ಜಿ ಟಿ ಎನ್ – ಇನ್ನೂ ಕೆಲವು ನೆನಪುಗಳು

ಜಿ ಟಿ ಎನ್ – ಕೆಲವು ನೆನಪುಗಳು ಲೇಖನದಲ್ಲಿ ೧೨ ನೆನನಪುಗಳನ್ನು ಹಂಚಿಕೊಂಡಿದ್ದೆ. ನನ್ನ ನೆನಪುಗಳ ಸಂಚಿಯಲ್ಲಿ ಬಾಕಿ ಉಳಿದಿದ್ದ ಇನ್ನೂ ಕೆಲವನ್ನು ಹಂಚಿಕೊಳ್ಳುತ್ತಿದ್ದೇನೆ, ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಅವು ನೆರವಾದೀತು ಎಂಬ ನಂಬಿಕೆಯಿಂದ.  (ಇದನ್ನು ಬರೆಯಲು ಕಾರಣ – ರಾಜಕಾರಣಿಗಳ ಪರಿಭಾಷೆಯಲ್ಲಿ ‘ಬಹುಮಂದಿಯ’ ಕೋರಿಕೆಯಂತೆ. ೩ ಮಂದಿಯನ್ನು ಬಹುಮಂದಿ ಎಂದು ಪರಿಗಣಿಸಬಹುದಾದರೆ!).

ನೆನಪು ೧೩. ೮೦ರ ದಶಕದಲ್ಲಿ ನಡೆದದ್ದು. ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ವಿಭಾಗದಲ್ಲಿ ಸಂಪಾದನಾ ವಿಭಾಗದ ಮುಖ್ಯಸ್ತರಾಗಿದ್ದ ಅವಧಿಯಲ್ಲಿ ಒಂದು ದಿನ (ನಿಖರವಾದ ಇಸವಿ ನೆನಪಿಲ್ಲ) ಬೆಳಗ್ಗೆ ಸುಮಾರು ೯-೯.೩೦  ಗಂಟೆಗೆ ನಾನು ಕಾಲೇಜಿಗೆ ಹೋಗಲು ಸ್ಕೂಟರ್ ಹೊರತೆಗೆಯುತ್ತಿದ್ದೆ. “ಕಾಲೇಜಿಗೆ ಹೊರಟೆಯೋ? ಒಂದೈದು ನಿಮಿಷ ಮಾತನಾಡುವುದಿದೆ, ತೊಂದರೆ ಇಲ್ಲ ತಾನೇ” ಅನ್ನುತ್ತಲೇ ಗೇಟ್ ಒಳಗೆ ಬಂದರು ಜಿ ಟಿ ಎನ್. ಮನೆಯೊಳಕ್ಕೆ ಬಂದು ಮುಂದಿನ ವರಾಂಡದಲ್ಲಿದ್ದ  ಕುರ್ಚಿಯಲ್ಲಿ ಕುಳಿತವರೇ ಕೈನಲ್ಲಿದ್ದ ಬ್ಯಾಗಿನಿಂದ ಕೆಲವು ಕಾಗದದ ಹಾಳೆಗಳನ್ನು ತೆಗೆದು ನನ್ನ ಕೈಯಲ್ಲಿಟ್ಟು, “ ಇದನ್ನು ಓದಿ ಏನಾದರೂ ಅರ್ಥವಾಗುತ್ತದೆಯೋ ನೋಡು. ನನಗೇನೂ ಅರ್ಥವಾಗಲಿಲ್ಲ. ನಿನಗೇನಾದರೂ ಅರ್ಥವಾದರೆ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಬರೆದು ಕೊಡಲು ಸಾಧ್ಯವೇ” ಅಂದರು. ಅಂದಿನ ಕಾಲದಲ್ಲಿ ‘ಮನೋವಿಜ್ಞಾನಿ’ ಎಂದು ಖ್ಯಾತನಾಮರಾಗಿದ್ದವರೊಬ್ಬರು ಕನ್ನಡ ವಿಶ್ವಕೋಶಕ್ಕಾಗಿ ಬರೆದಿದ್ದ ‘ಮನೋವಿಜ್ಞಾದ ಇತಿಹಾಸ’ ಎಂಬ ಲೇಖನವಾಗಿತ್ತು. ಏನು ಹೇಳುವುದೆಂದು ಆಲೋಚಿಸಲು ಸಮಯಾವಕಾಶ ನೀಡದೆಯೇ ‘ಅರ್ಜೆಂಟ್ ಏನಿಲ್ಲ. ನಿಧಾನವಾಗಿ ಓದಿ ಅಭಿಪ್ರಾಯ ತಿಳಿಸು. ನಾಳೆ ಇದೇ ಹೊತ್ತಿಗೆ ತಿಳಿಸಿದರೆ ಸಾಕು (!)” ಅಂದರು. “ನಾಳೆಯೇ” ನಾನು ರಾಗ ಎಳೆದೆ.  “ಬೇಡ, ನಾಡಿದ್ದು ಬರುತ್ತೇನೆ” ಅಂದು ಎದ್ದು ಹೊರಟೇಹೋದರು. ಆ ಲೇಖನವೋ ೧೯೩೩ ರಲ್ಲಿ ಪ್ರಕಟವಾಗಿದ್ದ ‘ಎ ಹಂಡ್ರಡ್ ಇಯರ್ಸ್ ಆಫ್ ಸೈಕಾಲಜಿ ೧೮೩೩-೧೯೩೩’ ಎಂಬ ಪುಸ್ತಕದಲ್ಲಿ ಇದ್ದ ಮಾಹಿತಿಯನ್ನು ಬೇಕಾಬಿಟ್ಟಿ ಸಂಕ್ಷೇಪಿಸಿ ಮಾಡಿದ ಕೆಟ್ಟ ಭಾಷಾಂತರವಾಗಿತ್ತು. ತದನಂತರ ತೀವ್ರಗತಿಯಲ್ಲಿ ಆಗಿದ್ದ ಬೆಳೆವಣಿಗೆಗಳ ಉಲ್ಲೇಖವೇ ಇರಲಿಲ್ಲ. ಪೂರ್ವನಿಗದಿತ ದಿನದಂದು ಬಂದ ಜಿ ಟಿ ಎನ್ ಅವರಿಗೆ ನನ್ನ ಅಭಿಪ್ರಾಯ ತಿಳಿಸಿ, ಆ ಲೇಖನವನ್ನು ಸರಿಪಡಿಸುವ ಬದಲು ಹೊಸದಾಗಿ ಬರೆಯುವುದೇ ಸುಲಭವೆಂದು ಹೇಳಿದೆ. “ಆಯಿತು, ಹಾಗೆಯೇ ಮಾಡು. ಒಂದು ತಿಂಗಳು ಸಮಯ ಕೊಡುತ್ತೇನೆ” ಅಂದು ಹೊರಟೇ ಹೋದರು. ನೀನು ಬರೆದುಕೊಡಬಲ್ಲೆಯಾ ಅಂದೇನಾದರೂ ಕೇಳಿದ್ದರೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಇರಾದೆ ನನ್ನದಾಗಿತ್ತು. ಏಕೆಂದರೆ ಆ ಶೀರ್ಷಿಕೆಯಲ್ಲಿ ಲೇಖನ ಬರೆಯುವುದು ಸುಲಭದ ವಿಷಯವಲ್ಲ. ಅಂತೂ ಇಂತೂ ಲೇಖನ ಸಿದ್ಧಪಡಿಸಿ ನಿಗದಿತ ಸಮಯದ ಒಳಗೆ ಅವರ ಕಛೇರಿಗೆ ಹೋಗಿ ತಲುಪಿಸಿದೆ. ಅವರು ತಕ್ಷಣವೇ ಅದನ್ನು ಸಂಬಂಧಿತ ಸಂಪಾದಕರಿಗೆ ರವಾನಿಸಿ ನನಗೆ ಧನ್ಯವಾದ ಹೇಳಿ ಕಳುಹಿಸಿದರು. ತದನಂತರ ಅದೇನಾಯಿತೆಂದು ನಾನೂ ಕೇಳಲಿಲ್ಲ, ಅವರೂ ಹೇಳಲಿಲ್ಲ. ಅದೆಷ್ಟೋ ವರ್ಷ ಕಳೆದ ಬಳಿಕ (ಅವರು ಸೇವೆಯಿಂದ ನಿವೃತ್ತರಾಗಿದ್ದರು, ನಾನು ನಿವೃತ್ತಿಯ ಅಂಚಿನಲ್ಲಿದ್ದೆ), ಒಂದು ದಿನ ವಿಶ್ವವಿದ್ಯಾನಿಲಯದಿಂದ ರಿಜಿಸ್ಟರ್ಡ್ ಅಂಚೆಯಲ್ಲಿ ಲಕೋಟೆಯೊಂದು ಬಂದಿತು. ಒಡೆದು ನೋಡಿದರೆ ಇದ್ದದ್ದೇನು? ವಿಶ್ವಕೋಶದಲ್ಲಿ ನನ್ನ ಹೆಸರಿನಲ್ಲಿಯೇ ಪ್ರಕಟವಾಗಿದ್ದ ‘ಮನೊವಿಜ್ಞಾನದ ಇತಿಹಾಸ’ ಲೇಖನದ ಕ್ಸಿರಾಕ್ಸ್ ಪ್ರತಿ, ರೂ ೬೨೫ ಗೌ ಸಂಭಾವನೆಯ ಚೆಕ್, ಒಂದು ಧನ್ಯವಾದ ಅರ್ಪಿಸುವ ಪತ್ರ. ಅಂದಮೇಲೆ, ಮೊದಲೇ ಉಲ್ಲೇಖಿಸಿದ್ದ ‘ಖ್ಯಾತನಾಮರ’ ಲೇಖನ ತಿರಸ್ಕೃತವಾಗಿ ( ಹೀಗೆ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ) ಖ್ಯಾತನಾಮನಲ್ಲದ ನನ್ನ ಲೇಖನ ಸ್ವೀಕೃತವಾಗಿದ್ದಿರಬೇಕಲ್ಲವೇ?

ನೆನಪು ೧೪. ಶ್ರೀಯುತರು ಜಾತಕ, ಫಲಜ್ಯೋತಿಷ್ಯ, ಸಾಂಪ್ರದಾಯಿಕ ಮತೀಯಾಚರಣೆಗಳನ್ನು ಕಟುವಾಗಿ ಟೀಕಿಸುತ್ತಿದ್ದದ್ದರಿಂದಲೋ ಏನೋ ಸಂಪ್ರದಾಯವಾದಿಗಳು ‘ಮಹಾನಾಸ್ತಿಕ’ ಎಂದೇ ಅವರನ್ನು (ಅವರ ಬೆನ್ನ ಹಿಂದೆ ತಗ್ಗಿದ ದನಿಯಲ್ಲಿ) ಉಲ್ಲೇಖಿಸುತ್ತಿದ್ದರು. ಅವರು ನಿಜವಾಗಿಯೂ ನಾಸ್ತಿಕರೇ?

