ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೪೬

ಪಿರಮಿಡ್ ಆಕೃತಿಗೆ ಪವಾಡ ಸದೃಶ ಶಕ್ತಿ ಇದೆಯೇ?

ಈಜಿಪ್ಟಿನ ಗ್ರೇಟ್ ಪಿರಮಿಡ್ ಆಕೃತಿಗೆ (ಚಿತ್ರ ೧) ಪವಾಡ ಸದೃಶ ಶಕ್ತಿ ಇದೆ ಎಂದು ಕೆಲವರು ಹೇಳುತ್ತಾರೆ. ಇದರ ಅಳತೆಗಳನ್ನು ನಿರ್ಧರಿಸುವಾಗ ಗಣಿತೀಯ ಸ್ಥಿರ π (ಸರಿಸುಮಾರು ೩.೧೪) ಮತ್ತು ಗಣಿತೀಯ ಸ್ವರ್ಣ ನಿಷ್ಪತ್ತಿ φ (ಸರಿಸುಮಾರು ೧.೬೧೮) ಮೌಲ್ಯಗಳನ್ನು ಉಪಯೋಗಿಸಿರುವುದೇ [ಪಿರಮಿಡ್ಡಿನ ತಳದ ಸುತ್ತಳತೆ/ ಪಿರಮಿಡ್ಡಿನ ಎತ್ತರ = ೨π, ಪಿರಮಿಡ್ಡಿನ ಪಾರ್ಶ್ವಮೈನ ಎತ್ತರ = φ x ತಳದ ಒಂದು ಬಾಹುವಿನ ಅರ್ಧದಷ್ಟು] ಇದಕ್ಕೆ ಕಾರಣ ಎಂಬುದು ಇವರ ವಾದ. ಇವೆರಡೂ ಅಪರಿಮೇಯ ಸಂಖ್ಯೆಗಳು (ಇರ್ರೇಷನಲ್ ನಂಬರ್ಸ್) ಆದ್ದರಿಂದ ಇವುಗಳ ಸರಿಸುಮಾರು ಮೌಲ್ಯಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ.

ಇಂಥ ಪಿರಮಿಡ್ಡುಗಳಿಗೆ ಇದೆಯೆಂದು ಹೇಳಲಾದ ಪವಾಡ ಸದೃಶ ಶಕ್ತಿಗಳ ಪೈಕಿ ಪ್ರಮುಖವಾದವು ಇಂತಿವೆ:

* ಪಿರಮಿಡ್ಡಿನೊಳಗೆ ಕಾರ್ಯೋನ್ಮುಖವಾಗಿರುವ ವಿಶಿಷ್ಟ ಶಕ್ತಿಗಳು ಕಳೆಗುಂದಿದ ಆಭರಣ ಮತ್ತು ನಾಣ್ಯಗಳಿಗೆ ಪುನಃ ಹೊಳಪು ನೀಡುತ್ತದೆ.

* ಮಲಿನ ನೀರನ್ನು ಅನೇಕ ದಿನಗಳ ಕಾಲ ಪಿರಮಿಡ್ಡಿನೊಳಗಿಟ್ಟರೆ ಅದು ಶುದ್ಧವಾಗುತ್ತದೆ

* ಪಿರಮಿಡ್ಡಿನೊಳಗಿಟ್ಟ ಹಾಲು ಅನೇಕ ದಿನಗಳ ಕಾಲ ತನ್ನ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ಅಂತಿಮವಾಗಿ ಅದು ಮೊಸರಾಗುತ್ತದೆಯೇ ವಿನಾ ಕೆಡುವುದಿಲ್ಲ.

* ಮಾಂಸ, ಮೊಟ್ಟೆ, ಮೃತದೇಹಗಳನ್ನು ನಿರ್ಜಲೀಕರಿಸುತ್ತದೆ, ಒಣಗಿಸಿ ಬತ್ತಿ ಹೋಗುವಂತೆ ಮಾಡುತ್ತದೆಯೇ ವಿನಾ ಕೊಳೆಯಲು ಬಿಡುವುದಿಲ್ಲ.

* ಹೂವುಗಳನ್ನು ಪಿರಮಿಡ್ ನಿರ್ಜಲೀಕರಿಸಿದರೂ ಅವುಗಳ ಆಕಾರ ಮತ್ತು ಬಣ್ಣವನ್ನು ಹಾಗೆಯೇ ಉಳಿಸುತ್ತದೆ.

* ಸಸ್ಯಗಳು ಪಿರಮಡ್ಡಿನ ಒಳಗೆ ಹೊರಗಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತವೆ.

