ವೃತ್ತಿ ಜೀವನದ ಸ್ವಾರಸ್ಯಕರ ನೆನಪುಗಳು ೧

ಒಂದು ವರ್ಷ ಪಾಲಿಟೆಕ್ನಿಕ್ ನಲ್ಲಿ ‘ಡೆಮಾನಸ್ಟ್ರೇಟರ್ ಇನ್ ಫಿಸಿಕ್ಸ್’, ೫ ವರ್ಷ ಪ್ರೌಢಶಾಲಾ ಶಿಕ್ಷಕ, ೨೯ ವರ್ಷ ಬಿ ಎಡ್ ಕಾಲೇಜಿನಲ್ಲಿ ಉಪನ್ಯಾಸಕ-ಪ್ರವಾಚಕ-ಪ್ರಾಧ್ಯಾಪಕ-ಪ್ರಾಂಶುಪಾಲ, ನಿವೃತ್ತಿ ನಂತರದ ೩ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ -ಇಂತು ಒಟ್ಟು ೩೮ ವರ್ಷಕಾಲ ನಾನಾ ಸ್ತರಗಳಲ್ಲಿ ಅಧ್ಯಾಪನ ವೃತ್ತಿಯಲ್ಲಿದ್ದ ನಾನು ನನ್ನ ವೃತ್ತಿಜೀವನದ ಸಿಂಹಾವಲೋಕನ ಮಾಡಿದಾಗ ಮನಃಪಟಲದಲ್ಲಿ ಮೂಡಿದ ಸ್ವಾರಸ್ಯಕರ ಅನುಭವಗಳ ಪೈಕಿ ಕೆಲವನ್ನು ಕಂತುಗಳಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಮೊದಲನೇ ಕಂತಿನಲ್ಲಿ ಪ್ರೌಢಶಾಲಾ ಶಿಕ್ಷಕನಾಗಿದ್ದಾಗಿನ ಅನುಭವಗಳನ್ನು ಮೆಲುಕು ಹಾಕುತ್ತಿದ್ದೇನೆ. ಶಿಕ್ಷಕ ವೃತ್ತಿಯಲ್ಲಿ ಇರುವವರು ಇವುಗಳಿಂದ ತುಸು ಲಾಭ ಪಡೆಯಬಹುದು. ಇತರರಿಗೆ ತುಸು ಮನರಂಜನೆ ಆದೀತು ಎಂದು ಆಶಿಸುತ್ತೇನೆ. ಮೊದಲನೇ ಕಂತಿನ

೧. ೧೯೬೭-೭೦ ರ ಅವಧಿ. ಮಂಡ್ಯ ಜಿಲ್ಲೆಯ ಹಳ್ಳಿಯಂದರ ಪ್ರೌಢಶಾಲೆಯ ಶಿಕ್ಷಕ ನಾನು. ಇಂದಿನಂತೆ ಅಂದು ಕೂಡ ಪ್ರಾಥಮಿಕಶಾಲಾ ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಪ್ರೌಢಶಾಲಾ ಶಿಕ್ಷಕರೂ, ನಮಗಿಂತ ಜಾಸ್ತಿ ಕಲಿತಿದ್ದೇವೆ ಎಂಬ ಕೊಬ್ಬು ಪ್ರೌಢಶಾಲಾ ಶಿಕ್ಷಕರಿಗೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ಖಾಸಗಿಯಾಗಿ ದೂರುತ್ತಿದ್ದರು. ಈ ಎರಡು ಶಿಕ್ಷಕ ವರ್ಗದ ನಡುವಿನ ಕಂದಕ ಮುಚ್ಚಿ ತನ್ಮೂಲಕ ಶಿಕ್ಷಣ ವ್ಯವಸ್ಥೆಯ ಉದ್ಧಾರ ಮಾಡಲೋಸುಗ ‘ಶಾಲಾ ಸಂಕೀರ್ಣ (ಸ್ಕೂಲ್ ಕಾಂಪ್ಲೆಕ್ಸ್)’ ಎಂಬ ಸರ್ಕಾರೀ ಪ್ರಾಯೋಜಿತ ಶೂನ್ಯ ವೆಚ್ಚದ ಕಾರ್ಯಕ್ರಮವೊಂದು ಅನುಷ್ಠಾನಗೊಂಡಿತು. ಈ ಕಾರ್ಯಕ್ರಮದನ್ವಯ ಪ್ರತೀ ಪ್ರೌಢಶಾಲೆಯ ಶಿಕ್ಷಕರು ಆ ಶಾಲೆಯ ಆಸುಪಾಸಿನ ಪ್ರಾಥಮಿಕ ಶಾಲೆಗಳ ಶಿಕ್ಷಕರೂ ತಿಂಗಳಿಗೊಂದಾವರ್ತಿ ಸಭೆ ಸೇರಿ ವಿಚಾರವಿನಿಮಯ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಕೌಶಲಾಭಿವೃದ್ಧಿಗೆ ಪೂರಕವಾಗಬಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇ ಬೇಕಿತ್ತು. ಅಂಥ ಒಂದು ಸಭೇಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಇಂತೆಂದರು: “ನಿಮ್ಮ ವಿದ್ಯಾರ್ಥಿಗಳು ನಮ್ಮವರಿಗಿಂತ ದೊಡ್ಡವರು. ತಮ್ಮ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಂಡವರು. ಅವರಿಗೆ ಪಾಠ ಮಾಡುವುದು ಸುಲಭ. ನಮ್ಮ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ಪಾಠ ಮಾಡುವುದು ಕಷ್ಟ. ಪ್ರಾಥಮಿಕ ಶಾಲೆಯಲ್ಲಿ ಬೋಧನಾನುಭವ ಇಲ್ಲದ ನಿಮಗೆ ಇದು ಅರ್ಥವಾಗುವುದಿಲ್ಲ. ನಮ್ಮ ಮಕ್ಕಳಿಗೆ ನೀವು ಒಂದು ಪೀರಿಯಡ್ ಪಾಠ ಮಾಡಿ ಸಾಕು. ನಮ್ಮ ಕಷ್ಟ ಏನೆಂಬುದು ನಿಮಗೇ ತಿಳಿಯುತ್ತದೆ”. ಅದಕ್ಕೆ ನನ್ನ ಪ್ರತಿಕ್ರಿಯೆ ಇಂತಿತ್ತು: ‘ಆ ಮಕ್ಕಳಿಗೆ ಪಾಠ ಮಾಡಲು ಅನುಸರಿಸ ಬೇಕಾದ ಶಾಸ್ತ್ರೋಕ್ತ ವಿಧಾನದಲ್ಲಿ ಪಾಠ ಮಾಡಿದರೆ ಕಷ್ಟವಾಗುವುದಿಲ್ಲ. ಇನ್ನು ತರಗತಿಯಲ್ಲಿ ಶಿಸ್ತಿನ ವಿಷಯ. ಆ ವಯಸ್ಸಿನ ಮಕ್ಕಳು ನಿಶ್ಶಬ್ದವಾಗಿ ೪೦-೪೫ ನಿಮಿಷ ಕುಳಿತು ಏಕಾಗ್ರತೆಯಿಂದ ಪಾಠ ಕೇಳಬೇಕೆಂದು ನಿರೀಕ್ಷಿಸುವುದೇ ತಪ್ಪು. ಕಲಿಕೆಯಲ್ಲಿ ಅಂತ್ಯಗೊಳ್ಳುವ ತುಂಟಾಟ ಅಶಿಸ್ತು ಅಲ್ಲ. ತುಂಟಾಟಕ್ಕೆ ತುಸು ಅವಕಾಶ ಒದಗಿಸುವ ಬೋಧನ ವಿಧಾನ ಅಳವಡಿಸಿಕೊಳ್ಳ ಬೇಕು”. ಅವರಂದರು: “ಭಾಷಣ ಮಾಡುವುದು ಸುಲಭ”. “ಅದು ನಿಮ್ಮ ಅಭಿಪ್ರಾಯ. ನನಗೇನೋ ನಿಮ್ಮನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕಿಂತ ಮಕ್ಕಳಿಗೆ ಪಾಠ ಮಾಡುವದೇ ಸುಲಭ ಅನ್ನಿಸುತ್ತದೆ. ಈ ವಾದ ಪ್ರತಿವಾದ ಮುಂದುವರಿಸುವ ಬದಲು ಒಂದು ಕೆಲಸ ಮಾಡೋಣ. ಮುಂದಿನ ಸಭೆಗೆ ಬರುವಾಗ ನಿಮ್ಮ ಶಾಲೆಯ ೩ ನೇ ತರಗತಿಯ ಮಕ್ಕಳನ್ನು ಕರೆತನ್ನಿ. ೮ ನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಇರುವ ‘ಕಾಂತಗಳು’ ಪಾಠದಲ್ಲಿರುವ ಕೆಲವು ಪರಿಕಲ್ಪನೆಗಳನ್ನು ನಾನು ಅವರಿಗೆ ಕಲಿಸುತ್ತೇನೆ. ಆದೀತೋ?” “೩ ನೇ ತರಗತಿಯ ಮಕ್ಕಳೇ ಯಾಕಾಗ ಬೇಕು?” “ನಾನು ಹೇಳಿಕೊಡಬೇಕೆಂದಿರುವ ಪರಿಕಲ್ಪನೆಗಳನ್ನು ಮನೋಗತ ಮಾಡಿಕೊಳ್ಳುವ ಸಾಮರ್ಥ್ಯ ಆ ವಯಸ್ಸಿನವರಿಗೆ ಇರುತ್ತದೆ ಎಂದು ನಾನು ತಿಳಿದಿರುವುದರಿಂದ”

ಮುಂದಿನ ಸಭೆಯಲ್ಲಿ ನಾನೇನು ಅಂದುಕೊಂಡಿದ್ದೆನೋ ಅದನ್ನು ಮಾಡಿ ತೋರಿಸಿದೆ (ಆ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಚಟುವಟಿಕೆಗಳ ಮುಖೇನ ಕಲಿಯುವುದಕ್ಕೆ ಒತ್ತು ಕೊಡಬೇಕು ಅನ್ನುತ್ತದೆ ಶಾಸ್ತ್ರ). ಪಾಠ ಆರಂಭಿಸಿ ೫ ನಿಮಿಷ ಆಗುವ ಹೊತ್ತಿಗೆ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಕೆಲವು ಶಿಕ್ಷಕರು ಡೆಸ್ಕ್ ಮೇಲೇರಿ ಕುಳಿತದ್ದನ್ನೂ ಗಮನಿಸಿದ್ದೆ. ಪಾಠ ಮುಗಿದ ನಂತರ ನಾನು ಮಾಡಿದ್ದರ ಗುಣಾವಗುಣಗಳ ವಿಮರ್ಶೆ ಮಾಡುವಂತೆ ಆಹ್ವಾನಿಸಿದೆ. ಅವರ ಪ್ರತಿಕ್ರಿಯೆ; “ ಐ– ಬುಡಿ ಸಾ. ಒಳ್ಳೇ ಸಿನಿಮಾ ನೋಡಿದಂಗಾತು. ಈ ತರ ಪಾಠ ಮಾಡೋಕೆ ಎಲ್ಲರ್ಗೂ ಆಯ್ತದಾ”. ನನ್ನ ಪ್ರಶ್ನೆ – ‘ಇದೇನೂ ಕಲಿಯಲು ಬಲು ಕಷ್ಟವಾದ ಬ್ರಹ್ಮವಿದ್ಯೆಯಲ್ಲ. ಹುಟ್ಟಿನಿಂದಲೇ ಬರುವ ಕೌಶಲವೂ ಅಲ್ಲ. ಅಂದ ಮೇಲೆ ವೃತ್ತಿನಿಷ್ಠೆ ಮತ್ತು ಕಲಿಸಲೇ ಬೇಕೆಂಬ ತವಕ ಇರುವ ಯಾರಾದರೂ ಕಲಿಯಬಹುದಾದ್ದಲ್ಲವೇ?’ ನೀವೇ ಆಲೋಚಿಸಿ.

೨. ಅದೇ ಅವಧಿಯಲ್ಲಿ ಒಮ್ಮೆ ಶಿಕ್ಷಣ ಇಲಾಖೆಯ ‘ವಿಷಯ ಪರಿವೀಕ್ಷಕರ (ಸಬ್ಜೆಕ್ಟ್ ಇನ್ಸ್ ಪೆಕ್ಟರ್ಸ್)’ ತಂಡವೊಂದು ಶಾಲೆಗೆ ಭೇಟಿ ನೀಡಿತು. ಅಂದಿನ ೮ ನೇ ತರಗತಿಯ ವಿಜ್ಞಾನದಲ್ಲಿ ‘ಸಸ್ಯದ ಭಾಗಗಳು (ಪಾರ್ಟ್ಸ್ ಆಫ್ ಎ ಪ್ಲಾಂಟ್)’ ಎಂಬ ಪಾಠವೊಂದಿತ್ತು. ಅಂದಿನ ದಿನ ಆ ಪಾಠ ಮಾಡಬೇಕಿತ್ತು. ಹಳ್ಳಿ ಶಾಲೆಯಾದ್ದರಿಂದ ಹೊರಗಿನ ಬಯಲಿನಲ್ಲಿ ಸಸ್ಯಗಳಿಗೇನೂ ಕೊರತೆ ಇರಲಿಲ್ಲ. ತರಗತಿಗೆ ನಾನು ಪ್ರವೇಶಿಸುವ ಮುನ್ನವೇ ವಿಜ್ಞಾನ ಪರಿವೀಕ್ಷಕರು ಉಪಸ್ಥಿತರಿದ್ದರು. ತರಗತಿಯೊಳಕ್ಕೆ ಹೋದ ನಾನು ಅಂದು ಮಾಡುವ ಪಾಠದ ಶೀರ್ಷಿಕೆ ಹೇಳಿ, ಅದನ್ನು ಕಲಿಯಬೇಕಾದ ಆವಶ್ಯಕತೆಯ ಕುರಿತು ಕಿರುಚರ್ಚೆ ನಡೆಸಿ, ಎಲ್ಲರೂ ತಮ್ಮತಮ್ಮ ನೋಟ್ ಬುಕ್, ಪೆನ್ಸಿಲ್ ಮತ್ತು ರಬ್ಬರ್ (ಅರ್ಥಾತ್ ಇರೇಸರ್) ತೆಗೆದುಕೊಂಡು ನನ್ನೊಡನೆ ಬಯಲಿಗೆ ಬರುವಂತೆ ಹೇಳಿದೆ. ತುಸು ಗದ್ದಲ ಮಾಡುತ್ತಾ ಎಲ್ಲರೂ ಹೊರಬಂದರು. ಬಯಲು ತಲುಪಿದ ಬಳಿಕ ನನ್ನ ಸೂಚನೆ ಇಂತಿತ್ತು: ‘ಈಗ ಪ್ರತಿಯೊಬ್ಬರೂ ಸುಲಭವಾಗಿ ಬೇರುಸಹಿತ ಕೀಳಬಹುದಾದ ಪುಟ್ಟಪುಟ್ಟ ಸಸಿಗಳನ್ನು ಕಿತ್ತು ಬೇರಿಗೆ ಅಂಟಿಕೊಂಡಿರುವ ಮಣ್ಣನ್ನು ಜಾಗರೂಕತೆಯಿಂದ ತೆಗೆದು, ಆ ಸಸ್ಯದ ಸಾಧ್ಯವಿರುವಷ್ಟು ದೊಡ್ಡ ಚಿತ್ರವನ್ನು ನೋಟ್ ಬುಕ್ ಹಾಳೆಯಲ್ಲಿ ಬರೆಯಿರಿ. ಸುಂದರವಾಗಿಲ್ಲದಿದ್ದರೂ ತೊಂದರೆ ಇಲ್ಲ. ಆದರೆ ಎಲ್ಲ ಬಾಗಗಳನ್ನೂ ಗುರುತಿಸುವಂತಿರ ಬೇಕು’. ಗಿಡ ಕೀಳುವ, ಇನ್ನೊಬ್ಬ ಕಿತ್ತ ಗಿಡದೊಂದಿಗೆ ತನ್ನ ಗಿಡ ಹೋಲಿಸಿ ನೋಡುವ, ತಾನು ಕಿತ್ತ ಗಿಡ ‘ಸಾಕೇ ಸಾ’ ಎಂದು ನನ್ನನ್ನು ಕೇಳುವ, ಕುಳಿತು ಚಿತ್ರ ಬಿಡಿಸಲು ತಮಗೆ ಪ್ರಶಸ್ಥವಾದ ಸ್ಥಳ ಆಯ್ಕೆ ಮಾಡುವ ಸಂಭ್ರಮ ಮುಗಿದು ಚಿತ್ರ ಬಿಡಿಸಲಾರಂಭಿಸಿದರು. ಬಹುತೇಕ ಮಂದಿ ಚಿತ್ರ ಬಿಡಿಸಿ ಆದ ಬಳಿಕ ಆ ಚಿತ್ರದಲ್ಲಿ ತಮಗೆ ತಿಳಿದಿರುವ ಭಾಗಗಳನ್ನು ಗುರುತಿಸಿ ಹೆಸರಿಸುವಂತೆ ಹೇಳಿದೆ. ಪಠ್ಯಪುಸ್ತಕದ ಚಿತ್ರದಲ್ಲಿ ನಮೂದಿಸಿದ್ದ ಬಹತೇಕ ಭಾಗಗಳನ್ನು ಅವರೇ ಗುರುತಿಸಿ ಹೆಸರಿಸಿದರು. ಅವರಿಗೆ ತಿಳಿದಿರದಿದ್ದ ‘ಅಂತರ್ ಗಿಣ್ಣು, ತುದಿಮೊಗ್ಗು ಮುಂತಾದ ಭಾಗಗಳನ್ನು ಅವರ ಬಳಿ ಇದ್ದ ಗಿಡಗಳ ನೆರವಿನಿಂದ ತೋರಿಸಿ ಅವನ್ನೂ ಗುರುತಿಸಿ ಬರೆದುಕೊಳ್ಳುವಂತೆ ಹೇಳಿದೆ. ಮುಂದಿನ ತರಗತಿಗೆ ಬರುವಾಗ ತುಸು ಅಂದವಾದ ಚಿತ್ರ ಬರೆದು ಬಾಗಗಳನ್ನು ಗುರುತಿಸಲು ಅಭ್ಯಾಸ ಮಾಡಿಕೊಂಡು ಬರಬೇಕೆಂದೂ ಅಭ್ಯಾಸ ಮಾಡಲೋಸುಗ ಪಠ್ಯಪುಸ್ತಕದಲ್ಲಿ ಇರುವ ಚಿತ್ರವನ್ನು ನೋಡಬಹುದೆಂದೂ ತಿಳಿಸುವುದರೊಂದಿಗೆ ಪಾಠ ಮುಗಿಯಿತು. ಪಾಠದ ಸಮರ್ಪಕತೆಯ ಕುರಿತಾಗಿ ವಿಷಯ ಪರಿವೀಕ್ಷಕರ ಅನಿಸಿಕೆ – “ಗೋವಿಂದ ರಾವ್, ಮುಂದಿನ ಸಲ ನಾವು ಬಂದಾಗ ಒಂದು ನಾರ್ಮಲ್ ಪಾಠ ಮಾಡಿ” “ಸರಿ ಸಾರ್, ಹಾಗೆಯೇ ಮಾಡುತ್ತೇನೆ” ತಲೆ ಅಲ್ಲಾಡಿಸಿದೆ. (ಅಂಥವರೊಂದಿಗೆ ವಾದ ಮಾಡುವುದು ವ್ಯರ್ಥ ಎಂಬುದು ನನ್ನ ಅಭಿಮತವಾದ್ದರಿಂದ)

