ವಿಜ್ಞಾನದ ಕುರಿತು ಜನಸಾಮಾನ್ಯರಲ್ಲಿ ಇರುವ ತಪ್ಪು ತಿಳಿವಳಿಕೆಗಳು

ಜ್ಯೋತಿಷ್ಯ, ವಾಸ್ತು, ಪ್ರಾಣಿಕ್ ಹೀಲಿಂಗ್, ರೇಖೀ —— ಹೀಗೆ ಅನೇಕ ಆಚರಣೆಗಳು ವಿಜ್ಞಾನದ ಮುಖವಾಡ ಧರಿಸಿ ಅಸಂಖ್ಯರನ್ನು ಮರುಳು ಮಾಡಲು ಇರುವ ಕಾರಣಗಳ ಪೈಕಿ ಒಂದು ವಿಜ್ಞಾನದ ಕುರಿತು ಜನಸಾಮಾನ್ಯರಲ್ಲಿ ಇರುವ ತಪ್ಪು ತಿಳಿವಳಿಕೆಗಳು. ಇವುಗಳ ಪೈಕಿ ಪ್ರಮುಖವಾದವನ್ನು ಕಾರಣ ಸಹಿತ ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. (ಯಾವುದೇ ಜ್ಞಾನಶಾಖೆಯನ್ನು ವಿಜ್ಞಾನ ಎಂದು ಕರೆಯ ಬೇಕಾದರೆ ಅದರಲ್ಲಿ ಇರಬೇಕಾದ ಲಕ್ಷಣಗಳನ್ನು ಜ್ಯೋತಿಷ್ಯ ಎಷ್ಟರ ಮಟ್ಟಿಗೆ ವೈಜ್ಞಾನಿಕ? ಎಂಬ ಲೇಖನದಲ್ಲಿ ತಿಳಿಸಿದ್ದೇನೆ)

 

೧. ತಥ್ಯಗಳ (ಫ್ಯಾಕ್ಟ್) ಕಂತೆಯೇ ವಿಜ್ಞಾನ. ಇಂದಿನ ಶಾಲೆಗಳಲ್ಲಿ ಉಪಯೋಗಿಸಲಾಗುತ್ತಿರುವ ವಿಜ್ಞಾನ ಪಠ್ಯಪುಸ್ತಕಗಳ ಮತ್ತು ವಿಜ್ಞಾನ ಬೋಧನಾ ವಿಧಾನದ ಕೊಡುಗೆ ಇದು. ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇರುವ ತಥ್ಯ, ನಿಯಮ ಇವೇ ಮೊದಲಾದವನ್ನು (ಅರ್ಥವಾಗಿರದಿದ್ದರೂ, ಮನೋಗತವಾಗದಿದ್ದರೂ!) (ಪರೀಕ್ಷೆ ಮುಗಿಯುವ ತನಕ!!) ಮನಸ್ಸಿನಲ್ಲಿ ಧರಿಸಿದರೆ ವಿಜ್ಞಾನ ಕಲಿತಂತೆ ಎಂಬ ಭಾವನೆ ಅನೇಕರಲ್ಲಿ ಇದೆ. ವಿಜ್ಞಾನ ಜ್ಞಾನ ಸಂಚಯ ಮಾತ್ರವಲ್ಲ, ಜ್ಞಾನ ಸಂಚಯಕ್ಕೆ ಹೊಸ ಜ್ಞಾನವನ್ನು ಸೇರಿಸುವ ಪ್ರಕ್ರಿಯೆಯೂ ಆಗಿದೆ ಎಂಬುದನ್ನು ಬಹುಮಂದಿ ತಿಳಿದಿಲ್ಲ. ವಿಶ್ವ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಆವಿಷ್ಕರಿಸುವ, ಆವಿಷ್ಕರಿಸಿದ್ದನ್ನು ಸುಲಭಗ್ರಾಹ್ಯವಾದ ಸುಸಂಬದ್ಧ ಸಿದ್ಧಾಂತಗಳಾಗಿ ಮಾರ್ಪಡಿಸುವ ರೋಮಾಂಚಕ ಚರ ಪ್ರಕ್ರಿಯೆ (ಡೈನ್ಯಾಮಿಕ್ ಪ್ರೋಸೆಸ್) ಮತ್ತು ತತ್ಪರಿಣಾಮವಾಗಿ ಉತ್ಪತ್ತಿ ಆಗುವ ಜ್ಞಾನ ಸಂಚಯವೇ  ವಿಜ್ಞಾನ ಎಂಬುದನ್ನು ಮನೋಗತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ವಿಜ್ಞಾನ ಬೋಧನೆ ಆದರೆ ಈ ತಪ್ಪು ತಿಳಿವಳಿಕೆ ಹೋಗುತ್ತದೆ.