ನಮ್ಮಿಬ್ಬರಿಗೂ ಪರಿಚಯವಿದ್ದವರೊಬ್ಬರು ಧರ್ಮ, ಆಧ್ಯಾತ್ಮ ಮುಂತಾದವುಗಳ ಕುರಿತಾಗಿ ಅವರ ಪ್ರಾಮಾಣಿಕ ಅಭಿಪ್ರಾಯ ತಿಳಿಯಬಯಸಿದರು (ಬಹುಮಂದಿ ‘ವಿಚಾರವಾದಿಗಳು’ ತಮ್ಮ ಸಾರ್ವಜನಿಕ ಜೀವನದಲ್ಲಿ ಮಾತ್ರ ವಿಚಾರವಾದಿಗಳಾಗಿರುವುದರಿಂದ ಜಿ ಟಿ ಎನ್ ಅವರ ಕುರಿತೂ ಆ ಪರಿಚಯಸ್ಥರಿಗೆ ಸಂಶಯ ಇದ್ದಿರಬೇಕು). ಅವರಿಗೆ ಜಿ ಟಿ ಎನ್ ಉತ್ತರ – “ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳನ್ನೂ ಓದಿ. ನನ್ನ ಪ್ರಾಮಾಣಿಕ ಅಭಿಪ್ರಾಯ ಏನೆಂಬುದು ನಿಮಗೇ ತಿಳಿಯುತ್ತದೆ”. ಈ ಉತ್ತರದ ಅರ್ಥ ನಿಮಗಾಗ ಬೇಕಾದರೆ ನೀವೂ ಅಂತೆಯೇ ಮಾಡಬೇಕು! ಜೊತೆಯಲ್ಲಿ ಡಿ ವಿ ಜಿ ಯವರ ‘ಮಂಕು ತಿಮ್ಮನ ಕಗ್ಗವನ್ನೂ ಅರಗಿಸಿಕೊಳ್ಳಿ!!.

ಅವರು ನಿಜವಾಗಿಯೂ ನಾಸ್ತಿಕರಾಗಿದ್ದರೇ?

ಅಂದಹಾಗೆ. ದೇವರ ಅಸ್ತಿತ್ವದ ಕುರಿತಾದ ಚರ್ಚೆಗಳಲ್ಲಿ ಶ್ರೀಯುತರು ಭಾಗವಹಿಸಿದ್ದನ್ನು ನಾನು ಗಮನಿಸಿಲ್ಲ.

ನೆನಪು ೧೫.

ಯಾವುದೇ ಮತೀಯಾಚರಣೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಅಂದಮಾತ್ರಕ್ಕೆ (ತೋರಿಕೆಗಾಗಿಯೋ, ಪಾಪಪ್ರಜ್ಞೆ ಕಾಡುತ್ತಿರುವುದರಿಂದಲೋ ಅಂಧಶ್ರದ್ಧೇಯಿಂದಲೋ ನಿಜವಾದ ಭಕ್ತಿಯಿಂದಲೋ) ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವವರನ್ನು ವೈಯಕ್ತಿಕವಾಗಿ ಹೀಗಳೆದಿದ್ದಾಗಲೀ  ಬೇರೆಯವರು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಮತೀಯಾಚರಣೆಗಳ ಸಂದರ್ಭದಲ್ಲಿ ಆಹ್ವಾನಿಸಿದಾಗ ಅವರನ್ನು ಅಪಹಾಸ್ಯ ಮಾಡಿದ್ದಾಗಲೀ ನನ್ನ ಗಮನಕ್ಕೆ ಬಂದಿಲ್ಲ. ಅಂಥ ಸನ್ನಿವೇಶಗಳಲ್ಲಿ ಅತಿಥೇಯರ ಮನನೋಯುವಂಥದ್ದೇನನ್ನೂ ಮಾಡುತ್ತಲೂ ಇರಲಿಲ್ಲ.

ಉದಾ: ನನ್ನ ತಮ್ಮನ ಮನೆಯಲ್ಲಿ ಪ್ರತೀ ವರ್ಷ ನವರಾತ್ರಿಯ ಅವಧಿಯಲ್ಲಿ ಅದ್ದೂರಿಯಾಗಿ (ಮಾಡಿಸುವ ಪುರೋಹಿತರ ಪ್ರಕಾರ) ಶಾಸ್ತ್ರೋಕ್ತವಾಗಿ ದುರ್ಗಾಪೂಜೆ ಮಾಡಿಸುವ ಸಂಪ್ರದಾಯ ಇತ್ತೀಚಿನ ಕೆಲವು ವರ್ಷಗಳಿಂದ ರೂಢಿಯಲ್ಲಿದೆ. ಅಂಥದ್ದೊಂದು ಸಂದರ್ಭದಲ್ಲಿ ನಾನು ಗಮನಿಸಿದ್ದು – ಪೂಜೆ, ಮಹಾಮಂಗಳಾರತಿ ಇತ್ಯಾದಿಗಳೆಲ್ಲವೂ ಸಾಂಗವಾಗಿ ನಡೆಯಿತು. ಮನೆಯ ಹೊರಗೆ ಕುಳಿತಿದ್ದ ಜಿ ಟಿ ಎನ್, ನಾನು ಹಾಗೂ ಇತರ ೪-೫ ಮಂದಿಗೆ ಇದು ತಿಳಿದದ್ದು ಶಂಖ ಜಾಗಟೆಗಳ ಅಬ್ಬರದ ಘೋಷದಿಂದಾಗಿ. ಒಂದೆರಡು ನಿಮಿಷದ ಬಳಿಕ ಜಿ ಟಿ ಎನ್ ಎದ್ದು ಮನೆಯೊಳಕ್ಕೆ ಹೊರಟರು. ‘ಒಳಗೆ ತೀರ್ಥ ಪ್ರಸಾದ ವಿನಿಯೋಗಿಸುತ್ತಿರುವುದರಿಂದ ಜನದಟ್ಟಣೆ ಇದೆ. ಈಗೇಕೆ ಹೋಗುತ್ತೀರಿ” ಅಂದೆ ನಾನು. “ಪೂಜೆಗೆ ಬಂದು ತೀರ್ಥ ಪ್ರಸಾದ ತೆಗೆದುಕೊಳ್ಳದೇ ಇರುವುದು ಹೇಗಯ್ಯಾ?” ಅಂದು ಒಳನುಗ್ಗಿದರು.

ನೆನಪು ೧೬. ಅವರು ಸೇವೆಯಿಂದ ನಿವೃತ್ತರಾದ ಬಳಿಕ ಒಂದು ಬಾರಿ ನಾನು ಸೇವೆಯಲ್ಲಿ ಇದ್ದ ಕಾಲೇಜಿಗೆ ‘ಅತಿಥಿ-ಉಪನ್ಯಾಸ’ ನೀಡಲು ಅವರನ್ನು ಆಹ್ವಾನಿಸಿದ್ದೆ. ವಿಷಯ – ‘ಶಿಕ್ಷಕರಾಗಲಿರುವವರಿಗೆ ನಿವೃತ್ತ ಶಿಕ್ಷಕನ ಸ್ವಾನುಭವದಿಂದ ಮೂಡಿಬಂದ ಕಿವಿಮಾತು’. ಕಾರ್ಯಕ್ರಮ ಮುಗಿದ ಬಳಿಕ ಆಡಳಿತ ಮಂಡಲಿಯವರ ಕಛೇರಿಯಲ್ಲಿ ಅನೌಪಚಾರಿಕ ಹರಟೆ ಹೊಡೆಯುತ್ತಾ ಕಾಫಿ ಕುಡಿದಿದ್ದಾಯಿತು. ಕಛೇರಿಯ ಗುಮಾಸ್ತರು ‘ಸಾರ್, ಇದನ್ನು ಸ್ವೀಕರಿಸ ಬೇಕು’ ಅಂದು ಒಂದು ಲಕೋಟೆಯನ್ನು ಅವರಿಗಿತ್ತು, ‘ಇಲ್ಲೊಂದು ಸಹಿ ಹಾಕಿ ಸಾರ್’ ಅಂದು ಕಾಗದವೊಂದನ್ನು ಇಟ್ಟರು. ಏನಪ್ಪಾ ಇದು ಅನ್ನುತ್ತಾ ಕಾಗದ ಓದಿ, “ ಓಹೋ ಈ ಘನಕಾರ್ಯಕ್ಕೆ ಗೌರವ ಸಂಭಾವನೆ ಬೇರೆ ಇದೆಯೋ” ಅಂದು ಸಹಿ ಹಾಕಿದರು. “ಇದು ಅನಿರೀಕ್ಷಿತವಾಗಿ ಅಯಾಚಿತವಾಗಿ ಬಂದ ಧನ. ನೇರ ಅಂಗಡಿಗೆ ಹೋಗಿ ಒಂದು ಒಳ್ಳೆಯ ಪುಸ್ತಕ ಖರೀದಿಸುತ್ತೇನೆ” ಅನ್ನುತ್ತಾ ಹೊರನಡೆದರು.

ನಾವು ಅಂದು ಕೊಟ್ಟದ್ದು ರೂ ೧೦೦ (ಅಂದಿನ ದಿನಗಳಲ್ಲಿ ಅದನ್ನು ಅತೀ ಕಮ್ಮಿ ಎಂದಾಗಲೀ ಅತೀ ಹೆಚ್ಚು ಎಂದಾಗಲೀ ಅನ್ನುವಂತಿರಲಿಲ್ಲ). ಮೊಬಲಗು ಎಷ್ಟು ಅನ್ನುವುದಕ್ಕಿಂತ ಅದನ್ನು ಸ್ವೀಕರಿಸುವಾಗ ಶ್ರೀಯುತರು ಅಭಿವ್ಯಕ್ತಿಸಿದ ಭಾವನೆ ಪ್ರಶಂಶಾರ್ಹ.

