ಸಮುದಾಯ ಮತ್ತು ಶಿಕ್ಷಣ

ವಿಷಯ ಪ್ರವೇಶಕ್ಕೆ ಮುನ್ನ ಇಂಥ ಚಿಂತನೆಯ ಆವಶ್ಯಕತೆ ತಿಳಿಯಲೋಸುಗ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕೋಣ.

ಶಿಕ್ಷಣ ಪಡೆಯುವ ಅವಕಾಶ ಎಲ್ಲರಿಗೂ ಲಭಿಸುವಂತೆ ಮಾಡಲು ಸ್ವಾತಂತ್ರ್ಯ ದೊರೆತ ಕೂಡಲೇ ಅನೂಹ್ಯ ಪ್ರಮಾಣದಲ್ಲಿ ಎಲ್ಲ ಸ್ತರದ ವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಈ ಭರಾಟೆಯಲ್ಲಿ ಸ್ವತಂತ್ರ ಭಾರತದಲ್ಲಿ ಶಿಕ್ಷಣದ ಗುರಿ ಏನಾಗಿರಬೇಕು, ಪಠ್ಯಕ್ರಮ (Curriculum ಅಂದರೇನು ಎಂಬುದನ್ನು ಮನೋಗತ ಮಾಡಿಕೊಂಡಿರುವವರು ಅಲ್ಪಸಂಖ್ಯಾತರು. ಬಹುಮಂದಿಗೆ ಪಾಠಪಟ್ಟಿಯೇ Syllabus ಪಠ್ಯಕ್ರಮ) ಎಂತಿರಬೇಕು ಇವೇ ಮೊದಲಾದ ಅಂಶಗಳಿಗೆ ಪ್ರಾಧಾನ್ಯ ನೀಡಲಿಲ್ಲ. ಅಷ್ಟೇ ಅಲ್ಲದೆ, ಬಹುತೇಕ ವಿದ್ಯಾಲಯಗಳಲ್ಲಿ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬಲ್ಲ ುತ್ತಮ ಶಿಕ್ಷಕರೂ ಇರಲಿಲ್ಲ. ಎಂದೇ, ಅರ್ಹತೆಯ ಮಾನದಂಡವನ್ನು ಪಕ್ಕಕ್ಕೆ ತಳ್ಳಿ ಲಭ್ಯವಿದ್ದ ುದ್ಯೋಗಾಕಾಂಕ್ಷಿಗಳೆಲ್ಲರನ್ನೂ ನೇಮಕ ಮಾಡಲಾಯಿತು. ಇವರಲ್ಲಿ ಅನೇಕರು ಸುಧಾರಿಸಲಾಗದಷ್ಟು ಅನರ್ಹರು. ಇವರ ಪೈಕಿ ಕೆಲವರು ಅಧಿಕಾರಿಗಳೂ ಆಗಿ ಶಿಕ್ಷಣ ವ್ಯವಸ್ಥೆಯ ಅಧಃಪತನಕ್ಕೆ ಗಣನೀಯ ಕೊಡುಗೆ ನೀಡಿದರು.

