ಕಲಿಕೆಯ ಕುರಿತು ಎಲ್ಲರೂ ತಿಳಿದಿರಬೇಕಾದದ್ದು

ಏಕಕೋಶ ಜೀವಿಯ ರೂಪದಲ್ಲಿ ಜೀವನವನ್ನು ಆರಂಭಿಸುವ ಮಾನವ ಕೊನೆಯ ಉಸಿರಿರುವ ತನಕ ಪ್ರತೀಕ್ಷಣ ಬದಲಾಗುತ್ತಲೇ ಇರುತ್ತಾನೆ ಎಂಬ ತಥ್ಯ ನಿಮಗೆ ತಿಳಿದೇ ಇದೆ. ಈ ಬದಲಾವಣೆಗಳು ದೇಹದ ಗಾತ್ರ, ಆರೋಗ್ಯ ಇವೇ ಮೊದಲಾದವಕ್ಕೆ ಮಾತ್ರ ಸೀಮಿತವಾಗಿಲ್ಲ. ವ್ಯಕ್ತಿಯ ಜ್ಞಾನ ಸಂಚಯ, ವ್ಯಕ್ತಿಯ ಕಾರ್ಯವಿಧಾನ, ವ್ಯಕ್ತಿಯಲ್ಲಿ ಕೋಪ, ಆನಂದ ಇವೇ ಮೊದಲಾದ ಭಾವಗಳನ್ನು ಉದ್ದೀಪಿಸುವ ಉದ್ದೀಪಕಗಳ ಸ್ವರೂಪ, ಈ ಭಾವಗಳನ್ನು ವ್ಯಕ್ತಿ ಅಭಿವ್ಯಕ್ತಿಗೊಳಿಸುವ ವಿಧಾನಗಳು ಇವನ್ನೂ ಒಳಗೊಂಡಂತೆ ಇನ್ನೂ ಅನೇಕ ಅಸಂಖ್ಯ ಅಂಶಗಳು ಬದಲಾಗುತ್ತಲೇ ಇರುತ್ತವೆ. ಈ ಬದಲಾವಣೆಗಳ ಪೈಕಿ ಕೆಲವು ಅನೈಚ್ಛಿಕವಾಗಿ ಆಗುವ ಸ್ವಾಭಾವಿಕ ಬೆಳೆವಣಿಗೆಯ ಪರಿಣಾಮಗಳು, ಕೆಲವು ಉದ್ದೇಶಪೂರ್ವಕವಾಗಿ ಪಡೆದ ಅಥವ  ವ್ಯಕ್ತಿ ಬಯಸದೆಯೇ ಆಗುವ ಅನುಭವಗಳ ಪರಿಣಾಮಗಳು, ಕೆಲವು ಸ್ವಾಭಾವಿಕ ಬೆಳೆವಣಿಗೆ ಮತ್ತು ಅನುಭವಗಳ ಅನ್ಯೋನ್ಯಕ್ರಿಯೆಯ ಪರಿಣಾಮಗಳು. ಕಾರಣ ಏನೇ ಇರಲಿ, ಬದಲಾವಣೆ ಆಗುವುದು ಖಚಿತ. ಸ್ವಾಭಾವಿಕ ಬೆಳೆವಣಿಗೆಯ ಪರಿಣಾಮವಾಗಿ ಅನೈಚ್ಛಿಕವಾಗಿ ಆಗುವ ಬದಲಾವಣೆಗಳನ್ನು ‘ಪರಿಪಕ್ವನ (ಮಚ್ಯುರೇಷನ್)’ ಎಂದೂ ಅನುಭವಜನ್ಯ ಬದಲಾವಣೆಗಳನ್ನು ‘ಕಲಿಕೆ’ ಎಂದೂ ಉಲ್ಲೇಖಿಸುವುದು ಮನೋವಿಜ್ಞಾನದ ಸಂಪ್ರದಾಯ. ಪರಿಪಕ್ವನದ ಮೇಲೆ ಇರುವುದಕ್ಕಿಂತ ಹೆಚ್ಚಿನ ನಿಯಂತ್ರಣ ಕಲಿಕೆಯ ಮೇಲೆ ನಮಗೆ ಇದೆ. ಎಂದೇ, ಪೂರ್ವನಿಗದಿತ ಅವಧಿಯಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ಮುಂದಿನ ಪೀಳಿಗೆಯಲ್ಲಿ ಉಂಟುಮಾಡುವ ಸಲುವಾಗಿ ಕಲಿಕೆಗೆ, ವಿಶೇಷತಃ ಕ್ರಮನಿಷ್ಠ (ಫಾರ್ಮಲ್) ಕಲಿಕೆಗೆ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು ಎಂಬ ಪ್ರಶ್ನೆಯ ಉತ್ತರ ಸಮುದಾಯದಿಂದ ಸಮುದಾಯಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಎಂದೇ, ಈ ಕುರಿತು ಖಚಿತವಾದ ಸರ್ವಮಾನ್ಯವೂ ಸಾರ್ವದೇಶಿಕವೂ ಸಾವರ್ಕಾಲಿಕವೂ ಆದ ಉತ್ತರ ನೀಡಲು ಸಾಧ್ಯವಿಲ್ಲ. ಆದರೂ, ವ್ಯಕ್ತಿಗಳು ಹೇಗೆ ಕಲಿಯುತ್ತಾರೆ, ಕಲಿಸುವಾಗ ಅನುಸರಿಸಬೇಕಾದ ತತ್ವಗಳೇನು – ಇವೇ ಮೊದಲಾದ ಪ್ರಶ್ನೆಗಳಿಗೆ ಖಚಿತವಾದ ಸರ್ವಮಾನ್ಯವೂ ಸಾರ್ವದೇಶಿಕವೂ ಸಾವರ್ಕಾಲಿಕವೂ ಆದ ಉತ್ತರ ನೀಡಲು ಸಾಧ್ಯ. ಇವುಗಳ ಅರಿವು ಶಿಕ್ಷಕರಿಗಷ್ಟೇ ಅಲ್ಲ, ಪೋಷಕರಿಗೂ ಇರಬೇಕು.