ನೆನಪು ೧೭. ಇದೂ ಜಿ ಟಿ ಎನ್ ಸೇವೆಯಿಂದ ನಿವೃತ್ತರಾದ ನಂತರ ನಡೆದದ್ದು. ಇಸವಿ ನೆನಪಿಲ್ಲ. ಬೆಳಗ್ಗೆ ಬೆಳಗ್ಗೆ ಸುಮಾರು ೯-೯.೩೦  ಗಂಟೆಗೆ ಮನೆಗೆ ಬಂದವರೇ “ನಿನ್ನಿಂದ ಒಂದು ಉಪಕಾರ ಆಗಬೇಕಲ್ಲ” ಅಂದರು. “ಹೇಳಿ, ನನ್ನಿಂದ ಆಗುವಂತಿದ್ದರೆ ಮಾಡುತ್ತೇನ”. “ಆಗುತ್ತೆ ಅಂತ ನನ್ಗೊತ್ತು. ಆದ್ದರಿಂದಲೇ ನಿನ್ನ ಪರವಾಗಿ ನಾನೇ ಸಮ್ಮತಿ ಸೂಚಿಸಿದ್ದಾಗಿದೆ”. ಸಂಗತಿ ಇಂತಿತ್ತು: ಸರ್ಕಾರೀ ಇಲಾಖೆಯೊಂದು ಧಾರವಾಡದಲ್ಲಿ ಶಾಲಾ ಮಕ್ಕಳಿಗಾಗಿ ‘ಬೇಸಿಗೆ ಶಿಬಿರ’ ಸಂಘಟಿಸಿದ್ದರು. ಅದರ ಒಂದು ಕಾರ್ಯಕ್ರಮಕ್ಕೆ ಶ್ರೀಯುತರನ್ನು ಆಹ್ವಾನಿಸಿದ್ದರು – ರಾತ್ರಿಯ ವೇಳೆ ನಕ್ಷತ್ರ ವೀಕ್ಷಣೆಗೆ ಮಾರ್ಗದರ್ಶನ ಯಾವುದೋ ಕ್ರೀಡಾಂಗಣದಲ್ಲಿ. ಈ ಕಾರ್ಯಕ್ರಮದಲ್ಲಿ ಮಾತ್ರ ಸಾರ್ವಜನಿಕರೂ ಭಾಗವಹಿಸಬಹುದಿತ್ತು.  ಶ್ರೀಯುತರಿಗೆ ಹೋಗಲು ಇಷ್ಟವಿರಲಿಲ್ಲ. ಬಲು ಒತ್ತಾಯ ಮಾಡಿದಾಗ “ನೋಡಿ, ಅಷ್ಟು ದೂರ ಬಸ್ಸು ರೈಲು ಪ್ರಯಾಣ ನನ್ನಿಂದ ಸಾಧ್ಯವಿಲ್ಲ. ನೀವು ಮೈಸೂರಿನಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಹಿಂದಕ್ಕೆ ಕರೆದುಕೊಂಡು ಬಂದು ಬಿಡಬೇಕು. ಅಲ್ಲಿ ಊಟ ವಸತಿಯ ವ್ಯವಸ್ಥೆ ನೀವೇ ಮಾಡಬೇಕು” ಅಂದರಂತೆ, ಸರ್ಕಾರೀ ಇಲಾಖೆಯಾದ್ದರಿಂದ ಅಷ್ಟೆಲ್ಲ ಮಾಡಲು ಅವರ ಕೆಂಪುಪಟ್ಟಿ ಅಡ್ಡಿಯುಂಟು ಮಾಡುತ್ತದೆ ಎಂಬ ನಂಬಿಕೆಯಿಂದ.  ಜಿ ಟಿ ಎನ್ ರವರ ದುರದೃಷ್ಟ, ಇಲಾಖೆಯವರು ಒಪ್ಪಿ “ಹಾಗಾದರೆ ಸಾರ್, ನೀವು ಅಲ್ಲಿಂದಲೇ ಟ್ಯಾಕ್ಸಿ ಮಾಡಿಕೊಂಡು ಬನ್ನಿ, ವೆಚ್ಚ ನಾವು ಭರಿಸುತ್ತೇವೆ. ಒಳ್ಳೆಯ ಹೋಟೆಲಿನಲ್ಲಿ ಊಟ ವಸತಿ ವ್ಯವಸ್ಥೆಯನ್ನೂ ಮಾಡುತ್ತೇವೆ” ಅಂದರಂತೆ. ಶ್ರೀಯುತರು ಈ ಸಂಕಟದಿಂದ ಪಾರಾಗಲು ಇನ್ನೊಂದು ಬಾಣ ಪ್ರಯೋಗಿಸಿದರಂತೆ – “ನೋಡಿ. ನಾನು ಒಬ್ಬನೇ ಬರುವುದು ಕಷ್ಟ. ಜೊತೆಗೆ ಒಬ್ಬರು ಬೇಕಾಗುತ್ತದೆ”. “ಅದೇನೂ ತೊಂದರೆ ಇಲ್ಲ ಸಾರ್. ಮಾರನೇ ದಿನ ಪೂರ್ವಾಹ್ನ ವಿಜ್ಞಾನ ಕುರಿತಾದ ಸಂವಾದ ಆಯೋಜಿಸೋಣ. ಅದರಲ್ಲಿ ಭಾಗವಹಿಸಬಲ್ಲ ಗಣ್ಯರೊಬ್ಬರನ್ನು ನೀವೇ ಮೈಸೂರಿನಿಂದಲೇ ಕರೆತನ್ನಿ. ನೀವೂ ಭಾಗವಹಿಸಿ. ಅವರ ಊಟ ವಸತಿ ವ್ಯವಸ್ಥೆಯನ್ನೂ ಮಾಡುವುದಲ್ಲದೆ ಗೌರವ ಸಂಭಾವನೆಯನ್ನೂ ಕೊಡೋಣ” ಎಂದುತ್ತರಿಸಬೇಕೇ ಇಲಾಖೆಯವರು. ಪ್ರಯೋಗಿಸಿದ ಎಲ್ಲ ಬಾಣಗಳೂ ಗುರಿ ತಲುಪದಿದ್ದ ಮೇಲೆ ಮಾಡುವುದೇನು? “ಸರಿ, ನನ್ನ ಜೊತೆ ಬರುವವರು ಯಾರು ಎಂಬುದನ್ನು ನಿಗದಿ ಪಡಿಸಿ ನಿಮಗೆ ತಿಳಿಸುತ್ತೇನೆ. ಅವರಿಗೆ ಸಾಂಪ್ರದಾಯಿಕ ಆಹ್ವಾನ ನೀಡುವ ಜವಾಬ್ದಾರಿ ನಿಮ್ಮದು” ಅಂದು ನನ್ನ ಹತ್ತಿರ ಬಂದಿದ್ದರು. “ಆಕಾಶ ವೀಕ್ಷಣೆಯ ಭಾಗ, ಸಂವಾದದಲ್ಲಿ ಖಗೋಲ ಶಾಸ್ತ್ರ ಮತ್ತು ಗಣಿತ ಸಂಬಂಧಿತ ಪ್ರಶ್ನೆಗಳು ಬಂದರೆ ನಾನು ನೋಡಿಕೊಳ್ಳುತ್ತೇನೆ, ಉಳಿದವನ್ನು ನೀನು ನಿಭಾಯಿಸು” ಅಂದಾಗ ಅರೆಮನಸ್ಸಿನಿಂದ ಒಪ್ಪಿದೆ. ನಿಗದಿತ ದಿನದಂದು ಸಂಜೆ ಸುಮಾರು ೫.೩೦ರ ವೇಳೆಗೆ ದಾರವಾಡದಲ್ಲಿ ನಮಗೆಂದು ಕೊಠಡಿ ಕಾಯ್ದಿರಿಸದ್ದ ಹೋಟೆಲ್ ತಲುಪಿದೆವು. ಅಂದು ನನಗೇನೂ ಕೇಲಸವಿರಲಿಲ್ಲ.

ಆಕಾಶ ವಿಕ್ಷಣೆಗೆ ಸಂಘಟಕರು ಆಯ್ಕೆ ಮಾಡಿದ್ದ ಸ್ಥಳ ಯಾವುದೋ ದೊಡ್ಡ ಕ್ರೀಡಾಂಗಣ. ಪೂರ್ವನಿಗದಿತ ಸಮಯಕ್ಕೆ ನಾವು ಅಲ್ಲಿಗೆ ತಲುಪಿದಾಗ ಸಾವಿರಾರು ಜನ ಅಲ್ಲಿ ಜಮಾಯಿಸಿದ್ದರು. ಕ್ರೀಡಾಂಗಣದ ಒಂದು ತುದಿಯಲ್ಲಿ ಇದ್ದ ವೇದಿಕೆಯೊಂದರ ಮೇಲೆ ನಿಂತ ಜಿ ಟಿ ಎನ್ ಅವರ ಮಾಮೂಲೀ ಶೈಲಿಯಲ್ಲಿ ಕೈನಲ್ಲಿದ್ದ ಟಾರ್ಚ್ ನೆರವಿನಿಂದ ತಮ್ಮ ವಿವರಣೆ ಕೊಡಲಾರಂಬಿಸಿದರು. ಧ್ವನಿವರ್ಧಕ ವ್ಯವಸ್ಥೆ ಇದ್ದದ್ದರಿಂದ ಅವರ ವಿವರಣೆ ಸೂಚನೆ ಎಲ್ಲರಿಗೂ ಕೇಳುತ್ತಿತ್ತು. ತಾವು ಹೇಳಿದ್ದು ಕೇಳುಗರಿಗೆ ಅರ್ಥವಾಯಿತೇ ಅಥವ ತಮ್ಮ ಸೂಚನೆಗಳನ್ನು ಕೇಳಿ ಅದರಂತೆ ಜನ ತಾರೆಗಳನ್ನು ವೀಕ್ಷಿಸಿದರೇ ಇಲ್ಲವೇ ಎಂಬುದನ್ನು ತಿಳಿಯುವ ಅವಕಾಶ ಇಲ್ಲದ ವ್ಯವಸ್ಥೆ ಅದಾಗಿದ್ದರಿಂದ ‘ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು’ ಎಂದು ಸಂಘಟಕರು ವರದಿ ಮಾಡಲು ಅಡ್ಡಿ ಇರಲಿಲ್ಲ. ನನ್ನ ಪ್ರಕಾರ ಶ್ರೀಯುತರ ಸೂಚನೆಗಳನ್ನು ಗ್ರಹಿಸಿ ಎಲ್ಲವನ್ನೂ ವೀಕ್ಷಣೆ ಮಾಡಿದವರ ಸಂಖ್ಯೆ ಶೇ ೧ ರಷ್ಟು ಇದ್ದಿರ ಬಹುದೋ ಏನೋ.