ಏನನ್ನೂ ಸ್ವತಂತ್ರವಾಗಿ ಮಾಡುವ ಸಾಮರ್ಥ್ಯ ಇಲ್ಲದ, ಜೀವನ ನಿರ್ವಹಣೆಗೆ ಸಂಬಂಧವಿಲ್ಲದ, ಅನೇಕ ವಿಷಯಗಳ ಕುರಿತು ಅಲ್ಪಸ್ವಲ್ಪ ತಿಳಿದಿದ್ದರೂ ಯಾವುದೇ ವಿಷಯದ ಮೇಲೆ ಪ್ರಭುತ್ವ ಇಲ್ಲದ, ಉದ್ಯೋಗ ಎಂದರೆ ಸರ್ಕಾರೀ ಉದ್ಯೋಗ ಎಂಬ ಮನೋಧರ್ಮ ಉಳ್ಳ ಬೌದ್ಧಿಕ ಗುಲಾಮರನ್ನೂ ‘ಜೀ ಹುಜೂರ್’ ಮನೋಧರ್ಮದ ಮಧ್ಯಮ ವರ್ಗದ ಆಡಳಿತಗಾರರ ಪಡೆ ನಿರ್ಮಿಸಲು ಬ್ರಿಟೀಷರು ರೂಪಿಸಿದ್ದ ಪಠ್ಯಕ್ರಮವನ್ನು ಹಾಗೆಯೇ ಮುಂದುವರಿಸಲಾಯಿತು. ಈಗಲೂ ಅದನ್ನೇ ಅಲ್ಪಸ್ವಲ್ಪ ಅಂದಗೊಳಿಸುವ ಬದಲಾವಣೆಗಳೊಂದಿಗೆ ಅನುಸರಿಸುತ್ತಿದ್ದೇವೆ. ಈ ಪಠ್ಯಕ್ರಮದ ಉದ್ದೇಶ ತಿಳಿಯಲು ೨-೨-೧೮೩೫ ರಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಮೆಕಾಲೆ ಮಾಡಿದ ಭಾಷಣದ ಈ ಭಾಗ ಗಮನಿಸಿ: “ನಾನು ಭಾರತದ ುದ್ದಗಲಕ್ಕೂ ಸಂಚಾರ ಮಾಡಿದಾಗ ೊಬ್ಬನೇ ಒಬ್ಬ ಕಳ್ಳನನ್ನು ನೋಡಲಿಲ್ಲ. ಅತ್ಯಧಿಕ ಐಷ್ವರ್ಯವನ್ನು ಈ ದೇಶದಲ್ಲಿ ಕಂಡೆ. ಈ ದೇಶದಲ್ಲಿ ಉದಾತ್ತ ಮೌಲ್ಯಗಳೂ ಅಂತಃಸತ್ವವೂ ಇರುವ ಶ್ರೇಷ್ಠ ಜನತೆಯನ್ನು ಕಂಡೆ. ಈ ದೇಶದ ಬೆನ್ನೆಲುಬಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡಿದಲ್ಲದೆ ಈ ದೇಶವನ್ನು ಗೆಲ್ಲುವುದು ಸುಲಭವಲ್ಲ. ಆದ್ದರಿಂದ ನಾನು ಭಾರತದ ಪುರಾತನ ವಿಧ್ಯಾಭ್ಯಾಸ ಪದ್ಧತಿಯನ್ನೂ ಸಂಸ್ಕೃತಿಯನ್ನೂ ಬದಲಿಸಬೇಕೆಂದು ಸಲಹೆ ಕೊಡುತ್ತೇನೆ. ‘ಇಂಗ್ಲಿಷ್’ ಹಾಗೂ ‘ಪಾಶ್ಚಾತ್ಯ’ ಎಂಬುದು ತಮ್ಮ ಸಂಸ್ಕೃತಿಗಿಂತ ಶ್ರೇಷ್ಠ ಎಂಬ ಭಾವನೆ ಅವರಲ್ಲಿ ಬಂದುಬಿಟ್ಟರೆ ಅವರು ತಮ್ಮ ಉದಾತ್ತ ಸಂಸ್ಕೃತಿಯನ್ನೂ ಘನತೆಯನ್ನೂ ಕಳೆದುಕೊಳ್ಳುತ್ತಾರೆ. ಆಗ ಅವರು ನಮಗೆ ಅವರೇನಾಗಬೇಕೆಂದಿದೆಯೋ ಅಂಥ, ನಿಜವಾಗಿ ನಮ್ಮ ಅಧೀನ ರಾಷ್ಟ್ರವಾಗುತ್ತಾರೆ”

ಇಂಥ ಪಠ್ಯಕ್ರಮದ ಉತ್ಪನ್ನಗಳೇ ನಾನು ಮತ್ತು ನೀವು. ಸ್ವಾತಂತ್ರ್ಯಪೂರ್ವದಲ್ಲಿ ಒಬ್ಬ ‘ಪ್ರಭು’ವಿನ ಶ್ರೀರಕ್ಷೆಯಲ್ಲಿ ಬಾಳಲು ಕಲಿತಿದ್ದ ನಾವು ಸ್ವಾತಂತ್ರ್ಯ ದೊರೆತಂದಿನಿಂದ ನಮ್ಮನ್ನು ನಾವೇ ಆಳಿಕೊಳ್ಳಲು ಕಲಿಯಬೇಕಾದ ಅನಿವಾರ್ಯತೆ ಉಂಟಾಯಿತು. ಸಮಾಜವಾದದ ತಳಹದಿಯ ಮೇಲೆ ರೂಪುಗೊಂಡ, ಅತ್ತ ಪೂರ್ಣ ಮುಕ್ತವೂ ಅಲ್ಲದ ಇತ್ತ ಪೂರ್ಣ ನಿರ್ಬಂಧಿತವೂ ಅಲ್ಲದ ‘ಮಿಶ್ರ ಆರ್ಥಿಕ ವ್ಯವಸ್ಥೆಯ’ ಶ್ರೀರಕ್ಷೆಯಲ್ಲಿ ಬಾಳತೊಡಗಿದೆವು. ನಾವೇ ಆಯ್ಕೆ ಮಾಡಿದ ಸರ್ಕಾರ, ಸ್ವಾತಂತ್ರ್ಯಪೂರ್ವದ ‘ಪ್ರಭು’ಗಳಂತೆ ವರ್ತಿಸುವುದನ್ನೇ ‘ಪ್ರಜಾಪ್ರಭುತ್ವ’ ಎಂದು ಒಪ್ಪಿಕೊಂಡೆವು.

ನಮ್ಮ ಹಿತರಕ್ಷಣೆಯ ಜವಾಬ್ದಾರಿ ನಮ್ಮ ಮೇಲೆ ಇರುವದಕ್ಕಿಂತ ಸಕರ್ಕಾರದ ಮೇಲೆ ಹೆಚ್ಚಿ ಇದೆ ಎಂದು ನಂಬಿದೆವು. ‘ನಮಗೇನು ಬೇಕು? ಏನು ಮಾಡಿದರೆ ನಮಗೆ ಒಳಿತಾಗುತ್ತದೆ? ಇವೇ ಮೊದಲಾದವನ್ನು ನಿರ್ಧರಿಸುವ ಹಕ್ಕನ್ನು ಸ್ವ-ಇಚ್ಛೆಯಿಂದಲೇ ಸರ್ಕಾರ ಎಂಬ ‘ಪ್ರಭು’ವಿಗೆ ಒಪ್ಪಿಸಿ ಬಾಳುವುದನ್ನು ರೂಢಿಸಿಕೊಂಡೆವು. ತತ್ಪರಿಣಾಮವಾಗಿ, ಹಿಂದಿದ್ದ (ಅನೇಕ ಸಂದರ್ಭಗಳಲ್ಲಿ ಇನ್ನೂ ಕೆಟ್ಟದಾಗಿ) ‘ಪ್ರಭು’ಗಳಂತೆಯೇ ಕಾರ್ಯನಿರ್ವಹಿಸುತ್ತಿದ್ದ ಜಾತ್ಯತೀತ ವರ್ಗವೊಂದು ಸೃಷ್ಟಿಯಾಗುತ್ತಿದ್ದದ್ದನ್ನು ಗಮನಿಸುವ ಸಾಮರ್ಥ್ಯವನ್ನೇ ಕಳೆದುಕೊಂಡೆವು. ಆಡಳಿತಾರೂಢ ವರ್ಗವೂ ಇದನ್ನು ಪೋಷಿಸುತ್ತಲೇ ಬಂದಿತು. ಈ ಶಿಕ್ಷಣದಿಂದ ನಮ್ಮ ಪೈಕಿ ಬಹುತೇಕರು ಕಲಿತದ್ದು ಏನನ್ನು? ಊಳಿಗಮಾನ್ಯ ಪದ್ಧತಿಯನ್ನು ಪೋಷಿಸುವ ಶಿಷ್ಟ ನಡೆವಳಿಕೆ, ಈ ವ್ಯವಸ್ಥೆಯನ್ನು ಪೋಷಿಸಬಲ್ಲ ಸರ್ಕಾರೀ ಉದ್ಯೋಗವನ್ನು ಹೇಗಾದರೂ ಗಿಟ್ಟಿಸಿಕೊಂಡು ನಿಶ್ಚಿತ ಮಾಸಿಕ ಆದಾಯ ಗಳಿಸುವುದು. ಕೆಲವೇ ಕೆಲವು ‘ಬುದ್ಧಿವಂತರು’ ಅನ್ನಿಸಿಕೊಂಡ ಮಂದಿ ಸರ್ಕಾರೀ ಕೃಪಾಪೋಷಿತ ವೈದ್ಯ, ಎಂಜಿನಿಯರ್ ಅಥವ ುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಉಪನ್ಯಾಸಕ’ರು, ಐಎಎಸ್ ಅಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದರು. ಈ ಕ್ಷೇತ್ರ ಪ್ರವೇಶಿಸಲು ‘ಅಗತ್ಯ’ವಾದ ಬುದ್ಧಿಶಕ್ತಿ ಇಲ್ಲದವರು ವಕೀಲರಾದರು. ಕೆಲವರು ಸ್ವಇಚ್ಛೆಯಿಂದ ಅನೇಕರು ಬೇರೆ ಹಾದಿ ತೋರದೆ ಪ್ರಾಥಮಿಕ/ಮಾಧ್ಯಮಿಕ ಶಾಲಾ ಶಿಕ್ಷಕರಾದರು. ಬಹುಮಂದಿ ನಾನಾರೂಪದ ಗುಮಾಸ್ತಗಿರಿಯನ್ನು ಅಪ್ಪಿಕೊಂಡರು. ‘ಒಳ್ಳೆಯವರೂ ಬುದ್ಧಿವಂತರೂ’ ರಾಜಕೀಯದಲ್ಲಿ ಸಲ್ಲರು ಎಂದು ಬಹುಮಂದಿ ನಂಬಿದ್ದರಿಂದ ಆ ಹಣೆಪಟ್ಟಿ ತಗುಲಿಸಿಕೊಳ್ಳಲು ಅನರ್ಹರಾದವರು ಹೆಚ್ಚು ಸಂಖ್ಯೆಯಲ್ಲಿ ‘ಪುಡಾರಿ’ಗಳು, ‘ರಾಜಕಾರಣಿ’ಗಳು, ‘ಸಮಾಜಸೇವಕರು’ ಆಗಿ ಅವನ್ನೂ ದಂಧೆಯಾಗಿಸಿದರು. ಕೃಷಿಯೇತರ ಉದ್ಯೋಗ ಎಂದರೆ ಸರ್ಕಾರೀ ಉದ್ಯೋಗ ಎಂಬ ಭಾವನೆ ಬೇರೂರಿತು. ಇಂಥ ಸನ್ನಿವೇಶದಲ್ಲಿ ಅಸ್ತಿತ್ವದಲ್ಲಿ ಇದ್ದ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡ ವ್ಯಕ್ತಿತ್ವ ನನ್ನ ಸಮಕಾಲೀನರದ್ದು.