ಕಲಿಕೆಯ ಸಾರ್ವತ್ರಿಕ ತತ್ವಗಳನ್ನು ತಿಳಯುವ ಮುನ್ನ ನಾವು ಹೇಗೆ ಕಲಿಯುತ್ತೇವೆ – ಈ ಕುರಿತು ವಿವೇಚಿಸಿ. ಜೀವನದಲ್ಲಿ ಈ ತನಕ ಕಲಿತಿರುವುದರ ಪೈಕಿ ಕೆಲವನ್ನು ಜ್ಞಾಪಿಸಿಕೊಳ್ಳಿ. ಅವನ್ನು ಹೇಗೆ ಕಲಿತಿರಿ ಎಂಬುದರ ಕುರಿತು ಆಲೋಚಿಸಿ. ನಾವು ಹೇಗೆ ಕಲಿಯುತ್ತೇವೆ ಎಂಬ ಪ್ರಶ್ನೆಯ ಉತ್ತರ ನಿಮಗೇ ಹೊಳೆಯುತ್ತದೆ. ಕೆಲವನ್ನು ವೀಕ್ಷಣೆಯಿಂದಲೂ ಕೆಲವನ್ನು ಕಾರ್ಯೋನ್ಮುಖರಾದಾಗ ದೊರೆತ ಅನುಭವಗಳಿಂದಲೂ ಕಲಿತಿರಲ್ಲವೇ? ಕೆಲವನ್ನು ಓದಿ ಅಥವ ಕೇಳಿ ಕಲಿತಿರುವುದೂ ನಿಜ. ಎಲ್ಲರೂ ಕಲಿಯುವುದು ಹೀಗೆಯೇ. ಕಲಿಯುವ ಈ ವಿಧಾನಗಳನ್ನು ಮನೋವಿಜ್ಞಾನಿಗಳು ಸೂಕ್ಷ್ಮವಾಗಿ ಅಧ್ಯಯನ ಮಾಡಿ ರೂಪಿಸಿದ ಕಲಿಕೆಯ ಸಿದ್ಧಾಂತಗಳನ್ನು ವಿಶ್ಲೇಷಿಸಿ ಎಲ್ಲರೂ ತಿಳಿದಿರಬೇಕಾದ ಕಲಿಕೆಯ ಸಾರ್ವತ್ರಿಕ ತತ್ವಗಳನ್ನು ಹೊರಸೆಳೆಯಲು ಸಾಧ್ಯ ಇವು ಯಾವುದೇ ಒಂದು ಸಿದ್ಧಾಂತದ ಅಥವ ಪಂಥದ ಕೊಡುಗೆಗಳಲ್ಲ.  ಎಲ್ಲ ಸಿದ್ಧಾಂತ ಮತ್ತು ಪಂಥಗಳಿಂದ ಹೆಕ್ಕಿ ತೆಗೆದ ಅನುಷ್ಠಾನಯೋಗ್ಯ ತತ್ವಗಳು. ಇವುಗಳ ಪೈಕಿ ಬಲು ಮುಖ್ಯ ಎಂದು ನಾನು ಪರಿಗಣಿಸಿರುವ ಕೆಲವನ್ನು ಶಾಸ್ತ್ರೀಯ ಪದಗಳನ್ನು ಬಳಸದೆಯೇ ವಿವರಿಸುವ ಪ್ರಯತ್ನ ಮಾಡುತ್ತೇನೆ.

1. ನಿಜವಾಗಿ ಕಲಿತದ್ದನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಿಲ್ಲ.

ಕಲಿತದ್ದು ಮನೋಗತವಾಗಿದ್ದರೆ (ತಿಂದ ಆಹಾರ ದೇಹಗತವಾಗುವಂತೆ) ಅದನ್ನು ಮರೆಯುವ ಸಾಧ್ಯತೆ ಬಲು ಕಮ್ಮಿ. ಯಾವುದನ್ನೇ ಆಗಲಿ, ಕಲಿತ ನಂತರ ಬಹುಕಾಲ ಉಪಯೋಗಿಸದೇ ಇದ್ದರೆ ಜ್ಞಾಪಿಸಿಕೊಳ್ಳುವುದು ತುಸು ಕಷ್ಟ. ಪುನಃಕಲಿಕೆ ತಂತ್ರದಿಂದ ಮರೆತಂತೆ ಭಾಸವಾಗುವ ಕಲಿತ ವಿಷಯವನ್ನು ಸಂಪೂರ್ಣವಾಗಿ ಮನಃಪಟಲದಲ್ಲಿ ಮೂಡಿಸಿಕೊಳ್ಳಲು ಸಾಧ್ಯ. ದೈಹಿಕ ಕುಶಲತೆಗಳಿಗೆ ಸಂಬಂಧಿಸಿದಂತೆ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಸುಲಭವಾಗಿ ಪರೀಕ್ಷಿಸಬಹುದು. ತನ್ನ ಸ್ವಭಾವಕ್ಕೆ ತಕ್ಕುದಾದ ವಿಧಾನದಿಂದ ವಿಷಯ ಜ್ಞಾನ ಅಥವ ಕುಶಲತೆ ಗಳಿಸಿದರೆ, ಗಳಿಸಿದ್ದನ್ನು ಮನೋಗತ ಮಾಡಿಕೊಳ್ಳಲೋಸುಗ ಅಥವ ಸ್ವಾಂಗೀಕರಿಸಿಕೊಳ್ಳಲೋಸುಗ ತನ್ನ ಸ್ವಭಾವಕ್ಕೆ ತಕ್ಕುದಾದ ವಿಧಾನದಿಂದ ಅಧ್ಯಯಿಸಿದರೆ, ಅದನ್ನು ಅಗತ್ಯವಾದಾಗ ಜ್ಷಾಪಿಸಿಕೊಳ್ಳಲು ಅನುಸರಿಸಬೇಕಾದ ತಂತ್ರಗಳನ್ನು ಅಧ್ಯಯಿಸುತ್ತಿರುವಾಗಲೇ ರೂಪಿಸಿಕೊಂಡರೆ, ಕಲಿತದ್ದನ್ನು  ಸಾಧ್ಯವಾದಗಲೆಲ್ಲ ಮೆಲುಕು ಹಾಕುತ್ತಿದ್ದರೆ ನೆನಪಿಸಿಕೊಳ್ಳುವುದು ಸುಲಭ. ಶಾಲೆಯಲ್ಲಿ ನಿಜವಾದ ಕಲಿಕೆ ಜರಗದೇ ಇದ್ದರೆ ಕಲಿತಿದ್ದೇವೆ ಎಂದು ಭ್ರಮಿಸಿದ್ದು ಬಲು ಬೇಗ ನಿಜವಾಗಲೂ ಮರೆತು ಹೋಗುತ್ತದೆ. ತದನಂತರ ಅದನ್ನು ಯಾವ ವಿಧಾನದಿಂದಲೂ ಜ್ಞಾಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

2. ಒಬ್ಬನಿಗೆ ಎಲ್ಲವನ್ನೂ ಯಶಸ್ವಿಯಾಗಿ ಕಲಿಸಬಲ್ಲ ಒಂದು ವಿಧಾನ ಇಲ್ಲ. ಒಂದು ವಿಷಯವನ್ನು ಎಲ್ಲರಿಗೂ ಯಶಸ್ವಿಯಾಗಿ ಕಲಿಸಬಲ್ಲ ಒಂದು ವಿಧಾನ ಇಲ್ಲ. ಎಲ್ಲರೂ ಎಲ್ಲವನ್ನೂ ಯಶಸ್ವಿಯಾಗಿ ಕಲಿಯುವಂತೆ ಮಾಡಬಲ್ಲ ಒಂದು ವಿಧಾನವಂತೂ ಇಲ್ಲವೇ ಇಲ್ಲ.

ಎಂದೇ, ಯಾವುದೇ ವಿದ್ಯಾಲಯದಲ್ಲಿ, ಅದು ಎಷ್ಟೇ ಖ್ಯಾತವಾದದ್ದು ಆಗಿರಲಿ, ಎಲ್ಲ ವಿದ್ಯಾರ್ಥಿಗಳ ಸಾಧನೆಯ ಮಟ್ಟ ಒಂದೇ ಆಗಿರುವುದಿಲ್ಲ. ಕಲಿಯುವವನ ಲಕ್ಷಣ. ಕಲಿಸಬೇಕಾದ್ದರ ಲಕ್ಷಣ, ಕಲಿಕೆಯ ಉದ್ದೇಶ, ಕಲಿಸಲು ಲಭ್ಯವಿರುವ ಸಂಪನ್ಮೂಲಗಳು, ಕಲಿಯುವ ಪರಿಸರ, ಕಲಿಸುವವನ ಸಾಮರ್ಥ್ಯ – ಇವನ್ನು ಗಮನದಲ್ಲಿ ಇಟ್ಟುಕೊಂಡು ಕಲಿಕೆಯ ಸಾರ್ವತ್ರಿಕ ತತ್ವಗಳ ಪೈಕಿ ಯಾವ್ಯಾವುದನ್ನು ಎಷ್ಟೆಷ್ಟರ ಮಟ್ಟಿಗೆ ಅನುಸರಿಸಬೇಕೆಂಬುದನ್ನು ಕಲಿಸುವವ ತಾನೇ ನಿರ್ಧರಿಸಿ, ತನ್ನದೇ ಆದ ಕಲಿಸುವ ವಿಧಾನ ರೂಪಿಸಿಕೊಳ್ಳಬೇಕು. ವೈಯಕ್ತೀಕರಿಸಿದ ಬೋಧನ ವ್ಯವಸ್ಥೆಯಲ್ಲಿ ಇದು ಸಾಧ್ಯವಾದೀತೇ ವಿನಾ ಸಮೂಹಕ್ಕೆ ಬೋಧಿಸುವ ವ್ಯವಸ್ಥೆಯಲ್ಲಿ ಅಲ್ಲ.

3. ಪರಿಪಕ್ವನ, ಕಲಿಯಲೇಬೇಕೆಂಬ ಅದಮ್ಯ ಬಯಕೆ, ಈಗಾಗಲೇ ಕಲಿತಿರಬೇಕಾದ್ದರ ಪರಿಪೂರ್ಣ ಕಲಿಕೆ – ಈ ಮೂರೂ ಅಂಶಗಳ ದೃಷ್ಟಿಯಿಂದ ಕಲಿಯಲು ಸಿದ್ಧನಾಗಿರದವನಿಗೆ ಏನನ್ನೇ ಆಗಲಿ, ಯಾವ ವಿಧಾನದಿಂದಲೇ ಆಗಲಿ ಕಲಿಸಲು ಸಾಧ್ಯವಿಲ್ಲ.

ವ್ಯಕ್ತಿಯ ದೈಹಿಕ ಮತ್ತು ಬೌದ್ಧಿಕ ಪಕ್ವತೆಯ ಮಟ್ಟಕ್ಕೆ ತಕ್ಕುದಾದದ್ದನ್ನು ಕಲಿಸಿದರೆ ಅವನು ಯಶಸ್ವಿಯಾಗಿ ಕಲಿಯಲು ಸಾಧ್ಯ. ಎಂದೇ, ಕಲಿಯಬೇಕಾದ್ದನ್ನು ಕಲಿಯಲು ಅಗತ್ಯವಾದ ಪಕ್ವತೆಯ ಮಟ್ಟವನ್ನು ಸ್ವಾಭಾವಿಕ ಬೆಳೆವಣಿಗೆಯ ಮೂಲಕ ವ್ಯಕ್ತಿ ತಲುಪಿದ ಬಳಿಕವೇ ಅದನ್ನು ಕಲಿಸಬೇಕು. ಅದಕ್ಕೆ ಮೊದಲೇ ಕಲಿಸಲು ಯತ್ನಿಸುವುದು ಮೂರ್ಖತನ. ೨ ವರ್ಷದ ಮಗುವಿಗೆ ಕನ್ನಡ ವರ್ಣಮಾಲೆಯನ್ನು ಬರೆಯಲು ಕಲಿಸಲು ಸಾಧ್ಯವೇ? ೩ನೇ ತರಗತಿಯಲ್ಲಿ ರಾಸಾಯನಿಕ ಬಂಧಗಳನ್ನು ಕಲಿಸಲು ಸಾಧ್ಯವೇ? ಯುಕ್ತ ಅನುಭವಗಳನ್ನು ಒದಗಿಸುವುದರಿಂದ ಮಾನಸಿಕ ಬೆಳೆವಣಿಗೆಯ ಸ್ವಾಭಾವಿಕ ವೇಗವನ್ನೂ ಯುಕ್ತ ಆಹಾರ-ವ್ಯಾಯಾಮದಿಂದ ದೈಹಿಕ ಬೆಳೆವಣಿಗೆಯ ಸ್ವಾಭಾವಿಕ ವೇಗವನ್ನೂ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಬಹುದು.

ಕಲಿಯಬೇಕಾದ್ದನ್ನು ಕಲಿಯಲೇಬೇಕೆಂಬ ಅದಮ್ಯ ಬಯಕೆ, ಅರ್ಥಾತ್ ಅಂತರಂಗದಿಂದ ಮೂಡಿಬಂದ ಪ್ರೇರಣೆ ಇರುವ ವ್ಯಕ್ತಿ ಏಕಾಗ್ರಚಿತ್ತದಿಂದ ಕಲಿಯತೊಡಗುವುದರಿಂದ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಬಾಹ್ಯ ಪ್ರೇರಕಗಳಿಂದ (ಉದಾ: ಶಿಕ್ಷೆ-ಬಹುಮಾನ, ಹೊಗಳಿಕೆ-ತೆಗಳಿಕೆ, ಭಯ ಇತ್ಯಾದಿ) ಪ್ರೇರಿತರಾಗಿ ಕಲಿಯತೊಡಗುವವರು ಅಪೇಕ್ಷಿತ ವೇಗದಲ್ಲಿ ಕಲಿಯುವ ಸಾಧ್ಯತೆಯೂ ಕಮ್ಮಿ, ಆಂತರಿಕ ಪ್ರೇರಣೆ ಇರುವವರಷ್ಟು ಸಾಧನೆ ಮಾಡುವ ಸಾಧ್ಯತೆಯೂ ಕಮ್ಮಿ. ಬಾಹ್ಯಪ್ರೇರಕದ ಅನುಪಸ್ಥಿತಿಯಲ್ಲಿ ಇವರು ಕಲಿಕೆಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು. ಬಾಹ್ಯ ಪ್ರೇರಕದಿಂದಾಗಿ ಕಲಿಯಲಾರಂಭಿಸಿದವ ಕಲಿಕಾ ಪ್ರಕ್ರಿಯೆ ಹಿತಕರ ಅನುಭವ ಒದಗಿಸಿದರೆ ಮುಂದೆ ಬಾಹ್ಯ ಪ್ರೇರಕ ಇಲ್ಲದೇ ಇದ್ದರೂ ಸ್ವಪ್ರೇರಣೆಯಿಂದ ಕಲಿಕೆಯನ್ನು ಮುಂದುವರಿಸುವ ಸಾಧ್ಯತೆಯೂ ಇದೆ.

