ವೈದ್ಯೋ ನಾರಾಯಣೋ—-

“ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ|
ಔಷದಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ|”

(ವಯಸ್ಸಿನ ಅಥವ ಬಹಳಕಾಲದಿಂದ ನರಳಿಸುತ್ತಿರುವ) ಕಾಯಿಲೆಯಿಂದ ಜರ್ಜರಿತವಾಗಿ ಕಳೇಬರದಂತಾಗಿರುವ ವ್ಯಕ್ತಿಗೆ  ಬೇರೇನೂ ಔಷಧಿ ನೀಡಲಾರದೆ ಬಾಯಿಗೆ ಗಂಗೆಯ ನೀರನ್ನು (ಇಲ್ಲಿ ಗಂಗೆಯೇ ಔಷಧಿ) ಹಾಕಿ, ಇನ್ನೇನಿದ್ದರೂ ಆ ನಾರಾಯಣನೇ ನೋಡಿಕೊಳ್ಳಬೇಕು ಎಂದು ಕೈಚೆಲ್ಲುವಾಗ ಹುಟ್ಟಿದ ಶುಭಾಷಿತ ಇದು. ಇದರಿಂದ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಭಾಗವನ್ನು ಮಾತ್ರ ಉದ್ಧರಿಸಿ ‘ವೈದ್ಯರು ಹರಿ/ನಾರಾಯಣನಿಗೆ ಸಮನಾದ ರಕ್ಷಕರು/ಪಾಲಕರು’ ಎಂದು ತಪ್ಪಾಗಿ ಅರ್ಥೈಸಿದ್ದು ಬಹುಷಃ ಯಾರೋ ‘ಆಧುನಿಕ’ ವೈದ್ಯರೇ ಇರಬೇಕು. (ಇಂಥ ಕೆಲಸವನ್ನು ನಮ್ಮ ಸ್ವಘೋಷಿತ ಗುರುಗಳು, ಹೊಸ ಪೀಳಿಗೆಯ ಪುರೋಹಿತರು, ರಾಜಕಾರಣಿಗಳು ಯಥೇಷ್ಟವಾಗಿ ಮಾಡುತ್ತಿರುತ್ತಾರೆ) ಈ ಅಪಾರ್ಥವನ್ನು ಜನಸಾಮಾನ್ಯರು ನಂಬಿದರೆ ಆಗಬಹುದಾದ ಅನಾಹುತವನ್ನು ತಪ್ಪಿಸಲೋಸುಗವೋ ಏನೋ ಅದರೋ ವಿವೇಕಿಗಳು ಯಥಾರ್ಥತೆಯನ್ನು ಮನಮುಟ್ಟುವಂತೆ ಸ್ಪಷ್ಟೀಕರಿಸುವ ಇನ್ನೊಂದು ಸುಭಾಷಿತವನ್ನು ಹುಟ್ಟುಹಾಕಿ ಬಲು ದೊಡ್ಡ ುಪಕಾರ ಮಾಡಿದ್ದಾರೆ.

“ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|

ಯಮಸ್ತು ಹರತಿ ಪ್ರಾಣಾನ್ ವೈದ್ಯಯೋ ಪ್ರಾಣಾನ್ ಧನಾತಿ ಚ|”

[ಭಾವಾರ್ಥ: ಯಮರಾಜ ಸಹೋದರನಾದ ಓ ವೈದ್ಯರಾಜನೇ ನಿನಗೆ ನಮಸ್ಕಾರ. ಯಮ ಪ್ರಾಣವನ್ನು ಮಾತ್ರ ಕಿತ್ತುಕೊಳ್ಳುತ್ತಾನೆ. ವೈದ್ಯ ಪ್ರಾಣದೊಂದಿಗೆ ಹಣವನ್ನೂ ಕಿತ್ತುಕೊಳ್ಳುತ್ತಾನೆ]

ಈ ಸುಭಾಷಿತ ಸರಿಯಾಗಿದೆ ಅನ್ನುವುದಕ್ಕೆ ನನ್ನ ಅನುಭವಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

