ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫

ಕೋಳಿಗೂಡಿನಲ್ಲಿ ಕುಡಿಯುವ ನೀರಿನ ನಿರಂತರ ಪೂರೈಕೆ

ಕೋಳಿ ಸಾಕಣಿಕೆ ಉದ್ಯಮದಲ್ಲಿ ಸದಾ ಗೂಡುಗಳ ಒಳಗೆ ಇರುವ ಕೋಳಿಗಳಿಗೆ ಅಲ್ಲಿಯೇ ಕುಡಿಯುವ ನೀರಿನ ನಿರಂತರ ಪೂರೈಕೆಗೆ ವಿಶಿಷ್ಟ ವ್ಯವಸ್ಥೆಯೊಂದನ್ನು ಮಾಡಿರುತ್ತಾರೆ. ಇದರ ಮಾದರಿಯೊಂದನ್ನು ನೀವೇ ತಯಾರಿಸಿ ಅಧ್ಯಯಿಸಬಹುದು.

ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ಹಾಕಿ ಮೇಜಿನ ಮೇಲಿಡಿ. ಬಟ್ಟಲಿನಲ್ಲಿರುವ ನೀರಿನೊಳಗೆ ಬಾಯಿ ಇರುವಂತೆ ಸುಮಾರು ೩/೪ ಭಾಗ ನೀರು ತಂಬಿರುವ ಬಾಟಲನ್ನಿ ತಲೆಕೆಳಗಾಗಿ ಮರದ ತುಂಡುಗಳು ಅಥವ ಬೇರೆ ಯಾವುದಾದರೂ ಆಧಾರಗಳ ನೆರವಿನಿಂದ ನಿಲ್ಲಿಸಿ. ನೀರಿನಲ್ಲಿ ಮುಳುಗಿರುವ ಬಾಟಲಿನ ಬಾಯಿ ಬಟ್ಟಲಿನ ತಳಕ್ಕಿಂತ ಕೂದಲೆಳೆಯಷ್ಟು ಮೇಲಿರಲಿ.

ಕೋಳಿಗಳು ನೀರು ಕುಡಿಯುವದಕ್ಕೆ ಸಮನಾದ ಕ್ರಿಯೆ ಎಂದು ಭಾವಿಸಿ ಬಟ್ಟಲಿನಲ್ಲಿರುವ ಸ್ವಲ್ಪ ನೀರನ್ನು ಒಂದು ಹೀರುಗೊಳವೆಯ (ಡ್ರಿಂಕಿಂಗ್ ಸ್ಟ್ರಾ) ನೆರವಿನಿಂದ ಹೀರಿ ತೆಗೆಯಿರಿ.  ಬಟ್ಟಲಿನಲ್ಲಿರುವ ನೀರಿನ ಮಟ್ಟ ಬಾಟಲಿನ ಬಾಯಿಯ ಮಟ್ಟಕ್ಕಿಂತ ಕೆಳಕ್ಕೆ ಇಳಿದ ಕೂಡಲೇ ಗುಳ್ಳೆಗಳು ಬಾಟಲಿನ ಒಳಕ್ಕೆ ಹೋಗುವುದನ್ನು ಗಮನಿಸಿ. ತತ್ಪರಿಣಾಮವಾಗಿ ಬಾಟಲಿನ ಒಳಗೆ ಇರುವ ನೀರಿನ ಮಟ್ಟದಲ್ಲಿ ಮತ್ತು ಬಟ್ಟಲಿನಲ್ಲಿ ಇರುವ ನೀರಿನ ಮಟ್ಟದಲ್ಲಿ ಆಗುವ ವ್ಯತ್ಯಾಸಗಳನ್ನು ಗಮನಿಸಿ.

ಬಟ್ಟಲಿನಲ್ಲಿ ಇರುವ ನೀರಿನ ಮಟ್ಟವು ಬಾಟಲಿನ ಬಾಯಿಗಿಂತ ಮೇಲೆ ಇದ್ದಾಗ ಬಾಟಲಿನ ೊಳಗಿರುವ ನೀರು ಹೊರಕ್ಕೆ ಬರದಿರಲು ಕಾರಣ ಏನು? ಬಟ್ಟಲಿನಲ್ಲಿರುವ ನೀರಿನ ಮಟ್ಟ ಬಾಟಲಿನ ಬಾಯಿಗಿಂತ ಕೆಳಕ್ಕೆ ಇಳಿದಾಗ ಗುಳ್ಳೆಗಳ ರೂಪದಲ್ಲಿ ಬಾಟಲಿನ ಒಳಕ್ಕೆ ಹೋದದ್ದು ಏನು? ಹೋದದ್ದು ಏಕೆ? ಅದು ೊಳಹೊಕ್ಕ ಕೂಡಲೇ ಒಳಗಿನ ನೀರು ಹೊರಬಂದದ್ದು ಏಕೆ? ಎಷ್ಟು ನೀರು ಹೊರ ಬಂದಿತು? ಆಲೋಚಿಸಿ, ತರ್ಕಿಸಿ.