೩. ಇನ್ನೊಮ್ಮೆ ಒಬ್ಬರು ಗಣಿತ ಪರಿವೀಕ್ಷಕರು ನನ್ನ ಪಾಠ ವೀಕ್ಷಿಸಿದರು. ಮಾಡಿದ್ದು ರೇಖಾಗಣಿತದ ಒಂದು ಪಾಠ. ಸಮಯದ ಅಭಾವವಿರುವುದರಿಂದ ವರದಿಯಲ್ಲಿ ತನ್ನ ವಿಮರ್ಶೆ ದಾಖಲಿಸುವುದಾಗಿ ತಿಳಿಸಿ ನಿರಗಮಿಸಿದರು. ಕೆಲ ದಿನಗಳ ನಂತರ ವರದಿ ಬಂತು. ನಾನು ಮಾಡದೇ ಇದ್ದ ಪಾಠವೊಂದರ ಶೀರ್ಷಿಕೆ ನಮೂದಿಸಿ ಪಾಠವನ್ನು ಅದ್ಭುತವಾಗಿ ಮಾಡಿರುವುದಾಗಿ ಉದಾಹರಣೆ ಸಹಿತ ದಾಖಲಿಸಿದ್ದರು! ಮಾನ್ಯ ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಪರಿವೀಕ್ಷಕರು ಪೀರಿಯಡ್ ಪೂರ್ತಿ ಯಾವುದೋ ಪುಸ್ತಕ ಓದುತ್ತಿದ್ದರೆಂದು ವಿದ್ಯಾರ್ಥಿಗಳ ಮುಖೇನ ನನಗೆ ತಿಳಿದಿತ್ತು.

೪. ಅಪರೂಪಕ್ಕೊಮ್ಮೆ ಸ್ನಾನ ಮಾಡುವ ಅಭ್ಯಾಸವಿದ್ದ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಇದ್ದ ಸಹ-ಶಿಕ್ಷಣ ಶಾಲೆ ಅದು.  ಹುಡುಗರಿಗೆ  ವಸತಿ ಸೌಕರ್ಯವೂ ಇತ್ತು. ವಸತಿನಿಲಯವಾಸಿಗಳನ್ನು ಬೆಳಗ್ಗೆ ೬ ಗಂಟೆಗೆ ಎಬ್ಬಿಸಿ ನಿತ್ಯಕರ್ಮಗಳಿಗೆ ಸಮಯಾವಕಾಶ ನೀಡಿ ಪ್ರಾರ್ಥನೆಯ ಬಳಿಕ ಎಲ್ಲರನ್ನೂ ಅಟ್ಟಿಕೊಂಡು ಪಕ್ಕದಲ್ಲಿದ್ದ ನದಿಗೆ ‘ಅಟ್ಟಿಕೊಂಡು ಹೋಗಿ’ ಪ್ರತೀ ದಿನ ಸ್ನಾನ ಮಾಡುವ ಅಭ್ಯಾಸ ಬೇರೂರುವಂತೆ ಮಾಡಲು ಹೆಣಗಾಡುತ್ತಿದ್ದದ್ದೂ, ಶಾಲಾ ಪ್ರಾರ್ಥನಾ ಸಭೆಯಲ್ಲಿ ಯಾರು ತಲೆಗೆ ಬಹುದಿನಗಳಿಂದ ನೀರೇ ಮುಟ್ಟಿಸಿಲ್ಲ ಎಂಬುದನ್ನು ಪತ್ತೆಹಚ್ಚಿ ಹುಡುಗರಾಗಿದ್ದರೆ ಒಬ್ಬ ಜವಾನನ ಮೇಲುಸ್ತುವಾರಿಯಲ್ಲಿ ಸ್ನಾನ ಮಾಡಿಕೊಂಡು ಬರುವಂತೆ ನದಿಗೆ ಅಟ್ಟುತ್ತಿದ್ದದ್ದು ಹುಡುಗಿಯರಾಗಿದ್ದರೆ ಮಾರನೇ ದಿನ ತಲೆಗೆ ಸ್ನಾನ ಮಾಡಿಕೊಂಡು ಬರದಿದ್ದರೆ ಶಾಲೆಯಿಂದಲೇ ಓಡಿಸುವುದಾಗಿ ಗದರಿಸುತ್ತಿದ್ದದ್ದು ಮರೆಯುವಂತಿಲ್ಲ.

