ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೯

ಬಿಸಿ ವಾಯು ಎತ್ತ ಚಲಿಸುತ್ತದೆ?

ಒಂದು ಅಗಲ ಬಾಯಿಯ ಗಾಜಿನ ಬಾಟಲ್, ಒಂದು ಉಪಯೋಗಿಸಿದ ಅಂಚೆ ಕಾರ್ಡ್  ಅಥವ ಅಷ್ಟೇ ದಪ್ಪದ ಕಾಗದ, ಒಂದು ಪುಟ್ಟ (ಬಲು ಗಿಡ್ಡದಾದ) ಮೋಂಬತ್ತಿ, ಒಂದು ಧೂಪದ ಅಥವ ಗಂಧದ ಕಡ್ಡಿ ಅಥವ ಅದೇ ರೀತಿಯಲ್ಲಿ ಹೆಚ್ಚು ಹೊಗೆ ಉಗುಳುವ ಯಾವುದೇ ವ್ಯವಸ್ಥೆ-ಇವಿಷ್ಟನ್ನು ಸಂಗ್ರಹಿಸಿ.

ಅಂಚೆ ಕಾರ್ಡ್ ಅಥವ ದಪ್ಪನೆಯ ಕಾಗದವನ್ನು ಮುಂದೆ ಸೂಚಿಸಿದ ಅಳತೆಯ ಇಂಗ್ಲಿಷ್ ವರ್ಣಮಾಲೆಯ T ಅಕ್ಷರದ

ಆಕಾರದಲ್ಲಿ ಕತ್ತರಿಸಿ. T ಆಕೃತಿಯ ಲಂಬ ಬಾಹುವಿನ ಅಗಲ ಬಾಟಲಿನ ಒಳ ವ್ಯಾಸಕ್ಕಿಂತ ಸುಮಾರು ೨ ಮಿಮೀ ಕಡಿಮೆಯಾಗಿಯೂ ಉದ್ದವು ಬಾಟಲಿನ ಉದ್ದದ ಅರ್ಧಕ್ಕಿಂತ ತುಸ ಹೆಚ್ಚಾಗಿಯೂ ಇರಲಿ. ಅಡ್ಡ ಬಾಹುವಿನ ಉದ್ದ ಬಾಟಲಿನ ಬಾಯಿಯ ಹೊರ ವ್ಯಾಸಕ್ಕಿಂತ ಸುಮಾರು ೫ ಸೆಂಮೀ ಹೆಚ್ಚಾಗಿಯೂ ಇರಲಿ. ಬಾಟಲಿನ ಒಳಗೆ ತಳದ ಒಂದು ಬದಿಯಲ್ಲಿ ಮೋಂಬತ್ತಿಯನ್ನು ಭದ್ರವಾಗಿ ನಿಲ್ಲಿಸಿ. . ಗಂಧದ ಕಡ್ಡಿಯ ನೆರವಿನಿಂದ ಮೋಂಬತ್ತಿಯನ್ನು ಹೊತ್ತಿಸಿ. ಈ ಮೊದಲೇ ತಯಾರಿಸಿದ T ಆಕೃತಿಯನ್ನು ಚಿತ್ರದಲ್ಲಿ ತೋರಿಸಿದಂತೆ ಬಾಟಲಿನಲ್ಲಿ ನಿಲ್ಲಿಸಿ. ಈ ಆಕೃತಿ ಇಟ್ಟಿದ್ದರಿಂದಾಗಿ ಬಾಟಲಿನ ಮೇಲ್ಭಾಗದಲ್ಲಿ ಎರಡು ಪ್ರತ್ಯೇಕವಾದ ವಿಭಾಗಗಳು ಉಂಟಾಗುವುದನ್ನೂ, ಒಂದು ವಿಭಾಗದ ಕೆಳಗೆ ಉರಿಯುತ್ತಿರುವ ಮೋಂಬತ್ತಿ ಇರುವುದನ್ನೂ ಗಮನಿಸಿ.

ಅನುಕ್ರಮವಾಗಿ T ಆಕೃತಿ ಉಂಟು ಮಾಡಿದ ಎರಡೂ ವಿಭಾಗಗಳ ಮೇಲ್ತುದಿಯಲ್ಲಿ ಅರ್ಥಾತ್ ಬಾಟಲಿನ ಬಾಯಿಯ ಸಮೀಪದಲ್ಲಿ ಹೊಗೆ ಉಗುಳುತ್ತಿರುವ ಧೂಪದ ಅಥವ ಗಂಧದ ಕಡ್ಡಿಯನ್ನು ಹಿಡಿಯಿರಿ. ಮೋಂಬತ್ತಿಯ ಮೇಲಿರುವ ವಿಭಾಗ ಮತ್ತು ಇನ್ನೊಂದು ವಿಭಾಗ – ಈ ಎರಡು ವಿಭಾಗಗಳ ಪೈಕಿ ಯಾವುದರ ಮೂಲಕ ಹೊಗೆ ಬಾಟಲಿನ ಒಳ ಹೋಗುತ್ತದೆ

ಮತ್ತು ಯಾವುದರ ಮೂಲಕ ಹೊರಬರುತ್ತದೆ ಎಂಬುದನ್ನು ಪತ್ತೆಹಚ್ಚಿ.

