ಮದುವೆಗಳಿಗೆ ಹೋಗುವುದು-ಅಂದು,ಇಂದು

ಮನೆಯಂಗಳದಲ್ಲಿ ಚಪ್ಪರ ಹಾಕಿ, ಅದರೊಳಗೊಂದು ಚಿಕ್ಕ ಚೊಕ್ಕ ಮಂಟಪ ನಿರ್ಮಿಸಿ ಮಗಳನ್ನು ಮದುವೆ ಮಾಡಿಕೊಡುತ್ತಿದ್ದ ಕಾಲವೊಂದಿತ್ತು. ಮನಸ್ಸಿಗೆ ಖುಷಿ ನೀಡುವ ಮದುವೆಗಳಾಗಿರುತ್ತಿದ್ದವು ಅವು. ಎಂದೇ. ಆಮಂತ್ರಿತರು ಅವುಗಳಿಗೆ ಹೋಗುವುದನ್ನು ಕುಂಟುನೆಪ ಹೇಳಿಯೋ ಕಾರ್ಯಬಾಹುಳ್ಯದ ಕಾರಣ ನೀಡಿಯೋ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆ ಮದುವೆಗಳಿಗೆ ಹೋಗುವುದೇ ಒಂದು ಚೇತೋಹಾರೀ ಅನುಭವವಾಗತ್ತು. ಆಮಂತ್ರಣ ಪತ್ರಿಕೆಯಲ್ಲಿ ಇರುತ್ತಿದ್ದ ವಿನಂತಿಯನ್ನು ಮನ್ನಿಸಿ  ಅತಿ ಸಮೀಪದ ಬಂಧುವರ್ಗದ ಯಜಮಾನರು ‘ಒಪ್ಪೊತ್ತು ಮುಂಚಿತವಾಗಿಯೇ’ ‘ಸಕುಟುಂಬ ಸಪರಿವಾರ’ಸಹಿತ ಹಾಜರಾಗುತ್ತಿದ್ದರು. ಮದುವೆಗೆ ಹೋಗುವುದು ಅಂದರೆ ಮುಹೂರ್ತಕ್ಕೆ ಮುನ್ನವೇ ಹೋಗುವುದು ಎಂದು ಇತರರೂ ತಿಳಿದಿದ್ದ ಕಾಲ ಅದು. ಚಪ್ಪರ ಮಂಟಪಗಳ ಅಲಂಕಾರದಲ್ಲಿ, ಮರುದಿನ ವರಮಹಾಶಯರ ‘ದಿಬ್ಬಣ’ದ ಸ್ವಾಗತಕ್ಕೆ ಅಗತ್ಯವಾದ ಪೂರ್ವಸಿದ್ಧತೆ, ರಾತ್ರಿ ತರಕಾರಿ ಕತ್ತರಿಸುವ ಸಂಭ್ರಮ, ಕತ್ತರಿಸುವವರಿಗೆ ಧಾರಾಳವಾಗಿ ಕಾಫಿ/ಚಾ -ಬಜ್ಜಿ ಸರಬರಾಜಿನ ಗೌಜಿ, ಮಾರನೆಯ ದಿನದ ‘ಸುಧರಿಕೆಯಲ್ಲಿ’ ಯಾರ ಪಾತ್ರ ಏನು ಎಂಬುದರ ತೀರ್ಮಾನ – ಹೀಗೆ  ಗೌಜಿಯೋ ಗೌಜಿ. ಮದುವೆಯ ಹಿಂದಿನ ರಾತ್ರಿ ಬೇಗ ಮಲಗಿ ಬೇಗ ಎದ್ದು ಎಲ್ಲರಿಗಿಂತ ಮೊದಲೇ ನಿತ್ಯಕರ್ಮಗಳನ್ನು ಮುಗಿಸಿ ದಿಬ್ಬಣ ಸ್ವಾಗತಿಸಲು ಸಿದ್ಧರಾಗಬೇಕೆಂದು ನಿರ್ಧರಿಸಿ ನಡುರಾತ್ರಿಯ ತನಕ ‘ಗಹನ’ವಾದ ವಿಷಯಗಳ ಕುರಿತು,ಚರ್ಚಿಸುತ್ತಿದ್ದು ಇತರರ ನಿದ್ದೆಗೆಡಿಸುವ ಹೆಂಗಸರ ಸಮೂಹ ಒಂದೆಡೆ, ಇವರ ಹರಟೆಯಿಂದಾಗಿ ನಿದ್ದೆ ಮಾಡಲಾಗದೆ ಗೊಣಗುತ್ತ ನಿದ್ದೆಮಾಡಲು ಪ್ರಯತ್ನಿಸುವ ಗಂಡಸರು ಇನ್ನೊಂದೆಡೆ. ರಾತ್ರಿ ೩-೪ ಗಂಟೆಗೆಲ್ಲ ಎದ್ದು  ಶೌಚಾಲಯ, ಬಚ್ಚಲುಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸಿರುವ ಹೆಂಗಸರು ಜಾಗ ಖಾಲಿ ಮಾಡುವಿಕೆಯನ್ನು ಕಾತರದಿಂದ ಎದುರು ನೋಡುವ ಗಂಡಸರು. ವಧುವನ್ನು ಸಿಂಗರಿಸುವ ಕಾಯಕದಲ್ಲಿ ಮಗ್ನವಾಗುವ ‘ಅನುಭವೀ’ ಬಂಧುಗಳ ಚರ್ಚೆ. ದಿಬ್ಬಣ ಬಂತು ಎಂಬ ಘೋಷಣೆ ಕಿವಿಗೆ ಬಿದ್ದೊಡನೆ ತರಾತುರಿಯಿಂದ ಸಜ್ಜುಗೊಳ್ಳುವ ‘ಸ್ವಾಗತ ಸಮಿತಿ’, ದಿಬ್ಬಣದ ಸದಸ್ಯರಿಗೆ ಉಪಚಾರ ಮಾಡುವ ಯುವಪಡೆಯ ಸಂಭ್ರಮ. ದಿಬ್ಬಣವನ್ನು ಸ್ವಾಗತಿಸಿ ಆದ ಬಳಿಕ ಬರುವ ಆಮಂತ್ರಿತರಿಗೆ ಉಪಾಹಾರ/ಪಾನೀಯಗಳನ್ನು ಪೂರೈಸುವ ಯುವಪಡೆಯ ಬದ್ಧತೆ/ಕಾರ್ಯದಕ್ಷತೆ. ಎಲ್ಲರೂ ಮದುವೆಯ ಶಾಸ್ತ್ರೋಕ್ತ ವಿಧಿವಿಧಾನಗಳನ್ನು (ಮೆಲುದನಿಯಲ್ಲಿ ಹರಟುತ್ತ) ವೀಕ್ಷಿಸುತ್ತಿದ್ದ ದೃಶ್ಯ. ಗಡಿಬಿಡಿ ಮಾಡದೆ ಸಾವಕಾಶವಾಗಿ ಮಂತ್ರಾಕ್ಷತೆ ಹಾಕಿ, ಉಡುಗೊರೆ ನೀಡುತ್ತಿದ್ದ ಪರಿ. ಭೋಜನಕ್ಕೆ ಸಭಾಂಗಣವನ್ನು ಸಜ್ಜುಗೊಳಿಸುವ ಹಾಗೂ ಬಡಿಸುವ ಕಾರ್ಯಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ನಿಭಾಯಿಸಲು ಸ್ಪರ್ಧಿಸುವ ಯುವಪಡೆ, ‘ಚೂರ್ಣಿಕೆ’ಗಳು (ಇತ್ತೀಚೆಗೆ ಒಂದೆರಡು ಮದುವೆಗಳಲ್ಲಿ ಚೂರ್ಣಿಕೆಯ ಬದಲು ಭಾವಗೀತೆ/ದೇವರನಾಮಗಳನ್ನು ಧ್ವನಿವರ್ಧಕದ ನೆರವಿನಿಂದ ಹಾಡಿದ್ದನ್ನು ಗಮನಿಸಿದ್ದೇನೆ) ಎಂಬ ವೇಗನಿಯಂತ್ರಕಗಳ ನೆರವಿನೊಂದಿಗೆ ಶಿಸ್ತುಬದ್ಧವಾದ ಸಹಭೋಜನ- ಹೀಗೆ ಎಲ್ಲವನ್ನೂ ವರ್ಣಿಸತೊಡಗದರೆ ಸುದೀರ್ಘ ಲೇಖನವೇ ಆದೀತು.

