ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೨೪

ನೀರಿನ ಮೇಲ್ಮೈ ಎಳೆತ (ಸರ್ಫೇಸ್ ಟೆನ್ಷನ್)

೧. ಈ ಪ್ರಯೋಗ ನೀರಿನ ಒಂದು ವಿಶಿಷ್ಟ ಲಕ್ಷಣವನ್ನು ನಾಟಕೀಯವಾಗಿ ಪ್ರದರ್ಶಿಸುತ್ತದೆ. ಎಂದೇ ಫಲಿತಾಂಶಕ್ಕಾಗಿ ಕಾತರದಿಂದ ಕಾಯುವ ಮನಃಸ್ಥಿತಿ ನಿರ್ಮಿಸುತ್ತದೆ. ಒಂದು ಪುಟ್ಟ ಬಟ್ಟಲು, ನೀರು, ಒಂದೇ ಗಾತ್ರದ ನಾಣ್ಯಗಳು (ಇವು ಸಿಕ್ಕದಿದ್ದರೆ ಒಂದೇ ಗಾತ್ರದ ಚಿಕ್ಕ ಮೊಳೆಗಳು ಅಥವ ನೀರಿನಲ್ಲಿ ಮುಳುಗುವ ಯಾವುದೇ ಚಿಕ್ಕಚಿಕ್ಕ ವಸ್ತುಗಳು) – ಇವನ್ನು ಸಂಗ್ರಹಿಸಿ. ಮೊದಲು ಬಟ್ಟಲಿನಲ್ಲಿ ನೀರು ತುಂಬಿಸಿ. ಇನ್ನು ಒಂದು ತೊಟ್ಟು ನೀರು ಹಾಕಿದರೂ ಅದು ಬಟ್ಟಲಿನಿಂದ ಹೊರಚೆಲ್ಲೀತು ಅನ್ನಿಸುವಷ್ಟರ ಮಟ್ಟಿಗೆ ನೀರು ತುಂಬಬೇಕು. ನಿಮ್ಮ ಹತ್ತಿರ ಇರುವ ನಾಣ್ಯ ಅಥವ ಮೊಳೆ ಅಥವ ವಸ್ತುಗಳ ಪೈಕಿ ಎಷ್ಟನ್ನು ನೀರು ಒಂದಿನಿತೂ ಹೊರಚೆಲ್ಲದಂತೆ ಬಟ್ಟಲಿನಲ್ಲಿ ಇರುವ ನೀರಿನೊಳಕ್ಕೆ ಹಾಕಬಹುದು ಎಂಬುದನ್ನು ಅಂದಾಜು ಮಾಡಿ. ತದನಂತರ ಅವನ್ನು ಒಂದೊಂದಾಗಿ ಎಣಿಸುತ್ತ ನೀರಿನಲ್ಲಿ ತುಸು ಅದ್ದಿ ಬಲು ಜಾಗರೂಕತೆಯಿಂದ ಬಿಡಿ. ನೀರು ಹೊರಚೆಲ್ಲದಂತೆ ಎಷ್ಟು ವಸ್ತುಗಳನ್ನು ಹಾಕಬಹುದು ಎಂಬುದನ್ನು ಪತ್ತೆಹಚ್ಚಿ. ನಿಜವಾಗಿ ಹಾಕಿದ್ದಕ್ಕೂ ನೀವು ಅಂದಾಜಿಸಿದ್ದಕ್ಕೂ ಎಷ್ಟು ವ್ಯತ್ಯಾಸ ಇದೆ? ಅಷ್ಟು ವ್ಯತ್ಯಾಸ ಇರಲು ಕಾರಣ ಏನು? ಕಾರಣ ತಿಳಿಯದಿದ್ದರೆ ಪ್ರಯೋಗವನ್ನು ಪುನರಾವರ್ತಿಸಿ. ಈ ಬಾರಿ ವಸ್ತುಗಳನ್ನು ಹಾಕಲಾರಂಭಿಸುವ ಮುನ್ನ ನೀರಿನ ಮೇಲ್ಮೈನ ಆಕಾರ ಗಮನಿಸಿ. ವಸ್ತುಗಳನ್ನು ಹಾಕುತ್ತಾ ಹೋದಂತೆಲ್ಲ ಅದರಲ್ಲಿ ಆಗುವ ವ್ಯತ್ಯಾಸ ಗಮನಿಸಿ. ಬೆಲೂನಿಗೆ ಗಾಳಿ ತುಂಬಿಸಿದಾಗ ಉಬ್ಬುವಂತೆ ನೀರಿನ ಮೇಲ್ಮೈ ಉಬ್ಬಿತೇ? ನೀರಿನ ಮೇಲ್ಮೈ ಬಿಗುಪು ಸ್ಥಿತಿಯಲ್ಲಿ ಇರುವ ರಬ್ಬರಿನ ತೆಳು ಸ್ಥಿತಿಸ್ಥಾಪಕ ಪೊರೆಯಂತೆ ವರ್ತಿಸುತ್ತಿದೆಯೇ?