ಹೆಚ್ಚುಕಮ್ಮಿ ೭೦ರ ದಶಕದ ಅಂತ್ಯದವರೆಗೂ ಪರಿಸ್ಥಿತಿ ಹೀಗೆಯೇ ಮುಂದುವರಿಯಿತು. ತದನಂತರ ೇರುತ್ತಿರುವ ಜನಸಂಖ್ಯೆಗೆ ಅಗತ್ಯವಿರುವ ಪ್ರಮಾಣದಲ್ಲಿ ಉದ್ಯೋಗ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗತೊಡಗಿತು. ಈ ಸಮಸ್ಯೆಯ ಪರಿಹಾರಕ್ಕಾಗಿ ಖಾಸಗಿ ಕ್ಷೇತ್ರವನ್ನು ಅವಲಂಬಿಸಬೇಕಾದದ್ದು ಅನಿವಾರ್ಯವಾಯಿತು. ಖಾಸಗಿ ಬಂಡವಾಳ ಆಕರ್ಷಿಸಲೋಸುಗ ಮಿಶ್ರ ಆರ್ಥಿಕ ವ್ಯವಸ್ಥೆಗೆ ವಿದಾಯ ಹೇಳಿ ಮುಕ್ತ ಆರ್ಥಿಕ ವ್ಯವಸ್ಥೆಯನ್ನು ಆಲಂಗಿಸಿ ಜಾಗತೀಕರಣವನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಯಿತು. ಇದರಿಂದಾಗಿ ಈ ತನಕ ಇದ್ದ ಶಿಕ್ಷಣ ವ್ಯವಸ್ಥೆಯನ್ನು  ಆಮೂಲಾಗ್ರವಾಗಿ ಬದಲಿಸಬೇಕಾದ ಅನಿವಾರ್ಯತೆಯೂ ಉಂಟಾಗಿದೆ.

ಹಾಲಿ ನಾವು ನೀಡುತ್ತಿರುವ ಶಿಕ್ಷಣದ ಉತ್ಪನ್ನಗಳಿಗೆ ಖಾಸಗಿ ಉದ್ಯಮಗಳು ಅಪೇಕ್ಷಿಸುವ ಗುಣಮಟ್ಟವಿಲ್ಲ. ಎಂದೇ, ನಾವು ನೀಡುತ್ತಿರುವ ಉನ್ನತಶಿಕ್ಷಣದ ಬಹುತೇಕ ಉತ್ಪನ್ನಗಳಿಗೆ ಬೇಡಿಕೆ ಇಲ್ಲವಾಗಿದೆ. ಅನೇಕ ಖಾಸಗಿ ಸಂಸ್ಥೆಗಳು ಪರಿಸ್ಥಿತಿಯನ್ನು ಬಳಸಿಕೊಂಡು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ೊದಗಿಸಬಲ್ಲ ಶಿಕ್ಷಣವನ್ನು ದುಬಾರಿ ಬೆಲೆಗೆ ಪೂರೈಸುತ್ತಿವೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ದೌರ್ಬಲ್ಯಗಳನ್ನು ಗುರುತಿಸಿದ ವಿದೇಶೀ ವಿಶ್ವವಿದ್ಯಾನಿಲಯಗಳು ಬೇಡಿಕೆಗೆ ತಕ್ಕುದಾದ ಶಿಕ್ಷಣವನ್ನು ನೀಡತೊಡಗಿವೆ. ಸರ್ಕಾರೀ ಉದ್ಯೋಗ ಅಥವ ಸರ್ಕಾರೀ ಕೃಪಾಪೋಷಿತ ಗಿಟ್ಟಿಸಿಕೊಳ್ಳಲು ಸರಕಾರೀ ಮಾನ್ಯತೆ ಪಡೆದ ‘ಪದವಿ’ಗಳು ಬೇಕೇ ವಿನಾ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಲ್ಲ. ತಂತ್ರಜ್ಞಾನ ಬಳಸಿ ‘ಆನ್ ಲೈನ್ ಶಿಕ್ಷಣ’, ‘ಆನ್ ಲೈನ್ ಪರೀಕ್ಷೆ’, ‘ತನ್ನ ಅನುಕೂಲಕ್ಕೆ ತಕ್ಕುದಾದ ವೇಗದಲ್ಲಿ ಕಲಿಯುವ ಅವಕಾಶ’ ಇವೇ ಮೊದಲಾದವೂ ಭಾರತವನ್ನು ಪ್ರವೇಶಿಸಿವೆ. ದುರದೃಷ್ಟವಶಾತ್, ಇವು ಹಣ ಉಳ್ಳವರಿಗೆ ಮಾತ್ರ ಲಭ್ಯ. ಸರ್ಕಾರಿ ಕೃಪಾಪೋಷಿತ ಮುಕ್ತ ವಿಶ್ವವಿದ್ಯಾನಿಲಯಗಳು ಒದಗಿಸುತ್ತಿರುವ ಶಿಕ್ಷಣದ ಗುಣಮಟ್ಟ ಸಾಂಪ್ರದಾಯಿಕ ಶಿಕ್ಷಣದ ಗುಣಮಟ್ಟಕ್ಕಿಂತ ಉತ್ತಮವಾಗಿ ಇಲ್ಲದಿರುವುದು ಬಡವರಿಗೆ ಮುಳುವಾಗಿದೆ. ಇದರಿಂದಾಗಿ ಉದ್ಭವಿಸಬಹುದಾದ ಸಾಮಾಜಿಕ ಪ್ರಕ್ಷುಬ್ಧತೆಯನ್ನು ತಡೆಗಟ್ಟುವ ಸಲುವಾಗಿಯಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ದಿಶೆಯಲ್ಲಿ ಪ್ರಯತ್ನಗಳು ಆಗುತ್ತಿರುವುದು ಸ್ತುತ್ಯಾರ್ಹ.

