳಿತು ವೀಕ್ಷಿಸುವ ಅಭ್ಯಾಸ ನನಗೆ ಇಲ್ಲವಾದ್ದರಿಂದ ನನಗೆ ಆಯಾಸವಾಗುವ ಕುರಿತು ಚಿಂತಿಸದೆ ತಮ್ಮ ಗಮನವನ್ನು ಉತ್ತರ ಬರೆಯುವತ್ತ ಕೇಂದ್ರೀಕರಿಸುವುದೇ ಉತ್ತಮ ಎಂಬ ಸಲಹೆ ನೀಡಿ ನನ್ನ ‘ಕಾವಲುಗಾರಿಕೆ’ ಕಾಯಕ ಮುಂದುವರಿಸಿದೆ. ತುಸು ಸಮಯದ ಬಳಿಕ ಕುರ್ಚಿಗೆ ಹೆಚ್ಚುಕಮ್ಮಿ ತಾಗುವಷ್ಟು ಸಮೀಪದಲ್ಲಿದ್ದ ಬೆಂಚಿನಲ್ಲಿ ಕುಳಿತಿದ್ದ ಅಭ್ಯರ್ಥಿ ತನ್ನ ಕೈಯನ್ನು ಪದೇಪದೇ ತುರಿಸಿಕೊಳ್ಳುತ್ತಿದ್ದದ್ದೂ ತದನಂತರ ಕಾಲು ತುರಿಸಿಕೊಳ್ಳುತ್ತಿದ್ದದ್ದೂ ನನ್ನ ಗಮನಕ್ಕೆ ಬಂದಿತು. ಏಕೆಂದು ವಿಚಾರಿಸಿದಾಗ ‘ಯಾಕೋ ವಿಪರೀತ ತುರಿಸ್ತಾ ಇದೆ’ ಅಂದು ತುರಿಸುವಿಕೆ ಬರೆಯುವಿಕೆಗಳನ್ನು ಮುಂದುವರಿಸಿದ. ಉಳಿದವರ ಪೈಕಿ ಕೆಲವರು ನಗುತ್ತಿದ್ದದ್ದನ್ನೂ ಗಮನಿಸಿದೆ. ಪರೀಕ್ಷಾನಂತರ ವಿಚಾರಿಸಿದಾಗ ತಿಳಿಯಿತು – ಮುಟ್ಟಿದರೆ ನವೆ ಉಂಟುಮಾಡುವ ಯಾವುದೋ ಎಲೆಯ ರಸವನ್ನು ಕುರ್ಚಿಗೆ ಆ ಮಕ್ಕಳು ಉಜ್ಜಿದ್ದರು. ಕುರ್ಚಿಯ ಪಕ್ಕದಲ್ಲಿ ಕುಳಿತಿದ್ದವನ ಕೈಕಾಲು ಆಕಸ್ಮಿಕವಾಗಿ ಕುರ್ಚಿಗೆ ತುಸು ಕಾಲ ತಗುಲಿಕೊಂಡಿತ್ತು.

ಆ ಮಕ್ಕಳನ್ನು ಕರೆಸಿ ‘ಪರರಿಗೆ ಕೇಡು ಬಯಸಿದರೆ —–’ ಉಕ್ತಿಯನ್ನು ನಗುತ್ತಾ ಹೇಳಿದೆ.