* ಪಿರಮಿಡ್ಡಿನೊಳಗಿಟ್ಟು ಸಂಸ್ಕರಿಸಿದ ನೀರಿನಿಂದ ೫ ವಾರಗಳ ಕಾಲ ಮುಖ ತೊಳೆದರೆ ಕಾಂತಿ ಹೆಚ್ಚುತ್ತದೆ. ಈ ನೀರನ್ನು ಕುಡಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಈ ನೀರಿನಿಂದ ಗಾಯವನ್ನು ತೊಳೆದರೆ ಅದು ಬೇಗನೆ ವಾಸಿಯಾಗುತ್ತದೆ. ಈ ನೀರನ್ನು ಗಿಡಗಳಿಗೆ ಹಾಕಿದರೆ ಅವು ಚೆನ್ನಾಗಿ ಬೆಳೆಯುತ್ತವೆ.

*  ಪಿರಮಿಡ್ಡಿನೊಳಗೆ ಕುಳಿತುಕೊಳ್ಳುವುದು ಚೈತನ್ಯದಾಯಕವಷ್ಟೇ ಅಲ್ಲ, ಕೆಲವು ರೋಗಗಳನ್ನು ನಿಯಂತ್ರಿಸಲೂ ಸಹಕಾರಿ. ಧ್ಯಾನ ಮಾಡುವುದು ಸುಲಭ.

ಈ ಘೋಷಣೆಗಳು ನಿಜವೇ? ನೀವೇ ಏಕೆ ಪರೀಕ್ಷಿಸಿ ನೋಡಬಾರದು? ನಾನು ಈ ಕುರಿತು ವೈಜ್ಞಾನಿಕ ಅಧ್ಯಯನ ಮಾಡಿಲ್ಲವಾದ್ದರಿಂದ ಏನನ್ನೂ ಹೇಳುವುದಿಲ್ಲ. ಪರೀಕ್ಷಿಸಿ ನೋಡುವ ಇಚ್ಛೆ ಇರುವವರಿಗೆ ಈಜಿಪ್ಟಿನ ‘ಗ್ರೇಟ್’ ಪಿರಮಿಡ್ಡಿನ ಪ್ರಮಾಣಾನುಸಾರ ಮಾದರಿ ತಯಾರಿಸಲು ನೆರವು ನೀಡಬಲ್ಲ ಮಾಹಿತಿ ಇಂತಿದೆ:

(೧). ಪಿರಮಿಡ್ ಮಾದರಿಯನ್ನು ಯಾವುದರಿಂದ ಮಾಡಬಹುದು? ಪುಟ್ಟ ವಸ್ತುಗಳನ್ನು ಇಟ್ಟು ಪರೀಕ್ಷಿಸ ಬೇಕಾದ ಸರಳ ಪ್ರಯೋಗಗಳಿಗೆ ಸಾಮಾನ್ಯ ದಪ್ಪ ಕಾಗದದಿಂದ ಅಥವ ರಟ್ಟಿನಿಂದ ಮಾಡಿದ ಪಿರಮಿಡ್ ಬಳಸಬಹುದು (ಹೇಗೆ ಎಂಬುದರ ವಿವರಣೆ ಈ ಲೇಖನದಲ್ಲಿ ಮುಂದೆ ಇದೆ). ನಾವೇ ಒಳಗೆ ಕುಳಿತು ಪರೀಕ್ಷಿಸಬೇಕಾದರೆ ಅಥವ ದೊಡ್ಡ ವಸ್ತುಗಳನ್ನು ಇಟ್ಟು ಪರೀಕ್ಷಿಸ ಬೇಕಾದರೆ ಮರದ ಚೌಕಟ್ಟು ಮಾಡಿ ಅದಕ್ಕೆ ಟಾರ್ಪಲಿನ್ ಅಥವ ದಪ್ಪ ಪ್ಲಾಸ್ಡಿಕ್ ಹಾಳೆ ಹೊದಿಸಲೂಬಹುದು. ಮರದ ಹಲಗೆ ಗಾಜು, ಫೈಬರ್ ಮುಂತಾದವುಗಳನ್ನೂ ಉಪಯೋಗಿಸಿ ಪಿರಮಿಡ್ ಮಾದರಿಗಳನ್ನು ನಿರ್ಮಿಸಿದ್ದಾರೆ. ಯಾವುದೇ ಲೋಹವನ್ನು ಉಪಯೋಗಿಸದೇ ಇದ್ದರೆ ಒಳ್ಳೆಯದು ಎಂದೂ ಹೇಳಲಾಗಿದೆ.

