ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೬

ನೀರಿನಲ್ಲಿ ಉಪ್ಪು ಲೀನವಾಗುವಿಕೆ

ಸಾಮಾನ್ಯ ಉಪ್ಪು ನೀರಿನಲ್ಲಿ ಲೀನವಾದಾಗ (ಕರಗಿದಾಗ!) ದೊರೆಯುವ ಉಪ್ಪಿನ ದ್ರಾವಣದ ಗಾತ್ರ ಮೊದಲು ಇದ್ದ ನೀರಿನ ಗಾತ್ರಕ್ಕಿಂತ ಹೆಚ್ಚು ಇರುತ್ತದೆಯೇ? ಉತ್ತರ ಊಹಿಸಿ ಒಂದೆಡೆ ಬರೆದಿಡಿ. ನಿಮ್ಮ ಊಹೆ ಸರಿಯೇ ತಪ್ಪೇ ಎಂಬುದನ್ನು ಪತ್ತೆಹಚ್ಚಲೋಸುಗ ಈ ಮುಂದಿನ ಪ್ರಯೋಗ ಮಾಡಿ. ಒಂದು ಗಾಜಿನ ಲೋಟದಲ್ಲಿ ನೀರು ತಗೆದುಕೊಳ್ಳಿ. ನೀರಿನ ಮಟ್ಟವನ್ನು ಗುರುತುಮಾಡಿ. ಸ್ವಲ್ಪ ಪುಡಿ ಉಪ್ಪನ್ನು ನೀರಿಗೆ ಹಾಕಿ ಅದು ಸಂಪೂರ್ಣವಾಗಿ ಲೀನವಾಗುವ ತನಕ ಚಮಚೆಯಿಂದ ನಿರು ಚೇಪದಂತೆ ನಿಧಾನವಾಗಿ ಕದಡಿ. ನೀರಿನ ಮಟ್ಟ ಮೇಲೇರಿತೇ ಎಂಬುದನ್ನು ಗಮನಿಸಿ.ಇನ್ನೂ ಸ್ವಲ್ಪ ಉಪ್ಪನ್ನು ನೀರಿಗೆ ಹಾಕಿ ಅದೂ ಸಂಪೂರ್ಣವಾಗಿ ಲೀನವಾಗುವ ತನಕ ಚಮಚೆಯಿಂದ ಕದಡಿ. ನೀರಿನ ಮಟ್ಟ ಮೇಲೇರಿತೇ ಎಂಬುದನ್ನು ವೀಕ್ಷಿಸಿ, ಇನ್ನೂ ಹೆಚ್ಚು ಉಪ್ಪು ಲೀನವಾಗುವದಿಲ್ಲ ಅನ್ನುವ ತನಕ ಪ್ರಯೋಗ ಮುಂದುವರಿಸಿ. ನೀರಿನ ಮಟ್ಟ ಮೇಲೇರಿದಂತೆ ಗೋಚರಿಸುವುದಿಲ್ಲ. ನಿಮ್ಮ ಶಾಲೆಯಲ್ಲಿ ೧ ಲೀಟರ್ ಸಾಮರ್ಥ್ಯದ ಗಾತ್ರಮಾಪಕ ಸೀಸೆ (ವಾಲ್ಯುಮೆಟ್ರಕ್ ಫ್ಲಾಸ್ಕ್) ಇದ್ದರೆ ಅದರಲ್ಲಿ ಸರಿಯಾಗಿ ೧ ಲೀಟರ್ ತೆಗೆದುಕೊಂಡು ಸುಮಾರು ೩೦೦-೪೦೦ ಗ್ರಾಮ್ ಉಪ್ನ್ನು ಲೀನಿಸಿ ವೀಕ್ಷಿಸಿ. ನೀರಿನ ಗಾತ್ರ ಹೆಚ್ಚುವುದಕ್ಕೆ ಬದಲಾಗಿ ತುಸು ಕಮ್ಮಿ ಆಗಿರುವುದನ್ನು ನೋಡಿ ಚಕಿತರಾಗುತ್ತೀರಿ. ಲೀನವಾದ ಉಪ್ಪು ಎಲ್ಲಿ ಅಡಗಿದೆ? ನೀರಿನ ಗಾತ್ರ ಕಮ್ಮಿ ಆದದ್ದೇಕೆ? ನೀವೇ ಆಲೋಚಿಸಿ.

ಇಲ್ಲಿ ಪಟ್ಟಿ ಮಾಡಿರುವ ಪ್ರಶ್ನೆಗಳಿಗೆ ಉತ್ತರ ಪತ್ತೆಹಚ್ಚಲೋಸುಗ ಪ್ರಯೋಗಗಳನ್ನು ನೀವೇ ರೂಪಿಸಿ, ಮಾಡಿ ನೋಡಿ.

೧. ನಿರ್ದಿಷ್ಟ ಗಾತ್ರದ ನೀರಿನಲ್ಲಿ ಲೀನವಾಗಬಹುದಾದ ಉಪ್ಪಿನ ಪರಿಮಾಣಕ್ಕೆ ಮೇಲ್ಮಿತಿ ಇದೆಯೇ?