೨. ಇದು ನಡೆದದ್ದು ನಾನು ಮೈಸೂರು ವಿಶ್ವವಿದ್ಯಾನಿಲಯವು ಅಂಚೆ ಮತ್ತು ತೆರಪಿನ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ತೆರೆದಿದ್ದ ಪರೀಕ್ಷಾಕೇಂದ್ರವೊಂದರಲ್ಲಿ ‘ಡೆಪ್ಯುಟಿ ಚೀಫ್’ ಕಾರ್ಯ ನಿಭಾಯಿಸುತ್ತಿದ್ದಾಗ. ಎರಡನೇ ದಿನ ಪರೀಕ್ಷೆ ಮುಗಿದ ಬಳಿಕ ಉತ್ತರಪತ್ರಿಕೆಗಳನ್ನು ಶಾಸ್ತ್ರೋಕ್ತವಾಗಿ ಪಿಂಡಿ ಕಟ್ಟಿಸುತ್ತಿದ್ದಾಗ ಒಂದು ಉತ್ತರಪತ್ರಿಕೆಯ ಹಾಳೆಗಳು ಅಸಹಜ ಅನ್ನಬಹುದಾದ ರೀತಿಯಲ್ಲಿ ಸಡಿಲವಾಗಿದ್ದವು. ಆ ಉತ್ತರಪತ್ರಿಕೆಯನ್ನು ಪರಿಶೀಲಿಸಿದಾಗ ಹಾಳೆಗಳಿಗೆ ಮುದ್ರಣಾಲಯದಲ್ಲಿ ಹಾಕಿದ್ದ ಪಿನ್ನುಗಳನ್ನು ಯಾರೋ ಬಿಡಿಸಿ ಪುನಃ ಹಾಕಿದಂತಿತ್ತು. ಹಾಳೆಗಳ ಸಂಖ್ಯೆ, ಗಾತ್ರ, ಗುಣಮಟ್ಟದಲ್ಲಿ ವ್ಯತ್ಯಾಸ ಇಲ್ಲದ್ದರಿಂದ ಏನಾಗಿರಬಹುದೆಂದು ಊಹಿಸಲೂ ಆಗಲಿಲ್ಲ. ಆ ಉತ್ತರ ಪತ್ರಿಕೆಯಲ್ಲಿ ನಮೂದಾಗಿದ್ದ ರಿಜಿಸ್ಟರ್ ನಂಬರ್ ಯಾರದ್ದು, ಆ ವ್ಯಕ್ತಿಗೆ ಮುಂದಿನ ಪರೀಕ್ಷೆ ಯಾವ ದಿನದಂದು ಇದೆ, ಯಾವ ಕೊಠಡಿಯಲ್ಲಿ ಆ ವ್ಯಕ್ತಿ ಇರುತ್ತಾನೆ ಎಂಬ ಮಾಹಿತಿ ಸಂಗ್ರಹಿಸಿದೆ. ಆ ದಿನದಂದು ಆ ವ್ಯಕ್ತಿ ಗೆ ತಿಳಿಯದಂತೆ ವಿಕ್ಷಿಸಲಾರಂಭಿಸಿದೆ. ಸುಮಾರು ೧/೨ ತಾಸು ಕಳೆದ ಬಳಿಕ ಆತ ತನಗೆ ಆ ದಿನ ಸಿಕ್ಕಿದ್ದ ಉತ್ತರಪತ್ರಿಕೆಯ ಪಿನ್ನುಗಳನ್ನು ತುಸು ಬಿಡಿಸಿ ಮಧ್ಯದ ೨ ಹಾಳೆಗಳನ್ನು ತೆಗೆದು ಬನಿಯನ್ ಒಳಕ್ಕೆ ಸೇರಿಸಿದ. ಬನಿಯನ್ ಒಳಗಿನಿಂದ ಎರಡು ಹಾಳೆಗಳನ್ನು ತೆಗೆದು ಉತ್ತರ ಪತ್ರಿಕೆಗೆ ಜೋಡಿಸಿ ಪಿನ್ನುಗಳನ್ನು ಮೊದಲಿನಂತೆ ಬಾಗಿಸಿದ. ಆ ಸಂದರ್ಭದಲ್ಲಿ ಆತನನ್ನು ಹಿಡಿದು ಮುಖ್ಯಸ್ಥರ ಕೊಠಡಿಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಿಳಿದದ್ದು ಇಷ್ಟು – ಆತ ಆ ಊರಿನ ರಾಷ್ಟ್ರೀಕೃತ ಬ್ಯಾಕೊಂದರ ಉದ್ಯೋಗಿ. ಈ ಪರೀಕ್ಷೆ ಪಾಸಾದರೆ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇತ್ತು. ಪರೀಕ್ಷೆ ಆರಂಭವಾಗುವ ದಿನದ ಹಿಂದಿನ ದಿನದಂದು ಕೇಂದ್ರದ ಪರಿಚಿತ ಉದ್ಯೋಗಿಯೊಬ್ಬನನ್ನು ಮಾತನಾಡಿಸುವ ನೆಪದಲ್ಲಿ ಉತ್ತರ ಪತ್ರಿಕೆಗಳನ್ನು ಕೊಠಡಿವಾರು ಪಿಂಡಿ ಕಟ್ಟುತ್ತಿದ್ದ ಕೊಠಡಿಯ ಒಳಹೊಕ್ಕು ಅಲ್ಲಿಂದ ಒಂದು ಉತ್ತರ ಪತ್ರಿಕೆಯನ್ನು ಕದ್ದೊಯ್ದು ಅದರ ಮಧ್ಯದ ಎರಡು ಹಾಳೆಗಳನ್ನು ಕಿತ್ತು ಉತ್ತರಪತ್ರಿಕೆಯನ್ನು ಪುನಃ ಸ್ವಸ್ಥಾನಕ್ಕೆ ಸೇರಿಸಿದ್ದ. ಈ ಬಾರಿ ಖಂಡಿತ ಕೇಳುತ್ತಾರೆ ಎಂದು ಆತ ಭಾವಿಸಿದ್ದ ಕೆಲವು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳನ್ನು ಬರೆದು ತರುತ್ತಿದ್ದ. ಪರೀಕ್ಷೆಯ ದಿನ ಸಿಕ್ಕುವ ಉತ್ತರ ಪತ್ರಿಕೆಯ ಮಧ್ಯದ ಎರಡು ಹಾಳೆಗಳನ್ನು ಉತ್ತರಗಳಿದ್ದ ಹಾಳೆಗಳನ್ನು ಸೇರಿಸಿದ್ದ. ಬರೆದು ತಂದಿದ್ದ ಉತ್ತರಗಳನ್ನು ಹೊಡೆದು ಹಾಕಿ ಬೇಕಾದದ್ದು ಇದ್ದರೆ ಅದನ್ನು ಲಂಬಿಸಿ ಬರೆಯುವ ಯೋಜನೆ ಅವನದ್ದು. ಅರ್ಥಾತ್, ಪ್ರತೀ ಪರೀಕ್ಷೆಗೂ ಮುನ್ನವೇ ಆತನ ಹತ್ತಿರ ಉತ್ತರಪತ್ರಿಕೆಯ ಎರಡು ಖಾಲಿ ಹಾಳೆಗಳಿರುತ್ತಿದ್ದವು.

ಈತನನ್ನೇನು ಮಾಡುವುದು ಎಂಬ ಸಮಸ್ಯೆ ನಮ್ಮನ್ನು ಕಾಡತೊಡಗಿತು. ಕಾನೂನು ರೀತ್ಯಾ ಕ್ರಮ ಕೈಗೊಂಡರೆ, ಆತನನ್ನು ಪೋಲೀಸರಿಗೆ ಒಪ್ಪಿಸುವ ಸಾಧ್ಯತೆಯೂ ತತ್ಪರಿಣಾಮವಾಗಿ ಆತ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇತ್ತು. ಆತನಿದ್ದ ಬ್ಯಾಂಕಿನ ಮ್ಯಾನೇಜರರನ್ನೂ ಕರೆಸಿ ಸುದೀರ್ಘಚರ್ಚೆಯ ಬಳಿಕ ಆತನಿಂದ ವಿವರವಾದ ಕ್ಷಮಾಯಾಚನೆ ಪತ್ರ ಬರೆಯಿಸಿಕೊಂಡು ಮಿಕ್ಕುಳಿದ ಪರೀಕ್ಷೆಗಳಿಗೆ ಗೈರುಹಾಜರಾಗುವಂತೆ ಸೂಚಿಸಿ ಬಿಟ್ಟುಬಿಟ್ಟೆವು.