೧. ೧೯೬೭-೬೮ರಲ್ಲಿ ಆದ ಅನುಭವ ಇದು. ನಾನು ಆಗ ಮಂಡ್ಯ ಜಿಲ್ಲೆಯ ಹೇಮಗಿರಿ ಎಂಬ (ಪ್ರತೀದಿನ ೨ ಬಾರಿ ಬಸ್ ಸೌಲಭ್ಯವಿದ್ದ) ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲಾ ಶಿಕ್ಷಕನಾಗಿದ್ದೆ. ಪ್ರತೀ ದಿನ ಸಂಜೆಯ ವೇಳೆಗೆ ದೇಹದ ತಾಪ ಸುಮಾರು ಅರ್ಧ ಡಿಗ್ರಿಯಷ್ಟು ಹೆಚ್ಚಿ ಜ್ವರ ಬಂದ ಅನುಭವ ಆಗುತ್ತಿತ್ತು. ಜೊತೆಗೆ ಹಸಿವು ಕಮ್ಮಿ, ಒಣಕೆಮ್ಮು ಜಾಸ್ತಿ. ಯಾವುದೇ ‘ಅಜ್ಜಿಮದ್ದು’ ಈ ಬೇನೆಯನ್ನು ನಿವಾರಿಸಲಿಲ್ಲ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು (ಎಮ್ ಬಿ ಬಿ ಎಸ್) ನನ್ನ ‘ರೂಮಿ’ಗೇ ಆಗಮಿಸಿ ತಮಗೆ ತಿಳಿದಂತೆ ಪರೀಕ್ಷಿಸಿ “ನಿಮಗೇನೂ ಆಗಿಲ್ಲ, ಸುಮ್ಮನೆ ರೋಗ ಇದೆ ಅಂದುಕೊಂಡಿದ್ದೀರಿ ಅಷ್ಟೇ. ಚೆನ್ನಾಗಿ ತಿನ್ನಿ” ಎಂದು ಅಪ್ಪಣೆ ಮಾಡಿ ನಿರ್ಗಮಿಸಿದರು. ಅವರ ಸಲಹೆಯನ್ನು ಅಕ್ಷರಶಃ ಪಾಲಿಸಿದ್ದರಿಂದ ವಾಂತಿ ಆದದ್ದು ಬಿಟ್ಟರೆ ಬೇರೇನೂ ಲಾಭ ಆಗಲಿಲ್ಲ. ಆ ವೈದ್ಯರು ಇನ್ನೊಮ್ಮೆ ಆಗಮಿಸಿ ಒಂದು ‘ಇಂಜೆಕ್ಷನ್’ ಕೊಟ್ಟು “ಇನ್ನೆಲ್ಲವೂ ಸರಿ ಹೋಗುತ್ತದೆ, ನಿಶ್ಚಿಂತೆಯಾಗಿರಿ” ಎಂದು ಭರವಸೆ ನೀಡಿ ನಿರ್ಗಮಿಸಿದರು. ಇವಿಷ್ಟು ಶುಲ್ಕರಹಿತ ಸೇವೆಯಾಗಿತ್ತು (“ಇಷ್ಟಕ್ಕೆಲ್ಲ ನಿಮ್ಮಂಥ ಒಳ್ಳೆಯ ಜನಪ್ರಿಯ ಗುರುಗಳಿಂದ ಶುಲ್ಕ ತೆಗೆದುಕೊಂಡರೆ ದೇವರು ಮೆಚ್ಚುವುದಿಲ್ಲ”). ದಿನಗಳು ಉರುಳಿದವು ಅಜ್ಞಾತ ಬೇನೆ ವೃದ್ಧಿಸಿತು. ಅಲ್ಲಿಂದ ಅನತಿ ದೂರದಲ್ಲಿ ಇರುವ ಕಿಕ್ಕೇರಿ ಎಂಬ ಊರಿನಲ್ಲಿ ನಮ್ಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳೊಡನೆ ಪರೀಕ್ಷೆಗಾಗಿ ೧೫ ದಿನ ಮೊಕ್ಕಾಂ ಹೂಡಬೇಕಾಯಿತು. ಆ ಊರಿನಲ್ಲಿ ಒಬ್ಬ ಖ್ಯಾತ ವೈದ್ಯರಿದ್ದಾರೆಂದೂ ಎಂಥೆಂಥದ್ದೋ ಕಾಯಿಲೆಗಳನ್ನೂ ವಾಸಿ ಮಾಡಿದ್ದಾರೆಂದೂ ಅವರನ್ನು ಕಂಡರೆ ನನ್ನ ರೋಗ ಮಾಯವಾಗುವುದು ಖಾತರಿ ಎಂದೂ ಹಿತೈಷೀ ಬಳಗ ಉಪದೇಷಿಸಿತು. ಅವರನ್ನು ಅವರ ಕ್ಲಿನಿಕ್ಕಿನಲ್ಲಿ ನೋಡಿದ್ದಾಯಿತು. ರೋಗದ ಎಲ್ಲ ಲಕ್ಷಣಗಳನ್ನೂ ಕೇಳಿ ತಿಳಿದಿಕೊಂಡ ಅವರು ಹೇಳಿದ್ದು ಇಷ್ಟು: “ನಾಳೆ ಪ್ರಾತಃಕಾಲ ೬ ಗಂಟೆಗೆ ನಿಮ್ಮ ಬಿಡಾರಕ್ಕೆ ಬಂದು ಪರೀಕ್ಷಿಸುತ್ತೇನೆ, ಖಾಲಿ ಹೊಟ್ಟೆಯಲ್ಲಿ ಇರಿ.” ಕೊಟ್ಟ ಮಾತಿಗೆ ತಪ್ಪದೆ ಬಂದರು, ಒಂದು ಬೋಗುಣಿಯಲ್ಲಿ ನೀರು ಹಾಕಿ ಅದರ ಮೇಲೆ ಕ್ಯಾಕರಿಸಿ ಕಫ ಉಗಿಯುವಂತೆ ಆಜ್ಞಾಪಿಸಿದರು. ವೈದ್ಯಾಣತಿಯನ್ನು ಪಾಲಿಸಿದ ಬಳಿಕ ಏಕಾಗ್ರತೆಯಿಂದ ತೇಲುತ್ತಿರುವ ಕಫವನ್ನೇ ದುರುಗುಟ್ಟಿ ನೋಡಿ “ಹಾ, ಗೊತ್ತಾಯಿತು ಬಿಡಿ, ಇನ್ನೇನೂ ಭಯವಿಲ್ಲ” ಎಂದು ಹರ್ಷೋದ್ಗಾರ ಮಾಡಿದರು. (ನಾನೂ ಆ ತೇಲುತ್ತಿರುವ ಕಫ ನೋಡಿದ್ದೆನಾದರೂ ನನಗೇನೂ ಜ್ಞಾನೋದಯವಾಗಿರಲಿಲ್ಲ). “ನೋಡಿ ಗೋವಿಂದರಾಯರೇ, ನೀವೇನೂ ಹೆದರಬೇಡಿ (ಅವರು ಹಾಗಂದಗಲೇ ಸುರುವಾದದ್ದು ಭಯ) ಇದಕ್ಕೆ ಒಂದು ಕೋರ್ಸ್ ಸ್ಟ್ರೆಪ್ಟೋಮೈಸಿನ್ ಇಂಜಕ್ಷನ್ ಕೊಡುತ್ತೇನೆ ಎಲ್ಲ ಸರಿಹೋಗುತ್ತದೆ” ಎಂಬ ಆಶ್ವಾಸನೆ ದೊರೆಯಿತು. “ಇದಕ್ಕೆ ಎಷ್ಟು ಖರ್ಚಾಗ ಬಹುದು ಡಾಕ್ಟ್ರೇ?” (ಆಗ ನನ್ನ ಅಧಿಕೃತ ಸರ್ಕಾರೀ ಪಗಾರ ರೂ ೧೪೭.೮೦) “ ನಿಮ್ಮ ಹತ್ತಿರ ಇತರರಿಗೆ ಹೇಳಿದಂತೆ ಹೇಳಲಾಗುತ್ತದೆಯೇ? ಔಷಧಿ ಖರ್ಚು ಕೊಡಿ ಸಾಕು, ಸೇವಾಶುಲ್ಕ ಏನೂ ಬೇಡ” “ಆದರೆ, ನಾನು ಇನ್ನು ಇಲ್ಲಿರುವುದು ಎರಡು ದಿನ ಮಾತ್ರ. ಆ ನಂತರ ಶಾಲೆಗೆ ದೀರ್ಘಾವಧಿ ಬೇಸಿಗೆ ರಜ ಿದೆ. ಊರಿಗೆ ಹೋದ ನಂತರ ಅಲ್ಲಿಯೇ ಚಿಕಿತ್ಸೆ ಆರಂಭಿಸಿದರೆ ತೊಂದರೆ (ನಿಮಗೆ) ಇಲ್ಲ ತಾನೇ?”. “ಛೇ ಛೇ ತೊಂದರೆ ಏನು ಬಂತು. ಆದರೆ ಚಿಕಿತ್ಸೆ ಇವತ್ತಿನಿಂದಲೇ ಆರಂಭಿಸಿ. ತಡ ಮಾಡುವುದು ಬೇಡ. ಈಗಾಗಲೇ ಬಹಳಷ್ಟು ತಡವಾಗಿದೆ. ಇಂದು ಸಂಜೆ ಕ್ಲಿನಿಕ್ ಕಡೆ ಬನ್ನಿ. ಅಂದ ಹಾಗೆ ಊರಿಗೆ ಹೋದ ಬಳಿಕ ನಾನು ಸೂಚಿಸಿದ ಚಿಕಿತ್ಸೆಯನ್ನು ನಿಮ್ಮ ಡಾಕ್ಟರರಿಂದ ಪಡೆಯಿರಿ” “ಖಂಡಿತಾ. ನನ್ನ ತಂದೆಯೇ ಒಬ್ಬ ಸರ್ಕಾರೀ ವೈದ್ಯರು (ದಿ. ಎ ಪಿ ವೆಂಕಟಸುಬ್ಬಯ್ಯ)” “ಸರಿ, ಹಾಗಿದ್ದರೆ. ನೀವು ರಜೆಯಲ್ಲಿ ಊರಿಗೆ ಹೋದ ಬಳಿಕ ಅವರನ್ನೇ ಕೇಳಬಹುದಿತ್ತು” ಅವರ ಹತ್ತಿರ ನಾನು ಚಿಕಿತ್ಸೆ ಆರಂಭಿಸಲಿಲ್ಲ – ವೈದ್ಯರ ಮಗ ಮತ್ತು ವಿಜ್ಞಾನ ಶಿಕ್ಷಕನಾಗಿದ್ದ ನನಗೆ ಅವರು ಹೇಳಿದ ಚಿಕಿತ್ಸೆ ನೀಡಬೇಕಾದದ್ದು ಕ್ಷಯರೋಗಕ್ಕೆ ಎಂಬ ಪ್ರಾಥಮಿಕ ಜ್ಞಾನ ಇತ್ತು.

ಊರಿಗೆ ಮರಳಿದ ಬಳಿಕ ನನ್ನನ್ನು ಪರೀಕ್ಷಿಸಿದ ನನ್ನ ತಂದೆಯವರು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ನನ್ನ ಚಿಕ್ಕಪ್ಪ ಎ ಪಿ ಗೋಪಾಲಕೃಷ್ಣ ರಾವ್ (ಆಗ ಅವರು ಅಲ್ಲಿ ನ್ಯಾಯಾಧೀಶರಾಗಿದ್ದರು) ಅವರೊಡನೆ ವೆನ್ ಲಾಕ್ ಆಸ್ಪತ್ರೆಯ ಆರ್ ಎಮ್ ಒ ಅವರನ್ನೇ ಭೇಟಿ ಮಾಡಿದ್ದಾಯಿತು ( ಜಡ್ಜರ ಅಣ್ಣನ ಮಗ, ಸರ್ಕಾರೀ ಡಾಕ್ಟರರ -ಡಾಕ್ಟರ್ ಆಗದೇ  ಟೀಚರ್ ಆದ್ದರಿಂದ ದಾರಿ ತಪ್ಪಿದ – ಮಗನಿಗೆ ಸಾಮಾನ್ಯ ವೈದ್ಯರು ಸಾಕಾಗುವುದಿಲ್ಲ). ಆರ್ ಎಮ್ ಒ ಸಾಹೇಬರು ಆಗಬೇ ಕಾದ ‘ಟೆಸ್ಟ್’ಗಳ ಪಟ್ಟಿ ತಯಾರಿಸಿ ಅಷ್ಟನ್ನೂ ತಕ್ಷಣ ಮಾಡಿಸಿಕೊಂಡು ಬರುವಂತೆ ಒಬ್ಬ ‘ಪೀವನ್’ನ ಜೊತೆ ಕಳುಹಿಸಿದರು. ಈ ಮಾಂತ್ರಿಕ ದಂಡ ಇದ್ದ ಮೇಲೆ ಕೇಳಬೇಕೇ? ಎಲ್ಲ ‘ಟೆಸ್ಟ್’ಗಳೂ ಶಾಸ್ತ್ರೋಕ್ತವಾಗಿ ನಡೆದವು. ಬಹುಕಾಲದಿಂದ ಆ ‘ಲ್ಯಾಬ್’ಗಳ ಮುಂದೆ ಸರತಿ ಸಾಲಿನಲ್ಲಿ  ನಿಂತಿದ್ದ ಮಂದಿ ‘ಆರ್ ಎಮ್ ಒ ಪೀವನ್ ಸಮೇತ ಕಳುಹಿಸಿದ ಜಡ್ಜರ ಅಣ್ಣನ—- ‘ನನ್ನು ತಡೆಯಲು ಸಾಧ್ಯವೇ, ಅಥವ ವೈದ್ಯರು ಕ್ಯೂನಲ್ಲಿ ಬನ್ನಿ ಅನ್ನಲು ಸಾಧ್ಯವೇ? ‘ಬ್ಲಡ್ ಕೌಂಟ್’ ಮಾಡಿದ ವೈದ್ಯರು ‘ಕಳ್ಳ ಸಿಕ್ಕಿದ’ ಎಂದು ಹರ್ಷೋದ್ಗಾರ (ಇದರ ಮುಂದೆ ಆರ್ಕಿಮಿಡೀಸನ ಯುರೇಕಾ ಉದ್ಗಾರ ಏನೇನೂ ಅಲ್ಲ) ಮಾಡಿ ನನ್ನ  (ಜಡ್ಜರ—) ಕೈಕುಲುಕಿದರು. ನಾನೂ ಆನಂದತುಂದಿಲನಾಗಿ (ಕಳ್ಳ ಯಾರೆಂದು ತಿಳಿಯುವ ಮೊದಲೇ) “ಇದಕ್ಕೆ ‘ಶುಲ್ಕ’ ಏನಾದರೂ ಕೊಡಬೇಕೇ (ಹಳೆಯ ಮೈಸೂರು ಪ್ರಾಂತದಲ್ಲಿ ಈ ಪದ್ಧತಿ ಆಗಲೇ ಬೇಳೆಯತೊಡಗಿತ್ತು)” ಎಂದು ಕೇಳಿಯೇ ಬಿಟ್ಟೆ. ಅವರು ಪ್ಯಾಟೆಗೆ ಬಂದ ಹಳ್ಳೀ ಹೈದನನ್ನು ನೋಡುವಂತೆ ನನ್ನನ್ನು (ಜಡ್ಜರ ಅಣ್ಣನ — ಈ ನಾಲಾಯಕ್ ಮಗನನ್ನು) ಒಮ್ಮೆ ನೋಡಿ ಇಂತೆಂದು ಹೇಳಿದರು: “ ನೋಡಿ ಇವರೇ, ನಾವು ಇರುವುದು ಜನರ ಸೇವೆ ಮಾಡಲು. ಇದು ಸರ್ಕಾರೀ ಆಸ್ಪತ್ರೆ. ಇಲ್ಲಿ ಯಾವುದೇ ಶುಲ್ಕ ಇಲ್ಲ. ಆದರೂ, ಬಹಳಷ್ಟು ಸಲ ಜನ ಪ್ರೀತಿಯಿಂದ ಬಹಳ ಬಲವಂತ ಮಾಡಿ ತಮಗೆ ಇಷ್ಟ ಬಂದಷ್ಟು ಹಣ ಕೊಡುತ್ತಾರೆ. ಜನರ ಈ ಪ್ರೀತಿಗೆ ಧಕ್ಕೆ ಉಂಟು ಮಾಡಬಾರದೆಂದು ನಾವು ತೆಗೆದುಕೊಳ್ಳುತ್ತೇವೆ. ಏನು? ಗೊತ್ತಾಯಿತಲ್ಲವೋ? ನಾವಾಗಿ ಏನನ್ನೂ ಯಾರಿಂದಲೂ ಕೇಳುವುದಿಲ್ಲ, ಗೊತ್ತಾಯಿತಲ್ಲವೋ” ನನಗೆ ಗೊತ್ತಾಯಿತು ಎಂಬುದನ್ನು ಸಾಬೀತು ಪಡಿಸಲೋಸುಗ ರೂ ೫ನ್ನು (ಆಗ ಅದು ನನ್ನ ಮಟ್ಟಿಗೆ ದೊಡ್ಡ ಮೊತ್ತ) ಜೇಬಿನಿಂದ ಹೊರತೆಗದೆ. ಮುಂದಿನದ್ದು ‘ಬೆಳಕಿನ ಚಲನೆಯ ವೇಗ’ದಲ್ಲಿ ಜರಗಿತು. ಈ ವರದಿಯನ್ನು ನೋಡಿದ ಆರ್ ಎಮ್ ಒ ಉವಾಚ “ರಕ್ತದಲ್ಲಿ ೪-೧೪% ಇರಬೇಕಾದ ಈಸನೋಫಿಲ್ಸ್ ಎಂಬ ಬಿಳಿ ರಕ್ತಕಣ ೪೨%ಗಿಂತ ಅಧಿಕವಾದದ್ದೇ ತೊಂದರೆಯ ಮೂಲ. ಬೆನೋಸೈಡ್ ಎಂಬ ಮಾತ್ರೆ ದಿನಕ್ಕೆರಡರಂತೆ ೧೦ ದಿನ ನುಂಗಿ. ತೊಂದರೆ ಮಾಯವಾಗುತ್ತದೆ. ವಿಪರೀತ ಕಾಫಿ ಕುಡಿಯುತ್ತೀರಿ ಅಂತ ಕಾಣತ್ತೆ. ಜೊತಗೆ ಸಿಗರೇಟಿನ ಅಭ್ಯಾಸವೂ ಇದ್ದರೆ ಬೇಗ ಹೀಗಾಗುತ್ತದೆ” ನಗಣ್ಯ ಎನ್ನಬಹುದಾದಷ್ಟು ಕಮ್ಮಿ ಬೆಲೆಯ (ಆಗಲೂ, ಈಗಲೂ)  ಆ ಮಾತ್ರೆ ನನ್ನನ್ನು ಸಂಪೂರ್ಣವಾಗಿ ಗುಣಮುಖವಾಗಿಸಿತು.

