‘ಜಾತಿ ಪದ್ಧತಿ’ ಎಂಬ ಅನಿಷ್ಟದ ಅನುಭವಗಳು

ಅನುಭವ ೧: ನನಗಾಗ ೬-೭ ವರ್ಷ ವಯಸ್ಸು (೧೯೪೮-೪೯). ನನ್ನ ತಂದೆಯವರು ಶನಿವಾರಸಂತೆಯ ಸರ್ಕಾರೀ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮ ಮನೆಯ ಎಡ ಪಾರ್ಶ್ವದಲ್ಲಿ ಬರೆ ಮತ್ತು ಅದರ ಮೇಲೊಂದು ಮಣ್ಣಿನ ಮಾರ್ಗ, ಬಲ ಪಾರ್ಶ್ವದಲ್ಲಿ ಒಂದು ದರಿ ಮತ್ತು ಅಲ್ಲೊಂದು ಡಾಂಬರಿನ ಮಾರ್ಗ. ಮುಂಭಾಗದಲ್ಲಿ ಬಲು ವಿಶಾಲವಾದ ಅಂಗಳ. ಅಂಗಳದ ಕೊನೆಯಲ್ಲಿ ಈಗಾಗಲೇ ಉಲ್ಲೇಖಿಸಿದ ಎರಡು ಮಾರ್ಗಗಳು ಸಂಗಮಿಸಿ ಮುಂದುವರಿಯುವ ಸ್ಥಳ. ಮನೆಯ ಹಿತ್ತಿಲಿನಾಚೆ ಕಾಡು. ಬರೆಯ ಮೇಲಿನ ಮಾರ್ಗದಾಚೆ ಇದ್ದ ೨-೩ ಕಚ್ಚಾ ಮನೆಗಳ ಸಮುಚ್ಚಯ ಬಿಟ್ಟರೆ ಕೂಗಳತೆಯಲ್ಲಿ ಯಾವ ಮನೆಗಳೂ ಇರಲಿಲ್ಲ. ಪಕ್ಕದಲ್ಲಿದ್ದ ಮನೆಗಳ ಸಮುಚ್ಚಯದಲ್ಲಿ ಹೆಚ್ಚುಕಮ್ಮಿ ನನ್ನ ವಯಸ್ಸಿನ ಹುಡುಗಿಯೊಬ್ಬಳನ್ನು ಬಿಟ್ಟರೆ ಆಟವಾಡಲು ಯಾರೂ ಇರಲಿಲ್ಲ. ಆ ಹುಡುಗಿ ದೂರ ನಿಂತು ನಾನು ಆಟವಾಡುವುದನ್ನು ನೋಡುತ್ತಿದ್ದಳೇ ವಿನಾ ಕರೆದರೂ ನನ್ನೊಂದಿಗೆ ಆಟವಾಡಲು ಬರುತ್ತಿರಲಿಲ್ಲ. ಒಂದು ದಿನ, ತಮ್ಮ ಮನೆಯ ಹೊರಗೆ ಯಾರೂ ಇಲ್ಲದಿದ್ದಾಗ ಆಟವಾಡಲು ಬಂದಳು. ನಮ್ಮ ಗಲಾಟೆ ಕೇಳಿ ನನ್ನ ಚಿಕ್ಕಮ್ಮ ಇಣುಕಿ ನೋಡಿ ಏನೂ ಹೇಳದೆಯೇ ಒಳಗೆ ಹೋದರು. ೫-೧೦ ನಿಮಿಷ ಆಟವಾಡಿರಬಹುದೇನೋ? ಅವರ ಮನೆಯಿಂದ ಮಹಿಳೆಯೊಬ್ಬರು ಹೊರಬಂದು ‘ಅಲ್ಲೇನು ಮಾಡುತ್ತಿದ್ದಿಯಾ? ಬಾ ಇತ್ತ’ ಎಂದು ಬೊಬ್ಬೆ ಹೊಡೆದದ್ದರಿಂದ ಅವಳು ಓಡಿ ಹೋದಳು. ಅವಳು ಬರದಿದದ್ದರೇನಂತೆ, ನಾನೇ ಅವರ ಮನೆಯಂಗಳಕ್ಕೆ ಹೋಗಿ ಆಟಬಹುದಲ್ಲವೇ? ಒಂದು ದಿನ ಅವರ ಮನೆಯಂಗಳಕ್ಕೆ ಕಾಲಿಟ್ಟೊಡನೆಯೇ, ಈ ಮೊದಲೇ ಉಲ್ಲೇಖಿಸಿದ ಮಹಿಳೆ ಬೊಬ್ಬೆ ಹೊಡೆದಳು-“ಬುದ್ಯೋರೆ, ನೀವ್ಯಾಕೆ ಇಲ್ಲಿಗೆ ಬಂದಿರಿ? ನೀವೆಲ್ಲ ಇಲ್ಲಿಗೆ ಬರ್ಬಾರ್ದು”

