ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು

ವಿಜ್ಞಾನ ವಿಧಾನದಲ್ಲಿ (ಸೈಂಟಿಫಿಕ್ ಮೆತಡ್) ತರಬೇತಿ ನೀಡುವುದು, ವೈಜ್ಞಾನಿಕ ಮನೋಧರ್ಮ (ಸೈಂಟಿಫಿಕ್ ಆಟಿಟ್ಯೂಡ್) ಬೆಳೆಸುವುದು, ವೈಜ್ಞಾನಿಕ ಪ್ರವೃತ್ತಿ (ಸೈಂಟಿಫಿಸಿಟಿ) ಬೆಳೆಸುವುದು, ಮೂಢನಂಬಿಕೆಗಳನ್ನು ತೊಡೆದು ಹಾಕುವುದು – ಇವೆಲ್ಲ ಪದಪುಂಜಗಳ ಬಳಕೆ ಇಂದು ಫ್ಯಾಷನ್ ಆಗಿದ್ದರೂ ಅವುಗಳ ಅರ್ಥ ಅನೇಕರಿಗೆ ಮನೋಗತವಾಗಿಲ್ಲ ಎಂಬುದು ನನ್ನ ಅನಿಸಿಕೆ. ವೈಜ್ಞಾನಿಕ ಮನೋಧರ್ಮವನ್ನು ಜನಸಾಮಾನ್ಯರಲ್ಲಿ ಬೆಳೆಸುವ ಕಾಯಕದಲ್ಲಿ ಪ್ರಾಮಾಣಿ ‘ವೈಜ್ನಾನಿಕ’, ‘ಅವೈಜ್ಞಾನಿಕ’ – ಈ ಪದಗಳನ್ನು ಅನುಕ್ರಮವಾಗಿ ಹೊಗಳಿಕೆಯ ಮತ್ತು ತೆಗಳಿಕೆಯ ಪದಗಳಾಗಿ ಬಳಸುತ್ತಿರುವವರಿಗಂತೂ ಖಂಡಿತ ಆಗಿಲ್ಲ.   ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೂ ಶಿಕ್ಷಕರಿಗೂ ಇವುಗಳ ಸ್ಪಷ್ಟ ಪರಿಕಲ್ಪನೆ ಇದ್ದರೆ ವಸ್ತುಸ್ಥಿತಿಯಲ್ಲಿ ಕೊಂಚ ಸುಧಾರಣೆ ಆದೀತು.

ಅತಿ ಸಂಕ್ಷಿಪ್ತವಾಗಿ ಇವನ್ನು ಇಂತು ವ್ಯಾಖ್ಯಾನಿಸ ಬಹುದು – ವಸ್ತುಪ್ರಪಂಚದ ಆಗುಹೋಗುಗಳ ನಿರ್ಧಾರಕ ನಿಯಮಗಳನ್ನು ಆವಿಷ್ಕರಿಸುವುದು ಪ್ರಧಾನ ಗುರಿಯಾಗಿರುವ ನಿಸರ್ಗವಿಜ್ಞಾನಗಳಲ್ಲಿ ಜ್ಞಾನ್ವೇಷಣೆಗೆ ಅನುಸರಿಸುವ ವಿಶಿಷ್ಟ ವಿಧಾನವೇ ವಿಜ್ಞಾನ ವಿಧಾನ (ಇದನ್ನು ವಿಜ್ಞಾನ ಮಾರ್ಗ, ವೈಜ್ಞಾನಿಕ ವಿಧಾನ ಎಂದು ಉಲ್ಲೇಖಿಸುವುದೂ ಉಂಟು). ಈ ವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ತಳೆದಿರಲೇಬೇಕಾದ ಮನೋಭಾವವೇ ವೈಜ್ಞಾನಿಕ ಮನೋಧರ್ಮ. ವಿಜ್ಞಾನ ವಿಧಾನವೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ವಿಧಾನ ಎಂಬ ಅಚಲ ವಿಶ್ವಾಸದಿಂದ ಎಂಥ ಅಡ್ಡಿಆತಂಕಗಳು ಎದುರಾದರೂ ವೈಜ್ಞಾನಿಕ ಮನೋಧರ್ಮವನ್ನು ಕೈಬಿಡದೆಯೇ ಮುಂದುವರಿಯುವ ಪ್ರವೃತ್ತಿಯೇ ವೈಜ್ಞಾನಿಕ ಪ್ರವೃತ್ತಿ.