೫. ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ೮ ಮತ್ತು ೯ ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿ ತಾನು ೧೦ ನೇ ತರಗತಿಯಲ್ಲಿಯೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಶಾಲಾ ದಾಖಲೆ ನಿರ್ಮಿಸುವ ಭರವಸೆ ತೋರಿದ್ದ. ೧೦ ನೇ ತರಗತಿ ತಲುಪಿದೊಡನೆ, ಪಾಠದಲ್ಲಿ ನಿರಾಸಕ್ತಿ, ಪದೇ ಪದೇ ಗೈರುಹಾಜರಾಗುವಿಕೆ ಇವು ಅವನ ಲಕ್ಷಣಗಳಾದವು. ಮಾಮೂಲಿ ತಂತ್ರಗಳು ಅತನನ್ನು ಸುಧಾರಿಸಲು ವಿಫಲವಾದ್ದರಿಂದ ತುಸು ಸಂಶೋಧನೆ ಮಾಡಬೇಕಾಯಿತು. ತಂದೆ ಇಲ್ಲದ, ಸ್ಥಿತಿವಂತ ಮನೆತನದ ಒಬ್ಬನೇ ಹುಡುಗ ಆತ. ಗೈರುಹಾಜರಾದಾಗಲೆಲ್ಲ ಆ ಹಳ್ಳಿಯಲ್ಲಿ ಬೀಡುಬಿಟ್ಟಿದ್ದ ನಾಟಕ ತಂಡದವರೊಡನೆ ಕಾಲಕಳೆಯುತ್ತಿರುವ ವಿಷಯ ತಿಳಿಯಿತು. ಇನ್ನೂ ಕೆದಕಿದಾಗ ಆತ ಆ ತಂಡದಲ್ಲಿದ್ದ ಹದಿಹರೆಯದ ಇಬ್ಬರು ನಟೀಮಣಿಯರ ಮೋಹಪಾಶದಲ್ಲಿ ಸಿಲುಕಿರುವ ವಿಷಯವೂ ತಿಳಿಯಿತು. ಮತ್ತೂ ಕೆದಕಿದಾಗ ಈತ ತಕ್ಕಮಟ್ಟಿಗೆ ಶ್ರೀಮಂತ ಕುಟುಂಬದವನು ಎಂಬುದನ್ನರಿತಿದ್ದ ಅವರು ಇವನ ಸೌಂದರ್ಯ, ನಟನಕೌಶಲ ಇತ್ಯಾದಿಗಳನ್ನು ಬಹುವಾಗಿ ಹೊಗಳಿ ಸಾಧ್ಯವಿರುವಷ್ಟು ಹಣ ಕೀಳುವ ಹುನ್ನಾರ ಮಾಡಿದ್ದರು ಎಂಬುದೂ ಅರ್ಥವಾಯಿತು. ‘ಹದಿಹರೆಯ ಒಂದು ಅಪಾಯಕಾರೀ ಅವಧಿ’ ಎಂಬ ಶಾಸ್ತ್ರೋಕ್ತಿ ಅಕ್ಷರಶಃ ಸಾಬೀತಾಗಿತ್ತು. ಅವನು ಎಲ್ಲಿ ಎಡವುತ್ತಿದ್ದಾನೆ ಎಂಬುದನ್ನು ಅವನಿಗೆ ಮನವರಿಕೆ ಮಾಡಿಕೊಡಲು ನನಗೆ ತಿಳಿದಿದ್ದ ಎಲ್ಲ ‘ಆಪ್ತಸಮಾಲೋಚನಾ’ ಕುಶಲತೆಗಳನ್ನು ಉಪಯೋಗಿಸಬೇಕಾಯಿತು. ಇವೆಲ್ಲದರ ಪರಿಣಾಮವಾಗಿ ಆತ ಮುಂದೆ ನಮ್ಮ ನಂಬಿಕೆಯಂತೆ ಪ್ರಥಮದರ್ಜೆಯಲ್ಲಿ ಅಲ್ಲದಿದ್ದರೂ ದ್ವಿತೀಯ ದರ್ಜೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾದ.