೨. ಪರಿಪೂರ್ಣ ಜ್ಞಾನಸಂಚಯ-ವಿಜ್ಞಾನ: ಇದೂ ಇಂದಿನ ಶಾಲೆಗಳಲ್ಲಿ ಉಪಯೋಗಿಸಲಾಗುತ್ತಿರುವ ವಿಜ್ಞಾನ ಪಠ್ಯಪುಸ್ತಕಗಳ ಮತ್ತು ವಿಜ್ಞಾನ ಬೋಧನಾ ವಿಧಾನದ ಕೊಡುಗೆ. ೧೯ ಮತ್ತು ೨೦ ನೇ ಶತಮಾನಗಳಲ್ಲಿ ವೈಜ್ಞಾನಿಕ ವಿಧಾನಗಳಿಂದ ಸಂಗ್ರಹಿಸಿದ ಜ್ಞಾನ ಮಾತ್ರ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇದೆ. ಇನ್ನೂ ಆವಿಷ್ಕರಿಸಬೇಕಾದವುಗಳ ಕುರಿತಾಗಲೀ ಈ ದಿಸೆಯಲ್ಲಿ ಈಗ ನಡೆಯುತ್ತಿರುವ ಪ್ರಯತ್ನಗಳ ಕುರಿತಾಗಲೀ ಉಲ್ಲೇಖವಿಲ್ಲ. ಲಭ್ಯವಾದ ಹೊಸ ಮಾಹಿತಿಯನ್ನು ಆಧರಿಸಿ ಈಗಾಗಲೇ ಆವಿಷ್ಕರಿಸಿರುವುದನ್ನೂ ಪರಿಷ್ಕರಿಸಲು ವಿಜ್ಞಾನಿಗಳು ಸದಾ ಸಿದ್ಧರಿರುವುದರ ಕುರಿತಾದ ಉಲ್ಲೇಖಗಳೂ ಇಲ್ಲ. ಆದ್ದರಿಂದ ಬಹುಮಂದಿಯಲ್ಲಿ ಈ ತಪ್ಪು ತಿಳಿವಳಿಕೆ ಇದೆ.

೩. ಎಲ್ಲ ವಿಜ್ಞಾನಿಗಳೂ ವೈಜ್ಞಾನಿಕ ವಿಧಾನ ಎಂದು ಉಲ್ಲೇಖಿಸಲಾಗುತ್ತಿರುವ ಒಂದು ವಿಧಾನವನ್ನೇ ಅನುಸರಿಸುತ್ತಾರೆ: ‘೧. ಪ್ರಶ್ನೆಯನ್ನು ನಿಷ್ಕೃಷ್ಟವಾಗಿ ನಿರೂಪಿಸುವಿಕೆ ೨. ಯುಕ್ತ ಪ್ರಕಲ್ಪನೆಯನ್ನು ರೂಪಿಸುವಿಕೆ ೩. ಪ್ರಕಲ್ಪನೆ ಸರಿಯೇ ತಪ್ಪೇ ಎಂಬುದನ್ನು ಪರೀಕ್ಷಿಸಲೋಸುಗ ಪ್ರಯೋಗವೊಂದನ್ನು ಯೋಜಿಸುವಿಕೆ ೪. ಪ್ರಯೋಗ ಮುಖೇನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಿಕೆ ೫. ಅಂತಿಮ ತೀರ್ಮಾನ ಕೈಗೊಳ್ಳುವಿಕೆ – ಇವು ವೈಜ್ಞಾನಿಕ ವಿಧಾನದ ಹಂತಗಳು’ ಎಂದು ಆರಂಭಿಕ ಪಾಠಗಳಲ್ಲಿ ವಿಜ್ಞಾನದ ಮೂಲಭೂತ ಸ್ವರೂಪವನ್ನು ಪರಿಚಯಿಸುವ ಸಲುವಾಗಿ ಬೋಧಿಸಿದ್ದರ ಪರಿಣಾಮ ಈ ತಪ್ಪು ತಿಳಿವಳಿಕೆ. ವಿಜ್ಞಾನಿಗಳು ಅಂತಿಮವಾಗಿ ನೀಡುವ ಸಂಶೋಧನಾ ವರದಿಯಲ್ಲಿ ಈ ಉಪಶೀರ್ಷಿಕೆಗಳು ಇರುವದರಿಂದಲೋ ಏನೋ ವೈಜ್ಞಾನಿಕ ವಿಧಾನದ ಈ ಅತೀ ಸರಳೀಕರಿಸಿದ ರೂಪವನ್ನು ಬೋಧಿಸುತ್ತಿರಬಹುದು. ವಾಸ್ತವವಾಗಿ ವೈಜ್ಞಾನಿಕ ಸಂಶೋಧನೆಯ ಪಥ ಇಂತು ಏಕರೇಖೀಯವಾಗಿರುವುದಿಲ್ಲ. ಮೇಲೆ ನಮೂದಿಸಿದ ಹಂತಗಳ ನಡುವೆ ವಿಶಿಷ್ಟ ಅನ್ಯೋನ್ಯಕ್ರಿಯೆ ಜರಗುತ್ತಿರುತ್ತದೆ. ಅನೇಕ ಬಾರಿ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುಂದುವರಿಯುವ ಬದಲು ಹಿಂದಿನ ಹಂತಕ್ಕೆ ಮರಳಿ ಪುನಃ ಕಾರ್ಯಾರಂಭಿಸ ಬೇಕಾಗುತ್ತದೆ. ಇಂದಿನ ವೈಜ್ಞಾನಿಕ ಸಂಶೋಧನೆಗಳು ಬಲು ಸಂಕೀರ್ಣವಾಗಿರುತ್ತವೆ. ಎಂದೇ, ಒಂದು ಸಂಶೋಧನೆಯಲ್ಲಿ ಒಬ್ಬನ ಮುಂದಾಳತ್ವದಲ್ಲಿ ಬಹುಮಂದಿ ಪಾಲ್ಗೊಂಡಿರುತ್ತಾರೆ. ಅನೇಕ ಸಂಶೋಧನೆಗಳಲ್ಲಿ ಅನಿರೀಕ್ಷಿತ ಫಲಿತಾಂಶ ದೊರೆತು ಸಂಶೋಧನೆಯ ದಿಕ್ಕು ಬದಲಾಗುವುದೂ ಉಂಟು..