ವಿಜ್ಞಾನ ವಿಧಾನದ ಎಂದರೇನು?

ನೈಸರ್ಗಿಕ ವಿದ್ಯಮಾನಗಳು ನಿಯಮಬದ್ಧವಾದವು. ಈ ನಿಯಮಗಳು ಅನುಲ್ಲಂಘನೀಯ. ಇವನ್ನು ನಿಸರ್ಗ ನಿಯಮಗಳು ಎಂದು ಉಲ್ಲೇಖಿಸುವುದು ವಾಡಿಕೆ. ನೈಸರ್ಗಿಕ ವಿದ್ಯಮಾನಗಳು ಹೇಗೆ ಘಟಿಸುತ್ತವೆ ಎಂಬುದನ್ನು ನಿರೂಪಿಸುವ ವಾಕ್ಯವೇ ನಿಯಮ. ವಸ್ತುಪ್ರಪಂಚಕ್ಕೆ ಸಂಬಂಧಿಸಿದಂತೆ ನಿಖರವಾದ ವಿಶ್ವಸನೀಯವಾದ ಸುಸಂಗತ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿ ಈ ನಿಯಮಗಳನ್ನು ಪಡೆಯಬಹುದು. ಇಂಥ ಮಾಹಿತಿ ಸಂಗ್ರಹಿಸಲೋಸುಗ ಪ್ರಯೋಗಗಳಿಗೆ ವಿಶೇಷ ಪ್ರಾಶಸ್ತ್ಯವಿರುವ ಪರಿಣಾಮಕಾರೀ ವಿಧಾನವೊಂದು ರೂಪುಗೊಂಡಿದೆ, ಅದೇ ವಿಜ್ಞಾನ ವಿಧಾನ. ಗೆಲಿಲಿಯೋ, ಆರ್ಕಿಮಿಡೀಸ್ ಇವರೇ ಮೊದಲಾದವರು ಈ ವಿಧಾನದ ರೂವಾರಿಗಳು.

ವಿಜ್ಞಾನ ಹಾಲಿ ಒಪ್ಪಿಕೊಂಡಿರುವ ನಿಯಮಗಳನ್ನು ಪರಿಶೀಲಿಸಿ. ಸುಲಭಗ್ರಾಹ್ಯವಾದವು ಕೆಲವು, ದೀರ್ಘಕಾಲ ವೀಕ್ಷಿಸಿದರೆ ಮಾತ್ರ ಗ್ರಹಿಸಬಹುದಾದವು ಕೆಲವು, ಪ್ರಯೋಗಗಳನ್ನು ಪುನರಾವರ್ತಿಸಿ ಗ್ರಹಿಸಬಹುದಾದವು ಕೆಲವು, ಗಣಿತೀಯ ಸಂಬಂಧ ರೂಪದಲ್ಲಿ ಮಾತ್ರ ನಿರೂಪಿಸಬಹುದಾದವು ಕೆಲವು. ನಿಯಮಗಳಲ್ಲಿ ಈ ತೆರನಾದ ವಿವಿಧತೆ ಇದ್ದರೂ ಎಲ್ಲವೂ ಯಾರು ಬೇಕಾದರೂ ಪರೀಕ್ಷಿಸಬಹುದಾದವು, ಅನುಭವ ಗ್ರಾಹ್ಯವಾದವು. ಅರ್ಥಾತ್, ಪ್ರಯೋಗಾಧಾರಿತ ಅನುಭವಜನ್ಯ ನಿಯಮಗಳನ್ನು ಮಾತ್ರ ವಿಜ್ಞಾನ ಸ್ವೀಕರಿಸುತ್ತದೆ. ವಿಜ್ಞಾನ ಸ್ವೀಕೃತ ನಿಯಮಗಳ ಪೈಕಿ ಕೆಲವು ನಿಷ್ಕೃಷ್ಟವಾದವು (ಉದಾ: ಕೆಪ್ಲರನ ನಿಯಮಗಳು, ಗರುತ್ವ ನಿಯಮ), ಕೆಲವು ಸರಿಸುಮಾರಾದವು (ಉದಾ: ಡ್ಯುಲಾಂಗ್ ಮತ್ತು ಪತೀ ನಿಯಮ, ಬೋಡ್ ನ ನಿಯಮ), ಕೆಲವು ಸಂಖ್ಯಾಶಾಸ್ತ್ರೀಯವಾದವು (ಉದಾ: ಪ್ರಸಾಮಾನ್ಯ ವಿತರಣಾ ನಿಯಮ).