ನೀರು ಹೀರುವ ಸವಾಲು

ವಾಯು ಒಳನುಸುಳದಷ್ಟು ಬಿಗಿಯಾದ ರಬ್ಬರ್ ಬಿರಡೆ ಇರುವ ಚಿಕ್ಕ ಖಾಲಿ ಔಷಧದ ಬಾಟಲ್ ಒಂದನ್ನು ಸಂಗ್ರಹಿಸಿ. ಆಸ್ಪತ್ರೆಗಳಲ್ಲಿ ಇದನ್ನು ಸುಲಭವಾಗಿ ಪಡೆಯಬಹುದು. ಬಾಟಲನ್ನು ಚೆನ್ನಾಗಿ ತೊಳೆಯಿರಿ. ಬಾಲ್ ಪಾಇಂಟ್ ಪೆನ್ನಿನ ಇಂಕ್ ಅಂಟಿಕೊಂಡಿರದ ಖಾಲಿ ರೀಫಿಲ್ ಕೊಳವೆ ಒಂದನ್ನು ಸಂಗ್ರಹಿಸಿ (ಜೆಲ್ ಪೆನ್ನುಗಳ ರೀಫಿಲ್ ಒಳ್ಳೆಯದು). ಅಕಸ್ಮಾತ್ ಅಲ್ಲಲ್ಲಿ ಇಂಕ್ ಅಂಟಿಕೊಂಡಿದ್ದರೆ ಡಿಟರ್ಜೆಂಟಿನ ಪ್ರಬಲ ದ್ರಾವಣ ಅಥವ ಗ್ಲಿಸರಿನ್ ನಿಂದ ತೊಳೆದು ತೆಗೆಯಿರಿ. ದಪ್ಪನೆಯ ಸೂಜಿಯೊಂದನ್ನು ರಬ್ಬರ್ ಬಿರಡೆಯ ಮಧ್ಯದಲ್ಲಿ ತೂರಿಸಿ ತೆಗೆಯಿರಿ. ಸೂಜಿ ತೆಗೆದೊಡನೆ ಮಾಡಿದ  ರಂಧ್ರ ಸುಭವಾಗಿ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಿ. ಈ ರಂಧ್ರದ ಮಮೂಲಕ ರೀಫಿಲ್ಲನ್ನು ತೂರಿಸಿ.  ಬಾಟಲ್ಲಿನಲ್ಲಿ ಕುಡಿಯುವ ನೀರನ್ನು ತುಂಬಿಸಿ. ರೀಫಿಲ್ ಜೋಡಿಸಿದ ಬಿರಡೆಯನ್ನು ಭದ್ರವಾಗಿ ಹಾಕಿ. ರೀಫಿಲ್ ಹೀರುಗೊಳವೆಯ ಮೂಲಕ ನೀರನ್ನು ಹೀರಿ ಕುಡಿಯಿರಿ. ಕುಡಿಯುವ ಗಡಿಬಿಡಿಯಲ್ಲಿ ಬಿರಡೆಯನ್ನು ಒತ್ತಕೂಡದು, ಸಡಲಿಸಲೂ ಕೂಡದು.

ಎಷ್ಟು ಬಲಯುತವಾಗಿ ಹೀರಿದರೂ ನೀರು ಕುಡಿಯಲಾಗದಿರುವುದು ಏಕೆ? ತರ್ಕಿಸಿ. ಕಾರಣ ಊಹಿಸಲಾಗದಿದ್ದರೆ  ಬಿರಡೆಯನ್ನು ಸಂಪೂರ್ಣವಾಗಿ ಸಡಲಿಸಿ ಪುನಃ ಪ್ರಯತ್ನಿಸಿ. ನೀರನ್ನು ಸರಾಗವಾಗಿ ಹೀರಬಹುದು. ಬಿರಡೆ ಸಡಲಿಸಿದಾಗ ನೀರನ್ನು ಹೀರುಗೊಳವೆಯ ಮೂಲಕ ಮೇಲಕ್ಕೆ ತಳ್ಳಿದ್ದು ಯಾವ ಬಲ? ತರ್ಕಿಸಿ. ಬಿರಡೆ ಹಾಕಿದ್ದಾಗ ನೀರು ಹೀರಲಾಗದ್ದಕ್ಕೆ ಕಾರಣ ನಿಮಗೇ ಹೊಳೆಯುತ್ತದೆ.

ಈಗ ಒಂದು ಲೋಟದಲ್ಲಿ ಕುಡಿಯುವ ನೀರು ತೆಗೆದುಕೊಳ್ಳಿ. ಒಂದು ಹೀರುಗೊಳವೆಯ ತುದಿ ನೀರಿನಲ್ಲಿ ಮುಳುಗಿರುವಂತೆಯೂ , ಇನ್ನೊಂದು ಹೀರುಗೊಳವೆಯ ತುದಿ ಲೋಟದ ಹೊರಗೂ ಇರುವಂತೆ ಎರಡು ಹೀರುಗೊಳವೆಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ನೀರು ಹೀರಲು ಪ್ರಯತ್ನಿಸಿ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿರುವುದಕ್ಕೆ ಕಾರಣ ತರ್ಕಿಸಿ.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s