೨. ೧೯೭೩ನೇ ಇಸವಿ. ನನ್ನ ೩-೪ ತಿಂಗಳು ವಯಸ್ಸಿನ ಮಗ ಮುರಲೀಧರನಿಗೆ (ಈಗ ೩೭ ವರ್ಷ ವಯಸ್ಸಿನವ, ಬೆಂಗಳೂರು ಎಂಬ ಯಂತ್ರಮಾನವರಂತಿರುವವರಿಂದ ತುಂಬಿ ಹೋಗಿರುವ ಕಾಂಕ್ರೀಟ್ ಗೊಂಡಾರಣ್ಯ ವಾಸೀ ಎಂಜಿನಿಯರ್) ಅಸಹನೀಯ (ನಮಗೆ, ನೂತನ ಮಾತಾಪಿತರಿಗೆ!) ಅನ್ನಿಸುವಷ್ಟು ಶೀತನೆಗಡಿ. ಉಸಿರಾಡಲೂ ಕಷ್ಟಪಡುತ್ತಿದ್ದ, ಮೈಸೂರಿನಲ್ಲಿ ಬಲು ಪ್ರಖ್ಯಾತರಾಗಿದ್ದ ಶಿಶುರೋಗ ತಜ್ಞರೊಬ್ಬರಿಗೆ ಗಣ್ಯರೊಬ್ಬರಿಂದ ಶಿಫಾರಸ್ಸು ಮಾಡಿಸಿ (ಸಾಮಾನ್ಯರಿಗೆ ಅವರ ಭೇಟಿಯ ಭಾಗ್ಯ ಬಲು ದುರ್ಲಭವಾಗಿದ್ದದ್ದರಿಂದ) ಮನೆಗೆ ಹೋದದ್ದಾಯಿತು. ೨-೩ ನಿಮಿಷದ ಪರೀಕ್ಷೆಯ ಬಳಿಕ ೩ ಔಷಧಿಗಳ ಹೆಸರನ್ನು ಬರೆದುಕೊಟ್ಟು ಅದನ್ನು ಕೊಡಬೇಕಾದ ವಿಧಿವಿಧಾನಗಳನ್ನ ವಿವರಿಸಿ ರೂ ೫೦ ‘ಕನ್ಸಲ್ಟೇಷನ್ ಫೀ” (ನಾನು ಆಗ ಕಾಲೇಜಿನಲ್ಲಿ ಲೆಕ್ಚರರ್ ಪಗಾರ ರೂ ೪೦೦) ಯಾವ ಮುಲಾಜೂ ಇಲ್ಲದೇ ಪಡೆದು ಕಳುಹಿಸಿದರು. ಖ್ಯಾತ ವೈದ್ಯರ ಔಷಧಿಯಲ್ಲವೇ? ೨-೩ ದಿನಗಳಲ್ಲಿಯೇ ಶೀತನೆಗಡಿ ಮಂಗಮಾಯ. ನಮಗೆ ಪರಮಾನಂದ. ನಮ್ಮ ಮಿತ್ರರ ಬಳಿ ಆ ವೈದ್ಯರ ಗುಣಗಾನ. ಸುಮಾರು ೨ ತಿಂಗಳ ಬಳಿಕ ಅದೇ ವ್ಯಾಧಿಯ ಪುನರಾಗಮನ. ಅದೇ ಖ್ಯಾತ ವೈದ್ಯರ ದರ್ಶನ. ಅದೇ ಔಷಧಿಗಳ ಪ್ರಯೋಗ. ಈ ಘಟನಾವಳಿ ೨-೩ ತಿಂಗಳಿಗೊಮ್ಮೆ ಪುನರಾವರ್ತನೆ. ಹೀಗಿದ್ದಾಗ ಒಂದು ದಿನ ನಮ್ಮ ತಂದೆಯವರು ಮೈಸೂರಿಗೆ ಬಂದಾಗ ಸಮಸ್ಯೆಯನ್ನು ಅವರಿಗೆ ವಿವರಿಸಿದ್ದಾಯಿತು. “ಏನು ಔಷಧಿ ಪ್ರಿಸ್ಕ್ರೈಬ್ ಮಾಡಿದ್ದಾರೆ?” ತೋರಿಸಿದೆ. “ಇವನ್ನು ಯಾಕೆ ಕೊಟ್ಟರು? ಪ್ರಾಣ ಹೋಗುವುದನ್ನು ತಪ್ಪಿಸಲೋಸುಗ ಕೊಡಬೇಕಾದ ಪ್ರಬಲ ಆಂಟಿಬಯಾಟಿಕ್ ಒಂದು, ಆಸ್ತಮಾ ರೋಗಿಗಳಿಗೆ ಕೊಡಬೇಕಾದದ್ದು ಇನ್ನೊಂದು, ಮೂಗುಕಟ್ಟಿದ್ದನ್ನು ಬಿಡಿಸಲು ಅಪರೂಪಕ್ಕೊಮ್ಮೆ ಹಾಕಬೇಕಾದ ನೇಸಲ್ ಡ್ರಾಪ್ಸ್ ಮತ್ತೊಂದು. ಈ ಹುಡುಗನಿಗೆ ಮುಂದೆ ಮೂಡುವ ಶಾಶ್ವತ ಹಲ್ಲುಗಳು ಕೊಂಚ ಹಳದಿಯಾಗಿರುತ್ತವೆ. ಈ ಔಷಧಿಗಳು ಅಭ್ಯಾಸವಾದರೆ ಮುಂದೆ ಇವಕ್ಕಿಂತ ದುರ್ಬಲವಾದ ಔಷಧಿಗಳು ನಾಟುವುದೇ ಇಲ್ಲ”. “ಇದಕ್ಕೆ ಪರಿಹಾರ?”  “ಈ ಔಷಧಿಗಳನ್ನು ನಿಲ್ಲಿಸು. ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ. ಮನೆ ಮದ್ದನ್ನೇ ಮುಂದುವರಿಸು” ಶಾಶ್ವತ ಹಲ್ಲಿನ ಬಣ್ಣ ಕುರಿತಾದ ಅವರ ಭವಿಷ್ಯವಾಣಿ ನಿಜವಾಗಿದೆ. ಅವರು ಎಮ್ ಬಿ ಬಿ ಎಸ್/ ಎಮ್ ಡಿ ಪದವೀಧರರಲ್ಲ, ಬದಲಾಗಿ ಅಂದು ಮಾನ್ಯತೆ ಪಡೆದಿದ್ದ ಎಲ್ ಎಮ್ ಪಿ ಪ್ರಮಾಣಪತ್ರಧಾರಿಗಳು.   ಆದರೆ, ಹಲ್ಲು ಕೀಳುವ ದಂತವೈದ್ಯರೂ ಅವರೇ, ಪ್ರಸೂತಿ (ಇಂದು ಯಾರೂ ಮಾಡದ ಫೋರ್ಸೆಪ್ಸ್ ಪ್ರಸೂತಿಯೂ ಸೇರಿದಂತೆ) ತಜ್ಞರೂ ಅವರೇ. ಬಾಟಲಿಗಳಲ್ಲಿ ತುಂಬಿದ್ದ ಬೇರೆಬೇರೆ ಬಣ್ಣದ ದ್ರವರೂಪೀ ಔಷಧಗಳ ಪೈಕಿ ಯಾವುದೋ ಕೆಲವನ್ನು ರೋಗವನ್ನು ಆಧರಿಸಿ ನಿಗದಿತ ಪ್ರಮಾಣದಲ್ಲಿ ಬೆರೆಸಿ ಬಾಟಲಿಗೆ ತುಂಬಿ ಸರ್ಕಾರೀ ಆಸ್ಪತ್ರೆಗಳಲ್ಲೂ ಕೊಡುತ್ತಿದ್ದ ಕಾಲದಲ್ಲಿ ವೈದ್ಯವೃತ್ತಿ ಮಾಡಿದವರು.