ನೈಸರ್ಗಿಕ ವಿದ್ಯಮಾನಗಳು ಹೇಗೆ ಘಟಿಸುತ್ತವೆ ಎಂಬುದನ್ನು ನಿರೂಪಿಸುವ ವಾಕ್ಯವೇ ನಿಯಮ ಎಂದು ಈ ಮುನ್ನವೇ ನಿರೂಪಿಸಲಾಗಿದೆ. ನೈಸರ್ಗಿಕ ವಿದ್ಯಮಾನಗಳು ನಿಯಮಾನುಸಾರವೇ ಏಕೆ ಜರಗುತ್ತವೆ? ಇದನ್ನು ಪತ್ತೆಹಚ್ಚಲು ಪ್ರಯತ್ನಿಸುವುದು ವಿಜ್ಞಾನದ ವಿಶಿಷ್ಟತೆ. ಈ ಪ್ರಯತ್ನದಲ್ಲಿ ತೊಡಗುವ ತನಕ ಲಭ್ಯವಿರುವ ಸುಸಂಗತ ಜ್ನಾನವನ್ನು ಆಧರಿಸಿ ಇಂಥ ಪ್ರಶ್ನೆಗೆ ಉತ್ತರವನ್ನು ವಿಜ್ಞಾನಿಗಳು ಊಹಿಸುತ್ತಾರೆ. ಜಾಣತನದಿಂದ ರೂಪಿಸಿದ ಇಂಥ ಊಹಿತ ಉತ್ತರಗಳೇ ಪ್ರಕಲ್ಪನೆಗಳು ( ಪ್ರಾಕ್ಕಲ್ಪನೆ, ಆಧಾರ ಕಲ್ಪನೆ, ಹೈಪಾತಿಸಿಸ್). ಪ್ರಕಲ್ಪನೆಗಳು ಪ್ರಯೋಗಮುಖೇನ ಅಥವ ಇನ್ನಾವುದೇ ಸ್ವೀಕಾರಾರ್ಹ ವಿಧಾನದಿಂದ ಸಾಬೀತುಗೊಂಡರೆ ಅವೂ ನಿಯಮಗಳಾಗುತ್ತವೆ.

ಪ್ರಕಲ್ಪನೆಗಳ ನೆರವಿನಿಂದ ನೈಸರ್ಗಿಕ ವಿದ್ಯಮಾನಗಳಿಗೆ ಸಮಂಜಸವಾದ ವಿವರಣೆ ನೀಡತೊಡಗಿದಾಗ ಕೆಲವೊಮ್ಮೆ ಅದಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಪ್ರಕಲ್ಪನೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಇಂಥ ಪ್ರಕಲ್ಪನಾಗುಚ್ಛವನ್ನು ವಾದ (ತಿಯರಿ, ಸಿದ್ಧಾಂತ) ೆಂದು ಕರೆಯಲಾಗುತ್ತದೆ. ವಾದ ಅಥವ ಸಿದ್ಧಾಂತವನ್ನು ಆಧರಿಸಿ ಕೈಗೊಳ್ಳುವ ತೀರ್ಮಾನಗಳು ಸರಿ ಎಂದು ಸಾಬೀತಾಗುತ್ತಾ ಹೋದಂತೆ ಅದರ ವಿಶ್ವಸನೀಯತೆ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ ಬದಲಾಗಿ, ವಾದ ಆಧಾರಿತ ತೀರ್ಮಾನ ಸರಿಯಾದುದಲ್ಲ ಎಂದೋ ಅಥವ ಯಾವ ಪ್ರಕಲ್ಪನೆಗಳ ಬುನಾದಿಯ ಮೇಲೆ ವಾದ ರೂಪುಗೊಂಡಿದೆಯೋ ಆ ಪ್ರಕಲ್ಪನೆಗಳ ಪೈಕಿ ಯಾವುದೇ ಒಂದು ಪ್ರಕಲ್ಪನೆ ಸರಿಯಾದುದಲ್ಲ ಎಂದೋ ಸಾಬೀತಾದರೆ ಆ ವಾದ ಮನ್ನಣೆ ಕಳೆದುಕೊಳ್ಳುತ್ತದೆ. ಈಗಾಗಲೇ ಸಾಬೀತಾಗಿರುವ ನಿಯಮಕ್ಕೆ ಅಥವ ಸ್ವೀಕೃತ ವಾದಕ್ಕೆ ಅಪವಾದಗಳು ಕಂಡುಬಂದಾಗ ಅದನ್ನು ಯುಕ್ತ ರೀತಿಯಲ್ಲಿ ಪರಿಷ್ಕರಿಸಲಾಗುತ್ತದೆ.

