ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೩

ಮೊದಲನೇ ಕಂತಿನಲ್ಲಿ ಪ್ರೌಢಶಾಲೆಯ ಶಿಕ್ಷಕನಾಗಿದ್ದಾಗಿನ ನೆನಪುಗಳನ್ನೂ ಎರಡನೇ ಕಂತಿನಲ್ಲಿ ಬಿ ಎಡ್ ಕಾಲೇಜಿನ ಸೇವಾವಧಿಯಲ್ಲಿನ ಕೆಲವು ಸ್ವಾರಸ್ಯಕರ ನೆನಪುಗಳನ್ನೂ ಹಂಚಿಕೊಂಡಿದ್ದೆ. ಈ ಕಂತಿನಲ್ಲಿ ಒಂದು ಖಾಸಗಿ ಅನುದಾನಿತ ಬಿ ಎಡ್ ಕಾಲೇಜಿನ ಪ್ರಾಂಶುಪಾಲನಾಗಿ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡುವ ಸಂದರ್ಭದಲ್ಲಿ ಆದ ಅನುಭವಗಳ ಪೈಕಿ ಕೆಲವನ್ನು ಹಂಚಿಕೊಳ್ಳುತ್ತೇನೆ. ನನ್ನ ಸೇವಾವಧಿಯ ಕೊನೆಯ ೩ ವರ್ಷಗಳಲ್ಲಿ ಕೇಂದ್ರೀಕೃತ ಪ್ರವೇಶ ಕೊಡುವ ಪದ್ಧತಿ ಬಂದ ನಂತರ ಇದರಿಂದ ಮುಕ್ತಿ ದೊರೆಯಿತು.

೧. ನಾನು ಪ್ರಾಂಶುಪಾಲನಾಗಿ ಬಡ್ತಿ ಪಡೆದಿದ್ದ ಮೊದಲನೇ ವರ್ಷ. ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದೆ. ಇಬ್ಬರು ಯುವಕರು ನನ್ನ ಕೊಠಡಿಗೆ ಬಂದರು. “ನಮಸ್ಕಾರ ಸರ್” “ನಮಸ್ಕಾರ, ಕುಳಿತುಕೊಳ್ಳಿ. ನನ್ನಿಂದ ಏನಾಗಬೇಕಿತ್ತು?” “ನೀವು ನಮ್ಮ ಕಡೆಯವರು ಅಂತ ಗೊತ್ತಾಯಿತು. ಆದ್ದರಿಂದ ಸಹಾಯ ಮಾಡಬಹುದು ಅಂತ ಬಂದೆವು” “ನೀವು ಯಾವ ಕಡೆಯವರು?” “ದಕ್ಷಿಣ ಕನ್ನಡ, ಪುತ್ತೂರು. ಈರೆಗು ತುಳು ಬರ್ಪುಂಡಾ?” “ಕ್ಷಮಿಸಿ. ನಾನು ಹುಟ್ಟಿ ಬೆಳೆದಿದ್ದೆಲ್ಲ ಕೊಡಗಿನಲ್ಲಿ. ದಕ್ಷಿಣ ಕನ್ನಡದಲ್ಲಿ ಬಂಧುಗಳಿದ್ದಾರೆ, ಅಷ್ಟೆ. ತುಳು ಸುಮಾರಾಗಿ ಅರ್ಥ ಆಗುತ್ತೆ, ಮಾತನಾಡಲು ಬರುವುದಿಲ್ಲ. ಈಗ ಹೇಳಿ ನನ್ನಿಂದ ಏನಾಗಬೇಕಿತ್ತು?” “ಏನಿಲ್ಲ, ನಮ್ಮ ಹುಡುಗನೊಬ್ಬ ನಿಮ್ಮಲ್ಲಿ ಬಿ ಎಡ್ ಗೆ ಅಪ್ಲೈ ಮಾಡಿದ್ದಾನೆ” “ಅವನ ಫೈನಲ್ ಇಯರ್ ಮಾರ್ಕ್ಸ್ ಎಷ್ಟು?” “೪೯.೯%” “ಮೂರೂ ವರ್ಷದ್ದು ಸೇರಿಸಿದರೆ?” “೪೫%” “ಎಸ್ ಸಿ, ಎಸ್ ಟಿ ವರ್ಗದವನೋ?” “ಅಲ್ಲ, ಜನರಲ್ ಮೆರಿಟ್” “ಸರಿ ಬಿಡಿ, ಮುಂದೇನೂ ಹೇಳೋದೇ ಬೇಡ. ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದ ಬಿ ಎಡ್ ಕಾಲೇಜಿನಲ್ಲಿ ಅವನಿಗೆ ಸೀಟ್ ಸಿಕ್ಕೋದಿಲ್ಲ. ಎಸ್ ಸಿ, ಎಸ್ ಟಿ ವರ್ಗದವರಿಗೆ ೪೫%, ಇತರರಿಗೆ ೫೦% ಮಾರ್ಕ್ಸ್ ಇರಲೇಬೇಕು” “ಅದು ಗೊತ್ತಿತ್ತು. ನೀವು ನಮ್ಮ ಕಡೆಯವರಲ್ಲವಾ. ಏನಾದರೂ ಉಪಾಯ ಮಾದಬಹುದೇನೋ ಅಂತ” “ನನ್ನ ಕಡೆಯವರಲ್ಲ, ನನ್ನ ಮಗನೇ ಆದರೂ ಸೀಟು ಕೊಡಿಸಲು ಸಾಧ್ಯವಿಲ್ಲ” “ಏನೂ ಮಾಡೋದಿಕ್ಕೆ ಆಗೋದಿಲ್ವ? ಸ್ವಲ್ಪ ಜಾಸ್ತಿ ಡೊನೇಷನ್ ಕೊಟ್ರೆ?” “ನೀವು ಎಷ್ಟೇ ಲಕ್ಷ ಯಾರಿಗೇ ಕೊಟ್ಟರೂ ಆಗೋದಿಲ್ಲ. ಬೇರೆ ಕಡೆ ಹೋಗಿ ಯಾರಿಗಾದರೂ ಹಣ ಕೊಟ್ಟರೆ ಕಳೆದುಕೊಳ್ಳುವುದು ಗ್ಯಾರಂಟಿ” “ಸರಿ ಹಾಗಾದ್ರೆ ಬರ್ತೇವೆ” ನಮಸ್ಕಾರ ಹೇಳದೆಯೇ ತೆರಳಿದರು

[ನನ್ನ ಸೇವಾವಧಿಯಲ್ಲಿ ನೀವು ನಮ್ಮವರು, ನಮ್ಮ ಊರಿನವರು ಇತ್ಯಾದಿ ಪರಿಚಯದೊಂದಿಗೆ ಬಂದವರ ಪೈಕಿ ೯೯% ಮಂದಿ ಪ್ರವೇಶ ಪಡೆಯಲು ಅನರ್ಹರಾಗಿದ್ದವರೇ ಆಗಿದ್ದರು]

೨. ಪ್ರವೇಶ ಪ್ರಕ್ರಿಯೆಯ ಸಂದರ್ಭದಲ್ಲೊಂದು ದಿನ ೩-೪ ಜನ ಹಿಂಬಾಲಕರೊಂದಿಗೆ ಸ್ಥಳೀಯ ಶಾಸಕರೊಬ್ಬರ ಆಗಮನವಾಯಿತು. ಅನುಮತಿ ಕೋರಿ ಬಳಿಕ ಒಳಬರುವ ಪದ್ಧತಿ ಅನೇಕ ಜನಪ್ರತಿನಿಧಿಗಳಿಗೆ ತಿಳಿದೇ ಇರುವುದಿಲ್ಲ. ಜನಪ್ರತಿನಿಧಿಯಾದ್ದರಿಂದ ಎದ್ದು ನಿಂತು ನಮಸ್ಕರಿಸಿ ಅವರಿಗೆ ಕುಳಿತುಕೊಳ್ಳುವಂತೆ ಹೇಳಿ ಅವರು ಕುಳಿತ ನಂತರ ನಾನೂ ಕುಳಿತುಕೊಳ್ಳುವ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಪಾಲಿಸಿದ್ದಾಯಿತು (ಇದರಲ್ಲಿ ಲೋಪವಾದರೆ ಅಧಿಕಾರಿಗಳಿಗೆ ತೊಂದರೆ ಆಗುತ್ತದೆ). “ನೊಡಿ ಪ್ರಿನ್ಸಿಪಾಲರೆ, ನಮ್ಮ ಹುಡುಗ ಒಬ್ಬ ನಿಮ್ಮ ಕಾಲೇಜಿಗೆ ಸೀಟಿಗೆ ಅಪ್ಲೈ ಮಾಡಿದ್ದಾನೆ. ನಿಮಗೆ ಹೇಳ್ಬಿಟ್ಟು ಅವನಿಗೆ ಸೀಟು ಗ್ಯಾರಂಟಿ ಮಾಡ್ಕೊಂಡು ಹೋಗೋಣ ಅಂತ ಬಂದೆ” “ಕ್ಷಮಿಸಿ, ಈಗಲೇ ಸೀಟು ಸಿಕ್ಕುತ್ತೆ ಅಂತ ಗ್ಯಾರಂಟಿ ಕೊಡೋದು ಕಷ್ಟ. ೧೦೦ ಸೀಟಿಗೆ ಸುಮಾರು ೨೦೦೦ ಅಪ್ಲಿಕೇಶನ್ ಬಂದಿದೆ. ಆದ್ದರಿಂದ ನಾವು ಮೆರಿಟ್ ಲಿಸ್ಟ್ ತಯಾರಿಸಿ ಮೇಲಿನ ೫೦೦ ಮಂದಿಯದ್ದನ್ನು ನೋಟೀಸ್ ಬೋರ್ಡ್ ನಲ್ಲಿ ಹಾಕ್ತೇವೆ. ತದನಂತರ ಮಿಸಲಾತಿ ನಿಯಮಾವಳಿ ಉಲ್ಲಂಘನೆ ಆಗದಂತೆ ಮೆರಿಟ್ ಪ್ರಕಾರ ಕೊಡ್ತಾ ಹೋಗ್ತೇವೆ” “ಅದೆಲ್ಲ ಗೊತ್ತು. ನೀವು ಈ ಹುಡುಗನಿಗೆ ಸೀಟ್ ಕೊಡ್ಲೇಬೇಕು” “ಹೇಗೆ ಕೊಡೋದು? ಈ ಕಾನೂನು ಮಾಡಿದ್ದು ನಾನಲ್ಲ ನೀವೇ, ಅಂದರೆ ಶಾಸಕಾಂಗದವರು. ಅದರಂತೆ ನಡ್ಕೊಳ್ಳೋದು ಮಾತ್ರ ನನ್ನ ಕೆಲ್ಸ” “ಹಾಗಾದ್ರೆ ನಮ್ಮ ಹುಡುಗನಿಗೆ ಸೀಟು ಕೊಡೋಲ್ಲ ಅನ್ನಿ. ಪಾಪ ಬಡವ, ಬ್ರಾಹ್ಮಣ ಅಂತ ಬಂದೆ. ನೋಡಿ ನಾನು ಒಕ್ಕಲಿಗನಾದ್ರೂ ಎಲ್ರನ್ನೂ ಸಮಾನವಾಗಿ ಕಾಣ್ತೇನೆ” “ನಿಮ್ಮ ಬಗ್ಗೆ ತುಂಬಾ ಕೇಳಿದ್ದೇನೆ. ನಿಮ್ಮಂಥವರು ಅಪರೂಪ ಬಿಡಿ. ಆದ್ರೇನು ಮಾಡೋದು ಈ ಕೇಸಲ್ಲಿ ನಾನು ಏನೂ ಸಹಾಯ ಮಾಡೋಕ್ಕಗಲ್ವಲ್ಲ ಅಂತ ಬೇಸರ ಆಗ್ತಾ ಇದೆ” “ಮ್ಯನೇಜ್ ಮೆಂಟ್ ಕೋಟಾದಲ್ಲಿ ಕೊಡಿ” “ಅದು ನೀವು ಅವರನ್ನೇ ಕೇಳ್ಬೇಕು. ಅವರು ಕಳುಹಿಸುವ ಅಭ್ಯರ್ಥಿಗೆ ಪ್ರವೇಶ ಪಡೆಯಲು ಕನಿಷ್ಠ ಅರ್ಹತೆ ಇದೆಯೋ ಅಂತ ನೋಡೋದು ಮಾತ್ರ ನನ್ನ ಕೆಲಸ. ಇದ್ದರೆ, ಪ್ರವೇಶ ಕೊಡೋದು ಬಿಡೋದು ಅವರಿಷ್ಟ” ಶಾಶಕರು ‘ಬನ್ರೋ, ಈವಯ್ಯನ ತಾವ ಮಾತಾಡಿ ಪ್ರಯೋಜನ ಇಲ್ಲ, ಅಧ್ಯಕ್ಷರನ್ನೇ ನೋಡೋಣ’ ಅನ್ನುತ್ತಾ ಹಿಂಬಾಲಕರೊಡನೆ ಹೊರನಡೆದರು. ನಾನೂ ನಿಟ್ಟುಸಿರು ಬಿಟ್ಟೆ.

೩. ಅದೇ ಶಾಸಕರು ಇನ್ನೊಂದು ವರ್ಷ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರತ್ಯಕ್ಷರಾದರು. ಯಥಾ ಪ್ರಕಾರ ಹುಡುಗಿಯೊಬ್ಬಳಿಗೆ ಪ್ರವೇಶ ನೀಡುವಂತೆ ಒತ್ತಾಯಿಸಲು ಅವರು ಬಂದಿದ್ದರು. “ಸರ್, ಈ ಅಭ್ಯರ್ಥಿಗೆ  ಅರ್ಹತೆಯೇ ಇಲ್ಲವಲ್ಲ?” “ಯಾಕೆ, ೬೨% ಮಾರ್ಕ್ಸ್ ಇದೆಯಲ್ಲ” “ಅದಿದೆ. ಆದರೆ ಪ್ರವೇಶ ಪಡೆಯ ಬೇಕಾದರೆ ಪದವಿ ತರಗತಿಯಲ್ಲಿ ಕಡ್ಡಾಯವಾಗಿ ಓದಿರಲೇ ಬೇಕಾದ ಐಚ್ಛಿಕ ವಿಷಯಗಳ ಪೈಕಿ ಒಂದನ್ನೂ ಓದಿಲ್ಲವಲ್ಲ ಸರ್” “ ಯಾಕೆ ಓದಿದ್ದಾಳಲ್ಲ. ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ” “ಅದು ನಿಜ, ಆದರೆ ಮೈಕ್ರೋಬಯಾಲಜಿ ಓದಿದರೆ ಬಯಾಲಜಿ ಓದಿದ್ದಾರೆ ಅಂತ, ಬಯೋಕೆಮಿಸ್ಟ್ರಿ ಓದಿದರೆ ಕೆಮಿಸ್ಟ್ರಿ ಓದಿದ್ದಾರೆ ಅಂತ ಪರಿಗಣಿಸೋದಕ್ಕೆ ಆಗೋದಿಲ್ವಲ್ಲ” “ಏನು ಪ್ರಿನ್ಸಿಪಾಲ್ರೇ, ನಿಯಮಕ್ಕೆ ನೀವು ನಿಮ್ಮದೇ ಆದ ಇಂಟರ್ಪ್ರಿಟೇಷನ್ ಕೊಡ್ತಾ ಇದ್ದೀರಲ್ಲ?” “ಛೇ ಛೆ. ನಿಮ್ಹತ್ರ ಹಾಗೆಲ್ಲ ಮಾಡೋ ಧೈರ್ಯ ನನಗೆಲ್ಲಿದೆ. ಈಗ ಒಂದು ಕೆಲ್ಸ ಮಾಡಿ. ನಾನು ಮಾಡೋ ಅಡ್ಮಿಶನ್ ಗಳನ್ನು ಅಪ್ರೂವ್ ಮಾಡುವವರು ವಿಶ್ವವಿದ್ಯಾನಿಲಯದ ಕುಲಸಚಿವರು. ನಾನು ಈಗಲೇ ಅವರಿಂದ ಈ ಕುರಿತು