ಯಾವುದೇ ಶಿಕ್ಷಣ ಪದ್ಧತಿ, ಅದು ಎಷ್ಟೇ ಉತ್ತಮವಾದದ್ದಾಗಿರಲಿ, ಯಶಸ್ವಿಯಾಗುವುದು ಶಿಕ್ಕರನ್ನು ಅವಲಂಬಿಸಿದೆ. ಭಾರತದ ಶಿಕ್ಷಣ ವ್ಯವಸ್ಥೆ ಸಮರ್ಥರನ್ನು ಶಿಕ್ಷಕರಾಗಲು ಪ್ರೇರೇಪಿಸುವುದರಲ್ಲಿ ಸೋತಿದೆ. ಇದಕ್ಕೆ ಒಂದು ಕಾರಣ ಶಿಕ್ಷಕರಿಗೆ ನ್ಯಾಯಯುತವಾಗಿ ಎಷ್ಟು ಗೌರವ ಸಲ್ಲಬೇಕೋ ಅಷ್ಟು ಇಂದು ಸಲ್ಲುತ್ತಿಲ್ಲ. ಇದಕ್ಕೆ ಸಮಾಜ ಮತ್ತು ಶಿಕ್ಷಕ ಸಮುದಾಯ ಇವೆರಡೂ ಕಾರಣವಾಗದ್ದರೂ ನನ್ನ ದೃಷ್ಟಿಯಲ್ಲಿ ಸಮಾಜವೇ ಮೊದಲನೇ ಅಪರಾಧಿ. ಶಾಲೆಗೆ ಮಕ್ಕಳನ್ನು ದಾಖಲಿಸುವುದಷ್ಟೇ ತಮ್ಮ ಜವಾಬ್ದಾರಿ ಎಂಬ ಮನೋಧರ್ಮವನ್ನು ಸಮಾಜ ತಳೆದಿರುವುದೇ ಮೊದಲನೇ ತಪ್ಪು. ಶಿಕ್ಷಕರಿಗೆ ಇರಬೇಕಾದ ಮನೋಧರ್ಮ ಇಲ್ಲದವರನ್ನು (ಶೈಕ್ಷಣಿಕ ಅರ್ಹತೆಯೊಂದೇ ಸಾಲದು) ಶಿಕ್ಷಕರಾಗಿ ನೇಮಿಸುತ್ತಿರುವುದು ಎರಡನೇ ತಪ್ಪು (ಅನೇಕ ಅನುದಾನರಹಿತ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಯುಕ್ತ ಶೈಕ್ಷಣಿಕ ಅರ್ಹತೆ ಇಲ್ಲದವರೂ ಶಿಕ್ಷಕರಾಗಿದ್ದಾರೆ. ಪರೀಕ್ಷೆಯಲ್ಲಿ ಅಂಕ ಗಳಿಸುವುದೇ ಪ್ರಧಾನವಾದಾಗ ಿವೆಲ್ಲವೂ ಗೌಣವಾಗುತ್ತವೆ) . ವೃತ್ತಿಧರ್ಮಕ್ಕೆ ದ್ರೋಹ ಬಗೆದ ಶಿಕ್ಷಕರನ್ನು ಶಿಕ್ಷಿಸದಿರುವುದು ಮೂರನೇ ತಪ್ಪು (ಸಮುದಾಯದವರೇ ಇಂಥ ಶಿಕ್ಷಕರನ್ನು ಥಳಿಸಿದ ವರದಿಗಳು ಆಗೊಮ್ಮೆ ಈಗೊಮ್ಮೆ ಇತ್ತೀಚೆಗೆ ಕೇಳಿ ಬರುತ್ತಿವೆ). ವೃತ್ತಿಧರ್ಮಕ್ಕೆ ಬದ್ಧರಾಗಿರುವವರನ್ನು ಸಮಾಜ ತಾನಾಗಿಯೇ ಗುರುತಿಸಿ ಗೌರವಿಸದಿರುವುದು ನಾಲ್ಕನೇ ತಪ್ಪು. ಪ್ರಧಾನ ಕರ್ತವ್ಯಕ್ಕೆ ಸಂಬಂಧಿಸದ ಕಾರ್ಯಗಳನ್ನು ಹೆಚ್ಚುವರಿಯಾಗಿ ಶಿಕ್ಷಕರ ಮೇಲೆ ಹೇರಿ ಅವರನ್ನು ಶೋಷಿಸುತ್ತಿರುವುದು ಐದನೆಯ ತಪ್ಪು. ಇತ್ತೀಚೆಗೆ, ಶಾಲಾ ಆಗು ಹೋಗುಗಳಲ್ಲಿ ಸಮುದಾಯದ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆಯಾದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವ ಅಧಿಕಾರಷಾಹಿ-ಅಸಹಕಾರದಿಂದಾಗಿ ಇವು ಅಪೇಕ್ಷಿತ ಫಲ ನೀಡಿಲ್ಲ. ಈ ಪ್ರಯತ್ನಗಳು ಅಪೇಕ್ಷಿತ ಫಲ ನೀಡುವಂತಾದರೆ ಪರಿಸ್ಥಿತಿ ಸುಧಾರಿಸಬಹುದು.