ಯಾವುದನ್ನೇ ಆಗಲಿ ಕಲಿಯುವ ಮುನ್ನ ಕಲಿತಿರಲೇ ಬೇಕಾದದ್ದು ಏನೋ ಇರುತ್ತದೆ. ಇದನ್ನು ಕಲಿತಿರದವರು ಕಲಿಕೆಯಲ್ಲಿ ಯಶಸ್ವಿಗಳಾಗುವುದಿಲ್ಲ. ಉದಹಾರಣೆ: ೫ನೇ ತರಗತಿಯಲ್ಲಿ ಕಲಿಯಬೇಕಾದ್ದನ್ನು ಪರಿಪೂರ್ಣವಾಗಿ ಕಲಿತವರು ೬ನೇ ತರಗತಿಯಲ್ಲಿ ಕಲಿಯಬೇಕಾದ್ದನ್ನು ಚೆನ್ನಾಗಿ ಕಲಿಯುಬಲ್ಲರೇ ವಿನಾ ಕಲಿತಿರದವರಲ್ಲ..

ಎಂದೇ, ಈ ತತ್ವದಲ್ಲಿ ತಿಳಿಸಿದ ಮೂರೂ ಆಂಶಗಳ ದೃಷ್ಟಿಯಿಂದ ವ್ಯಕ್ತಿ ಸಿದ್ಧನಾಗಿದ್ದರೆ ಮಾತ್ರ ಕಲಿಸಬೇಕು ಅಥವ ವ್ಯಕ್ತಿಯನ್ನು ಸಿದ್ಧಪಡಿಸಿದ ಬಳಿಕವೇ ಕಲಿಸಬೇಕು.

4. ಕಲಿತ ನಂತರ ಮತ್ತು ಕಲಿಯುತ್ತಿರುವಾಗ ತನಗೆ ಹಿತಕರ ಅನುಭವ ಅಥವ ತೃಪ್ತಿ ಉಂಟುಮಾಡುವಂಥದ್ದನ್ನು ವ್ಯಕ್ತಿ ಯಶಸ್ವಿಯಾಗಿ ಕಲಿಯುತ್ತಾನೆ.

ಯಾವುದನ್ನು ಕಲಿತರೆ ತೃಪ್ತಿ ದೊರೆಯುತ್ತದೆ? – ನೀವೇ ಆಲೋಚಿಸಿ. ನಮ್ಮ ಯಾವುದೋ ಒಂದು ಆವಶ್ಯಕತೆಯನ್ನು ಪೂರೈಸುವಂಥದ್ದನ್ನು, ನಮಗೆ ಉಪಯುಕ್ತವಾದದ್ದನ್ನು ಕಲಿತರೆ ತೃಪ್ತಿಯಾಗುತ್ತದಲ್ಲವೇ? ಕಲಿಯಬೇಕಾದ್ದನ್ನು ಕಲಿತರೆ ಏನು ಲಾಭ ಎಂಬುದೇ ಗೊತ್ತಿಲ್ಲದಿದ್ದರೆ ಕಲಿಕೆಯಲ್ಲಿ ಆಸಕ್ತಿ ಮೂಡುವುದೆಂತು? ಕಲಿಯಬೇಕಾದ್ದನ್ನು ಕಲಿತರೆ ಮುಂದೆಂದೋ ಒಂದು ದಿನ ಉಪಯೋಗಕ್ಕೆ ಬಂದೀತು ಎಂಬ ಖಾತರಿ ಇದೆಯೇ? ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾಗಲೋಸುಗ ಇಷ್ಟೆಲ್ಲ ಶ್ರಮ ಪಡಬೇಕೇ? – ವಿದ್ಯಾರ್ಥಿಯ ಮನದಲ್ಲಿ ಮೂಡಬಹುದಾದ ಇಂಥ ಸಂಶಯಗಳನ್ನು ನಿವಾರಿಸಿ ಕಲಿಸಿದರೆ ಕಲಿಕೆ ಯಶಸ್ವಿಯಾಗಿ ಜರಗುವ ಸಾಧ್ಯತೆ ಹೆಚ್ಚು. ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಕಲಿಸಿದರೆ ಆಗುವ ಲಾಭವನ್ನೂ ಈ ತತ್ವ ಸೂಚಿಸುತ್ತದೆ.

5. ಒಬ್ಬೊಬ್ಬರು ಒಂದೊಂದು ವೇಗದಲ್ಲಿ  ಕಲಿಯುತ್ತಾರೆ. ಎಂದೇ, ಪ್ರತೀ ವ್ಯಕ್ತಿಯೂ ತನ್ನದೇ ಆದ ವೇಗದಲ್ಲಿ ಕಲಿಯಲು ಪ್ರಯತ್ನಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ.

ಅಂದ ಮೇಲೆ, ಎಲ್ಲವನ್ನೂ ಎಲ್ಲರೂ ಒಂದೇ ವೇಗದಲ್ಲಿ ಅಥವ ಒಂದೇ ಪ್ರಯತ್ನದಲ್ಲಿ ಕಲಿಯಬೇಕೆಂದು ಅಪೇಕ್ಷಿಸುವುದು ಸರಿಯೇ? ಕುರುಡ, ಕುಂಟ, ಹಸುಳೆ ಇವರೆಲ್ಲರೂ ನಿರ್ದಿಷ್ಟ ದೂರವನ್ನು ಒಂದೇ ಅವಧಿಯಲ್ಲಿ ಕ್ರಮಿಸಬೇಕು ಎಂದು ಅಪೇಕ್ಷಿಸಿದರೆ ಅದು ಈಡೇರೀತೇ? ಪ್ರತಿಯೊಬ್ಬನೂ ತನಗೆ ತಕ್ಕುದಾದ ವೇಗದಲ್ಲಿ ಕಲಿಯಲು, ತನಗೆ ಅಗತ್ಯವಿರುವಷ್ಟು ಬಾರಿ ಅಭ್ಯಾಸ ಮಾಡಲು ಅವಕಾಶ ಒದಗಿಸಿದರೆ ಮಾತ್ರ ಎಲ್ಲರೂ ಸುಶಿಕ್ಷಿತರಾಗಲು ಸಾಧ್ಯ. ಕುಶಲತೆಗಳ ಕಲಿಕೆಯ ಕ್ಷೇತ್ರದಲ್ಲಿ ಈ ತತ್ವದ ಅನುಷ್ಠಾನ ಅನಿವಾರ್ಯ. ಶಿಕ್ಷಣವನ್ನು ವೈಯಕ್ತೀಕರಿಸಬೇಕಾದ್ದರ ಅನಿವಾರ್ಯತೆಯನ್ನು ಈ ತತ್ವ ಸೂಚಿಸುತ್ತದೆ.

6. ಏನನ್ನಾದರೂ ಕಲಿಯುತ್ತಿರುವಾಗ ವ್ಯಕ್ತಿಗೆ ಯುಕ್ತ ಸಮಯದಲ್ಲಿ ಯುಕ್ತ ಪ್ರೋತ್ಸಾಹ ದೊರೆತರೆ ಆತ ಹೆಚ್ಚಿನ ಹುಮ್ಮಸ್ಸಿನಿಂದ ಕಲಿಯುವುದನ್ನು ಮುಂದುವರಿಸುತ್ತಾನೆ.

ಪುರಸ್ಕಾರ, ಹೊಗಳಿಕೆ, ಗೆಲುವಿನ ಅನುಭವ ಒದಗಿಸುವುದು, ಮಾಡಿದ್ದು ಸರಿಯಾಗಿದೆ ಅಥವ ಸಾಧನೆಯ ಪಥದಲ್ಲಿ ಸರಿಯಾಗಿ ಮುಂದುವರಿಯುತ್ತಿರುವೆ ಎಂಬ ಅರಿವು ಮೂಡಿಸುವುದು, ಮೂರ್ತ ಬಹುಮಾನ, ಮೆಚ್ಚುಗೆ ಇವೇ ಮೊದಲಾದವು ಪ್ರೋತ್ಸಾಹಕಗಳು. ತಪ್ಪು ಮಾಡಿದಾಗ ಅದನ್ನು ತಿಳಿಸಬೇಕಾದದ್ದು ಅನಿವಾರ್ಯವೇ ವಿನಾ ಶಿಕ್ಷಿಸುವುದು ಅನಿವಾರ್ಯವಲ್ಲ. ಅಪೇಕ್ಷಿತ ಪ್ರೋತ್ಸಾಹಕ ದೊರೆಯದೇ ಇರುವುದೂ ಒಂದು ರೀತಿಯ ಶಿಕ್ಷೆ ಎಂಬ ಅಂಶ ಕಲಿಸುವವರಿಗೆ ತಿಳಿದಿರಬೇಕು. ತಪ್ಪು ಮಾಡಿದಾಗ ಶಿಕ್ಷಿಸುವುದಕ್ಕಿಂತ ಸರಿಯಾದದ್ದನ್ನು ಮಾಡಿದಾಗ ಪ್ರೋತ್ಸಾಹಕ ನೀಡುವುದು ಅತೀ ಮುಖ್ಯ – ಇದು ಪ್ರಯೋಗ ಮತ್ತು ಅನುಭವಮುಖೇನ ಸಾಬೀತಾಗಿರುವ ತಥ್ಯ. ಕಲಿಯುತ್ತಿರುವಾಗ ವ್ಯಕ್ತಿ ಇಡುವ ಪ್ರತೀ ಸರಿಯಾದ ಹೆಜ್ಜೆಗೂ ತಕ್ಷಣವೇ ಯುಕ್ತ ಪ್ರೋತ್ಸಾಹಕ ನೀಡುವುದನ್ನು ಶಿಕ್ಷಕರು ಮತ್ತು ಪೋಷಕರು ಮರೆಯಕೂಡದು. ಪ್ರೋತ್ಸಾಹಕ ಅಥವ ಶಿಕ್ಷೆ ಎಂದು ಒಬ್ಬ ಪರಿಗಣಿಸಿದ್ದನ್ನು ಇನ್ನೊಬ್ಬ  ಪ್ರೋತ್ಸಾಹಕ ಅಥವ ಶಿಕ್ಷೆ ಎಂದು ಪರಿಗಣಿಸದೇ ಇರಬಹುದು ಎಂಬ ತಥ್ಯವನ್ನೂ ಮರೆಯಕೂಡದು. ಯುಕ್ತ ಪ್ರೋತ್ಸಾಹಕಗಳನ್ನು ಯುಕ್ತ ಸಮಯದಲ್ಲಿ ನೀಡಿ ವರ್ತನೆಯನ್ನು ಅಪೇಕ್ಷಿತ ರೀತಿಯಲ್ಲಿ ರೂಪಿಸಲು ಸಾಧ್ಯ ಎಂದು ಪ್ರಯೋಗಗಳು ಸಾಬೀತುಪಡಿಸಿವೆ. ‘ಪ್ರೋತ್ಸಾಹಕ ದೊರೆಯುವ ವರ್ತನೆಯನ್ನು ಬೇಗ ಕಲಿಯುತ್ತೇವೆ’ – ಇದು ಸದಾ ನೆನಪಿನಲ್ಲಿರಲಿ. ನಾವು (ಕೆಲವೊಮ್ಮೆ, ಪರೋಕ್ಷವಾಗಿ) ಮಕ್ಕಳೊಂದಿಗೆ ವ್ಯವಹರಿಸುವ ರೀತಿಯೇ ಅನುದ್ದೇಶಿತ ಪ್ರೋತ್ಸಾಹಕದಂತೆ ಕಾರ್ಯ ನಿರ್ವಹಿಸಿ ಅನಪೇಕ್ಷಿತ ವರ್ತನೆಗಳ ಕಲಿಕೆಗೆ ಕಾರಣವಾಗಲೂ ಬಹುದು.

7. ಕಾಲ ಸಾಮೀಪ್ಯದಿಂದಾಗಿ ಒಂದು ಉದ್ದೀಪಕಕ್ಕೆ (ಸ್ಟಿಮ್ಯುಲಸ್) ಸಹಜವಾಗಿ ಪ್ರಕಟವಾಗುತ್ತಿದ್ದ ಅನುಕ್ರಿಯೆ (ರೆಸ್ಪಾನ್ಸ್)  ಇನ್ನೊಂದು ಉದ್ದೀಪಕಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ.