೪. ವೈಜ್ಞಾನಿಕ ಸಂಶೋಧನೆಗಳನ್ನು ಮಾಡಲು ಅಸಾಧಾರಣ ಬುದ್ಧಿಶಕ್ತಿ ಇರಬೇಕು. ‘ಬುದ್ಧಿವಂತರು’ ಮಾತ್ರ ವಿಜ್ಞಾನ ಮತ್ತು ಗಣಿತಶಾಸ್ತ್ರಗಳನ್ನು ಅಧ್ಯಯಿಸಬೇಕು ಎಂದು ಅನೇಕರು ನಂಬಿದ್ದಾರೆ (ಎಸ್  ಎಸ್ ಎಲ್ ಸಿನಲ್ಲಿ ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವವರು ಬುದ್ಧಿವಂತರಲ್ಲ ಎಂದು ಬಹುಮಂದಿ ನಂಬಿರುವುದರಿಂದ ಅವರಿಗೆ ಪಿ ಯು ಸಿ ಹಂತದಲ್ಲಿ ಮಾನವಿಕ ಶಾಸ್ತ್ರಗಳನ್ನು ಅಭ್ಯಸಿಸುವಂತೆ ಸಲಹೆ ನೀಡುವುದೇ ಇದಕ್ಕೆ ಪುರಾವೆ). ಇದರ ಪರಿಣಾಮವೋ ಏನೋ ‘ಬುದ್ಧಿವಂತರು’ ಮಾತ್ರ ವೈಜ್ಞಾನಿಕ ಸಂಶೋಧನೆ ಮಾಡಬಲ್ಲರು ಎಂಬ ಭ್ರಮೆ ಬೇರೂರಿದೆ. ವಾಸ್ತವವಾಗಿ, ಸಂಶೋಧಕರಿಗೆ ವಿಶ್ಲೇಷಣಾ ಸಾಮರ್ಥ್ಯದ ಮತ್ತು ಸೃಜನಶೀಲತೆಯ ಆವಶ್ಯಕತೆ ಇದೆಯೇ ವಿನಾ ಮೇಧಾವೀತನದ್ದಲ್ಲ. ಸೃಜನಶೀಲರಲ್ಲದವರು ಪರ್ಯಾಯ ಪ್ರಕಲ್ಪನೆಗಳನ್ನೇ ಆಗಲಿ ನೂತನ ಪರೀಕ್ಷಾ ವಿಧಾನವನ್ನೇ ಆಗಲಿ ವಿಭಿನ್ನ ದೃಷ್ಟಿಕೋನದಿಂದ ಲಭ್ಯ ಮಾಹಿತಿಯ ವಿಶ್ಲೇಷಣೆಯನ್ನೇ ಆಗಲಿ ಮಾಡಲಾರರು.

೫. ಅನುಗಮನಾತ್ಮಕ (ಇಂಡಕ್ಟಿವ್) ಅಥವ ನಿಗಮನಾತ್ಮಕ (ಡಿಡಕ್ಟಿವ್) ತರ್ಕವಿಧಾನಗಳಿಂದ ಸಮಸ್ಯೆಯನ್ನು ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ. ವಿಜ್ಞಾನದ ಆರಂಭಿಕ ಪಾಠಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ತರ್ಕವಿಧಾನಗಳಿವು. ಅಂದ ಮಾತ್ರಕ್ಕೆ ಇವೆರಡನ್ನು ಮಾತ್ರ ವಿಜ್ಞಾನಿಗಳು ಉಪಯೋಗಿಸುತ್ತಾರೆ ಎಂದು ಅರ್ಥೈಸಕೂಡದು. ವಾಸ್ತವವಾಗಿ, ವಿಜ್ಞಾನಿಗಳು ಸಂದರ್ಭೋಚಿತವಾಗಿ ಇವೆರಡರ ಪೈಕಿ ಒಂದನ್ನು ಅಥವ ಇವೆರಡನ್ನೂ ಏಕಕಾಲದಲ್ಲಿ ಉಪಯೋಗಿಸಿತ್ತಾರೆ. ಇವುಗಳೊಂದಿಗೆ ಸೃಜನಾತ್ಮಕವಾಗಿ ಆಲೋಚಿಸುವ ಸಾಮರ್ಥ್ಯವೂ ಹಿತಮಿತವಾಗಿ ಬೆರೆತಿರುತ್ತದೆ.