ತಮ್ಮ ವೃತ್ತಿಪರತೆಯನ್ನು ಬೆಳೆಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸದಿರುವುದು, ಶಿಕ್ಷಕ ವೃತ್ತಿಯನ್ನು ದಂಧೆಯಾಗಿಸಿರುವುದು, ತಮ್ಮ ಅಸಮರ್ಥತೆಯನ್ನು ‘ಶಿಕ್ಷೆ’, ‘ಪಕ್ಷಪಾತ’, ‘ರಾಜಕೀಯ ಪ್ರಭಾವ’ ಿವೇ ಮೊದಲಾದವುಗಳಿಂದ ಮರೆಮಾಚುವುದು, ಶಿಕ್ಷಕ ವೃತ್ತಯನ್ನು ಪೂರಣಾವಧಿ ವೃತ್ತಿಯನ್ನಾಗಿ ಆಲಂಗಿಸುವುದಕ್ಕೆ ಬದಲಾಗಿ ಅರೆಕಾಲಿಕ ುದ್ಯೋಗದಂತೆ ಕಾಣುತ್ತಿರುವುದು ಇವೇ ಮೊದಲಾದವು ಇಂದಿನ ಅನೇಕ ಶಿಕ್ಷಕರ ಅಪರಾಧಗಳು. ತತ್ಪರಿಣಾಮವಾಗಿ, ಶಿಕ್ಷಕರ ಬಗ್ಗೆ ಸಮಾಜ ಅಷ್ಟೇನೂ ಒಳ್ಳೆಯ ಅಭಿಪ್ರಾಯ ತಳೆದಿಲ್ಲ. ಅಷ್ಟೇ ಅಲ್ಲ, ಶಿಕ್ಷಣಶಾಸ್ತ್ರವನ್ನು ಅಧ್ಯಯನ ಮಾಡದವರು ಶಿಕ್ಷಣತಜ್ಞರು ಎಂದು ಕರೆಯಿಸಿಕೊಂಡು (ಇಂದಿನ ಶಿಕ್ಷಣ ಪದ್ಧತಿಯಲ್ಲಿ ಲೋಪದೋಷಗಳನ್ನು ತೋರಿಸುವವರೆಲ್ಲರೂ ಶಿಕ್ಷಣ ಹೇಗಿರಬೇಕೆಂದು ಕನಸು ಕಾಣುವವರೆಲ್ಲರೂ ಶಿಕ್ಷಣ ತಜ್ಞರಲ್ಲ) ಶಿಕ್ಷಕರನ್ನು ಆಳುವಂತಾಗಿದೆ. ಶಿಕ್ಷಕ ಸಂಘಟನೆಗಳೂ ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರಹ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಬದಲಾಗಿ ‘ಕಾರ್ಮಿಕ ಸಂಘಟನೆ’ಗಳಂತೆ ಅಥವ ‘ಯಾವುದೋ ರಾಜಕೀಯ ಪಕ್ಷದ ಅಂಗ’ದಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನೀಯ.

ಈ ಪರಿಸ್ಥಿತಿ ಬದಲಾಗುವುದಾದರೂ ಹೇಗೆ? ‘ಉತ್ತಮ ಶಿಕ್ಷಣ ಆಯ್ದ ಕೆಲವರಿಗೆ ಮಾತ್ರ’ ಮಾಯವಾಗಿ ‘ಉತ್ತಮ ಶಿಕ್ಷಣ ಎಲ್ಲರಿಗೆ’ ಆಗುವುದು ಹೇಗೆ? ಸಾರ್ವತ್ರಿಕ ಶಿಕ್ಷಣ ನೀಡುವ ಶಾಲೆಗಳಲ್ಲಿ (೧-೧೨ ನೇ ತರಗತಿಯ ಶಿಕ್ಷಣ ನೀಡುವ ವಿದ್ಯಾಲಯಗಳು) ಶಿಕ್ಷಕರ ನೇಮಕಾತಿಯಿಂದ ಮೊದಲ್ಗೊಂಡು ದೈನಂದಿನ ಆಗುಹೋಗುಗಳ ಮೇಲುಸ್ತುವಾರಿಯ ಜವಾಬ್ದಾರಿಯನ್ನು ಸಮುದಾಯದ ಹಿಡಿತಕ್ಕೆ ಒಪ್ಪಿಸಿದರೆ ಸಾಧ್ಯವಾದೀತೇ?