(೨). ಒಳಗೆ ಇಡಬೇಕಾದದ್ದರ ಗಾತ್ರದ ೧೦ ಪಟ್ಟು ಅಧಿಕ ಸ್ಥಳಾವಕಾಶ ಉಳ್ಳ ಪಿರಮಿಡ್ ಉಪಯೋಗಿಸ ಬೇಕು ಎಂಬುದು ಪಿರಮಿಡ್ ಶಕ್ತಿಯನ್ನು ನಂಬುವವರ ಅಂಬೋಣ.

(೩). ಎಷ್ಟು ಎತ್ತರದ ಪಿರಮಿಡ್ ತಯಾರಿಸ ಬೇಕು ಎಂಬುದನ್ನು ಮೊದಲು ನಿರ್ಧರಿಸಿ. ತದನಂತರ ಅಪೇಕ್ಷಿತ ಎತ್ತರವನ್ನು ೧.೫೭ರಿಂದ ಗುಣಿಸಿದರೆ ದೊರೆಯುವುದೇ ತಳದ ಒಂದು ಬಾಹುವಿನ ಉದ್ದ. [ಉದಾ: ಅಪೇಕ್ಷಿತ ಎತ್ತರ = ೩೦ ಸೆಂಮೀ. ತಳದ ಒಂದು ಬಾಹುವಿನ ಉದ್ದ = ೩೦ x ೧.೫೭ = ೪೭.೧ ಸೆಂಮೀ.]. ಪುನಃ ದೊರೆತ ಮೌಲ್ಯದ ಅರ್ಧದಷ್ಟನ್ನು ೧.೬೧೮ರಿಂದ ಗುಣಿಸಿ ಪಾರ್ಶ್ವಮೈನ ಎತ್ತರ ಎಷ್ಟಿರಬೇಕೆಂಬುದನ್ನು ಲೆಕ್ಕಿಸಿ. [ಉದಾ: ೪೭.೧/೨ = ೨೩.೫೫. ಪಾರ್ಶ್ವಮೈನ ಎತ್ತರ =  ೨೩.೫೫ x ೧.೬೧೮ =  ೩೮.೧೦೩೯ ಸೆಂಮೀ, ಅರ್ಥಾತ್, ಸರಿಸುಮಾರು ೩೮.೧ ಸೆಂಮೀ].

(೪). ಪಿರಮಿಡ್ಡಿನ ಎತ್ತರ, ಚೌಕಾಕಾರದ ತಳದ ಬಾಹುವಿನ ಉದ್ದ, ಸಮದ್ವಿಬಾಹು ತ್ರಿಭುಜಾಕೃತಿಯ ಪಾರ್ಶ್ವಮೈನ ಎತ್ತರ – ಇವಿಷ್ಟನ್ನು ನಿರ್ಧರಿಸಿದ ಬಳಿಕ ಪಿರಮಿಡ್ಡಿನ ಮಾದರಿ ನಿರ್ಮಿಸಲು ಅಗತ್ಯವಾದ ಸಾಮಗ್ರಿಗಳನ್ನು (ಚಿತ್ರ ೨) ಸಂಗ್ರಹಿಸಬೇಕು. ಅವು ಇಂತಿವೆ: ಯುಕ್ತ ಅಳತೆಯ ದಪ್ಪ ಕಾಗದ ಅಥವ ರಟ್ಟು, ಅಳತೆ ಪಟ್ಟಿ, ಪೆನ್ಸಿಲ್, ಕೋನಮಾಪಕ, ಕೈವಾರ (ಕಂಪಾಸ್), ಮುಮ್ಮೂಲೆಪಟ್ಟಿಗಳು (ಸೆಟ್ ಸ್ಕ್ವೇರ್ಸ್), ಉತ್ತಮ ಗುಣಮಟ್ಟದ ಗೋಂದು.

(೫). ಇಷ್ಟಾದ ಬಳಿಕ ದಪ್ಪ ಕಾಗದ ಅಥವ ರಟ್ಟಿನ ಮೇಲೆ ಪಿರಮಿಡ್ಡಿನ ಸಮದ್ವಿಬಾಹು ತ್ರಿಭುಜಾಕೃತಿಯ ೪ ಪಾರ್ಶ್ವ ಮೈಗಳ ಚಿತ್ರಗಳನ್ನು ಬಿಡಿಸಲಾರಂಭಿಸ ಬೇಕು (ಚಿತ್ರ ೩). ಯುಕ್ತ ಸ್ಥಳದಲ್ಲಿ ತಳದ ಬಾಹುವನ್ನು ಪ್ರತಿನಿಧಿಸುವ ಸರಳ ರೇಖೆ ಎಳೆಯಿರಿ (೩.೧). ತದನಂತರ ಅದರ ಮಧ್ಯಬಿಂದುವನ್ನು ಗುರುತಿಸಿ (ಕೈವಾರದ ನೆರವಿನಿಂದ ಇದನ್ನು ನಿಖರವಾಗಿ ಗುರುತಿಸಬಹುದು. ರೇಖಾಗಣಿತದ ವಿದ್ಯಾರ್ಥಿಗಳಿಗೆ ಇದು ಕಷ್ಟವಲ್ಲ). ಆ ಬಿಂದುವಿನಲ್ಲಿ ಪಾರ್ಶ್ವಮೈನ ಎತ್ತರವನ್ನು ಪ್ರತಿನಿಧಿಸುವ ಸರಳ ರೇಖೆಯನ್ನು ತಳದ ಬಾಹುವಿಗೆ ಲಂಬವಾಗಿ ಎಳೆಯಿರಿ (೩.೨). ಮೂಲೆ ಮಟ್ಟ ಅಥವ ಕೋನಮಾಪಕದ ನೆರವಿನಿಂದ ಈ ಕಾರ್ಯ ಮಾಡುವುದು ಸುಲಭ. ಈ ರೇಖೆಯ ಮೇಲ್ತುದಿಯೇ ಪಿರಮಿಡ್ಡಿನ ಶೃಂಗವನ್ನು ಪ್ರತಿನಿಧಿಸುವ ಬಿಂದು. ಈ ಬಿಂದುನ್ನು ತಳಬಾಹುವಿನ ಎರಡೂ ತುದಿಗಳಿಗೆ ಜೋಡಿಸುವ ಸರಳ ರೇಖೆಗಳನ್ನು ಎಳೆಯಿರಿ (೩.೩). ದಪ್ಪ ಕಾಗದದಲ್ಲಿ ಈ ಚಿತ್ರ ಬಿಡಿಸಿದ್ದರೆ ಈ ಪಾರ್ಶ್ವಮೈಯನ್ನು ಇನ್ನೊಂದಕ್ಕೆ ಅಂಟಿಸಲು ನೆರವಾಗಬಲ್ಲ ಮಡಿಚುಹಾಳೆಯನ್ನೂ (ಫ್ಲ್ಯಾಪ್) ರಚಿಸಿ (೩.೪). [ಗಮನಿಸಿ: ರಟ್ಟನ್ನು ಉಪಯೋಗಿಸಿದ್ದರೆ ಈ ಮಡಿಚು ಹಾಳೆಗಳನ್ನು ಕಾಗದದಲ್ಲಿ ಮಾಡಿ ಅಂಟಿಸಬೇಕು]  ಹೊರಗಿನ ಗೆರೆಗುಂಟ ಕತ್ತರಿಸಿ ಪಾರ್ಶ್ವಮೈನ ಆಕೃತಿ ಪಡೆಯಿರಿ. ಇಂಥ ನಾಲ್ಕು ಆಕೃತಿಗಳನ್ನು ತಯಾರಿಸಿ. ಒಂದಕ್ಕೊಂದನ್ನು ಮಡಿಚುಹಾಳೆಯ ನೆರವಿನಿಂದ ಅಂಟಿಸಿ ಪಿರಮಿಡ್ ನಿರ್ಮಿಸಿ (೩.೫).