ಇದರಿಂದ ನಮಗೆ ಅರ್ಥವಾದದ್ದು ಇಷ್ಟು: ೧. ಶಿಬಿರ ಯಶಸ್ವಿಯಾಯಿತು ಎಂದು ಬಿಂಬಿಸಲು ಜಿ ಟಿ ಎನ್ ಅವರಿಗಿದ್ದ ‘ತಾರಾ ಮೌಲ್ಯ (ಸ್ಟಾರ್ ವ್ಯಾಲ್ಯೂ)’ದ ಲಾಭ ಪಡೆಯುವುದೇ ಕಾರ್ಯಕ್ರಮದ ಉದ್ದೇಶ. ೨. ಈ ಉದ್ದೇಶ ಈಡೇರಬೇಕಾದರೆ ‘ಜನಸಾಮಾನ್ಯರಲ್ಲಿ ವೈಜ್ಞಾನಿಕತೆ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವವರೂ, ಜನಪ್ರಿಯ ಶಿಕ್ಷಕರೂ ಉತ್ತಮ ವಾಗ್ಮಿಗಳೂ’ (ಇದು ಸಂಘಟಕರು ನನ್ನನ್ನು ಪರಿಚಯಿಸಿದ ರೀತಿ) ಆಗಿರುವ ಎ ವಿ ಜಿ ಗೂ ಅನಿವಾರ್ಯವಾಗಿ ಒಂದು ವೇದಿಕೆ ಸೃಷ್ಟಿಸಬೇಕಾದ್ದರಿಂದ ‘ವಿಜ್ಞಾನಿಗಳೊಡನೆ ಸಂವಾದ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ತತ್ಪರಿಣಾಮವಾಗಿ ನಮ್ಮಿಬ್ಬರಿಗೂ ‘ವಿಜ್ಞಾನಿ’ ಎಂಬ ಬಿರುದು ದೊರೆತಿತ್ತು. ಅದೇನೇ ಇರಲಿ, ಶಿಬಿರದಲ್ಲಿದ್ದ ಮಕ್ಕಳು ಮುಗ್ಧರಾಗಿದ್ದರಿಂದ ‘ಸಂವಾದ’ ಕಾರ್ಯಕ್ರಮ ನಿಜವಾಗಿಯೂ ಬಲು ಸೊಗಸಾಗಿತ್ತು. [ಮಂಡ್ಯದವರು ಯಾರೋ ಜಿ ಟಿ ಎನ್ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದಾಗ ತಪ್ಪಿಸಿಕೊಳ್ಳಲು ಇದೇ ತಂತ್ರ ಪ್ರಯೋಗಿಸಿ ಅಯಶಸ್ವಿಗಳಾದ ನಂತರ ಈ ತಂತ್ರ ಪ್ರಯೋಗ ನಿಲ್ಲಿಸಿದರು]

ನೆನಪು೧೮. ನಾನು ಮೈಸೂರಿನಲ್ಲಿ ಕ ರಾ ವಿ ಪ ಘಟಕದ ಸಕ್ರಿಯ ಕಾರ್ಯಕರ್ತನಾಗಿದ್ದ ದಿನಗಳ ನೆನಪಿದು. ಬಾಲವಿಜ್ಞಾನದ ಸಂಪಾದಕ ಮಂಡಲಿಯ ಸದಸ್ಯನೂ ಆಗಿದ್ದೆ. ಕ ರಾ ವಿ ಪ ದಲ್ಲಿ ನಾನೊಂದು ಸಂಗತಿ ಗಮನಿಸಿದ್ದೆ – ಜಿ ಟಿ ಎನ್ ಅವರನ್ನು ಕ ರಾ ವಿ ಪ ದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತಿರಲಿಲ್ಲ. ಕಾರಣ ತಿಳಿಯಲು ಪ್ರಯತ್ನಿಸಿದಾಗ ಯಾರಿಂದಲೂ ಖಚಿತ ಉತ್ತರ ದೊರೆಯದೇ ಇದ್ದರೂ ನಾನು ಅಂದಾಜಿಸಿದ ಕಾರಣ – ಆಡಳಿತ ಮಂಡಲಿಯ ಸೂತ್ರದಾರರಿಗೆ ಜಿ ಟಿ ಎನ್ ಕುರಿತಾಗಿ ಇದ್ದ ವೈಯಕ್ತಿಕ ಅಸಮಾಧಾನ.

ಜನಪ್ರಿಯ ವಿಜ್ಞಾನ ಸಾಹಿತ್ಯದ ಯುವ ಬರೆಹಗಾರರಿಗೆಂದು ತೀರ್ಥಹಳ್ಳಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ತರಬೇತಿ ಶಿಬಿರವೊಂದನ್ನು ಆಯೋಜಿಸಿತ್ತು (ಇಸವಿ ನೆನಪಿಲ್ಲ). ಶ್ರೀ ಜೆ ಆರ್ ಲಕ್ಷ್ಮಣರಾವ್ ಅವರ ನೇತೃತ್ವದಲ್ಲಿ  ಶ್ರೀ ಅಡ್ಯನಡ್ಕ ಕೃಷ್ಣಭಟ್ಟರು ಮತ್ತು ನಾನು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸುವ ಆಡಳಿತ ಮಂಡಲಿಯ ನಿರ್ಧಾರ ತಿಳಿಸುವ/ಒಪ್ಪಿಗೆ ಸೂಚಿಸ ಬೇಕೆಂಬ ಕೋರಿಕೆಯ ಪತ್ರ ನನ್ನ ಕೈಸೇರಿದಾಗ ಒಪ್ಪಿಗೆ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ನೀಡಿದ ಬಳಿಕ ‘ಈ ಬಾರಿ ವಿಶೇಷ ಉಪನ್ಯಾಸಕ್ಕೆಂದು ಜಿ ಟಿ ಎನ್ ಅವರನ್ನು ೧-೨ ದಿನಗಳ ಮಟ್ಟಿಗೆ ಏಕೆ ಆಹ್ವಾನಿಸಬಾರದು?’ ಎಂದು ಶಿಬಿರದ ಸೂತ್ರಧಾರಿಗಳನ್ನು ಕೇಳಿದೆ. ಅವರು ಉತ್ತರ ಕೊಡುವ ಮೊದಲೇ ‘ಶ್ರೀಯುತರ ಕುರಿತಾಗಿ, ಅವರ ಆಚಾರವಿಚಾರಗಳ ಕುರಿತಾಗಿ. ಅವರ ಬರೆವಣಿಗೆಯ ಶೈಲಿ ಭಾಷೆಗಳ ಕುರಿತಾಗಿ ನಮ್ಮ ಅಭಿಪ್ರಾಯ ಏನೇ ಇರಲಿ ಅವರೊಂದಿಗಿನ ವೈಯಕ್ತಿಕ ಸಂಬಂಧದಲ್ಲಿ ಆದ ಅನುಭವಗಳು ಏನೇ ಇರಲಿ ಅವರ ಅನುಭವದ ಲಾಭ ಇತರರಿಗೆ ಆಗಲು ವೇದಿಕೆ ಒದಗಿಸಬೇಕಾದದ್ದು ಕ ರಾ ವಿ ಪದ ಕರ್ತವ್ಯ ಎಂಬುದು ನನ್ನ ಅಭಿಮತ’ ಅಂದು ಅಲ್ಲಿಂದ ಹೊರಟೆ. ತದನಂತರ ಏನು ನಡೆಯಿತೋ ನನಗೆ ಗೊತ್ತಿಲ್ಲ. ಒಂದೆರಡು ದಿನಗಳ ಬಳಿಕ ದಾರಿಯಲ್ಲಿ ಸಿಕ್ಕ ಜಿ ಟಿ ಎನ್ ‘ಏನಯ್ಯಾ ಇದು ಪವಾಡ’ ಅನ್ನುವ ಮುನ್ನುಡಿಯೊಡನೆ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಲು ಕ ರಾ ವಿ ಪ ದವರು ಆಹ್ವಾನಿಸಿದ ವಿಷಯ ತಿಳಿಸಿದರು, ‘ಇದರಲ್ಲಿ ನಿನ್ನ ಕೈವಾಡ ಏನೂ ಇಲ್ಲ ತಾನೆ?’ ಎಂಬ ಒಗ್ಗರಣೆಯೊಂದಿಗೆ. ಯುಕ್ತ ಪೂರ್ವಸಿದ್ಧತೆಯೊಂದಿಗೆ ಅವರು ಅಲ್ಲಿ ಮಾಡಿದ ವಿಶೇಷ ಉಪನ್ಯಾಸಕ್ಕೆ ಶಿಬಿರವಾಸಿಗಳಷ್ಟೇ ಮಂದಿ ಅಲ್ಲದೆ, ಸ್ಥಳೀಯ ಆಸಕ್ತ ಮಂದಿ ಆಹ್ವಾನ ಇಲ್ಲದೇ ಇದ್ದರೂ ಬಹುಸಂಕ್ಯೆಯಲ್ಲಿ ಆಗಮಿಸಿ ಸುಮಾರು ೧.೩೦ ಗಂಟೆ ಅವಧಿಯ ಉಪನ್ಯಾಸವನ್ನು ತದೇಕಚಿತ್ತದಿಂದ ಕೇಳಿದ್ದನ್ನು ಮರೆಯುವಂತಿಲ್ಲ.