೬. ಅದೇ ಶಾಲೆಯಲ್ಲಿ ೯ನೇ ತರಗತಿಯಲ್ಲ ಒಬ್ಬಳು ವಿದ್ಯಾರ್ಥಿನಿ. ಗಣಿತ ತರಗತಿಯಲ್ಲಿ ಬಲು ಸುಲಭವಾಗಿ ಹೇಳಿದ್ದನ್ನು ಗ್ರಹಿಸುತ್ತಿದ್ದಾಕೆ. ಗಣಿತ ಪರೀಕ್ಷೆಯಲ್ಲಿ ಶೇ ೭೦-೮೦ ರಷ್ಟು ಅಂಕ ಗಳಿಸುವ ಸಾಮರ್ಥ್ಯ ಇದೆ ಎಂದು ನಾನು ಅಂದಾಜಿಸಿದ್ದೆ. ಯಾವುದೇ ಪರೀಕ್ಷೆಯಲ್ಲಿ ಶೇ ೪೦-೪೫ ಕ್ಕಿಂತ ಹೆಚ್ಚು ಅಂಕ ಗಳಿಸುತ್ತಿರಲಿಲ್ಲ. ಉತ್ತರ ಪತ್ರಿಕೆಗಳ ಪರಿಶೀಲನೆಯಿಂದ ತಿಳಿದದ್ದು ಇಷ್ಟು – ಆಕೆ ಶೇ ೪೦-೪೫ ಅಂಕ ಪಡೆಯಲು ಎಷ್ಟು ಪ್ರಶ್ನೆಗಳನ್ನು ಉತ್ತರಿಸಬೇಕೋ ಅಷ್ಟನ್ನು ಮಾತ್ರ ಉತ್ತರಿಸಿ ಉಳಿದವುಗಳನ್ನು ಮಾಡುವ ಗೊಡವೆಗೇ ಹೋಗುತ್ತಿರಲಿಲ್ಲ. ಕರೆದು ಏಕೆಂದು ಕೇಳಿದಾಗ ಆಕೆಯ ಉತ್ತರ – ‘ಎಸ್ ಎಸ್ ಎಲ್ ಸಿ ಪರೀಕ್ಷೆ ಆದ ತಕ್ಷಣ ಮದುವೆ ಮಾಡಲು ಅಪ್ಪ ಅಮ್ಮ ತೀರ್ಮಾನಿಸಿದ್ದಾರೆ. ಸುಮ್ಮನೆ ಶ್ರಮ ಪಟ್ಟು ಹೆಚ್ಚು ಅಂಕ ಗಳಿಸಿ ಏನು ಪ್ರಯೋಜನ? ಶಾಲೆಗೆ ಬಂದದ್ದಕ್ಕೆ ಪಾಸಾದರೆ ಸಾಕು ಎಂದು ತೀರ್ಮಾನಿಸಿದ್ದೇನೆ’ (!).

೭. ಆ ಶಾಲೆಗೆ ಶಿಕ್ಷಕನಾಗಿ ನೇಮಕಗೊಂಡ ಮೊದಲನೇ ವರ್ಷ. ಅಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ತರಗತಿಯ ಗಣಿತದಲ್ಲಿ ಇದ್ದ ಮೊದಲನೇ ಪಾಠ ‘ಸರಾಸರಿ’ ( ಈಗ ಇದು ಪ್ರಾಥಮಿಕ ಶಾಲೆಯ ಯಾವುದೋ ತರಗತಿಯಲ್ಲಿ ಇದೆ). ಆಗ ತಾನೇ ‘ಯೂನಿವರ್ಸಿಟಿ rank ಸ್ಟೂಡೆಂಟ್’ ಎಂಬ ಗರಿಮೆಯೊಂದಿಗೆ ಬಿ ಎಡ್ ಪದವಿಭೂಷಿತನಾದ ನಾನು ಈ ಪಾಠದ ಎಲ್ಲ ಧರ್ಮಸೂಕ್ಷ್ಮಗಳು ವಿದ್ಯಾರ್ಥಿಗಳಿಗೂ ಮನೋಗತವಾಗ ಬೇಕು  ಎಂಬ ಮಹದಾಕಾಂಕ್ಷೆಯಿಂದ ಸುಮಾರು ೧ ತಿಂಗಳ ಕಾಲ ಬೋಧಿಸಿದ್ದಾಯಿತು. ಅಂತ್ಯದಲ್ಲಿ ನೀಡಿದ ಕಿರುಪರೀಕ್ಷೆಯಲ್ಲಿ ಶೇ ೮೦ ರಷ್ಟು ಮಂದಿ ಅನುತ್ತೀರ್ಣರಾಗಿದ್ದರು!. ತದನಂತರ ಉತ್ತರ ಪತ್ರಿಕೆಗಳನ್ನು ವಿಶ್ಲೇಷಿಸಿದಾಗ ತಿಳಿಯಿತು – ಆ ಮಕ್ಕಳಿಗೆ ದಶಮಾಂಶ ಸಂಖ್ಯೆಗಳಿಗೆ ಸಂಬಂಧಿಸಿದಂತೆ ಗಣಿತದ ಮೂಲಭೂತ ಪರಿಕರ್ಮಗಳನ್ನು ಮಾಡಲು ಬರುತ್ತಿರಲಿಲ್ಲ. ‘ಅಪೇಕ್ಷಿತ ಕಲಿಕೆ ಯಶಸ್ವಿಯಾಗಿ ಜರಗಬೇಕಾದರೆ ಅದಕ್ಕೆ ವಿದ್ಯಾರ್ಥಿಯನ್ನು ಸಿದ್ಧಪಡಿಸಿದ ಬಳಿಕವೇ ಕಲಿಸಲಾರಂಭಿಸ ಬೇಕು’ ಎಂಬ ಶಿಕ್ಷಣಸಾಸ್ತ್ರೋಕ್ತಿಯನ್ನು ಕಡೆಗಣಿಸಿದ್ದರ ಪರಿಣಾಮ ಿದು ಎಂಬುದು ಆಗ ನನಗೆ ಹೊಳೆಯಿತು. (ತದನಂತರ ಯುಕ್ತ ಪರಿಹಾರೋಪಾಯ ರೂಪಿಸಿ ಅನುಷ್ಠಾನಗೊಳಿಸಲು ಇನ್ನೊಂದು ತಿಂಗಳು ವ್ಯರ್ಥವಾಯಿತು ‘ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳ ಬೇಕಾದದ್ದು ಅನಿವಾರ್ಯವಾಯಿತು)

೮. ಒಂದು ದಿನ ೯ ನೇ ತರಗತಿಯ ಹಿಂದಿನ ಬೆಂಚಿನ ವಿದ್ಯಾರ್ಥಿಯೊಬ್ಬ ನಾನು ಪಾಠ ಮಾಡುತ್ತಿರುವಾಗ ಅಕ್ಕಪಕ್ಕದವರಿಗೆ ಕೀಟಲೆ ಮಾಡುತ್ತಿದ್ದದ್ದು ನನ್ನ ಗಮನಕ್ಕೆ ಬಂದಿತು. ಅವನನ್ನು ಗದರಿಸಿ ‘ಕಲಿಯಲು ಇಷ್ಟ ಇಲ್ಲ ಎಂದಾದರೆ ಶಾಲೆಗೇಕೆ ಬರ್ತೀಯ. ಇಷ್ಟ ಇಲ್ಲಾಂದ್ರೆ ನಾಳೆಯಿಂದ ಬರಬೇಡ’ ಅಂದೆ. ಮಾರನೇ ದಿನದಿಂದ ಆತ ನಾಪತ್ತೆ. ಒಂದೆರಡು ದಿನ ಕಳೆದ ಬಳಿಕ ಸಂಜೆಯ ವೇಳೆ  ಆತನ ಮನೆಗೆ ಹೋಗಿ ವಿಚಾರಿಸಿದರೆ ‘ಇಷ್ಟ ಇಲ್ಲಾಂದ್ರೆ ಶಾಲೆಗೆ ಬರಬ್ಯಾಡ ಅಂತ ಎ ವಿ ಜಿ ಸರ್ ಅಂದವ್ರೆ. ನಂಗೆ ಮ್ಯಾತ್ಸ್ ತಲೆಗೆ ಹತ್ತಾಕಿಲ್ಲ. ನಾನು ಸಾಲೆಗೆ ಹೋಗಾಕಿಲ್ಲ’ ಅಂತ ಹಠ ಹಿಡಿದು ತಮ್ಮ ಜಮೀನಿನ ಕೆಲಸಕ್ಕೆ ಹೋಗತೊಡಗಿದ್ದ. (ಅವನನ್ನು ಪುನಃ ಶಾಲೆಗೆ ಕರೆತರಬೇಕಾದರೆ ನನ್ನೆಲ್ಲ ಬುದ್ಧಿಸಾಮರ್ಥ್ಯ ಉಪಯೋಗಿಸ ಬೇಕಾಯಿತು)

೯. ಸಮೀಪದ ಹಳ್ಳಿಯ ಹೆಂಡದಂಗಡಿಯ ಮಾಲೀಕನ ಮಗ ಆ ಶಾಲೆಗೆ ಬರುತ್ತಿದ್ದ. ಸೀಲ್ ಆಗಿಬರುತ್ತಿದ್ದ ಹೆಂಡದ ಪೀಪಾಯಿಗೆ ಸೀಲ್ ತೆಗೆಯದೆ ನೀರು ಬೆರೆಸುವುದು ಹೇಗೆಂಬುದನ್ನು ತಂದೆಯಿಂದ ಕಲಿತಿದ್ದ ಪ್ರಭೃತಿ ಆತ. ಪದೇಪದೇ ಗೈರುಹಾಜರಾಗುತ್ತಿದ್ದ ಆತನನ್ನು ಹಿಡಿದು ಬಯ್ದು ‘ನಾಳೆ ಬರುವಾಗ ನಿನ್ನ ತಂದೆಯನ್ನು ಕರೆದುಕೊಂಡು ಬಾ’ ಅಂದರೆ ‘ಆಗಲ್ಲ ಸಾ. ಅವ ಕುಡ್ದು ಮನಗ್ಬಿಟ್ಟಿರ್ತಾನೆ’ ಅನ್ನುವದೇ!

Advertisements
This entry was posted in ನೆನಪಿನ ದೋಣಿಯಲಿ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s