೩. ಇದು ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ಬಿ ಎಡ್ ಪರೀಕ್ಷೆ ನಡೆಯುತ್ತಿದ್ದಾಗ. ಒಬ್ಬ ಅಭ್ಯರ್ಥಿ ಪದೇಪದೇ ಮಡಚಿದ್ದ ಅಚ್ಚ ಬಿಳಿಬಣ್ಣದ ಹೊಚ್ಚಹೊಸ ಕರವಸ್ತ್ರವನ್ನು ಬಿಡಿಸಿ ಮುಖ ಒರೆಸಿಕೊಳ್ಳುವುದು, ತದನಂತರ ಅದನ್ನು ಬಲು ಜಾಗರೂಕತೆಯಿಂದ ಮಡಚಿ ಇಡುವುದು ನನ್ನ ಗಮನ ಸೆಳೆಯಿತು. ಸುದೀರ್ಘ ಕಾಲ ದೂರದಿಂದ ಈ ಅಸ್ವಾಭಾವಿಕ ವರ್ತನೆ ಗಮನಿಸಿದ ಬಳಿಕ ಕರವಸ್ತ್ರದಲ್ಲಿ ಏನೋ ಮರ್ಮವಿದೆ ಅಂದನ್ನಿಸಿತು. ಅಭ್ಯರ್ಥಿಯ ಬಳಿ ಹೋಗಿ ಕರವಸ್ತ್ರ ನೀಡುವಂತೆ ಕೇಳಿದೆ, ವ್ಯಕ್ತಿ ಆಗ ನಿಜವಾಗಿಯೂ ಬೆವರಿದ್ದನ್ನು ಗಮನಿಸಿದೆ. ಕರವಸ್ತ್ರ ಬಿಡಿಸಿ ನೋಡಿದಾಗ ಅಚ್ಚರಿಯೊಂದು ಕಾದಿತ್ತು. ಅಂದಿನ ದಿನಗಳಲ್ಲಿ ‘ಕಾಪೀಯಿಂಗ್ ಪೆನ್ಸಿಲ್’ ಎಂಬ ವಿಶಿಷ್ಟ ಪೆನ್ಸಿಲ್ ಲಭ್ಯವಿತ್ತು. ಸಾಮಾನ್ಯವಾಗಿ ಅದನ್ನು ಕಾರ್ಬನ್ ಪ್ರತಿಗಳನ್ನು ಪಡೆಯಲು ಬರೆಯುವಾಗ ಉಪಯೋಗಿಸುತ್ತಿದ್ದರು. ಆ ಪೆನ್ಸಿಲ್ ನಲ್ಲಿ ಬರೆದದ್ದು ಇಂದಿನ ಎಚ್ ಬಿ ಪೆನ್ಸಿಲಿನಲ್ಲಿ ಬರೆದಂತೆ ಗೋಚರಿಸುತ್ತಿದ್ದರೂ ತುಸು ನೀರಿನ ಪಸೆ ತಗುಲಿದಾಕ್ಷಣ ನೇರಳೆ ಬಣ್ಣಕ್ಕೆ ತಿರುಗುತ್ತಿತ್ತು. ಆ ಅಭ್ಯರ್ಥಿ ತನಗೆ ಬೇಕಾದದ್ದೆಲ್ಲವನ್ನೂ ಆ ಪೆನ್ಸಿಲ್ ಉಪಯೋಗಿಸಿ ಬಿಳಿ ಕರವಸ್ತ್ರದಲ್ಲಿ ಬರೆದುಕೊಂಡು ಬಂದಿದ್ದ. ಮುಖ ಒರೆಸಿದಾಗ ತುಸು ಬೆವರು ತಗುಲಿ ಬರೆದದ್ದು ಗೋಚರಿಸುತ್ತಿತ್ತು!

೪. ಇದೂ ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ನಾನು ‘ಡೆಪ್ಯುಟಿ ಚೀಫ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ. ಅದೇ ಕೇಂದ್ರದಲ್ಲಿ ಪಿ ಯು ಸಿ ಅಂತಿಮ ಪರೀಕ್ಷೆಯೂ ನಡೆಯುತ್ತಿತ್ತು. ಪಿ ಯು ಸಿ ಪರೀಕ್ಷೆಗೂ ನನಗೂ ಸಂಬಂಧವಿಲ್ಲದಿದ್ದರೂ ಅದು ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಕುತೂಹಲದಿಂದ ಒಂದು ಕೊಠಡಿಯ ಹೊರಗೆ ನಿಂತಿದ್ದೆ. ಒಳಗೆ ಅಭ್ಯರ್ಥಿಗಳಿಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇತಿಹಾಸ ಉಪನ್ಯಾಸಕರಿಗೂ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. “ಸರ್ ನೀವೇ ನಮಗೆ ಇತಿಹಾಸ ಪಾಠ ಮಾಡುತ್ತಿದ್ದವರು. ಪ್ರಶ್ನೆ ಪತ್ರಿಕೆಯಲ್ಲಿ ‘ಕೊಟ್ಟಿರುವ ಭಾರತದ ಭೂಪಟದಲ್ಲಿ ತಾಳಿಕೋಟೆ ಗುರುತಿಸಿ’ ಎಂಬ ಪ್ರಶ್ನೆ ಇದೆ. ಇದನ್ನೆಲ್ಲ ನೀವು ನಮಗೆ ಹೇಳಿಯೇ ಕೊಟ್ಟಿಲ್ಲ. ಉತ್ತರ ಹೇಗೆ ಬರೆಯುವುದು?” ಎಂಬುದು ಅಭ್ಯರ್ಥಿಗಳ ಪ್ರಮುಖ ಪ್ರಶ್ನೆಯಾಗಿತ್ತು. ಅವರ ಗಲಾಟೆ ತಡೆಯಲಾಗದೆ ಮೇಲ್ವಿಚಾರಕರು ಹೊರಬಂದು ಬಾಗಿಲಿನ ಬಳಿ ವಿದ್ಯಾರ್ಥಿಗಳು ಇಟ್ಟಿದ್ದ ಪುಸ್ತಕಗಳ ರಾಶಿಯಲ್ಲಿ ಇತಿಹಾಸ ಪಠ್ಯಪುಸ್ತಕ ಹುಡುಕಿ ತಗೆದರು. ಪುಸ್ತಕದಲ್ಲಿ ಸಂಬಂಧಿತ ಪಾಠ ಇರುವ ಪುಟಗಳಲ್ಲಿ ಒಂದೆಡೆ ತಾಳಿಕೋಟೆ ಇರುವ ತಾಣ ಗುರುತಿಸಿದ್ದ ಭೂಪಟ ಹುಡುಕಿ, ತಾಳಿಕೋಟೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿದರು. ಬಲು ಸಂತೋಷದಿಂದ ಒಳಕ್ಕೆ ಧಾವಿಸಿ, ಪಠ್ಯಪುಸ್ತಕದಲ್ಲಿದ್ದ ಭೂಪಟ ಪ್ರದರ್ಶಿಸುತ್ತಾ ಹೇಳಿದರು “ತಾಳಿಕೋಟೆ ಇಲ್ಲಿದೆ ನೋಡಿ. ನಿಮ್ಮ ಭೂಪಟದಲ್ಲಿ ಬೇಗ ಗುರುತಿಸಿಕೊಳ್ಳಿ” (!!!)

೫. ಇದು ನಡೆದದ್ದು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಪರೀಕ್ಷಾಕೇಂದ್ರವೊಂದರಲ್ಲಿ ಬಿ ಎಡ್ ಪರೀಕ್ಷೆ ನಡೆಯುತ್ತಿದ್ದಾಗ. ಒಬ್ಬ ಮಧ್ಯವಯಸ್ಸಿನ ಮಹಿಳಾ ಅಭ್ಯರ್ಥಿ ನಕಲು ಮಾಡಲು ಬರೆದು ತಂದಿದ್ದ ಹಾಳೆಯ ಮೇಲೆ ಕುಳಿತು, ಯಾರೂ ನೋಡುತ್ತಿಲ್ಲವೆಂದು ತಾನು ನಂಬಿದಾಗ ತುಸು ಜರುಗಿ ಹಾಳೆಯನ್ನು ನೋಡಿ ಬರೆಯತ್ತಿದ್ದದ್ದು ನನ್ನ ಕಣ್ಣಿಗೆ ಬಿತ್ತು. ಆಕೆಯನ್ನು ಎಬ್ಬಿಸಿ ಹಾಳೆಯನ್ನು ವಶಪಡಿಸಿಕೊಂಡು ಕೇಳಿದೆ “ನಿಮಗೆಷ್ಟು ಮಕ್ಕಳಿದ್ದಾರಮ್ಮ”  “ಇಬ್ಬರು” “ಅವರಿಗೆ ಈ ನಕಲು ಮಾಡುವ ವಿದ್ಯೆಯನ್ನು ಚೆನ್ನಾಗಿ ಕಲಿಸುತ್ತಿದ್ದೀರಿ ತಾನೆ?” ಆಕೆ ತಲೆತಗ್ಗಿಸಿ ಹೊರನಡೆದವರು ಮುಂದಿನ ಪರೀಕ್ಷೆಗಳಿಗೆ ಹಾಜರಾಗಲಿಲ್ಲ.

Advertisements
This entry was posted in ನೆನಪಿನ ದೋಣಿಯಲಿ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s