ನೆನಪು೧೯. ಮೈಸೂರಿನ ಗಾನ ಭಾರತೀ ಸಂಸ್ಥೆಯ ಕಾರ್ಯದರ್ಶಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದ ಅವಧಿ. ಸಂಸ್ಥಗೆ ಮಂಜೂರಾಗಿದ್ದ ನಿವೇಶನದಲ್ಲಿ ಸಭಾಂಗಣ ನಿರ್ಮಿಸಲೋಸುಗ ಹಣ ಸಂಗ್ರಹಿಸಲು ಆಡಳಿತ ಮಂಡಲಿಯ ಸದಸ್ಯರು ಹೆಣಾಗಾಡುತ್ತಿದ್ದಾಗ ಒಮ್ಮೆ ನೋಡಿದ್ದು. ಆಗ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಜಿ ಟಿ ಎನ್ ರಸ್ತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದರು. ನಾನೂ ಅವರೊಂದಿಗಿದ್ದದ್ದು ಆಕಸ್ಮಿಕ. ಪರಿಚಯಸ್ಥರೊಬ್ಬರು ದಾರಿಯಲ್ಲಿ ಸಿಕ್ಕರು. ಬಹು ದಿನಗಳ ನಂತರ ಆದ ಆಕಸ್ಮಿಕ ಭೇಟಿ ಅದು. ಉಭಯ ಕುಶಲೋಪರಿ ಆದ ಬಳಿಕ ಅವರು ಜಿ ಟಿ ಎನ್ ಅವರ ಆಕಾಶವೀಕ್ಷಣೆ ಕಾರ್ಯಕ್ರಮಗಳ ಕುರಿತು ತುಸು ಹೆಚ್ಚೇ ಹೊಗಳಿದರು. ಅದನ್ನೆಲ್ಲ ಮೌನವಾಗಿ ಕೇಳಿಸಿಕೊಂಡ ಜಿ ಟಿ ಎನ್ ಗಾನ ಭಾರತೀ ಕರಪತ್ರವನ್ನು ಅವರಿಗೆ ಕೊಟ್ಟು ಸಂಕ್ಷಿಪ್ತವಾಗಿ ಉದ್ದೇಶ ವಿವರಿಸಿ ‘ನಿಮ್ಮಿಂದ ನಾವು ಎಷ್ಟು ಧನಸಹಾಯ ನಿರೀಕ್ಷಿಸಬಹುದು’ ಎಂದು ಯಾವ ಸಂಕೋಚವೂ ಇಲ್ಲದೆ ಕೇಳಿಯೇಬಿಟ್ಟರು. ಈ ಅನಿರೀಕ್ಷಿತ ಕೋರಿಕೆಯಿಂದ ಆ ಪರಿಚಿತರಿಗೂ ಆಘಾತವಾಗಿತ್ತು ಎಂಬುದನ್ನು ಅವರ ಮುಖಭಾವವೇ ಸಾರುತ್ತಿತ್ತು. ಏನು ಉತ್ತರ ಕೊಡಬೇಕೆಂದು ಅವರು ತೊಳಲಾಡುತ್ತಿದ್ದಾಗ ‘ವಿ ರಿಸೀವ್ ವಿತ್ ಗ್ರ್ಯಾಟಿಟ್ಯೂಡ್ ಈವನ್ ಸ್ಮಾಲ್ ಅಮೌಂಟ್ಸ್. ಈವನ್ ೫೦ ಪೈಸ’ ಅಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಜಿ ಟಿ ಎನ್ ಅವರಿಂದ ತಪ್ಪಿಸಿಕೊಳ್ಳುವ ಅನ್ಯಮಾರ್ಗ ಕಾಣದೆ ರೂ ೧೦೦ ಅನ್ನು ತೆತ್ತು ರಸೀತಿ ಪಡೆದು ಕಾಲ್ಕಿತ್ತರು. ಅವರು ಹೋದ ಬಳಿಕ ಜಿ ಟಿ ಎನ್ ಉವಾಚ – ‘ಭಿಕ್ಷೆ ಬೇಡಲು ಹೊರಟವನಿಗೆ ಸಂಕೋಚ ಯಾಕೆ? ಅಷ್ಟಕ್ಕೂ ಈ ಭಿಕ್ಷಾಟನೆ ಮಾಡುತ್ತಿರುವುದು ಸದುದ್ದೇಶಕ್ಕೆ ತಾನೇ?’ (ಜಿ ಟಿ ಎನ್ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದವರಲ್ಲಿ ಒಬ್ಬರು)

ನೆನಪು೨೦. ಇದು ನನ್ನ ಇನ್ನೊಬ್ಬ ಹಿರಿಯ ಮಿತ್ರರು ಹೇಳಿದ್ದು. ಅವರು ಶಿವರಾಮ ಕಾರಂತರ ಕುರಿತು ಲೇಖನವೊಂದನ್ನು ಬರೆಯಬೇಕಾಗಿತ್ತಂತೆ. ಅದಕ್ಕಾಗಿ ಅಗತ್ಯವಿರುವ ಸಾಮಗ್ರಿ ಸಂಗ್ರಹಿಸುತ್ತಿದ್ದ ವಿಷಯ ಜಿ ಟಿ ಎನ್ ಅವರಿಗೆ ಹೇಗೋ ತಿಳಿದು ಅವರ ಮನೆಗೇ ಹೋಗಿ ‘ನೀವು ಮಾಡುತ್ತಿರುವ ಕಾರ್ಯದ ಬಗ್ಗೆ ತಿಳಿಯಿತು. ನಿಮಗೆ ಬಲು ಉಪಯುಕ್ತವಾಗ ಬಹುದಾದ ಮಾಹಿತಿ ಕೊಡಬಲ್ಲವರು ಕೊಡಗಿನ ಸುಂಟಿಕೊಪ್ಪದಲ್ಲಿ ಜಿ ಎಮ್ ಮಂಜನಾಥಯ್ಯ (ಇವರು ನನಗೆ ಸಂಬಂಧದಲ್ಲಿ ಅಜ್ಜ. ಅವರ ಪತ್ನಿ ನನ್ನ ತಂದೆಯ ತಾಯಿಯ ತಂಗಿ. ಕಾರಂತರು ಇವರ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದು ಕಾದಂಬರಿಗಳನ್ನು ಬರೆಯುತ್ತಿದ್ದದ್ದನ್ನು ನಾನು ನೋಡಿದ್ದೇನೆ) ಎಂಬ ಕಾಫಿ ಎಸ್ಟೇಟ್ ಮಾಲೀಕರೊಬ್ಬರಿದ್ದಾರೆ. ನನಗೆ ಅವರ ಪರಿಚಯ ಚೆನ್ನಾಗಿದೆ. ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ’ ಅಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದರಂತೆ.

ಇದರಲ್ಲಿ ಒಂದು ವಿಶೀಷ್ಟತೆಯೂ ಇರುವುದರಿಂದ ನನ್ನ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಆ ಹಿರಿಯ ಮಿತ್ರರಿಗೆ ಜಿ ಟಿ ಎನ್ ಕುರಿತಂತೆ ವೈಯಕ್ತಿಕವಾಗಿ ಬಹಳ ಅಸಮಾಧಾನ ಇತ್ತು. ಅದನ್ನವರು ತಮ್ಮ ಆಪ್ತರೊಂದಿಗೆ ಹೇಳುತ್ತಲೂ ಇದ್ದರು. ಜಿ ಟಿ ಎನ್ ಅವರು ನನಗೆ ಬಂಧುಗಳು ಎಂಬುದು ತಿಳಿದಿದ್ದರೂ ಅನೇಕ ಬಾರಿ ನನ್ನೊಂದಿಗೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಜಿ ಟಿ ಎನ್ ಅವರಿಗೆ ತಿಳಿದೂ ಇತ್ತು. ಆದರೆ ಎಂದೂ ಜಿ ಟಿ ಎನ್ ಅವರ ಕುರಿತಾಗಿ ‘ಹೇಗಿದ್ದಾರಪ್ಪಾ ಗುರುಗಳು. ಈಗ ಏನು ಕೆಲಸ ಮಾಡ್ತಾ ಇದ್ದಾರೆ’ ಎಂದು ಕೇಳುವುದನ್ನು ಬಿಟ್ಟರೆ ಬೇರೇನೂ ಟೀಕೆ ಮಾಡುತ್ತಿರಲಿಲ್ಲ.