“ಯಾಕೆ? ನಾನು ಆಟ ಅಡಕ್ಕೆ ಬಂದದ್ದು”

“ಐ ಅದೆಲ್ಲ ನಿಮಗೆ ಗೊತ್ತಾಗಕ್ಕಿಲ್ಲ. ನೀವು ಬ್ರಾಂಬ್ರು ನಮ್ಮಂಥವರ ಮನೆ ತಾಕೆ ಬರ್ಬಾರ್ದು. ಹೋಗಿ ಹೋಗಿ” ಎಂದು ಓಡಿಸಿಯೇ ಬಿಟ್ಟಳು. ಏಕೆಂದು ನನಗೆ ಅಂದು ಅರ್ಥವಾಗದಿದ್ದರೂ ತಿಳಿದದ್ದು ಇಷ್ಟು – ‘ಅವರು ಹೊಲೆಯರು, ಅವರೊಂದಿಗೆ ನಾನು ಆಡುವಂತಿಲ್ಲ’

ಅನುಭವ ೨: ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಇರುವ ಸರ್ಕಾರೀ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ (೧೯೫೪-೫೬) ಆದ ಅನುಭವ ಇದು. ನಾನು ಮತ್ತು ಸೋದರಸಂಬಂಧಿ ಮೋಹನ (ದೊಡ್ಡಪ್ಪ ದಿ ಎ ಪಿ ಶ್ರೀನಿವಾಸ ರಾವ್ ಅವರ ಮೂರನೇ ಮಗ, ಹಾಲಿ ಯು ಎಸ್ ಎ ವಾಸಿ ಡಾ ಲಲಿತಮೋಹನ) ಇಬ್ಬರೂ ಊರಿನಿಂದ ಸುಮಾರು ೯-೧೦ ಕಿಮೀ ದೂರದಲ್ಲಿದ್ದ ಪ್ರೇಕ್ಷಣೀಯ ಬೃಹತ್ ಕೆರೆಯೊಂದನನ್ನು ನೋಡಲು ಪಾದಯಾತ್ರೆ ಮಾಡಿ ಹಿಂದಿರುಗುತ್ತಿದ್ದೆವು. ಬಾಯಾರಿಕೆ ಆಯಿತೆಂದು ದಾರಿಯಲ್ಲಿ ಸಿಕ್ಕ ಮನೆಯೊಂದಕ್ಕೆ ಹೋಗಿ ಜಗುಲಿಯ ಮೇಲೆ ಕುಳಿತಿದ್ದ ಮಹಿಳೆಯ ಹತ್ತಿರ ಕುಡಿಯಲು ನೀರು ಕೇಳಿದೆವು.

ಆಕೆ: “ನೀವು ಯಾವ ಜನ?”

“ಸೋಮವಾರಪೇಟೆ ಹೈಸ್ಕೂಲ್ ಹೆಡ್ ಮಾಸ್ಟರ್ ಮನೆಯವರು”

“ನಾನು ಕೇಳಿದ್ದು ನೀವು ಯಾವ ಜಾತಿ ಅಂತ?”

“ಬ್ರಾಹ್ಮಣರು”

“ನಿಮಗೆ ನಾನು ನೀರು ಕೊಡೋಕಾಗಲ್ಲ”

“ಯಾಕೆ?”

“ನಾವು ಲಿಂಗಾಯತರು. ಅದಕ್ಕೆ”

“ಕೊಟ್ಟರೆ ಏನಾಗುತ್ತೇ?”

“ಕಾಲ ಕೆಟ್ಟೋಯ್ತು. ಈ ಮಕ್ಕಳಿಗೆ ಮನೇಲಿ ಏನು ಹೇಳಿಕೊಡ್ತಾರೋ? ಲಿಂಗಾಯ್ತ್ರು ಬ್ರಾಂಬ್ರಿಗೆ ನೀರುಗೀರು ಏನಾದ್ರೂ ಕೊಟ್ರೆ ಇಬ್ರಿಗೂ ಪಾಪ ಅಂಟ್ಕೊಳತ್ತೆ”

ಅನುಭವ ೩: ಮಂಡ್ಯ ಜಿಲ್ಲೆಯ ಹೇಮಗಿರಿಯಲ್ಲಿರುವ ಪ್ರೌಢಶಾಲೆಯಲ್ಲಿ ೧೯೬೭-೭೦ರ ಅವಧಿಯಲ್ಲಿ ನಾನು ವಿಜ್ಞಾನ ಶಿಕ್ಷಕನಾಗಿದ್ದೆ. ಶಾಲೆಯ ಒಂದು ಕೊಠಡಿಯಲ್ಲಿ ನಾನೂ ಸೇರಿದಂತೆ ೩ ಮಂದಿ ಬ್ರಹ್ಮಚಾರಿ ಶಿಕ್ಷಕರು ವಾಸವಾಗಿದ್ದೆವು. ೩ ಮಂದಿಯೂ ಬ್ರಾಹ್ಮಣರು. ಶಾಲೆ ಇದ್ದದ್ದು ನಿರ್ಜನ ಪ್ರದೇಶದಲ್ಲಿ. ಶಾಲೆಯಿಂದ ಸುಮಾರು ೧-೨ ಕಿಮೀ ದೂರದಲ್ಲಿ ಕುಪ್ಪಳ್ಳಿ ಮತ್ತು ಬಂಡಿಹೊಳೆ ಎಂಬ ಹಳ್ಳಿಗಳಿದ್ದವು. ಕುಪ್ಪಳ್ಳಿಯಲ್ಲಿ ಬ್ರಾಹ್ಮಣ ಸಮುದಾಯದವರು ಬಹುಸಂಖ್ಯಾತರು, ಬಂಡಿಹೊಳೆಯಲ್ಲಿ ಒಕ್ಕಲಿಗ ಸಮುದಾಯದವರು ಬಹುಸಂಖ್ಯಾತರು. ಕುಪ್ಪಳ್ಳಿಯ ಬ್ರಾಹ್ಮಣ ಸಮುದಾಯದ ಕೆಲವು ಪ್ರಮುಖರು ಹಬ್ಬಹರಿದಿನಗಳಲ್ಲಿ ನಮ್ಮನ್ನು ಮಧ್ಯಾಹ್ನ ಭೋಜನಕ್ಕೋ ಸಂಜೆಯ ಉಪಾಹಾರಕ್ಕೋ ಆಹ್ವಾನಿಸುತ್ತದ್ದರು. ಪುಸ್ತಕಗಳ ನೆರವಿನಿಂದ ಅಡುಗೆ ಮಾಡಿಕೊಳ್ಳುತ್ತಿದ್ದ ನಾವು ಈ ಆಹ್ವಾನವನ್ನು ತಿರಸ್ಕರಿಸುವುದುಂಟೇ? “ಅದೇನು, ಈ ಮೇಷ್ಟ್ರುಗಳು ಕುಪ್ಪಳ್ಳಿಗೆ ಮಾತ್ರ ಹೋಗುತ್ತಾರೆ, ನಮ್ಮ ಊರಿಗೇಕಂತೆ ಬರುವುದಿಲ್ಲ?” ಎಂಬ ಪ್ರಶ್ನೆಯೊಂದು ಜವಾನರ ಮುಖೇನ ಬಂಡಿಹೊಳೆಯಿಂದ ನಮಗೆ ರವಾನೆಯಾಯಿತು. “ಆಹ್ವಾನಿಸಿದರೆ, ಅಲ್ಲಿಗೂ ಬರುತ್ತೇವೆ” ಎಂಬ ಉತ್ತರ ರವಾನಿಸಿದ್ದಾಯಿತು. ಮುಂದೊಂದು ದಿನ ಹಳ್ಳಿಯ ಪಂಚಾಯತ್ ಅಧ್ಯಕ್ಷರಿಂದ ಸಂಜೆಯ ಚಹಾಕ್ಕೆ ಬರುವಂತೆ ಕರೆ ಬಂತು. ಅವರು ಒಕ್ಕಲಿಗ ಸಮುದಾಯದವರು. ಸಮಯಕ್ಕೆ ಸರಿಯಾಗಿ ನಾವು ಅವರ ಮನೆಯಲ್ಲಿ ಹಾಜರಾದೆವು. ಮನೆಯ ಹೊರಗಿನ ಜಗುಲಿಯಲ್ಲಿ ಮೇಷ್ಟ್ರುಗಳಿಗೆಂದು ವಿಶೇಷವಾಗಿ ಹಾಕಿದ್ದ ಚಾಪೆಯಲ್ಲಿ ಆಸೀನರಾಗಿ ಉಭಯ ಕುಶಲೋಪರಿ ನಡೆಸಿದ್ದಾಯಿತು.

“ಮೇಷ್ಟ್ರು ಏನು ತಗೊಳ್ತೀರಿ?”