ಸ್ಪಷ್ಟೀಕರಣ ಕೇಳಿ ಒಂದು ಪತ್ರ ಬರೀತೇನೆ. ಅವರು ಸಮ್ಮತಿಸಿದರೆ ನನ್ನದೇನೂ ಅಭ್ಯಂತರ ಇಲ್ಲ. ನೀವು ವಿಶ್ವವಿದ್ಯಾನಿಲಯದಲ್ಲಿ ಈ ಕುರಿತು ಕುಸಚಿವರ ಹತ್ತಿರ ಮಾತಾಡಿ” “ಸರಿ, ಅದೇನು ಲೆಟರ್ ಕೊಡ್ತೀರೋ ಕೊಡಿ. ನಾನೇ ತಗೊಂಡು ಹೋಗ್ತೇನೆ” ತಕ್ಷಣ ಕುಲಸಚಿವರಿಂದ ಸ್ಪಷ್ಟೀಕರಣ ಕೋರುವ ಪತ್ರ ಸಿದ್ಧಪಡಿಸಿ ಕೊಟ್ಟೆ. ಈ ನಿಯಮವನ್ನು ಬದಲಿಸುವ ಅಧಿಕಾರ ಕುಲಸಚಿವರಿಗೆ ಇಲ್ಲ ಎಂಬುದು ನನಗೆ ತಿಳಿದಿತ್ತು. ಆದರೂ ಶಾಶಕರಿಂದ ತಪ್ಪಿಸಿಕೊಳ್ಳುವ ಬೇರೆ ದಾರಿ ನನಗೆ ಹೊಳೆಯಲಿಲ್ಲ. ಿದಾಗಿ ೧-೨ ತಾಸಿನಲ್ಲಿ ಶಾಸಕರು ಪುನಃ ಪ್ರತ್ಯಕ್ಷರಾದರು. “ತಗೊಳ್ಳಿ ಪ್ರಿನ್ಸಿಪಾಲರೆ. ನೀವು ಕೇಳಿದ ಸ್ಪಷ್ಟೀಕರಣ ತಂದಿದ್ದೇನೆ” ಅಂದು ಪತ್ರವೊಂದನ್ನು ಕೊಟ್ಟರು. ಅದು ವಿಶ್ವವಿದ್ಯಾನಿಲಯ ಹೊರಡಿಸಿದ ಆದೇಶ. ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ ಪದವೀಧರರೂ ಬಿ ಎಡ್ ಪ್ರವೇಶ ಪಡೆಯಲು ಅರ್ಹರು ಎಂಬುದು ಅದರ ತಿರುಳು. ಈ ಪವಾಡ ಹೇಗಾಯಿತೆಂಬುದು ನನಗೆ ತಿಳಿಯದಿದ್ದರೂ “ಈ ಆದೇಶ ಬಂದ ಮೇಲೆ ನಿಮ್ಮ ಅಭ್ಯರ್ಥಿಗೆ ಪ್ರವೇಶ ನೀಡಲು ನನ್ನದೇನೂ ಅಭ್ಯಂತರವಿಲ್ಲ. ನನ್ನ ಪ್ರಕಾರ ಇದೊಂದು ಪವಾಡ. ಇರಲಿ. ನೀವು ಕೋಪಿಸಿಕೊಳ್ಳುವುದಿಲ್ಲ ಅನ್ನುವುದಾದರೆ ನನ್ನದೊಂದು ಹಿತನುಡಿ ಇದೆ, ಹೇಳಬಹುದೇ?” “ಹೇಳಿ, ಹೇಳಿ ನಿಮ್ಮಂಥ ಹಿರಿಯರ ಹಿತನುಡಿ ಕೇಳಲು ಏನೂ ತೊಂದರೆ ಇಲ್ಲ” “ನೀವು ಇಷ್ಟೆಲ್ಲ ಶ್ರಮವಹಿಸಿದ್ದರಿಂದ ಾ ಹುಡುಗಿಗೆ ಬಿ ಎಡ್ ಪ್ರವೇಶ ದೊರೆಯಿತು. ಆಕೆ ಬಿ ಎಡ್ ಪದವೀಧರಳೂ ಆಗುತ್ತಾಳೆ. ಆದರೂ, ತದನಂತರ ಯಾವುದೇ ಸರ್ಕಾರೀ ಶಾಲೆಯಲ್ಲಿ ಅಥವ ಅನುದಾನಿತ ಖಾಸಗಿ ಶಾಲೆಯಲ್ಲಿ ಆಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಸಂದರ್ಶನದ ಕರೆಯೂ ಬರುವುದಿಲ್ಲ” “ಏಕೆ” “ಸರ್ಕಾರೀ ನೇಮಕಾತಿ ನಿಯಮಗಳ ಪ್ರಕಾರ ಈ ವಿಷಯಗಳ ಪದವೀಧರರನ್ನು ಬಯಾಲಜಿ ಅಥವ ಕೆಮಿಸ್ಟ್ರಿ ಶಿಕ್ಷಕರಾಗಿ ನೇಮಕ ಮಾಡಕೂಡದು. ಅಂದ ಮೇಲೆ ಈ ಅಭ್ಯರ್ಥಿ ನಿರುದ್ಯೋಗೀ ಬಿ ಎಡ್ ಪದವೀಧರಳಾಗಿಯೇ ಉಳಿಯಬೇಕು, ಅಥವ ಯಾವುದಾದರೂ ಅನುದಾನರಹಿತ ಶಾಲೆಯಲ್ಲಿ ಶಾಶ್ವತವಾಗಿ ತಾತ್ಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕು. ಆದ್ದರಿಂದ ಇಷ್ಟೊಂದು ವೆಚ್ಚ ಮಾಡಿ ಬಿ ಎಡ್ ಪದವಿ ಗಳಿಸಬೇಕೇ ಎಂಬುದರ ಕುರಿತು ಆಲೋಚಿಸುವುದು ಒಳ್ಳೆಯದು” “ಅದರ ಯೋಚನೆ ನಮಗ್ಯಾಕೆ. ಬಿ ಎಡ್ ಸೇರಲು ನೆರವು ನೀಡಿ ಅಂತ ಬಂದಿದ್ದಾರೆ, ಅಡ್ಮಿಶನ್ ಮಾಡಿಸಿ ಕೊಟ್ಟಿದ್ದೇನೆ” ಅಮದು ತೆರಳಿದರು. ಮುಂದೆ ಆಕೆಯ ಭವಿಷ್ಯದ ಕುರಿತು ಅಂದಿದ್ದು ಅಕ್ಷರಶಃ ನಿಜವಾಗಿದೆ. ಆಕೆಗ ಪ್ರವೇಶ ನೀಡಿ ಸುಮಾರು ೧ ತಿಂಗಳಾಗುವಷ್ಟರಲ್ಲಿ ವಿಶ್ವವಿದ್ಯಾನಿಲಯದಿಂದ ಒಂದು ಪತ್ರ ಬಂದಿತು. ಅದರ ತಿರುಳು – ಈ ಹಿಂದೆ ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ ಪದವೀಧರರೂ ಬಿ ಎಡ್ ಪ್ರವೇಶ ಪಡೆಯಲು ಅರ್ಹರು ಎಂದು ವಿಶ್ವವಿದ್ಯಾನಿಲಯ ಹೊರಡಿಸಿದ್ದ ಆದೇಶ ಈ ಶೈಕ್ಷಣಿಕ ವರ್ಷ ಮಾತ್ರ ಜಾರಿಯಲ್ಲಿರುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಈ ಆದೇಶವನ್ನು ರದ್ದುಗೊಳಿಸಲಾಗಿದೆ! ಜೈ ಶಾಶಕ ಶಕ್ತಿ ಅನ್ನೋಣವೇ?

೪. ಒಂದು ದಿನ ಹಿರಿಯರೊಬ್ಬರು ಬಾಗಿಲು ತಟ್ಟಿ ಅತೀ ವಿನಯದಿಂದ  ಒಳಬರಲು ಅನುಮತಿ ಕೋರಿ ಅನುಮತಿ ನೀಡುವ ಮುನ್ನವೇ ಒಳಬಂದು ತಾವಾಗಿಯೇ ಆಸೀನರಾದರು. “ನನ್ನ ಮೊಮ್ಮಗನಿಗೆ ಬಿ ಎಡ್ ಗೆ ಪ್ರವೇಶ ಬೇಕಿತ್ತು. ವಿಶ್ವವಿದ್ಯಾನಿಲಯದ ಕುಲಪತಿಗಳ ಪರಿಚಯಸ್ಥರಾದ್ದರಿಂದ ಅವರ ಬಳಿ ಹೋದೆ. ಅವರು  ಒಂದು ಪತ್ರ ಕೊಟ್ಟು ನಿಮ್ಮನ್ನು ಕಾಣಲು ಹೇಳಿದರು” ಎಂದು ಒಂದು ಪತ್ರ ಮತ್ತು ಒಂದು ನಿಂಬೆಹಣ್ಣು ನೀಡಿದರು. ನಾನು ಅವರನ್ನು ದಿಟ್ಟಿಸಿ ನೋಡಿದಾಗ “ಅದು ನಾವು ನಿಮ್ಮಲ್ಲಿಟ್ಟಿರುವ ಗೌರವ ಸೂಚಕ ಅಷ್ಟೇ” ಅಂದರು. ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ  ಕುಲಪತಿಗಳು ನನ್ನ ಕಾಲೇಜಿನ ಪ್ರಾಶುಪಾಲರಿಗೆ ನೀಡಿದ್ದ  ಪತ್ರ ಅದಾಗಿತ್ತು. ಅದರ ತಿರುಳು – ಈ ಪತ್ರ ತರುವ ಅಭ್ಯರ್ಥಿ ಬಲು ಬಡವನಾಗಿರುವುದರಿಂದ ಕಾನೂನಿನನ್ವಯ ಅವನಿಗೆ ಪ್ರವೇಶ ನೀಡುವ ಕುರಿತು ಪರಿಶೀಲಿಸಿ. ಬಲು ಜವಾಬ್ದರೀಯುತ ಸ್ಥಾನಗಳನ್ನಲಂಕರಿಸಿದವರು ತಮ್ಮ ಹತ್ತಿರ ಇಂಥ ಬೇಡಿಕೆಗಳೊಂದಿಗೆ ಬರುವವರನ್ನು