ನೆನಪು೨೧. ಅದೊಂದು ದಿನ, ಅನಿರೀಕ್ಷಿತವಾಗಿ ಜಿ ಟಿ ಎನ್ ಅವರಿಂದ ದೂರವಾಣಿ ಕರೆ ಬಂದಿತು. ಮಾರನೇ ದಿನ ಬೆಳಗ್ಗೆ ೧೦.೩೦ ರ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತಮ್ಮನ್ನು ಕಾಣಬೇಕೆಂಬುದು ಕರೆಯ ತಿರುಳು. ಏತಕ್ಕೆಂದು ಕೆದಕಿದಾಗ ನನಗೆ ಅರ್ಥವಾದದ್ದು ಇಷ್ಟು: ಕನ್ನಡ ವಿಶ್ವಕೋಶವನ್ನು ಪರಿಷ್ಕರಿಸಿ ಡಿಜಿಟಲ್ ರೂಪು ಕೊಡಲು ವಿಶ್ವವಿದ್ಯಾಲಯ ನಿರ್ಧರಿಸಿದ್ದನ್ನು ತಿಳಿದ ಜಿ ಟಿ ಎನ್ ಯಾವುದೇ ಸಂಭಾವನೆ ಪಡೆಯದೇ ಪರಿಷ್ಕರಣಾ ಕಾರ್ಯದಲ್ಲಿ ನೆರವು ನೀಡುವುದಾಗಿ ಸ್ವಯಂಪ್ರೇರಿತ ಭರವಸೆ ನೀಡಿದ್ದರು. ‘ಈ ಕನ್ನಡದ ಕೆಲಸ’ದಲ್ಲಿ ನೆರವು ನೀಡಲು ನನ್ನಿಂದ ಸಾಧ್ಯವೇ ಎಂಬುದನ್ನು ತಿಳಿಯಬೇಕಿತ್ತು. ಅಡ್ಯನಡ್ಕ ಕೃಷ್ಣಭಟ್ಟರ ನೆರವು ಕೋರಿರುವ ವಿಷಯವನ್ನೂ ತಿಳಿಸಿದರು. ಮರುದಿನ ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಅವರನ್ನು ಹುಡುಕಿದೆ. ಎಲ್ಲಿಯೂ ಗೋಚರಿಸಲಿಲ್ಲ. ನನಗೆ ಪರಿಚಯವಿದ್ದ ಪ್ರಾಧ್ಯಾಪಕರೊಬ್ಬರನ್ನು ಹಿಡಿದು ವಿಚಾರಿಸಿದೆ. ‘ಜಿ ಟಿ ಎನ್ನಾ, ಓ ಅಲ್ಲಿ ಸೆಲ್ಲಾರ್ ನಲ್ಲಿ ಇದ್ದಾರೆ ನೋಡಿ’ ಅಂದರು. ಅವರ ಮಾತಿನ ಧಾಟಿ, ದೇಹಭಾಷೆ ಇವೆರಡೂ ‘ಇಲ್ಲೇನೋ ತಪ್ಪಾಗಿದೆ’ ಅನ್ನುವುದನ್ನು ಸಾರುತ್ತಿದ್ದವು. ಅಲ್ಲೊಂದು ಸೆಲ್ಲಾರ್ ಇರುವ ವಿಷಯವೇ ನನಗೆ ಗೊತ್ತಿರಲಿಲ್ಲ. ಸೆಲ್ಲಾರ್ ಗೆ ಹೋದೆ. ಬಲು ದೊಡ್ಡ ನೆಲಮಾಳಿಗೆ ಅದು. ಸುಮಾರು ೧೦-೧೫ ಪುಟ್ಟಪುಟ್ಟ ಮರದ ಮೇಜುಗಳು (ಶಾಲಾ ತರಗತಿಗಳಲ್ಲಿ ಅಂಥ ಮೇಜುಗಳು ಈಗಲೂ ಇವೆ), ಪ್ರತೀ ಮೇಜಿಗೊಂದು ಕಬ್ಬಿಣದ ಮಡಚುವ ಕುರ್ಚಿ, ಪ್ರತೀ ಮೇಜಿನ ಮೇಲೂ ಮುದ್ರಿತ ಹಾಳೆಗಳನ್ನು ಜೋಡಿಸುತ್ತಲೋ, ಮಡಚುತ್ತಲೋ ಇದ್ದ ಯುವಕರು. ವಿದ್ಯತ್ಪಂಖದ ಸೌಲಭ್ಯವೂ ಇಲ್ಲ. ಆ ಕೊಠಡಿಯ ಒಂದು ಕೊನೆಯಲ್ಲಿ ಒಂದು ಅಂಥದ್ದೇ ಕುರ್ಚಿ-ಮೇಜು ಶ್ರೀಯುತರ ಕಾರ್ಯಾಲಯ. ಇದನ್ನು ನೋಡಿದ ತಕ್ಷಣ ನನಗನ್ನಿಸಿದ್ದು – ಛೆ ಇದೆಂಥ ವಿಶ್ವವಿದ್ಯಾನಿಲಯ. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ಅನೇಕ ಅಯಾಚಿತ ಪ್ರಶಸ್ತಿಗಳನ್ನು ಪಡೆದ ಹಿರಿಯರೊಬ್ಬರು ಸ್ವಪ್ರೇರಣೆಯಿಂದ ನರವು ನೀಡಲು ಬಂದಾಗ ಅವರೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ನನ್ನನ್ನು ಕಂಡೊಡನೆ ಜಿ ಟಿ ಎನ್ ‘ಬಂದದ್ದು ಒಳ್ಳೇದಾಯಿತು’ ಅಂದು ಆಗಬೇಕಾದ ಕಾರ್ಯ ವಿವರಿಸಿದ್ದಲ್ಲದೆ ಇದಕ್ಕೆ ಯಾವುದೇ ಸಂಭಾವನೆ ದೊರೆಯುವುದಿಲ್ಲವೆಂದೂ ‘ಇಷ್ಟವಿದ್ದರೆ ಒಪ್ಪಿಕೋ. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಆಗುವುದಿಲ್ಲ ಅಂದರೆ ನನಗೇನೂ ಬೇಸರವಿಲ್ಲ’ ಅಂದರು. ಒಟ್ಟಾರೆ ಸನ್ನಿವೇಶದಿಂದ ನಾನು ಊಹಿಸಿದ್ದು – ವಿಶ್ವವಿದ್ಯಾನಿಲಯಕ್ಕೆ ಶ್ರೀಯುತರ ಸೇವೆಯನ್ನು ಪಡೆಯುವ ಯಾವುದೇ ಉದ್ದೇಶವು ಇರಲಿಲ್ಲವಾದರೂ ‘ಸ್ವಪ್ರೇರಣೆಯಿಂದ ಉಚಿತ ಸೇವೆ ಸಲ್ಲಿಸುತ್ತೇನೆಂದು ಬಂದವರನ್ನು ಬೇಡ ಅಂದು ಹಿಂದಕ್ಕೆ ಕಳುಹಿಸುವುದು ಹೇಗೆ. ವಿಶೇಷ ಮರ್ಯಾದೆ ಕೊಡದೇ ಇದ್ದರೆ ಅವರಾಗಿಯೇ ಬಿಟ್ಟು ಹೋದಾರು’ ಎಂಬುದು ವಿಶ್ವವಿದ್ಯಾನಿಲಯದ ಧೋರಣೆ ಆಗಿರಬೇಕು. ನಾನೇನೋ ನಯವಾಗಿ ‘ಇದಕ್ಕೆ ನಾನು ಸಿದ್ಧನಿಲ್ಲ’ ಎಂದು ಹೇಳಿ ಹೊರಬಂದೆ. ಜಿ ಟಿ ಎನ್ ಅವರೂ ವಿಶ್ವವಿದ್ಯಾನಿಲಯಕ್ಕೆ ಕೈಮುಗಿದು ಹೊರಬರುವಂತೆ ಮಾಡುವುದು ಹೇಗೆ? ಎಂಬ ಚಿಂತೆ ನನ್ನನ್ನು ಕಾಡತೊಡಗಿತು. ಅದೃಷ್ಟವಶಾತ್, ಯಾವುದೋ ಸಮಾರಂಭದಲ್ಲಿ ಶ್ರೀ ಅಡ್ಯನಡ್ಕ ಕೃಷ್ಣಭಟ್ಟರ ಭೇಟಿ ಆಯಿತು. ಅವರಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ತಿಳಿಸಿದೆ. ಬೇಸರವಾದರೂ ನೇರವಾಗಿ ಅವರೇನನ್ನೂ ಮಾಡುವಂತಿರಲಿಲ್ಲ. ಜಿ ಟಿ ಎನ್ ಕೃಷ್ಣಭಟ್ಟರ ನೆರವನ್ನೂ ಕೋರಿದ್ದ ವಿಷಯ ಈ ಮೊದಲೇ ಹೇಳಿದ್ದೇನಲ್ಲವೇ? ಆ ವಿಷಯದ ಕುರಿತು ವಿಚಾರಿಸುವ ನೆಪದಲ್ಲಿ ಕೃಷ್ಣಭಟ್ಟರು ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಜಿ ಟಿ ಎನ್ ಕಾರ್ಯನಿರ್ವಹಿಸುತ್ತಿದ್ದ ಸನ್ನಿವೇಶ ಮತ್ತು ಕಾರ್ಯದ ಅಗಾಧತೆಯನ್ನು ಅರ್ಥಮಾಡಿಕೊಂಡು ಬಲು ಜಾಣತನದಿಂದ ಈ ಕಾರ್ಯಕ್ಕೆ ಕೈಹಾಕದೇ ಇರುವುದೇ ಲೇಸೆಂದು ಅವರಿಗೆ ತಿಳಿಸಿದರಂತೆ. ಕೆಲ ದಿನಗಳ ಬಳಿಕ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಸಿಕ್ಕ ಜಿ ಟಿ ಎನ್ ‘ಯೂನಿವರ್ಸಿಟಿ ಕೆಲಸ ನನ್ನ ಕೈಲಿ ಆಗುವುದಿಲ್ಲ ಎಂದು ಬಿಟ್ಟು ಬಂದೆ. ನನಗೂ ವಯಸ್ಸಾಯಿತು ನೋಡು (ಸಧ್ಯ, ಈಗಲಾದರೂ ತಿಳಿಯಿತಲ್ಲ – ಇದು ನನ್ನ ಸ್ವಗತ)’ ಅಂದರು. ನೆರವು ನೀಡಲು ನಾನು ನಿರಾಕರಿಸಿದ್ದು ಮತ್ತು ಕೃಷ್ಣಭಟ್ಟರ ಕಿವಿಮಾತು ನಾವು ಅಪೇಕ್ಷಿಸಿದ ಪರಿಣಾಮ ಉಂಟುಮಾಡಿತ್ತು.

ನೆನಪು೨೨. ಒಂದು ದಿನ ನನ್ನ ಮನೆಗೆ ಬಂದವರೇ ಕೇಳಿದರು “ಈ ರಸ್ತೆಯಲ್ಲಿ ಒಬ್ಬರು ನಿವೃತ್ತ ಫಿಸಿಕ್ಸ್ ಪ್ರೊಫೆಸರ್ ಇದ್ದಾರಂತಲ್ಲ. ಯಾವುದು ಅವರ ಮನೆ?”. “ಎಸ್ ಎನ್ ಪ್ರಸಾದ್ ಮನೆಯೇ?” “ಅಲ್ಲ, ಇನ್ನೊಬ್ಬರು ಇದ್ದಾರಂತೆ, ಅವರದ್ದು ಪುಸ್ತಕ ಪ್ರಕಾಶನವೂ ಇದೆ” ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಸವಂತ ನಿವಾಸದಲ್ಲಿ ಇರುವ ಶ್ರೀ ಶಿವಾನಂದ ಅನ್ನುವವರ ಮನೆ ಹುಡುಕುತ್ತಿದ್ದಾರೆಂದು ತಿಳಿದು, ಮನೆ ತೋರಿಸಿದೆ. ನೇರವಾಗಿ ಅಲ್ಲಿಗೆ ಹೋದರು. ಅಂದು ಸಂಜೆಯ ವಾಕಿಂಗ್  ವೇಳೆಯಲ್ಲಿ ಶ್ರೀ ಶಿವಾನಂದ ಅವರು “ಜಿ ಟಿ ಎನ್ ನಮ್ಮ ಮನೆಗೆ ಬಂದಿದ್ದರು. ನೀವು ಮನೆ ತೋರಿಸಿದರಂತೆ’ ಅಂದರು. ನಾನು ಕೇಳಿದೆ “ತೋರಿಸಿದ್ದು ನಿಜ. ವಿಷಯ ಏನು?”. ನಮ್ಮ ಪ್ರಕಾಶನದ ಪುಸ್ತಕವೊಂದನ್ನು ಓದಿದಾಗ ಅದು ಅವರಿಗೆ ಬಹಳ ಮೆಚ್ಚುಗೆಯಾಯಿತಂತೆ. ‘ಇಂಥ ಒಳ್ಳೆಯ ಪುಸ್ತಕ ಪ್ರಕಾಶನ ಮಾಡಿದ್ದಕ್ಕೆ ಅಭಿನಂದನೆ’ ಸಲ್ಲಿಸಲು ಬಂದಿದ್ದರು ಅಂದು ಜಿ ಟಿ ಎನ್ ರ ‘ದೊಡ್ಡತನ’ವನ್ನು  ಶ್ಲಾಘಿಸಿದರು. ಮೆಚ್ಚಿದ್ದನ್ನು ನೇರವಾಗಿ (ಕೆಲವೊಮ್ಮೆ ಅತಿಯಾಗಿ) ಹೊಗಳುವುದೂ, ಮೆಚ್ಚದ್ದನ್ನು ನೇರವಾಗಿ ಖಂಡಿಸುವುದೂ ಅವರ ಜಾಯಮಾನ. ಎರಡನೆಯದ್ದು ಅವರಿಗೆ ಕೆಲವು ವೈರಿಗಳನ್ನೂ ಸೃಷ್ಟಿಸಿತ್ತು.