೬. ವೈಜ್ಞಾನಿಕ ಅಧ್ಯಯನಗಳಲ್ಲಿ ಯಾವುದನ್ನೇ ಆಗಲಿ ಪ್ರಯೋಗ ಮುಖೇನ ಪರೀಕ್ಷಿಸಲೇ ಬೇಕು. ಪ್ರಯೋಗಾಲಯದ ನಿಯಂತ್ರಿತ ಪರಿಸರದಲ್ಲಿ ಮಾಡುವ ಪ್ರಯೋಗಗಳು ವಿಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವಾದರೂ ಎಲ್ಲ ಪ್ರಕಲ್ಪನೆಗಳನ್ನೂ ಪ್ರಯೋಗ ಮುಖೇನವೇ ಪರೀಕ್ಷಿಸಬೇಕೆಂಬ ನಯಮವಿಲ್ಲ. ಅನೇಕ ಪ್ರಕಲ್ಪನೆಗಳನ್ನು ಕೇವಲ ವೀಕ್ಷಣೆಯೊಂದರಿಂದಲೇ ಪರೀಕ್ಷಿಸುವುದು ಸಾಧ್ಯ. (ಉದಾ: ಆಕಾಶಕಾಯಗಳ ಚಲನೆ) ವಾಸ್ತವವಾಗಿ, ಏನನ್ನು ಪರೀಕ್ಷಿಸಬೇಕಾಗಿದೆ ಎಂಬುದನ್ನು ಆಧರಿಸಿ ಹೇಗೆ ಪರೀಕ್ಞಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ವಿಜ್ಞಾನಿಗಳು. ಪರೀಕ್ಷಿಸುವ ವಿಧಾನ ವಿಭಿನ್ನ ತಂತ್ರಗಳನ್ನು ಸಂಯೋಜಿಸಿದ ವಿಶಿಷ್ಟ ತಂತ್ರವೂ ಆಗಿರಬಹುದು.

೭. ಒಮ್ಮೆ ವೈಜ್ಞಾನಿಕವಾಗಿ ಸಾಬೀತು ಪಡಿಸಿದವು ದೋಷರಹಿತವೂ ಮುಂದೆಂದೂ ಬದಲಿಸಲಾಗದವೂ ಆಗಿರುತ್ತವೆ. ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇರುವುದೇ ವಿಜ್ಞಾನ ಎಂದು ತಿಳಿದವರ ನಂಬಿಕೆ ಇದು. ಹೆಚ್ಚುಕಮ್ಮಿ ನಾನಾ ರೀತಿಗಳಲ್ಲಿ ದೃಢೀಕರಿಸಲಾಗರುವ ಮತ್ತು ಸುಲಭವಾಗಿ ಅಸತ್ಯವೆಂದು ಸಾಬೀತುಪಡಿಸಲಾಗದ ಸತ್ಯಾಂಶಗಳನ್ನು ಮಾತ್ರ ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸುವುದು ಸಂಪ್ರದಾಯ. ಆದರೂ ಕೆಲವೊಮ್ಮೆ ಹೊಸ ಪುರಾವೆಗಳು ದೊರೆತಾಗ ಅವನ್ನೂ ಬದಲಿಸಲಾಗುತ್ತದೆ (ಉದಾ: ಪರಮಾಣುಗಳನ್ನು ವಿಭಜಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ). ಇನ್ನೂ ಸರಿಯಾಗಿ ತಿಳಿಯದ್ದನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸುವುದಿಲ್ಲ. ಆರಂಭಿಕ ಪಠ್ಯಪುಸ್ತಕಗಳಲ್ಲಿ ವಿವರಿಸದೇ ಇರುವ ಹಾಲಿ ನಡೆಯುತ್ತಿರುವ ಸಂಶೋಧನೆಯ ಕ್ಷೇತ್ರಗಳಲ್ಲಿ ವೈಜ್ಞಾನಿಕ ಚಿಂತನೆ ಬಲುವೆಗವಾಗಿ ಬದಲಾಗುತ್ತಿರುತ್ತದೆ. ಆಹಾರ, ಆರೋಗ್ಯ, ಔಷಧ, ಶರೀರಶಾಸ್ತ್ರ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಚಿಂತನೆಯಲ್ಲಿ ತೀವ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೀವು ಗಮನಿಸಿರಬಹುದು. ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಸಿದ್ಧಾಂತ ರೂಪಿಸುವುದದೂ, ಹೊಸ ಸಾಕ್ಷ್ಯಾಧಾರಗಳು ದೊರೆತರೆ ಅದನ್ನು ಆಧರಿಸಿ ರೂಪಿಸಿದ ಸಿದ್ಧಾಂತವನ್ನು ಯುಕ್ತ ರೀತಿಯಲ್ಲಿ ಬದಲಿಸುವುದು ವಿಜ್ಞಾನದ ವೈಶಿಷ್ಟ್ಯ. ‘ಏನೇ ಆಗಲಿ ಅಜ್ಜ ಹಾಕಿದ ಆಲದ ಮರಕ್ಕೆ ಅಂಟಿಕೊಂಡೇ ಇರುತ್ತೇನೆ’ ಅನ್ನುವ ಮನೋಧರ್ಮ ವೈಜ್ಞಾನಿಕ ಮನೋಧರ್ಮವೇ ಅಲ್ಲ. ವಾಸ್ತವವಾಗಿ, ಹೊಸ ಸಾಕ್ಷ್ಯಾಧಾರಗಳು ಲಭ್ಯವಾದರೆ ಪ್ರಚಲಿತ ಸಿದ್ಧಾಂತಗಳನ್ನು (ಅವು ಎಷ್ಠೇ ಹಳೆಯವು ಆಗಿರಲಿ, ಎಷ್ಟೇ ಜನಪ್ರಿಯವಾದವು ಆಗಿರಲಿ) ಯುಕ್ತ ರೀತಿಯಲ್ಲಿ ಬದಲಿಸಲು ಅಥವ ಸಾರಾಸಗಟಾಗಿ ತಿರಸ್ಕರಿಸಲು ವಿಜ್ಞಾನ ಹಿಂಜರಿಯುವುದಿಲ್ಲ. ಆದ್ದರಿಂದಲೇ ವಿಜ್ಞಾನದ ಜ್ಞಾನ ಸಂಚಯದ ಆಳ, ಹರವು ಮತ್ತು ಪರಿಮಾಣ ವಿಕಸಿಸುತ್ತಲೇ ಇರುತ್ತವೆ.

