ಜ್ಯೋತಿಷ್ಯ – ಎಷ್ಟರ ಮಟ್ಟಿಗೆ ವೈಜ್ಞಾನಿಕ?

ಮನುಷ್ಯನ ಮೇಲೆ ಆಗುವುದೆಂದು ಭಾವಿಸಿರುವ ಗ್ರಹ, ನಕ್ಷತ್ರ ಇವೇ ಮೊದಲಾದವುಗಳ ಪ್ರಭಾವವನ್ನು ಮುಂದಾಗಿಯೇ ತಿಳಿಯುವ ವಿದ್ಯೆ ಎಂದು ಅನೇಕರು ನಂಬಿರುವ ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ? ನೈಸರ್ಗಿಕ ಜಗತ್ತಿನ (ನ್ಯಾಚುರಲ್ ವರ್ಲ್ಡ್) ಕುರಿತಾದ ನಮ್ಮ ಜ್ಞಾನ ಮತ್ತು ಅದನ್ನು ಗಳಿಸುವ ಪ್ರಕ್ರಿಯೆಯೇ ವಿಜ್ಞಾನ ಎಂಬ ಅತೀ ಸರಳ ವ್ಯಾಖ್ಯಾನದ ಪದಾರ್ಥವನ್ನು ಮಾತ್ರ ಗ್ರಹಿಸಿದವರು ಜ್ಯೋತಿಷ್ಯವೂ ಒಂದು ವಿಜ್ಞಾನ ಎಂದು ವಾದಿಸುವುದುಂಟು. ಮೇಲ್ನೋಟಕ್ಕೆ ಜ್ಯೋತಿಷ್ಯವೂ ವಿಜ್ಞಾನದಂತೆ ಗೋಚರಿಸುವ ಸಾಧ್ಯತೆ ಇದೆ. ಜನನದ ಸಮಯದಲ್ಲಿ ಆಕಾಶಕಾಯಗಳ ಸ್ಥಾನಗಳನ್ನು ಗುರುತಿಸಲು ಗಣಿತದ ಸೂತ್ರಗಳ ಬಳಕೆ, ಈ ಆಕಾಶಕಾಯಗಳ ಸ್ಥಾನ ಸೂಚಿಸಲು ವಿಶಿಷ್ಟ ಪಟದ ಬಳಕೆ ಮುಂತಾದವು ಈ ಭ್ರಮೆ ಉಂಟಾಗಲು ಕಾರಣವಿರಬಹುದು. ವಿಜ್ಞಾನದಲ್ಲಿ ಮಾಡುವಂತೆ ‘ಇದು ಈಗ ಹೀಗಿದ್ದರೆ ಮುಂದೆ ಹೀಗಾಗಬೇಕು’ ಎಂದು ಭವಿಷ್ಯವಾಣಿಯ ರೂಪದಲ್ಲಿ ಪ್ರಕಲ್ಪನೆ (ಹೈಪಾತಿಸಿಸ್) ರೂಪಿಸುವಿಕೆ, ಭವಿಷ್ಯವಾಣಿ ನಿಖರವಾಗಿತ್ತೆಂಬುದನ್ನು ಪುಷ್ಟೀಕರಿಸಲು ‘ನಮ್ಮ ವಿಷಯದಲ್ಲಿ ಫಲಜ್ಯೋತಿಷ್ಯ ನಿಜವಾಯಿತು’ ಅಂದನ್ನುವವರ ಹೇಳಿಕೆಗಳನ್ನು ಪುರಾವೆಗಳಾಗಿ ಸ್ವೀಕರಿಸುವಿಕೆ ಮುಂತಾದವುಗಳ ಮುಖೇನ ಜ್ಯೋತಿಷ್ಯಕ್ಕೆ ವಿಜ್ಞಾನದ ಮುಖವಾಡವನ್ನು ತೊಡಿಸಿ ವಿಜ್ಞಾನದ ನಿಜವಾದ ತಿರುಳನ್ನು ಸ್ವಾಂಗೀಕರಿಸಿಕೊಳ್ಳದ ವೃತ್ತಿಪರ ವಿಜ್ಞಾನಿಗಳೂ ಸೇರಿದಂತೆ ಬಹುಸಂಖ್ಯಾತರನ್ನು  ಮರುಳು ಮಾಡುವಲ್ಲಿ ಆಧುನಿಕ ಫಲಜ್ಯೋತಿಷಿಗಳೂ ದೂರದರ್ಶನದಲ್ಲಿ ಕಾಣಿಸುತ್ತಿರುವ ಅಸಂಖ್ಯಾತ ಸ್ವಘೋಷಿತ/ಕಾರ್ಯಕ್ರಮ ನಿರೂಪಕ ಘೋಷಿತ ‘ಗುರೂಜಿ’ಗಳು ಯಶಸ್ವಿಯಾಗಿದ್ದಾರೆ.