ಇಂದೇನಿದ್ದರೂ ಕಲ್ಯಾಣಮಂಟಪ ಎಂಬ ಛತ್ರಗಳಲ್ಲಿ ಮದುವೆ ಮಾಡಿಕೊಡುವುದೇ ‘ಫ್ಯಾಷನ್’. ನಗರ ಗಳಲ್ಲಿ ಇರುವ ಕಲ್ಯಾಣಮಂಟಪಗಳಲ್ಲಿ ಮಾಡುವ ಮದುವೆಗಳು ಅನನ್ಯವಾದವು (ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಕಲ್ಯಾಣಮಂಟಪಗಳಲ್ಲಿ ಆಗುವ ಮದುವೆಗಳಿಗೂ ಇವಕ್ಕೂ ಸ್ವಲ್ಪ ವ್ಯತ್ಯಾಸವಿದೆ).  ವಧು ಮತ್ತು ಅವಳ ಅತಿ ಸಮೀಪದ ಬಳಗದವರು ಕಲ್ಯಾಣಮಂಟಪಕ್ಕೆ ಪೂರ್ವನಿಗದಿತ ವೇಳೆಗೆ ನೆಂಟರಂತೆ ತಲುಪಿದರೆ ಆಯಿತು. ಉಳಿದೆಲ್ಲವನ್ನೂ (ವಧುವನ್ನು ಸಿಂಗರಿಸುವ ಕಾರ್ಯವೂ ಸೇರಿದಂತೆ) ಮಾಡುವ ತಜ್ಞ ಗುತ್ತಿಗೆದಾರರು ನಿಭಾಯಿಸುತ್ತಾರೆ (ಅವರ ಶುಲ್ಕ ನೀಡಲೋಸುಗ ಹಣಕೂಡಿಡ ಬೇಕಾದದ್ದು ಕನ್ಯಾಪಿತೃವಿನ ಪ್ರಧಾನ ಕರ್ತವ್ಯ). ಬಂಧುವರ್ಗದವರಿಗೆ ಏನೂ ಕೆಲಸವಿಲ್ಲದ್ದರಿಂದ ಭೋಜನಕ್ಕೆ ಮೊದಲು ತಲುಪಿದರೆ ಧಾರಾಳ ಸಾಕು. ಬೆಳಗ್ಗೆ ಮುಹೂರ್ತವಿದ್ದದ್ದೇ ಆದರೆ ಧಾರೆಯ ಸಮಯದಲ್ಲಿ ಕಲ್ಯಾಣಮಂಟಪ ಭಣಗುಡುತ್ತಿರುತ್ತದೆ. ಮದುವೆಗೆ ಬಂದವರು ತಾವು ಬಂದಿದ್ದೇವೆ ಎಂಬುದನ್ನು ವಧುವಿನ ತಂದೆಗೆ ಅಥವ ತಾಯಿಗೆ ತಿಳಿಯಪಡಿಸಲೋಸುಗ ಅವರನ್ನು ಹುಡುಕಿ ತಲೆಆಡಿಸಿ ಹಲ್ಲುಕಿರಿದರೆ ಸಾಕು. ತದನಂತರ ಮಂತ್ರಾಕ್ಷತೆಯ ಕಾರ್ಯಕ್ರಮ ಆರಂಭವಾಗುವ ತನಕ ಹರಟೆ ಹೊಡೆಯಲು ತಕ್ಕವರು ಎಂದು ತೀರ್ಮಾನಿಸಿದವರ ಪಕ್ಕದಲ್ಲಿ ಒಂದು ಕುರ್ಚಿಯಲ್ಲಿ ಆಸೀನರಾಗಿ ಹರಟುತ್ತಿರಬಹುದು. ಹರಟಲು ಏನೂ ವಿಷಯ ಬಾಕಿ ಉಳಿದಿಲ್ಲ ಅಂದನ್ನಿಸಿದರೆ ಬೇರೆ ಯಾರಾದರೂ ಪರಿಚಿತರು ಇರುವರೇ ಎಂದು ಕಣ್ಣಾಡಿಸಿ ಇದ್ದರೆ ಅವರನ್ನು ಒಬ್ಬೊಬ್ಬರನ್ನಾಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಬಹುದು. ವಧುವಿನ ಅತೀ ಸಮೀಪದ ಬಂಧುವಲ್ಲದಿದ್ದರೆ ವಿಧಿವಿಧಾನಗಳನ್ನು (ಇವೂ ಸಂಕ್ಷಿಪ್ತ ರೂಪ ತಾಳಿರುವುದಲ್ಲದೆ, ನಂಬಿಕೆ-ಪಾವಿತ್ರ್ಯ- ಗಂಭೀರತೆಗಳನ್ನು ಕಳೆದುಕೊಂಡು ಮಾಡದೇ ಇದ್ದರೆ ಮುಂದೇನಾದರೂ ತೊಂದರೆ ಆದೀತು ಎಂಬ ಭಯದಿಂದಲೋ ಜಾತಿಬಾಂಧವರು ಏನಾದರೂ ಆಡಿಕೊಂಡಾರು ಎಂಬ ಭಯದಿಂದಲೋ ಧಾರೆ, ಸಪ್ತಪದಿ ಇತ್ಯಾದಿ ‘ಶಾಸ್ತ್ರ’ಗಳೊಂದಿಗೆ ಕಲ್ಯಾಣಮಂಟಪದ ‘ವರನ ಕೋಣೆ’ಯೇ ವರನ ಮನೆಯಾಗಿ ವಧು ಗೃಹಪ್ರವೇಶದ ‘ಶಾಸ್ತ್ರ’ವೂ ‘ಶತಾಬ್ದಿ ರೈಲಿನ ವೇಗದಲ್ಲಿ ಜರಗುತ್ತವೆ) ನೋಡುವ ನಾಟಕ ಮಾಡಿದರೆ ಸಾಕು. (ಸರಿಯಾಗಿ ನೋಡಲೇಬೇಕೆಂದಾದರೆ ನೀವು ವೇದಿಕೆಯ ಮೇಲೆಯೇ ಹೋಗಿ ಕುಳಿತುಕೊಳ್ಳಬೇಕು). ವಿಡಿಯೋಗ್ರಾಫರ್, ಅವನ ಸಹಚರ ಮತ್ತು ವಧುವಿನ ಆತ್ಮೀಯರು ಸಭಾಂಗಣದಲ್ಲಿ ಕುಳಿತವರಿಗೆ ವೇದಿಕೆಯ ಮೇಲಿನ ಆಗುಹೋಗುಗಳು ಸ್ಪಷ್ಟವಾಗಿ ಗೋಚರಿಸದಂತೆ ಅಡ್ಡನಿಲ್ಲುವುದು ಪ್ರಸಾಮಾನ್ಯ. ವಿಡಿಯೋಗ್ರಾಫರ್ ಸಭಾಂಗಣದಲ್ಲಿ ಕುಳಿತಿರುವವರ ವಿಡಿಯೋ ತೆಗೆಯುವಾಗ ವೇದಿಕೆಯತ್ತ ತೀವ್ರ ಆಸಕ್ತಿಯಿಂದ ನೋಡುತ್ತಿರುವವರಂತೆಯೋ ಪಕ್ಕದವರ ಹತ್ತಿರ ವಿಚಾರವಿನಿಮಯ ಮಾಡುತ್ತಿರುವವರಂತೆಯೋ ನೀವು ದಾಖಲಾಗುವುದನ್ನು ಖಾತರಿ ಪಡಿಸಿಕೊಳ್ಳಿ. ಮಂತ್ರಾಕ್ಷತೆ ಆರಂಭವಾಗುವ ಸೂಚನೆ ಕಂಡೊಡನೆ ತರಾತುರಿಯಿಂದ ಸರತಿಸಾಲಿನಲ್ಲಿ ನಿಂತು ಗಮ್ಯಸ್ಥಾನ ತಲುಪಿ ಕೃತಕ ಮುಗುಳ್ನಗುವಿನೊಂದಿಗೆ ಮಂತ್ರಾಕ್ಷತೆ ಹಾಕಿದರೆ ಮುಗಿಯಿತು, ‘ಭೋಜನ ಸಿದ್ಧವಾಗಿದೆ’ ಎಂಬ ಘೋಷಣೆ ಹೊರಬೀಳುವುದನ್ನು ನಿರೀಕ್ಷಿಸುತ್ತಾ ಕಾಲಯಾಪನೆ ಮಾಡತಕ್ಕದ್ದು. ಘೋಷಣೆ ಹೊರಬಿದ್ದೊಡನೆ ಯಾವ ಸಂಕೋಚವೂ ಇಲ್ಲದೆ ಘನಗಾಂಭೀರ್ಯದಿಂದ ‘ಡೈನಿಂಗ್ ಹಾಲ್’ನತ್ತ ಧಾವಿಸತಕ್ಕದ್ದು. (ಇತ್ತೀಚೆಗೆ ಮದುವೆಗಳು ‘ಜಾತ್ರೆ’ಯಂತಿರುತ್ತವೆ) ಸಂಕೋಚಪಟ್ಟುಕೊಂಡು ತಡಮಾಡಿದಿರೋ ನಿಮಗೆ ಮೊದಲನೇ ಬಾರಿ ಸ್ಥಳ ಸಿಕ್ಕದಿರುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆದರೆ ‘ಹಾಲ್’ನ ಆಸುಪಾಸಿನಲ್ಲಿಯೇ ಸುಳಿದಾಡುತ್ತಿದ್ದು ಯಾರು ಊಟ ಮುಗಿಸಿ ಮೊದಲು ಏಳುತ್ತಾರೆಂಬುದರ ಕಡೆ ಗಮನವಿಟ್ಟಿದ್ದು ಅವರು ಎದ್ದ ತಕ್ಷಣ ಕುರ್ಚಿಯಲ್ಲಿ ಸುಖಾಸೀನರಾಗುವುದು ಒಳ್ಳೆಯದು. (ಇದನ್ನು ತಪ್ಪಿಸಲೋ ಏನೋ ಗ್ರಾಮಾಂತರ ಪ್ರದೇಶಗಳ ಕಲ್ಯಾಣಮಂಟಪಗಳಲ್ಲಿ ಜರಗುವ ಮದುವೆಗಳಲ್ಲಿ ನೆಲದಲ್ಲಿ ಕುಳಿತು