ಮೈಸೂರಿನಿಂದ ಮೈಸೂರಿಗೆ ಒಂದು ವೃತ್ತೀಯ ವಿಹಾರ ಪ್ರವಾಸ (೧) – ಮೈಸೂರಿನಿಂದ ಬೇಲೂರಿಗೆ

ನಮ್ಮ ಬಾಲ್ಯದಲ್ಲಿ ಬೇಸಿಗೆ ರಜೆಯಲ್ಲಿ ಕೈಗೊಳ್ಳುತ್ತಿದ್ದ ಏಕೈಕ ಪ್ರವಾಸ – ಅಜ್ಜನ ಮನೆಗೆ (ತಾಯಿ/ ಮಲತಾಯಿಯ ತವರಿಗೆ) ಹೋಗುವುದು. ಅಲ್ಲಿ ಹೆಚ್ಚುಕಮ್ಮಿ ೧೫-೩೦ ದಿನಗಳ ಮೋಜುಮಸ್ತಿ. ಮೋಜಿಗಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗುವ ಪರಿಪಾಠ ಮಧ್ಯಮವರ್ಗದವರಿಗೆ ಆಗ ಇರಲಿಲ್ಲ. ಇಷ್ಟವಿದ್ದವರೂ ಆರ್ಥಿಕ ಕಾರಣಗಳಿಗಾಗಿ ಪ್ರವಾಸ ಹೋಗುತ್ತಿರಲಿಲ್ಲ. ಹೋಗುತ್ತಿದ್ದರೂ ಅದು ದೇವಾಲಯಗಳಿಗೆ ಸೀಮಿತವಾಗತ್ತು. ಈಗ ಹಾಗಲ್ಲ. ಬೇಸಿಗೆ ರಜೆಯಲ್ಲಿ ಸ್ವದೇಶದ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವುದು ಮಧ್ಯಮ ವರ್ಗದವರ ಜೀವನದ ಒಂದು ಅವಿಭಾಜ್ಯ ಅಂಗವಾಗುತ್ತಿದೆ. ನನ್ನ ಮಗ ಈ ವರ್ಷ ಪತ್ನಿ ಮತ್ತು ಪುತ್ರರೊಂದಿಗೆ ಸ್ವಂತ ಕಾರಿನಲ್ಲಿ ( ಕೆಲವು ಸ್ಥಳಗಳಲ್ಲಿ ಸ್ಥಳೀಯ ಬಾಡಿಗೆ ಕಾರುಗಳಲ್ಲಿ) ಸುಮಾರು ೭ ದಿನಗಳ ಪ್ರವಾಸ (ಪ್ರಯಾಣಾವಧಿ ಸೇರಿಸಿದರೆ ೯ ದಿನ) ಕೈಗೊಳ್ಳಲು ತೀರ್ಮಾನಿಸಿರುವುದಾಗಿಯೂ ನಾವು ಯಾವ ಸಬೂಬೂ ಹೇಳದೆ ಅವರೊಡನೆ ಹೋಗಬೇಕೆಂದೂ ತಿಳಿಸಿದ. ನಮಗಾದರೋ ‘ಸುತ್ತುವ ಉತ್ಸಾಹವಿದ್ದ ವಯಸ್ಸಿನಲ್ಲಿ ಹಣ ಇರಲಿಲ್ಲ, ವೆಚ್ಚದ ಯೋಚನೆ ಇಲ್ಲದೇ ಸುತ್ತಲು ಅವಕಾಶ ದೊರೆತಾಗ ತ್ರಾಸದಾಯಕ ದೀರ್ಘಕಾಲೀನ ಪ್ರವಾಸ ಕೈಗೊಳ್ಳಲು ಅಗತ್ಯವಾದ ದೈಹಿಕ ತಾಕತ್ತು ಇಲ್ಲ’. ಈ ಕಾರಣಕ್ಕಾಗಿ ನಾವು ಈ ಆಹ್ವಾನ ಸ್ವೀಕರಿಸಲು ಸಾಧ್ಯವಿಲ್ಲವೆಂದು ತಿಳಿಸಿದರೂ ನಮಗೆ ಹೆಚ್ಚು ಆಯಾಸವಾಗದಂತೆ ಯೋಜನೆ ತಯಾರಿಸುವುದಾಗಿ ಹೇಳಿ ನಮ್ಮನ್ನು ಒಪ್ಪಿಸಿದ. ನಾವು ಅವರೊಡನೆ ಸೇರಿಕೊಳ್ಳುವುದನ್ನು ಖಾತರಿ ಮಾಡಿಕೊಂಡ ಬಳಿಕ ತಂಗುವ ತಾಣಗಳಲ್ಲಿ ಅಂತರ್ಜಾಲದ ಮುಖೇನ ತಂಗಲು ೨ ಕೊಠಡಿಗಳನ್ನೂ ಕಾಯ್ದಿರಿಸಿದ. ಇದು ನಮ್ಮ ಪ್ರವಾಸದ ಹಿನ್ನೆಲೆ. ಕಂತುಗಳಲ್ಲಿ, ನಮ್ಮ ಅನುಭವವನ್ನು ಹೆಚ್ಚು ‘ಮಸಾಲೆ’ ಸೇರಿಸದೇ ಈ ಮಾಲಿಕೆಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಪೂರ್ವನಿಗದಿತ ಯೋಜನೆಯಂತೆ ಮೇ ೬, ೨೦೧೧ರ ಮಧ್ಯಾಹ್ನ ೨.೧೫ ರ ಶತಾಬ್ಧಿ ಎಕ್ಸ್ ಪ್ರೆಸ್ ನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಅಗತ್ಯವಾದ ಉಡುಪುಗಳು ಇರುವ ಒಂದು ದೊಡ್ಡ ಬ್ಯಾಗ್, ಒಂದು ಸಣ್ಣ ಸೂಟ್ ಕೇಸ್ ಮತ್ತು ಪ್ರವಾಸಾವಧಿಯಲ್ಲಿ ಕಾರಿನಲ್ಲಿ ತಿನ್ನಲು ಇರಲೆಂದು ಸ್ವಲ್ಪ ಕುರುಕಲು ತಿಂಡಿ, ಬಿಸ್ಕತ್ತುಗಳು, ಚಾಕೋಲೆಟ್ ಇರುವ ಒಂದು ಕೈಚೀಲ ಸಹಿತ ಪಯಣಿಸಿದೆವು. ಮೊದಲೇ ಮಗ ವ್ಯವಸ್ಥೆ ಮಾಡಿದ್ದ ಸಿಟಿಟ್ಯಾಕ್ಸಿಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಮಗನ ಮನೆಗೆ ಹೋದೆವು. ಮರುದಿನ ಪ್ರವಾಸಾರಂಭಕ್ಕೆ ಅವರು ಮೊದಲೇ ಸಿದ್ಧರಾಗಿದ್ದರು. ಕೈಗೊಳ್ಳಲಿರುವ ಪ್ರವಾಸದ ಕುರಿತು ಹರಟುತ್ತಾ ಕೊಂಡೊಯ್ಯಬೇಕಾದ್ದನ್ನು ಒಂದೆಡೆ ಜೋಡಿಸಿ ಇಡುವ ಕಾಯಕದಲ್ಲಿ ಸಮಯ ಕಳೆದದ್ದು ತಿಳಿಯಲೇ ಇಲ್ಲ. ಮರುದಿನ ಬೆಳಿಗ್ಗೆ ೮ – ೮.೩೦ಕ್ಕೆ ಪ್ರವಾಸ ಆರಂಭಿಸಬೇಕೆಂದುಕೊಂಡು ಬೇಗ ಉಂಡು ಮಲಗಿದ್ದಾಯಿತು.