ಯಾವುದೇ ಜ್ಞಾನಶಾಖೆಗೆ ಆಧುನಿಕ ವಿಜ್ಞಾನದ ಸ್ಥಾನಮಾನ ನೀಡಬಹುದೇ ಬೇಡವೇ ಎಂಬುದನ್ನು ನೀವೇ ನಿರ್ಧರಿಸಲು ಅಗತ್ಯವಾದ ಮಾನದಂಡಗಳನ್ನು ಈ ಲೇಖನದಲ್ಲಿ ಒದಗಿಸುತ್ತಿದ್ದೇನೆ. ಅವುಗಳ ನೆರವಿನಿಂದ ‘ಜ್ಯೋತಿಷ್ಯ’ ಒಂದು ವಿಜ್ಞಾನವೇ ಎಂಬುದನ್ನು ನೀವೇ ನಿರ್ಧರಿಸಿ. ನಿರ್ಧರಿಸುವಾಗ ವಿಜ್ಞಾನ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಬೇಕಾದರೆ ಇಲ್ಲಿ ಪಟ್ಟಿಮಾಡಿರುವ ಎಲ್ಲ ಲಕ್ಷಣಗಳೂ ಇರಬೇಕು, ಯಾವುದೋ ಕೆಲವು ಮಾತ್ರ ಅಲ್ಲ ಎಂಬುದನ್ನು ಮರೆಯದಿರಿ.

೧. ಈ ಮುನ್ನವೇ ತಿಳಿಸಿದಂತೆ ವಿಜ್ಞಾನದ ಅಧ್ಯಯನ ವಸ್ತು ನೈಸರ್ಗಿಕ ಜಗತ್ತು (ನ್ಯಾಚುರಲ್ ವರ್ಲ್ಡ್), ಅರ್ಥಾತ್, ಸಮಸ್ತ ಜೀವರಾಶಿ ಹಾಗೂ ಮಾನವ ಸೃಷ್ಟಿತ ವಸ್ತುಗಳನ್ನೂ ಒಳಗೊಂಡಂತೆ ಈ ವಿಶ್ವದಲ್ಲಿ ಇರುವ ಸಮಸ್ತವೂ ದೃಗ್ಗೋಚರವಲ್ಲದ ಬಲಗಳನ್ನೂ ಶಕ್ತಿಯ ಪ್ರಭಾವಗಳನ್ನೂ ಒಳಗೊಂಡಂತೆ ವಿಶ್ವದಲ್ಲಿ ಜರಗುವ ಸಮಸ್ತ ವಿದ್ಯಮಾನಗಳೂ ವಿಜ್ಞಾನದ ಅಧ್ಯಯನದ ವ್ಯಾಪ್ತಿಯಲ್ಲಿ ಇವೆ.  ಅಧಿನೈಸರ್ಗಿಕ (ಸೂಪರ್ ನ್ಯಾಚುರಲ್) ಅನ್ನಬಹುದಾದವನ್ನು ವಿಜ್ಞಾನ ಅಧ್ಯಯಿಸುವುದಿಲ್ಲ.