ಊಟಮಾಡುವ ವ್ಯವಸ್ಥೆಯೊಂದಿಗೆ ಬುಫೆ ವ್ಯವಸ್ಥೆ ಇದ್ದೇ ಇರುತ್ತದೆ.) ಊಟ ಆರಂಭಿಸಲು ಎಲ್ಲರಿಗೂ ಅನ್ನ ಬಡಿಸಿ ಆಗುವ ತನಕ ಕಾಯಬೇಕಾಗಿಲ್ಲ. ಮೊದಲು ಬಡಿಸುವ ಪಲ್ಯ ಇತ್ಯಾದಿಗಳ ರುಚಿಯನ್ನು ಬಡಿಸಿದ ತಕ್ಷಣವೇ ಆಸ್ವಾದಿಸಲು ಆರಂಭಿಸಬಹುದು. ಸಂಕೋಚವಾದರೆ ನಿಮಗೆ ಮತ್ತು ನಿಮ್ಮ ನಂತರದ ಎರಡು ಮಂದಿಗೆ ಅನ್ನ ಬಡಿಸುವ ತನಕ ಕಾಯಬಹುದು. ಇತ್ತೀಚೆಗೆ ಮೊದಲು ಪೂರಿ ಅಥವ ಚಪಾತಿ ಅಥವ ಬಿಸಿಬೇಳೆಬಾತ್ ಬಡಿಸುವ ಕ್ರಮ (ನಮ್ಮ ಜಾತಿ ಬಾಂಧವರಲ್ಲಿ ಅಪರೂಪ) ಇರುವುದರಿಂದ ಬಡಿಸಿದ ತಕ್ಷಣ ತಿನ್ನಲಾರಂಭಿಸುವದು ಅಪರಾಧ ಅನ್ನಿಸುವುದಿಲ್ಲ. ಸಾವಕಾಶವಾಗಿ ಭೊಜನ ಆಗಲಿ ಎಂದು ಯಜಮಾನರು ವಿನಂತಿಸಿಕೊಂಡರೂ ಬಡಿಸುವವರ ವೇಗಕ್ಕೆ ಅನುಗುಣವಾಗಿ ನುಂಗುವುದನ್ನು ರೂಢಿಸಿಕೊಂಡಿದ್ದವರು ಎಲ್ಲ ಖಾದ್ಯಗಳ ರುಚಿ ನೋಡಬಹುದು. ಘಟ್ಟದ ಮೇಲಿನ ಮದುವೆಗಳಾದರೆ ಪಾಯಸ, ಸಿಹಿ ಭಕ್ಷ್ಯ, ಪಲ್ಯಗಳು, ಕೋಸುಂಬರಿ ಇತ್ಯಾದಿಗಳನ್ನು ಎರಡನೇ ಬಾರಿ ಕೇಳುವ ಕ್ರಮ ಇಲ್ಲವಾದ್ದರಿಂದ ಅವು ಬಂದಾಗ ಸಂಕೋಚದಿಂದಲೋ ಎಲೆಯಲ್ಲಿ ಜಾಗವಿಲ್ಲವೆಂದೋ ಬೇಡ ಎಂದರೆ ಅವುಗಳ ರುಚಿ ನೋಡುವ ಸೌಭಾಗ್ಯದಿಂದ ವಂಚಿತರಾಗುತ್ತೀರಿ. ಒಂದು ಸಣ್ಣ ತೆಂಗಿನಕಾಯಿ ೨-೩ ವೀಳ್ಯದೆಲೆ ೧ ಚಿಕ್ಕ ಅಡಿಕೆಪುಡಿ ಪೊಟ್ಟಣ ಇರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಮ್ಮ ಕೈಸೇರುವುದು ಊಟ ಮುಗಿಸಿ ಮುಂದಿನವರಿಗೆ ಜಾಗ ಬಿಡಿ ಎಂಬುದರ ಸೂಚನೆ. ಮೊಂಡತನದಿಂದ ನೀವೇನಾದರೂ ಸಾವಧಾನವಾಗಿ ಊಟಮಾಡಿದರೆ ಉಳಿದವರು ಎದ್ದು ಹೋಗಿರುತ್ತಾರೆ. ಟೇಬಲ್ ಶುಚಿ ಮಾಡುವವರು ತಮ್ಮ ಕಾರ್ಯ ಆರಂಭಿಸಿಯೇ ಬಿಡುತ್ತಾರೆ. ಊಟ ಆದವರು ಆದ ತಕ್ಷಣ ಎದ್ದು ಹೋಗುವುದು ಈಗಿನ ಕ್ರಮ (ಎಲ್ಲರದ್ದೂ ಅಥವ ತನ್ನ ಪಂಕ್ತಿಯಲ್ಲಿ ಕುಳಿತವರದ್ದು ಮುಗಿಯುವ ತನಕ ಕಾಯಬೇಕಿಲ್ಲ). ತದನಂತರ ವಧುವಿನ ತಂದೆ/ತಾಯಿಗೆ ‘ನಾವಿನ್ನು ಬರುತ್ತೇವೆ. ಮದುವೆ ಚೆನ್ನಾಗಿ ಆಯಿತು. ಊಟೋಪಚಾರವೂ ಚೆನ್ನಾಗಿತ್ತು’ ಎಂದು ಹೇಳಿ ಹೊರಡಬಹುದು.