ಇದ್ದಕ್ಕಿದ್ದಂತೆ ಬೆನ್ನ ಹಿಂದೆ ಕಿವಿ ಗಡಚಿಕ್ಕುವ ಶಬ್ದವಾದರೆ ಮಗು ಬೆಚ್ಚಿ ಅಳುವುದು ಸ್ವಾಭಾವಿಕ. ಆಕರ್ಷಕ ಬೊಂಬೆಯೊಂದನ್ನು ಮಗುವಿನ ಹತ್ತಿರ ಇಟ್ಟು, ಮಗು ಅದನ್ನು ಮುಟ್ಟುವಾಗ  ಬೆನ್ನ ಹಿಂದೆ ಕಿವಿ ಗಡಚಿಕ್ಕುವ ಶಬ್ದ ಮಾಡಿದರೂ ಮಗು ಬೆಚ್ಚಿ ಅಳುತ್ತದಲ್ಲವೇ? ಆ ಬೊಂಬೆಯನ್ನು ಮುಟ್ಟಲು ಯತ್ನಿಸಿದಾಗಲೆಲಲ್ಲ ಅದೇ ಅನುಭವ ಆಗುತ್ತಿದ್ದರೆ ಮುಂದೊಂದು ದಿನ ಬೊಂಬೆ ಕಂಡೊಡನೆ ಮಗು ಅಳಲಾರಂಭಿಸುವುದರಲ್ಲಿ ಸಂಶಯವಿಲ್ಲ. ಬೊಂಬೆಯನ್ನು ಮುಟ್ಟುವ ಪ್ರಯತ್ನ ಮತ್ತು ಕಿವಿ ಗಡಚಿಕ್ಕುವ ಶಬ್ದ – ಈ ಎರಡು ವಿದ್ಯಮಾನಗಳು ಹೆಚ್ಚುಕಮ್ಮಿ ಏಕಕಾಲದಲ್ಲಿ ಜರಗುತ್ತಿದ್ದದ್ದೇ ಇದಕ್ಕೆ ಕಾರಣ. ಇವೆರಡರ ಕಾಲ ಸಾಮೀಪ್ಯದಿಂದಾಗಿ ಕಿವಿ ಗಡಚಿಕ್ಕುವ ಶಬ್ದಕ್ಕೆ ಪ್ರಕಟವಾಗುತ್ತಿದ್ದ ಅನುಕ್ರಿಯೆಯೇ ಬೊಂಬೆಯನ್ನು ನೋಡಿದಾಗಲೂ ಪ್ರಕಟವಾಗಲಾರಂಬಿಸಿತು. ‘ಅಭ್ಯಾಸ ಬಲದಿಂದ’ ಮಾಡಬೇಕಾದ ಕ್ರಿಯೆಗಳನ್ನೂ ಕೆಲವು ಪ್ರಾಥಮಿಕ ಕೌಶಲಗಳನ್ನೂ ಈ ತಂತ್ರದಿಂದ ಕಲಿಸಲು ಸಾಧ್ಯ.  ಅನೇಕ ಅಸಹಜ ಭಯಗಳು ನಮಗರಿವಿಲ್ಲದೆಯೇ ಈ ರೀತಿಯಲ್ಲಿ ಬೇರೂರುತ್ತವೆ.

8. ಸಾಮಾಜಿಕ ವರ್ತನ ವಿನ್ಯಾಸಗಳು, ರೀತಿರಿವಾಜುಗಳು, ನಡೆನುಡಿಗಳು, ಉಡುಗೆತೊಡುಗೆಗಳ ಸಂಪ್ರದಾಯಗಳು, ಮೌಲ್ಯಗಳು, ನೈತಿಕತೆಯ ಪರಿಕಲ್ಪನೆಗಳು ಇವೇ ಮೊದಲಾದವನ್ನು ಇತರರನ್ನು ವೀಕ್ಷಿಸಿ ಕಲಿಯುತ್ತೇವೆ.

ಮಕ್ಕಳಿಗೆ ಏನು ಹೇಳುತ್ತೇವೆ ಎಂಬುದಕ್ಕಿಂತ ಅವರ ಎದುರು ನಾವೇನು ಮಾಡುತ್ತೇವೆ ಎಂಬುದೇ ಈ ಕಲಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಎಂದೇ, ತತ್ವದಲ್ಲಿ ನಮೂದಿಸಿದವುಗಳ ಕಲಿಕೆಗೆ ಅನುಕರಣಯೋಗ್ಯ ಜೀವಂತ ಮಾದರಿಗಳನ್ನು ಒದಗಿಸ ಬೇಕಾದದ್ದು ಅನಿವಾರ್ಯ. ಅನುಕರಣಯೋಗ್ಯ ಜೀವಂತ ಮಾದರಿಗಳು ಇಲ್ಲದೇ ಇದ್ದಾಗ ಮಕ್ಕಳಿಗೆ ಹೇಳುವ ನೀತಿಕತೆಗಳು, ಮಹಾಪುರುಷರ ಜೀವನಕತೆಗಳು ಇವೇ ಮೊದಲಾದವು ಅಪೇಕ್ಷಿತ ಪ್ರಭಾವ ಬೀರದಿರುವ ಸಾಧ್ಯತೆಯೇ ಹೆಚ್ಚು. ಬಸವಣ್ಣ, ಬುದ್ಧ, ಏಸುಕ್ರಿಸ್ತ ಮೊದಲಾದ ಯುಗಪುರುಷರು ಅನುಕರಣಯೋಗ್ಯ ಜೀವಂತ ಮಾದರಿಗಳು ಆಗಿದ್ದದ್ದರಿಂದ ಸಾಮಾಜಿಕ ಕ್ರಾಂತಿಗಳಾದವು. ಅವರ ನಂತರ ಅವರ ಬೋಧನೆಗಳ ಪ್ರಭಾವ ಕ್ರಮೇಣ ಕ್ಷೀಣಿಸಲು ಕಾರಣ – ಅನುಕರಣಯೋಗ್ಯ ಜೀವಂತ ಮಾದರಿ ಇಲ್ಲದೇ ಇದ್ದದ್ದು. ಮಕ್ಕಳು ಕಲಿಯಬೇಕೆಂದು ನಾವು ಅಪೇಕ್ಷಿಸುವ ವರ್ತನ ವಿನ್ಯಾಸಗಳನ್ನೇ ಆಗಲಿ, ಮೌಲ್ಯಗಳನ್ನೇ ಆಗಲಿ ನೋಡಿ ಕಲಿಯಲು ಅಗತ್ಯವಾದ ಜೀವಂತ ಮಾದರಿಗಳು ದುರದೃಷ್ಟವಷಾತ್ ಇಂದು ಇಲ್ಲದಿರುವುದೇ ಈ ಕ್ಷೇತ್ರದಲ್ಲಿ ಯುಕ್ತ ಕಲಿಕೆ ಜರಗದಿರುವುದಕ್ಕೆ ಕಾರಣ. ಸಾಧ್ಯವಾದಷ್ಟು ಮಟ್ಟಿಗೆ, ತಂದೆತಾಯಿಯರು ಮತ್ತು ಶಿಕ್ಷಕರು ತಾವೇ ಅನುಕರಣಯೋಗ್ಯ ಮಾದರಿ ಆಗಲು ಪ್ರಯತ್ನಿಸಿದರೆ ಪರಿಸ್ಥಿತಿಯಲ್ಲಿ ಸುಧಾರಣೆ ಆದೀತು ಎಂಬುದು ನನ್ನ ಅಭಿಮತ. ‘ಪ್ರಭಾವಿ’, ‘ಜನಪ್ರಿಯ’ ಎಂದು ಸಮಾಜ ಪರಿಗಣಿಸಿದವರನ್ನು ಅನುಕರಿಸುವುದು ಸಾಮಾನ್ಯ. ದುರದೃಷ್ಟವಶಾತ್, ಇಂದು ಹೀಗೆಂದು ಯಾರನ್ನು ಸಮಾಜ ಪರಿಗಣಿಸಿದೆಯೋ ಅವರು ಅನುಕರಣ ಯೋಗ್ಯರಲ್ಲ. ಅಷ್ಟೇ ಅಲ್ಲ ಬಹುಮಂದಿ ತಂದೆತಾಯಿಯರೂ ಶಿಕ್ಷಕರೂ ಅನುಕರಣಯೋಗ್ಯರಲ್ಲ.