(೧) ಅನುಭವಜನ್ಯ ನಿಯಮಗಳನ್ನು ಗುರುತಿಸಿ, ಪುನಃ ಪುನಃ ಪರೀಕ್ಷಿಸಿ ದೃಢೀಕರಿಸುವುದು (೨) ಅವುಗಳಿಗೆ ಸಮರ್ಪಕವಾದ ವಿವರಣೆ ನೀಡಲೋಸುಗ ಪ್ರಕಲ್ಪನೆಗಳನ್ನೂ ವಾದಗಳನ್ನೂ (ಸಿದ್ಧಾಂತಗಳನ್ನೂ) ರೂಪಿಸುವುದು (೩) ಮುಂದೆ ದೊರೆಯುವ ಮಾಹಿತಿಯ ಹಿನ್ನೆಲೆಯಲ್ಲಿ ಅವನ್ನು ಪರಿಷ್ಕರಿಸುವುದು ಅಥವ ಹೊಸ ವಾದಗಳನ್ನು ರೂಪಿಸುವುದು – ಇವು ವಿಜ್ಞಾನ ವಿಧಾನದ ವಿಶಿಷ್ಟ ಲಕ್ಷಣಗಳು. ಈ ಎಲ್ಲಾ ಲಕ್ಷಣಗಳು ಇಲ್ಲದ ವಿಧಾನದಿಂದ ರೂಪುಗೊಂಡ ಶಾಸ್ತ್ರಗಳನ್ನು ‘ಶಾಸ್ತ್ರ’ ಎಂದು ಕರೆಯಬೇಕೇ ವಿನಾ ಆಧುನಿಕ ವಿಜ್ಞಾನ ಎಂದು ಕರೆಯಕೂಡದು.

ವಿಜ್ಞಾನ ವಿಧಾನದ ವಿಶಿಷ್ಟತೆಗಳ ಪೈಕಿ ಯಾವುದೋ ಒಂದೆರಡನ್ನು ಸಂದರ್ಭೋಚಿತವಾಗಿ ಉಪಯೋಗಿಸಿಕೊಂಡು ಆಧುನಿಕ ವಿಜ್ಞಾನದ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವ, ವಿಜ್ಞಾನದ ಮುಖವಾಡ ಧರಿಸಿ ಜನಮನ್ನಣೆ ಗಳಿಸಲು ಯತ್ನಿಸುವವು ‘ಹುಸಿವಿಜ್ಞಾನ’ಗಳು. ಈ ಕುರಿತು ನಿಜವಾದ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸುವ ಕೆಲಸ ಆಗಲೇಬೇಕು.

ವೈಜ್ಞಾನಿಕ ಮನೋಧರ್ಮ

ವಿಜ್ಞಾನ ವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ತಳೆದಿರಲೇಬೇಕಾದ ಮನೋಭಾವವೇ ವೈಜ್ಞಾನಿಕ ಮನೋಧರ್ಮ ಎಂದು ಈ ಮೊದಲೇ ವ್ಯಾಖ್ಯಾನಿಸಲಾಗಿದೆ. ಈ ಮನೋಧರ್ಮ ಉಳ್ಳವರ ಲಕ್ಷಣಗಳೇನು? ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ವೈಜ್ಞಾನಿಕ ಮನೋಧರ್ಮ ಬೇಳೆಸಲು ಯುಕ್ತ ತಂತ್ರ ರೂಪಿಸಬಹುದು. ಎಂದೇ, ಅವುಗಳತ್ತ ಗಮನ ಹರಿಸಿ,