೨೧ನೇ ಶತಮಾನದಲ್ಲಿ ರಜಾದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಯಾರಿಗೂ (ನನ್ನಂಥ ನಿವೃತ್ತರಾದವರನ್ನು ಹೊರತುಪಡಿಸಿ) ಪುರಸತ್ತು ಇರುವುದಿಲ್ಲವಾದರಿಂದ ಮದುವೆಗಳಿಗೆ ಹಾಜರಿ ಹಾಕುವುದು ಬಲುಕಷ್ಟ. ‘ಮದುವೆಗೆ ಹೋಗಲಾಗಲಿಲ್ಲವಲ್ಲ’ ಎಂಬ ‘ಪಾಪಪ್ರಜ್ಞೆ’ ಇವರನ್ನು ಕಾಡಬಾರದು ಎಂಬುದಕ್ಕಾಗಿ ನಗರ ಪ್ರದೇಶಗಳಲ್ಲಿ ‘ರಿಸೆಪ್ಷನ್’ ಎಂಬ ‘ಶಾಸ್ತ್ರ’ವೊಂದನ್ನು ಸಂಘಟಿಸುತ್ತಾರೆ. ಇದು ಸಾಮಾನ್ಯವಾಗಿ ಸಂಜೆ ೭ ರಿಂದ ೯ ಗಂಟೆಯ ತನಕ ಜರಗುತ್ತದೆ ಎಂದು ಆಮಂತ್ರಣ ಪತ್ರಿಕೆ ಹೇಳುವುದು ವಾಡಿಕೆ. ಈ ‘ಶಾಸ್ತ್ರ’ ಮದುವೆಯ ಹಿಂದಿನ ದಿನ ಸಂಜೆ, ಮದುವೆಯ ದಿನದ ಸಂಜೆ, ಅಥವ ಅದರ ಆಸುಪಾಸಿನ ಬೇರೆ ಯಾವುದಾರೊಂದು ಅನುಕೂಲವಾದ ದಿನ -ಹೀಗೆ ಯಾವಾಗ ಬೇಕಾದರೂ ನಡೆಯಬಹುದು.(ಭಾನುವಾರವಾದರೆ ಮಧ್ಯಾಹ್ನವೂ ನಡೆಯಬಹುದು). ‘ಸ್ವಾಗತ ಸಮಾರಂಭ’ ಎಂಬ ಅರ್ಥವಿರುವ ‘ರಿಸೆಪ್ಷನ್’ ಪದವನ್ನು ‘ಆರತಕ್ಷತೆ’ ಎಂದು ಅನಾಮಧೇಯರೊಬ್ಬರು ‘ಕನ್ನಡೀಕರಿಸಿ’ದ್ದಾರೆ. ಆರತಿ, ಅಕ್ಷತೆಗಳೆರಡನ್ನೂ ಉಪಯೋಗಿಸದ ‘ಆರತಕ್ಷತೆ’ ಸಮಾರಂಭ ಇದು. ಆಮಂತ್ರಣ ಪತ್ರದಲ್ಲಿ ಸೂಚಿಸಿದ ಸಮಯಕ್ಕೆ ಸರಿಯಾಗಿ ಇದು ಆರಂಭವಾಗುವುದು ಅತೀ ವಿರಳ. ಗುರುತು ಸಿಕ್ಕದಷ್ಟು ‘ಸುಂದರ’ವಾಗಿ ವಧುವನ್ನು ಸಿಂಗರಿಸಬೇಕಾಗಿರುವುದು ಇದಕ್ಕೆ ಕಾರಣ. ಪ್ರಸಾಮಾನ್ಯವಾಗಿ ಈ ಕಾರ್ಯ ನಿಭಾಯಿಸುವವರು ತರಬೇತಿ ಪಡೆದ ಶೃಂಗಾರ-ಕುಶಲಿ (ಬ್ಯೂಟಿಷನ್) ಆಗಿರುತ್ತಾರೆ. ಅದಕ್ಕೆ ತಕ್ಕನಾಗಿ ವರನೂ ‘ಸೂಟು ಬೂಟು ಟೈ’ದಾರಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅನಿವಾರ್ಯ (ವರನ ಮುಖಾರವಿಂದವನ್ನು (ಹೇರ್ ಸ್ಟೈಲೂ ಸೇರಿ) ಇರುವುದಕ್ಕಿಂತ ಸುಂದರವಾಗಿ ಕಾಣುವಂತೆ.