“ಮಾಂಸಾಹಾರ ಒಂದು ಬಿಟ್ಟು ನೀವೇನು ಕೊಡ್ತಿರೋ ಅದು”

“ನಾವು ಒಕ್ಕಲಿಗರು, ನೀವು ಬ್ರಾಹ್ಮಣರು”

“ನಮಗೇನೂ ತೊಂದರೆ ಇಲ್ಲ, ನಾವು ನೋಡೋದು ನೈರ್ಮಲ್ಯ, ಜಾತಿ ಅಲ್ಲ”

“ಹ್ಹ ಹ್ಹ ಹ್ಹ ನಿಮಗೆ ಜಾತಿ ಇಲ್ಲ ಅನ್ನಿ”

“ಹ್ಹ ಹ್ಹ ಹ್ಹ ತಿನ್ನುವ ವಿಷಯದಲ್ಲಿ ಖಂಡಿತ ಇಲ್ಲ”

“ಮೇಷ್ಟ್ರುಗಳಿಗೆ ಏನಾರೂ ತಗೊಂಬನ್ರೋ” ಮನೆಯೊಳಗಿನವರಿಗೆ ಆಜ್ಞೆ ಹೋಯಿತು.

ಒಳಗಿನಿಂದ ಬಂದಿತು – ಮೂವರಿಗೂ ಒಂದೊಂದು ಲೋಟ ಹಾಲು, ಎರಡೆರಡು ಬಾಳೆಯ ಹಣ್ಣು”

ಅದನ್ನೇ ಗಂಭೀರವಾಗಿ ಸ್ವೀಕರಿಸಿ ರಾತ್ರಿಯ ಅಡುಗೆ ಮಾಡಲೇಬೇಕಾದ ಅನಿವಾರ್ಯತೆಯಿಂದ ಚಿಂತಿತರಾಗಿ ಹೀಂದಕ್ಕೆ ಧಾವಿಸಿದೆವು. ನಾವು ಊಟ ಮಾಡಲು ತಯಾರಿದ್ದರೂ ಅವರು ನೀಡಲು ಸಿದ್ಧರಿರಲಿಲ್ಲ. ಆಮೇಲೆ ತಿಳಿದಿದ್ದಿಷ್ಟು: ಹಾಲು ಮತ್ತು ಹಣ್ಣು ಕೊಡುವುದೂ ತಸ್ವೀಕರಿಸುವುದರಿಂದ ‘ಜಾತಿ ಕೆಡುವುದಿಲ್ಲ’.

ಅನುಭವ ೪: ಇನ್ನೊಂದು ದಿನ ಬಂಡಿಹೊಳೆವಾಸಿ ಒಕ್ಕಲಿಗ ಸಮುದಾಯದ ಅನುಕೂಲಸ್ಥ ಮುಖಂಡರ ಮಗಳ ಮದುವೆಗೆ ಬರಲೇಬೇಕೆಂಬ ಒತ್ತಾಯಪೂರ್ವಕ ಅಮಂತ್ರಣ ತಲುಪಿತು. ಅಂದು ರಜಾದಿನವಾದ್ದರಿಂದ ನನ್ನ ಇಬ್ಬರು ಸಹೋದ್ಯೋಗಿ ಮಿತ್ರರು ತಮ್ಮತಮ್ಮ ೂರಿಗೆ ಹೋಗಿದ್ದರಿಂದ ನಾನೊಬ್ಬನೇ ಹೋಗಬೇಕಾಯಿತು. ಅನುಕೂಲಸ್ಥರ ಮನೆಯ ಮದುವೆಯ ಸಮಾರಂಭವಾದ್ದರಿಂದ ಭೋಜನಕ್ಕೆ ನನ್ನಂಥ ಅನ್ಯ ‘ಮೇಲ್ಜಾತಿಯವರಿಗೂ’ ಏನಾದರೂ ವ್ಯವಸ್ಥೆ ಮಾಡಿರುತ್ತಾರೆಂದು ಭಾವಿಸಿ ಹೋಗಿದ್ದ ನನಗೆ ನಿರಾಸೆ ಕಾದಿತ್ತು. ಏಕೆ ಗೊತ್ತೇ? ಒಂದು ಮೊರದಲ್ಲಿ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ೧ ರೂಪಾಯಿ ನಾಣ್ಯ ಇಟ್ಟು “ನೀವು ಬಂದದ್ದು ನಮ್ಮ ಸೌಭಾಗ್ಯ. ಇದನ್ನು ಒಪ್ಪಿಸಿಕೊಳ್ಳಬೇಕು” ಅನ್ನುತ್ತಾ ಅದನ್ನು ನನ್ನ ಕೈಗೆ ಕೊಟ್ಟು ನಮಸ್ಕರಿಸಿದರು. ಬಲು ಗಂಭೀರವದನದಿಂದ ಅದನ್ನು ಸ್ವೀಕರಿಸಿ “ವಧೂವರರಿಗೆ ಶುಭವಾಗಲಿ” ಎಂದು ಆಶೀರ್ವದಿಸಿ, ಮನಸ್ಸಿನಲ್ಲಿಯೇ ರೂಮಿಗೆ ಹೋಗಿ ಅಡುಗೆ ಮಾಡಲು ಕಾರಣವಾದ ಜಾತಿ ಸಂಪ್ರದಾಯಕ್ಕೆ ಶಪಿಸುತ್ತಾ ಆ ಮೊರ ಸಮೇತ ಹಿಂದಿರುಗಿದೆ.