ದಿನಾಂಕ ೭-೫-೨೦೧೧ರ ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನೂ ಬೆಳಗಿನ ಉಪಹಾರವನ್ನೂ ಮುಗಿಸಿ ಮೊದಲೇ ಯೋಜಿಸಿದ್ದಂತೆ ಸುಮಾರು ೮.೩೦-೯ ಕ್ಕೆ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ಸಮೀಪದಲ್ಲಿ ಇರುವ ಮನೆಯಿಂದ ಹೊರಟೆವು. ಮಾಗಡಿ, ಕುಣಿಗಲ್, ಹಾಸನ ಮೂಲಕವಾಗಿ ಸುಮಾರು ೨೦೪ ಕಿಮೀ ಕ್ರಮಿಸಿ ನಮ್ಮ ಮೊದಲ ನಿಲುಗಡೆಯ ತಾಣ ಬೇಲೂರು ತಲುಪಿದೆವು. ಇಲ್ಲಿನ ಚೆನ್ನಕೇಶವ ದೇವಾಲಯದ ಕುರಿತು ತಿಳಿಯದವರು ವಿರಳ. ಎಂದೇ, ಅದರ ಸೊಬಗನ್ನು ಇಲ್ಲಿ ವರ್ಣಿಸುವ ಅಥವ ಖ್ಯಾತ ಶಿಲಾಬಾಲಿಕೆಯರ, ಕಂಬಗಳ, ನವರಂಗದ ಫೋಟೋ ಹಾಕುವ ಗೋಜಿಗೆ ಹೋಗುವುದಿಲ್ಲ. ಮುಂದೆ ಹಾಕಿರುವ ಫೋಟೋಗಳು ಈ ಪ್ನರವಾಸದ ನಮ್ಮ ನೆನಪುಗಳನ್ನು ಬಿಂಬಿಸುತ್ತವೆ. ನಾವು ಹೋದ ಸಮಯದಲ್ಲಿ ದೇವಾಲಯದೊಳಗೆ ವಿಪರೀತ ಜನಸಂದಣಿ ಇತ್ತು.  ಬೇಸಿಗೆ ರಜೆ ಬಿಟ್ಟು ಮಿಕ್ಕ ದಿನಗಳಲ್ಲಿ (ಶನಿವಾರ, ಭಾನುವಾರ ಹೊರತುಪಡಿಸಿ) ಹೋದರೆ ಜನ ಜಂಗುಳಿಯ ಕಾಟವಿಲ್ಲದೇ ನಿಧಾನವಾಗಿ ನೋಡಿ ಆನಂದಿಸ ಬಹುದು. ನಾವು ಈ ಹಿಂದೆಯೇ ಇಲ್ಲಿಗೆ ಭೇಟಿ ನೀಡಿದ್ದರಿಂದ ಮಾರ್ಗದರ್ಶಿಯ ನೆರವು ಪಡೆಯಲಿಲ್ಲ. ಮೊದಲ ಬಾರಿ ಹೋಗುವವರು ನಿಗದಿತ ಶುಲ್ಕ ತೆತ್ತು ಮಾರ್ಗದರ್ಶಿಗಳ ನೆರವು ಪಡೆಯುವುದು ಒಳ್ಳೆಯದು. (ಅವರ ವಿವರಣೆ ಯಾಂತ್ರಿಕವೂ ಕೃತಕವೂ ಆಗಿರುತ್ತದೆ).