೩. ಇತ್ತೀಚೆಗೆ ಸ್ಕೂಟರ್ ನಿಲ್ಲಿಸಿ ನೆಲಕ್ಕೆ ಕಾಲಿಡುವಾಗ ಎಡ ಪಾದ ತಿರುಚಿದಂತಾಗಿ ಕಿರುಬೆರಳು ವಿಪರೀತ ಊದಿಕೊಂಡಿತು. ಒಂದೆರಡು ದಿನವಾದರೂ ಊದು ಕಮ್ಮಿ ಆಗದಿದ್ದಾಗ ಮೈಸೂರಿನ ಎಮ್ ಬಿ ಬಿ ಎಸ್ ವೈದ್ಯರೊಬ್ಬರಿಗೆ ( ನನ್ನ ಸಮೀಪದಬಂಧು) ತೋರಿಸಿದೆ. “ಯಾವುದಕ್ಕೂ ಒಂದು ಎಕ್ಸ್ ರೇ ತೆಗಸಿ, ನೋಡುವ” ಅಂದರು. ಸರಿ, ತೆಗೆಸಿದ್ದಾಯಿತು. ಎಡಪಾದದ ಮೂರನೇ ಬೆರಳಿನ ಬುಡದಲ್ಲಿ ಒಂದು ಸೂಕ್ಷಮವಾದ ಬಿರುಕು ಇದೆ ಎಂದಿತು ವರದಿ. ನನಗೆ ನೋವಿದ್ದದ್ದು ಕಿರುಬೆರಳಿನ ಬುಡದಲ್ಲಿ, ಊದಿಕೊಂಡಿದ್ದದ್ದೂ ಅದೇ ಬೆರಳು! ಎಕ್ಸ್ ರೇಯನ್ನು ಎಷ್ಟು ನೋಡಿದರೂ ನನಗೆ ಎಲ್ಲಿಯೂ ಬಿರುಕು ಕಾಣಿಸಲಿಲ್ಲ. ಪುನಃ ಬಂಧು ವೈದ್ಯರನ್ನು ನೋಡಿದೆ. ಅವರು ವರದಿಯನ್ನು ಓದಿ ಎಕ್ಸ್ ರೇಯನ್ನು ನಾನಾ ಕೋನಗಳಿಂದ ಅವಲೋಕಿಸಿದರು. ಮೂಳೆತಜ್ಞರೊಬ್ಬರನ್ನು ಹೆಸರಿಸಿ ಅವರನ್ನು ಕಾಣುವಂತೆ ಹೇಳಿದರು. “ಆದರೆ ಬಿರುಕು ಕಾಣಿಸುತ್ತಿಲ್ಲವಲ್ಲ” ನನ್ನ ಸಂಶಯ. ದೊರೆತ ಉತ್ತರ “ಅವರು ಎಕ್ಸ್ ರೇಯಿಂದ ಮೂಳೆಯ ಸಾಂದ್ರತೆ ಅಂದಾಜಿಸಿ ಬಿರುಕು ಇಂಥಲ್ಲಿ ಇದೆ ಎಂದು ಹೇಳುವಷ್ಟು ಪರಿಣತಿ ಉಳ್ಳವರು” (ಅವರಿಗೂ ಬಿರುಕು ಕಾಣಿಸಲಿಲ್ಲ ಎಂಬುದು ನನ್ನ ಗುಮಾನಿ). ನನಗೆ ಊದು ಇಳಿದರೆ ಸಾಕಿತ್ತು. ಸರಿ, ಆ ವಿಶೇಷಜ್ಞರ ಕ್ಲಿನಿಕ್ಕಿನಲ್ಲಿ ಕೇವಲ ೩ ಗಂಟೆ ಕಾಲಹರಣ ಮಾಡಿದ ಬಳಿಕ ‘ಗರ್ಭಗುಡಿ’ಯೊಳಕ್ಕೆ ಹೋಗುವ ಭಾಗ್ಯ ಲಭಿಸಿತು. ನಗುಮುಖದಿಂದಲೇ ಹೊಸ ‘ಬಲಿಪಶು’ವನ್ನು ಸ್ವಾಗತಿಸಿದ ವೈದ್ಯ ಮಹಾಶಯರು ನಡೆದ ಘಟನೆಯ ವಿವರಣೆ ಪಡೆದು ಎಲ್ಲ ದಾಖಲೆಗಳನ್ನೂ ಪರಿಶೀಲಿಸಿದ ಬಳಿಕ ಪಾದವನ್ನೂ ಅಲ್ಲಲ್ಲಿ ಒತ್ತಿ ನೋವು ಇರುವ ಸ್ಥಳವನ್ನು ಖಾತರಿ ಪಡಿಸಿಕೊಂಡರು. (ನಾವು ಇಂಥಲ್ಲಿ ನೋವು ಇದೆ ಎಂದರೆ ಯಾವ ವೈದ್ಯರೂ ನಂಬುವುದಿಲ್ಲ. ನೋವು ಇದೆಯೆಂದು ಹೇಳುವ ಸ್ಥಳವನ್ನು ಬಲವಾಗಿ ಒತ್ತಿ ನೀವು ಚೀರುವುದನ್ನು ಕೇಳಿದ ಬಳಿಕವೇ ಅವರಿಗೆ ಸಮಾಧಾನ) ಇನ್ನೊಮ್ಮೆ ಎಕ್ಸ್ ರೇ ಪರೀಶೀಲಿಸಿ, “ಬಿರುಕು ಇದೆ, ಆದರೆ ವರದಿಯಲ್ಲಿ ಹೇಳಿದಲ್ಲಿ ಅಲ್ಲ, ನೀವು ನೋವಿದೆ ಎಂದು ಹೇಳಿದ ಸ್ಥಳದಲ್ಲಿಯೇ ಇದೆ” ಎಂದು ತೀರ್ಪು ನೀಡಿದರು. ‘ಆದರೆ ವರದಿಯಲ್ಲಿ ಹಾಗಿದೆಯಲ್ಲ ಡಾಕ್ಟ್ರೇ?” “ಅವರಿಗೇನು ಬಿಡಿ, ಸುಮ್ಮನೆ ಏನೋ ಒಂದು ಬರೆಯುತ್ತಾರೆ ಬಿಡಿ” (ನನ್ನ ಬಳಿಯೇ ಎಕ್ಸ್ ರೇ ತೆಗೆಸಿದ್ದರೆ ಹೀಗಾಗುತ್ತಿರಲಿಲ್ಲ ಎಂಬುದು ಇದರ ಅರ್ಥ) ಇದಕ್ಕೇನೂ ಹೆಚ್ಚು ಚಿಕಿತ್ಸೆ ಬೇಡ ಅಂದವರೇ ಕಿರುಬೆರಳನ್ನೂ ಅದರ ಪಕ್ಕದ್ದನ್ನೂ ಸೇರಿಸಿ ಒಂದು ಬ್ಯಾಂಡೇಜ್ ಹಾಕಿ ೩ ರೀತಿಯ ಮಾತ್ರೆಗಳನ್ನು ಬರೆದುಕೊಟ್ಟರು. “ ಈ ಔಷಧಿ ಎಲ್ಲ ಡ್ರಗ್ ಸ್ಟೋರ್ ಗಳಲ್ಲಿ ಲಭ್ಯವಿದೆಯೇ?”. “ಇಲ್ಲೇ ಒಳಗಿರುವ ಸ್ಟೋರಲ್ಲಿಯೇ ಸಿಕ್ಕುತ್ತದೆ ಯೋಚನೆ ಮಾಡಬೇಡಿ”,  “ಫೀಸೂ”, “ಹೊರಗಡೆ ರಿಸೆಪ್ಷನಿಸ್ಟ್ ಹೇಳುತ್ತಾಳೆ’ (ಅವರೇ ತೆಗೆದುಕೊಳ್ಳುವುದು ಅಂಥ ತಜ್ಞರ ಘನತೆಗೆ ಧಕ್ಕೆ ಉಂಟುಮಾಡುತ್ತದೆ). ರೂ ೧೫೦ ಸೇವಾಶುಲ್ಕ ತೆತ್ತು ಔಷಧಿಯನ್ನು ಅಟ್ಯಾಚ್ಡ್  ಸ್ಟೋರ್ ನಲ್ಲಿ ಖರೀದಿಸಿದ್ದಾಯಿತು (ಅದಕ್ಕೆ ಹಣ ಬೇರೆ). ಮನೆಗೆ ಬಂದ ಬಳಿಕ ಕುತೂಹಲದಿಂದ ಅಂತರ್ಜಾಲದಲ್ಲಿ ಆ ಮಾತ್ರೆಗಳ ಮಾಹಿತಿ ಹುಡುಕಿದೆ. ಒಂದು ಸಾಮಾನ್ಯ ನೋವು/ಊತ ನಿವಾರಕ, ಇನ್ನೊಂದು ಸರ್ವರೋಗನಿವಾರಿಣ ಆಂಟಿಬಯಾಟಿಕ್, ಮತ್ತೊಂದು ನಿದ್ದೆ ಬರಿಸುವ ಮಾತ್ರೆ! ಇವುಗಳ ಪೈಕಿ ಮೊದಲನೆಯದನ್ನು ನುಂಗಿ ಉಳಿದವನ್ನು ಕಸದ ಬುಟ್ಟಿಗೆ ಹಾಕಿದ್ದಾಯಿತು. ಎಲ್ಲೋ ಕೊಂಚ ಉಳುಕಿದಂತೆ ಆಗಿದ್ದಿರಬೇಕು, ಬಿರುಕೂ ಇರಲಿಲ್ಲ ಮಣ್ಣಾಂಗಟ್ಟಿಯೂ ಇರಲಿಲ್ಲ ಎಂಬುದು ನನ್ನ ಗುಮಾನಿ.