೨. ನೀರಿನ ಮೇಲ್ಮೈ ಸ್ಥಿತಿಸ್ಥಾಪಕತ್ವ ಉಳ್ಳ ತೆಳು ಪದರದಂತೆ ಇದೆ ಎಂದಾದರೆ ಅದರ ಮೇಲೆ ಬ್ಲೇಡ್ ಅಥವ ಗುಂಡುಪಿನ್ ತೇಲಿಸಲು ಸಾಧ್ಯವೇ? ೊಂದು ಲೋಟದಲ್ಲಿ ನೀರು ತುಂಬಿಸಿ ಪ್ರಯತ್ನಿಸಿ ನೋಡಿ. ಸುಲಭಸಾಧ್ಯವಲ್ಲ ಅನ್ನಿಸಿದರೆ ಹೀಗೆ ಮಾಡಿ ನೋಡಿ:- ಬಲುಬೇಗನೆ ನೀರು ಹೀರಬಲ್ಲ ಸೊಸುಕಾಗದದ (ಫಿಲ್ಟರ್ ಪೇಪರ್) ಅಥವ ಒತ್ತುಕಾಗದದ (ಬ್ಲಾಟಿಂಗ್ ಪೇಪರ್) ಅಥವ ಟಿಶ್ಯೂ ಕಾಗದದ ಚೂರೊಂದನ್ನು ನೀರಿನಲ್ಲಿ ತೇಲಿ ಬಿಟ್ಟು ಅದರ ಮೇಲೆ ಬ್ಲೇಡ್ ಅಥವ ಗುಂಡುಪಿನ್ನನ್ನು ಬಲು ಜಾಗರೂಕತೆಯಿಂದ ಇಡಿ. ತುಸು ಸಮಯದ ಬಳಿಕ ಕಾಗದ ನೀರನ್ನು ಹೀರಿ ಮುಳುಗಿದರೂ ಬ್ಲೇಡ್ ಅಥವ ಗುಂಡುಪಿನ್ ನೀರಿನಲ್ಲಿ ತೇಲುವ ವಿದ್ಯಮಾನ ವೀಕ್ಷಿಸಿ.

೩. ಲೋಟದಲ್ಲಿ ನೀರು ತುಂಬಿಸಿ ಎರಡು ಬೆಂಕಿಕಡ್ಡಿಗಳನ್ನು ಚಿತ್ರದಲ್ಲಿ ತೋರಿಸಿದಂತೆ ತೇಲಿಸಿ. ಎರಡು ಕಡ್ಡಿಗಳ ಮಧ್ಯೆ (ಚಿತ್ರದಲ್ಲಿ ಬಾಣದ ಗುರುತಿನಿಂದ ಸೂಚಿಸಿದಲ್ಲಿ) ಸಾಬೂನಿನ ಚೂರೊಂದನ್ನು ಅದ್ದಿ. ಬೆಂಕಿಕಡ್ಡಿಗಳು ಲೋಟದಲ್ಲಿ ಯಾವಕಡೆಗೆ ಚಲಿಸುತ್ತವೆ ಎಂಬುದನ್ನು ವೀಕ್ಷಿಸಿ. ಲೋಟದಲ್ಲಿ ಇರುವ ನೀರನ್ನು ಚೆಲ್ಲಿ ಬೇರೆ ನೀರನ್ನು ತುಂಬಿ ಬೆಂಕಿಕಡ್ಡಿಗಳನ್ನು ಮೊದಲಿನಂತೆ ತೇಲಿಬಿಡಿ. ಸಕ್ಕರೆ ಅಚ್ಚಿನ ತುದಿಯನ್ನು ಎರಡು ಕಡ್ಡಿಗಳ ಮಧ್ಯೆ ಅದ್ದಿ. ಈಗ ಬೆಂಕಿಕಡ್ಡಿಗಳು ಲೋಟದಲ್ಲಿ ಯಾವ ಕಡೆಗೆ ಚಲಿಸುತ್ತವೆ ಎಂಬುದನ್ನು ವೀಕ್ಷಿಸಿ. ಯಾವ ಸಂದರ್ಭದಲ್ಲಿ ಮೇಲ್ಮೈ ಎಳೆತ ಕಮ್ಮಿ ಆಯಿತು? ಯಾವ ಸಂದರ್ಭದಲ್ಲಿ ಹೆಚ್ಚಾಯಿತು?