ನೆನಪು೨೩. ಅವರ ಜೀವನಪಯಣದ ಕೊನೆಯ ವರ್ಷದಲ್ಲಿ ನಡೆದದ್ದು. ‘ಮನೆಯಲ್ಲಿಯೇ ಇದ್ದೀಯಲ್ಲ. ೧೦ ನಿಮಿಷ ಮಾತನಾಡುವುದಿತ್ತು, ಈಗ ಬಂದರೆ ಏನೂ ತೊಂದರೆ ಇಲ್ಲ ತಾನೇ’ ಎಂದು ದೂರವಾಣಿ ಮುಖೇನ ಕೇಳಿ ಮಾಮೂಲಿನಂತೆ ಬೆಳಗ್ಗೆ ಸುಮಾರು ೯.೩೦ ಕ್ಕೆ ಬಂದರು. ಬಂದವರು ಹೇಳಿದ್ದರ ತಿರುಳು ಇಂತಿದೆ: ‘ಅಶೋಕ ಹೇಳಿದ. ನಕ್ಷತ್ರ ವೀಕ್ಷಣೆಗೆ ಸಂಬಂಧಿಸಿದಂತೆ ನಾನು ಬರೆದ ಪುಸ್ತಕಗಳ ಪ್ರತಿಗಳು ಮುಗಿದು ಹೋಗಿವೆಯಂತೆ. ಪರಿಷ್ಕರಣೆ ಮಾಡುವಂತಿದ್ದರೆ ಮಾಡಿ ಕೊಟ್ಟರೆ ಪುನಃ ಮುದ್ರಿಸುತ್ತಾನಂತೆ. ನನಗೆ ವಯಸ್ಸಾಯಿತು. ಮೊದಲಿನಂತೆ ಕೆಲಸ ಮಾಡಲಾಗುತ್ತಿಲ್ಲ. ನಾನು ಬರೆದ ಅಷ್ಟೂ ಸಂಬಂಧಿತ ಪುಸ್ತಕಗಳ ಪ್ರತಿಗಳನ್ನು ನಿನಗೆ ಕೊಡುತ್ತೇನೆ. ಅದನ್ನು ಪರಿಷ್ಕರಿಸಿ ಬರೆದರೂ ಸರಿ, ಭಾಗಶಃ ಅಥವ ಪೂರ್ಣವಾಗಿ ಬದಲಿಸಿದರೂ ಸರಿ. ಸೀ ವಾಟ್ ಬೆಸ್ಟ್ ಕ್ಯಾನ್ ಬಿ ಡನ್. ಡೂ ಇಟ್. ಯೂ ಆರ್ ಫ್ರೀ ಟು ಟೇಕ್ ಎನಿ ಡೆಸಿಷನ್’. ನನ್ನ ಶೈಲಿಯೇ ಬೇರೆ, ಅವರ ಶೈಲಿಯೇ ಬೇರೆ. ಅವರ ಕಾರ್ಯವೈಖರಿಯೇ ಬೇರೆ, ಅವರದ್ದೇ ಬೇರೆ. ಏನು ಮಾಡುವುದೆಂದು ತಿಳಿಯಲಿಲ್ಲ, “ಈ ಕ್ಷೇತ್ರದಲ್ಲಿ ನಿಮ್ಮಲ್ಲಿರುವಷ್ಟು ಸರಕು ನನ್ನಲ್ಲಿ ಇಲ್ಲ. ಬಹುಶಃ ಈ ಕಾರ್ಯ ನನ್ನಿಂದ ಾಗಲಾರದು” ಅಂದೆ. “ವಿಷಯ ಗೊತ್ತಿಲ್ಲ ಅನ್ನುವುದು ಸುಳ್ಳು ಅನ್ನುವುದು ನಿನಗೂ ಗೊತ್ತು ನನಗೂ ಗೊತ್ತು. ನಿನ್ನಿಂದ ಸಾಧ್ಯ ಎಂದು ನನಗೆ ಖಾತರಿ ಇರುವುದರಿಂದ ಬಂದೆ” ಹೀಗೆ ತುಸು ಸಮಯ ವಾದ ಪ್ರತಿವಾದಗಳಾಯಿತು. ಕೊನೆಗೆ “ಆಯಿತು ಮಾಡುತ್ತೇನೆ. ಆದರೆ ನನ್ದು ಕೆಲವು ಷರತ್ತುಗಳಿಗೆ ನೀವು ಒಪ್ಪಿದರೆ” ಅಂದೆ. “ಏನವು?” “ ಮೊದಲನೆಯದು, ಪುಸ್ತಕ ಇಬ್ಬರ ಹೆಸರಿನಲ್ಲಿಯೂ ಪ್ರಕಟವಾಗಬೇಕು. ಮೊದಲನೆಯದ್ದು ನಿಮ್ಮದಾಗಿರಬೇಕು. ಎರಡನೆಯದು, ನನಗೆ ಸರಿ ಎಂದು ಅನ್ನಿಸಿದ ರೀತಿಯಲ್ಲಿ ಯಾವ ಅಧ್ಯಾಯದಲ್ಲಿ ಏನಿರಬೇಕು, ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಿ ನನ್ನದೇ ಶೈಲಿಯಲ್ಲಿ ಬರೆದು ಕೊಡುವ ಕೆಲಸ ನನ್ನದು, ಅದನ್ನು ಓದಿ ಅಗತ್ಯವಿದ್ದೆಡೆ ಪರಿಷ್ಕರಿಸಿ, ಮಾರ್ಪಡಿಸಿ ಮುದ್ರಣಕ್ಕೆ ಸಿದ್ಧಪಡಿಸುವ ಕೆಲಸ ನಿಮ್ಮದು. ಬೆರಳಚಿಚಿಸುವ ಕಾರ್ಯ ನಾನೇ ಮಾಡುತ್ತೇನೆ” “ಒಪ್ಪಿದೆ. ನಾಳೆ ಮನೆಗೆ ಬಾ, ಕೆಲವು ಆಕರ ಗ್ರಂಥಗಳನ್ನೂ ನಾನು ಬರೆದವುಗಳನ್ನೂ ಕೊಡುತ್ತೇನೆ. ತ್ಯಾಂಕ್ಸ್ ಫಾರ್ ಅಗ್ರೀಯಿಂಗ್” ಅಂದು ಹಿಂದಿರುಗಿದರು. ಮಾರನೇ ದಿನ ಅವರ ಮನೆಗೆ ಹೋಗಿ ಅಗತ್ಯವಿದ್ದ ಪುಸ್ತಕಗಳನ್ನು ತಂದು ಕಾರ್ಯಾರಂಭಿಸಿದೆ. ಇಷ್ಟಾಗಿ ೧ ವಾರವೂ ಆಗಿರಲಾರದು. ಒಂದು ದಿನ ಬೆಳಗ್ಗೆ ಸುಮಾರು ೭ ಗಂಟೆಗೆ ದೂರವಾಣಿ ಮುಖೇನ ‘ ಏನಿಲ್ಲ. ಕೆಲಸ ಶುರುಮಾಡಿದ್ದೀ ತಾನೆ. ಎಲ್ಲಿಯ ವರೆಗೆ ಬಂತು?” ವಿಚಾರಿಸಿದರು. “(ಮನಸ್ಸಿನಲ್ಲಿಯೇ ಅಂದುಕೊಡದ್ದು – ಕುತ್ತಿಗೆಗೆ ಬಂದಿದೆ) ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿರ ಬೇಕು, ಯಾವ ಅಧ್ಯಾಯದಲ್ಲಿ ಏನಿರಬೇಕು ಇವೇ ಮೊದಲಾದವಕ್ಕೆ ಸಂಬಂಧಿಸಿದಂತೆ ರೂಪುರೇಷೆಯೊಂದನ್ನು ಸಿದ್ಧಪಡಿಸಿದ್ದೇನೆ. ನಿಮ್ಮೊಂದಿಗೆ ಚರ್ಚಿಸಿದ ನಂತರ ಮುಂದುವರಿಯುತ್ತೇನೆ” “ಚರ್ಚಿಸುವದಕ್ಕೇನಿದೆ. ನಿನಗೇ ಆ ಸ್ವಾತಂತ್ರ್ಯ ಕೊಟ್ಟಿದ್ದೆನಲ್ಲ. ಬರೆಯಲು ಶುರು ಮಾಡು, ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ’ ಎಂದು ಅಪ್ಣೆಯಾಯಿತು. ಅದಾಗಿ ಒಂದೆರಡು ದಿನಗಳಲ್ಲಿ ಎಂದಿನಂತೆ ತಿಳಿಸಿ ಬರುವುದಕ್ಕೆ ಬದಲಾಗಿ ತೀಳಿಸದೆಯೇ ಮನೆಗೆ ಬಂದು “ಕೆಲಸ ಮುಂದುವರಿಯುತ್ತಿದೆ ತಾನೆ?. ಈಗ ನಾನು ಬಂದದ್ದು  ನನ್ನ ಸಹಾಯ ಇದ್ದರೂ ಪುಸ್ತಕ ನಿನ್ನೊಬ್ಬನ ಹೆಸರಿನಲ್ಲಿಯೇ ಬರಲಿ ಎಂದು ಹೇಳುವುದಕ್ಕೆ. ಮೊದಲಿನಷ್ಟು ಕೆಲಸ ಮಾಡಲು ಆಗುತ್ತಿಲ್ಲ. ನಿನಗೆ ಎಷ್ಟು ಸಹಾಯ ಮಾಡುತ್ತೇನೋ ಅದೂ ಗೊತ್ತಿಲ್ಲ” ಅಂದು ನನಗೆ ಮಾತನಾಡಲು ಅವಕಾಶ ಕೊಡದೆಯೇ ತೆರಳಿದರು. ಆನಂತರ ನಾನು ಅವರನ್ನು ಜೀವಂತವಾಗಿ ನೋಡಲೇ ಇಲ್ಲ. (ಅವರಿಂದ ಪ್ರೇರಿತನಾಗಿ ಬರೆದು ಅವರಿಗೇ ಅರ್ಪಿಸಿದ ‘ತಾರಾವಲೋಕನ’ ಪುಸ್ತಕವನ್ನು ಅವರ ಮರಣಾನಂತರ ಅಶೋಕವರ್ಧನ ಪ್ರಕಟಿಸಿದ. ಶ್ರೀಯುತರು ಇದ್ದಿದ್ದರೆ ಪುಸ್ತಕ ಇನ್ನೂ ಸುಂದರವಾಗಿರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ)

[ವಿ ಸೂ: ಈ ಕುರಿತಾದ ಕೊನೆಯ ಲೇಖನ ಇದು]

Advertisements
This entry was posted in ನೆನಪಿನ ದೋಣಿಯಲಿ. Bookmark the permalink.

8 Responses to ಜಿ ಟಿ ಎನ್ – ಇನ್ನೂ ಕೆಲವು ನೆನಪುಗಳು

 1. Shiela Nayak ಹೇಳುತ್ತಾರೆ:

  ಗೋವಿಂದ ರಾವ್ ಸರ್, ಜಿ ಟಿ ಎನ್ ಬಗ್ಗೆ ಬಹಳಷ್ಟು ಲೇಖನಗಳನ್ನು ಓದಿದ್ದೆ..ಅವರ ಮೇಲೆ ಬಹಳ ಗೌರವವಿತ್ತು..ಇದೀಗ ನಿಮ್ಮ ನೆನಪುಗಳನ್ನು ಓದಿ ಇಮ್ಮಡಿ, ಅಲ್ಲಲ್ಲ ಎಷ್ಟು ಪಟ್ಟು ಹೆಚ್ಚಾಗಿದೆಯಂತ ವಿವರಿಸುವುದೂ ಕಷ್ಟವಾಗಿದೆ. ಸಧ್ಯಕ್ಕೆ ಕೊನೆಯ ಪ್ಯಾರ ಓದಿ ತುಂಬಾ ಇಮೋಷನಲ್ ಆಗಿ ಬಿಟ್ಟ ಕಾರಣ ಹೆಚ್ಚು ಬರೆಯಲಾಗುತ್ತಿಲ್ಲ… ಧನ್ಯವಾದಗಳು!!!