9. ಕಲಿಯುವವನ ವಿಕಾಸದ ಮಟ್ಟ, ಕಲಿಯಬೇಕಾದ ವಸ್ತುವಿನ ಸ್ವರೂಪ – ಇವನ್ನು ಗಮನದಲ್ಲಿ ಇಟ್ಟುಕೊಂಡು ಕಲಿಯಬೇಕಾದ್ದನ್ನು ಸಜ್ಜುಗೊಳಿಸಿ ಒದಗಿಸಬೇಕು.

ಮನೋದೈಹಿಕ ಚಟುವಟಿಕೆಗಳ ಸರಣಿಯ ರೂಪದಲ್ಲಿ, ಚಿತ್ರಗಳ ಮಾಲಿಕೆಯ ರೂಪದಲ್ಲಿ, ಶಾಬ್ದಿಕ ವರ್ಣನೆಗಳ ರೂಪದಲ್ಲಿ ಕಲಿಯಬೇಕಾದ್ದನ್ನು ಸಜ್ಜುಗೊಳಿಸುವುದು ಸಾಧ್ಯ. ಈ ಮೂರು ವಿಧಾನಗಳ ಪೈಕಿ ಯಾವುದೇ ಎರಡನ್ನು ಅಥವ ಮೂರನ್ನೂ ಮಿಶ್ರಮಾಡಿ ಸಜ್ಜುಗೊಳಿಸಲೂ ಬಹುದು. ಕಲಿಯಬೇಕಾದ್ದನ್ನು ಹೇಗೆ ಸಜ್ಜುಗೊಳಿಸಿ ಒದಗಿಸಬೇಕು ಎಂಬುದನ್ನು ಕಲಿಯುವವನ ವಿಕಾಸದ ಮಟ್ಟ, ಕಲಿಯಬೇಕಾದ ವಸ್ತುವಿನ ಸ್ವರೂಪ – ಇವನ್ನು ಆಧರಿಸಿ ತೀರ್ಮಾನಿಸಬೇಕು.

10. ತಥ್ಯಗಳು (ಫ್ಯಾಕ್ಟ್ಸ್), ಪರಿಕಲ್ಪನೆಗಳು (ಕಾನ್ಸೆಪ್ಟ್ಸ್), ಸಾರ್ವತ್ರೀಕರಣಗಳು (ಜನರಲೈಸೇಷನ್ಸ್) – ಇವು ಯಾವುದೇ ಜ್ಞಾನಸಂಚಯದ ಅಂಗಗಳು. ಇವನ್ನು ಇದೇ ಕ್ರಮದಲ್ಲಿ ಕಲಿಯುವುದು ಒಳ್ಳೆಯದು.

ಬಹುಮಂದಿಗೆ ಇವುಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ. ತರಬೇತಿ ಪಡೆದ ಶಿಕ್ಷಕರ ಪೈಕಿಯೂ ಬಹು ಮಂದಿಗೆ ಈ ಕರಿತು ಗೊಂದಲವಿದೆ ಎಂಬುದು ನನ್ನ ಅಭಿಮತ. ತಥ್ಯಗಳನ್ನು ಗಳಿಸಬೇಕು ಅಥವ ಸ್ವಾನುಭವದಿಂದ ಸಂಗ್ರಹಿಸಬೇಕು, ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಬೇಕು, ಸಾರ್ವತ್ರೀಕರಣಗಳನ್ನು ಅನುಗಮನದಿಂದ (ಇನ್ ಡಕ್ಷನ್) ಪಡೆಯಬೇಕು. ಕಲಿಸುವವರು ತಥ್ಯಗಳನ್ನು ಸಂಗ್ರಹಿಸಲು ಅಥವ ಗಳಿಸಲು. ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು, ಸಾರ್ವತ್ರೀಕರಣಗಳನ್ನು ಪಡೆಯಲು ನೆರವಾಗಬಲ್ಲ ಕಲಿಕಾ ಪರಿಸರ ಸೃಷ್ಟಿಸಬೇಕು. ಪರಿಕಲ್ಪನೆಗಳನ್ನು ಕಲಿಸಲು ಸಾಧ್ಯವಿಲ್ಲ. ಅವನ್ನು ವ್ಯಕ್ತಿ ಸ್ವಶ್ರಮದಿಂದ ರೂಪಿಸಿಕೊಳ್ಳಬೇಕು. ಇದಕ್ಕೆ ನೆರವಾಗಬಲ್ಲ ಕಲಿಕಾ ಅನುಭವಗಳನ್ನು ಒದಗಿಸುವುದಷ್ಟೇ ಕಲಿಸುವವನ ಕಾರ್ಯ. ಪರಿಕಲ್ಪನೆಗಳನ್ನು ರೂಪಿಸಿಕೊಂಡರೆ ಸಾರ್ವತ್ರೀಕರಣಗಳನ್ನು ಅನುಗಮನದಿಂದ ಪಡೆಯುವುದು ಸುಲಭ. ಪರಿಕಲ್ಪನೆಗಳಿಗೆ ಸಂಬಂಧಿಸಿದ ವ್ಯಾಖ್ಯಾನಗಳನ್ನೂ ಸಾರ್ವತ್ರೀಕರಣಗಳನ್ನೂ ಕುರುಡು ಕಂಠಪಾಠ ಮಾಡಿದರೆ ನಿಜವಾದ ಕಲಿಕೆ ಜರಗುವುದಿಲ್ಲ.

11. ಸುಲಭದಿಂದ ಕ್ಲಿಷ್ಟಕ್ಕೆ, ಸರಳದಿಂದ ಸಂಕೀರ್ಣಕ್ಕೆ, ಜ್ಞಾತದಿಂದ ಅಜ್ಞಾತಕ್ಕೆ (ಗೊತ್ತಿರುವುದರಿಂದ ಗೊತ್ತಿಲ್ಲದ್ದಕ್ಕೆ) – ಈ ಘೋಷಣೆಗಳಿಗೆ ಅನುಸಾರವಾಗಿ ಕಲಿಕಾವಸ್ತುವನ್ನು ಸಂಘಟಿಸಿದ್ದರೆ ಕಲಿಯುವುದು ಸುಲಭ.