ಇದಕ್ಕೆ ಕಾರಣ ಏನು ಎಂಬುದನ್ನು ತರ್ಕಿಸಿ. ವಾಯು ಬಿಸಿ ಆದಾಗ ಎತ್ತ ಚಲಿಸುತ್ತದೆ ಎಂಬುದನ್ನು ಅನುಮಾನಿಸಿ.

ಅಲಂಕಾರಿಕ ಆಟಿಕೆ.

ಸುಮಾರು ೮ ಸೆಂಮೀ ಉದ್ದದ ಬಾಹುಗಳುಳ್ಳ ಚೌಕಾಕೃತಿಯ ತುಸ ದಪ್ಪನೆಯ ಹಾಳೆಯಲ್ಲಿ ಸುರುಳಿಯ ಚಿತ್ರ ಬರೆಯಿರಿ. ಕಾಗದ ಕತ್ತರಿಸಲು ಉಪಯೋಗಿಸುವ ಸುರಕ್ಷಿತ ಬ್ಲೇಡಿನಿಂದ ಗೆರೆಯಗುಂಟ ಕತ್ತರಿಸಿ. (ಹಿರಿಯರ ನೆರವನ್ನು ಪಡೆಯುವುದು ಒಳ್ಳೆಯದು) x ಗುರುತು ಮಾಡಿರುವ ಬಿಂದುವಿನಲ್ಲಿ ಅಂಟುಕಾಗದದ (ಸೆಲ್ಲೋಟೇಪ್) ನೆರವಿನಿಂದ ಸುಮಾರು ೧೫ ಸೆಂಮೀ ಉದ್ದದ ಸಪುರ ದಾರದ ಒಂದು ತುದಿ ಸಿಕ್ಕಿಸಿ ಮೇಲಕ್ಕೆ ಎತ್ತಿದರೆ ಗಿರಕಿ ಹೊಡೆಯಬಲ್ಲ ಆಟಿಕೆಯೊಂದು ದೊರೆಯುತ್ತದೆ.

ಈ ಸಾಮಗ್ರಿ ಸಿದ್ಧವಾದ ಬಳಿಕ ಮೇಜಿನ ಮೇಲೆ ಉರಿಯುತ್ತಿರುವ ಮೋಂಬತ್ತಿಯನ್ನು ನಿಲ್ಲಿಸಿ. ಅದರ ಮೇಲೆ ಸುಮಾರು ೧೦ ಸೆಂಮೀ ದೂರದಲ್ಲಿ ನೀವು ತಯಾರಿಸಿದ ಆಟಿಕೆಯನ್ನು ಏನಾದರೊಂದು ಆಧಾರದ ನೆರವಿನಿಂದ ನೇತು ಹಾಕಿ. ಆಟಿಕೆ ಗಿರಕಿ ಹೊಡೆಯುವುದನ್ನು ವೀಕ್ಷಿಸಿ. ಮೋಂಬತ್ತಿಗಿಂತ ತುಸು ಹೆಚ್ಚು ಅಗಲವೂ ಉದ್ದವೂ ಆದ ಕೊಳವೆ ಇದ್ದರೆ ಅದರ ಒಳಗೆ ಮೋಂಬತ್ತಿ ಇಟ್ಟರೆ ಉತ್ತಮ. ಕೊಳವೆ ಮೇಜಿನ ಮೇಲ್ಮೈಗಿಂತ ತುಸು ಮೇಲೆ ನಿಲ್ಲುವಂತೆ ಮಾಡಬೇಕಾದದ್ದೂ ಅನಿವಾರ್ಯ, ಇಲ್ಲದೇ ಇದ್ದರೆ ಮೋಂಬತ್ತಿ ಹೆಚ್ಚು ಕಾಲ ಉರಿಯುವುದಿಲ್ಲ.

ಆಟಿಕೆ ಗಿರಕಿ ಹೊಡೆಯಲು ಕಾರಣ ಏನು? ಮೋಂಬತ್ತಿಯ ಮೇಲಿನ ವಾಯು ಬಿಸಿ ಆದದ್ದಕ್ಕೂ ಗಿರಕಿ ಹೊಡೆಯವುದಕ್ಕೂ ಅಂಬಂಧ ಇದೆಯೇ?

This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮ ಟಿಪ್ಪಣಿ ಬರೆಯಿರಿ