ಇಂಥ ಅನುಭವಗಳು ಇನ್ನೂ ಇವೆ. ಆದರೆ ಸಧ್ಯಕ್ಕೆ ಇಷ್ಟು ಸಾಕಲ್ಲವೇ? ನನ್ನಂಥವರ ಕೈಗೆ ‘ಮೈಕ್’ ಕೊಟ್ಟರೆ ಅಪಾಯ, ೆಂದು ನಿಮಗನ್ನಿಸುವ ಮೊದಲೇ ನಿಲ್ಲಿಸುತ್ತೇನೆ.

ಇದನ್ನು ಬರೆಯಲು ಪ್ರಚೋದಿಸಿದ್ದು ಶ್ರೀಮತಿ ರುಕ್ಮಿಣಿಮಾಲಾ ಅವರ “ವೈದ್ಯೋ ನಾರಾಯಣೋ(ಹರಿ) ಹಾಲಾಹಲ” ಎಂಬ ಬ್ಲಾಗ್. ಎಂದೇ, ತೆಗಳಿಕೆಗಳಿದ್ದರೆ ಅವರಿಗೇ ಕಳುಹಿಸಿ. http://rukminimala.wordpress.com/

Advertisements
This entry was posted in ಹಾಗೇ ಸುಮ್ಮನೆ. Bookmark the permalink.