ಕಲಿಯಬೇಕಾದವುಗಳನ್ನು ಹೇಗೆ ಸಂಘಟಿಸಿದರೆ ಕಲಿಕೆ ಸುಲಭವೂ ಯಶಸ್ವಿಯೂ ಆಗುತ್ತದೆ ಎಂಬುದನ್ನು ಈ ಘೋಷಣೆಗಳು ಸೂಚಿಸುತ್ತವೆ.,

12. ಕಲಿಯುವವ ಸುಲಭವಾಗಿ ಆವಿಷ್ಕರಿಸಿ ಕಲಿಯಬಹುದಾದದ್ದನ್ನು ಯುಕ್ತ ಮಾರ್ಗದರ್ಶನ ನೀಡಿ ಆವಿಷ್ಕರಿಸಲು ಪ್ರೊತ್ಸಾಹಿಸಿದರೆ ಕಲಿಕೆ ಯಶಸ್ವಿಯಾಗಿ ಜರಗುತ್ತದೆ.

ಎಲ್ಲವನ್ನೂ ನಾವೇ ತಿಳಿಸುವುದರ ಬದಲು ಕೆಲವನ್ನು ಕಲಿಯುವವನೇ ಆವಿಷ್ಕರಿಸುವಂತೆ ಮಾಡಿದರೆ ಕಲಿಕೆಯ ಪ್ರಕ್ರಿಯೆಯಲ್ಲಿ ಆತ ಸಕ್ರಿಯ ಪಾತ್ರ ವಹಿಸುವುದಲ್ಲದೆ ಕಲಿಕೆ ಒಂದು ರೋಮಾಂಚನ ಉಂಟುಮಾಡುವ ಅನುಭವಾಗುತ್ತದೆ. ನಿಜವಾದ ಕಲಿಕೆ ಜರಗುತ್ತದೆ.

13. ಕೇಳಿ ಅಥವ ಓದಿ ಕಲಿಯಬೇಕಾದ್ದನ್ನು ಉಪನ್ಯಾಸ ಅಥವ ಲೇಖನ ರೂಪದಲ್ಲಿ ಒದಗಿಸ ಬೇಕಾಗಿರುವುದರಿಂದ ಈ ಮುಂದಿನ ತತ್ವಗಳಿಗನುಗುಣವಾಗಿ ಅವನ್ನು ಸಿದ್ಧಪಡಿಸಬೇಕು. ಸಾರ್ವತ್ರಿಕದಿಂದ ನಿರ್ದಿಷ್ಟಕ್ಕೆ ಎಂಬ ನಿಗಮನಾತ್ಮಕ ತರ್ಕ ಆಧಾರಿತ ಘೋಷಣೆ ಇವುಗಳ ತಿರುಳನ್ನು ಬಿಂಬಿಸುತ್ತದೆ.

  • ಕಲಿಯಬೇಕಾದ್ದನ್ನು ಮನೋಗತ ಮಾಡಿಕೊಳ್ಳಲು ಅಗತ್ಯವಾದ ಮನೋಭೂಮಿಕೆ ಸಿದ್ಧಪಡಿಸಬಲ್ಲ ಪೀಠಿಕೆಯೊಂದು ಆರಂಭದಲ್ಲಿ ಇರಬೇಕು. ಈಗ ಕಲಿಯಬೇಕಾದದ್ದರ ಉಪಯುಕ್ತತೆ ಸ್ಪಷ್ಟಪಡಿಸುವ ಅಂಶಗಳು, ಅದರ ಮೇಲೆ ಅವಧಾನ ಕೇಂದ್ರೀಕರಿಸಲು ನೆರವು ನೀಡಬಲ್ಲ ಕುತೂಹಲಜನಕ ಅಂಶಗಳು, ಅದನ್ನು ಮನೋಗತ ಮಾಡಿಕೊಳ್ಳಲು ನೆರವು ನೀಡಬಲ್ಲ ಪೂರ್ವಾನುಭವ ಅಥವ ಹಿಂದೆ ಕಲಿತದ್ದನ್ನು ಜ್ಞಾಪಿಸಬಲ್ಲ ಅಂಶಗಳು – ಇವಿಷ್ಟು  ಅದರಲ್ಲಿ ಇರಬೇಕು.
  • ತದನಂತರ, ಕಲಿಯಬೇಕಾದ್ದರ ಮುಖ್ಯಾಂಶ ಅಥವ ತಿರುಳನ್ನು ನೇರವಾಗಿ ತಿಳಿಸಬೇಕು.
  • ತದನಂತರ, ಮುಖ್ಯಾಂಶವನ್ನು ‘ಜೀರ್ಣಿಸಿಕೊಳ್ಳಲು’ ಅಗತ್ಯವಾದ ಪರಿಕಲ್ಪನೆಗಳನ್ನು ವಿಶ್ಲೇಷಿಸಿ ಅವನ್ನು (ಅಗತ್ಯವಿದ್ದರೆ ಉದಾಹರಣೆ ಸಹಿತ) ವಿವರಿಸಬೇಕು. ವಿವರಣೆಯಲ್ಲಿ ತಾರ್ಕಿಕ ನಿರರ್ಗಳತೆ ಇರಬೇಕು.
  • ಉಪನ್ಯಾಸದ ಅಥವ ಲೇಖನದ ವಿಭಿನ್ನ ಭಾಗಗಳ ನಡುವೆ ಸಹಜ ಹೊಂದಾಣಿಕೆಯೂ ತಾರ್ಕಿಕ ನಿರರ್ಗಳತೆಯೂ ಇರಬೇಕು.

ಕಲಿಕೆಗೆ ಸಂಬಂಧಿಸಿದಂತೆ ಇರುವ ಸಾರ್ವತ್ರಿಕ ತತ್ವಗಳ ಪೈಕಿ ಮುಖ್ಯ ಎಂದು ನಾನು ಪರಿಗಣಿಸಿರುವ ಕೆಲವನ್ನು ಈ ಲೇಖನದಲ್ಲಿ ಸೂಚ್ಯವಾಗಿ ತಿಳಿಸಿದ್ದೇನೆ. ಇವಿಷ್ಟು ತಿಳಿದಿದ್ದರೆ ಸಾಕು ಅನ್ನುವ ಭ್ರಮೆ ಬೇಡ. ಜೀವನದಾದ್ಯಂತ ನಿರಂತರವಾಗಿ ಜರಗುವ ಅಖಂಡ ಪ್ರಕ್ರಿಯೆ ಕಲಿಕೆ. ಎಂದೇ, ಇದರ ಕೆಲವು ಸೂಕ್ಷ್ಮಾಂಶಗಳನ್ನು ಸುದೀರ್ಘ ಅಧ್ಯಯನದಿಂದಲೂ ಮತ್ತು ಅನುಭವದಿಂದಲೂ ಅರ್ಥಮಾಡಿಕೊಳ್ಳ ಬಹುದೇ ವಿನಾ ಸಂಪೂರ್ಣ ಸ್ವರೂಪವನ್ನಲ್ಲ ಎಂಬ ಅರಿವು ಸದಾ ಜಾಗೃತವಾಗಿರಲಿ.

This entry was posted in ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s