೮. ವೈಜ್ಞಾನಿಕವಾಗಿ ಸಾಬೀತಾದದ್ದನ್ನು ಯಾರೂ ಪ್ರಶ್ನಿಸುವಂತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು (ವಿಶೇಷತಃ ಆಹಾರೋತ್ಪನ್ನ ತಯಾರಾಕರು, ಸೌಂದರ್ಯವರ್ಧಕ ತಯಾರಕರು —-) ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಉಪಯೋಗಿಸುತ್ತಿರುವ ಪ್ರಚಾರತಂತ್ರಗಳ ಉತ್ಪನ್ನ ಈ ತಪ್ಪು ತಿಳಿವಳಿಕೆ. ಇದು ನಿಜವಾಗಿದ್ದಿದ್ದರೆ ವಿಜ್ಞಾನದ ಜ್ಞಾನಸಂಚಯ ವಿಸ್ತರಿಸುತ್ತಲೇ ಇರಲಿಲ್ಲ. ಒಬ್ಬ ವಿಜ್ಞಾನಿ, ಆತ ಎಷ್ಟೇ ಖ್ಯಾತನಾಮನಾಗಿರಲಿ, ತಾನು ಆವಿಷ್ಕರಿಸಿದ್ದೇನೆ ಎಂದು ಘೋಷಿಸಿದ್ದನ್ನು ಇತರ ವಿಜ್ಞಾನಿಗಳು ಪರಿಶೀಲಿಸಿ ಪುನಃ ಪರೀಕ್ಷಿಸಿ ಆವಿಷ್ಕರಿಸಿದ್ದು ಸರಿಯಾಗಿದೆ ಎಂಬುದನ್ನು ಖಾತರಿ ಮಾಡಿಕೊಂಡ ಬಳಿಕವೇ ಅದು ವಿಜ್ಞಾನದ ಜ್ಞಾನಸಂಚಯಕ್ಕೆ ಸೇರ್ಪಡೆಯಾಗುತ್ತದೆ.

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s