೪. ಸೊಳ್ಳೆಪರದೆಯಂತೆ ಇರುವ ಲೋಹದ ಬಲೆಯ ಚಿಕ್ಕ ತುಂಡೊಂದನ್ನು ಸಂಗ್ರಹಿಸಿ. ಇದನ್ನು ನೀರಿನಲ್ಲಿ ತೇಲಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಸಾಧ್ಯ ಎಂದಾದರೆ, ಅದರ ರಂಧ್ರಗಳ ಮೂಲಕ ನೀರು ನುಸುಳಿ ಬಲೆ ಏಕೆ ಮುಳುಗಲಿಲ್ಲ ಅನ್ನುವುದರ ಕುರಿತು ಆಲೋಚಿಸಿ. ನೀರಿನ ಮೇಲ್ಮೈ ಎಳೆತ  ಇದಕ್ಕೆ ಕಾರಣವಾಗಿರಬಹುದೇ?

೫. ಮೇಲಂಚಿನ ವರೆಗೆ ನೀರು ತುಂಬಿರುವ ಒಂದು ಗಾಜಿನ ಲೋಟ ಮತ್ತು ನೀರಿನಲ್ಲಿ ತೇಲಬಲ್ಲ ಬೆಂಡಿನ ಒಂದು ಚಿಕ್ಕ ತುಂಡು ಸಂಗ್ರಹಿಸಿ. ಲೋಟವನ್ನು ಮೇಜಿನ ಮೇಲಿಟ್ಟು ಅದರ ಮೇಲಂಚಿನ ತನಕ ನೀರು ತುಂಬಿರುವುದನ್ನು ಖಾತರಿ ಪಡಿಸಿಕೊಳ್ಳಿ. ಇನ್ನೂ ಒಂದು ಚಮಚೆ ನೀರು ಸೇರಿಸಿದರೆ ಹರಚೆಲ್ಲುವಷ್ಟು ನೀರು ಲೋಟದಲ್ಲಿ ಇರಬೇಕು. ಜಾಗರೂಕತೆಯಿಂದ ಬೆಂಡಿನ ತುಂಡನ್ನು ನೀರಿನಲ್ಲಿ ತೇಲಿಸಿ ಲೋಟದ ಅಂಚಿಗೆ ತಂದು ಬಿಡಿ. ಅದು ತಾನಾಗಿಯೇ ನಿಧಾನವಾಗಿ ನೀರಿನ ಮೇಲ್ಮೈನ ಮಧ್ಯಭಾಗಕ್ಕೆ ಸರಿಯುವುದನ್ನು ವೀಕ್ಷಿಸಿ. ನೀವು ಎಷ್ಟೇ ಪ್ರಯತ್ನಿಸಿದರೂ ಅದು ಅಂಚಿನಲ್ಲಿ ನಿಲ್ಲುವುದಿಲ್ಲ. ಈ ಪ್ರಯೋಗ ಮಾಡಿದ ಬಳಿಕ ಲೋಟದಿಂದ ಕಾಲು ಭಾಗ ನೀರು ಹೊರಚೆಲ್ಲಿ. ಪುನಃ ಜಾಗರೂಕತೆಯಿಂದ ಬೆಂಡಿನ ತುಂಡನ್ನು  ತೇಲಿಸಿ. ಈ ಸನ್ನಿವೇಶದಲ್ಲಿ ನೀವು ಎಷ್ಟೇ ಪ್ರಯತ್ನಿಸಿದರೂ ಅದು ಲೋಟದ ಮಧ್ಯಬಾಗದಲ್ಲಿ ನಿಲ್ಲುವುದಕ್ಕೆ ಬದಲಾಗಿ ಅಂಚಿಗೇ ಸರಿಯುವ ವಿದ್ಯಮಾನ ವೀಕ್ಷಿಸಿ.