ಸೌರಮಂಡಲದಲ್ಲಿ ಇರುವ ಕೆಲವು ಆಕಾಶಕಾಯಗಳಿಗೂ (ಗಮನಿಸಿ: ಸೂರ್ಯ, ಚಂದ್ರ, ಬುಧ, ಶುಕ್ರ, ಕುಜ, ಗುರು ಮತ್ತು ಶನಿ ಮಾತ್ರ. ಪ್ಲೂಟೋ, ನೆಪ್ಚೂನ್, ಇತರ ಗ್ರಹಗಳ ಉಪಗ್ರಹಗಳು ಈ ಪಟ್ಟಿಯಲ್ಲಿ ಸೇರಿಲ್ಲ. ರಾಹು, ಕೇತುಗಳು ಜ್ಯೋತಿಷ್ಯ ನಿಗದಿತ ಆಕಾಶಕಾಯಗಳ ಪಟ್ಟಿಯಲ್ಲಿದ್ದರೂ ವಾಸ್ತವವಾಗಿ ಆಕಾಶಕಾಯಗಳಲ್ಲ. ನೋಡಿ: ರಾಹು ಕೇತುಗಳು) ಹಾಗೂ ರಾಶಿಗಳಿಗೂ (ಆಧುನಿಕ ಖಗೋಲಶಾಸ್ತ್ರ ಮಾನ್ಯ ಮಾಡಿರುವ ೮೮ ರ ಪೈಕಿ ೧೨ ಮಾತ್ರ. ನೋಡಿ: ರಾಶಿ ಮತ್ತು ನಕ್ಷತ್ರ) ಭೂಮಿಯ ಮೇಲೆ ನಡೆಯುವ ಕೆಲವು ವಿದ್ಯಮಾನಗಳಿಗೂ ಹಾಗೂ ಮಾನವ ಜೀವನಕ್ಕೂ ಇರುವ ಸಂಬಂಧ ಜ್ಯೋತಿಷ್ಯದ ಅಧ್ಯಯನ ವಸ್ತು. ಇದು ವಿಜ್ಞಾನ ನಿರೂಪಿಸಿದ ‘ನೈಸರ್ಗಿಕ ಜಗತ್ತಿನ’ ವ್ಯಾಪ್ತಿಯ ಒಳಗೇ ಇರುವುದರಿಂದ ಜ್ಯೋತಿಷ್ಯವೂ ವಿಜ್ಞಾನದ ಒಂದು ಶಾಖೆಯೇ ಆಗಿದೆ ಎಂಬುದು ಜ್ಯೋತಿಷಿಗಳ ಮತ್ತು ಅದನ್ನು ನಂಬುವವರ ಅಂಬೋಣ. ಒಪ್ಪೋಣವೇ?

೨.   ನೈಸರ್ಗಿಕ ಜಗತ್ತಿನ ಆಗುಹೋಗುಗಳನ್ನು ಅಧ್ಯಯಿಸಿ ಅವು ಯಾವಾಗ, ಏಕೆ, ಹೇಗೆ ಆಗುತ್ತವೆ ಇವೇ ಮೊದಲಾದ ಅಂಶಗಳನ್ನು ಒಳಗೊಂಡ ವಿವರಣೆಗಳನ್ನು ಒದಗಿಸುವುದು ವಿಜ್ಞಾನದ ಗುರಿ. ತತ್ಪರಿಣಾಮವಾಗಿ ಕೆಲವು ವಿದ್ಯಮಾನಗಳ ಜರಗುವಿಕೆಯನ್ನು ಮುಂದಾಗಿಯೇ ನಿರೀಕ್ಷಿಸಲು ಸಾಧ್ಯವಾಗುತ್ತದೆ. ಕೆಲವು ಆಕಾಶಕಾಯಗಳ ಸಾಪೇಕ್ಷ ಸ್ಥಾನ ಮತ್ತು ಚಲನೆಯನ್ನು ಆಧರಿಸಿ  ಮಾನವರ ಜೀವನದಲ್ಲಿ ಮತ್ತು ಭೂಮಿಯಲ್ಲಿ ಜರಗಬಹುದಾದ ವಿದ್ಯಮಾನಗಳನ್ನು ಮುಂದಾಗಿಯೇ ನಿರೀಕ್ಷಿಸಲು ನೆರವು ನೀಡುತ್ತದೆ ಜ್ಯೋತಿಷ್ಯ. ಆದ್ದರಿಂದ ಇದೂ ವಿಜ್ಞಾನದ ಒಂದು ಶಾಖೆಯೇ ಆಗಿದೆ ಎಂಬುದು ಜ್ಯೋತಿಷಿಗಳ ಮತ್ತು ಅದನ್ನು ನಂಬುವವರ ಅಂಬೋಣ. ಒಪ್ಪೋಣವೇ?