ಬೇಲೂರಿನ ಚೆನ್ನಕೇಶವ ದೇವಾಲಯದ ಪ್ರವೇಶದ್ವಾರ

ಈ ಕಂಬದ ತಳಬಾಗದ ಒಂದು ಮೂಲೆ ಮಾತ್ರ ಅಡಿಪಾಯಕ್ಕೆ ತಗುಲಿಕೊಂಡಿರುವುದನ್ನು ಒಂದು ಕಾಗದದ ಹಾಳೆಯ ನೆರವಿನಿಂದ ಪರೀಕ್ಷಿಸಲು ಮರೆಯದಿರಿ

ದೇವಾಲಯದೊಳಗೆ ಆರಾಮವಾಗಿ ನೋಡಲಾಗದಷ್ಟು ಜನಸಂದಣಿ

ಬೇಲೂರಿನ ಚೆನ್ನಕೇಶವ

'ಹೊಯ್ ಸಳ' ಕಥೆ ನೆನಪಿಸಿಕೊಳ್ಳಿ

ಹಾಗೇ ಸುಮ್ಮನೆ ಒಂದು ಸುತ್ತು

ಮೊಮ್ಮಗನ ಗಮನ ಸೆಳದವುಗಳು

ಮೊಮ್ಮಗನ ಗಮನ ಸೆಳೆದವುಗಳು

ಮೊಮ್ಮಗನ ಗಮನ ಸೆಳದವುಗಳು

ಮೊಮ್ಮಗನ ಗಮನ ಸೆಳೆದವುಗಳು

ಬೇಲೂರಿನ ಬೆಸ್ಟ್ ಅನುಭವ-ಮೊಮ್ಮಗನ ಪ್ರಕಾರ. ೪ ಚಕ್ರದ ಬೈಕ್ ರೈಡ್-೧೦೦ರೂ ಗಳಿಗೆ ದೇವಸ್ತಾನಕ್ಕೆ ೨ ಸುತ್ತು

(ಕ್ಷಮೆ ಇರಲಿ: ಈ ಫೊಟೋಗಳಲ್ಲಿ ದಿನಾಂಕ ೭ ರ ಬದಲು ೬ ಆಗಿದೆ). ಬೇಲೂರಿನ ದೇವಸ್ಥಾನದಿಂದ ಹೊರಬಂದು ಬೈಕ್ ರೈಡ್ ಪೂರೈಸುವಾಗ ಸಮಯ ೧೨.೪೫ ಾಗಿತ್ತು. ಎಂದೇ, ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಮಯೂರದಲ್ಲಿ ಭೋಜನ ಮುಗಿಸಿ ಪ್ರಯಾಣ ಮುಂದುವರಿಸಿದೆವು. ಈ ಹೋಟೆಲ್ ನಲ್ಲಿ ‘ಸೇವೆ’ಯೇ ಆಗಲಿ, ಲಭ್ಯವಿರುವ ‘ತಿನಿಸು’ಗಳೇ ಆಗಲಿ ‘ಉತ್ತಮ’ ಎಂದು ಹೇಳಲಾಗದಿದ್ದರೂ ‘ದುಬಾರಿ’ ಎಂದು ಖಚಿತವಾಗಿ ಹೇಳಬಹುದು. ದುಬಾರಿ ಆದ್ದರಿಂದಲೋ ಏನೋ ಜನಸಂದಣಿ ಇರುವುದಿಲ್ಲ. ಆವರಣ (ಶೌಚಾಲಯವೂ ಸೇರಿದಂತೆ) ಸ್ವಚ್ಛವಾಗಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶವೂ ಇದೆ. ಆರಾಮವಾಗಿ ತಿನ್ನಬಹುದು. ಇದಕ್ಕಿಂತ ಸ್ವಚ್ಛವಾಗಿರುವ ಹೋಟೆಲ್ ಗಳು ನಮಗೆ ಗೊಚರಿಸಲಿಲ್ಲ.

———            (ಮುಂದುವರಿಯುವುದು)     ———

Advertisements
This entry was posted in ಪ್ರವಾಸ ಕಥನ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s