ಇದಕ್ಕೆ ಕಾರಣ ತಿಳಿಯಲೋಸುಗ ಲೋಟದ ಮೇಲಂಚಿಗಿಂತ ಕೆಳಗೆ ಮತ್ತು ಮೇಲಂಚಿನ ತನಕವೂ ನೀರು ಇರುವಾಗ ಅದರ ಮೇಲ್ಮೈಯನ್ನು ಸೂಕ್ಷ್ಮವಾಗಿ ವೀಕ್ಷಿಸಿ. ಯಾವ ಸಂದರ್ಭದಲ್ಲಿ ನೀರಿನ ಮೇಲ್ಮೈ ನಿಮ್ನವಾಗಿಯೂ (ಅಂಚಿನಲ್ಲಿ ಇರುವುದಕ್ಕಿಂತ ಮಧ್ಯದಲ್ಲಿ ತುಸು ಕೆಳಗೆ) ಯಾವ ಸಂದರ್ಭದಲ್ಲಿ ಪೀನವಾಗಯೂ (ಮಧ್ಯದಲ್ಲಿ ಅಂಚಿಗಿಂತ ತುಸು ಮೇಲಕ್ಕೆ ಉಬ್ಬಿರುವಂತೆ) ಗೋಚರಿಸುತ್ತದೆ?

ನೀರಿನ ಆಸಂಜನ (ಅಂಟಿಕೊಳ್ಳುವ/ಅಡ್ ಹೀಷನ್) ಸಾಮರ್ಥ್ಯ ಮತ್ತು ಮೇಲ್ಮೈ ಎಳೆತಗಳು ಈ ವಿದ್ಯಮಾನಕ್ಕೆ ಕಾರಣವಿರಬಹುದೇ?

೬. ಒಂದು ಚಿಕ್ಕ ಬೋಗುಣಿಯಲ್ಲಿ ನೀರು, ಒಂದು ಚಿಕ್ಕ ಬಟ್ಟಲಿನಲ್ಲಿ ಯಾವುದಾದರೂ ತೈಲ (ಎಣ್ಣೆ), ಒಂದು ಚಮಚೆ, ಸ್ವಲ್ಪ ಮಾರ್ಜಕ ಪುಡಿ (ಡಿಟರ್ಜೆಂಟ್ ಪೌಡರ್) ಸಂಗ್ರಹಿಸಿ. ಬೋಗುಣಿಯಲ್ಲಿ ಇರುವ ನೀರಿಗೆ ತೈಲ ಸುರಿಯಿರಿ. ತೈಲ ಮತ್ತು ನೀರು ಬೆರೆಯಲೋಸುಗ ಚಮಚೆಯಿಂದ ಚೆನ್ನಾಗಿ ಕದಡಿ/ ಎಷ್ಟೇ ಕದಡಿದರೂ ತೈಲದ ವೃತ್ತಾಕಾರದ ಚಟ್ಟೆಯಾಗಿರುವ ಹನಿಗಳು ನೀರಿನ ಮೇಲ್ಮೈನಲ್ಲಿ ರೂಪುಗೊಳ್ಳುವುದನ್ನು ವೀಕ್ಷಿಸಿ. ನಿಧಾನವಾಗಿ ಅವು ಒಗ್ಗೂಡಿ ದೊಡ್ಡದೊಡ್ಡ ಹನಿಗಳಾಗುವುದನ್ನೂ ವೀಕ್ಷಿಸಿ. ತೈಲ ಮತ್ತು ನೀರು – ಈ ಎರಡೂ ದ್ರವಗಳಿಗೆ ಪ್ರಬಲವಾದ ಮೇಲ್ಮೈ ಎಳೆತ ಇದೆ. ಇವೆರಡರ ನಡುವೆ ಬಲು ದುರ್ಬಲವಾದ ಆಸಂಜನ (ಅಂಟಿಕೊಳ್ಳುವ) ಬಲ ಇದೆ. ನೀವು ವೀಕ್ಷಿಸಿದ ವಿದ್ಯಮಾನಕ್ಕೆ ಇವು ಕಾರಣಗಳಾಗಿರಬಹುದೇ? ನೀವೇ ಆಲೋಚಿಸಿ.

ತುಸು ಮಾರ್ಜಕ ಪುಡಿಯನ್ನು ತೈಲಯುತ ನೀರಿಗೆ ಹಾಕಿ ಚೆನ್ನಾಗಿ ಕದಡಿ. ತೈಲ ಮತ್ತು ನೀರು ಮೊದಲಿಗಿಂತ ಹೆಚ್ಚು ಬೆರೆಯುವಂತೆ ತೋರುತ್ತದೆ. ಅಂದ ಮೇಲೆ, ಮೇಲ್ಮೈ ಎಳೆತದ ಮೇಲೆ ಮಾರ್ಜಕ ಪುಡಿಯ ಪ್ರಭಾವ ಏನು ಎಂಬುದನ್ನು ನೀವೇ ತರ್ಕಿಸಿ.