(೧) ಸತ್ಯ ನಿಷ್ಠೆ. (ಪ್ರಿಯವಾದ ಸತ್ಯಕ್ಕೆ ಮಾತ್ರವಲ್ಲ. ೧೦ ಗಂಟೆ ಅಂದರೆ ೧೦.೦೧ ಅಥವ ೦೯.೫೯ ಅಲ್ಲ). ತಮ್ಮ ಕಠೋರ ಸತ್ಯನಿಷ್ಠೆಯಿಂದಾಗಿ ‘ರಾಜ ಕೋಪಕ್ಕೆ ಅಥವ ಧರ್ಮಗುರು ಕೋಪಕ್ಕೆ’ ತುತ್ತಾದ ವಿಜ್ಞಾನಿಗಳೂ ಇದ್ದಾರೆ. ನೈಸರ್ಗಿಕ ನಿಯಮಗಳು ಅನುಲ್ಲಂಘನೀಯವಾದ್ದರಿಂದ ಅವುಗಳ ಪೈಕಿ ಅನೇಕವನ್ನು ಸತ್ಯನಿಷ್ಠರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಜಾಗತಿಕ ತಾಪಮಾನ ಏರಿಕೆಯ ಕುರಿತು ವಿಭಿನ್ನ ‘ವಿಜ್ಞಾನಿ’ಗಳು ನೀಡಿರುವ ಹೇಳಿಕೆಗಳನ್ನು ಅಧ್ಯಯಿಸಿದರೆ ಈ ಹೇಳಿಕೆಯ ಸತ್ಯತೆಯ ಅರಿವಾಗುತ್ತದೆ.

(೨) ವಿಷಯ ನಿಷ್ಠೆ. ವಿಷಯವನ್ನು ಅದು ಹೇಗಿದೆಯೋ ಹಾಗೆಯೇ ಗ್ರಹಿಸುವಿಕೆ ನಿಜವಾಗಿ ವೈಜ್ಞಾನಿಕ ಮನೋಧರ್ಮ ಉಳ್ಳವರಿಂದ ಮಾತ್ರ ಸಾಧ್ಯ. ಉಳಿದವರು ತಮ್ಮ ‘ಮೂಗಿನ ನೇರಕ್ಕೆ’ ವಿಷಯವನ್ನು ಗ್ರಹಿಸುತ್ತಾರೆ.

(೩) ತೆರೆದ ಮನಸ್ಸು. ಯುಕ್ತ ಸಾಕ್ಷ್ಯಾಧಾರ ಇದ್ದರೆ ವೈಜ್ಞಾನಿಕ ಮನೋಧರ್ಮ ಉಳ್ಳವ ತನ್ನ ತೀರ್ಮಾನಗಳನ್ನು  ಬದಲಿಸಲು ಹಿಂಜರಿಯುವುದಿಲ್ಲ.

ಮೇಲ್ನೋಟಕ್ಕೆ ಅತೀ ಸರಳ ಎಂದು ಕಾಣುವ ಈ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವುದು ಸುಲಭವಲ್ಲ. ವೈಜ್ಞಾನಿಕ ಮನೋಧರ್ಮ ತಳೆಯಲು ಇರುವ ಅಡಚಣೆಗಳು ಇಂತಿವೆ:

  • ವೈಯಕ್ತಿಕ ಹಿತಾಸಕ್ತಿ/ ಸ್ವಹಿತಾಸಕ್ತಿ/ ಪಟ್ಟಭದ್ರ ಹಿತಾಸಕ್ತಿ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಜಾಹೀರಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ‘ಹಿತಾಸಕ್ತಿ’ಗಳ ಪ್ರಾಬಲ್ಯದ ಅರಿವು ಆಗುತ್ತದೆ.
  • ಮತೀಯ ನಂಬಿಕೆಗಳು. ಉದಾ: ಗಂಗಾ ಪಾನ ತುಂಗಾ ಸ್ನಾನ ಮೋಕ್ಷಪ್ರದಾಯಕಗಳು. (ಇಂದಿನ ಕಲುಷಿತ ಗಂಗೆ ಮತ್ತು ತುಂಗೆಯರು ‘ಸ್ವರ್ಗಾರೋಹಣ’ಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ.)
  • ಅಧಿಕಾರೀ ವಾಣಿಗೆ ನಿಷ್ಠೆ. ಹೇಳಿಕೆಯ ಸತ್ಯಾಸತ್ಯತೆಗಿಂತ ಯಾರು ಹೇಳಿದರು ಎಂಬುದಕ್ಕೆ ಪ್ರಾಧಾನ್ಯ ನೀಡುವ ಪ್ರವೃತ್ತಿ.
  • ಆಪ್ತ/ಮಿತ್ರ ವಾಣಿಗೆ ನಿಷ್ಠೆ. ನಮ್ಮ ಆಪ್ತರು ನಮ್ಮ ಹಿತಚಿಂತಕರೂ ಆಗಿರುವುದರಿಂದ ಅವರು ನಮಗೆ ಹಿತ ಉಂಟುಮಾಡುವ ಸತ್ಯವನ್ನೇ ಹೇಳುತ್ತಾರೆ ಎಂಬ ನಂಬಿಕೆ.
  • ವಿಜ್ಞಾನದ ಆಧುನಿಕ ವ್ಯಾಖ್ಯಾನದ ಅರಿವು ಇಲ್ಲದಿರುವುದು. ವಿಜ್ಞಾನವು ವ್ಯವಸ್ಥಿತ ಜ್ಞಾನ ಸಂಚಯ ಎಂಬುದು ನಿಜವಾದರೂ ವ್ಯವಸ್ಥಿತವಾಗಿರುವುದೆಲ್ಲ ವಿಜ್ಞಾನವಲ್ಲ.