೩. ವಿಜ್ಞಾನದ ತೀರ್ಪುಗಳೂ ಪ್ರಕಲ್ಪನೆಗಳೂ (ಭವಿಷ್ಯವಾಣಿಗಳು) ಪರೀಕ್ಷಿಸಬಹುದಾದವು ಆಗಿರುತ್ತವೆ. ಅವುಗಳಲ್ಲಿ ಅಸ್ಪಷ್ಟತೆ ಇರುವುದಿಲ್ಲ. ಎಂದೇ ಅವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸುವ ಸಾಧ್ಯತೆಯೂ   ಇರುವುದಿಲ್ಲ. ಆದ್ದರಿಂದ ಅವುಗಳ ಸತ್ಯಾಸತ್ಯತೆಯನ್ನೂ ನಿಖರತೆಯನ್ನೂ ಯಾರು ಬೇಕಾದರೂ ಪರೀಕ್ಷಿಸಿ ನೋಡಬಹುದು. ಜ್ಯೋತಿಷಿಗಳ ಭವಿಷ್ಯವಾಣಿಯ ಕುರಿತು ಈ ರೀತಿ ಹೇಳಲು ಸಾಧ್ಯವೇ? ಉದಾಹರಣೆಗೆ, ಸುಮಾರು ೧೦೦ ಅಜ್ಞಾತ ವ್ಯಕ್ತಿಗಳ ಜನ್ಮ ಕುಂಡಲಿಗಳನ್ನು ಜ್ಯೋತಿಷಿಗಳಿಗೆ ಕೊಟ್ಟರೆ ಆ ವ್ಯಕ್ತಿಗಳ ಲಿಂಗ, ಅವರ ಉದ್ಯೋಗ, ವಿವಾಹಿತರೇ ಅಲ್ಲವೇ, ಮರಣಿಸುವ ದಿನಾಂಕ ಇವೇ ಮೊದಲಾದವನ್ನು ಅವರು ನಿಖರವಾಗಿ ತಿಳಿಸಬಲ್ಲರಾದರೆ, ತಿಳಿಸಲು ಆಧಾರವಾದ ಕುಂಡಲಿಯ ವಿಶೇಷತೆಗಳನ್ನು ನಿಷ್ಕೃಷ್ಟವಾಗಿ ನಮೂದಿಸಬಲ್ಲರಾದರೆ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸಾಧ್ಯ. ‘— ಅವಧಿಯಲ್ಲಿ ನೀವು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ, ನೀವು ದೀರ್ಘಾಯುಗಳು, ಲೋಹ ಸಂಬಂಧಿತ ವೃತ್ತಿಗಳಲ್ಲಿ ನೀವು ತೊಡಗುತ್ತೀರಿ, ಮುಂದೆ ಒಳ್ಳೆಯ ಕೆಲಸ ಸಿಕ್ಕುತ್ತದೆ, ಜೀರ್ಣಾಂಗ ಸಂಬಂಧಿತ ರೋಗಗಳು ನಿಮ್ಮನ್ನು ಬಾಧಿಸುತ್ತವೆ’ ಇತ್ಯಾದಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇದೆಯೇ? ಇಂಥ ಹೇಳಿಕೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವುದು ಹೇಗೆ? ಇಂಥ ಸನ್ನಿವೇಶದಲ್ಲಿ ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ?

೪. ಪ್ರಕಲ್ಪನೆಗಳ (ಭವಿಷ್ಯವಾಣಿಯ) ಸತ್ಯಾಸತ್ಯತೆಯನ್ನು ಯುಕ್ತ ಸಾಕ್ಷ್ಯಾಧಾರಗಳನ್ನು ಯುಕ್ತ ವಿಧಾನಗಳಿಂದ (ಅರ್ಥಾತ್, ಪ್ರಯೋಗ/ವೀಕ್ಷಣೆ) ಸಂಗ್ರಹಿಸಿ ಅವನ್ನು ಕೂಲಂಕಷವಾಗಿ ವಿಶ್ಲೇಷಿಸಿ ಅಧ್ಯಯಿಸಿ ಪರೀಕ್ಷಿಸುತ್ತದೆ ವಿಜ್ಞಾನ. ಬಹುತೇಕ ಸಂದರ್ಭಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಪ್ರಕಲ್ಪನೆಗಳನ್ನು ಪುಷ್ಟೀಕರಿಸುವುದಿಲ್ಲ. ಅಂತಾದಾಗ ಪ್ರಕಲ್ಪನೆಯನ್ನು ತಿರಸ್ಕರಿಸಿ ಹೊಸ ಪ್ರಕಲ್ಪನೆ (ಹಳೆಯದನ್ನು ತುಸು ಬದಲಿಸಿಯೂ ಆಗಬಹುದು) ರೂಪಿಸಿ ಪುನಃ ಪರೀಕ್ಷಿಸಲಾಗುತ್ತದೆ. ಸತ್ಯದರ್ಶನವಾಗುವ ತನಕ ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ.