6 Responses to ವೈದ್ಯೋ ನಾರಾಯಣೋ—-

 1. ಜಿ೦ಕೆ ಸುಬ್ಬಣ್ಣ, ಪುತ್ತೂರು ಹೇಳುತ್ತಾರೆ:

  ಮ೦ಗಳೂರಿನಲ್ಲಿ ಎರಡನೆ / ಮೂರನೇ ತಲೆಮಾರಿನ ಪ್ರಸಿಧ್ಧ ದ೦ತವೈದ್ಯ ಪರಿಣತರ ಮನೆಯ ಹಿರಿತಲೆ ಹಲ್ಲು ತೆಗೆಯುವುದರಲ್ಲೇ ಬಹಳ ಪ್ರಸಿಧ್ಧರು, ತೆಗೆಯಬೇಕಾದ ಹಲ್ಲೊ೦ದನ್ನು ಬಿಟ್ಟು ಬೇರೆ ಹಲ್ಲನ್ನು ತೆಗೆಯುವುದು ಅವರ ವೈಶಿಷ್ಟ್ಯ !.
  ಉಳಿದ ಮಾತ್ರೆಗಳನ್ನು ಕಸದ ಬುಟ್ಟಿಗೆ ಹಾಕಿದೆ, ಎ೦ದಿರಿ. ಇದಕ್ಕೆ ಒ೦ದು ಪರ್ಯಾಯವಿದೆ. ನಿಮ್ಮ ಪರಿಚಯದ ಔಷಧ ಅ೦ಗಡಿಗೆ ಅವನ್ನು ಕೊಟ್ಟು, ಅಲ್ಲಿ೦ದ ನಿಮ್ಮ ಅವಶ್ಯಕತೆಯ ಬೇರೇನನ್ನೋ ಖರೀದಿಸುವುದು. ನೀವು ಇದನ್ನು ಘನತೆಗೆ ಕು೦ದು ಎ೦ದು ಭಾವಿಸಬಾರದು, ಏಕೆ೦ದರೆ ಇ೦ತಹಾ ವಿನಿಮಯ ಮಾಡದಿದ್ದರೆ ಇದು national waste ಅಲ್ಲವೇ ? ಈ ದಿನಗಳಲ್ಲಿ ಈ ಪದ ಪು೦ಜದ ಬಳಕೆ ಬಹು ಕಮ್ಮಿಯಾಗಿದೆ. ಕಾಲಾಯ ತಸ್ಮೈ ನಮಃ !
  ಉಧ್ಧರಣೆಯ ಅವಾ೦ತರದ ಕುರಿತು ೫ – ೬ ತಿ೦ಗಳ ಹಿ೦ದೆ ದೇಶಕಾಲ (ಪಾಕ್ಷಿಕ) ದಲ್ಲಿ ಕೆವಿ ಅಕ್ಷರರ ಬಹು ಅರ್ಥಗರ್ಭಿತವಾದ ಲೇಖನ ನೆನಪಾಯಿತು, ಈ ಶ್ಲೋಕದ ಅರ್ಥವನ್ನು ನೀವು ತಿಳಿಸಿದ೦ತೆಯೇ ವಿವರಿಸಿದ್ದರು.

 2. rukminimala ಹೇಳುತ್ತಾರೆ:

  ನನಗೊಂದು ಗುಮಾನಿ. ವೈದ್ಯಕೀಯ ಓದಲು ಸಿಕ್ಕಾಪಟ್ಟೆಏಏಏಏಏಏಏಏಏಏ ಖರ್ಚು ಮಾಡಬೇಕಲ್ಲ ಈಗ. ಅದಕ್ಕೆ ವೈದ್ಯರು ರೋಗಿಗಳನ್ನು ಸತಾಯಿಸುವುದಿರಬಹುದೆ? ದಂತವೈದ್ಯರಲ್ಲಿಗೆ ಹೋದಾಗ ಅವರ ಸೇವಾಶುಲ್ಕ ಕಳೆದ ಬಾರಿಗಿಂತ ದುಪ್ಪಟ್ಟು ಹೆಚ್ಚಾಗಿತ್ತು. ಸಂಶೋಧಿಸಲಾಗಿ ಅವರ ಮಗ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆಂಬುದು ತಿಳಿಯಿತು! ಕ್ಷಮಿಸಬೇಕು ಎಲ್ಲ ವೈದ್ಯರು ಹೀಗಿಲ್ಲ.

 3. my pen from shrishaila ಹೇಳುತ್ತಾರೆ:

  ನಿಮ್ಮ ಅನುಭವಗಳು ನನ್ನ ಹಳೆ ನೆನಪುಗಳನ್ನು ಕಲಕಿದವು. ನಾವು ಅಪ್ಪ-ಅಮ್ಮ ಎಂಬ ಪಟ್ಟ ಪಡೆದ ಹೊಸತರಲ್ಲಿ ಇಂತಹ ಅನುಭವಗಳು ಯಥೇಛ್ಛವಾಗಿರುತ್ತವೆ. ಬಹುತೇಕ ನಾವು ನಮ್ಮ ಮನೆ ಔಷದಿಗಳನ್ನು ಪ್ರಯೋಗ ಮಾಡಿ ಸುಧಾರಿಸಲಾಗುತ್ತದೆ. ಎಷ್ಟೋ ಸರ್ತಿ ನಮ್ಮ ಕಪ್ಪ ಕಾಣಿಕೆಗಳು ವೈದ್ಯರಿಗೆ ಹೋಗಲಿತ್ತು ಎಂದು ಸಮಾಧಾನ ಪಡಬೇಕಾಗುತ್ತದೆ.
  ಶೈಲಜ

 4. raoavg ಹೇಳುತ್ತಾರೆ:

  ಯಾವ ವೈದ್ಯರ ಮಕ್ಕಳು ವೈದ್ಯಕೀಯ ವ್ಯಾಸಂಗ ಮಾಡುತ್ತಿಲ್ಲವೋ ಆ ವೈದ್ಯರ ಹತ್ತಿರ ಹೋದರೆ ಸೇವಾಶುಲ್ಕ ಕೊಂಚ ಕಮ್ಮಿ ಇರುವ ಸಾಧ್ಯತೆ ಇದೆ ಎಂಬ ಅರಿವು ಮೂಡಿತು – ರುಕ್ಮಿಣಿಯ ಟಿಪ್ಪಣಿ ಓದಿದ ಮೇಲೆ.

 5. ಸಿಂಧೂ ಹೇಳುತ್ತಾರೆ:

  ಬೆರಳು ಮೂಳೆ ಮುರಿತದ ಬಗ್ಗೆ ಹೇಳಿದ್ದು ಅಪೋಲೋ ಆಸ್ಪತ್ರೆ ಇರಬೇಕು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s