ಮಾಡಬಲ್ಲ ಶೃಂಗಾರ-ಕುಶಲಿಗಳ ಸೇವೆಯೂ ಈಗ ಲಭ್ಯ). ಈ ‘ರಿಸೆಪ್ಷನ್’ಗಳಿಗೆ ಮದುವೆಗಳಿಗಿಂತ ಹೆಚ್ಚು ಜನ ಹೋಗುವುದು ಈಗ ಸಾಮಾನ್ಯ. ಕಲ್ಯಾಣಮಂಟಪಕ್ಕೆ ತಲುಪಿ, ಬಾಗಿಲಲ್ಲಿ ಕೊಡುವ ಪಾನೀಯ ಕುಡಿಯಿರಿ. (ಹೆಂಗಸರು ಅಲ್ಲಿಯೇ ಇಟ್ಟಿರುವ ಗುಲಾಬಿ ತೆಗೆದುಕೊಳ್ಳಬೇಕು, ‘ಅರಿಶಿನ-ಕುಂಕುಮ’ ಇಟ್ಟುಕೊಳ್ಳಬೇಕು. -ಪ್ರಸಾಮಾನ್ಯವಾಗಿ ಈ ಕಾರ್ಯದ ಉಸ್ತುವಾರಿ ಅವಿವಾಹಿತ ತರುಣಿಯರದ್ದು) ಸಭಾಂಗಣದೊಳಕ್ಕೆ ಹೋದೊಡನೆ ಪರಿಚಿತರು ಯಾರಾದರೂ ಇದ್ದಾರೆಯೇ ಎಂಬುದನ್ನು ನೋಡಿ. ಇದ್ದರೆ, ಅವರ ಪಕ್ಕದಲ್ಲಿ ಕುಳಿತು (ಕುರ್ಚಿ ಖಾಲಿ ಇದ್ದರೆ) ಒಂದೈದು ನಿಮಿಷ ಏನಾದರೂ ಮಾತನಾಡಿ. ಆ ವೇಳೆಗಾಗಲೇ ವಧೂವರರು ವೇದಿಕೆಯ ಮೇಲಿದ್ದರೆ ನಿಮ್ಮ ಪುಣ್ಯ. ಅವರಿಗೆ ಶುಭಕೋರಲು ಕಾತರರಾಗಿರುವವರ ಸರತಿಸಾಲಿನಲ್ಲಿ (ಇದರ ಉದ್ದಕ್ಕೂ ಮದುವೆಯ ಭರ್ಜರೀತನಕ್ಕೂ ಸಂಬಂಧವಿದೆ) ಸೇರಿಕೊಳ್ಳಿ. ಗಮ್ಯ ಸ್ಥಾನ ತಲುಪಿದ ತನಕ ‘ನಗುಮುಖ’ದಲ್ಲಿ ವಧೂವರರ ಕೈಕುಲುಕಿ ಅವರಿಗೆ ಶುಭಹಾರೈಸಿ (ಉಡುಗೊರೆ ಕೊಟುವುದಿದ್ದರೆ ಕೊಟ್ಟು), ಅವರ ‘ತೇಂಕ್ಯೂ’ ಸ್ವೀಕರಿಸಿ. ವಧೂವರರ ಪರಿಚಯ ನಿಮಗೆ ಅಥವ ಅವರಿಗೆ ನಿಮ್ಮ ಪರಿಚಯ ಇಲ್ಲದಿದ್ದರೆ ನೀವೇ ಪರಿಚಯ ಮಾಡಿಕೊಳ್ಳಿ (ಕೆಲವೊಮ್ಮೆ ಈ ಕಾರ್ಯವನ್ನು ಅಲ್ಲಿಯೇ ನಿಂತಿರುವ ವಧುವಿನ/ವರನ ತಂದೆ/ತಾಯಿ ಮಾಡುವುದುಂಟು. ವಧುವಿನ/ವರನ ಮಿತ್ರವೃಂದಕ್ಕೆ ನೀವು ಸೇರಿದವರಾಗಿದ್ದರೆ ಅವರೇ ನಿಮ್ಮನ್ನು ತಮ್ಮ ಸಂಗಾತಿಗೆ/ತಮದೆತಾಯಿಯರಿಗೆ ಪರಿಚಯಿಸುತ್ತಾರೆ). ಈ ಕಾರ್ಯಕ್ರಮ ಮುಗಿದ ಬಳಿಕ ವಿಡಿಯೋಗ್ರಾಫರ್ ತಲೆಯಾಡಿಸಿ ‘ಹೋಗಿ’ ಎಂದು ಸೂಚಿಸುವ ತನಕ ಗಂಭೀರವದನರಾಗಿ ವಧೂವರರ ಅಕ್ಕಪಕ್ಕದಲ್ಲಿ ನಿಲ್ಲಿ. ಅಲ್ಲಿಂದ ಹೊರಡುವಾಗ ಅಲ್ಲಿಯೇ ಸುಳಿದಾಡುತ್ತಿರುವ ವಧುವಿನ/ವರನ ತಂದೆತಾಯಿಯರ ಕೈಕುಲುಕಲು ಮರೆಯದಿರಿ. ‘ನೀವು ಬಂದದ್ದು ಬಲು ಸಂತೋಷ. ದಯವಿಟ್ಟು ಭೋಜನ ಸ್ವೀಕರಿಸಿ ಹೋಗಿ’ ಎಂಬ ವಿನಂತಿಯನ್ನು