ಜ್ಯೋತಿಷಿಗಳು ನುಡಿದ ಪರೀಕ್ಷಿಸಬಹುದಾದ ಭವಿಷ್ಯವಾಣಿಗಳನ್ನು ಈ ವಿಧಾನದಲ್ಲಿ ಪರೀಕ್ಷಿಸಿದಾಗ ಅವನ್ನು ಪುಷ್ಟೀಕರಿಸಲ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಜ್ಯೋತಿಷ್ಯ ತನ್ನ ಪುರಾತನರು ರೂಪಿಸಿದ್ದ ಪ್ರಕಲ್ಪನೆಗಳನ್ನು ಪುಷ್ಟೀಕರಿಸುವ ಸಾಕ್ಷ್ಯಾಧಾರಗಳು ಇಲ್ಲದಿದ್ದಾಗ್ಯೂ ಅವನ್ನು ಯುಕ್ತ ರೀತಿಯಲ್ಲಿ ಬದಲಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಬದಲಾಗಿ ಜ್ಯೋತಿಷಿಗಳು ‘ಅಜ್ಜ ಹಾಕಿದ ಆಲದ ಮರಕ್ಕೆ ಜೋತುಬೀಳಲು’ ಶತಾಯಗತಾಯ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪುರಾತನ ಋಷಿಗಳು ತಪೋಬಲದಿಂದ ಆವಿಷ್ಕರಿಸಿದ್ನ್ನು ಬದಲಿಸುವುದು ಅಥವ ತಿರಸ್ಕರಿಸುವುದು ಅಪಚಾರ ಅನ್ನುವ ನಂಬಿಕೆಯಿಂದ. ಅಂದ ಮೇಲೆ, ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ?

೫. ಒಬ್ಬ ವಿಜ್ಞಾನಿ ರೂಪಿಸಿದ ಪ್ರಕಲ್ಪನೆಯನ್ನೇ ಆಗಲಿ ತೀರ್ಮಾನವನ್ನೇ ಆಗಲಿ ಇತರ ವಿಜ್ಞಾನಿಗಳು ವಿಮರ್ಶಾತ್ಮಕವಾಗಿ ಪರಿಶೀಲಿಸಿ ಅದರ ಮೌಲ್ಯನಿರ್ಧರಿಸುವ ಪ್ರಕ್ರಿಯೆ ಸತ್ಯಾನ್ವೇಷಣೆಯ ವೈಜ್ಞಾನಿಕ ವಿಧಾನದ ಅವಿಭಾಜ್ಯ ಭಾಗ. ಯಾವುದೇ ವಿಜ್ಞಾನಿ ಮಾಡುವ ಆವಿಷ್ಕಾರದ ಪ್ರಕ್ರಿಯೆಯಲ್ಲಿ ಆಸಕ್ತ ವಿಜ್ಞಾನಿಗಳ ಸಮುದಾಯ ರಚನಾತ್ಮಕ ವಿಮರ್ಶಕರ ಪಾತ್ರ ವಹಿಸುತ್ತದೆ. ತತ್ಸಮನಾದ ವಿದ್ಯಮಾನ ಜ್ಯೋತಿಷ್ಯದಲ್ಲಿ ಇದೆಯೇ? ಒಬ್ಬ ಜ್ಯೋತಿಷಿ ಪ್ರಕಟಿಸಿದ್ದನ್ನು ಇತರ ಜ್ಯೋತಿಷಿಗಳು ವಿಮರ್ಶಿಸುವ ಸಂಪ್ರದಾಯ ಇದೆಯೇ? ಇಲ್ಲ ಎಂದಾದರೂ ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ?