೨. ನೀರಿನಲ್ಲಿ ಉಪ್ಪು ಬೇಗನೇ ಲೀನವಾಗಬೇಕಾದರೆ ಉಪ್ಪಿನ ಹರಳುಗಳ ಗಾತ್ರ ದೊಡ್ಡದಾಗಿರಬೇಕೇ, ಚಿಕ್ಕದಾಗಿರಬೇಕೇ?

೩. ಉಪ್ಪು ಬೇಗ ಲೀನವಾಗುವುದು ತಣ್ಣೀರಿನಲ್ಲಿಯೋ ಬಿಸಿನೀರಿನಲ್ಲಿಯೋ?

೪. ನಿರ್ದಿಷ್ಟ ಗಾತ್ರದ ತಣ್ಣೀರಿನಲ್ಲಿ ಲೀನವಾಗುವುದಕ್ಕಿಂತ ಹೆಚ್ಚು ಪರಿಮಾಣದ ಉಪ್ಪು ಅಷ್ಟೇ ಗಾತ್ರದ ಬಿಸಿನೀರಿನಲ್ಲಿ ಲೀನವಾಗುತ್ತದೆಯೇ?

೫. ಉಪ್ಪು ನೀರನ್ನು ಬಿಸಿಲಿನಲ್ಲಿ ನೀರು ಆವಿಯಾಗುವ ತನಕ ಇಟ್ಟರೆ ಏನಾಗುತ್ತದೆ?

ಬಟಾಟೆ ಏಕೆ ಬಾಡಿತು?

ಮಾಡಲು ಬಲು ಸುಲಭವಾದ ಈ ಪ್ರಯೋಗದಿಂದ ಕಲಿಯಬಹುದಾದ ವೈಜ್ಞಾನಿಕ ತತ್ವ ಬಲು ಮುಖ್ಯವಾದದ್ದು. ೨  ಆಲೂಗೆಡ್ಡೆ (ಬಟಾಟೆ), ಎರಡು ಬಟ್ಟಲುಗಳು, ನೀರು, ಸಾಮಾನ್ಯ ಉಪ್ಪಿನ ಪುಡಿ, ಕತ್ತರಿಸಲು ಚಾಕು – ಇವಿಷ್ಟೇ ಈ ಪ್ರಯೋಗಕ್ಕೆ ಬೇಕಾದ ಸಾಮಗ್ರಿಗಳು.

ಪ್ರತೀ ಆಲೂಗೆಡ್ಡೆಯನ್ನು ಉದ್ದುದ್ದಕ್ಕೆ ೨-೩ ತುಂಡುಗಳಾಗಿ ಜಾಗರೂಕತೆಯಿಂದ ಕತ್ತರಿಸಿ. ಎರಡೂ ಬಟ್ಟಲುಗಳಿಗೆ ತಲಾ ೨-೩ ತುಂಡುಗಳನ್ನೂ ಅವು ಮುಳುಗುವಷ್ಟು ನೀರನ್ನೂ ಹಾಕಿ. ಒಂದು ಬಟ್ಟಲಿನ ನೀರಿಗೆ ೩-೪ ಚಮಚೆ ಉಪ್ಪು ಹಾಕಿ ಅದು ಲೀನವಾಗುವ (ಡಿಸಾಲ್ವ್) ತನಕ ಕದಡಿ. ಎರಡೂ ಬಟ್ಟಲುಗಳಲ್ಲಿ ಬಟಾಟೆಯ ತುಂಡುಗಳನ್ನು ಕೆಲವು ಗಂಟೆಗಳ ಕಾಲ ಹಾಗೆಯೇ ಬಿಡಿ. ಸಾಮಾನ್ಯ ನೀರಿನಲ್ಲಿ ಇದ್ದ ತುಂಡುಗಳು ನೀರು ಹೀರಿ ತುಸು ಹೆಚ್ಚು ತಾಜಾ ಆಗಿರುವಂತೆಯೂ ಉಪ್ಪು ನೀರಿನಲ್ಲಿ ಇದ್ದ ತುಂಡುಗಳು ನೀರನ್ನು ಕಳೆದುಕೊಂಡು ಸೊರಗಿದಂತೆಯೂ ಗೋಚರಿಸುವುದನ್ನು ಗಮನಿಸಿ. ಲವಣಗಳ ಸಾರತೆ (ಕಾನ್ಸಂಟ್ರೇಷನ್) ಅಧಿಕ ಇರುವ ನೀರಿನ ಭಾಗಕ್ಕೆ ಕಮ್ಮಿ ಇರುವ ಭಾಗದಿಂದ ನೀರಿನ ಅಂಶ ವಿಸರಣೆ (ಡಿಫ್ಯೂಷನ್, ಒಂದು ರೀತಿಯಲ್ಲಿ ವರ್ಗಾವಣೆ) ಆಗರುವುದು ಈ ವಿದ್ಯಮಾನಕ್ಕೆ ಕಾರಣ ಇರಬಹುದೇ? ಬೇರೆ ತರಕಾರಿಗಳನ್ನು ಉಪಯೋಗಿಸಿ ಪ್ರಯೋಗ ಪುನರಾವರ್ತಿಸಿ ಪರಿಶೀಲಿಸಿ. ಸಸ್ಯದ ಬೇರುಗಳು ನೀರು ಹೀರುವ ವಿಧಾನ ಇದೇ ಆಗಿರಬಹುದೇ?