ಮನ್ನಿಸಿ ‘ಡೈನಿಂಗ್ ಹಾಲಿ’ನತ್ತ ಹೆಜ್ಜೆಹಾಕಿ. ಈ ಸಮಾರಂಭದಲ್ಲಿ ಬುಫೆ ಪದ್ಧತಿಯಲ್ಲಿ ಭೋಜನ ಸರಬರಾಜಾಗುವುದರಿಂದ ಕುಳಿತುಕೊಳ್ಳಲು ‘ಜಾಗ ಹಿಡಿಯುವ’ ಯೋಚನೆ ಇರುವುದಿಲ್ಲ. ದೋಸೆ, ತಂದೂರಿ ರೊಟ್ಟಿ, ಪಾನಿ ಪುರಿ, ಪಲಾವ್, ಅನ್ನ, ರಸಂ, ‘ಖಾರ-ಸ್ವೀಟ್’, ಐಸ್ ಕ್ರೀಮ್, ಖೀರು, ಬಾದಾಮಿ ಹಾಲು ಹೀಗೆ ಏನೇನೋ ಇರುತ್ತದೆ. ಏನೇನಿದೆಯೆಂಬುದನ್ನು ಖುದ್ದಾಗಿ ವೀಕ್ಷಿಸಿ ಅಥವ ಈಗಾಗಲೇ ತಿನ್ನುತ್ತಿರುವವರ ತಟ್ಟೆ ನೋಡಿ ಆವಿಷ್ಕರಿಸಿ ಸರತಿಸಾಲಿನಲ್ಲಿ ನಿಂತು (ಡಿಸ್ ಪೋಸೆಬಲ್) ತಟ್ಟೆಗೆ ಬೇಕಾದ್ದನ್ನು ಹಾಕಿಸಿಕೊಂಡು ಕುಳಿತೋ ನಿಂತೋ ತಿನ್ನಿ. ಸಾಕು ಅನ್ನಿಸಿದಾಗ ತಟ್ಟೆ ಲೋಟಗಳನ್ನು ಬಿಸಾಡುವ ಡಬ್ಬಿ ಎಲ್ಲಿದೆಯೆಂದು ಪತ್ತೆಹಚ್ಚಿ ಹಾಕಿ ಕೈತೊಳೆಯಲು ಹೋಗಿ. (ಡಬ್ಬಿ ಗೋಚರಿಸದಿದ್ದರೆ ಯಾವುದಾರೂ ಮೂಲೆಯಲ್ಲಿ ಇಡಬಹುದು). ತದನಂತರ, ‘ಫಲತಾಂಬೂಲ’ದ ಕ್ಯಾರಿಬ್ಯಾಗ್ ಇರುವ ಸ್ಥಳ ಪತ್ತೆಹಚ್ಚಿ (ಪ್ರಸಾಮಾನ್ಯವಾಗಿ ಇದು ಡೈನಿಂಗ್ ಹಾಲ್ ನಿರ್ಗಮನ ದ್ವಾರದ ಬಳಿ ಇರುತ್ತದೆ) ಒಂದು ಬ್ಯಾಗ್ (ಕೊಡುವವರು ಇಲ್ಲದೇ ಇದ್ದರೂ) ತೆಗೆದುಕೊಂಡು ಮನೆಗೆ ಹಿಂದಿರುಗಿ. ನಿಮ್ಮನ್ನು ಆಮಂತ್ರಿಸಿದವರು ‘ಭೊಜನ ಸ್ವೀಕರಿಸಿ ಹೋಗಿ’ ಎಂದು ಮೊದಲೇ ವಿನಂತಿಸಿದ್ದರಿಂದ ಪುನಃ ಅವರನ್ನು ಕಂಡು ವಿದಾಯ ಹೇಳಬೇಕಿಲ್ಲ.

Advertisements
This entry was posted in ಹಾಗೇ ಸುಮ್ಮನೆ. Bookmark the permalink.

One Response to ಮದುವೆಗಳಿಗೆ ಹೋಗುವುದು-ಅಂದು,ಇಂದು

  1. abhi ಹೇಳುತ್ತಾರೆ:

    ಈ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಎಲ್ಲರೂ ಅನುಭವಿಸುವ ಸಂಕಟವನ್ನು ಚೆನ್ನಾಗಿ ನಿರೂಪಿಸಿದ್ದೀರಿ .. ಧನ್ಯವಾದ .. ಅಭಿಜಿತ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s