೬. ವಿಜ್ಞಾನದಲ್ಲಿ ಸತ್ಯಶೋಧನೆ ಒಂದು ನಿರಂತರ ಪ್ರಕ್ರಿಯೆ. ಒಂದು ಆವಿಷ್ಕಾರ ಹೊಸದೊಂದು ಸಂಶೋಧನಾ ಸರಣಿಯನ್ನೇ ಹುಟ್ಟುಹಾಕುತ್ತದೆ. ಜ್ಯೋತಿಷ್ಯದ ಕುರಿತಾಗಿ ಈ ತನಕ ನಡೆದಿರುವ ವೈಜ್ಞಾನಿಕ ಸಂಶೋಧನೆಗಳು ಎಲ್ಲವೂ ಅದು ಪ್ರತಿಪಾದಿಸುವ ಸೂತ್ರಗಳನ್ನು ಸಂಶಯಾತೀತವಾಗಿ ಸಾಬೀತು ಪಡಿಸಲು ಸೋತದ್ದರಿಂದ ಈಗ ಅಂಥ ಸಂಶೋಧನೆಗಳನ್ನು ಮಾಡುವುದನ್ನೇ ನಿಲ್ಲಿಸಿದೆ. ಜ್ಯೋತಿಷಿಗಳು ಹಿಂದೆಂದೋ ಕೆಲವರು ಆವಿಷ್ಕರಿಸಿದ್ದು ಎನ್ನಲಾದ ಪ್ರಕಲ್ಪನೆಗಳನ್ನೇ ಶಾಶ್ವತ ಸತ್ಯ ಅಂದುಕೊಂಡು ಹೊಸದಾಗಿ ವೈಜ್ಞಾನಿಕ ವಿಧಾನಗಳಿಂದ ಆವಿಷ್ಕರಿಸುವ ಪ್ರಯತ್ನವನ್ನೇ ಆಗಲಿ, ಹಿಂದೆ ರೂಪಿಸಿದ ತತ್ವಗಳನ್ನೂ ಪ್ರಕಲ್ಪನೆಗಳನ್ನೂ ಸೂತ್ರಗಳನ್ನೂ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವ ಗೋಜಿಗೇ ಹೋಗುತ್ತಿಲ್ಲ. ಅಂದ ಮೇಲೆ, ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ?

೭. ವಿಜ್ಞಾನಿಗಳು ಸಾಮಾನ್ಯವಾಗಿ ಈ ಮುಂದಿನ ನೀತಿಸಂಹಿತೆಯನ್ನು ಪಾಲಿಸುತ್ತಾರೆ- (ಅ) ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಇತರರು ಮಾಡಿದ/ಮಾಡುತ್ತಿರುವ ಸಾಧನೆಗಳನ್ನು ಗೌರವಿಸುವಿಕೆ. (ಕುರುಡಾಗಿ ಒಪ್ಪಿಕೊಳ್ಳುತ್ತಾರೆ ಎಂದು ಇದರ ಅರ್ಥವಲ್ಲ). (ಆ) ತಮ್ಮ ಅಭಿಪ್ರಾಯಗಳನ್ನು, ಪ್ರಕಲ್ಪನೆಗಳನ್ನು ಇತರರು ಪರೀಕ್ಷಿಸುವುದನ್ನು ಮುಕ್ತಮನಸ್ಸಿನಿಂದ ಸ್ವಾಗತಿಸುವಿಕೆ. (ಇ) ವೀಕ್ಷಣೆ ಒದಗಿಸುವ ಎಲ್ಲಾ ಸಾಕ್ಷ್ಯಾಧಾರಗಳನ್ನು (ಅವು ಋಣಾತ್ಮಕವಾದವು ಆಗಿದ್ದರೂ) ಆಧರಿಸಿ ವಿಷಯನಿಷ್ಠವಾಗಿ ಅಂತಿಮ ತೀರ್ಮಾನ ಕೈಗೊಳ್ಳುವಿಕೆ. (ಈ) ತಮ್ಮ ಆಲೋಚನೆಗಳನ್ನೂ ಪರೀಕ್ಷಾಫಲಿತಾಂಶಗಳನ್ನೂ ಇತರ ವಿಜ್ಞಾನಿಗಳೊಂದಿಗೆ ಏನನ್ನೂ ಮುಚ್ಚಿಡದೆ ಹಂಚಿಕೊಳ್ಳುವಿಕೆ.  (ಉ) ವೈಜ್ಞಾನಿಕ ದೃಷ್ಟಿಕೋನದಿಂದ ನ್ಯಾಯಸಮ್ಮತವಾಗಿ ನಡೆದುಕೊಳ್ಳುವಿಕೆ/

