ನನ್ನ ಮೊದಲ ಸಂಪಾದನೆ

ವೃತ್ತಿಯಿಂದ ಸರ್ಕಾರೀ ವೈದ್ಯರಾಗಿದ್ದವರ ಮಗನಾಗಿದ್ದರೂ ನಾನೇ ಸ್ವತಃ ದುಡಿದು ಮೊದಲ ಸಲ ಹಣ ಸಂಪಾದಿಸಿದಾಗ ನಾನು ಹೈಸ್ಕೂಲಿನ ೨ ನೇ ವರ್ಷದ ವಿದ್ಯಾರ್ಥಿಯಾಗಿದ್ದೆ ಅಚ್ಚರಿ ಆಗಬಹುದು (ಆಗ ಪ್ರಾಥಮಿಕ ಶಾಲೆ ತರಗತಿ ೧-೮, ಹೈಸ್ಕೂಲ್ ೯-೧೧, ಇಂಟರ್ ೨ ವರ್ಷ, ಸಾಮಾನ್ಯ ಡಿಗ್ರಿ ೨ ವರ್ಷ). ಈ ವಿದ್ಯಮಾನ ಜರಗಿದ ಕಥೆ ಇದು.

ಆಗಿನ ಕಾಲದಲ್ಲಿ ಇಂದಿನಂತೆ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಆಗುವ ತನಕ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ (ಅತೀ ಶ್ರೀಮಂತರ ಮಕ್ಕಳಿಗೆ ಕೊಡುತ್ತಿದ್ದರೇನೋ -ಗೊತ್ತಿಲ್ಲ). ಶಾಲೆಗೆ ಹೋಗುವಾಗ ಅಥವ ಹಿಂದಕ್ಕೆ ಬರುವಾಗ ಅಂಗಡಿಗಳಲ್ಲಿ ಕಣ್ಣು ಕುಕ್ಕುತ್ತಿದ್ದ ಬಿಸ್ಕತ್ತುಗಳನ್ನೇ ಆಗಲಿ ‘ಪೆಪ್ಪರಮಿಂಟು’ಗಳನ್ನೇ ಆಗಲಿ ಬೇಕೆನಿಸಿದಾಗ ಕೊಂಡು ತಿನ್ನಲು ಸಾಧ್ಯವೇ ಇರಲಿಲ್ಲ. ಬಲು ಅಪರೂಪಕ್ಕೊಮ್ಮೆ ಅಂಗಡಿಗೆ ಸಾಮಾನು ತರಲೆಂದು ಕೊಟ್ಟ ಹಣದಲ್ಲಿ ೩ ಕಾಸೋ ೬ ಕಾಸೋ (ರೂಪಾಯಿ, ಆಣೆ, ಕಾಸಿನ ಕಾಲ ಅದು) ಎಗರಿಸಿ ತಿನ್ನುತ್ತಿದ್ದದ್ದೂ ಇತ್ತು. ಸಣ್ಣ ಊರುಗಳಾದ್ದರಿಂದ ಅಂಗಡಿಯವ ಆಸ್ಪತ್ರೆಗೆ ಹೋದಾಗ “ಡಾಕ್ಟ್ರೇ, ಓ ಮೊನ್ನೆ ನಿಮ್ಮ ಮಗ —–“ ಎಂದು ಚಾಡಿ ಹೇಳುತ್ತಿದ್ದದ್ದರಿಂದ ಅದೂ ಬಲು ಕಷ್ಟದ ಕೆಲಸವೇ ಆಗಿತ್ತು. ಅಂಗಡಿಯಿಂದ ಮಿತ್ರರ ಮೂಲಕ ತರಿಸಿದರೆ ಅವರಿಗೆ ತಂದದ್ದರಲ್ಲಿ ಸಮ ಪಾಲು ಕೊಡಬೇಕಾಗುತ್ತಿತ್ತು. ಹೈಸ್ಕೂಲಿಗೆಂದು ದೊಡ್ಡಪ್ಪನ (ದಿ ಎ ಪಿ ಶ್ರೀನಿವಾಸ ರಾವ್) ಮಡಿಕೇರಿ ಮನೆ ಸೇರಿದ ಮೇಲೆ ದೊಡ್ಡ ಊರಾದ್ದರಿಂದ ಅಂಗಡಿಯವ ಚಾಡಿ ಹೇಳುವ ಭಯ ತಪ್ಪಿತು. ಅವರ ಮೂರನೇ ಮಗ ಮೋಹನ (ಈಗ ಡಾ ಎ ಎಸ್ ಲಲಿತ ಮೊಹನ – ಅಮೇರಿಕ ನಿವಾಸಿ) ನನ್ನ ಓರಗೆಯವ. ಈ ವಿಷಯದಲ್ಲಿ ನಾವಿಬ್ಬರೂ ಸಮಾನ ಸಂತ್ರಸ್ತರು. ಅವನು ಹೇಗೋ ಸಂಗ್ರಹಿಸಿದ್ದ ಪುಡಿಗಾಸು (ಆಗ ನಮಗದು ದೊಡ್ಡ ಮೊತ್ತ) ಮನೆಯ ಗೇಟಿನ ಬಳಿ ಇದ್ದ ಸೀಬೇ ಮರದ ಬುಡದಲ್ಲಿ ಹಳ್ಳ ತೋಡಿ ಅಡಗಿಸಿ ಇಡುತ್ತಿದ್ದ ಸ್ಪೆಶಲ್ ಬ್ಯಾಕಿನಲ್ಲಿ ಡೆಪಾಸಿಟ್ ಆಗುತ್ತಿತ್ತು. ಅವನ ಬ್ಯಾಂಕಿನಲ್ಲಿ ನನ್ನ ಹಣವನ್ನೂ ಡೆಪಾಸಿಟ್ ಮಾಡಬಹುದಿತ್ತು, ನಾನೇ ಅವನಿಗೆ ಬಾಡಿಗೆ ರೂಪದಲ್ಲಿ ಕೊಂಡ ತಿನಿಸಿನಲ್ಲಿ ಪಾಲು ಕೊಟ್ಟರೆ. ಅಂದ ಹಾಗೆ ಈ ಬ್ಯಾಂಕಿನ ನಿಖರ ಸ್ಥಾನ ನನಗೆ ತಿಳಿಯದಂತೆ ಅವನು ಎಚ್ಚರ ವಹಿಸಿದ್ದ. ಎಲ್ಲವೂ ಹೀಗೆ ಸಾಂಗವಾಗಿ ಜರಗುತ್ತಿದ್ದಾಗ (ನನ್ನ/ನಮ್ಮ) ದುರದೃಷ್ಟವಶಾತ್, ನನ್ನ ದೊಡ್ಡಪ್ಪನಿಗೆ ಹೆಡ್ ಮಾಸ್ಟರ್ ಆಗಿ ಸೋಮವಾರಪೇಟೆಗೆ ವರ್ಗ ಆಯಿತು.ಮೊದಲು ಅವರು ಹೋಗುವುದೆಂದೂ ಒಂದು ವರ್ಷದ ಬಳಿಕ ಇತರರು ಅವರನ್ನು ಸೇರಿಕೊಳ್ಳುವುದೆಂದೂ ತೀರ್ಮಾನಿಸಿದ್ದರು. ಅವರ ಎರಡನೇ  ಮಗ ರಮೇಶ ಕೊಡಗಿನ ಏಕೈಕ ಕಾಲೇಜಿನಲ್ಲಿ ೨ನೇ ಇಂಟರ್  (ಆಗ ಪಿ ಯು ಸಿ ಎಂಬ ಹೆಸರು ಇರಲಿಲ್ಲ) ಓದುತ್ತಿದ್ದದ್ದು ಇದಕ್ಕೆ ಕಾರಣ ಾಗಿದ್ದಿರಲೂ ಬಹುದು. ತಮ್ಮನ ಮಗನ ಓದಿನ ಮೇಲೆ ಸದಾ ಒಂದು ಕಣ್ಣು ತಾನು ಇಟ್ಟಿರಬೇಕಾದ ಅಗತ್ಯ ಇದೆ ಎಂದು ಅವರಿಗನ್ನಿಸಿದ್ದರಿಂದ ನಾನೂ ಅವರೊಂದಿಗೇ ಹೋಗಬೇಕಾಯಿತು. ವಾಸ್ತವ್ಯಕ್ಕೆ ‘ಗವರ್ನಮೆಂಟ್ ಕ್ವಾರ್ಟರ್ಸ್’ ಇತ್ತು. ನಮ್ಮ ಇಬ್ಬರ ಊಟ ತಿಂಡಿ ತಯಾರಿಸಲು ಅಡಿಗೆ ಭಟ್ಟರೊಬ್ಬರನ್ನು ಒಂದು ವರ್ಷದ ಮಟ್ಟಿಗೆ ನೇಮಕ ಮಾಡಿದ್ದರು. ಅದೆಲ್ಲ ವ್ಯವಸ್ಥೆ ಸರಿಯಾಗಿಯೇ ಇದ್ದರೂ ನನ್ನ ಆದಾಯದ ಮೂಲ ಸಂಪೂರ್ಣವಾಗಿ ಮಾಯವಾದದ್ದು ಬಲು ದುಃಖದ ಸಂಗತಿಯಾಗಿತ್ತು.

ಹೀಗಿದ್ದ ಕಾಲದಲ್ಲಿ – ಸೋಮವಾರಪೇಟೆಗೆ ಒಂದು ಬಂದಿತು. ನನ್ನ ಮನೆಯಲ್ಲಿ ನನ್ನ ಅಪ್ಪ ಸಿನೆಮಾ ನೋಡುವ ಯಾವ ಅವಕಾಶವನ್ನೂ ಕಳೆದುಕೊಳ್ಳುತ್ತಿರಲಿಲ್ಲ. ನಾವಿದ್ದ ಊರಿಗೆ ‘ಟೂರಿಂಗ್ ಟೆಂಟ್ ಚಿತ್ರಮಂದಿರ’ ಬಂದರೆ ಯಾವುದೇ ಹೊಸ ಸಿನೆಮಾದ ಮೊದಲನೇ ಪ್ರದರ್ಶನದ ಮೊದಲನೇ ಶೋ ದಿನವೇ ಡಾಕ್ಟರ್ ಕುಟುಂಬದವರಿಗೆ ಕೊನೆಯ ಸಾಲಿನಲ್ಲಿ ಇದ್ದದ್ದರಲ್ಲಿ ಎತ್ತರದ ಸ್ಥಳದಲ್ಲಿ ೩ ‘ಚೇರು’ಗಳು ಸಿದ್ಧವಾಗಿರುತ್ತಿದ್ದವು. ನನ್ನ ದೊಡ್ಡಪ್ಪನಾದರೋ ಸಿನೆಮಾದ ಬದ್ಧ ವೈರಿ. ‘ಓದುವ ಹುಡುಗರು ಸಿನೆಮಾ ನೋಡಿದರೆ ಹಾಳಾಗುತ್ತಾರೆ’ ಎಂಬುದು ಅವರ ಖಚಿತ ನಿಲುವು. ಅಂದ ಮೇಲೆ ಸಿನೆಮಾ ನೋಡುವುದು ಹೇಗೆ? ಒಂದು ದಾರಿ ಕಾಣಿಸಿತು – ದೊಡ್ಡಪ್ಪ ಪ್ರತೀ ವಾರಾಂತ್ಯದಲ್ಲಿ ಮಡಿಕೇರಿಗೆ ಹೋಗುತ್ತಿದ್ದರು. ಕೆಲವೊಮ್ಮೆ ಸೋಮವಾರದ ಸಂತೆಯ ದಿನ ಏನೇನೋ ಕಾರಣಕ್ಕೆ ರಜೆ ಇದ್ದರೆ ಅವರ ವಾರಾಂತ್ಯ ಉದ್ದವಾಗುತ್ತಿತ್ತು. ಸಂತೆಯ ದಿನ ಸೋಡಾ (ಗೋಲಿ ಸೋಡಾ) ಮಾರಿದರೆ ‘ಕಮೀಶನ್’ ಕೊಡುತ್ತಾರೆ, ದಿನಕ್ಕೆ ೧ ರೂ ಸಂಪಾದನೆಗೆ ಮೋಸ ಇಲ್ಲ, ಅದೃಷ್ಟ ಇದ್ದರೆ ಒಂದೂವರೆ ರೂ ಸಿಕ್ಕಿದರೂ ಸಿಕ್ಕೀತು ಎಂಬ ಮಾಹಿತಿ ಇಂಥ ವಿಷಯಗಳಲ್ಲಿ ಪರಿಣತಿ ಇದ್ದ ಕೆಲ ಸಹಪಾಠಿಗಳಿಂದ ದೊರೆಯಿತು. ಇಷ್ಟಾದ ಮೇಲೆ ಇನ್ನೇನು ಯೋಚನೆ ಎಂದು ಯೋಜನೆಯನ್ನು ಅನುಷ್ಠಾನಗೊಳಿಸಿಯೇ ಬಿಟ್ಟೆ. ‘ಯಾರಿಗೆ ಸೋಡಾ’ ಎಂದು ಬೊಬ್ಬೆ ಹೊಡೆಯುತ್ತಾ ಪರಿಚಯದವರ (ವಿಶೇಷವಾಗಿ ನಮ್ಮ ಶಾಲೆಯ ಶಿಕ್ಷಕರು/ಶಿಕ್ಷಕೇತರ ಸಿಬ್ಬಂದಿ) ಕಣ್ಣಿಗೆ ಬೀಳದೆ ಸೋಡಾ ಮಾರಿದ್ದಾಯಿತು. ನನ್ನ ದುರದೃಷ್ಟವೋ ಏನೋ ಅಂದು ನನಗೆ ಸಿಕ್ಕಿದ್ದು ‘ಎಂಟಾಣೆ’ ಕಮೀಷನ್. ಬೇಸರ ಇಲ್ಲ – ಕಡಲೆ ಇತ್ಯಾದಿಗಳನ್ನು ಮೆಲ್ಲುತ್ತಾ ಸಿನೆಮಾ ಪರದೆಯ ಸಮೀಪದ ಸಾಲಿನಲ್ಲಿ ನೆಲದಲ್ಲಿ ಕುಳಿತು ಸಿನೆಮಾ ನೋಡಲು ಆ ಹಣ ಧಾರಾಳವಾಗಿ ಸಾಕಾಗಿತ್ತು. ಒಂದೇ ಒಂದು ಬಾರಿ ಮಾತ್ರ ಇಂಥ ಸಾಹಸ ಮಾಡಲು ಸಾಧ್ಯವಾಯಿತು – ಯಾರೋ ಹಡ್ ಮಾಸ್ರಿಗೆ ‘ನಿಮ್ಮ ತಮ್ಮನ ಮಗ ಸಂತೆಯಲ್ಲಿ ಸೋಡಾ ಮಾರುತ್ತಿದ್ದ’ ಎಂದು ವರದಿ ಒಪ್ಪಿಸಿದ್ದರಿಂದ ಮುಂದೆ ಸಂತೆಯ ದಿನ ರಜೆ ಇದ್ದಾಗ ನಾನೂ ಮಡಿಕೇರಿಗೋ ನನ್ನ ಮನೆಗೋ ಹೋಗುವಂತಾಯಿತು.

Advertisements
This entry was posted in ಹಾಗೇ ಸುಮ್ಮನೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s