ಮೂಢನಂಬಿಕೆಗಳು

ಯಾವುದು ಮೂಢನಂಬಿಕೆ ಅಥವ ಅಂಧಶ್ರದ್ಧೆ? ವೈಜ್ಞಾನಿಕ ವೈಚಾರಿಕತೆಯ ಅಥವ ವಿಜ್ಞಾನ ವಿಧಾನದ ನಿಕಷಕ್ಕೆ ಒರೆಹಚ್ಚದೆಯೇ ಸ್ವೀಕರಿಸಿರುವ ನಂಬಿಕೆಗಳೆಲ್ಲವೂ ಮೂಢನಂಬಿಕೆಗಳೇ ಆಗಿರುತ್ತವೆ. ಅಂದಮಾತ್ರಕ್ಕೆ ಮೂಢನಂಬಿಕೆಗಳೆಲ್ಲವೂ ಹಾನಿಕಾರಕಗಳು ಎಂದು ಅರ್ಥೈಸಕೂಡದು. ಅವುಗಳಲ್ಲಿ ಕೆಲವು ವೈಜ್ಞಾನಿಕ ತಪಾಸಣೆಯಲ್ಲಿ ಸರಿಯಾದವು ಎಂದು ಸಾಬೀತಾಗುವ ಸಾಧ್ಯತೆಯೂ ಇದೆ. ಈ ರೀತಿ ಸಾಬೀತು ಪಡಿಸಿದವು ‘ಮೂಢನಂಬಿಕೆ’ ಶಿರೋನಾಮೆಯನ್ನು ಕಳೆದುಕೊಳ್ಳುತ್ತವೆ. ವೈಜ್ಞಾನಿಕ ಮನೋಧರ್ಮ ತಳೆಯದೇ ಇರುವವರು ಮತ್ತು ವೈಜ್ಞಾನಿಕ ಮನೋಧರ್ಮವನ್ನು ತಾವು ಅಧ್ಯಯಿಸುತ್ತಿರುವ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿರುವ ‘ವಿಜ್ಞಾನಿಗಳು/ವಿಜ್ಞಾನ ವಿದ್ಯಾರ್ಥಿಗಳು ಮೂಢನಂಬಿಕೆಗಳ ದಾಸರಾಗಿರುತ್ತಾರೆ.

ಶಾಲಾಮಟ್ಟದಲ್ಲಿ ವಿಜ್ಞಾನ ವಿಧಾನದ ತರಬೇತಿಗೆ ಆದ್ಯತೆ ನೀಡಿದರೆ, ವಿಜ್ಞಾನ ಶಿಕ್ಷಕರು ಅನುಕರಣಯೋಗ್ಯ ಮಾದರಿ ತಾವೇ ಆದರೆ, ಹಾನಿಕಾರಕ ಮೂಢನಂಬಿಕೆಗಳಿಂದಾಗುವ ಹಾನಿಯನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲದ ಸಾಕ್ಷ್ಯಾಧಾರ ಸಹಿತ ಜನಸಾಮಾನ್ಯರಿಗೆ ತಲುಪಿಸಬಲ್ಲ ಜನಾಂದೋಲನಗಳನ್ನು ಹುಟ್ಟುಹಾಕಿದರೆ ಪರಿಸ್ಥಿತಿ ಸುಧಾರಣೆ ಆದೀತು.

This entry was posted in ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s