ಅನುಭವ ೫: ಆ ಶಾಲೆಯಲ್ಲಿ ಇದ್ದಾಗಲೇ ಆದ ಇನ್ನೊಂದು ಅನುಭವವೂ ಉಲ್ಲೇಖಾರ್ಹ. ಪ್ರತೀದಿನ ತೊಳೆಯಬೇಕಾದ ಪಾತ್ರೆಗಳನ್ನೆಲ್ಲ ಒಂದು ದೊಡ್ಡ ಬಕೆಟ್ಟಿನಲ್ಲಿ ತುಂಬಿ ಪಕ್ಕದಲ್ಲಿ ಇದ್ದ ಕಾಲುವೆಗೆ ಅಥವ ಹೊಳೆಗೆ (ಶಾಲೆಯಿಂದ ಅನತಿ ದೂರದಲ್ಲಿ ಹೇಮಾವತಿ ಹೊಳೆ ಮತ್ತು ಒಂದು ಕಾಲುವೆ ಎರಡೂ ಹರಿಯುತ್ತಿದ್ದವು) ಕೊಂಡೊಯ್ದು ತೊಳೆದು ತರುತ್ತಿದ್ದೆವು. ಬಹುತೇಕ ಸಂದರ್ಭಗಳಲ್ಲಿ ಯಾರಾದರೂ ವಿದ್ಯಾರ್ಥಿಗಳು ನಮ್ಮ ಕೈನಿಂದ ಬಕೆಟ್ ಕಿತ್ತೊಯ್ದು ಪಾತ್ರೆ ತೊಳೆದು ತರುತ್ತಿದ್ದರು. ಅದೊಂದು ದಿನ, ಪಾತ್ರೆ ತೆಗೆದುಕೊಂಡು ಹೊರಟಿದ್ದ ನನ್ನ ಕೈನಿಂದ  ಹುಡುಗನೊಬ್ಬ ಬಕೆಟ್ ಕಿತ್ತುಕೊಂಡು ಕಾಲುವೆಯತ್ತ ಓಡಿದ. (ರೋಗಿ ಬಯಸಿದ್ದೂ ಹಾಲು ಅನ್ನ ——). ಆತ ಪಾತ್ರೆಗಳನ್ನು ತೊಳೆದು ರೂಮಿನಲ್ಲಿ ತಂದಿಟ್ಟು ಓಡಿದ. ಅವನು ಹೋದ ತಕ್ಷಣ ಜವಾನನೊಬ್ಬ ಬಂದು ಪುನಃ ಆ ಬಕೆಟ್ಟನ್ನು ಕೊಂಡೊಯ್ದು ಪಾತ್ರೆಗಳನ್ನು ಕಾಲುವೆ ನೀರಿನಲ್ಲಿ ಮುಳುಗಿಸಿ ತೆಗೆದು ತಂದಿಟ್ಟ.

“ಯಾಕಪ್ಪ, ಆ ಹುಡುಗ ಈಗ ತಾನೇ ತೊಳೆದಿಟ್ಟ ಪಾತ್ರೆಗಳನ್ನು ಪುನಃ ತೊಳೆದೆ”

“ನಿಮಗೆ ಗೊತ್ತಿಲ್ಲಾಂತ ಕಾಣತ್ತೆ ಅವ ಯಾರೂಂತ”

“ಅವನು ಯಾರು, ನಮ್ಮ ಸ್ಕೂಲಿನ ಹುಡುಗ ತಾನೆ?’

“ ಐ–. ನಿಮಗೆ ಗೊತ್ತಿಲ್ಲ. ಅವನು, ಹರಿಜನರ ಹುಡುಗ

Advertisements
This entry was posted in ನೆನಪಿನ ದೋಣಿಯಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s