ತೇಲುವಿಕೆ, ಮುಳುಗುವಿಕೆ

ತಾಜಾ ಕೋಳಿಮೊಟ್ಟೆ ‘ನೀರಿನಲ್ಲಿ’ ತೇಲುತ್ತದೆಯೋ ಮುಳುಗುತ್ತದೆಯೋ? ಕೋಳಿಸಾಕುವವರು, ಮೊಟ್ಟೆವ್ಯಾಪಾರಿಗಳು ‘ಮುಳುಗುತ್ತದೆ’ಅನ್ನುತ್ತಾರೆ. ತಥ್ಯ ಏನು ಎಂಬುದನ್ನು ಪ್ರಯೋಗ ಮುಖೇನ ಪತ್ತೆಹಚ್ಚಿ. ಒಂದು ಗಾಜಿನ ಲೋಟ, ನೀರು, ತಾಜಾ ಕೋಲಿಮೊಟ್ಟೆ, ಪುಡಿ ಉಪ್ಪು – ಇವಿಷ್ಟನ್ನು ಸಂಗ್ರಹಿಸಿ, ಲೋಟದಲ್ಲಿ ನೀರು ಹಾಕಿ ಜಾಗರೂಕತೆಯಿಂದ ನೀರಿನ ಮೇಲೆ ಮೊಟ್ಟೆಯನ್ನು ಇಡಿ. ಅದು ಮುಳುಗುವುದನ್ನು ವೀಕ್ಷಿಸಿದ ನೀವು ‘ಇದೇನು ಮಹಾ’ ಎಂದು ಮೂಗು ಮುರಿಯದಿರಿ. ನೀರಿನಿಂದ ಮೊಟ್ಟೆಯನ್ನು ಹೊರತೆಗೆಯಿರಿ. ನೀರಿಗೆ ಪುಡಿ ಉಪ್ಪು ಹಾಕಿ ಅದು ನೀರಿನಲ್ಲಿ ಲೀನವಾಗುವ ತನಕ ಕದಡಿ. ಈ ನೀರಿನಲ್ಲಿ ಮೊಟ್ಟೆ ಮುಳುಗುತ್ತದೆಯೇ, ಪರೀಕ್ಷಿಸಿ. ಮುಳುಗಿದರೆ ಇನ್ನಷ್ಟು ಉಪ್ಪು ಹಾಕಿ ಕದಡಿ ಪುನಃ ಪರೀಕ್ಷಿಸಿ. ಯಾವುದೋ ಒಂದು ಹಂತದಲ್ಲಿ ಮೊಟ್ಟೆ ಲೋಟದ ತಳದ ತನಕ ಮುಳುಗದೇ ಇರುವ ವಿದ್ಯಮಾನ ವೀಕ್ಷಿಸುತ್ತೀರಿ. ಇನ್ನೂ ಹೆಚ್ಚು ಉಪ್ಪನ್ನು ಹಾಕಿ ಪ್ರಯೋಗ ಮುಂದುವರಿಸಿ. ಕೊನೆಗೆ ಮೊಟ್ಟೆ ನೀರಿನಲ್ಲಿ ಸಂಪೂರ್ಣವಾಗಿ ತೇಲುವುದನ್ನು ವೀಕ್ಷಿಸುತ್ತೀರಿ. ಕಾರಣ  ಏನಿರಬಹುದು? ನೀವೇ ಆಲೋಚಿಸಿ.

ಮುಳುಗುವಿಕೆ ಮತ್ತು ತೇಲುವಿಕೆಗೆ ಸಂಬಂಧಿಸಿದಂತೆ ಇನ್ನೂ ಒಂದು ಪ್ರಯೋಗ ಮಾಡಿ ನೋಡಿ. ಮಣ್ಣಿನ ಹಣತೆ ಮಾಡುವ ಜೇಡಿಮಣ್ಣಿನ ಎರಡು ಸಮತೂಕದ ಉಂಡೆಗಳನ್ನು ಮಾಡಿ. ಇವುಗಳ ಪೈಕಿ ಒಂದರಿಂದ ಹಣತೆಯನ್ನು ಹೋಲುವ ತಟ್ಟೆಯಾಕೃತಿ ಮಾಡಿ. ಉಂಡೆ ಮತ್ತು ತಟ್ಟೆಯಾಕೃತಿ – ಇವೆರಡರ ಪೈಕಿ ಯಾವುದು ಮುಳುಗುತ್ತದೆ ಎಂಬುದನ್ನು ಪ್ರಯೋಗ ಮುಖೇನ ಪತ್ತೆಹಚ್ಚಿ. ಕಾರಣ  ಏನಿರಬಹುದು? ನೀವೇ ಆಲೋಚಿಸಿ.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s