 2. ಅಶೋಕವರ್ಧನ ಜಿ.ಎನ್ ಹೇಳುತ್ತಾರೆ:

  ತೋರಮಣಿಗಳ ನಡುವೆ ಸಣ್ಣವನ್ನೂ ಪೋಣಿಸಿ ಎಂದು ಕೇಳಿದ್ದಕ್ಕೆ ಕ್ಷಮೆಯಿರಲಿ; ಘನವಾಗಿವೆ, ಆಪ್ತವಾಗಿ ಮನಸ್ಸನ್ನು ತಟ್ಟುತ್ತವೆ. ಮೂರು ಲಿಖಿತ ಬೇಡಿಕೆಗಳನ್ನು `ಬಹು’ವೆಂದೇ ಗೌರವಿಸಿದ್ದಕ್ಕೂ ಹಾಗೆ ಕೇಳದೆಯೂ ಮೆಚ್ಚಿದ ಮತ್ತೂ ಮೆಚ್ಚುವ ಮಂದಿಗಳ ಪರವಾಗಿಯೂ ನಾನು ಕೃತಜ್ಞತೆ ಹೇಳದಿರಲಾರೆ. ನನ್ನ ಲೆಕ್ಕಕ್ಕೆ ಜಾಲತಾಣಗಳು ಅರೆ ಖಾಸಗಿ ಅಭಿವ್ಯಕ್ತಿ ಮಾಧ್ಯಮಗಳು. ಹಾಗಾಗಿ ಇಲ್ಲಿ ನೀವು ನಮ್ಮಂತವರ ಬಾಯಿ ಕಟ್ಟಲು ಕೊನೆಯಲ್ಲಿ `ಕೊನೆಯ ಲೇಖನ’ ಎಂದು ಕಾಣಿಸಿದರೂ ನಾನಂತೂ ಅದನ್ನು ನಿಮ್ಮ ಇಂದಿನ ಲಹರಿ ಎಂದಷ್ಟೇ ಭಾವಿಸುತ್ತೇನೆ. ಮುಂದೆ ಲಹರಿ ಬಂದಾಗ, ಇನ್ನಷ್ಟು ನೆನಪುಗಳು ಕಾಡಿದಾಗ ಬರೆದರೆ ಏನೂ ತಪ್ಪಾಗದು ಮತ್ತು ಓದಿ ಸಂತೋಷಪಡಲು ನಾನಂತೂ ಇದ್ದೇ ಇದ್ದೇನೆ
  ಅಶೋಕವರ್ಧನ

 3. Girish, Bajpe ಹೇಳುತ್ತಾರೆ:

  ತುಂಬಾ ಖುಷಿ ಕೊಟ್ಟ ಬರಹಗಳು… ನೇರ ನಡವಳಿಕೆಯ ಸಜ್ಜನ ವ್ಯಕ್ತಿ ಜಿ. ಟಿ. ಎನ್. ರ ಒಡನಾಟದ ಅನುಭವಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಿದ ಲೇಖಕರಿಗೆ ಅಭಿನಂದನೆಗಳು.
  ಗಿರೀಶ್, ಬಜಪೆ.

 4. ಆರ್. ಮಣಿಕಾಂತ್ ಹೇಳುತ್ತಾರೆ:

  ಮೈಸೂರಿನಲ್ಲಿ ಇರುವ ಚಂದ್ರಮತಿ ಸೋಂದ ಅವರು ತುಂಬಾ ಸಲ ಹೇಳುತ್ತಿದ್ದ ಮಾತು…ಜಿ.ಟಿ.ಏನ್.ಅವರು ಸಂಜೆ ವಾಕ್ ಹೊರಟರು ಅಂದರೆ ಆಗ ಸಮಯ ಸರಿಯಾಗಿ ೫.೩೦ ಅಂತಾನೆ ಅರ್ಥ..ಅಷ್ಟು ನಿಖರ ಸಮಯ ಪಾಲನೆ ಅವರದ್ದಾಗಿತ್ತು…
  ಒಂದು ಒಳ್ಳೆಯ ಬರಹಕ್ಕೆ ನಿಮಗೆ ಕೃತಜ್ಞತೆ..

 5. ಸಿ.ಎನ್. ರಾಮಚಂದ್ರನ್ ಹೇಳುತ್ತಾರೆ:

  ನಮಸ್ಕಾರ. ಜಿಟಿಎನ್ ಕುರಿತ ಮೊದಲ ಭಾಗದ ೧೨ ಅನುಭವಗಳು ಮತ್ತು ಎರಡನೆಯ ಭಾಗದ ಎಂಟು ಅನುಭವಗಳನ್ನೂ ಈಗ ತಾನೇ ಓದಿ ಮುಗಿಸಿ ಈ ಪತ್ರ ಬರೆಯುತ್ತಿದ್ದೇನೆ. ಈ ಅನುಭವಗಳು ಜಿಟಿಎನ್ ಅವರ ಭಿನ್ನ ಮುಖಗಳನ್ನೂ ಆಸಕ್ತಿಗಳನ್ನೂ ತುಂಬಾ ಆಪ್ತವಾಗಿ ಆದರೆ ಆರಾಧನಾಧಾಟಿಯಿಲ್ಲದೆ ಚಿತ್ರಿಸುತ್ತವೆ. ಓದುತ್ತಾ ಹೋದಂತೆ ಮತ್ತೆ ನನಗೆ ಜಿಟಿಎನ್ ಅವರೊಡನೆ ಕಳೆದ ಅನೇಕ ಸಂದರ್ಭಗಳು ನೆನಪಿಗೆ ಬಂದುವು. ಗೋವಿಂದರಾವ್ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.
  ಈ ಸರಣಿಯಲ್ಲಿ ನನಗೆ ಗೊತ್ತಿರದ ಸಂಗತಿಯೊಂದು ತಿಳಿಯಿತು: ಜಿಟಿಎನ್ ಕಥೆಗಳನ್ನು ಬರೆದಿದ್ದಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಇನ್ನೂ ಎಷ್ಟು ಗೊತ್ತಿಲ್ಲವೋ!
  ಇತ್ತೀಚೆಗೆ ಜಿಟಿಎನ್ ಅವರನ್ನು ನಾನು ಸಾರ್ವಜನಿಕವಾಗಿ ಸ್ಮರಿಸಿಕೊಳ್ಳುವ ಒಂದು ಅವಕಾಶ ಬಂದಿತು: ಅದು ಕುಂವೀ ಅವರ ಇತ್ತೀಚಿನ ಕಾದಂಬರಿಯ ಬಿಡುಗಡೆ. ಆಗ, ನನ್ನ ಅಧ್ಯಕ್ಷ ಭಾಷಣದ ಕೊನೆಗೆ ಜಿಟಿಎನ್ ಬರೆದಿರುವ ಡಾ. ಚಂದ್ರಶೇಖರ್ ಅವರ ಪುಸ್ತಕವನ್ನು ಪರಿಚಯಿಸಿ ಹೀಗೆ ಹೇಳಿದೆ: “ತಮ್ಮ ಪುಸ್ತಕದಲ್ಲಿ, ಜಿಟಿಎನ್ ಡಾ. ಚಂದ್ರಶೇಖರ್ ಅವರನ್ನು ’ಅವರು ತಮ್ಮ ಸಂಶೋಧನೆಯ ಕ್ಷೇತ್ರವನ್ನು ಮತ್ತೆ ಮತ್ತೆ ಬದಲಾಯಿಸಿಕೊಳ್ಳುವುದಕ್ಕೆ ಏನು ಕಾರಣ?’ ಎಂದು ಕೇಳಿದಾಗ, ಆ ಪ್ರಸಿದ್ಧ ವಿಜ್ಞಾನಿ ಉತ್ತರಿಸಿದರಂತೆ: ’ Once I feel I have nothing new to say about a topic or field, I change it. I don’t want to repeat myself.’ ಈ ಉಕ್ತಿ ಲೇಖಕರಿಗೆ, ಕಲಾವಿದರಿಗೆ, ಭಾಷಣಕಾರರಿಗೆ ಎಲ್ಲರಿಗೂ ಅನ್ವಯಿಸುತ್ತದೆ. ಕುಂವೀ ಅವರಿಗೂ ಸೇರಿದಂತೆ” ಎಂದು ಹೇಳಿ ನನ್ನ ಮಾತನ್ನು ಮುಗಿಸಿದೆ.
  ರಾಮಚಂದ್ರನ್

 6. my pen from shrishaila ಹೇಳುತ್ತಾರೆ:

  ಎ.ವಿ.ಗೋವಿಂದರಾವ್,
  ಲೋಕಕ್ಕೆ ಅವರು ಜಿ.ಟಿ.ಎನ್, ಆದರೆ ನಮಗೆಲ್ಲಾ ಅವರು ಕೇವಲ ನಾರಾಯಣ ಮಾವನಾಗಿದ್ದರು. ನನಗೆ ಅವರ ಪ್ರಸಿದ್ಧಿ,ಜನರಿಗೆ ಅವರಲ್ಲಿದ್ದ ಗೌರವ ತಿಳಿದಿದ್ದರೂ ಅದರ ಸ್ಪಷ್ಟ ಕಲ್ಪನೆಯಿರಲಿಲ್ಲ. ನೀವು ಅದರ ಪರಿಚಯ ಮಾಡಿಸಿದ್ದಕ್ಕೆ ತುಂಬಾ ಕೃತಜ್ಞತೆಗಳು. ಅಂತೂ ನೀವೂ ಸಾಮಾನ್ಯರಲ್ಲವೆಂದು ನಮಗೆ ತಿಳಿಯಿತು.
  ಶೈಲಜ

 7. RG BHAT ಹೇಳುತ್ತಾರೆ:

  ಶ್ರೀ ಜಿ.ಟಿ.ನಾರಯಣ ರಾವ್ ರ ಒಡನಾಟದ ತಮ್ಮ ನೆನಪುಗಳನ್ನು ಓದುಗರಿಗೆ ಸು೦ದರವಾಗಿ ನೀಡಿದ್ದಕ್ಕೆ ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s