೭. ಬುದ್ಧಿಗೊಂದು ಕಸರತ್ತು: ಬಚ್ಚಲು ಮನೆ ಅಥವ ವಾಷ್ ಬೇಸಿನ್ ಇರುವಲ್ಲಿ ಮಾಡಬೆಕಾದ ಕಸರತ್ತು ಇದು. ಒಂದು ಅಗಲ ಬಾಯಿಯ ಗಾಜಿನ ಅಥವ ಬಳುಕದ ಪ್ಲಾಸ್ಟಿಕ್ ಬಾಟಲ್, ಕರವಸ್ತ್ರ, ನೀರು, ಅನೇಕ ರಬ್ಬರ್ ಬ್ಯಾಂಡುಗಳು – ಇವಿಷ್ಟನ್ನು ಸಂಗ್ರಹಿಸಿ.  ಬಾಟಲಿನ ಮುಕ್ಕಾಲು ಭಾಗಕ್ಕಿಂತ ತಸು ಹೆಚ್ಚು ನೀರು ತುಂಬಿಸಿ. ಕರವಸ್ತ್ರವನ್ನು ತುಸು ಒದ್ದೆಮಾಡಿ. ಬಾಟಲಿನ ಬಾಯಿಯನ್ನು ಬಿಗಿಯಾಗಿ ಆವರಿಸುವಂತೆ ರಬ್ಬರ್ ಬ್ಯಾಡುಗಳ ನೆರವಿನಿಂದ ಕರವಸ್ತ್ರವನ್ನು ಬಿಗಿಯಾಗಿ ಎಳೆದು ಕಟ್ಟಿ. ನೀರು ತಗಲುವ ತನಕ ಕರವಸ್ತ್ರದ ಮಧ್ಯದಲ್ಲಿ ಬೆರಳುಗಳಿಂದ ಒತ್ತಿ ಹಿಡಿಯಿರಿ. ಕರವಸ್ತ್ರವನ್ನು ಒತ್ತಿ ಹಿಡಿದುಕೊಂಡೇ ಬಾಟಲನ್ನು ಜಾಗರೂಕತೆಯೊಂದ ಬೇಗನೆ ತಲೆಕೆಳಗೆ ಮಾಡಿ ಹಿಡಿದು ಬೆರಳು ತೆಗೆಯರಿ ಮತ್ತು ತಕ್ಷಣ ಕರವಸ್ತ್ರವನ್ನು ಎಳೆದು ಬಿಗಿಮಾಡಿ. ನೀರಿನಲ್ಲಿ ಚಿಕ್ಕಚಿಕ್ಕ ಗುಳ್ಳೆಗಳು ಬಾಟಲಿನ ಬಾಯಿಯ ಕಡೆಯಿಂದ ಮೇಲಕ್ಕೇರುವ ವಿದ್ಯಮಾನ ವೀಕ್ಷಿಸಿ. ಬಾಟಲನ್ನು ತಲೆಕೆಳಗೆ ಮಾಡಿದಾಗ ನೀರು ಬಟ್ಟೆಯ ಮೂಲಕ ಸೋರಿ ಹೋಗದಿರಲು ಕಾರಣ ಏನು? ಗುಳ್ಳೆಗಳು ಉತ್ಪತ್ತಿ ಆಗಲು ಕಾರಣವೇನು?

(ಗಮನಿಸಿ: ಬಾಟಲನ್ನು ತಲೆಕೆಳಗೆ ಮಾಡಿದಾಗ ತುಸು ನೀರು ಹೊರಸೂಸಿದರೆ ಗಾಬರಿ ಆಗಬೇಡಿ. ಕೊಂಚ ಅಭ್ಯಾಸ ಮಾಡಿದರೆ ಈ ಪ್ರಯೋಗ ಕೌಶಲ ಸಿದ್ಧಿಸುತ್ತದೆ. ಆರಂಬಿಕರು ಬಾಟಲಿಗೆ ಬದಲಾಗಿ ಗಾಜಿನ ದೊಡ್ಡ ಲೋಟವನ್ನೂ ಉಪಯೋಗಿಸಿ ಅಭ್ಯಸಿಸಬಹುದು,)

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s