ತಮ್ಮ ಕೊಠಡಿಯಿಂದ ಗೌರವಯುತವಾಗಿ ‘ಓಡಿಸುವ’ ತಂತ್ರ ಇದು. ಆ ಅಭ್ಯರ್ಥಿಗೆ ಪ್ರವೇಶ ಪಡೆಉಲು ಇರಬೇಕಾದ ಕನಿಷ್ಠ ಅರ್ಹತೆಯೂ ಇರಲಿಲ್ಲ. ಇದನ್ನು ಆ ಹಿರಿಯರಿಗೆ ವಿವರಿಸಿದಾಗ ಅವರು “ಏನೋ ನೋಡಿ. ನೀವು ದೊಡ್ಡಮನಸ್ಸು ಮಾಡಬೇಕು. ನಿಮ್ಮ ಉಪಕಾರಕ್ಕೆ ಕೃತಜ್ಞತೆಯನ್ನು ನಮ್ಮ ಶಕ್ತ್ಯಾನುಸಾರ ತೋರಿಸುತ್ತೇವೆ (?!)” ಅಂದರು. “ನನ್ನ ಮನಸ್ಸು ಯಾವಾಗಲೂ ದೊಡ್ಡದೇ. ಆದರೆ ಈ ವಿಷಯದಲ್ಲಿ ನಾನು ನಿಸ್ಸಹಾಯಕ” “ಏನೂ ಮಾಡೋಕಾಗೋಲ್ಲ ಅನ್ನಿ” “ಯಾರಿಂದಲೂ ಏನೂ ಮಾಡೋದಕ್ಕಾಗೋದಿಲ್ಲ” “ಸರಿ ಹಾಗಾದರೆ ನಾನಿನ್ನು ಹೊರಡ್ತೇನೆ” “ಆಯಿತು. ಕ್ಷಮಿಸಿ, ನಿಮಗೆ ಸಹಾಯ ಮಾಡೋದಕ್ಕೆ ಆಗಲಿಲ್ಲ. ಅಂದಹಾಗೆ ಈ ನಿಂಬೆಹಣ್ಣು ಯಾಕೆ ವೇಸ್ಟ್ ಮಾಡ್ಬೇಕು. ತಗೊಂಡುಹೋಗಿ” ಮರುಮಾತನಾಡದೇ ನಿಂಬೆಹಣ್ಣು ತೆಗೆದುಕೊಂಡು ಹೊರನಡೆದರು.

೫. ಅದೊಂದು ದಿನ. ದೂರವಾಣಿ ರಿಂಗಣಿಸಿತು. “ಹಲೋ, ನಮಸ್ಕಾರ. ಸೋಮಾನಿ ಬಿಎಡ್ ಕಾಲೇಜಿನ ಪ್ರಿನ್ಸಿಪಾಲ್ ಮಾತಾಡ್ತಾ ಇದ್ದೇನೆ” “ಪ್ರಿನ್ಸಿಪಾಲ್ರೇ, ನಾನೊಬ್ಬ ಹುಡುಗನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೇನೆ. ಅವನಿಗೆ ನಿಮ್ಮ ಕಾಲೇಜಲ್ಲಿ  ಬಿ ಎಡ್ ಗೆ ಅಡ್ಮಿಟ್ ಆಗ್ಬೇಕಂತೆ” “ ತಮ್ಮ ಪರಿಚಯ —?” “ನಾನಪ್ಪ, —- ಮಿನಿಸ್ಟರು” “ಕ್ಷಮಿಸಿ, ಗೊತ್ತಾಗಲಿಲ್ಲ. ಅಭ್ಯರ್ಥಿಯನ್ನ ಮೂಲ ದಾಖಲೆಗಳ ಸಹಿತ ನನ್ನ ಕಾಣೋದಕ್ಕೆ ಹೇಳಿ. ಅವನ್ನ ನೋಡಿ ಸೀಟು ಕೊಡೋಕಾಗುತ್ತೋ ಇಲ್ವೋ ಅಂತ ಅವನಿಗೇ ಹೇಳ್ತೇನೆ” “ ಏ ಹಾಗೆ ಹೇಳಿದರೆ ಆಗೋದಿಲ್ಲ. ಅವನಿಗೊಂದು ಸೀಟು ಕೊಡ್ಲೇಬೇಕು” “ಕಾನೂನು ನಿಮಗೇ ಗೊತ್ತಿದೆಯಲ್ಲ ಸರ್” ‘ಅದೆಲ್ಲ ನನಗೂ ಗೊತ್ತು, ಅವನ್ನ ಕಳಿಸ್ತೇನೆ, ನೋಡಿ” ದೂರವಾಣಿಯ ಸಂಪರ್ಕ ಕಡಿತಗೊಳಿಸುವ ಮುನ್ನ ಅವರು ಬೇರೆ ಯಾರಿಗೋ ಹೇಳಿದ್ದು ಕೇಳಿಸಿತು “ ನಾನ್ಹೇಳ್ಲಿಲ್ವೇನಪ್ಪಾ, ಹಾಗೆಲ್ಲ ಈಗ ಕೊಡ್ಸೋಕಾಗೋಲ್ಲ ಅಂತ. ಈಗ ಅವರು ಮೆರಿಟ್ ಪ್ರಕಾರನೇ ಕೊಡ್ಬೇಕು. ಸುಮ್ಮನೆ ನನ್ನ ತಲೆ ತಿನ್ಬೇಡ ಹೋಗು. ನಮ್ಮ ಸೆಕ್ರೆಟರಿ ಒಂದು ಕಾಗದ ಕೊಡ್ತಾನೆ. ತಗೊಂಡು ಹೋಗಿ ನೋಡು” ಆತ ಬಂದಿದ್ದ, ಆತನಿಗೆ ಸೀಟು ಸಿಕ್ಕಲಿಲ್ಲ.