(೬). ಪಿರಮಿಡ್ಡಿಗೆ ಇದೆಯೆಂದು ಹೇಳಲಾಗಿರುವ ಯಾವುದೇ ಪವಾಡ ಸದೃಶ ಶಕ್ತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸ ಬೇಕಾದರೆ ನೀವು ನಿರ್ಮಿಸಿರುವ ಪಿರಮಿಡ್ಡಿನ ನಾಲ್ಕು ಮುಖಗಳು ನಾಲ್ಕು ದಿಕ್ಕುಗಳಿಗೆ ಬಲು ನಿಖರವಾಗಿ ಅಭಿಮುಖವಾಗಿರುವಂತೆ ಸಮತಟ್ಟು ಪ್ರದೇಶದಲ್ಲಿ ಇಡಬೇಕು (ಚಿತ್ರ ೪). ಇದಕ್ಕಾಗಿ ಇಡುವ ಸ್ಥಳದ ಭೌಗೋಲಿಕ ಉತ್ತರ-ದಕ್ಷಿಣಗಳನ್ನು ನಿಖರವಾಗಿ ನೆಲದ ಮೇಲೆ ಶಾಶ್ವತವಾಗಿ ಗುರುತಿಸ ಬೇಕಾದದ್ದು ಅನಿವಾರ್ಯ. (ಗಮನಿಸಿ: ದಿಕ್ಸೂಚಿಯಿಂದ ಭೌಗೋಲಿಕ ಉತ್ತರ-ದಕ್ಷಿಣವನ್ನು ಗುರುತಿಸಲು ಸಾಧ್ಯವಿಲ್ಲ). ಪರೀಕ್ಷಿಸಬೇಕಾದ ವಸ್ತುವನ್ನು ಪಿರಮಿಡ್ಡಿನ ಮಧ್ಯದಲ್ಲಿ ನೆಲದಿಂದ ಪಿರಮಿಡ್ಡಿನ ಎತ್ತರದ ೧/೩ ರಷ್ಟು ಎತ್ತರದಲ್ಲಿಯೇ ಇಡಬೇಕು (ಉದಾ: ಪಿರಮಿಡ್ಡಿನ ಎತ್ತರ ೩೦ ಸೆಂಮೀ ಆಗಿದ್ದರೆ ವಸ್ತುವನ್ನು ೧೦ ಸೆಂಮೀ ಎತ್ತರದಲ್ಲಿ ಇಡಬೇಕು). ಬಾಳೆಹಣ್ಣು ಮೊದಲಾದವನ್ನು ಇಡುವುದಿದ್ದರೆ ಅವುಗಳ ರೇಖಾಂಶೀಯ (ಲಾಂಜಿಟ್ಯೂಡಿನಲ್) ಅಕ್ಷ ಉತ್ತರ-ದಕ್ಷಿಣ ಅಕ್ಷದಲ್ಲಿ ಇರುವಂತೆಯೇ ಇಡಬೇಕು. ವಸ್ತು ಪಿರಮಿಡ್ಡನ್ನು ಯಾವುದೇ ಲೋಹದ ವಸ್ತುವಿನ ಸಮೀಪದಲ್ಲಿ ಅಥವ ಕಾಂತೀಯ ಬಲಗಳ ಪ್ರಭಾವ ಇರುವಲ್ಲಿ (ಉದಾ: ವಿದ್ಯುದುಪಕರಣಗಳ ಸಮೀಪದಲ್ಲಿ) ಇಡಬಾರದು. ಪರೀಕ್ಷಿಸಲೋಸುಗ ಪಿರಮಿಡ್ಡಿನೊಳಗೆ ಇಟ್ಟಿರುವ ವಸ್ತುವಿನ ಮೇಲೆ ಉಂಟಾದ ಪರಿಣಾಮವನ್ನು  ಅಷ್ಟೇ ಸಮಯ ಹೊರಗೆ ಇಟ್ಟ ತತ್ಸಮನಾದ ವಸ್ತುವಿನ ಮೇಲಾದ ಪರಿಣಾಮದೊಂದಿಗೆ ಹೋಲಿಸಿ ತೀರ್ಮಾನಿಸಬೇಕು (ಉದಾ: ಒಂದು ಅತಿ ಪುಟ್ಟ ಬಟ್ಟಲಿನಲ್ಲಿ ಹಾಲನ್ನು ಪಿರಮಿಡ್ಡಿನೊಳಗೆ ಎಷ್ಟು ಸಮಯ ಇಡುತ್ತೇವೋ ಅಷ್ಟೇ ಸಮಯ ಅದೇ ಗಾತ್ರದ ಬಟ್ಟಲಿನಲ್ಲಿ ಅಷ್ಟೇ ಪರಿಮಾಣದ ಹಾಲನ್ನು ಇಟ್ಟಿರಬೇಕು)

ಗಮನಿಸಿ: ಇದು ಮೂಢನಂಬಿಕೆಯನ್ನು ಬೆಳೆಸಲೋಸುಗ ಬರೆದ ಲೇಖನ ಅಲ್ಲ. ಬದಲಾಗಿ, ಹಾಲಿ ಇರುವ ನಂಬಿಕೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸುವ ಪ್ರವೃತ್ತಿಯನ್ನು ಬೆಳೆಸಲೋಸುಗ ಬರೆದ ಲೇಖನ ಇದು.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s