ಎಲ್ಲರಿಗೂ ದೊರೆಯಬೇಕಾದ ‘ಉತ್ತಮ ಶಿಕ್ಷಣ’ ಎಂತಿರಬೇಕು ಎಂಬುದನ್ನು ಇಂದು ನಿರ್ಧರಿಸುತ್ತಿರುವುದು-ಆಡಳಿತಾರೂಢ ವರ್ಗ, ತನ್ನ ಆರ್ಥಿಕ ಸ್ಥಿತಿಯನ್ನು ತಕ್ಕಮಟ್ಟಿಗೆ ಉತ್ತಮಗೊಳಿಸಿಕೊಂಡಿರುವ ಅಧಿಕಾರಶಾಹ ವರ್ಗ ಮತ್ತು ಹಿಂದಿನ ಕಾಲದ ‘ಆಸ್ಥಾನ ವಿದ್ವಾಂಸ’ರಿಗೆ ಹೋಲಿಸಬಹುದಾದ ಬುದ್ಧಿಜೀವಿ ವರ್ಗಗಳೇ ವಿನಾ ಶಿಕ್ಷಣದ ಫಲಾನುಭವಿಗಳಾದ ‘ಸಮುದಾಯ’ ಅಲ್ಲ. ಯಾವುದೇ ಆಡಳಿತಾರೂಢ ವರ್ಗ ತನ್ನ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ‘ಬದಲಾವಣೆ’ಗಳನ್ನು ತರಲು ಇಚ್ಛಿಸುತ್ತದೆಯೇ? ‘ಸಾಮಾನ್ಯ’ರಿಗೆ ನೀಡಬೇಕಾದ ‘ಉತ್ತಮ ಶಿಕ್ಷಣ’ ಹೇಗಿರಬೇಕು ಎಂಬುದು ತಮಗೆ ಮಾತ್ರ ತಿಳಿದಿದೆ ಎಂದು ನಂಬಿರುವ ಈ ವರ್ಗಗಳು ‘ತೀರ್ಮಾನಿಸುವವರು ಮತ್ತು ನೀಡುವವರು’ ಪಾತ್ರ ನಿರ್ವಹಿಸುತ್ತಿದ್ದಾರೆ. ಸಮುದಾಯವಾದರೋ ‘ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವವರು’ ಪಾತ್ರವನ್ನು ನಿರ್ವಹಿಸುತ್ತಿದೆ. ಇದರ ಫಲಿತಗಳು- ನಿಜಜೀವನಕ್ಕೆ ಸುಸಂಗತವಲ್ಲದ ಪಠ್ಯಕ್ರಮ, ಹುಟ್ಟಿದ ಊರಿನಲ್ಲಿ ಬದುಕಲಾಗದೆ ಪರ ಊರಿಗೆ ಉದ್ಯೋಗ ಅರಸಿ ಹೋಗಲೇ ಬೇಕಾದಂಥವರನ್ನು ಸೃಷ್ಟಿಸುವ ಪಠ್ಯಕ್ರಮ, ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಯಸಾಧುವಲ್ಲದ ಯೋಜನೆಗಳು, ತಮ್ಮ ಜೀವನಕ್ಕೆ ಸಂಬಂಧಿಸಿದ ಅತೀ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ತಮಗಿದೆ ಎಂಬ ಅರಿವೇ ಇಲ್ಲದೆ ‘ನಮ್ಮ ಒಳಿತಿಗೆ ಏನು ಬೇಕೆಂಬುದನ್ನು ನೀವೇ ನಿರ್ಧರಿಸಿ, ನೀವೇ ಕೊಡಿ’ ಅನ್ನುವ ಸಮುದಾಯ, ಇಂಥ ಅನಾಸಕ್ತ ಸಮುದಾಯದಿಂದಾಗಿ ಸದುದ್ದೇಶದಿಂದ ಸರ್ಕಾರ ಅಪರೂಪಕ್ಕೆ ರೂಪಿಸುವ ಕಾರ್ಯಕ್ರಮಗಳು ಪೂರ್ಣಗೊಳ್ಳುವ ಮೊದಲೇ ಕುಸಿದು ಬೀಳುವಿಕೆ.

ಈ ಹಿನ್ನೆಲೆಯಲ್ಲಿ ಸಮುದಾಯ ಬಲಯುತವಾಗಿ ಶಿಕ್ಷಣಕ್ಷೇತ್ರದಲ್ಲಿ ಕ್ರಿಯಾಶೀಲವಾಗಬೇಕಾದ ಅನಿವಾರ್ಯತೆ ಇದೆ. ದುರದೃಷ್ಟವಶಾತ್, ಚಾರಿತ್ರಿಕ ಕಾರಣಗಳಿಂದಾಗಿ ನಮ್ಮ ಬಹುತೇಕ ಸಮುದಾಯಗಳಲ್ಲಿ  ಇದಕ್ಕೆ ಅಗತ್ಯವಾದ ಅನುಭವ, ಜ್ಞಾನ ಮತ್ತು ಕುಶಲತೆಗಳು ಇಲ್ಲ. ಇರುವ ಸಮುದಾಯಗಳ ಪೈಕಿ ಹೆಚ್ಚಿನವು ಸಾಮಾಜಿಕ ರಾಜಕೀಯ ಪೂರ್ವಗ್ರಹ ಪೀಡಿತವಾಗಿವೆ. ಆದ್ದರಿಂದ ಯುಕ್ತ ಪೂರ್ವಭಾವೀ ಸಿದ್ಧತೆ ಇಲ್ಲದೆ ಶಾಲೆಗಳನ್ನು ಸಮುದಾಯದ ಒಡೆತನಕ್ಕೆ  ಒಪ್ಪಿಸುವುದರ ಅಪೇಕ್ಷಣೀಯತೆ ಚಿಂತನಾರ್ಹ (ಹುಚ್ಚು ಬಿಡದೆ ಮದುವೆ ಆಗದು, ಮದುವೆ ಆಗದೆ ಹುಚ್ಚು ಬಿಡದು ಪರಿಸ್ಥಿತಿ ಇದು).

ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಅನ್ನುವುದು ನನ್ನ ಅಭಿಮತ. ಪ್ರಾಮಾಣಿಕವಾದ ತಜ್ನ ಮಾರಗದರ್ಶನ ಪ್ರೇರೇಪಿತ ಸಮುದಾಯಕ್ಕೆ ಕನಿಷ್ಠ ನೆರವು ದೊರೆತರೆ ಅದು ತನ್ನ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳನ್ನು ತಾನೇ ನಿಭಾಯಿಸಬಲ್ಲುದು ಎಂದು ಈ ತನಕ ಅಲ್ಲೊಂದು ಇಲ್ಲೊಂದು ನಡೆದಿರುವ ಸ್ವಯಂಸೇವಾ ಸಂಘಟನೆಗಳ ಪ್ರಯತ್ನಗಳು ಸಾಬೀತು ಪಡಿಸಿವೆ. ಈ ದಿಸೆ ಯಲ್ಲಿ ಜರಗಿರುವ ಸರ್ಕಾರೀ ಪ್ರಯತ್ನಗಳು ಕೂಡಾ ಅಸದೃಶ ಬದ್ಧತೆ ಇರುವ ಶಿಕ್ಷಕವರ್ಗ ಇದ್ದೆಡೆ ಯಶಸ್ವಿ ಆಗಿರುವುದು ಇದನ್ನು ಪುಷ್ಟೀಕರಿಸುತ್ತದೆ. ಎಲ್ಲೆಲ್ಲಿ ಸಮುದಾಯವು ಶಿಕ್ಷಣದ ಬಗ್ಗೆ ಕಾಳಜಿ ತೋರಿದೆಯೋ ಅಲ್ಲೆಲ್ಲ ಸಾಕ್ಷರತಾ ಪ್ರಮಾಣ, ಶಾಲಾ ದಾಖಲಾತಿ ಪ್ರಮಾಣ ಮತ್ತು ಪರೀಕ್ಷಾ ಫಲಿತಾಂಶ ಸಾಪೇಕ್ಷವಾಗಿ ಉತ್ತಮವಾಗಿರುವುದೂ ಶಿಕ್ಷಣ ಮುಗಿಯುವ ಮುನ್ನವೇ ಶಾಲೆ ಬಿಡುವವರ ಪ್ರಮಾಣ ಮತ್ತು ಶಾಲೆಗೆ ಗೈರುಹಾಜರಾಗುವವರ ಪ್ರಮಾಣ ಸಾಪೇಕ್ಷವಾಗಿ ಕಮ್ಮಿ ಆಗಿರುವುದೂ ಿದನ್ನು ಪುಷ್ಟೀಕರಿಸುತ್ತದೆ. ಕೆಲವು ಸಮುದಾಯಗಳು ಶಾಲೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು  ಮತ್ತು ಸಂಪನ್ಮೂಲಗಳನ್ನು ಒದಗಿಸುವುದರಲ್ಲಿ ಯಶಸ್ವಿಯಾಗಿರುವುದಲ್ಲದೆ ಅವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೂ ಸಮರ್ಪಕವಾಗಿ ಬಳಸಿಕೊಳ್ಳಲೂ ಗಮನಾರ್ಹ ನೆರವು ನೀಡಿವೆ.

ಎಂದೇ, ‘ಎಲ್ಲರಿಗೂ ಉತ್ತಮ ಶಿಕ್ಷಣ’ ದೊರೆಯಬೇಕಾದರೆ ಶಿಕ್ಷಣದ ಪ್ರಕ್ರಿಯೆಗಳಲ್ಲಿ ಶಿಕ್ಷಕವರ್ಗ, ಸಮುದಾಯ, ಅಧಿಕಾರೀ ವರ್ಗ ಸಹಭಾಗಿಗಳಾಗ ಬೇಕಾದದ್ದು ಅನಿವಾರ್ಯ.ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಮುದಾಯದ ಕೆಲವಾದರೂ ಚಟುವಟಿಕೆಗಳಲ್ಲಿ ಶಾಲೆ ತಾನಾಗಿಯೇ (ತನ್ನ ಪ್ರಾಥಮಿಕ ಕರ್ತವ್ಯವನ್ನು ಕಡೆಗಣಿಸದೆ) ಪಾಲ್ಗೊಳ್ಳುವುದರ ಮೂಲಕ ಸಮುದಾಯದ ಒಳಿತಿಗೆ ತನಗಿರುವ ಬದ್ಧತೆಯನ್ನು ಪ್ರದರ್ಶಿಸಿ ಸಮುದಾಯವನ್ನು ತನ್ನತ್ತ ಆಕರ್ಷಿಸುವ ಪ್ರಯತ್ನ ಮಾಡಲೇಬೇಕು. ಶಿಕ್ಷಕರಲ್ಲಿ ಸಮಾಜಸೇವಾ ಮನೋಭಾವ ಮತ್ತು ಸಂವೇದನಾಶೀಲ ಆಡಳಿತ – ಇವೆರಡೇ ಇದಕ್ಕೆ ಬೇಕಾದ ಬಂಡವಾಳ. ಈ ಬಂಡವಾಳ ವರ್ಧನೆಗೆ ಸ್ವಯಂಸೇವಾ ಸಂಘಟನೆಗಳು ಮತ್ತು ಬುದ್ಧಿಜೀವಿಗಳು ಶ್ರಮಿಸಬೇಕಿದೆ.

Advertisements
This entry was posted in ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s