ತತ್ಸಮನಾದ ನೀತಿಸಂಹಿತೆಯನ್ನು ಜ್ಯೋತಿಷಿಗಳು ಪಾಲಿಸುತ್ತಾರೆಯೇ? ಇಲ್ಲ ಎಂದಾದರೆ, ಜ್ಯೋತಿಷ್ಯವನ್ನು ವಿಜ್ಞಾನದ ಒಂದು ಶಾಖೆ ಎಂದು ಪರಿಗಣಿಸಬಹುದೇ?

Advertisements
This entry was posted in ಅನುಭವಾಮೃತ, ಶಿಕ್ಷಣ. Bookmark the permalink.

2 Responses to ಜ್ಯೋತಿಷ್ಯ – ಎಷ್ಟರ ಮಟ್ಟಿಗೆ ವೈಜ್ಞಾನಿಕ?

 1. Badari Narayana ಹೇಳುತ್ತಾರೆ:

  ನಿಮ್ಮ ಲೇಖನ ನನಗೆ ಬಹಳ ಹಿಡಿಸಿತು.
  ವಿಜ್ಞಾನದ ಚೌಕಟ್ಟನ್ನು ವಿವರಿಸಿ, ಜ್ಯೋತಿಷ್ಯವು ಇಲ್ಲಿ ಸರಿ ಹೊಂದುತ್ತದೆಯೇ ಎಂದು ಪ್ರಶ್ನಾರ್ಥಕವಾಗಿ ಕೇಳಿ ಓದುಗರ ಪರಿಗಣನೆಗೆ ಬಿಟ್ಟಿದ್ದು ನಿಮ್ಮ ಹಿರಿಮೆ.
  ವಾಸ್ತು ನೆಪವೊಡ್ಡಿ ಇರುವ ಸುಂದರ ಮನೆಯನ್ನು ಬೀಳಿಸುವುದು, ಕಂಡ ಕಂಡ ಜ್ಯೋತಿಷಿಗಳು ಹೇಳಿದ ಪರಿಹಾರ ಮಾರ್ಗ ಮಾಡಲು ಹೋಗಿ ಬಾಳನ್ನು ಮತ್ತಷ್ಟು ಗೊಂದಲಮಯವಾಗಿಸಿ ಕೊಳ್ಳುವವರನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೇನೆ.
  ತೆರೆದ ಮನದಿಂದ ನಿಮ್ಮ ಈ ಲೇಖನವನ್ನು ಓದಿದರೆ ಸತ್ಯಾಸತ್ಯತೆಯ ತಿಳುವಳಿಕೆ ವೃದ್ಧಿಸುವುದರಲಿ ಸಂಶಯವಿಲ್ಲ.
  ಮಾಹಿತಿ ನೀಡಿದ ನಿಮಗೆ ನನ್ನ ಗುರು ನಮನ …

  • raoavg ಹೇಳುತ್ತಾರೆ:

   ನಾನು ಮನೆ ಕಟ್ಟಿಸಿದಾಗ ವಾಸ್ತು ಅನ್ನುವ ಪದವೇ ಕೇಳಿರಲಿಲ್ಲ. ನನ್ನ ಮನೆಯ ಕರಡು ‘ಪ್ಲಾನ್’ ನಾವೇ ಹಾಕಿದ್ದು. ಈ ಮನೆಯಲ್ಲಿ 36 ವರ್ಷಗಳಿಂದ ಸುಖವಾಗಿದ್ದೇವೆ. ಅಂದ ಹಾಗೆ, ನಮಗೆ ಬೇಕಾದ ಹಾಗೆ ಕಟ್ಟಿಸಿ, ಬಳಿಕ ವಾಸ್ತುದೋಷ ಪರಿಹಾರಕ್ಕೆ ಉಪಾಯಗಳನ್ನು ವಿಶೇಷಜ್ಞ ಪುರೋಹಿತರು ಕೊಡುತ್ತಾರೆ. ನಿಮ್ಮ ಮನೆಯ ಬಜೆಟ್ ಹಾಕುವಾಗ ೀ ಬಾಬಿನ ವೆಚ್ಚವನ್ನೂ ಸೇರಿಸಿಕೊಂಡಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s