೬. ಒಬ್ಬ ವ್ಯಕ್ತಿ ಒಳ ಬಂದವರೇ “ನೀವು ಸೋಮವಾರಪೇಟೆ ಹೈಸ್ಕೂಲಿನಲ್ಲಂತೆ ಓದಿದ್ದು?” “ಹೌದು, ಸುಮಾರು ೨೫ ವರ್ಷಗಳ ಹಿಂದೆ” “ಹಾಗಾದರೆ ನಿಮಗೆ —- ಅವರು, ಅದೇ  — ಮಿನಿಸ್ಟರು ಗೊತ್ತಿರಬೇಕಲ್ಲ” “ಇಲ್ಲ, ಗೊತ್ತಿಲ್ಲ. ಅವರು ನನಗಿಂತ ಸೀನಿಯರ್. ಅದ್ಉ ಸರಿ. ಈಗ ನಿಮಗೆ ನನ್ನಿಂದ ಏನಾಗ ಬೇಕಿತ್ತು?” “ ಒಂದು ಸಣ್ಣ ಸಹಾಯ ಅಷ್ಟೆ. ನಮ್ಮ ಹುಡುಗಿಗೆ ಒಂದು ಸೀಟ್ ಬೇಕಿತ್ತು” “ಅಷ್ಟೇನಾ? ಮಾರ್ಕ್ಸ್ ಕಾರ್ಡ್ ತಂದಿದ್ದೀರಾ?” ಕೊಟ್ಟರು, ನೋಡಿದೆ, ಕನಿಷ್ಠ ಅರ್ಹತೆಯೇ ಇರಲಿಲ್ಲ. (ಅರ್ಹತೆ ಇದ್ದಿದ್ದರೆ ನನ್ನನ್ನು ಕಾಣಬೇಕಾಗಿರಲಿಲ್ಲ!) ವಿಷಯ ತಿಳಿಸಿದೆ. ಮಾತನಾಡದೇ ಹೊರಟು ಹೋದದ್ದು ನೋಡಿ ನನಗೆ ಬಹಳ ಆಶ್ಚರ್ಯ ಆಯಿತು. ಅದಾಗಿ ಎರಡು ದಿನಗಳ ನಂತರ ಾಸಾಮಿ ಪುನಃ ಪ್ರತ್ಯಕ್ಷರಾದರು. ಈ ಬಾರಿ ಅವರ ಬಳಿ ಸೀಟು ಗಿಟ್ಟಿಸಿಕೊಳ್ಳಲು ವಿಶೇಷ ಸಾಧನವೊಂದಿತ್ತು – ಅವರು ಈ ಹಿಂದೆಯೇ ಉಲ್ಲೇಖಿಸಿದ್ದ ಮಂತ್ರಿಗಳ ಆಪ್ತ ಸಹಾಯಕನಿಂದ ಒಂದು ಪತ್ರ. ಪತ್ರವನ್ನೋದಿ ಹಿಂದಿರುಗಿಸಿ ಹೇಳಿದೆ “ಈ ಪತ್ರದ ಆಧಾರದ ಮೇಲೆ ಸೀಟು ಕೊಡಲು ಸಾಧ್ಯವಿಲ್ಲ” “ಮಿನಿಸ್ಟ್ರು ಹೇಳಿದ್ರೂ ಕೊಡೋದಿಲ್ಲವ?” “ಮಿನಿಸ್ಟ್ರು ಲಿಖಿತ ಆದೇಶ ಕೊಟ್ಟರೆ ಖಂಡಿತಾ ಕೊಡ್ತೇನೆ” ಪುನ: ಮರುಮಾತನಾಡದೇ ಆತ ಹೊರನಡೆದರು. ಅದೇ ದಿನ ರಾತ್ರಿ ಸುಮಾರು ೧೧ ಗಂಟೆಗೆ ನನ್ನ ಮನೆಯಲ್ಲಿದ್ದ ಪ್ರಿನ್ಸಿಪಾಲರ ಅಧಿಕೃತ ದೂರವಾಣಿ ರಿಂಗಣಿಸಿತು “ಹಲೋ” “ಹಲೋ, ನಾನು —–ಮಿನಿಸ್ಟರ್ ಅವರ ಪರ್ಸನಲ್ ಅಸಿಸ್ಟೆಂಟ್ ಮಾತಾಡ್ತಾ ಇದ್ದೇನೆ” “ನಮಸ್ಕಾರ, ಹೇಳಿ ಏನಾಗ್ಬೇಕಿತ್ತು?” “ಅದೇ, ಮಿನಿಸ್ಟರ್ ಹೇಳಿದಂತೆ ಒಂದು ಲೆಟರ್ ಕೊಟ್ಟು ಒಬ್ರನ್ನ ನಿಮ್ಹತ್ರ ಕಳ್ಸಿದ್ದೆ. ಆಗೋಲ್ಲಾಂತ ಹಿಂದಕ್ಕೆ ಕಳ್ಸಿದ್ದೀರಿ” “ಹೌದು. ಅವನಿಗೆ ಕನಿಷ್ಠ ಅರ್ಹತೆಯೂ ಇಲ್ಲ” “ಮ್ಯಾನೇಜ್ಮೆಂಟ್ ಕೋಟಾದಲ್ಲಿ ಕೊಡಿ” “ಮೊದಲನೇದಾಗಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಕೊಡುವ ಅಧಿಕಾರ ನನಗಿಲ್ಲ. ಎರಡನೇದಾಗಿ, ಕನಿಷ್ಠ ಅರ್ಹತೆಯೂ ಇಲ್ಲದವರಿಗೆ ಮ್ಯಾನೇಜ್ಮೆಂಟೂ ತಮ್ಮ ಕೋಟದಲ್ಲಿ ಸೀಟು ಕೊಡೋಹಾಗಿಲ್ಲ” “ಇದು ಮಿನಿಸ್ಟರ್ ಗೆ ಬಹಳ ಬೇಕಾಗಿರೋ ಜನದ ಕ್ಯಾಂಡಿಡೇಟು. ಏನಾದ್ರೂ ಮಾಡ್ಬೇಕಲ್ಲ” “ಖಂಡಿತ ಮಾಡ್ಬಹುದು. ‘ಈ ವ್ಯಕ್ತಿ ಕಳೆದ ೩ ವರ್ಷಗಳಿಂದ ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರಿಗೆ ಬಿ ಎಡ್ ವ್ಯಾಸಂಗ ಮಾಡಲು ಒಂದು ವರ್ಷದ ವೇತನರಹಿತ ರಜೆ ಕೊಡಲೂ ಬಿ ಎಡ್ ಅಧ್ಯಯನಾವಧಿ ಮುಗಿದ ಬಳಿಕ ನಮ್ಮ ಶಾಲೆಯಲ್ಲಿಯೇ ಶಿಕ್ಷಕರಾಗಿ ಮುಂದುವರಿಸುವುದಾಗಿಯೂ ಒಂದು ಪ್ರಮಾಣಪತ್ರವನ್ನು ಸರ್ಕಾರೀ ಮಾನ್ಯತೆ ಇರುವ ಶಾಲೆಯಿಂದ ಪಡೆದು ಅದನ್ನು ಸಂಬಂಧಿಸಿದ ಡಿ ಡಿ ಪಿ ಐ ದೃಢೀಕರಿಸುವ ಸಹಿ ಮಾಡಿಸಿ ತಂದರೆ ಕೊಡಬಹುದು. ಏಕೆಂದರೆ ‘ಇನ್ ಸರ್ವೀಸ್’ ಕೋಟಾದಲ್ಲಿ ನಾವು ಕೆಲವು ಅಭ್ಯರ್ಥಿಗಳನ್ನು ಕನಿಷ್ಠ ಅರ್ಹತೆ ಇಲ್ಲದಿದ್ದರೂ ಅಡ್ಮಿಟ್ ಮಾಡಬಹುದು ಅಂತ ನಿಯಮ ಇದೆ” “ಹೌದಾ, ಹಾಗಾದರೆ ಆ ಕೋಟಾದಲ್ಲಿ ಇವನ್ನ ಅಡ್ಮಿಟ್ ಮಾಡಿಕೊಂಡ್ಬಿಡಿ. ಸಧ್ಯದಲ್ಲೇ ನೀವು ಹೇಳಿದ ಸರ್ಟಿಫಿಕೇಟ್ ಕಳ್ಸಿಕೊಡ್ತೇನೆ” “ಕ್ಷಮಿಸಿ. ಹಾಗೆ ಮಾಡೋದು ತಪ್ಪಾಗುತ್ತೆ. ನಾನು ಸರ್ಟೀಫಿಕೇಟ್ ನೋಡದೆಯೇ ಅಡ್ಮಿಟ್ ಮಾಡಿದ ನಂತರ ಸರ್ಟಿಫಿಕೇಟ್ ಸಮಯಕ್ಕೆ ಸರಿಯಾಗಿ ನನ್ನ ಕೈ ಸೇರದೇ ಹೋದರೆ ನನಗೆ ತೊಂದರೆ ಆಗುತ್ತೆ. ಆದ್ದರಿಂದ, ಸರ್ಟಿಫಿಕೇಟ್ ಸಹಿತವೇ ಅಭ್ಯರ್ಥಿಯನ್ನು ಕಳುಹಿಸಿ. ಅರ್ಜೆಂಟ್ ಏನಿಲ್ಲ. ಇನ್ನೂ ೨೦ ದಿವಸ ಸಮಯ ಇದೆ ಅಡ್ಮಿಷನ್ ಕ್ಲೋಸ್ ಆಗೋದಕ್ಕೆ” “ಸರಿ ಹಾಗಾದರೆ, ಹಾಗೇ ಮಾಡ್ತೇನೆ” ಆ ನಂತರ ಅಭ್ಯರ್ಥಿ ಬರಲೇ ಇಲ್ಲ. ಏಕೆಂದರೆ ನಾನು ಹೇಳಿದ ರೀತಿಯಲ್ಲಿ ಸುಳ್ಳು ಸರ್ಟಿಫಿಕೇಟ್ ತರುವುದು ಬಲು ಕಷ್ಟದ ಕೆಲಸ. ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶ ಇದೆ – ಮಿನಿಸ್ಟರ್ ನೇರವಾಗಿ ಆಗಲೀ ಪತ್ರ ಮುಖೇನ ಆಗಲೀ ನನ್ನನ್ನು ಸಂಪರ್ಕಿಸಿರಲಿಲ್ಲ.

Advertisements
This entry was posted in ನೆನಪಿನ ದೋಣಿಯಲಿ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s